ಆಕಸ್ಮಿಕವಾಗಿ ಶಾಪಿಂಗ್ ಮಾಲ್ ನಲ್ಲಿ ಒಬ್ಬ ಆಕರ್ಷಕ ತರುಣನಿಗೆ ತನ್ನ ಮನ ತೆತ್ತ ಮನ್ವಿತಾ, ಎಷ್ಟು ದಿನಗಳಾದರೂ ಅವನನ್ನು ಮರೆಯಲಾರದೆ ಹೋದಳು. ಅವನದೇ ಗುಂಗಿನಲ್ಲಿ ಬೇಸರದಲ್ಲಿದ್ದ ಇವಳನ್ನು, ಅತ್ತೆ ರಾಜಶ್ರೀ ವಿಚಾರಿಸಿದಾಗ, ಹೆಚ್ಚಿಗೆ ಏನೂ ಹೇಳದಾದಳು. ಆಗ ಅತ್ತೆ ತಾನೇಕೆ ಒಂಟಿಯಾಗಿ ಉಳಿದಿದ್ದೇನೆ ಎಂಬ ದುಃಖವನ್ನು ವಿವರಿಸಿ ಅವಳೂ ತನ್ನಂತೆ ಆಗಬಾರದೆಂದು ಆಶಿಸಿದರು. ಮುಂದೆ ಮನ್ವಿತಾಳ ಭವಿಷ್ಯ ಯಾವ ಕಡೆ ತಿರುಗಿತು……?
ನನ್ನ ಅಜ್ಜಿ ಹೇಳುತ್ತಿದ್ದ ಏಳು ಸುತ್ತಿನ ಕೋಟೆಯೊಳಗಣ ರಾಜಕುಮಾರಿ, ಅವಳನ್ನು ವರಿಸಲು ಬರುವ ರಾಜಕುಮಾರ, ಆಂಗ್ಲರ ಸ್ನೋ ಲೈಟ್, ಸಿಂಡ್ರೆಲ್ಲಾ ಅಲ್ಲದೆ ನಾನು ನನ್ನ ಹರೆಯದಲ್ಲಿ ಓದಿದ್ದ ಆರ್ಚಿಸ್ ಬೆಟರ್ ದ್ಯಾನ್ ಮೂವೀಸ್ ವೀಕ್ಷಿಸುತ್ತಿದ್ದ ಹದಿ ಹರೆಯದರ ಶೋಗಳು ನನ್ನ ಮನದಾಳದಲ್ಲಿ ಇನ್ನೂ ಜೀವಂತವಾಗಿರುವುದಂತೂ ಸತ್ಯ.
ಅಂದಿನ ಆ ಮಧುರ ಸ್ಮೃತಿ ನನ್ನ ಅಂತರಾಳದಲ್ಲಿ ಹುದುಗಿದೆ. ಇದುವರೆವಿಗೂ ನನ್ನ ನೋಡಲು ಬಂದಿದ್ದ ಆ ಹುಡುಗರು ಯಾರೂ ನನ್ನ ಅಂತರಂಗವನ್ನು ಬಗೆದು ನೋಡುವ ಪ್ರಯತ್ನ ಮಾಡಿರಲೇ ಇಲ್ಲ. ಅವರೆಲ್ಲ ವಿಚಾರಿಸಿದ್ದು ಬರೇ ನನ್ನ ವಿದ್ಯಾಭ್ಯಾಸ. ನಾನು ಮಾಡುತ್ತಿರುವ ಕೆಲಸ, ಮುಂದಿನ ಗುರಿ. ಅವರೇನಾದರೂ ವಿದೇಶಕ್ಕೆ ಹೋದ ಪಕ್ಷದಲ್ಲಿ ನಾನು ಅಲ್ಲಿ ದುಡಿಯಬೇಕೆಂಬ ಕರಾರು. ಅಲ್ಲಿನ ಸಿಟಿಝನ್ ಶಿಪ್, ಅಲ್ಲಿ ಲಿವಿಂಗ್ ಸೆಲ್, ನನ್ನ ಹಾಬೀಸ್. ಬರೇ ಅಸಂಬದ್ಧ ಪ್ರಶ್ನೆಗಳು. ಒಂದು ಕ್ಷಣ ಥತ್ ಎನಿಸಿದ್ದರೂ ನಗುವಿನ ಮುಖವಾಡ ಧರಿಸಿ ಸುಮ್ಮನಿರಬೇಕಾದ್ದು ನನಗೆ ಅನಿವಾರ್ಯವೇ ಆಗಿತ್ತು. ನಾನೀಗ ಇಪ್ಪತ್ತೈದರ ತರುಣಿ. ಇದುವರೆವಿಗೂ ಪುಸ್ತಕ ಹಿಡಿದು ಬರೇ ಓದು…. ಓದು…. ಎಂದು ಎಲ್ಲರಿಂದ ಬುಕ್ ವರ್ವ್ ಎಂದು ಕರೆಯಿಸಿಕೊಂಡು ಕ್ಯಾಂಪಸ್ ಸೆಲಕ್ಷನ್ನಿನಲ್ಲಿ ಒಳ್ಳೆಯ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದೂ ಸತ್ಯವೇ. ಆದರೆ ಹಾಗೆಂದು ನನ್ನಲ್ಲಿ ಪ್ರೇಮದ ಭಾವನೆಗಳು ಇಲ್ಲಿಂದು ಅರ್ಥವಲ್ಲ. ನಾನೂ ಅನೇಕ ಕಾದಂಬರಿಗಳನ್ನೂ ಓದಿದ್ದೇನೆ. ರಾಧೆಯ ಪ್ರೀತಿ, ಕೃಷ್ಣನ ಪ್ರೇಮ, ರೋಮಿೂಯೋ ಜೂಲಿಯೇಟ್, ಹೀರ್ ರಾಂಜರಂತಹ ಅದೆಷ್ಟೋ ಪ್ರೇಮಕಥೆಗಳಲ್ಲಿ ನಾನೇ ನಾಯಕಿಯಾಗಿ ನನ್ನ ಕಲ್ಪನಾ ಲೋಕದಲ್ಲಿ ವಿಹರಿಸಿದ್ದುಂಟು.
ಆದರೆ ಇದನ್ನೆಲ್ಲ ನನ್ನ ಹೆತ್ತರಿಗೆ ಹೇಗೆ ತಿಳಿಸಲಿ? ಅವರ ದೃಷ್ಟಿಯಲ್ಲಿ ಬಂದಿದ್ದವರೆಲ್ಲರೂ ನನಗೆ ಸರಿ ಜೋಡಿ ಆಗುವಂಥವರೇ. ಆದರೇನು ಮಾಡಲಿ? ಇದೆಲ್ಲವನ್ನೂ ಬಿಟ್ಟು ಇನ್ನೊಂದು ಲೋಕವಿದೆ. ಅಲ್ಲಿ ನನ್ನ ನಾಯಕನಾಗಿ ವಿಹರಿಸಬಲ್ಲ ಯಾವ ಹುಡುಗನೂ ಸಿಕ್ಕಿಲ್ಲ. ಇದು ನನ್ನ ತಪ್ಪಲ್ಲವೆಂದು ಯಾರೂ ತಿಳಿಯುವುದೇ ಇಲ್ಲ. ಈ ನನ್ನ ಮನದ ಭಾವನೆಯನ್ನು ನನ್ನ ಗೆಳೆತಿಯರೊಡನೆ ಹಂಚಿಕೊಳ್ಳಲೂ ಯಾಕೋ ಮನಸ್ಸಾಗುತ್ತಿಲ್ಲ. ಅವರೆಲ್ಲಿ ನನ್ನನ್ನು ಗೇಲಿ ಮಾಡಿ ನಗುತ್ತಾರೋ ಎಂಬ ಭಯ. ಎಲ್ಲೋ ನನ್ನೊಳಗಿನಿಂದ ಕೇಳಿ ಬರುತ್ತಿರುವ ಆ ಧ್ವನಿ, ಅದು ಇತ್ತೀಚೆಗೆ ನನ್ನನ್ನು ಬಹಳವಾಗಿ ಕಾಡುತ್ತಿದೆ. ಹೌದು ಇದು ಅವನದೇ ಧ್ವನಿ.
ಓಹ್…. ನನ್ನ ಅವನ ಪರಿಚಯ, ಹೌದು ಅದು ಬರೇ ಐದು ಗಂಟೆಗಳ ಕಾಲದ್ದು. ಅವನಾರೋ ಏನೋ…. ಆದರೆ ಅವನು ಬಲು ಜಾಣ ಎನ್ನುವುದಂತೂ ಸತ್ಯ. ಅವನೊಂದಿಗೆ ಕಳೆದ ಐದು ಗಂಟೆಗಳ ಕಾಲದ ಭೇಟಿಯಲ್ಲಿ ತನ್ನ ಬಗ್ಗೆ ಏನೊಂದೂ ಹೇಳಿಕೊಂಡಿರಲಿಲ್ಲ. ನಮ್ಮ ನಂಬರ್ ಗಳ ವಿನಿಮಯವಾಗಲೀ ಯಾವುದೂ ಆಗಿರಲಿಲ್ಲ. ನಾನಾದರೂ ಏನು ಕಮ್ಮಿ? ನಾನೂ ನನ್ನ ಬಗ್ಗೆ ಏನೂ ಹೇಳಿರಲಿಲ್ಲ. ಹೌದು ಈಗ ಅನಿಸುತ್ತಿದೆ, ಕೊನೆಯ ಪಕ್ಷ ಅವನ ಮೊಬೈಲ್ ನಂಬರನ್ನಾದರೂ ಕೇಳಿ ತಿಳಿದುಕೊಳ್ಳಬಹುದಿತ್ತು. ಇದು ನನ್ನೊಬ್ಬಳ ಅನಿಸಿಕೆಯೋ ಅಥವಾ ಅವನಿಗೂ ಹಾಗೇ ಅನಿಸಿರಬರಹುದೇ? ಅದೆಷ್ಟು ಅನಿರೀಕ್ಷಿತ ನನ್ನ ಅವನ ಭೇಟಿ. ನಾನಂದು ಶಾಪಿಂಗೆಂದು ಮೀನಾಕ್ಷಿ ಮಾಲ್ ಗೆ ಹೋಗಬೇಕಿತ್ತು. ಜೊತೆಗೆ ಬರುತ್ತೇನೆ ಎಂದಿದ್ದ ರಜನಿ, ಅವಳಮ್ಮನಿಗೆ ಹುಷಾರು ತಪ್ಪಿದೆ ಎಂದು ಬರಲಾಗಿರಲಿಲ್ಲ.
ರಜನಿಗೆ ಒಳ್ಳೆಯ ಟೇಸ್ಟ್ ಜೊತೆಗೆ ಸೆಲೆಕ್ಷನ್ನಿನಲ್ಲೂ ಅವಳೇ ನನ್ನ ಗೈಡ್. ಈಗ ಅದು ಹೇಗೆ ಸೆಲೆಕ್ಟ್ ಮಾಡಲಿ? ಕೊನೆಯ ಪಕ್ಷ ಅಮ್ಮನನ್ನೋ ಅತ್ತೆಯನ್ನೋ ಕರೆತರಬೇಕಿತ್ತು ಎಂದುಕೊಳ್ಳುತ್ತಲೇ ಆರಿಸತೊಡಗಿದ್ದೆ. ಸರಿ ನಾನು ಒಂದೆರಡು ಮೂರು ಡ್ರೆಸ್ ಸೆಲೆಕ್ಟ್ ಮಾಡಿ, ಅದನ್ನು ವಾಟ್ಸ್ ಆ್ಯಪ್ ಮೂಲಕ ಅವಳಿಗೆ ಕಳಿಸಿ ಅವಳು ಒಪ್ಪಿದ್ದನ್ನೇ ಖರೀದಿಸೋಣವೆಂದೇ ಬೇಗ ಶಾಪಿಂಗ್ ಸೆಂಟರ್ ನ ಒಳಹೊಕ್ಕಿದ್ದೆ. ಅಲ್ಲಿಯ ಯಾವ ಡ್ರೆಸ್ ಗಳು ನನಗೆ ಸರಿಹೊಂದಬಹುದು. ಯಾವುದು ನನಗೆ ಚೆಂದ ಕಾಣಬಲ್ಲದೂ ಯಾವುದನ್ನು ಆರಿಸಲಿ ಎಂಬ ಜಿಜ್ಞಾಸೆಯಲ್ಲಿದ್ದಾಗಲೇ ಪಕ್ಕದಿಂದ ಅವನು ಕೆಣಕಿದ್ದ.
“ಮೇ ಐ ಹೆಲ್ಪ್ ಯೂ….?” ಅವನ ಅಧಿಕ ಪ್ರಸಂಗ ಸರಿಕಾಣದಿದ್ದರೂ, `ನೋ’ ಎನ್ನವಾಗದೆ ಮೌನವಾಗಿದ್ದಾಗ ಅದೇ ನನ್ನ ಸಮ್ಮತ ಎಂದುಕೊಂಡನೇನೋ ಅವನೇ ಮುಂದವರಿದು ನನಗಾಗಿ ಕೆಲವು ಡ್ರೆಸ್ ಗಳನ್ನು ಆಯ್ಕೆ ಮಾಡಿದ್ದ. ಎಲ್ಲವೂ ಒಂದಕ್ಕಿಂತ ಒಂದು ಚೆನ್ನ. ಬೆಲೆಯೂ ನನ್ನ ಬಜೆಟ್ ನೊಳಗೆ ಸರಿಹೊಂದಿತ್ತು. ಅವುಗಳನ್ನು ಖರೀದಿಸುವುದು ಎಂದುಕೊಂಡರೆ, ಒಮ್ಮೆ ಇವುಗಳನ್ನು ಧರಿಸಿ ನೋಡಿದ್ದರೆ ಚೆನ್ನಾಗಿತ್ತು ಎಂಬ ಪ್ರಶ್ನೆಯನ್ನೆಸೆದು ಎತ್ತಲೋ ನೋಡತೊಡಗಿದ್ದ. ಆ ಕ್ಷಣಕ್ಕೆ ಅವನ ಮಾತುಗಳಿಗೇ ನನ್ನೆದೆಯ ತಕ್ಕಡಿಯ ತೂಕ ಹೆಚ್ಚಿತ್ತು. ಅವುಗಳೊಡನೆ ಟ್ರಯಲ್ ರೂಮಿನತ್ತ ಧಾವಿಸಿದವಳನ್ನು ಮೌನವಾಗಿ ಹಿಂಬಾಲಿಸಿದ್ದ.

ನಾನಾದರೂ ಎಂಥವಳೆಂದು ಈಗಲೂ ನನ್ನನ್ನು ನಾನು ಹತ್ತು ಹಲವು ಬಾರಿ ಬಯ್ದುಕೊಂಡಿದ್ದುಂಟು. ಒಂದೊಂದನ್ನೂ ಧರಿಸಿ ಅವನೆದುರು ಪ್ರದರ್ಶನ ನಡೆಸಿದ್ದೆ. ಆಗಿನ ಮಟ್ಟಿಗೆ ಅವನು ನನಗೆ ಅಪರಿಚಿತ ಎನಿಸಿರಲೇ ಇಲ್ಲ. ಪ್ರತಿಯೊಂದು ಡ್ರೆಸ್ ಧರಿಸಿದಾಗಲೂ ಅವನ ಮುಖವೇ ಅವನೊಪ್ಪಿಗೆ ನನಗೆ ತಿಳಿಸಿಬಿಡುತ್ತಿತ್ತು. ಕೊನೆಗೆ ಅವನೇ ಮೆಚ್ಚಿದ ಮೂರು ಡ್ರೆಸ್ ಕೊಂಡಿದ್ದೆ. ನಾನು ಆ ಉಡುಪುಗಳನ್ನು ಧರಿಸುತ್ತಿರುವಾಗ ಅವನು ನನ್ನ ವ್ಯಾನಿಟಿ ಬ್ಯಾಗ್ ಜೊತೆಗೆ ಉಡುಪುಗಳ ಬ್ಯಾಗ್ ಎಲ್ಲವನ್ನೂ ಹಿಡಿದೇ ನಿಂತಿದ್ದ. ಅವನೇನಾದರೂ ನನ್ನ ಬ್ಯಾಗ್ ತೆರೆದು ನೋಡಿದ್ದರೇ ಎಂಬ ಅನುಮಾನ ನನಗಂತೂ ಕಾಡಿತ್ತು. ಇಂದೂ ಈಗಲೂ ಕಾಡುತ್ತಿದೆ.
ಆದರೆ ಅದಾಗಿ ಈಗಾಗಲೇ ಆರು ತಿಂಗಳಿಗಿಂತ ಹೆಚ್ಚೇ ಕಳೆದಿದೆ. ಹಾಗಿದ್ದ ಪಕ್ಷದಲ್ಲಿ ಅವನು ಒಮ್ಮೆಯಾದರೂ ನನ್ನನ್ನು ಸಂಪರ್ಕಿಸಬೇಕಿತ್ತು. ಆದರೆ ಹಾಗೇನೂ ಆಗದೆ ದಿನಗಳು ಉರುಳುತ್ತಲೇ ಇವೆ. ಹಾಗಿದ್ದಲ್ಲಿ ನನ್ನ ಮನಸ್ಸು ಅವನತ್ತ ವಾಲಿದ್ದಿರಬಹುದೇ…? ಈಗಲೂ ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಅವನು ಸೆಲೆಕ್ಟ್ ಮಾಡಿಕೊಟ್ಟಿದ್ದ ಆ ಡ್ರೆಸ್ ಗಳೂ ಈಗಲೂ ನನ್ನ ಫೇವರಿಟ್.
“ಸುಮ್ಮನಾದರೂ ನನಗೆ ಒಳ್ಳೆಯ ಟೇಸ್ಟಿದೆ ಅಂತೀಯಾ…. ನೀನೇ ನನಗಿಂತ ಚೆನ್ನಾಗಿ ಸೆಲೆಕ್ಟ್ ಮಾಡಿದ್ದೀಯ. ಅದರಲ್ಲೂ ನಿನಗೆ ಬಹಳ ಚೆನ್ನಾಗಿ ಸೂಟ್ ಆಗುವಂಥದ್ದನ್ನೇ ಸೆಲೆಕ್ಟ್ ಮಾಡಿದ್ದೀಯಾ,” ಎಂದಿದ್ದಳು ರಜನಿ.
ಈಗ ಅವನೆಲ್ಲಿದ್ದಾನೋ ಮನದಾಳದಿಂದ ತೂರಿ ಬಂದ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಮನದ ಮೆಲುಕು ನನ್ನ ಭಾವನೆಗಳಿಗೆ ತಡೆಯೊಡ್ಡಿ ಮುಂದುವರಿಯಲು ಪ್ರೇರೇಪಿಸಿತ್ತು. ಹ್ಞಾಂ, ಹೌದಲ್ಲೀ….. ಅಷ್ಟು ಒಳ್ಳೆಯ ಡ್ರೆಸ್ ಸೆಲೆಕ್ಟ್ ಮಾಡಿದ್ದಕ್ಕೇನೋ ನನ್ನ ಮನಸ್ಸು ಅವನ ಬಗ್ಗೆ ನಿರಾಳವಾಗಿತ್ತು. ಅದೇಕೋ ಇಬ್ಬರಿಗೂ ಪರಸ್ಪರ ಪರಿಚಯವೇ ಬೇಕೆನಿಸದೆ ಬೇರೇನೇನೋ ಮಾತನಾಡುತ್ತಾ ಎಲ್ಲಾ ಫ್ಲೋರ್ ಗಳನ್ನೂ ಸುತ್ತಿದ್ದೆ. ಇಬ್ಬರು ಅದೆಷ್ಟು ನಿರಾಳವಾಗಿದ್ದೆವೆಂದರೆ ಇಬ್ಬರೂ ಬಹಳ ಕಾಲದ ಸ್ನೇಹಿತರೇನೋ ಎನ್ನುವಂತಾಗಿದ್ದೆವು.
ಅವನು ಅಚಾನಕ್ಕಾಗಿ “ನಿನಗೆ ಸಮಯ ಇರುವುದಾದರೆ ನಾವು ಇನ್ನೊಂದಿಷ್ಟು ಹೊತ್ತು ಕಳೆಯಬಹುದೇ….?” ಎಂದು ಕೇಳಿದ.
ಅದಕ್ಕೆ ನನ್ನಿಂದ, “ಅಫ್ ಕೋರ್ಸ್,” ಎಂಬ ಉತ್ತರ ನನ್ನ ಹತೋಟಿ ಮೀರಿ ಆಚೆ ಬಂದಾಗಿತ್ತು. ಅವನು ತನಗಾಗಿ ಎರಡು ಶರ್ಟ್ ಗಳನ್ನು ಖರೀದಿಸುವಾಗ ನಾನೇ ಮುಂದಾಗಿ ಆರಿಸಿದ್ದೆ. ನಂತರ ಇಬ್ಬರೂ ಫುಡ್ ಕೋರ್ಟ್ ಹೊಕ್ಕೆವು. ಅವನು ಏನು ತಿಂದನೋ ನಾನೇನು ತಿಂದೆನೋ ಈಗೇಕೋ ಯಾವುದೂ ನೆನಪಾಗುತ್ತಿಲ್ಲ. ಆದರೆ ಅವನೊಂದಿಗೆ ಆಡಿದ ಎಲ್ಲಾ ಮಾತುಗಳೂ ನನ್ನ ಮಸ್ತಿಷ್ಕದಲ್ಲಿ ಸ್ಥಿರವಾಗಿ ಉಳಿದಿದೆ. ಇಬ್ಬರಲ್ಲೂ ಅದೆಷ್ಟೋ ಪ್ರಶ್ನೆಗಳು ಉದ್ಭವಿಸಿದ್ದವೇನೋ ಆದರೆ ನಾನೂ ಅವನನ್ನು ಅವನ ಕುಲಗೋತ್ರ ವಿಚಾರಿಸಿರಲಿಲ್ಲ. ಅವನೂ ಏನೊಂದನ್ನು ಕೇಳಲಿಲ್ಲ. ನಮ್ಮಿಬ್ಬರ ಸಂಭಾಷಣೆಗಳೆಲ್ಲ ಇಂಗ್ಲಿಷ್ ನಲ್ಲೇ ನಡೆದಿತ್ತು. ಮಾತುಗಳ ಮಧ್ಯೆಯೇ ನನ್ನನ್ನು ದಿಟ್ಟಿಸಿ ನೋಡಿದ ಅವನು, “ನಿನಗಾರೂ ಬಾಯ್ ಫ್ರೆಂಡ್ ಇರಲಿಕ್ಕಿಲ್ಲ ಅಲ್ಲವೇ…?” ಎಂದು ತಟ್ಟನೆ ಕೇಳಿಬಿಟ್ಟ.
ಅದಕ್ಕೆ ನಾನೂ ಸೋಲದೆ, “ಹೂ ಸೆಡ್…. ಈಗ ನೀನು ನನ್ನ ಬಾಯ್ ಫ್ರೆಂಡೇ ತಾನೇ….?” ಎಂದೆ.
“ಇದು ಸರಿಯಾಗಿದೆ. ಪ್ರಶ್ನೆಗೆ ಪ್ರಶ್ನೆ….” ಎಂದು ನಕ್ಕ ಅವನು ಪುನಃ, “ಐ ಮೀನ್ ಪ್ರೀತಿ ಪ್ರೇಮ…..?” ಎಂದು ಕೇಳಿದ.
ನಾನು ಸೋಲನ್ನು ಒಪ್ಪಿಕೊಳ್ಳದವಳಂತೆ, “ಯಾಕಿಲ್ಲ…..? ಐ ಲವ್ ಮೈ ಪೇರೆಂಟ್ಸ್, ಐ ಲವ್ ಮೈ ಜಾಬ್, ಐ ಲವ್ ಮ್ಯೂಸಿಕ್….” ಎಂದಿದ್ದೆ. ಅವನು ನನ್ನ ಎಲ್ಲಾ ಉತ್ತರಗಳಿಂದ ತೃಪ್ತನಾದವನಂತೆ ಕಂಡ.
“ನಮ್ಮಿಬ್ಬರಿಗೂ ನಮ್ಮ ಜೆಂಡರ್ಸ್ ಯಾವುದೆಂದು ತಿಳಿದಿದೆ. ಒಬ್ಬ ಹುಡುಗ ಒಬ್ಬಳು ಹುಡುಗಿಯ ಭೇಟಿಗೆ ಹೆಸರಿನ ಅವಶ್ಯಕತೆ ಇದೆಯೇ….?” ಎಂದು ಕೇಳಿದ ತಕ್ಷಣ, “ನೋ, ನೆಸೆಸಿಟಿ. ಎಂದಾದರೂ ಈ ಭೂಮಿ ತಿರುಗುತ್ತಿರುವಾಗ ಒಮ್ಮೆ ಭೇಟಿಯಾದರೆ ಮುಖ ಪರಿಚಯವಷ್ಟೇ ಸಾಕಾಗಬಹುದು. ನೀನು ಯಾವುದೋ ಹುಡುಕಾಟದಲ್ಲಿ ಇಲ್ಲಿಗೆ ಬಂದಿರಬಹುದೇ….? ಬಹುಶಃ ನಿನ್ನ ಜೊತೆಗಾತಿಗಾಗಿ…” ನಾನು ಮಧ್ಯದಲ್ಲೇ ಅವನನ್ನು ಕೇಳಿದೆ.
ಅವನು ಕೊಂಚ ಗಲಿಬಿಲಿಗೊಂಡನಂತೆ ಕಂಡರೂ, “ನಿನ್ನ ಪ್ರಶ್ನೆಗೆ ಉತ್ತರ ಹೌದು ಅಥವಾ ಇಲ್ಲ ಎರಡೂ ಆದೀತು….” ಎಂದು ಹೇಳಿದವನನ್ನು ನೋಡುತ್ತಲೇ ಇದ್ದಿ. ಅವನು ಒಮ್ಮೆಲೆ, “ಸೆಕ್ಸ್ ಬಗ್ಗೆ ನಿನ್ನ ಅಭಿಪ್ರಾಯ…..” ಕೇಳಿದ.
ಇದರಿಂದ ನನಗೆ ಸಂಕೋಚವಾದರೂ ತೋರಿಸದೆ, “ಅಭಿಪ್ರಾಯ ಹೇಗೆ ಹೇಳಲಾದೀತು….? ನನ್ನದಿರಲಿ ನಿನ್ನ ಮಾತೇನು….?”
“ಪ್ರಯತ್ನ ಒಮ್ಮೆ ನಡೆದಿತ್ತಾದರೂ ಸಫಲವಾಗಲಿಲ್ಲ,” ಎಂದವನು ಸಂಕೋಚದಿಂದಲೇ ಉತ್ತರಿಸಿದ.
“ನೋಡಿದ್ಯಾ….. ಅದೆಷ್ಟು ಬೇಗ ನಾವಿಬ್ಬರೂ ಸಂಕೋಚದ ಎಲ್ಲೆ ಮೀರಿದ್ದೇವೆ,” ಎಂದು ನಾನು ಹೇಳಿದಾಗ, “ಓಹ್… ನೀನು ಈಗ ನನ್ನ ಬೆಸ್ಟ್ ಫ್ರೆಂಡ್ ಆದಂತಾಯಿತು….!” ಎಂದ.
ಸಡನ್ನಾಗಿ ಗಡಿಯಾರ ನೋಡಿಕೊಂಡವನು ನನ್ನ ಅನುಮತಿ ಪಡೆಯದೆಯೇ ನನ್ನ ಕೈ ಹಿಡಿದು ಕುಲುಕುತ್ತಾ, “ಓ.ಕೆ. ಫ್ರೆಂಡ್ ಮತ್ತೆ ಸಿಗಬಹುದು ಅಥವಾ ಇಲ್ಲದಿರಲೂಬಹುದು ಬೈ….!” ಎಂದಾಗ ನನಗ್ಯಾಕೋ ಅವನೊಡನೆ ಇನ್ನೂ ಕೊಂಚ ಹೊತ್ತು ಕಳೆಯಬಹುದಿತ್ತೇನೋ ಎನಿಸಿದ್ದಂತೂ ಸುಳ್ಳಲ್ಲ.
ಆದರೆ ನಾನು ಹಾಗೆ ಹೇಳುವುದು ಸೌಮ್ಯವೆನಿಸದೆ ಅವನಿಗೆ ಬೈ ಹೇಳಿದ್ದೆ. ಅವನು ಹೋಗುತ್ತಿರುವುದನ್ನೇ ನೋಡುತ್ತಿದ್ದೆ. ಅವನು ಒಮ್ಮೆ ಹಿಂದಿರುಗಿ ನನ್ನನ್ನು ನೋಡಲಿ ಎಂಬುದು ನನ್ನ ಮನದಾಸೆ ಆಗಿತ್ತು. ಹಾಗೆ ಹೋಗುತ್ತಿದ್ದವನ ಬಳಿ ಕಾರೊಂದು ಬಂದು ನಿಂತಿತು. ಒಮ್ಮೆ ಹಿಂತಿರುಗಿ ನನ್ನತ್ತ ನೋಡಿದವನು ಮುಗುಳ್ನಕ್ಕು ಕೈಯಾಡಿಸಿ ಕಾರನ್ನೇರಿದ. ಬಹುಶಃ ಮೊದಲೇ ಕ್ಯಾಬ್ ಬುಕ್ ಮಾಡಿದ್ದನೇನೋ. ನನ್ನ ನಿರೀಕ್ಷೆಯನ್ನು ಮೀರಿ ನನ್ನೆದೆಯಾಳದಿಂದ ನಿಡಿದಾದ ನಿಟ್ಟುಸಿರು ಹೊರಬಂದಿತು. ಯಾಕೋ ಎಲ್ಲವನ್ನೂ ಕಳೆದುಕೊಂಡವಳಂತೆ ನಿರುತ್ಸಾಹದ ಹೆಜ್ಜೆಯಿಡುತ್ತಾ ನನ್ನ ಹೋಂಡಾ ಆಕ್ಟೀವಾದ ಬಳಿ ಬಂದೆ.
ಮನದ ಮೆಲುಕು ಹೀಗೆ ನನ್ನನ್ನು ಬಾರಿ ಬಾರಿ ಕಾಡಿತ್ತು. ಕೇಳಿದ್ದನ್ನೇ ಪುನಃ ಪುನಃ ನನ್ನಿಂದ ಕೇಳಿಸಿಕೊಂಡು ಖುಷಿಪಟ್ಟಿತ್ತು. ಆ ನಂತರದಲ್ಲಿ ನಾನು ಅದೆಷ್ಟೋ ಬಾರಿ ಅದೇ ಮಾಲ್ ಗೆ ಹೋಗಿದ್ದೆ. ಆಗೆಲ್ಲ ನನ್ನ ಕಣ್ಣುಗಳು ಅವನಿಗಾಗಿ ಹುಡುಕುತ್ತಿದ್ದುದಂತೂ ಸುಳ್ಳಲ್ಲ. ಅಷ್ಟರಲ್ಲಿ ನನಗಾಗಿ ಒಂದು ಕೈಯಲ್ಲಿ ಬಿಸಿ ಕಾಫಿ ಕಪ್ ಹಾಗೂ ಮತ್ತೊಂದು ಕೈಯಲ್ಲಿ ಬಿಸಿ ಮಾಡಿದ ಎಣ್ಣೆ ಬಟ್ಟಲಿನೊಂದಿಗೆ ಅತ್ತೆ ಪ್ರತ್ಯಕ್ಷವಾಗಿದ್ದರು.
“ಎಲ್ಲಿ ಕಳೆದುಹೋಗಿದ್ದಿಯೇ ನನ್ನ ಬಂಗಾರಿ….?” ಎಂದು ಕೇಳಿದರು. ನಾನೇದರೂ ಯೋಚನೆಯಲ್ಲಿ ಮುಳುಗಿದ್ದರೆ ಆಕೆ ನನ್ನನ್ನು ಎಚ್ಚರಿಸುತ್ತಿದ್ದುದೇ ಹಾಗೆ. ನನ್ನಿಂದ ಉತ್ತರ ಬೇಕಿಲ್ಲ ಎನ್ನುವಂತೆ ತಾನೇ ನನಗೊಂದು ಪ್ರಶ್ನೆ ಎಸೆದು ಕಾಫಿಯ ಬಟ್ಟಲು ನನ್ನ ಕೈಗಿತ್ತು ನಾನು ಕಾಫೀ ಹೀರುವುದನ್ನೇ ನೋಡತೊಡಗಿದರು.
ಇದ್ದಕ್ಕಿದ್ದಂತೆ ನನ್ನ ಮುಖವನ್ನು ತನ್ನತ್ತ ತಿರುಗಿಸಿಕೊಂಡರು ನನ್ನನ್ನೇ ದಿಟ್ಟಿಸಿ ನೋಡಿ, “ಮನ್ವೀ…. ನಿಜ ಹೇಳು. ನೀನ್ಯಾರನ್ನಾದರೂ ಪ್ರೀತಿಸುತ್ತಿರುವೆಯಾ…..?” ಎಂದು ಕೇಳಿದರು.
ಅತ್ತೆಯ ದಿಢೀರ್ ಪ್ರಶ್ನೆಗೆ ಒಮ್ಮೆಲೆ ತಡಬಡಿಸಿದ್ದೆ. ಆಕೆಯ ಪ್ರಶ್ನಿಗೆ ಅವರ ಕಣ್ತಪ್ಪಿಸುತ್ತಾ, “ಇಲ್ಲ ರಾಜತ್ತೆ…. ಅಂಥಾದ್ದೇನೂ ಇಲ್ಲ. ನೀನೇನೋ ಕಲ್ಪನೆ ಮಾಡಿಕೊಳ್ಳಬೇಡ!” ಎಂದೆ.
ಒಂದು ಕ್ಷಣ ನನ್ನನ್ನೇ ನೋಡಿ, “ಬೇಡ ಮನ್ವಿ…. ಹಾಗೇನಾದರೂ ಇದ್ದರೆ ಹೇಳಿಬಿಡು. ಅಣ್ಣ ಅತ್ತಿಗೇನ್ನ ನಾನು ಒಪ್ಪಿಸ್ತೀನಿ. ಹೀಗೆ ಮನದಲ್ಲೇ ಕೊರಗುತ್ತಾ ಅವನಿಗಾಗಿ ಚಡಪಡಿಸುತ್ತಾ ಕೊನೆಗೆ ಯಾರದೋ ಬಲವಂತಕ್ಕೆ ಮಣಿದು ನಿನ್ನ ಪ್ರೇಮವನ್ನು ನಿನ್ನ ಕೈಯ್ಯಾರೆ ನೀನೇ ಕೊಂದುಕೊಳ್ಳಬೇಡ,” ಎಂದರೆ ನನ್ನ ಗದ್ದ ಹಿಡಿದು ಮೇಲೆತ್ತಿ, “ಪುಟ್ಟಿ ಹೋಗಲಿ. ನೀನು ಅವನನ್ನು ಪ್ರೀತಿಸ್ತಿದ್ದೀಯೋ ಅಥವಾ ಇಬ್ಬರೂ ಪ್ರೀತಿಸಿದ್ದೀರೋ…?” ಗಂಭೀರವಾಗಿ ಕೇಳಿದಾಗ, ನನಗೇನು ಹೇಳಲು ತಿಳಿದಿತ್ತು….? ಈ ನಮ್ಮ ಭೇಟಿಯನ್ನು ಪ್ರೀತಿ ಎನ್ನಲಾದೀತೇ…? ನಾನು ಅವನನ್ನು ಪ್ರೀತಿಸುತ್ತಿರುವುದು ನನಗೇ ಕನ್ಛರ್ಮ್ ಆಗಿಲ್ಲ ಅಂದ ಮೇಲೆ ನಾನೇನು ತಾನೇ ಹೇಳಬಲ್ಲವಳಾಗಿದ್ದೆ?
“ಖಂಡಿತವಾಗಿಯೂ ಇಲ್ಲ ರಾಜತ್ತೆ. ಹಾಗೇನಾದರೂ ಇದ್ದಿದ್ದರೆ ನಾನು ನಿನ್ನ ಬಳಿ ಹೇಳದೇ ಇರುತ್ತಿದ್ದೆನೇ…. ಆಫೀಸ್ ಕೊಲೀಗ್ಸ್ ಬಗ್ಗೆ ನಿನಗೆಲ್ಲಾ ಹೇಳೇ ಇದ್ದೀನಿ. ಇಂಥ ವಿಚಾರ ಹೇಳ್ದೆ ಇರುತಿದ್ನಾ……?” ಎಂದೆ.
“ಸರಿ ಇತ್ತ ಕಡೆ ತಿರುಗು ಎಣ್ಣೆ ಹಚ್ತೀನಿ…..” ಎಂದರು, “ಆದರೆ ಮನು, ನನಗ್ಯಾಕೋ ನಿನ್ನ ಮುಖ ನೋಡಿ ಹಾಗೆನ್ನಿಸ್ತಿದೆ. ನೀನೇನೋ ನನ್ನಿಂದ ಮುಚ್ಚಿಡ್ತಿದ್ದೀಯಾಂತ….? ಹೋಗ್ಲಿ ನಿಂದು ನನ್ನ ಥರ ಒನ್ ವೇ ಲವ್ ಸ್ಟೋರಿನಾ….?” ಎಂದಾಗ ಸರಕ್ಕನೆ ಅವಳತ್ತ ತಿರುಗಿದ ನಾನು, “ಏನಂದೆ ಏನಂದೆ…. ಇನ್ನೊಂದ್ಸಾರಿ ಹೇಳು….?” ಎಂದಾಗಲೇ ಆಕೆಗೆ ತಮ್ಮ ತಪ್ಪಿನ ಅರಿವಾಗಿತ್ತು.
ಎಂದೂ ಯಾರೊಂದಿಗೂ ತನ್ನ ಮನದ ಭಾವನೆಗಳನ್ನು ಪ್ರಕಟಿಸದೆ ಗಂಭೀರವಾಗಿದ್ದ ಆಕೆ ಇಂದು ಬಹಳ ಸಹಜವಾಗಿ ಮನದಾಳದ ನಿಜ ನುಡಿದಿದ್ದರು. ನನ್ನ ಚಿತ್ತಪಟದಲ್ಲಾಗಲೇ ಅಂದಿನ ಆ ದಿನಗಳ ನೆನಪು ಸುರುಳಿಯಾಗಿ ಬಿಚ್ಚಿಕೊಳ್ಳತೊಡಗಿತ್ತು. ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ಅತ್ತೆ ಇಪ್ಪತ್ನಾಲ್ಕರ ತರುಣಿ. ಆಗಷ್ಟೇ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದಳು. ಆಗ ಅವಳಿಗಾಗಿ ಅದೆಷ್ಟೊಂದು ಸಂಬಂಧಗಳು ಬಂದಿದ್ದರೂ ಅವಳು ಯಾಕೋ ಏನೋ ಯಾರನ್ನೂ ಮದುವೆಯಾಗಲು ಆಸೆ ಪಡಲೇ ಇಲ್ಲ. ಬಂದ ವರಗಳನ್ನೆಲ್ಲಾ ಏನೋ ಒಂದು ಕಾರಣ ಹೇಳಿ ತಿರಸ್ಕರಿಸುತ್ತಿದ್ದರು. ಮನೆಯವರ ಬೇಡಿಕೆಗೂ ಆಕೆ ಬಗ್ಗಿರಲೇ ಇಲ್ಲ. ಎಲ್ಲರಿಗೂ ಹೇಳೀ ಹೇಳೀ ಸಾಕಾಗಿ ಏನಾದರೂ ಮಾಡಿಕೋ ಎಂದರೂ ಅವರಿಗಾಗಿ ವರಾನ್ವೇಷಣೆ ನಡೆದೇ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ಮನೆಗೆ ಬಂದವರೇ ರೂಮಿನ ಒಳ ಹೊಕ್ಕರು ಯಾರೆಷ್ಟೇ ಕರೆದರೂ ಬಾಗಿಲು ತೆರೆಯದೆ ಸತಾಯಿಸಿದರು. ಮರುದಿನ ಏನೂ ನಡೆದೇ ಇಲ್ಲವೇನೋ ಎಂಬಂತೆ ನಡೆದುಕೊಂಡಿದ್ದರು. ಎರಡು ದಿನ ರಜೆ ಹಾಕಿ ಮನೆಯಲ್ಲಿದ್ದ ಆಕೆ ತನ್ನ ವಾರ್ಡ್ ರೋಬ್ ನ್ನು ಕ್ಲೀನ್ ಮಾಡಿ ಬಣ್ಣ ಬಣ್ಣದ ಹೂವಿನ ಚಿತ್ರಗಳ ಎಲ್ಲಾ ಸೀರೆಗಳನ್ನೂ ಅತ್ತಿಗೆಯ ಮುಂದೆ ತಂದು ಸುರಿದಿದ್ದರು. ತನ್ನನ್ನು ಯಾರೂ ಏನೂ ಕೇಳಬಾರದು, ಇಲ್ಲದಿದ್ದರೆ ತಾನು ಯಾವುದಾದರೂ ಆಶ್ರಮ ಸೇರಿಕೊಳ್ಳುತ್ತೇನೆ ಎಂದ ಅವರ ಖಡಾ ಖಂಡಿತದ ಮಾತುಗಳಿಗೆ ಬೆದರಿ ಸುಮ್ಮನಾಗಿದ್ದರು. ಅಜ್ಜಿಯ ಅಳು ಕೂಡ ಆಕೆಯ ನಿರ್ಧಾರವನ್ನು ಬದಲಿಸಲಾಗಲೇ ಇಲ್ಲ.

ಯಾರೆಷ್ಟೇ ಕೇಳಿದರೂ ಅವರ ಆ ಬದಲಾವಣೆಗೆ ಕಾರಣವನ್ನೇ ಹೇಳಿರಲಿಲ್ಲ. ದಿನಗಳು ಉರುಳಿದಂತೆಲ್ಲಾ ಅವರ ಸನ್ಯಾಸ ಜೀವನ ಗಟ್ಟಿಯಾಗುತ್ತಲೇ ಹೋಗಿತ್ತು. ಇಂದಿನ ಈ ಯುಗದಲ್ಲಿ ಸ್ವಾಮೀಜಿಗಳಾಗಿ ಸನ್ಯಾಸ ಸ್ವೀಕರಿಸಿದವರು ಸಹ ತಮ್ಮ ಜೀವನದಲ್ಲಿ ಅದೆಷ್ಟೋ ಬದಲಾವಣೆ ತಂದುಕೊಂಡಿದ್ದರೂ ಅತ್ತೆ ಮಾತ್ರ ಅವರದೇ ಗುರಿಯಲ್ಲಿ ಸಾಗಿದ್ದರು. ಹಾಗೆಂದು ಅವರು ತಮಾಷೆ ಮಾಡುವುದಾಗಲೀ ಎಲ್ಲರೊಂದಿಗೆ ಬೆರೆಯುವುದಾಗಲಿ ಮಾಡುತ್ತಿರಲಿಲ್ಲ ಎಂದೇನಿಲ್ಲ.
ಅನಾಥಾಶ್ರಮದ ಮಕ್ಕಳ ವೃದ್ಧರ ಸೇವೆ ಮಾಡಲು, ತನ್ನ ಸಂಬಳದ ಒಂದು ಭಾಗವನ್ನು ಆಕೆ ಅಲ್ಲಿಗೆ ದಾನ ಮಾಡಿಬಿಡುತ್ತಿದ್ದರು. ಆದರೆ ಅವರು ನನ್ನನ್ನು ಮಾತ್ರ ಬಹಳವಾಗಿ ಅಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರ ಕೊರಗಿನಲ್ಲೇ ಅಜ್ಜಿ ತೀರಿಕೊಂಡಗಾಲೂ ಅವರು ಮೌನವಾಗೇ ಇದ್ದರು. ಅಪ್ಪ ಆಕೆಯನ್ನು ನನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಯಾವುದೇ ಕೆಲಸಕ್ಕೂ ಅಮ್ಮನಿಂದಾಗಲೀ, ಅಪ್ಪನಿಂದಾಗಲೀ ವಿರೋಧವಿರಲಿಲ್ಲ. ನಾನೂ ಅವರೂ ಒಂದೇ ಕೋಣೆ ಶೇರ್ ಮಾಡಿಕೊಂಡಿದ್ದೆ. ಅಜ್ಜಿ ಗತಿಸಿದ ನಂತರ ಆಕೆ ಆ ಕೋಣೆಗೆ ವರ್ಗಾವಣೆ ಮಾಡಿಕೊಂಡಿದ್ದರು. ವರುಷಗಳು ಉರುಳಿದಂತೆ ಅವರಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.
ಮೊದ ಮೊದಲು ಅವರನ್ನು ಯಾಕೆ ಮದುವೆ ಆಗುವುದಿಲ್ಲ ಎಂಬ ಕಾರಣ ತಿಳಿಯುವ ಪ್ರಯತ್ನವನ್ನೂ ಪರಿಚಿತರೂ, ಬಂಧು ಬಳಗದವರೂ ಮಾಡಿದ್ದರೂ ಕ್ರಮೇಣ ಆಕೆಯಿಂದ ಯಾವುದೇ ಉತ್ತರ ಸಿಗುವುದಿಲ್ಲ ಎಂಬ ಅರಿವಾಗತೊಡಗಿದಾಗ ಅವರ ಮೌನವನ್ನು ಒಡೆಯಲಾಗದೆ ಹೋದಾಗ ಯಾರೂ ಆಕೆಯನ್ನು ಪುನಃ ಪ್ರಶ್ನಿಸಲು ಹೋಗಲೇ ಇಲ್ಲ.
ಆಕೆ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ ಎಲ್ಲರಿಗೂ ಅವರು ಬೇಕೇ ಬೇಕು. ಯಾರಿಗೆ ಎಂಥಹ ಕಷ್ಟವಿದ್ದರೂ ಅದನ್ನು ಪರಿಹರಿಸಲು ಆಕೆ ಸದಾ ಮುಂದು. ಹೀಗಾಗಿ ಆಕೆಯೆಂದರೆ ಎಲ್ಲರಿಗೂ ಬಹಳ ಗೌರವ. ಯಾರಿಂದಲೂ ಏನೊಂದನ್ನೂ ಅಪೇಕ್ಷಿಸದೆ, ತನ್ನ ಮೌನದ ಸಾಮ್ರಾಜ್ಯದಲ್ಲಿ ಕಳೆದು ಹೋಗುತ್ತಿದ್ದ ಆಕೆಯ ಬಾಯಲ್ಲಿ ಇಂದು ಅದೂ ಅಷ್ಟೊಂದು ಅಚಾನಕ್ಕಾಗಿ ಪ್ರೀತಿಯ ಬಗ್ಗೆ ಈ ಮಾತುಗಳು! ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತಿಳಿಯದಾಗಿತ್ತು. ಏನಾದರಾಗಲಿ ಇಂದು ಅತ್ತೆಯಿಂದ ಆಕೆಯ ರಹಸ್ಯವನ್ನು ತಿಳಿಯಲೇಬೇಕೆಂದು ನಾನಾಗಲೇ ನಿರ್ಧಾರ ಮಾಡಿಯಾಗಿತ್ತು. ಅಷ್ಟರಲ್ಲಾಗಲೇ ಆಕೆಗೆ ತನ್ನ ತಪ್ಪಿನ ಅರಿವಾಗಿತ್ತೇನೋ ಅಲ್ಲಿಂದೆದ್ದು ಹೋಗಲು ಯತ್ನಿಸಿದರ ಕೈ ಹಿಡಿದೆ. ನಾನು ಅವರನ್ನು ಏನೇನೂ ಕೇಳದ ಹೋದರೂ ಆಕೆ ಅವರಾಗಲೇ ತಮ್ಮ ಒಡಲಾಳವನ್ನು ನನ್ನ ಮುಂದೆ ಬಿಚ್ಚಿಡಬಹುದು ಎನಿಸಿ, ಕೂದಲನ್ನು ಮೇಲೆತ್ತಿ ಕಟ್ಟಿ ಅದಕ್ಕೊಂದು ಕ್ಲಿಪ್ ಸಿಕ್ಕಿಸಿ ಆಕೆಯನ್ನು ಮಂಚದ ಮೇಲೆ ಕುಳ್ಳಿರಿಸುತ್ತಾ, ಅವರನ್ನು ತಬ್ಬಿಕೊಂಡೆ.
ಅದೆಷ್ಟೋ ವರ್ಷಗಳಿಂದ ಅವರೊಡಲಿನಲ್ಲಿ ಜ್ವಾಲಾಮುಖಿಯಾಗಿ ಒಳಗೇ ಕುದಿಯುತ್ತಿದ್ದ ಲಾವಾರಸ ಕಂಬನಿಯ ರೂಪದಲ್ಲಿ ಒಡೆದ ಅಣೆಕಟ್ಟಿನಂತೆ ಕಂಗಳಿಂದ ಧಾರೆ ಧಾರೆಯಾಗಿ ಹರಿದಿತ್ತು. ಅದೆಷ್ಟೋ ಹೊತ್ತು ಅಳುತ್ತಿದ್ದರೂ ಅವಳು ಈಗ ಒಂದು ಸ್ಥಿಮಿತಕ್ಕೆ ಬಂದಂತಾಗಿತ್ತು. ಮೇಜಿನ ಮೇಲಿದ್ದ ಬಾಟಲಿಯಿಂದ ಲೋಟಕ್ಕೆ ನೀರು ಬಗ್ಗಿಸಿಕೊಟ್ಟೆ. ಅದನ್ನು ಗಟಗಟನೆ ಕುಡಿದು ನಿಡಿದಾದ ನಿಟ್ಟುಸಿರನ್ನು ಹೊರಚೆಲ್ಲಿದ್ದರು. ಆ ದಿನ ಮನೆಯಲ್ಲಿ ಇದ್ದರು ನಾವಿಬ್ಬರೇ. ಅಮ್ಮ, ಅಪ್ಪ ಯಾರದೋ ಮದುವೆಗೆಂದು ಮೈಸೂರಿಗೆ ಹೋಗಿದ್ದರಿಂದ ಅತ್ತೆಯ ಅಂತರಾಳದ ನೋವನ್ನು ಅರಿಯಲು ನನಗಾವ ಅಡಚಣೆಯೂ ಇರಲಿಲ್ಲ. ನಾನು ಕೇಳದೆಯೇ ಅತ್ತೆ ತನ್ನ ಅಂತರಾಳದ ಕಥೆ ಬಿಚ್ಚಿಟ್ಟರು.
ನನ್ನ ಗ್ರಾಜ್ಯುಯೇಷನ್ ಮುಗಿದು ಬ್ಯಾಂಕ್ ಎಗ್ಸಾಮ್ ಮುಗಿಸಿದ್ದೆ. ಅದರ ರಿಸಲ್ಟ್ ಬಂದು ಸ್ಟೇಟ್ ಬ್ಯಾಂಕಿನಲ್ಲಿ ನನಗೆ ಕೆಲಸ ದೊರಕಿದಾಗ ನನ್ನ ಜೊತೆ ಮನೆಯವರ ಸಂಭ್ರಮ ಮುಗಿಲು ಮುಟ್ಟಿತ್ತು. ಅಮ್ಮನ ಮುದ್ದಿನ ಮಗಳು, ಅಣ್ಣನ ಪ್ರೀತಿಯ ತಂಗಿ, ಅತ್ತಿಗೆಯ ಹಿರಿ ಮಗಳು ನಾನು. ನನ್ನಣ್ಣನ ಏಕೈಕ ಕುಡಿಯಾದ ಮನ್ವಿತಾ ನನ್ನ ತಂಗಿ, ಜೊತೆಗಾತಿ ಎಲ್ಲವೂ ಆಗಿದ್ದಳು. ಅಮ್ಮ ಅಣ್ಣನಿಗಂತೂ ಆದಷ್ಟು ಬೇಗ ನನ್ನ ಮದುವೆ ಮಾಡಿ ಮುಗಿಸುವಾಸೆ. ನನ್ನ ಮನದಲ್ಲೂ ಬಣ್ಣ ಬಣ್ಣದ ಕನಸುಗಳು. ಇದುವರೆವಿಗೂ ನಾನಾಯಿತು ನನ್ನ ಓದಾಯಿತು ಎಂದಿದ್ದಳು, ಈಗ ನನ್ನ ಕಾಲ ಮೇಲೆ ನಾನು ನಿಂತಾಗ ಅವೆಲ್ಲ ರೆಕ್ಕೆ ಬಿಚ್ಚಿ ಹಾರಲಾರಂಭಿಸಿದ್ದ. ಆಗಷ್ಟೇ ವಿಕಸಿತಗೊಳ್ಳುತ್ತಿದ್ದ ನನ್ನ ಪ್ರೇಮಲೋಕದಲ್ಲಿ ಅದು ಹೇಗೋ ಒಂದು ದುಂಬಿ ಗುಂಯಿಗುಟ್ಟ ತೊಡಗಿತು.
ನನ್ನ ಕೆಲಸದ ಮೊದಲ ದಿನ ನಾನು ನನ್ನ ಅಪಾಯಿಂಟ್ ಮೆಂಟ್ ಆರ್ಡರ್ ನೊಂದಿಗೆ ಮ್ಯಾನೇಜರ್ ಕೋಣೆಗೆ ಕಾಲಿಟ್ಟಿದ್ದೆ. ಅವರು ನನ್ನೊಡನೆ ಹೊರಬಂದು ಅಲ್ಲಿದ್ದವರಿಗೆ ನನ್ನ ಪರಿಚಯ ಮಾಡಿಸಿದ್ದರು. ನನ್ನನ್ನೇ ತದೇಕಚಿತ್ತನಾಗಿ ನೋಡುತ್ತಿದ್ದವನನ್ನು ನಾನಾಗಲೇ ಗುರುತಿಸಿಬಿಟ್ಟಿದ್ದೆ. ಅವನು ಬೇರಾರೂ ಆಗಿರದೆ ನನ್ನ ಕಾಲೇಜಿನನಲ್ಲಿ ಸೀನಿಯರ್ ವಿದ್ಯಾರ್ಥಿಯಾಗಿದ್ದ ಸುಪ್ರೀತ್. ಅವನು ನನ್ನನ್ನು ಗುರುತಿಸದಿದ್ದರೂ ನಾನವನನ್ನು ಗುರುತಿಸಿದ್ದೆ. ಹೆಸರೂ ಸರಿಯಾಗಿತ್ತು. ಅವನ ಮುದ್ದು ಮುಖ ನಾನು ಕಾಲೇಜಿಗೆ ಸೇರಿದಾಗಲೇ ನನ್ನನ್ನು ಆಕರ್ಷಿಸಿತ್ತು. ಕೇವಲ ಒಂದೇ ಒಂದು ವರ್ಷವಷ್ಟೇ ನನ್ನ ಅವನ ಗೆಳೆತನ. ಆಗೆಲ್ಲಾ ನನ್ನ ಗೆಳತಿಯರು ನನ್ನ ಹೆಸರನ್ನು ಅವನೊಂದಿಗೆ ಥಳುಕು ಹಾಕಲೆತ್ನಿಸಿದ್ದರೂ ನಾನದಕ್ಕೆ ಆಸ್ಪದ ನೀಡಿರಲಿಲ್ಲ. ಕಾಲೇಜಿನ ಫಂಕ್ಷನ್ ಗಳಲ್ಲಿ ಅವನೂ ನನ್ನಂತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದನಾದರೂ ಎಷ್ಟು ಬೇಕೋ ಅಷ್ಟೇ ಮಾತಿಗೆ ಸೀಮಿತವಾಗಿತ್ತು ನಮ್ಮ ಪರಿಚಯ. ಹೀಗಾಗಿ ಅವನು ನನ್ನನ್ನು ಗುರುತಿಸಲಿಲ್ಲವೇನೋ ಎಂದುಕೊಂಡೆ. ಕಾಲೇಜಿನಲ್ಲಿ ನನ್ನ ಗೆಳತಿ ತಾರಾ ಯಾವಾಗಲೂ, `ನೋಡೆ ರಾಜಿ, ನೀನು ಅವನನ್ನು ಬೇಕಾದ್ರೆ ಡೀಪಾಗಿ ಅಬ್ಸರ್ವ್ ಮಾಡು. ಅವನು ನಿನ್ನನ್ನೇ ನೋಡುತ್ತಿರೋದು ನಿಂಗೇ ಗೊತ್ತಾಗುತ್ತೆ. ಮೇಬಿ ಅವನು ನಿನ್ನನ್ನು ಪ್ರೀತಿಸ್ತಿರಬಹುದು,’ ಎಂದಾಗ ನಾನವಳ ಮಾತು ನಂಬಿದ್ದೆನಾದರೂ ತೋರಿಸಿಕೊಂಡಿರಲಿಲ್ಲ.
ಆದರೆ ಇದೇನು ಇವನು ನನ್ನನ್ನು ಗುರುತು ಹಿಡಿಯುತ್ತಲೇ ಇಲ್ಲವಲ್ಲ ಎಂದುಕೊಂಡರೂ, ಇಷ್ಟು ಬೇಗ ಮರೆಯುವಂಥವನಲ್ಲ ಎಂದುಕೊಂಡೆ. ಜೊತೆಗೆ ಅವನಿಗೆ ಮದುವೆಯೂ ಆಗಿರಬಹುದಲ್ಲವೇ? ನನ್ನ ಮನಸ್ಸು ನನಗೆ ನಾನಾ ರೀತಿಯ ಸಮಾಧಾನ ನೀಡಲೆತ್ನಿಸಿತು. ದಿನ ಕಳೆದಂತೆ ಅವನಿಗೆ ಮದುವೆ ಆಗಿಲ್ಲವೆಂದು ವಿಷಯ ತಿಳಿಯಿತು. ಸರಿ ಅವನಿಗೆ ನನ್ನ ಪರಿಚಯ ಮಾಡಿಕೊಳ್ಳುವುದು ಬೇಕಿಲ್ಲ ಎಂದಾದರೆ ನನಗೂ ಅವನಿಂದ ಆಗಬೇಕಾದದ್ದು ಏನು? ಅವನಂತೆ ನಾನೂ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಅವನು ನನ್ನ ಸೀನಿಯರ್ ಅಷ್ಟೆ ಎಂದು ತೊಳಲಾಡುವ ನನ್ನ ಮನಸ್ಸಿಗೆ ಸಾಂತ್ವನ ಹೇಳಿದ್ದೆ.
ದಿನ ಕಳೆದಂತೆ ನಾನು ಎಲ್ಲರೊಂದಿಗೆ ಹೊಂದಿಕೊಳ್ಳ ತೊಡಗಿದೆ. ಆದರೂ ಯಾಕೋ ಇವನ ಸ್ನೇಹ ಗಳಿಸಲು ಆಗಲೇ ಇಲ್ಲ. ಎಲ್ಲರೊಂದಿಗೆ ನಗು ನಗುತ್ತಾ ಮಾತನಾಡುವವನಿಗೆ ನನ್ನೊಂದಿಗೆ ಸ್ನೇಹದಿಂದರಲು ಏನಾಗಿದೆ ಇವನಿಗೆ? ನನ್ನ ಪರಿಚಯವೇ ಇಲ್ಲದಂತೆ ವರ್ತಿಸಲು ಕಾರಣವಾದರೂ ಏನು? ನಾವು ಎಂದಾದರೂ ಜಗಳವಾಡಿದ್ದುಂಟೇ? ಎಂದೆಲ್ಲಾ ಯೋಚಿಸಿ ಹೈರಾಣಾಳಾಗಿದ್ದೇ ಬಂತು. ಅವನು ನನ್ನಿಂದ ದೂರವಾದಷ್ಟೂ ನಾನವನ ಹತ್ತಿರಕ್ಕೆ ಸೆಳೆಯಲ್ಪಡುತ್ತಿದ್ದೆ. ನನಗರಿವಿಲ್ಲದೆಯೇ ಅವನು ನನ್ನ ಮನಸ್ಸನ್ನು ಆಕ್ರಮಿಸಿಬಿಟ್ಟಿದ್ದ. ಅದೆಷ್ಟೋ ಬಾರಿ ನಾನೇ ನೇರವಾಗಿ ಅವನನ್ನು ಕೇಳಿಬಿಡಲೇ ಎಂದುಕೊಂಡಿದ್ದೂ ಉಂಟು. ನಾನು ಕೆಲಸದಲ್ಲಿ ಮಗ್ನಳಾಗಿರುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಅಕಸ್ಮಾತ್ ಎಂಬಂತೆ ತಲೆ ಎತ್ತಿದಾಗ ಎದುರಿಗಿನ ಸೀಟಿನಲ್ಲಿ ಕುಳಿತಿರುತ್ತಿದ್ದ ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದುದರ ಅನುಭವವಾಗಿತ್ತು. ಒಮ್ಮೊಮ್ಮೆ ಅವನೇನೋ ನನ್ನ ಬಳಿ ಹೇಳಲು ಎತ್ನಿಸುತ್ತಿದ್ದಾನೆ, ಆದರೆ ಅವನಿಗೆ ಹೇಳಲು ಆಗುತ್ತಿಲ್ಲವೆಂದು ನನಗನ್ನಿಸುತ್ತಿತ್ತು.
ಆದರೆ ಅದನ್ನು ಕೇಳುವುದೆಂತು? ದಿನಗಳು ಉರುಳುತ್ತಲೇ ಇತ್ತು. ಮನೆಯಲ್ಲಿ ನನಗಾಗಿ ವರಾನ್ವೇಷಣೆ ನಡೆದಿತ್ತು. ಆದರೆ ನನ್ನ ಮನ ಯಾರನ್ನೂ ಬಯಸಲು ಸಿದ್ಧವಿರಲಿಲ್ಲ. ಬಂದ ವರಗಳನ್ನು ಏನಾದರೊಂದು ಸಬೂಬು ಹೇಳಿ ತಿರಸ್ಕರಿಸುತ್ತಿದ್ದೆ. ಅವನನ್ನು ಬಿಟ್ಟು ಇನ್ನಾರನ್ನೂ ವರಿಸುವುದು ನನ್ನಿಂದ ಸಾಧ್ಯವೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ನನಗರಿವಿಲ್ಲದೆಯೇ ನಾನವನಲ್ಲಿ ಅನುರಕ್ತಳಾಗಿದ್ದೆ. ನನ್ನ ಮನಸ್ಸಿನ ತುಡಿತವನ್ನು ಅವನು ಬೇಗ ತಿಳಿಯಬಾರದೇ? ನನ್ನ ಕಂಗಳಲ್ಲಿನ ಆರಾಧನಾ ಭಾವವನ್ನು ಅರಿಯಲಾರದಷ್ಟು ದಡ್ಡನೇ ಅವನು? ಎಂದೆಲ್ಲಾ ಮನಸ್ಸಿಗೆ ಅನ್ನಿಸಿದರೂ ನಾನು ಅಸಹಾಯಕಳಾಗಿದ್ದೆ. ನಾನೇ ಅವನಿಗೆ ನನ್ನ ಮನದಾಸೆ ತಿಳಿಸಿದರೆ ಹೇಗೆ? ಎಂದು ಅನಿಸಿದ್ದು ಅದೆಷ್ಟು ಬಾರಿಯೋ.
ಅಂದು ಶುಕ್ರವಾರ, ನನಗೆ ಚೆನ್ನಾಗಿ ನೆನಪಿದೆ. ಅಂದು ವರಮಹಾಲಕ್ಷ್ಮಿ ಹಬ್ಬ. ಎಂದಿನಂತೆ ಅಣ್ಣ ನನಗೂ ಅತ್ತಿಗೆಗೂ ಹೊಸ ಸೀರೆ ಕೊಡಿಸಿದ್ದ. ನೇರಳೇ ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ಬಲು ಸಂಭ್ರಮದಿಂದ ಅಲಂಕರಿಸಿಕೊಂಡು ಹೊರಟಿದ್ದೆ. ನನ್ನ ಸಿಂಗಾರವೆಲ್ಲಾ ಅವನಿಗಾಗೇ ಆಗಿತ್ತು. ಅಂದು ಬ್ಯಾಂಕಿನಲ್ಲೂ ಲಕ್ಷ್ಮೀ ಪೂಜೆಯ ಸಂಭ್ರಮ. ಎಲ್ಲರೂ ಸೇರಿದ್ದೆ. ಅಂದೇಕೋ ಅವನು ಬಹಳ ಸಂಭ್ರಮದಿಂದಿದ್ದ ಎನಿಸಿತ್ತು. ಬಾರಿ ಬಾರಿಗೂ ಅವನು ನನ್ನನ್ನೇ ಕದ್ದು ನೋಡುತ್ತಿದ್ದುದು ನನ್ನ ಅನುಭವಕ್ಕೆ ಬಂದಿತ್ತು. ಆದರೇನು ಉಪಯೋಗ ಎಂದು ಮನಸ್ಸಿಗೆ ಪಿಚ್ಚೆನಿಸಿತ್ತು. ಅವನು ನನ್ನನ್ನೊಪ್ಪಲಿ ಬಿಡಲಿ. ನಾನಂತೂ ಅವನ ಆರಾಧನೆಯಲ್ಲೇ ಜೀನವಿಡೀ ಕಳೆಯು ನಿರ್ಧಾರ ಮಾಡಿಯಾಗಿತ್ತು. ಅನೇನೂ ಮಾಡದ್ದಿದರೂ ನನ್ನ ಮನಾಗೀ ಅನನ್ನೇ ನನ್ನ ಪತಿ ಎಂದು ನಿರ್ಧರಿಸಿಯಾಗಿತ್ತು. ಬ್ಯಾಂಕಿನಿಂದ ಬೇಗ ಹೊರಟಳು ಬಸ್ಸಿಗಾಗಿ ಕಾಯದೆ ಆಟೋಗಾಗಿ ಕಾಯುತ್ತಿದ್ದಾಗ ಅವನು ತನ್ನ ಬೈಕ್ ನ್ನು ನನ್ನ ಬಳಿ ತಂದು ನಿಲ್ಲಿಸಿದ್ದ.
“ಮನೆಗಲ್ಲವೇ….? ಬನ್ನಿ ನಾನು ನಿಮ್ಮನ್ನು ಡ್ರಾಪ್ ಮಾಡುತ್ತೇನೆ!” ಎಂದಾಗ ನನಗೆ ನಂಬಲಾಗಲೇ ಇಲ್ಲ.
“ಪ್ಲೀಸ್ ಬನ್ನಿ… ನಿಮ್ಮ ಬಳಿ ಮಾತನಾಡುವುದಿದೆ,” ಎಂದಾಗ ನನಗೆ ಸ್ವರ್ಗ ಮೂರೇ ಗೇಣು ಎನ್ನುವಂತಾಗಿತ್ತು.
ಆ ಕ್ಷಣದಲ್ಲಿ ಅವನು ನನ್ನೊಡನೆ ಸಾಯುವೆಯಾ ಎಂದಿದ್ದರೂ ಒಪ್ಪಿಬಿಡುತ್ತಿದ್ದೆ. ನನ್ನ ಒಪ್ಪಿಗೆಗೆ ಕಾಯದೆ ಅವನು ಬೈಕ್ ನ್ನು ಹೋಟೆಲ್ ಒಂದರ ಬಳಿ ನಿಲ್ಲಿಸಿ ಒಳ ನಡೆದಾಗ, ನಾನವನನ್ನು ಹಿಂಬಾಲಿಸಿದ್ದೆ. ಒಳ್ಳೆಯ ಜಾಗ ಆರಿಸಿ ಕುಳಿತ. ನಂತರ ಬಂದ ವೆಯ್ಟರ್ ಗೆ ದೋಸೆಗೆ ಆರ್ಡರ್ ಮಾಡಿದವನು ನನ್ನನ್ನೇ ನೋಡುತ್ತಾ, “ನೋಡಿ ಮಿಸ್ ರಾಜಶ್ರೀ, ನಾನು ಸುತ್ತಿ ಬಳಸಿ ಮಾತನಾಡುವುದಿಲ್ಲ. ಹೇಳಿ ಯಾವಾಗ ನಿಮ್ಮ ಮದುವೆ?” ಕೇಳಿದಾಗ ನನ್ನ ತಲೆ ಒಮ್ಮೆಲೇ ಗಿರ್ರೆಂದಿತ್ತು.
“ಪ್ಲೀಸ್ ಹೇಳಿ….?” ಎಂದಾಗ ನನಗೆ ಅವನೇನು ಹೇಳುತ್ತಿದ್ದಾನೆಂದೇ ತಿಳಿಯದಾಗಿತ್ತು.
“ಯಾರು ಹೇಳಿದರು ನಿಮಗೆ ನನ್ನ ಮದುವೆ ಎಂದು. ನನಗೇ ತಿಳಿಯದೆ ನನ್ನ ಮದುವೆಯಾಗಲು ಹೇಗೆ ಸಾಧ್ಯ?” ನಾನು ಕೇಳಿದ ಜೋರು ಧ್ವನಿಗೆ ಸುತ್ತಲಿದ್ದವರೊಮ್ಮೆ ನಮ್ಮತ್ತ ತಿರುಗಿ ನೋಡಿದಾಗಲೇ ನನಗೆ ಅರಿವಾಗಿತ್ತು. ಅದೇಕೋ ನನಗೆ ಬಹಳ ದುಃಖವಾಗಿತ್ತು. ನಾನು ಇವನೇ ನನ್ನ ಗಂಡನೆಂದು ನಂಬಿ ಕುಳಿತಿದ್ದರೆ ಇವನು ನನಗೆ ಬೇರೆಯೇ ಮದುವೆ ಮಾಡಿಸುತ್ತಿರುವವನಲ್ಲ ಎಂದುಕೊಂಡ ನಾನು, “ಸರಿ ನಿಮಗ್ಯಾರು ಹೇಳಿದರು ನನ್ನ ಮದುವೆ ಗೊತ್ತಾಗಿದೆ ಎಂದು?” ಸಿಟ್ಟಿನಿಂದಲೇ ಕೇಳಿದ್ದೆ.
ಹಾಗಿದ್ದರೆ ನಿಮ್ಮಿ ಸುಳ್ಳು ಹೇಳಿದ್ದಳೇ…. ತನಗೆ ತಾನೇ ಹೇಳಿಕೊಂಡನು, “ನಿಮ್ಮ ಗೆಳತಿ ನಿಮ್ಮ ಅದೇ ನಿರ್ಮಲಾ ಹೇಳಿದಳಲ್ಲಾ…. ನಿಮಗೆ ಕಾಲೇಜಿನಲ್ಲಿದ್ದಾಗಲೇ ಮದುವೆ ಗೊತ್ತಾಗಿದೆ, ಹುಡುಗ ಅಮೆರಿಕಾದಲ್ಲಿ ಇದ್ದಾನೆಂದು ಅದಕ್ಕೇ ಕೇಳಿದ್ದು,” ಎಂದ ಅವನ ಮುಖದಲ್ಲಿ ಗೊಂದಲ ಸ್ಪಷ್ಟವಾಗಿತ್ತು.
ಓಹೋ ಇದು ನಿರ್ಮಲಾಳ ಕೆಲಸವೇ. ಮೊದಲಿನಿಂದಲೂ ಅವಳ ಕಣ್ಣು ಇವನ ಮೇಲೆ ಇತ್ತೇನೋ, ಅದಕ್ಕೆ ಈ ರೀತಿ ಸುಳ್ಳು ಹೇಳಿದ್ದಾಳೆ ಎಂದು ಅವಳ ಮೇಲೆ ಇನ್ನಿಲ್ಲದ ಕೋಪ ಬಂದಿತ್ತು. ಇವನಾದರೂ ಎಂಥವನು ನೇರವಾಗಿ ನನ್ನನ್ನೇ ಕೇಳಿ ತಾನೇ ಪ್ರಪೋಸ್ ಮಾಡಬಹುದಿತ್ತು ಎಂದುಕೊಂಡೆ. ಅವಳೇನಾದರೂ ನನ್ನ ಮುಂದೆ ಇದ್ದಿದ್ದರೆ ನಾನವಳ ಕೊಲೆ ಮಾಡಿಬಿಡುತ್ತಿದ್ದೆನೇನೋ…. ಛೇ, ಎಂತಹ ಕೆಲಸ ಮಾಡಿದ್ದಾಳು ಎಂದುಕೊಂಡೆ. ಆದರೂ ಏನೂ ಮಾಡುವಂತಿರಲಿಲ್ಲ. ಅದಾಗಲೇ ಅವಳು ಮದುವೆಯಾಗಿ ಧಾರವಾಡಕ್ಕೆ ಹೋಗಿಯಾಗಿತ್ತು.
“ನೀವೇಕೆ ಅವಳನ್ನು ಕೇಳಿದಿರಿ?” ಎಂದು ನಾನು ಕೇಳಿದಾಗ ಅವನಿಗೇನೂ ಹೇಳಲು ತೋಚದೆ, `ರಾಜಿ… ನಾನು ನಾನು…’ ತೊದಲಿದಂತಿತ್ತು ಅವನ ಮಾತುಗಳು.
“ಓಹ್, ನಾನೆಂತಹ ಮೂರ್ಖ. ನಿಮ್ಮನ್ನೊಂದು ಬಾರಿಯಾದರೂ ಕೇಳಬೇಕಿತ್ತು ನಾನು.”
“ಏನೆಂದು ಕೇಳಬೇಕಿತ್ತು?” ನಾನವನನ್ನು ಕೆಣಕಿದ್ದೆ, “ನೀವೆಂತಹ ಗಂಡಸು? ನಿಮ್ಮನ್ನು ಸದಾ ಆರಾಧನಾ ಭಾವನೆಯಿಂದ ನೋಡುತ್ತಿದ್ದು ನಿಮ್ಮದೊಂದು ನೋಟಕ್ಕಾಗಿ ಹಂಬಲಿಸಿ ಕಾಯುತ್ತಿದ್ದ ಈ ಹೆಣ್ಣಿನ ಅಂತರಾಳ ನೀವು ತಿಳಿಯಲೇ ಇಲ್ಲವೇ…..” ಎಂದು ಕೇಳಿದೆ. ನನಗರಿವಿಲ್ಲದೆಯೇ ನನ್ನ ಧ್ವನಿ ಗದ್ಗದಿತವಾಗಿತ್ತು. ಅವನು ನನ್ನ ಕೈ ಹಿಡಿದು, “ನೀವು ನನ್ನಂತೆಯೇ…?” ಎಂದು ಕೇಳಿದ.
“ಮತ್ತಿನ್ನೇನು….? ನಾನು ನನ್ನದು ಒನ್ ವೇ ಲವ್ ಆದರೂ ಚಿಂತೆ ಇಲ್ಲ. ಇನ್ನು ಈ ಜನುಮದಲ್ಲಿ ಇನ್ನಾರಿಗೂ ನಿಮ್ಮ ಸ್ಥಾನ ಕೊಡಲಾರೆ ಎಂದು ನಾನು ಎಂದೋ ನಿರ್ಧರಿಸಿಯಾಗಿದೆ,” ಎಂದು ಹೇಳಿದೆ.
ಅವನಾಗಲೇ ಏಕವಚನಕ್ಕೆ ಇಳಿದಿದ್ದ, “ರಾಜೀ ನಿನಗೆ ಗೊತ್ತಾ…. ನೀನು ಕಾಲೇಜಿಗೆ ಸೇರಿದ ದಿನದಿಂದಲೇ ನಿನ್ನ ಆರಾಧಾಕನಾಗಿದ್ದೆ. ಮೊದಲ ನೋಟದಲ್ಲೇ ನೀನು ನನ್ನನ್ನು ಸೆಳೆದಿದ್ದೆ. ನಿನಗಾಗಿ ಅದೆಷ್ಟು ಕವನ ಬರೆದಿದ್ದೆನೋ, ನಿನ್ನೊಡನೆ ಮಾತನಾಡಬೇಕು, ನಿನ್ನ ಕೈ ಹಿಡಿದು ಸುತ್ತಬೇಕು ಎಂಬೆಲ್ಲ ಆಸೆಗಳನ್ನೂ ಈ ನಿನ್ನ ಗಂಭೀರ ವದನ ತಳ್ಳಿ ಹಾಕಿಬಿಡುತ್ತಿತ್ತು. ನಿನ್ನನ್ನು ಕೇಳುವ ಧೈರ್ಯವಾಗದೆ ಸುಮ್ಮನಿದ್ದೆ. ನಿರ್ಮಲಾಳ ಮಾತುಗಳು ನನ್ನನ್ನು ಮುಂದುವರಿಯಲು ಬಿಡದಂತೆ ತಡೆದಿತ್ತು. ನನಗೂ ಮನೆಯಲ್ಲಿ ಮದುವೆಗಾಗಿ ಪೀಡಿಸುತ್ತಿದ್ದಾರೆ. ನೀನು ಈ ಬ್ಯಾಂಕಿಗೆ ಸೇರಿದಾಗಿನಿಂದ ಪುನಃ ನನ್ನ ಮನದಾಸೆ ಚಿಗುರಿತ್ತು. ನಿನ್ನ ಮದುವೆ ಆಗಿಲ್ಲವೆಂದು ನನಗೆ ತಿಳಿದಿದ್ದೂ ಇಂದೇ. ಅದಕ್ಕೆ ತಡಮಾಡದೆ ಧಾವಿಸಿ ಬಂದಿರುವೆ!” ಎಂದು ಹೇಳಿದ.
ಆಗ ನನ್ನ ಮನದಲ್ಲಿ ಮುಸುಕಿದ್ದ ಕಾರ್ಮೋಡ ಕರಗಿತ್ತು. ಮನದಂಗಳದ ಬಾನಾಡಿ ಪ್ರೇಮದಾಗಸದಲ್ಲಿ ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರತೊಡಗಿತ್ತು. ಅವನೂ ತನಗಾದ ಆನಂದವನ್ನು ನನ್ನ ಕೈ ಹಿಡಿದು ನನ್ನ ಅನುಮತಿ ಕೇಳದೆಯೇ ತುಟಿಗೊತ್ತಿಕೊಂಡಿದ್ದ. ನಮಗಾದ ಆನಂದಕ್ಕೆ ಅವನು ಆರ್ಡರ್ ಮಾಡಿದ್ದ ದೋಸೆಯನ್ನು ಸರಿಯಾಗಿ ತಿನ್ನಲಾರದೆ ಬರೀ ಜಾಮೂನ್ ನಷ್ಟೇ ತಿಂದು ಹೊರ ಬಂದಿದ್ದೆ. ಅವನೊಡನೆ ಸುತ್ತಾಡಿ ಮನೆಗೆ ಬರುವ ವೇಳೆಗೆ ಬಹಳ ಹೊತ್ತಾಗಿತ್ತು. ಅಮ್ಮನಿಂದ ಬೈಸಿಕೊಂಡಿದ್ದೆ. ಮರುದಿನ ಇಬ್ಬರೂ ನಂದಿ ಬೆಟ್ಟಕ್ಕೆ ಹೋಗುವುದೆಂದು ಮೊದಲೇ ತೀರ್ಮಾನವಾಗಿತ್ತು. ಗೆಳತಿಯ ಎಂಗೇಜ್ ಮೆಂಟ್ ಬರುವುದಕ್ಕೆ ತಡವಾಗುತ್ತದೆಂದು ಮನೆಯಲ್ಲಿ ಬಲು ಸರಾಗವಾಗಿ ಎಂದೂ ಸುಳ್ಳನ್ನಾಡದ ನಾನು ಸುಳ್ಳಾಡಿದ್ದೆ. ಪ್ರೇಮಕ್ಕಿರುವ ಶಕ್ತಿ ಅಪಾರ. ಅದೆಂತಹ ಕಠಿಣ ಕೆಲಸವನ್ನಾದರೂ ಮಾಡಿಸಬಲ್ಲದೆಂದು ತಿಳಿದಿತ್ತಾದರೂ ಎಂದೂ ಯಾವ ವಿಷಯವನ್ನೂ ಮುಚ್ಚಿಡದೆ ನಿಜವನ್ನೇ ನುಡಿಯುತ್ತಿದ್ದ ನಾನು ಅವನ ಪ್ರೀತಿ ಸಿಕ್ಕಿದೊಡನೆಯೇ ಸುಳ್ಳುಗಳ ಸರಮಾಲೆ ಪೋಣಿಸುವಷ್ಟು ಸಬಲಳಾಗಿದ್ದೆ. ಅವನು ನನಗಾಗಿ ಬಸ್ ಸ್ಟಾಪ್ ನಲ್ಲಿ ಕಾಯುತ್ತಿರುತ್ತಿದ್ದ. ಅಣ್ಣನೊಟ್ಟಿಗಲ್ಲದೆ ಇನ್ನಾವ ಪುರುಷರೊಂದಿಗೂ ಸರಿಯಾಗಿ ಮಾತನಾಡದಿದ್ದ ನನ್ನನ್ನು, ಅವನ ಪ್ರೀತಿ ಭಯವನ್ನೇ ಇಲ್ಲವಾಗಿಸಿತ್ತು.
ಅಂದಿನ ನಮ್ಮೊಡನಾಟಕ್ಕೆ ಕೇವಲ ನಾಲ್ಕೂವರೆ ದಿನಕ್ಕೇ ಕೊನೆಯಾಗುತ್ತದೆಂದು ನನಗೆಲ್ಲಿ ತಿಳಿದಿತ್ತು? ಆ ನಾಲ್ಕೂವರೆ ದಿನದಲ್ಲಿ ಅವನು ನನ್ನ ಇಡೀ ಜನ್ಮಕ್ಕಾಗುವಷ್ಟು ಪ್ರೇಮ ಸಿಂಚನವನ್ನು ಹರಿಸಿದ್ದ. ಅವನ ಬಾಹುಗಳಲ್ಲಿ ಜಗತ್ತನ್ನೇ ಮರೆಸಬಲ್ಲ ಶಕ್ತಿ ಇತ್ತು. ಮರೆಯಲಾಗದ ಮೊದಲ ಆಲಿಂಗನ, ಚುಂಬನ ನನ್ನ ನರನಾಡಿಗಳಲ್ಲಿ ನವ ಚೈತನ್ಯವನ್ನೇ ಹರಿಸಿತ್ತು. ಅವನನ್ನು ಅಗಲಿ ಬರುವುದು ಅನಿವಾರ್ಯವಾಗಿತ್ತು. ಅಂದು ರಾತ್ರಿಯ ರೈಲಿಗೆ ಅವನು ಊರಿಗೆ ಹೊರಟಿದ್ದ. ಇಬ್ಬರದ್ದೂ ಒಂದೇ ಜಾತಿಯಾದ್ದರಿಂದ ನಮ್ಮ ಮದುವೆಗೆ ಯಾವ ಅಡ್ಡಿಯೂ ಇರಲಿಲ್ಲ. ಅದರಲ್ಲೂ ಇಂತಹ ಸುಂದರ ಸುಸಂಸ್ಕೃತ ವಿದ್ಯಾವಂತ, ಒಳ್ಳೆಯ ಕೆಲಸದಲ್ಲಿರುವ ಅದರಲ್ಲೂ ತಾನು ಇಷ್ಟಪಟ್ಟವನೆಂದು ತಿಳಿದರೆ ಅಮ್ಮ, ಅಣ್ಣ-ಅತ್ತಿಗೆ ಖುಷಿ ಖುಷಿಯಾಗಿ ಒಪ್ಪುತ್ತಾರೆಂದು ತಿಳಿದಿತ್ತು. ಅವನ ತಾಯಿ ತಂದೆಗೂ ಇವನೊಬ್ಬನೇ ಮಗನಾದ್ದರಿಂದ ಅವರ ಸಮ್ಮತಿ ಇದ್ದೇ ಇತ್ತು. ಗುರುವಾರ ತಾಯಿ ತಂದೆಯರೊಡನೆ ಮನೆಗೆ ಬರುವುದಾಗಿ ತಿಳಿಸಿ ಹೊರಟಾಗ ನನ್ನಂತೆಯೇ ಅವನೂ ನನ್ನನ್ನು ಬಿಡಲಾರದವನಾಗಿದ್ದ.
ಅವನು ನನ್ನನ್ನು ಅಪ್ಪಿ ಮುದ್ದಾಡುವಾಗ ಅವನ ಮನದಾಳದ ಬಯಕೆಯ ಅರಿವಾಗಿತ್ತಾದರೂ ಆದಷ್ಟೂ ಬೇಗ ಮದುವೆಯಾಗೋಣ. ಇದೆಲ್ಲ ನಂತರವೇ ಚೆನ್ನವೆಂದು ಅವನಾಸೆ ತಿರಸ್ಕರಿಸಿ ಹೊರಟು ಬಂದಿದ್ದೆ. ಅವನಾಸೆ ಈಡೇರಿಸಿದ್ದರೆ ಏನಾಗುತ್ತಿತ್ತು? ಎಂದು ನಾನೀಗಲೂ ಪಶ್ಚಾತ್ತಾಪ ಪಡುತ್ತಲೇ ಇದ್ದೇನೆ. ಅವನು ನನಗೆ ಇನ್ನೆಂದೂ ಸಿಗಲಾರನೆಂಬ ಅರಿವು ನನಗಿದ್ದಿದ್ದರೆ ಖಂಡಿತಾ ನಾನವನನ್ನು ನಿರಾಶೆಗೊಳಿಸುತ್ತಿರಲಿಲ್ಲ.
ರಾತ್ರಿ ಇಡೀ ನಿದ್ದೆ ಇಲ್ಲದೆ ಕಳೆದಿದ್ದೆ. ಅತ್ತಿಗೆಗೆ ವಿಷಯ ಹೇಳಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಇಡೀ ದಿನ ಕಳೆದುಹೋಗಿತ್ತು. ಆ ಎರಡು ದಿನ ಅವನಿಲ್ಲದೆ ಬ್ಯಾಂಕಿನಲ್ಲಿ ನನಗೆ ಕೆಲಸ ಮಾಡಲಾಗಲೇ ಇಲ್ಲ. ಅಂದು ಗುರುವಾರ ಎಲ್ಲರಿಗಿಂತ ಮೊದಲೇ ಎದ್ದಳು ಅಮ್ಮ, ಅತ್ತಿಗೆಯನ್ನು ಗೊಂದಲದಲ್ಲಿ ಕೆಡವಿದ್ದೆ. ಅತ್ತಿಗೆಗೆ ತಿಂಡಿ ನಾನೇ ಮಾಡಿದ್ದು ಕಂಡು ಅವರ ಅಚ್ಚರಿ ಮೇರೆ ಮೀರಿತ್ತು. ಅವನಿಷ್ಟದ ಪೊಂಗಲ್, ಕೇಸರೀ ಭಾತ್ ಮಾಡಿದ್ದೆ. ಈಗಲೇ ಎಲ್ಲರಿಗೂ ತಿಳಿಸಬೇಕೆಂದುಕೊಂಡರೂ ಅವನು ಬಂದ ನಂತರ ತಿಳಿಸುವುದೆಂದು ಬಲು ಸಹನೆಯಿಂದ ತಡೆದಿದ್ದೆ.
ಹಿಂದಿನ ದಿನ ಬೆಳಗ್ಗೆಯೇ ಅವನು ಮನೆಗೆ ಫೋನ್ ಮಾಡಿದ್ದಾಗ ಅತ್ತಿಗೆ ಹುಬ್ಬೇರಿಸಿ ನೋಡಿದ್ದರು. ನನ್ನ ಮೊಗದಲ್ಲಿನ ಭಾವನೆಗಳು, ಕೆಂಪಾದ ಕೆನ್ನೆಗಳು ಅವರಿಗೇನು ಹೇಳಿದ್ದವೋ ಗೊತ್ತಿಲ್ಲ. ಆದರೆ ಅವರೇನೂ ಕೇಳದಿದ್ದಾಗ ನಾನು ಸುಮ್ಮನಾಗಿದ್ದೆ. ಬಹಳ ಶ್ರದ್ಧೆಯಿಂದ ಅಲಂಕರಿಸಿಕೊಂಡು ಹೊರಟಾಗ ಅತ್ತಿಗೆ ಹುಬ್ಬೇರಿಸಿದ್ದರೂ ಏನೂ ಕೇಳಿರಲಿಲ್ಲ. ಅವರು ಬಂದಾಗ ಮನೆಯವರ ಪ್ರತಿಕ್ರಿಯೆ ಹೇಗಿರಬಹುದೆಂಬ ಕಲ್ಪನೆ ನನಗೆ ಕಚಗುಳಿ ಇಡುತ್ತಿತ್ತು. ಬ್ಯಾಂಕಿಗೆ ಹೋದೆ. ಗೇಟಿನ ಬಳಿ ಕಾಲಿಡುತ್ತಿದ್ದಂತೆ ಎದುರಾಗಿದ್ದ ಸೌಮ್ಯಾ ನನ್ನ ಕೈ ಹಿಡಿದವಳೇ, “ರಾಜೀ, ನಿನಗೆ ಗೊತ್ತಾ? ಸುಪ್ರೀತ್ ಅವರ ತಾಯಿ, ತಂದೆ, ತಂಗಿ ಎಲ್ಲಾ ಆ್ಯಕ್ಸಿಡೆಂಟ್ ನಲ್ಲಿ ಹೋಗಿಬಿಟ್ಟರಂತೆ. ಶವಗಳನ್ನು ಗುರುತಿಸುವುದೂ ಕಷ್ಟವಾಗಿದೆಯಂತೆ. ಯಾವುದೋ ಟ್ರಕ್ ಹೊಡೆದಿದ್ದರಂತೆ. ಸುಪ್ರೀತ್ ವಿಸಿಟಿಂಗ್ ಕಾರ್ಡ್ ನಿಂದ ಅವರು ಈ ಬ್ಯಾಂಕ್ ನಲ್ಲಿ ಕೆಲಸ ಮಾಡುವುದು ತಿಳಿಯಿತಂತೆ,” ಮುಂದೆ ಅವಳೇನು ಹೇಳಿದಳೋ ನನಗಾವುದೂ ಕೇಳಿಸಲೇ ಇಲ್ಲ. ಪ್ರಜ್ಞೆ ಕಳೆದುಕೊಂಡಿದ್ದರಿಂದ ನಾನು ಬಹಳ ಸೂಕ್ಷ್ಮ ಎಂದು ಮಾತ್ರ ಅವರು ತಿಳಿದಿದ್ದರು. ನನ್ನ ಸರ್ವಸ್ವ ಹೊರಟು ಹೋದರೂ ನಾನು ಮನಸಾರೆ ಅಳಲಾಗದೆ ಅಸಮರ್ಥಳಾಗಿದ್ದೆ.
ನನಗಿನ್ನು ಅಲ್ಲಿ ಇರಲು ಮನಸ್ಸಾಗದೆ ಬ್ಯಾಂಕಿಗೆ ರಜೆ ಹಾಕಿ ಹೊರಟು ಬಂದಿದ್ದೆ. ಒಳಗಿನಿಂದ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ತಡೆಯುವುದು ಅಸಾಧ್ಯವಾಗಿತ್ತು. ಎಲ್ಲರೆದುರು ಮನಬಂದಂತೆ ಅಳುವ ಹಾಗೂ ಇರಲಿಲ್ಲ. ಮನೆಗೆ ಬಂದವಳೇ ಎಲ್ಲರಿಗೂ ವಿಷಯ ತಿಳಿಸಿ ನನ್ನ ಕೋಣೆ ಹೊಕ್ಕು ಬಾತ್ ರೂಮಿನ ನಲ್ಲಿಯನ್ನು ಜೋರಾಗಿ ತಿರುಗಿಸಿ ಬೋರೆಂದು ಮನಸ್ಸಿಗೆ ಸಮಾಧಾನ ಎನಿಸುವವರೆಗೂ ಅತ್ತಿದ್ದೆ. ನೂರೆಂಟು ಕನಸುಗಳ ಸರಮಾಲೆಯನ್ನೇ ಕುತ್ತಿಗೆಗೆ ಹಾರವಾಗಿಸಿದ್ದನು ಇನ್ನೆಂದೂ ಬರಲಾಗದ ಜಾಗಕ್ಕೆ ಹೊರಟು ಹೋಗಿದ್ದ. ಮನಸ್ಸು ಕಲ್ಲಾಗತೊಡಗಿತ್ತು. ಜೊತೆಗೆ ನನ್ನ ನಿರ್ಧಾರ ಅಷ್ಟೇ ಗಟ್ಟಿಯಾಗಿತ್ತು. ಇನ್ನು ಈ ಜನ್ಮದಲ್ಲಿ ನಾನು ಪಡೆದು ಬಂದಿದ್ದು ಇಷ್ಟೇ. ಅವನು ಮುಟ್ಟಿದ ಈ ದೇಹವನ್ನು ಇನ್ನಾರೂ ಮುಟ್ಟಲು ಬಿಡಲಾರೆ ಎಂದುಕೊಳ್ಳುತ್ತಿದ್ದಂತೆ ನನ್ನ ನಿರ್ಧಾರ ಅಚಲವಾಗಿತ್ತು.
ಇಷ್ಟು ಹೇಳಿ ಮುಗಿಸಿದ ಅತ್ತೆಯ ಕಂಗಳಿಂದ ಕಣ್ಣೀರ ಧಾರೆ ಹರಿದಿತ್ತು. ಅಳು ನಿಲ್ಲಿಸಿದ ಅತ್ತೆ ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು ನನ್ನ ಕೈಗಳನ್ನು ಆಕೆ ಕೈಗಳಲ್ಲಿ ತೆಗೆದುಕೊಂಡು, “ಮನು, ನೀನಿದನ್ನು ಯಾರಿಗೂ ಹೇಳುವುದಿಲ್ಲವೆಂದು ನನಗೆ ಗೊತ್ತು. ಆದರೆ ನಿನ್ನ ಬಾಳು ನನ್ನಂತೆ ಆಗಬಾರದು. ಇಂತಹ ವಿಷಯಗಳಲ್ಲಿ ನಿಧಾನ ಬೇಡ,” ಎಂದಾಗ ಅತ್ತೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿ ನನ್ನೆಲ್ಲಾ ವಿಷಯವನ್ನು ಅತ್ತೆಗೆ ತಿಳಿಸಿದೆ.
“ಇದೊಳ್ಳೆ ಕಥೆಯಾಯಿತಲ್ಲಾ… ಅವನನ್ನು ಹುಡುಕುವುದೆಲ್ಲಿ? ಅವನಾರೋ ಏನೋ…? ಅಸಲಿಗೆ ಅವನೂ ನಿನ್ನನ್ನು ಇಷ್ಟಪಟ್ಟಿರುವನೆಂದು ತಿಳಿಯುವುದಾದರೂ ಎಂತು….? ಬಹುಶಃ ಇದಕ್ಕೇ ಹೇಳುವುದೇನೋ ಮೊದಲ ಪ್ರೇಮವೆಂದು. ಏನೋ ಅಂತೂ ಅನು ನಿನ್ನ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾನೆ ಎಂದಾಯಿತು. ನಿನ್ನ ಪ್ರೇಮದ ವಿಷಯ ಆ ದೇರಿಗೇ ಬಿಟ್ಟುಬಿಡು. ಇಲ್ಲ ನಿನ್ನ ಹೃದಯದ ತಿಜೋರಿಯಲ್ಲಿ ಹಾಕಿ ಬೀಗಿ ಜಡಿದು ಬಿಡು. ಆತ ಒಬ್ಬ ಒಳ್ಳೆಯ ಸ್ನೇಹಿತ ಎಂದುಕೊಂಡರಾಯಿತು,” ಎಂದು ಪ್ರೇಮಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಅತ್ತೆ ಸರಳವಾಗಿ ನುಡಿದಿದ್ದರು.
“ಪ್ರೇಮಕ್ಕೆ ಯಾರ ಹಂಗೂ ಇಲ್ಲ. ಅದು ಯಾವಾಗ ಎಂದರೆ ಆಗ ಎಲ್ಲೆಂದರಲ್ಲಿ ಉದಿಸಿಬಿಡಬಹುದು. ಹಾಗೆಂದು ಬಯಸಿ ಕಾಮಿಸುವುದು ಪ್ರೇಮ ಆಗಲಾರದು. ಕಾಮದ ಮತ್ತೊಂದು ಮುಖ ಪ್ರೇಮವೇ ಅಲ್ಲವೇ? ಅದು ಮದುವೆಯಲ್ಲೇ ಮುಕ್ತಾಯವಾಗಬೇಕು ಎಂದೇನೂ ಇಲ್ಲವಲ್ಲ. ಈ ಪ್ರೇಮಕ್ಕೇಕೆ ಬೇಕು ಪರ್ಮಿಟ್ಟು?” ಹೇಳುತ್ತಾ ಅದಕ್ಕೆ ನಗುತ್ತಲೇ ಇದ್ದರು.
ನಾನು ಅತ್ತೆಯನ್ನು ತಬ್ಬಿ, “ಯೂ ಆರ್ ಗ್ರೇಟ್! ಇಂತಹ ತ್ಯಾಗ ಬಹುಶಃ ಪವಿತ್ರ ಪ್ರೇಮದಲ್ಲಿ ಮಾತ್ರ ಸಾಧ್ಯ….!” ಎಂದಾಗ ನನ್ನತ್ತ ತಿರುಗಿದ ಅತ್ತೆ, “ನೋಡು ಬಂಗಾರು…. ನಿನ್ನ ಪ್ರೇಮ ಆರಂಭವೇ ಇನ್ನೂ ಆಗಿಲ್ಲ ಎಂದಾದ ಮೇಲೆ ಚಿಂತೆ ಏಕೆ? ಅಪ್ಪ ಅಮ್ಮ ಹುಡುಕಿದವನನ್ನೇ ಮದುವೆಯಾಗಿ ಅವನನ್ನೇ ಮನಸಾರೆ ಪ್ರೀತಿಸು. ಪ್ರೀತಿಸಿದವನನ್ನು ಪಡೆಯಲೂ ಋಣವಿರಬೇಕೇನೋ…. ಅಷ್ಟಲ್ಲದೆ ಹೇಳುತ್ತಾರೆಯೇ ಋಣಾನು ಬಂಧ ರೂಪೇಣ… ಅಂತ,” ಆಕೆ ಹೇಳಿದಾಗ ನಾನು ತಲೆಯಾಡಿಸಿದರೂ ನನ್ನ ಮನದಲ್ಲಿ ಅವನು ನಗುತ್ತಾ ನನ್ನನ್ನು ಕೆಣಕುತ್ತಲೇ ಇದ್ದ.
ನನ್ನ ಪ್ರೇಮ ಅತ್ತೆಯಂತೆ ಆಗದಿರಲೆದು ಆ ದೇವರನ್ನು ಬಾರಿ ಬಾರಿ ಬೇಡಿಕೊಂಡಿದ್ದೆ. ಯಾರಾದರೂ ಅವನ ಸಂಬಂಧವನ್ನೇ ಅಪ್ಪ ಅಮ್ಮನಿಗೆ ತೋರಿಸಬಾರದೇ…? ಎಂದುಕೊಂಡರೂ ಆಗಲೇ ಆವರು ತಿಂಗಳ ಮೇಲಾಗಿದೆ. ಇನ್ನೂ ಅವನು ಮದುವೆಯಾಗದೆ ಗುರುತು ಪರಿಚಯವಿಲ್ಲದ ನನಗಾಗಿ ಕಾಯುವುದುಂಟೇ…? ಎನಿಸಿ ಮನಸ್ಸು ನಿರಾಸೆಗೊಂಡರೂ, ಯಾವುದೋ ಒಂದು ಮೂಲೆಯಲ್ಲಿ ಅವನು ಮನೆ ಮಾಡಿ ಕುಳಿತುಬಿಟ್ಟಿದ್ದ.
ಅಂದು ಮೈಸೂರಿನಿಂದ ಬಂದ ಅಪ್ಪ ಅಮ್ಮ ಬಹಳ ಒಳ್ಳೆಯ ಸುದ್ದಿಯನ್ನು ತಂದಿದ್ದರು. “ನೋಡಮ್ಮಾ ಮನ್ವಿ…. ಈ ಹುಡುಗನ ಫೋಟೋ…. ಹುಡುಗ ಎಲ್ಲಾ ರೀತಿಯಲ್ಲೂ ಚೆನ್ನಾಗಿದ್ದಾನೆ. ಅದಲ್ಲದೆ, ಈ ರಾಜಕುಮಾರ ಮದುವೆಯಾದರೆ ನಿನ್ನನ್ನೇ ಅಂತೇ. ಅವನು ತನ್ನ ಕೆಲಸದ ಮೇಲೆ ಆವರು ತಿಂಗಳ ಮಟ್ಟಿಗೆ ಯು.ಎಸ್ ಗೆ ಹೋಗಿದ್ದನಂತೆ. ನೀನೊಮ್ಮೆ ನೋಡು,” ಎಂದು ಫೋಟೋ ಕೈಗಿತ್ತರು.
ಫೋಟೋ ನೋಡಿದವಳೇ ದಂಗಾಗಿ ಹೋಗಿದ್ದೆ. ನನ್ನ ಕೈಯಿಂದ ಫೋಟೋ ಕಿತ್ತುಕೊಂಡು ನೋಡಿದ ಅತ್ತೆ ನನ್ನನ್ನೇ ನೋಡಿ ಕಣ್ಣು ಮಿಟಿಕಿಸಿದಾಗ ನಾನು ನಾಚಿಕೆಯಿಂದ ತಲೆ ತಗ್ಗಿಸಿದ್ದೆ.
“ಮನು… ನೀನು ಈ ಹುಡಗನನ್ನು ಮೊದಲೇ ನೋಡಿದ್ಯಾ…. ನಿನಗಿವನ ಪರಿಚಯ ಹೇಗೆ,” ಎಂದು ಅಮ್ಮ ಅಪ್ಪ ಕೇಳಿದರೂ ನನ್ನಿಂದ ಉತ್ತರ ನಿರೀಕ್ಷಿಸದೆ, ಅತ್ತೆಗೆ ಅವನ ವಿಷಯ, “ರಾಧತ್ತನೆಯ ನಾದಿನಿ ಮಗ,” ಎಂದು ಹೇಳಿದರು. ಮಿಕ್ಕ ವಿಷಯ ಯಾವುದೂ ನನ್ನ ಕಿವಿಗೆ ಬೀಳದೆ ನನ್ನನೊಡನೆ ನನ್ನ ಕಲ್ಪನಾ ಲೋಕದಲ್ಲಿ ನಾನಾಗಲೇ ಕಳೆದು ಹೋಗಿದ್ದೆ. ಅತ್ತೆಯ ಮಾತಿನಂತೆ ಋಣಾನುಬಂಧ ನಮ್ಮಿಬ್ಬರ ಪಾಲಿಗೆ ಗಟ್ಟಿಯಾಗಿ ಬೆಸೆದು ನಾ ಮೆಚ್ಚಿದ ಹುಡುಗ ನನಗೇ ಸಿಕ್ಕಿದ್ದ.





