ಸುಗುಣಾ ವಿಧವೆ ಎಂದು ಗೊತ್ತಿದ್ದರೂ, ಮಾಧವ ಅವಳಿಗಾಗಿ ಹೊಸ ಬಾಳು ನೀಡಲು ಮುಂದಾದ. ಇದನ್ನು ಒಪ್ಪದ ಅವನ ತಂದೆ ತಾಯಿಯರನ್ನು ಹೇಗೆ ಓಲೈಸಿದ……..?
“ಇದೇನು ಸುಶೀಲಮ್ಮ….. ಇಡೀ ಓಣಿ ತುಂಬಾ ಜನ ನಿಮ್ಮ ಮಗನ ಬಗ್ಗೆ ಮಾತಾಡ್ಕೋತಿರೋದು….. ನಿಮಗೆ ಗೊತ್ತಿಲ್ವಾ…..?” ಎಂದು ಆ ಸಂಜೆ ಎದುರು ಮನೆ ಪಂಕಜಮ್ಮ ಕಟ್ಟೆ ಮೇಲೆ ಬಂದು ಕುಳಿತು ಹೇಳಿದರು.
ಅವರಾಡಿದ ಮಾತುಗಳನ್ನು ಕೇಳಿಸಿಕೊಂಡ ಮಾಧವನ ತಾಯಿ ಸುಶೀಲಮ್ಮ, “ನೀವು ಏನು ಹೇಳ್ತಿದ್ದೀರೋ ಗೊತ್ತಾಗ್ತಿಲ್ಲ. ಏನಂತೆ ವಿಷಯ….?” ಎಂದು ಮರು ಪ್ರಶ್ನಿಸಿದರು.
ಮುಂದುವರಿದ ಪಂಕಜಮ್ಮ, “ಅಯ್ಯೋ, ಸುಶೀಲಮ್ಮಾ…. ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದಾನಲ್ಲ ನಿಮ್ಮ ಮಗ ಮಾಧವ, ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿರೋ ಸುಗುಣಾ ಎಂಬ ವಿಧವೆ ಜೊತೆ ಆಡುತ್ತಿರುವ ಪ್ರೇಮ ಲೀಲೆ ಎಲ್ಲಾ ಕಡೆಗೆ ಹರಡಿದರೂ ಅದರ ಗಾಳಿ ಗಂಧ ನಿಮಗೆ ಗೊತ್ತಾಗಿಲ್ವಾ…..?” ಎಂದರು.
“ಏನು ನಮ್ಮ ಮಾಧವನಾ…..? ಸಾಧ್ಯವೇ ಇಲ್ಲಾ ಕಣ್ರೀ…..” ಎಂದು ಸ್ವಲ್ಪ ಗಡುಸಾಗಿ ಹೇಳಿದರು.
ಅಷ್ಟಕ್ಕೇ ಸುಮ್ಮನಿರದ ಪಂಕಜಮ್ಮ, “ಹೌದು ಕಣ್ರೀ… ನಾನು ನಿಮ್ಮ ಮಗ ಅದೇ ಮಾಧವನ ಬಗ್ಗೆನೇ ಮಾತಾಡ್ತಿರೋದು,” ಎಂದರು ವ್ಯಂಗ್ಯವಾಗಿ.
ಇದನ್ನು ಕೇಳಿದ ಸುಶೀಲಮ್ಮರಿಗೆ ಆ ಸಂಜೆಯ ತಂಪು ಹೊತ್ತಿನಲ್ಲೂ ಹಣೆ ಮೇಲೆ ಬೆವರು ಬರಲಾರಂಭಿಸಿತು. ಆದರೂ ಸಾವರಿಸಿಕೊಂಡ ಅವರು, “ಇಲ್ಲಾರೀ ಪಂಕಜಮ್ಮ, ನಿಮಗೆಲ್ಲೋ ತಪ್ಪು ಸುದ್ದಿ ಬಂದಿರಬೇಕು…. ನಮ್ಮ ಮಾಧವ ಅಂಥವನಲ್ಲವೇ ಅಲ್ಲ….” ಎಂದರು.
“ಬೇಕಿದ್ರೆ ನಿಮ್ಮ ಮಗನನ್ನೇ ವಿಚಾರಿಸಿ ಕನ್ಛರ್ಮ್ ಮಾಡ್ಕೊಳ್ಳಿ,” ಎನ್ನುತ್ತಾ ಎದ್ದು ಮನೆಗೆ ಹೊರಟ ಆಕೆ, “ಅವಳಿಗೆ ಮೂರು ವರ್ಷದ ಮಗನೂ ಇದ್ದಾನಂತೆ,” ಎಂದು ಒಂದಿಷ್ಟು ಒಗ್ಗರಣೆ ಹಾಕಿಯೇ ಹೋದರು.
ಇದರಿಂದ ಬಹಳ ಚಿಂತಿತರಾದ ಸುಶೀಲಮ್ಮ ಮನೆಯೊಳಗೆ ಬಂದು, ತಮ್ಮ ರೂಮಿನಲ್ಲಿ ಪೇಪರ್ ಓದುತ್ತಾ ಕುಳಿತಿದ್ದ ಪತಿಯ ಬಳಿ ಹೋದರು. ಪತ್ನಿಯ ಕಳೆಗುಂದಿದ ಮುಖ ಕಂಡ ಅವರು, “ಸುಶೀಲಾ…. ಏನಾಯ್ತು? ಯಾಕೆ ಮೈಗೆ ಹುಷಾರಿಲ್ವಾ…. ಯಾಕೆ ಒಂಥರಾ ಇದೀಯಲ್ಲಾ….. ಸ್ವಲ್ಪ ಹೊತ್ತಿಗೆ ಮುಂಚೆ ಚೆನ್ನಾಗಿದ್ದೆಯಲ್ಲಾ, ಏನಾಯ್ತು ನಿನಗೆ?” ಎಂದು ಕಕ್ಕುಲತೆಯಿಂದ ಕೇಳಿದರು.
ಸ್ವಲ್ಪ ಹೊತ್ತು ಮೌನವಾಗಿದ್ದ ಸುಶೀಲಮ್ಮ, ಎದುರು ಮನೆ ಪಂಕಜಮ್ಮ ಹೇಳಿದ ಮಗನ ವಿಷಯವನ್ನು ಪತಿಗೆ ವಿವರಿಸಿದರು. ನಂತರ, “ನಮ್ಮ ಮಗನ ಪ್ರೇಮ ಪುರಾಣದಿಂದಾಗಿ ಬೀದಿಯಲ್ಲಿ ತಲೆ ಎತ್ಕೊಂಡು ಓಡಾಡದ ಹಾಗಾಗಿದೆ. ನಾವು ಮರ್ಯಾದೆ, ಗೌರವ ಅಂತ ಎಷ್ಟು ಹೆದರಿ ನಡೀತಿದ್ದೇವೋ ಅದಕ್ಕೆ ತಕ್ಕ ಶಾಸ್ತಿ ಮಾಡಿದ ಕಣ್ರೀ…. ಛೇ ಇಂಥ ವಿಷಯ ಕೇಳೋಕ್ಕಿಂತ ಮೊದಲೇ ಸಾವಾದ್ರೂ ಬರಬಾರದಾಗಿತ್ತಾ…. ಅವನಿಗೆ ಏನು ಕಡಿಮೆ ಮಾಡಿದ್ದೆವು ಹೇಳಿ….
“ಅವನ ಇಚ್ಛೆಯಂತೆ ಒಳ್ಳೆಯ ಶಿಕ್ಷಣ ಕೊಡಿಸಿದೆವು, ಸಂಸ್ಕಾರ ಕೊಟ್ಟೆವು. ಅವನ ಬ್ಯಾಂಕ್ ನಲ್ಲಿರುವ ಅದ್ಯಾವುದೋ ವಿಧವೆ ಜೊತೆ ಓಡಾಟ ಶುರು ಮಾಡ್ಕೊಂಡಿದ್ದಾನೆ ಅಂತ ಊರೆಲ್ಲಾ ಸುದ್ದಿ ಹರಡಿದೆ. ಇಲ್ಲ ಇಲ್ಲ… ನಾನಂತೂ ಆ ವಿಧವೆಯನ್ನು ಮನೆ ಸೊಸೆಯಾಗಿ ಒಪ್ಪಿಕೊಳ್ಳುವುದಿಲ್ಲ.
“ಈಗ ನೀವೇ ಹೇಳ್ರಿ….. ನಮ್ಮ ಮಗ ಇಂಥ ತಪ್ಪು ಹೆಜ್ಜೆ ಇಟ್ಟು ನಮ್ಮ ಕುಟುಂಬಕ್ಕೆ ಇಂಥ ಕಲೆ ಅಂಟಿಸುತ್ತಾನೆ ಎಂದು ನಾವು ಕನಸು ಮನಸ್ಸಿನಲ್ಲೂ ತಿಳುದುಕೊಂಡಿದ್ವಾ….” ಎಂದು ಒಂದೇ ಸಮನೇ ಸಂಕಟ ಉದ್ವೇಗದಿಂದ ಹೇಳಿದರು.
“ಸುಶೀಲಾ….. ನೀನು ಅವರಿವರು ಹೇಳಿದ್ರು ಅಂತ ತಲೆ ಕೆಡಿಸ್ಕೋ ಬೇಡ. ಮಾಧವ ಮನೆಗೆ ಬರಲಿ. ಅವನೊಂದಿಗೆ ಕುಳಿತು ಮಾತನಾಡೋಣ,” ಎಂದು ಅವರ ಪತಿ ಆಕೆಯನ್ನು ಸಮಾಧಾನಪಡಿಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಸುಗುಣಾಳ ಪತಿ ರಾತ್ರಿ ಮಲಗಿದ್ದವನು ಹೃದಯಾಘಾತದಿಂದ ನಿಧನನಾಗಿದ್ದ. ಆತ ಮರಣಿಸಿದ ನಂತರ ಮಾನವೀಯತೆಯ ಆಧಾರದ ಮೇಲೆ ಸುಗುಣಾಳಿಗೆ ಆತ ಕೆಲಸ ಮಾಡುತ್ತಿದ್ದ ಸದರಿ ಬ್ಯಾಂಕ್ ನಲ್ಲಿಯೇ ಕೆಲಸ ಕೊಟ್ಟಿದ್ದರು. ಸುಗುಣಾಳ ಅತ್ತೆ ಮಾವ ಕೂಡ ಮಗ ತೀರಿಹೋದ ಕೊರಗಿನಲ್ಲೇ ಒಂದು ವರ್ಷದ ಅಂತರದಲ್ಲಿ ಇಬ್ಬರೂ ತೀರಿಹೋದರು.
ಅಂದಿನಿಂದ ಸುಗುಣಾ ತನ್ನ ಪುಟ್ಟ ಮಗನೊಂದಿಗೆ ಒಂಟಿ ಜೀವನ ಸಾಗಿಸುತ್ತಿದ್ದಳು. ಸುಗುಣಾ ರೂಪದಲ್ಲೂ, ಗುಣದಲ್ಲೂ ಸುಂದರಿ ಆಗಿದ್ದಳು. ಮೊದ ಮೊದಲು ಸುಗುಣಾಳನ್ನು ನೋಡಿದಾಗ, ಮಾಧವನಿಗೆ ಅವಳ ಬಗ್ಗೆ ಸಹಾನುಭೂತಿ ಇತ್ತು. ಬರಬರುತ್ತಾ ಆ ಸಹಾನುಭೂತಿ ಅವನಿಗೆ ಅರಿವಿಲ್ಲದೇ ಪ್ರೀತಿಯತ್ತ ತಿರುಗಿ, ಅವನ ಮನದಲ್ಲೇ ಅವಳನ್ನು ಇಷ್ಟಪಡತೊಡಗಿದ. ಆದರೆ ಸುಗುಣಾಳಿಗೆ ಮಾಧವ ತನ್ನನ್ನು ಆ ದೃಷ್ಟಿಯಿಂದ ನೋಡುತ್ತಿದ್ದಾನೆ ಎನ್ನುವ ತಿಳಿವಳಿಕೆ ಅವಳಿಗೆ ಇರಲಿಲ್ಲ.
ಹೀಗಾಗಿ ಅವಳು ಅವನೊಂದಿಗೆ ಒಬ್ಬ ಸಹೋದ್ಯೋಗಿ ಮತ್ತು ಮಿತ್ರನಂತೆ ಇರತೊಡಗಿದ್ದಳು. ಆಗಾಗ ಅಪರೂಪಕ್ಕೆ ಎನ್ನುವಂತೆ ಇಬ್ಬರೂ ಮಧ್ಯಾಹ್ನದ ಊಟಕ್ಕೆ, ಕಾಫಿಗೆ ಜೊತೆಯಾಗಿ ಹೊರಗಡೆ ಹೋಗುವುದು ಅಭ್ಯಾಸವಾಯಿತು.
ಹೀಗಿರುವಾಗ ಒಂದು ದಿನ ಮಾಧವ ತನ್ನ ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸಿ ಅವಳನ್ನು ಮದುವೆ ಆಗುವುದಾಗಿ ಹೇಳಿದ್ದ. ಆಗ ಅವನ ಮಾತು ಕೇಳಿಸಿಕೊಂಡ ಸುಗುಣಾ ಗಾಬರಿಯಿಂದ, “ಇಲ್ಲಾ…. ಮಾಧವ, ಇದು ಅಸಾಧ್ಯದ ಮಾತು! ನಾನು ವಿಧವೆ. ಇದರ ಬಗ್ಗೆ ನಾನು ಯೋಚನೆ ಕೂಡ ಮಾಡಿಲ್ಲ. ನೀವು ಒಬ್ಬ ವಿಧವೆ ಜೊತೆ ಮದುವೆ ಆಗೋದಾ….? ಇಲ್ಲವೇ ಇಲ್ಲ. ಆ ರೀತಿ ಮಾಡಿ ನಿಮಗೆ ಒಂದು ಕಲೆ ಅಂಟಿಸಲು ನಾನು ಇಷ್ಟಪಡಲ್ಲ….. ನಾನು ವಿಧವೆ ಅಷ್ಟೇ ಅಲ್ಲ, ಒಂದು ಮಗುವಿನ ತಾಯಿ ಕೂಡ ಆಗಿದ್ದೇನೆ. ಹೀಗಾಗಿ ಇದು ಸಾಧ್ಯವಿಲ್ಲ. ಮಾಧವ ನಾವಿಬ್ಬರೂ ಮಿತ್ರರಾಗಿಯೇ ಇರೋಣಾ….” ಎಂದು ತನ್ನ ಮನದಾಳದ ಮಾತನ್ನು ಹೇಳಿದಳು.
ಅದಕ್ಕೆ ಮಾಧವ, “ಏನು ಸುಗುಣಾ….. ಕಲೆ ಅಂದ್ರಲ್ಲಾ…. ಯಾವ ಕಲೆ? ಎಂಥ ಕಲೆ? ಸಮಾಜದಲ್ಲಿ ಒಬ್ಬ ಮಹಿಳೆ ವಿಧವೆ ಆಗುವುದು ಕಲೆಯಾ…? ಒಬ್ಬ ಹೆಣ್ಣು ವಿಧವೆಯಾದ ನಂತರ ಎಲ್ಲರಂತೆ ಜೀವನ ಮಾಡುವುದೇ ಬಿಟ್ಟು ಬಿಡಬೇಕಾ….? ಹೇಳಿ ಸುಗುಣಾ, ಗಂಡಸರಾದ ನಾವು ಈ ರೀತಿ ಚಿಂತೆ ಮಾಡಲ್ಲ. ಜೀವನಕ್ಕೆ ವಿರಾಮ ಕೊಡಲ್ಲ, ಹೀಗಿದ್ದ ಮೇಲೆ ಇದು ಮಹಿಳೆಯರಿಗೆ ಯಾಕಿಲ್ಲ….? ಅರ್ಥವೇ ಆಗಲ್ಲ…. ಇಲ್ಲ ಸುಗುಣಾ…. ನೀವು ಜೀವನ ನಡೆಸಲೇ ಬೇಕು, ಆದರೆ ವಿಧವೆ ಆಗಿ ಅಲ್ಲ…. ನನ್ನ ಜೀವನ ಸಂಗಾತಿಯಾಗಿ,” ಎಂದು ಅವಳಿಗೆ ತಿಳಿ ಹೇಳಿದ.
“ಇಲ್ಲ ಮಾಧವ, ನಿಮಗೆ ಯಾಕೆ ಅರ್ಥ ಆಗ್ತಿಲ್ಲ…. ಹಾಗೆ ಮಾಡಿದರೆ ಜನ ಏನಂದ್ಕೋತಾರೆ?” ಎಂದು ಸುಗಣಾ ಕೇಳಿದಳು.
“ಜನ…. ಯಾವ ಜನ….? ನೀವು ಹೇಗೆ ಜೀವನ ಮಾಡ್ತಿದ್ದೀರಿ? ನಿಮಗೇನದರೂ ಸಹಾಯ ಬೇಕೆ…? ಎಂದು ಯಾರಾದರೂ ಈವರೆಗೆ ನಿಮ್ಮನ್ನು ಕೇಳಿದ್ದಾರಾ….? ಇಲ್ವಲ್ಲಾ…. ಮತ್ಯಾಕೆ ನಿಮಗೆ ಹಿಂಜರಿಕೆ ಸುಗುಣಾ,” ಎಂದು ಅವನು ಕೇಳಿದ.
ಭಾವುಕಳಾದ ಸುಗುಣಾ ಕಣ್ಣೀರು ಸುರಿಸಿ ಕೆಲವು ನಿಮಿಷಗಳ ನಂತರ ಸ್ವಯಂ ಸಂಭಾಳಿಸಿಕೊಂಡಳು. ಅದಾದ ನಂತರ ಅವರ ಪ್ರೀತಿ ಗಟ್ಟಿಯಾಯಿತು. ಅವರ ಪ್ರೀತಿಯ ಸಂಬಂಧದ ವಿಷಯ ಮತ್ತಷ್ಟು ಹರಿದಾಡತೊಡಗಿತ್ತು.
ಒಂದು ದಿನ ಮಾಧವ ತನ್ನ ತಾಯಿ ತಂದೆಯರ ಬಳಿ ಯಾವ ಪೀಠಿಕೆ ಇಲ್ಲದೆ ತನ್ನ ಮತ್ತು ಸುಗುಣಾಳ ಪ್ರೀತಿಯ ವಿಚಾರ ಪ್ರಸ್ತಾಪಿಸುತ್ತಾ, “ಅಪ್ಪಾ ಸುಗುಣಾಳನ್ನು ನೀವು ಸೊಸೆಯನ್ನಾಗಿ ಸ್ವೀಕರಿಸಿದರೆ ಅದು ಅವಮಾನದ ವಿಚಾರವಲ್ಲ, ಬದಲಿಗೆ ಹೆಮ್ಮೆಪಡುವ ವಿಚಾರ. ಏಕೆಂದರೆ ಒಬ್ಬ ವಿಧವೆಯ ಕೈಹಿಡಿದು ನಿಮ್ಮ ಮಗ ಆಕೆಗೊಂದು ಜೀವನ ನಡೆಸಲು ಅಧಿಕಾರ ಕೊಡುತ್ತಾನೆ ಎಂದು.
“ಅಪ್ಪಾ…. ಒಂದು ವೇಳೆ ನಾನು ಮದುವೆ ಆದ ಒಂದೆರಡು ವರ್ಷದಲ್ಲಿ ನನ್ನ ಪತ್ನಿ ತೀರಿ ಹೋಗಿದ್ದರೆ ನೀವು ನನ್ನನ್ನು ಹಾಗೇ ಜೀವನ ನಡೆಸಲು ಬಿಡುತ್ತಿದ್ರಾ…? ಆಗ ನೀವೇ ಮಾಧಾವ, ಎಷ್ಟು ದಿನ ಹೀಗೆ ಇರ್ತಿಯಾ…? ಮತ್ತೊಂದು ಮದುವೆ ಆಗುವ ಅಂತ ನೀವೇ ಹೇಳ್ತಿದ್ರಿ ಅಲ್ವಾ….. ಯೋಚನೆ ಮಾಡಿ ಅಪ್ಪಾ….” ಎಂದು ಎಲ್ಲ ವಿಚಾರಗಳನ್ನು ವಿಷದವಾಗಿ ಹೇಳಿ ಅವರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾದ.
ಮಾಧವನ ತಾಯಿ ತಂದೆಗೆ ಮನದ ಕಣ್ಣು ತೆರೆದಂತಾಯಿತು. ಮನೆಯಲ್ಲಿ ಎಲ್ಲ ಚರ್ಚೆಯಾದ ಬಳಿಕ ಇಬ್ಬರೂ ಸುಗುಣಾಳನ್ನು ಸೊಸೆಯಾಗಿ ಮನೆ ತುಂಬಿಸಿಕೊಳ್ಳಲು ತುಂಬು ಮನಸ್ಸಿನಿಂದ ಸಹಮತ ನೀಡಿದಾಗ, ಮಾಧವ ತಾಯಿ ತಂದೆಯನ್ನು ಪ್ರೀತಿಯಿಂದ ತಬ್ಬಿಕೊಂಡು ಥ್ಯಾಂಕ್ಸ್ ಹೇಳಿದ.
ಅಂದಿನಿಂದ ಹಿರಿಯರ ಆಶೀರ್ವಾದದೊಡನೆ ಸುಗುಣಾ ಹಾಗೂ ಮಾಧವ ಹೊಸ ಬಾಳು ನಡೆಸುವಂತಾಯಿತು.





