ಪುರುಷ ಪ್ರಧಾನ ಸಮಾಜದಲ್ಲಿ ಇಂದು ಮಹಿಳೆ ತನ್ನ ಸಾಧನೆಗಳ ಮೂಲಕವೇ ಗಮನ ಸೆಳೆಯುತ್ತಿದ್ದಾಳೆ. ಒಂದಲ್ಲ ಎರಡಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಪ್ರಾಧಾನ್ಯತೆ ಅಚ್ಚೂತ್ತಿದೆ. `ತೊಟ್ಟಿಲನ್ನು ತೂಗುವ ಕೈ ಜಗವನ್ನೇ ಆಳಬಲ್ಲದು’ ಎಂಬುದಕ್ಕೆ ಇಂದಿರಾಗಾಂಧಿ ಸೇರಿದಂತೆ ಅನೇಕ ಧೀಮಂತರು ಸಾಧಿಸಿ ತೋರಿಸಿದ್ದಾರೆ. ಪುರುಷರಿಗೂ ಅಸಾಧ್ಯವಾದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧಿಸುತ್ತಿದ್ದಾರೆ.
ಇಂತಹ ಸಾಧಕಿಯರ ಪೈಕಿ ಬೆಂಗಳೂರಿನ ಜಯನಗರ ಮೂಲದ ಸ್ತ್ರೀರೋಗ ತಜ್ಞೆ ಡಾ. ಬಿ.ಆರ್. ಉಷಾ ಕೂಡ ಒಬ್ಬರಾಗಿದ್ದಾರೆ. ಬಂಜೆತನ ಮತ್ತು ಹೈರಿಸ್ಕ್ ಪ್ರೆಗ್ನೆನ್ಸಿಗೆ ಚಿಕಿತ್ಸೆ ನೀಡುವ ಉತ್ಸಾಹ ತೋರುತ್ತಿದ್ದಾರೆ. ತಮ್ಮ ವೃತ್ತಿಯನ್ನು ಅತಿಯಾಗಿ ಪ್ರೀತಿಸುತ್ತಾ ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ದುಡಿಯುತ್ತಾ ರೋಗಿಗಳಿಗೆ ಅಮ್ಮನಂತಹ ಪ್ರೀತಿ ತೋರುತ್ತಾ ಅವರನ್ನು ಶೀಘ್ರ ಗುಣಮುಖರನ್ನಾಗಿಸುವ, ಮಾತೃ ಹೃದಯಿಯಾಗಿದ್ದಾರೆ. ತನ್ನ ರೋಗಿಗಳಿಗೆ ಸುಲಭವಾಗಿ ಗರ್ಭಧಾರಣೆಯ ಮೂಲಕ ಆರೋಗ್ಯಪೂರ್ಣ ಮಗುವಿನೊಂದಿಗೆ ಮನೆಗೆ ತೆರಳುವುದನ್ನು ಉಷಾ ಬಯಸುತ್ತಾರೆ.
2000 ಇಸವಿಯಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಟಾಪರ್ ಆಗಿ ತೇರ್ಗಡೆಯಾದ ಉಷಾ, ತದನಂತರ ರಾಜ್ಯದಲ್ಲೇ ಪ್ರತಿಷ್ಠಿತವಾದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಇನ್ ಸ್ಟಿಟ್ಯೂಟ್ ನಲ್ಲಿ ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಇವರು ದೆಹಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಪ್ರವೇಶ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುತ್ತಾರೆ. ಅಲ್ಲಿ ಉಷಾ 3 ವರ್ಷಗಳ ಕಾಲ ಸೀನಿಯರ್ ರೆಸಿಡೆನ್ಸಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಬಿಎಂಸಿಆರ್ ನಿಂದ ಮೂಲ ಪ್ರಸೂತಿ ಶಾಸ್ತ್ರದಲ್ಲಿ ತರಬೇತಿ ಪಡೆದು ಎಐಐಎಂಎಸ್ ನಲ್ಲಿ ಹೈ ರಿಸ್ಕ್ ಪ್ರೆಗ್ನೆನ್ಸಿ, ಗೈನ್ ಲ್ಯಾಪ್ರೋಸ್ಕೋಪಿ, ಹಿಸ್ಟರೋಸ್ಕೋಪಿ ಹೀಗೆ ಅನೇಕ ವಿಷಯಗಳಲ್ಲಿ ಪಾಂಡಿತ್ಯ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಕೆಲವೇ ಕೆಲವು ಮಹಿಳಾ ಸ್ತ್ರೀರೋಗ ತಜ್ಞರಲ್ಲಿ ಡಾ. ಉಷಾ ಬಿ.ಆರ್. ಕೂಡ ಒಬ್ಬರು ಎನ್ನುವುದು ನಿಜವಾದ ಹೆಮ್ಮೆ. ಡಾ. ಉಷಾ ವಿವಿಧ ಲ್ಯಾಪ್ರೋಸ್ಕೋಪಿಕ್ ಮತ್ತು ಹಿಸ್ಟರೋಸ್ಕೋಪಿ ಕಾರ್ಯ ವಿಧಾನಗಳನ್ನು ಒಳಗೊಂಡಂತೆ ಒಂದು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿರುತ್ತಾರೆ.
ಲ್ಯಾಪ್ರೋಸ್ಕೋಪಿಕ್ (ದೊಡ್ಡ ಗರ್ಭಾಶಯ ಸೇರಿದಂತೆ), ಅಂಡಾಯಶದ ಸಿಸ್ಟೆಕ್ಟಮಿ, ಟ್ಯೂಬ್ ಕ್ಯಾನ್ಯುಲೇಷನ್, ಟ್ಯೂಬ್ ರೀಕ್ಯಾನೈಸೇಶನ್, ಹಿಸ್ಟರೋಸ್ಕೋಪಿಕ್ ಸೆಪ್ಟ್ ರೆಸೆಕ್ಟನ್, ಹಿಸ್ಟರೊಸ್ಕೋಪಿಕ್ ಮೈವೋಮೆಕ್ಟಮಿ ಮತ್ತು ಜಿನೋಮೆಕ್ಟಮಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿರುತ್ತಾರೆ. 2014ರಲ್ಲಿ ಬೆಂಗಳೂರಿಗೆ ಹಿಂದಿರುಗಿದ ಡಾ. ಉಷಾ, ಕೆಂಗೇರಿಯ ಬಿಬಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಸಲಹೆಗಾರರಾಗಿ ಸೇರಿಕೊಂಡರು. ನಂತರ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಪಡೆದರು. ಸದರಿ ಆಸ್ಪತ್ರೆಯಲ್ಲಿ ಎಂಎಟಿಇಆರ್ ಎನ್‌ಐಎ ಎಂಬ ಪ್ರಸೂತಿ ಬ್ರಾಂಡ್ ನ್ನು ಪ್ರಾರಂಭಿಸಿದರು ಮತ್ತು ಇಡೀ ವಿಭಾಗವನ್ನು ಸಜ್ಜುಗೊಳಿಸಿರುತ್ತಾರೆ.
ಡಾ. ಉಷಾ, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಸಹಯೋಗದಲ್ಲಿ ಒಬಿಜಿನ್ ಜೊತೆಗೆ ಸಲಹೆಗಾರರಾಗಿದ್ದಾರೆ. ಜೊತೆಗೆ ರೊಬೊಟಿಕ್ ಮತ್ತು ಲ್ಯಾಪ್ರೋಸ್ಕೋಪಿಕ್ ಸರ್ಜನ್ ಹಾಗೂ ಫರ್ಟಿಲಿಟಿ ಸಲಹೆಗಾರರೂ ಆಗಿರುತ್ತಾರೆ ಅಷ್ಟೇ ಅಲ್ಲದೇ, ಡಾ. ಉಷಾ ಸಂಶೋಧನಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ರೋಗಿಗಳ ರೋಗ ನಿವಾರಣೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೆಸಾ ಮೆಡಿಟೆಕ್ ಗೆ ಕ್ಲಿನಿಕ್ ಕನ್ಸಲ್ಟೆಂಟ್ ಮತ್ತು ಸಿಎಂಓ ಕೂಡ ಆಗಿರುವ ಅವರು ಫೈಬ್ರಾಯ್ಡ್ ಗಳ ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್ ಗಾಗಿ ಸಾಧನನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಸಾಧನಕ್ಕಾಗಿ ಅವರ ಹೆಸರಿನಲ್ಲಿ ಪೇಟೆಂಟ್ ಸಹ ಹೊಂದಿರುವುದು ವೈದ್ಯ ಲೋಕದ ಸಾಧನೆಗಳ ಪೈಕಿ ಪ್ರಮುಖ ಮೈಲಿಗಲ್ಲು ಎಂದೇ ಹೇಳಬಹುದು. ವೈದ್ಯರೆಂದರೆ ಬರಿ ಹಣ ಸುಲಿಯುವವರು ಎಂಬಂತಾಗಿರುವ ಕಾಲಘಟ್ಟದಲ್ಲಿ ಡಾ. ಉಷಾ ಅವರಂತಹ ನಿಸ್ಪೃಹಿ ವೈದ್ಯರು ವೈದ್ಯ ವೃತ್ತಿಗೆ ಕಳಸ ಪ್ರಾಯರೆಂದರೆ ತಪ್ಪಾಗಲಾರದು.
– ಪ್ರತಿನಿಧಿ





