ಹಳೆಯ ಕಾಲದ ಕಂದಾಚಾರದಂತೆ, ಮಗಳಿಗಿಂತ ಮಗನೇ ಬಲು ಮುಖ್ಯ ಎಂದು ಸುಜಾತಾ ವಿನೋದ್ತಮ್ಮ ಮಕ್ಕಳಲ್ಲಿ ಭೇದ ಭಾವ ತೋರಿದ್ದರು. ಮುಂದೆ ವಯಸ್ಸಾದ ಕಾಲಕ್ಕೆ ಇವರಿಗೆ ನಿಜವಾಗಿಯೂ ಆಸರೆಯಾಗಿ ನಿಂತವರು ಯಾರು…..?

ವಿನೋದ್‌ ದೊಡ್ಡ ಸಿಟಿಯಲ್ಲಿ ದೊಡ್ಡ ಬಿಸ್‌ ನೆಸ್‌ ಮ್ಯಾನ್‌. ವಿನೋದ್‌ ರ ಮಡದಿ ಸುಜಾತಾ ಗೃಹಿಣಿ. ವಿನೋದ್‌ ದಂಪತಿಗೆ ಆಯುಷ್‌ ಮತ್ತು ಅನೂಷಾ ಇಬ್ಬರು ಮಕ್ಕಳು.

ಆಯುಷ್‌ ಗಂಡು ಮಗ ಎಂಬ ಕಾರಣಕ್ಕಾಗಿ, ವಿನೋದ್‌ ಮತ್ತು ಸುಜಾತಾ ದಂಪತಿಗೆ ಅವನೆಂದರೆ ಅಚ್ಚುಮುಚ್ಚು. ಅವನು ಕೇಳುವ ಬಟ್ಟೆ, ಆಟಿಕೆಗಳನ್ನು ಅವನು ಕೇಳಿದ ಒಂದು ದಿನದೊಳಗೆ ಕೊಡಿಸುತ್ತಿದ್ದನು. ಇತ್ತೀಚೆಗೆ ಸ್ಕೂಟಿ ಬೇಕೆಂದು ಕೇಳಿದ್ದೇ ತಡ ಅದನ್ನೂ ಕೊಡಿಸಿದ್ದರು. ಆಯುಷ್‌ ಓದಿನಲ್ಲಿ ಸಾಧಾರಣ ಬುದ್ಧಿವಂತನಾಗಿದ್ದ ಅಷ್ಟೇ! ಮೊಬೈಲ್ ‌ಮತ್ತು ಸ್ನೇಹಿತರ ಜೊತೆ ಮೋಜು, ಮಸ್ತಿ. ಹಾಗಾಗಿ ಇತರ ವಿಷಯಗಳ ಬಗ್ಗೆ ಅವನಿಗೆ ಹೆಚ್ಚು ಆಸಕ್ತಿ ಇತ್ತು. ಆದರೆ ಮಗಳು ಅನೂಷಾ ವಿಷಯದಲ್ಲಿ ತಾಯಿ ತಂದೆ ಹೆಚ್ಚಿನ ಶಿಸ್ತು ಹೇರುತ್ತಿದ್ದರು. ಎಲ್ಲಾ ವಿಷಯಗಳ ಬಗ್ಗೆಯೂ ಅವಳಿಗೆ ನಿರ್ಬಂಧ, ಕಟ್ಟುಪಾಡುಗಳು. ಅವಳು ಜೀನ್ಸ್ ಪ್ಯಾಂಟ್‌, ಸ್ಲೀವ್ ಲೆಸ್‌ ತೊಡುವ ಹಾಗಿಲ್ಲ, ಸಂಜೆ 6 ಗಂಟೆಯ ನಂತರ ಸ್ನೇಹಿತರ ಮನೆಗಾಗಲಿ, ಹೊರಗೆ ಸುತ್ತಾಡಲಾಗಲಿ ಹೋಗುವಂತಿರಲಿಲ್ಲ. ಹೆಣ್ಣು ಮಗಳು ಮುಂದೆ ತಮ್ಮನ್ನು ಸಾಕುವುದಿಲ್ಲ, ಮದುವೆಯಾಗಿ ಯಾರದೋ ಮನೆ ಸೇರುವವಳು ಎಂಬ ಕಾರಣಕ್ಕಾಗಿ ತಾಯಿ ತಂದೆ ಅವಳಿಗೆ ಕೆಲವೇ ಕೆಲವು ಬಟ್ಟೆಗಳನ್ನು ಕೊಡಿಸುತ್ತಿದ್ದರು. ಅವಳ ಅಣ್ಣ ಉಪಯೋಗಿಸಿದ ಪಠ್ಯ ಪುಸ್ತಕಗಳು, ಪೆನ್ನು, ರಬ್ಬರ್‌, ಮೆಂಡರ್‌, ಆಟಿಕೆಗಳನ್ನೇ ಅನೂಷಾ ಉಪಯೋಗಿಸಬೇಕಿತ್ತು. ಪಠ್ಯಕ್ಕೆ ಸಂಬಂಧಿಸಿದ ಹೊಸ ವಸ್ತುಗಳು, ಆಟಿಕೆಗಳು ಅವಳ ಪಾಲಿಗೆ ಕನಸಷ್ಟೆ. ಮನೆಗೆ ತರುತ್ತಿದ್ದ ತಿಂಡಿ, ಹಣ್ಣು ಹಂಪಲುಗಳಲ್ಲಿ ಮಗ ಆಯುಷ್‌ ಗೆ ಸಿಂಹಪಾಲು. ಅನೂಷಾಳಿಗೆ ಸಣ್ಣ ಪಾಲು ಸಿಗುತ್ತಿತ್ತು. ಅವಳು ಹೆಣ್ಣೆಂಬ ಕಾರಣಕ್ಕೆ ಈ ತಾರತಮ್ಯ.

ಆಯುಷ್‌ ಪಿಯುಸಿಯಲ್ಲಿ ವಿಜ್ಞಾನ ಆಯ್ದುಕೊಂಡು, ದೊಡ್ಡ ಎಂಜಿನಿಯರ್‌ ಆಗಬೇಕು ಎನ್ನುವುದು ಅವನ ತಾಯಿ ತಂದೆಯ ಕನಸಾಗಿತ್ತು. ಹಾಗಾಗಿ ಹತ್ತನೇ ತರಗತಿಯ ನಂತರ, ಅವನನ್ನು ಕಾಲೇಜಿಗೆ ಸೇರಿಸುವಾಗ ವಿಜ್ಞಾನ ವಿಭಾಗಕ್ಕೆ ಸೇರಿಸಿದರು. ಆಯುಷ್‌ ಮೋಜು, ಮಜಾ, ಮಸ್ತಿ ಮಾಡುತ್ತಾ ದ್ವಿತೀಯ ಪಿಯುಸಿಯಲ್ಲಿ ಎರಡನೇ ದರ್ಜೆಯಲ್ಲಿ ಪಾಸು ಮಾಡಿದ. ವಿನೋದ್ ದಂಪತಿ ಮಗನನ್ನು ಪೇಮೆಂಟ್‌ ಸೀಟ್‌ ನಲ್ಲಿ ಎಂಜಿನಿಯರಿಂಗ್‌ ಗೆ ಸೇರಿಸಿದರು.

ಆಯುಷ್‌ ಗಿಂತ ಎರಡು ವರ್ಷ ಚಿಕ್ಕವಳಾದ ಅನೂಷಾ, ಕಾಲೇಜಿಗೆ ಸೇರುವಾಗ ವಿಜ್ಞಾನ ವಿಭಾಗಕ್ಕೆ ಸೇರಿ ಮುಂದೆ ಡಾಕ್ಟರ್ ಆಗಲು ಬಯಸಿದಳು. ಆದರೆ ತಾಯಿ ತಂದೆ ಅವಳನ್ನು ಕಾಮರ್ಸ್‌ ಗೆ ಸೇರಿಸಿದರು. ದ್ವಿತೀಯ ಪಿಯುಸಿಯಲ್ಲಿ ಅನೂಷಾ ಕಾಲೇಜಿಗೆ ಮೊದಲಿಗಳಾಗಿ ತೇರ್ಗಡೆ ಹೊಂದಿದಳು. ಬಿ.ಕಾಂ. ಅಂತಿಮ ವರ್ಷದಲ್ಲಿ ಕಾಲೇಜಿಗೆ ಎರಡನೆಯವಳಾಗಿ ಒಳ್ಳೆಯ ಅಂಕಗಳೊಂದಿಗೆ ಡಿಗ್ರಿ ಮುಗಿಸಿದಳು. ನಂತರ ಅವಳು ಸಿ.ಎ ಮಾಡಲು ಬಹಳ ಇಷ್ಟಪಟ್ಟಳು. ಆದರೆ ತಾಯಿ ತಂದೆಗೆ ಅನೂಷಾ ಹೆಣ್ಣು ಮಗಳು ಸುಮ್ಮನೆ ತಮ್ಮ ದುಡ್ಡು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಅವಳನ್ನು ಸಿ.ಎ. ಓದಿಸಲು ಒಪ್ಪಲೇ ಇಲ್ಲ. ತನ್ನ ತಾಯಿ, ತಂದೆ ತನ್ನನ್ನು ಸಿ.ಎ ಓದಿಸಲು ಒಪ್ಪಿಸುವಂತೆ ಅನೂಷಾ, ಕಾಲೇಜಿನ ತನ್ನ ನೆಚ್ಚಿನ ಉಪಾಧ್ಯಾಯಿನಿಯಾದ ಉಮಾರನ್ನು ಕೇಳಿಕೊಂಡಳು.

ಉಮಾರ ಒತ್ತಾಯಕ್ಕೆ ಮಣಿದು, ಅವರ ಮಾತಿಗೆ ಒಪ್ಪಿದ ವಿನೋದ್‌ ದಂಪತಿ ತಮ್ಮ ಮಗಳು ಅನೂಷಾಳನ್ನು ಸಿ.ಎ. ಓದಿಸಿದರು. ಅನೂಷಾ ತುಂಬಾ ಕಷ್ಟಕರವಾದ ಸಿ.ಎ. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗಿ ಒಳ್ಳೆಯ ಉದ್ಯೋಗಕ್ಕೆ ಸೇರಿ ಕೈತುಂಬಾ ಸಂಬಳ ಪಡೆಯ ತೊಡಗಿದಳು.

ಈ ಮಧ್ಯೆ ತಾಯಿ ಸುಜಾತಾರಿಗೆ ಕಣ್ಣಿನಲ್ಲಿ ಪೊರೆ ಬಂದಿದ್ದರಿಂದ ಆಪರೇಷನ್‌ ಮಾಡಿ ಪೊರೆ ತೆಗೆಯಬೇಕೆಂದು ಡಾಕ್ಟರ್ ಹೇಳಿದರು. ಆಯುಷ್‌ ಎಂಜನಿಯರಿಂಗ್‌ ಮುಗಿಸಿ, ಸಣ್ಣ ಉದ್ಯೋಗದಲ್ಲಿ ಇದ್ದುದರಿಂದ ಬರುತ್ತಿದ್ದ ಕಡಿಮೆ ಸಂಬಳ ಅವನ ಖರ್ಚಿಗೇ ಸರಿ ಹೋಗುತ್ತಿತ್ತು. ಅದರಿಂದ ಅವನು ತಾಯಿಯ ಆಪರೇಷನ್‌ ವಿಷಯದಲ್ಲಿ ತಲೆಕೆಡಿಸಿಕೊಳ್ಳಲಿಲ್ಲ. ತಾಯಿ ತಂದೆ ಇಬ್ಬರೂ ಅನೂಷಾಳ ಬಳಿ ಕಣ್ಣಿನ ಆಪರೇಷನ್‌ ಬಗ್ಗೆ ಹೇಳಿದರು. ಅದಕ್ಕೆ ಅನೂಷಾ ತಾನು ದುಡ್ಡು ಹೊಂದಿಸುವುದಾಗಿ ಹೇಳಿದಳು. ತನ್ನ ಸಂಬಳದ ದುಡ್ಡಿನಲ್ಲಿ ಸುಜಾತಾರ ಕಣ್ಣಿನ ಪೊರೆಯ ಆಪರೇಷನ್‌ ಮಾಡಿಸಿದಳು. ಮುಂದೆ ತನ್ನ ಉಳಿತಾಯದ ಹಣದಿಂದ ತಾಯಿ ತಂದೆಗೆ ಕಾರು ಕೊಡಿಸಿದಳು. ಜೊತೆಗೆ ಮನೆಯ ಖರ್ಚಿಗೆಂದು ಪ್ರತಿ ತಿಂಗಳು ಇಂತಿಷ್ಟು ಹಣವನ್ನು ತಾಯಿ ತಂದೆಗೆ ಕಳಿಸುತ್ತಿದ್ದಳು.

ವಿನೋದ್‌ ದಂಪತಿ ಮಕ್ಕಳಿಗೆ ತಾರತಮ್ಯ ಮಾಡಿ ಸಾಕಿ ಬೆಳೆಸಿದ್ದೆಲ್ಲವನ್ನೂ ತಿಳಿದಿದ್ದ ಲೆಕ್ಚರರ್‌ ಉಮಾ, ಒಮ್ಮೆ ವಿನೋದರ ಮನೆಗೆ ಉದ್ದೇಶಪೂರ್ವಕವಾಗಿ ಮಾತನಾಡಿಸಲೆಂದು ಬಂದಿದ್ದರು. ಉಮಾ ಮೇಡಂ, ವಿನೋದ್‌ ಮತ್ತು ಸುಜಾತಾರ ಬಳಿ, “ಆಯುಷ್‌ ಗಂಡು ಮಗ, ಮುಂದೆ ನಮ್ಮನ್ನು ಸಾಕುವವನು, ಅನೂಷಾ ಹೆಣ್ಣು ಮಗಳು, ಮುಂದೆ ಮದುವೆ ಆಗಿ ಬೇರೊಂದು ಮನೆ ಸೇರುವವಳು ಎಂದು ಎರಡು ಮಕ್ಕಳಲ್ಲೂ ತಾರತಮ್ಯ ಮಾಡಿ ಸಾಕಿ ಬೆಳೆಸಿದಿರಿ.

“ಆದರೆ ಇಂದು ಅನೂಷಾ ಚೆನ್ನಾಗಿ ಓದಿ, ನಿಮಗೆ ಒಳ್ಳೆಯ ಹೆಸರು ತಂದಿದ್ದಾಳೆ. ನಿಮ್ಮ ಕಣ್ಣಿನ ಆಪರೇಷನ್‌ ಮಾಡಿಸಿದ್ದಾಳೆ, ಓಡಾಡಲು ನಿಮಗೆ ಕಾರು ಕೊಡಿಸಿದ್ದಾಳೆ. ಜೊತೆಗೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಮನೆ ಖರ್ಚಿಗೆಂದು ಕಳಿಸುತ್ತಾಳೆ.  ಮಗಳು ಮಗ ಆಗಲಾರಳೇ…? ಖಂಡಿತವಾಗಿ ಮಗಳು ಮಗ ಆಗಬಲ್ಲಳು ಎಂಬುದನ್ನು ಅನೂಷಾ ಸಾಧಿಸಿ ತೋರಿಸಿದ್ದಾಳೆ.  ಇನ್ನು ಮುಂದಾದರೂ ಮಕ್ಕಳಿಬ್ಬರನ್ನು ಎರಡು ಕಣ್ಣುಗಳಂತೆ ಸಮಾನವಾಗಿ ನೋಡಿಕೊಳ್ಳಿ,” ಎಂದು ಬುದ್ಧಿ ಹೇಳಿದರು.

ಉಮಾರ ಮಾತಿಗೆ ವಿನೋದ್‌ ದಂಪತಿ, “ಹೌದು ಅನೂಷಾ ಮದುವೆ ಆಗಿ ಬೇರೆ ಮನೆಗೆ ಹೋಗುವವಳು, ಆಯುಷ್‌ ನಮ್ಮನ್ನು ಸಾಕುವವನು ಎಂದು ಮಕ್ಕಳಿಬ್ಬರಲ್ಲಿ ತಾರತಮ್ಯ ಮಾಡಿ ಸಾಕಿದೆವು. ಈಗ ನಮಗೆ ನಮ್ಮ ತಪ್ಪಿನ ಅರಿವಾಗಿದೆ. ನಮ್ಮ ತಪ್ಪನ್ನು ತಿದ್ದಿಕೊಳ್ಳುತ್ತೇವೆ, ಇನ್ನು ಮುಂದೆ ಇಬ್ಬರನ್ನೂ ಸಮಾನವಾಗಿ ನೋಡಿಕೊಳ್ಳುತ್ತೇವೆ,” ಎಂದು ಭರವಸೆ ನೀಡಿದರು.

ಉಮಾ ಹೊರಟು ಹೋದ ನಂತರ, ವಿನೋದ್‌ ಮತ್ತು ಸುಜಾತಾ ತಾವು ಮಾಡಿದ ತಪ್ಪಿಗೆ ಅನೂಷಾಳ ಬಳಿ ಕ್ಷಮೆ ಕೇಳಿದರು. ಮುಂದೆ ಮಕ್ಕಳಿಬ್ಬರನ್ನು ಸಮಾನವಾದ ಪ್ರೀತಿ, ಕಾಳಜಿ ತೋರಿಸುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ