ಆಕಸ್ಮಿಕ ಜಗಳದ ಕಾರಣ ಪರಸ್ಪರ ಪರಿಚಿತರಾದ ನಿಖಿತಾ ಮತ್ತು ಪ್ರಣವ್, ಮುಂದೆ ತಮ್ಮದೇ ಧೋರಣೆಗಳಿಂದಾಗಿ ವಿರುದ್ಧ ಧ್ರುವಗಳಾಗಿ ಸಿಡಿದು ನಿಂತರು. ಹೀಗಿದ್ದರೂ ನಿಖಿತಾ ಪ್ರಣವ್ ನನ್ನೇ ಮದುವೆ ಆಗಬೇಕಾದ ಪರಿಸ್ಥಿತಿ ಎದುರಾದದ್ದು ಹೇಗೆ….? ಮುಂದೆ ಅವರ ದಾಂಪತ್ಯ ಏನಾಯಿತು…?

ನಿಖಿತಾ ಅಮ್ಮನ ಮುದ್ದಿನ ಮಗಳು, ತುಂಬಾ ಬುದ್ಧಿವಂತೆ, ಎಂ.ಬಿ.ಎನಲ್ಲಿ ಗೋಲ್ಡ್ ಮೆಡಲಿಸ್ಟ್, ಛಲವಾದಿ. ತನ್ನ ಸುತ್ತ ಏನಾದರೂ ತಪ್ಪು ನಡೆಯುತ್ತಿದ್ದರೆ ಅದನ್ನು ಸಹಿಸುತ್ತಿರಲಿಲ್ಲ. ನಿಖಿತಾಗೆ ತಂದೆ ಇರಲಿಲ್ಲ. ಅವಳಿಗೆ ಎರಡು ವರ್ಷ ಇರುವಾಗ ಅಪಘಾತದಲ್ಲಿ ನಿಧನರಾಗಿದ್ದರು. ಆಗಿನಿಂದ ತಾಯಿಯೇ ಒಂಟಿಯಾಗಿ ಸಾಕಿ ಬೆಳೆಸಿದರು. ಅವಳಿಗೆ ತಾಯಿ ಎಂದರೆ ಅಚ್ಚುಮೆಚ್ಚು. ನಿಖಿತಾಳ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮಗಳನ್ನು ಸಾಕಿ ಸಲಹಿದರು. ಅವಳು ಎಂದೂ ತನ್ನ ತಾಯಿಯನ್ನು ನೋಯಿಸುತ್ತಿರಲಿಲ್ಲ.

ಪ್ರಣವ್ ತುಂಬಾ ಶ್ರೀಮಂತ ಕುಟುಂಬದ ಒಬ್ಬನೇ ಮುದ್ದಿನ ಮಗ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ತಾತ, ಅಜ್ಜಿ, ಇಬ್ಬರು ತಂಗಿಯರು ಇರುವ ದೊಡ್ಡ ಕುಟುಂಬ ಅವನದು. ಅವನನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದರು. ಅವನು ಏನು ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಅದರಿಂದ ಅವನಲ್ಲಿ ದುಡ್ಡಿನ ಅಹಂಕಾರ ತುಂಬಿಕೊಂಡಿತು. ದುಡ್ಡು ಒಂದು ಇದ್ದರೆ ಏನು ಬೇಕಾದರೂ ಪಡೆಯಬಹುದು. ದುಡ್ಡೇ ಎಲ್ಲಾ ಎಂದು ಅವನ ಭಾವನೆಯಾಗಿತ್ತು. ಆದರೆ ತನ್ನ ಕುಟುಂಬ ಎಂದರೆ ಪ್ರಾಣ ಅವನಿಗೆ. ತನ್ನ ಪರಿವಾರದ ಜನರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ತಂದೆಯ ದೊಡ್ಡ ಕಂಪನಿಯನ್ನು ತುಂಬಾ ಚಿಕ್ಕ ವಯಸ್ಸಿನಲ್ಲೇ ಯಶಸ್ವಿಯಾಗಿ ಮುನ್ನಡೆಸುತ್ತಿದ್ದ.

ಒಂದು ದಿನ ಪ್ರಣವ್ ಕಾರಿನಲ್ಲಿ ಬರುವಾಗ ಸ್ವಲ್ಪ ಹಿಡಿತ ತಪ್ಪಿ ಅಜ್ಜಿಯೊಬ್ಬರಿಗೆ ಡಿಕ್ಕಿ ಹೊಡೆದುಬಿಟ್ಟ. ಅಜ್ಜಿ ಕೆಳಗೆ ಬಿದ್ದುಬಿಟ್ಟರು. ಅಲ್ಲೇ ಹೋಗುತ್ತಿದ್ದ ನಿಖಿತಾ ಅಜ್ಜಿಯ ನೆರವಿಗೆ ಧಾವಿಸಿದಳು. ಸಧ್ಯ ಎಂದು ಗಾಡಿಯಿಂದ ಇಳಿದ ಪ್ರಣವ್, ಪೆಟ್ಟು ದೊಡ್ಡದೇನೂ ಆಗಲಿಲ್ಲ ಎಂದು ನಿಟ್ಟುಸಿರುಬಿಟ್ಟ ಕಾರಿನಿಂದ ಇಳಿದು ಬಂದ ಪ್ರಣವ್, “ನೋಡಿಕೊಂಡು ಬರಬಾರದಾ…? ದುಡ್ಡಿಗಾಗಿ ಬೇಕೂ ಅಂತಲೇ ಅಡ್ಡ ಬಂದು ಹೀಗೆ ನಾಟಕ ಆಡ್ತೀರಾ….” ಎಂದು ಅಜ್ಜಿಯ ಬಳಿ ಕಠೋರವಾಗಿ ಕೇಳಿದ.

ನಿಖಿತಾಗೆ ಎಲ್ಲಿಲ್ಲದ ಕೋಪ ಬಂದಿತು. ಅವಳು ನೇರವಾಗಿ ಅವನ ಬಳಿ ಬಂದು, “ರೀ ಮಿಸ್ಟರ್‌, ತಪ್ಪು ನಿಮ್ಮದು! ಅದನ್ನು ಮುಚ್ಚಿಟ್ಟುಕೊಳ್ಳಲು ಹೀಗೆ ಅವರ ಮೇಲೆ ತಪ್ಪು ಹೇಳ್ತೀರಾ….? ನಿಮಗೆ ದುಡ್ಡಿನ ದುರಹಂಕಾರ…..” ಎಂದು ಅವನೊಂದಿಗೆ ವಾಗ್ವಾದ ಮಾಡಿದಳು.

ಅಲ್ಲಿ ತುಂಬಾ ಜನ ಸೇರಿದರು. ಆಮೇಲೆ ಇನ್ನೂ ಸುಮ್ಮನೆ ದೊಡ್ಡ ರಂಪ ಆಗುತ್ತದೆ ಎಂದು ನೆನೆಸಿದ ಪ್ರಣವ್, “ಸರಿ ಎಷ್ಟು ಬೇಕಾದರೂ ದುಡ್ಡು ಕೊಡ್ತೀನಿ ಬಿಟ್ಟುಬಿಡಿ,” ಎಂದ.

ಅದಕ್ಕೆ ಒಪ್ಪದ ನಿಖಿತಾ,“ಗುದ್ದಿ ಅಜ್ಜಿಯನ್ನು ಕೆಳಗೆ ಬೀಳಿಸಿದ್ದೀರಾ…. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ಚಿಕಿತ್ಸೆ ಕೊಡಿಸಿ. ನಂತರ ಅವರನ್ನು ಅವರ ಮನೆಗೆ ಬಿಟ್ಟುಹೋಗಬೇಕು,” ಎಂದಳು.

ಅದಕ್ಕೆ ಪ್ರಣವ್ ಒಪ್ಪಲಿಲ್ಲ. ಅದಕ್ಕೆ ನಿಖಿತಾ, “ನೀವು ಒಪ್ಪದೇ ಇದ್ದರೆ ನಿಮ್ಮ ಕಾರಿನ ಮುಂದೆ ಕುಳಿತು ಪ್ರತಿಭಟನೆ ಮಾಡ್ತೀನಿ. ಮುಂದೆ ಹೋಗಲು ಬಿಡುವುದಿಲ್ಲ. ಮೀಡಿಯಾದವರಿಗೆ ಹೇಳ್ತೀನಿ,” ಎಂದು ಪಟ್ಟುಹಿಡಿದು ಅವನು ಅಜ್ಜಿಯನ್ನು ಕರೆದುಕೊಂಡು ಹೋಗುವವರೆಗೂ ಬಿಡಲಿಲ್ಲ.

ಪ್ರಣವ್ ಬೇರೆ ದಾರಿಯಿಲ್ಲದೆ ಅಜ್ಜಿಯನ್ನು ಕಾರಿನಲ್ಲಿ ಕುರಿಸಿಕೊಂಡ. ಅಜ್ಜಿ ಒಬ್ಬರೇ ಇದ್ದ ಕಾರಣ ನಿಖಿತಾ ಕೂಡ ಅವರೊಡನೆ ಹೊರಟಳು.

ಅಜ್ಜಿ ಮತ್ತು ನಿಖಿತಾರನ್ನು ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಬಂದ ಪ್ರಣವ್ ಅಜ್ಜಿಗೆ ಚಿಕಿತ್ಸೆ ಕೊಡಿಸಿದ. ಅಜ್ಜಿಯ ಕಾಲಿಗೆ ಪ್ಲಾಸ್ಟರ್‌ ಹಾಕಿ, ಒಂದು ತಿಂಗಳು ರೆಸ್ಟ್ ನಲ್ಲಿ ಇರಲು ಡಾಕ್ಟರ್‌ ಹೇಳಿದರು. ನಂತರ ನಿಖಿತಾಳ ನೆರವಿನಿಂದ ಅಜ್ಜಿಯನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಅವರ ಮನೆಯವರ ಬಳಿ ಸಾರಿ ಕೇಳಿದ. ಅಜ್ಜಿಯ ಮನೆಯಲ್ಲಿ ಎಲ್ಲರೂ ನಿಖಿತಾಳನ್ನು ಹೊಗಳಿ ತುಂಬಾ ಧನ್ಯವಾದಗಳನ್ನು ಹೇಳಿದರು. ಇದನ್ನು ಕಂಡು ಪ್ರಣವ್ ಗೆ ನಿಖಿತಾಳ ಮೇಲೆ ಆಕ್ರೋಶ ಇನ್ನೂ ಜಾಸ್ತಿಯಾಯಿತು.

`ಇವಳಿಂದ ಇವತ್ತು ಒಂದು ಪ್ರಾಜೆಕ್ಟ್ ತಪ್ಪಿ ಹೋಯಿತು. ಲಕ್ಷಾಂತರ ರೂಪಾಯಿ ನಷ್ಟವಾಯಿತು. ಒಂದು ಚಿಕ್ಕ ವಿಷಯಕ್ಕೆ ನನ್ನನ್ನು ಎಷ್ಟು ಅವಮಾನ ಮಾಡಿಬಿಟ್ಟಳು. ಇವಳನ್ನು ಮಾತ್ರ ಸುಮ್ಮನೆ ಬಿಡಬಾರದು. ಸರಿಯಾದ ಶಾಸ್ತಿ ಮಾಡಲೇಬೇಕು. ಅದನ್ನು ಅವಳು ಜೀವನ ಪೂರ್ತಿ ಮರೆಯಬಾರದು. ಅಷ್ಟು ಅವಳನ್ನು ಕಾಡಬೇಕು,’ ಎನ್ನುವ ಕೆಟ್ಟ ಹಠ ಅವನಿಗೆ ಮನದಲ್ಲಿ ಬಂದುಬಿಟ್ಟಿತು. ಪ್ರಣವ್ ತನ್ನ ಮನದಲ್ಲಿ ಏನಾದರೂ ಹಠ ತೊಟ್ಟರೆ ಎಷ್ಟೇ ಕಷ್ಟವಾದರೂ ಅದನ್ನು ಪೂರ್ತಿ ಯಶಸ್ವಿಯಾಗುವವರೆಗೂ ಬಿಡುತ್ತಿರಲಿಲ್ಲ. ಇದು ಅವನ ಸ್ವಭಾವ.

ನಿಖಿತಾಳೂ ಅಷ್ಟೇ.  `ಎಷ್ಟು ಅಹಂಕಾರ ಅವನಿಗೆ. ತಪ್ಪು ಮಾಡಿದರೂ ಸ್ವಲ್ಪ ಸೌಜನ್ಯವಿಲ್ಲದೆ ವರ್ತಿಸಿದ,’ ಅವಳಿಗೂ ಅವನ ಬಗ್ಗೆ ದ್ವೇಷ ಹುಟ್ಟಿತು. ಇಬ್ಬರೂ ಅಜ್ಜಿಯ ಮನೆಯಿಂದ ಹೊರಟರು. ಆಗ ಅಜ್ಜಿಯ ಮನೆಯವರೆಲ್ಲ ಪ್ರಣವ್ ಬಳಿ, ನಿಖಿತಾಳನ್ನು ಅವಳ ಮನೆಗೆ ಬಿಡಲು ಹೇಳಿದರು.

ಅದನ್ನು ಕೇಳಿ ಪ್ರಣವ್, “ನಾನೇನು ಅವರ ಡ್ರೈವರ್‌ ಅಲ್ಲ. ನಾನು ಒಂದು ದೊಡ್ಡ ಕಂಪನಿಯ ಸಿಇಓ. ನನಗೆ ಸಾಕಷ್ಟು ಕೆಲಸ ಇದೆ. ಇದೇ ನನ್ನ ಕೆಲಸವಲ್ಲ,” ಎಂದು ಕೋಪದಿಂದ ಕೆರಳಿದ.

ಅಷ್ಟರಲ್ಲಿ ನಿಖಿತಾ, “ಇಂಥವರ ಗಾಡಿ ಹತ್ತಿದರೆ ಮತ್ತೆ ಯಾವಾಗ ಎಲ್ಲಿ ಬೀಳಿಸುತ್ತಾರೋ ಯಾರಿಗೆ ಗೊತ್ತು? ಬೇಡವೇ ಬೇಡ. ನಮ್ಮ ಮನೆ ಇಲ್ಲೇ ಹತ್ತಿರವೇ ಇದೆ. ನಾನೇ ಹೋಗ್ತೀನಿ,” ಎಂದು ಹೇಳಿ ತಿರುಗಿ ಕೂಡ ನೋಡದೆ ಹೊರಟುಬಿಟ್ಟಳು.

ಅವಳ ಪ್ರತ್ಯುತ್ತರ ಕೇಳಿ ಪ್ರಣವ್ ಮತ್ತೂ ಕುದ್ದು ಹೋದ. ಯಾರ ಬಳಿಯೂ ಏನೂ ಹೇಳದೆ ಸಿಟ್ಟಿನಿಂದ ಕಾರನ್ನು ಸ್ಟಾರ್ಟ್‌ ಮಾಡಿ ಹೊರಟುಹೋದ.

ರಸ್ತೆಯ ತಿರುವಿನಲ್ಲಿ ನಿಖಿತಾ ಕಾಣಿಸಿದಳು. ಅವಳ ಬಳಿ ಕಾರು ನಿಲ್ಲಿಸಿ ಕಾರಿನಿಂದಲೇ, “ನಿನಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ. ಈ ಪ್ರಣವ್ ಯಾರೆಂದು ತೋರಿಸ್ತೀನಿ!” ಎಂದ.

“ಆಯಿತು. ನಿನ್ನ ಕೈಯಲ್ಲಿ ಆಗಿದ್ದು ನೀನು ಮಾಡು. ನಾನೂ ನೋಡೇ ಬಿಡ್ತೀನಿ. ಯಾವತ್ತೂ ಸತ್ಯಕ್ಕೆ ಜಯ ಸಿಗೋದು. ಮೊದಲು ನೀನು ಒಳ್ಳೆಯ ಬುದ್ಧಿ ಕಲಿ. ಆಮೇಲೆ ನನಗೆ ಹೇಳಿಕೊಡುವಂತೆ. ಗೆಟ್‌ ಔಟ್‌ ಫ್ರಮ್ ಮೈ ಸೈಟ್‌,” ಎಂದು ಕೋಪದಿಂದ ಹೇಳಿ ಮುಖ ತಿರುಗಿಸಿಕೊಂಡು ಹೊರಟಳು. ಅವನೂ ಹೊರಟ.

ಹೀಗೆ ಇಬ್ಬರಿಗೂ ಪರಸ್ಪರರ ಮೇಲೆ ತುಂಬಾ ದ್ವೇಷ ಉಂಟಾಯಿತು. ಪ್ರಣವ್ ಗೆ ಅವಳನ್ನು ಅಂದಿನ ಘಟನೆಯನ್ನು ಮರೆಯಲು ಆಗುತ್ತಲೇ ಇರಲಿಲ್ಲ. ಪ್ರತಿದಿನ ಪ್ರತಿ ಕ್ಷಣ ಅದನ್ನು ನೆನೆದು ಅವನಿಗೆ ನೆಮ್ಮದಿಯೇ ಇಲ್ಲವಾಯಿತು. ಅವಳ ಮೇಲಿನ ಕೋಪದಿಂದ ಕುದಿಯುತ್ತಿದ್ದ. ಅವಳನ್ನು ಪ್ರತಿ ದಿನ ಪ್ರತಿಕ್ಷಣ ಒದ್ದಾಡುವ ಹಾಗೆ ಮಾಡಬೇಕು. ಅವಳಿಗೆ ಬುದ್ಧಿ ಕಲಿಸಬೇಕು ಎಂದರೆ ದೂರವಿದ್ದರೆ ಆಗದು. ಅವಳನ್ನು ಮದುವೆಯಾದರೆ ಆಗ ಅವಳು ಪ್ರತಿದಿನ ಪ್ರತಿಕ್ಷಣ ನನ್ನ ಜೊತೆಯಲ್ಲೇ ಇರುತ್ತಾಳೆ. ಆಗ ಅವಳನ್ನು ಕ್ಷಣ ಕ್ಷಣವೂ ಹಿಂಸಿಸಬಹುದು. ನನಗೆ ಇಷ್ಟವಿಲ್ಲದೆ ಇದ್ದರೂ, ಕಷ್ಟವಾದರೂ ಹಾಗೇ ಮಾಡಬೇಕು. ಅದೊಂದೇ ಅವಳಿಗೆ ಸರಿಯಾದ ಪಾಠ ಆಗುವುದು, ನಾಳೆ ಅವಳ ಮುಂದೆ ಪ್ರೀತಿಯ ನಾಟಕವಾಡಬೇಕು. ಅವಳ ಬಳಿ ಕ್ಷಮೆ ಕೇಳಿ ನನ್ನನ್ನು ಮದುವೆ ಆಗು. ಐ ಲವ್ ಯೂ ಎಂದು ಹೇಳಿ ನಂಬಿಸಬೇಕು, ಎಂದು ಮನದಲ್ಲೇ ತಯಾರಿ ಮಾಡಿಕೊಂಡ.

ಒಂದು ವಾರ ಕಳೆಯಿತು. ಒಂದು ದಿನ ನಿಖಿತಾಳ ಬಳಿ ಬಂದು ಅವಳ ಕ್ಷಮೆ ಕೇಳಿ, “ನೀನು ನನ್ನ ಕಣ್ಣು ತೆರೆಸಿದೆ. ನನಗೆ ಒಳ್ಳೆಯ ರೀತಿಯಲ್ಲಿ ಬದುಕುವುದನ್ನು ಹೇಳಿಕೊಟ್ಟೆ. ಜೀವನ ಪೂರ್ತಿ ನನ್ನನ್ನು ಹೀಗೆ ತಿದ್ದಿ ಜೊತೆಯಲ್ಲಿ ಇರ್ತೀಯಾ…? ನನ್ನನ್ನು ಮದುವೆ ಆಗು. ಐ ಲವ್ ಯೂ ಸೋ ಮಚ್‌,” ಎಂದು ಹೇಳಿದ.

ನಿಖಿತಾಳಿಗೆ ಪ್ರಣವ್  ವರ್ತನೆ ತುಂಬಾ ವಿಚಿತ್ರ ಎನಿಸಿತು. `ತನ್ನ ನೆರಳು ಕಂಡರೇ ಉರಿದು ಬೀಳುವವನು, ತನ್ನನ್ನು ಪ್ರೀತಿಸುತ್ತಾನಾ…? ಸಾಧ್ಯವೇ ಇಲ್ಲ. ಅವನ ಮನಸ್ಸಿನಲ್ಲಿ ಬೇರೆ ಏನೋ ಇದೆ ಅನಿಸುತ್ತೆ. ಇರಲಿ ಅವನಿಗೆ ಸರಿಯಾಗಿ ಮಾಡ್ತೀನಿ,’ ಎಂದು ಮನಸ್ಸಿನಲ್ಲಿ ಅಂದುಕೊಂಡು ಅವನಿಗೆ, “ಇಲ್ಲ…. ನಮ್ಮಿಬ್ಬರ ಸ್ವಭಾವ ಆಲೋಚನೆಗಳು ಎರಡೂ ತದ್ವಿರುದ್ಧ. ಅವು ಎಂದಿಗೂ ಹೊಂದಾಣಿಕೆಯಾಗಲು ಸಾಧ್ಯವಿಲ್ಲ. ಇದರಿಂದ ಇಬ್ಬರೂ ಸಂತೋಷದಿಂದ ಇರಲು ಆಗುವುದಿಲ್ಲ. ನನಗೆ ಇದು ಇಷ್ಟವಿಲ್ಲ,” ಎಂದು ನಿರಾಕರಿಸಿದಳು.

ಪ್ರಣವ್ ಗೆ ಮತ್ತೆ ಸೋಲು ಅವಮಾನವಾಯಿತು. ಅವನು ಒಳಗೊಳಗೆ ಕುದ್ದು ಹೋದ. ಹೇಗಾದರೂ ಅವಳನ್ನು ಮದುವೆಯಾಗಿ ಅವಳಿಗೆ ನರಕ ತೋರಿಸಲೇಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿದ.

ಮನೆಗೆ ಬಂದ ಪ್ರಣವ್ ಎಲ್ಲರ ಮುಂದೆ ನಾಟಕ ಆಡಿದ. “ಅವಳನ್ನು ನಾನು ತುಂಬಾ ಪ್ರೀತಿಸ್ತೀನಿ. ಅವಳಿಲ್ಲದೇ ನನಗೆ ಬದುಕುವುದೇ ಬೇಡ,” ಎಂದು ಹೇಳಿ ಮನೆಯವರನ್ನೆಲ್ಲ ನಂಬಿಸಿದ.

“ಸರಿ ನೀನು ಯೋಚಿಸಬೇಡ. ನಾವು ಅವರ ಮನೆಯವರ ಹತ್ತಿರ ಮದುವೆಯ ಮಾತುಕತೆ ನಡೆಸಿ. ಮದುವೆ ನಿಶ್ಚಯಿಸಿಕೊಂಡು ಬರ್ತೀವಿ,” ಎಂದು ಆಶ್ವಾಸನೆಯನ್ನು ಅವನ ಮನೆಯವರೆಲ್ಲ ಕೊಟ್ಟು ಅವನನ್ನು ಸಮಾಧಾನಪಡಿಸಿದರು.

ಎರಡು ದಿನ ಬಿಟ್ಟು ನಿಖಿತಾಳ ಮನೆಗೆ ಪ್ರಣವ್ ನ ಮನೆಯವರೆಲ್ಲಾ ಬಂದರು. ನೋಡಿದರೆ ನಿಖಿತಾಳ ತಾಯಿ ಮತ್ತು ಪ್ರಣವ್ ತಾಯಿ ಅತ್ಯಂತ ಆತ್ಮೀಯ ಗೆಳತಿಯರು. ಮದುವೆಯ ಬಳಿಕ ಸಂಪರ್ಕವಿರದೆ ಇಬ್ಬರೂ ದೂರವಾಗಿದ್ದರು. ಅವರಿಬ್ಬರಿಗೂ ಪರಸ್ಪರರನ್ನು ಕಂಡು ಬಹಳ ಸಂತೋಷಯವಾಯಿತು.  ಹಾಗೆ ಮಾತನಾಡುತ್ತಾ ಕುಳಿತಿರುವಾಗ ನಿಖಿತಾಳ ತಾಯಿ ತಲೆ ಸುತ್ತಿ ಬಿದ್ದುಬಿಟ್ಟರು. ತಕ್ಷಣ ಪ್ರಣವ್ ನ ಮನೆಯವರು ನಿಖಿತಾಳಿಗೆ ಧೈರ್ಯ ಹೇಳಿ ಅವರನ್ನು ಆಸ್ಪತ್ರೆಗೆ ಸೇರಿಸಿ ಅವಳ ಜೊತೆಯಲ್ಲೇ ಇದ್ದರು. ನಿಖಿತಾಳ ತಾಯಿಗೆ ಬಿಪಿ ಜಾಸ್ತಿಯಾಗಿ ಪ್ರಜ್ಞೆ ತಪ್ಪಿದ್ದರು. ಅವರಿಗೆ ಯಾವುದೇ ರೀತಿಯ ಟೆನ್ಶನ್‌ ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಹೇಳಿದ ಡಾಕ್ಟರ್‌ ಎರಡು ದಿನ ಆಡ್ಮಿಟ್‌ ಆಗಲು ಹೇಳಿದರು.

ನಿಖಿತಾಳ ಜೊತೆಗೇ ಇದ್ದು ಅವಳಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದರು ಪ್ರಣವ್ ನ ಮನೆಯವರು. ಆಗ ನಿಖಿತಾ ಮನಸ್ಸಿನಲ್ಲಿ, `ಇವನ ಮನೆಯವರೆಲ್ಲ ಎಷ್ಟು ಒಳ್ಳೆಯವರು. ಇವನು ಮಾತ್ರ ಏಕೆ ಹೀಗೆ?’ ಎಂದುಕೊಂಡಳು. ನಿಧಾನವಾಗಿ ನಿಖಿತಾಳ ತಾಯಿಯ ಬಳಿ ನಿಖಿತಾಳನ್ನು ಪ್ರಣವ್ ಇಷ್ಟಪಡುತ್ತಿರುವ ವಿಷಯ ಮತ್ತು ಮದುವೆಯ ಮಾತುಕಥೆ ಆಡುವ ಸಲುವಾಗಿ ಬಂದಿದ್ದು ಎಂದು ಹೇಳಿದರು.

sone-ka-anda-story1

ನಿಖಿತಾಳ ತಾಯಿ, “ನನ್ನ ಮಗಳ ಪುಣ್ಯ,” ಎಂದು ಖಿಷಿಯಿಂದ ಅಲ್ಲಿಯೇ ಒಪ್ಪಿಗೆ ನೀಡಿದರು.

ತಾಯಿಯ ಮನ ನೋಯಿಸಲು ಇಚ್ಛಿಸದ ನಿಖಿತಾ ಮದುವೆಗೆ ಒಪ್ಪಿಗೆ ನೀಡಿದಳು. ಒಂದು ವಾರದಲ್ಲೇ ಒಳ್ಳೆಯ ಮುಹೂರ್ತ ಇದ್ದು ಆಮೇಲೆ ಎರಡು ವರ್ಷಗಳ ಕಾಲ ಮುಹೂರ್ತ ಇಲ್ಲದೇ ಇರುವ ಕಾರಣ ಒಂದು ವಾರದಲ್ಲಿಯೇ ನಿಖಿತಾ ಮತ್ತು ಪ್ರಣವ್ ಮದುವೆ ಎಂದು ನಿಶ್ಚಯವಾಯಿತು.

ನಿಖಿತಾ ಮತ್ತು ಪ್ರಣವ್ ಮದುವೆ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನಡೆಯಿತು. ಮೊದಲ ರಾತ್ರಿಗೆ ಪ್ರಣವ್ ಕೋಣೆಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಿದ್ದರು. ನಿಖಿತಾಳನ್ನು ಪ್ರಣವ್ ನ ಕೋಣೆಗೆ ಬಿಡುವ ಸಮಯ ಬಂದೇಬಿಟ್ಟಿತ್ತು. ನಿಖಿತಾಳಿಗೆ ಮನಸ್ಸಿನ ತುಂಬಾ ಗೊಂದಲ, ಒಂಥರ ತಳಮಳ. `ಹೇಗೆ ಅವನನ್ನು ಎದುರಿಸುವುದು? ಅವನು ನಿಜಕ್ಕೂ ತನ್ನನ್ನು ಪ್ರೀತಿ ಮಾಡುತ್ತಿರುವನಾ…? ಅವನ ಸ್ವಭಾವ ಹೇಗೋ ಏನೋ? ಅವನ ಹಳೆಯ ಸಿಟ್ಟನ್ನು ಮರೆತಿರಬಹುದಾ?’ ಹೀಗೆ ಹತ್ತಾರು ಆಲೋಚನೆಗಳು ಅವಳ ಮನಸ್ಸಿನಲ್ಲಿ ಸುಳಿಯತೊಡಗಿತು. ಎಲ್ಲರೂ ತಮಾಷೆ ಮಾಡಿ ಇಬ್ಬರನ್ನೂ ರೇಗಿಸಿ ಕೋಣೆಯೊಳಗೆ ಬಿಟ್ಟುಹೋದರು.

ಕೋಣೆಯೊಳಗೆ ಬಂದ ನಿಖಿತಾಳ ಬಳಿ ಬಂದ ಪ್ರಣವ್, “ಎಷ್ಟು ಚೆನ್ನಾಗಿ ಕಾಣ್ತೀದ್ದೀಯಾ ನಿಖಿತಾ….! ನನ್ನ ಕಣ್ಣೇ ನಿನಗೆ ಬೀಳುತ್ತದೆ. ನಾನು ನಿನ್ನನ್ನು ನಿಖಿ ಎಂದು ಕರಿತೀನಿ. ಹಳೆಯದನ್ನೆಲ್ಲ ಮರೆತುಬಿಡು. ನಾವು ಇನ್ನು ಮುಂದೆ ಒಳ್ಳೆಯ ಸ್ನೇಹಿತರು. ನಿನ್ನನ್ನು ಪಡೆದ ನಾನು ಧನ್ಯ, ಪುಣ್ಯವಂತ,” ಎಂದು ಅವಳ ಕೈಯ ಮೇಲೆ ತನ್ನ ಕೈಯಿಟ್ಟ.

ನಿಖಿತಾಳಿಗೆ ತುಂಬಾ ಅಚ್ಚರಿ ಮತ್ತು ಸಂತೋಷವಾಯಿತು. `ನಾನೇ ವಿನಾಕಾರಣ ಇವರನ್ನು ತಪ್ಪಾಗಿ ಭಾವಿಸಿದ್ದೆ. ಛೇ… ಇವರನ್ನು ನೋಯಿಸಿದೆ. ನಾನು ಇನ್ನು ಮುಂದೆ ಪ್ರಣವ್ ನನ್ನು ತುಂಬಾ ಪ್ರೀತಿ ಮಾಡ್ತೀನಿ. ಒಳ್ಳೆಯ ಹೆಂಡತಿಯಾಗ್ತೀನಿ. ಚೆಂದದ ಸಂಸಾರ ನಮ್ಮದಾಗಬೇಕು’ ಎಂದು ಮನದಲ್ಲಿ ಯೋಚಿಸುತ್ತಾ ಇರುವಾಗ, ಪ್ರಣವ್ ನ ಮಾತು ಅವಳನ್ನು ಎಚ್ಚರಿಸಿತು.

“ನೀನು ಏನಾದರೂ ಹೇಳು ನಿಖಿ, ನಾನು ನಿನಗೆ ಇಷ್ಟಾನಾ….?” ಎಂದು ಕೇಳಿದ.

“ನಾನು ನಿಮ್ಮನ್ನು ತಪ್ಪು ತಿಳಿದುಕೊಂಡು ಏನೇನೋ ಅಂದು ನೋವು ಮಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಪ್ರಣವ್, ಇನ್ನು ಮುಂದೆ ಎಂದೂ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳುವುದಿಲ್ಲ. ನಾನು ನಿಮ್ಮನ್ನು ಪ್ರೀತಿಸುತ್ತೇನೆ,” ಎಂದು ನಿಖಿತಾ ಪ್ರಣವ್ ನ ಹೆಗಲ ಮೇಲೆ ತಲೆ ಇಟ್ಟಳು.

ಪ್ರಣವ್ ತಕ್ಷಣ ಅವಳ ಕೈಯನ್ನು ಹಿಡಿದುಕೊಂಡು ಜೋರಾಗಿ ತಿರುಚಿದ. ಅವಳು ನೋವಿನಿಂದ, “ಏನು ಮಾಡುತ್ತಿರುವಿರಿ ಪ್ರಣವ್….? ನನ್ನ ಕೈ ಬಿಡಿ. ತುಂಬಾ ನೋವಾಗ್ತಾ ಇದೆ,” ಎಂದಳು. ಅವಳ ಕಣ್ಣಿನಿಂದ ಕಣ್ಣೀರು ಕೆನ್ನೆಯ ಮೇಲೆ ಜಾರಿತು.

“ಏನು…. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡಿ ಮದುವೆ ಆದೆ ಎಂದು ತುಂಬಾ ಖುಷಿಪಟ್ಟೆಯಾ….?” ಎಂದ ಪ್ರಣವ್ ಜೋರಾಗಿ ನಗುತ್ತಾ, “ಅದು ಎಂದಿಗೂ ಸಾಧ್ಯವೇ ಇಲ್ಲ. ನೀನು ನನ್ನ ಆಜನ್ಮ ಶತ್ರು! ನೀನು ಯಾವಾಗಲೂ ಹೀಗೆ ನೋವು ಸಹಿಸುತ್ತಿರಬೇಕು. ನೀನು ಸದಾ ನರಳುತ್ತಿರಬೇಕು. ಜೀವನ ಪೂರ್ತಿ ನೀನು, ನನ್ನನ್ನು ಎದುರು ಹಾಕಿಕೊಂಡು ಎಂತಹ ತಪ್ಪು ಮಾಡಿಬಿಟ್ಟೆ ಎಂದು ಕೊರಗಬೇಕು. ನಿನಗೆ ಪ್ರಣವ್ ಎಂದರೆ ಏನು ಎಂದು ತಿಳಿಯಬೇಕು. ನಿನಗೆ ನರಕ ತೋರಿಸಬೇಕೆಂದೇ ನಾನು ನಿನ್ನನ್ನು ಮದುವೆ ಆಗಿದ್ದು. ನನಗಾಗಿರುವ ಅವಮಾನಕ್ಕೆ ನೀನು ಜೀವನ ಪೂರ್ತಿ ಅನುಭವಿಸಬೇಕು,” ಎಂದು ಆಕ್ರೋಶದಿಂದ ಹೇಳಿದ.

ನಿಖಿತಾ ನೋವಿನಿಂದ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಅವನು ಸಂತೋಷದಿಂದ ಉಬ್ಬಿಹೋದ. ಜೊತೆಗೆ ನೆಮ್ಮದಿಯಿಂದ ಮಲಗಿ ನಿದ್ರಿಸಿದ.

ಆದರೆ ನಿಖಿತಾಳಿಗೆ ತುಂಬಾ ಬೇಸರವಾಯಿತು. `ಅಂದು ನಡೆದ ತಪ್ಪು ಇವರದ್ದೇ. ನ್ಯಾಯದ ಪರ ನಿಂತಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆನಾ ನನಗೆ? ಇವರನ್ನು ಬಿಟ್ಟು ಹೋದರೆ ಅಮ್ಮನಿಗೆ ಆಘಾತವಾಗುತ್ತದೆ. ಇವರ ಮನೆಯವರೆಲ್ಲ ಎಷ್ಟು ಒಳ್ಳೆಯವರು. ವಿಷಯ ಗೊತ್ತಾದರೆ ಅವರೆಲ್ಲರೂ ನೊಂದುಕೊಳ್ಳುತ್ತಾರೆ. ಇಲ್ಲ…. ಯಾರ ಬಳಿಯಲ್ಲೂ ಹೇಳಬಾರದು. ಆಗಿದ್ದು ಆಗಲಿ ನಾನೇ ಧೈರ್ಯವಾಗಿ ಎದುರಿಸ್ತೀನಿ. ಎಲ್ಲ ನನ್ನ ಹಣೆಬರಹ. ಇವರು ಏನು ಮಾಡ್ತಾರೋ ಮಾಡಲಿ. ನಾನು ಎಲ್ಲವನ್ನೂ ಎದುರಿಸುತ್ತೀನಿ. ಎಂದಿಗೂ ಧರ್ಮ, ಸತ್ಯ, ನ್ಯಾಯವೇ ಗೆಲ್ಲುವುದು. ಇವರೂ ಒಂದು ದಿನ ಬದಲಾಗುತ್ತಾರೆ. ಅಲ್ಲಿಯವರೆಗೂ ಹೋರಾಡಲೇ ಬೇಕು,’ ಎಂದು ಮನದಲ್ಲಿ ಸಂಕಲ್ಪ ಮಾಡಿಕೊಂಡಳು.

ಬೆಳಗಾಯಿತು. ಎದ್ದು ಎಲ್ಲರಿಗೂ ಕಾಫಿ ಮಾಡಿಕೊಟ್ಟಳು. ಅವರೆಲ್ಲರ ಆತ್ಮೀಯತೆಯಲ್ಲಿ ಅವಳು ತನ್ನ ನೋವು ಮರೆತಳು. ಅವರೆಲ್ಲರ ಮುಂದೆ ತಾನು ಸುಖವಾಗಿ ಸಂಸಾರ ನಡೆಸಿಕೊಂಡು ಹೋಗಬೇಕು ಎಂದುಕೊಂಡಳು. ನಿಖಿತಾ ಯಾರ ಮುಂದೆಯೂ ತನ್ನ ಮನದ ನೋವು ತೋರಿಸಿಕೊಳ್ಳದೇ ಮನೆಯವರೆಲ್ಲರ ಜೊತೆ ತುಂಬಾ ಆತ್ಮೀಯತೆಯಿಂದ ನಡೆದುಕೊಂಡಳು. ಮನೆಯವರೆಲ್ಲರಿಗೂ ನಿಖಿತಾ ಎಂದರೆ ಬಹಳ ಅಚ್ಚುಮೆಚ್ಚು. ಇದನ್ನು ಕಂಡು ಪ್ರಣವ್ ಹೊಟ್ಟೆ ಉರಿಯಿತು. ಇವಳಿಗೆ ಸರಿಯಾದ ಬುದ್ಧಿ ಕಲಿಸುವೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.

ಮನೆಯವರ ಮುಂದೆ ತಾನು ನಿಖಿತಾಳನ್ನು ತುಂಬಾ ಪ್ರೀತಿಸುವ ಹಾಗೆ ನಟಿಸುತ್ತಾ, ಪ್ರೀತಿಯಿಂದ ಮಾತನಾಡುತ್ತಾ ಅವಳೊಂದಿಗೆ ಸರಸವಾಡುತ್ತಿದ್ದ. ಆದರೆ ರೂಮಿನಲ್ಲಿ ಇಬ್ಬರೇ ಇರುವಾಗ ಅವಳನ್ನು ನೋಯಿಸಿ ಚುಚ್ಚು ಮಾತನಾಡಿ ಅವಳನ್ನು ಅಳಿಸುತ್ತಾ ತಾನು ಸಂತಸದಿಂದ ನಗುತ್ತಿದ್ದ. ನಿಖಿತಾ ಬಂದಿದ್ದನ್ನು ಎದುರಿಸಲು ಮನದಲ್ಲಿ ಪಣತೊಟ್ಟು ನಿರ್ಲಿಪ್ತಳಾಗಿ ಇದ್ದುಬಿಟ್ಟಳು.

ಪ್ರಣವ್ ಆಫೀಸ್‌ ಗೆ ಹೋದರೂ ದಿನಕ್ಕೆ ಎರಡು ಬಾರಿ ನಿಖಿತಾಳಿಗೆ ಫೋನ್‌ ಮಾಡುತ್ತಿದ್ದ. ಮನೆಯವರೆಲ್ಲರ ಮುಂದೆ ವಾರಕ್ಕೆ ಒಮ್ಮೆಯಾದರೂ ಏನಾದರೂ ಗಿಫ್ಟ್ ತಂದುಕೊಟ್ಟು ಅವರ ಎದುರು ತಾನು ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿರುವುದಾಗಿ ನಂಬಿಸಿದ್ದ. ಅವನ ನಾಟಕವನ್ನೇ ನಿಜವೆಂದೇ ನಂಬಿದ್ದ ಮನೆಯವರು ಪ್ರಣವ್ ಮತ್ತು ನಿಖಿತಾರ ಸರಸಮಯ ಸಂಸಾರ ಕಂಡು ಆನಂದಪಟ್ಟರು. ಈ ಜೋಡಿ ಸದಾ ಹೀಗೆ ಖುಷಿ ಖುಷಿಯಾಗಿರಲೆಂದು ಮನದುಂಬಿ ಹಾರೈಸುತ್ತಿದ್ದರು.

ನಿಖಿತಾ ಮತ್ತು ಪ್ರಣವ್ ಮದುವೆ ಆಗಿ ಏಳು ತಿಂಗಳು ಕಳೆಯಿತು. ಎಷ್ಟಾದರೂ ಪ್ರಣವ್ ತನ್ನ ಗಂಡ, ಅವನ ಎಲ್ಲಾ ಕೆಲಸಗಳನ್ನು ತಾನು ಮಾಡುವುದು ತನ್ನ ಕರ್ತವ್ಯವೆಂದು ಅವಳು ನಿರ್ಭಾವದಿಂದ ಎಲ್ಲವನ್ನೂ ಮಾಡುತ್ತಿದ್ದಳು.

“ನಾನೇನು ನಿನ್ನನ್ನು ಹೆಂಡತಿ ಎಂದು ತಿಳಿದು ಪ್ರೀತಿಯಿಂದ ನಿನ್ನ ಜೊತೆ ಸಂಸಾರ ಮಾಡಲು ನಿನ್ನನ್ನು ಮದುವೆ ಆಗಿಲ್ಲ ಅಥವಾ ನೀನು ಹೀಗೆ ನಿನ್ನ ಕರ್ತವ್ಯವನ್ನು ಮಾಡುವುದರಿಂದ ಅಯ್ಯೋ ಪಾಪ ಎಂದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನ್ನನ್ನು ನೋಯಿಸುವುದೇ ನನ್ನ ಗುರಿ, ಇದು ನಿನಗೆ ನೆನಪಿರಲಿ,” ಎಂದು ಪದೇ ಪದೇ ಹೇಳುತ್ತಿದ್ದ.

ನಿಖಿತಾ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಳು. ಮೊದಮೊದಲು ಅವಳು ತೆಗೆದು ಇಡುತ್ತಿದ್ದ ಬಟ್ಟೆಗಳನ್ನು ಹಾಕಿಕೊಳ್ಳದೇ, ತಾನು ಬೇರೆ ಬಟ್ಟೆಗಳನ್ನು ತೆಗೆದು ಹಾಕಿಕೊಂಡು ಹೋಗುತ್ತಿದ್ದ. ಆಗ ಅವಳಿಗೆ ನೋವಾದರು ಕೂಡ ತನ್ನ ಕರ್ತವ್ಯವನ್ನು ಅವಳು ಪಾಲಿಸುತ್ತಿದ್ದಳು. ಪ್ರಣವ್ ಹಾಕಿಕೊಳ್ಳಲಿ ಬಿಡಲಿ ದಿನ ಅವನಿಗಾಗಿ ಬಟ್ಟೆ ತೆಗೆದಿಡುತ್ತಿದ್ದಳು. ಕ್ರಮೇಣ ನಿಧಾನವಾಗಿ ಪ್ರಣವ್ ಇದಕ್ಕೆ ಹೊಂದಿಕೊಳ್ಳುತ್ತಾ ಅವಳ ಮೇಲೆ ಅವಲಂಬಿತನಾಗ ತೊಡಗಿದ. ಒಂದು ದಿನ ಅವಳು ಬಟ್ಟೆ ಅಥವಾ ಪರ್ಸ್‌ ತೆಗೆದು ಇಡುವುದು ನಿಧಾನವಾದರೆ ಅವನು ಕೂಗಾಡಲು ಶುರು ಮಾಡುತ್ತಿದ್ದ.

ಅವರ ಸಂಬಂಧ ಹೀಗೆ ಮುಂದುವರಿದಿತ್ತು. ಹೀಗೆ ಒಂದು ದಿನ ನಿಖಿತಾ ಎಲ್ಲರಿಗೂ ಕೊಡುತ್ತಾ, ಕೊನೆಯಲ್ಲಿ ಪ್ರಣವ್ ಗೆ ಕಾಫಿ ಕೊಡಲು ಮಹಡಿಗೆ ಬಂದು ಅವನಿಗೆ ಕಾಫಿ ಕೊಟ್ಟಳು. ಅವನು ಕಾಫಿ ಕುಡಿದು ಮಾಮೂಲಿನಂತೆ ಜಗಳ ತೆಗೆದ. ನಿಖಿತಾ ಮೆಟ್ಟಿಲ ತುದಿಯಲ್ಲಿ ನಿಂತಿದ್ದಳು.

“ನೀನು ಮನೆಯವರೆನ್ನೆಲ್ಲ ಮರುಳು ಮಾಡಿದ ಹಾಗೆ ನನ್ನನ್ನು ಮರುಳು ಮಾಡಲು ಆಗುವುದಿಲ್ಲ. ನಾನೆಂದಿಗೂ ನಿನ್ನ ಬಲೆಯಲ್ಲಿ ಬೀಳುವುದಿಲ್ಲ. ಈಗ ನೀನು ಅವರಿಗೆ ಮೋಡಿ ಮಾಡಿರಬಹುದು. ಮುಂದೆ ಎಲ್ಲರೂ ನಿನ್ನನ್ನು ಬಯ್ಯುವ ಹಾಗೆ ಮಾಡ್ತೀನಿ, ಏಕಾದರೂ ಇವನ ತಂಟೆಗೆ ಹೋದೆನೋ ಎಂದು ಕ್ಷಣ ಕ್ಷಣ ನೀನು ಕೊರಗಬೇಕು,” ಎಂದ ಪ್ರಣವ್.

ಬಹಳ ದಿನಗಳಿಂದ ತನ್ನ ಕೋಪನ್ನು ತಡೆಹಿಡಿದಿದ್ದ ನಿಖಿತಾ, ಬೇಸರದಿಂದ, “ನಾನು ಯಾವ ತಪ್ಪೂ ಮಾಡಿಲ್ಲ. ನನಗೆ ಯಾವ ಅಂಜಿಕೆಯೂ ಇಲ್ಲ, ಯಾರ ಭಯವು ಇಲ್ಲ. ತಪ್ಪು ಮೇಲೆ ತಪ್ಪು ಮಾಡುತ್ತಿರುವುದು ನೀವು. ನನಗೂ ಸಾಕು ಸಾಕಾಗಿ ಹೋಗಿದೆ. ನಾನು ಎಲ್ಲ ಸತ್ಯವನ್ನೂ ಮನೆಯವರೆಲ್ಲರ ಮುಂದೆ ಹೇಳಿದ ನಂತರವೇ ನಾನು ನಿಮ್ಮಿಂದ ದೂರ ಹೋಗುವೆ,” ಎಂದು ಅವನಿಗೆ ಎದುರು ಜವಾಬು ಕೊಟ್ಟಳು.

ಆ ಸಮಯದಲ್ಲಿ ಪ್ರಣವ್ ನ ತಾತ ಕೆಳಗೆ ನಿಂತು ಎಲ್ಲವನ್ನೂ ಕೇಳಿಸಿಕೊಂಡರು. ಅವರಿಗೆ ಎಲ್ಲವು ಅರ್ಥವಾಗಿತ್ತು. ಅವಳ ಮಾತನ್ನು ಕೇಳಿ ಕೆಂಡಾಮಂಡಲನಾದ ಪ್ರಣವ್ ಮೆಟ್ಟಿಲ ತುದಿಯಲ್ಲಿ ನಿಂತಿದ್ದ ಅವಳನ್ನು, “ಹೋಗು ಇಲ್ಲಿಂದ,” ಎನ್ನುತ್ತಾ ಜೋರಾಗಿ ತಳ್ಳಿಬಿಟ್ಟ. ಅವಳು ಆಯತಪ್ಪಿ ಕೆಳಗೆ ಬೀಳುವಾಗ ಕಿರುಚಿದ್ದನ್ನು ಕೇಳಿ ಅವಳನ್ನು ಹಿಡಿಯಲು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಅವಳು ಕೆಳಗೆ ಬಿದ್ದು ಬಿಟ್ಟಳು. ನೋವಿನಿಂದ ಅವಳು ಅಳತೊಡಗಿದಳು.

ತಕ್ಷಣ ಕೆಳಗೆ ಓಡಿ ಬಂದು, ಅವಳ ಕಣ್ಣಲ್ಲಿ ನೀರನ್ನು ನೋಡಿ ಕಂಗಾಲಾದವನಂತೆ, “ಐ ಆ್ಯಮ್ ವೆರಿ ವೆರಿ ಸಾರಿ  ನಿಖಿ….. ನಾನು ನೋಡಲಿಲ್ಲ. ಬೇಕು ಅಂತ ಮಾಡಿಲ್ಲ. ತುಂಬಾ ಪೆಟ್ಟಾಯಿತಾ,” ಎಂದು ಅಕ್ಕರೆಯಿಂದ ಕೇಳುವವನಂತೆ ನಟಿಸಿದ.

ಇದೆಲ್ಲವನ್ನೂ ನೋಡಿದ ಪ್ರಣವ್ ನ ತಾತಾ ಮುಂದೆ ಬಂದು ಕೋಪದಿಂದ ಅವನ ಕೆನ್ನೆಗೆ ಎರಡು ಬಾರಿಸಿ, “ನಿನ್ನ ಇಷ್ಟು ದಿನದ ನಾಟಕ ಏನು ಎಂದು ನಾನು ಎಲ್ಲವನ್ನೂ ಕೇಳಿಸಿಕೊಂಡ. ಎಂಥ ಕೊಳಕು ಮನಸ್ಸು ನಿನ್ನದು! ನಿನ್ನನ್ನು ನಂಬಿ ತನ್ನ ಮನೆಯನ್ನು, ತಾಯಿಯನ್ನು ಬಿಟ್ಟುಬಂದು ನಿನಗಾಗಿ ಸದಾ ದುಡಿಯುವ ಇಂಥ ಪಾಪದ ಹುಡುಗಿಗೆ ಎಷ್ಟು ನೋವು ಕೊಟ್ಟಿದ್ದೀಯಾ….? ನಿನ್ನ ಬಗ್ಗೆ ನನಗೆ ಅಸಹ್ಯವಾಗುತ್ತಿದೆ ಪ್ರಣವ್. ನಾನು ನಿನ್ನನ್ನು ಎಂದೂ ಕ್ಷಮಿಸುವುದಿಲ್ಲ,” ಎಂದರು.

ಅಷ್ಟರಲ್ಲಿ ಮನೆಯವರೆಲ್ಲಾ ಅಲ್ಲಿಗೆ ಬಂದು, ಅಲ್ಲಿ ಏನು ನಡೆಯಿತು, ತಾತಾ ಏಕೆ ಕೋಪದಿಂದ ಪ್ರಣವ್ ನನ್ನು ಹೊಡೆದು, ಅವನ ಮೇಲೆ ಕೂಗಾಡುತ್ತಿದ್ದಾರೆ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ನಿಂತಿದ್ದರು. ನಿಖಿತಾ ನೋವು ತಾಳಲಾರದೆ ಜೋರಾಗಿ ಅಳುತ್ತಿದ್ದಳು. ಆಗ ಪ್ರಣವ್ ಅವಳನ್ನು ಎತ್ತಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ. ಕಾರಿನಲ್ಲಿ ಹೋಗುವಾಗ ಅವಳ ಕಣ್ಣೀರು ಕಂಡು ಅವನ ಕಣ್ಣಿನಲ್ಲೂ ನೀರು ಬಂದಿತು, `ಛೇ…. ಎಂಥ ಎಡವಟ್ಟು ಕೆಲಸ ಮಾಡಿಬಿಟ್ಟೆ ನಾನು. ಕೋಪ ಬಂದರೆ ನಾನು ನಿಯಂತ್ರಿಸಿಕೊಳ್ಳಬೇಕಿತ್ತು. ಇದು ಬಿಟ್ಟು ಹೀಗೆ ಇವಳನ್ನು ನೂಕಿ ಕೆಳಗೆ ಬೀಳುವಂತೆ ಮಾಡಿಬಿಟ್ಟೆ. ಇದರಿಂದ ಅವಳಿಗೆ ನೋವು ಕೊಟ್ಟೆ,’ ಎಂದು ಕೊರಗತೊಡಗಿದ.

ಆಸ್ಪತ್ರೆಯಲ್ಲಿ ನಿಖಿತಾಳ ಕಾಲು ಫ್ರಾಕ್ಚರ್‌ ಆಗಿದೆ. ಆಕೆ ಒಂದು ತಿಂಗಳು ಬೆಡ್‌ ರೆಸ್ಟ್ ನಲ್ಲಿ ಇರಬೇಕೆಂದು ಡಾಕ್ಟರ್‌ ಹೇಳಿದರು. ಆಗ ಪ್ರಣವ್ ಗೆ ತಾನು ಮಾಡಿದ್ದು ತಪ್ಪು, ತನ್ನಿಂದಲೇ ಎಲ್ಲವೂ ಆಗಿದೆ, ತಾನು ಇವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನದಲ್ಲಿ ಯೋಚಿಸುತ್ತಾ, ಅವಳ ಕಾಲಿಗೆ ಬ್ಯಾಂಡೇಜ್‌ ಮಾಡಿಸಿಕೊಂಡು, ಅವಳನ್ನು ಎತ್ತಿಕೊಂಡೇ ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಂದ.

ಇತ್ತ ಪ್ರಣವ್ ನ ತಾತಾ ಮನೆಯಲ್ಲಿ ಎಲ್ಲರ ಬಳಿಯಲ್ಲಿ ನಡೆದ್ದಿದ್ದೆಲ್ಲವನ್ನೂ ವಿವರಿಸಿ ಹೇಳಿದ್ದರು. ಎಂದೋ ನಡೆದ ವಿರಸ ದೊಡ್ಡದಾಗಿ ಇಲ್ಲಿಯವರೆಗೂ ಮುಂದುವರಿದಿದೆ. ಪ್ರಣವ್ ಅವಳನ್ನು ಕ್ಷಮಿಸುತ್ತಾನಾ…? ನಿಖಿತಾ ಏನು ಮಾಡುತ್ತಾಳೆ…?

ಮನೆಯವರೆಲ್ಲರಿಗೂ ವಿಷಯ ತಿಳಿದು ಅವರಿಗೆ ಬಹಳವೇ ಬೇಸರವಾಯಿತು. ಪಾಪದ ಆ ಹುಡುಗಿ ಮನಸ್ಸಿನಲ್ಲಿ ಎಷ್ಟು ನೋವಿದ್ದರೂ, ಸ್ವಲ್ಪವೂ ಹೊರಗೆ ತೋರಿಸದೆ ನಮ್ಮನ್ನೆಲ್ಲ ಎಷ್ಟು ಪ್ರೀತಿಯಿಂದ ನೋಡಿಕೊಂಡು ಮನೆಯ ಎಲ್ಲಾ ಕೆಲಸ ಮಾಡುತ್ತಾ, ಎಲ್ಲರ ಬೇಕು ಬೇಡಗಳನ್ನು ಗಮನಿಸುತ್ತಾ, ಎಲ್ಲರನ್ನೂ ಅನುಸರಿಸಿಕೊಂಡು ಹೋಗುತ್ತಿದ್ದಳು. ಇಂತಹ ಒಳ್ಳೆಯ ಹುಡುಗಿಯ ಮನಸ್ಸನ್ನು ಪ್ರಣವ್ ಎಷ್ಟು ನೋಯಿಸಿದ್ದಾನೆ, ಎಂದು ಎಲ್ಲರಿಗೂ ಅವನ ಮೇಲೆ ತುಂಬಾ ಕೋಪ ಬಂದಿತು.

ಪ್ರಣವ್ ನಿಖಿತಾಳನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಎಲ್ಲರೂ ಅವನನ್ನು ಬೈದು, ನಿಖಿತಾಳ ಬಳಿ ಬಂದು ಕ್ಷಮೆ ಕೇಳಿದರು. ಪ್ರಣವ್ ನ ತಾತ, ಅಪ್ಪ, ಅವನ ಚಿಕ್ಕಮ್ಮ, ಇಬ್ಬರು ತಂಗಿಯರು ಅವನ ಬಳಿ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. ಮಿಕ್ಕವರು ಎಷ್ಟು ಬೇಕೋ ಅಷ್ಟು ಮಾತ್ರವೇ ಮಾತಾಡುತ್ತಿದ್ದರು. ಪ್ರಣವ್ ಗೆ ಯಾರಿಗೂ ಮುಖ ತೋರಿಸಲು ಧೈರ್ಯವಿಲ್ಲದೇ, ಯಾರನ್ನೂ ಮಾತನಾಡಿಸಲು ಪ್ರಯತ್ನಿಸಲಿಲ್ಲ. ನಿಖಿತಾಳಿಗೂ ಸಹ ಮುಖ ತೋರಿಸಲು ಆಗದೇ, ತಪ್ಪಿಸಿಕೊಳ್ಳಲೂ ಆಗದೇ ಒದ್ದಾಡಿದ. ಮರುದಿನ ಬೆಳಗ್ಗೆ ಪ್ರಣವ್ ನನ್ನು ಅವನ ಅಜ್ಜಿ, ಅಮ್ಮ ಬೈದು ಬುದ್ಧಿ ಹೇಳಿದರು. ನಿಖಿತಾಳನ್ನು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳಬೇಕು. ಇಬ್ಬರೂ ಒಬ್ಬರನ್ನು ಒಬ್ಬರು ಅರಿತು ಖುಷಿಯಿಂದ ಸಂಸಾರ ಮಾಡಬೇಕೆಂದು ತಿಳಿ ಹೇಳಿದರು.

“ಆಗಲಿ ಇನ್ನು ಮುಂದೆ ಎಂದೂ ಹೀಗೆ ಮಾಡುವುದಿಲ್ಲ,” ಎಂದು ಎಲ್ಲರ ಬಳಿಯಲ್ಲೂ ಹೇಳಿ ಕ್ಷಮೆ ಕೇಳಿದ. ಎಲ್ಲರೂ ಕ್ಷಮಿಸಿದರೂ ಒಂದು ಅರಿಯದ ಕಂದಕ ನಿರ್ಮಾಣವಾಗಿತ್ತು. ಹಿಂದಿನ ಹಾಗೆ ಮಾತುಕಥೆ, ಹರಟೆ, ಕೀಟಲೆ, ನಗು ಯಾವುದೂ ಇರಲಿಲ್ಲ. ನಿಖಿತಾಳ ಎಲ್ಲ ಕೆಲಸವನ್ನೂ ಅವನೇ ಮಾಡುತ್ತಿದ್ದ. ಅವಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ಅವಳನ್ನು ಎತ್ತಿಕೊಂಡೇ ಓಡಾಡುತ್ತಿದ್ದ.

ಒಂದು ತಿಂಗಳ ನಂತರ ಬ್ಯಾಂಡೇಜ್‌ ಬಿಚ್ಚಿದ ಮೇಲೆ ಪ್ರಣವ್ ನಿಖಿತಾಳನ್ನು ಮೆಲ್ಲಗೆ ನಡೆಸಿಕೊಂಡು ಓಡಾಡಿಸುತ್ತಿದ್ದ. ಈಗ ಅವಳ ಹತ್ತಿರ ಜಗಳವಾಡುತ್ತಿರಲಿಲ್ಲ. ನಿಖಿತಾಳಿಗೆ ಪ್ರಣವ್ ನ ಮೇಲೆ ಮೃದು ಭಾವನೆ ಬೆಳೆಯಲಾರಂಭಿಸಿತು.  ಪ್ರತಿದಿನ ಪ್ರಣವ್ ನಿಖಿತಾಳೊಡನೆ ಬಹಳ ಸಮಯ ಕಳೆಯುತ್ತಿದ್ದರೂ ಜಗಳವಾಡುತ್ತಿರಲಿಲ್ಲ. ಸ್ನೇಹಿತನಂತೆ ವರ್ತಿಸಲಾರಂಭಿಸಿದ. ಆದರೂ ಪ್ರಣವ್ ನ ಮನೆಯವರು ಅವನ ಬಳಿ ಹೆಚ್ಚು ಮಾತನಾಡುತ್ತಿರಲಿಲ್ಲ. ಒಂದೆರಡು ತಿಂಗಳ ನಂತರ ನಿಖಿತಾ ಸಂಪೂರ್ಣ ಗುಣಹೊಂದಿ ಅವಳೇ ನಿಧಾನವಾಗಿ ಓಡಾಡಲಾರಂಭಿಸಿದಳು. ಪ್ರಣವ್ ಆಫೀಸ್‌ ಗೆ ಹೋಗಲು ಆರಂಭಿಸಿದ.

ದಿನ ಕಳೆದಂತೆ ಮನೆಯಲ್ಲಿದ್ದ ಬಿಗುವು ವಾತಾವರಣವನ್ನು ಸರಿ ಮಾಡಬೇಕೆಂದು ನಿರ್ಧರಿಸಿದ ನಿಖಿತಾ, ಮನೆವಯರನ್ನೆಲ್ಲಾ ಒಟ್ಟಿಗೆ ಕೂರಿಸಿ, “ನಾವಿಬ್ಬರೂ ಈಗ ಒಬ್ಬರನ್ನೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದೇವೆ. ಖುಷಿಯಿಂದ ಸಂಸಾರ ಮಾಡ್ತಿದ್ದೀವಿ. ದಯವಿಟ್ಟು ನೀವೆಲ್ಲರೂ ಪ್ರಣವ್ ನನ್ನು ಕ್ಷಮಿಸಿ, ಮೊದಲಿನ ತರಹ ಎಲ್ಲರೂ ಖುಷಿಯಿಂದ ಇರೋಣ. ಆಗ ನನಗೂ ಬಹಳ ಸಂತೋಷವಾಗುತ್ತದೆ. ಎಲ್ಲರೂ ಬಿಗುವಾಗಿರುವುದೇ ಪ್ರಣವ್ ಗೆ ಕೊರಗಾಗಿದೆ,” ಎಂದು ಎಲ್ಲರಿಗೂ ಕೈಜೋಡಿಸಿ ಕೇಳಿಕೊಂಡಳು. ಮನೆಯವರೆಲ್ಲರೂ ಆಗಲಿ ಎಂಬಂತೆ ಒಪ್ಪಿಕೊಂಡರು.

ದಿನ ಕಳೆದಂತೆ ಪ್ರಣವ್ ಗೆ ನಿಖಿತಾಳ ಒಳ್ಳೆಯ ಮನಸ್ಸು ಅರ್ಥವಾಗತೊಡಗಿತು. ಅವಳ ಬಗ್ಗೆ ಒಳ್ಳೆಯ ಭಾವನೆ ಮೂಡತೊಡಗಿತು. ಮನೆಯ ವಾತಾವರಣ ಮತ್ತೆ ಮೊದಲಿನ ಹಾಗೆ ಆಗತೊಡಗಿತು.

ಪ್ರಣವ್ ಒಂದು ಟ್ರಸ್ಟ್ ನ್ನು ಮಾಡಿ ಅದರಲ್ಲಿ ಬಡ ವಿದ್ಯಾರ್ಥಿಗಳಿಗೆ ಓದಿನ ಸಂಪೂರ್ಣ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾನೆಂದು ಒಮ್ಮೆ ಅವನ ಮನೆಯವರಿಗೆ ಗೊತ್ತಾಯಿತು. ಇದರಿಂದ ಅವನ ಬಗ್ಗೆ ಬಹಳ ಹೆಮ್ಮೆ ಉಂಟಾಯಿತು. ನಿಖಿತಾಳಿಗೂ ತಾನು ಅವನನ್ನು ತಪ್ಪಾಗಿ ತಿಳಿದುಕೊಂಡಿದ್ದೆ ಎಂದು ಮನದಲ್ಲಿ ನೊಂದುಕೊಂಡಳು. ಈಗ ಪ್ರಣವ್ ಸ್ವಲ್ಪ ತಡವಾಗಿ ಬಂದರೂ ಅವಳಿಗೆ ತಳಮಳವಾಗುತ್ತಿತ್ತು. ಅವನನ್ನು ಬಿಟ್ಟು ಇರುವುದೇ ಕಷ್ಟವೆನಿಸತೊಡಗಿತು. ಸಮರಸವೇ ಜೀವನ ಅವನ್ನು ಹಾಗೆ ಅಂತೂ ಈಗ ನಿಖಿತಾ ಮತ್ತು ಪ್ರಣವ್ ನ ಸಮರಸ ಕಂಡು ಮನೆಯವರಿಗೆ ಸಂತಸವಾಗತೊಡಗಿತು.

(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ