ಎದುರಿಗಿನ ವ್ಯಕ್ತಿ ಸತ್ಯ ಹೇಳುತ್ತಿದ್ದಾನಾ? ಸುಳ್ಳು ಹೇಳುತ್ತಿದ್ದಾನಾ? ಎಂಬುದರ ಬಗ್ಗೆ ತಿಳಿದುಕೊಳ್ಳಲು ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಿ ಪರಿಣಮಿಸಬಹುದು.
ಸಂಜೆ 7 ಗಂಟೆ ಸಮಯಕ್ಕೆ ಪ್ರಿಯಾ ಮನೆಯೊಳಗೆ ಪ್ರವೇಶಿಸಿದಾಗ, ಅತ್ತಿಗೆ ಚಂದ್ರಿಕಾ ಎದುರಾದಳು. ಪ್ರಿಯಾ ಕಣ್ಣು ತಪ್ಪಿಸುತ್ತ ಒಳಗೆ ಹೋಗತೊಡಗಿದಳು. ಆಗ ಚಂದ್ರಿಕಾ ಅವಳ ಹಿಂದಿನಿಂದ ಹೋಗಿ, “ಪ್ರಿಯಾ ಇಷ್ಟೊತ್ತು ಎಲ್ಲಿದ್ದೆ?” ಎಂದು ಕೇಳಿದಳು. ಅದಕ್ಕೆ ಪ್ರಿಯಾ, “ಅತ್ತಿಗೆ, ನನಗೆ ಎಕ್ಸ್ ಟ್ರಾ…. ಕ್ಲಾಸ್ ಇತ್ತು,” ಎಂದು ತಡವರಿಸುತ್ತಾ ಹೇಳಿದಳು.
“ಯಾವ ವಿಷಯದ ಕ್ಲಾಸ್?” ಅತ್ತಿಗೆ ಕೇಳಿದಳು.
“ಅತ್ತಿಗೆ…. ಆ ಸುಮಾ ಮೇಡಂ ಅಕೌಂಟ್ಸ್ ಕ್ಲಾಸ್ ತಗೊಳ್ಳೋದಾಗಿ ಹೇಳಿದ್ರು…. ನಾವೆಲ್ಲ ಅವರ ಕ್ಲಾಸ್ ಅಟೆಂಡ್ ಆಗಿದ್ವಿ,” ಎಂದು ಸ್ವಲ್ಪ ಅಳುಕಿನ ಧ್ವನಿಯಲ್ಲಿ ಹೇಳಿದಳು.
“ಆದರೆ, ನಿನ್ನ ಗೆಳತಿ ಬೇರೆಯದನ್ನೇ ಹೇಳುತ್ತಿದ್ದಾಳಲ್ಲ….?”
ಪ್ರಿಯಾಳತ್ತ ದೃಷ್ಟಿ ಹರಿಸುತ್ತಾ ಚಂದ್ರಿಕಾ ಪ್ರಶ್ನಿಸಿದಾಗ, ಪ್ರಿಯಾ ಒಂದು ಕ್ಷಣ ಗಲಿಬಿಲಿಗೊಂಡಳು. ಆಗ ಅವಳ ಬಾಯಿಂದ ಸತ್ಯ ಹೊರಬಂತು, “ಹೌದು ಅತ್ತಿಗೆ, ನಾನು ಫ್ರೆಂಡ್ಸ್ ಜೊತೆ ಒಂದು ಬರ್ಥ್ ಡೇ ಪಾರ್ಟಿಗೆ ಹೋಗಿದ್ದೆ. ಅವಳು ಒತ್ತಾಯ ಮಾಡಿ ನಮ್ಮನ್ನು ಮಾಲ್ ಗೆ ಕರೆದುಕೊಂಡು ಹೋದಳು,” ಎಂದು ಹೇಳಿದಳು.
“ಪ್ರಿಯಾ, ನೀನು ಬರ್ಥ್ ಡೇ ಪಾರ್ಟಿಗೆ ಹೋಗಿದ್ದೆಯಾ, ಮಾಲ್ ಗೆ ಹೋಗಿದ್ದೆಯಾ ಅಥವಾ ಬೇರೆಲ್ಲೋ ಎನ್ನುವುದು ನನಗೆ ಸಮಸ್ಯೆಯಲ್ಲ….. ನನಗೆ ಸಮಸ್ಯೆ ಇರುವುದು ನಿನ್ನ ಸುಳ್ಳಿನಲ್ಲಿ. ನಾನು ನಿನಗೆ ಎಷ್ಟೋ ಸಲ ಹೇಳಿದ್ದೆ ನನ್ನ ಮುಂದೆ ಸುಳ್ಳು ಹೇಳಬೇಡವೆಂದು….”
“ಆಯ್ತು ಅತ್ತಿಗೆ, ಇನ್ಮುಂದೆ ಅದರ ಬಗ್ಗೆ ಕಾಳಜಿ ವಹಿಸ್ತೀನಿ,” ಎಂದು ಹೇಳುತ್ತಾ ಪ್ರಿಯಾ ತನ್ನ ಕೋಣೆ ಕಡೆಗೆ ಹೊರಟು ಹೋದಳು.
ವಿಕಾಸ್ ಪತ್ನಿ ಚಂದ್ರಿಕಾಳತ್ತ ತಿರುಗಿ, “ಪ್ರಿಯಾ, ನಿನಗೆ ಸುಳ್ಳು ಹೇಳುತ್ತಿದ್ದಾಳೊ, ಸತ್ಯ ಹೇಳುತ್ತಿದ್ದಾಳೊ ಎಂದು ಹೇಗೆ ಗೊತ್ತಾಗುತ್ತದೆ? ನಾನಾಗಿದ್ದರೆ ಅವಳು ಎಕ್ಸ್ ಟ್ರಾ ಕ್ಲಾಸ್ ಗೆ ಹೋಗಿದ್ದಳು ಎಂದು ನಂಬಿಬಿಡುತ್ತಿದ್ದೆ. ನೀನು ಈ ಮುಂಚೆಯೇ ಅವಳ ಸುಳ್ಳನ್ನು ಕಂಡುಹಿಡಿದಿರುವೆ. ನನ್ನದು ಕೂಡ 1-2 ಬಾರಿ ಕಂಡುಹಿಡಿದೆ. ಅದೆಲ್ಲ ನಿನಗೆ ಹೇಗೆ ಗೊತ್ತಾಗುತ್ತದೆ?” ಎಂದು ಕೇಳಿದ.
“ನೋಡಿ, ಒಬ್ಬ ವ್ಯಕ್ತಿಯ ಸುಳ್ಳು ಕಂಡುಹಿಡಿಯುವುದು ಬಹಳ ಸುಲಭ. ಆ ವ್ಯಕ್ತಿ ಸತ್ಯ ಹೇಳುತ್ತಿದ್ದಾನೋ, ಸುಳ್ಳು ಹೇಳುತ್ತಿದ್ದಾನೋ ಎಂಬುದನ್ನು ಸ್ವತಃ ಆ ವ್ಯಕ್ತಿಯೇ ಸೂಚನೆ ಕೊಡುತ್ತಾನೆ,” ಎಂದು ನಗುತ್ತಾ ಹೇಳಿದಳು.
“ಸೂಚನೆ, ಅದೇನು?”
“ಅಂದಹಾಗೆ, ಸತ್ಯ ಅಥವಾ ಸುಳ್ಳಿನ ಅಂದಾಜನ್ನು ನಾವು ಆ ವ್ಯಕ್ತಿಯ ಬಾಡಿ ಲ್ಯಾಂಗ್ವೇಜ್ ಅಂದರೆ ಆ ವ್ಯಕ್ತಿಯ ಹಾವಭಾವದಿಂದ ಕಂಡುಕೊಳ್ಳಬಹುದು.
“ಸಾಮಾನ್ಯವಾಗಿ ಎದುರಿಗಿನ ವ್ಯಕ್ತಿ ಸತ್ಯ ಹೇಳುತ್ತಿದ್ದರೆ, ಅವನು ಏನನ್ನಾದರೂ ತಿಳಿಸಿ ಹೇಳಲು ತನ್ನ ಕೈಗಳನ್ನು ಬಳಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಆ ವ್ಯಕ್ತಿಯ ಕೈಗಳು ಸಾಕಷ್ಟು ಅಲ್ಲಾಡುತ್ತಿರುತ್ತವೆ. ಆದರೆ ಸುಳ್ಳು ಹೇಳುತ್ತಿರುವ ವ್ಯಕ್ತಿ ಕೈಗಳ ಜೊತೆ ತನ್ನ ಇಡೀ ದೇಹವನ್ನು ಸ್ಥಿರವಾಗಿಟ್ಟುಕೊಂಡಿರುತ್ತಾನೆ.”
ಚಂದ್ರಿಕಾ ಹೇಳಿದ ಮಾತಿನಲ್ಲಿ ಬಹಳಷ್ಟು ಸತ್ಯವಿತ್ತು. ಹೌದು, ಸುಳ್ಳು ಹೇಳುವ ಒಬ್ಬ ವ್ಯಕ್ತಿಯ ಹಾವಭಾವದಿಂದಲೇ ಕಂಡುಹಿಡಿಯಬಹುದು. ಸುಳ್ಳು ಕಂಡುಹಿಡಿಯಲು ಕೈಗಳ ಹೊರತಾಗಿ ಮತ್ತೆ ಕೆಲವು ಹಾವಭಾವಗಳು ಇರುತ್ತವೆ. ಅವುಗಳ ಬಗ್ಗೆ ಗಮನಿಸುವುದು ಅಗತ್ಯ.
ಅಮೆರಿಕನ್ ಬಿಹೇವಿಯರ್ ಅನಲಿಸ್ಟ್ (ಬಾಡಿ ಲ್ಯಾಂಗ್ವೇಜ್ ಎಕ್ಸ್ ಪರ್ಟ್) ಮತ್ತು ಬಾಡಿ ಲ್ಯಾಂಗ್ವೇಜ್ ಆಫ್ ಲಯರ್ಸ್ ನ ಲೇಖಕ ಡಾ. ಲಿಲಿಯಾನ್ ಗ್ಲಾಸ್ ಹೇಳುವುದೇನೆಂದರೆ, ಯಾರಾದರೂ ನಿಮಗೆ ಸುಳ್ಳು ಹೇಳುತ್ತಾರೆಂದರೆ, ಆ ವ್ಯಕ್ತಿಯ ಉಸಿರಾಟ ಬಿಸಿ ಹಿಡಿದುಕೊಂಡಿರುತ್ತದೆ. ಆ ವ್ಯಕ್ತಿಯ ಭುಜ ಮೇಲೆ ಏಳುತ್ತಿರುತ್ತದೆ ಹಾಗೂ ಧ್ವನಿ ಕುಂದುತ್ತಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆ ವ್ಯಕ್ತಿಗೆ ತನ್ನ ಉಸಿರಾಟದ ಮೇಲೆ ನಿಯಂತ್ರಣ ಇರುವುದಿಲ್ಲ. ಹೃದಯ ಬಡಿತ ಹಾಗೂ ರಕ್ತ ಪ್ರವಾಹದಲ್ಲಾದ ಪರಿವರ್ತನೆಯಿಂದ ಹೀಗಾಗುತ್ತದೆ. ಈ ತೆರನಾದ ಪರಿವರ್ತನೆ ನರ್ಸ್ ಆಗುವುದು ಹಾಗೂ ಒತ್ತಡದ ಕಾರಣದಿಂದ ಆಗುತ್ತದೆ.
ದೇಹವನ್ನು ಸ್ಥಿರಗೊಳಿಸುವುದು
ಸಾಮಾನ್ಯವಾಗಿ ನರ್ಸ್ ಆದ ವ್ಯಕ್ತಿಯ ದೇಹ ಇಂತಹ ಸಂದರ್ಭದಲ್ಲಿ ಗಲಿಬಿಲಿಗೊಳ್ಳುತ್ತದೆ ಅಂದರೆ ಚಂಚಲಗೊಳ್ಳುತ್ತದೆ. ಆದರೆ ಡಾ. ಗ್ಲಾಸ್ ಹೇಳುವುದೇನೆಂದರೆ, ನೀವು ಇಂತಹ ವ್ಯಕ್ತಿಗಳ ಬಗ್ಗೆ ಗಮನ ಕೊಡಬೇಕು, ಏಕೆಂದರೆ ಅವರು ಅತ್ಯಂತ ಸ್ಥಿರವಾಗಿದ್ದುಕೊಂಡು ಮಾತನಾಡಲು ಶುರು ಮಾಡುತ್ತಾರೆ. ಅದನ್ನು ಒಂದು ರೀತಿಯ ನ್ಯೂರಾಲಾಜಿಕಲ್ ಫೈಟ್ ನ ಸಂಕೇತ ಎಂದು ಭಾವಿಸಲಾಗುತ್ತದೆ. ಅಂದರೆ ಆ ವ್ಯಕ್ತಿ ಒಳಗೊಳಗೆ ಹೋರಾಡುತ್ತಿರುತ್ತಾನೆ.
ಸಾಮಾನ್ಯ ಅವಸ್ಥೆಯಲ್ಲಿ ಮಾತನಾಡುತ್ತಿದ್ದರೆ, ಸ್ವಾಭಾವಿಕವಾಗಿ ಆ ವ್ಯಕ್ತಿಯ ದೇಹದ ಕೆಲವು ಭಾಗಗಳು ಅದರಲ್ಲೂ ಕೈ ತಂತಾನೇ ಚಲನಶೀಲವಾಗಿರುತ್ತದೆ. ಆದರೆ ಒಬ್ಬ ವ್ಯಕ್ತಿ ತನ್ನನ್ನು ತಾನು ನಿಯಂತ್ರಣಗೊಳಿಸಿಕೊಂಡಿರುತ್ತಾನೊ, ಸ್ವಲ್ಪ ಚಲನವೇ ಮಾಡುತ್ತಿರುವುದಿಲ್ಲವೋ ತನ್ನ ಕೈಗಳನ್ನು ಬಂಧಿಯಂತೆ ಇಟ್ಟುಕೊಂಡಿರುತ್ತಾನೊ….. ಅಲ್ಲಿ ಏನೋ ಸಂಚು ಇದೆ ಎಂದರ್ಥ.
ವಿಸ್ತಾರವಾಗಿ ಹೇಳುವುದು ಒಬ್ಬ ವ್ಯಕ್ತಿ ಯಾವುದೇ ಅವಶ್ಯಕತೆಯಿಲ್ಲದೆ ಬಹಳ ವಿಸ್ತಾರವಾಗಿ ವಿವರಿಸುತ್ತಿದ್ದಾನೆಂದರೆ, ಆತ ಸತ್ಯ ಹೇಳುತ್ತಿಲ್ಲ ಎಂದರ್ಥ. ಡಾ. ಗ್ಲಾಸ್ ಪ್ರಕಾರ, ಸುಳ್ಳು ಹೇಳುವ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಾನೆ. ಏಕೆಂದರೆ ತನ್ನನ್ನು ತಾನು ಮುಕ್ತವಾಗಿ ತೋರಿಸಿಕೊಳ್ಳುವುದರಿಂದ ಎದುರಿಗಿನ ವ್ಯಕ್ತಿ ತನ್ನನ್ನು ನಂಬಬಹುದು ಎಂದು ಭಾವಿಸುತ್ತಾನೆ.
ತದೇಕ ದೃಷ್ಟಿ
ಒಬ್ಬ ವ್ಯಕ್ತಿ ಸುಳ್ಳು ಹೇಳುತ್ತಿರುವಾಗ ಆತ ತದೇಕ ದೃಷ್ಟಿಯಿಂದ ನೋಡುತ್ತಿರುತ್ತಾನೆ. ಆದರೆ ಸುಳ್ಳುಗಾರ ಎಷ್ಟೋ ಸಲ ನಿಮ್ಮೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮ ಮೇಲೆ ನಿಯಂತ್ರಣ ಹೇರಲೂ ಪ್ರಯತ್ನಿಸುತ್ತಾನೆ. ಆದರೆ ಸತ್ಯ ಹೇಳುವ ವ್ಯಕ್ತಿ ಒಮ್ಮೆ ನಿಮ್ಮ ಕಡೆ, ಇನ್ನೊಮ್ಮೆ ಬೇರೆ ಕಡೆ ನೋಡುತ್ತಿರುತ್ತಾನೆ. ಸುಳ್ಳು ಹೇಳುವ ವ್ಯಕ್ತಿ ಸತತವಾಗಿ ನಿಮ್ಮ ಕಡೆಯೇ ನೋಡುತ್ತಿರುತ್ತಾನೆ.
ಜೇಬಿನಲ್ಲಿ ಕೈ
2015ರಲ್ಲಿ ಯೂನಿರ್ಸಿಟಿ ಆಫ್ ಮಿಚಿಗನ್ ಮುಖಾಂತರ ನಡೆಸಲ್ಪಟ್ಟ ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ, ಸುಳ್ಳು ಹೇಳುವ ವ್ಯಕ್ತಿ ತನ್ನ ಕೈಗಳನ್ನು ತನ್ನಿಂದ ದೂರ ಇಡಲು ನೋಡುತ್ತಾನೆ. ಅಂದರೆ ಜೇಬಿನೊಳಗೆ ಕೈ ಇರಿಸಿಕೊಳ್ಳಬಹುದು ಅಥವಾ ಟೇಬಲ್ ನ ಒಳಗಡೆ ಬಚ್ಚಿಟ್ಟುಕೊಳ್ಳಬಹುದು. ಇದು ಎಂತಹ ಒಂದು ಸಂಕೇತವೆಂದರೆ, ಎದುರಿಗಿನ ವ್ಯಕ್ತಿ ತನ್ನ ಭಾವನೆಗಳನ್ನು ಅಥವಾ ಮಾಹಿತಿಯನ್ನು ಮುಚ್ಚಿಡುತ್ತಿದ್ದಾನೆ ಎಂದರ್ಥ.
ಸಹಜತೆಯಿಂದ ದೂರ
ಸಾಮಾನ್ಯವಾಗಿ ಸುಳ್ಳು ಹೇಳುವ ವ್ಯಕ್ತಿ ಸಹಜವಾಗಿ ಮಾತನಾಡುವುದಿಲ್ಲ. ಆತ ನಿಂತು ನಿಂತು ಮಾತನಾಡುತ್ತಾನೆ. ಅಂದಹಾಗೆ, ಒತ್ತಡದ ಸಮಯದಲ್ಲಿ ನಮ್ಮ ದೇಹದ ವ್ಯವಸ್ಥೆ ಜೊಲ್ಲಿನ ಸ್ರಾವವನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಆಗಾಗ ಗಂಟಲು ಆರುತ್ತದೆ. ಎಷ್ಟೋ ಸಲ ವ್ಯಕ್ತಿ ತನ್ನ ತುಟಿಗಳನ್ನು ಹಲ್ಲುಗಳಿಂದ ಕಚ್ಚತೊಡಗುತ್ತಾನೆ.
ಶಬ್ದಗಳನ್ನು ಪುನರುಚ್ಚರಿಸುವುದು
ಒಂದು ವೇಳೆ ಒಬ್ಬ ವ್ಯಕ್ತಿ ನಿಮ್ಮನ್ನು ಕನ್ವಿನ್ಸ್ ಮಾಡಲು ಕೆಲವು ವಿಶೇಷ ಶಬ್ದಗಳನ್ನು ಪುನರುಚ್ಚರಿಸಿದರೆ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಂದು ಅರ್ಥ.
ಕೈಗಳನ್ನು ತಗುಲಿಸುವುದು
ಸುಳ್ಳು ಹೇಳುವ ವ್ಯಕ್ತಿಯ ಮತ್ತೊಂದು ಹೆಗ್ಗುರುತೆಂದರೆ, ಆ ವ್ಯಕ್ತಿ ಸುಳ್ಳು ಹೇಳುವಾಗ ತನ್ನ ಕತ್ತು, ತಲೆ, ಎದೆಯ ಮೇಲೆ ಕೈ ತಗುಲಿಸುತ್ತಾನೆ.
ಕಾಲುಗಳ ಪೊಸಿಶನ್ ನಲ್ಲಿ ಬದಲಾವಣೆ
ಮನುಷ್ಯ ಏನನ್ನಾದರೂ ಬಚ್ಚಿಡುವಾಗ ಆತ ಸುಳ್ಳು ಹೇಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆ ವ್ಯಕ್ತಿಗೆ ಯಾರಾದರೂ ಪ್ರಶ್ನೆ ಕೇಳಿದರೆ ಆತ ಸುಳ್ಳು ಹೇಳಿ ಬಚಾವಾಗಲು ಪ್ರಯತ್ನಿಸುತ್ತಾನೆ. ಆ ಸಮಯದಲ್ಲಿ ಸಾಕಷ್ಟು ನರ್ಸ್ ಆಗಿರುತ್ತಾನೆ. ಆ ಕಾರಣದಿಂದ ಆತ ತಾನು ತನ್ನ ಕಾಲುಗಳ ಪೊಸಿಶನ್ ನ್ನು ನಿರಂತರವಾಗಿ ಬದಲಿಸುತ್ತಿರುತ್ತಾನೆ.
ಒಂದು ವಾಸ್ತವ ಸಂಗತಿಯೆಂದರೆ, ಒಂದು ಸಣ್ಣ ಸುಳ್ಳು ಎಷ್ಟೋ ಸಲ ಸಂಬಂಧವನ್ನು ಕೊನೆಗೊಳಿಸಲು ಕಾರಣವಾಗುತ್ತದೆ. ಆದಾಗ್ಯೂ ಯಾವುದಾದರೊಂದು ಕಾರಣದಿಂದ ಆತ ಸುಳ್ಳು ಹೇಳುತ್ತಿರಬಹುದು. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರೆ.
2002ರ ಯೂನಿರ್ಸಿಟಿ ಆಫ್‌ಆ್ಯಮ್ ಹರ್ಟ್ ಮೆಸೆಚೆಟ್ ವರದಿಯ ಪ್ರಕಾರ, 10 ನಿಮಿಷದ ಮಾತುಕಥೆಯ ಸಂದರ್ಭದಲ್ಲಿ ಶೇ.60ರಷ್ಟು ಜನರು ಸುಳ್ಳು ಹೇಳುತ್ತಾರೆ.
ಬ್ರಿಟನ್ನಿನ ಪೋರ್ಟ್ಸ್ ಮೌಥ್ ಯೂನಿರ್ಸಿಟಿಯ ಒಂದು ವರದಿಯ ಪ್ರಕಾರ, ಸುಳ್ಳು ಹೇಳುವ ಪ್ರಸಂಗ ಬಂದಾಗ, ಪುರುಷರು ಎದುರುಗಡೆ ಸುಳ್ಳು ಹೇಳಿದಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಲು ಹೋಗುವುದಿಲ್ಲ.
ಕಾರಣಗಳು ಏನೇ ಇರಬಹುದು, ಸುಳ್ಳು ಯಾರೇ ಹೇಳುತ್ತಿರಬಹುದು. ಒಂದು ಸಹಜ ಸಂಗತಿಯೆಂದರೆ ಸತ್ಯ ಹೊರಬಂದೇ ಬರುತ್ತದೆ ಹಾಗೂ ಎದುರಿಗಿನ ವ್ಯಕ್ತಿಯ ದೃಷ್ಟಿಯಲ್ಲಿ ಆತ ತನ್ನ ಗೌರವವನ್ನು ಕಳೆದುಕೊಳ್ಳುತ್ತಾನೆ. ಹೀಗಾಗಿ ಸಾಧ್ಯವಿದ್ದಷ್ಟು ನಾವು ಸುಳ್ಳು ಹೇಳುವುದರಿಂದ ದೂರ ಇರಬೇಕು.
– ಗೌರಿ ಸುರೇಶ್





