ಮೇಲಿಂದ ಮೇಲೆ ನಿಮ್ಮನ್ನು ಭಾವನಾತ್ಮಕವಾಗಿ ಘಾಸಿಗೊಳಿಸಲಾಗುತ್ತಿದ್ದರೆ, ಅದನ್ನು ಹಗುರವಾಗಿ ಭಾವಿಸಬೇಡಿ. ಸ್ವಲ್ಪ ಗಂಭೀರವಾಗಿ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ……!
“ಬೇರೆಯವರ ಮುಂದೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನಿನಗೆ ಸ್ವಲ್ಪವೂ ಗೊತ್ತಾಗೋದಿಲ್ಲ. ಯೂ ಆರ್ ಸಿಂಪ್ಲಿ ಸ್ಟುಪಿಡ್ ರೋಹಿತ್!” ಎಂದು ಸ್ನೇಹಾ ತನ್ನ ಗೆಳತಿಯ ಎದುರೇ ಹೇಳಿದಾಗ, ರೋಹಿತ್ ಗೆ ಒಂದು ರೀತಿಯಲ್ಲಿ ಆಘಾತವೇ ಆಯಿತು. ಇದೇನು ಇವತ್ತಿನ ಮಾತಾಗಿರಲಿಲ್ಲ. ಸ್ನೇಹಾ ಆಗಾಗ ಎಲ್ಲರೆದುರು ತನ್ನ ಗಂಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು.
ಗಂಡ ಏನೂ ತಪ್ಪು ಮಾಡಿರದಿದ್ದರೂ ತಪ್ಪುಮಾಡಿದ್ದಾನೆಂಬಂತೆ ಎಲ್ಲರೆದುರು ಅವನ ಜನ್ಮ ಜಾಲಾಡುತ್ತಿದ್ದಳು. ಅವನು ಏನಾದರೂ ಹೇಳಲು ಬಾಯಿ ತೆರೆದರೆ, ನನಗೆಲ್ಲ ಗೊತ್ತು, ನೀನೇನೂ ಹೇಳುವುದು ಬೇಕಿಲ್ಲ ಎಂದು ಅವನ ಬಾಯಿ ಮುಚ್ಚಿಸಿಬಿಡುತ್ತಿದ್ದಳು. ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಆಕೆ ಗಂಡನ ಸಲಹೆ ಕೂಡ ಕೇಳುವುದಿಲ್ಲ.
ರೋಹಿತ್ ಅವಳಿಗೆ ನೌಕರಿ ಬಿಟ್ಟು ಮಕ್ಕಳ ಜೊತೆ ಮನೆಯಲ್ಲಿಯೇ ಇರು ಎಂದು ಹೇಳಿದ್ದ. ಆದರೆ ಆಕೆ ಅವನ ಮಾತಿಗೆ ಒಪ್ಪಲಿಲ್ಲ. ತನ್ನ ಸಂಬಳದ ಹಣವನ್ನಷ್ಟೇ ಅಲ್ಲ, ಗಂಡನ ಸಂಬಳದ ಹಣವನ್ನೂ ತನ್ನ ಮನಬಂದಂತೆ ಖರ್ಚು ಮಾಡಿಬಿಡುತ್ತಿದ್ದಳು. ಅವನಿಗೆ ಹೋಗಿ ಬರಲು ಬಸ್ ಚಾರ್ಜ್ ಗಷ್ಟೇ ಹಣ ಕೊಡುತ್ತಿದ್ದಳು.
ರೋಹಿತ್ ಅಷ್ಟು ದುರ್ಬಲ ಸ್ವಭಾವದವನೇನಲ್ಲ. ಆದರೂ ಸ್ನೇಹಾಳ ಅಮಾನವೀಯ ವರ್ತನೆ, ಬೈಗುಳ, ಅಗೌರಯುತ ಶಬ್ದಗಳನ್ನು ಅವನು ಸಹಿಸಿಕೊಳ್ಳಬೇಕಾಗತ್ತಿತ್ತು. ಇನ್ನೊಂದು ಸತ್ಯ ಸಂಗತಿಯೆಂದರೆ, ಅವಳು ಅವನನ್ನು ಮನಸಾರೆ ಒಪ್ಪಿಕೊಂಡಿರಲಿಲ್ಲ.
ಭಾವನತ್ಮಾಕವಾಗಿ ನೋಯಿಸುವುದು
ರೋಹಿತ್ ಭಾವನಾತ್ಮಕವಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾನೆ. ಯಾವುದೇ ಒಬ್ಬ ವ್ಯಕ್ತಿ ಭಾವನಾತ್ಮಕವಾಗಿ ನೊಂದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ. ಇಂತಹ ಯಾತನೆಗಳಿಗೆ ಕಾನೂನಿನ ನೆರವು ಪಡೆಯಲು ಆಗದು. ನಿಮ್ಮ ಹೆಂಡತಿ ನಿಮ್ಮ ಹಣದ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದಾಳೆ, ಸಣ್ಣಪುಟ್ಟ ಖರ್ಚುಗಳಿಗೂ ಅವಳು ಹಣ ಕೊಡುವುದಿಲ್ಲವೆಂದು ದೂರು ಕೊಡುವುದು ಕಷ್ಟವಾಗುತ್ತದೆ. ಅವಳು ನಿಮ್ಮ ಕುಟುಂಬದವರು, ಸಂಬಂಧಿಕರು, ಸ್ನೇಹಿತರನ್ನು ನಿಮ್ಮಿಂದ ದೂರ ಮಾಡಿದ್ದಾಳೆ. ತನ್ನ ಮಾತನ್ನು ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಾಳೆ.
ಪ್ರೀತಿ ವ್ಯಕ್ತಪಡಿಸದಿರುವುದು
ಪ್ರೀತಿ ವ್ಯಕ್ತಪಡಿಸದಿರುವುದು, ಸಂಗಾತಿಯ ಯಾವುದೇ ಮಾತಿಗೆ ಒಪ್ಪಿಗೆ ಕೊಡದಿರುವುದು ಕೂಡ ಮಾನಸಿಕ ದೌರ್ಜನ್ಯವೇ ಆಗಿದೆ. ಇದು ಮಾನಸಿಕ ಯಾತನೆಗಿಂತ ಘೋರವಾಗಿರುತ್ತದೆ. ಅದನ್ನು ಸಹಿಸಿಕೊಳ್ಳುವುದಷ್ಟೇ ಅದನ್ನು ಬಲ್ಲ. ಶೇ.32ರಷ್ಟು ಪುರುಷರು ಈ ತೆರನಾದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಅವರನ್ನು ಅವರ ಹೆಂಡತಿಯರು ಕೆಟ್ಟದಾಗಿ ನಿಂದಿಸುತ್ತಾರೆ, ಅವಮಾನಿಸುತ್ತಾರೆ, ನಿರ್ಲಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅವರು ಮೌನವನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಸಂಬಂಧವನ್ನು ಉಳಿಸಿಕೊಂಡು ಹೋಗಲು ಯಾವುದೇ ತೆರನಾದ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿಬಿಡುತ್ತಾರೆ. ಅದು ಮನೆ ನಿರ್ವಹಣೆ, ಹಣದ ವ್ಯವಹಾರ ಇಲ್ಲವೇ ಲೈಂಗಿಕ ಸಂಬಂಧವೇ ಆಗಿರಬಹುದು.
ಮಕ್ಕಳನ್ನು ಕೂಡ ಮಾನಸಿಕ ದೌರ್ಜನ್ಯದ ಅಸ್ತ್ರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಹೆಂಡತಿಯರು, ನಾನು ಮಕ್ಕಳನ್ನು ಕರೆದುಕೊಂಡು ಹೊರಟುಹೋಗುವುದಾಗಿ ಬೆದರಿಕೆ ಹಾಕುತ್ತಿರುತ್ತಾರೆ.
ತಮಾಷೆ ಮಾಡುವುದು
“ನನ್ನ ಹೆಂಡತಿ ಎಲ್ಲರೆದುರು ನನ್ನನ್ನು ಅಮಾನಿಸುತ್ತಾಳೆ. ಮಕ್ಕಳೊಂದಿಗೆ ಹೊರಟು ಹೋಗುವುದಾಗಿ ಆಗಾಗ ಬೆದರಿಕೆ ಹಾಕುತ್ತಾಳೆ. ಏಕೆಂದರೆ ಆಕೆ ಶ್ರೀಮಂತರ ಮನೆಯವಳು. ನನ್ನಂತಹ ಪ್ರತಿಷ್ಠಿತ ಮನೆತನದ ಮಹಿಳೆಯ ಜೊತೆ ಮದುವೆ ಆಗಿದ್ದೀಯಾ, ಅದಕ್ಕೆ ನೀನು ಹೆಮ್ಮೆಪಡಬೇಕು ಎಂದು ಆಕೆ ಆಗಾಗ ಹೇಳುತ್ತಾ ಇರುತ್ತಾಳೆ,” ಎಂದು 39 ವರ್ಷದ ವ್ಯಕ್ತಿಯೊಬ್ಬರು ತಮ್ಮ ನೋವು ತೋಡಿಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯನ್ನು ನಿರರ್ಥಕ ಎಂದು ಹೇಳುವುದು, ಆತನ ಅಸ್ತಿತ್ವವನ್ನು ನಿರಾಕರಿಸುವುದು ಆ ವ್ಯಕ್ತಿಯ ಮನಸ್ಸಿನಲ್ಲಿ ಒಂದು ರೀತಿಯಲ್ಲಿ ಕೀಳು ಭಾವನೆಯನ್ನು ಬಿಂಬಿಸುತ್ತದೆ. ಇಂತಹ ಪತ್ನಿಯರು ತಮ್ಮನ್ನು ತಾವು ಸುಪೀರಿಯರ್ ಎಂದು ಸಾಬೀತುಪಡಿಸುವ ಯತ್ನ ಮಾಡುತ್ತಿರುತ್ತಾರೆ. ಜೊತೆಗೆ ಸಂಗಾತಿಯನ್ನು ಅವಮಾನಗೊಳಿಸಿ ತಮ್ಮ ಅಹಂನ್ನು ಸಂತೃಪ್ತಿಗೊಳಿಸುತ್ತಾರೆ.
ನಿಯಂತ್ರಣದ ಭಾವನೆ
ತಜ್ಞರ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ನೋಯಿಸುವುದರ ಹಿಂದೆ ಏಕೈಕ ಉದ್ದೇಶ ಇರುತ್ತದೆ. ಅದೇ ಆ ವ್ಯಕ್ತಿಯನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುವುದಾಗಿದೆ. ಗಂಡನ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಯೂ ದುರ್ವರ್ತನೆ ತೋರುವುದರ ಹಿಂದಿನ ಕಾರಣ ಕೂಡ ಯಾರೂ ಅವರನ್ನು ಮಾತನಾಡಿಸಬಾರದು ಎನ್ನುವುದಾಗಿರುತ್ತದೆ.
ಮಾನಸಿಕವಾಗಿ ಗೋಳು ಹೊಯ್ದುಕೊಳ್ಳುವ ಹೆಂಡತಿ ಸಂಗಾತಿಯ ಮೇಲೆ ನಿಯಂತ್ರಣ ಹೊಂದಲು ಆತನ ಆಗುಹೋಗುಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾಳೆ. ಅವನು ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ, ಯಾರ ಜೊತೆ ಮಾತನಾಡುತ್ತಾನೆ ಎಂಬ ಬಗ್ಗೆ ಗಮನಿಸುತ್ತಾಳೆ.
ಸಂಗಾತಿ ಮಾಡುವ ಕೆಲಸದಲ್ಲಿ ಏನಾದರೂ ತಪ್ಪು ಕಂಡುಹಿಡಿದು ಅವನಲ್ಲಿ ತಪ್ಪಿತಸ್ಥ ಭಾವನೆಯನ್ನು ತುಂಬುತ್ತಿರುತ್ತಾಳೆ. ಅದರಿಂದ ಅವನ ಸಾಮಾಜಿಕ ಜೀವನ ಛಿದ್ರವಾಗುತ್ತದೆ. ಸಂಗಾತಿಯ ಸಮಯ, ಭಾವನೆ, ಸ್ನೇಹದ ಮತ್ತು ಹಣಕಾಸಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲು ಪ್ರಯತ್ನಿಸುತ್ತಾಳೆ. ಅವನು ಪರಿಪೂರ್ಣವಾಗಿ ತನ್ನನ್ನೇ ಅವಲಂಬಿಸುವಂತೆ ಮಾಡುತ್ತಾಳೆ.
ಗಮನಕ್ಕೆ ಬರುವುದು ವಿಳಂಬ
ಬಹಳಷ್ಟು ಪುರುಷರಿಗೆ ತಾವು ಮಾನಸಿಕ ದೌರ್ಜನ್ಯಕ್ಕೆ ತುತ್ತಾಗಿರುವ ಸಂಗತಿ ಬಹಳ ತಡವಾಗಿ ಗಮನಕ್ಕೆ ಬರುತ್ತದೆ. ಅವರು ಹೇಗೇ ಜೀವನ ಮಾಡಲಿ ಅದರಲ್ಲಿಯೇ ಸಂತೃಪ್ತಿ ಕಾಣುತ್ತಾರೆ. ಅದರ ಬಗ್ಗೆ ಅರಿವಾದಾಗ ಅಥವಾ ಕುಟುಂಬದವರಿಗೆ ಅದರ ಸುಳಿವು ಸಿಕ್ಕಾಗ ಆಕೆಯ ವಿರುದ್ಧ ಹೆಜ್ಜೆ ಹಾಕಲು ಅವನು ಧೈರ್ಯ ತೋರಿಸುವುದಿಲ್ಲ. ಏಕೆಂದರೆ ಅವನು ಎಲ್ಲವೂ ಸರಿಹೋಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾನೆ.
ಲಕ್ಷಣಗಳು
ಖಿನ್ನತೆ, ನಿರಂತರ ತಲೆನೋವು, ಸೊಂಟನೋವು ಹಾಗೂ ಹೊಟ್ಟೆಯ ಸಮಸ್ಯೆಗಳು ಅವರನ್ನು ಸುತ್ತುರೆಯುತ್ತವೆ. ಹಾಗೆಂದೇ ಜೀವಿಸುವ ಹಾಗೂ ಏನನ್ನಾದರೂ ಮಾಡುವ ಛಲವೇ ಹೊರಟುಹೋಗುತ್ತದೆ. ಸಮರ್ಥ ವ್ಯಕ್ತಿ ಎಷ್ಟೋ ಸಲ ಅಪರಿಚಿತನಂತೆ ಕತ್ತಲೆಯಲ್ಲಿ ಕಳೆದು ಹೋಗುತ್ತಾನೆ. ಇಲ್ಲವೇ ತನ್ನ ಅಸ್ತಿತ್ವವನ್ನೇ ನಿರಾಕರಿಸಿಬಿಡುತ್ತಾನೆ. ಮೇಲಿಂದ ಮೇಲೆ ತನ್ನ ಆತ್ಮಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ತನ್ನ ಅಸ್ತಿತ್ವ ಇದೆಯಾ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಾನೆ.
ಈ ಪ್ರಶ್ನೆ ನಿಮಗೆ ನೀವೇ ಕೇಳಿಕೊಳ್ಳಿ……
ಹೆಂಡತಿ ಯಾವಾಗಲೂ ನಿಮ್ಮನ್ನು ಟೀಕಿಸುತ್ತ ಇರುತ್ತಾಳಾ, ಅವಮಾನಿಸುತ್ತಾಳಾ, ನಿಮ್ಮ ಸಾಮರ್ಥ್ಯ ತೆಗಳುತ್ತಾಳಾ?
ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುತ್ತಾಳೆಯೇ?
ನಿಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಇತರರ ಜೊತೆ ಸಂಪರ್ಕ ಮಾಡಲು ಅಡ್ಡಿಪಡಿಸುತ್ತಾಳಾ?
ಅವಳ ಮೂಡ್ ಯಾವಾಗಲೂ ಬದಲಾಗುತ್ತಿರುತ್ತಾ?
ನೀವು ಯಾರನ್ನಾದರೂ ಭೇಟಿಯಾಗುವುದು, ಅವರೊಂದಿಗೆ ತಮಾಷೆ ಮಾಡುವುದು ಆಕೆಗೆ ಹಿಡಿಸುವುದಿಲ್ಲವೇ?
ನೀವು ಮಾನಸಿಕವಾಗಿ ನೊಂದಿಲ್ಲ ತಾನೇ? ಒಬ್ಬ ಪುರುಷ ಮಹಿಳೆಯೊಬ್ಬಳಿಂದ ದೌರ್ಜನ್ಯಕ್ಕೊಳಗಾಗಿದ್ದಾನೆ ಅಥವಾ ನೊಂದಿದ್ದಾನೆ ಎನ್ನುವುದನ್ನು ನಮ್ಮ ಸಮಾಜ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಅಂದಹಾಗೆ ನಮ್ಮ ಭಾರತೀಯ ಕಾನೂನು ಮಹಿಳೆಯರ ಹಕ್ಕುಗಳಿಗಾಗಿ ಹೆಚ್ಚು ಬಲ ಕೊಡುತ್ತದೆ. ಒಂದು ವೇಳೆ ಪುರುಷನ ವತಿಯಿಂದ ದೌರ್ಜನ್ಯ ಆಗಿದ್ದರೆ ಸಮಾಜ ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ. ಅದು ಚರ್ಚೆಯ ವಿಷಯ ಕೂಡ ಆಗುತ್ತದೆ.
ಮಾನಸಿಕ ದೌರ್ಜನ್ಯ ಅಂದರೇನು?
ಡಾ. ಅನುರಾಧಾ `ಎಮೋಷನ್ ಅಬ್ಯೂಸ್’ ಕುರಿತಂತೆ ಹೀಗೆ ಹೇಳುತ್ತಾರೆ.
ಮಾತಿನಲ್ಲಿ ಅಥವಾ ಏನನ್ನೂ ಹೇಳದೆಯೇ ಸಂಗಾತಿಗೆ ನೀಡಲಾಗುವ ಮಾನಸಿಕ ಒತ್ತಡ ಅಥವಾ ತೊಂದರೆ ಉಂಟು ಮಾಡುವ ಪರಿಸ್ಥಿತಿ ಸೃಷ್ಟಿಸಿದರೆ ಅದನ್ನು `ಎಮೋಷನ್ ಅಬ್ಯೂಸ್’ ಎಂದು ಕರೆಯುತ್ತಾರೆ.
ಸಂಗಾತಿಗಳ ನಡುವೆ ಈ ಸ್ಥಿತಿ ಬಂದಿದೆ ಎಂದರೆ, ಅವರಿಬ್ಬರ ನಡುವೆ ವಿಶ್ವಾಸ ಉಳಿದಿಲ್ಲ ಎಂದರ್ಥ. ಒಬ್ಬರು ಇನ್ನೊಬ್ಬರಿಗೆ ಭಾವನಾತ್ಮಕವಾಗಿ ತೊಂದರೆ ಕೊಡುತ್ತಿದ್ದಾರೆಂದರೆ ಅವರ ನಡುವಿನ ಸಮ್ಮಾನದ ಸೇತುವೆ ತುಂಡರಿಸಿದೆ. ಈ ಎಮೋನಷನ್ ಅಬ್ಯೂಸ್ ನಿಯಂತ್ರಣ ಮಾಡುವ, ತನ್ನ ವರ್ತನೆಯಿಂದ ಅವನನ್ನು ರೊಚ್ಚಿಗೆಬ್ಬಿಸುವ ಅಥವಾ ಜೀವನ ನಡೆಸಲು ತೊಂದರೆಯುಂಟು ಮಾಡುವುದು, ಅವನಿಂದ ಅಗತ್ಯಕ್ಕಿಂತ ಹೆಚ್ಚು ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು ಹೆಚ್ಚು ಪೊಸೆಸಿವ್ ಆಗಿರುವ ರೂಪದಲ್ಲಿ ಇರಬಹುದು.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇದಕ್ಕೆ ಹೆಚ್ಚು ತುತ್ತಾಗುತ್ತಾರೆ. ಕೌಟುಂಬಿಕ ದೌರ್ಜನ್ಯ ಹಾಗೂ ಬೆದರಿಕೆಯ ಜೊತೆಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ.
ಸಂಗಾತಿಗಳಿಬ್ಬರು ಹೆಲ್ತ್ ಪ್ರೊಫೆಶನರ್ ಗಳಿಂದ ಇದರ ಬಗ್ಗೆ ಸಲಹೆ ಪಡೆಯಬೇಕು. ಆಗಲೇ ಹೀಗಾಗಲು ಮುಖ್ಯ ಕಾರಣ ಏನು ಎಂಬುದು ತಿಳಿಯುತ್ತದೆ.
– ಮೋನಿಕಾ
ಮಾನಸಿಕ ದೌರ್ಜನ್ಯ ನಿರ್ವಹಣೆ ಹೇಗೆ?
- ಸಕಾರಾತ್ಮಕ ಯೋಚನೆ ಇಟ್ಟುಕೊಂಡು ಸಂಬಂಧದಲ್ಲಿ ಕಹಿ ಬೆರೆಸದೆ. ಹೊಸ ರೀತಿಯಲ್ಲಿ ಜೀವನ ಸಾಗಿಸಲು ಸಿದ್ಧತೆ ನಡೆಸಬೇಕು.
- ಮಾನಸಿಕ ಯಾಚನೆ ನೀಡುವ ಸಂಗಾತಿಯ ಮನಸ್ಥಿತಿಯನ್ನು ಅರಿತುಕೊಳ್ಳಿ.
- ನಿಮ್ಮೊಂದಿಗಿನ ಸಂಗಾತಿಯ ವರ್ತನೆಯ ಬಗ್ಗೆ ಆಪ್ತ ಸ್ನೇಹಿತರು ಅಥವಾ ಸಂಬಂಧಿಕರ ಬಳಿ ಹೇಳಿಕೊಳ್ಳಲು ಹಿಂದೇಟು ಹಾಕದಿರಿ.
- ನಿಮ್ಮ ಆತ್ಮಗೌರವ ಹಾಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮಗೆ ಖುಷಿ ಕೊಡುವ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ.
- ನಿಮ್ಮ ವಿರುದ್ಧ ಮಾನಸಿಕ ದೌರ್ಜನ್ಯ ನಡೆಸುವ ವ್ಯಕ್ತಿಗೆ ನೀವೆಂಥ ಸಮರ್ಥರು ಎಂಬುದು ಗೊತ್ತಿಲ್ಲ.
- ನಿಮ್ಮನ್ನು ನೀವು ಗೌರವಿಸಿ. ನಿಮ್ಮಲ್ಲಿಯೇ ನೀವು ತಪ್ಪುಗಳನ್ನು ಹಾಗೂ ಕೊರತೆಗಳನ್ನು ಹುಡುಕುತ್ತಾ ಹೋದರೆ ಏನನ್ನು ಸಾಧಿಸಲೂ ಆಗದು.
- ಒಂದು ವೇಳೆ ನಿಮ್ಮ ಸಂಗಾತಿ ಯಾವುದೇ ರೀತಿಯಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸದಿದ್ದರೆ ಕೌನ್ಸೆಲರ್ ನೆರವು ಪಡೆದುಕೊಳ್ಳಿ.





