ಮಕ್ಕಳನ್ನು ಮುಂದಿನ ಸತ್ಪ್ರಜೆಗಳಾಗಿಸಲು, ಈಗೆಲ್ಲ ಅನೇಕ ಆಧುನಿಕ ಸೌಲಭ್ಯಗಳಿವೆ. ಅದರ ಜೊತೆಗೆ ಈ ಅತ್ಯಗತ್ಯ, ಮೂಲಭೂತ ವಿಶೇಷ ವಿಷಯಗಳನ್ನೂ ಖಂಡಿತಾ ಕಲಿಸಿಕೊಡಿ!

ಯಾವ ರೀತಿ ಹಸಿ ಮಣ್ಣನ್ನು ಕಲಸಿ, ನಮಗೆ ಬೇಕಾದ ಆಕಾರ ನೀಡಬಹುದಾಗಿದೆಯೋ, ಅದೇ ತರಹ ಮಕ್ಕಳನ್ನು ಮೊದಲಿನಿಂದಲೇ ಉತ್ತಮ ರೀತಿಯಲ್ಲಿ ತಿದ್ದಿ ತೀಡಿ, ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಮಾಡಿದರೆ, ದೊಡ್ಡವರಾದ ಮೇಲೆ ಅವರು ಖಂಡಿತಾ ಸತ್ಪ್ರಜೆಗಳಾಗುತ್ತಾರೆ. ಅದು ಜೀವನವಿಡೀ ಅವರ ಜೊತೆಗಿದ್ದು, ತಮ್ಮ ಮುಂದಿನ ಪೀಳಿಗೆಯನ್ನೂ ಹಾಗೇ ಬೆಳೆಸುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಬಲು ಅವಶ್ಯಕ. ಇದು ವ್ಯಕ್ತಿಯನ್ನು ಜೀವನದ ಪ್ರತಿ ಸಂಘರ್ಷವನ್ನು ಸಹಜವಾಗಿ ಎದುರಿಸಲು ತಯಾರಿ ನೀಡುತ್ತದೆ. ಮಕ್ಕಳಲ್ಲಿ ಈ ಗುಣಗಳು ಚಿಕ್ಕ ವಯಸ್ಸಿನಿಂದಲೇ ವಿಕಾಸಗೊಂಡರೆ, ಅದು ಜೀವನವಿಡೀ ಅವರ ಕೈಹಿಡಿಯುತ್ತದೆ.

ಮಕ್ಕಳಲ್ಲಿ ಸ್ವಾವಲಂಬನೆಯ ಭಾವನೆ ಬೆಳೆದು ವಿಕಾಸಗೊಳ್ಳಲು ಅವರು ಬೆಳೆಯುತ್ತಿರುವ ಮನೆಯ ವಾತಾವರಣ ಪೂರಕವಾಗಿರಬೇಕು. ಹಾಗಿದ್ದಾಗ ಅವಕ್ಕೆ ಸಹಜವಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳ ವ್ಯವಹಾರ ಮತ್ತು ವ್ಯಕ್ತಿತ್ವದಲ್ಲಿ ಸುಧಾರಣೆ ಮೂಡಲು ಅವರ ತಾಯಿತಂದೆ, ಮನೆಯ ಹಿರಿಯರು, ಅಧ್ಯಾಪಕರು, ಫ್ರೆಂಡ್ಸ್, ಸಹಪಾಠಿಗಳು ಪ್ರಧಾನ ಪಾತ್ರ ವಹಿಸುತ್ತಾರೆ. ಯಾವ ಮಗುವಿಗೆ ಉತ್ತಮ ಸಹಕಾರ, ಸಹಯೋಗ, ಪ್ರೋತ್ಸಾಹ, ಸಮರ್ಪಕ ಮಾರ್ಗದರ್ಶನ ಸಿಗುತ್ತದೋ ಅಂಥ ಮಗು ಉತ್ತಮ ವ್ಯಕ್ತಿಯಾಗಿ ವಿಕಾಸಗೊಳ್ಳುತ್ತದೆ. ಆಗ ಅವರಲ್ಲಿ ಸ್ವಾಭಿಮಾನದ ಭಾವನೆಯೂ ಜಾಗೃತವಾಗುತ್ತದೆ.

ಮಕ್ಕಳು ಸ್ವಾವಲಂಬನೆ ಕಲಿಯಲು, ತಮ್ಮ ನಿರ್ಧಾರಗಳ ಬಗ್ಗೆ ಭರವಸೆ ಹೊಂದಿರಬೇಕು. ಈ ನಿರ್ಧಾರಗಳ ಪರಿಣಾಮ ಎದುರಿಸಲು ಸಿದ್ಧರಿರಬೇಕು. ಒಬ್ಬ ವ್ಯಕ್ತಿ ದೃಢ ಆತ್ಮವಿಶ್ವಾಸ ಹೊಂದಿದ್ದಾಗ ಮಾತ್ರ ಅವನು ಜೀವನದ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನೂ ಸುಲಭವಾಗಿ ಎದುರಿಸಬಲ್ಲ. ಮಕ್ಕಳಲ್ಲಿ ಇಂಥ ತುಂಬು ಆತ್ಮವಿಶ್ವಾಸ ಬೆಳೆಸಬೇಕು. ಇದು ಕಷ್ಟ ಎಂಬುದೇನೋ ನಿಜ, ಆದರೆ ಇದು ಅತ್ಯಗತ್ಯ. ಹೀಗಾಗಿ ನಿಧಾನವಾದರೂ ಸರಿ, ಮಕ್ಕಳಿಗೆ ಈ ಭಾವನೆ ಬಲಿಯುವಂತೆ ಕಲಿಸಿ, ಇದರಿಂದ ಮುಂದೆ ಅವರು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

42-23879199

ಉದಾಹರಣೆ ನೀಡಿ ಕಲಿಸಿರಿ

ಮಕ್ಕಳ ಎಲ್ಲಕ್ಕಿಂತ ದೊಡ್ಡ ಶಕ್ತಿ ಎಂದರೆ ಅವರ ತಾಯಿ ತಂದೆ. ಹೀಗಾಗಿ ಮಕ್ಕಳು ಎಲ್ಲಾ ಹಂತದಲ್ಲೂ ತಮ್ಮ ಹೆತ್ತವರನ್ನು ಅನುಕರಿಸುವ ಕೆಲಸ ಮಾಡುತ್ತವೆ. ಹೀಗಾಗಿ ತಾಯಿ ತಂದೆ ಹೆಚ್ಚಿನ ಆತ್ಮವಿಶ್ವಾಸದಿಂದ ಕೂಡಿದ್ದರೆ ಮಾತ್ರ, ಮಕ್ಕಳು ಸಹ ಅದನ್ನು ಸುಲಭವಾಗಿ ರೂಢಿಸಿಕೊಳ್ಳಲು ಸಾಧ್ಯ. ಮಕ್ಕಳನ್ನು ನಿಯಂತ್ರಿಸುವ ನೆಪದಲ್ಲಿ ಸದಾ ಅವರನ್ನು ಬೈಯುವ, ಹೊಡೆಯುವ ತಾಯಿ ತಂದೆ, ಸಣ್ಣಪುಟ್ಟ ವಿಷಯಕ್ಕೂ ಮಕ್ಕಳ ಮೇಲೆ ಕೈಯೆತ್ತುವ ಹೆತ್ತವರು, ತಮ್ಮ ಮಕ್ಕಳ ಎದುರು ಕೆಟ್ಟ ಉದಾಹರಣೆಗಳಾಗಿ ನಿಲ್ಲುತ್ತಾರೆ, ಜೊತೆಗೆ ಮಕ್ಕಳೆದುರು ತಮ್ಮ ಘನತೆ ಗೌರವಗಳನ್ನೂ ಕಳೆದುಕೊಳ್ಳುತ್ತಾರೆ.

ದೈಹಿಕ, ಮಾನಸಿಕ, ಭಾವನಾತ್ಮಕ ರೂಪಗಳಲ್ಲಿ ಪೀಡಿತರಾದ ಮಕ್ಕಳು ಸಹಜವಾಗಿಯೇ ಸೆಲ್ಫ್ ರೆಸ್ಪೆಕ್ಟ್ ಕಳೆದುಕೊಳ್ಳುತ್ತಾರೆ. ಹೀಗಾಗಿ ತಾಯಿ ತಂದೆ ಆದಷ್ಟೂ ಕಠೋರ ಮಾತುಗಳಿಂದ ಬೈಯದೆ, ಕೈಯೆತ್ತಿ ದಂಡಿಸದೆ, ಪ್ರೀತಿ ವಾತ್ಸಲ್ಯದ ಆದರೆ ಶಿಸ್ತಿನ ಕ್ರಮದಿಂದ ಮಗು ತನ್ನ ತಪ್ಪನ್ನು ಅರಿತು, ತಿದ್ದಿಕೊಂಡು ಮುಂದುವರಿಯುವಂತೆ ಮಾಡಬೇಕು.

ಮಕ್ಕಳಲ್ಲಿ ಉತ್ತಮ ಅಭ್ಯಾಸಗಳು ರೂಢಿಗೊಳ್ಳಲು ನೆರವಾಗಿ. ನೀವು ನಿಮ್ಮ ಉತ್ತಮ, ಆದರ್ಶ ವ್ಯವಹಾರಗಳಿಂದ ಮಕ್ಕಳಿಗೆ ರೋಲ್ ‌ಮಾಡೆಲ್ ‌ಆಗಿ. ಇದರಿಂದ ಸಹಜವಾಗಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ನಿಧಾನವಾಗಿ ಅವರು ಸ್ವಾವಲಂಬಿಗಳಾಗುತ್ತಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ, ಮಕ್ಕಳಲ್ಲಿ ಓವರ್‌ ಕಾನ್ಛಿಡೆನ್ಸ್ ಬೆಳೆಯದಂತೆ ಎಚ್ಚರ ವಹಿಸಬೇಕು.

ಆತ್ಮವಿಶ್ವಾಸ ಅಹಂಕಾರ ಆಗದಿರಲಿ

ಆತ್ಮವಿಶ್ವಾಸ ಎಂಬುದು ಪ್ರತಿಯೊಬ್ಬರಿಗೂ ಅತಿ ಅಗತ್ಯವಾದುದು. ಆದರೆ ಮಕ್ಕಳಿಗೆ ತಿಳಿಹೇಳುವ ನೆಪದಲ್ಲಿ, ಅವರ ಆತ್ಮವಿಶ್ವಾಸ ಅಹಂಕಾರಕ್ಕೆ ತಿರುಗಿಬಿಟ್ಟೀತು! ಉತ್ತಮ ವ್ಯವಹಾರಗಳನ್ನು ಹೊಗಳಬೇಕಾದುದು ಅಗತ್ಯ, ಆದರೆ ಕಾರಣವಿಲ್ಲದೆಯೇ ಮಗುವನ್ನು ಹೊಗಳುತ್ತಿದ್ದರೆ, ಅದು ಅನಾವಶ್ಯಕ ಗರ್ವ ಬೆಳೆಸಿಕೊಳ್ಳುತ್ತದೆ. ವಾಸ್ತವದಲ್ಲಿ ಮಗು ಉತ್ತಮ ಪ್ರಯಾಸಪಟ್ಟಿದ್ದರೆ, ಅದನ್ನು ಸಹಜ ಮಾತುಗಳಲ್ಲಿ ಹೊಗಳಬೇಕು. ಅದು ಯಾವುದೋ ಕೆಲಸದಲ್ಲಿ ಫೇಲ್ಯೂರ್‌ ಆದಾಗಲೂ, ಸುಮ್ಮನೆ ಹೊಗಳಲು ಹೋಗಬಾರದು.

ಎಲ್ಲಾ ವಿಷಯಗಳೂ ಒಮ್ಮಿಂದೊಮ್ಮೆಲೇ 100% ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ನಿಮ್ಮ ಮಗು ಅಪಾರ ಪರಿಶ್ರಮ, ಅನೇಕ ಪ್ರಯತ್ನಗಳನ್ನು ಪಟ್ಟ ನಂತರವೇ ಏನಾದರೊಂದನ್ನು ಸಾಧಿಸಲು ಸಾಧ್ಯ ಎಂಬುದನ್ನು ಗುರುತಿಸುವಂತಾಗಬೇಕು. ಒಮ್ಮೊಮ್ಮೆ ಎಷ್ಟೋ ಪ್ರಯತ್ನಗಳ ನಂತರ ಕೆಲವು ಕೆಲಸಗಳು ಕೈಗೂಡುವುದಿಲ್ಲ ಎಂಬ ವಾಸ್ತವಾಂಶವನ್ನೂ ಮಗು ಅರಿತಿರಬೇಕು. ಇಂಥ ಸ್ಥಿತಿಯಲ್ಲಿ ಹತಾಶೆಯಿಂದ ಕೈ ಚೆಲ್ಲುವ ಬದಲು,  `ಮರಳಿ ಯತ್ನ ಮಾಡು’ ಎಂಬ ಕ್ರಮ ರೂಢಿಸಿಕೊಳ್ಳಬೇಕು.

ಇಂಥ ವ್ಯವಹಾರದಿಂದ, ಎಲ್ಲಾ ಪರಿಸ್ಥಿತಿಯಲ್ಲೂ ಹೆತ್ತವರು ತನ್ನ ಏಳಿಗೆಯನ್ನೇ ಬಯಸುತ್ತಾರೆ ಎಂಬುದು ಮಗುವಿಗೆ ಸ್ಪಷ್ಟವಾಗುತ್ತದೆ. ಆಗ ಮಾತ್ರ ಅದು ನಿಮ್ಮ ಎಲ್ಲಾ ಸಲಹೆಗಳ ಮೇಲೂ ಭರವಸೆ ಇಡಬಲ್ಲದು. ಮನೆಯಲ್ಲಿ ಮಾಡಲಾಗಿರುವ ಶಿಸ್ತಿನ ಕ್ರಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ಪ್ರೀತಿ ವಾತ್ಸಲ್ಯದಿಂದಲೇ ಆತ್ಮವಿಶ್ವಾಸದ ತಳಹದಿ ರೂಪುಗೊಳ್ಳುತ್ತದೆ ಎಂಬುದನ್ನು ಮರೆಯಬಾರದು. ನೀವು ಸದಾ ಅದರತ್ತ ಪ್ರೀತಿ ವಾತ್ಸಲ್ಯದ ಮಳೆ ಸುರಿಸುತ್ತೀರಿ ಎಂಬುದು ಮಗುವಿಗೆ ಗೊತ್ತಿರಬೇಕು. ಆಗ ಅದು ತನ್ನ ಓದು, ಕಲಿಕೆ, ಆಟಪಾಠ, ಪಠ್ಯೇತರ ಚಟುವಟಿಕೆ ಎಲ್ಲದರಲ್ಲೂ ದಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡಬಲ್ಲದು. ಯಶಸ್ಸು ಸಿಗಬೇಕಾದರೆ ಬಹಳ ಕಷ್ಟಪಟ್ಟು, ಅನೇಕ ಸಲ ಪ್ರಯತ್ನಪಟ್ಟರೆ ಮಾತ್ರ ಅದು ಸಾಧ್ಯ ಎಂಬುದು ಮಗುವಿಗೆ ಗೊತ್ತಾಗಬೇಕು. ಆದರೆ ಅಕಸ್ಮಾತ್‌ ಫೇಲ್ಯೂರ್‌ ಆದರೆ ಅದರಿಂದ ಅಪಾರ ನಿರಾಸೆಗೆ ಒಳಗಾಗಬೇಕಿಲ್ಲ ಎಂಬುದೂ ತಿಳಿದಿರಬೇಕು.

ಮಕ್ಕಳ ಉತ್ಸಾಹ ಕುಗ್ಗಿಸಬೇಡಿ

ಮಕ್ಕಳಲ್ಲಿ ಎಲ್ಲಾ ವಿಷಯಗಳನ್ನೂ ಒಮ್ಮೆಲೇ ತಿಳಿದುಕೊಳ್ಳಬೇಕೆನ್ನುವ ತುಸು ಅತಿಯಾದ ಜಿಜ್ಞಾಸೆ, ಕುತೂಹಲ ಹೆಚ್ಚಾಗಿರುತ್ತದೆ. ಈ ಪ್ರಪಂಚವನ್ನು ಹೀಗೆ ಅರಿಯುತ್ತಾ ಹೋದಂತೆ ಅದು ರೋಮಾಂಚಿತಗೊಳ್ಳುತ್ತದೆ. ಒಮ್ಮೊಮ್ಮೆ ಈ ವಿಷಯ ತಾಯಿ ತಂದೆಗೆ ತಲೆನೋವು ಎನಿಸುತ್ತದೆ. ಆದರೆ ಮಕ್ಕಳ ಈ ಉತ್ಸಾಹವನ್ನು ಕುಗ್ಗಿಸುವುದರ ಬದಲು, ತಾಯಿ ತಂದೆ ಇದನ್ನು ಉತ್ತಮ ರೀತಿಯಲ್ಲಿ ಹ್ಯಾಂಡಲ್ ಮಾಡಬೇಕು.

ಮಕ್ಕಳ ಎನರ್ಜಿಯನ್ನು ಸರಿಯಾದ ದಿಕ್ಕಿನತ್ತ ತಿರುಗಿಸಿ. ತಾಯಿ ತಂದೆ ಮಕ್ಕಳ ಕುರಿತಾಗಿ 24 ಗಂಟೆಗಳೂ ಗಮನ ವಹಿಸಬೇಕಾಗುತ್ತದೆ, ಅದರಲ್ಲೂ ಅವು ತುಂಬಾ ಚಿಕ್ಕವರಿರುವಾಗ, ಹಾಗೆಂದು ಮಕ್ಕಳಿಗೆ ಸ್ವಾತಂತ್ರ್ಯವೇ ಇಲ್ಲ ಎಂದಾಗಬಾರದು. ಆಗ ಮಾತ್ರ ಮಕ್ಕಳು ತಮ್ಮ ಇಷ್ಟಾನಿಷ್ಟ, ಒಳ್ಳೆಯದು ಕೆಟ್ಟದ್ದು, ಇತ್ಯಾದಿಗಳ ಕುರಿತು ತಾರ್ಕಿಕವಾಗಿ ಚಿಂತಿಸುವಂತಾಗುತ್ತಾರೆ. ನೀವು ಅವರಿಗೆ ಈ ಪ್ರಪಂಚ ಅರಿತುಕೊಳ್ಳಲು ಸದವಕಾಶ ನೀಡಿದಾಗ ಮಾತ್ರ, ಅರದಲ್ಲಿ ಆತ್ಮವಿಶ್ವಾಸ ಹೆಚ್ಚಲು ಸಾಧ್ಯ. ಮುಖ್ಯವಾಗಿ ಎಲ್ಲಾ ಹಂತಗಳಲ್ಲೂ ನೀವು ಅವರಿಗೆ ನೆರವಾಗಲು ಸದಾ ಸಿದ್ಧ ಎಂಬುದು ಅವರಿಗೆ ಸ್ಪಷ್ಟ ಗೊತ್ತಾಗಬೇಕು.

ಮಕ್ಕಳಿಗೆ ನೀಡಿ ಸ್ವಾತಂತ್ರ್ಯ

ಮಕ್ಕಳಿಗೆ ಒಂದಿಷ್ಟು ಮುಕ್ತ ಸ್ವಾತಂತ್ರ್ಯ ನೀಡುವ ಮೊದಲು ಅವರಿಗಾಗಿ ಕೆಲವು ನಿಯಮಗಳನ್ನು ರೂಪಿಸಿ. ಆದರೆ ಈ ನಿಯಮಗಳು ಕಬ್ಬಿಣದ ಕಡಲೆ ಆಗಬಾರದು, ನಿಭಾಯಿಸುವಂತಿರಬೇಕು. ಅದು ಅವರ ಸ್ವಾತಂತ್ರ್ಯವನ್ನು ಮೊಟಕು ಮಾಡುವಂತೆ ಇರಬಾರದು. ಮಕ್ಕಳಿಂದ ನೀವು ಏನನ್ನು ಬಯಸುತ್ತೀರಿ ಎಂಬುದು ಅವರಿಗೆ ಸ್ಪಷ್ಟವಾದಾಗ, ಅವರಲ್ಲಿ ಆತ್ಮವಿಶ್ವಾಸ ಸಹಜವಾಗಿ ಹೆಚ್ಚುತ್ತದೆ.

ಇಂಥ ಸ್ಥಿತಿಯಲ್ಲಿ ನಿಮ್ಮ ಮಕ್ಕಳು ತಮ್ಮ ಫ್ರೆಂಡ್ಸ್, ಸಹಪಾಠಿಗಳ ಕುರಿತಾಗಿ ಏನಾದರೂ ನಿರ್ಧಾರ ಕೈಗೊಳ್ಳುವ ಹಾಗಿದ್ದರೆ, ತಾನು ಏನು ಮಾಡಬೇಕು, ಮಾಡಬಾರದು ಎಂಬುದನ್ನು ಅವರು ಗುರುತಿಸುವಂತಿರಬೇಕು. ಸಹಜವಾಗಿ ಹಿರಿಯರು ತಲೆದೂಗುವಂಥ ನಿರ್ಧಾರ ಅವರು ಕೈಗೊಳ್ಳುವಂತಾಗಬೇಕು.

ಪ್ರತಿ ವ್ಯಕ್ತಿ ಸದಾ ತನ್ನ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಮಾಡಿದ ತಪ್ಪಿನಿಂದಾಗಿಯೇ ಮಕ್ಕಳು ಪಾಠ ಕಲಿಯುವಂತಾಗಬೇಕು. ಯಶಸ್ಸು, ವೈಫಲ್ಯವನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದರಿಂದಲೇ ನಿಮ್ಮಲ್ಲಿ  ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳು ಎಲ್ಲ ವಿಷಯಗಳನ್ನೂ ಮನಸ್ಸಿಗೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಹೆತ್ತವರಾಗಿ ನಿಮ್ಮ ಕರ್ತವ್ಯ ಎಂದರೆ, ಫೇಲ್ಯೂರ್‌ ನಿಂದ ಎದೆಗುಂದಬಾರದು, ಅದರ ತಪ್ಪು ತಿದ್ದಿಕೊಂಡು ಮುನ್ನಡೆಯಬೇಕು ಎಂದು ಮಗುವಿಗೆ ಮಾರ್ಗದರ್ಶನ ನೀಡಿ. ಹಾಗಾಗಿಯೇ `ಸೋಲೇ ಗೆಲುವಿನ ಮೆಟ್ಟಿಲು’ ಎಂಬುದು ಮಗುವಿಗೆ ಮನದಟ್ಟಾಗುತ್ತದೆ.

ಆತ್ಮವಿಶ್ವಾಸ ಕಲಿಸುವುದೂ ಮುಖ್ಯ

ಯಾವ ತಾಯಿ ತಂದೆಯರೇ ಇರಲಿ, ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಎಲ್ಲೋ ಏನೋ ಒಂದು ತಪ್ಪು ಮಾಡಿರುತ್ತಾರೆ. ಎಲ್ಲಾ ಸ್ಥಿತಿಯಲ್ಲೂ ಇದೇ ನಿಮ್ಮ ಪಾತ್ರ ಎಂದು ಹೇಳಲಾಗದು. ಆದರೆ ಮಕ್ಕಳಿಗೆ ಸಹಾನುಭೂತಿ, ದಯೆ, ಕರುಣೆ, ಅನುಕಂಪ ಮುಂತಾದುವನ್ನು ಕಲಿಸುವುದರ ಜೊತೆ ಆತ್ಮವಿಶ್ವಾಸವನ್ನೂ ಕಲಿಸಬೇಕು. ಸಂಬಂಧಗಳ ಏರಿಳಿತದ ಬಗ್ಗೆಯೂ ಅವರಿಗೆ ತಿಳಿಸಿ ಕೊಡಬೇಕು. ನೀವು ಜವಾಬ್ದಾರಿಯುತ ಹೆತ್ತವರಾದರೆ, ಚಿಕ್ಕಂದಿನಿಂದಲೇ ಮಕ್ಕಳಿಗೆ ಈ ಕುರಿತು ಹೇಳಿಕೊಡಿ, ಇದರಿಂದ ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಸಹಜವಾಗಿ ಅವರ ಮೈಗೂಡುತ್ತದೆ.

ಜಿ. ಸರಿತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ