ನಮ್ಮ ದೈನಂದಿನ ಆಹಾರದಲ್ಲಿ ಪೌಷ್ಟಿಕತೆ ಮರೆತು, ನಾವು ಸಿಕ್ಕಿದ ಜಂಕ್ಫುಡ್ಸ್ ಫಾಸ್ಟ್ ಫುಡ್ಗಳಿಗೆ ಮೊರೆಹೋಗಿ ಸದಾ ಬಾಯಾಡಿಸುತ್ತಿದ್ದರೆ, ಅದರಿಂದಾಗುವ ಹಾನಿ ಏನೆಂದು ತಿಳಿಯೋಣವೇ……?

ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಕಾರ್ಯಕರ್ತರೊಂದಿಗೆ ಒಮ್ಮೆ ಮಾತನಾಡುತ್ತಿದ್ದಾಗ, ಅವರ ಎದುರಿಗಿದ್ದ ಒಬ್ಬರು ಏನೋ ಹೇಳಿಕೊಳ್ಳಲೆಂದು ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದುದನ್ನು ಗಮನಿಸಿ ಕೇಳಿದರು, “ನಿಮ್ಮ ಮಧ್ಯ ಪ್ರದೇಶ ರಾಜ್ಯ ಅಷ್ಟು ವಿಶಾಲವಾಗಿದೆ…. ಆದರೂ ಅಲ್ಲೇಕೆ ಅಷ್ಟೊಂದು ಅನಾರೋಗ್ಯ ಕಾಣುತ್ತಿದೆ?”

ಆ ಕಾರ್ಯಕರ್ತರು ಅದಕ್ಕೆ ಏನೇನೋ ಸಬೂಬು ನೀಡುತ್ತಿದ್ದರು, ಆದರೆ ಇವರಿಗೆ ಅದು ತೃಪ್ತಿದಾಯಕ ಎನಿಸಲಿಲ್ಲ. ಆ ರಾಜ್ಯದ ಬಹುತೇಕ ರಾಜಕಾರಣಿಗಳ ಹೊಟ್ಟೆ ಗುಡಾಣದಂತೆ ಬೆಳೆದು, ಅವರ ಪರ್ಸನಾಲಿಟಿ ಹಾಳು ಮಾಡಿತ್ತು.

ಅನಗತ್ಯವಾದ ಹೆಚ್ಚು ಕ್ಯಾಲೋರಿಗಳುಳ್ಳ ಆಹಾರದ ಸೇವನೆ, ಹಲವು ರೋಗಗಳಿಗೆ ತವರು. ಇದಕ್ಕಾಗಿಯೇ ಈಗ ದೊಡ್ಡದೊಂದು ಫಿಟ್ನೆಸ್‌ ಉದ್ಯಮ ಶುರುವಾಗಿ ಈ ಸ್ಥೂಲತೆ ನಿವಾರಣೆಯನ್ನೇ ದೊಡ್ಡ ದಂಧೆ ಆಗಿಸಿಕೊಂಡಿದೆ. ಈ ಉದ್ಯಮಕ್ಕಿರುವ ಲಾಭ ಬೇರಾವುದಕ್ಕೂ ಇಲ್ಲ ಎಂದೇ ಹೇಳಬೇಕು.

ನಮ್ಮ ಹಸಿವು ನೀಗಿಸುವ, ನಮ್ಮ ದೇಹಕ್ಕೆ ಶಕ್ತಿ ತುಂಬಿಸುವ, ಅದಕ್ಕೆ ಸುಯೋಗ್ಯ ಪೋಷಣೆ ಒದಗಿಸುವ, ಪಾಕಕಲೆಯ ರಸಪೂರ್ಣ ಆಹಾರ ನಮ್ಮ ಆರೋಗ್ಯ, ರಸ ಸ್ವಾದನೆ, ಫಿಟ್‌ಫೈನ್‌ ಆಗಿರಲು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಆದರೆ ಎಷ್ಟೋ ಸಲ ನಾವು ತಿಳಿಯದೆಯೇ ಪರಿಸ್ಥಿತಿ ವಶಾತ್‌, ಬಾಯಿ ರುಚಿಗೆ ಮರುಳಾಗಿ ಹೆಚ್ಚು ಹುರಿದ, ಕರಿದ ತಿನಿಸು ಸೇವಿಸಿರುತ್ತೇವೆ.

ಈ ರೀತಿ ತಪ್ಪಾದ, ತಪ್ಪು ವಿಧಾನಗಳಲ್ಲಿ ತಯಾರಾದ, ತಪ್ಪಾದ ಸಮಯದಲ್ಲಿ ಸೇವಿಸಿದ ಆಹಾರದ ಪರಿಣಾಮ ನಿಧಾನವಾಗಿ ನಮ್ಮ ದೇಹದ ಮೇಲೆ ಕಾಣಲಾರಂಭಿಸುತ್ತದೆ. ಹೀಗೆ ಆಕಸ್ಮಿಕವಾಗಿ ಆದ ಈ ಬದಲಾವಣೆ, ನಮಗೆ ಹೆಚ್ಚು ಮುಜುಗರ ತಂದು, ಆರೋಗ್ಯ ಎಡವಟ್ಟಾಗುವಂತೆ ಮಾಡುತ್ತದೆ.

ಹಿಂದೆಲ್ಲ ನಾವು ಚೆನ್ನಾಗಿದ್ದೆವಲ್ಲ, ಎಲ್ಲಿ ಹೋಯಿತು ಆ ಪರ್ಸನಾಲಿಟಿ ಎಂದು ಹುಡುಕುತ್ತಾ ಹೋದರೆ, ಆ ಹುಡುಕಾಟಕ್ಕೆ ಕೊನೆಯೇ ಇಲ್ಲ. ಇದರ ನಿವಾರಣೆ ಹೇಗೆ ಎಂಬ ಭಯಂಕರ ಉಪಾಯಗಳ ಹುಡುಕಾಟ ಶುರು. ಇದರಿಂದ ನಿರಾಸೆ ಕಟ್ಟಿಟ್ಟ ಬುತ್ತಿ. ಈ ಸ್ಥೂಲತೆಗೆ ಇಂತಹ ಆಧುನಿಕರು ಬಯಸುವ ಝೀರೋ ಫಿಗರ್‌ ಪಡೆಯುವಷ್ಟರಲ್ಲಿ, ಜೇಬು ಝೀರೋ ಆಗಿರುತ್ತದೆ! ಸದೃಢ, ಸುಂದರ, ಫಿಟ್‌ ಆಗಿರಲು ಯಾರಿಗೆ ತಾನೇ ಇಷ್ಟವಿಲ್ಲ? ಪ್ರತಿಯೊಬ್ಬರಿಗೂ ಇದೇ ಆಸೆ ತುಂಬಿರುತ್ತದೆ. ನಿಮ್ಮ ಈ ಕನಸನ್ನು ನನಸಾಗಿಸಲು ಹಲವು 100 ಬಗೆಯ ಜಾಹೀರಾತು, ಫಿಟ್‌ ನೆಸ್‌ ಸೆಂಟರ್‌ ಗಳು ನಿಮಗೆ ಅಂಗೈಯಲ್ಲೇ ಆವಕಾಶ ತೋರಿಸುತ್ತವೆ. ಇದರಿಂದ ನಮಗೆ ಬೇಕಾದ್ದು ಸಿಗದಿದ್ದರೂ, ನಮ್ಮ ಹಣವೆಲ್ಲ ಖಾಲಿ ಆಗಿರುತ್ತದೆ.

ಜೀವನಶೈಲಿ ಹೇಗಿರಬೇಕು?

ಇಂದಿನ ಆಹಾರ ತಜ್ಞರ ಪ್ರಕಾರ, ಅಡುಗೆಮನೆಯಲ್ಲೇ ನಮಗೆ ಬೇಕಾದ ಆರೋಗ್ಯ ಅಡಗಿದೆ. ಆದರೆ ಇಂದಿನ ಆಧುನಿಕರು, ಮನೆಯ ಈ ಪೌಷ್ಟಿಕ ಆಹಾರ ಮರೆತು, ಬೀದಿ ಬದಿಯಲ್ಲಿ ಸಿಕ್ಕಿದ್ದನ್ನು ಕಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದರಿಂದ ಅವರ ದೇಹದ ಮೇಲೆ ದುಷ್ಪರಿಣಾಮ ಕಾಣತೊಡಗುತ್ತದೆ. ನಾವು ಏನನ್ನು ತಿನ್ನುತ್ತೇವೋ ಅದರ ಪ್ರಕಾರವೇ ಆಕಾರ ಹೊಂದುತ್ತೇವೆ. ಡಯೆಟ್‌ ಕಾಲಾವಧಿ ಬಲು ಚಿಕ್ಕದು, ಏಕೆಂದರೆ ಕೇವಲ ಸೂಪ್‌, ಸಲಾಡ್‌, ಹಣ್ಣುಗಳ ಜೂಸ್‌ ಆಧರಿಸಿ ನಾವು ಇಡೀ ಜೀವನ ಕಳೆಯಲಾಗದು. ನಮ್ಮ ಆಹಾರ ನಮ್ಮ ಜೀವನಶೈಲಿ ಆಗಬೇಕು. ಈ ಜೀವನಶೈಲಿ ಕೇವಲ ನಮ್ಮ ದೇಹದ ಮೇಲೆ ಮಾತ್ರ ಪ್ರಭಾವ ಬೀರದೆ, ಮಾನಸಿಕವಾಗಿಯೂ ಪ್ರತಿಫಲಿಸುತ್ತದೆ.

ಎಷ್ಟೋ ಸಲ ತಪ್ಪು ಕಾರಣಗಳಿಗಾಗಿ ವೆಯ್ಟ್ ಲಾಸ್‌ ಗೆ ಪ್ರಯತ್ನಿಸುತ್ತಾ ಇರುತ್ತೇವೆ. ಸ್ವಸ್ಥ, ಫಿಟ್‌ ಆಗಿರಲು ಆಹಾರದ ಮೇಲೆ ಕಂಟ್ರೋಲ್ ಹೊಂದಿರುವವರು, ಸೂಕ್ತ ಆಹಾರ ವಿಧಾನಗಳನ್ನು ತಮ್ಮ ಜೀವನಶೈಲಿ ಆಗಿಸಿಕೊಳ್ಳುವ ಮಂದಿ ಬಹಳ ಕಡಿಮೆ ಎಂದೇ ಹೇಳಬೇಕು. ಹೈಟ್‌ವೆಯ್ಟ್ ಸಮರ್ಪಕವಾಗಿ ಇರದಿದ್ದರೆ, ಅನಿವಾರ್ಯವಾಗಿ ಡಯೆಟ್‌ ಮಾಡುತ್ತಾ, ವೆಯ್ಟ್ ಲಾಸ್‌ ನ ಚಿಂತೆಯಲ್ಲಿ ಮುಳುಗಬೇಕಾಗುತ್ತದೆ.

ತಪ್ಪು ಧೋರಣೆಗಳು

ಅಸಲಿಗೆ ನಮ್ಮ ತೂಕ ಎಂಬುದು, ನಮ್ಮ ದೇಹದ ಬಲು ಚಿಕ್ಕ ಭಾಗ ಮಾತ್ರ. ಎಷ್ಟೋ ಜನರಿಗೆ ತಾವು ಫ್ಯಾಟ್‌ ಲಾಸ್  ಮಾಡಿಕೊಳ್ಳಬೇಕೋ ಅಥವಾ ವೆಯ್ಟ್ ಲಾಸ್‌ ಮಾಡಿಕೊಳ್ಳಬೇಕೋ ಎಂಬುದೇ ಗೊತ್ತಿರುವುದಿಲ್ಲ. ದೇಹ ತೂಕ ತಗ್ಗುವುದರಿಂದ ನಮ್ಮ ಜೀವನ ಸ್ವಸ್ಥ, ಆರೋಗ್ಯಕರ ಆಗುತ್ತದೆಂಬುದೇ ಇಂದಿನ ಕಾಲದ ಪ್ರಚಲಿತ ತಪ್ಪು ಧೋರಣೆ ಆಗಿದೆ. ಇಲ್ಲಿ ನಿಮ್ಮ ದೇಹ ತೂಕ ಮುಖ್ಯವಲ್ಲ…. ನೀವು ನಿಮ್ಮನ್ನು ಎಷ್ಟು ಆರೋಗ್ಯವಂತರು, ನೆಮ್ಮದಿಯಾಗಿದ್ದೀರಿ, ಫಿಟ್‌ಫೈನಾಗಿ ಭಾವಿಸುತ್ತೀರಿ ಎಂಬುದು ಅತಿ ಮಹತ್ವಪೂರ್ಣ ಆಗುತ್ತದೆ.

ಆಹಾರದ ವಿಷಯದಲ್ಲಿ ನಿಮ್ಮ ವೈಚಾರಿಕ ದೃಷ್ಟಿಯನ್ನು ಸದಾ ವಿಶಾಲವಾಗಿ ಇರಿಸಿಕೊಳ್ಳಿ. ಇದಕ್ಕಾಗಿ ನಮ್ಮ ದೇಹ ಸದಾ ಸ್ವಸ್ಥ ಹಾಗೂ ಮನಸ್ಸು ಶಾಂತವಾಗಿ ಇರಬೇಕು. ನಾವು ಸೇವಿಸುವ ಆಹಾರದಲ್ಲಿ ಅಧಿಕ ಪೌಷ್ಟಿಕತೆ ಇದ್ದಾಗ ಮಾತ್ರ ಹೀಗಾಗಲು ಸಾಧ್ಯ. ನಾವು ಇರುವ ವಾತಾವರಣಕ್ಕೆ ತಕ್ಕಂತೆ, ಪೌಷ್ಟಿಕ ಆಹಾರ ಸೇವಿಸಿದಾಗ ಮಾತ್ರ ಹೊಟ್ಟೆ ಸಮತಲ ಆಗಿರುತ್ತದೆ. ನಮ್ಮ ಆಸುಪಾಸಿನಲ್ಲಿ ಲಭ್ಯವಿರುವ ಆಹಾರ ಧಾನ್ಯ, ಹಣ್ಣು, ತರಕಾರಿಗಳನ್ನು ಸೇವಿಸಿ ಅದರ ಪೌಷ್ಟಿಕಾಂಶಗಳ ಲಾಭ ಪಡೆಯಬೇಕು. ಇದರಿಂದ ವಾತಾವರಣದಲ್ಲಿನ ಅಪೌಷ್ಟಿಕತೆಯ ಹಾನಿಯನ್ನು ಈ ಆಹಾರ ಕ್ರಮ ತಡೆಗಟ್ಟುತ್ತದೆ. ಹೀಗಾಗಿ ಲೋಕಲ್ ಫುಡ್‌ ಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಿ.

ನೀವು ಎಷ್ಟು ಆಹಾರ ಸೇವಿಸಬೇಕೋ ಅದನ್ನು ನಿಮ್ಮ ಹೊಟ್ಟೆ ನಿರ್ಧರಿಸಲಿ. ಅದು ಬಿಟ್ಟು ತಾಯಿ, ಡಾಕ್ಟರ್‌, ಟ್ರೇನರ್‌, ನ್ಯೂಟ್ರೀಷನಿಸ್ಟ್ ಇತ್ಯಾದಿ ಮಂದಿ ಅಲ್ಲ. ನಾವು ನಮ್ಮ ಹೊಟ್ಟೆಯ ಡಿಮ್ಯಾಂಡ್‌ ಗೆ ತಕ್ಕಂತೆ ಆಹಾರ ಸೇವಿಸಿದರೆ, ದಪ್ಪ ಆಗುವ ಸಂಭವ ಇಲ್ಲ. ಎಲ್ಲಕ್ಕೂ ಮುಖ್ಯ ವಿಷಯ ಅಂದ್ರೆ ನೀವು ಬಾಲ್ಯದಿಂದ ಏನನ್ನು ಸೇವಿಸುತ್ತಾ ಬಂದಿದ್ದೀರೋ ಅದನ್ನೇ ದೊಡ್ಡವರಾದ ಮೇಲೂ ಮುಂದುವರಿಸಿ. ಯಾರದೋ ಸಲಹೆ, ಜಾಹೀರಾತಿಗೆ ಮರುಳಾಗಿ ಯಾವುದನ್ನೋ ತಿನ್ನಲು ಹೋಗದಿರಿ. ಬಾಲ್ಯದ ಆಹಾರ ನಿಮ್ಮ ಹೊಟ್ಟೆಗೆ ಸದಾ ಚಿರಪರಿಚಿತ, ಅದರಿಂದ ಜೀರ್ಣಕ್ರಿಯೆಗೆ ತೊಂದರೆ ಇಲ್ಲ. ಅದು ಬಿಟ್ಟು ಇಲ್ಲದ್ದನ್ನು ತುರುಕಿ ಹೊಟ್ಟೆಗೆ ಹಿಂಸೆ ಕೊಡಬೇಡಿ.

ಸದಾ ಲವಲವಿಕೆ ತುಂಬಿರಲಿ

ಒಂದೇ ಸಲ ಹೊಟ್ಟೆ ಬಿರಿಯುವಂತೆ ಆಹಾರ ಸೇವಿಸಿ, ಆಮೇಲೆ ವ್ರತ, ಉಪವಾಸಗಳ ಹೆಸರಲ್ಲಿ ಹೊಟ್ಟೆಯನ್ನು ಸದಾ ಖಾಲಿ ಇಡುವುದು ಸರಿಯಲ್ಲ. ಇದಕ್ಕೆ ಒಂದೇ ಉಪಾಯ ಎಂದರೆ, ನೀವು ನಿಮ್ಮ ಹೊಟ್ಟೆ, ಮನಸ್ಸಿನ ಮಾತು ಕೇಳಬೇಕು. ನಿಮ್ಮ ಇಚ್ಛೆ ಎಷ್ಟಿದೆಯೋ ಅಷ್ಟೇ ಸೇವಿಸಬೇಕು. ಒಮ್ಮೊಮ್ಮೆ 2 ಚಪಾತಿ ತಿಂದರೆ ಸಾಕು ಅನ್ನಿಸಬಹುದು, ಮತ್ತೊಮ್ಮೆ 3 ಬೇಕೆನ್ನಿಸಬಹುದು. ಹೀಗಾದಾಗ ಇಂತಿಷ್ಟೇ ಪ್ರಮಾಣ ಎಂದು ಒತ್ತಾಯ ಹೇರಿಕೊಳ್ಳಬೇಡಿ.

ಪ್ರತಿ 2 ಗಂಟೆಗಳಿಗೆ ಒಮ್ಮೆಯಾದರೂ ಚೂರು ಆಹಾರ ಸೇವಿಸುವುದೇ ಸರಿ. ಈ ನಿಯಮಕ್ಕೆ ನಾವು ಬದ್ಧರಾದರೆ, ಸ್ವಲ್ಪ ಮಾತ್ರದ ಆಹಾರದಿಂದಲೇ ನಮಗೆ ತೃಪ್ತಿ ಸಿಗುತ್ತದೆ. ಅತಿ ಕಡಿಮೆ ಆಹಾರವನ್ನಷ್ಟೇ ಸೇವಿಸಬೇಕು ಎಂಬುದು ಇಲ್ಲಿನ ಉದ್ದೇಶವಲ್ಲ, ಬದಲಿಗೆ ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ಒದಗಿಸಬೇಕು ಎಂಬುದೇ ಮುಖ್ಯ.

ಅಗತ್ಯಕ್ಕೆ ತಕ್ಕಂತೆ ಆಹಾರ ಮಹತ್ವಪೂರ್ಣ ಎನಿಸುತ್ತದೆ. ಹಸಿವು ಆಗುವಿಕೆ ಆರೋಗ್ಯದ ಲಕ್ಷಣ. ಹೀಗಾಗಿ ಸಮರ್ಪಕ ರೀತಿಯಲ್ಲಿ ಆಹಾರ ಸೇವಿಸಿ, ನಿಮ್ಮ ಹಸಿವು ಅಂದ್ರೆ ಆರೋಗ್ಯ ಉಳಿಸಿಕೊಳ್ಳಿ. ಕಂಡದ್ದನ್ನು ತುಂಬಿಸುವುದಕ್ಕೆ ಹೊಟ್ಟೆ ಡಸ್ಟ್ ಬಿನ್‌ಅಲ್ಲ.

ಒಂದು ವಿಷಯ ನೀವು ಗಮನದಲ್ಲಿಡಬೇಕು, ನಿಮಗೆ ನಿಜಕ್ಕೂ ಹಸಿ ಆಗುತ್ತದೆಯೇ…. ಇಲ್ಲವೇ? ನಿಮ್ಮ ಉತ್ತರ `ಹೌದು’ ಎಂದಾದರೆ, ನೀವು ಸರಿಯಾದ ಮಾರ್ಗದಲ್ಲಿ ಚಲಿಸುತ್ತಿದ್ದೀರಿ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ, ತೀರಾ ತಡ ಮಾಡಿಕೊಳ್ಳಬೇಡಿ. ಇದರಿಂದ ನೀವು ಹೆಲ್ದಿ, ಫಿಟ್‌ಫೈನ್‌ ಆಗುವಿರಿ. ಹೀಗಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.

ಆಹಾರ ಮತ್ತು ವ್ಯಾಯಾಮ

ಸುಯೋಗ್ಯ ಆಹಾರದ ಜೊತೆಗೆ ವ್ಯಾಯಾಮ ಅಷ್ಟೇ ಮುಖ್ಯ. ವ್ಯಾಯಾಮ ನಮ್ಮ ದೇಹವನ್ನು ಸ್ವಸ್ಥ, ಸಶಕ್ತ ಆಗಿರಿಸಲು ಬಲು ಮುಖ್ಯ. ನಿಮಗೆ ಯಾವ ವ್ಯಾಯಾಮ ಇಷ್ಟವೋ ಅದನ್ನೇ ಅನುಸರಿಸಿ.

ಯೋಗ, ಜಿಮ್, ವಾಕಿಂಗ್‌, ಜಾಗಿಂಗ್‌, ಡ್ಯಾನ್ಸ್ ಪ್ರಾಕ್ಟೀಸ್‌, ಮಾರ್ಶಲ್ ಆರ್ಟ್‌, ಈಜು…. ಯಾವುದಾದರೂ ಸರಿ. ಇದರಿಂದ ನಿಮ್ಮ ದೇಹದ ಮಾಂಸಖಂಡ, ಮೂಳೆಗಳು ಎಷ್ಟೋ ಕ್ರಿಯಾಶೀಲ ಆಗುತ್ತವೆ. ಹೊಸ ವ್ಯಾಯಾಮಗಳಿಗೆ ಸೂಕ್ತ ತರಬೇತಿ ಪಡೆಯಿರಿ. ನಮ್ಮ ದೇಹ ಹಗುರವಿದ್ದಷ್ಟೂ ಅಷ್ಟೇ ಆರೋಗ್ಯಕರ, ಸಶಕ್ತ ಆಗಿರುತ್ತದೆ.

ಸಾಮಾನ್ಯವಾಗಿ, ಭಾರ ಎತ್ತುವಂಥ ವ್ಯಾಯಾಮ ಕೇವಲ ಗಂಡಸರಿಗಷ್ಟೇ ಮೀಸಲು ಎನ್ನುತ್ತಾರೆ. ಇಂಥ ವ್ಯಾಯಾಮ ಮಾಡುವುದೆಂದರೆ ನಿಮ್ಮ ಮಾಂಸಖಂಡಗಳನ್ನು ಅತಿ ಸಶಕ್ತಗೊಳಿಸುವುದು ಎಂದರ್ಥ. ಯಾವ ಹೆಣ್ಣು ತಾನು ಸದೃಢ, ಫಿಟ್‌ಫೈನ್‌ ಆಗಿರಬಯಸುತ್ತಾಳೋ, ತನ್ನ ದೇಹದ ಅಂಗಾಂಗಗಳನ್ನು ಸದಾ ಸಶಕ್ತವಾಗಿ ಇಟ್ಟುಕೊಂಡಿರಬೇಕು.

ಕೇವಲ ಹಾಯಾಗಿ, ನಿಧಾನವಾಗಿ ನಡೆದುಕೊಂಡು ಹೋದ ಮಾತ್ರಕ್ಕೆ ಅದು ವ್ಯಾಯಾಮವಲ್ಲ. ಸ್ವಿಫ್ಟ್ ಯಾ ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌ ಗಳನ್ನು ಅದು ಒಳಗೊಂಡಿರಬೇಕು. ಯಾವುದೇ ಚಾಲೆಂಜಿಂಗ್‌ ಆ್ಯಕ್ಟಿವಿಟೀಸ್‌ ನಲ್ಲಿ ಪಾಲ್ಗೊಂಡು ಸಕ್ರಿಯ ವ್ಯಾಯಾಮದ ಲಾಭ ಪಡೆಯಿರಿ. ವಾರದಲ್ಲಿ ಕನಿಷ್ಠ 5  ದಿನ  ಸತತ, ನಿಯಮಿತ ವ್ಯಾಯಾಮಕ್ಕೆ ಅಂಟಿಕೊಳ್ಳಿ. ನಿಮ್ಮ ವ್ಯಾಯಾಮಗಳನ್ನು ಆಗಾಗ ಬದಲಿಸುತ್ತಿರಿ, ಆಗ ಬೋರ್‌ ಎನಿಸದು.

ಪ್ರಭಾವತಿ 

ಒಂದಿಷ್ಟು ಕಿವಿಮಾತು

ಸದಾ ತಾಜಾ ಅಡುಗೆ ಮಾಡಿ ಸೇವಿಸಿ. ಅಡುಗೆ ತಯಾರಾದ 2-3 ಗಂಟೆಗಳ ಒಳಗೆ ಅದನ್ನು ಸೇವಿಸಿ. ಹಣ್ಣನ್ನು ಎಂದೂ ಅತಿ ಚಿಕ್ಕದಾಗಿ ಕಟ್‌ ಮಾಡಬೇಡಿ, ಆದಷ್ಟೂ ಇಡಿಯಾಗಿಯೇ ಸೇವಿಸಿ. ಅದನ್ನು ಸಣ್ಣಗೆ ಹೆಚ್ಚಿದಷ್ಟೂ ಅದರ ಪೋಷಕಾಂಶ ನಷ್ಟವಾಗುತ್ತದೆ. ಈ ಮಾತು ತರಕಾರಿಗೂ ಅನ್ವಯಿಸುತ್ತದೆ. ಬಾಲ್ಯದಿಂದ ನಿಮಗೆ ರೂಢಿ ಇರುವ ಆಹಾರವನ್ನೇ ದೊಡ್ಡವರಾದ ಮೇಲೂ ಮುಂದುವರಿಸಿ. ನಿಮ್ಮ ರಾಜ್ಯದ ಪ್ರಮುಖ ಆಹಾರ ಧಾನ್ಯ ಯಾವುದೋ ಅದನ್ನೇ ಸೇವಿಸಿ. ಅನಗತ್ಯ ಸಲಹೆಗಳನ್ನು ದೂರವಿಡಿ. ಊಟತಿಂಡಿ ಸಮಯದಲ್ಲಿ ಟಿವಿ, ಮೊಬೈಲ್‌, ಓದು ಬೇಡ. ಮನಸ್ಸು ಶಾಂತವಾಗಿರಲಿ. ಅನಗತ್ಯ ವಾದ ವಿವಾದ, ಜಗಳ ಖಂಡಿತಾ ಬೇಡ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ