ಕನ್ನಡಿಗರ ಅಚ್ಚುಮೆಚ್ಚಿನ ಹಬ್ಬ ಯುಗಾದಿಯನ್ನು ನಮ್ಮ ಸಿನಿಮಾ ತಾರೆಯರು ಅದ್ಧೂರಿಯಾಗಿ ಹೇಗೆ ಆಚರಿಸುತ್ತಿದ್ದಾರೆ ಎಂದು ತಿಳಿಯೋಣವೇ……?

ಯುಗಾದಿ ಹಿಂದೂಗಳಿಗೆ ವರ್ಷಾರಂಭದ ಹಬ್ಬ. ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ನಮ್ಮ ಸಿನಿರಂಗದ ತಾರೆಯರಂತೂ ಅದ್ಧೂರಿಯಾಗಿ ತಮ್ಮ ತಮ್ಮ ಮನೆಯ ಸಂಪ್ರದಾಯದಂತೆ ಆಚರಿಸುವ ರೂಢಿ ಇಟ್ಟುಕೊಂಡಿರುತ್ತಾರೆ.

`ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,’ ಹಾಡಂತೂ ಇಡೀ ದಿನ ಟಿವಿ, ರೇಡಿಯೋಗಳಲ್ಲಿ ತೇಲಿ ಬರುತ್ತಿರುತ್ತದೆ. ಈ ಸಂಭ್ರಮದ ಹಬ್ಬವನ್ನು ನಮ್ಮ ನಟಿಮಣಿಗಳು ಹೇಗೆ ಆಚರಿಸುತ್ತಾರೆ ನೋಡೋಣ :

ಸಾಕ್ಷಿ ಮೇಘನಾ

ಈಗಾಗಲೇ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಸೋಶಿಯಲ್ ಮೀಡಿಯಾದಲ್ಲೂ ಚೂಟಿಯಾಗಿರುವ ಮೇಘನಾ, ಪದ್ಮಾವತಿ ಚಿತ್ರದಲ್ಲಿ ವಿಕ್ರಮ್ ಆರ್ಯಾ ಜೊತೆ ನಟಿಸಿ ಉತ್ತಮ ಹೆಸರು ಪಡೆದಳು. ನಂತರ  `ಬೆಸ್ಟ್ ಫ್ರೆಂಡ್ಸ್, ಲೋಫರ್ಸ್‌’ ಚಿತ್ರದಲ್ಲೂ ಭಾರಿ ಮಿಂಚಿದ್ದಾಳೆ. ಮುಂದೆ ಈಕೆ ತಿಲಕ್‌ ಶೇಖರ್‌ ಜೊತೆ `ವರ್ಣಾಂತರಂಗ’ ಥ್ರಿಲ್ಲರ್‌ ಚಿತ್ರ ಶೂಟಿಂಗ್‌ ನಲ್ಲಿ ಬಿಝಿಯಾಗಿದ್ದಾಳೆ.

ಯುಗಾದಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾಳೆ. ಹೌದು ನಾನು ವಾರಕ್ಕೆ ಎರಡು ದಿನ ಉಪವಾಸ ಮಾಡ್ತೀನಿ. ಯುಗಾದಿ ಹಬ್ಬದ ದಿನ ಸಾಮಾನ್ಯವಾಗಿ ಎಲ್ಲರೂ ಹೊಟ್ಟೆ ತುಂಬಾ ತಿಂದರೆ, ನಾನು ಮಾತ್ರ ಪೂಜೆ ಮಾಡುವವರೆಗೂ ನೀರು ಕೂಡ ಕುಡಿಯೋದಿಲ್ಲ. ಪೂಜೆ ಮುಗಿದ ಮೇಲೆ ಊಟ ಮಾಡುವಾಗ ಅನ್ನ ತಿನ್ನುವುದಿಲ್ಲ, ಇತರೆ ತಿಂಡಿ ಸೇವಿಸುತ್ತೇನೆ. ಬಹಳ ವರ್ಷಗಳಿಂದ ಇದು ಅಭ್ಯಾಸವಾಗಿದೆ. ಆ ದೇವರಲ್ಲಿ ನಾನು ಬೇಡಿಕೊಳ್ಳೋದು, ಎಲ್ಲರನ್ನೂ ಚೆನ್ನಾಗಿ ಇಟ್ಟಿರಲಿ ಅಂತ. ನಾನು ದರ್ಶನ್‌ ಅವರ ಅಭಿಮಾನಿ. ಹಾಗಾಗಿ ಅವರ ಜೊತೆ ನಟಿಸುವ ಅವಕಾಶ ಕೂಡಿಬರಲಿ ಎಂದಷ್ಟೇ ದೇವರಲ್ಲಿ ಬೇಡಿಕೊಳ್ತೀನಿ. ಎಲ್ಲರ ಜೀವನದಲ್ಲೂ ಬೇವು ಬೆಲ್ಲ ಸಮಾನವಾಗಿರಲಿ!

ಸ್ವಾತಿ

ಮೂಲತಃ ಹೈದಾರಾಬಾದ್‌ ನಗರಕ್ಕೆ ಸೇರಿದ ಈಕೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿ, ನಂತರ ಕನ್ನಡದಲ್ಲಿ ಹೆಸರು ಪಡೆದಳು. `ಆಟ ಹುಡುಗಾಟ, ತಂಗಿಯ ಮನೆ, ಯಜಮಾನ’ ಮುಂತಾದ ಕನ್ನಡ ಚಿತ್ರಗಳಲ್ಲಿ ಖ್ಯಾತಿ ಪಡೆದ ಸ್ವಾತಿ, ಹೆಚ್ಚಾಗಿ ಕೀರ್ತಿ ಗಳಿಸಿದ್ದು ತಮಿಳು, ತೆಲುಗು ಚಿತ್ರಗಳಲ್ಲಿ.

ಯುಗಾದಿ ಎಂದರೆ ನನಗೆ ಮೆಚ್ಚಿನ ಹಬ್ಬವಿದು. ಹೊಸ ಹೊಸದು ತರುವ ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ತೀನಿ. ಅಮ್ಮ ಅಡುಗೆಮನೆ ಕೆಲಸ ನೋಡಿಕೊಂಡರೆ, ನಾನು ಮನೆಯನ್ನು ಅಲಂಕರಿಸುವಲ್ಲಿ ಹೆಚ್ಚು ಬಿಝಿ. ಹೊಸ ಬದುಕಿಗೆ ಕಾಲಿಟ್ಟಿರುವ ನಾನು ನನ್ನ ಪತಿಯೊಂದಿಗೆ ಸಡಗರದಿಂದ ಯುಗಾದಿ ಹಬ್ಬ ಆಚರಿಸುತ್ತೇನೆ. ಹೋಳಿಗೆ ಊಟ ಸವಿದು ನಮ್ಮ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡುತ್ತೇವೆ. ಧಾರಾವಾಹಿಗಳಲ್ಲಿ ಬಿಝಿಯಾಗಿರುವ ನಾನು ಈ ಹಬ್ಬದ ದಿನ ಕೇವಲ ಮನೆಯವರೊಂದಿಗೆ ಮಾತ್ರ ಸಮಯ ಕಳೆಯ ಬಯಸುತ್ತೇನೆ. ಬೇವು ಬೆಲ್ಲ ಬದುಕಿನಲಿ ಸಮಾನವಾಗಿರಲಿ ಎಂದು ಎಲ್ಲ ಕನ್ನಡ ಪ್ರೇಕ್ಷಕರಿಗೂ ಹಾರೈಸುತ್ತೇನೆ.

HD-wallpaper-radhika-chetan-indian-actress-model

ರಾಧಿಕಾ ಚೇತನ್

ಅಪ್ಪಟ ಕನ್ನಡ ಪ್ರತಿಭೆ ರಾಧಿಕಾ ಚೇತನ್‌ ಳ ತವರೂರು ಉಡುಪಿ. ಎಂಜಿನಿಯರಿಂಗ್‌ ಗ್ರಾಜುಯೇಟ್‌ ಆದ ರಾಧಿಕಾ, `ಅಸತೋಮಾ ಸದ್ಗಮಯ, ಕಾಫಿ ತೋಟ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮುಂತಾದ ಚಿತ್ರಗಳಲ್ಲಿ ಹೆಸರು ಗಳಿಸಿದ್ದಾಳೆ.

ಪ್ರತಿ ವರ್ಷ ಯುಗಾದಿ ಹಬ್ಬ ಒಂದೊಂದು ರೀತಿ ಹೊಸತನ ತರುತ್ತದೆ. ನಾವು ಚಿಕ್ಕವರಾಗಿದ್ದಾಗ, ಇದ್ದಂಥ ಸಂಭ್ರಮ ಈಗ ಕಾಣುತ್ತಿಲ್ಲ. ಬರ್ತಾ ಬರ್ತಾ ಸರಳ ಆಗಿದೆ, ಬಲು ಯಾಂತ್ರಿಕ ಅನಿಸುತ್ತಿದೆ.

ನಮ್ಮಲ್ಲಿ ಹೇಗೆ ಅಂದ್ರೆ ಯುಗಾದಿ ಹಿಂದಿನ ದಿನ ಅಮ್ಮ ಕಳಸ ಕನ್ನಡಿ ರೆಡಿ ಮಾಡುತ್ತಾರೆ. ಅದರ ಜೊತೆ ಹೊಸ ಬಟ್ಟೆ, ಆಭರಣ, ಹಣ್ಣು ಹಂಪಲು ಇದೆಲ್ಲವನ್ನು ಇಟ್ಟಿರುತ್ತಾರೆ. ಬೆಳಗ್ಗೆ ಎದ್ದು ಕಳಸ, ಕನ್ನಡಿ ನೋಡುವುದು ಸಮೃದ್ಧಿ, ನಗು, ಸಂತೋಷ ತರಲಿ ಎಂಬ ನಂಬಿಕೆ. ನಂತರ ಪೂಜೆ. ನಂತರ ಅಮ್ಮ ಹಬ್ಬದ ಅಡುಗೆ ಮಾಡಿದರೆ, ಅಪ್ಪ ಪೂಜೆ ಮಾಡುವರು. ನಾನು ಅಮ್ಮನಿಗೆ ಸಹಾಯಕಳಾಗಿ ನಿಂತಿರುತ್ತೇನೆ. ಹಬ್ಬದ ದಿನ ಹೊಸ ವಸ್ತು ಖರೀದಿ ಮಾಡಲೇಬೇಕು. ಸೀರೆ, ಚಿಕ್ಕಪುಟ್ಟ ಒಡವೆ ಅಥವಾ ಹೊಸ ಪುಸ್ತಕ ಹೀಗೆ. ಇದು ನನಗೆ ತುಂಬಾ ಇಷ್ಟವಾದ ಹಬ್ಬ, ಎಲ್ಲರಿಗೂ ಹ್ಯಾಪಿ ಯುಗಾದಿ!

HD-wallpaper-swetha-basu-prasad-actress-basu-cute-prasad-swetha

ಶ್ವೇತಾ ಪ್ರಸಾದ್

ಟಿವಿ ಲೋಕದ ತಾರೆ, ಮಾಡೆಲ್, ಸಿನಿಮಾ, ಧಾರಾವಾಹಿಗಳಲ್ಲಿ ಹೆಚ್ಚು ನಿರತಳಾಗಿರುವ ಶ್ವೇತಾ ಮೊದಲ ಬಾರಿಗೆ ಕನ್ನಡದ ಕಿರುತೆರೆಯ `ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಕಾಣಿಸಿಕೊಂಡಳು. `ಬಿಗ್‌ ಬಾಸ್‌’ ಈಕೆಗೆ ಹೆಚ್ಚಿನ ಹೆಸರು ತಂದುಕೊಟ್ಟಿತು.

ಶ್ವೇತಾಳಿಗೆ ಯುಗಾದಿ ತುಂಬಾ ವಿಶೇಷ. ಏಕೆಂದರೆ `ಕಾಟೇರ’ ಚಿತ್ರ ಅಭೂತಪೂರ್ವ ಯಶಸ್ಸು ಪಡೆದಿದೆ. ಈ ಚಿತ್ರದಲ್ಲಿ ಶ್ವೇತಾ ಗಮನಾರ್ಹ ಪಾತ್ರ ವಹಿಸಿ ಸಕ್ಸಸ್‌ ಟ್ರೋಫಿ ಪಡೆದಿದ್ದಾಳೆ.

ಎಲ್ಲರಂತೆ ಯುಗಾದಿ ಹಬ್ಬವನ್ನು ಗ್ರಾಂಡ್‌ ಆಗಿ ಆಚರಣೆ ಮಾಡುವ ಶ್ವೇತಾಳಿಗೆ ಇನ್ನಷ್ಟು ಒಳ್ಳೆ ಅವಕಾಶ ಸಿಗಲಿ, ಎಂದು ಪ್ರೇಕ್ಷಕರ ಪರವಾಗಿ ಗೃಹಶೋಭಾ ಹಾರೈಸುತ್ತಾಳೆ. ಶ್ವೇತಾ ಗೃಹಶೋಭಾ ಓದುಗರಿಗಾಗಿ ವಿಶೇಷ ಶುಭಾಶಯಗಳನ್ನು ಕೋರಿದ್ದಾರೆ.

IMG_8476

ಚೈತ್ರಾ ಆಚಾರ್

ಅಪ್ಪಟ ಕನ್ನಡ ಪ್ರತಿಭೆ ಎನಿಸಿರು ಚೈತ್ರಾ ಆಚಾರ್‌, ಬೆಂಗಳೂರಿನಲ್ಲಿ ಹುಟ್ಟಿ, ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಮಹೇಶ್‌ ಗೌಡ ನಿರ್ದೇಶನದ `ಮಾಹಿರಾ’ ಚಿತ್ರದಲ್ಲಿ ನಟಿಸಿ ಸೈ ಎನಿಸಿದಳು. ಮುಂದೆ  ಈಕೆಗೆ `ಗಿಲಕಿ, ತಲೆದಂಡ, ಆ ದೃಶ್ಯ’ ಚಿತ್ರಗಳಲ್ಲಿ ಉತ್ತಮ ಪಾತ್ರ ದೊರಕಿದವು.  ಕಳೆದ ವರ್ಷ ಬಿಡುಗಡೆಗೊಂಡ ರಾಜ್‌ ಬಿ. ಶೆಟ್ಟಿಯವರ `ಟೋಬಿ’ ಮತ್ತು ರಕ್ಷಿತ್‌ ಶೆಟ್ಟಿಯವರ `ಸಪ್ತ ಸಾಗರದಾಚೆ ಎಲ್ಲೋ…..’ ಚಿತ್ರಗಳು ಅಪಾರ ಯಶಸ್ಸನ್ನು ತಂದುಕೊಟ್ಟವು. ಮುಂದೆ ಈಕೆ `ಸ್ಟ್ರಾಬೆರಿ, ಬ್ಲಿಂಕ್‌, ಹ್ಯಾಪಿ ಬರ್ತ್‌ ಡೇ ಟು ಮಿ, ಯಾರಿಗೂ ಹೇಳಬೇಡಿ’ ಮುಂತಾದ ಚಿತ್ರಗಳಲ್ಲಿ ಬಲು ಬಿಝಿಯಾಗಿದ್ದಾಳೆ. ಚೈತ್ರಾ ಹಿನ್ನೆಲೆ ಹಾಡುಗಾರಿಕೆಯಲ್ಲೂ ಫೇಮಸ್‌. ಇತ್ತೀಚೆಗೆ, ಮಧು ಮುಕುಂದನ್‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ `ಗರುಡ ಗಮನ ವೃಷಭ ವಾಹನ’ ಚಿತ್ರದ ಈಕೆಯ `ಸೋಜುಗದ ಸೂಜಿ ಮಲ್ಲಿಗೆ…..’ ಹಾಡು ಇಂದಿಗೂ ಜನಪ್ರಿಯ.

ಚೈತ್ರಾ ಪಾಲಿಗೆ ಯುಗಾದಿ ಚೈತ್ರ ಮಾಸದ ಕೋಗಿಲೆ ಉಲಿಯುವ ಅತಿ ಮಧುರ ಹಬ್ಬ. ಮನೆಯವರೆಲ್ಲರ ಜೊತೆ ಸಂತಸದಿಂದ ಹಬ್ಬ ಆಚರಿಸುವ ಚೈತ್ರಾ, ಈ ಹಬ್ಬವನ್ನು ಹೃದಯಕ್ಕೆ ಬಲು ಹತ್ತಿರವಾಗಿ ತೆಗೆದುಕೊಳ್ಳುತ್ತಾಳೆ. ಕನ್ನಡ ಚಿತ್ರರಂಗ ಬೇವು ಬೆಲ್ಲದ ಸಂಗಮದಂತೆ ಚೆನ್ನಾಗಿ ನಳನಳಿಸಲಿ, ಎಲ್ಲರಿಗೂ ಯುಗಾದಿ ಹೆಚ್ಚಿನ ಸಂತಸ ತಂದುಕೊಡಲಿ ಎಂದು ಹಾರೈಸುತ್ತಾಳೆ!

image1

ಸಿಂಧೂ ಶ್ರೀನಿವಾಸಮೂರ್ತಿ

ಅಪರೂಪದ ಕನ್ನಡದ ಹೊಸ ನಿರ್ದೇಶಕಿಯರಲ್ಲಿ ಸಿಂಧೂ ಹೆಸರಾಂತ ನಿರ್ದೇಶಕಿ ಎನಿಸಿದ್ದಾರೆ. ಜೊತೆಗೆ ಈಕೆ ನಟಿ, ರಂಗಭೂಮಿ ಕಲಾವಿದೆ ಹಾಗೂ ಪ್ರತಿಭಾನ್ವಿತ ರೈಟರ್‌ ಸಹ. ಇತ್ತೀಚೆಗೆ ಬಿಡುಗಡೆಯಾಗಿ OTTಯಲ್ಲಿ ಎಲ್ಲರ ಗಮನ ಸೆಳೆದ `ಆಚಾರ್‌ಕೋ’ ಚಿತ್ರದ ನಿರ್ದೇಶಕಿಯಾಗಿ ಈಕೆ ಹೆಚ್ಚಿನ ಪ್ರಶಂಸೆ, ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. `ಫ್ರೆಂಚ್‌ ಬಿರಿಯಾನಿ’ ಚಿತ್ರಕ್ಕೆ ರೈಟರ್‌ ಆಗಿ ವರ್ಕ್‌ ಮಾಡಿದ್ದರು. `ಹೋಪ್‌’ ಚಿತ್ರದಲ್ಲಿ ನಟನೆಯಲ್ಲೂ ಮಿಂಚಿದ್ದರು. `ಆಚಾರ್‌ಕೋ’ ಇವರಿಗೆ ಹೆಚ್ಚಿನ ಹೆಸರು ತಂದುಕೊಟ್ಟು, ಮುಂದಿನ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಲು ಆಫರ್ಸ್‌ ಬರುವಂತೆ ಮಾಡಿದೆ.

ಅಪ್ಪಟ ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದ ಸಿಂಧೂ, ಮೊದಲಿನಿಂದಲೂ ಯುಗಾದಿ ಆಚರಣೆಯಲ್ಲಿ ಹೆಚ್ಚಿನ ಖುಷಿ ಕಂಡರು. ಸಾಂಪ್ರದಾಯಿಕವಾಗಿ ಇದನ್ನು ಮನೆಯವರೆಲ್ಲರ ಜೊತೆ ಒಟ್ಟಾಗಿ ಆಚರಿಸಿ ನಲಿಯಬೇಕು ಎನ್ನುತ್ತಾರೆ. ಹೊಸ ಸೀರೆ ಉಟ್ಟು ಬೇವು ಬೆಲ್ಲ ಹಂಚುತ್ತಾ ಸಿಹಿ ಹೋಳಿಗೆಯೊಂದಿಗೆ ಹಬ್ಬ ಆಚರಿಸುವುದು ಇವರಿಗೆ ಅತಿ ಪ್ರಿಯ!

ಸರಸ್ವತಿ ಜಾಗೀರ್ದಾರ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ