ಜೀವನದ ಸಿಹಿಕಹಿ ಉಂಡು ಬದುಕಲ್ಲಿ ಬೆಂಡಾಗಿದ್ದ ವನಜಮ್ಮ, ಮಗಳು ಇದ್ದಕ್ಕಿದ್ದಂತೆ ಅಳಿಯನನ್ನು ತೊರೆದು ಬಂದು ವಿಚ್ಛೇದನಕ್ಕಾಗಿ ಮುಂದುವರಿದಾಗ ಅದನ್ನು ತಡೆಯಲು ಬಹಳ ಯತ್ನಿಸಿದರು. ಮುಂದೆ ಅವರ ಮಗಳ ಬಾಳು ಸರಿಹೋಯಿತೇ…..?

ಬೆಳಬೆಳಗ್ಗೆ ಮನೆಯ ಕರೆಗಂಟೆಯ ಸದ್ದಾದಾಗ, `ಇಷ್ಟೊತ್ತಿಗೆ ಯಾರಿರಬಹುದು,’ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಬಾಗಿಲನ್ನು ತೆಗೆದು ಹೊರಗೆ ಬಂದರು ವನಜಮ್ಮ. ಬಾಗಿಲಲ್ಲಿ ಮಗಳು ಅರುಂಧತಿ ಜೊತೆಗೆ ಮೊಮ್ಮಗಳು ಅನ್ವಿತಾ ನಿಂತಿದ್ದರು.

“ಇದೇನೇ ಅವರು, ಬ್ಯಾಗ್‌ ಸಮೇತ ಬಂದಿದ್ದೀಯಾ…. ನಿನ್ನ ಗಂಡ ಅಜಯ್‌ ಬಂದಿಲ್ವಾ….?  ಅನ್ವಿತಾ ಪುಟ್ಟ, ಅಜ್ಜಿಯ ಮನೆಗೆ ಬಂದ್ಯಾ ಕಂದಾ….” ಎಂದರು ಅಕ್ಕರೆಯಿಂದ.

“ಇಲ್ಲಾ ಅಮ್ಮಾ….. ನಾನು ಅನ್ವಿತಾ ಇಬ್ಬರೇ ಬಂದ್ವಿ….” ಎಂದಳು ಮಗಳು ಅರುಂಧತಿ.

ಅರುಂಧತಿಯ ಅಮ್ಮ ವನಜಮ್ಮ ಮೊಮ್ಮಗಳ ಕೈ ಹಿಡಿದುಕೊಂಡು ಮನೆಯ ಒಳಗೆ ಕರೆದುಕೊಂಡು ಹೋದರು.

ಮಗಳು ಅರುಂಧತಿ ತನ್ನ ಮನೆಗೆ ಬಂದು ಆಗಲೇ ಒಂದು ವಾರವಾಗಿದೆ. ಯಾಕೋ ಒಂಥರಾ ಇದ್ದಾಳೆ, ಗಂಡನಿಗೆ ಕಾಲ್‌ಮಾಡೋದು ಕಾಣ್ತಾ ಇಲ್ಲ. ಅವನೂ ಬರಲೇ ಇಲ್ಲ. ಯಾವಾಗಲೂ ತನ್ನ ಗಂಡನೊಬ್ಬನನ್ನೇ ಬಿಟ್ಟು ಬಂದು ಇಲ್ಲಿ ಉಳಿದದ್ದೇ ಇಲ್ಲ. ಅವಳೇ ಏನಾದರೂ ಹೇಳುತ್ತಾಳೇನೋ ಎಂದು ಕಾದದ್ದಷ್ಟೇ ಬಂತು. ಇನ್ನು ತನಗೆ ಕಾಯಲು ಸಾಧ್ಯವೇ ಇಲ್ಲ. ಏನಾದರೂ ಗಂಡನ ಜೊತೆಗೆ ಜಗಳ ಮಾಡಿಕೊಂಡು ಬಂದಿದ್ದಾಳೋ ಏನೋ…. ಏನೊಂದೂ ಅರಿಯದಾಯಿತು ವನಜಮ್ಮನಿಗೆ. ಏನಾಯಿತು  ಎಂದು ಇವತ್ತು ಕೇಳಲೇ ಬೇಕು ಎಂದು ತಮ್ಮಲ್ಲೇ ನಿರ್ಧರಿಸಿದರು ವನಜಮ್ಮ.

ರಾತ್ರಿ ಊಟವಾದ ಮೇಲೆ ಅನ್ವಿತಾ ಬೇಗನೆ ನಿದ್ದೆ ಮಾಡಿದಳು. ಅರುಂಧತಿಗೆ ನಿದ್ದೆ ಬರದೇ ಹಾಸಿಗೆಯ ಮೇಲೆ ಒದ್ದಾಡುತ್ತಿದ್ದಳು. ವನಜಮ್ಮ ಸೀದಾ ಮಗಳ ರೂಮಿಗೆ ಹೋದರು. ಅಮ್ಮ ತನ್ನ ರೂಮಿಗೆ ಬಂದದ್ದನ್ನು ನೋಡಿ ಅರುಂಧತಿ ಎದ್ದು ಕುಳಿತಳು. ಮಗಳಿಗೆ ರೂಮಿನಿಂದ ಹೊರಗಡೆ ಬರುವಂತೆ ಸನ್ನೆ ಮಾಡಿದರು ವನಜಮ್ಮ.

“ಅಮ್ಮಾ ಏನಾಯಿತು…..?” ಎಂದು ಕೇಳಿದಳು ಅರುಂಧತಿ.

“ಶ್‌… ಮಾತನಾಡಬೇಡ ಅನ್ವಿತಾ ಎದ್ದುಬಿಡುತ್ತಾಳೆ…..” ಎಂದರು ವನಜಮ್ಮ.

ಅಮ್ಮ ತನ್ನನ್ನು ಏನೋ ಕೇಳಬೇಕೆಂದಿದ್ದಾಳೆ ಎಂಬ ವಿಷಯ ಅರುಂಧತಿಗೆ ಚೆನ್ನಾಗಿ ಗೊತ್ತಿತ್ತು. ತನ್ನ ಅಮ್ಮನ  ಹಿಂದೆಯೇ ಕೊಠಡಿಯಿಂದ ಹೊರಗೆ ಬಂದಳು ಅರುಂಧತಿ.

“ಅವರು, ನೀನು ಬಾಯಿಬಿಟ್ಟು ಹೇಳದಿದ್ದರೂ ಅರ್ಥವಾಗದಷ್ಟು ಪೆದ್ದಿ ನಾನಲ್ಲ ಕಂದಾ…. ನೀನೇ ಏನಾದರೂ ಹೇಳತ್ತಿಯೇನೋ ಎಂದು ಕಾದೆ. ನನ್ನ ಸಹನೆಗೂ ಒಂದು ಮಿತಿ ಇದೆ.”

“ಅಮ್ಮಾ , ಅಜಯ್‌ ನಾವು ತಿಳಿದುಕೊಂಡಿರುವಷ್ಟು ಒಳ್ಳೆಯವನಲ್ಲ. ಅವನಿಗೆ ಬೇರೆ ಹುಡುಗಿಯ ಜೊತೆಗೆ ಸಹವಾಸ ಇದೆ.”

“ಅಜಯ್‌ ವಿಷಯದಲ್ಲಿ ನೀನು ಹಾಗೆ ಹೇಳಿದರೆ ನಾನು ನಂಬೋದಿಲ್ಲ ಅರುಂಧತಿ…  ಆತ ಅಂಥನನಲ್ಲ….” ಎಂದರು ವನಜಮ್ಮ.

“ನಾನೂ ಹಾಗೇ ಅಂದುಕೊಂಡಿದ್ದೆ ಅಮ್ಮಾ….. ಆದರೆ ನನ್ನ ಕಣ್ಮುಂದೆ ಅಜಯ್‌ ಸಿಕ್ಕಿಬಿದ್ದಾಗ ನಾನು ನಂಬದಿರಲು ಹೇಗಮ್ಮಾ ಸಾಧ್ಯ….?” ಎಂದಳು ಅರುಂಧತಿ.

“ಆ ಹುಡುಗಿಯ ಜೊತೆ ಅಜಯ್‌ ತಪ್ಪಾಗಿ ನಡೆದುಕೊಂಡಿದ್ದನ್ನು ನೀನು ನೋಡಿದೆಯಾ….?”

“ಹಾಗೇನೂ ನೋಡಿಲ್ಲಮ್ಮಾ…..! ಆದರೆ ಇತ್ತೀಚೆಗೆ ಒಂದು ಹುಡುಗಿಯ ಜೊತೆಗೆ ಅವರು ತುಂಬಾ ಮಾತನಾಡುತ್ತಾರೆ. ಹಗಲು ರಾತ್ರಿ ಅಂತಲ್ಲ, ಅವಳ ಫೋನ್‌ ಬಂದರೆ ರೂಮಿನಿಂದ ಹೊರಗಡೆ ಹೋಗಿ ಮಾತನಾಡುತ್ತಾರೆ.”

“ಅವಳು ಯಾರೆಂದು ನೀನು ಅಜಯ್‌ ಬಳಿ ಕೇಳಲಿಲ್ವಾ….?”

“ಕೇಳಿದೆ. ನಮ್ಮ ಪ್ರಾಜೆಕ್ಟ್ ಟೀಮ್ ಗೆ ಒಬ್ಬ ಹೊಸ ಹುಡುಗಿ ಬಂದಿದ್ದಾಳೆ. ಆಕೆಯ ಜೊತೆಗೆ ಆಫೀಸ್‌ ವಿಷಯ ಮಾತನಾಡುತ್ತೇನೆ ಎಂದರು.”

“ಮತ್ತೆ ನಿನಗ್ಯಾಕೆ ಸಂಶಯ? ಅಜಯ್‌ ಕಾರಣ ಹೇಳಿದ್ದಾನಲ್ಲ….!”

“ಇಲ್ಲಮ್ಮಾ…..  ಅಜಯ್‌ ಹೇಳುತ್ತಿರುವುದೆಲ್ಲ ಸುಳ್ಳು. ಇತ್ತೀಚೆಗೆ ಅಜಯ್‌ ನಡವಳಿಕೆ ತುಂಬಾ ಬದಲಾಗಿದೆ. ದಿನಾಲೂ ಲೇಟ್ ಆಗಿ ಮನೆಗೆ ಬರುತ್ತಾರೆ. ಕೆಲವೊಮ್ಮೆ ಅನ್ವಿತಾ ಅವಳ ಅಪ್ಪನ ಮುಖ ನೋಡದೇ ಬಹಳ ಸಮಯವಾಗಿರುತ್ತದೆ. ಒಂದು ದಿನ ಏನಾಯಿತು ಗೊತ್ತಾ….?” ಎಂದಳು ಮುಂದೆ ಹೇಳಲಾರದೆ ಅಳತೊಡಗಿದಳು ಅರುಂಧತಿ.

“ಅಳಬೇಡ ಅರು…. ಅತ್ತರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಏನಾಯಿತು ಹೇಳು? ನಿನ್ನ ಮನಸ್ಸಿಗೂ ಸಮಾಧಾನವಾಗುತ್ತದೆ. ನಾನೂ ಏನಾದರೂ ಪರಿಹಾರ ಹುಡುಕಬಹುದು.”

“ಅಂದು ಎಂದಿನಂತೆ ಲೇಟ್‌ ಆಗಿತ್ತು. ಅಜಯ್‌ ಮನೆಗೆ ಬಂದಿರಲಿಲ್ಲ. ಅನ್ವಿತಾ ಆಗಲೇ ಮಲಗಿ ಆಗಿತ್ತು. ನಾನು ಅಜಯ್‌ ಆಗ ಬರುತ್ತಾನೆ, ಈಗ ಬರುತ್ತಾನೆ ಎಂದು ಊಟವನ್ನೂ ಮಾಡದೆ ಕಾಯುತ್ತಾ ಕುಳಿತೆ. ಕಾದು ಕಾದು ನನಗೆ ನಿದ್ದೆ ಬರುವ ಹಾಗಿತ್ತು. ಕೊನೆಗೂ ತುಂಬಾ ತಡವಾಗಿ ಮನೆಗೆ ಬಂದರು ಅಜಯ್‌. ಇನ್ನೇನು ನಾವು ಊಟ ಮಾಡಲು ಕೂರಬೇಕು ಎನ್ನುವಷ್ಟರಲ್ಲಿ ಅವಳಿಂದ ಫೋನ್‌ ಬಂದು. ಮನೆಯಿಂದ ಹೊರಗೆ ಹೋಗಿ ಅವಳ ಜೊತೆ ಮಾತನಾಡಿಕೊಂಡು ಬಂದರು.

“ನನಗೆ ಕೋಪ ತಡೆಯಾಗಲಿಲ್ಲ. ಮೊದಲೇ ಅಜಯ್‌ ಗಾಗಿ ಕಾದು ಕಾದು ಬೇಸರವಾಗಿತ್ತು. ಅವಳಿಗೂ ನಿಮಗೂ ಏನೋ ಸಂಬಂಧವಿದೆ. ನಾನು ಯಾಕೆ ಈ ಮನೆಯಲ್ಲಿರಬೇಕು. ನೀವು ಅವಳ ಜೊತೆಗೇ ಆರಾಮವಾಗಿ ಇರಿ ಎಂದೆ. ನಾನು ಅಷ್ಟು ಹೇಳಿದ್ದೇ ತಡ, ಕೈ ಮೇಲಕ್ಕೆತ್ತಿ ನನ್ನ ಕೆನ್ನೆಗೆ ಜೋರಾಗಿ ಬಾರಿಸಿದರು. ನಾನು ಅಳುತ್ತಾ `ನಾನು ಇಲ್ಲಿರೋದಿಲ್ಲ. ಎಲ್ಲಾದರೂ ಹೋಗುತ್ತೇನೆ,’ ಎಂದು ಹೇಳಿದೆ. ಆಗಲೂ ಅಜಯ್‌ ಏನೂ ಮಾತನಾಡದೆ ಸುಮ್ಮನಿದ್ದರು.”

“ನೋಡು ಅರು…. ಏನೋ ಆಫೀಸ್‌ ಟೆನ್ಷನ್‌ ನಲ್ಲಿ ಅಜಯ್‌ ಹಾಗೆ ಹೇಳಿದ್ದಾನೆ. ಇಡೀ ದಿನ ಆಫೀಸ್‌ ಕೆಲಸ ಮಾಡಿ ದಣಿದಿರುತ್ತಾನೆ. ನೀನು ಅಂಥ ಸಮಯದಲ್ಲಿ ಈ ರೀತಿ ಮಾತಾಡಿದರೆ ಯಾವ ಗಂಡಸಾದರೂ ಸಹಿಸುತ್ತಾನಾ…..? ನೀನೇ ಅರ್ಥ ಮಾಡಿಕೊಳ್ಳಬೇಕು ಅರು. ನಾಳೇನೇ ನಿನ್ನ ಮಗಳನ್ನು ಕರೆದುಕೊಂಡು ನಿನ್ನ ಗಂಡನ ಮನೆಗೆ ಹೋಗು. ಬೇಕಾದರೆ ನಾನು ನಿನ್ನ ಜೊತೆಗೇ ಬರ್ತೀನಿ…..” ಎಂದರು ವನಜಮ್ಮ ತುಸು ಕೋಪದಿಂದ.

“ನಾನು ಮತ್ತೆ ಆ ಮನೆಗೆ ಹೋಗೋದಿಲ್ಲ. ಇಷ್ಟಾದ ಮೇಲೂ ನಾನು ಪುನಃ ಆ ಮನೆಗೆ ಹೋಗಬೇಕಾ…..? ನೋ, ನೆವರ್‌…. ಹೆಂಡತಿ, ಮಗಳು ಬೇಕೆನಿಸಿದರೆ ಅವರೇ ಇಲ್ಲಿಗೆ ಬಂದು ನಮ್ಮನ್ನು ಕರೆದುಕೊಂಡು ಹೋಗಲಿ. ನಾನಂತೂ ಅವರು ಕರೆಯುವವರೆಗೂ ನಾನಾಗೇ ಹೋಗುವುದಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಅನಿಸಿದರೆ, ನನ್ನ ಮೇಲೆ ಪ್ರೀತಿ ಇದೆ ಎಂದಾದರೆ ನನ್ನ ಹತ್ತಿರ ಸಾರೀ ಕೇಳಲಿ. ಇಲ್ಲಿಗೆ ಬರಲಾಗದಿದ್ದರೆ ಫೋನ್‌ ಮಾಡಿಯಾದರೂ ಸಾರೀ ಕೇಳಲಿ,” ಎಂದು ಹಠ ಮಾಡಿದಳು ಅರುಂಧತಿ.

sirf-kahana-nahi-story

ಮಗಳಿಗೆ ಇನ್ನು ಏನು ಹೇಳಿದರೂ ಪ್ರಯೋಜನವಿಲ್ಲ ಎಂದು ಅರಿತ ವನಜಮ್ಮ ತಮ್ಮ ರೂಮಿಗೆ ಹೋದರು. ಮಗಳ ಬಾಳನ್ನು ಹೇಗೆ ಸರಿಪಡಿಸುವುದು ಎನ್ನುವ ಚಿಂತೆಯಲ್ಲಿ ನಿದ್ದೆ ಬರದೇ ಹಾಸಿಗೆಯಲ್ಲಿ ಹೊರಳಾಡಿದರು.

ಬೆಳಗ್ಗೆ ಬೇಗನೇ ಎದ್ದ ವನಜಮ್ಮ ಮಗಳಿಗೆ ತಿಳಿಯದ ಹಾಗೆ ಅಜಯ್‌ ಮನೆಗೆ ಹೋದರು. ಮನೆಗೆ ಬಂದು ಅರುಂಧತಿಯನ್ನು ಮನವೊಲಿಸಿ ಕರೆದುಕೊಂಡು ಹೋಗಬೇಕೆಂದು ಅಜಯ್‌ ಬಳಿ ಅಂಗಲಾಚಿದರು.

“ಅತ್ತೆ…. ಇದರಲ್ಲಿ ನಂದೇನೂ ತಪ್ಪಿಲ್ಲ. ಆಫೀಸ್‌ ನಲ್ಲಿ ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಇದೆಲ್ಲ ಗೊತ್ತಿದ್ದೂ ನಿಮ್ಮ ಮಗಳು, ಹುಡುಗಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ನನ್ನ ಬಗ್ಗೆ ಎಷ್ಟು ಕೆಟ್ಟದಾಗಿ ಮಾತಾಡಿದಳು. ನನ್ನ ಮಗಳನ್ನು ನನ್ನಿಂದ ದೂರ ಮಾಡಿದಳು. ಅವಳೇ ತಪ್ಪಾಯಿತು ಎಂದು ನನ್ನ ಬಳಿ ಕ್ಷಮೆ ಕೇಳಿ ನನ್ನ ಮನೆಗೆ ಬರಲಿ. ಇಲ್ಲವಾದರೆ ಅವಳ ಜೀವನ ಅವಳಿಗೆ…. ನನ್ನ ಬದುಕು ನನಗೆ…. ನೀವಿನ್ನು ಹೊರಡಬಹುದು,” ಎಂದು ನೇರವಾಗಿ ನುಡಿದ ಅಜಯ್‌.

ಅಲ್ಲಿಂದ ಬಂದ ವನಜಮ್ಮ, “ಅರುಂಧತಿ… ನೀನು ನಿನ್ನ ಮಗಳನ್ನು ಕರೆದುಕೊಂಡು ನಿನ್ನ ಗಂಡನ ಮನೆಗೆ ಹೊರಡು. ನಾನು ಅಜಯ್‌ ಬಳಿ ಮಾತನಾಡಿದ್ದೇನೆ,” ಎಂದರು.

“ಅಮ್ಮಾ…. ನಾನು ಆಗಲೇ ನಿನಗೆ ಹೇಳಿದ್ನಲ್ಲಾ…. ಅಜಯ್‌ ನನ್ನ ಹತ್ತಿರ ಬಂದು ಕ್ಷಮೆ ಕೇಳುವವರೆಗೂ ನಾನು ಆ ಮನೆಗೆ ಹೋಗಲ್ಲಾ ಅಂತ. ಅಪ್ಪ ಮಾಡಿದ ಆಸ್ತಿ ಸಾಕಿಷ್ಟಿದೆಯಲ್ಲ…… ಇಲ್ಲೂ ಇರುವುದು ಬೇಡ ಅಂದರೆ ಹೇಳಿಬಿಡಿ. ನಾನು ಮಗಳನ್ನು ಕಟ್ಟಿಕೊಂಡು ಎಲ್ಲಾದರೂ ಹೊರಟುಹೋಗುತ್ತೇನೆ,” ಎಂದು ಸಿಟ್ಟಿನಿಂದ ಅಲ್ಲಿಂದ ಎದ್ದು ಹೋದಳು ಅರುಂಧತಿ.

ಇನ್ನು ಮಗಳಿಗೆ ಹೇಳಿ ಯಾವುದೇ ಪ್ರಯೋಜನವಿಲ್ಲ. ಅಜಯ್‌ ನ ಮನವೊಲಿಸಲು ತನ್ನಿಂದ ಸಾಧ್ಯವಿಲ್ಲ. ಕಾಲ ನಡೆಸಿದ ಹಾಗೆ ಆಗಲಿ ಎಂದರು ವನಜಮ್ಮ. ಆದರೂ ಮನದಲ್ಲಿದ್ದ  ಜ್ವಾಲಾಮುಖಿ ತಣ್ಣಗಾಗಿರಲಿಲ್ಲ. ಹೀಗೆಯೇ ಒಂದೆರಡು ತಿಂಗಳುಗಳು ಕಳೆದುಹೋದವು. ಅಂದು ಬೆಳಗ್ಗೆ ವನಜಮ್ಮ ಬೆಳಗಿನ ತಿಂಡಿಯ ತಯಾರಿಯಲ್ಲಿದ್ದರು. ಅಲ್ಲಿಗೆ ಬಂದ ಅರುಂಧತಿ, “ಅಮ್ಮಾ… ನಾನೊಂದು ನಿರ್ಧಾರಕ್ಕೆ ಬಂದಿದ್ದೀನಿ,” ಎಂದಳು.

ಏನು ಎಂಬಂತೆ ಮಗಳ ಮುಖ ನೋಡಿದರು ವನಜಮ್ಮ.“ನಾನು ಡೈವೋರ್ಸ್‌ ಗೆ ಹಾಕಬೇಕೆಂದಿದ್ದೇನೆ,” ಎಂದಳು ಅರುಂಧತಿ.

ಮಗಳ ಮಾತು ಕೇಳಿ ಎದೆಯಲ್ಲಿ ಚುಳುಕ್‌ ಎಂದು ಸಣ್ಣದಾಗಿ ನೋವು ಕಾಣಿಸಿಕೊಂಡಿತು ವನಜಮ್ಮನಿಗೆ. ತಾನು ಏನು ಹೇಳಿದರೂ ತಮ್ಮ ಮಾತನ್ನು ಮಗಳು ಅಳಿಯ ಕೇಳುವುದಿಲ್ಲವೆಂದು ಅವರಿಗೆ ಅನುಭವವಾಗಿತ್ತು. ಇಬ್ಬರಿಗೂ ತಮ್ಮದೇ ಆದ ಈಗೋ ಇದೆ. ಇಬ್ಬರೂ ತಮ್ಮ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳದ ಹೊರತು ಯಾವುದೂ ಸರಿ ಹೋಗುವುದಿಲ್ಲ ಎಂದು ವನಜಮ್ಮನಿಗೆ ಮನವರಿಕೆಯಾಯಿತು.

“ಅಮ್ಮಾ…. ಯಾರಾದರೂ ಲಾಯರ್‌ ಬಳಿ ಹೋಗೋಣ್ವಾ….?” ಎಂದು ಕೇಳಿದಳು ಅರುಂಧತಿ.

“ನಾನು ಯಾವ ಲಾಯರ್‌ ಹತ್ತಿರ ಬರುವುದಿಲ್ಲ. ಈಗಲೂ ಹೇಳುತ್ತೇನೆ ಕೇಳು…. ಅಜಯ್‌ ಜೊತೆ ಹೋಗಿ ಆರಾಮವಾಗಿ ಇರು.” ಎಂದರು.

“ಅಮ್ಮಾ…… ಅದು ಈ ಜನ್ಮದಲ್ಲಿ ನಡೆಯುವುದಿಲ್ಲ. ನೀನು ಬರದಿದ್ದರೂ ಪರವಾಗಿಲ್ಲ. ಯಾರಾದ್ರೂ ಲಾಯರ್‌ ಫ್ರೆಂಡ್ಸ್ ಬಗ್ಗೆ ಹೇಳು,” ಎಂದು ಕೇಳಿದಳು ಅರುಂಧತಿ.

“ನನ್ನ ಗೆಳತಿ ಪ್ರೇಮಾ ಇದ್ದಾಳೆ. ಅವಳ ಫೋನ್‌ ನಂಬರ್‌ ತಗೋ. ಆದರೆ ಒಂದು ಕಂಡೀಷನ್‌, ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದಕ್ಕೂ ನನ್ನನ್ನು ಎಳೆಯಬೇಡ,” ಎಂದು ನಿಷ್ಠೂರವಾಗಿ ಹೇಳಿದರು ವನಜಮ್ಮ.

ಅರುಂಧತಿಯೇ ಲಾಯರ್‌ ನ್ನು ಭೇಟಿ ಮಾಡಿ ಕೋರ್ಟಿಗೆ ಓಡಾಡಿದಳು. ಗಂಡ ಹೆಂಡತಿಯರಿಬ್ಬರೂ ಒಂದಾಗಿ ಬಾಳಲು ಕೋರ್ಟ್‌ಆರು ತಿಂಗಳು ಸಮಯ ನೀಡಿತು. ಆದರೆ ಅಜಯ್‌, ಅರುಂಧತಿ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು.

ಕೋರ್ಟಿನಲ್ಲಿ ಅಜಯ್‌ಹಾಗೂ ಅರುಂಧತಿಗೆ ಸುಲಭವಾಗಿ ವಿಚ್ಛೇದನ ಸಿಕ್ಕಿತು. ಮಗಳಿಗೆ ಹದಿನೆಂಟು ವರ್ಷ ವಯಸ್ಸಾಗುವವರೆಗೂ ಮಗಳು ತಾಯಿಯ ಜೊತೆಗಿರಬೇಕು. ತಂದೆ ತಿಂಗಳಿಗೊಮ್ಮೆ ಬಂದು ಮಗಳನ್ನು ಭೇಟಿ ಮಾಡಬಹುದು ಎಂದು ಕೋರ್ಟ್‌ ತಿಳಿಸಿತು.

ಅಜಯ್‌ ಮನೆಯಿಂದ ತನಗೆ ಸಂಬಂದಪಟ್ಟ ವಸ್ತುಗಳನ್ನು ತೆಗೆದುಕೊಳ್ಳಲು ತಾಯಿ ಹಾಗೂ ಅನ್ವಿತಾಳೊಂದಿಗೆ ಹೊರಟಳು ಅರುಂಧತಿ. ಮನೆಯೊಳಗಿಂದ ತನಗೆ ಸಂಬಂಧಪಟ್ಟ ವಸ್ತುಗಳನ್ನು ಜೋಡಿಸಿಕೊಂಡಳು ಅರುಂಧತಿ. ಅನ್ವಿತಾ ಹಾಲ್ ‌ನಲ್ಲಿ ಕುಳಿತ ತನ್ನ ಅಪ್ಪನ ತೊಡೆಯ ಮೇಲೆ ಕುಳಿತುಕೊಂಡಿದ್ದಳು.

“ಅಮ್ಮಾ…. ಇನ್ನು ಹೊರಡೋಣಾ,” ಎಂದು ಅರುಂಧತಿ ಕೇಳಿದಳು.

“ಹೊರಡೋಣ ಅರು, ಒಂದು ನಿಮಿಷ ಕುಳಿತುಕೋ,” ಎಂದರು ವನಜಮ್ಮ.

ಅರುಂಧತಿ ಹಜಾರದ ಸೋಫಾದ ತುದಿಯಲ್ಲಿ ಕೆಂಡದ ಮೇಲೆ ಕುಳಿತಂತೆ ಕುಳಿತಳು. ತನ್ನ ಮೊಬೈಲ್ ಫೋನ್‌ ನ್ನು ಅಲ್ಲೇ ಇರುವ ಟೇಬಲ್ ಮೇಲೆ ಇಟ್ಟು ರೆಕಾರ್ಡರ್‌ ಆನ್‌ ಮಾಡಿದರು ವನಜಮ್ಮ.

“ಅತ್ತೆ….. ನಾನು ನಿಮ್ಮನ್ನು ಅಮ್ಮ ಎಂದೇ ಅಂದುಕೊಂಡಿದ್ದೇನೆ. ಆ ದಿನ ನಾನು ಅರುಂಧತಿ ಹತ್ತಿರ ಅಷ್ಟು ಒರಟಾಗಿ ನಡೆದುಕೊಳ್ಳಬಾರದಿತ್ತು. ಅವಳು ಕೇಳಿದ್ದರೂ ತಪ್ಪಿರಲಿಲ್ಲ. ನಮ್ಮ ಟೀಮ್ ಗೆ ಕೊಟ್ಟಿದ್ದ ಪ್ರಾಜೆಕ್ಟ್ ವರ್ಕ್‌ ಕಾಂಪ್ಲಿಕೇಟೆಡ್‌ ಇತ್ತು. ಸಮಯಕ್ಕೆ ಸರಿಯಾಗಿ ಆ ಕೆಲಸವನ್ನು ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ನಮಗೆ ಇತ್ತು. ಆ ಸಮಯದಲ್ಲಿ ನನಗೇ ನನ್ನ ಮೇಲಿನ ಹಿಡಿತ ತಪ್ಪಿ ಹೋಗಿತ್ತು.

“ನಿಮ್ಮ ಮಗಳಾದರೂ ಅದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ನಾನು ದುಡಿಯುವುದು ನನಗೋಸ್ಕರ ಮಾತ್ರನಾ….? ನನ್ನ ಹೆಂಡತಿ, ಮಗಳು ಸುಖವಾಗಿರಬೇಕು. ಅವರಿಗೆ ಯಾವ ಕೊರತೆಯೂ ಆಗಬಾರದು ಎಂದು ಅಂದುಕೊಳ್ಳುವುದು ತಪ್ಪಾ? ಆದರೂ ನಾನು ಅರುಗೆ ಹೊಡೆಯಬಾರದಿತ್ತು. ಕ್ಷಮೆ ಕೇಳಿ ಕರೆದರೆ ಮನೆಗೆ ಹಿಂತಿರುಗಿ ಬರುತ್ತೇನೆ ಎಂದು ಹೇಳಿದಳು. ಆದರೆ ಅವಳ ಬಳಿ ಕ್ಷಮೆ ಕೇಳಲು ನನ್ನ ಈಗೋ ಅಡ್ಡ ಬಂದಿತು. ಆಗಲೇ ನಾನು ಅವಳು ಹೇಳಿದ ಹಾಗೆ ಕೇಳಿದ್ದರೆ ನನಗೆ ಈ ಸ್ಥಿತಿ ಬರುತ್ತಿರಲಿಲ್ಲ.

“ಅತ್ತೆ, ನಿಜ ಹೇಳುತ್ತೀನಿ, ನನಗೆ ಅರು ಎಂದರೆ ತುಂಬಾ ಇಷ್ಟ. ಅವಳನ್ನು ಬಿಟ್ಟು ನಾನು ಹೇಗೆ ಬದುಕಲಿ? ಸ್ವಲ್ಪ ನನ್ನ ಈಗೋ ಅಡ್ಡ ಬಂದು ಇಷ್ಟೆಲ್ಲಾ ರಾದ್ಧಾಂತ ಆಯಿತು.”

ಅಜಯ್‌ ನ ಮಾತು ಕೇಳಿ ಅರುಂಧತಿಯ ಕಣ್ಣಲ್ಲಿ ನೀರು ಬಂತು. ಅಜಯ್‌ ತಲೆ ತಗ್ಗಿಸಿದ.

“ಅಜಯ್‌, ನೀನು ತಲೆ ತಗ್ಗಿಸುವ ಅವಶ್ಯಕತೆಯಿಲ್ಲ. ಕೇಳಿಲ್ಲಿ…..” ಎಂದರು ವನಜಮ್ಮ.

“ಅಮ್ಮಾ….. ನಾನು ತಪ್ಪು ಮಾಡಿದೆ. ಅಜಯ್‌ ತುಂಬಾ ಒಳ್ಳೆಯವರು. ನನ್ನನ್ನು ಅನ್ವಿತಾಳನ್ನು ಅವರು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ನಾವು ಕೇಳಿದ್ದನ್ನೆಲ್ಲ ಮನೆಗೆ ತಂದು ಹಾಕುತ್ತಿದ್ದರು. ನನ್ನಿಷ್ಟದಂತೆಯೇ ಮನೆಯನ್ನೂ ಸಹ ಕಟ್ಟಿಸಿದರು. ಸಾಲದ ಕಂತುಗಳನ್ನು ಕಟ್ಟುವುದು, ಆಫೀಸ್‌ ಟೆನ್ಷನ್‌, ಪ್ರಾಜೆಕ್ಟ್ ವರ್ಕ್‌ ಇವೆಲ್ಲವುಗಳಿಂದ ಹೈರಾಣಾಗಿದ್ದ ಅಜಯ್‌.

“ಆ ದಿನ ಅರು ತುಂಬಾ ಸುಸ್ತಾಗಿದ್ದರು. ಅದೇ ಸಮಯದಲ್ಲಿ ನಾನು ಅವರಿಗೆ ಸಿಕ್ಕಾಪಟ್ಟೆ ಮಾತನಾಡಿಬಿಟ್ಟೆ. ಅವರದಲ್ಲದ ತಪ್ಪಿಗಾಗಿ ನಾನು ಅವರನ್ನು ಹಂಗಿಸಿದಾಗ, ಅವರು ತಮ್ಮನ್ನು  ಮರೆತು ನನ್ನ ಮೇಲೆ ಕೈ ಮಾಡಿದರು. ನಾನು ಮನೆ ಬಿಟ್ಟು ಹೋಗುತ್ತೇನೆ ಎಂದಾಗ ಹೋಗು ಎಂದು ಹೇಳಿದಾಗ ನನ್ನ ಈಗೋ ಅಡ್ಡಬಂತು. ಆದರೆ ನನ್ನ ಮನಸ್ಸು ಅವರಿಗಾಗಿ ಹಂಬಲಿಸುತ್ತಲೇ ಇತ್ತು. ಈಗಲೂ ಇದೆ,” ಎಂದು ತನ್ನ ತಪ್ಪನ್ನು ಒಪ್ಪಿಕೊಂಡಳು ಅರುಂಧತಿ.

“ನನಗೆ ನಿಮ್ಮ ಮನಸ್ಥಿತಿ ಅರ್ಥವಾಯ್ತು, ಅಜಯನೇ ಮಾತನಾಡಿ ಮನೆಗೆ ಬಾ ಎಂದು ಕರೆಯಲಿ ಎಂದು ಅರುಂಧತಿ, ಅರುಂಧತಿನೇ ವಾಪಸ್‌ ಮನೆಗೆ ಬರಲೆಂದು ಅಜಯ್‌. ಇಬ್ಬರ ಮನಸ್ಸಿನಲ್ಲೂ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದೆ. ಆದರೆ ಹೇಳಿಕೊಳ್ಳಲು ನಿಮ್ಮ ಈಗೋ ಅಡ್ಡ ಬರುತ್ತಿದೆ.

“ನಿಮಗಿಬ್ಬರಿಗೂ ಸಾಯಂಕಾಲದವರೆಗೆ ಸಮಯ ಕೊಡ್ತೀನಿ. ನಿರ್ಧಾರ ನಿಮ್ಮದು. ಈಗಲೂ ಒಂದಾಗುತ್ತೇವೆ ಎಂದರೆ ಸಂತೋಷ. ಇಲ್ಲಾ ಬೇರೆ ಬೇರೆ ಆಗಿಯೇ ಇರುತ್ತೇವೆ ಎಂದರೆ ಕೋರ್ಟ್‌ ಆರ್ಡರ್‌ ಪಾಲಿಸಿದಂತಾಗುತ್ತದೆ,” ಎಂದು ಮೊಮ್ಮಗಳನ್ನು ಕರೆದು, “ಅನ್ವಿತಾ ಪುಟ್ಟಾ, ನಿನಗೆ ಅಪ್ಪ ಬೇಕಾ… ಅಮ್ಮ ಬೇಕಾ….?” ಕೇಳಿದರು ವನಜಮ್ಮ.

“ಅಜ್ಜಿ, ನನಗೆ ಇಬ್ಬರೂ ಬೇಕು. ಅಮ್ಮನ ಮಡಿಲಲ್ಲಿ ಹಾಯಾಗಿ ಮಲಗಬೇಕು. ಅಪ್ಪನ ಹೆಗಲ ಮೇಲೆ ಕುಳಿತು ಆಟ ಆಡಬೇಕು. ಇಬ್ಬರ ಜೊತೆಗೂ ಹೊರಗಡೆ ಸುತ್ತಾಡಬೇಕು,” ಎಂದಿತು ಮಗು.

ಅಜಯ್‌ ಅರುಂಧತಿ ಇಬ್ಬರೂ ಓಡಿ ಬಂದು ಅನ್ವಿತಾಳನ್ನು ಬಿಗಿದಪ್ಪಿಕೊಂಡರು.

“ಅರು, ಅಜಯ್‌…. ನೀವಿನ್ನು ನಿಮ್ಮ ನಿರ್ಧಾರವನ್ನು ಬಾಯ್ಬಿಟ್ಟು ಹೇಳಬೇಕಾಗಿಲ್ಲ. ನಾನಿನ್ನು ನನ್ನ ಮನೆಗೆ ಹೋಗುತ್ತೇನೆ,” ಎಂದು ಹೊರಟೇ ಬಿಟ್ಟರು ವನಜಮ್ಮ. ಮಗು ಅಜ್ಜಿಗೆ ಟಾಟಾ ಮಾಡಿದಳು.

“ಅರು… ಒಂದು ರೌಂಡ್‌ ಹೊರಗಡೆ ಸುತ್ತಾಡಿಕೊಂಡು ಬರೋಣಾ,” ಎಂದು ಅಜಯ್‌ ಹೇಳುವುದು ಗೇಟ್‌ ಬಳಿ ಹೋಗುತ್ತಿದ್ದ ವನಜಮ್ಮನ ಕಿವಿಗೆ ಇಂಪಾಗಿ ಕೇಳಿಸಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ