ಬಾಲ್ಯದಿಂದಲೂ ತಾಯಿಯ ಟ್ರಂಕಿನ ಬಗ್ಗೆ ಅತೀ ಕುತೂಹಲವಿರಿಸಿಕೊಂಡಿದ್ದ ಶಾರದಾ, ಎಂಜಿನಿಯರಿಂಗ್ ಮುಗಿಸಿದ ನಂತರ ಅಮ್ಮನ ಆಸೆಯಂತೆ ಅದನ್ನು ತೆರೆದು ನೋಡಬಲ್ಲವಳಾಗಿದ್ದಳು. ಅಂತೂ ಅವಳು ಅಮ್ಮನ ಟ್ರಂಕ್ ತೆರೆದು ನೋಡಿದಾಗ ಏನೆಲ್ಲಾ ಗಮನಿಸಿದಳು….?
ಮಲಗಲು ಹೊರಟ ಮಗಳನ್ನು ನೋಡಿ ವಸಂತ್, “ಶಾರೀ…. ಮುಂದಿನ ವಾರ ನಿನ್ನ ಬರ್ತ್ ಡೇ ಇದೆಯಲ್ವಾ……? ನಾಳೆ ಕಾಲೇಜು ಮುಗಿದ ನಂತರ ಅಲ್ಲೇ ಇರು. ನಾನು ಅಷ್ಟು ಹೊತ್ತಿಗೆ ಅಲ್ಲಿಗೆ ಬರುತ್ತೇನೆ. ನಿನಗೆ ಹೊಸ ಡ್ರೆಸ್ ತಗೊಂಡು ಬರೋಣ,” ಎಂದರು.
ವಸಂತನ ಕುಟುಂಬ ಇರುವುದು ಐವತ್ತು ಅರವತ್ತು ಮನೆಗಳಿರುವ ಹಳ್ಳಿ. ಆತ ಹಳ್ಳಿಯಲ್ಲಿಯೇ ಜಮೀನು ನೋಡಿಕೊಂಡಿದ್ದರು.
ಆ ಹಳ್ಳಿಯ ಮಕ್ಕಳು ಹೈಸ್ಕೂಲ್ ತನಕ ಈ ಊರಿನಲ್ಲೇ ಓದಬಹುದಿತ್ತು. ನಂತರ ಕಾಲೇಜಿಗೆ ಹೋಗಬೇಕು ಎಂದರೆ ಹತ್ತು ಕಿಲೋಮೀಟರ್ ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿತ್ತು. ಎಲ್ಲಾ ಮಕ್ಕಳ ಹಾಗೇ ಶಾರದಾ ದಿನ ಬಸ್ಸಿನಲ್ಲಿ ಹೋಗಿ ಬಂದು ಪಿಯುಸಿಯನ್ನು ನಗರದಲ್ಲಿ ಓದಿದಳು. ಮುಂದೆ ಎಂಜಿನಿಯರಿಂಗ್ ಓದಲು ಅದೇ ನಗರದ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಮನೆಯಿಂದ ದೂರ ಹೋಗಿ ಹಾಸ್ಟೆಲ್ ನಲ್ಲಿ ಇರುವುದು ತಪ್ಪಿತು. ದಿನಾ ಬಸ್ಸಿನಲ್ಲೇ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದಳು. ದೂರದ ಕಾಲೇಜು ಆಗಿದ್ದರೆ ಅಜ್ಜಿ ಕಳುಹಿಸುತ್ತಿರಲಿಲ್ಲ. ಎಂಜಿನಿಯರಿಂಗೇ ಏಕೆ, ಬೇರೆ ಏನಾದರೂ ಓದು ಎಂದು ಹಠ ಮಾಡುತ್ತಿದ್ದರು. ಹೆಣ್ಣು ಮಕ್ಕಳು ಜಾಸ್ತಿ ಓದುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ.
“ಅಪ್ಪಾ…. ನೀನು ಯಾಕೆ ಹತ್ತು ಕಿಲೇಮೀಟರ್ ದೂರ ಗಾಡಿ ಓಡಿಸಿಕೊಂಡು ಬರುತ್ತೀಯಾ….? ನೀನು ಬರುವುದು ಬೇಡ. ನನಗೆ ಹಣ ಕೊಡು, ನಾನು ನನ್ನ ಫ್ರೆಂಡ್ ನೈನಾ ಜೊತೆ ಹೋಗಿ ಹೊಸ ಡ್ರೆಸ್ ತೆಗೆದುಕೊಂಡು ಬರುತ್ತೇನೆ,” ಎಂದಳು ಶಾರದಾ.
“ಸರಿ ಶಾರೂ, ಹಾಗೇ ಮಾಡುತ್ತೇನೆ. ನನ್ನ ಮಗಳು ಎಷ್ಟು ದೊಡ್ಡವಳಾದಳು! ನೋಡು ನೋಡುತ್ತಿದ್ದಂತೆ ಇಪ್ಪತ್ತೆರಡು ವರ್ಷ ಕಳೆದದ್ದೇ ತಿಳಿಯಲಿಲ್ಲ,” ಎನ್ನುತ್ತಾ ಮಗಳ ತಲೆ ನೇರಿಸಿದರು ವಸಂತ್, “ಬೆಳಗ್ಗೆ ನೆನಪಿಸುವ ಹಣ ಕೊಡುತ್ತೇನೆ,” ಎಂದರು.
“ಅಪ್ಪಾ…. ಈ ಬರ್ತ್ ಡೇ ದಿನವಾದರೂ ನನಗೆ ಅಮ್ಮನ ಟ್ರಂಕಿನ ಬೀಗ ಕೊಡುತ್ತೀರಲ್ವಾ…..? ನಾನಂತೂ ತುಂಬ ಎಗ್ಸೈಟ್ ಆಗಿದ್ದೀನಿ,” ಎನ್ನುತ್ತಾ ಶಾರದಾ ತಂದೆಯ ಕೈ ಹಿಡಿದುಕೊಂಡು ಎರಡು ಸುತ್ತು ತಿರುಗಿದಳು.
“ಶಾರೀ…. ನೀನು ಇನ್ನೂ ಎಳೆ ಮಗುವೇ….? ಹೌದು ಅಂದು ನಿನ್ನ ಮಾವ ಬೀಗವನ್ನು ತಂದು ಕೊಡುತ್ತಾರೆ,” ಎಂದರು ವಸಂತ್.
“ಹ್ಞೂಂ…. ನೀನು ಮುದ್ದು ಮಾಡಿ ಹಾಳು ಮಾಡಿಬಿಟ್ಟೆ. ಹೆಣ್ಣು ಹುಡುಗಿ ಒಂದು ಕೆಲಸ ಕಾರ್ಯ ಬರುವುದಿಲ್ಲ. ಓದು ಕಾಲೇಜು ಅಂತ ತಿರುಗುವುದೇ ಆಯಿತು,” ಎಂದು ಸಿಡಿಮಿಡಿಗುಟ್ಟುತ್ತಾ ಅಜ್ಜಿ ಪಾರ್ವತಮ್ಮ ಹಾಲಿನ ಲೋಟ ಹಿಡಿದು ಬಂದರು.
“ಅಜ್ಜಿ, ನನ್ನನ್ನ ಬೈಯದಿದ್ದರೆ ನಿನಗೆ ಸಮಾಧಾನ ಆಗಲ್ಲಾ ಅಲ್ವಾ…..” ಎನ್ನುತ್ತಾ ಅಜ್ಜಿ ಕೊಟ್ಟ ಹಾಲು ಕುಡಿದು, ಲೋಟವನ್ನು ಸಿಂಕಿನಲ್ಲಿ ಹಾಕಿ ತನ್ನ ರೂಮಿಗೆ ಓಡಿದಳು ಶಾರದಾ.
ಮಲಗಿದರೂ ಶಾರದಾಗೆ ನಿದ್ರೆ ಬರಲಿಲ್ಲ. `ಅಮ್ಮನ ಟ್ರಂಕಿನಲ್ಲಿ ಏನಿರಬಹುದು….? ನನಗೆ ಇಪ್ಪತ್ತೆರಡು ವರ್ಷ ತುಂಬಿದ ನಂತರ ಅದನ್ನು ನನಗೆ ಕೊಡಲು ಹೇಳಿದ್ದರಂತೆ. ಅಮ್ಮ ಇದ್ದಿದ್ದರೆ…. ತನ್ನನ್ನು ಎಷ್ಟು ಇಷ್ಟಪಡುತ್ತಿದ್ದರು. ಅಮ್ಮಾ. ಶಾರೀ… ನೀನು ತುಂಬಾ ಓದಬೇಕು ಕಣೇ…. ಓದಿ ಕೆಲಸಕ್ಕೆ ಸೇರಬೇಕು, ಹೆಣ್ಣು ಮಕ್ಕಳು ಆರ್ಥಿಕವಾಗಿ ಬಲಾಢ್ಯರಾಗಬೇಕು ಎನ್ನುತ್ತಿದ್ದರು. `ಅಮ್ಮಾ… ನನಗೆ ಯಾಕೆ ಶಾರದಾ ಅಂತ ಹಳೆಯ ಹೆಸರಿಟ್ಟೆ? ನನಗೂ ಚೆಂದದ ವಿನೂತನ ಹೆಸರಿಡಬೇಕಿತ್ತು ಎಂದು ತಾನೆಂದಾಗ, ಪುಟ್ಟಿ ಶಾರದಾ ದೇವಿಯ ಅನುಗ್ರಹ ನಿನಗಿರಲೆಂದು, ಆ ತಾಯಿ ಶಾರದಾಮಾತೆಯ ಹೆಸರಿಟ್ಟಿದ್ದೇನೆ ಮಗಳೇ…. ನನಗಂತೂ ಶಾರದೆ ಒಲಿಯಲಿಲ್ಲ. ನನ್ನ ಮಗಳಾದರೂ ತುಂಬಾ ಖ್ಯಾತಿವಂತಳಾಗಬೇಕೆಂದು ನನ್ನ ಆಸೆ. ನೀನೇ ನನ್ನ ಕನಸು ಶಾರದಾ, ನಿನಗೋಸ್ಕರನೇ ನನ್ನ ಜೀವನ ಎಂದಿದ್ದರು ಅಮ್ಮ. ನಂತರ ತನಗೂ ಶಾರದಾ ಎನ್ನುವ ಹೆಸರು ತುಂಬಾ ಇಷ್ಟವಾಗಿತ್ತು.
ತನಗೆ ಹತ್ತು, ಹನ್ನೊಂದು ವರ್ಷ ಇರುವಾಗ ಅಮ್ಮ ಹೋಗಿಬಿಟ್ಟರು. ಅವರು ಕೊನೆ ಕ್ಷಣದಲ್ಲಿ ನನ್ನನ್ನು ತಬ್ಬಿಕೊಂಡು, ನೀನು ತುಂಬಾ ತುಂಬಾ ಓದಬೇಕು, ತುಂಬಾ ಖ್ಯಾತಿವಂತಳಾಗಬೇಕು ಎಂದಿದ್ದರು. ನನ್ನ ಇಷ್ಟು ಪ್ರೀತಿಸುವ ಅಮ್ಮಾ…. ನೀನು ಯಾಕೆ ಈ ಮಗಳನ್ನು ಬಿಟ್ಟು ದೂರ ಹೋದೆ,’ ಎಂದು ಅಳುತ್ತಾ ನಿದ್ದೆಗೆ ಜಾರಿದಳು.
ಬೆಳಗ್ಗೆ ಎದ್ದು ಕಾಲೇಜಿಗೆ ಹೋಗಲು ರೆಡಿಯಾಗಿ ಬರುವಾಗ ಒಮ್ಮೆ ಅಮ್ಮನ ಟ್ರಂಕನ್ನು ಸವರಿಯೇ ಬರುವ ರೂಢಿ ಶಾರದಾಗೆ ಇತ್ತು.
ಇಂದೂ ಹಾಗೇ ಅಮ್ಮನ ಟ್ರಂಕ್ ಮುಟ್ಟಿ, `ಅಮ್ಮಾ…. ನಿನ್ನಾಸೆಯಂತೆ, ಚೆನ್ನಾಗಿ ಓದಿದ್ದೇನೆ. ಕೊನೆಯ ಸೆಮಿಸ್ಟರ್ ಎಂಜಿನಿಯರಿಂಗ್ ನಲ್ಲಿ ಇದ್ದೇನೆ. ಪ್ರತಿಷ್ಠಿತ ಕಂಪನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆಗಿದೆ. ನಿನ್ನ ಮಗಳು ನಿನ್ನ ಆಸೆಯಂತೆ ಉನ್ನತ ಕೆಲಸಕ್ಕೆ ಸೇರುತ್ತಾಳೆ,’ ಎನ್ನುತ್ತಾ ಟ್ರಂಕ್ ನ್ನು ಸವರಿ ಬಂದಳು.
ಅಪ್ಪ ಕೊಟ್ಟ ದುಡ್ಡು ತೆಗೆದುಕೊಂಡು ಬಸ್ ನಿಲ್ದಾಣಕ್ಕೆ ಬಂದಾಗ, ನೈನಾ ಬಂದು ಕಾಯುತ್ತಿದ್ದಳು. “ನೈನಾ… ಇವತ್ತು ಕಾಲೇಜ್ ಮುಗಿದ ಮೇಲೆ ಬಟ್ಟೆ ಅಂಗಡಿಗೆ ಹೋಗಿ ಬರೋಣ ಕಣೆ. ಮುಂದಿನ ವಾರ ನನ್ನ ಬರ್ತ್ ಡೇ ಇದೆಯಲ್ಲ. ಅದಕ್ಕೆ ಅಪ್ಪ ಹಣ ಕೊಟ್ಟಿದ್ದಾರೆ,” ಎಂದಳು.
“ಸರಿ ಕಣೇ…..” ಎನ್ನುವಷ್ಟರಲ್ಲಿ ಬಸ್ ಬಂದಿತು. ಇಬ್ಬರೂ ಹತ್ತಿ ಕುಳಿತರು.
ಕಾಲೇಜು ಮುಗಿದ ನಂತರ ಇಬ್ಬರೂ ಬಟ್ಟೆ ಅಂಗಡಿಗೆ ಹೋಗಿ ಹೊಸ ಡ್ರೆಸ್ ತೆಗೆದುಕೊಂಡು ಮನೆಗೆ ಬಂದರು.
ಮುಂದಿನ ವಾರ ಅಂದರೆ ಶಾರದಾಳ ಬರ್ತ್ ಡೇ ದಿನ ಬೇಗ ಎದ್ದು ತಲೆಗೆ ಸ್ನಾನ ಮಾಡಿ ಅಮ್ಮನ ಫೋಟೋ ಮುಂದೆ ಬಂದು ನಮಸ್ಕರಿಸಿದಳು. ಅಂದು ಅವಳ ಸೋದರಮಾವ ಆನಂದ್ ಮತ್ತು ಅವರ ಮಗಳು ಗಾನವಿ ಬಂದರು. ಗಾನವಿ ಶಾರದಾಳಿಗಿಂತ ಎರಡು ವರ್ಷ ಚಿಕ್ಕವಳಾದರೂ ಶಾರದಾಳಿಗೆ ಅವಳು ಬೆಸ್ಟ್ ಫ್ರೆಂಡ್.
“ಶಾರೀ…. ಕಳೆದ ತಿಂಗಳು ನಿನ್ನ ಅಮ್ಮನ ಫ್ರೆಂಡ್ ಚಂದ್ರಿಕಾ ಬಂದಿದ್ದರು, ನಿನ್ನನ್ನು ವಿಚಾರಿಸಿದರು,” ಎಂದಳು ಗಾನವಿ.
“ಹೌದಾ…. ಅವರು ಯಾವಾಗಲೂ ಅಮ್ಮನ ಬಗ್ಗೆ ಹೇಳುತ್ತಿದ್ದರು,” ಎಂದಳು ಶಾರದಾ.
ಇಬ್ಬರೂ ಬಹಳ ಹೊತ್ತು ಕಾಲೇಜು ಗೆಳತಿಯರ ಬಗ್ಗೆ ತುಂಬಾ ಮಾತನಾಡಿದರು. ಶಾರದಾಳ ಅಜ್ಜಿ ಬಗೆ ಬಗೆಯ ಸಿಹಿ ತಿಂಡಿ ಮಾಡಿ ಮೊಮ್ಮಗಳಿಗೆ ಕಳುಹಿಸಿದ್ದರು.
ಆನಂದ್ ಪಾರ್ವತಮ್ಮನ ಅಣ್ಣನ ಮಗ. ಅಣ್ಣನ ಮಗಳನ್ನೇ ತಮ್ಮ ಮಗ ವಸಂತ್ ಗೆ ತಂದುಕೊಂಡಿದ್ದರು. ತನ್ನ ತವರಿಂದ ಅಣ್ಣನ ಮಗ, ಮೊಮ್ಮಗಳು ಬಂದಿದ್ದು ಪಾರ್ಮತಮ್ಮನವರಿಗೆ ಖುಷಿಯಾಗಿತ್ತು. ಬಗೆ ಬಗೆಯ ಅಡುಗೆಯನ್ನು ಮಾಡಿಸಿದ್ದರು. ಅವರಿಬ್ಬರೂ ಬರ್ತ್ ಡೇ ವಿಶ್ ಮಾಡಿ ಊಟ ಮುಗಿಸಿ ಹೊರಟರು.
“ಗಾನವಿ, ಅಮ್ಮನ ಟ್ರಂಕ್ ಓಪನ್ ಮಾಡುವಾಗ ನೀನೂ ಇರು. ನಾನು ಮಾವನಿಗೆ ಹೇಳುತ್ತೇನೆ,” ಎಂದಳು ಶಾರದಾ.
“ಶಾರೀ…. ಬೇಡ ಕಣೇ. ನಿನ್ನ ಅಮ್ಮನ ಆಸೆ ಆಕಾಂಕ್ಷೆ ಎಲ್ಲಾ ಆ ಟ್ರಂಕಿನಲ್ಲೇ ಇದೆ, ನೀನೊಬ್ಬಳೆ ನೋಡು ನಿನಗೆ ಪ್ರೈವೇಸಿ ಇರಲಿ,” ಎಂದಳು ಗಾನವಿ.
ಆದರೂ ಅವಳ ಮಾತು ಕೇಳದ ಶಾರದಾ ಮಾವನ ಬಳಿ, “ಮಾವ, ಇವತ್ತು ಇಲ್ಲೇ ಉಳಿಯಿರಿ. ಗಾನವಿಯ ಜೊತೆ ತುಂಬಾ ಮಾತನಾಡಬೇಕಿದೆ,” ಎಂದಳು ಶಾರದಾ.
“ಸಾರಿ ಶಾರೂ…. ಅವಳಿಗೆ ಕಾಲೇಜು ರಜೆ ಬರಲಿ ಆಗ ಬರುತ್ತೇವೆ. ನಾಳೆ ಜಮೀನಿನಲ್ಲಿ ಬಿತ್ತನೆ ಕೆಲಸವಿದೆ. ಸಂಜೆಯೊಳಗೆ ತಲುಪಬೇಕು. ಭಾವ ಗುರುತರ ಜವಾಬ್ದಾರಿ ಕೊಟ್ಟಿದ್ದರಲ್ಲಾ ಅದಕ್ಕೆ ಬಂದೆ,” ಎಂದು ಆನಂದ್ ಟ್ರಂಕಿನ ಬೀಗವನ್ನು ಭಾವನಿಗೆ ಕೊಡುತ್ತಾ, ನಂತರ ಕಾಫಿ ಕುಡಿದು ಇಬ್ಬರೂ ಇನ್ನೊಮ್ಮೆ ಎಲ್ಲರಿಗೂ ಹೇಳಿ ಹೊರಟರು.
ಚಿಕ್ಕ ವಯಸ್ಸಿನಲ್ಲಿ ರೂಮಿನ ಸಜ್ಜೆಯ ಮೇಲೆ ಟ್ರಂಕ್ ನೋಡಿದಾಗೆಲ್ಲಾ, “ಅದು ಯಾರ ಟ್ರಂಕ್…? ಅದರಲ್ಲಿ ಏನಿದೆ…?” ಅಂತ ಕೇಳುತ್ತಿದ್ದಳು.
“ಅದು ನಿನ್ನ ಅಮ್ಮನ ಟ್ರಂಕ್. ನೀನು ದೊಡ್ಡವಳಾದ ಮೇಲೆ ನಿನಗೆ ಕೊಡಲು ಅಮ್ಮ ಹೇಳಿದ್ದಾಳೆ,” ಎನ್ನುತ್ತಿದ್ದರು ವಸಂತ್. “ನಂಗೆ ಈಗಲೇ ಬೇಕು…. ಕೊಡು,” ಎಂದು ರಚ್ಚೆ ಹಿಡಿಯುತ್ತಿದ್ದಳು.
ಬೀಗದ ಕೀ ಇಲ್ಲೇ ಇದ್ದರೆ ಶಾರದಾ ಹಠ ಮಾಡಿಯೋ, ಇಲ್ಲಾ ಅಮ್ಮನೇ ಬೀಗ ತೆಗೆದು ಏನಿದೆ ಎಂದು ಕುತೂಹಲದಿಂದ ನೋಡಿದರೆ ಎಂದು ವಸಂತ್ ಬೀಗವನ್ನು ಹೆಂಡತಿ ಅನಿತಾಳ ಅಣ್ಣನ ಬಳಿ ಕೊಟ್ಟಿದ್ದರು.
ಅದಕ್ಕೆ ಇಷ್ಟು ವರ್ಷ ಆ ಟ್ರಂಕ್ ಶಾರದೆಯ ರೂಮಿನಲ್ಲಿ ಭದ್ರವಾಗಿತ್ತು. ಇಂದು ಶಾರದೆ ಆ ಟ್ರಂಕ್ ಓಪನ್ ಮಾಡುವ ತವಕದಲ್ಲಿದ್ದಳು. ಇನ್ನೂ ಅಪ್ಪ ಕೊಡುವ ಬೀಗದ ಕೈಗಾಗಿ ಕಾಯುತ್ತಿದ್ದಳು.
“ಶಾರೀ… ಬೀಗದ ಕೈ ತೆಗೆದುಕೋ…. ಟ್ರಂಕ್ ನಲ್ಲಿ ಏನಿದೆ ಎಂದು ನೋಡುವುದು ನಿನಗೆ ಬಿಟ್ಟಿದ್ದು. ನಿನಗೆ ಯಾವಾಗ ಮನಸ್ಸು ಬರುತ್ತೋ ಆಗ ತೆರೆದು ನೋಡು. ನನ್ನ ಕರ್ತವ್ಯ ಪೂರೈಸಿರುವೆ,” ಎಂದು ವಸಂತ್ ರಾತ್ರಿ ಮಗಳ ಕೈಗೆ ಕೀ ಕೊಟ್ಟರು.
ಅಲ್ಲೇ ಇದ್ದ ಪಾರ್ವತಮ್ಮ, “ಏನಿರುತ್ತೆ ಅದರಲ್ಲಿ….. ಒಂದಷ್ಟು ಬೇಡದಿರುವ ಕಾಗದಗಳು. ಉಪ್ಪು, ಖಾರ ಹಾಕಿ ನೆಕ್ಕಬೇಕು ಅಷ್ಟೇ…. ಒಲೆಗೆ ಹಾಕಿದ್ದರೆ ಒಂದು ದಿನ ನೀರಾದರೂ ಕಾಯಿಸಬಹುದಿತ್ತು,” ಎಂದರು.
“ಅಜ್ಜಿ ಅದರಲ್ಲಿ ಪೇಪರ್ ಇರಲಿ, ಕಸವೇ ಇರಲಿ….. ಆದರೆ ನನಗೆ ಮಾತ್ರ ಅದು ಅಮೂಲ್ಯ ವಸ್ತು! ಅದರಲ್ಲಿ ಅಮ್ಮನ ಕೈ ಬರಹ, ಪ್ರೀತಿ, ನೆನಪಗಳು ಇರಬಹುದು,” ಎಂದು ಕೋಪದಿಂದ ಹೇಳಿದಳು ಶಾರದಾ.
ರಾತ್ರಿ ಬೀಗವನ್ನು ಮಗಳ ಕೈಯಲ್ಲಿ ಕೊಟ್ಟು ವಸಂತ್ ಗೆ ಹೆಂಡತಿಯ ಕೊನೆ ಆಸೆಯನ್ನಾದರೂ ಪೂರೈಸಿದೆನಲ್ಲಾ ಎಂದು ಕೊಂಚ ನೆಮ್ಮದಿಯಾಯಿತು.
ಇಷ್ಟು ದಿನ ಅಮ್ಮನ ಟ್ರಂಕ್ ಯಾವಾಗ ತೆರೆಯುವೆನೋ…. ಅದರಲ್ಲಿ ಅಮ್ಮ ನನಗಾಗಿ ಏನು ಇಟ್ಟಿರಬಹುದು ಎಂಬ ಕಾತುರದಿಂದ ಕಾಯುತ್ತಿದ್ದವಳ ಕೈಯಲ್ಲಿ ಇಂದು ಬೀಗದ ಕೀ ಇದೆ. ಸಂತೋಷದಿಂದ ಏನೂ ತೋಚದಂತಾಗಿ ಹೇಗಿದ್ದರೂ ನಾಳೆ ಭಾನುವಾರ ನೋಡೋಣ ಎಂದುಕೊಂಡಳು.
ಅಪ್ಪ ರೂಮಿನಲ್ಲಿ ತನ್ನ ಬಟ್ಟೆ ಮತ್ತು ಪುಸ್ತಕಗಳಿಗೆ ಅಂತ ಎರಡು ಕಪಾಟು (ವಾರ್ಡ್ ರೋಬ್) ಮಾಡಿಸಿಕೊಟ್ಟಾಗ, ಸಜ್ಜೆಯ ಮೇಲಿದ್ದ ಟ್ರಂಕ್ ತೆಗೆದು ತನ್ನ ಕಪಾಟಿನಲ್ಲಿ ಇಟ್ಟುಕೊಂಡಿದ್ದಳು.
ಕೀಯನ್ನು ಕೈಯಲ್ಲಿ ಹಿಡಿದುಕೊಂಡು ಹಾಗೇ ಯೋಚಿಸುತ್ತಾ ಅಮ್ಮನ ನೆನಪಲ್ಲೇ ಹಾಸಿಗೆಯ ಮೇಲೆ ಮಲಗಿದಳು.
ತನಗೆ ಐದಾರು ವರ್ಷವಿದ್ದಾಗ ಒಬ್ಬ ಮುದ್ದಾದ ತಮ್ಮ ಹುಟ್ಟಿದ್ದ. ತಾನಂತೂ ಅವನನ್ನು ಬಿಟ್ಟು ಅಲ್ಲಾಡುತ್ತಿರಲಿಲ್ಲ. ಅವನಿಗೆ ಮೂರೂವರೆ ವರ್ಷವಿದ್ದಾಗ ತುಂಬಾ ವಿಷಮಶೀತ ಜ್ವರ ಬಂದು ದೇವರ ಬಳಿ ಹೋಗಿಬಿಟ್ಟ ಆಗಿನಿಂದ ಅಮ್ಮ ಮಂಕಾಗಿದ್ದಳು. ತನಗೆ ತಿಳಿದಿರುವ ಹಾಗೆ ಅಪ್ಪ, ಅಜ್ಜಿಯ ಬಳಿ ಸರಿಯಾಗಿ ಮಾತನಾಡುತ್ತಿರಲಿಲ್ಲ. ತನ್ನನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದಳು. ಹಾಗೇ ಎರಡು ವರ್ಷದ ನಂತರ ಅಮ್ಮ ತಮ್ಮೆಲ್ಲರನ್ನು ಬಿಟ್ಟು ದೂರವಾದರು. ಎಲ್ಲರೂ ಮಗನ ಸಾವಿನಿಂದ ಅಮ್ಮ ಚೇತರಿಸಿಕೊಳ್ಳಲಿಲ್ಲ ಎನ್ನುತ್ತಿದ್ದರು….. ಹೀಗೆ ಯೋಚಿಸುತ್ತಾ ಯಾವಾಗಲೋ ನಿದ್ದೆಗೆ ಜಾರಿದಳು.
ಮರುದಿನ ಏಳುವಾಗಲೇ ಅತಿ ಲವಲವಿಕೆಯಿಂದ ಅಮ್ಮನ ಟ್ರಂಕ್ ತೆಗೆದು ನೋಡಬೇಕು ಎಂದು ಮನದಲ್ಲಿ ಖುಷಿಯಿಂದ ಬೇಗ ಬೇಗ ಸ್ನಾನ ಮುಗಿಸಿ ದೇವರಿಗೆ ನಮಸ್ಕಾರ ಮಾಡಿದಳು. ತಿಂಡಿ ತಿನ್ನುತ್ತಾ, “ಅಜ್ಜಿ ನನ್ನನ್ನು ಡಿಸ್ಟರ್ಬ್ ಮಾಡಬೇಡಿ, ನಾನು ತುಂಬಾ ಓದಬೇಕು. ಅದಾದ ಮೇಲೆ ನಾನು ಆಚೆ ಬರ್ತೀನಿ,” ಎಂದು ಹೇಳಿ ರೂಮಿಗೆ ಬಂದು ಬಾಗಿಲು ಹಾಕಿದಳು.
“ಹೆಣ್ಣು ಮಗಳು ದೊಡ್ಡವಳಾದರೆ, ಸ್ವಲ್ಪ ಸಹಾಯ ಮಾಡುತ್ತಾಳೆ ಎಂದರೆ, ಇಲ್ಲವೇ ಇಲ್ಲ! ತಾನು ವಯಸ್ಸಾದವಳು, ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಅಂತ ಸ್ವಲ್ಪ ಕೂಡ ಕನಿಕರವಿಲ್ಲ. ಏನು ಹುಡುಗಿನೋ…. ಅಮ್ಮನದೇ ಬುದ್ಧಿ,” ಎಂದು ಬೈದುಕೊಂಡರು ಪಾರ್ವತಮ್ಮ.
ರೂಮಿಗೆ ಬಂದ ಶಾರದಾ ಟ್ರಂಕ್ ನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡಳು. ಅಮ್ಮ ಕಥೆಗಳನ್ನು ಬರೆಯುವುದು ತಿಳಿದಿತ್ತು. ಆದರೆ ಅವರ ಒಂದು ಬರಹವನ್ನೂ ಓದಿರಲಿಲ್ಲ. ಅಮ್ಮನ ಫ್ರೆಂಡ್ ಚಂದ್ರಿಕಾ ಆಂಟಿ, `ಅಮ್ಮ ಬರೆದ ನಾಲ್ಕೈದು ಕಥೆಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು,’ ಎಂದು ಹೇಳಿದ್ದರು. ಆದರೆ ಆ ಹಳೆಯ ಪತ್ರಿಕೆಗಳು ಅವಳಿಗೆ ಸಿಕ್ಕಿರಲಿಲ್ಲ.
`ಶಾರೂ…. ನಿಮ್ಮ ಅಮ್ಮನಿಗೆ ಇನ್ನೂ ಮದುವೆಯಾಗಿರಲಿಲ್ಲ. ಆಗ ನನ್ನ ಮದುವೆಯಾದ ಹೊಸದು. ನಾನು ಗೌರಿ ಹಬ್ಬದ ದಿನ ಕುಂಕುಮಕ್ಕೆ ಅಂತ ನಿಮ್ಮ ಮನೆಗೆ ಹೋಗಿದ್ದೆ. ಆಗ ನಮ್ಮ ಅತ್ತೆ, ಚಂದ್ರಿಕಾ ಇವಳು ಅನಿತಾ ನಿನ್ನ ಹಾಗೆ ಕಥೆ ಕವನ ಏನೇನೋ ಬರೆಯುತ್ತಾಳೆ ಎಂದು ಹೇಳಿದ್ದರು,’ ಎಂದು ಚಂದ್ರಿ ಆಂಟಿ ಹೇಳಿದ್ದರು.
ಆಗ ಟೇಬಲ್ ಮೇಲೆ ಬಿಳಿ ಹಾಳೆಯಲ್ಲಿ ನಿಮ್ಮ ಅಮ್ಮ ಬರೆದ ಕಥೆಗಳು ತುಂಬಿರುತ್ತಿದ್ದವು. ಬಿಳಿ ಹಾಳೆಯಲ್ಲಿ ಮುದ್ದಾಗಿ ಬರೆದು ಒಂದೊಂದು ಕಥೆಯನ್ನು ಗುಂಡು ಪಿನ್ನು ಚುಚ್ಚಿ ಇಡುತ್ತಿದ್ದಳು. ಅವಳ ಬರಹದ ಪ್ರೀತಿ ಕಂಡು ನಾನು ಬೆರಗಾಗಿದ್ದೆ. ಬೆಂಗಳೂರಿನ ಊರಿಗೆ ಬಂದಾಗೆಲ್ಲಾ ನಾನು ಅವಳನ್ನು ಮಾತನಾಡಿಸಲು ನಿಮ್ಮ ಮನೆಗೆ ಹೋಗುತ್ತಿದ್ದೆ, ಎಂದೆಲ್ಲಾ ಚಂದ್ರಿಕಾ ಹೇಳಿದ್ದರು.
ಶಾರದಾ ಟ್ರಂಕ್ ನ್ನು ಮಂಚದ ಮೇಲೆ ಇಟ್ಟು ನಿಧಾನಕ್ಕೆ ಬೀಗವನ್ನು ತೆರೆದಳು. ಬಿಳಿಯ ಹಾಳೆಯಲ್ಲಿ ಅಮ್ಮನ ಹಸ್ತಾಕ್ಷರಗಳು! ಎಲ್ಲೂ ಚಿತ್ತು, ಕಾಟು ಇಲ್ಲದೆ ಮುತ್ತು ಪೋಣಿಸಿದಂತಹ ಬರಹ. ಕೈಯಿಂದ ಸವರಿದಳು. ಮಧುರ ಮಧುರಾನುಭೂತಿಯಲ್ಲಿ ತೇಲಿಹೋದಳು. ಅಮ್ಮನ ನೆನಪಿನಿಂದ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಅಮ್ಮನ ಮಡಿಲಲ್ಲಿ ಮಲಗಿದ ನೆನಪು ಕಣ್ಣು ಮುಂದೆ ಬರುತ್ತಿತ್ತು.
ಪಿನ್ ಮಾಡಿದ ಪೇಪರ್ ಕಟ್ಟುಗಳು, ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಥೆಗಳಿದ್ದವು, ಎರಡು ಕಾದಂಬರಿಯೂ ಇತ್ತು. ಹಳೆಯ ಮಾಸಿದ ಎರಡು ವಾರಪತ್ರಿಕೆ ಇತ್ತು. ಇನ್ನೂ ತಳದಲ್ಲಿ ಒಂದು ಡೈರಿ ಸಿಕ್ಕಿತು. ಅದರಲ್ಲಿ ದಿನಚರಿ ಅಂತ ಬರೆದಿತ್ತು.
`ಓ…. ಅಮ್ಮ ದಿನಚರಿ ಬರೆಯುತ್ತಿದ್ದರಾ….. ಇದನ್ನು ಮೊದಲು ಓದಬೇಕು,’ ಎಂದು ಕೈಗೆತ್ತಿಕೊಂಡಳು.
ಶಾರದಾ ಆ ಡೈರಿಯನ್ನು ಎದೆಗೆ ಅವುಚಿಕೊಂಡು ಹತ್ತು ನಿಮಿಷ ಕಣ್ಮುಚ್ಚಿ ಸುಮ್ಮನೆ ಕುಳಿತುಬಿಟ್ಟಳು…. ಅವಳಿಗೆ ಅಮ್ಮನನ್ನೇ ತಬ್ಬಿಕೊಂಡ ಅನುಭವವಾಯಿತು. ಆ ಮಧುರ ಅನುಭೂತಿಯಲ್ಲಿ ಇರುವಾಗಲೇ ಹೊರಗಡೆಯಿಂದ ಅಜ್ಜಿ ಕೂಗಿದ್ದು ಕೇಳಿಸಿತು.
“ಬಂದೆ ಅಜ್ಜಿ,” ಎನ್ನುತ್ತಾ ಎಲ್ಲವನ್ನೂ ತಿರುಗಿ ಟ್ರಂಕ್ ನಲ್ಲಿ ತುಂಬಿ ಆಚೆ ಬಂದಳು.
“ಊಟ ಮಾಡಿ ಹೋಗಮ್ಮಾ ಶಾರೂ….” ಎಂದರು ವಸಂತ್.
“ಊಟದ ಸಮಯವಾಯಿತಾ….. ಗೊತ್ತೇ ಆಗಲಿಲ್ಲ. ಅಪ್ಪಾ, ಅಮ್ಮನ ಬರಹಗಳನ್ನು ನೋಡುತ್ತಾ ಹಾಗೆ ಅಮ್ಮನ ನೆನಪಿನಲ್ಲೇ ಕೂತಿದ್ದೆ ಸಮಯ ಕಳೆದದ್ದೇ ತಿಳಿಯಲಿಲ್ಲ,” ಎನ್ನುತ್ತಾ ಅಪ್ಪನ ಜೊತೆ ಕುಳಿತು ಊಟ ಮುಗಿಸಿ ಮತ್ತೆ ರೂಮಿಗೆ ಬಂದಳು.
ಮೊದಲು ಆ ವಾರಪತ್ರಿಕೆ ತೆಗೆದುಕೊಂಡು ಅಲ್ಲಿ ಪ್ರಕಟಗೊಂಡಿದ್ದ ಅಮ್ಮನ ಕಥೆಯನ್ನು ಓದಿದಳು. ಎಷ್ಟು ಚೆನ್ನಾಗಿ ಬರೆಯುತ್ತಿದ್ದರು! ಅಮ್ಮನ ಎಲ್ಲಾ ಕಥೆಗಳೂ ಹೀಗೆ ಇರುತ್ತವೇನೋ, ಮೊದಲು ಡೈರಿಯನ್ನು ಓದಿ ನಂತರ ಕಥೆಗಳನ್ನು ಓದೋಣ ಎಂದುಕೊಂಡಳು.
ಡೈರಿಯನ್ನು ಓದಲು ಶುರು ಮಾಡಿದಳು ಅನಿತಾ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದಳು. ಅವರ ತಂದೆಗೆ ಅನಂತ, ಆನಂದ, ಆರತಿ ಹಾಗೂ ಅನಿತಾ ನಾಲ್ವರು ಮಕ್ಕಳು. ಅವರ ತಂದೆ ವ್ಯವಸಾಯವನ್ನು ರೂಢಿಸಿಕೊಂಡಿದ್ದರು. ಹಿರಿಯರಿಂದ ಬಂದ ಸ್ವಲ್ಪ ಗದ್ದೆ, ತೋಟಗಳು ಇದ್ದವು. ಮಕ್ಕಳು ಜಾಸ್ತಿ ಓದದೆ ಅದೇ ಆಸ್ತಿಯನ್ನು ನೋಡಿಕೊಂಡು ಮನೆಯಲ್ಲಿಯೇ ಇದ್ದರು.
ದೊಡ್ಡವರಾದ ಅನಂತ ಮತ್ತು ಆರತಿಗೆ ಬೇಗ ಮದುವೆ ಮಾಡಿದರು. ಆನಂದ ಆದಮೇಲೆ ಅನಿತಾ ಕೊನೆಯವಳು. ಆನಂದ ಪಿಯುಸಿ ಓದಿದ್ದ. ಮುಂದೆ ಓದದೆ ಊರಿನಲ್ಲಿಯೇ ಇದ್ದ. ಹೆಣ್ಣುಮಕ್ಕಳು ಜಾಸ್ತಿ ಓದಬಾರದೆಂದು ಅನಿತಾಳ ಓದನ್ನು ಹತ್ತನೆ ಕ್ಲಾಸಿಗೇ ನಿಲ್ಲಿಸಿದ್ದರು. ಅವಳಿಗೆ ಆಗಿನಿಂದಲೂ ಸಣ್ಣಪುಟ್ಟ ಕವನ, ಕಥೆ ಬರೆಯುವುದು ರೂಢಿಯಾಗಿತ್ತು. ತುಂಬಾ ಕಥೆ ಪುಸ್ತಕಗಳನ್ನು ಓದುತ್ತಿದ್ದಳು. ತಾನೂ ಬರೆಯಬೇಕೆಂಬ ಹಂಬಲ. ಹಾಗೇ ಎರಡು ವರ್ಷ ಅಮ್ಮ ಹಾಗೂ ಅತ್ತಿಗೆಗೆ ಸಹಾಯ ಮಾಡುತ್ತಾ, ಉಳಿದ ಸಮಯದಲ್ಲಿ ಕಾದಂಬರಿ ಓದುವುದು ತಾನು ಬರೆಯುವುದು ಮಾಡುತ್ತಿದ್ದಳು.
ಮನೆಗೆಲಸ, ತೋಟದ ಕೆಲಸ ಎಲ್ಲದರಲ್ಲೂ ಚುರುಕಿದ್ದ ಅನಿತಾಳನ್ನು ಕಂಡರೆ ಮನೆಯಲ್ಲಿ ಎಲ್ಲರಿಗೂ ಇಷ್ಟ. ಯಾವಾಗಲೂ ಏನಾದರೂ ಕೆಲಸ ಮಾಡುತ್ತಲೇ ಇರುತ್ತಿದ್ದಳು.
ಸ್ವಲ್ಪ ಸಮಯ ಸಿಕ್ಕಿದರೂ ಅಪ್ಪನ ಬಳಿ ಹಣ ಪಡೆದು, ಬಿಳಿ ಹಾಳೆಗಳನ್ನು ತಂದು ಅದರಲ್ಲಿ ನೀಟಾಗಿ ಬರೆದು ಪತ್ರಿಕೆಗಳಿಗೆ ಕಳುಹಿಸುತ್ತಿದ್ದಳು. ಕಳುಹಿಸಿದ ಎಲ್ಲವೂ ವಾಪಸ್ ಬರುತ್ತಿತ್ತು. ಒಮ್ಮೆ ಅವಳ ಗೆಳತಿ, “ಅಲ್ಲ ಕಣೆ ನೀನು ಇಷ್ಟು ಚೆಂದದ ಕಥೆಗಳನ್ನು ಬರೆಯುತ್ತೀಯಾ, ನೀನೇ ಕಥಾ ಸಂಕಲನ ಮಾಡಿಸು. ಪ್ರಕಾಶಕರು ಫ್ರೀಯಾಗಿ ಮಾಡಿಕೊಡುತ್ತಾರೆ ಅಂತ ಕೇಳಿದ್ದೆ,” ಎಂದಳು. ಆಗ ಅನಿತಾಳಿಗೆ ಕಥಾ ಸಂಕಲನ ಮಾಡುವ ಆಸೆಯಾಯಿತು.
ಆ ಸಮಯದಲ್ಲೇ ಚಂದ್ರಿಕಾ ಪರಿಯಚಯವಾಗಿದ್ದಳು. ಆ ಊರಿನ ಹೊಸ ಸೊಸೆ ಚಂದ್ರಿಕಾ. ಆಗಷ್ಟೇ ಮದುವೆಯಾಗಿತ್ತು. ಗಂಡ ಹೆಂಡತಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದರು. ಹಬ್ಬ ಹರಿದಿನ ಅಂತ ವರ್ಷದಲ್ಲಿ ಐದಾರು ಸಲ ಊರಿಗೆ ಬರುತ್ತಿದ್ದರು. ಬಂದಾಗೆಲ್ಲಾ ಚಂದ್ರಿಕಾ ಅನಿತಾಳನ್ನು ಭೇಟಿ ಮಾಡುತ್ತಿದ್ದಳು.
ಚಂದ್ರಿಕಾಳೂ ಯಾವಾಗಲಾದರೊಮ್ಮೆ ಒಂದೊಂದು ಕವನ, ಕಥೆಗಳನ್ನು ಬರೆಯುತ್ತಿದ್ದಳು. ಅನಿತಾ ಜಾಸ್ತಿ ಓದದೇ ಇದ್ದರೂ ಆ ಹಳ್ಳಿಯಲ್ಲಿ ಇದ್ದು ಇಷ್ಟೆಲ್ಲಾ ಬರೆಯುವುದು ನೋಡಿ ಖುಷಿಯಾಗಿತ್ತು. ಅದಕ್ಕೆ ತಾನು ಬಂದಾಗೆಲ್ಲಾ ಅನಿತಾಳಿಗೆ ಪ್ರೋತ್ಸಾಹಿಸುತ್ತಿದ್ದಳು.
ಒಮ್ಮೆ ಚಂದ್ರಿಕಾ ಬಂದಾಗ, “ಅಕ್ಕಾ ಫ್ರೀಯಾಗಿ ಕಥಾ ಸಂಕಲನ ಮಾಡಲು ನಿಮಗೆ ಯಾರಾದರೂ ಪ್ರಕಾಶಕರು ಗೊತ್ತಾ?” ಅಂತ ಕೇಳಿದಳು.
ಚಂದ್ರಿಕಾ, “ಪ್ರಕಾಶಕರು ನಮ್ಮಂಥವರ ಕಥೆಗಳನ್ನು ಪ್ರಕಟಿಸುವುದಿಲ್ಲ. ನಾವು ದುಡ್ಡು ಕೊಡಬೇಕು, ಹಿರಿಯ ಸಾಹಿತಿಗಳದ್ದಾದರೆ ಮಾತ್ರ ಹಾಗೆ ಪ್ರಕಟಿಸುತ್ತಾರೆ,” ಅಂತ ಹೇಳಿದಳು.
ಎಷ್ಟು ಹಣ ಬೇಕಾಗಬಹುದು ಅಂತ ಅವರನ್ನು ಕೇಳಿಕೊಂಡಿದ್ದಳು. ಮನೆಯಲ್ಲಿ ಅಪ್ಪ ಅಣ್ಣಂದಿರ ಬಳಿ ಅಷ್ಟು ದುಡ್ಡು ಕೇಳಿದಾಗ, ಎಲ್ಲರೂ ಬೈದರು. ಸಾವಿರಾರು ರೂಪಾಯಿ ಕೊಟ್ಟು ಅಷ್ಟೊಂದು ಪುಸ್ತಕಗಳನ್ನು ಏನು ಮಾಡುವೆ? ಯಾರೂ ಕೊಂಡುಕೊಳ್ಳುವುದಿಲ್ಲ. ದೊಡ್ಡ ದೊಡ್ಡ ಸಾಹಿತಿಗಳ ಪುಸ್ತಕಗಳನ್ನೇ ತೆಗೆದುಕೊಳ್ಳುವುದಿಲ್ಲ. ಅಂತಹದರಲ್ಲಿ ಹೊಸಬಳು. ನೀನು ನಿನ್ನ ಪುಸ್ತಕವನ್ನು ಯಾರು ತೆಗೆದುಕೊಳ್ಳುತ್ತಾರೆ? ಈ ಹುಚ್ಚು ಆಸೆ ಬಿಟ್ಟುಬಿಡು. ಸುಮ್ಮನೆ ಪೇಪರ್, ಇಂಕು ಅಂತ ಹಣ ಹಾಳು ಮಾಡುತ್ತೀಯಾ…. ಇನ್ನು ಇದು ಬೇರೇನಾ…. ಎಂದು ಬೈದರು.
ಇನ್ನೊಮ್ಮೆ ಚಂದ್ರಿಕಾ ಬಂದಾಗ ತಾನೇ ಕೂಡಿಟ್ಟುಕೊಂಡಿದ್ದ ಒಂದಷ್ಟು ದುಡ್ಡು ಆಕೆಗೆ ನೀಡುತ್ತಾ, “ಅಕ್ಕಾ…. ಇಷ್ಟು ದುಡ್ಡು ಕೂಡಿಟ್ಟಿದ್ದೇನೆ. ಪ್ರಕಾಶಕರ ಬಳಿ ನನ್ನನ್ನು ಕರೆದುಕೊಂಡು ಹೋಗುತ್ತೀರಾ?” ಎಂದು ಕೇಳಿದಳು.
“ಅನಿತಾ ಬೆಂಗಳೂರಿನಲ್ಲಿ ತುಂಬಾ ದುಬಾರಿಯಾಗುತ್ತದೆ. ನೀನು ಇಲ್ಲಿಯೇ ನಗರದಲ್ಲಿ ಹೋಗಿ ವಿಚಾರಿಸು,” ಎಂದು ಚಂದ್ರಿಕಾ ಹೇಳಿದಳು.
ಮರುದಿನವೇ ಹಠ ಮಾಡಿ ಅನಂತನ ಜೊತೆ ನಗರಕ್ಕೆ ಹೋಗಿ ಪ್ರಕಾಶಕರನ್ನು ಕೇಳಿದಾಗ, ಈಗಷ್ಟೇ ಬರೆಯುತ್ತಿದ್ದೀರಿ. ಇನ್ನೂ ಸ್ವಲ್ಪ ಸಮಯ ಕಳೆಯಲಿ, ಆಗ ನಿಮ್ಮಿಂದ ಇನ್ನಷ್ಟು ಉತ್ತಮ ಕಥೆಗಳು ಬರುತ್ತವೆ. ಅದನ್ನು ಪ್ರಕಟಣೆ ಮಾಡಿಸಿ ಅಂತ ಸಲಹೆ ನೀಡಿ ಕಳುಹಿಸಿದರು.
ಅನಿತಾಳಿಗೆ ಆಗಲೇ ಹುಡುಗನನ್ನು ಹುಡುಕುತ್ತಿದ್ದರು. ಆಗ ಅನಿತಾಳ ಸೋದರತ್ತೆ ಪಾರ್ವತಮ್ಮ ತಮ್ಮ ಮಗ ವಸಂತ್ ಗೆ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸಿದರು.
ವಸಂತ್ ಇವರ ಮನೆಗೆ ಬರುವಾಗಲೆಲ್ಲಾ ವಾರಪತ್ರಿಕೆಗಳನ್ನು ಹಿಡಿದು ಬರುತ್ತಿದ್ದ. ಕೆಲವು ಸಾಹಿತಿಗಳ ಬಗ್ಗೆ , ಪುಸ್ತಕದ ಬಗ್ಗೆ ಅನಂತನ ಜೊತೆ ಚರ್ಚೆ ಮಾಡುತ್ತಿದ್ದಾಗ ಅವರ ಜೊತೆ ಅನಿತಾಳೂ ಸೇರುತ್ತಿದ್ದಳು.
“ಅನಿತಾ, ವಸಂತ್ ನನ್ನು ಮದುವೆಯಾಗುತ್ತೀಯಾ?” ಎಂದು ಅಪ್ಪ ಕೇಳಿದಾಗ, ಸಾಹಿತ್ಯದ ಬಗ್ಗೆ ಅವನಿಗಿದ್ದ ಅಭಿರುಚಿ ಕಂಡು ಹ್ಞೂಂ ಎಂದಳು.
ಅಲ್ಲದೆ ಅನಿತಾ ಬರೆದ ಕಥೆಗಳನ್ನು ಓದಿ ವಸಂತ್ ಚೆನ್ನಾಗಿದೆ ಎಂದು ಹೇಳುತ್ತಿದ್ದ. ಬಂದಾಗಲೆಲ್ಲಾ ಹೊಸದು ಯಾವುದನ್ನು ಬರೆದಿದ್ದೀಯಾ ಎಂದು ಕೇಳಿ ಓದುತ್ತಿದ್ದ.
ಹಳ್ಳಿಯಾದರೇನು, ಒಳ್ಳೆಯ ಹುಡುಗ. ಸಾಹಿತ್ಯದಲ್ಲಿ ಒಲವಿದೆ, ತನ್ನ ಬರಹಗಳನ್ನು ಮೆಚ್ಚುತ್ತಾನೆ. ಮುಂದೆ ತನಗೆ ಬರೆಯಲು ಅನುಕೂಲವಾಗುತ್ತದೆ ಎಂದು ಯೋಚಿಸಿದಳು. ಹಾಗೆ ಅವರಿಬ್ಬರ ನಡುವೆ ಒಲವು ಬೆಳೆಯಿತು.
ಮದುವೆಯ ನಂತರ ಅಪ್ಪ ತನಗೆ ಕೊಟ್ಟ ಟ್ರಂಕಿನಲ್ಲಿ ತಾನು ಬರೆದ ಕಥೆಗಳ ಕಟ್ಟುಗಳನ್ನು ಹಾಕಿ ಅನಿತಾ ಗಂಡನ ಮನೆಗೆ ತೆಗೆದುಕೊಂಡು ಹೋದಳು.
ಮೊದಲನೇ ವರ್ಷ ಬರೆಯಲು ಗಮನ ಕೊಡಲೇ ಆಗಲಿಲ್ಲ. ಮದುವೆಯಾದ ಹೊಸತು. ಹಬ್ಬ ಹರಿದಿನಗಳು, ಸಂಪ್ರದಾಯ ಅಂತ ತಾಯಿ ಮನೆ, ಗಂಡನ ಮನೆ ಎಂದು ಓಡಾಟ. ನೆಂಟರ ಮನೆಗಳ ತಿರುಗಾಟ ಇದರಲ್ಲಿಯೇ ಕಳೆದುಹೋಯಿತು. ಆದರೂ ಸಮಯ ಸಿಕ್ಕಾಗೆಲ್ಲ ವಸಂತ ಸಂಗ್ರಹಿಸಿದ್ದ ಕೆಲವು ಕಾದಂಬರಿಗಳನ್ನು ಓದುತ್ತಿದ್ದಳು.
ನಂತರ ಮನೆಯ ಕೆಲಸ, ತೋಟದ ಕೆಲಸ ಅಂತ ಹಗಲಿನಲ್ಲಿ ಸಮಯವಾಗುತ್ತಿರಲಿಲ್ಲ. ರಾತ್ರಿಯ ವೇಳೆ ಸ್ವಲ್ಪ ಓದುವುದು, ಬರೆಯುವುದು ಮಾಡುತ್ತಿದ್ದಳು. ಹಗಲಿನಲ್ಲಿ ಕೊಂಚ ಸಮಯ ಸಿಕ್ಕಿದರೆ ರೂಮಿಗೆ ಹೋಗಿ ಓದಲು, ಬರೆಯಲು ಕುಳಿತರೆ ಸಾಕು, “ಇಲ್ಲಿ ಇಷ್ಟೊಂದು ಕೆಲಸವಿದೆ. ನೀನೇನು ಅಲ್ಲಿ ಪುಸ್ತಕ ಹಿಡಿದು ಕುಳಿತೆ? ಕಥೆ ಪುಸ್ತಕ ಓದುವುದು, ಬರೆಯುವುದು ಗಂಡಸರ ಕೆಲಸ. ನೀನು ಹೆಂಗಸು ಅದನ್ನೆಲ್ಲಾ ಓದಬಾರದು, ಮೊದಲು ಮನೆ ಕೆಲಸ ಗಮನಿಸು,” ಎಂದು ಅತ್ತೆ ಕೂಗಾಡುತ್ತಿದ್ದರು.
ಅನಿತಾಳಿಗೆ ಅಳುವೇ ಬರುತ್ತಿತ್ತು. ಮದುವೆಯಾದ ಮೇಲೆ ಗಂಡ ಜೊತೆಗಿರುತ್ತಾನೆ, ತನ್ನ ಮಾತು ಕೇಳುತ್ತಾನೆ. ತನ್ನ ಬರಹಗಳನ್ನು ಪುಸ್ತಕ ಮಾಡಬಹುದು. ಇನ್ನಷ್ಟು ಚಂದದ ಕಥೆ, ಕಾದಂಬರಿಗಳನ್ನು ಬರೆಯಬೇಕೆಂದು ಕನಸು ಕಂಡಿದ್ದಳು.
ಹೀಗೆ ಸಮಯ ಸರಿಯುತ್ತಲೇ ಇತ್ತು. ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಲೇ ಇಲ್ಲ ಎಂದು ಮನೆಯಲ್ಲಿ ಕಿರಿಕಿರಿ ಬೇರೆ, ಆ ಪೂಜೆ, ಈ ಪೂಜೆ ಮಾಡು ಉಪವಾಸ ಮಾಡು ಎಂದು ಅತ್ತೆಯ ಕಿರುಕುಳ ಹೆಚ್ಚತೊಡಗಿತು.
ಒಮ್ಮೆ ಅಮ್ಮನ ಮನೆಗೆ ಬಂದಾಗ ಗಂಡನ ಮನವೊಲಿಸಿ, ಡಾಕ್ಟರ್ ಹತ್ತಿರ ಹೋಗಿ ಸ್ವಲ್ಪ ಔಷಧಿಗಳನ್ನು ತೆಗೆದುಕೊಂಡಳು. ಅಂತೂ ಅನಿತಾ ಪ್ರೆಗ್ನೆಂಟ್ ಆದಳು. ಇನ್ನು ಪುಸ್ತಕದ ಕನಸು ಹಾಗೆಯೇ ಉಳಿಯಿತು. ಸಮಯ ಸಿಕ್ಕಾಗೆಲ್ಲ ಒಂದು ಎರಡು ಪೇಜ್ ಗಳನ್ನು ಬರೆದಳು. ಬರೆದ ಬರಹಗಳನ್ನೆಲ್ಲಾ ನೀಟಾಗಿ ಟ್ರಂಕ್ ನಲ್ಲಿ ಮುಚ್ಚಿಟ್ಟಳು.
ಅವಳ ಪುಸ್ತಕ ಪ್ರಕಟಣೆಯ ಕನಸು ಹಾಗೆಯೇ ಉಳಿಯಿತು. ಈಗಲೇ ಬೇಡ ಮುಂದೆ ನೋಡೋಣ ಎಂದು ಸುಮ್ಮನಿರಿಸಿದ್ದ ವಸಂತ್. ಅವಳ ಬಲವಂತಕ್ಕೆ ವಸಂತ್ ಒಂದೆರಡನ್ನು ವಾರಪತ್ರಿಕೆಗೆ ಕಳುಹಿಸಲು ಒಪ್ಪಿಕೊಂಡಿದ್ದ. ಹಾಗೆ ಅವಳು ಬರೆದ ನಾಲ್ಕೈದು ಕಥೆಗಳು ಜನಪ್ರಿಯ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಒಂದೆರಡು ಕಥೆ ಬರೆದ ಮಾತ್ರಕ್ಕೆ ದೊಡ್ಡ ಲೇಖಕಿ ಅಂತ ತಿಳಿದುಬಿಟ್ಟಿದ್ದಾಳೆ ಎಂದು ನಾದಿನಿಯರು ಅಕ್ಕಪಕ್ಕದ ಹೆಣ್ಣುಮಕ್ಕಳು ಎಲ್ಲಾ ಮೂದಲಿಸುತ್ತಿದ್ದರು.
ಜಿಲ್ಲಾ ಕೇಂದ್ರಗಳಲ್ಲಿ, ಹತ್ತಿರದಲ್ಲಿ ಯಾವುದಾದರೂ ಸಾಹಿತ್ಯ ಸಮ್ಮೇಳನ ಇದ್ದರೆ ಅಲ್ಲಿಗೆ ಒಂದೆರಡು ಬಾರಿ ವಸಂತ್ ಅವಳನ್ನು ಕರೆದುಕೊಂಡು ಹೋಗುತ್ತಿದ್ದ. ಅಮ್ಮ ಬೈದರೂ ಅವರ ಮಾತು ಕೇಳದೆ ಕರೆದುಕೊಂಡು ಹೋಗುತ್ತಿದ್ದ. ಆ ಊರಿನ ಮಹಿಳಾ ಮಂಡಳಿಯವರು ಬಂದು ಅನಿತಾ ಕಥೆಗಳನ್ನು ಬರೆಯುತ್ತಾರಂತೆ, ಅವರು ನಮ್ಮೂರ ಮಹಿಳಾ ಮಂಡಳಿಯ ಸದಸ್ಯರಾಗಬೇಕೆಂದು ತುಂಬಾ ಕೇಳಿಕೊಂಡಿದ್ದರಿಂದ ಅಲ್ಲಿಗೆ ಸೇರಿಸಿದ್ದ.
ಮಹಿಳಾ ಮಂಡಳಿಯ ಮೀಟಿಂಗ್, ಕಾರ್ಯಕ್ರಮ ಅಂತ ಹೋದಾಗ, ಮನೆಯ ಕೆಲಸ ಹಿಂದೆ ಬೀಳುತ್ತಿತ್ತು. ಆಗೆಲ್ಲ ಯಾಕಾದರೂ ಸೇರಿಸಿದೆನೋ ಎಂದು ವಸಂತ್ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದ.
ಮಗಳು ಹುಟ್ಟಿದ ನಂತರ ಅನಿತಾಳಿಗೆ ಕೆಲಸ ಜಾಸ್ತಿ ಆಯಿತು. ಮಗಳನ್ನು ನೋಡಿಕೊಳ್ಳುವುದು, ಮನೆಯ ಕೆಲಸ ಕಾರ್ಯ ಅಂತ ಹಗಲು ಹೊತ್ತಿನಲ್ಲಿ ಬರೆಯಲು ಆಗುತ್ತಿರಲಿಲ್ಲ. ಮಗಳ ಮುದ್ದು ಮುಖ, ಸುಂದರ ನಗು, ಆಟ ಪಾಠಗಳು, ಮನದಲ್ಲಿ ನೂರು ಭಾವನೆಗಳನ್ನು ಹುಟ್ಟು ಹಾಕುತ್ತಿದ್ದ.
ಮಗಳು ಎದ್ದಿರುವಾಗ ಅವಳ ಕಡೆಯೇ ಗಮನ, ಮಡಿಲಲ್ಲಿ ಮಲಗಿಸಿಕೊಂಡು, “ನನ್ನ ಶಾರದಾ ನೀನು! ನಿನಗೆ ಶಾರದಾ ದೇವಿಯ ಕೃಪಾ ಕಟಾಕ್ಷವಿರಲಿ. ನೀನು ತುಂಬಾ ತುಂಬಾ ಓದಬೇಕು. ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು,” ಎನ್ನುತ್ತಿದ್ದಳು. ಅಮ್ಮನ ಮಾತು ಕೇಳಿ, ಮುಖ ನೋಡಿ ನಕ್ಕರೆ, ಮಗುವಿಗೆ ತಾನು ಹೇಳಿದ್ದು ಅರ್ಥವಾಯಿತೇನೋ ಎಂದು ಪ್ರೀತಿಯಿಂದ ಎದೆಗೊತ್ತಿಕೊಂಡು ಮುದ್ದು ಮಾಡುವಳು.
ವಸಂತ್, “ಆ ಎಳೆಯ ಮಗುವಿನ ಹತ್ತಿರ ಏನು ಮಾತನಾಡುವೆ? ಅವಳಿಗೆ ಅದು ತಿಳಿಯುತ್ತಾ?” ಎಂದು ರೇಗಿಸುತ್ತಿದ್ದ.
ರಾತ್ರಿ ಮಗಳು ಮಲಗಿದ ಮೇಲೆ ಬರೆಯುತ್ತಿದ್ದಳು. ಮಗಳ ಬಗ್ಗೆ ಕವನಗಳನ್ನು ಬರೆದು ವಾರ ಪತ್ರಿಕೆಗಳಿಗೆ ಕಳುಹಿಸಿದಳು. ಒಂದು ಎರಡು ದಿನ ಸುಮ್ಮನಿದ್ದ ವಸಂತ್, ಕ್ರಮೇಣ ಬೈಯಲು ಶುರು ಮಾಡಿದ, “ರಾತ್ರಿ ಲೈಟ್ ಹಾಕಿ ಕೂರುತ್ತೀಯಾ. ನನಗೆ ನಿದ್ದೆ ಬರುವುದಿಲ್ಲ. ನಿನ್ನದೊಂದು ಗೋಳು!” ಎಂದು ಕೂಗಾಡುತ್ತಿದ್ದ.
ಕಣ್ಣೀರು ಹಾಕುತ್ತಾ ಲೈಟ್ ಆರಿಸಿ ಮಲಗುತ್ತಿದ್ದಳು. ದೊಡ್ಡ ದೊಡ್ಡ ಮಹಿಳಾ ಲೇಖಕಿಯರು ಹೇಗೆ ಬರೆಯುತ್ತಾರೆ? ಅವರಿಗೆ ಮನೆಯಲ್ಲಿ ಏನೂ ಹೇಳುವುದಿಲ್ವಾ…..? ಪುರುಷ ಪ್ರಧಾನ ಸಮಾಜದಲ್ಲಿ ಇಂಥವನ್ನು ಹೇಳದೆ ಬಿಡುತ್ತಾರಾ….? ಪಾಪ ಅವರುಗಳು ಹೇಗೋ ಸಮಯ ಮಾಡಿಕೊಂಡು ಬರೆಯುತ್ತಾರೇನೋ…. ಹೀಗೆ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದಳು.
ಹತ್ತಿರದಲ್ಲೇ ಸಾಹಿತ್ಯದ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನ ಯಾವುದಿದ್ದರೂ ಹೋಗಲು ಆಗುತ್ತಿರಲಿಲ್ಲ. ಇಷ್ಟು ದಿನ ಓಡಾಡಿದ್ದು ಸಾಕು ಇನ್ನೂ ಮನೆ ಮಗು ಅಂತ ನೋಡಿಕೊಂಡಿರು ಎನ್ನುತ್ತಿದ್ದ ವಸಂತ್.
“ನೀನು ಬರೆಯುವುದರಿಂದ ಏನೂ ಪ್ರಯೋಜನವಿದೆ? ಅದೇ ಸಮಯದಲ್ಲಿ ತರಕಾರಿನೋ, ಹೂವೋ ಬೆಳೆದರೆ ಸಾಕಷ್ಟು ದುಡ್ಡು ಬರುತ್ತದೆ. ಇನ್ನೂ ಮಗು ಸ್ಕೂಲಿಗೆ ಹೋಗಲು ಶುರು ಮಾಡಿದರೆ ಖರ್ಚು ಜಾಸ್ತಿಯಾಗುತ್ತದೆ. ಓದಿಸಲು ಎಷ್ಟು ಹಣವಿದ್ದರೂ ಸಾಲುವುದಿಲ್ಲ,” ಎನ್ನುತ್ತಿದ್ದ ವಸಂತ್.
(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)