`ಪುರುಷರ ಮುಂದೆ ಸ್ತ್ರೀ ಮಾಯೆ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ…..’ ಮಾತಿಗೆ ಹೆಣ್ಣುಮಕ್ಕಳು ಅಬಲೆಯರಾಗಿ ಎಷ್ಟು ಅಸಹಾಯಕರಾಗಿದ್ದಾರೋ, ಸಬಲೆಯರಾಗಿ ಗಂಡನ್ನು ಬಗ್ಗು ಬಡಿಯುವಲ್ಲೂ ಮುಂದಾಗಿದ್ದಾರೆ. ಹೆಣ್ಣಿನ ಹಕ್ಕುಗಳ ಹೋರಾಟಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸುಮಿತ್ರಾರ ಕುರಿತು ವಿವರವಾಗಿ ತಿಳಿಯೋಣವೇ……?

ಮಾರ್ಚ್‌ 8 ರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಒಂದು ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸುವುದರ ಹಿಂದೆ ಅನೇಕ ಮಹಿಳೆಯರ ತ್ಯಾಗ, ಬಲಿದಾನ ಹೋರಾಟದ ಕುರುಹುಗಳಿವೆ. ಅವರುಗಳು ಇಟ್ಟ ದಿಟ್ಟ ಹೆಜ್ಜೆಯ ಗುರುತುಗಳಿವೆ. ಪುರುಷ ಪ್ರಧಾನ ಸಮಾಜನದಲ್ಲಿ ಶತಶತಮಾನಗಳಿಂದಲೂ ಹೆಣ್ಣು ತನ್ನ ಹಕ್ಕು ಬಾಧ್ಯತೆಗಳಿಗಾಗಿ ಪುರುಷನೊಂದಿಗೆ ಸಮಾಜದೊಂದಿಗೆ ಸಂಘರ್ಷ ನಡೆಸುತ್ತಲೇ ಬಂದಿದ್ದಾಳೆ. ಅವಳು ಎದುರಿಸಿದ, ಎದುರಿಸುವ ಸವಾಲುಗಳು ಅನೇಕ. ಅವುಗಳಲ್ಲಿ ಲಿಂಗ ತಾರತಮ್ಯ ಅಸಮಾನತೆ (ಗ್ಲಾಸ್‌ ಸೀಲಿಂಗ್‌) ಪ್ರಮುಖವಾದ ಅಂಶಗಳು.

ಸ್ತ್ರೀ ಸಮಾನತೆಯ ಮತ್ತು ಅವಳ ಹಕ್ಕಿನ ಹೋರಾಟ ಕೇವಲ ನಮ್ಮ ದೇಶದ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ತಮ್ಮನ್ನು ತಾವು ಮುಂದುವರಿದ ದೇಶಗಳು ಎಂದು ಭುಜ ತಟ್ಟಿ ಹೇಳಿಕೊಳ್ಳುವ ಅನೇಕಾನೇಕ ದೇಶಗಳಲ್ಲಿಯ ದಿಟ್ಟ ಮಹಿಳೆಯರು ಕೂಡ ಪುರುಷರ ಅಹಂನ ವಿರುದ್ಧ, ಲಿಂಗ ತಾರತಮ್ಯದ ವಿರುದ್ಧ, ಗಂಡಿನ ದಬ್ಬಾಳಿಕೆಯ ವಿರುದ್ಧ  ತಮ್ಮ ಅಸ್ಮಿತೆಯ ಹಕ್ಕಿಗಾಗಿ ಪುರುಷರ ಮುಂದೆ ಎದೆ ಸೆಟಿಸಿ ನಿಂತು ಅಹರ್ನಿಶಿ ಬಡಿದಾಡಿದ್ದಾರೆ. ಕೆವಲ ಧೀರ ಮಹಿಳೆಯರಂತೂ ತಮ್ಮ ಬದುಕನ್ನು ಕೇವಲ ಮಹಿಳೆಯರ ಹಕ್ಕಿನ ಹೋರಾಟಕ್ಕೆ ಮುಡಿಪಾಗಿರಿಸಿ ನೆನಪಿನ ನಕ್ಷತ್ರಾಗಿ ಅಜರಾಮರರಾಗಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿ ಮುಂದಿನ ಪೀಳಿಗೆಯರ ದಾರಿ ಸುಗಮಾಗಿಸಿದ್ದಾರೆ. ಇಂದಿಗೂ ಅಂತಹ ಅನೇಕ ಮಹಿಳೆಯರ ಮತ್ತು ಅವರು ಮಾಡಿದ ಸಾಧನೆಗಳು, ಪಡೆದ ಕೀರ್ತಿಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅಂತಹ ಮಹಿಳೆಯರ ಸಾಹಸದ ಬದುಕಿನ ಒಂದು ಮೆಲುಕು ಮತ್ತು ಅಂತಹ ಮಹಿಳೆಯರ ಗೌರವ ಸೂಚಕವಾಗಿ ಈ ಮಹಿಳಾ ದಿನಾಚರಣೆ ಸಮರ್ಪಿತ. ಈ ಒಂದು ದಿನದ ಆಚರಣೆಯಿಂದ ಮಹಿಳೆಯರ ಬದುಕು ಸುರಕ್ಷಿತವಾಗಿದೆ ಎಂದು ಪರಿಗಣಿಸಬಹುದೇ? ಮತ್ತವರು ಕುಟುಂಬದಲ್ಲಾಗಲಿ, ಸಮಾಜದಲ್ಲಾಗಲಿ ನಿರ್ಭೀತಿಯ ಜೀವನ ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಜಿಜ್ಞಾಸೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಇಂದಿಗೂ ಮಹಿಳೆಯರು ತಮ್ಮ ಕುಟುಂಬ ಮತ್ತು ಸಮಾಜದಲ್ಲಾಗಲಿ ಸುರಕ್ಷಿತರಾಗಿಲ್ಲ ಎಂದು ಹೇಳಲು ಮನಸ್ಸಿಗೆ ನೋವಾಗುತ್ತದೆ. ಇವತ್ತಿಗೂ ಅವರು ತಮ್ಮ ಮೇಲಾಗುವ ಅನ್ಯಾಯ ಅತ್ಯಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುರಿಸುವಂತಾಗಿದೆ. ಇಂದಿಗೂ ಮಹಿಳೆಯರು ತಮ್ಮ ಕುಟುಂಬ, ಕೆಲಸ ಮಾಡುವ ಸ್ಥಳ, ಸಾರ್ವಜನಿಕ ಸ್ಥಳ ಮುಂತಾದ ಕಡೆಗಳಲ್ಲಿ ಅನ್ಯಾಯ ಅವಮಾನವನ್ನು ಸಹಿಸುತ್ತಿದ್ದಾರೆ. ಅತ್ಯಾಚಾರದಂಥ ಘೋರಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ.

IMG-20240212-WA0006

ಲಿಂಗ ಸಮಾನತೆಯ ಸಮಸ್ಯೆ

ಇಂದಿನ ದಿನಗಳಲ್ಲೂ ಕೂಡ ಅನೇಕ ಧೀಮಂತ ಮಹಿಳೆಯರು ಲಿಂಗ ಸಮಾನತೆಯ ಮತ್ತು ಹೆಣ್ಣಿನ ಮೇಲೆ ನಡೆಯುವ ಅನ್ಯಾಯ ದೌರ್ಜನ್ಯದ ವಿರುದ್ಧ ಹೋರಾಡಲು ತಮ್ಮ ಬದುಕನ್ನೇ ಮುಡುಪಾಗಿರಿಸಿದರು ಇಂದಿಗೂ ನಮ್ಮ ನಡುವೆ ಇದ್ದಾರೆ. ಇಂದಿನ ಸುಸಂದರ್ಭದಲ್ಲಿ ಒಂದು ಅಸಾಮಾನ್ಯ ಕುಟುಂಬದಿಂದ ಬಂದು ಅಸಾಮಾನ್ಯ ಸಾಧನೆಗೈದ ಒಬ್ಬ ಮಹಿಳೆಯ ಬಗ್ಗೆ ತಿಳಿಯೋಣ. ಅವರೇ `ರಾಷ್ಟ್ರೀಯ ಮಹಿಳಾ ಒಕ್ಕೂಟ’ದ ಪ್ರಧಾನ ಕಾರ್ಯದರ್ಶಿಯಾದ ಸುಮಿತ್ರಾ.

ಇವರು ತಮ್ಮ ಸ್ವಂತ ಹಿತಾಸಕ್ತಿಯನ್ನು ಮರೆತು ಕೇವಲ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಸಿದ ನೇರ ನಿಷ್ಠೂರ ದಿಟ್ಟ ನಡೆನುಡಿಯ ಭಗಿನಿ. ಇವರ ಕುರಿತು ಒಂದು ಇಣುಕು ನೋಟ. ಇವರ ಊರು ಕೊಡಗು ಜಿಲ್ಲೆಯ ನಾಪೋಕ್ಲು. ಆದರೆ ಇವರು ಹುಟ್ಟಿ ಬೆಳೆದು, ಓದಿದ್ದೆಲ್ಲಾ  ಬೆಂಗಳೂರಿನಲ್ಲಿ. ಹೆತ್ತವರ ನಾಲ್ಕು ಮಕ್ಕಳ ಪೈಕಿ ಇವರು ಎರಡನೆಯವರು. ತಂದೆ ಕೆ.ಎಂ. ಕರಂಬಯ್ಯ, ತಾಯಿ ಸೀತಮ್ಮ. ಇವರದು ವಿದ್ಯಾವಂತ ಹಾಗೂ ಸುಸಂಸ್ಕೃತ ಕುಟುಂಬ. ಇವರ ತಂದೆ ಕೆ.ಎಂ. ಕರಂಬಯ್ಯ ಆರ್ಮಿಯಲ್ಲಿ ಕಮಾಂಡಿಂಗ್‌ ಆಫೀಸರ್‌ ಆಗಿ ಸೇವೆ ಸಲ್ಲಿಸಿದ್ದು, ಎರಡನೇ ವಿಶ್ವ ಮಹಾಯುದ್ಧದಲ್ಲಿ ಭಾಗಹಿಸಿದ ಅವರು ತದನಂತರ ಸೇವೆಯಿಂದ ನಿವೃತ್ತಿ ಹೊಂದಿ ತಮ್ಮೂರಿಗೆ ಮರಳಿ ಬಂದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಾಯಿ ಸೀತಮ್ಮ ಅಂದಿನ ಕಾಲದಲ್ಲೇ ಪದವೀಧರೆ ಆಗಿದ್ದರು.

ತಾಯಿ ತಂದೆ ಯಾವ ಕೊರತೆಯೂ ಇಲ್ಲದಂತೆ ಮಕ್ಕಳನ್ನು ಬೆಳೆಸಿ, ದೊಡ್ಡವರನ್ನಾಗಿಸಿದ್ದಲ್ಲದೆ, ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಚಿಕ್ಕಂದಿನಲ್ಲೇ ಜೀವನದ ಉತ್ತಮ ಮೌಲ್ಯಗಳ ಅರಿವನ್ನು ಅವರಲ್ಲಿ ಮೂಡಿಸಿದರು. ಸತ್ಯ ನ್ಯಾಯ ನೀತಿ ಎಂಬ ಸನ್ಮಾರ್ಗದಲ್ಲಿ ನಡೆಯುವಂತೆ ಮತ್ತು ಸ್ವಾಭಿಮಾನದಿಂದ ಬದುಕುವ ಛಲವನ್ನು ತಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಸಿದರು.

ಸುಮಿತ್ರಾ ಎಕನಾಮಿಕ್ಸ್ ನಲ್ಲಿ ಎಂ.ಎ. ಮಾಡಿದರು. ಮುಂದೆ ಜನರಲ್ ಎಗ್ಸಾಮ್ ಬರೆದು ಕೆ.ಎಸ್‌.ಆರ್‌.ಟಿ.ಸಿ ಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದ ಇವರ ಬದುಕು ಇಲ್ಲಿಂದ ಬೇರೊಂದು ತಿರುವು ಪಡೆಯಿತೆಂದು ಹೇಳಬಹುದು. ಇವರ ಬದುಕಿನ ಈ ಘಟ್ಟವನ್ನು ಇವರ ಬಾಯಲ್ಲಿ ಕೇಳುವುದೇ ಹಿತಕರ.

ನೀವು ಕೈತುಂಬಾ ಸಂಬಳ ಸಿಗುವ ಒಂದೊಳ್ಳೆ ಹುದ್ದೆಯಲ್ಲಿದ್ದು ಎಲ್ಲರ ಹಾಗೆ ತಿಂಗಳ ಸಂಬಳ ಎಣಿಸುತ್ತಾ ಹಾಯಾಗಿ ನೆಮ್ಮದಿಯಿಂದ ಜೀವನ ಸಾಗಿಸುವುದನ್ನು ಬಿಟ್ಟು, ಹೆಣ್ಣುಮಕ್ಕಳ ಮೇಲೆ ಆಗುವ ಅನ್ಯಾಯದ ವಿರುದ್ಧ ಹೋರಾಡಬೇಕು, ನೊಂದ ಹೆಣ್ಣುಮಕ್ಕಳ ಪರ ನಿಲ್ಲಬೇಕು ಅಂತ ನಿಮಗೆ ಯಾಕೆ ಅನಿಸಿತು? ಮತ್ತು ಅದರ ಹಿಂದಿರುವ ಸ್ಛೂರ್ತಿ ಏನು ಹೇಳಿ? ನಾನೊಬ್ಬ ಆರ್ಮಿ ಆಫೀಸರ್‌ ಮಗಳು. ಚಿಕ್ಕಂದಿನಲ್ಲಿ ಹೆತ್ತವರು ನಮಗೆ ಶಿಸ್ತುಬದ್ಧ ಜೀವನ, ಸತ್ಯ ಮಾರ್ಗದಲ್ಲಿ ನಡೆಯಬೇಕು, ಸ್ವಾಭಿಮಾನದಿಂದ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟರು. ಕಣ್ಮುಂದೆ ಅನ್ಯಾಯ ನಡೆಯುತ್ತಿರುವಾಗ, ನೋಡಿಕೊಂಡು ಅದನ್ನು ಖಂಡಿಸದೆ ಸುಮ್ಮನೆ ಇರಲು ಹೇಗೆ ಸಾಧ್ಯ? ಬಹುಶಃ ಇದೇ ನನ್ನ ಹೋರಾಟಕ್ಕೆ ಪ್ರೇರಣೆ ಅಥವಾ ನಾಂದಿಯಾಯಿತು ಎಂದು ಹೇಳಬಹುದು.

ನಾನು ಕೆ.ಎಸ್‌.ಆರ್‌.ಟಿ.ಸಿ ಯಲ್ಲಿ ಕೆಲಸ ಮಾಡುವಾಗ, ಅಲ್ಲಿ ಕೆಲಸ ಮಾಡುವ ಮಹಿಳೆಯರು ಮೇಲಧಿಕಾರಿಗಳಿಂದ ತುಂಬಾ ಕಿರುಕುಳ ಅನುಭವಿಸಿ, ಶೋಷಣೆಗೆ ಒಳಗಾಗುವುದನ್ನು ನಾನು ನೋಡುತ್ತಿದ್ದೆ. ಇದು ನನ್ನೊಳಗಿನ ಕೆಚ್ಚನ್ನು ಬಡಿದೆಬ್ಬಿಸಿತು. ಒಬ್ಬ ಯೋಧನ ಮಗಳಲ್ಲಿರುವ ಕೆಚ್ಚು ಇದಾಗಿರಬಹುದಲ್ಲವೇ?

ನೊಂದ ಮಹಿಳೆಯರಿಗೆ ನಿಮ್ಮಿಂದ ಯಾವ ರೀತಿಯ ಸಹಾಯ, ಸಾಂತ್ವನ ದೊರುಕುತ್ತದೆ? ನಾನು ಕೆ.ಎಸ್‌.ಆರ್‌.ಟಿ.ಸಿ ಯಲ್ಲಿ ಕೆಲಸ ಮಾಡುತ್ತಿರುವಾಗ ಟ್ರೇಡ್‌ ಯೂನಿಯನ್‌ ನ ಸದ್ಯಸ್ಯಳಾಗಿ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಮುಂದೆ 89-90ರ ದಶಕದಲ್ಲಿ ಅದು `ಆಲ್ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಅಂತ ಹೇಳಿ ಅದು ಕಮ್ಯುನಿಸ್ಟ್ ಪಕ್ಷದ ಅಂಗವಾಗಿ ಕಾರ್ಮಿಕರ ಹಿಸಾಸಕ್ತಿ ಬಯಸುವ ಸಂಘ ಸ್ಥಾಪನೆಯಾಯಿತು. ಅಲ್ಲಿ ನಮಗೆ ಮಹಿಳೆಯರ ಮೇಲಾಗುವ ಅನ್ಯಾಯಗಳ ವಿರುದ್ಧ ಹೋರಾಡಲು ತುಂಬಾ ಸಹಾಯವಾಯಿತು. ಅಲ್ಲಿ ನಾವು ಅನೇಕ ಕಾರ್ಯಗಳನ್ನು ಕೈಗೊಂಡೆವು. ಅಂದಿನ ದಿನಗಳಲ್ಲಿ ಈ ಸಂಸ್ಥೆ ಅತ್ಯಂತ ಉಚ್ರಾಯ ಸ್ಥಿತಿಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಯೂನಿಯನ್ನಿನ ಒಳಗೆ ಸ್ವಾರ್ಥ ಹೆಚ್ಚಾಯ್ತು. ಜೊತೆಗೆ ರಾಜಕೀಯ ಪಕ್ಷಗಳು ಸಂಸ್ಥೆಯ ಒಳ ನುಸುಳಿದ. ಯಾವಾಗ ರಾಜಕೀಯ ಪಕ್ಷದ ಹಿತಾಸಕ್ತಿಯ ದಾಳಕ್ಕೆ ಯೂನಿಯನ್ನಿನ ನಾಯಕರು ಬಲಿಯಾದರೊ ಅಲ್ಲಿಂದ ಸಂಸ್ಥೆ ತನ್ನ ಮೋಡಿಯನ್ನು ಕಳೆದುಕೊಂಡು ಅಧಃಪತನಕ್ಕೆ ಈಡಾಯಿತು. ಆಗ ನಾನು ಸಂಸ್ಥೆಯಿಂದ ಹೊರ ನಡೆದೆ, ಎಂದು ವಿಷಾಧಿಸಿದ ಅವರು, ಅದೇ ಹೊತ್ತಿಗೆ ನನಗೆ ದೆಹಲಿಯ ಭಾರತದ ರಾಷ್ಟ್ರೀಯ ಮಹಿಳಾ ಆಯೋಗದಿಂದ ಒಂದು ಕೋರಿಕೆಯ ಕರೆ ಬಂತು. ಇದೊಂದು ಸ್ವಾತಂತ್ರ್ಯ ಪೂರ್ವ ಮಹಿಳಾ ಸಂಘಟನೆ. ಇದರ ಫೌಂಡರ್‌ ಅರುಣಾ ಅಸೀಫ್‌ ಅಲಿ ಎಂಬ ಮಹಿಳೆ.

IMG-20240212-WA0010

ಮಹಿಳಾ ಸ್ವಾತಂತ್ರ್ಯ ಹಕ್ಕುಗಳು

ಇವರು ಮಹಿಳೆಯರ ಸ್ವಾತಂತ್ರ್ಯ ಮತ್ತವರ ಹಕ್ಕು ಬಾಧ್ಯತೆಗಳಿಗಾಗಿ ಹೋರಾಟ ಮಾಡಿದಂತಹ ದಿಟ್ಟ ಮಹಿಳೆ. ಆಕೆ ತಮ್ಮ 18ನೇ ವಯಸ್ಸಿನಲ್ಲೇ ದೆಹಲಿಯ ಕೆಂಪು ಕೋಟೆಯ ಮೇಲೆ ಮೊಟ್ಟ ಮೊದಲಿಗೆ ಧ್ವಜವನ್ನು ಹಾರಿಸಿದ ಗಟ್ಟಿ ಗುಂಡಿಗೆ ಹೆಣ್ಣು. ಆದರೆ ವಿಷಾದನೀಯ ಸಂಗತಿ ಎಂದರೆ, `ಇತಿಹಾಸದಲ್ಲೂ ಆಕೆಯ ಹೆಸರು ಬರದಿರುವುದೇ ಮಹಿಳೆಯರ ಬಗೆಗಿರುವ ತಾರತಮ್ಯ ಎತ್ತಿ ತೋರಿಸುತ್ತದೆ,’ ಎಂದು ಬೇಸರದಿಂದ ನುಡಿದರು.

ಮುಂದೆ ನಾನು ಕರ್ನಾಟಕದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲ್ಪಟ್ಟೆ. ಜಿ.ಎಂ. ಜಯಶ್ರೀ ಎಂಬುವರು ಸಂಸ್ಥೆಯ ಅಧ್ಯಕ್ಷರು. ಅಲ್ಲಿಂದ ನನ್ನ ಜರ್ನಿ ಬೇರೆ ರೀತಿಯಲ್ಲಿ ದಿಕ್ಕು ಬದಲಿಸಿತು. 15 ವರ್ಷಗಳ ಕಾಲ ನಾನು ಒಕ್ಕೂಟದ ಒಳಿತಿಗಾಗಿ ಶ್ರಮಿಸಿದೆ. ಆದರೆ ದುರಾದೃಷಶಾತ್‌ ಇಲ್ಲಿಯೂ ರಾಜಕೀಯ ಒಳ ಸೇರಿತು. ಆಗ ಮತ್ತೆ ಅದರಿಂದ ನಾವು ಪ್ರತ್ಯೇಕಗೊಂಡು ` ಡೆಮಾಕ್ರೆಟಿಕ್‌ಫೆಡರೇಶನ್‌ ಆಫ್‌ ಇಂಡಿಯನ್‌ ವಿಮೆನ್‌,’ ಎಂದು ಮಾಡಿದೆ. ಮುಂದೆ ಇಲ್ಲಿ ನಮ್ಮದೇ ಆದಂತಹ ಸ್ವಂತ ಆಫೀಸ್‌ ತೆರೆದು ಕಳೆದ 15 ವರ್ಷಗಳಿಂದ ಬಡ ಹೆಣ್ಣುಮಕ್ಕಳು ಮತ್ತು ನೊಂದ ಮಹಿಳೆಯರ ನೋವು, ಅವರಿಗಾಗುವ ಅನ್ಯಾಯಗಳಿಗೆ ಸ್ಪಂದಿಸುತ್ತಿದ್ದೇವೆ. ಹಾಗೆಯೇ ಹೆಣ್ಣಿನಿಂದ ಶೋಷಿತರಾದ ಪುರುಷರಿಗೂ ನಮ್ಮ ಸಂಸ್ಥೆಯಿಂದ ಸಹಾಯ ಮಾಡುತ್ತೇವೆ. ನಮ್ಮ ಕರ್ನಾಟಕದಲ್ಲಿ ಮಹಿಳಾ ಆಯೋಗ ಎಂಬುದೇ ಇರಲಿಲ್ಲ. ಕರ್ನಾಟಕ ಸರ್ಕಾರ ಅದನ್ನು ಅಷ್ಟೊಂದು ಗಂಭೀರವಾಗಿ ಮಹತ್ವದ್ದಾಗಿ ಭಾವಿಸಿರಲೇ ಇಲ್ಲ. ಹೇಳಬೇಕೆಂದರೆ ಮೊದಲಿಗೆ ಅಲ್ಲಿಂದಲೇ ನಮ್ಮ ಹೋರಾಟ ಶುರುವಾಯಿತು. ನಂತರ ಕರ್ನಾಟಕದಲ್ಲಿ ನಮ್ಮದೇ ಸಂಘಟನೆಯನ್ನು ಹುಟ್ಟುಹಾಕಿದೆವು.

IMG-20240212-WA0009

ಹೊಸ ಸಂಘಟನೆಯ ಸ್ಥಾಪನೆ

ಹಿಂದೆಲ್ಲಾ ಸಣ್ಣ ಸಣ್ಣ ಅಂಗಡಿಗಳಲ್ಲಿ ಬೀಡಿ, ಸಿಗರೇಟು ಮಾರುತ್ತಿದ್ದರು. ಸಾಮಾನು ಕೊಳ್ಳಲು ಅಂಗಡಿಗೆ ಬರುವ ಹೆಂಗಸರಿಗೆ ಇರುಸು ಮುರುಸಾಗಿ ಇದರಿಂದ ತುಂಬಾ ತೊಂದರೆಯಾಗುತ್ತಿತ್ತು. ಮತ್ತೆ ಉಪಾಹಾರ ಗೃಹಗಳಲ್ಲಿ ಯಾವ ನಿರ್ಬಂಧವಿಲ್ಲದೆ ನಿರಾತಂಕವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಅದು ತುಂಬಾ ಕೆಟ್ಟದ್ದು. ಅಲ್ಲಿ ನಾವು ಅವಕ್ಕೆಲ್ಲ ನಿಷೇಧ ಹೇರುವಂತೆ ರೆವಿನ್ಯೂ ಇಲಾಖೆಯ ವಿರುದ್ಧ ಹೋರಾಡಿ ಅವುಗಳನ್ನೆಲ್ಲಾ ನಿಷೇಧಿಸುವಂತೆ ಮಾಡಿ, ಅದರಲ್ಲಿ ಯಶಸ್ಸು ಕಂಡಿದ್ದೇವೆ.

ಎಷ್ಟೋ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಾರೆ. ಅವರಿಗೆ ಪ್ರೈವೇಟ್‌ಸ್ಕೂಲಿನಲ್ಲಿ ಫೀಸು ತುಂಬು ತಾಕತ್ತಿರುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದು ಮಕ್ಕಳಿಗೆ 5ನೇ ತರಗತಿಯಿಂದ ಇಂಗ್ಲಿಷ್‌ ಭಾಷೆ ಕಲಿಸುತ್ತಾರೆ. ಐದನೇ ತರಗತಿಯಿಂದ ಮಕ್ಕಳು ಎಬಿಸಿಡಿ ಕಲಿಯುವಂತಾದಾಗ ಅಂತಹ ಮಕ್ಕಳು ಮುಂದೆ ಕಾಲೇಜಿನಲ್ಲಿ ಕಾನ್ವೆಂಟ್‌ ಸ್ಕೂಲು ‌ಗಳಲ್ಲಿ ಕಲಿತ ಮಕ್ಕಳ ಜೊತೆ ಸ್ಪರ್ಧೆಗೆ ಇಳಿಯಬೇಕಾಗುತ್ತದೆ.

ಅದೆಷ್ಟೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ ಕೂಡ ಸಹಜವಾಗಿ ಇಂಗ್ಲಿಷ್‌ ಬಾರದೆ ಅಂತಹ ಮಗು ಓದಿನಲ್ಲಿ ಹಿಂದುಳಿಯಬಹುದು ಅಥವಾ ಕೀಳರಿಮೆಯ ಭಾವದಿಂದ ಓದನ್ನೇ ನಿಲ್ಲಿಸಬಹುದು. ಆಗ ನಾವು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೂ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಭಾಷೆಯನ್ನು ಕಲಿಯುವಂತಾಗಲಿ ಎಂದು ಸರ್ಕಾರದ ವಿರುದ್ಧ ಧ್ವನಿ ಎತ್ತಿದೆ.  ವಿಷಾದವೆಂದರೆ, ಇಲ್ಲಿ ನಮ್ಮ ವಿರುದ್ಧ ಧ್ವನಿ ಎತ್ತುವ ಕಾರ್ಯ ನಡೆಯಿತು. ಆದರೂ ಎದೆಗುಂದದೆ ಮಕ್ಕಳ ಒಳಿತಿಗಾಗಿ ನಮ್ಮ ಹೋರಾಟವನ್ನು ಮುಂದುವರಿಸಿದೆ. ಆಗ ಸರ್ಕಾರ ನಮ್ಮ ಮನವಿಯನ್ನು ಮನ್ನಿಸಿ ಕನ್ನಡ ಮಾಧ್ಯಮದ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಕಲಿಸುವಂತೆ ಆದೇಶ ಹೊರಡಿಸಿತು.

IMG-20240212-WA0011

ಉದ್ಯೋಗ ಸ್ಥಳದಲ್ಲಿ ಕಿರುಕುಳ

ನಮ್ಮ ಸಂಸ್ಥೆಯ ವತಿಯಿಂದ ಉದ್ಯೋಗದಲ್ಲಿರುವ ಮಹಿಳೆಯರಾಗಲಿ, ಪುರುಷರಾಗಲಿ ತಮ್ಮ ಉದ್ಯೋಗ ಸ್ಥಳಗಳಲ್ಲಿ ಮೇಲಧಿಕಾರಿಗಳಿಂದ ತುಂಬಾ ಕಿರುಕುಳ ಅನುಭವಿಸುತ್ತಿದ್ದರು. ಅಂಥವರಿಗೆ ಅವರ ಪರವಾಗಿ ಇವರು ಕಾನೂನಿನ ಅರಿವು ಮೂಡಿಸಿ, ತಮ್ಮ ಮೇಲಾಗುವ ಶೋಷಣೆಯನ್ನು ತಡೆಗಟ್ಟುವುದು ಮತ್ತು ಅದರಿಂದ ಅವರು ಪಾರಾಗಲು ಕಾನೂನಿನ ನೆರವು ಪಡೆಯಲು ಸಹಾಯವಾಗುವ ಹಾಗೆ ನಾವು ಅನೇಕ ಕ್ಲಾಸೆಸ್‌ ಗಳನ್ನು ನಡೆಸಿ, ಅವರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ಇನ್ನು ಬಿ.ಎಂ.ಟಿ.ಸಿ ಯಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಹೋರಾಟ ನಡೆಸಿ ಅಲ್ಲಿ 30% ಮೀಸಲಾತಿ ಸಿಗುವಂತೆ ಮಾಡಿದೆವು. ಮಹಿಳೆಯರ ರಾತ್ರಿ ಪಾಳಿಯ ಉದ್ಯೋಗದದ ಬಗ್ಗೆಯೂ ನಾವು ಹೋರಾಟ ನಡೆಸಿದ್ದೇವೆ. ಒಬ್ಬ ಮಹಿಳೆ ತನ್ನ ಮನೆಯಲ್ಲೂ ದುಡಿಯಬೇಕು ಜೊತೆಗೆ 8 ಗಂಟೆಗಳ ಕಾಲ ಹೊರಗಡೆಯೂ ದುಡಿಯಬೇಕು. ಹಾಗಾದಾಗ ಆ ಮಹಿಳೆಯ ಮಾನಸಿಕ ಸ್ಥಿತಿ ಹೇಗಾಗಬೇಡ? ಇದು ಯೋಚಿಸುವಂಥದ್ದು. ಹೌದು, ನಾವು ಸಮಾನತೆ ಬೇಕೆಂದು ದನಿ ಎತ್ತುತ್ತೇವೆ ನಿಜ. ಆದರೆ ಸಮಾನತೆ ಎನ್ನುವುದು ಬರೀ ಉದ್ಯೋಗದಲ್ಲಿ ಮಾತ್ರ ಅಲ್ಲವಲ್ಲ? ಮನೆಯಲ್ಲೂ ಇರಬೇಕಾಗುತ್ತದೆ. ಆಕೆಗೆ ತನ್ನ ಮನೆ ಮಕ್ಕಳನ್ನು ನೋಡಿಕೊಳ್ಳುತ್ತಾ ಮತ್ತೆ 8 ಗಂಟೆಗಳ ಕಾಲ ಹೊರಗೆ ದುಡಿಯುವ ಕರ್ಮ. ದಿನದ 24 ಗಂಟೆಯೂ ಅವಳು ದುಡಿತದಲ್ಲಿಯೇ ಕಾಲ ಕಳೆಯುವಂತಾಗುತ್ತಿತ್ತು. ಗಾರ್ಮೆಂಟ್ಸ್ಗಳಲ್ಲಿ ದುಡಿಯುವ ಹೆಣ್ಣುಮಕ್ಕಳ ಸ್ಥಿತಿಯಂತೂ ಶೋಚನೀಯವಾಗಿತ್ತು. ಅಲ್ಲಿ ಅವರು 8-10 ಗಂಟೆಗಳ ಕಾಲ ದುಡಿಯುತ್ತಿದ್ದರು. ಅಲ್ಲಿ ದುಡಿಯುವ ಹೆಣ್ಣುಮಕ್ಕಳು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು. ತಿಂಗಳ ಮಾಸಿಕ ಸಮಯದಲ್ಲೂ ಮತ್ತು ಗರ್ಭಿಣಿಯಾಗಿದ್ದಾಗಲೂ ಸಹಿತ ಆಕೆ 8-10 ಗಂಟೆಗಳ ಕಾಲ ದುಡಿಯಬೇಕಿತ್ತು. ಅಲ್ಲದೆ, ಮೇಲಧಿಕಾರಿಗಳು ಆಡುವ ವ್ಯಂಗ್ಯದ ಮಾತುಗಳನ್ನು ಕೇಳಿ, ಸಹಿಸಿಕೊಂಡಿರಬೇಕಿತ್ತು.

IMG-20240212-WA0012 (1)

ಅನ್ಯಾಯದ ವಿರುದ್ಧ ಹೋರಾಟ

ಅಲ್ಲಿಯೂ ನಮ್ಮ  ಸಂಘಟನೆ ನಡುವೆ ಪ್ರವೇಶಿಸಿ ಅಲ್ಲಿನ ಹೆಣ್ಣುಮಕ್ಕಳಿಗೆ `ನಿಮ್ಮ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಸಹಿಸಿಕೊಂಡು ಸುಮ್ಮನಿರಬೇಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಿಮ್ಮ ಹಕ್ಕುಗಳನ್ನು ನೀವು ಪಡೆದುಕೊಳ್ಳಿ,’ ಎಂದು ಅವರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಿತು. ಮುಂದೆ ಗಾರ್ಮೆಂಟ್ಸ್ ಗಳಲ್ಲಿ ಸಾಕಷ್ಟು ಸುಧಾರಣೆಗಳಾದವು.

ಹಾಗೆಯೇ ಅನೇಕ ತಾಯಂದಿರು ತಮ್ಮ ಎಳೆಯ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಆ ಮಗು ತಾಯಿಯ ಎದೆ ಹಾಲಿನಿಂದ ವಂಚಿತವಾಗುತ್ತಿತ್ತು. ಅದನ್ನು ನಾವು ಗಂಭೀರವಾಗಿ ಪರಿಗಣಿಸಿ ಅಂತಹ ಸಂಸ್ಥೆಗಳ ವಿರುದ್ಧ ಹೋರಾಡಿ ಎಲ್ಲಾ ಉದ್ಯೋಗ ಸ್ಥಳಗಳಲ್ಲಿ 6 ತಿಂಗಳವರೆಗಿನ ಮಗುವಿಗೆ ತಾಯಿ ಹಾಲೂಡಿಸಲು ಒಂದು ಪ್ರತ್ಯೇಕ ಕೋಣೆ ಕಡ್ಡಾಯವಾಗಿ ಇರುವಂತೆ ಒತ್ತಾಯ ಹೇರಿ, ಅದು ಜಾರಿಯಾಗುವ ಹಾಗೆ ಮಾಡಿ ಹುಟ್ಟಿದ ಮಕ್ಕಳು ತಾಯಿಯ ಎದೆಹಾಲಿನಿಂದ ವಂಚಿತವಾಗುವುದನ್ನು ತಪ್ಪಿಸಿದ್ದೇವೆ. ಇಂದಿನ ಮಗುವೇ, ನಾಳಿನ ಪ್ರಜೆಯಲ್ಲವೇ? ಅವಕ್ಕೆ ಉತ್ತಮ ಬೆಳವಣಿಗೆಯ ಅವಶ್ಯಕತೆ ಇರುವುದಿಲ್ಲವೇ?

ಬ್ಯಾಂಕ್‌, ಸ್ಕೂಲ್ ‌ಮತ್ತು ಇತರ ಪ್ರೈವೇಟ್‌ ಕಂಪನಿಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ ಅಲ್ಲಿಯೇ ಕೆಲಸ ಮಾಡುವ ಕೆಲವು ಮಹಿಳೆಯರು ಮತ್ತು ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡಂತೆ ಕೆಲವು ಎನ್‌.ಜಿ.ಓ ಗಳನ್ನು ಸೇರಿಸಿ, `ದೂರು ನಿವಾರಣಾ ಸಮಿತಿ’ ಎಂಬ ಒಂದು ನಿಷ್ಪಕ್ಷ ಸಮಿತಿಯನ್ನು ರಚಿಸಿ, ಅದರ ಮೂಲಕ ನೊಂದ ಮಹಿಳೆ ಅಲ್ಲಿ ದೂರು ಸಲ್ಲಿಸಿ ತನಗಾದ ಅನ್ಯಾಯಕ್ಕೆ ನ್ಯಾಯ ಪಡೆಯಲು ಅನುಕೂಲವಾಗುವಂತೆ ಮಾಡುವಲ್ಲಿ ನಾವು ಯಶಸ್ವಿ ಆಗಿದ್ದೇವೆ.

ಸಂಘಟನೆಯ ಸಾಧನೆಗಳು

ಇವೆಲ್ಲ ನಮ್ಮ ಸಂಘಟನೆಯ ವತಿಯಿಂದ ಆದ ಮಹತ್ತರ ಸಾಧನೆಗಳು. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಈ ಭ್ರಷ್ಟಾಚಾರ, ಲಂಚಗುಳಿತನ ಹೋಗುವುದಿಲ್ಲವೇ ಅಲ್ಲಿಯವೆರೆಗ ಹೆಣ್ಣುಮಕ್ಕಳ ಮೇಲಿನ ಶೋಷಣೆ ಮತ್ತು ದೌರ್ಜನ್ಯ ನಿಲ್ಲುವುದಿಲ್ಲ. ಇದು ನನ್ನ ಅನುಭವ ಹೌದು, ಅನಿಸಿಕೆಯೂ ಹೌದು.

ನಮ್ಮ ದೇಶದಲ್ಲಿ ಅನಕ್ಷರಸ್ಥ ಮಹಿಳೆಯರ ಸಂಖ್ಯೆಯೇ ಅಧಿಕ. ಇಂಥವರು ಸುಲಭವಾಗಿ ಮೋಸ ಹೋಗುತ್ತಾರೆ. ನನ್ನ ಅನುಭವವನ್ನೇ ಹೇಳ್ತೀನಿ, ನಾನೊಬ್ಬ ಮಹಿಳಾ ಆಯೋಗದ ಪ್ರಧಾನ ಕಾರ್ಯದರ್ಶಿ ಎಂದು ಗೊತ್ತಿದ್ದರೂ ನಾನು ಧರಣಿಯೊಂದರಲ್ಲಿ ಭಾಗವಹಿಸಿದೆ ಎಂಬ ಕಾರಣಕ್ಕೆ ಮೇಲಧಿಕಾರಿಗಳು ನನ್ನ ಮೇಲೆ ಕೇಸ್‌ ಹಾಕಿದ್ದಲ್ಲದೆ, ನನಗೆ ಸಿಗುವ ಭತ್ಯೆಯನ್ನು ಕಳೆದ 18 ವರ್ಷಗಳಿಂದ ತಡೆಹಿಡಿದಿದ್ದೂ ಅಲ್ಲದೆ, ನನಗೆ ಪ್ರಮೋಷನ್‌ ಸಿಗದಂತೆ ಮಾಡುವಲ್ಲಿ ಮೇಲುಗೈ ಸಾಧಿಸಿದರು.

ನಾನು ಕಳೆದ 18 ವರ್ಷಗಳಿಂದ ಕೋರ್ಟಿನ ಮೆಟ್ಟಿಲು ಸತತ ತುಳಿದಿದ್ದರಿಂದ, ಇತ್ತೀಚೆಗಷ್ಟೇ ತೀರ್ಪು ನನ್ನ ಪರವಾಗಿ ಹೊರಬಿದ್ದಿದೆ. ಇಷ್ಟು ದೀರ್ಘ ಕಾಲದ ನಂತರ ಗೆಲವು ಸಾಧಿಸಿದ್ದೇನೆ. ನೋಡಿ, ನಾನೇನೋ ಆರ್ಥಿಕವಾಗಿ ಸಬಲಳಾಗಿದ್ದೆ. ಸರ್ಕಾರಿ ಹುದ್ದೆಯಲ್ಲಿದ್ದೆ, ನನಗೆ ತಿಂಗಳು ತಿಂಗಳು ಸಂಬಳ ಬರುತ್ತಿದ್ದಕ್ಕೆ ಸರಿಹೋಯ್ತು. ಆದರೆ ಬರೀ ತಮ್ಮ ದುಡಿಮೆಯನ್ನೇ ನಂಬಿದವರ ಪಾಡೇನು? ಅವರು ನನ್ನ ರೀತಿ ಇಷ್ಟು ದೀರ್ಘಗಳ ಕಾಲ ಹೋರಾಡಲು ಸಾಧ್ಯವೇ?

ಸಮಾಜದ ಜಾಳು ವ್ಯವಸ್ಥೆ

ನಮ್ಮಂಥ ಓದಿದ ಮತ್ತು ನಮ್ಮಲ್ಲಿ ನ್ಯಾಯ ಕೇಳಿಕೊಂಡು ಬರುವ ನಾಲ್ಕು ಜನರಿಗೆ ನ್ಯಾಯ ಒದಗಿಸುವ ಮತ್ತು ನ್ಯಾಯವಾಗಿ ಬದುಕುವಂತೆ ಬುದ್ಧಿ ಹೇಳುವ ಒಂದು ಜವಾಬ್ದಾರಿಯುತ ಕುರ್ಚಿಯಲ್ಲಿ ಕುಳಿತಂತಹ ನಮಗೇ ಈ ಜಾಳು ವ್ಯವಸ್ಥೆಯಿಂದ ಅನ್ಯಾಯ ಆಗುವಾಗ, ಇವನ್ನು ಸಾಮಾನ್ಯ ಜನರ ಮತ್ತು ನಮ್ಮ ದೇಶದ ಅನಕ್ಷರಸ್ಥ ಹೆಣ್ಣುಮಕ್ಕಳ ಪಾಡೇನು?

ಇಲ್ಲದೆ ನಮ್ಮ ಸಂಘಟನೆ ವತಿಯಿಂದ ನಾವು ಔದ್ಯೋಗಿಕವಾಗಿ, ಕೌಟುಂಬಿಕವಾಗಿ, ಉಚಿತವಾಗಿ ಕೌನ್ಸೆಲಿಂಗ್‌ ಮಾಡುತ್ತೇವೆ. ಇನ್ನು ಅದೆಷ್ಟೋ ವರದಕ್ಷಿಣೆ ಕಿರುಕುಳ, ಹತ್ಯೆಯಂತಹ ಕೇಸುಗಳು ನಮ್ಮಲ್ಲಿ ದಿನಿನತ್ಯ ಬರುತ್ತಿರುತ್ತವೆ. ಕೆಲವು ಕೇಸುಗಳನ್ನು ಕೇಳುತ್ತಿದ್ದರೆ, ಅದೆಷ್ಟು ಭಯಾನಕ ಎನಿಸುತ್ತದೆ ಎಂದರೆ, ಅಪ್ಪಾ…. ವಿವರಿಸಿ ಹೇಳೋಕೆ ಮನಸ್ಸಿಗೆ ನೋವು ಭಯ ಎರಡೂ ಒಟ್ಟೊಟ್ಟಿಗೆ ಆಗುತ್ತದೆ. ನಮ್ಮಲ್ಲಿ ಬರುವ ಎಲ್ಲಾ ವರದಕ್ಷಿಣೆ ಕೇಸುಗಳೂ ಸುಶಿಕ್ಷಿತರಿಂದಲೇ ನಡೆದಿರುವುದು ನಿಜಕ್ಕೂ ವಿಪರ್ಯಾಸ.

ವರದಕ್ಷಿಣೆ ಆಸೆಗಾಗಿ ಅದೆಷ್ಟು ಭಯಂಕರ ಮತ್ತು ಕ್ರೂರವಾಗಿ ಬೇರೆ ಮನೆಯ ಹೆಣ್ಣುಗಳನ್ನು ಗಂಡನ ಮನೆಯವರು ಸಾಯಿಸಬೇಕಾದರೆ ಅವರುಗಳು ಅದೆಷ್ಟು ಕ್ರೂರ ಮನಸ್ಸಿನವರಾಗಿರಬೇಕು? ಮುಂದೆ ವರದಕ್ಷಿಣೆಯ ಕಿರುಕುಳದ ವಿರುದ್ಧ ಅನೇಕ ಕಠಿಣ ಮತ್ತು ಮಹಿಳೆಯ ರಕ್ಷಣಾತ್ಮಕವಾಗಿ ಅನೇಕ ಕಾನೂನುಗಳು ಬಂದವು. ಮತ್ತೊಂದು ವಿಪರ್ಯಾಸವೆಂದರೆ, ಈಗ ಅದೇ ಕಾನೂನಿನ ದುರುಪಯೋಗವಾಗುತ್ತಿದೆ. ಮೊದಲಿಗೆ 10% ಇದ್ದ ಡೈವೋರ್ಸ್‌ ಕೇಸುಗಳು ಇದೀಗ 30%ಗೆ ಏರಿದೆ.

ಆಧುನಿಕ ದಂಪತಿಗಳ ಕಲಹ

ಮದುವೆಯಾದ ನವದಂಪತಿಗಳು ಸಣ್ಣ ಸಣ್ಣ ವಿಷಯಗಳಿಗೂ ಕೋರ್ಟ್‌ ಮೆಟ್ಟಿಲೇರಿ ಡೈವೋರ್ಸ್‌ ಪಡೆಯುತ್ತಿದ್ದಾರೆ. ಮದುವೆ ಎಂಬ ಶಬ್ದ ಪಾವಿತ್ರ್ಯ ಕಳೆದುಕೊಂಡು ಅರ್ಥವಿಹೀನವಾಗುತ್ತಿದೆ. ಹಿಂದೆ ಮನೆಯ ಯಜಮಾನ ಮಾತ್ರ ಹೊರಗೆ ದುಡಿಯುತ್ತಿದ್ದ, ಮನೆಯ ಹೆಣ್ಣುಮಕ್ಕಳು ಅವನ ದುಡಿತದ ಮೇಲೆ ಅವಲಂಬಿತರಾಗಿರುತ್ತಿದ್ದರು. ಮನೆಯೇ ಮಂತ್ರಾಲಯ ಎಂದು ಮನೆಯನ್ನು ದೇವಸ್ಥಾನಕ್ಕೆ ಹೋಲಿಸುತ್ತಿದ್ದರು. ಆದರೆ ಈಗ ಹಾಗಲ್ಲ, ಈಗ ಹೆಣ್ಣಿಗೂ ಓದಲು ದುಡಿಯಲು ವಿಪುಲ ಅವಕಾಶಗಳಿವೆ. ಇದು ತಪ್ಪಲ್ಲ, ವಿದ್ಯೆ ಕಲಿಯುವುದು ಎಲ್ಲರ ಹಕ್ಕು, ಕಲಿಯಲಿ. ಇಂದಿನ ತಾಯಿತಂದೆಯರು ಕೂಡ ತಮ್ಮ ಹೆಣ್ಣುಮಕ್ಕಳಿಗೆ ಸಪೋರ್ಟಿವ್ ಆಗಿ ನಿಲ್ಲುತ್ತಿದ್ದಾರೆ. ಇಂದು ಹೆಣ್ಣು, ಗಂಡಿಗೆ ಸರಿಸಮನವಾಗಿ ಹೊರಗಡೆ ದುಡಿಯುತ್ತಿದ್ದಾಳೆ. ಇದು ಉತ್ತಮ ಬೆಳವಣಿಗೆಯೂ ಹೌದು. ಆದರೆ ಪಾಶ್ಚಾತ್ಯೀಕರಣದ ಪ್ರಭಾವದಿಂದ ಇತ್ತೀಚಿನ ನವದಂಪತಿಗಳಲ್ಲಿ ಎಲ್ಲಾ ವಿಷಯಕ್ಕೂ ಜಗಳ, ಕದನ, ಮಾತಿಗೆ ಮುಂಚೆ ವಿಚ್ಛೇದನ ಮಾಮೂಲಿ ಆಗಿ ಹೋಗಿದೆ.

ಕಾನೂನು ಸಲಹೆಗಳು

ಸ್ವಲ್ಪ ವ್ಯತ್ಯಾಸವಾದರೂ ಇಂದಿನ ಆಧುನಿಕ ಪತ್ನಿ ಡೈವೋರ್ಸ್‌ ಗಾಗಿ ಕೋರ್ಟಿನ ಮೆಟ್ಟಿಲೇರುತ್ತಿದ್ದಾಳೆ. ಗಂಡು ತನ್ನ ಅಹಂನಿಂದ ಹೊರ ಬರುವುದಿಲ್ಲ, ಇದು ಅತ್ಯಂತ ಕಳವಳಕಾರಿ ವಿಷಯ. ಇದರಿಂದ ನಮ್ಮ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಭಾರತದ ಹಿಂದೂ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆ ಮತ್ತು ಮದುವೆ ಎಂಬ ಬಂಧನಕ್ಕೆ ಅತಿಯಾದ ಮಹತ್ವವಿದೆ. ಹಿಂದಿನ ಆ ಸಾಂಪ್ರದಾಯಿಕ ಮೌಲ್ಯಗಳು ಇಂದು ಖಂಡಿತ ಉಳಿದಿಲ್ಲ. ಅತಿಯಾದ ಸ್ವೇಚ್ಚಾಚಾರ ಇದಕ್ಕೆ ಕಾರಣ. ಕುಟುಂಬಗಳು ಒಡೆಯದಂತೆ ನೋಡಿಕೊಳ್ಳುವುದೇ ಮದುವೆಯ ತಳಹದಿ. ಇದನ್ನು ಅರಿತು ಪತಿ ಪತ್ನಿ ಇಬ್ಬರೂ ಸದಾ ಪರಸ್ಪರ ಸಹಕಾರ ಮನೋಭಾವದಿಂದ ನಡೆದುಕೊಳ್ಳಬೇಕು.

ಕಾನೂನನ್ನು ದುರುಪಯೋಗ ಪಡಿಸಿಕೊಂಡು, ಯಾವ ತಪ್ಪಿಲ್ಲದಿದ್ದರೂ ಹುಡುಗನನ್ನು ಹುಡುಗನ ಮನೆಯನ್ನು ಜೇಲಿಗೆ ಅಟ್ಟುವ ಅನೇಕ ಹುಡುಗಿಯರೂ ಇದ್ದಾರೆ! ಇಷ್ಟೆಲ್ಲಾ ಮುಂದುವರಿದಿದ್ದರೂ ಕೂಡ ಇಂದಿಗೂ ಹೆಣ್ಣುಕಮಕ್ಕಳು ಸುರಕ್ಷಿತರಾಗಿಲ್ಲ. ಅವರು ಧೈರ್ಯವನ್ನು ಮೈಗೂಡಿಸಿಕೊಂಡು ತಮ್ಮ ಮೇಲಾಗುವ ಅನ್ಯಾಯವನ್ನು ಧೈರ್ಯವಾಗಿ ಪ್ರತಿಭಟಿಸಲು ಕಲಿಯಬೇಕು. ಜೊತೆಗೆ ಕಾನೂನಿನ ಸಹಾಯವನ್ನು ಪಡೆಯಲು ಹಿಂಜರಿಯಬಾರದು. ತಾವೇ ಕೊರಗುವ ಬದಲು ಈ ರೀತಿ ಕಾನೂನಿನ ಸಹಾಯ ಪಡೆಯಬೇಕು. ನಮ್ಮ ಹೆಣ್ಣುಮಕ್ಕಳು ಹೆಚ್ಚಿನ ಆತ್ಮವಿಶ್ವಾಸದಿಂದ ಧೈರ್ಯವಾಗಿ ಮುಂದುವರಿಯುವುದನ್ನು ಕಲಿಯಬೇಕು, ಎಂದು ಅಭಿಪ್ರಾಯಪಡುತ್ತಾರೆ.

ಪದ್ಮಾ ಕುಲಕರ್ಣಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ