ಕೆಲವು ಸುಲಭವಾದ ಟಿಪ್ಸ್ ಫಾಲೋ ಮಾಡಿ, ನೀವು ಸಹ ಸಲದ ಹಬ್ಬದಲ್ಲಿ ಹಾಯಾಗಿ ಎಂಜಾಯ್ಮಾಡುತ್ತಾ, ಫಿಟ್ನೆಸ್ ಕುರಿತು ಕಾಳಜಿ ವಹಿಸಬಾರದೇಕೆ…..?

ಈಗೆಲ್ಲ ಫಿಟ್‌ ನೆಸ್‌ ಕುರಿತು ಎಲ್ಲರೂ ಅಧಿಕ ಎಚ್ಚರ ವಹಿಸುತ್ತಾರೆ. ಫಿಟ್‌ ನೆಸ್‌ ಫ್ರೀಕ್‌ ಎನಿಸಲು ಸ್ಟ್ರಿಕ್ಟ್ ಡಯೆಟ್‌ ಫಾಲೋ ಮಾಡುತ್ತಾರೆ. ಆದರೆ ದಸರಾ, ದೀಪಾವಳಿಯಂಥ ದೊಡ್ಡ ಹಬ್ಬಗಳು ಬಂದಾಗ, ಸಹಜವಾಗಿಯೇ ತವರುಮನೆಗೆ ಹಬ್ಬ ಆಚರಿಸಲು ಹೊರಟು, ಒಡಹುಟ್ಟಿದವರು, ಫ್ರೆಂಡ್ಸ್ ಜೊತೆ ಜಾಲಿಯಾಗಿ ಅಮ್ಮನ ಕೈಗುಣಕ್ಕೆ ಮಾರುಹೋಗಿ, ಗ್ರಾಂಡಾಗಿ ಹಬ್ಬ ಆಚರಿಸುವ ನೆಪದಲ್ಲಿ ಬೇಕಾದ್ದನ್ನು ತಿಂದುಂಡು ಕಿಲೋ ಕಿಲೋ ಕ್ಯಾಲೋರಿ ಮೈಗೂಡಿಸಿಕೊಳ್ಳುತ್ತಾರೆ. ಒಂದಷ್ಟು ವೆಯ್ಟ್ ಗೆಯ್ನ್ ಆಗುವುದಂತೂ ಗ್ಯಾರಂಟಿ. ಹಾಗಂತ ಹಬ್ಬದ ಸಂದರ್ಭದಲ್ಲೂ ಏನೂ ತಿನ್ನದೆ, ಎಂಜಾಯ್‌ ಮಾಡದೆ ಹಾಗೇ ಇರಾದೀತೇ?

ಅದೇ ತರಹ ಮದುವೆ, ಮುಂಜಿ, ಶುಭ ಸಮಾರಂಭಗಳಿಗೆ ಹೋದಾಗಲೂ 2-3 ದಿನಗಳ ದೂರದ ಊರಿಗೆ ಬಂದಿರುವಾಗ, ಅಲ್ಲೆಲ್ಲ ಡಯೆಟಿಂಗ್‌ ಎಂದು ತಲೆ ಕೆಡಿಸಿಕೊಳ್ಳಲಾಗದು. ಆಗಲೂ ಹೀಗೇ ಆಗುತ್ತದೆ. ಇಂಥ ಸಮಾರಂಭಗಳಲ್ಲಿ ಅಪರೂಪಕ್ಕೆ ಕಸಿನ್ಸ್, ಬಂಧುಬಳಗ ಸೇರಿರುವಾಗ ಡಯೆಟ್‌ ಯಾರಿಗೆ ನೆನಪಿರುತ್ತದೆ? ಇಂಥ ಕಡೆ ಸ್ವೀಟ್ಸ್ ಸೇವನೆ ಧಾರಾಳ ಆಗಿರುತ್ತದೆ.

ಇದೆಲ್ಲ ಮುಗಿಸಿಕೊಂಡು ಮನೆಗೆ ಹೋದಾಗ, ಒಮ್ಮೊಮ್ಮೆ ಆರೋಗ್ಯ ಕೈ ಕೊಡುವುದುಂಟು. ನಾವು ನಮ್ಮ ಮನೆಯಲ್ಲೇ ಇದ್ದರೂ, ಗ್ರಾಂಡಾಗಿ ಹಬ್ಬ ಆಚರಿಸಿದ 2-3 ದಿನಗಳಲ್ಲಿ ಈ ತೊಂದರೆ ತಪ್ಪಿದ್ದಲ್ಲ. ಹೊಟ್ಟೆ ಕೆಟ್ಟು ವಾಂತಿ, ಭೇದಿ ಕಾಟ ಶುರುವಾಗುತ್ತದೆ. ಜ್ವರ ಕಾಡಿದರೂ ಆಶ್ಚರ್ಯವಿಲ್ಲ. ಹಲವು ಸಲ ವೈದ್ಯರ ಕ್ಲಿನಿಕ್‌ ಗೆ ಹೋಗಿ ಬಂದ ನಂತರ, ಗಾಡಿ ಸರಿಹೋಗುತ್ತದೆ. ಈ ಅವಾಂತರದಿಂದಾಗಿ ಒಮ್ಮೊಮ್ಮೆ ಆಫೀಸಿಗೆ 4-5 ದಿನ ರಜೆ ಹಾಕಬೇಕಾದ ಅನಿವಾರ್ಯತೆ ಬರಬಹುದು.

2 ವಾರಗಳ ಕಾಲ ಸುಸ್ತು, ಸಂಕಟ ಕಾಡಬಹುದು. ಹೀಗಾದಾಗ ನಾವು ಮುಂದಿನ ಹಬ್ಬದ ಸೀಸನ್ನಿನಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುತ್ತೇವೆ ಎಂದು ಸಂಕಲ್ಪ ತೊಡುತ್ತೇವೆ. ಆದರೆ ಅದನ್ನು ಎಷ್ಟು ಪರಿಪಾಲಿಸುತ್ತೇವೆ ಎನ್ನುವುದೇ ಮುಖ್ಯ.

ಶ್ರಾವಣ ಮಾಸದಲ್ಲಿ ಮಳೆ ಚಳಿ ಶುರುವಾದಂತೆ, ಸಾಲು ಸಾಲು ಹಬ್ಬಗಳು ಇಣುಕುತ್ತವೆ. ಎಲ್ಲರೂ ಈ ಹಬ್ಬಗಳಿಗಾಗಿ ಕಾಯುವುದು ಸಹಜ. ಏಕೆಂದರೆ ಇಡೀ ವರ್ಷ ಕಾದು, ಈ ಹಬ್ಬಗಳು ಬಂದಾಗ, ಮನೆಯವರೆಲ್ಲ ಒಂದೆಡೆ ಸೇರಲು ಊರಿಗೆ ಹೊರಡುವುದು ವಾಡಿಕೆ. ಸಿಹಿ, ಗ್ರಾಂಡ್‌ ಭೋಜನ ಮಾಮೂಲಿ. ಇದರ ಕಾರಣ ನಾವು ಓವರ್‌ ಈಟಿಂಗ್‌ ಗೆ ಈಡಾಗುತ್ತೇವೆ. ಇದರ ಪರಿಣಾಮ ಖಂಡಿತಾ ನಮ್ಮ ಫಿಟ್‌ ನೆಸ್‌ ಮೇಲೆ ಆಗುತ್ತದೆ. ಮಿಠಾಯಿ, ಹಾಲಿನ ಉತ್ಪನ್ನ, ಹುರಿದು ಕರಿದ ಸಾಮಗ್ರಿ ಜಾಸ್ತಿ ಸೇವಿಸುವುದರಿಂದ, ದೇಹಕ್ಕೆ ಫ್ಯಾಟ್‌ ಶುಗರ್‌ ಹೆಚ್ಚಾಗಿ ಸೇರುತ್ತದೆ. ಇದರಿಂದಾಗಿ ನಮ್ಮ ದೇಹ ತೂಕ ಹೆಚ್ಚುತ್ತದೆ, ಇಡೀ ವರ್ಷ ಹೆಲ್ತ್ ಕಾನ್ಶಿಯಸ್‌ ಆಗಿದ್ದಿದ್ದು, ಈಗ ವ್ಯರ್ಥ ಆಗಿಹೋಗುತ್ತದೆ.

ಅಸಲಿಗೆ, ಫೆಸ್ಟಿವ್ ‌ಸೀಸನ್‌ ಎಂಜಾಯ್  ಮಾಡುವುದರ ಜೊತೆಗೆ ನಮ್ಮ ಫಿಟ್‌ ನೆಸ್‌ ಸಹ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ಸಾಧಿಸುವುದು ಹೇಗೆ? ನಮ್ಮ ದಿನಚರಿಯಲ್ಲಿ ಕೆಲವು ಸುಲಭದ ಟಿಪ್ಸ್ ಅನುಸರಿಸಿ, ನಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಬಹುದು. ಇದರಿಂದ ನಿಮ್ಮ ಫೆಸ್ಟಿವ್ ‌ಎಂಜಾಯ್‌ ಮೆಂಟ್‌ ಸಹ ಕೆಡುವುದಿಲ್ಲ.

5-tips-festival-me

ಬಾಡಿ ಡೀಟಾಕ್ಸಿಂಗ್

ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ, ನಮ್ಮ ಜೀವನಶೈಲಿಯ ಒಂದು ಭಾಗವೇ ಆಗಿದೆ. ಯಾರು ಎಷ್ಟೇ ಡಯೆಟಿಂಗ್ ಮಾಡಿಕೊಂಡಿರಲಿ, ಹಬ್ಬದ ಭಕ್ಷ್ಯಭೋಜನ ಕಂಡಾಗ ಯಾರು ತಾನೇ ಮನಸೋಲುವುದಿಲ್ಲ? ಇದನ್ನು ಸೇವಿಸಿಯೂ ಫಿಟ್ ಆಗಿರುವುದರ ಕಡೆ ಗಮನ ಹರಿಸಬೇಕು. ಇಂಥ ಭರ್ಜರಿ ಭೋಜನಗಳ ನಂತರ, ನೀವು ನಿಮ್ಮ ದೇಹವನ್ನು ಡೀಟಾಕ್ಸ್ ಗೆ ಗುರಿಪಡಿಸಿದರೆ, ಅದರಿಂದ ಹೆಚ್ಚಿನ ಲಾಭವಿದೆ. ಹಬ್ಬಗಳ ನೆಪದಲ್ಲಿ ಸಿಹಿ, ಕರಿದ ಪದಾರ್ಥಗಳ ಹೆಚ್ಚಿನ ಸೇವನೆಯಿಂದ, ದೇಹಕ್ಕೆ ಹಲವಾರು ವಿಷಕಾರಿ ವಸ್ತು ಸೇರಿಕೊಳ್ಳುತ್ತದೆ. ಇದನ್ನು ಹೊರ ತೆಗೆಯುವುದೇ ಬಾಡಿ ಡೀಟಾಕ್ಸಿಂಗ್‌ ಪ್ರಕ್ರಿಯೆ.

ಇದಕ್ಕಾಗಿ ಮಾರನೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ದೊಡ್ಡ ಗ್ಲಾಸ್‌ ಬಿಸಿ ನೀರಿಗೆ, 1 ನಿಂಬೆಹಣ್ಣು ಹಿಂಡಿ ಆ ರಸವನ್ನು ಕುಡಿಯಬೇಕು. ಇದಾದ 1-2 ಗಂಟೆ ಕಾಲ ಏನೂ ತಿನ್ನಬಾರದು. ತೀರಾ ಅಗತ್ಯ ಎನಿಸಿದರೆ ಈ ಮಿಶ್ರಣಕ್ಕೆ ಅರ್ಧ ಚಮಚ ಜೇನು ಬೆರೆಸಿಕೊಳ್ಳಿ.

ದೇಹದಿಂದ ಕೊಬ್ಬಿನಂಶ ಹೊರಹಾಕಲು, ನಂತರ ನೀವು ಗ್ರೀನ್‌ ಟೀ ಸೇವಿಸಿ. ಇದು ಸಹಜವಾಗಿಯೇ ದೇಹವನ್ನು ಡೀಟಾಕ್ಸ್ ಮಾಡುತ್ತದೆ. ದೇಹದಿಂದ ಹಾನಿಕಾರಕ ಪದಾರ್ಥಗಳನ್ನು ಹೊರತೆಗೆಯುವಲ್ಲಿ ಸಹಕಾರಿ. ಈ ಸಂದರ್ಭದಲ್ಲಿ ದಿನಕ್ಕೆ 2-3 ಸಲ ಗ್ರೀನ್‌ ಟೀ ಸೇವಿಸಿ. ತಿಂಡಿ ಊಟದ ಜೊತೆಗೆ ಇದನ್ನು ಸೇವಿಸಬಾರದು, ಅದಾಗಿ 1 ಗಂಟೆ ಕಾಲ ಬಿಟ್ಟು ಇದನ್ನು ಸೇವಿಸಿರಿ.

ದಿನವಿಡೀ ಆಗಾಗ ಬಿಸಿ ನೀರು ಕುಡಿಯುತ್ತಿರಿ. ಇದರಿಂದ ಬಾಡಿ ನಿಧಾನವಾಗಿ ಡೀಟಾಕ್ಸ್ ಆಗುತ್ತದೆ. ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಹೀಗಾಗಿ ಊಟ ತಿಂಡಿಯ ನಂತರ, ಬಿಸಿ ನೀರಿನ ಸೇವನೆ ಒಳ್ಳೆಯದು. ಇದರಿಂದ ಗ್ಯಾಸ್‌ ಪ್ರಾಬ್ಲಂ ಬರೋದಿಲ್ಲ. ಇದು ಜೀರ್ಣಕ್ರಿಯೆ ಚುರುಕಾಗಲಿಕ್ಕೂ ಸಹಕರಿಸುತ್ತದೆ. ನೀರು ಬೇಕೆನಿಸಿದಾಗೆಲ್ಲ ಹೀಗೆ ಬಿಸಿ ನೀರು ಕುಡಿದು, ದೇಹಕ್ಕೆ ಸೇರಿದ ಅಧಿಕ ಕೊಬ್ಬಿನಂಶವನ್ನು ತೊಲಗಿಸಿ. ಇದು ದೇಹದಲ್ಲಿನ ಅನಗತ್ಯ ಅಂಶ ಹೊರದಬ್ಬಲು ಬಲು ಸಹಕಾರಿ.

ಊಟ ತಿಂಡಿ ಬ್ಯಾಲೆನ್ಸ್ಡ್ ಆಗಿರಲಿ

ಒಂದು ಸಲಕ್ಕೆ ಸ್ವಲ್ಪವೇ ಸೇವಿಸಿ, ಸ್ವೀಟ್ಸ್ ನ್ನು ಆದಷ್ಟೂ ಒಂದೇ ಒಂದು ಪೀಸ್‌ ತೆಗೆದುಕೊಳ್ಳಿ. ಕಡಿಮೆ ಫ್ಯಾಟ್‌ ಇರುವ ಆಹಾರ ಸೇವಿಸಿ. ರಾತ್ರಿ ಆಹಾರಂತೂ ಸಾಧ್ಯವಾದಷ್ಟೂ ಲೈಟ್‌ ಆಗಿರಲಿ, ಹೆವಿ ಖಂಡಿತಾ ಬೇಡ! ಏನಾದರೂ ನೆಪ ಮಾಡಿ ಪಾರ್ಟಿ, ಸಮಾರಂಭಗಳಲ್ಲೂ ರಾತ್ರಿ ಹೊತ್ತು ಲೈಟ್‌ ಫುಡ್‌ ಮಾತ್ರ ಸೇವಿಸಿ. 1-2 ಸಿಪ್‌ ಗಿಂತ ಅಧಿಕ ಡ್ರಿಂಕ್ಸ್ ಬೇಡವೇ ಬೇಡ. ಕಡಿಮೆ ಗ್ಯಾಪ್‌ ಕೊಟ್ಟುಕೊಂಡು ದಿನವಿಡೀ 6 ಸಲ ಆಹಾರ ಸೇವಿಸಬೇಕು, ಪ್ರತಿಸಲ ಸ್ವಲ್ಪ ಸ್ವಲ್ಪ ಮಾತ್ರ! ಬ್ಯಾಲೆನ್ಸ್ಡ್ ಫುಡ್‌ ಅಂದ್ರೆ ಕನಿಷ್ಠ ಆಹಾರ ಸೇವಿಸಿ ಅಂತಲ್ಲ. ಅದರಲ್ಲಿ ಎಲ್ಲಾ ಬಗೆಯ ಪ್ರೋಟೀನ್‌, ವಿಟಮಿನ್‌, ಕಾರ್ಬೋಹೈಡ್ರೇಟ್‌, ಫ್ಯಾಟ್‌, ಮಿನರಲ್ಸ್ ಇತ್ಯಾದಿ ಇರಬೇಕು.

ನಿಮ್ಮ ಅಡುಗೆಮನೆಯಲ್ಲಿ ಎಲ್ಲಾ ಬಗೆಯ ಎಣ್ಣೆಗಳನ್ನೂ ಬದಲಾಯಿಸುತ್ತಾ ಬಳಸುತ್ತಿರಿ. ಕಡಲೆಕಾಯಿ ಎಣ್ಣೆ, ಸನ್‌ ಫ್ಲವರ್‌ ಆಯಿಲ್‌, ಆಲಿವ್ ‌ಆಯಿಲ್‌, ಕೊಬ್ಬರಿ ಎಣ್ಣೆ, ಸಾಸುವೆ ಎಣ್ಣೆ, ಎಳ್ಳೆಣ್ಣೆ, ಪಾಮ್ ಆಯಿಲ್ ‌ಇತ್ಯಾದಿಗಳನ್ನು ಪ್ರತಿ ಸಲ ಬದಲಾಯಿಸುತ್ತಾ, ಅಥವಾ ಒಂದು ದೊಡ್ಡ ಬಾಟಲಿಗೆ ಎಲ್ಲದರ ಮಿಶ್ರಣ ಮಾಡಿಯೂ ಬಳಸಬಹುದು. ಮೊದಮೊದಲು ರುಚಿ ತುಸು ಅಹಿತ  ಎನಿಸಿದರೂ, ಆರೋಗ್ಯದ ದೃಷ್ಟಿಯಿಂದ ಮುಂದೆ ನೀವೇ ಹೊಂದಿಕೊಳ್ಳುವಿರಿ. ಸ್ನಾಕ್ಸ್ ಟೈಮಲ್ಲಿ ಫೈಬರ್‌ಪ್ರೋಟೀನ್‌ ಹೆಚ್ಚಿಸುವಂಥ ತಿನಿಸನ್ನೇ ಸೇವಿಸಿ. ನಡುನಡುವೆ ಏನಾದರೂ ಬೇಕೆನಿಸಿದಾಗ ಹಸಿ ಮೊಳಕೆಕಾಳು (ಸ್ಪ್ರೌಟ್ಸ್), ಸೌತೇಕಾಯಿ ತುಂಡು, ಹಬೆಯಲ್ಲಿ ಬೆಂದ ಪದಾರ್ಥ ಇತ್ಯಾದಿ ಸೇವಿಸಬೇಕು.

ದಿನವಿಡೀ ಹುರಿದ ಕರಿದ ಫಾಸ್ಟ್ ಫುಡ್‌, ಜಂಕ್‌ ಫುಡ್‌ ಬದಲಿಗೆ, ಹೆಚ್ಚಿದ ಹಸಿ ತರಕಾರಿ ಹೋಳು, ಹಣ್ಣು, ಡ್ರೈಫ್ರೂಟ್ಸ್ ಇತ್ಯಾದಿ ಸೇವಿಸಿ. ಇದರಿಂದ ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳೂ ಸಿಗುತ್ತವೆ. ಇದರಿಂದ ಹೊಟ್ಟೆ ತುಂಬಿರುವಂತೆ, ಆಗಾಗ ಹಸಿವಾಗದೆ ನಿಮಗೆ ಹಾಯಾಗಿರುತ್ತದೆ. ತರಕಾರಿ ಸೂಪ್‌ ಸೇವನೆ ಸಹ ಅಷ್ಟೇ ಒಳ್ಳೆಯದು. ಹಣ್ಣಿನ ಜೂಸ್‌ ಗೆ ಅಗತ್ಯ ಸಕ್ಕರೆ, ಐಸ್‌ ಇತ್ಯಾದಿ ಸೇರಿಸುತ್ತಾರೆ. ಅದರ ಬದಲಿಗೆ ಇಡಿಯಾದ ಹಣ್ಣನ್ನೇ ಸೇವಿಸಿ. ಕಿತ್ತಳೆ, ಮೂಸಂಬಿ, ಸೇಬು, ಸಪೋಟ, ಯಾವುದೇ ಇರಲಿ. ಜೂಸ್‌ ಗಿಂತ ನೇರ ಹಣ್ಣಿನ ಸೇವನೆ ಒಳ್ಳೆಯದು, ಆಗ ನಾರಿನಂಶ ನಮ್ಮ ಮೈಗೂಡುತ್ತದೆ. ಬೆಳಗಿನ ಉಪಾಹಾರಕ್ಕೆ ಸಲಾಡ್‌, ಸೂಪ್‌ ಸೇವಿಸುವುದು ಬಲು ಉತ್ತಮ. ಹೆಚ್ಚು ಹೆಚ್ಚು ನೀರು ಕುಡಿಯಿರಿ, ದ್ರವಾಹಾರ ಹೆಚ್ಚಾಗಿ ಸೇವಿಸಿ. ಎಲ್ಲಕ್ಕೂ ಮುಖ್ಯವಾಗಿ ಏನೇ ತಿಂದರೂ, ಎಷ್ಟು ಪ್ರಮಾಣ ತಿನ್ನುತ್ತಿದ್ದೀರಿ ಎಂದು ಅಗತ್ಯ ಗಮನಿಸಿಕೊಳ್ಳಿ.

ದೇಹದ ಕೊಬ್ಬಿನಂಶ ಕರಗಿಸಲು, ನಿಮ್ಮ ಡಯೆಟ್‌ ನಲ್ಲಿ ಡೇರಿ ಉತ್ಪನ್ನಗಳು ಅಗತ್ಯ ಇರಲಿ. ಇದರಲ್ಲಿ ಹೆಚ್ಚು ಕ್ಯಾಲ್ಶಿಯಂ ಇದ್ದು, ಅದು ಲಾಭಕಾರಿ. ಇದು ಫ್ಯಾಟ್‌ ಕರಗಿಸಲು ಪೂರಕ, ಪನೀರ್‌ ಫ್ಯಾಟ್‌ ಅಲ್ಲ ಎಂಬುದನ್ನು ನೆನಪಿಡಿ.

ವ್ಯಾಯಾಮ ಮರೆಯದಿರಿ

ಹಬ್ಬಗಳಲ್ಲಿ ಮೋಜು ಮಸ್ತಿಗೆ ಬೇಕಾದಷ್ಟು ಏನೇನೋ ತಿಂದುಬಿಡುತ್ತೇವೆ. ಆ ದಿನಗಳಲ್ಲಿ ದೇಹಕ್ಕೆ ವ್ಯಾಯಾಮ ಅತಿ ಕಡಿಮೆ, ಇದರಿಂದ ಸಹಜವಾಗಿಯೇ ದೇಹ ತೂಕ ಹೆಚ್ಚುತ್ತದೆ. ಹಬ್ಬದ ನೆಪದಲ್ಲಿ ಸಿಹಿ ಸೇವಿಸುವಾಗ, ನೀವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಶುಗರ್‌ ನ್ನು ದೇಹಕ್ಕೆ ಫೀಡ್‌ ಮಾಡಿದ್ದೀರಿ ಎಂಬುದನ್ನು ಮರೆಯದಿರಿ. ಈ ರೀತಿ ನಿಮ್ಮ ಕ್ಯಾಲೋರಿ ಇನ್‌ ಟೇಕ್‌ ಸಹ ಹೆಚ್ಚುತ್ತದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಿನ ವರ್ಕ್‌ ಔಟ್‌ ಮಾಡಿದಾಗ ಮಾತ್ರ ಈ ಎಕ್ಸ್ ಟ್ರಾ ಕ್ಯಾಲೋರಿ ಬರ್ನ್‌ ಆಗುತ್ತದೆ. ಹೀಗಾಗಿ ರನ್ನಿಂಗ್‌, ಜಾಗಿಂಗ್‌, ಫಾ,ಟ್/ಬ್ರಿಸ್ಕ್ ವಾಕಿಂಗ್‌, ಸ್ಟ್ರೆಂಥ್‌ ಟ್ರೇನಿಂಗ್‌. ಕಾರ್ಡಿಯೋ ಇತ್ಯಾದಿ ವ್ಯಾಯಾಮ ನಿಯಮಿತವಾಗಿ ಮಾಡುತ್ತಿರಬೇಕು.

ನೀವು ಹಬ್ಬಗಳಲ್ಲಿ ಅತಿ ಬಿಝಿ ಆಗಿಹೋಗಿ, ವ್ಯಾಯಾಮಕ್ಕೆ ಸಮಯವೇ ಇಲ್ಲದ್ದಿದರೆ, ಶಾಪಿಂಗ್‌ ಟೈಮನ್ನೇ ವ್ಯಾಯಾಮವಾಗಿ ಬದಲಿಸಿ! ಅಂದರೆ ಆನ್‌ ಲೈನ್‌ ಬದಲು ಆಫ್‌ ಲೈನ್‌ ಶಾಪಿಂಗ್‌ ಮಾಡುತ್ತಾ ಇಡೀ ಪೇಟೆ ಬೀದಿಯನ್ನು (ಗಾಡಿ/ಲಿಫ್ಟ್ ಬಳಸದೆ) ಹತ್ತಾರು ಸಲ ಓಡಾಡಿ. ಬೇಕೋ ಬೇಡವೋ, ಮೆಟ್ಟಿಲು ಹತ್ತಿಳಿಯಿರಿ. ಎಲ್ಲಾ ಶಾಪಿಂಗ್‌ ಲಗೇಜ್‌ ನ್ನೂ ನೀವೇ ಹೊತ್ತು ಮನೆ ಸೇರಿಸಿ. ಇದೇ ತರಹ ಮನೆಯಲ್ಲೇ ಮಾಡಬಹುದಾದ ಬಸ್ಕಿ, ಸ್ಕಿಪಿಂಗ್‌, ಸೂರ್ಯ ನಮಸ್ಕಾರ ಇತ್ಯಾದಿ ದೇಹದಂಡನೆಯ ಕೆಲಸಗಳನ್ನು ಮಾಡಲು ಮರೆಯಬೇಡಿ.

ಸಿಹಿಯನ್ನು ದೂರ ಇಡಿ

ಹಬ್ಬ ಅಂದ ಮೇಲೆ ಸ್ವೀಟ್ಸ್ ಇಲ್ಲದಿದ್ದರೆ ಹೇಗೆ? ಹಲವು ತಿಂಗಳಿನಿಂದ ನೀವು ಮೇಂಟೇನ್‌ ಮಾಡಿರುವ ಫಿಸಿಕಲ್ ಫಿಟ್‌ ನೆಸ್ ಇದರಿಂದ ಹಾಳಾಗದಂತೆ ಮತ್ತೆ ಮತ್ತೆ ಜಾಗ್ರತೆ ವಹಿಸಿ. ನೀವು ಏನೇ ತಿಂದರೂ, ಅದು ನಿಮ್ಮ ದೇಹಕ್ಕೆ ಎಷ್ಟು ಪೂರಕ ಎಂದು ನೋಡಿಕೊಂಡು ಕನಿಷ್ಠ ಪ್ರಮಾಣದಲ್ಲಿ ಸೇವಿಸಿ. ದೇಹದ ಫ್ಯಾಟ್‌ ಹೆಚ್ಚಿಸುವಲ್ಲಿ ಸ್ವೀಟ್ಸ್ ಪಾತ್ರ ಹಿರಿಯದು.

ಸಿಹಿ ಸೇವಿಸಲೇಬೇಕು ಎಂದಿದ್ದರೆ, ಮನೆಯಲ್ಲೇ ತಯಾರಾದ ಸಿಹಿ ಪದಾರ್ಥ ಮಾತ್ರ ಸೇವಿಸಿ. ಮನೆಯಲ್ಲೇ ತಯಾರಾದ ಖೀರು, ಪಾಯಸ, ಜಾಮೂನು, ಕಡುಬು, ಉಂಡೆ ಚಕ್ಕುಲಿ ಇತ್ಯಾದಿಗಳಲ್ಲಿ ರೆಡಿಮೇಡ್‌ ಸ್ವೀಟ್ಸ್ ನಲ್ಲಿರುವಷ್ಟು ಹಾನಿಕಾರಕ ಅಂಶ ಇರುವುದಿಲ್ಲ.

ಸದಾ ಹೈಡ್ರೇಟೆಡ್ಆಗಿರಿ

ಹೈಡ್ರೇಶನ್‌ ಅಂದ್ರೆ ಹೆಚ್ಚು ಹೆಚ್ಚು ನೀರು ಸೇವನೆ ಮಾಡಿ ಎಂದರ್ಥ. ಹಬ್ಬದ ಸಮಯವಾದ್ದರಿಂದ ಧಾರಾಳ ಪಾನಕ, ನಿಂಬೆ ರಸ, ನೀರು ಮಜ್ಜಿಗೆ, ಬಾರ್ಲಿ ವಾಟರ್‌, ಎಳನೀರು ಇತ್ಯಾದಿ ಆಗಾಗ ಸೇವಿಸುತ್ತಿರಿ. ಮತ್ತೆ ಮತ್ತೆ ನೀರು ಕುಡಿಯುವುದರಿಂದ ನಿಮಗೆ ಹೊಟ್ಟೆ ತುಂಬಿದಂತಿರುತ್ತದೆ. ಹಬ್ಬ ಅಂದ ಮೇಲೆ ಶಾಪಿಂಗ್‌ ಭರಾಟೆ, ಹೊರಗೆ ಹೋಗಿ ಬರುವುದೂ ಹೆಚ್ಚು. ಆ ನೆಪದಲ್ಲಿ ಆಗಾಗ ನೀರು ಕುಡಿಯಿರಿ.

ನೀರಿನಿಂದ ದೇಹಕ್ಕೆ ಆರ್ದ್ರತೆ ಪೂರೈಕೆ ಆಗುತ್ತದೆ. ಇದು ಬಾಡಿ ಡೀಟಾಕ್ಸಿಫಿಕೇಶನ್‌ ಗೆ ಹೆಚ್ಚು ಪೂರಕ. ನಿಮ್ಮ ದೇಹ ಬ್ಯಾಲೆನ್ಸ್ಡ್ ಆಗಿ, ಸ್ಲಿಂ  ಟ್ರಿಂ ಆಗಿರಬೇಕೇ? ಅತಿ ಅಗ್ಗದ ಮದ್ದು ಎಂದರೆ ನೀರಿನ ಸೇವನೆ. ಇದರಿಂದ ರಕ್ತದ ಸಂಚಾರ ಎಷ್ಟೋ ಸುಗಮವಾಗುತ್ತದೆ. ಹ್ಯಾಪಿ ಫೆಸ್ಟಿವ್ಸ್!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ