ಯಾವ ರತ್ನಾಳನ್ನು ಮನೆಯವರು ಅನಾಗರಿಕಳು, ಹಳ್ಳಿಗುಗ್ಗು ಎಂದೆಲ್ಲ ಹೀಗಳೆಯುತ್ತಿದ್ದರೋ, ಅದೇ ರತ್ನಾ ಮುಂದೆ ಯಾವ ಚಮತ್ಕಾರ ಮಾಡಿ ಮನೆಯರೆಲ್ಲರ ಮನಗೆದ್ದಳು…..?
ತವರಿನಿಂದ ಇಂದು ವಿಶಾಖಾಳ ಬೀಳ್ಕೊಡುಗೆ ನಡೆಯಲಿತ್ತು. ಅತ್ತೆಮನೆಗೆ ಹೋಗಲಿದ್ದ ಮಗಳ ಪ್ರತಿಯೊಂದು ಬೇಕು ಬೇಡಗಳನ್ನೂ ತವರಿನವರು ತಮ್ಮ ಶಕ್ತಿಗೆ ಅನುಸಾರವಾಗಿ ಬಲು ಪ್ರೀತಿಯಿಂದ ನೆರವೇರಿಸಿದ್ದರು. ಅವಳ ಜೊತೆಗೆ ಕೊಂಡೊಯ್ಯಲು ಧಾರಾಳ ಉಡುಗೊರೆಗಳು ಜೊತೆಗೂಡಿದ್ದವು. ಅಂತೂ ಸಾಂಪ್ರದಾಯಿಕವಾಗಿ ಅವಳು ತವರಿನಿಂದ ಬೀಳ್ಕೊಂಡಳು.
ಅಂತೂ ಅವಳು ಅತ್ತೆ ಮನೆಯಲ್ಲಿ ಗೃಹಪ್ರವೇಶ ನಡೆಸಿ, ಮೊದಲ ದಿನ ಎದುರಿಸುವವಳಿದ್ದಳು. ಆ ಮನೆಯಲ್ಲಿ ಎಲ್ಲೆಲ್ಲೂ ಸಡಗರ, ಸಂಭ್ರಮದ ಗದ್ದಲದ ವಾತಾವರಣ. ಆ ಮನೆಯಲ್ಲಿ ಎಲ್ಲರೂ ಬಹಳ ಖುಷಿಯಾಗಿದ್ದರು. ಎಲ್ಲೆಡೆ ಹರ್ಷೋಲ್ಲಾಸದ ವಾತಾವರಣ ತುಂಬಿ ತುಳುಕಾಡುತ್ತಿತ್ತು.
ವಿಶಾಖಾ ತನ್ನ ಅತ್ತೆಮನೆಯ ಓರಗಿತ್ತಿಯರು, ನಾದಿನಿ, ಮತ್ತಿತರ ಹಿರಿಯ ಹೆಂಗಸರ ನಗು, ಹಾಸ್ಯದ ಕೀಟಲೆಗಳಿಂದ ಕೆಂಪಾಗಿ ಹೋದಳು.
ಅವಳನ್ನು ಕೋಣೆಯಲ್ಲಿ ಕುಳ್ಳಿರಿಸಿ ಅವರೆಲ್ಲ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಅಲ್ಲಿಗೆ ವರುಣ್ ನಿಧಾನವಾಗಿ ನಡೆದು ಬಂದ. ಆಗ ಪಲ್ಲವಿ ಅತ್ತೆ ಬೇಕೆಂದೇ ಅವನ ಕಿವಿ ಹಿಂಡುತ್ತಾ, “ಓಹೋ….ಹೋ…. ಹೊಸ ಅಳಿಯನಿಗೆ ಎಲ್ಲಿಲ್ಲದ ಅವಸರ….. ಇಡೀ ಜೀವನ ಇಬ್ಬರೂ ಒಟ್ಟಿಗೇ ಕಳೆಯಬಹುದು ತಾನೇ…. ಹೊಸ ಸೊಸೆಗೆ ನಾವು ಒಂದಿಷ್ಟು ಕಿವಿ ಮಾತು ಹೇಳುವಷ್ಟರಲ್ಲಿ ನೀನು ಬಂದೇ ಬಿಡುವುದೇ…..?” ಎಂದಾಗ ಅಲ್ಲಿದ್ದವರೆಲ್ಲ ಸೂರು ಹಾರುವಂತೆ ಹೋ ಎಂದು ನಕ್ಕರು. ವರುಣ್ ಸಹ ನಾಚಿಕೆಯಿಂದ ತಲೆ ತಗ್ಗಿಸಿದ್ದ.
ವಿಶಾಖಾ ಮಂದಹಾಸ ಬೀರುತ್ತಾ ಎಲ್ಲರ ಕಡೆ ನಿಧಾನವಾಗಿ ನೋಡುತ್ತಿದ್ದಳು. ಎಲ್ಲರ ಮುಖದಲ್ಲೂ ಸಂಭ್ರಮ ಕುಣಿಯುತ್ತಿದ್ದರೆ, ಇವಳ ಅತ್ತೆ ರತ್ನಾಳ ಮುಖದಲ್ಲಿ ಮಾತ್ರ ಏನೋ ಒಂದು ನಿರ್ಲಿಪ್ತ ಭಾವ. ದುಬಾರಿ ಒಡವೆ, ವಸ್ತ್ರ ಧರಿಸಿದ್ದರೂ ಅವಳೇಕೋ ಆ ವಾತಾವರಣದಲ್ಲಿ ಹೊಂದದವಳಂತೆ ವಿಭಿನ್ನವಾಗಿ ಕಂಡುಬಂದಳು.
ವರುಣ್ ವಿಶಾಖಾರ ಮದುವೆಯ ಆರತಕ್ಷತೆ ಅತಿ ಅದ್ಧೂರಿಯಿಂದ ನಡೆದಿತ್ತು. ಅತಿ ದುಬಾರಿ ರೇಷ್ಮೆ ಸೀರೆ, ಹೊಳೆ ಹೊಳೆಯುವ ಆಭರಣಗಳಿಂದ ನವ ವಧು ವಿಶಾಖಾ ಮಿರಿ ಮಿರಿ ಮಿಂಚುತ್ತಿದ್ದಳು. ವರುಣ್ ಸಹ ನೀಲಿ ಸೂಟ್ ನಲ್ಲಿ ಎಲ್ಲರ ಹೊಗಳಿಕೆಗೆ ಪಾತ್ರನಾಗಿದ್ದ.
ಮಾರನೇ ದಿನ ಮಧ್ಯಾಹ್ನ ಊಟದ ನಂತರ ಮದುವೆ ಮನೆಗೆ ಬಂದಿದ್ದ ಅತಿಥಿಗಳೆಲ್ಲ ಒಬ್ಬೊಬ್ಬರೇ ಹೊರಟು ಸಂಜೆ ಹೊತ್ತಿಗೆ ಮನೆ ಖಾಲಿ ಆಗಿತ್ತು. ಈಗ ಮನೆಯಲ್ಲಿ ಉಳಿದವರು ಅಂದ್ರೆ ವಿಶಾಖಾಳ ಅತ್ತೆ ರತ್ನಾ, ಮಾವ ರಾಜೇಶ್, ವರುಣನ ಅಕ್ಕ ಸಂಗೀತಾ ಮಾತ್ರ.
ಅದರ ಮಾರನೇ ದಿನ ವಿಶಾಖಾ ತವರಿಗೆ ಹೋಗಿ ತನ್ನ ಬಟ್ಟೆಬರೆಯ ಸೂಟ್ ಕೇಸ್, ತನ್ನದೇ ಒಂದಿಷ್ಟು ಇತರ ಖಾಸಗಿ ವಸ್ತುಗಳನ್ನು ತರಬೇಕಿತ್ತು. ಬೆಂಗಳೂರಿನಲ್ಲಿಯೇ ಅವಳು ಮದುವೆಯಾಗಿ ತವರಿನ ರಾಜಾಜಿನಗರದಿಂದ ಜಯನಗರದ ಅತ್ತೆ ಮನೆಗೆ ಬಂದಿದ್ದಳಷ್ಟೆ. ಮದುವೆ ಮನೆಗೆ ಅವಳು ತನ್ನೆಲ್ಲ ಸಾಮಗ್ರಿ ಕೊಂಡು ಹೋಗಲು ಸಾಧ್ಯ ಆಗಿರಲಿಲ್ಲ.
ಮದುವೆ ನಂತರ ಮೊದಲ ಸಲ ತವರಿಗೆ ಹೊರಡುತ್ತಿದ್ದಳು. ಹೀಗಾಗಿ ಯಾವ ಸೀರೆ ಉಡಲಿ ಎಂದು ಅತ್ತೆಯನ್ನು ಕೇಳಲು, 2 ಹೊಸ ಸೀರೆ ತೆಗೆದುಕೊಂಡು ಅವರ ಬಳಿ ಹೋದಳು.
“ಅತ್ತೆ, ಈ ನೀಲಿ, ಕೇಸರಿ ಬಣ್ಣದ ಸೀರೆಗಳಲ್ಲಿ ಯಾವುದನ್ನು ಉಟ್ಟುಕೊಂಡು ಹೋಗಲಿ?” ಎಂದು ಅಕ್ಕರೆಯಿಂದ ವಿಚಾರಿಸಿದಳು.
ಅದಕ್ಕೆ ರತ್ನಾ ಹೇಳಿದಳು, “ವೈಶೂ…. ನಿನಗೆ ಯಾವುದು ಇಷ್ಟವೋ ಅದನ್ನೇ ಆರಿಸಿಕೊಳ್ಳಮ್ಮ…. ನಿನ್ನ ಮೈ ಬಣ್ಣಕ್ಕೆ ಈ ಕೇಸರಿ ಸೀರಿ ಚೆನ್ನಾಗಿ ಒಪ್ಪುತ್ತೆ ಅನ್ಸುತ್ತೆ….”
ಅಷ್ಟರಲ್ಲಿ ಅಲ್ಲಿಯೇ ಇದ್ದ ರಾಜೇಶ್ ಜೋರಾಗಿ ನಗುತ್ತಾ, “ನಿನ್ನಂಥ ಹಳ್ಳಿ ಗುಗ್ಗೂನ ಕೇಳಕ್ಕೆ ಬಂದಳಲ್ಲ ನಮ್ಮ ಸೊಸೆ ಮುದ್ದು….. ಈ ಹೊಳೆಯುವ ಬಣ್ಣ ಚಳಿಗಾಲಕ್ಕೆ ಸರಿ, ಈ ಬೇಸಿಗೆಯ ಏಪ್ರಿಲ್ ಮೇಗಲ್ಲ….”
ಮಾವ ಇದೇಕೆ ಹೀಗೆ ಅತ್ತೆಯನ್ನು ಖಂಡಿಸಿ ಮಾತನಾಡುತ್ತಿದ್ದಾರೆ ಎಂದು ವಿಶಾಖಾಳಿಗೆ ಅರ್ಥವಾಗಲಿಲ್ಲ. ಅವನ ಮಾತಿಗೆ ಏನೂ ಎದುರಾಡದೆ ರತ್ನಾ ಮೌನಾಗಿದ್ದುಬಿಟ್ಟಾಗ, ರಾಜೇಶ್ ತಾನೇ ಮುಂದುವರಿದು, “ನೋಡಮ್ಮ…. ಇವಳನ್ನು ಕೇಳೋ ಬದಲು ಸಂಗೀತಾ ಅಕ್ಕನ್ನ ಕೇಳಿ ಹಾಗೇ ಮಾಡು ಹೋಗಮ್ಮ,” ಎಂದು ಪೇಪರ್ ಹಿಡಿದು ಅಲ್ಲಿಂದ ಹೊರಗೆ ನಡೆದರು.
ಮಾವನ ಈ ವ್ಯವಹಾರದಿಂದ ಅವಳು ತುಸು ಹೆದರಿದಳೆಂದೇ ಹೇಳಬಹುದು. ಇವರು ಹೀಗಾದರೆ ಇವರ ಮಗ, ವರುಣ್ ತನ್ನೊಂದಿಗೆ ಇಷ್ಟು ಕಟುವಾಗಿ ವ್ಯವಹರಿಸಿದರೆ ಮುಂದೇನು ಗತಿ ಎಂದು ಆತಂಕಗೊಂಡಳು. ಸಾಮಾನ್ಯವಾಗಿ ಮನೆಗೆ ಒಬ್ಬನೇ ಮಗನಾದರೆ ಅವನ ರೀತಿ ನೀತಿ ಎಲ್ಲಾ ಅಪ್ಪನಂತೆಯೇ ಇರುತ್ತದೆ ಎಂದು ಅವಳು ಕೇಳಿಬಲ್ಲಳು.
ಅಂತೂ ಅವಳು ಅತ್ತೆಯ ಸಲಹೆಯಂತೆಯೇ ಕೇಸರಿ ಬಣ್ಣದ ಸೀರೆ ಉಟ್ಟುಕೊಂಡೇ ತಯಾರಾಗಿದ್ದಳು. ನಾದಿನಿ ಸಂಗೀತಾ ಬಳಿ ಸಲಹೆ ಕೇಳಲು ಅವಳು ಹೋಗಿರಲಿಲ್ಲ. ಅವಳು ರೆಡಿಯಾಗಿ ಕೆಳಗೆ ಬಂದಾಗ ಎಲ್ಲರೂ ಡೈನಿಂಗ್ ಟೇಬಲ್ ಬಳಿ ಉಪಾಹಾರಕ್ಕಾಗಿ ಕುಳಿತಿದ್ದರು.
ರತ್ನಾ ಎಲ್ಲರಿಗೂ ಪೂರಿ ಸಾಗು ಪ್ಲೇಟ್ ನೀಡುತ್ತಿದ್ದಳು. ತಕ್ಷಣ ಸಂಗೀತಾ ಮುಖ ಸಿಂಡರಿಸುತ್ತಾ, “ಇದೇನಮ್ಮ…. ನಮ್ಮನ್ನು ಇನ್ನಷ್ಟು ದಪ್ಪ ಮಾಡಬೇಕೂಂತ ಇದ್ದೀಯಾ?” ಎಂದು ಅಮ್ಮನತ್ತ ವ್ಯಂಗ್ಯವಾಡಿದಳು.
ವರುಣ್ ಸಹ ಅಮ್ಮನನ್ನು ಗದರುವವನಂತೆ, “ಅಮ್ಮಾ, ಏನಾದರೂ ಡಯೆಟ್ ಫುಡ್ ಮಾಡಬಾರದಾ? ಯಾರಿಗೆ ಬೇಕು ಇಂಥ ಹೆವಿ ಬ್ರೇಕ್ ಫಾಸ್ಟ್?” ಎಂದ.
ಆಗ ರಾಜೇಶ್ ಸುಮ್ಮನಿದ್ದಾರಾ? “ಈ ವಯಸ್ಸಿನಲ್ಲಿ ನಿಮ್ಮಮ್ಮ ಅದನ್ನೆಲ್ಲ ಕಲಿತಳು…. ಅದಾಯ್ತು! ತಾನು ಡುಮ್ಮಿ ಆಗಿರೋದು ಸಾಲದೂಂತ ಎಲ್ಲರನ್ನೂ ಹಾಗೇ ಮಾಡಲು ಹಠ ಹೂಡಿದಂತಿದೆ….”
ಎಲ್ಲರೂ ಘೊಳ್ಳನೆ ನಕ್ಕರು. ವಿಶಾಖಾಳಿಗೆ ತನ್ನೆದುರೇ ಅವರೆಲ್ಲ ಅತ್ತೆಯನ್ನು ಹಾಗೆ ಖಂಡಿಸಿದ್ದು ಪಿಚ್ಚೆನೆಸಿತು. ರತ್ನಾ ಮಾತ್ರ ಎಂದಿನಂತೆ ನಿರ್ಲಿಪ್ತಳಾಗಿ ಎಲ್ಲರಿಗೂ ಬಡಿಸುವುದರಲ್ಲಿ ಮುಂದಾಗಿದ್ದಳು.
ಬೇರೆ ಡೈಲಾಗ್ ಬರುವಷ್ಟರಲ್ಲಿ ವಿಶಾಖಾ ತಾನೇ ಥಟ್ಟನೆ ಹೇಳಿದಳು, “ಯಾರಿಗೆ ಹೇಗೋ ಏನೋ…. ನನಗಂತೂ ಪೂರಿ ಸಾಗು ಟೇಸ್ಟ್ ನೋಡಿ ಬಹಳ ದಿನಗಳಾಗಿತ್ತು. ಮನೆಯಲ್ಲೇ ಮಾಡಿದ್ದರಿಂದ ಖಂಡಿತಾ ಪೌಷ್ಟಿಕವಾಗಿರುತ್ತೆ!”
ಸೊಸೆಯ ಮಾತು ಕೇಳಿ ಅತ್ತೆಯ ಮುಖ ಅರಳಿತು. ಅಂತೂ ಹೀಗೆ ಮಾತುಕಥೆ ನಗುವಿನಲ್ಲಿ ತಿಂಡಿ ಮುಗಿಯಿತು. ವಿಶಾಖಾ ಅತ್ತೆಯನ್ನು ಕೂರಿಸಿ ತಾನೇ ಮುಂದಾಗಿ ಎಲ್ಲರಿಗೂ ಕಾಫಿ ಮಾಡಿ ತಂದಳು.
ಅವಳನ್ನು ತವರಿನಲ್ಲಿ ಬಿಟ್ಟು, ತನ್ನ 1-2 ಗಂಟೆಗಳ ಅರ್ಜೆಂಟ್ ಆಫೀಸ್ ಕೆಲಸದ ಸಲುವಾಗಿ ವರುಣ್ ಬೇಗ ಹೊರಟುಬಿಟ್ಟ. ವಿಶಾಖಾ ತನ್ನ ಸೂಟ್ ಕೇಸ್ ಮತ್ತಿತರ ಸಾಮಗ್ರಿ ಜೋಡಿಸಿಕೊಂಡು, ಅಲ್ಲೇ ಊಟ ಮುಗಿಸಿ, ತಮ್ಮ ತಂಗಿ ಜೊತೆ ಹರಟೆ ಹೊಡೆದು, ಅಮ್ಮ ಅಪ್ಪನ ಬಳಿ ಮಾತು ಮುಗಿಸುವಷ್ಟರಲ್ಲಿ ಸಂಜಿ 6 ಗಂಟೆಗೆ ವರುಣನ ಆಗಮನವಾಯಿತು. ಕಾಫಿತಿಂಡಿ ಮುಗಿಸಿ ಅವರು ಬೇಗ ಹೊರಟುಬಿಟ್ಟರು.
ಮಾರನೇ ದಿನ ವರುಣ್ ವಿಶಾಖಾ 15 ದಿನಗಳಿಗಾಗಿ ಸ್ವಿಟ್ಝರ್ ಲ್ಯಾಂಡಿಗೆ ಮಧುಚಂದ್ರಕ್ಕೆಂದು ಹೊರಟರು. ಅಲ್ಲಿಯೂ ಸಹ ಅವಳು ಗಮನಿಸಿದ್ದು ಎಂದರೆ, ಯಾವಾಗಲಾದರೂ ಮಾವ ಅಥವಾ ನಾದಿನಿ ವರುಣ್ ಗೆ ಫೋನ್ ಮಾಡಿ ವಿಚಾರಿಸುತ್ತಿದ್ದರಲ್ಲದೆ, ಅತ್ತೆ ಎಂದೂ ಫೋನ್ ಮಾಡುತ್ತಲೇ ಇರಲಿಲ್ಲ.
ಇವರು ಮಧುಚಂದ್ರ ಮುಗಿಸಿಕೊಂಡು ಮನೆಗೆ ಮರಳಿದಾಗ, ಸಂಗೀತಾ ಅತ್ತೆ ಮನೆಗೆ ಹೊರಟಾಗಿತ್ತು. ಅಂದು ಸಂಜೆ ವಿಶಾಖಾ ತನ್ನ ಅತ್ತೆ ಮಾವನಿಗೆ, ಅವರಿಗಾಗಿ ತಂದಿದ್ದ ಉಡುಗೊರೆಗಳನ್ನು ನೀಡಿದಳು.
ಇವರಿಬ್ಬರೂ ಮಾವನಿಗಾಗಿ ಹಲವು ಆಧುನಿಕ ಟೀಶರ್ಟ್, ಅತ್ತೆಗಾಗಿ ಸನ್ ಗ್ಲಾಸಸ್ ಕೊಂಡಿದ್ದರು. ಇದನ್ನು ಗಮನಿಸಿ ಮಾವ ಹೇಳಿದ್ದು, “ಅಲ್ಲಮ್ಮ…… ನಿಮ್ಮತ್ತೆಗಾಗಿ ನೀನು ಇದೆಂಥ ಗಿಫ್ಟ್ ತಂದೆ? ಇವಳು ಇಂಥದ್ದನ್ನೆಲ್ಲ ಎಂದೂ ಬಳಸಿದವಳಲ್ಲ. ಶಿವಮೊಗ್ಗದ ಸಾಗರದ ಬಳಿಯ ಯಾವುದೋ ದೂರದೂರಿನವಳು…. ಬೆಂಗಳೂರಿಗೆ ಬಂದು ಇಷ್ಟು ವರ್ಷಗಳಾದರೂ ಸ್ವಲ್ಪ ಆಧುನಿಕತೆ ಬೆಳೆಸಿಕೊಳ್ಳಲಿಲ್ಲ. ಈಗ ಇದನ್ನೆಲ್ಲ ತಗೊಂಡು ಏನ್ಮಾಡ್ತಾಳೆ?”
ವಿಶಾಖಾ ಸಮಾಧಾನ ಪಡಿಸುವವಳಂತೆ, “ಈಗ ಬಳಸಲಿ ಬಿಡಿ ಮಾವ…. ಅಷ್ಟು ದೂರದಿಂದ ಪ್ರೀತಿಯಿಂದ ತಂದಿದ್ದನ್ನು ಬೇಡ ಅನ್ನಬಾರದು,” ಎಂದು ಅತ್ತೆ ಪರ ಸಮರ್ಥಿಸಿಕೊಂಡಳು.
ಮಾರನೇ ದಿನ ವರುಣ್, ಅವನ ತಂದೆ ಆಫೀಸಿಗೆ ಹೊರಟರು. ವಿಶಾಖಾಳಿಗೆ ಇನ್ನೂ 1 ವಾರದ ರಜೆ ಇತ್ತು. ಅವಳು ಅತ್ತೆಗೆ ಸಹಾಯ ಮಾಡೋಣ ಎಂದು ಅಡುಗೆಮನೆಗೆ ಹೊರಟಳು. ಅಲ್ಲಿ ರತ್ನಾ ಬೇಸಿನ್ ಲಡ್ಡು ತಯಾರಿಸಲೆಂದು ರೆಡಿ ಮಾಡಿಕೊಂಡಿದ್ದಳು.
ಸೊಸೆಯನ್ನು ನೋಡುತ್ತಾ ರತ್ನಾ ಪ್ರೀತಿಯಿಂದ, “ವೈಶೂ… ನಿನಗೆ ಬೇಸಿನ್ ಲಡ್ಡು ಇಷ್ಟ ತಾನೇ ಕಣಮ್ಮ….?” ಎಂದು ಕೇಳಿದಳು.
ರತ್ನಾ ಆಗಲೇ ಉಂಡೆ ಮಾಡಲೆಂದು ಕಲಸಿದ್ದ ಮಿಶ್ರಣದಿಂದ, ಒಂದು ಚೂರು ತೆಗೆದು ಬಾಯಿಗೆ ಹಾಕಿಕೊಳ್ಳುತ್ತಾ ವಿಶಾಖಾ ಹೇಳಿದಳು, “ಅತ್ತೆ, ನಿಮ್ಮ ಕೈ ರುಚಿ ಅಂದ್ಮೇಲೆ ಕೇಳಬೇಕೇ? ಹೊಗಳಿಕೆ ಮಾತಲ್ಲ, ನಿಜವಾಗಲೂ ಹೇಳ್ತಿದ್ದೀನಿ…. ಇಂಥ ಟೇಸ್ಟಿ ಲಡ್ಡು ಇದುವರೆಗೂ ನಾನು ತಿಂದಿದ್ದೇ ಇಲ್ಲ!”
ರತ್ನಾ ಉದಾಸ ಭಾವನೆಯಿಂದ ಹೇಳಿದಳು, “ಇದೇನು ದೊಡ್ಡ ವಿಷಯವಮ್ಮ, ನಾನು 12 ವರ್ಷದವಳಾಗಿದ್ದಾಗಿನಿಂದ ಅಡುಗೆ ಮಾಡಲು ಆರಂಭಿಸಿದೆ…. ಇಷ್ಟು ಮಾತ್ರ ಮಾಡದಿದ್ದರೆ ನೋಡಿದವರು ಏನಂದುಕೊಳ್ತಾರೆ?”
ಅದಕ್ಕೆ ವಿಶಾಖಾ ಅವರ ಎರಡೂ ಕೈ ಹಿಡಿದುಕೊಳ್ಳುತ್ತಾ, “ಹಾಗಲ್ಲ ಅತ್ತೆ…. ನಿಮ್ಮದು ನಿಜಕ್ಕೂ ಬಹಳ ಪಳಗಿದ ಕೈ! ಎಲ್ಲರಿಗೂ ಅಡುಗೆ ಮಾಡುವುದರಲ್ಲಿ ಈ ಪರಿಪಕ್ವತೆ ಬರೋದಿಲ್ಲ. ನಿಮ್ಮ ತರಹ ಎಲ್ಲರೂ ರುಚಿಯಾಗಿ ಅಡುಗೆ ಮಾಡಿ ಸೈ ಅನ್ನಿಸಿಕೊಳ್ಳಲಿ…. ಆಗ ಗೊತ್ತಾಗುತ್ತೆ…. ಎಲ್ಲರಿಗೂ ಈ ಪರ್ಫೆಕ್ಷನ್ ಅಷ್ಟು ಬೇಗ ಬಂದುಬಿಡುತ್ತಾ? ಎಲ್ಲಕ್ಕೂ ಅನ್ನಪೂರ್ಣೆಯ ಕೃಪಾಕಟಾಕ್ಷ ಇರಬೇಕು,” ಎಂದಳು.
ವಿಶಾಖಾಳಿಗೆ ಅತ್ತೆಯದೇ ದೊಡ್ಡ ಯೋಚನೆಯಾಯಿತು. ಅತ್ತೆ ಇಡೀ ಮನೆಯ ಆಡಳಿತ ಇಷ್ಟು ಚೆನ್ನಾಗಿ ಸುಧಾರಿಸುತ್ತಾರೆ, ಮತ್ತೇಕೆ ಇವರನ್ನು ಕಂಡು ಎಲ್ಲರೂ ಎಲ್ಲ ವಿಷಯಕ್ಕೂ ಹೀಗೆ ಏನಾದರೊಂದು ಕೊಂಕು ಮಾತನಾಡುತ್ತಾರಲ್ಲ…. ಎಂದು ಮನದಲ್ಲೇ ಪೇಚಾಡಿಕೊಂಡಳು.
ಸಂಜೆ ಗಂಡಸರು ಬರುವ ಹೊತ್ತಿಗೆ ತಿಂಡಿ ರೆಡಿ ಮಾಡೋಣ ಎಂದು ರತ್ನಾ ಹುಳಿಯವಲಕ್ಕಿ ರೆಡಿ ಮಾಡಿದಳು. ಅಷ್ಟರಲ್ಲಿ ಹೊರಗಿನ ಸುತ್ತಾಟಕ್ಕೆ ಸಿದ್ಧಳಾಗಿ ವಿಶಾಖಾ ಸಹ ಅಡುಗೆಮನೆಗೆ ಬಂದು, “ಅತ್ತೆ, ಇವರು ಬರುವಷ್ಟರಲ್ಲಿ ನಾನು ಕಾಫಿ ರೆಡಿ ಮಾಡ್ತೀನಿ. ನೀವು ಮುಖ ತೊಳೆದು ರೆಡಿಯಾಗಿ ಬನ್ನಿ. ಹಾಗೇ ಒಂದು ರೌಂಡ್ ಪಾರ್ಕ್ ವರೆಗೂ ವಾಕ್ ಹೋಗಿ ಬರೋಣ,” ಎಂದು ಅತ್ತೆಯನ್ನು ಅವಸರಿಸಿದಳು.
“ಅಯ್ಯೋ…. ಹೊಸ ಮದುಮಕ್ಕಳು, ನೀವಿಬ್ಬರೂ ಹೋಗಿ ಬನ್ನಿ, ಶಿವಪೂಜೆ ಮಧ್ಯೆ ಕರಡಿ ತರಹ ಬಂದು ನಾನೇನು ಮಾಡಲಿ?” ಸಂಕೋಚದಿಂದ ರತ್ನಾ ನುಡಿದಳು.
“ಅತ್ತೆ, ಈ ಹೊಸ ಸಲ್ವಾರ್ ಸೂಟ್ ಟ್ರೈ ಮಾಡಿ, ನಿಮ್ಮ ಏಜ್ ಗಿಂತ 10 ವರ್ಷ ಚಿಕ್ಕವರಾಗಿ ಕಾಣ್ತೀರಿ. ನಿಮ್ಮನ್ನು ಈ ಹೊಸ ಗೆಟಪ್ ನಲ್ಲಿ ಕಂಡು ಮಾವ ಹೊಗಳದೆ ಇರಲಾರರು. ನಾವೇನೂ ದೂರ ಹೋಗ್ತಿಲ್ಲ….. ಇಲ್ಲಿರೋ ಪಾರ್ಕ್ ತಾನೇ, ಧಾರಾಳವಾಗಿ ನೀವು ನಮ್ಮೊಂದಿಗೆ ಬರಬಹುದು,” ಎಂದು ಒತ್ತಾಯಿಸಿದಳು.
ತಂದೆಮಗ ಬಂದ ಮೇಲೆ, ವಿಶಾಖಾ ತಾನೇ ಅವರಿಗೆ ತಿಂಡಿಕಾಫಿ ನೀಡಿದಳು. ಅದನ್ನು ಸೇವಿಸುತ್ತಾ, ಆಫೀಸಿನ ಕೆಲವು ಜೋಕ್ಸ್ ಹೇಳಿ ವರುಣ್ ಹೆಂಡತಿಯನ್ನು ಕೀಟಲೆ ಮಾಡುತ್ತಿದ್ದ.
ಇವರನ್ನು ಗಮನಿಸಿ ರಾಜೇಶ್ ಹೇಳಿದ, “ವರೂ…. ನಾನೂ ನಿನ್ನ ತರಹ ಪತ್ನಿ ಹತ್ತಿರ ಈ ರೀತಿ ಆಧುನಿಕವಾಗಿ ಡಿಸ್ಕಸ್ ಮಾಡುವ ಹಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿನ್ನಮ್ಮನಂಥ ಹಳ್ಳಿ ಗುಗ್ಗುವಿಗೆ ಅದೆಲ್ಲ ಹೇಗೆ ಗೊತ್ತಾಗಬೇಕು? ಬರೀ ಈ ಅವಲಕ್ಕಿ….. ಉಪ್ಪಿಟ್ಟು ತಿಂದುಕೊಂಡು ಕಾಲ ಕಳೆಯೋದೇ ಆಗಿಹೋಯ್ತು,” ಎಂದು ಬೇಸರದಿಂದ ನುಡಿದ.
ಅಷ್ಟು ಹೊತ್ತಿಗೆ ರತ್ನಾ, ಸೊಸೆ ಕೊಟ್ಟಿದ್ದ ಹೊಸ ಸಲ್ವಾರ್ ಸೂಟ್ ಧರಿಸಿ, ಡೈನಿಂಗ್ ಟೇಬಲ್ ಬಳಿ ಬಂದಿದ್ದಳು. ಪತಿ ತನ್ನತ್ತ ಕಣ್ಣು ಹಾಯಿಸಬಹುದು ಎಂದು ದೂರದ ಆಸೆ ಇಟ್ಟುಕೊಂಡಿದ್ದವಳಿಗೆ, ಎಂದಿನ ಆತನ ಕಟುನುಡಿ ಇರಿಯಿತು. ಬಲವಂತವಾಗಿ ತನ್ನ ಕಂಬನಿ ಅದುಮಿಟ್ಟು ಅವಳು ಮತ್ತೆ ತನ್ನ ಕೋಣೆ ಕಡೆ ಹೆಜ್ಜೆ ಹಾಕಿದಳು.
ಮಧ್ಯಾಹ್ನ ಉಟ್ಟಿದ್ದ ಅದೇ ಸೀರೆಯನ್ನು ಉಟ್ಟುಕೊಳ್ಳುತ್ತಾ, ತಾನು ಧರಿಸಿದ್ದ ಹೊಸ ಡ್ರೆಸ್ ನ್ನು ನೀಟಾಗಿ ಮಡಿಸಿಟ್ಟಳು. ರಾಜೇಶ್ ತನಗೆಂದಾದರೂ ಪತ್ನಿಯ ಸ್ಥಾನ ಕೊಟ್ಟು ಆದರದಿಂದ ಕಂಡಿದ್ದರೆ ತಾನೇ? ಮದುವೆಯಾದ ದಿನದಿಂದಲೂ ತಾನು ಸಾಗರದ ಕಡೆಯ ಹಳ್ಳಿಯವಳು, ಆತ ಮಾತ್ರ ಮಹಾನಗರ ಬೆಂಗಳೂರಿನ ಚೆಲುವಾಂತ ಚೆನ್ನಿಗ ಎಂದು ಸದಾ ಕೀಳಾಗಿಯೇ ಕಾಣುತ್ತಿದ್ದುದು. ಹಿರಿಯರನ್ನು ಎದುರಿಸಲಾಗದೆ ಆತ ಮಾಡಿಕೊಂಡಿದ್ದ ಬಲವಂತದ ಮದುವೆ ಆಗಿತ್ತು.
ಹೀಗಾಗಿ ತಾನು ಆತನ ದೃಷ್ಟಿಯಲ್ಲಿ ಎಂದೂ ಸಮಳಲ್ಲ ಎಂಬ ಕೀಳರಿಮೆ ಮೊದಲಿನಿಂದಲೇ ಮನದಲ್ಲಿ ಬೇರೂರುವಂತೆ ಮಾಡಿಬಿಟ್ಟಿದ್ದ. ತಾನೂ ಪದವೀಧರೆ, ಕಲಿತವಳು, ನಿರಕ್ಷರಕುಕ್ಷಿಯಲ್ಲ ಎಂಬುದನ್ನೇ ಅವನು ಮರೆಸಿದ್ದ. ಬೆಂಗಳೂರಿಗರ ಹೈ ಫೈ, ಫ್ಯಾಷನೆಬಲ್, ಮಾಡರ್ನ್, ಸೆಕ್ಸಿಯಾಗಿಲ್ಲದೆ, ಆಂಗ್ಲದಲ್ಲಿ ಅವನ ಅಪೇಕ್ಷೆಗೆ ತಕ್ಕಂತೆ ಪಲುಕದ ತಾನು ಹಳ್ಳಿ ಗುಗ್ಗು ಎಂದೇ ಅತ್ತೆಮನೆಯಲ್ಲಿ ಪ್ರತಿಬಿಂಬಿಸಲ್ಪಟ್ಟಿದ್ದು ನೆನೆದು 28 ವರ್ಷಗಳ ವೈವಾಹಿಕ ಜೀವನ ಬರಿಯ ಬೇವು ತುಂಬಿಕೊಂಡಿದೆ, ಎನಿಸಿತೇ ಹೊರತು, ಬೆಲ್ಲ ಇಣುಕಿರಲಿಲ್ಲ. ಮಕ್ಕಳು ಹುಟ್ಟಿ ತಾನು ಅವರ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಾಗಲೇ ತನ್ನ ಬದುಕಿಗೂ ಆ ಮನೆಯಲ್ಲಿ ಒಂದು ಅರ್ಥವಿದೆ ಎನಿಸಿದ್ದು…. ಅವಳಿಗರಿಯದೆ ಕಣ್ಣೀರ ಧಾರೆ ಹರಿದಿತ್ತು…..
ಅಂದು ರಾತ್ರಿ ಮಲಗುವ ಮುನ್ನಾ ವಿಶಾಖಾ ತಡೆಯಲಾರದೆ ಗಂಡನನ್ನು ಕೇಳಿಯೇಬಿಟ್ಟಳು, “ಮಾವ ಏಕೆ ಅತ್ತೆಯ ಎಲ್ಲಾ ಮಾತಿಗೂ ಅಷ್ಟೊಂದು ಕೀಳಾಗಿ ನಡೆಸಿಕೊಳ್ಳುತ್ತಾರೆ?”
ವರುಣ್ ಹೇಳಿದ, “ಪಪ್ಪಾ ಮೊದಲಿನಿಂದಲೂ ಎಲ್ಲಾ ವಿಷಯದಲ್ಲೂ ಸ್ಮಾರ್ಟ್! ಅವರ ಮುಂದೆ ಅಮ್ಮ ಹಳ್ಳಿಗುಗ್ಗು ಅಲ್ಲದೆ ಮತ್ತೇನು? ಹೀಗಾಗಿಯೇ ಪಪ್ಪಾ ಎಲ್ಲದಕ್ಕೂ ಹಾಗೇ ಆಡ್ತಾರೆ. ಅಮ್ಮ ಎಂದಿಗೂ ಅವರಿಗೆ ಸರಿ ಜೋಡಿಯಲ್ಲ!” ಅವಳನ್ನು ತನ್ನ ಬಾಹುಗಳಲ್ಲಿ ಬಳಸುತ್ತಾ ಹೆಮ್ಮೆಯಿಂದ ಹೇಳಿದ, “ಎಲ್ಲರೂ ನನ್ನಂಥ ಅದೃಷ್ಟವಂತರಲ್ಲ ವೈಶೂ…. ಸ್ಮಾರ್ಟ್ ಪತ್ನಿ ಸಿಗುವುದಕ್ಕೂ ಕೇಳಿಕೊಂಡು ಬಂದಿರಬೇಕು!”
ಮಾರನೇ ದಿನ ತಂದೆ ಮಗ ಆಫೀಸಿಗೆ ಹೊರಟ ನಂತರ ಅತ್ತೆ ಸೊಸೆ ನಿಧಾನವಾಗಿ ಉಪಾಹಾರ ಸವಿಯತೊಡಗಿದರು. ಆಗ ಸೊಸೆ ಮುದ್ದು ಅತ್ತೆಗೆ ಹೇಳಿದಳು, “ಅತ್ತೆ, ನಾನೊಂದು ಮಾತು ಹೇಳಿದರೆ ತಪ್ಪಾಗಿ ತಿಳಿಯಬೇಡಿ….. ನೀವೇಕೆ ಮಾವನವರ ಪ್ರತಿಯೊಂದು ಮಾತನ್ನೂ ಏನೊಂದೂ ಜಾಬು ಕೊಡದೆ ಸಹಿಸಿಕೊಳ್ಳುತ್ತೀರಿ….?”
ರತ್ನಾ ಹೇಳಿದಳು, “ಏನಮ್ಮ ಮಾಡಲಿ…. ನಾನು ನಿಮ್ಮಗಳ ತರಹ ಮಾಡರ್ನ್ ಅಲ್ಲ, ಅಪ್ ಟು ಡೇಟ್ ಅಲ್ಲ, ಫ್ಯಾಷನೆಬಲ್ ಗ್ಲಾಮರಸ್ ಅಲ್ಲವೇ ಅಲ್ಲ! ಹಳ್ಳಿಯಿಂದ ಬಂದವಳು, ಸೀದಾ ಸಾದಾ…. ಒಳಗೊಂದು ಹೊರಗೊಂದು ತೋರಗೊಡದವಳು… ಅತ್ತ ಸೌಂದರ್ಯ ಇಲ್ಲ… ಇತ್ತ ಹಣಕಾಸಿನ ಬೆಂಬಲ ಇಲ್ಲ…..”
ವಿಶಾಖಾ ಕಣ್ಣು ಅರಳಿಸುತ್ತಾ ಹೇಳಿದಳು, “ಓಹ್…. ಸುಮ್ಮನಿರಿ ಅತ್ತೆ, ನಿಮ್ಮಂಥ ವೆಲ್ ಮೇಂಟೇನ್ಡ್ ಫಿಗರ್ ಇಂದಿನ ಆಧುನಿಕ ಅಮ್ಮಣ್ಣಿಯರಿಗಿಲ್ಲ. ನಿಮ್ಮಷ್ಟು ಲಕ್ಷಣವಾಗಿರುವವರು ಯಾರಿದ್ದಾರಂತೆ? ಒಂದು ಮುಗುಳ್ನಗು ಅಷ್ಟೇ ಬಾಕಿ ಇರುವುದು, ಸದಾ ಟೆನ್ಸ್ಡ್ ಆಗಿ ಚಿಂತೆಯಲ್ಲಿರುತ್ತೀರಿ.”
ರತ್ನಾ ಹೇಳಿದಳು, “ಬಿಡಮ್ಮ, ನನ್ನ ಕಾಲವೆಲ್ಲ ಆಗಿಹೋಯಿತು. ನನ್ನ ವ್ಯಕ್ತಿತ್ವ, ಪರ್ಸನಾಲ್ಟಿ ಈಗ ಯಾರಿಗೆ ಬೇಕಿದೆ? ನಮ್ಮತ್ತೆ, ನಾದಿನಿ, ಓರಗಿತ್ತಿಯರು….. ಅಷ್ಟೆಲ್ಲ ಯಾಕೆ, ನನ್ನ ಮಕ್ಕಳೂ ಸಹ ನನ್ನನ್ನು ಹಳ್ಳಿ ಗುಗ್ಗು ಎಂದೇ ಭಾವಿಸುತ್ತಾರೆ. ನನ್ನ ಅಂದಿನ ಕಾಲದ ಡಿಗ್ರಿ ಇಂದಿನವರಿಗೆ ಕಾಲ ಕಸ…. ಎಲ್ಲಕ್ಕೂ ಮುಖ್ಯವಾದುದು ಅಂದ್ರೆ, ನಿಮ್ಮ ಮಾವ ಎಂ.ಎ., ಎಂಫಿಲ್ ಮುಗಿಸಿದರು, ಅವರಿಗೂ ನನಗೂ ಎಲ್ಲಿಯ ಈಡು ಜೋಡು….. ನನ್ನ ತಂದೆ ಇವರ ತಂದೆ ದೂರದ ನೆಂಟರು, ಹೀಗಾಗಿ ನನ್ನ ಮಾವನವರ ಜುಲುಮೆಗೆ ಈ ಮದುವೆ ನಡೆಯಿತು…..”
ವಿಶಾಖಾ ಇದನ್ನು ಒಪ್ಪದೆ, “ಅತ್ತೆ, ಹಾಗೇಂತ ನೀವು ಅಂದುಕೊಂಡಿದ್ದೀರಿ, ಅಷ್ಟೆ…. ನೀವು ನಿಮ್ಮ ಬಗ್ಗೆ ಅನಗತ್ಯವಾಗಿ ಕೀಳರಿಮೆ ಬೆಳೆಸಿಕೊಂಡಿರುವುದರಿಂದ ಬೇರೆಯವರೂ ನಿಮ್ಮನ್ನು ಕಡೆಗಣಿಸುತ್ತಿದ್ದಾರೆ ಅಷ್ಟೇ…..” ಎಂದು ವಿವರಿಸಿದಳು.
ಅಂದು ರಾತ್ರಿ ಊಟ ಬಡಿಸುವಾಗ ಅವಳು ಮಾವನ ಬಳಿ, “ಮಾವ, ಅತ್ತೆ ಇವತ್ತು ಎಂಥ ಬೊಂಬಾಟ್ ಅಡುಗೆ ಮಾಡಿದ್ದಾರೆ ಗೊತ್ತಾ…. ನಾವೇಕೆ ಇವರ ಕೈವೇ ಒಂದು ಸಣ್ಣ ಕ್ಯಾಟರಿಂಗ್ ಸ್ಟಾರ್ಟ್ ಅಪ್ ಮಾಡಿಸಬಾರದು….?”
ರಾಜೇಶ್ ಅಯ್ಯೋ ಪಾಪ, ಎನ್ನುವ ಮರುಕದ ದೃಷ್ಟಿಯಲ್ಲಿ, “ಬಿಡಮ್ಮ, ಈಗೆಲ್ಲ ನಮ್ಮ ಬಿಸ್ ನೆಸ್ ಹೇಗೆ ಪ್ರೆಸೆಂಟ್ ಮಾಡ್ತೀವಿ ಅನ್ನೋ ಆಧುನಿಕ ಕಾಲ….. ರತ್ನಾ ತರಹದ ಅಡುಗೆ ಯಾರು ಬೇಕಾದರೂ ಮಾಡುತ್ತಾರೆ. ಹೀಗಿರುವಾಗ ಇಂಥ ಕಂಪನಿ ಹೂಡಿದ ನಂತರ ಇದರ ಮಾರ್ಕೆಟಿಂಗ್, ಸೇಲ್ಸ್ ಸ್ಟಾಟರ್ಜಿ ನೋಡಿಕೊಳ್ಳುವವರು ಯಾರು? ನಮ್ಮ ರತ್ನಾ ಅಂತೂ ಹೊರಗಿನವರ ಮುಂದೆ ಬಾಯಿ ತೆರೆದು 2 ಮಾತು ಆಡುವವಳಲ್ಲ…. ಇಡೀ ಆಯುಸ್ಸು ಹೀಗೇ ಕಳೆದಿದ್ದಾಳೆ…. ಈಗ 50ರ ಹರೆಯದಲ್ಲಿ ಏನು ಬದಲಾವಣೆ ಕಾಣಲು ಸಾಧ್ಯ?”
ಯಾರೂ ಏನೂ ಮಾತನಾಡಲಿಲ್ಲ. ಎಲ್ಲರೂ ಊಟ ಮುಗಿಸಿ ತಂತಮ್ಮ ಕೋಣೆಗೆ ನಡೆದರು. ರತ್ನಾ ಎಲ್ಲಾ ಪಾತ್ರೆ ಎತ್ತಿಟ್ಟು, ಟೇಬಲ್ ಕ್ಲೀನ್ ಮಾಡಿ, ಅಡುಗೆಮನೆಯ ಉಳಿದ ಸಣ್ಣಪುಟ್ಟ ಕೆಲಸ ಮುಗಿಸತೊಡಗಿದಳು.
ಮಾರನೇ ದಿನ ರತ್ನಾ ಅಡುಗೆ ಮನೆಯಲ್ಲಿ ಬಿಝಿ ಆಗಿರುವಾಗ, ಸಣ್ಣದಾಗಿ ಕೇಟರಿಂಗ್ ಸೆಟ್ ಅಪ್ ಮಾಡಲು ಬೇಕಾದ ಎಲ್ಲಾ ರೂಪುರೇಷೆಗಳನ್ನೂ ವಿಶಾಖಾ ಸಿದ್ಧಪಡಿಸಿದಳು. ಅವಳು `ರತ್ನಾ ಸ್ಮಾರ್ಟ್ ಕಿಚನ್’ ಎಂಬ ಯೂಟ್ಯೂಬ್ ಚಾನೆಲ್ ಸ್ಟಾರ್ಟ್ ಮಾಡಿ, ರತ್ನಾಳ ಫೋಟೋ ಅಪ್ ಲೋಡ್ ಮಾಡತೊಡಗಿದಳು.
“ಅತ್ತೆ, ಇನ್ನು ಮುಂದೆ ನೀವು ಏನೇ ಅಡುಗೆ ಮಾಡಿದರೂ, ನಾನು ಅದರ ಶೂಟ್ ಮಾಡಿ, ವಿಡಿಯೋ ಸರಿಪಡಿಸಿ, ಯೂಟ್ಯೂಬ್ ಗೆ ಅಪ್ ಲೋಡ್ ಮಾಡ್ತೀನಿ……”
“ಅಯ್ಯೋ…. ನಾನು ಯೂಟ್ಯೂಬ್ ನಲ್ಲಿ….. ಜನ ನನ್ನನ್ನು ಇಂಟರ್ ನೆಟ್ ಮುಖಾಂತರ ನೋಡ್ತಾರೆ ಅಂತೀಯಾ?”
“ಅತ್ತೆ, ಅದೇನಿಲ್ಲ. ಈಗಿನ ಕಾಲದ ಹುಡುಗಿಯರಿಗೆ ಲಕ್ಷಣವಾಗಿ ಕೈಲಿ ಸೌಟು ಹಿಡಿಯಲಿಕ್ಕೂ ಬರಲ್ಲ ಬಿಡಿ. ನಿಮ್ಮಂಥ ಪಳಗಿದ ಕೈ ಅಡುಗೆ, ಅದನ್ನು ಮಾಡುವ ವಿಧಾನ ವಿವರಿಸುತ್ತಾ ಮುಂದುವರಿಸಿ, ಮುಂದಿನದ್ದನ್ನೆಲ್ಲ ನಾನೇ ನೋಡಿಕೊಳ್ತೀನಿ.
“ಒಂದು ಸಲ ಜನ ಲೈಕ್ ಮಾಡಲು ಸ್ಟಾರ್ಟ್ ಮಾಡಲಿ, ಆಮೇಲೆ ನೋಡಿ, ನಿಮ್ಮ ಫ್ಯಾನ್ ಫಾಲೋಯರ್ಸ್, ಸಬ್ ಸ್ಕ್ರೈಬರ್ಸ್ ಸಂಖ್ಯೆ ಹೇಗೆ ಬೆಳೆಯುತ್ತೆ ಅಂತ. ಯೂಟ್ಯೂಬ್ ನವರು ಈ ಬೆಳವಣಿಗೆ ಗಮನಿಸಿಕೊಂಡೇ ನಿಮಗೆ ಸಂಭಾವನೆ ಹೆಚ್ಚಿಸಲು ಪ್ರಾರಂಭಿಸುತ್ತಾರೆ…..”
“ವೈಶೂ…. ಇದೆಲ್ಲ ನನ್ನ ಕೈಲಿ ಆಗುತ್ತೆ ಅಂತೀಯಾ?”
“ಖಂಡಿತಾ ಗಾಬರಿ ಬೇಡ ಅತ್ತೆ, ನಿಮ್ಮ ಬೆಂಬಲಕ್ಕೆ ನಾನಿದ್ದೀನಿ. ಯಾರು ಏನೇ ಹೇಳಲಿ, ಅದನ್ನೆಲ್ಲ ನಾನು ಟ್ಯಾಕಲ್ ಮಾಡ್ತೀನಿ. ನೀವು ಧೈರ್ಯವಾಗಿ, ರಸವತ್ತಾಗಿ ನಿಮ್ಮ ಅಡುಗೆ ಮುಂದುವರಿಸಿ,” ಎಂದು ಆತ್ಮವಿಶ್ವಾಸದ ಮಾತುಗಳಿಂದ ರತ್ನಾಳನ್ನು ಹುರಿದುಂಬಿಸಿದಳು.
ವಿಶಾಖಾಳ ಮಾತಿನಂತೆ, ರತ್ನಾಳಿಗೆ ತುಸು ಲೈಟ್ ಮೇಕಪ್ ಟಚ್ ನೀಡಿ, ಟಕ್ ಮಾಡಿದ ಶಿಫಾನ್ ಸೀರೆಯೊಂದಿಗೆ, ಕ್ಯಾಮೆರಾ ಮುಂದೆ ಎಂದಿನ ತನ್ನ ಅಡುಗೆ ಕೆಲಸ ಮುಂದುರಿಸುವಂತೆ ಮಾಡಿದಳು. ಪಳಗಿದ ಅವಳ ಕೈಗಳಿಂದ ಒಂದೊಂದಾಗಿ ಸ್ವಾದಿಷ್ಟ ವ್ಯಂಜನಗಳು ತಯಾರಾಗ ತೊಡಗಿದವು.
ಮೊದ ಮೊದಲು ರತ್ನಾ ಈ ವಿಡಿಯೋ ಶೂಟಿಂಗ್ ನ ವಿವರಣೆಯಲ್ಲಿ ತುಸು ಗಾಬರಿಯಿಂದ ತೊದಲುತ್ತಿದ್ದಳು. ಸೊಸೆಯ ಒತ್ತಾಸೆ, ಆತ್ಮವಿಶ್ವಾಸದ ನುಡಿಗಳು, ಪ್ರೋತ್ಸಾಹಕರ ಪ್ರೇರಣಾದಾಯಕ ಮಾತು ಅವಳಲ್ಲಿ ಉತ್ಸಾಹ, ಹುಮ್ಮಸ್ಸು, ತುಂಬಿ, ಮುಂದಿನ ಕಾರ್ಯಕ್ರಮಗಳು ನೀಟಾಗಿ ಬರತೊಡಗಿದವು.
ಹೀಗೆ ರತ್ನಾಳ ಕೈಯಿಂದ ಬಗೆಬಗೆಯ, ಬಾಯಲ್ಲಿ ನೀರೂರಿಸುವ ರಸವತ್ತಾದ ವ್ಯಂಜನಗಳು ದಿನಕ್ಕೊಂದರಂತೆ ತಯಾರಾಗಿ. ಯೂಟ್ಯೂಬ್ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದವು. ಜನ ಮುಗಿಬಿದ್ದು ಲೈಕ್ಸ್ ಕಳುಹಿಸಿದರು, ನಿರೀಕ್ಷೆಗೂ ಮೀರಿ ಸಬ್ ಸ್ಕ್ರೈಬರ್ಸ್ ದೊರೆತರು.
2 ತಿಂಗಳು ಕಳೆಯುವಷ್ಟರಲ್ಲಿ ಜನ ತಾವಾಗಿ ಫೋನ್ ಮಾಡಿ ಇಂತಿಂಥ ರೆಸಿಪಿ ಬೇಕು ಎಂದು ಮಾಡಿ ತೋರಿಸುವಂತೆ ಒತ್ತಾಯಿಸ ತೊಡಗಿದರು. ಇದು ವಿಶಾಖಾಳ ಫ್ರೆಂಡ್ಸ್ ಗ್ರೂಪ್, FB, ಟ್ವಿಟರ್, ಇನ್ ಸ್ಟಾಗ್ರಾಂಗಳಲ್ಲಿ ಭಾರಿ ಬೇಡಿಕೆ ಗಳಿಸಿತು.
ವಿಶಾಖಾಳ ಗೆಳತಿಯರು ಮಾತ್ರವಲ್ಲದೆ ಇದನ್ನು ಗಮನಿಸಿದ ಪ್ರತಿಯೊಬ್ಬರೂ ರಾಜೇಶ್, ವರುಣರಿಗೆ ಪ್ರತ್ಯೇಕವಾಗಿ ಫೋನ್ ಮಾಡಿ, ನಿಮ್ಮ ಶ್ರೀಮತಿ ಅಲ್ಲವೇ, ನಿಮ್ಮ ತಾಯಿ ಅಲ್ಲವೇ ಎಂದು ಹೊಗಳಿಕೆಯ ಮಳೆ ಸುರಿಸಿದರು. ತಂದೆ, ಮಗ ಇಂಥದ್ದು ದಿನೇದಿನೇ ಹೆಚ್ಚುತ್ತಿರುವುದು ಕಂಡು ಮೂಕವಿಸ್ಮಿತರಾದರು.
ವಿಶಾಖಾ ನಿಧಾನವಾಗಿ ರತ್ನಾಳಿಗೆ ವಿವರಿಸಿದಳು, “ಅತ್ತೆ, ನಿಮ್ಮ ಫ್ಯಾನ್ ಫಾಲೋಯರ್ಸ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ!”
ಸೋಶಿಯಲ್ ಮೀಡಿಯಾ ಅಂದ್ರೆ ಏನೆಂದು ಗೊತ್ತಿರದ ರತ್ನಾ ಕ್ರಮೇಣ ವಾಟ್ಸ್ ಆ್ಯಪ್, FB, ಎಲ್ಲದರಲ್ಲೂ ಮಿಂಚಿದ್ದೇ ಮಿಂಚಿದ್ದು. ಯೂಟ್ಯೂಬ್, ಗೂಗಲ್ ಕಡೆಯಿಂದ ಅವಳ ಹೆಸರಿಗೆ ಸಂಭಾವನೆಯ ಚೆಕ್ ಮೇಲೆ ಚೆಕ್ ಬರತೊಡಗಿದವು. ವಿಶಾಖಾ ತಾನೇ ಮುಂದೆ ನಿಂತು ಅತ್ತೆಯ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿಸಿಕೊಟ್ಟು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಫೋನ್ ಮೂಲಕ ಕ್ಯಾಶ್ ಲೆಸ ಪೇಮೆಂಟ್ ಗಾಗಿ ಗೂಗಲ್ ಪೇ, ಫೋನ್ ಪೇ ಎಲ್ಲವನ್ನೂ ರತ್ನಾ ಲೀಲಾಜಾಲವಾಗಿ ನಿಭಾಯಿಸು
ವಂತೆ ಮಾಡಿಸುವಲ್ಲಿ ಯಶಸ್ವಿಯಾದಳು.
ಮುಂದೆ ಕ್ರಮೇಣ ವಿಶಾಖಾಳ ನೆರವಿಲ್ಲದೆ ತಾನೇ ಸೆಲ್ಫ್ ಶೂಟಿಂಗ್ ನಡೆಸುವುದನ್ನೂ ರತ್ನಾ ಕಲಿತಿದ್ದಾಯಿತು. ಮುಂದೆ ಮಹಿಳಾ ಸಮಾಜದ ಸದಸ್ಯೆ ಆಗಿದ್ದಲ್ಲದೆ, ಮುಂದಿನ ಸಲದ ಚುನಾವಣೆಯಲ್ಲಿ ರತ್ನಾ ಎಲ್ಲರ ಒತ್ತಾಯದಿಂದಾಗಿ ತಾನೂ ಸ್ಪರ್ಧಿಸಿ, ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದಳು. ಮನೆಯವರೆಲ್ಲ ಮಹಿಳಾ ಸಮಾಜದ ವಾರ್ಷಿಕೋತ್ಸವದಂದು, ಹಾರ್ದಿಕವಾಗಿ ಎಲ್ಲರ ಮುಂದೆ ನಿಂತು ಅವಳ ಕೈ ಕುಲುಕಿದರು. ಸದಸ್ಯರೆಲ್ಲರೂ ಬಂದು ಹಾರ ಹಾಕಿ, ತುರಾಯಿ ನೀಡುವವರೇ!
ವಿಷಯ ತಿಳಿದ ಮಗಳು ಸಂಗೀತಾ, ರತ್ನಾಳ ನಾದಿನಿಯರು ಸಹ ಮನೆಯ ಗೆಟ್ ಟು ಗೆದರ್ ಪಾರ್ಟಿಗೆ ಬಂದು, ರತ್ನಾಳನ್ನು ತುಂಬು ಮನದಿಂದ ಹಾರ್ದಿಕವಾಗಿ ಅಭಿನಂದಿಸಿದರು.
“ಅಮ್ಮ, ಸೊಸೆ ಬಂದ ನಂತರ ನಿನ್ನ ದೆಶೆ ಬದಲಾಯಿತು,” ಮಗ ಅಮ್ಮನ ಜೊತೆ ನಿಂತು ಹೆಮ್ಮೆಯಿಂದ ಪೋಸ್ ನೀಡಿ ಫೋಟೋ ತೆಗೆಸಿಕೊಂಡ.
“ನೀನು ನನ್ನ ಪತ್ನಿ ಎಂದು ಎಲ್ಲರೆದುರು ಹೇಳಿಕೊಳ್ಳಲು ಎಷ್ಟು ಹೆಮ್ಮೆ ಗೊತ್ತೇ!” ರಾಜೇಶ್ ಹಾರ್ದಿಕವಾಗಿ ನುಡಿದಾಗ ರತ್ನಾಳ ಅದೇ ಹಿಂದಿನ ಮೃದು ಮಂದಹಾಸವೇ ಉತ್ತರವಾಯಿತು.
ಅವಳು ಬಂದು ಸೊಸೆಯ ಕೈ ಹಿಡಿದು, “ವೈಶೂ ನನ್ನ ಸೊಸೆಯಲ್ಲ…. ಫ್ರೆಂಡ್, ಫಿಲಾಸಫರ್, ಗೈಡ್ ಆಗಿ ಇಂದು ನಾನು ಸಮಾಜದಲ್ಲಿ ಒಂದು ಐಡೆಂಟಿಟಿ ಸ್ಥಾಪಿಸಿಕೊಳ್ಳಲು ನೆರವಾದ ಮಾರ್ಗದರ್ಶಿ!” ಎಂದು ಬಾಯಿ ತುಂಬಾ ಹೊಗಳಿದಳು.
“ಇಲ್ಲ ಅತ್ತೆ…. ನಿಮ್ಮಲ್ಲಿ ಈ ಪ್ರತಿಭೆ ಮೊದಲಿನಿಂದಲೂ ತುಂಬಿತ್ತು. ಕಡೆದ ಶಿಲ್ಪವಾಗಿದ್ದ ನಿಮ್ಮ ಚಾತುರ್ಯಕ್ಕೆ ಕೊನೆಯ ತುಸು ಫಿನಿಶಿಂಗ್ ಟಚ್ ಕೊಟ್ಟೆ ಅಷ್ಟೆ,” ಸೊಸೆ ಹೇಳಿದಾಗ, ಎಲ್ಲರೂ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು. ಆ ಮನೆಯ ಮುಚ್ಚಿದ್ದ ಎಲ್ಲರ ಮನದ ಕಿಟಕಿಗಳು ತೆರೆದಂತಾಗಲು, ರತ್ನಾ ಎಲ್ಲರ ದೃಷ್ಟಿಯಲ್ಲಿ ಈಗ ಅತಿ ಮುಖ್ಯ ಸೆಲೆಬ್ರಿಟಿ ಆಗಿಹೋದಳು!