ಮದುವೆ ನಂತರ ಕೆರಿಯರ್ ಮತ್ತು ನಿಮ್ಮ ಪರ್ಸನಲ್ ಲೈಫ್ ಜೊತೆ ಪರ್ಫೆಕ್ಟ್ ಹೊಂದಾಣಿಕೆ ಬಯಸುವಿರಾದರೆ, ಈ ಸಲಹೆಗಳತ್ತ ಅಗತ್ಯ ಗಮನ ಕೊಡಿ……!
ವರ್ಕ್ಫ್ಯಾಮಿಲಿ ಲೈಫ್ ಬ್ಯಾಲೆನ್ಸ್ ಮಾಡುವುದು, ಎಂಥ ಹೆಣ್ಣಿಗಾದರೂ ಇಂದು ಎಲ್ಲಕ್ಕಿಂತ ದೊಡ್ಡ ಚಾಲೆಂಜ್ ಆಗಿದೆ. ಏಕೆಂದರೆ ಕೌಟುಂಬಿಕ ಜೀವನದಲ್ಲಿ ಆದರ್ಶ ಸೊಸೆ ಎನಿಸುವುದರೊಂದಿಗೆ ವರ್ಕ್ ಪ್ಲೇಸ್ ನಲ್ಲಿ ಬೆಸ್ಟ್ ಪ್ರೊಫೆಶನ್ ಎನಿಸುವುದು ಸುಲಭ ಸಾಧ್ಯವಲ್ಲ. ಇವೆರಡನ್ನೂ ಬ್ಯಾಲೆನ್ಸ್ ಮಾಡುವುದು ಈಝಿ ಟ್ಯಾಸ್ಕ್ ಅಲ್ಲ, ಅದರಲ್ಲೂ ಕುಟುಂಬದವರ ಸಪೋರ್ಟ್ ಇಲ್ಲದಿದ್ದರೆ ಬಲು ಕಷ್ಟ. ಹೀಗಾಗಿ ನವ ವಧುವಿಗೆ ಆಫೀಸಿನಲ್ಲಿ ಒಬ್ಬರು ಬಾಸ್ ಆದರೆ, ಮನೆಯಲ್ಲಿ ಅತ್ತೆಯೇ ಬಾಸ್! ಹೀಗಿರುವಾಗ ಎರಡೂ ಕಡೆ ಆಕೆ ಹೊಂದಾಣಿಕೆ ಸಾಧಿಸುವುದು ಹೇಗೆ ಎಂದು ನೋಡೋಣ.
ಕುಟುಂಬಕ್ಕೆ ಮೊದಲ ಆದ್ಯತೆ ಇದೀಗ ತಾನೇ ನಿಮ್ಮ ಮದುವೆ ಆಗಿದೆ, ಹೀಗಾಗಿ ನಿಮ್ಮ ಹೊಸ ಮನೆಯಲ್ಲಿ ಮೊದಲಿನಿಂದಲೇ ಎಲ್ಲಾ ಸಂಬಂಧಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂಬುದನ್ನು ನೀವು ಚೆನ್ನಾಗಿ ಗಮನಿಸಿಕೊಳ್ಳಿ. ಈ ಸಂಬಂಧ ಮಧುರ ಆಗುವುದು ಕೇವಲ ನಿಮ್ಮ ಆದರ್ಶ ವ್ಯವಹಾರದಿಂದ. ನೀವು ನಿಮ್ಮ ಹೊಸ ಮನೆಗೆ ಮೊದಲ ಆದ್ಯತೆ ಕೊಟ್ಟಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಅತ್ತೆ ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಬೇಕು. ಅವರ ಅಭ್ಯಾಸಗಳನ್ನು ಗಮನಿಸಿ, ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಿ, ನಂತರ ನಿಮ್ಮ ಉತ್ತರ ಹಂಚಿಕೊಳ್ಳಿ.
ಮನೆಯಲ್ಲಿ ಯಾವ ಸಮಯಕ್ಕೆ ಯಾವ ಕೆಲಸ ಆಗಬೇಕು, ಅದರ ಅನುಸಾರ ನಿಮ್ಮನ್ನು ನೀವು ಅಡ್ಜಸ್ಟ್ ಮಾಡಿಕೊಳ್ಳಲು ಯತ್ನಿಸಿ. ಇದಕ್ಕಾಗಿ ನೀವು ಸಂಗಾತಿಯ ಫುಲ್ ಸಪೋರ್ಟ್ ಪಡೆಯಿರಿ. ಆಗ ಮಾತ್ರ ನಿಮಗೆ ಆರಂಭದಿಂದಲೇ ಎಲ್ಲಾ ವಿಷಯಗಳನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲು, ಅದನ್ನು ಬ್ಯಾಲೆನ್ಸ್ ಮಾಡಲು ತೊಂದರೆ ಆಗದು. ನೀವು ಮನಃಪೂರ್ವಕವಾಗಿ ಅತ್ತೆಮನೆಯವರನ್ನು ನಿಮ್ಮವರೆಂದೇ ಸ್ವೀಕರಿಸಿದಾಗ ಮಾತ್ರ, ಅವರಿಗಾಗಿ ಎಲ್ಲವನ್ನೂ ಬೆಸ್ಟ್ ಆಗಿ ಮಾಡಲು ಯತ್ನಿಸಿದಾಗ ಮಾತ್ರ, ನೀವು ಮನೆ ಮತ್ತು ಆಫೀಸ್ ಎರಡೂ ಕಡೆ ಬ್ಯಾಲೆನ್ಸ್ ವಹಿಸಲು ಸಾಧ್ಯವಾಗುತ್ತದೆ ಎಂದು ನೆನಪಿಡಿ.
ಆಫೀಸಿನಲ್ಲಿ ತಡ ಮಾಡಿಕೊಳ್ಳಬೇಡಿ
ಮದುವೆ ಆಗಿದೆ ಎಂದ ಮೇಲೆ ನೀವು ಮನೆಯತ್ತ ಹೆಚ್ಚಿನ ನಿಗಾ ವಹಿಸಲೇಬೇಕಾಗುತ್ತದೆ. ಇದರ ಅರ್ಥ ನೀವು ಆಫೀಸಿಗೆ ಆದ್ಯತೆ ಕೊಡಲೇ ಬಾರದು ಅಂತಲ್ಲ. ಮದುವೆಯಾದ ಹೊಸತರಲ್ಲಿ, ಆಫೀಸಿನ ಹಿರಿ ಅಧಿಕಾರಿಗಳೊಂದಿಗೆ ಮಾತನಾಡಿ, ಆಫೀಸ್ ವೇಳೆ ಮುಗಿದ ಮೇಲೂ ನೀವು ಆಫೀಸಿನಲ್ಲೇ ಉಳಿಯಬೇಕಾದಂಥ ಕೆಲಸ ಅಂಟಿಸಬೇಡಿ ಎಂದು ವಿನಂತಿಸಿಕೊಳ್ಳಿ. ಆದರೆ ಆಫೀಸ್ ವೇಳೆಯಲ್ಲಿ, ಅದರ ಎಲ್ಲಾ ಜವಾಬ್ದಾರಿಗಳನ್ನೂ ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದು ಭರವಸೆ ನೀಡಿ.
ಇದರಿಂದ ಬಾಸ್ ನಿಮ್ಮ ಮಾತನ್ನು ಖಂಡಿತಾ ಒಪ್ಪುತ್ತಾರೆ. ಹೀಗಾಗಿ ಈ ಕ್ರಮದಿಂದ ನೀವು ಮನೆ ಆಫೀಸ್ ನಡುವೆ ಬ್ಯಾಲೆನ್ಸ್ ನಿರ್ವಹಿಸಲು ಸುಲಭವಾಗುತ್ತದೆ. ಹೀಗಾಗಿ ಮದುವೆಯಾದ ಹೊಸತರಲ್ಲಿ 1-2 ವರ್ಷ, ಆಫೀಸ್ ನ್ನು ಆಫೀಸ್ ನಲ್ಲೇ ಬಿಟ್ಟು ಬರುವುದರಲ್ಲಿಯೇ ನಿಮ್ಮ ವಿವೇಕ ಅಡಗಿದೆ. ಹಾಗಿದ್ದಾಗ ಮಾತ್ರ ನಿಮ್ಮ ಹೊಸ ಸಂಬಂಧದಲ್ಲಿ ಮಾಧುರ್ಯ ಕಾಪಾಡಿಕೊಳ್ಳಲು ಸಾಧ್ಯ. ಇದನ್ನು ನಿರ್ಲಕ್ಷಿಸಿದರೆ ಮುಂದೆ ನೀವು ಕೌಟುಂಬಿಕವಾಗಿ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ.
ನೈಟ್ ಶಿಫ್ಟ್ ಅವಾಯ್ಡ್ ಮಾಡಿ
ನೀವು ಅನಿವಾರ್ಯವಾಗಿ ನೈಟ್ ಶಿಫ್ಟ್ ನಿರ್ವಹಿಸಬೇಕಾದ ಕಂಪನಿಯಲ್ಲಿದ್ದರೆ, ಈ ವಿಷಯವನ್ನು ಮದುವೆಗೆ ಮೊದಲೇ ನಿಮ್ಮ ಅತ್ತೆ ಮನೆಯವರಿಗೆ ತಿಳಿಸಿ, ಪರ್ಮಿಶನ್ ಪಡೆದುಕೊಳ್ಳಿ. ಆಗ ಮಾತ್ರ ಸಂಬಂಧ ಮಧುರವಾಗಿ ಮುಂದುವರಿಯಲು ಸಾಧ್ಯ. ಇಷ್ಟೆಲ್ಲ ಆದರೂ, ನಿಮ್ಮ ಪತಿ, ಅತ್ತೆಮನೆಯವರು ನಿಮ್ಮೊಂದಿಗೆ ಎಷ್ಟೇ ಆತ್ಮೀಯವಾಗಿ ವ್ಯವಹರಿಸಿದರೂ, ಆರಂಭದಲ್ಲೇ ನೀವು ನೈಟ್ ಶಿಫ್ಟ್ ಡ್ಯೂಟಿ ಮುಂದುವರಿಸಿದರೆ ಅವರಿಗೆ ಕೋಪ ಬರುವುದು ಅಸಹಜವಲ್ಲ.
ಹೀಗಾಗಿ ನಿಮ್ಮ ಬಾಸ್ ಮತ್ತು ಸಹೋದ್ಯೋಗಿಗಳಿಗೆ ಮೊದಲೇ ತಿಳಿಸಿ, ಮದುವೆಯಾದ ಕನಿಷ್ಠ ಮೊದಲ 3-4 ತಿಂಗಳು, ನಿಮ್ಮ ನೈಟ್ಶಿಫ್ಟ್ ಇತರರಿಗೆ ವರ್ಗಾಯಿಸುವಂತೆ ನೋಡಿಕೊಳ್ಳಿ. ಈ ರೀತಿ ಎರಡೂ ಕಡೆ ಬ್ಯಾಲೆನ್ಸ್ ಮಾಡಿ. ನಾನು ಇದೀಗ ನವ ವಿವಾಹಿತೆ, ಮೊದಲ 3-4 ತಿಂಗಳು ನೈಟ್ ಶಿಫ್ಟ್ ಅವಾಯ್ಡ್ ಮಾಡದಿದ್ದರೆ, ಮುಂದೆ ನನ್ನ ಸಾಂಸಾರಿಕ ಜೀವನ, ಕೆರಿಯರ್ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಕಷ್ಟವಾದೀತು ಎಂದು ಆಫೀಸಿನವರಿಗೆ ಮನವರಿಕೆ ಮಾಡಿಕೊಡಿ.
ವರ್ಕ್ ಏರಿಯಾ ಗಾಸಿಪ್
ನಿಮ್ಮ ಸಂಗಾತಿ ಎಷ್ಟೇ ಒಳ್ಳೆಯವನಾಗಿದ್ದರೂ, ಫ್ಯಾಮಿಲಿಗೆ ಹೆಚ್ಚು ಸಪೋರ್ಟ್ ಮಾಡುತ್ತಿದ್ದರೂ, ತವರುಮನೆ ಬೇರೆ, ಹೊಸದಾಗಿ ಈಗ ಹೊಂದಿಕೊಳ್ಳುತ್ತಿರುವ ಅತ್ತೆ ಮನೆ ಬೇರೆ ಎಂಬ ಸೂಕ್ಷ್ಮ ನಿಮ್ಮ ಮನಸ್ಸಿನಲ್ಲಿ ಅಲರ್ಟ್ ಆಗಿರಲಿ. ಹೀಗಾಗಿ ಹಿಂದೆಲ್ಲ ಮಾಡುತ್ತಿದ್ದಂತೆ, ಇಲ್ಲೂ ಜೋಶ್ ನಲ್ಲಿ ಆಫೀಸ್ ಗಾಸಿಪ್, ಪ್ರೇಮಾಯಣ, ಫ್ಲರ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳಲು ಧಾವಿಸದಿರಿ.
ಆಫೀಸಿನಲ್ಲಿ ಏನೇನು ನಡೆಯಿತು ಎಂಬುದರ ಅಕ್ಷರಶಃ ವರದಿ ಮನೆಯವರಿಗೆ ಖಂಡಿತಾ ಬೇಡ. ಆಫೀಸಿನಲ್ಲಿ ನಡೆದಿರಬಹುದಾದ ನಾನ್ ವೆಜ್ ಜೋಕ್ಸ್, ರೊಮ್ಯಾಂಟಿಕ್ ವಾತಾವರಣದ ಚರ್ಚೆ….. ಇನ್ನೇನೇ ಇರಲಿ, ಅದನ್ನೆಲ್ಲ ಮನೆಯಲ್ಲಿ ವರ್ಣಿಸುತ್ತಾ ಕೂರಬೇಡಿ. ನಿಮ್ಮ ಬಳಿ ಮಾತನಾಡಲು ಆಫೀಸಾಯಣ ಬಿಟ್ಟರೆ ಬೇರೇನೂ ಇಲ್ಲ ಎಂದು ಅವರು ರೋಸಿಹೋದಾರು! ಹೀಗಾಗಿ ಅದರ ಬದಲು ಮನೆಮಂದಿಯ ಎಲ್ಲರ ಸ್ವಭಾವ, ಅಭಿರುಚಿ ತಿಳಿದುಕೊಳ್ಳಲು ಎಲ್ಲರ ಬಗ್ಗೆ ಬದಲಾಯಿಸಿ ಬದಲಾಯಿಸಿ ಮಾತನಾಡುತ್ತಿರಿ. ಹೀಗೆ ಸಂಜೆ ಹೊತ್ತು ಮನೆ ಮಂದಿ ಜೊತೆ ಕುಳಿತು ಕಾಫಿ ಸೇವಿಸುತ್ತಾ, ಎಲ್ಲರ ಕುಶಲೋಪರಿ ವಿಚಾರಿಸುತ್ತಾ, ಸಹಜವಾಗಿ ಹೊಂದಿಕೊಳ್ಳಲು ಯತ್ನಿಸಿ. ಆಗ ಕೌಟುಂಬಿಕ ಜೀವನ ನಂದನ ವನವಾಗುತ್ತದೆ!
ಇದರಿಂದ ನಿಮ್ಮ ಹೊಸ ವೈವಾಹಿಕ ಜೀವನ ನಳನಳಿಸುತ್ತಾ, ನೀವು ಅವರೊಂದಿಗೆ ಕ್ವಾಲಿಟಿ ಟೈಂ ಕಳೆದಂತಾಗುತ್ತದೆ. ಇದರಿಂದ ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ, ಹೊಸ ಸೊಸೆ ಮನೆಯವರೆಲ್ಲರ ಜೊತೆ ನಸುನಗುತ್ತಾ ಹೊಂದಿಕೊಂಡರೆ, ಅದಕ್ಕಿಂತ ಹೆಚ್ಚಿನದೇನು ಬೇಕು? ಈ ರೀತಿ ನೀವು ಪ್ರಯತ್ನಪಟ್ಟಾಗೆಲ್ಲ ಎರಡೂ ಕೈ ಸೇರಿ ಚಪ್ಪಾಳೆ ಮೂಡುವಂತೆ, ಅವರುಗಳೂ ನಿಮ್ಮೊಂದಿಗೆ ಹಿತಕರವಾಗಿ ಒಂದಾಗುತ್ತಾರೆ.
ಕುಟುಂಬದವರೊಂದಿಗೆ ಹೆಚ್ಚು ಸಮಯ
ಇದೀಗ ನೀವು ನವ ವಿವಾಹಿತೆ, ಹೀಗಾಗಿ ಸಂಗಾತಿ, ಆತನ ಕುಟುಂಬದವರ ಜೊತೆ ಹೆಚ್ಚು ಹೆಚ್ಚಾಗಿ ಕಾಲ ಕಳೆಯಿರಿ. ಹೀಗೆ ಕುಟುಂಬದವರ ಜೊತೆ ಪಾರ್ಟಿ, ಔಟಿಂಗ್, ಪ್ರವಾಸ ಇತ್ಯಾದಿ ಹೊರಡುತ್ತಾ ಮನಬಿಚ್ಚಿ ಮಾತು ಹಂಚಿಕೊಂಡರೆ, ಆತ್ಮೀಯತೆ ತಾನಾಗಿ ಹೆಚ್ಚುತ್ತದೆ. ಹೀಗೆ ನಿಮ್ಮ ಪ್ರಯತ್ನದಿಂದಾಗಿ ಮೊದಲೆಲ್ಲಾ ನೀವು ಅವರೆಲ್ಲರ ಮನ ಗೆದ್ದುಕೊಂಡುಬಿಟ್ಟರೆ, ಮುಂದಿನ ದಿನಗಳಲ್ಲಿ ಎಲ್ಲ ಆನಂದಮಯವಾಗುತ್ತದೆ. ಹೀಗಾಗಿ ಮದುವೆಯ ಹೊಸತರಲ್ಲಿ ಅವಕಾಶ ಸಿಕ್ಕಿದಾಗ, ನಡುನಡುವೆ ಆಫೀಸಿಗೆ ಲೀವ್ ಹಾಕಿ, ಕುಟುಂಬದವರೊಂದಿಗೆ ಪ್ರವಾಸ ಅಥವಾ ಸಂಬಂಧಿಕರ ಫಂಕ್ಷನ್ ಇತ್ಯಾದಿ ಎಲ್ಲರೊಂದಿಗೆ ಬೆರೆತು ಅಟೆಂಡ್ ಆಗಿ. ಒಮ್ಮೊಮ್ಮೆ ಎಲ್ಲಾ ಕಲೆತು ಸಿನಿಮಾಗೆ ಹೋಗುವುದೂ ಒಳ್ಳೆಯದು.
ಈ ರೀತಿ ಎಲ್ಲರೊಂದಿಗೆ ನೀವು ಬೆರೆತುಕೊಂಡಾಗ, ಹೊಸ ಸೊಸೆಗೆ ನಮ್ಮ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ಅವರೆಲ್ಲ ಹಿಗ್ಗುತ್ತಾರೆ. ಆಗ ಸಂಗಾತಿ ಜೊತೆಯಲ್ಲೇ ಹೆಚ್ಚು ಸಮಯ ಕಳೆಯಲಿಕ್ಕೂ ಸದವಕಾಶ ಸಿಗುತ್ತದೆ. ಅವರಾಗಿ ಯಾವುದಾದರೂ ಇಂಥ ಕಾರ್ಯಕ್ರಮ ಏರ್ಪಡಿಸಿದಾಗ, ಖಂಡಿತಾ ನಿರಾಕರಿಸದೆ ಅದರಲ್ಲಿ ಪಾಲ್ಗೊಳ್ಳಿರಿ. ಆಗ ಅತ್ತೆ ಮನೆಯ ಸದಸ್ಯರು ಸಹ ನಿಮ್ಮ ಪರ ವಹಿಸಿಕೊಳ್ಳಲು ಹಿಂಜರಿಯುವುದಿಲ್ಲ.
ಮಾತು ಹಿತಮಿತ ಆಗಿರಲಿ
ಕೆಲವು ಸಂದರ್ಭದಲ್ಲಿ ಹೊಸ ಸೊಸೆಯ ಸಂಬಳ ಗಂಡನಿಗಿಂತ ಹೆಚ್ಚಿರಬಹುದು. ಕೆಲಸದಲ್ಲಿನ ಪದವಿ, ಪ್ರತಿಷ್ಠೆಗಳೂ ಹೆಚ್ಚೇ ಇರಬಹುದು. ಆದರೆ ಇದರರ್ಥ ನೀವು ಈ ಬಗ್ಗೆ ಆಗಾಗ್ಗೆ ಮನೆಯವರ ಮುಂದೆ ಟೀಕೆ, ವ್ಯಂಗ್ಯ ಆಡುವುದು ಖಂಡಿತಾ ಸರಿಯಲ್ಲ. ಬಂದದ್ದನ್ನು ಸಹಜವಾಗಿ ಸ್ವೀಕರಿಸುತ್ತಾ, ಹೊಸ ಸಂಸಾರದ ಗಾಡಿ ಬ್ಯಾಲೆನ್ಸ್ ತಪ್ಪದಂತೆ ಎಚ್ಚರವಹಿಸಿ. ಇದರ ಬದಲು ನೀವು ಒಬ್ಬ ಆದರ್ಶ ಸೊಸೆಯಾಗಿ, ಸಂಗಾತಿ ಮಾತ್ರವಲ್ಲದೆ ಮನೆಯವರೆಲ್ಲರ ಭಾವನೆಗಳನ್ನೂ ಗೌರವಾದರದಿಂದ ಕಂಡರೆ, ನಿಮಗೂ ಅಂಥದ್ದೇ ಸಪೋರ್ಟ್ ಸಿಗುವುದರಲ್ಲಿ ಸಂದೇಹವಿಲ್ಲ. ಈ ರೀತಿ ನೀವು ಮದುವೆಯಾದ ಹೊಸತರಲ್ಲಿ ಮನೆ ಮತ್ತು ಆಫೀಸ್ ಎರಡನ್ನೂ ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡುವುದರಲ್ಲಿ ನುರಿತವರಾದರೆ, ಮುಂದೆ ಎಲ್ಲವೂ ಸಲೀಸಾಗುತ್ತದೆ. ಎಂಥ ಸಂಬಂಧವೇ ಇರಲಿ, ಆರಂಭದಲ್ಲೇ ಕಹಿ ಕಾಣಿಸಿಕೊಂಡರೆ, ಅದು ಶಾಶ್ವತವಾಗಿ ಹಾಗೇ ಉಳಿದುಕೊಂಡೀತು. ಅಂಥದ್ದಕ್ಕೆ ಅವಕಾಶ ಕೊಡದೆ, ನಿಮ್ಮ ವೈವಾಹಿಕ ಜೀವನ ಸುಗಮವಾಗಿ ಸಾಗಲು, ಮೊದಲ ಪ್ರಯತ್ನ ನಿಮ್ಮಿಂದಲೇ ಶುರುವಾಗಲಿ!
– ಪಾರ್ವತಿ ಭಟ್