ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಅಪರಿಚಿತನೊಂದಿಗೆ ಗೆಳೆತನ ಆರಂಭಿಸಿದ ದಿವ್ಯಾ, ಮುಂದೆ ಅದಕ್ಕೆ ತಾನು ಅಪಾರ ಬೆಲೆ ತೆರಬೇಕಾದೀತು ಎಂದು ಕನಸಲ್ಲೂ ಯೋಚಿಸಿರಲಿಲ್ಲ. ತಾನು ಸಿಲುಕಿದ್ದ ಜೇಡರ ಬಲೆಯಿಂದ ತಪ್ಪಿಸಿಕೊಳ್ಳಲು ಮುಂದೆ ಅವಳಿಗೆ ಸಾಧ್ಯವಾಯಿತೇ…..?
ಸಂಜೆ ಅದಾಗಲೇ 6 ಗಂಟೆ ದಾಟಿತ್ತು. ಥಂಡಿ ಗಾಳಿ ಸುಂಯ್ಯೆಂದು ಬೀಸುತಿತ್ತು. ದಿವ್ಯಾ ತನ್ನ ಮನೆಯ ಎದುರಿನ ಕೈ ತೋಟದಲ್ಲಿ ಕುಳಿತು, ಕೈಯಲ್ಲೊಂದು ಪತ್ರಿಕೆ ಹಿಡಿದು, ಒಂದೊಂದೇ ಗುಟುಕು ಕಾಫಿ ಹೀರುತ್ತಾ ಆಸ್ವಾದಿಸುತ್ತಿದ್ದಳು. ಆಗ ಅವಳ ಫೋನಿನ ಸೋಶಿಯಲ್ ಸೈಟ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ನ ಒಂದು ನೋಟಿಫಿಕೇಶನ್ ಬಂದಿತು. ದಿವ್ಯಾ ಆ ಪತ್ರಿಕೆ ಬದಿಗಿಟ್ಟು, ಮೊಬೈಲ್ ಕೈಗೆತ್ತಿಕೊಂಡಳು. ರೋಹಿತ್ ಎಂಬ ತರುಣನ ರಿಕ್ವೆಸ್ಟ್ ಆಗಿತ್ತದು. ಯಾವುದೋ ಲಹರಿಯಲ್ಲಿ ಅವಳು ಅದನ್ನು ಅಕ್ಸೆಪ್ಟ್ ಮಾಡಿಕೊಂಡಳು.
ಅವಳು ರಿಕ್ವೆಸ್ಟ್ ಸ್ವೀಕರಿಸಿದ್ದೇ ತಡ, ಕ್ಷಣಾರ್ಧದಲ್ಲಿ ಆ ಕಡೆಯಿಂದ ರೋಹಿತ್ ನ ಮೆಸೇಜ್ `ಹೋ….’ ಎಂದು ಬಂದೇಬಿಟ್ಟಿತು. ದಿವ್ಯಾ ಆ ಮೆಸೇಜ್ ನತ್ತ ಹೆಚ್ಚು ಗಮನಕೊಡದೆ, ತನ್ನ ಪತ್ರಿಕೆಯನ್ನು ಓದತೊಡಗಿದಳು. 2 ನಿಮಿಷ ಬಿಟ್ಟು ರೋಹಿತ್ ನ ಮೆಸೇಜ್ಮತ್ತೆ ಕಾಣಿಸಿಕೊಂಡಿತು. ಅವಳು ಈ ಬಾರಿ ಮೆಸೇಜ್ ಕಡೆ ಗಮನ ಕೊಡಲೇ ಇಲ್ಲ. ಅದಾದ 10 ನಿಮಿಷಕ್ಕೆ ಮತ್ತೆ ಅವನದೇ ಮೆಸೇಜ್. ಈಗಾಗಲೇ ಅವನಿಂದ 3 ಮೆಸೇಜ್ ಬಂದಿತ್ತು. `ಮೇಡಂ, ಪ್ಲೀಸ್ ರಿಪ್ಲೈ ಮಾಡಿ!’
ಅದಾಗಿ ಸ್ವಲ್ಪ ಹೊತ್ತಿಗೆ ಮತ್ತೆ ಅವನಿಂದ ಮೆಸೇಜ್, `ನಾನು ನಿಮ್ಮ ಉತ್ತರಕ್ಕಾಗಿಯೇ ಕಾಯುತ್ತಿದ್ದೇನೆ.’
ಕೊನೆಗೂ ದಿವ್ಯಾ ಉತ್ತರವಿತ್ತಳು, `ಹಾಯ್….’
`ನಾನು ಮೈಸೂರಿನ ರೋಹಿತ್, ದೊಡ್ಡ ಬಿಸ್ ನೆಸ್ ಮ್ಯಾನ್,’ ಉತ್ತರ ಸಿಕ್ಕಿದ ತಕ್ಷಣ ಇದು ಅವನ ಪ್ರತಿಕ್ರಿಯೆ.
`ಓಕೆ…. ನೈಸ್’ ಚುಟುಕಾಗಿ ಉತ್ತರಿಸಿದಳು ದಿವ್ಯಾ.
`ದಿವ್ಯಾ ಮೇಡಂ, ನೀವು ನನ್ನ ಫ್ರೆಂಡ್ ಆಗ್ತೀರಾ…?’
ದಿವ್ಯಾ ಅದಕ್ಕೇನೂ ಉತ್ತರಿಸಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿ ತನ್ನ ಪತ್ರಿಕೆಯಲ್ಲಿ ಲೀನವಾದಳು. ಆಕೆ ವಿವಾಹಿತೆ, ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಆಕೆಯ ಪತಿ ಬಿಸ್ ನೆಸ್ ಸಲುವಾಗಿ ಚೆನ್ನೈ, ಮುಂಬೈ, ದೆಹಲಿಗೆಂದು ವಾರದಲ್ಲಿ 4-5 ದಿನ ಸದಾ ಟೂರಿಂಗ್ ನಲ್ಲಿ ಇರುತಿದ್ದ. ಮೈಸೂರಿನ ಆ ದೊಡ್ಡ ಬಂಗಲೆಯಲ್ಲಿ ಆಳುಕಾಳಿನ ಜೊತೆ ಅವಳು ಬಹುತೇಕ ಒಂಟಿಯಾಗಿಯೇ ಇರುತ್ತಿದ್ದಳು.
ರಾತ್ರಿ ಅವಳು ಫೋನ್ನಲ್ಲಿ ನೆಟ್ ಆನ್ ಮಾಡಿದ ತಕ್ಷಣ, ರೋಹಿತ್ ನ ಅನೇಕ ಮೆಸೇಜ್ ಕಾಣಿಸಿಕೊಂಡ. ಇವಳು ಆನ್ ಲೈನ್ ಆದದ್ದೇ ತಡ, ಮತ್ತೆ ಅವನ ಸಂದೇಶಗಳ ಸುರಿಮಳೆ! `ಇವನೆಂಥ ಹುಚ್ಚ….. ಹೀಗೆ ಮೆಸೇಜ್ ಮಾಡುವುದು ಬಿಟ್ಟರೆ ಇವನಿಗೆ ಬೇರೆ ಕೆಲಸವೇ ಇಲ್ಲವೇ….?’ ದಿವ್ಯಾಳಿಗೆ ರೇಗಿತು.
ಅದನ್ನೇ ಅವಳು ಉತ್ತರಿಸುತ್ತಾ, ‘ನಿಮಗೆ ಬೇರೆ ಕೆಲಸವೇ ಇಲ್ಲವೇನು?’ ಎಂದಳು.
`ಕೆಲಸವೇನೋ ಬಹಳ ಇದೆ. ಆದರೆ ಸದ್ಯಕ್ಕಂತೂ ನಿಮ್ಮ ಮೆಸೇಜ್ ಗಾಗಿ ಕಾಯುವುದೇ ದೊಡ್ಡ ಕೆಲಸಾಗಿದೆ!’
`ನೀವು ಏನು ಹೇಳಬೇಕು ಅಂತಿದ್ದೀರಿ?’ ಇವಳು ಕೇಳಿದಳು.
`ನೀವು ನನ್ನ ಫ್ರೆಂಡ್ ಆಗ್ತೀರಾ?’
`ಈಗಾಗಲೇ ಆಗಿದ್ದೀನಲ್ಲ…. ಹಾಗಾಗಿಯೇ ತಾನೇ ಉತ್ತರಿಸಿದ್ದು?’
`ಅದು ಹಾಗಲ್ಲ….. ದಿನಾ ನನ್ನೊಂದಿಗೆ ಮಾತನಾಡ್ತೀನಿ, ಮೆಸೇಜ್ ಕಳಿಸ್ತೀನಿ ಅಂತ ಪ್ರಾಮಿಸ್ ಮಾಡಿ!’
`ಓ.ಕೆ.’
`ಥ್ಯಾಂಕ್ಸ್ ಎ ಲಾಟ್!’
ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವನು ಇವಳಿಗೆ ಒಂದು ಜೋಕ್ ಕಳಿಸಿದ.
ಅವನ ಜೋಕ್ಸ್ ನಿಂದ ಇವಳಿಗೆ ನಗು ಉಕ್ಕಿ ಬಂತು. ಇವಳೂ ತನ್ನ ಬಳಿಯಿದ್ದ 1-2 ಜೋಕ್ಸ್ ಕಳಿಸಿದಳು. ಈ ರೀತಿ ಅವರಿಬ್ಬರ ನಡುವೆ ಮಾತುಕಥೆ ಹೆಚ್ಚತೊಡಗಿತು. ಕ್ರಮೇಣ ಕೆಲವೇ ದಿನಗಳಲ್ಲಿ ಅವನೊಂದಿಗೆ ಆ ರೀತಿ ಮೆಸೇಜ್ ಕಳಿಸುವುದು ಅವಳಿಗೆ ಬಹಳ ಇಷ್ಟವಾಗತೊಡಗಿತು. ಫೇಸ್ ಬುಕ್ ನಿಂದ ಮುಂದುವರಿದು ಇಬ್ಬರೂ ತಂತಮ್ಮ ಮೊಬೈಲ್ ನಂಬರ್ಬದಲಾಯಿಸಿಕೊಂಡರು.
ತಾನು ಬಿಡುವಾದಾಗೆಲ್ಲ ದಿವ್ಯಾ ಅವನೊಂದಿಗೆ ಫೋನಿನಲ್ಲಿ ಮಾತನಾಡುವಳು. ಹೀಗೆ ಮಾತುಕಥೆ ಮುಂದುವರಿದು ಕೆಲವೇ ವಾರಗಳ ನಂತರ ಅವರು ಮುಖಾಮುಖಿ ಭೇಟಿ ಆಗುವುದು ಎಂದಾಯಿತು. ಹೀಗೆ ಅವರಿಬ್ಬರ ಸ್ನೇಹ ಗಾಢವಾಗಿ ಮುಂದುವರಿಯಿತು. ಸ್ನೇಹ ಯಾವಾಗ ಬೇರೆ ದಾರಿ ಹಿಡಿಯಿತೋ….. ತಿಳಿಯಲೇ ಇಲ್ಲ. ರೋಹಿತ್ ಇದೀಗ ಸಲೀಸಾಗಿ ದಿವ್ಯಾಳ ಮನೆಗೆ ಬಂದು ಹೋಗತೊಡಗಿದ. ಅವರ ನಡುವೆ ಈಗ ನಿಕಟತೆ ಅತಿ ಎನಿಸುವಷ್ಟು ಹೆಚ್ಚಿತ್ತು. ಸಂಬಂಧದ ಸೀಮಾರೇಖೆ ಎಂದೋ ದಾಟಿದ್ದರು. ದಿವ್ಯಾಳ ಬಗ್ಗೆ ಅಕ್ಷರಶಃ ಎಲ್ಲಾ ವಿವರಗಳೂ ಅವಳಿಗೆ ತಿಳಿದುಹೋಯಿತು.
ಬಿಸ್ ನೆಸ್ ಸಲುವಾಗಿ ಅಮೆರಿಕಾಗೆ ಹೋಗಿದ್ದ ಅವಳ ಪತಿ ಆದಿತ್ಯ ಇಷ್ಟರಲ್ಲೇ ಬರುವವನಿದ್ದ. ಆದರೆ ರೋಹಿತ್ ಮಾತ್ರ ಪ್ರತಿ ದಿನ ಇವಳ ಮನೆಗೆ ಹಾಜರಾಗುತ್ತಿದ್ದ.
ಅಂದು ಅವಳು ಪತಿ ಆದಿತ್ಯನೊಂದಿಗೆ ಬಹಳ ಹೊತ್ತು ಫೋನಿನಲ್ಲಿ ಮಾತನಾಡುತ್ತಿದ್ದಳು. ತಾನು ಪತಿಗೆ ಎಂಥ ವಿಶ್ವಾಸಘಾತ ಮಾಡಿದ್ದೇನೆ ಎಂದು ನೆನೆದು ಅವಳಿಗೆ ಒಳಗೊಳಗೆ ಆತ್ಮಸಾಕ್ಷಿ ಕುಟುಕ ತೊಡಗಿತು. ಅಂತರಾತ್ಮದ ಕರೆಗೆ ಓಗೊಟ್ಟ ಅವಳು, ಇತ್ತೀಚೆಗೆ ರೋಹಿತ್ ನ ಫೋನ್ ಕಾಲ್ಸ್ ಅವಾಯ್ಡ್ ಮಾಡತೊಡಗಿದಳು. ಬೇಕೆಂದೇ ಅವನ ಕರೆಗಳನ್ನು ನಿರ್ಲಕ್ಷಿಸುತ್ತಿದ್ದಳು. ಅವನ ಮೆಸೇಜ್ ಗೆ ಉತ್ತರಿಸುತ್ತಿರಲಿಲ್ಲ.
ಒಂದು ದಿನ ದಿವ್ಯಾಳ ವಾಟ್ಸ್ ಆ್ಯಪ್ ಗೆ ಅವನು ಒಂದು ವಿಡಿಯೋ ಕಳುಹಿಸಿದ್ದ. ಅದನ್ನು ತೆರೆದು ನೋಡಿದ ದಿವ್ಯಾಳಿಗೆ ದೊಡ್ಡ ಶಾಕ್ ತಗುಲಿತ್ತು! ಅದರಲ್ಲಿ ತಮ್ಮಿಬ್ಬರ ರಾಸಲೀಲೆಗಳನ್ನು ರೋಹಿತ್ ರೆಕಾರ್ಡ್ ಮಾಡಿದ್ದ.
“ನೀನೇಕೆ ಇಂಥ ಕಚಡಾ ವಿಡಿಯೋ ರೆಕಾರ್ಡ್ ಮಾಡಿದೆ? ಯಾವಾಗ ಮಾಡಿದೆ?” ದಿವ್ಯಾ ಅವನಿಗೆ ಫೋನ್ ಮಾಡಿ ಸಿಡುಕಿದಳು.
“ಯಾಕೆ ದಿವ್ಯಾ? ನಿನಗೆ ಅದು ಇಷ್ಟ ಆಗಲಿಲ್ಲವೇ? ನೋಡು…. ನಾವಿಬ್ಬರೂ ಇದರಲ್ಲಿ ಸೂಪರ್ ಸೆಕ್ಸಿ ಆಗಿ ಕಾಣುತ್ತಿಲ್ಲವೇ….?” ರೋಹಿತ್ ಕುಹಕವಾಗಿ ವ್ಯಂಗ್ಯವಾಡುತ್ತಾ, “ಹ್ಞಾಂ…. ಇದನ್ನು ನಿನ್ನ ಬೇಕಾದವರಿಗೆ ಫಾರ್ವರ್ಡ್ ಮಾಡಿದರೆ ಹೇಗಿರುತ್ತದೆ?”
“ಯೂ ರಾಸ್ಕಲ್! ಏನೋ ಬೇಕು ನಿನಗೆ?”
“ಜಾಸ್ತಿ ಏನೂ ಇಲ್ಲ. ನಾನು ಆಗಾಗ ನಿನ್ನ ಮನೆಗೆ ಬರ್ತಾ ಇರ್ತೀನಿ. ಹ್ಞಾಂ, ನನ್ನ ಕೆಲವು ಫ್ರೆಂಡ್ಸ್ ಇದ್ದಾರೆ, ಅವರೂ ಈ ವಿಡಿಯೋ ನೋಡಿದರು. ಅವರು ಬಂದು ನಿನ್ನನ್ನು ಫ್ರೆಂಡ್ ಮಾಡಿಕೊಳ್ಳುತ್ತಾರಂತೆ….” ಅವನ ಅಟ್ಟಹಾಸದ ನಗು ನಿಲ್ಲುವಂತೆಯೇ ಇರಲಿಲ್ಲ.
“ನಾವಿಬ್ಬರೂ ಮೀಟ್ ಮಾಡ್ತಾನೇ ಇರ್ತೀವಲ್ಲ…. ಕಳೆದ 2೦3 ದಿನಗಳಿಂದ ನಾನು ನಿನಗೆ ಸಿಗಲಿಲ್ಲ ಅಷ್ಟೇ…..” ಅವಳು ತಡವರಿಸಿದಳು.
“ಆದರೆ ನನಗೆ ನಿನ್ನನ್ನು ಬಿಟ್ಟಿರಲಾಗದು…. ನೀನೇ ನನ್ನ ಜೀವ ಡಾರ್ಲಿಂಗ್!”
“ಸರಿ, ನಾಳೆ ನಮ್ಮ ರೆಗ್ಯುಲರ್ ಪಾರ್ಕ್ ನಲ್ಲಿ ಮೀಟ್ ಆಗೋಣ. ಆದರೆ ಮೊದಲು ಈ ಹೊಲಸು ವಿಡಿಯೋ ಡಿಲೀಟ್ ಮಾಡು!”
“ಎಷ್ಟೂಂತ ಡಿಲೀಟ್ ಮಾಡಲಿ ಬೇಬಿ? ಒಂದು ಸ್ಯಾಂಪಲ್ ಮಾತ್ರ ನಿನಗೆ ಕಳಿಸಿದ್ದೇನೆ. ಉಳಿದವು ನನ್ನ ಫ್ರೆಂಡ್ಸ್ ಬಳಿ ಜೋಪಾನವಾಗಿವೆ. ಅವರಿಗೆಲ್ಲ ಬಹಳ ಇಷ್ಟವಾಯಿತು!”
“ನೀನು ನನ್ನೊಂದಿಗೆ ಹೀಗಿರುವುದನ್ನು ನಿನ್ನ ಫ್ರೆಂಡ್ಸ್ ಗೆ ತೋರಿಸಲು ನಿನಗೆ ನಾಚಿಕೆ ಅನ್ನಿಸಲಿಲ್ಲವೇ?” ದಿವ್ಯಾ ಅವನನ್ನು ಬಾಯಿ ತುಂಬ ಬೈದಳು.
“ನಾಚಿಕೆ ಅಂತ ಅಂದುಕೊಂಡ್ರೆ ವಿಡಿಯೋ ಯಾರು ಮಾಡ್ತಾರೆ? ಇಂಥ ವಿಡಿಯೋ ಇರುವುದೇ ಮಜಾ ತೆಗೆದುಕೊಳ್ಳಲಿಕ್ಕೆ!”
“ಥೂ ನಿನ್ನ ಜನ್ಮಕ್ಕೆ…. ಎಷ್ಟು ಹುಡುಗಿಯರ ಬಳಿ ಹೀಗೆಲ್ಲ ಮೋಸ ಮಾಡಿದ್ದೀಯಾ?”
“ಲೆಕ್ಕವಿಲ್ಲದಷ್ಟು…. ಅದೆಲ್ಲ ಬಿಡು, ನಾಳೆ ನೀನು ನನ್ನನ್ನು ಖಂಡಿತಾ ಬಂದು ಮೀಟ್ ಮಾಡಬೇಕು. ಅದೇ ನಮ್ಮ ಪಾರ್ಕ್ ಹತ್ತಿರ ಹೋಟೆಲ್ ಇದೆಯಲ್ಲ….. ಅಲ್ಲೇ!” ಅವನ ಕುಹಕದ ನಗೆ ನಿಲ್ಲುವಂತೆಯೇ ಇರಲಿಲ್ಲ.
ತಾನು ಬರುವುದೇನೋ ಸರಿ, ಆದರೆ ಅವನು ತನ್ನ ಮೊಬೈಲ್ ನಲ್ಲಿ ಇರುವ ಆ ಎಲ್ಲಾ ಅಶ್ಲೀಲ ವಿಡಿಯೋಗಳನ್ನೂ ಕೂಡಲೇ ಡಿಲೀಟ್ ಮಾಡಬೇಕು ಎಂದು ಒತ್ತಾಯಿಸಿದಳು.
“ಸರಿ ಹಾಗಾದರೆ…. ಹೋಟೆಲ್ ಬೇಡ, ನಿನ್ನ ಮನೆಗೇ ಬಂದುಬಿಡಲಾ?”
“ಬೇಡ…. ಖಂಡಿತಾ ಬೇಡ!”
“ಸರಿ ಹಾಗಾದರೆ, ಅದೇ ಹೋಟೆಲ್ ಇರಲಿ. ನಾನು ನಾಳೆ ಸಂಜೆ ಬಂದು ನಿನ್ನ ಪಿಕ್ ಅಪ್ ಮಾಡ್ತೀನಿ,” ಎಂದ ರೋಹಿತ್.
“ಹೋಟೆಲ್ ಬೇಡ, ಅದೇ ಪಾರ್ಕ್ ಇರಲಿ,” ಎಂದಳು ದಿವ್ಯಾ.
“ಏ ಕಳ್ಳಿ…. ನಾನು ನಿನ್ನನ್ನು ಹೋಟೆಲ್ ಗೆ ಏಕೆ ಕರೆಯುತ್ತಿದ್ದೇನೆ ಎಂದು ನಿನಗೆ ಗೊತ್ತಿಲ್ಲವೇ?” ಅವನ ಅಟ್ಟಹಾಸದ ನಗು ನಿಲ್ಲುವಂತಿರಲಿಲ್ಲ.
“ನೋ…ನೋ! ನಾನು ಹಾಗೆಲ್ಲ ಹೋಟೆಲ್ ಗೆ ಬರಲಾರೆ!” ದಿವ್ಯಾ ಸಿಡುಕಿದಳು.
“ನೀನು ಬರಲೇಬೇಕು ಡಾರ್ಲಿಂಗ್…. ಬೇಡ ಅಂದ್ರೆ….. ನಿನ್ನ ಈ ವಿಡಿಯೋ ವೈರಲ್ ಆಗಿ, ನೆಟ್ ಗಮನಿಸುವ ಎಲ್ಲಾ ರಸಿಕರಿಗೂ ರಸದೌತಣ ಸಿಗಲಿದೆ.”
“ಥೂ….. ನಿನ್ನ…..! ನೀನು ಇಷ್ಟು ನೀಚ ಅಂತ ಗೊತ್ತಿದ್ರೆ, ನಾನು ನಿನ್ನನ್ನು ಮಾತನಾಡಿಸುತ್ತಲೂ ಇರಲಿಲ್ಲ,” ದಿವ್ಯಾ ಕೋಪದಲ್ಲಿ ಚೀರಾಡಿದಳು.
“ಇಲ್ಲ ಡಾರ್ಲಿಂಗ್…. ನಾನು ಈಗಲೂ ಸಾಚಾನೇ! ಆದರೆ ನೀನು ನಾಳೆ ನನ್ನ ಫ್ರೆಂಡ್ಸ್ ನ ಮೀಟ್ ಮಾಡಲು ಹೋಟೆಲ್ ಗೆ ಬರದಿದ್ದರೆ, ಅವರು ಇದನ್ನು ಇಂಟರ್ ನೆಟ್ ಗೆ ಅಪ್ ಲೋಡ್ ಮಾಡದೇ ಇರಲಾರರು. ಆಮೇಲೆ ನಿನ್ನಿಷ್ಟ!”
ದಿವ್ಯಾ ತಕ್ಷಣ ಫೋನ್ ಕಟ್ ಮಾಡಿದಳು. ಅವಳು ಭಯದಿಂದ ಗಡಗಡ ನಡುಗುತ್ತಿದ್ದಳು. ತಾನೆಂಥ ಕೊಚ್ಚೆ ಕೆಸರಿಗೆ ಜಾರಿ ಬಿದ್ದಿರುವೆ ಎಂದು ನೆನೆದು ಶಾಕ್ ತಗುಲಿತು. ರೋಹಿತ್ ಬಳಿ ಇರುವ ಆ ಎಲ್ಲಾ ವಿಡಿಯೋ ಡಿಲೀಟ್ ಮಾಡಿಸುವುದು ಹೇಗೆ ಎಂದು ತಿಳಿಯದೆ ತಲೆ ಚಚ್ಚಿಕೊಳ್ಳಲು ಆರಂಭಿಸಿದಳು.
ತಾನು ಅವನನ್ನು ಮೀಟ್ ಆಗದಿದ್ದರೆ ಆ ಪಾಪಿ ಇದನ್ನು ವೈರಲ್ ಮಾಡದೆ ಖಂಡಿತಾ ಬಿಡಲಾರ. ಈ ಜೇಡರ ಬಲೆಯಿಂದ ಬಿಡಿಸಿಕೊಂಡು ತಾನು ಹೊರ ಬರುವುದಾದರೂ ಹೇಗೆ? ಅವಳ ಬುದ್ಧಿ ಓಡಲೇ ಇಲ್ಲ.
ತಕ್ಷಣ ಅವಳು ತನ್ನ ಆಪ್ತ ಗೆಳತಿ ಅರ್ಪಿತಾಳಿಗೆ ಫೋನಾಯಿಸಿ, ನಡೆದದ್ದನ್ನೆಲ್ಲಾ ವಿವರಿಸಿದಳು.
“ನಾಳೆ ಬೆಳಗ್ಗೆ ನೀನು ನಮ್ಮ ಮನೆಗೆ ಬಾ…. ಕುಳಿತು ನಿಧಾನವಾಗಿ ಮಾತನಾಡೋಣ,” ಎಂದಳು ಅರ್ಪಿತಾ.
ಮುಂದೆ ಏನಾಗಲಿದೆಯೋ ಏನೋ ಎಂಬ ಅಂಜಿಕೆಯಿಂದ, ಆ ರಾತ್ರಿ ದಿವ್ಯಾ ತನ್ನ ಮುಖ್ಯ ಬಟ್ಟೆಬರೆ, ಹಣ, ಒಡವೆ ಎಲ್ಲಾ ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿಕೊಂಡು ಮಾರನೇ ಬೆಳಗ್ಗೆ ಅರ್ಪಿತಾಳ ಮನೆ ತಲುಪಿದಳು.
ಅವಳು ಅರ್ಪಿತಾಳ ಮನೆ ಡೋರ್ ಬೆಲ್ ಒತ್ತುತ್ತಿದ್ದಂತೆ, ಅರ್ಪಿತಾ ಬಂದು ಇವಳನ್ನು ಎದುರುಗೊಂಡಳು. ದುಃಖ ತಡೆಯಲಾರದೆ ಅವಳ ತೆಕ್ಕೆಗೆ ಬಿದ್ದು, ದಿವ್ಯಾ ಬಿಕ್ಕಿ ಬಿಕ್ಕಿ ಅತ್ತಳು. ಅರ್ಪಿತಾ ಅವಳ ಬೆನ್ನು ಸವರಿ, ಸಮಾಧಾನ ಪಡಿಸಿದಳು. ಇದನ್ನು ಕಂಡ ಅರ್ಪಿತಾಳ ಪತಿ ವರುಣ್, ಅವಳೇಕೆ ಅಳುತ್ತಿದ್ದಾಳೆ ಎಂದು ಪತ್ನಿಯನ್ನು ಸನ್ನೆ ಮೂಲಕ ಕೇಳಿದ. ನಂತರ ತಿಳಿಸುವುದಾಗಿ ಅರ್ಪಿತಾ ಗಂಡನಿಗೆ ಸನ್ನೆ ಮಾಡಲು, ಸೂಕ್ಷ್ಮ ಅರಿತ ಅವನು, ಫೋನ್ ರಿಸೀವ್ ಮಾಡುವವನಂತೆ ಅಂಗಳದ ಕಡೆ ನಡೆದ. ಆಗ ಅರ್ಪಿತಾ ಗೆಳತಿಯನ್ನು ತನ್ನ ಕೋಣೆಗೆ ಕರೆದೊಯ್ದಳು.
“ದಿವ್ಯಾ, ನೀನು ನಿನ್ನೆ ರಾತ್ರಿ ಫೋನ್ ನಲ್ಲಿ ಮಾತನಾಡುವಾಗ, ಬಹಳ ಗಾಬರಿಗೊಂಡಿದ್ದೆ. ವಿಷಯ ನನಗೆ ಪೂರ್ತಿ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ನೀನು ಆ ಅತಿ ಹೆದರಿಕೆಯಲ್ಲಿ ಏನು ಮಾಡಿಕೊಂಡು ಬಿಡ್ತಿಯೋ ಅಂತ ನನಗೆಷ್ಟು ಗಾಬರಿ ಆಗಿತ್ತು ಗೊತ್ತೇ?”
“ನನಗೂ ಹಾಗೇ ಅನಿಸ್ತು ಕಣೇ…. ಏನಾದ್ರೂ ಮಾತ್ರೆ ತಗೊಂಡು ಈ ಜೀವನ ಕೊನೆಗಾಣಿಸಿ ಬಿಡಲೇ ಅಂತ 100 ಸಲ ಯೋಚಿಸಿದೆ…..”
“ಅಂಥ ಹೇಡಿಗಳ ಮಾತು ಖಂಡಿತಾ ಬೇಡ ದಿವ್ಯಾ! ಪ್ರತಿಯೊಂದು ಸಮಸ್ಯೆಗೂ ಏನೋ ಒಂದು ಪರಿಹಾರ ಇದ್ದೇ ಇರುತ್ತದೆ. ನಿನ್ನನ್ನು ಈ ಸ್ಥಿತಿಗೆ ಇಳಿಸಿ, ಗೋಳಾಡಿಸುತ್ತಿದ್ದಾನಲ್ಲ…. ಅವನಿಗೆ ಹೀನಾಯ ಸಾವು ಬರಲಿ! ನೀನು ಇನ್ನು ಮುಂದೆ ಎಂದೆಂದೂ ಅಪರಿಚಿತ ಗಂಡಸಿನ ಸ್ನೇಹ ಬಯಸಲೇ ಬೇಡ….. ಎಂಥ ಜೇಡರ ಬಲೆಗೆ ಸಿಲುಕಿಬಿಟ್ಟೆ ನೀನು…..”
“ದಯವಿಟ್ಟು ಹೇಗಾದರೂ ನನ್ನನ್ನು ಈ ಸಲ ಈ ಬಲೆಯಿಂದ ಕಾಪಾಡು… ಮುಂದೆ ಎಂದೆಂದೂ ಇಂಥ ತಪ್ಪು ಮಾಡುವುದಿಲ್ಲ…..” ಎನ್ನುತ್ತಾ ದಿವ್ಯಾ ತನ್ನ ಕಣ್ಣು ಒರೆಸಿಕೊಂಡಳು.
“ನೀನು ಇಲ್ಲಿಗೆ ಬಂದ ಮಾತ್ರಕ್ಕೆ ಸಮಸ್ಯೆ ಮುಗಿಯಿತು ಅಂದುಕೊಳ್ಳಬೇಡ. ಆ ಪಾಪಿ ಆ ವಿಡಿಯೋವನ್ನು ಯಾವಾಗ ವೈರಲ್ ಮಾಡಿಬಿಡ್ತಾನೋ ಏನೋ….” ಅರ್ಪಿತಾ ಅಲವತ್ತುಕೊಂಡಳು.
“ಮತ್ತೆ… ನಾನೀಗ ಏನು ಮಾಡಲಿ?” ದಿವ್ಯಾ ಕೇಳಿದಳು.
“ನಾವು ಹೇಗದರೂ ಪೊಲೀಸರ ಸಹಾಯ ಪಡೆಯಲೇಬೇಕು!” ಅರ್ಪಿತಾ ಒತ್ತಾಯಿಸಿದಳು.
“ಪೊಲೀಸರೇ…. ಅಯ್ಯೋ… ಬೇಡ! ಅವರ ಬಳಿ ಹೇಳಿಕೊಂಡರೆ ನಾವೇ ಈ ಹೊಲಸು ವಿಷಯವನ್ನು ಪಬ್ಲಿಕ್ ಮಾಡಿದಂತಾಗುವುದಿಲ್ಲವೇ?”
“ಅದು ಹಾಗಲ್ಲ ದಿವ್ಯ.ಆ….. ಪೊಲೀಸರು ನಿನ್ನಂಥ ಅಸಹಾಯಕರ ಗೌಪ್ಯತೆ ಕಾಪಾಡುತ್ತಾರೆ. ಆ ಪಾಪಿ ಅದನ್ನು ವೈರಲ್ ಮಾಡಿದನೋ, ಇಡೀ ಊರಿಗೇ ವಿಷಯ ಹರಡುತ್ತದೆ…. ಆಮೇಲೆ ನಿನ್ನ ಮರ್ಯಾದೆ 3 ಕಾಸಿಗೂ ಉಳಿಯಲ್ಲ…. ಇದರ ಬದಲು ನಾವು ಪೊಲೀಸ್ ಪ್ರೊಟೆಕ್ಷನ್ ಪಡೆದರೆ, ಈ ವಿಷಯ ಹೊರಗೆ ಹೋಗಲ್ಲ. ಆ ಪಾಪಿಯೂ ವಿಡಿಯೋ ಸಮೇತ ಸಿಕ್ಕಿಬೀಳ್ತಾನೆ!” ಅರ್ಪಿತಾ ದಿವ್ಯಾಳಿಗೆ ಸರಿಯಾದ ಮಾರ್ಗ ತೋರಿದಳು.
“ಅದು ಸರಿ, ವರುಣ್ ಗೆ ನೀನು ವಿಷಯ ಹೇಳಿದೆಯಾ? ಅವರಿಂದ ಪೊಲೀಸರ ಬಳಿ ಹೋಗಲು ಸಹಾಯ ಸಿಗಬಹುದೇ?”
“ಇಲ್ಲ…. ಇದುವರೆಗೂ ಏನೂ ಹೇಳಿಲ್ಲ. ಒಂದು ಕೆಲಸ ಮಾಡು, ನೀನು ಮೊದಲು ಸ್ನಾನ ಮಾಡಿ ರೆಡಿಯಾಗು. ಮೂವರೂ ಟಿಫನ್ ಮುಗಿಸಿ ನೇರ ಪೊಲೀಸರ ಬಳಿ ಹೋಗೋಣ. ಅಷ್ಟರಲ್ಲಿ ಈ ವಿಷಯವನ್ನು ಸೂಕ್ಷ್ಮವಾಗಿ ಇವರಿಗೆ ಹೇಳ್ತೀನಿ. ಇವರ ಫ್ರೆಂಡ್ ಒಬ್ಬರು ಪೊಲೀಸ್ ಡಿಪಾರ್ಟ್ ಮೆಂಟ್ ನಲ್ಲಿ ಹಿರಿಯ ಅಧಿಕಾರಿ. ಖಂಡಿತಾ ಅವರ ಸಹಾಯ ಪಡೋಣ,” ಎಂದು ಅರ್ಪಿತಾ ದಿವ್ಯಾಳಿಗೆ ಸಮಾಧಾನ ಹೇಳಿದಳು.
ಸರಿ ಎಂದು ದಿವ್ಯಾ ಸ್ನಾನಕ್ಕೆ ಹೊರಟಳು. ಇತ್ತ ಅರ್ಪಿತಾ ಪತಿಗೆ ಗೆಳತಿಯ ಸಂಕಷ್ಟಗಳ ಬಗ್ಗೆ ತಿಳಿಸಿ, ಅವಳನ್ನು ಹೇಗಾದರೂ ಕಾಪಾಡಲು ಕೇಳಿಕೊಂಡಳು. ಇದನ್ನು ಕೇಳಿ ವರುಣನಿಗೂ ಶಾಕ್ ಆಯಿತು. ಖಂಡಿತಾ ಸ್ನೇಹಿತನ ಸಹಾಯ ಪಡೆಯೋಣ ಎಂದು ತಿಳಿಸಿದ. ಮೂವರೂ ಉಪಾಹಾರ ಮುಗಿಸಿ ಸ್ಟೇಷನ್ ಕಡೆ ಹೊರಟ.
ಅಲ್ಲಿಗೆ ಹೋಗುವ ಮೊದಲೇ ಕಾರಿನಲ್ಲಿ ವರುಣ್ ತನ್ನ ಗೆಳೆಯ ಪೊಲೀಸ್ ಸೂಪರಿಂಟೆಂಡೆಂಟ್ ಗಿರೀಶ್ ಭಟ್ ಗೆ ಸೂಕ್ಷ್ಮವಾಗಿ ವಿಷಯ ವಿವರಿಸಿದ. ಇದೊಂದು ಬ್ಲಾಕ್ ಮೇಲಿಂಗ್ಕೇಸ್ ಎಂದು ಆತನಿಗೆ ಗೊತ್ತಾಯಿತು. ದಿವ್ಯಾಳಿಗೆ ಧೈರ್ಯವಾಗಿರಲು ಸೂಚಿಸಿ, ಸ್ಟೇಷನ್ ಗೆ ಬಂದ ತಕ್ಷಣ ತನ್ನ ಛೇಂಬರ್ ಗೆ ಬರುವಂತೆ ಆತ ತಿಳಿಸಿದ. ಅಷ್ಟರಲ್ಲಿ ದಿವ್ಯಾಳ ಫೋನ್ ಗೆ ರೋಹಿತ್ ಮತ್ತೆ ಮತ್ತೆ ಕರೆ ಮಾಡುತ್ತಿದ್ದ. ಅಷ್ಟರಲ್ಲಿ ಇವರು ಠಾಣೆ ತಲುಪಿದರು. ಅಲ್ಲಿ ಗಿರೀಶ್ ರ ನೇತೃತ್ವದಲ್ಲಿ, ಇವರು ಅಫಿಶಿಯಲ್ ಆಗಿ ಅಲ್ಲಿನ ಸ್ಥಳೀಯ ಇನ್ ಸ್ಪೆಕ್ಟರಿಗೆ ದೂರು ಸಲ್ಲಿಸಿದರು. ಅವರ ಆದೇಶದಂತೆ ದಿವ್ಯಾ ರೋಹಿತ್ ಕರೆ ಸ್ವೀಕರಿಸಿದ ತಕ್ಷಣ, ಟ್ರಾಕಿಂಗ್ ಮೂಲಕ ಅವನಿದ್ದ ಲೊಕೇಶನ್ ಗುರುತಿಸಿದರು.
ಇತ್ತ ರೋಹಿತ್ ನ ಆದೇಶದಂತೆ ದಿವ್ಯಾ ಅವನನ್ನು ಭೇಟಿಯಾಗಲು ಆ ಹೋಟೆಲ್ ಗೆ ಹೊರಟಳು. ಮಾರುವೇಷದಲ್ಲಿ ಪೊಲೀಸರು ಅದೇ ಕೋಣೆ ಬಳಿ ಬಂದರು.
ಎಂದಿನಂತೆ ಅವನನ್ನು ಮಾತನಾಡಿಸುತ್ತಾ, ಆ ವಿಡಿಯೋ ಡಿಲೀಟ್ ಮಾಡುವಂತೆ ದಿವ್ಯಾ ಗೋಗರೆದಳು. ಬೇಕೆಂದೇ ಅಟ್ಟಹಾಸದಿಂದ ನಗುತ್ತಾ, ತನ್ನ ಫ್ರೆಂಡ್ಸ್ ಬರಲಿ, ಒಂದು ಸಣ್ಣ ಪಾರ್ಟಿಯ ನಂತರ ಅದನ್ನು ಮಾಡೋಣ ಎಂದು ರೋಹಿತ್ ಅವಳನ್ನು ಆಕ್ರಮಿಸಿದ. ಈಗಾಗಲೇ ತನ್ನ ಮೊಬೈಲ್ ನಲ್ಲಿ ವಿಡಿಯೋ ಆನ್ ಮಾಡಿಕೊಂಡಿದ್ದ ದಿವ್ಯಾ, ಅವನನ್ನು ಪರಿಪರಿಯಾಗಿ ಮಾತಿಗೆಳೆದು, ಅವನ ಬಾಯಿಂದ ಎಲ್ಲಾ ವಿಷಯ ಕಕ್ಕಿಸಿದಳು. ಅವನ ಗೆಳೆಯರು ಬರುವ ಮೊದಲೇ, ಹೋಟೆಲ್ ಸಿಬ್ಬಂದಿಯ ಹಾಗೇ ಕ್ಲೀನಿಂಗ್ ನೆಪ ಹೇಳಿ ಒಳಬಂದ ಪೊಲೀಸರು, ತಕ್ಷಣ ಅವನನ್ನು ಬಂಧಿಸಿದರು. ಅವನ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ಎಲ್ಲವನ್ನೂ ವಶಪಡಿಸಿಕೊಂಡರು. ದಿವ್ಯಾಳ ವಿಡಿಯೋ ರೆಕಾರ್ಡಿಂಗ್ ನಿಂದಾಗಿ, ರೋಹಿತ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ರೋಹಿತ್ ಇತರ ಎಷ್ಟೋ ಹುಡುಗಿಯರ ಜೊತೆ ನಡೆಸಿದ್ದ ಈ ಕಳ್ಳಾಟಗಳೆಲ್ಲ, ಅವನ ಲ್ಯಾಪ್ ಟಾಪ್ ನಲ್ಲಿ ಸಾಕ್ಷಿಯಾಗಿದ್ದ.
ಪೊಲೀಸರು ಅವನನ್ನು ಹಿಗ್ಗಾಮುಗ್ಗ ಥಳಿಸಿ, ಅವರ ಗೆಳೆಯರನ್ನು ಇವನೇ ಕರೆದಂತೆ ಬರಮಾಡಿಕೊಂಡರು. ಕುಡಿದು ಮಜಾ ಮಾಡಲು ಬಂದಿದ್ದ ಅವನ ಗೆಳೆಯರು, ರೋಹಿತ್ ನನ್ನು ಕಂಡು, ಹಕ್ಕಿ ಎಲ್ಲಿ? ಎಂದರು. ತಕ್ಷಣ ಪೊಲೀಸರು ಆ ನಾಲ್ವರನ್ನು ಸೆರೆಹಿಡಿದು, ಸರಿಯಾಗಿ ಥಳಿಸಿದರು. ಎಲ್ಲರೂ ತಮ್ಮ ತಪ್ಪು ಒಪ್ಪಿಕೊಂಡು, ಇದೇ ತಮ್ಮ ದಂಧೆ, ಸ್ಮಾರ್ಟ್ ಆಗಿದ್ದ ರೋಹಿತ್ ನನ್ನು ಛೂ ಬಿಟ್ಟು, ನಗರದ ಹುಡುಗಿಯರನ್ನು ಏಮಾರಿಸಿ, ಅವರ ವಿಡಿಯೋ ಮಾಡಿ, ಬ್ಲಾಕ್ ಮೇಲಿಂಗ್ ಮಾಡುತ್ತಿದ್ದುದಾಗಿ ಒಪ್ಪಿಕೊಂಡರು.
ವರುಣ್ ಫ್ರೆಂಡ್ ಗಿರೀಶ್ ನಿಂದಾಗಿ ಅವೆಲ್ಲ ವಿಡಿಯೋ ಶಾಶ್ವತ ಪೊಲೀಸರ ಪಾಲಾಯಿತು. ಆ ಖದೀಮರನ್ನು ಕೋರ್ಟಿಗೆ ಹಾಜರುಪಡಿಸಿ, ಕಾರಾಗೃಹ ಸೇರಿಸಲಾಯಿತು.
ಅಂದಿನಿಂದ ದಿವ್ಯಾ ಯಾವುದೇ ಅಪರಿಚಿತರ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ, ಅವರ ಸ್ನೇಹಕ್ಕೆ ಕೈ ಚಾಚಲಿಲ್ಲ. ಅವಳು ತನ್ನ ಗೆಳತಿ ಅರ್ಪಿತಾ, ಅವಳ ಪತಿ ವರುಣ್ ಹಾಗೂ ಅವರ ಫ್ರೆಂಡ್ ಗಿರೀಶ್ ಭಟ್ ರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದ್ದಳು. ಅವಳ ಗಂಡ ಆದಿತ್ಯ ಅಮೆರಿಕಾದಿಂದ ಮರಳಿ ಬರುವಷ್ಟರಲ್ಲಿ ದಿವ್ಯಾ ಆ ಜೇಡರ ಬಲೆಯಿಂದ ಸಂಪೂರ್ಣ ಸುರಕ್ಷಿತವಾಗಿ ಹೊರಬಂದಿದ್ದಳು. ಅಂತೂ ಆದಿತ್ಯ ಇದೆಲ್ಲ ಮುಗಿದ 15 ದಿನಗಳ ನಂತರ, ಮೈಸೂರಿಗೆ ಮರಳಿದ್ದ.
“ಆದಿತ್ಯ, ನಿಮ್ಮನ್ನು ಬಿಟ್ಟು ಸದಾ ಒಂಟಿಯಾಗಿರಲು ನನಗೆ ಬಹಳ ಬೇಸರ,” ಎಂದು ಅವನ ತೋಳು ಸೇರಿ ಬಿಕ್ಕಳಿಸಿದಳು ದಿವ್ಯಾ.
“ಯೋಚಿಸಬೇಡ ಚಿನ್ನ…. ನಿನಗಾಗಿ ಈ ಸಲ ನಾನು ಒಂದು ಗುಡ್ ನ್ಯೂಸ್ ತಂದಿದ್ದೇನೆ,” ಎಂದ ಆದಿತ್ಯ.
“ಏನದು?” ದಿವ್ಯಾಳ ಕುತೂಹಲಕ್ಕೆ ಆದಿತ್ಯ ನಸುನಗುತ್ತಾ ವಿವರಿಸತೊಡಗಿದ.
“ಈ ದಿನನಿತ್ಯದ ಟೂರಿಂಗ್ ಕಾಟ ಇನ್ನು ಮುಂದೆ ಇರೋದಿಲ್ಲ. ನಮ್ಮ ಆಫೀಸಿನಲ್ಲಿ ನನಗೆ ಬಡತಿ ನೀಡಿ ಬೆಂಗಳೂರಿಗೆ ವರ್ಗ ಮಾಡಿದ್ದಾರೆ. ಅಲ್ಲೇ ಆಫೀಸ್ ಕ್ವಾರ್ಟರ್ಸ್ ಮನೆ ಸಹ ಅಲಾಟ್ ಆಗಿದೆ. ಇನ್ನು ಮುಂದೆ 2-3 ತಿಂಗಳಿಗೊಮ್ಮೆ 15 ದಿನಗಳ ವಿದೇಶಿ ಪ್ರವಾಸ ಮಾತ್ರ ಇರುತ್ತದೆ. ನಾನು ವಿದೇಶಕ್ಕೆ ಹೊರಟಾಗ ನೀನೂ ನನ್ನೊಂದಿಗೆ ಬರುವೆಯಂತೆ. ಒಂಟಿಯಾಗಿ ಕಷ್ಟಪಟ್ಟಿದ್ದು ಸಾಕು,” ಎಂದು ಪತ್ನಿಯನ್ನು ರಮಿಸಿದ.
“ಓಹೋ…. ನಾವು ಇಲ್ಲಿಂದ ಬೆಂಗಳೂರಿಗೆ ಹೋಗ್ತೀವಾ…. ಫಾರಿನ್ ಟೂರ್ ಸಹ ಉಂಟಾ?” ಎಂದು ದಿವ್ಯಾ ಸಂಭ್ರಮಿಸಿದಳು.
“ಹಾಗೇ ನಮ್ಮ ಸಂಸಾರಕ್ಕೆ ಬೇಗ ಒಬ್ಬ ಪುಟ್ಟ ಅತಿಥಿಯನ್ನು ಬರಮಾಡಿಕೊಳ್ಳೋಣ,” ಆದಿತ್ಯ ಹೇಳಿದಾಗ, ದಿವ್ಯಾ ಬಹಳ ಸಂಭ್ರಮಪಟ್ಟಳು.
ದಿವ್ಯಾ ಗಂಡನ ಎದೆಗೆ ಒರಗಿ ನಿದ್ರಿಸಿದಳಾದರೂ, ಸ್ವಲ್ಪ ಹೊತ್ತಿಗೆ ಅವಳಿಗೆ ಎಚ್ಚರವಾಯಿತು. ನೆಮ್ಮದಿಯಿಂದ ಅವಳಿಗೆ ನಿದ್ದೆ ಮಾಡಲು ಆಗಲಿಲ್ಲ. ಇದೆಲ್ಲ ವಿಷಯವನ್ನು ಪತಿಗೆ ತಿಳಿಸಲು ಬಯಸಿದಳಾದರೂ, ಅದನ್ನು ಆತ ಹೇಗೆ ತೆಗೆದುಕೊಳ್ಳುವನೋ ಎಂಬ ಭಯ ಕಾಡುತ್ತಿತ್ತು.
ಮಾರನೇ ದಿನ ದಿವ್ಯಾ ಪತಿಗೆ ಹೇಳಿದಳು, “ಆದಿ, ನಾನು ನಿಮಗೆ ಒಂದು ಮುಖ್ಯ ವಿಷಯ ಹೇಳಬೇಕು.”
ಉಪಾಹಾರ ಮುಗಿಸಿದ ಇಬ್ಬರೂ ಆರಾಮವಾಗಿ ಹೊರಗಿನ ಪೋರ್ಟಿಕೋದಲ್ಲಿ ಕುಳಿತಿದ್ದರು.
“ಏನದು ಹೇಳು ದಿವ್ಯಾ?”
“ನನ್ನಿಂದ ಒಂದು ಘೋರ ತಪ್ಪು ನಡೆದುಹೋಗಿದೆ…..” ಎಂದು ಬಿಕ್ಕಳಿಸುತ್ತಾ ನಡೆದ ಕರ್ಮಕಾಂಡದ ಬಗ್ಗೆ ಒಂದೂ ಮುಚ್ಚಿಡದೆ ಹೇಳಿಕೊಂಡಳು.
ಎಲ್ಲವನ್ನೂ ಕೇಳಿಸಿಕೊಂಡ ಆದಿತ್ಯ ಸಹನೆ ಕಳೆದುಕೊಂಡು ಕಿರುಚಿದ, “ದಿವ್ಯಾ…. ನಿನ್ನನ್ನು ನೀನು ಏನೆಂದುಕೊಂಡಿದ್ದೀಯಾ? ನೀನು ಹೀಗೆ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ನಾನು ನೋಡಿಕೊಂಡು ಸಹಿಸುತ್ತಾ ಸುಮ್ಮನಿರಬೇಕೇ? ಈಗ ನೀನು ಅದೇ ಆ ಹಾಳು ರೋಹಿತ್ ಬಳಿ ಹೋಗು! ನನ್ನ ಜೀವನದಲ್ಲಿ ಇನ್ನು ಮುಂದೆ ನಿನಗೆ ಸ್ಥಾನವಿಲ್ಲ….. ನಿನ್ನ ದಾರಿ ನೀನು ನೋಡಿಕೋ!”
“ಆದಿ….. ದಯವಿಟ್ಟು ನನ್ನನ್ನು ಕ್ಷಮಿಸಿ…. ದುಡುಕಿ ಇಂಥ ತಪ್ಪು ಮಾಡಿಬಿಟ್ಟೆ…. ಇನ್ನೆಂದೂ ಇಂಥ ತಪ್ಪು ಮಾಡುವುದಿಲ್ಲ…. ನನಗೆ ಒಂದೇ ಒಂದು ಅವಕಾಶ ಕೊಡಿ….” ಅವಳ ಬಿಕ್ಕಳಿಕೆ ಹೆಚ್ಚಿತು.
“ಈ ತಪ್ಪು ಕ್ಷಮೆಗೆ ಅರ್ಹವಲ್ಲ ದಿವ್ಯಾ…. ಇದಂತೂ ಖಂಡಿತಾ ಅಕ್ಷಮ್ಯ ಅಪರಾಧ!” ಎನ್ನುತ್ತಾ ಕೋಪದಿಂದ ನಡುಗುತ್ತಿದ್ದ ಆದಿತ್ಯ, ಅಲ್ಲಿಂದೆದ್ದು ಹೊರಟುಹೋದ.
“ಆದಿ…. ಆದಿ…. ಪ್ಲೀಸ್….” ದಿವ್ಯಾ ಕೂಗುತ್ತಲೇ ಅವನನ್ನು ಹಿಂಬಾಲಿಸಿದಳು. ಆದರೆ ಆದಿತ್ಯ ಅದನ್ನು ಕೇಳಿಸಿಕೊಳ್ಳದೆ ರಪ್ಪೆಂದು ಕೋಣೆಯ ಕದ ಹಾಕಿಕೊಂಡ. ಸ್ವಲ್ಪ ಹೊತ್ತಿಗೆ ಅವನು ಡ್ರೆಸ್ ಬದಲಿಸಿ, ಕಾರಿನ ಕೀ ಹಿಡಿದು ಹೊರಗೆಲ್ಲೋ ಹೊರಟುಹೋದ. ದಿನವಿಡೀ ದಿವ್ಯಾ ಅಳುತ್ತಾ ಇದ್ದಳು.
ಅಂದು ರಾತ್ರಿ ಆದಿತ್ಯ ಮನೆ ಮುಟ್ಟಿದಾಗ 11 ದಾಟಿತ್ತು. ಅವನಿಗಾಗಿ ಕಾದಿದ್ದ ದಿವ್ಯಾ, ತಟ್ಟೆಯಲ್ಲಿ ಊಟ ಬಡಿಸಿಕೊಂಡು ಅವನ ಕೋಣೆಗೆ ಹೋದಳು. ಅವಳನ್ನು ನೋಡಿ ಅವನು ಮುಖ ತಿರುಗಿಸಿಕೊಂಡ.
“ಆದಿ…… ಊಟ ಮಾಡಿ ಪ್ಲೀಸ್…..”
“ನೀನು ಬೇಡ…. ನಿನ್ನ ಊಟ ಬೇಡ….. ನನ್ನ ಬಳಿ ಬರಬೇಡ….. ತೊಲಗಿಹೋಗು!”
“ಆದಿ…. ನನ್ನಿಂದ ನಿಜಕ್ಕೂ ಅಕ್ಷಮ್ಯ ಅಪರಾಧ ಆಗಿದೆ….. ದಯವಿಟ್ಟು ಒಂದೇ ಒಂದು ಅವಕಾಶ ಕೊಡಿ….”
“ನಿನ್ನಿಂದ ನನಗೇನೂ ಆಗಬೇಕಿಲ್ಲ…. ಮನೆ ಬಿಟ್ಟು ಹೋಗು…. ನಾನು ನಿನಗೆ ಡೈವೋರ್ಸ್ ಕೊಡ್ತೀನಿ….. ಅದೇನು ಜೀವನಾಂಶ ಬೇಕೋ ಕೋರ್ಟಿನಲ್ಲಿ ಬಂದು ಪಡೆದುಕೋ….”
“ಆದಿ, ನನ್ನಿಂದ ಆಗಿರುವ ತಪ್ಪು ಎಂಥದ್ದು ಎಂದು ನನಗೆ ಅರಿವಾಗಿದೆ. ನೀವು ಡೈವೋರ್ಸ್ ಕೊಡುವ ಅಗತ್ಯವಿಲ್ಲ….. ನನಗೆ ಯಾವ ಜೀವನಾಂಶವೂ ಬೇಡ….. ನಾನೇ ನಿಮ್ಮ ಜೀವನದಿಂದ ದೂರ ಹೊರಟು ಹೋಗ್ತೀನಿ….” ಎಂದು ಜೋರಾಗಿ ಅಳುತ್ತಾ ದಿವ್ಯಾ ಬೇರೆ ಕೋಣೆಗೆ ಹೊರಟುಹೋದಳು. ಬಾಗಿಲು ಹಾಕಿಕೊಂಡವಳಿಗೆ ಏನು ಮಾಡಬೇಕೋ ತಿಳಿಯದೆ ಹುಚ್ಚಿಯಂತಾದಳು. ಇನ್ನು ತನಗೆ ಬದುಕಿರಲು ಹಕ್ಕಿಲ್ಲ ಎಂದೇ ಭಾವಿಸಿದಳು. ತಾನು ಮಾಡಿದ ತಪ್ಪಿಗೆ ಆತ್ಮಹತ್ಯೆ ಒಂದೇ ಪರಿಹಾರ ಎನಿಸಿತು.
ಇತ್ತ ಕೋಣೆಯಲ್ಲಿ ಮಲಗಿದ್ದ ಆದಿತ್ಯನಿಗೆ ತಲೆ ಸಿಡಿಯುತ್ತಿತ್ತು. ಕುಡಿದು ಬಂದಿದ್ದರೂ ಲೇಶ ಮಾತ್ರವೂ ಅದು ಅವನ ಚಿಂತೆ ದೂರ ಮಾಡಿರಲಿಲ್ಲ. ನಡೆದುಹೋದ ದುರ್ಘಟನೆ ಬಗ್ಗೆ ಮತ್ತೆ ಮತ್ತೆ ಅವನು ವಿಶ್ಲೇಷಿಸತೊಡಗಿದ. ದಿವ್ಯಾ ಬಯಸಿದ್ದರೆ ಈ ಕುಕೃತ್ಯವನ್ನು ಮುಚ್ಚಿಟ್ಟು ಎಂದಿನಂತೆ ತನ್ನೊಂದಿಗೆ ಸಂಸಾರ ನಡೆಸಬಹುದಿತ್ತು. ಆಗ ನಡೆದ ಮೋಸದ ಬಗ್ಗೆ ತನಗೆ ತಿಳಿಯುತ್ತಲೇ ಇರಲಿಲ್ಲ. ಪರಸ್ತ್ರೀ ಸಂಗದಲ್ಲಿ ಇದೇ ತಪ್ಪನ್ನು ತಾನು ಮಾಡಿದ್ದರೆ ದಿವ್ಯಾ ನನ್ನನ್ನು ಕ್ಷಮಿಸುತ್ತಿರಲಿಲ್ಲವೇ? ಆಗಲೂ ಅವಳು ಮನೆ ಬಿಟ್ಟು ಹೋಗುತ್ತಿದ್ದಳೇ? ಗಂಟೆಗಟ್ಟಲೆ ಯೋಚಿಸಿ ಅವನು ಒಂದು ನಿರ್ಧಾರಕ್ಕೆ ಬಂದು ದಿವ್ಯಾಳ ಕೋಣೆಯ ಕದ ತಟ್ಟಿದ.
“ದಿವ್ಯಾ…. ದಿವ್ಯಾ… ಬಾಗಿಲು ತೆಗಿ!”
ಒಳಗಿನಿಂದ ದಿವ್ಯಾ ಉತ್ತರ ಕೊಡಲಿಲ್ಲ. ಮತ್ತೆ ಮತ್ತೆ ಆದಿತ್ಯ ಕರೆದರೂ ಉತ್ತರವೇ ಬರಲಿಲ್ಲ. ಕೊನೆಗೆ ತಡೆಯಲಾರದೇ ಆದಿತ್ಯ ಹೇಗೋ ಕಷ್ಟಪಟ್ಟು ಕದ ಗುದ್ದಿ ಒಳಹೋದ. ಅಲ್ಲಿ ದಿವ್ಯಾ ಸ್ಲೀಪಿಂಗ್ ಟ್ಯಾಬ್ಲೆಟ್ಸ್ ನುಂಗಿ, ಜ್ಞಾನವಿಲ್ಲದೆ ಮಂಚದಿಂದ ಕೆಳಗೆ ಬಿದ್ದಿದ್ದಳು.
ತಕ್ಷಣ ಅವಳನ್ನು ಎತ್ತಿಕೊಂಡು, ಕಾರಿನಲ್ಲಿ ಹತ್ತಿರದ ನರ್ಸಿಂಗ್ ಹೋಮಿಗೆ ಧಾವಿಸಿದ ಆದಿತ್ಯ. ಸಕಾಲಕ್ಕೆ ಆಗಮಿಸಿದ್ದರಿಂದ ವೈದ್ಯರು ಅವಳ ಪ್ರಾಣ ಉಳಿಸಲು ಸಾಧ್ಯವಾಯಿತು. ಇನ್ನರ್ಧ ಗಂಟೆ ತಡವಾಗಿದ್ದರೂ ದಿವ್ಯಾ ಉಳಿಯುತ್ತಿರಲಿಲ್ಲ. ಅವಳನ್ನು ಐಸಿಯು ವಾರ್ಡಿಗೆ ಶಿಫ್ಟ್ ಮಾಡಿದರು. ಆ ರಾತ್ರಿ ಪೂರ್ತಿ ಮಡದಿಗಾಗಿ ಹಂಬಲಿಸುತ್ತಾ ಆದಿತ್ಯ ಅಲ್ಲಾ ವಾರ್ಡಿನ ಹೊರಗುಳಿದ.
ಬೆಳಗ್ಗೆ 5 ಗಂಟೆ ಹೊತ್ತಿಗೆ ಅವಳಿಗೆ ಜ್ಞಾನ ಬಂತು. ಓಡಿ ಬಂದು ಅವಳ ಕೈ ಹಿಡಿದುಕೊಂಡ ಆದಿತ್ಯ, “ಇದೇನು ಮಾಡಿಬಿಟ್ಟೆ ದಿವ್ಯಾ….? ನನ್ನನ್ನು ಬಿಟ್ಟು ಹೋಗಲು ನಿನಗೆ ಹೇಗಾದರೂ ಮನಸ್ಸು ಬಂತು? ಮದುವೆ ಆಗಿ 3 ವರ್ಷಗಳಲ್ಲಿ ಇಷ್ಟೇನಾ ನೀನು ನನ್ನನ್ನು ಅರ್ಥ ಮಾಡಿಕೊಂಡಿದ್ದು? ನೀನಿಲ್ಲದೆ ನನಗೆ ಯಾರಿದ್ದಾರೆ? ನೀನು ಹೋಗಿದ್ದರೆ ನಾನು ಬದುಕಿರುತ್ತಿದ್ದೆನಾ…..?” ಅವನು ಕಂಬನಿ ಸುರಿಸುತ್ತಾ ಅವಳನ್ನು ಎದೆಗಪ್ಪಿಕೊಂಡ.
“ಇಲ್ಲ ಆದಿ…. ನೀವು ನನ್ನನ್ನು ಬದುಕಿಸಬಾರದಿತ್ತು. ನಾನು ಮಾಡಿದ ತಪ್ಪಿಗೆ ಇದೇ ಸರಿಯಾದ ಶಿಕ್ಷೆ…..”
“ಖಂಡಿತಾ ಹಾಗೆ ಹೇಳಬೇಡ ದಿವ್ಯಾ…. ಕೋಪ ತಡೆದುಕೊಳ್ಳಲಾರದೆ ನಾನು ಡೈವೋರ್ಸ್ ವಿಷಯ ಎತ್ತಿದೆ…. ಇನ್ನೆಂದೂ ನಮ್ಮ ನಡುವೆ ಅಂಥ ಮಾತು ಬರಲ್ಲ…. ಇಂಥ ಪ್ರಯತ್ನ ಮಾಡಲಾರೆ ಅಂತ ನನಗೆ ಪ್ರಾಮಿಸ್ ಮಾಡು….. ಇಲ್ಲದಿದ್ದರೆ ನಾನು ಸತ್ತಾಣೆ!”
“ಅಯ್ಯೋ… ಸಾಕು ಆದಿ…. ನಿಮ್ಮನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ ಅಂತ್ಲೇ ಅಲ್ಲವೇ ಹೀಗೆ ಮಾಡಿದ್ದು? ಇನ್ನು ಮುಂದೆ ಎಂದೂ ನಿಮ್ಮನ್ನು ಬಿಟ್ಟಿರಲಾರೆ….” ಎನ್ನುತ್ತಾ ಬಿಕ್ಕಿದ ಅವಳನ್ನು ಎದೆಗಪ್ಪಿಕೊಂಡ ಆದಿತ್ಯ, ಅವಳ ಬೆನ್ನು ನೇವರಿಸಿ ಸಮಾಧಾನ ಪಡಿಸಿದ.
ಅಂದು ಒಂದಾದ ಅವರ ಹೃದಯಗಳು ಮುಂದೆ ಎಂದೂ ಬೇರಾಗಲಿಲ್ಲ. ಅಲ್ಲಿಂದ ಬೆಂಗಳೂರಿಗೆ ವರ್ಗವಾಗಿ ಬಂದ ಈ ದಂಪತಿಗಳು, ಹಳೆಯದನ್ನೆಲ್ಲ ಮರೆತು ಹೊಸ ಮನೆಯಲ್ಲಿ ಹೊಸ ಬದುಕು ನಡೆಸತೊಡಗಿದರು.