ಇಡೀ ಊರಿಗೇ ಊರೇ ನರಸನಾಯಕನ ಕಾಮ ಪಿಪಾಸೆಗೆ ನಡುಗುತ್ತಿದ್ದಾಗ, ಮಂಜಣ್ಣ ತಂಗಿ ರಂಗಮ್ಮನ ಸೊಸೆಯ ಮಾನ ಕಾಪಾಡಲು ಮುಂದಾಗಿದ್ದು ಹೇಗೆ….?
“ಮಂಜಣ್ಣಾ, ನಾ ಹೆಂಗ ಮಾಡ್ಲೋ ಎಪ್ಪಾ? ನನ್ನ ಎದಿ ಒಡ್ಡು ಹೋಗ್ಲಿಕತ್ಯಾದ. ಎದಿ ಒಳಗ ಖಾರಾ ಕಲ್ಸಿದಂಗಾಗ್ಲಿಕತ್ಯಾದ.”
“ಯಾಕಬೇ ತಂಗಿ ರಂಗಮ್ಮಾ…. ಅಷ್ಟ್ಯಾಕ ಚಿಂತಿ ಮಾಡ್ಲಿಕತ್ತೀದಿ?”
“ಅಯ್ಯೋ ಎಣ್ಣಾ, ನಿನಗೆ ಎಲ್ಲಾ ಗೊತ್ತೈತೆ. ನಾ ಮತ್ತೇನು ಹೇಳ್ಲಿ? ನನ್ನ ಕಳ್ಳು ಕಿವಿಚಿದಂಗಾಗ್ಲಿಕತ್ತೈದ. ನಾ ಹೆಂಗ ಸುಮ್ಮನ ಇರ್ಲಿ? ಮಂಜಣ್ಣಾ, ನೀ ಹೆಂಗಾದ್ರೂ ಮಾಡಿ ಕಾಪಾಡೋ ಎಪ್ಪಾ? ನೀನ ನನ್ನ ಪಾಲಿನ ದ್ಯಾವ್ರ ಅಂತ ತಿಳಕೊಂಡೀನಿ.”
“ರಂಗಮ್ಮಾ, ನಾ ಇಲ್ಲೇನಬೇ? ನೀ ಯಾಕ ಅಷ್ಟು ಒದ್ದಾಡ್ಲಿಕತ್ತೀದಿ?”
“ಮಂಜಣ್ಣಾ, ನೀ ಅದೀ ಖರೇ. ಆದ್ರ ನನ ಕಣ್ಣಿಗೆ ನಿದ್ದಿ ಹತ್ತಾರ್ದಂಗ ಆಗೇದ. ಮುಂದಿನ ವಾರನ ನನ್ನ ಮುದ್ದಿನ ಸೊಸಿ ಚೆಲುವಿಗೆ ಹೂ ಮುಡುಸಿ ಎಬ್ಬಿಸಲಿಕ್ಕತ್ಯಾರ. ಹದಿನಾರು ದಿನ ತುಂಬ್ತಾ ಅತ್ತಿಗೆ. ಚೆಲುವಿ ಅಂದ್ರ ಆಕಿ ಖರೇನ ಚೆಲುವಿ ನೋಡು. ರತಿ ಇದ್ದಂಗ ಅದಾಳ. ಆಕಿ ರೂಪ, ಬಣ್ಣ, ಆಕಾರ ಏನಂತ ಹೇಳ್ಲಿ? ದೇವಲೋಕದ ರಂಭಿ ಇದ್ದಂಗ ಅದಾಳ. ಹದಿಮೂರಕ್ಕ ಆಕಿ ಮೈ ಹೆಂಗ ಒಡ್ದದಂದ್ರ, ನೋಡ್ಲಿಕ್ಕ ಎಡ್ಡೂ ಕಣ್ಣು ಸಾಲಂಗಿಲ್ಲ ಬಿಡು. ಅಕಿ ಚಿಗರಿ ಕಣ್ಗಳು, ಕೆಂಪ ಗಜ್ಜರಿ ಅಂತ ಮೈ ಬಣ್ಣ, ಎದಿ ಮೈಮಾಟ, ಒಂದ, ಎರಡ…..? ನಾ ಹೆಂಗ ವರ್ಣನಾ ಮಾಡಿ ಹೇಳ್ಲಿ?”
“ತಂಗಿ ರಂಗಮ್ಮಾ, ನಿನ್ನ ಸೊಸಿ ಮಾನ ಕಾಪಾಡೋ ಜವಾಬ್ದಾರಿ ನಂದೈತೆ ತಿಳ್ಕೋ. ಆಯ್ತಲಾ…?”
“ಮಂಜಣ್ಣಾ, ನೀ ಆಗಿನಿಂದ ಧೈರ್ಯ ಹೇಳ್ಲಿಕತ್ತೀದಿ ಖರೇ, ಆದ್ರೂ ನನಗ ಧೈರ್ಯ ಸಾಲವಲ್ದು ನೋಡು. ಈ ಚೆಲುವಿ ನನ್ನ ಅಣ್ಣನ ಒಬ್ಬಾಕೆ ಮಗಳು. ಈಕಿನ್ನ ನನ್ನ ಮಗಂಗ ತೊಗೋಬೇಕಂತ ಮಾತಾಡೀವಿ. ನನ್ನ ಮಗ ಈ ಚೆಲುವಿ ಮ್ಯಾಲ ತನ್ನ ಜೀವಾನ ಇಟ್ಕೊಂಡಾನ. ಯಾಳ್ಯಾ ಬಾಳ ಐತೆ ನೋಡು, ಅದಕ್ಕ ನನಗೆ ಚಿಂತಿ ಬಾಳ ಹತ್ಯಾದ. ಎಪ್ಪಾ, ಈ ಹೆಣ್ಣ ಜೀವಕ್ಕ ಬೆಲೀನ ಇಲ್ದಂಗಾಗೈತಿ ಇಲ್ಲಿ.”
“ನನ್ನ ಜೀವ ಹೋದ್ರೂ ಚಿಂತಿಲ್ಲಬೇ. ನಿನ್ನ ಸೊಸಿ ಮಾನಕ್ಕೆ ಯಾವ ತೊಂದ್ರಿ ಆಗಬಾರ್ದಂಗ ನೋಡ್ಕೋತೀನಿ. ನೀನ ಗಪ್ಪ ಇರಬೇ ತಂಗಿ.”
“ಹೌದ ಮಂಜಣ್ಣಾ, ನೀನೇನೋ ಹೇಳ್ಲಿಕತ್ತೀದಿ. ಆದರ ದಿವ್ಸ್ ಗೋಳು ಹಂಗ ಹೋಗ್ಲಿಕತ್ಯಾ. ಕಣ್ಣು ಮುಚ್ಚಿ ಕಣ್ಣು ತೆರೆದ್ರೋಳಗ ಒಂದು ಆಗಿಬಿಡುತ್ತ. ಚೆಲಿವಿನ್ನ ನಾ ಪಿರೂತಿಯಿಂದ ಗಿಣಿ ಸಾಕಿದಂಗ ಸಾಕೀವಿ ಎಪ್ಪಾ, ಹೂ ಮುಡಿಸಿದ ದಿನನ ಆಕಿಗೆ ರಂಭಿ ಹಂಗ ಸಿಂಗಾರ ಮಾಡಿ ಆ ಕಟುಕಂಗ ಒಪ್ಸಬೇಕಲ್ಲ! ಈ ನಮ್ಮ ದೊರೆ ಮುದಿಗೂಬೆ ಆಗಿದ್ರೂ, ಹೊಸ್ದಾಗಿ ಮೈನೆರ್ದ ಹುಡ್ಗೀರೆಲ್ಲಾ ಆತನಿಗೇ ಮೀಸಲು ಅಲ್ವಾ….? ನಮ್ಮ ದೊರಿ ಈ ಮೀಸಲು ಮುರೇ ಪದ್ಧತಿ ಇಟ್ಕೊಂಡು ಬಂದಾನಲ್ಲ? ಅರವತ್ತರ ಸಮೀಪದ ಮುದುಕ ದೊರಿಗೆ ಹನ್ನೆರ್ಡು, ಹದಿಮೂರು ವರ್ಷದ ಎಳೆ ಹುಡ್ಗೀರೇ ಬೇಕು. ಈ ದೈನಾಸಿ ಹುಡ್ಗೇರ ಶೋಭನ ದೊರಿ ಜೊತಿಗೇ ಆಗ್ಬೇಕು ಅಲ್ವಾ….? ದೊರಿಗೆ ನೈವೇದ್ಯ ಮಾಡಿದ ಮ್ಯಾಲಾನೇ ಅವರ ಮುಂದಿನ ಜೀವನ ಸಾಗುತ್ತಲ್ಲ….?
“ನಮ್ದಂತೂ ಎಲ್ಲಾ ಮುಗ್ದು ಹೋಗೈತೆ. ದೊರಿ ಯಾವಾಗ ಬೇಕಂದಾನ, ಅವಾಗ ನಾ ಸೆರ್ಗು ಹಾಸೀನಿ. ನಮ್ಮ ಕಾಲಕ್ಕ, ಇದು ಇಷ್ಟಕ್ಕ, ಮುಗಿದ್ರ ಚೆಂದ ಅಂತ ಅನ್ಕೊಂಡೀನಿ. ನಮ್ಮ ಮಕ್ಕಳು, ಮೊಮ್ಮಕ್ಕಳಾದ್ರೂ ಚೆಂದಾಗಿರ್ಲಿ ಅಂತ ಆಸಿ. ಇಡೀ ದೇಶಕ್ಕ ಸ್ವಾತಂತ್ರ್ಯ ಬಂದ್ರೂ ನಮ್ಮ ಊರ್ಗೆ ಇನ್ನೂ ಬರ್ಲಿಲ್ಲ ನೋಡು. ಎಲ್ಲಾ ನಮ್ಮ ಕರ್ಮ. ಪಾಲ್ಗೆ ಬಂದದ್ದನ್ನು ಅನುಬೋಗ್ಸಬೇಕಲ್ಲ? ಒಲ್ಲೆಂದ್ರ ಹೆಂಗ ನಡೀತೈತೆ? ಸೆಟಿಗೆವ್ವ ನಮ್ಮ ಹಣ್ಯಾಗ ಏನೇನ ಬರ್ದಾಳೋ ಏನೋ? ಈ ಕಣ್ಣಿದ ಇನ್ನೂ ಏನೇನು ಕಾಣ್ಬೇಕಾಗೈತೆ ಏನೋ? ಎಲ್ಲಾ ನಮ್ಮಪ್ಪ ಆ ಶಿವನಿಚ್ಛೆ. ಅಂಥ ಶಿವಗ ವಿಧಿಕಾಟ ತಪ್ಪಿಲ್ಲಂತ. ನಮ್ಮಂಥ ನರಮನುಷರದೇನು ಅಲ್ವೇ ಮಂಜಣ್ಣ?”
“ತಂಗಿ ರಂಗಮ್ಮಾ, ಇನ್ನೂ ಒಂದು ವಾರ ವ್ಯಾಳ್ಯಾ ಐತಲ್ಲಬೇ, ಯಾಕ ಸುಮ್ಮ ಸುಮ್ಮನ ಚಿಂತಿ ಮಾಡುತಿ ನೀ. ನಿನ್ನ ಸೊಸಿ ಚೆಲುವಿ ನನ್ನ ಮಗಳು ಅಂತ ತಿಳಕೋ. ನಾನು ಎಷ್ಟಾದ್ರೂ ನಿನ್ಗೆ ಅಣ್ಣ ಅಲ್ಲೇನು? ಈಗ್ಲಾದರೂ ಸಮಾಧಾನ ಮಾಡ್ಕೊಂಡು ಸುಮ್ಮನ ಇರು. ಧೈರ್ಯ ಬಿಡಬ್ಯಾಡಬೇ. ಎದಿ ಒಡ್ಕೊಬ್ಯಾಡ, ತಿಳೀತಿಲ್ಲ?”
ನರಸನಾಯಕ ದೊರೆಗಳ ಅರಮನೆಯಲ್ಲಿ ಜೀತದಾಳಿನಂತೆ ಕೆಲಸ ಮಾಡುತ್ತಿದ್ದ ಸೇವಕ, ಸೇವಕಿಯರಾದ ಮಂಜಣ್ಣ ಮತ್ತು ರಂಗಮ್ಮನ ಮಧ್ಯೆ ಮಾತುಕತೆಗಳು ನಡೆದಿದ್ವು. ಇಬ್ಬರೂ ಬಹಳ ದಿನಗಳಿಂದ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಜಣ್ಣನಿಗೆ ಐವತ್ತರ ಸಮೀಪ ಇದ್ದರೆ, ರಂಗಮ್ಮನಿಗೆ ನಲವತ್ತರ ಆಜುಬಾಜುವಿನ ವಯಸ್ಸು. ರಂಗಮ್ಮನಿಗೆ ಹದಿನೆಂಟರ ಹರೆಯದ ಮಗ ಇದ್ದ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಪ್ಪತ್ತು ವರ್ಷಗಳ ಮೇಲೆ ಆದರೂ ದೊರೆಗಳ ಈ ನಾಡಿನಲ್ಲಿ ದೊರೆಗಳು ಕನ್ಯೆಯರ ಶೀಲದ ಮೀಸಲು ಮುರಿಯುವ ಪದ್ಧತಿಯಿಂದ ಪ್ರಜೆಗಳು ರೋಸಿ ಹೋಗಿದ್ದರು. ಮುಂದುವರಿದ ಜನಾಂಗದವರು ತಮ್ಮ ಮಾನ, ಮರ್ಯಾದೆ ಕಾಪಾಡಿಕೊಳ್ಳಲು ಆ ಊರನ್ನೇ ಬಿಟ್ಟು ದೂರ ಹೋಗಿದ್ದರು. ನರಸನಾಯಕ ದೊರೆಯ ಅಟ್ಟಹಾಸ, ಅತ್ಯಾಚಾರ, ದುರಾಡಳಿತ ಎದುರಿಸುವ ತಾಕತ್ತು ಅಲ್ಲಿ ಯಾರಿಗೂ ಇರಲಿಲ್ಲ.
ನರಸನಾಯಕನ ವಂಶಸ್ಥರಲ್ಲಿ ನರಸನಾಯಕನಂಥ ಕಾಮುಕ ದೊರೆ ಯಾರೂ ಇರಲಿಲ್ಲ. ಅವನ ತಂದೆಯಾಗಲೀ, ತಾತನಾಗಲಿ ಇಂಥ ಅನಿಷ್ಟ ಕೆಟ್ಟ ಪದ್ಧತಿಯನ್ನು ರೂಢಿಯಲ್ಲಿ ತಂದಿರಲಿಲ್ಲ. ನರಸನಾಯಕ ಏರು ಜ್ವನದಲ್ಲಿದಾಗಲೇ ಅವನ ತಂದೆ ತೀರಿಕೊಂಡಿದ್ದರಿಂದ ನರಸನಾಯಕ ಪಟ್ಟಕ್ಕೇರಿದ್ದ. ಅಧಿಕಾರದ ಮದ, ಯೌನದ ಮದ, ಹಣದ ಮದ ಎಲ್ಲವೂ ಅವನನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ. ಅಧಿಕಾರ ವಹಿಸಿಕೊಂಡ ಸ್ವಲ್ಪವೇ ದಿನಗಳಲ್ಲಿ ಮದಿರೆಯ ಮತ್ತಿನಲ್ಲಿ, ಮಾನಿನಿಯರ ಸಂಗದಲ್ಲಿ ವಿಹರಿಸತೊಡಗಿದ. ದಿನದಿಂದ ದಿನಕ್ಕೆ ಅವನ ಸ್ತ್ರೀ ಲೋಲುಪತೆ ದ್ವಿಗುಣವಾಗತೊಡಗಿತ್ತು.
ನರಸನಾಯಕನು ಅಧಿಕಾರಕ್ಕೆ ಬಂದ ಕೆಲವು ದಿನಗಳಲ್ಲೇ ಅವನ ಆಸೆಗೆ ಇಂಬುಕೊಡಲು ಎಂಬಂತೆ ಅವನ ಆಪ್ತರಲ್ಲಿ ಒಬ್ಬರು, ಮೈನರೆತ ಹುಡುಗಿಯರ ಮೀಸಲು ಮುರಿಯುವ ಪದ್ಧತಿಯ ಸಲಹೆ ನೀಡಿದ್ದರು. `ದೊರೆಗಳು ಬಯಸಿದ್ದನ್ನು ಈಡೇರಿಸುವುದು ಪ್ರಜೆಗಳ ಕರ್ತವ್ಯ,’ ಎಂದು ನರಸನಾಯಕನ ಕಿವಿಯಲ್ಲಿ ಊದಿದ್ದರು. ಇದರಿಂದ ನರಸನಾಯಕನಿಗೆ ತಾಜಾ, ತಾಜಾ ಹಕ್ಕಿಗಳನ್ನು ಸವಿಯುವ ಅವಕಾಶ ತಾನಾಗಿಯೇ ಒದಗಿಬಂದಿತ್ತು. ಅರಮನೆಯಲ್ಲಿ ಆರು ಜನ ಅರಸಿಯರಿದ್ದರೂ, ಎಳೆ ವಯಸ್ಸಿನ ಹುಡುಗಿಯರ ದೇಹದ ರುಚಿ ಪ್ರಭುಗಳನ್ನು ಹುಚ್ಚನನ್ನಾಗಿ ಮಾಡಿಸಿತ್ತು. ಸಲಹೆ ನೀಡಿದವನಿಗೆ ಸೂಕ್ತ ಬಹುಮಾನ ನೀಡಿ ಸನ್ಮಾನಿಸಿದ್ದ ದೊರೆ. ಮುಂದಿನ ದಿನಗಳಲ್ಲಿ ದೊರೆ ತನ್ನ ಕಾರ್ಯ ಸಾಧನೆಗೆ ಇಳಿದಾಗ ಹಲವರಿಂದ ಪ್ರತಿಭಟನೆಗಳು ಬಂದವು. ಆದರೆ ನರಸನಾಯಕನ ಹಿಂಬಾಲಕರು ಅವರನ್ನು ಕೊಚ್ಚಿ ಹಾಕಲು ಹಿಂದೆ ಮುಂದೆ ನೋಡಲಿಲ್ಲ. ಊರಲ್ಲಿ ಮೈನರೆಯುವ ಹುಡುಗಿಯರ ಮಾಹಿತಿ ತಿಳಿದುಕೊಳ್ಳಲು ಬೇಹುಗಾರರನ್ನು ನೇಮಿಸಿದ.
ದೊರೆಯ ಆಜ್ಞೆಯನ್ನು ಧಿಕ್ಕರಿಸಿದವರು ದೊರೆ ಕೊಡುವ ಶಿಕ್ಷೆ, ಕಿರುಕುಳಗಳನ್ನು ಅನುಭವಿಸತೊಡಗಿದರು. ಒಂದು ವೇಳೆ ಹುಡುಗಿ ಮದುವೆಯಾದ ನಂತರ ಮೈನರೆತರೆ, ತನ್ನ ಗಂಡನ ಜೊತೆಗೆ ಓಡಿ ಹೋಗುವ ಪ್ರಯತ್ನ ಮಾಡಿದರೆ, ದೊರೆಯ ನೆಚ್ಚಿನ ಬಲಗೈ ಬಂಟರ ಷಡ್ಯಂತ್ರಕ್ಕೆ ಸಿಲುಕಿದವರ ಪಾಡು ನಾಯಿಪಾಡಿಗಿಂತ ಕೀಳಾಗಿರುತ್ತಿತ್ತು. ಹೋರಿಗಳ ವೃಷಣವನ್ನು ಹಿಸುಕುವಂತೆ ಆ ಹುಡುಗರ ವೃಷಣಗಳನ್ನು ಹಿಸುಕಿ ಅವರನ್ನು ಶಾಶ್ವತವಾಗಿ ಷಂಡರನ್ನಾಗಿ ಮಾಡಿಬಿಡುತ್ತಿದ್ದರು. ಜೊತೆಗೆ ಅಂತಹ ಹುಡುಗಿಯರ ಮೇಲೆ ದೊರೆಯಿಂದ ಕ್ರೌರ್ಯದ ಅತ್ಯಾಚಾರವಾಗುತ್ತಿತ್ತು.
ದೊರೆಯ ದುರಾಡಳಿತಕ್ಕೆ ಧ್ವನಿ ಎತ್ತಿದರ ನಾಲಿಗೆ ತುಂಡಾಗುತ್ತಿತ್ತು. ಎಷ್ಟೋ ಅಸಹಾಯಕ, ಮುಗ್ಧ ಹುಡುಗಿಯರು ಮಾನಕ್ಕಂಜಿ ಆತ್ಮಹತ್ಯೆ ಮಾಡಿಕೊಂಡಿರುವುದೂ ಉಂಟು. ಪ್ರಜೆಗಳಿಗೆ ತಮ್ಮನ್ನು ಈ ನರಕದಿಂದ ಪಾರು ಮಾಡಲು ದೇವರಲ್ಲಿ ಮೊರೆ ಇಡುವುದನ್ನು ಬಿಟ್ಟು ಬೇರೆ ಮಾರ್ಗ ಇರಲಿಲ್ಲ.
ದೊರೆಗಳ ಕಿರಿ ರಾಣಿ ಲಾವಣ್ಯಾ ದೇವಿಗೆ ಈಗ ಇಪ್ಪತ್ತೈದರ ತುಂಬು ಹರೆಯ. ಲಾವಣ್ಯಾಳಿಗೆ ಹದಿನೈದು ತುಂಬಿದಾಗ ಆಕೆ ನರಸನಾಯಕನ ಮೈಮನ, ಮನೆ ತುಂಬಿದ್ದಳು. ದೊರೆಗಳೂ ಅವಳ ಸಂಗದಲ್ಲಿ ಇಪ್ಪತ್ತರ ಯುವಕನಂತೆ ಆಗಿಬಿಡುತ್ತಿದ್ದರು. ಹಾಗಿತ್ತು ಲಾವಣ್ಯಾಳ ದೇಹಸಿರಿ. ಐದೂವರೆ ಅಡಿ ಎತ್ತರದ ದಷ್ಟಪುಷ್ಟ ದೇಹದ ಸೊಗಸುಗಾತಿ ಲಾವಣ್ಯಾದೇವಿ. ದೊರೆಗಳದೋ ಆರು ಅಡಿಗೆ ಮೀರಿದ ಎತ್ತರ. ಭೀಮಕಾಯದ, ಹುರಿ ಮೀಸೆಯ, ಚೂಪು ನೋಟದ ಕೆಂಗಣ್ಣುಗಳ ಅಜಾನುಬಾಹು ವ್ಯಕ್ತಿತ್ವ.
ದೊರೆಗಳ ಒತ್ತಡಕ್ಕೆ ಕಟ್ಟುಬಿದ್ದು, ಹದಿನೈದನೇ ವಯಸ್ಸಿಗೆ ಐವತ್ತರ ಹರೆಯದ ದೊರೆಗಳನ್ನು ಮದುವೆಯಾಗಿ ಅವರ ಮನೆ ತುಂಬಿದಾಗ, `ಈ ಮುದಿ ಗೂಬೆ ನನ್ನನ್ನು ತಣಿಸಬಲ್ಲನೇ?’ ಎಂದು ಲಾವಣ್ಯಾದೇವಿಯ ಮನದಲ್ಲಿ ಅಳುಕಿತ್ತು. ಆದರೆ ಮೊದಲ ರಾತ್ರಿಯ ಸಮಾಗಮದಂದು ದೊರೆ ಇಪ್ಪತ್ತರ ಹುಡುಗನಂತೆ ವರ್ತಿಸಿ ಅವಳ ಮೈ, ಮನ ತಣಿಸಿದ್ದರು.
ಅದೊಂದು ರಾತ್ರಿ ದೊರೆಗಳು ರಾಣಿ ಲಾವಣ್ಯಾದೇವಿಯ ಜೊತೆಗೆ ಏಕಾಂತದಲ್ಲಿದ್ದರು. ದೊರೆಗಳಿಗೆ ತನ್ನನ್ನು ತೆರೆದುಕೊಂಡು ಅವರನ್ನು ಶೃಂಗಾರ ಲೋಕಕ್ಕೆ ಕರೆದುಕೊಂಡು ಹೋಗಿ ತಣಿಸಿದ ನಂತರ ದೊರೆಗಳ ಜೊತೆಗೆ ಮಾತಿಗಿಳಿದಿದ್ದಳು ಲಾವಣ್ಯಾದೇವಿ.
“ಪ್ರಭುಗಳನ್ನು ತಣಿಸುವಷ್ಟು ಕಸುವು ಈ ನಿಮ್ಮ ಮುದ್ದಿನ ಕಿರಿ ರಾಣಿಯಲ್ಲಿ ಇಲ್ಲವೇನೋ…..?” ಎನ್ನುತ್ತಾ ಆಕೆ ದೊರೆಗಳ ಹುರಿಮೀಸೆಯ ಜೊತೆಗೆ ಆಟಾಡುತ್ತಾ ತನ್ನ ಹರಿತವಾದ ಕಣ್ಣೋಟವನ್ನು ಅವರ ಕಣ್ಣುಗಳಲ್ಲಿ ನೆಟ್ಟಿದ್ದಳು.
“ನಮ್ಮ ಹೃದಯೇಶ್ವರಿ ಇಂದು ಹೊಸದೇನನ್ನೋ ಹೇಳುವಂತಿದೆ? ನೀವೇ ಹೇಳಿದಂತೆ ನೀವೇ ನನ್ನ ಮುದ್ದಿನ ರಾಣಿ ಅಲ್ಲವೇ? ನೀವು ನಮ್ಮನ್ನು ಸೊಗಸಾಗಿ ತಣಿಸುವುದರಿಂದಲೇ ನಾನು ನಿಮ್ಮೆದುರಿನಲ್ಲಿ ಯುವಕನಂತೆ ಆಗುತ್ತಿರುವುದು. ದೇವಿ, ನಿಮ್ಮಂಥ ತುಂಬು ಯೌವನದ ತರುಣಿಯನ್ನು ತಣಿಸಲು ನಾವು ಹೆಣಗುತ್ತಿದ್ದೇವೆ. ಅದಕ್ಕಾಗಿ ನಾವು ವೈದ್ಯರ ಸಲಹೆಯಂತೆ ಪುಷ್ಟಿಕರ ಆಹಾರ ಸೇವಿಸುತ್ತಿದ್ದೇವೆ ಎಂಬುದು ನಿಮಗೆ ತಿಳಿದ ವಿಷಯವೇ…..”
“ಹೌದೇ…? ನನಗೇನು ಹಾಗೆ ಅನಿಸಿಲ್ಲ ಬಿಡಿ ದೊರೆಗಳೇ…. ನೀವು ಚಿರಯುವಕರೇ ಎಂದು ನನಗೆ ಅನಿಸುತ್ತಿದೆ. ಹತ್ತು ವರ್ಷಗಳ ಹಿಂದೆ ನಾನು ನಿಮ್ಮ ಅರಮನೆಗೆ ಮೊದಲ ಸಲ ಬಂದಾಗ ನಿಮ್ಮ ತಾಕತ್ತು ಹೇಗಿತ್ತೋ ಈಗಲೂ ಹಾಗೆ ಇದೆ. ಇದೀಗ ತಾನೇ ರಸಮಯ ಘಳಿಗೆ ಅನುಭವಿಸಿದೆನಲ್ಲ, ಅದರಲ್ಲಿ ನನಗೇನೂ ವ್ಯತ್ಯಾಸ ಕಂಡಿಲ್ಲ. ನಿಮಗೆ ವಯಸ್ಸು ಏರಿದಂತೆ, ನಿಮ್ಮ ರಸಿಕತೆ, ಶಕ್ತಿ, ತುಂಟಾಟ ಹೆಚ್ಚಾಗುತ್ತಿದೆ ಎಂದು ನನ್ನ ಅನುಭವಕ್ಕೆ ಬಂದಿದೆ,” ಎನ್ನುತ್ತಾ ಲಾವಣ್ಯಾದೇವಿ ದೊರೆಗಳ ಹರವಾದ ಎದೆಯ ಮೇಲೆ ತನ್ನ ಮೃದು ಕೈಗಳನ್ನು ಆಡಿಸತೊಡಗಿದಳು.
“ಮತ್ತೆ ರಾಣಿಯರ ಮನದಲ್ಲಿ ಏನಿದೆಯೋ ಏನೋ…..? ನೀವೇ ನಮಗೆ ತಿಳಿಸುವಂಥರಾಗಿ. ಮೇಲಾಗಿ ನೀವು ನಮ್ಮ ಪೌರುಷದ ಬಗ್ಗೆ ಹೇಳಿದ ಹೊಗಳಿಕೆಯ ಮಾತುಗಳಿಂದ ನಮಗೆ ತುಂಬಾ ಖುಷಿಯಾಗುತ್ತಿದೆ,” ಎನ್ನುತ್ತಾ ದೊರೆಗಳು ಲಾವಣ್ಯಾದೇವಿಯವರ ಗದ್ದವನ್ನು ಹಿಡಿದು ಆಕೆಯ ಮುಖವನ್ನು ಮೇಲೆತ್ತುತ್ತಾ ಅವಳ ಕಣ್ಣುಗಳಲ್ಲಿ ತಮ್ಮ ದೃಷ್ಟಿ ನೆಟ್ಟರು.
“ತಾವು ಎಷ್ಟಾದರೂ ನನ್ನ ಹೃದಯೇಶ್ವರರಲ್ಲವೇ…..? ತಮ್ಮ ಮಾನಾಪಮಾನ ಕಾಪಾಡುವುದು ನನ್ನ ಕರ್ತವ್ಯವಲ್ಲವೇ….? ತಾವು ದಯವಿಟ್ಟು ಇನ್ನು ಮುಂದೆ ಈ ಮೀಸಲು ಮುರಿಯುವ ಪದ್ಧತಿಯನ್ನು ನಿಲ್ಲಿಸಿದರೆ ನಿಮ್ಮ ಆರೋಗ್ಯಕ್ಕೂ, ಪ್ರಜೆಗಳ ಒಳಿತಿಗೂ ಒಳ್ಳೆಯದೆಂದು ನನಗೆ ಅನಿಸುತ್ತಿದೆ.”
“ನಾಡಿನ ದೊರೆಗಳಿಗೆ ಎಲ್ಲವನ್ನೂ ಅನುಭವಿಸುವ ಹಕ್ಕಿದೆ. ಎಳೆಯ ಕುಸುಮದಂತಹ ಹುಡುಗಿಯರು ನನ್ನ ಸಾಂಗತ್ಯದಿಂದ ಪುನೀತಾಗುತ್ತಿದ್ದಾರೆ. ನಂತರ ಕೆಲವರು ನನ್ನ ಸಂಗಮಕ್ಕಾಗಿ ಹಾತೊರೆಯುತ್ತಿದ್ದಾರೆ. ಅದಕ್ಕಾಗಿ ರಾಣಿಯವರು ಈ ವಿಷಯದಲ್ಲಿ ತಲೆಹಾಕಬಾರದು ಎಂದು ನಿಮಗೆ ಹೇಳುವೆ…..”
“ಪ್ರಭುಗಳೇ ಇದು ನೀತಿಬಾಹಿರ ಅಲ್ಲವೇ…..?”
“ಅಂದರೆ…..?”
“ಪ್ರಭುಗಳೇ, ನನಗೂ ಇಲ್ಲಿಯವರೆಗೆ ಅಂತಹ ತಿಳಿವಳಿಕೆ ಇರಲಿಲ್ಲ. ಈಗ ಜನರಾಡುವ ಮಾತುಗಳು ನನ್ನ ಕಿವಿಗೆ ಬೀಳುತ್ತಿರುವುದರಿಂದ ಸರಿ, ತಪ್ಪಿನ ಬಗ್ಗೆ ಅರ್ಥವಾಗತೊಡಗಿದೆ. ತಾವು ಇದನ್ನು ಪರಾಮರ್ಶಿಸಬೇಕು.”
“ದೇವಿಯವರಿಗೆ ಹೆದರಿಕೆಯಾಗಿದೆ ಎಂದು ನನಗೆ ಅನಿಸುತ್ತಿದೆ…?”
“ಹಾಗೇನೂ ಇಲ್ಲ ದೊರೆಗಳೇ, ಆದರೂ ನೊಂದ ಜನರ ಶಾಪ ನಮಗೆ ತಟ್ಟಬಹುದು ಎಂದೂ ಅನಿಸತೊಡಗಿದೆ. ಇದು ತಮ್ಮ ಗೌರವ, ಘನತೆಗಳಿಗೂ ಕುಂದು ತರುತ್ತಿದೆ. ಜನರಲ್ಲಿ ಈಗೀಗ ತಿಳಿವಳಿಕೆ ಮೂಡುತ್ತಿದೆ. ಪ್ರತಿಭಟನೆಯಿಂದ ಜನ ರೊಚ್ಚಿಗೇಳಬಹುದು. ಅನಾಹುತ ಅಥವಾ ದುರಂತವಾಗುವುದಕ್ಕಿಂತ ಮೊದಲೇ ನಾವು ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ನನ್ನ ಅನಿಸಿಕೆ. ದೊರೆಗಳ ಪ್ರತಿ ಉಸಿರಿನಲ್ಲಿ ನಾನಿರುವೆ ಎಂದು ನಾನು ಅಂದುಕೊಂಡಿರುವೆ….”
“ಛೀ ಹುಚ್ಚೀ….. ಹೆದರಿಕೊಳ್ಳಬೇಡ. ನಮ್ಮ ಉಸಿರಿನಲ್ಲಿ ನೀನೇ ತುಂಬಿರುವೆ ಎಂದು ನಿನಗೂ ತಿಳಿದಿರಲಿ. ಪ್ರಜೆಗಳು ಬಾಲ ಬಿಚ್ಚಿದರೆ ಹೇಗೆ ಕತ್ತರಿಸಬೇಕೆಂದು ಈ ಅನುಭವಿ ದೊರೆಗೆ ತಿಳಿದಿದೆ. ಚಿಂತೆ ಮಾಡಬೇಡ. ಅನಾಹುತ ಆಗುವವರೆಗೆ ದೊರೆಗಳ ಈ ಪಿಸ್ತೂಲು ಸುಮ್ಮನೇ ಇರುವುದಿಲ್ಲ, ತಿಳಿಯಿತೇ…..?” ಎಂದು ಒಮ್ಮಿದೊಮ್ಮೆಲೇ ಲಾವಣ್ಯಾದೇವಿಯೊಂದಿಗೆ ಏಕವಚನಕ್ಕಿಳಿದ ದೊರೆಗಳು, ಆಕೆಯನ್ನು ಸಮಾಧಾನ ಮಾಡಲೆಂಬಂತೆ ಮುದ್ದು ಮಾಡುತ್ತಾ, ಆಕೆಯ ಎದೆಯಲ್ಲಿ ಮುಖವಿರಿಸಿ ಸಂಭ್ರಮಿಸತೊಡಗಿದರು.
ದೊರೆಗಳು ತನ್ನೆದೆಯಲ್ಲಿ ಮುಖವಿರಿಸಿದರೆ ಅವರನ್ನು ಮತ್ತೊಂದು ಸಾರಿ ಶೃಂಗಾರ ಲೋಕಕ್ಕೆ ಕರೆದುಕೊಂಡು ಹೋಗಬೇಕೆಂಬುದು ಅವರ ಅಭಿಲಾಷೆ ಎಂದು ಲಾವಣ್ಯಾದೇವಿಗೆ ತಿಳಿದ ವಿಷಯವಾಗಿದ್ದರಿಂದ, ಮೀಸಲು ಮುರಿಯುವ ವಿಷಯದ ಬಗ್ಗೆ ಇನ್ನೊಂದು ಸಾರಿ ಚರ್ಚಿಸಿದರಾಯಿತು ಎಂದುಕೊಂಡು ರಾಣಿ ದೊರೆಗಳ ಆಸೆಗೆ ಸ್ಪಂದಿಸಿದಳು. ರಾಣಿಯ ಸ್ಪಂದನಕ್ಕೆ ದೊರೆಗಳ ಮೈ, ಮನ ಎರಡೂ ಸಂತೃಪ್ತಗೊಂಡಿದ್ದರಿಂದ ರಸ ಘಳಿಗೆಯ ಅಮಲಿನಲ್ಲಿ ದೊರೆಗಳು ಪಕ್ಕಕ್ಕೆ ಸರಿದು ನಿದ್ರಾದೇವಿಗೆ ಶರಣಾದರು.
ಅಂಗಾತ ಮಲಗಿದ್ದ ಲಾವಣ್ಯಾದೇವಿಯ ಮೈ, ಮನಸ್ಸು ತಣಿದಿದ್ದರೂ, ಮನಸ್ಸು ವಿಚಾರಗಳ ತಾಕಲಾಟದಲ್ಲಿ ಮುಳುಗಿದ್ದರಿಂದ ನಿದ್ದೆ ಬೇಗ ಬರಲಿಲ್ಲ. ಮಗುವಿನಂತೆ ಮಲಗಿ ನಿದ್ರಿಸುತ್ತಿದ್ದ ದೊರೆಗಳ ಮುಖವನ್ನೇ ದಿಟ್ಟಿಸತೊಡಗಿದಳು. `ಹೇಗಾದರೂ ಮಾಡಿ ದೊರೆಗಳ ಮನಕ್ಕೆ ನಾಟುವಂತೆ ಮಾಡಿ, ಈ ಮೀಸಲು ಮುರಿಯುವ ಪದ್ಧತಿಯನ್ನು ನಿಲ್ಲಿಸಬೇಕು. ಇನ್ನು ಮೂರು ದಿನಗಳಲ್ಲಿ ದೊರೆಗಳಿಗೆ ಅರವತ್ತು ತುಂಬುತ್ತಿದೆ. ಅಂದು ಭರ್ಜರಿ ಸಮಾರಂಭವನ್ನೇ ಏರ್ಪಡಿಸಿದ್ದಾರೆ. ಹೌದು…. ನಮ್ಮ ಅರಮನೆಯ ಕೆಲಸದ ರಂಗಮ್ಮ ಹದಿನೈದು ದಿನಗಳಿಂದ ಏಕೋ ತುಂಬಾ ಚಿಂತಿತಳಾಗಿರುವಂತೆ ತೋರುತ್ತಿದೆ. `ಆಕೆಯ ಮುಖದಲ್ಲಿ ಕಳೆಯೇ ಇಲ್ಲದಂತಾಗಿದೆ. ಆಕೆಯ ಅಣ್ಣನ ಮಗಳು ದೊಡ್ಡವಳಾಗಿದ್ದು, ದೊರೆಗಳಿಗೆ ಅರವತ್ತು ತುಂಬುವ ದಿನವೇ ಆ ಹುಡುಗಿಯ ಮೀಸಲು ಮುರಿಯುವ ಶಾಸ್ತ್ರ ಇದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ರಂಗಮ್ಮ ಮಂಕಾಗಿರುವಂತೆ ತೋರುತ್ತಿದೆ. ಅವಳು ಈಗ ಒಂದು ವಾರದಿಂದ ನನಗೆ ಏನನ್ನೋ ಹೇಳಬೇಕೆಂದು, ಹೇಳಲಾಗದೇ ಒದ್ದಾಡುತ್ತಿರುವಂತಿದೆ. ನಾಳೆ ದೊರೆಗಳಿಗೆ ಇನ್ನೊಮ್ಮೆ ತಿಳಿಸಿ ಹೇಳಬೇಕು. ಹೇಗೂ ನಾಳೆನೂ ದೊರೆಗಳ ರಾತ್ರಿ ವಾಸ್ತವ್ಯ ನನ್ನ ಜೊತೆಗೇ ಇದೆ,’ ಎಂದು ಯೋಚಿಸುತ್ತಾ ರಾಣಿ ಲಾವಣ್ಯಾದೇವಿ ನಿದ್ರೆಗೆ ಶರಣಾದಳು.
ಅಂದು ಮಂಜಣ್ಣ ಮತ್ತು ರಂಗಮ್ಮ ಇಬ್ಬರೂ ಮಧ್ಯಾಹ್ನದ ಊಟದ ನಂತರ ಮಾತುಕತೆಯಲ್ಲಿ ಮುಳುಗಿದ್ದರು. ಇಬ್ಬರ ಮುಖದಲ್ಲೂ ಪ್ರೇತ ಕಳೆ ಇತ್ತು. ಯಾವ ಉತ್ಸಾಹ, ಉಲ್ಲಾಸ ಇರಲಿಲ್ಲ. ನಾಳೆ ಬಿಟ್ಟರೆ, ನಾಡದು ರಾತ್ರಿ ಚೆಲುವಿಯನ್ನು ದೊರೆಗಳಿಗೆ ಒಪ್ಪಿಸಬೇಕಿತ್ತು. ದೊರೆಗಳಿಗೆ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಚೆಲುವಿಯಂಥ ಚೆಂದುಳ್ಳಿ ಎಳೆ ಹುಡುಗಿಯ ಸಂಗವೂ ಇತ್ತು. ಚೆಲುವಿಯ ಅಂದ, ಚೆಂದದ ಬಗ್ಗೆ ತಿಳಿದುಕೊಂಡಿದ್ದ ದೊರೆಗಳು ಅವಳನ್ನು ಸೇರುವ ತವಕದಲ್ಲಿದ್ದರು. ಯಾವಾಗ ನಾಡದು ಬಂದೀತೋ, ಯಾವಾಗ ಚೆಲುವಿ ತನ್ನವಳಾಗುವಳೋ ಎಂಬ ಲೆಕ್ಕಾಚಾರದಲ್ಲಿದ್ದರು.
ಆರು ತಿಂಗಳುಗಳ ಹಿಂದೆ ಮಂಜಣ್ಣನ ಮಗನ ಮದುವೆ ಅವನ ಅಕ್ಕನ ಮಗಳೊಂದಿಗೆ ಆಗಿತ್ತು. ಮದುವೆಯ ನಂತರ ಋತುಮತಿಯಾಗಿದ್ದ ಹೆಂಡತಿಯ ಜೊತೆಗೆ ಅವನ ಮಗ ದೊರೆಗಳಿಂದ ತಪ್ಪಿಸಿಕೊಂಡು ದೂರ ಓಡಿಹೋಗಲು ಪ್ರಯತ್ನಿಸಿ ವಿಫಲನಾಗಿದ್ದ. ಅವರಿಬ್ಬರೂ ದೊರೆಗಳ ಬಂಟರ ಸಂಚಿಗೆ ಸಿಕ್ಕಿ ಹಾಕಿಕೊಂಡಿದ್ದರು. ಹುಡುಗ ಹುಡುಗಿಯರನ್ನು ದೊರೆಗಳ ಮುಂದೆ ಹಾಜರುಪಡಿಸಿದಾಗ, ಮಂಜಣ್ಣ ಪರಿಪರಿಯಾಗಿ ಬೇಡಿಕೊಂಡರೂ ಕ್ರೂರಿ ದೊರೆ ಅವನ ಮಗನ ವೃಷಣಗಳನ್ನು ಹಿಸುಕಿ ಹಾಕಿದ್ದರು. ಅದನ್ನೆಲ್ಲಾ ನೆನೆಸಿಕೊಂಡು ಅಳುತ್ತಿದ್ದ ಮಂಜಣ್ಣನನ್ನು ರಂಗಮ್ಮ ಸಮಾಧಾನಪಡಿಸಿದಳು. ಅಂದು ಇಬ್ಬರೂ ಅದೆಷ್ಟೋ ಹೊತ್ತು ಏನೇನೋ ಮಾತಾಡಿಕೊಂಡರು.
ಮರುದಿನ ಬೆಳಗಿನ ಸಮಯ. ಮುಂಜಾನೆ ಸಮಯದಲ್ಲಿ ದೊರೆಗಳು ಎದ್ದ ನಂತರ ದೊಡ್ಡ ಹಜಾರದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಅರಮನೆಯ ಆಳು ಕಾಳುಗಳೆಲ್ಲಾ ಅವರ ಪಾದಗಳಿಗೆ ಹಣೆ ಹಚ್ಚಿ ನಮಸ್ಕರಿಸುವ ಪದ್ಧತಿ ಬೆಳೆದು ಬಂದಿತ್ತು. ಅಂದೂ ಎಂದಿನಂತೆ ಅರಮನೆಯ ಎಲ್ಲಾ ಆಳು ಕಾಳುಗಳು ದೊರೆಗಳಿಗೆ ನಮಸ್ಕರಿಸಿ, ತಂತಮ್ಮ ಕೆಲಸಗಳಿಗೆ ಹೋಗಿದ್ದರು. ಕೊನೆಯದಾಗಿ ಅಂದು ಉಳಿದವರು ಮಂಜಣ್ಣ ಮತ್ತು ರಂಗಮ್ಮ ಇಬ್ಬರೇ. ಮಂಜಣ್ಣ ದೊರೆಗಳ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ದೊರೆಗಳ ಬಲಪಕ್ಕಕ್ಕೆ ನಿಂತುಕೊಂಡ. ನಂತರ ಬಂದದ್ದು ರಂಗಮ್ಮ. ಅವಳ ಮುಖ ಚಿಂತೆಯಿಂದ ಬಸವಳಿದು ಬಾಡಿಹೋಗಿತ್ತು. ದೊರೆಗೆ ಆಕೆಯ ಸಂಕಟ ಅರ್ಥವಾಗಿತ್ತಾದರೂ, ಕುಹಕದಿಂದ, “ಏನು ರಂಗಮ್ಮಾ….. ಏಕೆ ಸಪ್ಪಗಿರುವಿ? ನಾಳೆ ನಿನ್ನ ಅಣ್ಣನ ಮಗಳ ಭಾಗ್ಯದ ಬಾಗಿಲು ತೆಗೆಯುತ್ತದೆ. ಅದಕ್ಕಾಗಿ ಖುಷಿಪಡುವ ಸಮಯ ಇದು. ಆದರೆ ನೀನೇಕೋ ಮಂಕಾಗಿರುವಿ. ನಿನ್ನಣ್ಣನಂತಹ ಬಡವನ ಮಗಳು ದೊರೆಗಳ ಸಂಗದಿಂದ ಪಾವನಳಾಗುತ್ತಾಳೆ,” ಎಂದು ದೊರೆಗಳು ರಂಗಮ್ಮನನ್ನು ಕೆಣಕುವ ಪ್ರಯತ್ನ ಮಾಡಿದರು.
ರಂಗಮ್ಮ ನಿರ್ಲಿಪ್ತತೆಯಿಂದ ಹೆಜ್ಜೆ ಹಾಕುತ್ತಿದ್ದಳು. ದೊರೆಯ ಕುರ್ಚಿಗೂ, ಅವಳಿಗೂ ನಾಲ್ಕು ಹೆಜ್ಜೆ ಮಾತ್ರವೇ ಅಂತರವಿತ್ತು. ಅಷ್ಟರಲ್ಲಿ ರಂಗಮ್ಮನ ಎದೆಯ ಮೇಲಿದ್ದ ಸೆರಗು ಸರಿದುಹೋಗಿತ್ತು. ಆಕೆಯ ಎದೆಯ ಮೇಲೆ ಕುಪ್ಪಸವೇ ಇರಲಿಲ್ಲ. ಆಕೆ ಅದರ ಕಡೆಗೆ ಲಕ್ಷ್ಯ ಕೊಡದೇ ದೊರೆಗಳ ಪಾದ ನೋಡುತ್ತಾ ಮುನ್ನಡೆಯುತ್ತಿದ್ದಳು. ದೊರೆಗಳು ರಂಗಮ್ಮನ ನಗ್ನ ದೇಹವನ್ನು ಬಿಟ್ಟ ಕಣ್ಣುಗಳಿಂದ ನೋಡತೊಡಗಿದ್ದರು. ರಂಗಮ್ಮ ಹಾಗೇ ಮುಂದೆ ಬಂದು ದೊರೆಗಳ ಪಾದಗಳಿಗೆ ತನ್ನ ಹಣೆ ಹಚ್ಚಿದಳು.
ಅಷ್ಟರಲ್ಲಿ ಮಂಜಣ್ಣನ ಹರಿತವಾದ ಚಾಕು ಕೆಲಸ ಮಾಡಿತ್ತು. ಮಂಜಣ್ಣ, “ಜೈ ಜಗದಂಬೆ,” ಎಂದು ಚೀರುತ್ತಾ ದೊರೆಯ ಕುತ್ತಿಗೆಗೆ ಚಾಕು ಹಾಕಿದ್ದ. ಮಂಜಣ್ಣನ ದಾಳಿಯಿಂದ ಎಚ್ಚೆತ್ತುಕೊಂಡ ದೊರೆಗಳು ತಮ್ಮ ನಡುವಿನ ಪಟ್ಟಿಗೆ ಕೈ ಹಾಕಿದಾಗ ಅವರಿಗೆ ಅಲ್ಲಿ ಪಿಸ್ತೂಲು ಸಿಗಲಿಲ್ಲ. ಹಾಸಿಗೆಯಿಂದ ಎದ್ದು ಬರುವಾಗ ಮಂಚದ ದಿಂಬಿನಡಿ ಇಟ್ಟಿದ್ದ ಪಿಸ್ತೂಲನ್ನು ಅಂದು ತಂದಿರಲಿಲ್ಲ. ಅಷ್ಟರಲ್ಲಿ ಮಂಜಣ್ಣ ತನ್ನ ಕೈಯಲ್ಲಿದ್ದ ಚಾಕುವಿನಿಂದ ದೊರೆಗಳ ಕುತ್ತಿಗೆಯನ್ನು ಮತ್ತೊಮ್ಮೆ ಸೀಳಿ, “ಹರಹರ ಮಹಾದೇವ. ಜೈ ಜಗದಂಬೆ…” ಎಂದು ಅವನು ಗಟ್ಟಿಯಾಗಿ ಕೂಗುತ್ತಿದ್ದ.
ದೊರೆಗಳ ಕುತ್ತಿಗೆಯಿಂದ ರಕ್ತ ಚಿಲ್ಲೆಂದು ನಾಲ್ಕೂ ದಿಕ್ಕಿಗೆ ಚಿಮ್ಮಿತು. ಮಂಜಣ್ಣನ ದಾಳಿಗೆ ತತ್ತರಿಸಿದ ದೊರೆಗಳ ದೇಹ ನೆಲಕ್ಕುರುಳಿ ಸ್ವಲ್ಪ ಹೊತ್ತಿನಲ್ಲೇ ನಿಸ್ತೇಜವಾಯಿತು. ರಕ್ತದ ಮಡುವಿನಲ್ಲಿ ಕಣ್ಣುಗಳನ್ನು ತೆರೆದುಕೊಂಡು ಬಿದ್ದಿದ್ದ ನರಸನಾಯಕನ ದೇಹ ಭಯಾನಕವಾಗಿ ಕಾಣುತ್ತಿತ್ತು. ಸೆರಗನ್ನು ಹೊದ್ದುಕೊಂಡ ರಂಗಮ್ಮ, “ಪಾಪಿಗೆ ತಕ್ಕ ಪ್ರಾಯಶ್ಚಿತ್ತವಾಯ್ತು. ನಮ್ಮ ನಾಡಿನ ಕಂಟಕ ಅಳಿಯಿತು. ದೊರೆ ತಾವು ಮಾಡಿದ್ದು ತಾನುಂಡ. ಮಂಜಣ್ಣನಿಗೆ ಜಯವಾಗಲಿ….” ಎನ್ನುತ್ತಾ ದೊರೆಯ ಶವವನ್ನು ಸುತ್ತುತ್ತಾ, ಕೇಕೆ ಹಾಕಿ ಕುಣಿಯತೊಡಗಿದಳು. ಮಂಜಣ್ಣನ ಶೌರ್ಯ, ಸಾಹಸಗಳ ಅಪೂರ್ವ ಸಾಧನೆಯನ್ನು ಜನ ಹಾಡಿ ಹೊಗಳತೊಡಗಿದರು.