ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಹೆಣ್ಣಿನ ಆಸೆ. ಅದರಲ್ಲೂ ದೀಪಾವಳಿಯಂಥ ಪ್ರಮುಖ ಹಬ್ಬದ ಸಂದರ್ಭದಲ್ಲಿ ಎಲ್ಲರೆದುರು ನೀವು ಮಿರಿ ಮಿರಿ ಮಿಂಚುವುದು ಹೇಗೆ…..?
ಆರತಿ ತನ್ನ ಪರ್ಸನಾಲ್ಟಿ ಕುರಿತು ಹೆಚ್ಚಿನ ನಿಗಾ ವಹಿಸುತ್ತಾಳೆ. ಅವಳು ತನ್ನ ಔಟ್ ಫಿಟ್ಸ್ ನಿಂದ ಹಿಡಿದು ಸ್ಕಿನ್ ಕೇರ್ ವರೆಗೂ ಬಹಳ ಕಾಳಜಿ ತೋರಿಸುತ್ತಾಳೆ. ಹೀಗಾಗಿ 35 ಆದ ನಂತರ ಅವಳ ಚರ್ಮ ಬಿಲ್ ಕುಲ್ ಯಂಗ್ ಆಗಿದೆ, ಇವಳನ್ನು ಮೊದಲ ಬಾರಿ ಕಂಡವರು ಬಹುಶಃ 21-22ರ ಕಾಲೇಜು ಕನ್ಯೆ, ಎಂದೇ ಭಾವಿಸುತ್ತಾರೆ.
ಕೊರೋನಾ ಕಾಲದ ಬಿಡುವಲ್ಲಿ ಎಲ್ಲರೂ ಏನಾದರೊಂದು ಹೊಸ ಹವ್ಯಾಸ ಬೆಳೆಸಿಕೊಂಡಾಗ, ಇವಳು ತನ್ನ ಪರ್ಸನಾಲ್ಟಿ ಬದಲಾಯಿಸಲು ನಿರ್ಧರಿಸಿದಳು. ಎಲ್ಲಕ್ಕೂ ಮೊದಲು ಆರತಿ ತನ್ನ ಸ್ಥೂಲ ದೇಹವನ್ನು ಸರಿಪಡಿಸಿಕೊಂಡು ಬಳುಕುವ ಬಳ್ಳಿಯಾದಳು. ನಂತರ ತನ್ನ ಮೇಕ್ ಓವರ್, ಆಮೇಲೆ ಸ್ಕಿನ್ ಕೇರ್ ಕಡೆ ಗಮನ ಹರಿಸಿದಳು.
ಅವಳಿಗೆ ಎಲ್ಲಕ್ಕಿಂತ ಕಷ್ಟವಾದದ್ದು ಈ ಸ್ಕಿನ್ ಕೇರ್ ಜರ್ನಿ. ಇದಕ್ಕಾಗಿ ಅವಳು ತರತರಹದ ಕ್ರೀಂ, ಸೀರಂ, ಫೇಸ್ ವಾಶ್ ಬಳಸಿದಳು. ಹಲವು ವಿಧದ ಫೇಸ್ ಪ್ಯಾಕ್, ಮಾಸ್ಕ್, ಶೀಟ್ ಸಹ ಬಳಸಿದಳು. ಆದರೂ ಹೆಚ್ಚಿನ ಸುಧಾರಣೆ ಕಾಣಲಿಲ್ಲ. ಕೊನೆಯಲ್ಲಿ ಮನೆಮದ್ದು ಮಾಡಿದ್ದೂ ಆಯ್ತು. ಇದರಿಂದ ಹೆಚ್ಚಿನ ಹಣ ಖರ್ಚಾಯಿತೇ ಹೊರತು ಅವಳಿಗೆ ಬೇಕಾದ ರಿಸಲ್ಟ್ ಸಿಗಲಿಲ್ಲ.
ರಾತ್ರಿ ಎಷ್ಟೋ ಸಲ ಗಂಟೆಗಟ್ಟಲೆ ಲೈಟ್ ಉರಿಸುತ್ತಾ, ದೇಹವಿಡೀ ಹಲವು ನೈಟ್ ಕ್ರೀಂ, ಪ್ಯಾಕ್ ಬಳಸುತ್ತಿದ್ದಳು. ಭಾನುವಾರ ಬಂದಾಗ ಎಂಜಾಯ್ ಮಾಡುವ ಬದಲು, ಇಂಥದ್ದೇ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು. ಹೊರಗೆ ಹೋದರೆ ಬಿಸಿಲಿಗೆ ಸ್ಕಿನ್ ಟ್ಯಾನ್ ಆದೀತೆಂದು, ಹೊರಗಿನ ಕಾರ್ಯಕ್ರಮ ರದ್ದು ಮಾಡುತ್ತಿದ್ದಳು.
ನಿಮ್ಮತ್ತ ಕಾಳಜಿ ಇರಲಿ!
ಪ್ರತಿ ವಾರಕ್ಕೊಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗುವಳು. ಆಗಲೂ ಸಮಾಧಾನ ಸಿಗದೆ ಸ್ಕಿನ್ ಕ್ಲಿನಿಕ್ ಗೆ ಸಹ ಹೋದಳು. ಸಾವಿರಾರು ರೂ.ಗಳ ಬೊಟಾಕ್ಸ್ ಇಂಜೆಕ್ಷನ್, ಪೀಲ್ ಮಾಸ್ಕ್, ಸರ್ಜರಿ, ಡಾಕ್ಟರ್ ಆದೇಶಿಸಿದ ಕ್ರೀಂ, ಲೋಶನ್ ಇತ್ಯಾದಿಗಳೂ ಆಯ್ತು. ಅಂತೂ ಛಲ ಬಿಡದೆ ಅವಳು ತನ್ನ ಸ್ಕಿನ್ ಕೇರ್ ವಿಷಯದಲ್ಲಿ ಯಶಸ್ಸು ಕಂಡುಕೊಂಡಳು!
ಇಂಥದ್ದೇ ಅನುಭವ 52ರ ಮಹಿಳೆ ರೇವತಿಗೂ ಆಯ್ತು. ಬಿಸ್ ನೆಸ್ ನಲ್ಲಿ ನುರಿತ ಆಕೆ, “ಇವತ್ತಿಗೂ ನಾನು ಸ್ಕಿನ್ ಟ್ರೀಟ್ ಮೆಂಟ್ ಗಾಗಿ ಕ್ಲಿನಿಕ್ ಗೆ ಹೋಗ್ತೀನಿ ಅಂದ್ರೆ ನನ್ನ ಮಕ್ಕಳು ನನ್ನತ್ತ ವಿಚಿತ್ರವಾಗಿ ಗುರಾಯಿಸುತ್ತಾರೆ. ನನ್ನ ಕುಟುಂಬದವರ ಇಂಥ ಪ್ರತಿಕ್ರಿಯೆ ನನಗೆ ಅರ್ಥವೇ ಆಗೋಲ್ಲ. ನನ್ನ ಎಲ್ಲಾ ಖರ್ಚನ್ನೂ ನಾನೇ ನಿಭಾಯಿಸುತ್ತೇನೆ. ನನ್ನ ದೈನಂದಿನ ವಸ್ತುಗಳು, ಮೆಡಿಕಲ್ ಬಿಲ್, ಮಾತ್ರೆ ಔಷಧಿ, ಕಾಸ್ಮೆಟಿಕ್ಸ್ ಇತ್ಯಾದಿ…..
“ನನ್ನ ಪತಿ, ಮಗ ಸಹ ದುಡಿಯುತ್ತಾರೆ. ಇವರು ಮಾತ್ರ ಹೀಗಾಡುತ್ತಾರೆ ಅಂತಲ್ಲ…. 23ರ ನನ್ನ ಮಗಳು ಹೇಳುತ್ತಾಳೆ, `ಅಮ್ಮ, ಈ ವಯಸ್ಸಲ್ಲಿ ನಿನಗೆಂಥ ಬ್ಯೂಟಿ ಹುಚ್ಚು? ಇದಾಕ್ಕಗಿ ಪಾರ್ಲರ್ ಗೆ ಹೋಗಬೇಕೇ? ನಿನ್ನ ವಯಸ್ಸಿನ ಇತರರನ್ನು ನೋಡು…. ಭಜನೆ, ದೇವಸ್ಥಾನ, ಹರಿಕಥೆ ಅಂತ ನೆಮ್ಮದಿಯಾಗಿದ್ದಾರೆ. ಈ ವಯಸ್ಸಿನಲ್ಲಿ ನಿನಗೆಂಥ ಸ್ಕಿನ್ ಟ್ರೀಟ್ ಮೆಂಟ್?’ ಎಂದು ಸಿಡುಕುತ್ತಾಳೆ.
ಮಗಳ ಮಾತಿಗೆ ರೇವತಿ, “ನಾನು ನನ್ನ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಳಾಗಿದ್ದೇನೆ. ಹೀಗಿರುವಾಗ ನನ್ನ ಬಗ್ಗೆ ನಾನು ಯಾಕೆ ಗಮನ ಕೊಡಬಾರದು? ಪ್ರೌಢಳಾದ ನಾನು ಕಾಸ್ಮೆಟಿಕ್ಸ್ ಕಡೆ ಯೋಚಿಸಲೇಬಾರದು ಎಂದು ನೀವೆಲ್ಲ ಯಾಕೆ ಅಂದುಕೊಳ್ತೀರಿ? 50+ ಆದ ಮಾತ್ರಕ್ಕೆ ಕೇವಲ ಗಂಡ, ಮನೆ, ಮಕ್ಕಳ ಬಗ್ಗೆ ಮಾತ್ರ ಚಿಂತಿಸುತ್ತಾ ಕೊರಗುತ್ತಾ ಇರಬೇಕೇ? ನನಗೆ ಅಂತ ಒಂದು ಜೀವನ ಇರಬಾರದೇ? ನನ್ನ ಬಗ್ಗೆ ನಾನು ಕಾಳಜಿ ವಹಿಸಿದರೆ ಅದು ಸ್ವಾರ್ಥ ಹೇಗಾಗುತ್ತದೆ?” ಎನ್ನುತ್ತಾರೆ.
ಯೋಚನೆಯಲ್ಲಿ ಬದಲಾವಣೆ ಬೇಕು
ಅಸಲಿಗೆ ಪ್ರೌಢ ಮಹಿಳೆ ತನ್ನ ಸ್ಕಿನ್ ಕೇರ್, ಸೌಂದರ್ಯದ ಬಗ್ಗೆ ಚಿಂತಿಸಿದರೆ ಬಹಳ ಜನ ಇದನ್ನು ನಾಟಕದ ಮೇಕಪ್ ತರಹ ಅಂತ ಆಡಿಕೊಳ್ತಾರೆ. ಸ್ಕಿನ್ ಕೇರ್ ಅಂದ ತಕ್ಷಣ ಜನ ಅದನ್ನು ವಯಸ್ಸಿಗೆ ಹೋಲಿಸಿ ಅಳೆಯುತ್ತಾರೆ. ಇವರುಗಳಿಗೆ ತಮ್ಮ ಮನೆಯ ಪ್ರೌಢ ಹೆಂಗಸರು ಸುಂದರವಾಗಿರಬೇಕು, ಆದರೆ ಅದಕ್ಕಾಗಿ ಅವರು ಯಾವುದೇ ಕ್ರೀಂ, ಸೀರಂ, ಬ್ಯೂಟಿ ಟ್ರೀಟ್ ಮೆಂಟ್ ಪಡೆಯಬಾರದು. ಇದಕ್ಕಾಗಿ ಅವರು ತಮ್ಮ ಸಮಯ, ಹಣ ವ್ಯರ್ಥ ಮಾಡಬಾರದು. ಪ್ರೌಢ ಹೆಂಗಸರ ಮುಖ, ಮೈ ಮೇಲೆ ಕಲೆ ಗುರುತುಗಳಿದ್ದು, ಅದನ್ನು ನಿವಾರಿಸ ಬಯಸಿದರೆ, ಇವರಿಗೆ ಅದು ನಾಟಕೀಯವಾಗಿ ತೋರುತ್ತದೆ. ಪ್ರೌಢ ಹೆಂಗಸು ತನ್ನತ್ತ ತಾನು ಕಾಳಜಿ ವಹಿಸಿದರೆ ಇದು ಸ್ವಾರ್ಥವೇ? ಇದರಲ್ಲಿ ನಾಟಕದ ಮೇಕಪ್ ಮಾತೇಕೆ? ಇದು ಜನರ ಸಂಕುಚಿತ ಮನೋಭಾವ ಪ್ರದರ್ಶಿಸುತ್ತದೆ. ಪ್ರೌಢ ಹೆಂಗಸು ಎಂದಾಕ್ಷಣ ತನ್ನ ಅಂದ ಚೆಂದದದ ಬಗ್ಗೆ ಸಂಪೂರ್ಣ ಮರೆತು ಕೇವಲ ಮನೆಯ ಕೆಲಸಗಳು, ಅತಿಥಿಗಳ ಆದರ, ಹಿರಿಯರ ಸೇವೆ, ಸದಾ ಪೂಜೆ ಪುನಸ್ಕಾರ…. ಇಂಥವುಗಳಲ್ಲೇ ಕಳೆಯಬೇಕು ಅಂತ ಹೇಳಿದವರು ಯಾರು? ಇದು ಪುರುಷ ಪ್ರಧಾನ ಸಮಾಜದ ಮೈಂಡ್ ಸೆಟ್ ಅಂದರೂ ತಪ್ಪಿಲ್ಲ. ಹೀಗಾಗಿ ಇಂಥ ಹೆಂಗಸರು ತಮ್ಮ ಪರ್ಸನಾಲ್ಟಿ ಸುಧಾರಿಸುತ್ತ ಗಮನ ಕೊಡಬಾರದೇಕೆ? ಇಂಥವರು ಮೇಕ್ ಓವರ್ ಮಾಡಿಕೊಂಡರೆ ತಪ್ಪೇನು? ತಮ್ಮನ್ನು ತಾವು ಅಪ್ ಡೇಟೆಡ್ ಆಗಿ ಮೇಕಪ್ ಮಾಡಿಕೊಂಡು, ಸ್ಟೈಲ್, ಗ್ಲಾಮರ್, ಫ್ಯಾಷನ್ ಗೆ ತಕ್ಕಂತೆ ಏಕೆ ಇರಬಾರದು?
ಹೆಚ್ಚು ಆತ್ಮವಿಶ್ವಾಸ
ಹೆಂಗಸರು ಹೀಗೆಲ್ಲ ಗ್ಲಾಮರಸ್ ಆಗಿ ಹೊರಗೆ ಓಡಾಡಿ ತಮ್ಮದೇ ಐಡೆಂಟಿಟಿ ಸ್ಥಾಪಿಸಿಕೊಂಡರೆ, ಎಲ್ಲಿ ತಮ್ಮ ವರ್ಚಸ್ಸಿಗೆ ಧಕ್ಕೆ ಬರುತ್ತದೋ ಎಂದು ಗಂಡಸರು ತರ್ಕಿಸುತ್ತಾರೆ. ಇದರಿಂದ ಮನೆ ಮಠ ಮರೆತು ಹೆಂಗಸರು ಸದಾ ಲೇಡೀಸ್ ಕ್ಲಬ್ಸ್ ಹೊರಗಿನ ಚಟುವಟಿಕೆಗಳತ್ತ ಗಮನ ಹರಿಸಿದರೆ…. ಎಂಬ ಆತಂಕಕ್ಕೆ ಮನೆ ಮಂದಿ ಒಳಗಾಗುತ್ತಾರೆ.
ಹಾಗೆಲ್ಲ ಯೋಚಿಸುವ ಬದಲು, ಪ್ರೌಢ ಹೆಂಗಸರು ತಮ್ಮ ಮನಸ್ಸಿಗೆ ತೋಚಿದಂತೆ ಹೀಗೆ ಅಲಂಕರಿಸಿಕೊಂಡರೆ ಅದು ಅವರ ಹಕ್ಕು ಎಂದು ಗೌರವಿಸಬೇಕು. ಹೀಗೆ ಮಾಡಿದ ಮಾತ್ರಕ್ಕೆ ಅವರು ಉತ್ತಮ ಗೃಹಿಣಿ ಆಗಿ ಇರಲಾರರೇನು? ಇಷ್ಟು ವರ್ಷಗಳ ಸಂಸಾರದ ಜಂಜಾಟದ ನಂತರ ಇನ್ನಾದರೂ ಅವರು ನೆಮ್ಮದಿಯಾಗಿ ತಮ್ಮ ಮನಸ್ಸು ಬಂದಂತೆ ಬದುಕುಲು ಬಿಡುವುದೇ ಸರಿ.
ಇಂಥ ಹೆಂಗಸರು ಹೊರಗಿನ ಓಡಾಟದಲ್ಲಿ ಆಸಕ್ತಿ ತೋರಿದ ಮಾತ್ರಕ್ಕೆ ತಮ್ಮ ಗೃಹಕೃತ್ಯದ ಜವಾಬ್ದಾರಿ ನಿರ್ಲಕ್ಷಿಸುತ್ತಾರೆ ಎಂದುಕೊಳ್ಳುವುದು ತಪ್ಪು. ಸದಾ ಸರ್ವದಾ ಮನೆಯವರ ಸೇವೆಗೆ ಮಾತ್ರ ತಮ್ಮ ಜೀವನ ಮುಡುಪಾಗಿಟ್ಟು, ಎಲ್ಲವನ್ನೂ ತ್ಯಾಗ ಮಾಡಿದರೆ ಮಾತ್ರ ಅಂಥವರನ್ನು ಆದರ್ಶ ಗೃಹಿಣಿ ಎನ್ನುವ ಇಂಥ ಮಂದಮತಿ ಜನರ ಸಂಕುಚಿತ ಸ್ವಭಾವಕ್ಕೆ ಏನು ಹೇಳುವುದು? ಹೀಗಾಗಿ ಗೃಹಿಣಿ ತನ್ನ ಕಡೆ ಗಮನ ಕೊಡುವುದು ಬಿಟ್ಟು ಸದಾ ಮನೆಗೆಲಸದ ಲೋಕದಲ್ಲೇ ಮುಳುಗಿಹೋದರೆ, ಅವಳು ಬ್ಯೂಟಿಫುಲ್ ಅಲ್ಲ…. ಸೌಂದರ್ಯದ ಗಂಧಗಾಳಿ ಸಹ ಇಲ್ಲ ಎಂದು ಆಡಿಕೊಳ್ಳಲಿಕ್ಕೂ ಈ ಜನ ಹಿಂಜರಿಯಲ್ಲ.
ಯಾವ ಮಗುವಿಗಾಗಿ ನೀವು ನಿಮ್ಮ ಕೆರಿಯರ್ ತ್ಯಾಗ ಮಾಡಿ ಅದನ್ನಿಂದು ಸತ್ಪ್ರಜೆಯಾಗಿ ಸಮಾಜದಲ್ಲಿ ನಿಲ್ಲಿಸಿದ್ದೀರೋ, ಅದೇ ಮಗು ಇಂದು ದೊಡ್ಡನಾಗಿ/ಳಾಗಿ ನಿಮ್ಮತ್ತ ಇಂಥ ಕ್ಷುಲ್ಲಕ ಕಾರಣಕ್ಕೆ ಕೆಂಗಣ್ಣು ಬೀರುವುದು ಎಷ್ಟು ಸರಿ? ಇಂಥ ಮಕ್ಕಳೇ ಇಂದು ನಿಮಗೆ ಏನನ್ನು ಮಾಡಬೇಕು/ ಮಾಡಬಾರದು ಎಂದು ನಿರ್ದೇಶಿಸುವ ಧೋರಣೆ ತೋರುವುದು ಸರಿಯೇ? ಇಂಥ ಪರಿಸ್ಥಿತಿಯಲ್ಲಿ ನೀವು ನಿಮ್ಮತ್ತ ಗಮನ ಕೊಡದೆ ಈಗಲೂ ಇವರ ದಾಸಿಯಾಗಿ ಸೇವೆ ಮಾಡುತ್ತಿದ್ದರೆ, ನಿಮ್ಮ ವ್ಯಕ್ತಿತ್ವಕ್ಕೊಂದು ಮನ್ನಣೆ ಬೇಡವೇ? ಹೀಗಾಗಿಯೇ ನಿಮ್ಮ ಸ್ವಾಭಿಮಾನ ಎಲ್ಲಕ್ಕಿಂತ ದೊಡ್ಡದು, ಅದಕ್ಕೆ ಪೆಟ್ಟು ಬಿದ್ದಾಗ, ಖಂಡಿತಾ ಅಂಥವರೆದುರು ತಲೆ ಬಾಗಬೇಡಿ!
ಜೀವನವಿಡೀ ಮನೆಮಂದಿಗಾಗಿ ಸವೆಸಿದ್ದಾಯ್ತು, ಇನ್ನಾದರೂ ನೀವು ನಿಮ್ಮ ಆರೋಗ್ಯ, ಸೌಂದರ್ಯ, ವ್ಯಕ್ತಿತ್ವ ವಿಕಾಸ, ಹವ್ಯಾಸ, ನಿಮ್ಮ ಅಭಿರುಚಿ ಬೆಳೆಸುವುದರತ್ತ ಗಮನ ಕೊಡಿ.
ಇಂಥ ಪರಿಸ್ಥಿತಿ ಮಧ್ಯೆ ದೀಪಾವಳಿಯಂಥ ದೊಡ್ಡ ಹಬ್ಬಗಳು ಬಂದಾಗ, ನಿಮ್ಮನ್ನು ನೀವು ನಿರ್ಲಕ್ಷಿಸಿಕೊಂಡು ಸದಾ ಕೆದರಿದ ತಲೆ, ಹಳೆ ನೈಟಿ, ಮೈಕೈ ಮಸಿ ಎಂಬಂತೆ ಹಬ್ಬದ ತಯಾರಿಯಲ್ಲೇ ಜೀವ ಸವೆಸುವುದಲ್ಲ. ನಿಮ್ಮ ವ್ಯಕ್ತಿತ್ವದ ಸುಧಾರಣೆಯತ್ತಲೂ ಗಮನ ಕೊಡಿ.
ಈ ಮನೆಗೆ ನೀವೇ ಕೇಂದ್ರಬಿಂದು. ಅಂಥ ಗೃಹಿಣಿ ಕಳೆಕಳೆಯಾಗಿ, ತನ್ನ ಆರೋಗ್ಯ ಸುಧಾರಿಸಿ, ಒಂದಿಷ್ಟು ಉಟ್ಟು ತೊಟ್ಟು, ಸರ್ವಾಲಂಕಾರ ಮಾಡಿಕೊಂಡು ಸುಶೋಭಿತೆಯಾಗಿ ನಿಂತರೆ ಅದರಿಂದ ಮನೆಮಂದಿಗೂ ಹೆಮ್ಮೆ ಅಲ್ಲವೇ? ಇದರಿಂದ ನಿಮ್ಮ ಸ್ವಾಭಿಮಾನ ಎರಡಲ್ಲ, ಮೂರು ಪಟ್ಟು ಹೆಚ್ಚುತ್ತದೆ! ಹೀಗಾಗಿ ನಿಮ್ಮ ಸ್ಕಿನ್ ಕೇರ್, ತಲೆಗೆ ಡೈ ಹಚ್ಚುವುದಿರಲಿ, ಮೇಕಪ್, ಉಗುರು ಬಣ್ಣ, ಟಿಪ್ ಟಾಪ್ ಡ್ರೆಸ್, ಸ್ಯಾಂಡಲ್ಸ್…. ಏನೇ ಇರಲಿ, ಅದು ನಿಮ್ಮ ಮನಸ್ಸು ಒಪ್ಪುವಂತೆ ಇರಲಿ. ಸಂಭ್ರಮದಿಂದ ಹಬ್ಬ ಆಚರಿಸಿ, ಹ್ಯಾಪಿ ದೀಪಾವಳಿ!
– ಕೆ. ಸುಮತಿ