ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ದಾಖಲೆ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ಸುಮಾರು 54 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿ 4.77 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಮೇಳದಲ್ಲಿ ನೂತನ ತಳಿಗಳು, ಯಂತ್ರೋಪಕರಣಗಳು ಪ್ರದರ್ಶನಗೊಂಡವು. ರೈತರಿಗೆ ವಿಜ್ಞಾನಿಗಳು ಮಾಹಿತಿ ನೀಡಿದರು ಹಾಗೂ ಇದೇ ಸಂದರ್ಭ ಮೂವರು ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಭಾನುವಾರ ತೆರೆಬಿದ್ದಿದೆ. ನಿರೀಕ್ಷೆಗೂ ಮೀರಿ 54.16 ಲಕ್ಷ ಮಂದಿ ಆಗಮಿಸಿದ್ದು, ಬರೋಬ್ಬರಿ 4.77 ಕೋಟಿ ರೂ. ವಹಿವಾಟು ನಡೆದಿದೆ.
ಮೇಳಕ್ಕೆ ಕೊನೆಯ ದಿನವಾದ ಭಾನುವಾರ ಸುಮಾರು 17.93 ಲಕ್ಷ ಮಂದಿ ಆಗಮಿಸಿದ್ದು, 14,226 ಮಂದಿ ವಿವಿಯ ರಿಯಾಯಿತಿ ದರದ ಮುದ್ದೆ ಊಟ ಸವಿದಿದ್ದಾರೆ. ನಾನಾ ಮಳಿಗೆಗಳ ವ್ಯಾಪಾರ ವಹಿವಾಟು ಕೂಡ ಹೆಚ್ಚಾಗಿದ್ದು, 1.45 ಕೋಟಿ ರೂ. ವಹಿವಾಟು ನಡೆದಿದೆ. ನಾಲ್ಕು ದಿನ (ನ.13ರಿಂದ 16ರವರೆಗೆ) ಗಳಲ್ಲಿ54.16 ಲಕ್ಷ ಮಂದಿ ಆಗಮಿಸಿದ್ದು, 55,498 ಮಂದಿ ರಿಯಾಯಿತಿ ದರದ ಊಟ ಸವಿದಿದ್ದಾರೆ. ಸುಮಾರು 4.77 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷದ ಮೇಳದಲ್ಲಿ 34 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ಬೆಂಗಳೂರು ಕೃಷಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಜಿಕೆವಿಕೆ ಆವರಣ ಸಂಪೂರ್ಣವಾಗಿ ಜನ, ಜಾನುವಾರುಗಳು ಮತ್ತು ಯಂತ್ರೋಪಕರಣಗಳ ಸಂತೆಯಾಗಿತ್ತು. ಹೊಸ ತಳಿಗಳು, ಯಂತ್ರೋಪಕರಣಗಳು, ಆಧುನಿಕ ತಂತ್ರಜ್ಞಾನ ನೋಡುಗರ ಗಮನಸೆಳೆದವು. ರಾಜ್ಯದ ನಾನಾ ಭಾಗಗಳಿಂದ ತಂಡೋಪತಂಡವಾಗಿ ಆಗಮಿಸಿದ ರೈತರು, ಕೃಷಿಗೆ ಬೇಕಾದ ಪರಿಕರಗಳು, ಬಿತ್ತನೆ ಬೀಜಗಳನ್ನು ಖರೀದಿಸಿದರು. ಕೆಲ ರೈತರು ಉಳುಮೆಗೆ ಸೂಕ್ತವಾದ ಯಂತ್ರಗಳ ಖರೀದಿಗಾಗಿ ಮಾಹಿತಿ ಪಡೆದರು.
ನಾಲ್ಕು ದಿನಗಳಲ್ಲಿ ಸಹಸ್ರಾರು ಮಂದಿ ಭೇಟಿ ನೀಡಿ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ, ತೋಟಗಾರಿಕೆ, ಪರಿಸರ ವಿಜ್ಞಾನ ವಿಭಾಗ, ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ಜೇನು ಕೃಷಿ, ರೇಷ್ಮೆ ಕೃಷಿ, ಪ್ರಾಣಿ ವಿಜ್ಞಾನ ವಿಭಾಗ, ಆಹಾರ ವಿಜ್ಞಾನ ಮತ್ತು ಮಣ್ಣು ಹೀಗೆ ನಾನಾ ಮಳಿಗೆಗಳಲ್ಲಿರೈತರು ಮಾಹಿತಿ ಪಡೆದರು.
ರೈತ ಪ್ರಶಸ್ತಿ: ಕೃಷಿ ಮೇಳದ ಸಮಾರೋಪದಲ್ಲಿ ಹೊಸದಿಲ್ಲಿಯ ಐಸಿಎಆರ್ ಮಹಾ ನಿರ್ದೇಶಕ ಡಾ. ಸಂಜಯ್‌ಕುಮಾರ್ ಸಿಂಗ್ ಅವರಿಗೆ ರಾಜ್ಯ ಮಟ್ಟದ ‘ಡಾ. ಎಂ.ಎಚ್. ಮರೀಗೌಡ ರಾಷ್ಟ್ರೀಯ ದತ್ತಿ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ಪ್ರಶಸ್ತಿ’, ಬೆಂಗಳೂರು ಗ್ರಾಮಾಂತರ ಜಿಲ್ಲೆದೇವನಹಳ್ಳಿ ತಾಲೂಕು ಬೀಡಿಗಾನಹಳ್ಳಿಯ ರೈತ ಬಿ.ಆರ್. ಮಂಜುನಾಥ್ ಅವರಿಗೆ ‘ಡಾ. ಎಂ.ಎಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’ ಮತ್ತು ಮೈಸೂರು ಜಿಲ್ಲೆಎಚ್.ಡಿ. ಕೋಟೆ ತಾಲೂಕಿನ ರೈತ ಎಚ್.ಎಲ್. ಗೋವಿಂದಪ್ಪ ಅವರಿಗೆ ‘ಡಾ. ಆರ್. ದ್ವಾರಕೀನಾಥ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಎನ್. ಚಲುವರಾಯಸ್ವಾಮಿ, ”ಕೃಷಿಕರು ಕೇವಲ ಆಹಾರ ಉತ್ಪಾದಕರಲ್ಲ. ಅವರು ಉದ್ಯೋಗ ಸೃಷ್ಟಿಸುವ ಶಕ್ತಿಯುಳ್ಳವರು. ರೈತರಿಗಾಗಿ ಸರಕಾರ ಅನೇಕ ಹೊಸ ಯೋಜನೆಗಳನ್ನು ಕೈಗೊಂಡಿದೆ. ಈ ಕೃಷಿ ಮೇಳದಲ್ಲಿ ರೈತರು ತಮ್ಮ ನೂರಾರು ಅನುಮಾನಗಳಿಗೆ ವಿಜ್ಞಾನಿಗಳೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು ಕೃಷಿಮಾಡಬೇಕು ಎಂದು ಹೇಳಿದರು.





