ನಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕತೆ ಮರೆತು, ನಾವು ಸಿಕ್ಕಿದ ಜಂಕ್ ಫುಡ್ಸ್ ಫಾಸ್ಟ್ ಫುಡ್ ಗಳಿಗೆ ಮೊರೆಹೋಗಿ ಸದಾ ಬಾಯಾಡಿಸುತ್ತಿದ್ದರೆ, ಅದರಿಂದಾಗುವ ಹಾನಿ ಏನೆಂದು ತಿಳಿಯೋಣವೇ......?
ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕಾರ್ಯಕರ್ತರೊಂದಿಗೆ ಒಮ್ಮೆ ಮಾತನಾಡುತ್ತಿದ್ದಾಗ, ಅವರ ಎದುರಿಗಿದ್ದ ಒಬ್ಬರು ಏನೋ ಹೇಳಿಕೊಳ್ಳಲೆಂದು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದುದನ್ನು ಗಮನಿಸಿ ಕೇಳಿದರು, ``ನಿಮ್ಮ ಮಧ್ಯ ಪ್ರದೇಶ ರಾಜ್ಯ ಅಷ್ಟು ವಿಶಾಲವಾಗಿದೆ.... ಆದರೂ ಅಲ್ಲೇಕೆ ಅಷ್ಟೊಂದು ಅನಾರೋಗ್ಯ ಕಾಣುತ್ತಿದೆ?''
ಆ ಕಾರ್ಯಕರ್ತರು ಅದಕ್ಕೆ ಏನೇನೋ ಸಬೂಬು ನೀಡುತ್ತಿದ್ದರು, ಆದರೆ ಇವರಿಗೆ ಅದು ತೃಪ್ತಿದಾಯಕ ಎನಿಸಲಿಲ್ಲ. ಆ ರಾಜ್ಯದ ಬಹುತೇಕ ರಾಜಕಾರಣಿಗಳ ಹೊಟ್ಟೆ ಗುಡಾಣದಂತೆ ಬೆಳೆದು, ಅವರ ಪರ್ಸನಾಲಿಟಿ ಹಾಳು ಮಾಡಿತ್ತು.
ಅನಗತ್ಯವಾದ ಹೆಚ್ಚು ಕ್ಯಾಲೋರಿಗಳುಳ್ಳ ಆಹಾರದ ಸೇವನೆ, ಹಲವು ರೋಗಗಳಿಗೆ ತವರು. ಇದಕ್ಕಾಗಿಯೇ ಈಗ ದೊಡ್ಡದೊಂದು ಫಿಟ್ನೆಸ್ ಉದ್ಯಮ ಶುರುವಾಗಿ ಈ ಸ್ಥೂಲತೆ ನಿವಾರಣೆಯನ್ನೇ ದೊಡ್ಡ ದಂಧೆ ಆಗಿಸಿಕೊಂಡಿದೆ. ಈ ಉದ್ಯಮಕ್ಕಿರುವ ಲಾಭ ಬೇರಾವುದಕ್ಕೂ ಇಲ್ಲ ಎಂದೇ ಹೇಳಬೇಕು.
ನಮ್ಮ ಹಸಿವು ನೀಗಿಸುವ, ನಮ್ಮ ದೇಹಕ್ಕೆ ಶಕ್ತಿ ತುಂಬಿಸುವ, ಅದಕ್ಕೆ ಸುಯೋಗ್ಯ ಪೋಷಣೆ ಒದಗಿಸುವ, ಪಾಕಕಲೆಯ ರಸಪೂರ್ಣ ಆಹಾರ ನಮ್ಮ ಆರೋಗ್ಯ, ರಸ ಸ್ವಾದನೆ, ಫಿಟ್‌ಫೈನ್ ಆಗಿರಲು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಆದರೆ ಎಷ್ಟೋ ಸಲ ನಾವು ತಿಳಿಯದೆಯೇ ಪರಿಸ್ಥಿತಿ ವಶಾತ್, ಬಾಯಿ ರುಚಿಗೆ ಮರುಳಾಗಿ ಹೆಚ್ಚು ಹುರಿದ, ಕರಿದ ತಿನಿಸು ಸೇವಿಸಿರುತ್ತೇವೆ.
ಈ ರೀತಿ ತಪ್ಪಾದ, ತಪ್ಪು ವಿಧಾನಗಳಲ್ಲಿ ತಯಾರಾದ, ತಪ್ಪಾದ ಸಮಯದಲ್ಲಿ ಸೇವಿಸಿದ ಆಹಾರದ ಪರಿಣಾಮ ನಿಧಾನವಾಗಿ ನಮ್ಮ ದೇಹದ ಮೇಲೆ ಕಾಣಲಾರಂಭಿಸುತ್ತದೆ. ಹೀಗೆ ಆಕಸ್ಮಿಕವಾಗಿ ಆದ ಈ ಬದಲಾವಣೆ, ನಮಗೆ ಹೆಚ್ಚು ಮುಜುಗರ ತಂದು, ಆರೋಗ್ಯ ಎಡವಟ್ಟಾಗುವಂತೆ ಮಾಡುತ್ತದೆ.
ಹಿಂದೆಲ್ಲ ನಾವು ಚೆನ್ನಾಗಿದ್ದೆವಲ್ಲ, ಎಲ್ಲಿ ಹೋಯಿತು ಆ ಪರ್ಸನಾಲಿಟಿ ಎಂದು ಹುಡುಕುತ್ತಾ ಹೋದರೆ, ಆ ಹುಡುಕಾಟಕ್ಕೆ ಕೊನೆಯೇ ಇಲ್ಲ. ಇದರ ನಿವಾರಣೆ ಹೇಗೆ ಎಂಬ ಭಯಂಕರ ಉಪಾಯಗಳ ಹುಡುಕಾಟ ಶುರು. ಇದರಿಂದ ನಿರಾಸೆ ಕಟ್ಟಿಟ್ಟ ಬುತ್ತಿ. ಈ ಸ್ಥೂಲತೆಗೆ ಇಂತಹ ಆಧುನಿಕರು ಬಯಸುವ ಝೀರೋ ಫಿಗರ್ ಪಡೆಯುವಷ್ಟರಲ್ಲಿ, ಜೇಬು ಝೀರೋ ಆಗಿರುತ್ತದೆ! ಸದೃಢ, ಸುಂದರ, ಫಿಟ್ ಆಗಿರಲು ಯಾರಿಗೆ ತಾನೇ ಇಷ್ಟವಿಲ್ಲ? ಪ್ರತಿಯೊಬ್ಬರಿಗೂ ಇದೇ ಆಸೆ ತುಂಬಿರುತ್ತದೆ. ನಿಮ್ಮ ಈ ಕನಸನ್ನು ನನಸಾಗಿಸಲು ಹಲವು 100 ಬಗೆಯ ಜಾಹೀರಾತು, ಫಿಟ್ ನೆಸ್ ಸೆಂಟರ್ ಗಳು ನಿಮಗೆ ಅಂಗೈಯಲ್ಲೇ ಆವಕಾಶ ತೋರಿಸುತ್ತವೆ. ಇದರಿಂದ ನಮಗೆ ಬೇಕಾದ್ದು ಸಿಗದಿದ್ದರೂ, ನಮ್ಮ ಹಣವೆಲ್ಲ ಖಾಲಿ ಆಗಿರುತ್ತದೆ.
ಜೀವನಶೈಲಿ ಹೇಗಿರಬೇಕು?
ಇಂದಿನ ಆಹಾರ ತಜ್ಞರ ಪ್ರಕಾರ, ಅಡುಗೆಮನೆಯಲ್ಲೇ ನಮಗೆ ಬೇಕಾದ ಆರೋಗ್ಯ ಅಡಗಿದೆ. ಆದರೆ ಇಂದಿನ ಆಧುನಿಕರು, ಮನೆಯ ಈ ಪೌಷ್ಟಿಕ ಆಹಾರ ಮರೆತು, ಬೀದಿ ಬದಿಯಲ್ಲಿ ಸಿಕ್ಕಿದ್ದನ್ನು ಕಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದರಿಂದ ಅವರ ದೇಹದ ಮೇಲೆ ದುಷ್ಪರಿಣಾಮ ಕಾಣತೊಡಗುತ್ತದೆ. ನಾವು ಏನನ್ನು ತಿನ್ನುತ್ತೇವೋ ಅದರ ಪ್ರಕಾರವೇ ಆಕಾರ ಹೊಂದುತ್ತೇವೆ. ಡಯೆಟ್ ಕಾಲಾವಧಿ ಬಲು ಚಿಕ್ಕದು, ಏಕೆಂದರೆ ಕೇವಲ ಸೂಪ್, ಸಲಾಡ್, ಹಣ್ಣುಗಳ ಜೂಸ್ ಆಧರಿಸಿ ನಾವು ಇಡೀ ಜೀವನ ಕಳೆಯಲಾಗದು. ನಮ್ಮ ಆಹಾರ ನಮ್ಮ ಜೀವನಶೈಲಿ ಆಗಬೇಕು. ಈ ಜೀವನಶೈಲಿ ಕೇವಲ ನಮ್ಮ ದೇಹದ ಮೇಲೆ ಮಾತ್ರ ಪ್ರಭಾವ ಬೀರದೆ, ಮಾನಸಿಕವಾಗಿಯೂ ಪ್ರತಿಫಲಿಸುತ್ತದೆ.