ತಾನು, ತನ್ನದು, ತಾನು ಮಾಡಿದ್ದೇ ಸರಿ ಎನ್ನುವ ಸ್ವಾರ್ಥ ಮನುಷ್ಯರನ್ನು ಯಾವ ಮಟ್ಟಕ್ಕಾದರೂ ಎಳೆದೊಯ್ಯಬಲ್ಲದು. ಇದರ ಅರಿವಾಗುವಷ್ಟರಲ್ಲಿ ಬದುಕಿನ ಸಂಧ್ಯಾಕಾಲ ಬಂದಿರುತ್ತದೆ. ಇಂತಹ ಎಡವಟ್ಟಾಗದಂತೆ ಎಚ್ಚರಿಕೆ ವಹಿಸುವುದು ನಮ್ಮ ಕೈಯಲ್ಲಿ ಇದೆಯಲ್ಲವೇ……?

ಹಿಂದಿನ ಕಾಲದಲ್ಲಿದ್ದಂತೆ ಬೆಳಗ್ಗೆ ಬರುವ ಪತ್ರಿಕೆಗಾಗಿ ಕಾದು ನಿಲ್ಲುವ ಕಾಲ ಇದಲ್ಲ, ಅದು ಹುಟ್ಟಿನ ಸುದ್ದಿಯಿರಲಿ, ಸಾವಿನ ಸುದ್ದಿಯಿರಲಿ, ಘಟನೆ ನಡೆದ ಕ್ಷಣಾರ್ಧದಲ್ಲಿ ವಿಶ್ವಾದ್ಯಂತ ಬಿತ್ತರಗೊಳ್ಳುವ ಕಾಲ. ಅಷ್ಟೇಕೆ, ತಾನೇ ಮೊದಲು ಹೇಳಿದ್ದು ಎಂಬ ಧಾವಂತದಲ್ಲಿ ಸಾಯುವ ಮೊದಲೇ ಶ್ರದ್ಧಾಂಜಲಿ ಸಲ್ಲಿಸುವವರೂ ಬಹಳಷ್ಟು ಜನರಿದ್ದಾರೆ.

ಅಂತಹದೊಂದು ಸುದ್ದಿ ಜಾಲತಾಣಗಳಲ್ಲಿ ಬಿತ್ತರಗೊಂಡಿತ್ತು. ವಿಶ್ವವಿಖ್ಯಾತ ವಿಜ್ಞಾನಿ, ಭಾರತೀಯ ಮೂಲದ ಡಾ. ರಮಾದೇವಿಯವರ ನಿಧನದ ಸುದ್ದಿ. ಅದಕ್ಕೂ ಮಿಗಿಲಾಗಿ, ಅವರು ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದು, ಸಾವಿನ ಸುದ್ದಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ಏಕೆಂದರೆ ಹುಟ್ಟಿದ್ದು ಈ ದೇಶದಲ್ಲಾದರೂ ತನ್ನ ಬದುಕಿನ ಹೆಚ್ಚಿನ ಅವಧಿಯನ್ನು ವಿದೇಶದಲ್ಲಿ ಕಳೆದದ್ದು, ವಿಶ್ವವೇ ಬೆರಗಾಗುವ ಸಾಧನೆ ಮಾಡಿದ್ದು ಹೊರದೇಶದಲ್ಲಿ. ಆದರೂ ತಮ್ಮ ಮರಣಾನಂತರ ತಮ್ಮ ದೇಹವನ್ನು ಹುಟ್ಟೂರಿನ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದು ಹೆಚ್ಚು ಪ್ರಚಾರ ಪಡೆದಿತ್ತು. ಆದರೆ ಆ ದೇಹ ದಾನದ ಹಿಂದಿನ ಕಥೆ ಇಂದಿನ ತಲೆಮಾರಿನವರಿಗೆ ಗೊತ್ತಿರಲಿಕ್ಕಿಲ್ಲ. ಅದನ್ನು ತಿಳಿದುಕೊಳ್ಳಬೇಕಾದರೆ ಅವರ ಗತಕಾಲದ ಕೆಲವು ವಿಶಿಷ್ಟ ಅಧ್ಯಾಯಗಳತ್ತ ನೋಡಬೇಕಿದೆ.

`ಪ್ರೀತಿ ಕುರುಡು’ ಎಂಬ ಗಾದೆ ಮಾತಿನ ಅರ್ಥವಿಷ್ಟೇ, ಪ್ರೀತಿಯ ಬಲೆಗೆ ಬಿದ್ದರೆ ಬೇರೇನೂ ಕಾಣದು, ಕಾಣುವುದು ಪ್ರೀತಿ ಮತ್ತು ಪ್ರೇಮ ಮಾತ್ರ. ಅವರವರ ದೃಷ್ಟಿಯಿಂದ ಅದು ಸರಿಯಿರಬಹುದು, ಆದರೂ ನಮ್ಮ ದೇಶ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವವರು ಸ್ವಂತ ವಿಷಯ ಬಂದಾಗ ಮಾತ್ರ ಸ್ವಾರ್ಥಿಯಾಗುವುದೇಕೆ ಎಂದು ಅರ್ಥವಾಗುವುದಿಲ್ಲ. ಮುಖ್ಯವಾಗಿ ಇಂದಿನ ಯುವಜನತೆಯಲ್ಲಿ ಇದು ಸ್ವಲ್ಪ ಹೆಚ್ಚೇ. ಆದರೆ ಸನಾತನ ಸಂಸ್ಕೃತಿಯ ಅರಿವು ಕಿಂಚಿತ್ತಾದರೂ ಇರುವವರಿಗೆ ಅರ್ಥವಾಗಲೇ ಬೇಕಾದ ಕೆಲವೊಂದು ಸರಳ ಸತ್ಯಗಳಿವೆ. ಅವುಗಳನ್ನು ತಿಳಿದುಕೊಳ್ಳುವ ಮನಸ್ಸು, ತಾಳ್ಮೆ ಇರಬೇಕು ಅಷ್ಟೇ.

ಅವರವರ ಬದುಕನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಅವರವರಿಗಿದೆ. ಹೌದು, ನಿಜ, ಇರಬೇಕು ಕೂಡಾ. ಆದರೆ ಯಾವುದೇ ಕ್ಷೇತ್ರವಿರಲಿ, ಎಷ್ಟೇ ಉನ್ನತ ಶಿಕ್ಷಣ ಪಡೆದಿರಲಿ, ಅತ್ಯುನ್ನತ ಅಧಿಕಾರ ಸ್ಥಾನದಲ್ಲಿರಲಿ, ಅನುಭವಕ್ಕೆ ಸಮನವಾದದ್ದು ಯಾವುದೂ ಇಲ್ಲ. ಇದು ಪ್ರೀತಿಪ್ರೇಮ ವಿವಾಹ ಮತ್ತು ನಂತರದ ಜೀವನಕ್ಕೂ ಅನ್ವಯಿಸುತ್ತದೆ. ಆದರೆ ಒಂದಿಷ್ಟು ಕಲಿತು, ಒಳ್ಳೆಯ ಆದಾಯ ಬರುವ ಉದ್ಯೋಗ ಸಿಕ್ಕಿದರೆ ಹೆಚ್ಚಿನವರಿಗೆ ಹಿರಿಯರ ಮಾತು ಅಪಥ್ಯ.

ಇಷ್ಟು ಮಾಡಿದರೆ ಸಾಕು, ಜಗತ್ತನ್ನೇ ಗೆದ್ದಂತೆ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ ಅವರು ವಾಸ್ತವವನ್ನು ಮಾತ್ರ ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಹಿರಿಯರು ಅವರಿಗೆ ಅರ್ಥ ಮಾಡಿಸುವುದರಲ್ಲಿ ವಿಫಲರಾಗುತ್ತಾರೆ. ಎರಡರಲ್ಲಿ ಯಾವುದೋ ಒಂದು, ಅಥವಾ ಕೆಲವೊಮ್ಮೆ ಎರಡೂ ಹೌದು. ಮುಖ್ಯವಾಗಿ ಸಾಧನೆಯ ಅಮಲು ತಲೆಗೆ ಏರಿಸಿಕೊಂಡವರ ಭ್ರಮೆಯೇ ಇದಕ್ಕೆ ಮುಖ್ಯ ಕಾರಣ. ಬೇರೆ ಯಾವುದೇ ಕ್ಷೇತ್ರದಲ್ಲಿ ಒಮ್ಮೆ ತೆಗೆದುಕೊಂಡ ನಿರ್ಧಾರ ತಪ್ಪಾದರೆ ತಿದ್ದಿಕೊಳ್ಳಲು ಅವಕಾಶವಿದೆ. ಸಾಮಾಜಿಕ ವ್ಯವಸ್ಥೆ ಆದರೆ ವೈವಾಹಿಕ ಬದುಕಿನಲ್ಲಿ ಅದರಲ್ಲೂ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ಕಣ್ಣೆದುರಿಗೇ ಇಷ್ಟೊಂದು ಅನಾಹುತಗಳು ನಡೆಯುತ್ತಿದ್ದರೂ ಪುನರಾವರ್ತನೆ ಆಗುತ್ತಿರುವುದೇಕೆ? ಕಾರಣವಿಷ್ಟೇ, ವಿದೇಶಿ ಸಂಸ್ಕೃತಿಯ ಪ್ರಭಾವ ಮತ್ತು ಜಾಲತಾಣಗಳು ಸೃಷ್ಟಿಸುವ ಭ್ರಮಾಲೋಕ.

ಶಾಸ್ತ್ರ ಸಂಪ್ರದಾಯಗಳೆಂದರೆ `ಕಟ್ಟುಪಾಡುಗಳ ಬಂಧನ’ ಎಂಬ ವ್ಯಾಖ್ಯಾನದ ಪರಧಿಯಿಂದ ಹೊರಗೆ ನಿಂತು, ಹೆತ್ತವರು ಮತ್ತು ಮಕ್ಕಳು ಪ್ರತ್ಯೇಕವಾಗಿ ನೋಡಿದರೆ ಕಾಣುವ ಚಿತ್ರಣಗಳು ವಿಭಿನ್ನವಾಗಿಯೇ ಇರುತ್ತದೆ. ಮೊದಲಿಗೆ ಹೆತ್ತವರ ದೃಷ್ಟಿಯಿಂದ ನೋಡುವುದಾದರೆ, ತಮ್ಮ ಮಕ್ಕಳು ಹೀಗಿರಬೇಕು, ಹಾಗಿರಬೇಕು ಉನ್ನತ ವಿದ್ಯಾಭ್ಯಾಸ, ಒಳ್ಳೆಯ ಸ್ಥಾನಮಾನ ಸಿಗಬೇಕು ಇನ್ನೂ ಏನೇನೋ ಕನಸುಗಳನ್ನು ಕಂಡಿರುತ್ತಾರೆ. ಅದಕ್ಕೇ `ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುತ್ತೇವೆ,’ ಎಂದುಕೊಂಡು ನಿರಂತರ ಶ್ರಮಪಡುತ್ತಾರೆ. ಆದರೆ (ಕೆಲವು) ಮಕ್ಕಳ ವರಸೆ ಬೇರೆಯೇ ಇರುತ್ತದೆ.

ತಾನು ಮಾಡಿದ್ದೇ ಸರಿ!

ಹೆತ್ತವರು ಶ್ರಮ ಹಾಕಿರಬಹುದು, ಆದರೆ ಪರಿಶ್ರಮ ಏನಿದ್ದರೂ ನಮ್ಮದು, ನಾವು ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿರುವುದರಿಂದ ಒಳ್ಳೆಯ ಕೆಲಸ, ಒಳ್ಳೆಯ ಸಂಬಳ ಸಿಕ್ಕಿದೆ, ಅದರಲ್ಲಿ ಹೆತ್ತವರು ಮಾಡಿರುವುದೇನು? ಇದೆಲ್ಲಾ ಪ್ರಶ್ನೆಗಳು ಬಂದೇ ಬರುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಬೆಂಬಲ ಹೆತ್ತವರ ಹಂಗಿಲ್ಲದೆ ಸಿಗುತ್ತದೆ, ಬ್ಯಾಂಕ್‌ ಸಾಲದ ಮೂಲಕ. ಅದನ್ನು ಮರುಪಾವತಿ ಮಾಡುವುದೂ ನಾವೇ, ಅಂದಮೇಲೆ ಹೆತ್ತವರ ಕೊಡುಗೆ ಏನಿದೆ? ಎಲ್ಲ ಸ್ವಪ್ರಯತ್ನದಿಂದ ಆಗಿದ್ದ ಮೇಲೆ ನಮ್ಮ ಭವಿಷ್ಯ. ನಮ್ಮ ಕನಸು ಎಲ್ಲವೂ ನಮ್ಮದೇ ಆಗಿದೆ!

ಆಧುನಿಕ ವಿಚಾರಧಾರೆ!

ಇದಿಷ್ಟು ಇಂದಿನ ಹೆಚ್ಚಿನ ಯುವಜನರ ಯೋಚನೆಯ ಧಾಟಿ. ಒಂದು ದೃಷ್ಟಿಯಿಂದ ಇದು ಸತ್ಯ ಹೌದು. ಆದರೆ ಮರ ಬೆಳೆದು ಫಲ ಕೊಡುವ ಹಂತಕ್ಕೆ ತಲುಪಿದಾಗ ಇದೆಲ್ಲ ನಾನೇ ಮಾಡಿದ್ದು ಎನ್ನುವವರು ಸ್ವಲ್ಪ ಹಿಂದಕ್ಕೆ ನೋಡಬೇಕು ತಾನೇ? ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ಸಿಕ್ಕಿರುವುದರಲ್ಲಿ ಅವರ ಪ್ರಯತ್ನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಅವರನ್ನು ಆ ಹಂತಕ್ಕೆ ಬೆಳೆಸಿರುವವರದ್ದೂ ಆಗಿರುತ್ತದೆ. ಬೇರು, ಕಾಂಡ ಇದ್ದರೆ ಮಾತ್ರ ಮರ ಮತ್ತು ಫಲಪುಷ್ಪ ಎಲ್ಲ ಹುಲುಸಾಗಿ ಬೆಳೆಯುತ್ತದೆ. ಆದ್ದರಿಂದ ಬೀಜಾಂಕುರದಿಂದ ಮರವಾಗಿ ಬೆಳೆಯುವ ತನಕದ ಪ್ರಯತ್ನ ಮಾಡಿದರು ಫಲದಲ್ಲಿ ತಮಗೂ ಪಾಲಿರಬೇಕೆಂದು ನಿರೀಕ್ಷಿಸುವುದರಲ್ಲಿ ತಪ್ಪೇನು? ಇದುವರೆಗೆ ಜಂಟಿ ಪ್ರಯತ್ನದಿಂದ ಮಾಡಿದ ಸಾಧನೆಯ ಜೊತೆಗೆ ಮುಂದಿನ ಬದುಕೂ ಸುಗಮವಾಗಿ ಇರಬೇಕೆಂದು ಆಶೆ ಪಡುವುದು ತಪ್ಪಲ್ಲವಲ್ಲ?

ಸಮಾಜ ಮತ್ತು ಕಟ್ಟುಪಾಡು

ಹಿಂದೆಲ್ಲಾ ಹೆಣ್ಣುಮಕ್ಕಳ ಸಂಖ್ಯೆ ಗಂಡು ಮಕ್ಕಳಿಗಿಂತ ಹೆಚ್ಚಿರುತ್ತಿತ್ತು. ಬಹಳಷ್ಟು ಕುಟುಂಬಗಳಲ್ಲಿ ಕಿತ್ತು ತಿನ್ನುವ ಬಡತನದ ಜೊತೆಗೆ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ಇರುವುದರಿಂದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಿಂತ ಅವರನ್ನು ಮದುವೆ ಮಾಡಿ ಸಾಗಹಾಕುವುದರತ್ತ ಹೆಚ್ಚು ಗಮನವಿರುತ್ತಿತ್ತು. ಕ್ರಮೇಣ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯಲ್ಲಿನ ಅಸಮತೋಲನದಿಂದ ಇಂತಹ ಸಮಸ್ಯೆ ಕಡಿಮೆಯಾಯಿತು. ಇವರು ಒಂದೋ ಎರಡೋ ಮಕ್ಕಳು, ಅದು ಗಂಡಾಗಿರಲಿ, ಹೆಣ್ಣಾಗಿರಲಿ ಸಮಾನ ವಿದ್ಯೆ, ಸ್ವಾತಂತ್ರ್ಯ ನೀಡುವ ಪರಿಪಾಠ ಹೆಚ್ಚಾಗತೊಡಗಿತು.

ಒಂದು ರೀತಿಯಲ್ಲಿ ಇದು ಸರಿಯಾದ ಕ್ರಮವಾದರೆ ನಾವು ಸರಿಯಿದ್ದರೂ ಸಮಾಜದಲ್ಲಿ ಎಲ್ಲರೂ ಸರಿ ಇರಬೇಕಿಲ್ಲವಲ್ಲ? ಆದ್ದರಿಂದ ಸರಿತಪ್ಪುಗಳ ಮಾರ್ಗದರ್ಶನ ನೀಡುವುದರಲ್ಲಿ ಹೆತ್ತವರು ಎಡವಿದರೂ, ಅದನ್ನು ಅರ್ಥೈಸಿಕೊಂಡು ಬದುಕಿನಲ್ಲಿ ಉತ್ತಮ ಆಯ್ಕೆಗಳನ್ನು ಆರಿಸಿಕೊಳ್ಳುವುದರಲ್ಲಿ ಮಕ್ಕಳು ಎಡವಿದರೂ ಫಲಿತಾಂಶ ಒಂದೇ.

ಹೊಂದಾಣಿಕೆಯೇ ಮುಖ್ಯ

ಪ್ರಸ್ತುತ ಕಾಲಘಟ್ಟದಲ್ಲಿ ಪೋಷಕರು ಆರಿಸಿ ಮಾಡಿದ ಮದುವೆಯಾಗಲಿ, ಮಕ್ಕಳು ಅವರಿಷ್ಟದಂತೆ ಪ್ರೀತಿಸಿ ಆದ ಮದುವೆಯೇ ಆಗಲಿ ಎಲ್ಲ ಹಿಂದಿನ ಕಾಲದಲ್ಲಿ ಇದ್ದಂತೆ ಜೀವನದುದ್ದಕ್ಕೂ ಹೊಂದಿಕೊಂಡು ಉಳಿಯುವ ಖಾತರಿ ಏನಿಲ್ಲ.

ಹಾಗಾದರೆ ವಿದ್ಯಾವಂತರಾಗಿ, ಒಳ್ಳೆಯ ಆದಾಯದ ಉದ್ಯೋಗ ದೊರೆತೊಡನೆ ಅಪ್ಪ ಅಮ್ಮ ನೋಡಿದ ಹುಡುಗನನ್ನು ಮದುವೆಯಾಗಲು ಇಷ್ಟವಿಲ್ಲ ಎನ್ನುವ ಮನೋಭಾವನೆ ಮೂಡಲು ವಯೋಸಹಜ ಆಕರ್ಷಣೆಯೊಂದೇ ಕಾರಣವೇ? ಅದೂ ಅಲ್ಲ, ಅದಕ್ಕೂ ಮಿಗಿಲಾದ ಬೇರೆಯೇ ಕಾರಣಗಳಿವೆ. ಅವುಗಳಲ್ಲಿ ಕೆಲವು, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿ ವಧು ಪರೀಕ್ಷೆ, ವರದಕ್ಷಿಣೆ ಮುಂತಾದ ಹಳೆ ಸಂಪ್ರದಾಯಗಳು ಕಡಿಮೆ ಆಗುತ್ತಿರುವುದೇನೋ ಸರಿ, ಜಾತಕ ಹೊಂದಾಣಿಕೆಯಂತಹ ಸಣ್ಣಪುಟ್ಟ ಸಂಪ್ರದಾಯಗಳನ್ನೂ ಒಪ್ಪಲೂ ಸಿದ್ಧರಿಲ್ಲದವರ ಸಂಖ್ಯೆ ಹೆಚ್ಚುತ್ತಿದೆ.

ಪ್ರೇಮ ವಿವಾಹ

ಸಾಂಪ್ರದಾಯಿಕ ಮದುವೆಯ ಮತ್ತು ಆ ನಂತರದ ಹತ್ತಾರು ಶಾಸ್ತ್ರಗಳು, ಇದ್ಯಾವುದೂ ಪ್ರೀತಿಸಿ ಮದುವೆಯಾದರೆ ಇರುವುದಿಲ್ಲ ಎಂಬ ಮನೋಭಾವ, ಒಂದೊಮ್ಮೆ ಹಿರಿಯರು ಒಪ್ಪದಿದ್ದರೆ, ಅಪ್ಪ, ಅಮ್ಮ, ಅತ್ತೆ ಮಾವನ ಅಥವಾ ಬೇರೆ ಯಾರೂ ಹಂಗೂ ಇಲ್ಲದೆ ಸರ್ತಂತ್ರ ಸ್ವತಂತ್ರರಾಗಿ ನ್ಯೂಕ್ಲಿಯರ್‌ ಫ್ಯಾಮಿಲಿ ಮೂಲಕ ಜೀವನ ಸಾಗಿಸಬಹುದು ಎಂಬ ಮನಸ್ಥಿತಿ ಇತ್ಯಾದಿ ಹತ್ತು ಹಲವು ಕಾರಣಗಳು.

ಹಿಂದಿನ ಕಾಲದ ಸತಿಸಹಗಮನ ಪದ್ಧತಿ, ವಿಧವೆಯರ ಕೇಶಮುಂಡನದಂತಹ ಅಮಾನವೀಯ ಜೀವನದಿಂದ ಇಂದಿನ ಆಧುನಿಕ ಯುಗದ ಸಾಮಾಜಿಕ ಮತ್ತು ಕೌಟುಂಬಿಕ ಜೀವನ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ವಿಧವೆಯನ್ನು ವೇಶ್ಯೆಯರನ್ನು ನೋಡುವ ದೃಷ್ಟಿಯಲ್ಲೂ ಬಹಳಷ್ಟು ಬದಲಾಗಿದೆ. ಆದಾಗ್ಯೂ ಇತಿಹಾಸ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಅಥವಾ ತಿಳಿದುಕೊಳ್ಳುವ ಆಸಕ್ತಿಯಿಲ್ಲದ ಯುವ ಜನಾಂಗಕ್ಕೆ ವರ್ತಮಾನದ ಬದಲಾವಣೆಗಳನ್ನು ಸ್ವೀಕರಿಸುವ ಮನೋಭಾವನೆ ಇಲ್ಲ. ಇದೇ ಕಾರಣಕ್ಕೆ ಭೂತಕಾಲದಿಂದ ವರ್ತಮಾನವನ್ನು ಹೋಲಿಸಿ ನೋಡುವ ಬದಲಿಗೆ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿದ್ದಾರೆ.

guldasta-story1

ಇಂದಿನ ದುರಂತಗಳಿಗೆ ಕಾರಣ

ಇದೆಲ್ಲದರ ಪರಿಣಾಮವೇ ಇಂದಿನ ದುರಂತಗಳ ಮೂಲಕಾರಣ. ಹೆತ್ತವರಿಗೆ ಸಂತೋಷ ಸಿಗುವುದು ಮಕ್ಕಳ ಸಂತೋಷದಲ್ಲಿ, ಯಶಸ್ವಿ ಬದುಕಿನಲ್ಲಿ. ಹಿರಿಯರಿಗೆ ತೃಪ್ತಿ ಸಿಗುವುದು ಮಕ್ಕಳಿಗೆ ಒಳ್ಳೆಯ ಜೀವನ ದೊರೆತಾಗ, ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಹೆತ್ತವರು, ದೊಡ್ಡ ಮೊತ್ತ ವೆಚ್ಚ ಮಾಡಿ ಮದುವೆ ಕೂಡ ಮಾಡುತ್ತಾರೆ,  ಆದರೆ ಅಂತಹ ಮದುವೆಗಳೂ ಎಷ್ಟೋ ಸಂದರ್ಭಗಳಲ್ಲಿ ವಿಫಲವಾದ ಉದಾಹರಣೆಗಳಿವೆ. ಹೆತ್ತವರಿಗೆ ಮಕ್ಕಳ ವೈವಾಹಿಕ ಬದುಕಿನ ಬಗ್ಗೆ ಅಗಾಧವಾದ ಕನಸುಗಳಿರುತ್ತವೆ. ಅದೇ ವೇಳೆ ಮಕ್ಕಳು, ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೈರತೆ ಮೆರೆಯುತ್ತಾ, ಸ್ವಚ್ಛಂದ ಉಡುಗೆ ತೊಡುಗೆ, ಆಹಾರ, ವಿಹಾರದ ಮತ್ತಿನಲ್ಲಿ ಪ್ರೇಮಕೂಪಕ್ಕೆ ಬಿದ್ದು ತಪ್ಪಿನ ಅರಿವಾಗುವಾಗ ಕಾಲ ಮಿಂಚಿರುತ್ತದೆ. ಅದು ಸ್ವಜಾತಿ ವಿವಾಹವಿರಲಿ, ವಿಜಾತಿ ವಿವಾಹವಿರಲಿ, ವಿಧರ್ಮ ವಿವಾಹವಿರಲಿ, ಯಾವುದೇ ತೊಂದರೆ ಇಲ್ಲದಿದ್ದರೆ ಒಳ್ಳೆಯದೇ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಅನರ್ಥಗಳನ್ನು ನೋಡಿದಾಗ ಸಹಜವಾಗಿ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ.

ಕುರುಡು ಪ್ರೀತಿಯ ಹೆಸರಲ್ಲಿ….

ಅದೇ ಪ್ರೀತಿಯ ಹೆಸರಲ್ಲಿ ಮತಾಂತರ, ವಿಚ್ಛೇದನ, ಕ್ರೂರವಾದ ರೀತಿಯ ಕೊಲೆ ಇತ್ಯಾದಿ ಪ್ರಕರಣಗಳು ಕಣ್ಣೆದುರಿಗೇ ಇದ್ದರೂ ನಾನು ಪ್ರೀತಿಸಿದರು ಹಾಗಿಲ್ಲ ತುಂಬಾ ಒಳ್ಳೆಯವರು ಎಂದು ಸಮರ್ಥಿಸಿಕೊಂಡು ಮದುವೆಯಾಗಿ ನಂತರ ಅವರು ಮತ್ತು ಅವರ ಜೊತೆಯಲ್ಲಿ ಹೆತ್ತವರೂ ದುಃಖ ಪಡುವುದು. ಇಂತಹ ಘಟನೆಗಳೇ ಒಂದಿಷ್ಟು ವಿಭಿನ್ನವಾಗಿ ಡಾ. ರಮಾದೇವಿಯವರ ಬದುಕಿನಲ್ಲಿ ದೊಡ್ಡ ಮಟ್ಟದಲ್ಲಿ ಆಗಿತ್ತು.

ಯೌವನದಲ್ಲಿ ಮನಸ್ಸು ಮರ್ಕಟ ಎನ್ನುತ್ತಾರೆ. ಕಪಿಗಂತೂ ಪೂರ್ವಾಪರ ವಿವೇಚನೆ ಇಲ್ಲ, ಪರಿಸರದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲ, ಆದರೆ ಮನುಜರಿಗೆ ಆದ್ದರಿಂದ ಬದುಕಿನ ಪ್ರಮುಖ ಭಾಗವಾಗಿ ಜೀವನ ಸಂಗಾತಿಯ ಆಯ್ಕೆಯಲ್ಲಿ ಮನಸ್ಸಿನ ಮಾತಿಗಿಂತ ಅನುಭವದ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆಗಮಾತ್ರ ಕುರುಡು ಪ್ರೀತಿಯನ್ನು ಅನುಸರಿಸುವ ಭರದಲ್ಲಿ ಬದುಕು ಬರಡಾಗದಂತೆ ಎಚ್ಚರಿಕೆಯಿಂದಿರಲು ಸಾಧ್ಯ. ಒಟ್ಟಿನಲ್ಲಿ ಮದುವೆ ಹೇಗೆ ಆಗಿದ್ದೀವಿ ಅನ್ನೋದು ಮುಖ್ಯವಲ್ಲ, ಕೊನೆಯವರೆಗೂ ಪರಸ್ಪರ ನಂಬಿಕೆ, ವಿಶ್ವಾಸದಿಂದ ಅನ್ಯೋನ್ಯವಾಗಿ ಜವಾಬ್ದಾರಿಯಿಂದ ಗೌರಯುತವಾಗಿ ಪರಸ್ಪರ ಅರ್ಥೈಸಿಕೊಂಡು ಬಾಳುವುದೇ ನಿಜವಾದ ದಾಂಪತ್ಯ ಜೀವನ, ಅದೇ ನಮ್ಮ ಸಂಸ್ಕೃತಿಯ ಮೂಲತತ್ವ ಮತ್ತು ಸತ್ಯ ಕೂಡಾ.

ಹೀಗಿರುವಾಗ ಬೇರೆಯವರ ಅನುಭವವನ್ನು ಮೂಢನಂಬಿಕೆ ಎಂದು ಭ್ರಮಿಸಿ ತನ್ನ ಬದುಕಿನ ದುರಂತವನ್ನು ಕಂಡವರಲ್ಲಿ ಒಬ್ಬಾಕೆ ಈ ರಮಾದೇವಿ. ಇಂದು ಇವರು ಏರಿರುವ ಎತ್ತರಕ್ಕೆ ಅಡಿಪಾಯ ಹಾಕಿರುವುದು ಇವರು ತಮ್ಮ ಯೌವನದ ದಿನಗಳಲ್ಲಿ ಕೈಗೊಂಡ ಒಂದು ಪ್ರಮುಖ (ಹಾಗೆಂದು ಅವರು ಭಾವಿಸಿದ್ದ) ನಿರ್ಧಾರ.

ಅಂತರ್ಧರ್ಮೀಯ ವಿವಾಹ

ಅದೇ ಜಾತಿ ಧರ್ಮದ ಬೇಲಿ ದಾಟಿ ಮಾಡಿಕೊಂಡ ಪ್ರೇಮ ವಿವಾಹ. ಜಗತ್ತು ಬದಲಾಗುತ್ತಿರುವುದು ನಿಜ, ಆದರೆ ಅಂತರ್ಜಾತೀಯ ವಿವಾಹವನ್ನೇ ಇನ್ನೂ ಜೀರ್ಣೀಸಿಕೊಳ್ಳದ ಹಂತದಲ್ಲಿರುವಾಗ, ಅನ್ಯ ಧರ್ಮೀಯ ವಿವಾಹವನ್ನು ಒಪ್ಪುವುದು ಬಹಳಷ್ಟು ದೂರವಿರುವ ಕಾಲಘಟ್ಟದಲ್ಲಿ ನಡೆದ ಘಟನೆ ಎಲ್ಲಿಂದ ಎಲ್ಲಿಗೋ ಹೋಗಿ ಏನೇನೋ ಆಗಿಹೋಯಿತು.

ನಾನೇ ಸರಿ ಎಂಬ ಮನೋಭಾವದಿಂದ ಅನ್ಯ ಧರ್ಮೀಯನೊಬ್ಬನನ್ನು ಪ್ರೀತಿಸಿ ಮದುವೆಯಾದ ರಮಾದೇವಿಯ ಬದುಕಿನಲ್ಲಿ ಯಾವುದು ಆಗಬಾರದೆಂದು ಹೆತ್ತವರು ಭಯಪಟ್ಟು ಆಕೆಯ ಮನಃಪರಿವರ್ತನೆಗೆ ಇನ್ನಿಲ್ಲದ ಪ್ರಯತ್ನಪಟ್ಟು ವಿಫಲರಾಗಿದ್ದರೋ ಅದೇ ಆಗಿಹೋಯಿತು. ಅದೂ ಕೇವಲ ಎರಡೇ ವರ್ಷಗಳಲ್ಲಿ! ಹಾಗಂತ ತಾನು ಮಾಡಿದ ತಪ್ಪನ್ನು ಮನಗಂಡು, ಪುನರಪಿ ಹುಟ್ಟೂರಿಗೆ, ಜನ್ಮ ನೀಡಿದ ದೇಶ, ಧರ್ಮಕ್ಕೆ ಮರಳು ಮನಸ್ಸು ಮಾಡಿರಬಹುದು ಎಂದು ಯಾರಾದರೂ ನಿರೀಕ್ಷೆ ಮಾಡಿದರೆ ಅದು ಶುದ್ಧ ಸುಳ್ಳು.

ಕ್ರಾಂತಿಕಾರಿ ನಿರ್ಧಾರ

ಏಕೆಂದರೆ ಮೂಲತಃ ಇದು `ಕ್ರಾಂತಿಕಾರಿ ನಿರ್ಧಾರ’ ಎಂಬ ಭ್ರಮೆಯಿಂದ ಮಾಡಿದ ಕೃತ್ಯವೇ ಹೊರತು ಪ್ರೀತಿ, ಪ್ರೇಮ ಎಲ್ಲ ತೋರಿಕೆಗೆ ಮಾತ್ರ. ಮುಖ್ಯವಾಗಿ, ಜೀವನದಲ್ಲಿ ತಾನು ಏನಾದರೂ ದೊಡ್ಡದಾಗಿ ಸಾಧನೆ ಮಾಡಬೇಕು, ಬಿಂದಾಸ್‌ ಜೀನೀ ಸಾರ್ಥಕ ಬದುಕೆಂಬ ಇರಾದೆಯಿಂದ ಸಂಸ್ಕೃತಿ ಎಂದರೆ ಬಂಧನ ಎಂಬ ಕಲ್ಪನೆಯನ್ನು ಮೈಗೂಡಿಸಿಕೊಂಡು ವಿದೇಶಕ್ಕೆ ಹಾರಿದ್ದಳು, ರಮಾ ಯಾನೆ ಈಗಿನ ಡಾ. ರಮಾದೇವಿ. ವಿಚ್ಛೇದನದ ನಂತರ ಏನಾಯಿತು ಸ್ವಲ್ಪ ನೋಡೋಣ.

ಮಕ್ಕಳು ಚಿಕ್ಕವರಿದ್ದಾಗ ತರಲೆ ಮಾಡಿದಾಗ, ದೊಡ್ಡವರಾದ ನಂತರ ಸಣ್ಣ ಪುಟ್ಟ ವಿಷಯಕ್ಕೆ ಸಿಟ್ಟು ಮಾಡಿಕೊಂಡಾಗೆಲ್ಲ ಹಿರಿಯರು ಹೇಳುವ ಮಾತು. `ಮಕ್ಕಳನ್ನು ಹೊತ್ತು, ಹೆತ್ತು ಬೆಳೆಸುವ ಕಷ್ಟ ನಿಮಗೇನು ಗೊತ್ತು? ಮುಂದೆ ನಿಮಗೆ ಮಕ್ಕಳಾದಾಗ ಗೊತ್ತಾಗುತ್ತದೆ!’ ಇದಕ್ಕೆ ರಮಾದೇವಿಯಂಥವರು ಕಂಡುಕೊಂಡ ಉಪಾಯ, ಮಕ್ಕಳಾದರೆ ತಾನೇ ಈ ಎಲ್ಲಾ ತಾಪತ್ರಯ? ಸಂಸಾರ ಸುಖ ಬೇಕು, ಈ ತರಲೆ ತಾಪತ್ರಯಗಳೂ ಇರಬಾರದು. ಮದುವೆಯ ಮೊದಲೇ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡರಾಯಿತಲ್ಲ! ಬಿಂದಾಸ್‌ ಜೀವನಕ್ಕೆ ಇದು ಇನ್ನೂ ಸುಲಭದ ದಾರಿ. ಆ ಕಾಲಕ್ಕೆ ಇದು ಆಕರ್ಷಕವಾಗಿ ಕಂಡರೂ ಇದರ ನಿಜವಾದ ಪರಿಣಾಮ ತಿಳಿಯುವುದು ಬಾಳಿನ  ಸಂಧ್ಯಾಕಾಲದಲ್ಲಿ. ಈ ಕಾರಣದಿಂದ ಮದುವೆಯಾಗಿ ವಿದೇಶಕ್ಕೆ ಹಾರಿದ್ದೂ ಆಯಿತು, ಬಾಹ್ಯಾಕಾಶ ತಂತ್ರಜ್ಞಾನದ ನಾಸಾ ಸಂಸ್ಥೆಯಲ್ಲಿ ಒಳ್ಳೆಯ ವೇತನ, ಸ್ಥಾನಮಾನ ನೀಡುವ ಉದ್ಯೋಗ ಸಿಕ್ಕಿತು. ವರ್ಷ ಕಳೆದಂತೆ ಉದ್ಯೋಗದಲ್ಲಿ ಎತ್ತರಕ್ಕೆ ಬೆಳೆದು, ಆದಾಯ, ಖ್ಯಾತಿ ಏರುತ್ತಾ ನಡೆದಂತೆ ತನ್ನ ಕನಸಿನ ಸಾಮ್ರಾಜ್ಯ ಕೈಗೂಡದು, ತನ್ನ ನಿರ್ಧಾರ ಸರಿಯಾಗಿತ್ತು ಎಂಬ ತೀರ್ಮಾನಕ್ಕೆ ಬಂದರು ರಮಾದೇವಿ.

ಬಿಂದಾಸ್‌ ಜೀವನ ಅಷ್ಟೆಕ್ಕೇ ಮುಗಿಯಲಿಲ್ಲ. ಅಲ್ಲಿಂದಾಚೆಗೆ ಕನಸಿನ ಬಿಂದಾಸ್‌ ಜೀವನ ಆರಂಭವಾಯಿತು. ಮದುವೆ, ಸಂಸಾರ ಎಲ್ಲ ತೋರಿಕೆಗಷ್ಟೇ. ದಾಖಲೆಯಲ್ಲಿ ಮದುವೆ, ಗಂಡ ಇದ್ದರೂ ಇನ್ನೊಂದು ಲಿವ್ ‌ಇನ್‌ ಸಂಬಂಧ, ಅನಿಯಂತ್ರಿತ ಓಡಾಟ, ಊಟ, ಕುಡಿತ ಎಲ್ಲ ಒಂದೊಂದಾಗಿ ಸೇರಿದಾಗ, ಸಹಜವಾಗಿಯೇ ಮದುವೆ ಮುರಿದು ಬಿತ್ತು. ವಿಚ್ಛೇದನದೊಂದಿಗೆ ಮುಗಿದು ಹೋಯಿತು. ವಿಚ್ಛೇದನಕ್ಕೆ ಏನಾದರೂ ಕಾರಣ ಕೊಡಬೇಕಲ್ಲ? ಕಾರಣ ಇನ್ನೇನಿಲ್ಲ. ಅವನ ಧಾರ್ಮಿಕ ಆಚರಣೆಗಳನ್ನು ಅಂದರೆ ಚರ್ಚಿಗೆ ಹೋಗುವುದು ಇತ್ಯಾದಿ, ಇವಳು ಮಾಡುತ್ತಿಲ್ಲ, ಇವಳ ಆಚರಣೆಗಳಲ್ಲಿ ಅಂದರೆ ಪೂಜೆ ಪುನಸ್ಕಾರ ಇತ್ಯಾದಿಗಳಲ್ಲಿ ಅವನು ಪಾಲ್ಗೊಳ್ಳುತ್ತಿಲ್ಲ ಎಂಬ ಆಪಾದನೆ.

ವಾಸ್ತವದಲ್ಲಿ ಅನು ಚರ್ಚ್‌ ಗೂ ಹೋಗುತ್ತಿರಲಿಲ್ಲ. ಇವಳು ಯಾವ ದೇವಸ್ಥಾನಕ್ಕೂ ಹೋಗುತ್ತಿರಲಿಲ್ಲ. ಅಂದಮೇಲೆ ಪರಸ್ಪರರು ಇನ್ನೊಬ್ಬರ ಆಚರಣೆಯಲ್ಲಿ ಭಾಗವಹಿಸುತ್ತಿಲ್ಲ ಎಂಬುದು ನೆಪ ಮಾತ್ರ. ಸ್ವಚ್ಛಂದ ಜೀವನಕ್ಕೆ ಇಬ್ಬರಿಗೂ ಬಿಡುಗಡೆ ಬೇಕಿತ್ತು ಅಷ್ಟೇ! ಆದರೆ ಮುಂದೊಂದು ದಿನ ಕನಸಿನ ಸೌಧ ಕುಸಿಯಲಿದೆ. ಎಷ್ಟೇ ಹೆಸರು ಇರಲಿ, ದಂಡಿಯಾಗಿ ಖ್ಯಾತಿ ಬರಲಿ, ಕೈಗೊಂದು ಕಾಲಿಗೊಂದು ಆಳು ಕಾಳು ಇದ್ಯಾವುದೂ ದೇಶೀಯ ಸಂಸ್ಕೃತಿಯ ಬುನಾದಿಯಾಗಿರುವ ಕೌಟುಂಬಿಕ ವ್ಯವಸ್ಥೆಗೆ ಸಮಾನವಲ್ಲವೆಂಬ ಜ್ಞಾನೋದಯ ಆದಾಗ, ಕಣ್ಣಿಗೆ ಆವರಿಸಿದ ಭ್ರಮೆಯ ಪೊರೆ ಕಳಚಿದಾಗ, ಬದುಕಿನ ಸಂಧ್ಯಾಕಾಲದಲ್ಲಿ ಯಾವುದೂ ನೆರವಿಗೆ ಬರುವುದಿಲ್ಲ.

ಸ್ವಾತಂತ್ರವೋ ಸ್ವೈರತೆಯೋ…?

ಏನೇ ಸಮಸ್ಯೆ ಬಂದರೂ ಎದುರಿಸುತ್ತೇನೆ ಎನ್ನುವ ಭಂಡ ಧೈರ್ಯ, ಜೊತೆಯಲ್ಲಿ ಯಾರಿಲ್ಲದಿದ್ದರೂ ಹಣವಿದೆ, ಶುಶ್ರೂಷೆಗೆ ನರ್ಸ್ ಇಟ್ಟುಕೊಂಡರಾಯ್ತು ಎಂಬ ಮನೋಭಾವ ಆರಂಭದಲ್ಲಿ ಆಕರ್ಷಕವಾಗಿ ಕಾಣುವುದೇನೋ ನಿಜ, ಏಕೆಂದರೆ ಇದೆಲ್ಲ ಪಾಶ್ಚಾತ್ಯ ಸಂಸ್ಕೃತಿಯ ಪಡಿಯಚ್ಚು ಮಾತ್ರ. ವಯಸ್ಸಾದಂತೆ ಕುಗ್ಗುವ ದೈಹಿಕ ಸ್ಥೈರ್ಯ, ಅದನ್ನು ದುರುಪಯೋಗ ಪಡಿಸಿಕೊಂಡು ಶುಶ್ರೂಷೆಗೆ ನೇಮಿಸಿಕೊಂಡವರೇ ಕೈಕೊಟ್ಟರೆ ಕೊಲೆ ಮಾಡಿದ ಪ್ರಕರಣಗಳು ವಿದೇಶದಲ್ಲೂ ಸಾಕಷ್ಟಿವೆ. ತನಿಖೆ ಆಗಬಹುದು, ನಾಳೆ ಅವರು ಸಿಕ್ಕಿಬೀಳುವುದು, ಶಿಕ್ಷೆ ಎಲ್ಲ ಆಗಬಹುದು, ಆದರೆ ಹೋದ ಜೀವ ಮರಳುವುದೇ ಅಂತಿಮವಾಗಿ ಅತ್ತ ಅನಾಥ ಹೆಣವಾಗದೆ, ಸಂಸ್ಕಾರ ಮಾಡುವವರು ಇದ್ದರೂ ಇಲ್ಲದಂತಹ ಸ್ಥಿತಿಯನ್ನು ತಂದುಕೊಂಡು ಸ್ವಯಂಕೃತ ಅಪರಾಧವನ್ನು ಮುಚ್ಚಿದಂತೆಯೂ ಆಗಬೇಕು, ಸತ್ತ ನಂತರ ಒಂದಿಷ್ಟು ಪ್ರಚಾರ ಪಡೆಯುವ ದೂರಾಲೋಚನೆಯಿಂದ ಹುಟ್ಟೂರ ವೈದ್ಯಕೀಯ ಕಾಲೇಜಿಗೆ ದೇಹ ದಾನ ಮಾಡುವ ವ್ಯವಸ್ಥೆ ಮಾಡಿದ್ದರು. ಒಟ್ಟಿನಲ್ಲಿ ಪ್ರೀತಿ ಕುರುಡು, ಬದುಕು ಬರಡು ಎಂಬುದು ವಿಶ್ವವಿಖ್ಯಾತ ವಿಜ್ಞಾನಿ ಡಾ. ರಮಾದೇವಿಯವರ ಬದುಕಿನಲ್ಲಿ ಎಲ್ಲವೂ ಇದ್ದರೂ ಯಾವುದೂ ಇಲ್ಲವಾದದ್ದು ದುರಂತ.

ಮೋಹನದಾಸ ಕಿಣಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ