ಆಕಸ್ಮಿಕವಾಗಿ ಪ್ರಣವ್ ಮಾಡಿದ ಅಪಘಾತದಲ್ಲಿ ಅವನಿಗೆ ವಿರುದ್ಧವಾಗಿ ನಿಖಿತಾ ಸಂತ್ರಸ್ತರಿಗೆ ಸಹಾಯ ಮಾಡಿ ಕಾರಣವಿಲ್ಲದೇ ಅವನ ದ್ವೇಷಕ್ಕೆ ಗುರಿಯಾದಳು. ಸೇಡಿನ ಮನೋಭಾವದಿಂದಾಗಿ ಬೇಕೆಂದೇ ಅವಳನ್ನು ಓಲೈಸಿ ಹೇಗೋ ಮದುವೆಯಾದ ಪ್ರಣವ್, ಮುಂದೆ ಅವಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ. ಅತ್ತೆ ಮನೆಯಲ್ಲಿ ಆದರ್ಶ ಸೊಸೆಯಾದ ನಿಖಿತಾ, ಅವರ ಆದರದಿಂದಾಗಿ ಎಲ್ಲರ ಕಣ್ಮಣಿಯಾದಳು. ಮುಂದೆ ಮಗನನ್ನು ದಂಡಿಸಿದ ಮನೆಯವರು, ಮತ್ತೆ ಅವರಿಬ್ಬರು ಒಂದಾಗುವಂತೆ ಮಾಡಿದರು. ಆದರೆ ಸಂಗಮ ಕ್ಷಣಿಕವಾಯಿತು. ನಂತರ ಇವರ ಬದುಕಿನ ಭವಿಷ್ಯವೇನಾಯಿತು……?        

ಮುಂದೆ ಓದಿ……

ಸೇಡು ತೀರಿಸಿಕೊಳ್ಳುವ ಮನೋಭಾವದಿಂದಲೇ ನಿಖಿತಾಳನ್ನು ಮದುವೆಯಾದ ಪ್ರಣವ್, ಮೊದಲಿನಿಂದಲೂ ಅವಳತ್ತ ದ್ವೇಷ ಸಾಧಿಸತೊಡಗಿದ. ಇದು ಮನೆಯವರಿಗೆ ಗೊತ್ತಾಗಿ ಅವರ ಕೋಪಕ್ಕೆ ತುತ್ತಾದ. ಆದರ್ಶ ಸೊಸೆಯಾಗಿ ನಿಖಿತಾ ಮನೆಯವರ ಮನ ಗೆದ್ದಂತೆ, ನಿಜ ಅರ್ಥದಲ್ಲಿ  ಮುಂದೆ ಪತಿಯ ಮನದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತೇ……? ಅವರ ಅನನ್ಯ ಪ್ರೇಮ ಒಲವಿನ ದಾಂಪತ್ಯಾಯಿತೇ…..?

ಇತ್ತ ನಿಖಿತಾಳಿಗೆ ಪ್ರಣವ್ ಬಗ್ಗೆ ನಿಧಾನವಾಗಿ ಒಲವು ಮೂಡಲಾರಂಭಿಸಿತು. ದಿನ ಕಳೆದಂತೆ ಅದು ಮತ್ತಷ್ಟು ಗಟ್ಟಿಯಾಗತೊಡಗಿತು. ಪ್ರಣವ್ ನನ್ನು ತನ್ನ ಪ್ರೀತಿಯಿಂದ ಗೆಲ್ಲಬಹುದು. ತನ್ನ ಪ್ರೀತಿ ಅವನನ್ನು ಬದಲಾಯಿಸುತ್ತದೆ. ತಾವಿಬ್ಬರೂ ಪ್ರೀತಿಸುತ್ತಾ ಖುಷಿಯಿಂದ ಸಂಸಾರ ಮಾಡಬಹುದು, ಎಂದು ಕನಸು ಕಂಡಳು. ಪ್ರಣವ್ ಕೂಡ ತನ್ನನ್ನು ಪ್ರೀತಿಸುತ್ತಿದ್ದಾರೆ ಅದರಿಂದ ಈಗ ತನ್ನೊಂದಿಗೆ ಚೆನ್ನಾಗಿದ್ದಾರೆ ಎಂದು ಭಾವಿಸಿದಳು.

ಅವರ ಮದುವೆ ವಾರ್ಷಿಕೋತ್ಸವಕ್ಕೆ ಇನ್ನೊಂದು ವಾರವಿತ್ತು. ಅಂದು ಪ್ರಣವ್ ಗೆ ತನ್ನ ಮನದಲ್ಲಿ ಅವನ ಬಗ್ಗೆ ಇರುವ ಪ್ರೀತಿಯನ್ನು ಹೇಳಬೇಕು. ಆಮೇಲೆ ತಾವು ಖುಷಿಯಿಂದ ಇರಬಹುದು. ಪ್ರಣವ್ ತನಗೆ ಏನು ಉಡುಗೊರೆ ಕೊಡಬಹುದು, ಎಂದು ಯೋಚಿಸಿದಳು ನಿಖಿತಾ.

ಒಂದು ದಿನ ಪ್ರಣವ್ ತನ್ನ ಸ್ನೇಹಿತರೊಂದಿಗೆ ಹೋಟೆಲ್ ‌ಗೆ ಹೋಗಿದ್ದಾಗ, ಅವನು ಹಿಂದೊಮ್ಮೆ ಕಾರಿನಲ್ಲಿ ಒಬ್ಬ ಅಜ್ಜಿಗೆ ಗುದ್ದಿದ್ದ ಅಜ್ಜಿಯ ಮಗ ಆತನ ಗೆಳೆಯರೊಡನೆ ಅದೇ ಹೋಟೆಲ್ ‌ಗೆ ಬಂದಿದ್ದ. ಅವನು ಪ್ರಣವ್ ನನ್ನು ಗುರುತಿಸಿ, ಅವನ ಬಳಿ ಬಂದು ಅವನನ್ನು ಮಾತನಾಡಿಸಿ, “ಅಜ್ಜಿ ಆರಾಮವಾಗಿ ಇದ್ದಾರೆ. ಅಂದಹಾಗೆ ಎಲ್ಲಿ ನಿಖಿತಾ ಮೇಡಂ? ಅವತ್ತು ಅವರು ಇಲ್ಲದೆ ಹೋಗಿದ್ದರೆ ದೊಡ್ಡ ಅನಾಹುತ ನಡೆಯುತ್ತಿತ್ತು. ನೀವು ಕೂಡ ಅರಾಮವಾಗಿ ಜಾರಿಕೊಂಡು ಬಿಡುತ್ತಿದ್ರಿ. ಮೇಡಂ ಧೈರ್ಯ ಮೆಚ್ಚಲೇ ಬೇಕು. ಎಷ್ಟು ಒಳ್ಳೆಯವರು ಅವರು. ಅಂತಹವರು ಲಕ್ಷಕ್ಕೆ ಒಬ್ಬರು. ನೀವು ಅವರನ್ನೇ ಮದುವೆ ಆದಿರಂತೆ. ಮೇಡಂ ನಿಮ್ಮನ್ನು ಅದು ಹೇಗೆ ಒಪ್ಪಿಕೊಂಡರೋ ಏನೋ…..?” ಎಂದು ಆ ವ್ಯಕ್ತಿ ಹೇಳಿದಾಗ ಪ್ರಣವ್ ಗೆ ತುಂಬಾ ಅವಮಾನವಾಯಿತು.

ಪ್ರಣವ್ ನ ಸ್ನೇಹಿತರೆಲ್ಲಾ ಏನು ಎಂದು ವಿಚಾರಿಸಿದಾಗ ಅಜ್ಜಿಯ ಮಗ ಹಿಂದೆ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ. ಅವನ ಸ್ನೇಹಿತರೆಲ್ಲರೂ, “ನಿಖಿತಾ ಈಸ್‌ ಸೋ ಗ್ರೇಟ್‌. ಯೂ ಆರ್‌ಲಕ್ಕಿ!” ಎಂದರು.

ಇದರಿಂದ ಪ್ರಣವ್ ಗೆ ನಿಖಿತಾಳ ಮೇಲೆ ತುಂಬಾ ಕೋಪ ಬಂದಿತು. `ಇವಳಿಂದ ತನಗೆ ಯಾವಾಗಲೂ ಬರೀ ಅವಮಾನವೇ. ಎಲ್ಲರಿಗೂ ಅವಳೇ ಒಳ್ಳೆಯಳು. ಮನೆಯಲ್ಲೂ ಹೀಗೆ… ಹೊರಗೆ ಬಂದರೆ ಅಲ್ಲೂ ಹೀಗೆ…. ಅದೇನು ಮೋಡಿ ಮಾಡುತ್ತಾಳೋ,’ ಎಂದು ಒಳಗೊಳಗೆ ಕುದಿಯತೊಡಗಿದ.

ಅಂದು ರಾತ್ರಿ ಮನೆಗೆ ಬಂದ ಪ್ರಣವ್, ನಿಖಿತಾಳನ್ನು ಮಾತನಾಡಿಸದೆ ಹಾಗೇ ಮಲಗಿಬಿಟ್ಟ. ಅವನು ದಣಿದಿರಬಹುದು, ಅದಕ್ಕೆ ಬೇಗ ನಿದ್ದೆ ಮಾಡಿರಬೇಕು ಎಂದುಕೊಂಡಳು ನಿಖಿತಾ. ಮರುದಿನ ಅವಳು ತೆಗೆದಿಟ್ಟಿದ್ದ ಬಟ್ಟೆಯನ್ನು ಹಾಕ್ಕಿಕೊಳ್ಳದೆ, ಅವಳಿಗೆ ಹೇಳದೆಯೇ ಆಫೀಸ್‌ ಗೆ ಹೊರಟುಬಿಟ್ಟ. ಅವಳಿಗೆ ತುಂಬಾ ನೋವಾದರೂ, ಏನೋ ಕೆಲಸದ ಒತ್ತಡ ಇರಬಹುದೆಂದು ಸುಮ್ಮನಾದಳು.

ಮರುದಿನ ಅವರ ಮದುವೆಯ ವಾಷಿಕೋತ್ಸವ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡು ಅವನಿಗೆ ಸರ್‌ ಪ್ರೈಸ್‌ಕೊಡಬೇಕು ಎಂದುಕೊಂಡಳು ನಿಖಿತಾ. ಆದರೆ ಆ ದಿನ ಆಫೀಸ್‌ ನಿಂದ ಅರ್ಜೆಂಟ್‌ಕಾನ್ಛರೆನ್ಸ್ ಗೆ ತಾನು ಡೆಲ್ಲಿಗೆ ಹೋಗಬೇಕು ಎರಡು ದಿನ ಬರಲು ಆಗಲ್ಲ, ಎಂದು ಅವನು ಹೊರಟೇಬಿಟ್ಟ. ಎಲ್ಲರಿಗೂ ವಾರ್ಷಿಕೋತ್ಸವದ ದಿನ ಪ್ರಣವ್ ಮನೆಯಲ್ಲಿ ಇರುವುದಿಲ್ಲವೆಂದು ತಿಳಿದು, ಅರ್ಜೆಂಟ್‌ಕೆಲಸ ಇದೆ. ಅವನು ಬಂದ ಮೇಲೆ ಇವರಿಬ್ಬರನ್ನೇ ಎಲ್ಲಾದರೂ ಹೊರಗೆ ಕಳುಹಿಸಬೇಕು ಎಂದುಕೊಂಡರು.

ನಿಖಿತಾಳಿಗೆ ನಿರಾಸೆಯಾದರೂ ಕೆಲಸದ ಒತ್ತಡವೆಂದು ನಾನು ಆಮೇಲೆ ಹೇಳಿದರಾಯಿತು ಎಂದು ಸುಮ್ಮನಾದಳು. ಮರುದಿನ ಎಲ್ಲರೂ ನಿಖಿತಾಳಿಗೆ ವಿಷ್‌ಮಾಡಿ ಬೇಜಾರು ಮಾಡಿಕೊಳ್ಳಬೇಡ. ಪ್ರಣವ್ ಬಂದ ಮೇಲೆ ನೀವು ಹೊರಗೆ ಹೋಗಿ ಬನ್ನಿ ಎಂದು ಸಮಾಧಾನಿಸಿದರು. ಆದರೆ ಪ್ರಣವ್ ನಿಖಿತಾಳಿಗೆ ಫೋನ್‌, ಮೆಸೇಜ್‌ಯಾವುದನ್ನೂ ಮಾಡಲಿಲ್ಲ.

ನಿಖಿತಾಳಿಗೆ ತುಂಬಾ ನೋವಾಯಿತು. ಆದರೆ ಸಂಜೆ ಅವಳ ಗೆಳತಿ ಅವಳಿಗೆ ಕಾಲ್‌ಮಾಡಿ ಪ್ರಣವ್ ನನ್ನು ಇದೇ ಊರಿನಲ್ಲಿ ನೋಡಿದೆ ಎಂದಾಗ ಅವಳಿಗೆ ಆಘಾತಾಯಿತು. ಜೊತೆಗೆ ಬಹಳ ಸಿಟ್ಟು ಬಂದಿತು.

ಮರುದಿನ ಬೆಳಗ್ಗೆ ಕೆಲಸ ಬೇಗ ಮುಗಿಯಿತು ಎಂದು ಹೇಳಿ ಪ್ರಣವ್ ಮನೆಗೆ ವಾಪಸ್‌ಬಂದ. ಅವನು ತನ್ನ ರೂಮಿಗೆ ಹೋದ. ನಿಖಿತಾ, “ಹೀಗೆ ಏಕೆ ಸುಳ್ಳು ಹೇಳಬೇಕಿತ್ತು?” ಎಂದು ನೇರವಾಗಿ ಕೇಳಿದಳು.

ಪ್ರಣವ್, ನಿಖಿತಾಳ ಕಣ್ಣು ನೋಡಿ ಅವಳು ಇಡೀ ರಾತ್ರಿ ಅತ್ತಿರುವುದು ಗೊತ್ತಾಯಿತು. ಆದರೆ ಅವನಿಗೆ ಹಿಂದಿನ ವಾರ ಆದ ಅವಮಾನವೆಲ್ಲಾ ನೆನಪಾಗಿ ಮತ್ತೆ ಅವಳ ಮೇಲೆ ಕೋಪ ಉಕ್ಕಿ ಬಂದಿತು, “ಇನ್ನೇನು ನಿನ್ನ ಪ್ರೀತಿ ಮಾಡುತ್ತಾ ಇಡೀ ದಿನ ನಿನ್ನ ಹಿಂದೆ ಓಡಾಡಬೇಕಿತ್ತಾ…..? ನಿನ್ನನ್ನು ನಾನೇನು ಇಷ್ಟಪಟ್ಟು ಮದುವೆಯಾಗಿಲ್ಲ. ನಿನಗೆ ಕಷ್ಟ ಕೊಡುವುದಕ್ಕಾಗಿಯೇ ನಿನ್ನನ್ನು ಕಂಡರೆ ಆಗದೆ ಇದ್ದರೂ ನಿನ್ನನ್ನು ಮದುವೆಯಾದೆ. ಎಲ್ಲರಿಗೂ ನೀನು ತಲೆ ಕೆಡಿಸಿರಬಹುದು. ಆದರೆ ನನ್ನನ್ನು ಎಂದಿಗೂ ನೀನು ಗೆಲ್ಲಲಾರೆ. ನನ್ನ ಜೀವನ ಹಾಳು ಮಾಡಿಕೊಂಡು ನಿನ್ನನ್ನು ಕಟ್ಟಿಕೊಂಡಿದ್ದಕ್ಕೆ ಸಂಭ್ರಮ ಬೇರೆ,” ಎಂದು ಒರಟಾಗಿ ಹೇಳಿ ರೂಮಿನಿಂದ ಆಚೆ ಹೋದ.

ನಿಖಿತಾಳಿಗೆ ಬಹಳವೇ ಆಘಾತವಾಯಿತು. `ಇವನು ಎಂದೂ ಬದಲಾಗುವುದಿಲ್ಲ. ನಾನೇ ಏನೇನೋ ತಪ್ಪು ಕಲ್ಪನೆ ಮಾಡಿಕೊಂಡೆ. ನಾವು ಎಂದಿಗೂ ಒಂದಾಗುವುದಿಲ್ಲ,’ ಎಂದುಕೊಂಡ ನಿಖಿತಾಳ ಸ್ವಾಭಿಮಾನಕ್ಕೆ ದೊಡ್ಡ ಹೊಡೆತ ಬಿದ್ದಿತು. `ಇಲ್ಲ, ಇನ್ನು ಮುಂದೆ ಇವನ ಹಂಗು ಬೇಡ. ಇದ್ಯಾವುದರ ನೆನಪೂ ಕೂಡ ಬೇಡ,’ ಎಂದು ನಿರ್ಧರಿಸಿ ತನ್ನ ಬಟ್ಟೆ ಬರೆಗಳನ್ನೆಲ್ಲಾ ಪ್ಯಾಕ್‌ಮಾಡಿಕೊಂಡು ತನ್ನ ತವರಿಗೆ ಹೊರಟಳು.

ಮನೆಯಲ್ಲಿ ಎಲ್ಲರೂ ಕೇಳಿದಾಗ, “ಅಮ್ಮನಿಗೆ ಹುಷಾರಿಲ್ಲ. ಅವರೊಬ್ಬರೆ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಒಂದು ಹದಿನೈದು ದಿನ ಅಮ್ಮನ ಜೊತೆ ಇದ್ದು ಬರ್ತೀನಿ,” ಎಂದು ಹೇಳಿದಳು.

ಅವಳು ಮದುವೆ ಆದಾಗಿನಿಂದ ತವರಿಗೆ ಹೋಗಿದ್ದೇ ಕಮ್ಮಿ. ಪಾಪ ಅವಳಿಗೂ ಅಮ್ಮ ಬೇಕು ಎಂದು ಅನಿಸುತ್ತದೆ. ಸ್ವಲ್ಪ ದಿನ ಇದ್ದು ಬರಲಿ ಎಂದು ಸಮ್ಮತಿಸಿದರು. ಹುಷಾರಾದ ಕೂಡಲೇ ಬಂದು ಬಿಡಬೇಕು ನಮಗೆ ನಿನ್ನನ್ನು ಅಷ್ಟು ದಿನ ಬಿಟ್ಟಿರುವುದು ತುಂಬಾ ಕಷ್ಟವೆಂದರು. ಅವರೆಲ್ಲರ ಆತ್ಮೀಯತೆ ಕಂಡು ಅವಳಿಗೆ ಅಳುವೇ ಬಂದಿತು. ನಿಖಿತಾ ಮತ್ತು ಪ್ರಣವ್ ನಡುವೆ ನಡೆದ ಜಗಳ ತಿಳಿಯದೇ ಅವಳನ್ನು ಕಳುಹಿಸಿಕೊಟ್ಟರು.

ನಿಖಿತಾ ಮನೆ ಬಿಟ್ಟು ಬಂದು ತಾಯಿಯ ಬಳಿ, “ನಿನ್ನನ್ನು ನೋಡಿಕೊಳ್ಳಲು ಬಂದಿರುವೆ. ಸ್ವಲ್ಪ ದಿನ ಇಲ್ಲೇ ಇರ್ತೀನಿ,” ಎಂದು ತಾಯಿಯನ್ನು ನಂಬಿಸಿದಳು.

ಸಂಜೆ ಮನೆಗೆ ಬಂದ ಪ್ರಣವ್ ಗೆ ನಿಖಿತಾ ಎಲ್ಲೂ ಕಾಣಲಿಲ್ಲ. ರಾತ್ರಿ ಊಟದ ಸಮಯದಲ್ಲಿ ಅಮ್ಮನ ಬಳಿ ವಿಚಾರಿಸಿದ. “ನಿಖಿತಾ ತಾಯಿಯನ್ನು ನೋಡಿಕೊಳ್ಳಲು ಹದಿನೈದು ದಿನಗಳು ಅಲ್ಲಿ ಇರಲು ಹೋಗಿದ್ದಾಳೆ. ಅವಳ ಮೊಬೈಲ್ ‌ನಲ್ಲಿ ಚಾರ್ಜ್ ಕಮ್ಮಿ ಇತ್ತು ಎನ್ನುತ್ತಿದ್ದಳು. ಅದಕ್ಕೆ ನಿನಗೆ ಫೋನ್‌ಮಾಡಿಲ್ಲ ಅನಿಸುತ್ತೆ,” ಎಂದು ಹೇಳಿದರು.

ತನ್ನ ಮೇಲೆ ಕೋಪ ಮಾಡಿಕೊಂಡು ಹೋಗಿದ್ದಾಳೆಂದು ಪ್ರಣವ್ ಗೆ ಗೊತ್ತಾಯಿತು. ರಾತ್ರಿ ಮಲಗಲು ರೂಮಿಗೆ ಬಂದಾಗ ಇಡೀ ರೂಮೇ ಖಾಲಿ ಖಾಲಿ ಎನಿಸಿತು. `ಆದರೆ ತನಗೆ ಒಂದು ಮಾತೂ ಹೇಳದೆ ಹೋಗಿದ್ದಾಳೆ….. ಎಷ್ಟು ಸೊಕ್ಕು ಅವಳಿಗೆ! ತಾನು ಹೋಗಿ ಸಾರಿ ಕೇಳಿ ಕರೆಯಲಿ ಎಂದು ತವರಿಗೆ ಹೋಗಿದ್ದಾಳೆ. ಹೋದಳು ಅವಳು. ಬೇಕಾದರೆ ಅವಳೇ ಬರಲಿ ನನಗೇನು….? ನಾನಂತೂ ಕರೆಯುವುದಿಲ್ಲ, ಫೋನ್‌ಮಾಡುವುದಿಲ್ಲ,’ ಎಂದುಕೊಂಡ. ಅವಳ ಮೇಲಿನ ಸಿಟ್ಟು ಇನ್ನೂ ಜಾಸ್ತಿ ಆಯಿತು. ಹಾಗೆಯೇ ಮಲಗಿಕೊಂಡ.

ಇತ್ತ ನಿಖಿತಾ, `ತನ್ನ ಪ್ರೀತಿ ಅವನಿಗೆ ತಿಳಿಯಲೇ ಇಲ್ಲ. ಅವನು ಅಷ್ಟು ರೂಡ್‌ಆಗಿ ಮಾತನಾಡಿ ಒಂದು ಸಾರಿಯೂ ಕೇಳದೇ ನಾನು ಅಷ್ಟು ನೋವಿನಲ್ಲಿರುವುದು ಗೊತ್ತಿದ್ದರೂ ಸುಮ್ಮನೆ ಇದ್ದಾನೆ. ನಾನು ಬೇಜಾರು ಮಾಡಿಕೊಂಡು ಮನೆ ಬಿಟ್ಟು ಬಂದಿದ್ದೀನಿ. ಅವನು ಮನೆಗೆ ಬಂದಾಗ ನಾನು ಕಾಣಿಸಿರುವುದಿಲ್ಲ. ಆದರೂ ಅಟ್ಲೀಸ್ಟ್ ಒಂದು ಫೋನ್‌ಅಥವಾ ಒಂದು ಮೆಸೇಜ್‌ಕೂಡ ಇಲ್ಲ. ಅವನಿಗೆ ನನ್ನ ಮೇಲೆ ಪ್ರೀತಿ ಇಲ್ಲವೇ ಇಲ್ಲ. ಹೌದು ಅವನು ನನ್ನನ್ನು ದ್ವೇಷಿಸುತ್ತಾನೆ. ಅವನು ನನ್ನನ್ನು ಮದುವೆಯಾಗಿದ್ದೇ ನನ್ನನ್ನು ಹಿಂಸಿಸಿ ನನಗೆ ಪಾಠ ಕಲಿಸಲು ತಾನೇ? ನಾನೇ ದಡ್ಡಿ ಸುಮ್ಮನೆ ಇಲ್ಲದ ಭಾವನೆಗಳನ್ನು ಬೆಳೆಸಿಕೊಂಡು ಎಂದಿಗೂ ಈಡೇರದ ಕನಸು ಕಂಡೆ,’ ಎಂದೆನಿಸಿತು ಅವಳಿಗೆ.

ಅವಳ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಇನ್ನು ಮುಂದೆ ತಾನು ಎಂದಿಗೂ ಆ ಮನೆಗೆ ಮತ್ತು ಪ್ರಣವ್ ನ ಜೀವನದಲ್ಲಿ ಹೋಗಬಾರದು. ನನ್ನ ಪಾಡಿಗೆ ನಾನು ಇರಬೇಕು. ಆದಷ್ಟೂ ಬೇಗ ಅಮ್ಮನನ್ನು ಕರೆದುಕೊಂಡು ಇವರೆಲ್ಲರಿಂದ ದೂರ ಹೋಗಿಬಿಡಬೇಕು ಎಂದು ನಿಶ್ಚಿಯಿಸಿ ರಾತ್ರಿಯೆಲ್ಲಾ ಅತ್ತು ಅತ್ತೂ ಹಾಗೆ ನಿದ್ದೆ ಮಾಡಿದಳು.

ತನ್ನನ್ನು ಅರ್ಥ ಮಾಡಿಕೊಳ್ಳದ ಪ್ರಣವ್ ಗೆ ಫೋನ್‌ಮಾಡಲು ಅವಳ ಸ್ವಾಭಿಮಾನ ಅಡ್ಡ ಬಂದಿತು. ನಿಖಿತಾಳನ್ನು ಅಪಾರ್ಥ ಮಾಡಿಕೊಂಡ ಪ್ರಣವ್ ಗೆ ಅವಳಿಗೆ ಫೋನ್‌ಮಾಡಲು ಅವನ ಈಗೋ ಒಪ್ಪಿಕೊಳ್ಳಲಿಲ್ಲ. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ಕೋಪಿಸಿಕೊಂಡಿದ್ದರು.

sanidhya-story1

ಮರುದಿನ ಬೆಳಗ್ಗೆ ಎದ್ದ ಪ್ರಣವ್ ಆಫೀಸಿಗೆ ರೆಡಿಯಾಗಿ ಹೊರಡುವಷ್ಟರಲ್ಲಿ ಅವನಿಗೆ ಸಾಕು ಸಾಕಾಗಿತ್ತು. ಎಲ್ಲವನ್ನೂ ಹೊಂದಿಸಿಕೊಳ್ಳಲು ಪರದಾಡಿದ. ಅವನ ಎಲ್ಲಾ ಕೆಲಸಗಳನ್ನು ನಿಖಿತಾಳೆ ಮಾಡಿಕೊಡುತ್ತಿದ್ದಳು. ಈಗ ಅವನಿಗೆ ಕೆಲಸ ಮಾಡುವ ಅಭ್ಯಾಸ ತಪ್ಪಿಹೋಗಿತ್ತು. ನಿಖಿತಾಳ ಬಳಿ ಮಾತನಾಡದೆ ಅವನಿಗೆ ಏನೋ ಕಳೆದುಕೊಂಡ ಹಾಗಾಗಿತ್ತು. ಅವವನಿಗೆ ಇಡೀ ಮನೆಯೇ ಭಣಭಣ ಎನ್ನುವಂತೆ ಭಾಸವಾಯಿತು. ಅವನಿಗೆ ಅವಳನ್ನು ಕಾಣದೆ ಇರಿಸುಮುರಿಸಾಯಿತು. ಎರಡು ದಿನ ಕಳೆಯುವುದು ಅವನಿಗೆ ಎರಡು ವರ್ಷವಾದಂತೆ ಅನಿಸಿತು. ಅವಳ ಬಳಿ ಮಾತನಾಡದೆ, ಅವಳನ್ನು ನೋಡದೆ ಇರಲಾರೆ ಎನಿಸಿತು ಪ್ರಣವ್ ಗೆ.  ತನಗೇಕೆ ಹೀಗಾಗುತ್ತಿದೆ? ತಾನು ನಿಖಿತಾಳ ಬಳಿ ಕೆಟ್ಟದಾಗಿ ನಡೆದುಕೊಂಡೆನೇ….? ತಾನು ನಿಖಿತಾಳನ್ನು ಪ್ರೀತಿ ಮಾಡುತ್ತಿರುವೆನಾ?’ ಎಂದೆಲ್ಲಾ ಯೋಚಿಸಿದ.

ಒಂದು ವಾರ ಕಳೆಯಿತು. ನಿಖಿತಾ ಇಲ್ಲದೇ ಜೀವನದಲ್ಲಿ ಉತ್ಸಾಹವೇ ಇಲ್ಲ ಎನ್ನುವಂತೆ ಆಯಿತು ಪ್ರಣವ್ ಗೆ. `ಹೌದು ತಾನು ಅವಳನ್ನು ಪ್ರೀತಿಸುತ್ತಿರುವುದು ಸತ್ಯ. ಅವಳಿಲ್ಲದೆ ದಿನ ಕಳೆಯುವುದು ತುಂಬಾ ಕಷ್ಟವಾಗುತ್ತಿತ್ತು ಅವನಿಗೆ. ಅವಳನ್ನು ನೋಡಲು ಅವಳ ಜೊತೆ ಮಾತನಾಡಲು ಮನ ಕಾತರಿಸುತ್ತಿತ್ತು. ಅವಳಿಲ್ಲದೆ ತಾನಿಲ್ಲ.’ ಹೀಗೆ ಅವಳ ಬಗ್ಗೆಯೇ ಯೋಚಿಸುತ್ತಾ ನಿದ್ದೆಗೆ ಜಾರಿದ ಪ್ರಣವ್.

ಇತ್ತ ನಿಖಿತಾಳ ಮನಸ್ಸು ತುಂಬಾ ಘಾಸಿಯಾಗಿತ್ತು. ಪ್ರಣವ್ ಇಷ್ಟು ದಿನವಾದರೂ ಒಂದು ಫೋನ್‌ಕೂಡ ಮಾಡಿಲ್ಲ. ಆದರೆ ಈ ಪ್ರೀತಿ ಏಕೆ ಹೀಗೆ? ಮನಸ್ಸು ಪದೇ ಪದೇ ಅವನನ್ನೇ ಬಯಸುತ್ತಿತ್ತು. ಅವನು ಬೇಕು, ಅವನೇ ಬಂದು ಸಮಾಧಾನ ಮಾಡಿ ಕರೆದುಕೊಂಡು ಹೋಗಬೇಕು, ಎಂದು ಅನಿಸತೊಡಗಿತು. `ನಾನು ಅವನನ್ನು ಬಹಳ ಪ್ರೀತಿಸಿದೆ. ಈ ಪ್ರೀತಿ ಹೀಗೆ ಯಾವಾಗ, ಯಾರ ಮೇಲೆ ಹೇಗೆ ಆಗುತ್ತದೆ ಎಂದು ಗೊತ್ತೇ ಆಗುವುದಿಲ್ಲ. ಅವನಿಲ್ಲದೆ ಬದುಕೇ ಇಲ್ಲ ಅನಿಸುತ್ತಿದೆ. ಆದರೆ ಅವನಿಗೆ ಎಂದಿಗೂ ನನ್ನ ಮೇಲೆ ಪ್ರೀತಿ ಮೂಡಲೇ ಇಲ್ಲ. ಅವನು ಉಸಿರು ಇರುವವರೆಗೂ ನನ್ನನ್ನು ದ್ವೇಷ ಮಾಡುತ್ತಾನೆ. ಅವನಿಗೆ ನನ್ನ ಮುಖ ಕಂಡರೆ ಆಗದು, ಕಿರಿಕಿರಿ. ಇನ್ನೂ ಸ್ವಲ್ಪ ದಿನ ಇಲ್ಲೇ ಇದ್ದರೆ ಅಮ್ಮ ನನ್ನ ಮೇಲೆ ಮತ್ತು ಅವನ ಮನೆಯವರು ಅವನ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ಬಲವಂತವಾಗಿ ಅವನ ಜೀವನಕ್ಕೆ ಮರಳಬೇಕಾಗುತ್ತೆ.`ಇದು ನನ್ನ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು. ನಾನು ಬೇರೆ ದೇಶಕ್ಕೆ ಹೋಗಿ ಕೆಲಸಕ್ಕೆ ಸೇರಬೇಕು. ಆಗ ಇದರಿಂದ ನನಗೆ ಮುಕ್ತಿ,’ ಎಂದು ದೃಢವಾಗಿ ನಿರ್ಧರಿಸಿ ಅಂದು ರಾತ್ರಿಯೇ ಎಲ್ಲಾ ವೆಬ್‌ ಸೈಟ್‌ ಗಳನ್ನೂ ಜಾಲಾಡಿ ತನ್ನ ರೆಸ್ಯೂಮ್ ಕಳುಹಿಸಿದಳು. ಆಗ ಅವಳಿಗೆ ಅವಳ ಆಪ್ತ ಗೆಳತಿ ಇಂಗ್ಲೆಂಡ್‌ ನಲ್ಲಿ ಇರುವುದು ನೆನಪಾಯಿತು. ಅವಳಿಗೆ ಮೇಲ್‌ಮಾಡಿ, ತನ್ನ ಪರಿಸ್ಥಿತಿ ವಿವರಿಸಿದಳು. ತಾನು ಕೆಲಸ ಹುಡುಕುತ್ತಿರುವುದಾಗಿ ಹೇಳಿ ಅವಳ ಸಹಾಯ ಕೇಳಿ ತನ್ನ ರೆಸ್ಯೂಮ್ ನ್ನು ಅವಳಿಗೆ ಕಳುಹಿಸಿ, ಅವಳ ನಂಬರನ್ನು ಕಳುಹಿಸಲು ಹೇಳಿ ಮಲಗಿದಳು. ಅವಳಿಗೆ ಒಂದು ರೀತಿಯಲ್ಲಿ ಮನಸ್ಸು ನಿರಾಳಾಗಿತ್ತು.

ಮರುದಿನ ಆಫೀಸ್‌ ಗೆ ಹೋದ ಪ್ರಣವ್ ಗೆ ನಿಖಿತಾಳದೆ ನೆನಪು ಕಾಡತೊಡಗಿತು. ಏನೋ ಹೊಸ ಹುರುಪು ಅವನೊಳಗೆ. ದಿನಪೂರ್ತಿ ಕೆಲಸ ಮಾಡಲಾಗದೆ ಮನೆಗೆ ವಾಪಸ್‌ಬಂದುಬಿಟ್ಟ. ಸಂಜೆ ನಿಖಿತಾಳನ್ನು ಮಾತನಾಡಿಸಲು ಅವಳಿಗೆ ಫೋನ್ ಮಾಡಿದ. ಆದರೆ ಅವಳ ಫೋನ್‌ಸ್ವಿಚ್‌ಆಫ್‌ಆಗಿತ್ತು.

ಅಂದರೆ ತನ್ನ ಮೇಲೆ ನಿಖಿತಾಳಿಗೆ ಕೋಪ ಕಡಿಮೆ ಆಗಿಲ್ಲ. ಅವಳು ನನ್ನನ್ನು ಎಷ್ಟು ಆರಿಸಿಬಿಟ್ಟಿದ್ದಾಳೆ. ಈ ಪ್ರೀತಿ ಎಷ್ಟು ಅದ್ಭುತ. ದೂರವಿದ್ದಷ್ಟೂ ಇನ್ನೂ ಹೆಚ್ಚಾಗುತ್ತಿದೆ. ನನ್ನ ಜೀವನವನ್ನು ಬದಲಾಯಿಸಿಬಿಟ್ಟಳು ಅವಳು. ನನ್ನಲ್ಲಿ ತುಂಬಿದ್ದ ಆಹಂಕಾರವನ್ನು ಓಡಿಸಿಬಿಟ್ಟು, ಬದುಕುವ ಪಾಠ ಕಲಿಸಿದಳು. ನನ್ನ ಮನೆಯವರನ್ನೆಲ್ಲಾ ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡು ಅವರ ಸೇವೆಯನ್ನು ಪ್ರೀತಿಯಿಂದ ಮಾಡುತ್ತಾ, ಏನನ್ನೂ ನಿರೀಕ್ಷಿಸದೆ ತಾನು ಎಷ್ಟೇ ನೋವು ಕೊಟ್ಟರೂ, ಅದನ್ನು ಸಹಿಸಿಕೊಂಡು ಯಾರೊಂದಿಗೂ ತೋರಿಸಿಕೊಳ್ಳದೆ ತನ್ನ ಪಾಡಿಗೆ ತಾನಿದ್ದಳು. ನಾನು ಅವಳಿಗೆ ಎಷ್ಟೆಲ್ಲಾ ಹಿಂಸೆ ಮಾಡಿದೆ, ಎಷ್ಟೆಲ್ಲಾ ನೋವು ಕೊಟ್ಟುಬಿಟ್ಟೆ. ಅವಳು ಸೋತು ಗೆದ್ದುಬಿಟ್ಟಳು. ನಾನು ಗೆದ್ದು ಸೋತುಬಿಟ್ಟೆ.  `ದ್ವೇಷದಿಂದ ಏನೂ ಸಾಧ್ಯವಿಲ್ಲ. ಆದರೆ ಪ್ರೀತಿಯೊಂದು ಜೊತೆಗಿದ್ದರೆ ಇಡೀ ಪ್ರಪಂಚವನ್ನೇ ಗೆಲ್ಲಬಹುದು,’ ಎಂದು ಅವಳು ಅಂದು ಹೇಳಿದ್ದಳು. ಅವಳ ಪ್ರತಿಯೊಂದು ಮಾತೂ ಅಕ್ಷರಶಃ ಸಹ ನಿಜ.

ಇಲ್ಲ ಅವಳು ನನಗೆ ಬೇಕು. ಅವಳಿಲ್ಲದೆ ಈ ಬದುಕೇ ಇಲ್ಲ. ನನಗೆ ಅವಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಅವಳ ಬಳಿ ಮಾತನಾಡಿ ಕ್ಷಮೆ ಕೇಳಿ ಅವಳನ್ನು ವಾಪಸ್‌ಕರೆತರಬೇಕು. ಆದರೆ ಯಾವ ಮುಖ ಇಟ್ಟುಕೊಂಡು ಅವಳ ಬಳಿ ಹೋಗಲಿ? ಇಲ್ಲ…. ಅವಳಿಲ್ಲದಿದ್ದರೆ ನಾನು ಸತ್ತು ಹೋಗುವೆ. ತಪ್ಪು ನನ್ನದೇ. ಅವಳು ಬೈದರೂ, ಹೊಡೆದರೂ ಪರವಾಗಿಲ್ಲ ಅವಳನ್ನು ಕಾಡಿ ಬೇಡಿಯಾದರೂ ಅವಳನ್ನು ವಾಪಸ್‌ಕರೆದುಕೊಂಡು ಬರುವೆ. ನಾಳೆ ಬೆಳಗ್ಗೆ ಎದ್ದ ಕೂಡಲೇ ಅವಳ ಮನೆಗೆ ಹೋಗಬೇಕು ಎಂದು ನಿರ್ಧರಿಸಿ ಮಲಗಿದ ಪ್ರಣವ್.

ಮರುದಿನ ಬೆಳಗ್ಗೆ ಎದ್ದವನೇ ನೇರ ನಿಖಿತಾಳ ಮನೆಗೆ ಬಂದ. ಅಲ್ಲಿ ನಿಖತಾಳನ್ನು ಕಂಡಕೂಡಲೇ ಅವನ ಮನಸ್ಸು ಉಲ್ಲಾಸದಿಂದ ಕುಣಿದಾಡಿತು. ನಿಖಿತಾಳ ತಾಯಿ ಅವನನ್ನು ಚೆನ್ನಾಗಿ ಮಾತನಾಡಿಸಿ, ಕಾಫಿ ಕೊಟ್ಟರು. ಕಾಫಿ ಕುಡಿಯುತ್ತಾ, ನಿಖಿತಾಳ ಬಳಿ, “ನಾನು ನಿನ್ನ ಬಳಿ ಸ್ವಲ್ಪ ಮಾತನಾಡಬೇಕು ಹೊರಗೆ ಹೋಗೋಣ,” ಎಂದ.

ತಮ್ಮ ವಿರಸ ತಾಯಿಗೆ ತಿಳಿಯಬಾರದೆಂದು ನೆನೆಸಿದ ಅವಳು, “ಸರಿ ಹೋಗೋಣ,” ಎಂದಳು.

ಇಬ್ಬರೂ ಪಕ್ಕದಲ್ಲೇ ಇದ್ದ ಪಾರ್ಕ್‌ ಗೆ ಹೋದರು. ಪ್ರಣವ್ ಅವಳೊಂದಿಗೆ ಒಂದು ಕಲ್ಲು ಬೆಂಚಿನ ಮೇಲೆ ಕೂತು, ಮಾತಿಗಾರಂಭಿಸಿದ, “ನಿಖಿ, ಐ ಆ್ಯಮ್ ರಿಯಲಿ ವೆರಿ ವೆರಿ ಸಾರಿ…. ನಾನು ನಿನಗೆ ತುಂಬಾ ನೋವು ಮಾಡಿದ್ದೀನಿ. ನನಗೆ ಗೊತ್ತು. ಆದರೆ ನೀನು ಇಲ್ಲಿಗೆ ಬಂದ ಮೇಲೆ ನಾನು ನಿನ್ನನ್ನು ಎಷ್ಟು ಪ್ರೀತಿ ಮಾಡ್ತಿದ್ದೀನಿ ಅಂತ ಗೊತ್ತಾಯಿತು. ಈ ಪಾಪಿಯನ್ನು ದಯವಿಟ್ಟು ಕ್ಷಮಿಸಿಬಿಡು. ನೀನು ಏನು ಶಿಕ್ಷೆ ಕೊಟ್ಟರೂ ನಾನು ಅದನ್ನು ಸಂತೋಷದಿಂದ ಸ್ವೀಕರಿಸುವೆ. ಆದರೆ ದಯವಿಟ್ಟು ಮನೆಗೆ ವಾಪಸ್ಸು ಬಾ. ನನಗೆ ನಿನ್ನನ್ನು ಬಿಟ್ಟಿರಲು ಸಾಧ್ಯವಿಲ್ಲ. ನನಗೆ ಒಂದೇ ಒಂದು ಅವಕಾಶ ಕೊಡು. ಇನ್ನೆಂದೂ ನಿನ್ನ ಕಣ್ಣಿನಲ್ಲಿ ನೀರು ಬರದ ಹಾಗೆ, ನಿನಗೆ ದುಃಖವೇ ಸೋಕದ ಹಾಗೆ ನೋಡಿಕೊಳ್ತೀನಿ. ಐ ಲವ್ ಯೂ ಸೋ ಮಚ್‌ನಿಖಿ. ಐ ಲವ್ ಮೋರ್‌ಮೋರ್‌ದ್ಯಾನ್‌ಎನಿಥಿಂಗ್‌ಎಲ್ಸ್,” ಎಂದು ಪರಿಪರಿಯಾಗಿ ಕೇಳಿದ.

“ಇದು ಹೊಸ ನಾಟಕಾನಾ….? ಮತ್ತೆ ನಾನು ಫೂಲ್ ಆಗಲು ತಯಾರಿಲ್ಲ ಪ್ರಣವ್. ನಾನು ಎಷ್ಟು ಹಂಬಲಿಸಿದೆ. ನಿನ್ನ ಪ್ರೀತಿಗಾಗಿ ಎಷ್ಟೆಲ್ಲ ಸಹಿಸಿದೆ. ಆದರೆ ನೀನು ನನಗೆ ಕೊಟ್ಟಿದ್ದು ಬರೀ ಕಣ್ಣೀರು, ನೋವು, ನಿರಾಸೆ. ನನಗೆ ಇದ್ಯಾವುದೂ ಬೇಡ ಅನಿಸಿಬಿಟ್ಟಿದೆ. ಈ ದ್ವೇಷ, ಕೋಪ, ನೋವು ನನಗೆ ಯಾವುದೂ ಬೇಡ. ನನಗೆ ಇದೆಲ್ಲಾ ಸಾಕಾಗಿ ಹೋಗಿದೆ. ಅದಕ್ಕೆ ಇದೆಲ್ಲದರಿಂದ ತುಂಬಾ ದೂರ ಹೋಗಿ ಬಿಡಬೇಕೆಂದು ತೀರ್ಮಾನಿಸಿದೀನಿ. ನನಗೆ ಇಂಗ್ಲೆಂಡ್‌ ನಲ್ಲಿ  ಕೆಲಸ ಸಿಕ್ಕಿದೆ. ನಾನು ಇನ್ನೂ ಹದಿನೈದು ದಿನಕ್ಕೆ ಇಲ್ಲಿಂದ ಹೊರಡ್ತೀನಿ. ನಿನಗೆ ಯಾವ ಕಿರಿಕಿರಿಯೂ ಇರುವುದಿಲ್ಲ,” ಎಂದಳು ನಿಷ್ಠೂರವಾಗಿ.

“ಬೇಡ ನಿಖಿ….. ನನಗೆ ಇಷ್ಟು ದೊಡ್ಡ ಶಿಕ್ಷೆ ಕೊಡಬೇಡ ಪ್ಲೀಸ್‌. ನೀನಿಲ್ಲದೆ ಇದ್ದರೆ ನಾನು ಸತ್ತೇ ಹೋಗ್ತಿನಿ,” ಎಂದವನ ಕಣ್ಣಿನಲ್ಲಿ ನೀರು ಬಂದಿತು.

online-friend-story1

“ಇಲ್ಲ ಪ್ರಣವ್….. ನಾನು ನಿರ್ಧಾರ ಮಾಡಿ ಆಗಿದೆ. ಮತ್ತೆ ಬದಲಾಯಿಸೋ ಮಾತೇ ಇಲ್ಲ,” ಎಂದು ಹೇಳಿ ಹೊರಟುಬಿಟ್ಟಳು.

ನಿಖಿತಾಳ ತಾಯಿಗೆ ಮಗಳು ಮನೆಗೆ ಬಂದಿದ್ದು ಸ್ವಲ್ಪ ಅನುಮಾನವಾಗಿತ್ತು. ಹೀಗಾಗಿ ಅಳಿಯ ಮಗಳು ಹೊರಗೆ ಹೋದಾಗ ತಾವು ಅವರಿಗೆ ಗೊತ್ತಿಲ್ಲದಂತೆ ಹಿಂದಿನಿಂದ ಬಂದು ಪಾರ್ಕ್‌ ನಲ್ಲಿ ಮರೆಯಾಗಿ ನಿಂತು ಇವರಿಬ್ಬರ ಮಾತುಕಥೆ ಕೇಳಿಸಿಕೊಂಡಿದ್ದರು.

ನಿಖಿತಾ ಹೋದ ಮೇಲೆ ಪ್ರಣವ್ ಇನ್ನೂ ಪಾರ್ಕ್‌ ನಲ್ಲೇ ಕುಳಿತಿದ್ದ. ಅವನ ಬಳಿ ಬಂದು ಏನೆಂದು ವಿಚಾರಿಸಿದಾಗ, ಪ್ರಣವ್ ಎಲ್ಲ ಘಟನೆಯನ್ನು ಅವರ ಬಳಿ ವಿವರಿಸಿ, “ಅತ್ತೆ, ನನ್ನಿಂದ ಮಹಾ ಅಪರಾಧವಾಗಿದೆ. ಆದರೆ ಒಂದೇ ಒಂದು ಅವಕಾಶ ಮಾಡಿಕೊಡಿ. ನಾನು ನನ್ನ ತಪ್ಪನ್ನು ತಿದ್ದಿಕೊಳ್ತೀನಿ. ಮತ್ತೆಂದೂ ಹೀಗೆ ನಡೆದುಕೊಳ್ಳುವುದಿಲ್ಲ,” ಎಂದು ಅವರ ಬಳಿ ಕೈಮುಗಿದು ಕೇಳಿಕೊಂಡ.

“ಸರಿ…. ನಿನ್ನ ತಪ್ಪು ನಿನಗೆ ತಿಳಿದು ನೀನು ಪಶ್ಚಾತ್ತಾಪಪಟ್ಟರೆ ಅದೇ ದೊಡ್ಡ ಶಿಕ್ಷೆ. ನಾನು ನಿಖಿತಾಳ ಹತ್ತಿರ ಮಾತಾಡ್ತೀನಿ. ನೀನೇನೂ ಬೇಸರ ಮಾಡಿಕೊಳ್ಳಬೇಡ. ಮನೆಗೆ ಹೋಗು,” ಎಂದು ಅವನಿಗೆ ಸಮಾಧಾನ ಹೇಳಿ ಅವನನ್ನು ಕಳುಹಿಸಿ ತಾವು ಮನೆಗೆ ಬಂದರು.

ಮನೆಗೆ ಬಂದವರೇ ಮಗಳ ಬಳಿ, “ನೋಡು ನಿಖಿತಾ, ಜೀವನ ತುಂಬಾ ಚಿಕ್ಕದು. ಯಾರಿಗಾದರೂ ಅಷ್ಟು ಶಿಕ್ಷೆ ಕೊಡುವ ಮೊದಲು ಒಂದು ಅವಕಾಶ ಮಾಡಿಕೊಡಬೇಕು. ನಂತರ ಅವರು ಬದಲಾಗದಿದ್ದರೆ ಆಗ ಬೇರೆ ಮಾರ್ಗ ಯೋಚಿಸಬೇಕು. ನೀನು ಪ್ರಣವ್ ಗೆ ಒಂದು ಅವಕಾಶವೇ ಕೊಡದೆ ಹೀಗೆ ನಿರ್ಧಾರ ಮಾಡಿರುವುದು ಸರಿಯಲ್ಲ. ಇದು ಮಹಾ ತಪ್ಪು. ಅವನ ಮನೆಯವರು ನಿನಗಾಗಿ ಕಾಯುತ್ತಿದ್ದಾರೆ. ಏನೂ ತಪ್ಪು ಮಾಡದ ಅವರ ಪ್ರೀತಿ ಆತ್ಮೀಯತೆಗೆ ಅವರಿಗೇಕೆ ಶಿಕ್ಷೆ ಕೊಡಬೇಕು? ನೀನು ದೂರ ಹೋದರೂ ಅವರನ್ನೆಲ್ಲಾ ಮರೆತು ಇರಬಲ್ಲೆಯಾ…? ನಿನಗೆ ನೆಮ್ಮದಿ  ಇರುತ್ತಾ….? ಇಲ್ಲ ನಿಖಿತಾ! ಕ್ಷಮಿಸುವುದರಲ್ಲಿ ಸಿಗುವ ತೃಪ್ತಿ, ಸಮಾಧಾನ ಯಾವುದಕ್ಕೂ ಸಮ ಅಲ್ಲ. ಅದೇ ರೀತಿ ಪ್ರೀತಿಸುವುದರಲ್ಲಿ ಸಿಗುವ ಶಾಂತಿ ನೆಮ್ಮದಿ ಬೇರೆ ಯಾವುದರಲ್ಲಿಯೂ ಸಿಗಲ್ಲ. ನೀನು ನಿನ್ನ ನಿರ್ಧಾರದ ಬಗ್ಗೆ ಇನ್ನೊಮ್ಮೆ ಯೋಚಿಸಿ ನೋಡು ನಿಖಿತಾ,” ಎಂದು ಮಗಳಿಗೆ ಬುದ್ಧಿ ಹೇಳಿ, ಅವಳಿಗೆ ಯೋಚಿಸಲು ಅವಕಾಶ ಕೊಟ್ಟರು.

ರೂಮಿಗೆ ಬಂದ ನಿಖಿತಾ, ತಾಯಿ ಹೇಳಿದ್ದರ ಕುರಿತು ಯೋಚಿಸಿದಳು, `ಅಮ್ಮ ಹೇಳಿದ್ದು ಸರಿಯಾಗೇ ಇದೆ. ಯಾವುದೇ ವ್ಯಕ್ತಿಯನ್ನಾದರೂ ಶಿಕ್ಷಿಸುವ ಮೊದಲು ಅವಕಾಶ ನೀಡಬೇಕು. ಆದರೆ ಪ್ರಣವ್ ನನ್ನನ್ನು ನಿಜವಾಗಿ ಪ್ರೀತಿಸುತ್ತಿರುವನಾ…? ಇಲ್ಲ ಅವನನ್ನು ನಂಬುವುದೇ ಕಷ್ಟ. ನಾನು ಶಿಕ್ಷಿಸಲು ದೂರ ಹೋಗುತ್ತಿಲ್ಲ. ನಾನು ನನ್ನನ್ನು, ನನ್ನತನವನ್ನು ಕಾಪಾಡಿಕೊಳ್ಳಲು ದೂರ ಹೋಗುವ ನಿರ್ಧಾರ ತೆಗೆದುಕೊಂಡೆ. ಆದರೆ ಪ್ರಣವ್ ಮನೆಯವರೆಲ್ಲ ತೋರಿದ ಆತ್ಮೀಯತೆ, ಪ್ರೀತಿ ಎಲ್ಲವನ್ನೂ ಹೇಗೆ ಮರೆಯಲು ಸಾಧ್ಯ….? ಸಂಬಂಧಗಳ ನಡುವೆ ಇವರು ಮಹತ್ವ ತಿಳಿದಿರುವ ನಾನು ಅದೇ ಮನೆಯಲ್ಲಿದ್ದು ಅವರ ಪ್ರೀತಿ, ಆತ್ಮೀಯತೆ ಅನುಭವಿಸಿ ಈಗ ಅವರಿಗೆ ಹೇಳದೇ ಕೇಳದೇ ಅವರ ಮನಸ್ಸಿಗೆ ನೋವು ಕೊಟ್ಟು ಹೇಗೆ ಹೋಗಲಿ….?’ ಯೋಚಿಸಿ ಯೋಚಿಸಿ ಉತ್ತರವೇ ಸಿಗದೆ ಗೊಂದಲದಲ್ಲಿ ಸಿಲುಕಿ ಒದ್ದಾಡಿದಳು.

ಅಷ್ಟರಲ್ಲಿ ಅವಳ ಫೋನ್‌ರಿಂಗಾಯಿತು. ಅವಳ ಅತ್ತೆ ಫೋನ್‌ಮಾಡಿ, “ನಿಖಿತಾ, ಪ್ರಣವ್ ಗೆ ಅಪಘಾತವಾಗಿದೆ. ಅವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನನಗೆ ಬಹಳ ಭಯವಾಗುತ್ತಿದೆ. ನೀನು ಈಗಲೇ ಆಸ್ಪತ್ರೆಗೆ ಹೊರಟು ಬಾಮ್ಮಾ….. ನಾವು ಈಗ ಹೊರಟಿದ್ದೀವಿ,” ಎಂದು ಹೇಳಿ ಫೋನ್‌ಇಟ್ಟರು.

ನಿಖಿತಾಳಿಗೆ ಅಳುವೇ ಬಂದಿತು. ತಾಯಿಗೆ ಹೇಳಿದರೆ ಅವರು ಗಾಬರಿಯಾಗುತ್ತಾರೆ. ಆಮೇಲೆ ತಿಳಿಸಿದರಾಯಿತು ಅಂದುಕೊಂಡು, “ಅಮ್ಮಾ…. ಒಂದು ಅರ್ಜೆಂಟ್‌ಕೆಲಸ ಇದೆ. ಬೇಗ ಬರ್ತೀನಿ ಬಾಗಲು ಹಾಕ್ಕೋ,” ಎಂದು ಹೇಳಿ ಅವಸರವಸರವಾಗಿ ಆಟೋದಲ್ಲಿ ಹೊರಟಳು.

ಅವಳಿಗೆ ಮನದ ತುಂಬಾ ಆತಂಕ, `ಅಯ್ಯೋ ದೇವರೇ ಹೀಗೇಕೆ ಮಾಡಿದೆ…..? ಪಾಪ ಪ್ರಣವ್ ಗೆ ಇಷ್ಟು ದೊಡ್ಡ ಶಿಕ್ಷೆ ಕೊಡಬೇಡ. ಅವನಿಗೆ ಏನೂ ಆಗದೇ ಇರಲಿ. ಛೇ…. ಎಲ್ಲಾ ನನ್ನಿಂದಲೇ ಆಗಿದ್ದು. ನಾನು ತುಂಬಾ ರೂಡ್‌ಆಗಿ ಮಾತಾಡಿ ಅವರ ಮನಸ್ಸು ನೋಯಿಸಿದೆ. ಅದೇ ಬೇಜಾರಿನಲ್ಲಿ ಕಾರು ಓಡಿಸಿಕೊಂಡು ಹೋಗಿ ಎಲ್ಲಿ ಆಕ್ಸಿಡೆಂಟ್‌ಮಾಡಿಕೊಂಡರೋ ಏನೋ….?’ ಎಂದು ಮನಸ್ಸಿನಲ್ಲಿ ಅಂದುಕೊಂಡಳು.

ಅಷ್ಟರಲ್ಲಿ ಆಸ್ಪತ್ರೆ ಬಂತು. ಅವಳು ಆಟೋ ಇಳಿದು ರಿಸೆಪ್ಷನ್‌ಬಳಿ, “ಈಗ ಸ್ವಲ್ಪ ಹೊತ್ತಿಗೆ ಮೊದಲು ಒಂದು ಆಕ್ಸಿಡೆಂಟ್‌ಕೇಸ್ ಬಂದಿತಲ್ಲ…..” ಎಂದು ಹೆಸರು ಹೇಳುವ ಮೊದಲೇ, ಆ ರಿಸೆಪ್ಷನಿಸ್ಟ್, “ಓ…. ಆ ಕೇಸಾ, ಸಾರಿ ಮೇಡಂ. ಕಂಡೀಷನ್‌ಈಸ್‌ವೆರಿ ಕ್ರಿಟಿಕಲ್. ಬರೋವಾಗಲೇ ತುಂಬಾ ರಕ್ತ ಹೋಗಿತ್ತು. ಎಷ್ಟು ಪ್ರಯತ್ನಪಟ್ಟರೂ ಅವರನ್ನು ಉಳಿಸಲು ಆಗಲಿಲ್ಲ. ಪ್ರಾಣ ಹೋಗಿಬಿಡ್ತು,” ಎಂದಳು.

ಅವರು ಹಾಗೇ ಹೇಳಿದ ತಕ್ಷಣ ನಿಖಿತಾ, “ನೋ….!!” ಎಂದು ಜೋರಾಗಿ ಕೂಗಿ ಅಲ್ಲೇ ಕುಸಿದು ಜೋರಾಗಿ ಅಳುತ್ತಾ, “ಅಯ್ಯೋ ಪ್ರಣವ್, ನಿನ್ನನ್ನು ಬಿಟ್ಟು ನಾನು ಹೇಗೆ ಬದುಕಲಿ. ನನ್ನ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆನಾ…..? ನೀನು ಇಲ್ಲ ಅಂತ ಊಹಿಸುವುದೂ ನನ್ನಿಂದ ಸಾಧ್ಯವಿಲ್ಲ. ಇಲ್ಲ ನಾನು ಇನ್ನೂ ಜೀವಂತಾಗಿರಲಾರೆ,” ಎಂದು ಗೋಳಾಡತೊಡಗಿದಳು.

ಹಿಂದಿನಿಂದ ಪ್ರಣವ್ ಮತ್ತು ಅವನ ತಾಯಿ ಎಲ್ಲಾ ಕೇಳಿಸಿಕೊಳ್ಳುತ್ತಿದ್ದರು. ಅಲ್ಲಿಗೆ ಬಂದ ರಿಸೆಪ್ಷನಿಸ್ಟ್ ಬಂದು, “ಪಾಪ ಸರ್‌,  ಆ್ಯಕ್ಸಿಡೆಂಟ್‌ಕೇಸ್‌ಎಂದು ಕೇಳಿದರು. ಅವರು ಉಳಿಯಲಿಲ್ಲ ಎಂದು ಹೇಳಿದೆ. ಅದಕ್ಕೆ ಹೀಗೇ ಅಳುತ್ತಾ ಇದ್ದಾರೆ….” ಎಂದು ಹೇಳಿದಳು.

ಪ್ರಣವ್ ಗೆ ಎಲ್ಲ ಅರ್ಥವಾಯಿತು. ಏನೋ ತಪ್ಪು ಕಲ್ಪನೆ ಆಗಿದೆ ಎಂದು ನಿಖಿತಾಳನ್ನು ಸಮಾಧಾನಪಡಿಸಲು ತಕ್ಷಣ ಅವಳ ಬಳಿ ಓಡಿ ಬಂದು, ಅವಳನ್ನು ಎಬ್ಬಿಸುತ್ತಾ, “ನಿಖಿತಾ…..” ಎಂದ.

ಪ್ರಣವ್ ನ ಸ್ವರ ಕೇಳುತ್ತಲೇ, ತಲೆ ಎತ್ತಿ ನೋಡಿದ ನಿಖಿತಾ ತಕ್ಷಣ ಅವನನ್ನು ಅಪ್ಪಿಕೊಂಡು, “ಪ್ರಣವ್…. ಐ ಆ್ಯಮ್ ರಿಯಲಿ ವೆರಿ ಸಾರಿ….. ಪ್ಲೀಸ್‌ನನ್ನನ್ನು ಬಿಟ್ಟು ಎಲ್ಲೂ ಹೋಗಬೇಡಿ. ನನಗೆ ನಿಮ್ಮನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಯೂ ಆರ್‌ಮೈ ಲೈಫ್‌, ಮೈ ಲವ್ ಎಲ್ಲ….. ಐ ಲವ್ ಯೂ ಸೋ ಮಚ್‌ಪ್ರಣವ್…..” ಎಂದಳು.

ಅವಳ ಮಾತನ್ನು ಕೇಳಿ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳನ್ನು ಅಪ್ಪಿಕೊಂಡು ಅವಳನ್ನು ಸಮಾಧಾನಪಡಿಸುತ್ತಾ, “ನಿಖಿ ನೋಡು ಇಲ್ಲಿ…. ನನಗೇನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೀನಿ. ನೀನು ಕನ್‌ ಫ್ಯೂಸ್‌ಆಗಿದ್ದೀಯಾ…. ನಾನು ಬ್ಯಾಂಕ್‌ ನಿಂದ ಬರುವಾಗ ಮೆಟ್ಟಿಲು ಇಳಿಯುವಾಗ ಯಾರೋ ಡಿಕ್ಕಿ ಹೊಡೆದು ಕೆಳಗೆ ಬಿದ್ದುಬಿಟ್ಟೆ. ನಡೆಯಲು ಆಗುತ್ತಿರಲಿಲ್ಲ. ಗಾಡಿ ಬೇರೆ ಪಂಕ್ಚರ್‌ಆಗಿತ್ತು. ಅದಕ್ಕೆ ಆಟೋದಲ್ಲಿ ಆಸ್ಪತ್ರೆಗೆ ಬಂದೆ. ಡಾಕ್ಟರ್‌ಸ್ಟ್ರೆಸ್‌ಆಗಿದೆ ಹದಿನೈದು ದಿನ ಪ್ಲಾಸ್ಟರ್ ಹಾಕಿಕೊಂಡರೆ ಸರಿ ಹೋಗುತ್ತೆ ಎಂದು ಪ್ಲಾಸ್ಟರ್‌ಹಾಕಿದರು. ಇಲ್ಲಿಂದ ಹೊರಡುವಾಗ ಒಂದು ಮಗುವಿಗೆ ಅರ್ಜೆಂಟ್‌ಸರ್ಜರಿ ಆಗಬೇಕು. ಅದಕ್ಕೆ ಬ್ಲಡ್‌ಬೇಕಿತ್ತು ಎಲ್ಲೂ ಸಿಗುತ್ತಿಲ್ಲ ಎಂದು ಮಗುವಿನ ತಾಯಿ ತಂದೆ ಅಳುತ್ತಿದ್ದರು. ಅದಕ್ಕೆ ಬ್ಲಡ್‌ಡೊನೇಟ್ ಮಾಡಿದೆ. ಕಾಲಿಗೆ ಪೆಟ್ಟಾದ ಕಾರಣ ಸುಸ್ತು ಜಾಸ್ತಿ ಆಯಿತು. ಹಾಗೇ ತಲೆ ಸುತ್ತು ಬಂದ ಕಾರಣ ಅಮ್ಮನಿಗೆ ಫೋನ್‌ಮಾಡಲು ಹೇಳಿದೆ. ಅವರು ಗಾಬರಿಯಲ್ಲಿ ಸರಿಯಾಗಿ ಕೇಳಿಸಿಕೊಳ್ಳದೆ ನಿನಗೂ ಕಾಲ್‌ಮಾಡಿ ಕನ್‌ ಫ್ಯೂಸ್‌ಮಾಡಿದ್ದಾರೆ ಅಷ್ಟೇ. ಐ ಆ್ಯಮ್ ವೆರಿಮಚ್‌ಫೈನ್‌,” ಎಂದು ವಿವರಿಸಿ ಹೇಳಿದಾಗ ಅವಳಿಗೆ ನೆಮ್ಮದಿಯಾಯಿತು.

“ಸಧ್ಯ…. ನೀವು ಸೇಫ್‌ಆಗಿದ್ದೀರಲ್ಲ ಅಷ್ಟೇ ಸಾಕು. ನನಗೆ ಈಗ ಜೀವ ಬಂದಿತು,” ಎಂದು ಸುತ್ತಲೂ ನೋಡಿದಾಗ ಆಸ್ಪತ್ರೆ ಎಂದು ನೆನಪಾಗಿ ಎಲ್ಲರೂ ಅವಳನ್ನೇ ನೋಡುತ್ತಿದ್ದನ್ನು ಕಂಡು ನಾಚಿಕೆಯಿಂದ ಅವನ ತೋಳಿನಿಂದ ಬಿಡಿಸಿಕೊಂಡು ಹೊರಗೆ ಓಡಿದಳು.

ಅವಳ ಹಿಂದೆಯೇ ಓಡಿ ಬಂದ ಪ್ರಣವ್, “ಏ…. ನಿಖಿ ನಿಂತುಕೋ….” ಎನ್ನುತ್ತಾ ಅವಳ ಹಿಂದೆ ಓಡಿಬಂದ.

ಅಷ್ಟರಲ್ಲಿ ಪ್ರಣವ್ ನ ಅಮ್ಮ ಅವರ ಬಳಿ ಬಂದು, “ನೀವಿಬ್ಬರೂ ನಿಧಾನಕ್ಕೆ ಮನೆಗೆ ಬನ್ನಿ. ನಾನು ಈಗ ಹೊರಡ್ತೀನಿ,” ಎಂದರು.

ಅದಕ್ಕೆ ಪ್ರಣವ್, “ಇಲ್ಲ ಅಮ್ಮಾ….. ನನಗೆ ಕಾಲು ನೋವಿದೆ. ನಾವು ಈಗಲೇ ಬರ್ತೀವಿ,” ಎನ್ನುತ್ತಾ ನಿಖಿತಾಳಿಗೆ ಮಾತನಾಡಲು ಅವಕಾಶ ನೀಡದೆ ಅವಳನ್ನು ಒಳಗೆ ಕೂರಿಸಿಕೊಂಡ. ನಿಖಿತಾ ಎಲ್ಲಿ ತಿರುಗಿ ಅಮ್ಮನ ಮನೆಗೆ ಹೋಗಿ ಅಲ್ಲಿಯೇ ಕುಳಿತುಬಿಟ್ಟರೆ ಎಂದು ಪ್ರಣವ್ ಗೆ ಭಯ. ಅವನ ಭಯ ಕಂಡು ನಿಖಿತಾಗೆ ಒಳಗೊಳಗೆ ನಗು ಬಂದಿತು. ಎಲ್ಲರೂ ಮನೆಗೆ ಬಂದರು. ಮನೆಗೆ ಬಂದು ರೂಮಿಗೆ ಬಂದ ಕೂಡಲೇ ಪ್ರಣವ್ ನಿಖಿತಾಳ ಬಳಿ ಬಂದು, “ಐ ಆ್ಯಮ್ ಸೋ ಹ್ಯಾಪಿ ಟುಡೇ….. ನನ್ನ ದೇವತೆ ನನಗೆ ವಪಸ್‌ಸಿಕ್ಕಿಬಿಟ್ಟಳು. ದ್ವೇಷದಿಂದ ಏನೂ ಸಾಧ್ಯವಿಲ್ಲ ಎಂದು ನನ್ನಲ್ಲಿ ಪ್ರೀತಿ ತುಂಬಿ, ಪ್ರೀತಿಸುವುದನ್ನು ಕಲಿಸಿದ ದೇವತೆ ನೀನು….  ಇನ್ನೆಂದಿಗೂ ನಿನ್ನ ಕಣ್ಣಿನಲ್ಲಿ ನೀರು ಬರದಂತೆ ನೋಡಿಕೊಳ್ತೀನಿ. ನನ್ನ ಬದುಕು, ನನ್ನ ಸಂತೋಷ, ನನ್ನ ಕನಸು ಎಲ್ಲಾ ನೀನೇ. ಈ ಮನೆಯ ಬೆಳಕು ನೀನು. ಎಂದಿಗೂ ನನ್ನ ಬಿಟ್ಟು ಎಲ್ಲೂ ಹೋಗಬೇಡ. ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ. ಇಂದು ನೀನು ನನ್ನ ಉಳಿಸಿಬಿಟ್ಟೆ ನಿಖಿ. ಈ ದಿನ ನನಗೆ ಏನೋ ಆಯಿತು ಎಂದು ನೀನು ತಪ್ಪು ತಿಳಿದೆ. ಆದರೆ ನೀನು ನನ್ನಿಂದ ದೂರ ಹೋಗಿದ್ದರೇ ಈ ದಿನ ಆ ತಪ್ಪು ತಿಳಿವಳಿಕೆ  ನಿಜವಾಗುತ್ತಿತ್ತು,” ಎಂದು ಅವಳನ್ನು ಅಪ್ಪಿಕೊಂಡ.

“ಥೂ… ಎಂಥಾ ಮಾತು ಆಡ್ತೀಯಾ….,,” ಎಂದು ಅವನ ಬಾಯಿ ಮೇಲೆ ಕೈಯಿಟ್ಟ ನಿಖಿತಾ, “ತಮಾಷೆಗೂ ಹಾಗೆಲ್ಲ ಹೇಳಬೇಡ. ನನಗೆ  ಸಹಿಸಲು ಆಗಲ್ಲ. ನಾನು ನಿನ್ನನ್ನು ಬಿಟ್ಟು ಇರಲಾರೆ, ನಿನ್ನನ್ನು ಬಿಟ್ಟು ಎಲ್ಲೂ ಹೋಗಲಾರೆ. ಬದುಕಿನಲ್ಲಿ ಪ್ರೀತಿಯೊಂದಿದ್ದರೆ ಸಾಕು. ಎಲ್ಲ ಶಾಂತವಾಗಿರುತ್ತದೆ,” ಎಂದಳು.

ನಿಖಿತಾಳ ತಾಯಿಯ ಬಳಿ ಬಂದ ಪ್ರಣವ್, “ಅತ್ತೆ, ನೀವು ಒಬ್ಬರೇ ಏಕೆ ಇರಬೇಕು ಇಲ್ಲಿ….? ನಾನು ನಿಮ್ಮ ಮಗನೇ ಅಲ್ವಾ….? ನೀವು ನಿಮ್ಮ ಮಗನ ಮನೆಯಲ್ಲಿಯೇ ಇರಬೇಕು,” ಎಂದು ಬಹಳ ಬಲವಂತ ಮಾಡಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಜೊತೆಯಲ್ಲಿ ಇಟ್ಟುಕೊಂಡ.

ಇಷ್ಟು ಒಳ್ಳೆಯ ಗುಣವಿರುವ ವ್ಯಕ್ತಿ ತನ್ನ ಮಗಳ ಕೈ ಹಿಡಿದಿದ್ದು ಅವಳ ಅದೃಷ್ಟ. ಅವರಿಬ್ಬರ ಪ್ರೀತಿಯನ್ನು ಕಂಡು ಅವರಿಗೂ ತುಂಬಾ ಸಂತೋಷವಾಯಿತು. ಮನಸ್ಸಿಗೆ ನೆಮ್ಮದಿಯಾಯಿತು ಅವರಿಗೆ. ಪ್ರಣವ್ ನ ಮನೆಯವರಿಗೂ ಇವರಿಬ್ಬರ ಅನನ್ಯ ಪ್ರೀತಿ ಕಂಡು ತುಂಬಾ ಸಂತಸವಾಯಿತು. ಮನೆಯಲ್ಲಿ ಶಾಂತಿ ನೆಲೆಸಿ ಆ ಮನೆ ಸದಾ ಶಾಂತಿ ತುಂಬಿದ ನಂದನ ವನವಾಯಿತು.

ಎರಡು ವರ್ಷಗಳ ನಂತರ ಪ್ರಣವ್ ಮತ್ತು ನಿಖಿತಾಗೆ ಮುದ್ದಾದ ಹೆಣ್ಣು ಮಗು ಹುಟ್ಟಿತು. ಮಗುವಿಗೆ ನಾಮಕರಣ ಸಮಾರಂಭದಲ್ಲಿ ಇವರಿಬ್ಬರ ಅನನ್ಯ ಪ್ರೇಮಕ್ಕೆ ಗುರುತಾಗಿ ಮಗುವಿಗೆ ಅನನ್ಯಾ ಎಂದು ಹೆಸರಿಟ್ಟರು. ಎಲ್ಲರೂ ಸಂತೋಷದಿಂದ ಬಾಳಿದರು. ಅವರ ಮನೆಯಲ್ಲಿ ಸದಾ ಹರುಷ, ಶಾಂತಿ ತುಂಬಿಕೊಂಡಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ