ಯೌವನದ ಹುಚ್ಚು ಹೊಳೆಯಲ್ಲಿ ಬಡ ಹುಡುಗಿ ಮಲ್ಲಿಕಾ, ಶ್ರೀಮಂತ ದೀಪಕ್ ಗೆ ಮರುಳಾಗಿ ಎಡವಿದಳು. ಇದರಿಂದ ಅವಳು ಭಯಪಟ್ಟಂತೆಯೇ ಅವಿವಾಹಿತ ತಾಯಿ ಎನಿಸಬೇಕಾಯಿತು. ಮುಂದೆ ಇವಳ ಬಾಳಿನ ಭವಿಷ್ಯವೇನು…….?
ಕನ್ನಿಕಾಗೆ ತೀವ್ರ ಜ್ವರ ಬಂದು ರೂಮಿನಲ್ಲಿ ಮುಸುಕೆಳೆದು ಮಲಗಿಬಿಟ್ಟಿದ್ದಳು. ಮಧ್ಯಾಹ್ನ ಡೈನಿಂಗ್ ಹಾಲ್ ನಲ್ಲೂ ಅವಳು ಕಾಣಿಸದ ಕಾರಣ ಮಲ್ಲಿಕಾ ಬಾಕಿ ಹುಡುಗಿಯರನ್ನು ವಿಚಾರಿಸಿದಳು. ಅವರು, ಅವಳಿಗೆ ಜ್ವರ ಬಂದು ರೂಮಿನಲ್ಲಿ ಮಲಗಿದ್ದಾಳೆ ಎಂದು ಹೇಳಿದಾಗ ಗಾಬರಿಯಿಂದ ಅವಳ ರೂಮಿನತ್ತ ಓಡು ನಡುಗೆಯಲ್ಲಿ ಬಂದಳು.
ಕನ್ನಿಕಾ ಮೈತುಂಬಾ ಹೊದಿಕೆ ಹೊದ್ದು ಎಚ್ಚರವಿಲ್ಲದೆ ಮಲಗಿಬಿಟ್ಟಿದ್ದಳು. ಅವಳು ಹೊದ್ದ ಮುಸುಕನ್ನು ಮಲ್ಲಿಕಾ ಮೆಲ್ಲನೆ ಸರಿಸಿ ಮೃದುವಾಗಿ ಅವಳ ಹಣೆಯನ್ನು ಮುಟ್ಟಿದಳು. ಒಮ್ಮೆಲೇ ಶಾಕ್ ಹೊಡೆದವಳಂತೆ ಕೈಯನ್ನು ಹಿಂದಕ್ಕೆ ಎಳೆದುಕೊಂಡಳು. ಕನ್ನಿಕಾಳ ಮೈ ಕೆಂಡದಂತೆ ಸುಡುತ್ತಿತ್ತು. ತಡಮಾಡದೆ ತಕ್ಷಣ ಆಶ್ರಮದ ಡಾಕ್ಟರ್ ಚಿದಾನಂದರಿಗೆ ಫೋನಾಯಿಸಿ ಕನ್ನಿಕಾಳಿಗೆ ಜ್ವರ ಬಂದ ವಿಷಯ ತಿಳಿಸಿ ಅರ್ಜೆಂಟ್ ಬನ್ನಿ ಎಂದು ಕರೆದಳು. ಡಾ. ಚಿದಾನಂದ್, “ಹೆದರಬೇಡಿ, ನಾನು ಬರುವವರೆಗೆ ಅವಳ ಹಣೆಗೆ ತಣ್ಣೀರು ಪಟ್ಟಿ ಹಾಕುತ್ತಿರಿ. ನಾನು ತಕ್ಷಣ ಬರ್ತೀನಿ,” ಎಂದು ಹೇಳಿದರು.
ಡಾಕ್ಟರ್ ಬಂದು ಕನ್ನಿಕಾಳನ್ನು ಪರೀಕ್ಷಿಸಿ, “ಮಲ್ಲಿಕಾ ಮೇಡಂ, ಹೆದರುವ ಅವಶ್ಯಕತೆ ಇಲ್ಲ. ವೈರಲ್ ಫೀವರ್ ಅಷ್ಟೇ. ನಾನು ಮಾತ್ರೆಗಳನ್ನು ಕೊಡ್ತೀನಿ ಅದನ್ನು ಕೊಡಿ. ಒಂದೆರಡು ದಿನ ರೆಸ್ಟ್ ತಗೊಳ್ಳಲಿ. ಹಾಗೆ ಅವಳಿಗೆ ಖಾರ, ಎಣ್ಣೆ ಇಲ್ಲದ ಪಥ್ಯದ ಊಟ ಕೊಡಿ. ಎರಡು ದಿನದಲ್ಲಿ ಆರಾಮವಾಗ್ತಾಳೆ,” ಎಂದು ಹೇಳಿ ತಮ್ಮ ಕಿಟ್ ಎತ್ತಿಕೊಂಡು ಹೊರಟುಹೋದರು.
ಮಲ್ಲಿಕಾ ಘಳಿಗೆಗೊಮ್ಮೆ ತಣ್ಣೀರು ಪಟ್ಟಿ ಬದಲಿಸುತ್ತಾ ಅವಳ ಬಳಿಯೇ ಕುಳಿತು ಅವಳನ್ನು ಉಪಚರಿಸತೊಡಗಿದಳು. ಬೆಳಗ್ಗೆ ಎದ್ದಾಗಿನಿಂದ ಸ್ವಲ್ಪ ಸುಸ್ತು ಎನಿಸಿದ ಕನ್ನಿಕಾಳಿಗೆ ಹೊತ್ತು ಏರಿದಂತೆ ಮೈಬಿಸಿಯೂ ಏರುತ್ತಾ ಕೊನೆಗೆ ಕೆಂಡದಂತೆ ಮೈ ಬಿಸಿಯಾಗಿತ್ತು. ಜ್ವರದ ತಾಪ ತಾಳಲಾಗದೆ ರೂಮಿಗೆ ಬಂದು ಮುಸುಕೆಳೆದು ಮಲಗಿಬಿಟ್ಟಿದ್ದಳು.
ಕನ್ನಿಕಾಳ ಎದುರು ಕುಳಿತ ಮಲ್ಲಿಕಾ, ಕ್ಷಣ ಹೊತ್ತು ಅವಳ ಮುಖವನ್ನೇ ದಿಟ್ಟಿಸಿದಳು. ಅವಳ ಮುಖದೊಳಗೆ ಮತ್ತೇನೋ ಕಂಡಂತಾಗಿ ಗಲಿಬಿಲಿಗೊಂಡಳು. ಹೃದಯ ಕಂಪಿಸಿತು. ಏನನ್ನೋ ನೆನೆದು ಕಣ್ತುಂಬಿ ಬಂದಿತು. ಆದರೆ ಹೀಗೆ ತಾನು ಕಣ್ಣೀರು ಹಾಕುವುದನ್ನು ಮತ್ತೆ ಯಾರಾದರೂ ನೋಡಿದರೆ, ಎಂಬ ಭೀತಿ ಮೂಡಿ, ಗಡಬಡಿಸಿ ಬಂದ ಕಣ್ಣೀರ ಕೋಡಿಗೆ ರೆಪ್ಪೆಯ ತಡೆಯೊಡ್ಡಿ ಹಿಡಿದಿಟ್ಟು ನಿಲ್ಲಿಸಿದಳು. ಮುಖದಲ್ಲಿ ಸಹಜತೆಯ ಸೋಗು ಧರಿಸಿದಳು.
ಅವಳಿಗೆ ಒಮ್ಮೆ ಕನ್ನಿಕಾಳನ್ನು ಅಪ್ಪಿ ಮುದ್ದಾಡಬೇಕು ಎಂಬ ಆಸೆಯಾಯ್ತು. ಆದರೂ ಆಕೆ ಹಾಗೆ ಮಾಡುವಂತಿರಲಿಲ್ಲ. ತನ್ನ ಮನಸ್ಸಿನ ಆಸೆಯನ್ನು ಬಲವಂತದಿಂದ ಅದುಮಿಟ್ಟುಕೊಂಡು ಆ ಕ್ಷಣಕ್ಕೆ ಅಲ್ಲಿನ ತನ್ನ ಸ್ಥಾನಮಾನವನ್ನು ಗಮನದಲ್ಲಿ ತಂದುಕೊಂಡು ಗಂಭೀರವಾಗಿ ಕುಳಿತಳು.
ಇಂಜೆಕ್ಷನ್ ತನ್ನ ಪ್ರಭಾವ ಬೀರಿದ್ದರಿಂದ ಕನ್ನಿಕಾಳ ಮೈ ಬೆವರಿ ಜ್ವರದ ತಾಪ ತುಸು ಇಳಿಮುಖವಾಗಿತ್ತು. ಒಮ್ಮೆ ಕಣ್ಣು ಬಿಟ್ಟು ಮಲ್ಲಿಕಾಳೆಡೆಗೆ ನೋಡಿದ ಕನ್ನಿಕಾ ಮತ್ತೆ ಸುಸ್ತಿನಿಂದ ಕಣ್ಮುಚ್ಚಿ ಮಲಗಿದಳು. ಅವಳ ಜ್ವರ ಸ್ವಲ್ಪ ಇಳಿದಿದ್ದು ಮಲ್ಲಿಕಾಳ ಮನಸ್ಸಿಗೆ ಸಮಾಧಾನ ತಂದಿತ್ತು. ಒಂದೇ ದಿನದಲ್ಲಿ ಅವಳ ಮುಖ ಬಾಡಿದ ಮಲ್ಲಿಗೆ ಹೂವಿನಂತಾಗಿತ್ತು. ತುಟಿಗಳು ಒಣಗಿ ಅರೆಬಿರಿದಿದ್ದವು. ಕನ್ನಿಕಾಳ ಮುಖದ ಮೇಲೆ ಮೆಲ್ಲನೆ ಕೈಯಿಂದ ನೇವರಿಸಿದಳು. ಅವಳ ಸ್ಪರ್ಶ ಹಿತವೆನಿಸಿತು.
ಕನ್ನಿಕಾಳ ಬಳಿ ಬೇರೆ ಯಾರನ್ನಾದರೂ ಕೂರಿಸುವ ಬದಲು ಸ್ವತಃ ಮಲ್ಲಿಕಾಳೇ ಅವಳ ಬಳಿ ಕುಳಿತಿರುವುದು ಆಶ್ರಮದಲ್ಲಿರುವ ಪ್ರತಿಯೊಬ್ಬರ ಹುಬ್ಬು ಮೇಲೇರುವಂತೆ ಮಾಡಿತ್ತು. ಎಲ್ಲರ ಮನದಲ್ಲೂ ಒಂದೇ ಪ್ರಶ್ನಾರ್ಥಕ ಚಿಹ್ನೆ. ಆದರೂ ಯಾರೂ ಆ ವಿಷಯದ ಕುರಿತು ಅವಳ ಬಳಿ ಬಾಯಿ ಬಿಡಲಿಲ್ಲ. ಇವಳದ್ದೇನು ಅಂತಹ ಹೆಚ್ಚುಗಾರಿಕೆ ಎಂಬ ಭಾವ ಆಶ್ರಮದ ಮಿಕ್ಕ ಹುಡುಗಿಯರದಾಗಿತ್ತು.
ರೂಮಿನ ಒಳಗೆ ಬಂದ ಆಶ್ರಮದ ಸಹಾಯಕಿ ಸುಮನಾ, “ಮಲ್ಲಿಕಾ ಅಕ್ಕಾ…. ನೀವು ಅಷ್ಟೊತ್ತಿನಿಂದ ಇಲ್ಲಿಯೇ ಕುಳಿತಿರುವಿರಿ. ಎದ್ದು ಹೋಗಿ ಮುಖ ತೊಳೆದು ಟೀ ಕುಡಿದು ಬರಬಾರದಾ…. ಅಲ್ಲಿವರೆಗೂ ನಾನಿಲ್ಲಿ ಇವಳ ಬಳಿ ಕೂತು ತಣ್ಣೀರು ಪಟ್ಟಿ ಬದಲಿಸುವೆ,” ಎಂದು ಕಾಳಜಿಪೂರಿತ ಆಕ್ಷೇಪಣೆಯ ಧ್ವನಿಯಲ್ಲಿ ಹೇಳಿದಳು.
ಸುಮಾನಾಳ ಮಾತಿಗೆ ಅಡ್ಡಡ್ಡ ತಲೆಯಾಡಿಸಿದ ಮಲ್ಲಿಕಾ, “ಬೇಡ ಸುಮನಾ, ಇವಳ ಜ್ವರ ಪೂರ್ತಿ ಇಳಿಯುವವರೆಗೂ ನಾನಿಲ್ಲಿ ಇವಳ ಬಳಿಯೇ ಕೂತಿರುತ್ತೇನೆ. ನನ್ನ ಬಗ್ಗೆ ನೀನೇನು ಯೋಚನೆ ಮಾಡ್ಬೇಡ. ಇವಳು ಎದ್ದು ಓಡಾಡೋ ಹಾಗಾದ್ರೆ ಸಾಕು. ಈಗ ಎಷ್ಟೋ ವಾಸಿ. ಜ್ವರ ಸ್ವಲ್ಪ ಇಳಿದಿದೆ. ಆದ್ರೂ ಇನ್ನೂ ಪೂರ್ತಿ ಕಣ್ಣುಬಿಟ್ಟಿಲ್ಲ. ಒಮ್ಮೆ ಕಣ್ಣು ತೆರೆದರೆ ಸಾಕು ನನಗೆ ಆಗ ಮನಸ್ಸಿಗೆ ನೆಮ್ಮದಿ,” ಎಂದಳು.
ಮಲ್ಲಿಕಾ ಹೇಳುವುದನ್ನು ಕೇಳಿಸಿಕೊಂಡ ಸುಮನಾ, ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದು ಕಡೆಗೆ ಇವಳನ್ನು ಇಲ್ಲಿಂದ ಏಳಿಸಲು ಅನ್ಯ ದಾರಿ ಇಲ್ಲದವಳಂತೆ ಹೊರಡಲು ಅನುವಾಗುತ್ತಾ, “ಆಯ್ತಕ್ಕಾ…. ನಿಮ್ಮಿಷ್ಟ. ಯಾರಾದರೂ ಹುಡುಗಿಯರ ಕೈಯಲ್ಲಿ ಇಲ್ಲಿಗೇ ಟೀ ಕಳಿಸ್ತೀನಿ, ಕುಡೀರಿ. ನೀವು ಮಧ್ಯಾಹ್ನನೂ ಊಟ ಮಾಡಿಲ್ಲ. ಇವಳಿಗೆ ಆರಾಮಿಲ್ಲ ಅಂತ ಕೇಳಿದ್ದೇ ಹಾಗೆ ಹೊರಟು ಬಂದ್ರಿ. ಬಾಳ ಹೊತ್ತು ಏನೂ ತಿನ್ನದೆ ಇದ್ರೆ ತಲೆನೋವು ಬರುತ್ತೆ, ಸುಸ್ತಾಗುತ್ತೆ, ಆಮೇಲೆ ನೀವು ಹುಷಾರು ತಪ್ತೀರಾ…ಅದಕ್ಕೆ ಇಲ್ಲಿಗೆ ಟೀ ಕಳಿಸ್ತೀನಿ ನೀಲಪ ಕುಡಿಯದೆ ಇರಬೇಡಿ,” ಎಂದು ಒತ್ತಾಯಿಸಿದಳು.
ಯಾರಿಗೆ ಯಾರೋ ಎರವಿನ ಸಂಸಾರ ಎನ್ನುವ ಹಾಗೆ ಇಲ್ಲಿ ಯಾರು ಯಾರಿಗೂ ಸಂಬಂಧವಿಲ್ಲ. ಆದರೂ ಒಬ್ಬರಿಗೊಬ್ಬರು ತಾವೇ ಇಲ್ಲಿರುವ ನಾವೆಲ್ಲರೂ ಒಂದೇ ದೋಣಿಯ ಪಯಣಿಗರು ಎನ್ನುವ ಕಹಿಸತ್ಯದಿಂದ ಮಲ್ಲಿಕಾಳ ಮನಸ್ಸು ನೊಂದಿತು. ಸುಮನಾಳ ಮಾತಿಗೆ ಆಗಲಿ ಎಂಬಂತೆ ತಲೆ ಆಡಿಸಿದಳು.
ಮಲ್ಲಿಕಾಳ ವರ್ತನೆ ಸುಮನಾಳಿಗೆ ವಿಚಿತ್ರವೆನಿಸಿತು. ಆದರೂ ಒಬ್ಬರೊಬ್ಬರ ಮೇಲೆ ಒಂದೊಂದು ತರಹದ ಒಲವು. ಅವರಲ್ಲಿ ಯಾರನ್ನೋ ಕಂಡಂತಾಗಿ ಅವರ ಬಗ್ಗೆ ಸ್ವಲ್ಪ ಹೆಚ್ಚು ಪ್ರೀತಿ ಒಲವು ಮೂಡಬಹುದು ಅಷ್ಟೆ. ಅನ್ಯಥಾ ಯೋಚಿಸುವುದೇಕೇ ಎಂದುಕೊಂಡ ಸುಮನಾ ಅಲ್ಲಿಂದ ಸರಿದು ಹೋದಳು.
ಸ್ವಲ್ಪ ಹೊತ್ತಿನಲ್ಲಿ ಆಶ್ರಮದ ಹುಡುಗಿಯರಾದ ಧೃತಿ, ಶೃತಿ, ಕೃತಿ ಮಲ್ಲಿಕಾಳಿಗಾಗಿ ಒಂದು ಪ್ಲೇಟಿನಲ್ಲಿ ಆಲೂಗಡ್ಡೆ ಬಜ್ಜಿ ಮತ್ತು ಫ್ಲಾಸ್ಕಿನಲ್ಲಿ ಚಹಾ ತೆಗೆದುಕೊಂಡು ಬಂದರು. ಅದನ್ನು ಅಲ್ಲಿರುವ ಟೀಪಾಯ್ ಮೇಲಿಡುತ್ತಾ, “ಅಕ್ಕಾ….. ಟೀ…” ಎಂದರು. ಕನ್ನಿಕಾಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಮಲ್ಲಿಕಾ ಆ ಹುಡುಗಿಯರನ್ನು ನೋಡದೆ, “ಅಲ್ಲೇ ಇಡಿ….” ಎಂದು ಹೇಳಿದಳು.
ಮೂರು ಹುಡುಗಿಯರ ಕಂಗಳಲ್ಲೂ ಕುತೂಹಲ ಇಣುಕುತ್ತಿತ್ತು. ಈ ಮೂವರು ಕನ್ನಿಕಾಳಿಗಿಂತ 3-4 ವರ್ಷ ದೊಡ್ಡವರು. ಅವರೂ ಕೂಡ ಹೆಣ್ಣು ಮಗು ಎಂದು ಹೆತ್ತವರ ತಿರಸ್ಕಾರ ಮತ್ತು ಅನೈತಿಕ ಸಂಬಂಧದಿಂದ ಹುಟ್ಟಿದವರು ಎಂಬ ಕಾರಣಕ್ಕಾಗಿ ತಮ್ಮರಿಂದಲೇ ತಿಪ್ಪೆಗುಂಡಿ, ರೇಲ್ವೆ ಸ್ಟೇಷನ್, ಬಸ್ ಸ್ಟಾಂಡ್ ಗಳಲ್ಲಿ ಎಸೆಯಲ್ಪಟ್ಟ ನತದೃಷ್ಟರೇ. ಅದೃಷ್ಟವಶಾತ್ ನಾಯಿ ನರಿಗಳಿಗೆ ಆಹಾರವಾಗುವ ಮುನ್ನವೇ ಹೇಗೋ ಮನುಷ್ಯರ ಕಣ್ಣಿಗೆ ಬಿದ್ದು ಬದುಕುಳಿದು ಆಶ್ರಮ ಸೇರಿದವರು. ಸಾಮಾನ್ಯವಾಗಿ ಆಶ್ರಮದಲ್ಲಿರುವ ಪ್ರತಿಯೊಬ್ಬರ ಹಣೇಬರಹ ಹೆಚ್ಚು ಕಡಿಮೆ ಒಂದೇ ರೀತಿಯದಾಗಿತ್ತು.
ತಾವು ಟೀ ತಂದಿಟ್ಟರೂ ಕೂಡ ಮಲ್ಲಿಕಾ ಅದನ್ನು ಕುಡಿಯದೆ ಹಾಗೆ ಕುಳಿತಿರುವುದನ್ನು ಕಂಡು ಅವಳನ್ನು ಪುನಃ ಎಚ್ಚರಿಸುವಂತೆ ಹುಡುಗಿಯರು ದನಿ ಎತ್ತಿರಿಸಿ, “ಅಕ್ಕಾ ಟೀ….” ಎಂದರು ಮತ್ತೆ ಒಕ್ಕೊರಲಿನಲ್ಲಿ.
ಹುಡುಗಿಯರ ಮನದಲ್ಲಿ ನಡೆಯುತ್ತಿರಬಹುದಾದ ದ್ವಂದ್ವವನ್ನು ಮಲ್ಲಿಕಾ ಊಹಿಸಬಲ್ಲಳು. ಆ ಹುಡುಗಿಯರು ಹೆಚ್ಚು ಹೊತ್ತು ಅಲ್ಲಿ ನಿಲ್ಲುವುದು ಅವಳಿಗೆ ಬೇಕಿರಲಿಲ್ಲ. ಮಲ್ಲಿಕಾ ಆ ಹುಡುಗಿಯರ ಕಡೆ ನೋಡದೆ, “ಆಯ್ತು ನಾನು ಕುಡಿತೀನಿ. ನೀವು ಹೋಗಿ,” ಎಂದಳು.
ಧೃತಿ, ಶೃತಿ, ಕೃತಿ ಮೂವರೂ ತಮ್ಮೊಳಗೆ ಗುಸುಗುಸು ಪಿಸುಪಿಸು ಮಾತಾಡುತ್ತಾ, “ನೋಡಿದ್ರೇನ್ರೇ…. ಅಕ್ಕಾ ನಮ್ಮ ಕಡೆ ತಿರುಗಿ ಕೂಡ ನೋಡ್ಲಿಲ್ಲ….. ಕನ್ನಿಕಾಳ ಮೇಲೆ ಅವರಿಗೆ ಅಷ್ಟು ಚಿಂತೆ, ಕಾಳಜಿ….”
“ಹ್ಞೂಂ…. ಹೌದು ಕಣೇ, ನಮ್ಮಲ್ಲಿ ಯಾರಿಗಾದ್ರೂ ಎಷ್ಟೋ ಸಲ ಜ್ವರ ಬಂದೋ, ಮತ್ತೊಂದು ಆಗಿಯೋ ಮಲಗಿದಾಗ ಒಂದ್ಸಾರಿಯೂ ಅಕ್ಕಾ ಹೀಗೆ ನಮ್ಮ ಪಕ್ಕ ಬಂದು ಕುಳಿತಿಲ್ಲ. ಮೊನ್ನೆ ತಾನೇ ರಮ್ಯಾಗೂ ಹೀಗೆ ಜ್ವರ ಬಂದು ಮಲಗಿದ್ದಳು…. ಹ್ಞೂಂ ಕಣೆ ಅದಕ್ಕೂ ಮೊದಲು ರಮಾ, ಶಾರದಾ, ಅಖಿಲಾ ಇವರೆಲ್ಲರಿಗೂ ಜ್ವರ ಬಂದಿತ್ತು. ಇದು ವೈರಲ್ ಫೀವರ್ ಅಂತ ಡಾಕ್ಟರ್ ಹೇಳಲಿಲ್ವಾ….? ಫೀವರ್ ಅಂದ್ರೆ ಒಬ್ಬರಿಂದ ಒಬ್ಬರಿಗೆ ಬರುತ್ತಪ್ಪಾ…. ಆವಾಗೆಲ್ಲಾ ಅಕ್ಕಾ ಕುಳಿತಿದ್ರಾ….?” ಕೃತಿ ಇನ್ನಿಬ್ಬರ ಬಳಿ ವರದಿ ಒಪ್ಪಿಸಿದಳು.
ಅದಕ್ಕೆ ಶೃತಿ, “ಅಲ್ಲೇ… ಅಕ್ಕಂಗೆ ಇವಳ ಮೇಲೆ ಅದೇನು ಪ್ರೀತಿನೋ ಕಾಣೆ…. ಅವಳ ಕೂದಲು ಕೊಂಕಿದ್ರೂ ಕೂಡ ಅಕ್ಕಾ ಅದರ ಬಗ್ಗೆ ತಲೆ ಕೆಡಿಸಿಕೊಳ್ತಾ ಗಾಬರಿ ಬೀಳ್ತಾರೆ,” ಎಂದಳು.
“ನನಗೆ ಒಂದೊಂದು ಸಲ ಅವಳು ನಮ್ಮ ಹಾಗೆ ಅನಾಥಳು ಹೌದೋ ಅಲ್ವೋ ಅನ್ಸುತ್ತೆ. ಈ ಅನುಮಾನನ ಕೇಳಬೇಕೆಂದ್ರೂ ನಾವು ಯಾರ ಬಳಿ ಕೇಳಬೇಕು ಅಂತ ಗೊತ್ತಾಗ್ತಿಲ್ಲ ಕಣೇ….” ಎಂದಳು ಕೃತಿ.
“ಅಯ್ಯೋ….ಯಾರಿಗೋ ಯಾಕೆ ಕೇಳಬೇಕು. ಇದೆಲ್ಲ ತಲೆಗೆ ಹಾಕಿಕೊಳ್ಳದೆ ನಮ್ಮ ಪಾಡಿಗೆ ನಾವು ನೆಮ್ಮದಿಯಿಂದಿರೋಣ. ಇಲ್ಲಿ ನಮಗೇನು ಕೊರತೆ ಆಗಿರೋದು….? ನಾವೇನು ಈಗ ಏನೂ ಅರಿಯದಷ್ಟು ಚಿಕ್ಕ ಮಕ್ಕಳಲ್ಲ….! ನಾವು ನಮ್ಮ ಹೆತ್ತವರಿಂದಲೇ ಬೀದಿಗೆ ಎಸೆಯಲ್ಪಟ್ಟವರು. ಹೆತ್ತವರ ಪ್ರೀತಿ ಅಂದರೆ ಏನೆಂದೇ ನಮಗೆ ಗೊತ್ತಿಲ್ಲ. ಇನ್ನು ಬೇರೆಯವರನ್ನು ನೋಡಿ ಹೊಟ್ಟೆಕಿಚ್ಚು ಪಡೋದ್ರಲ್ಲಿ ಏನಿದೆ…? ಅಕ್ಕಾ ನಮ್ಮನ್ನು ಚೆನ್ನಾಗೆ ನೋಡ್ಕಾಳ್ತಾರೆ. ಅಂದಮೇಲೆ ಇಲ್ಲದ ಯೋಚನೆನಾ ನಾವ್ ಯಾಕೆ ನಮ್ಮ ತಲೆ ಮೇಲೆ ಹಾಕ್ಕೊಬೇಕು ಅಲ್ವಾ….” ಎಂದು ಎಲ್ಲರಿಗಿಂತ ಸ್ವಲ್ಪ ದೊಡ್ಡವಳಾದ ಧೃತಿ ಹೇಳಿದಳು.
ಹೌದು ತಮ್ಮ ಮೇಲಿನ ಪ್ರೀತಿಗೆ ಯಾವ ಕೊರತೆಯೂ ಇಲ್ಲ ಎಂದು ಮೂವರು ತಮ್ಮತಮ್ಮೊಳಗೆ ತಾವೇ ನಿರ್ಧರಿಸಿಕೊಂಡ ಹುಡುಗಿಯರು ಅಲ್ಲಿಂದ ಹೊರಟು ಹೋದರು.
ಆ ಹುಡುಗಿಯರು ಅದೆಷ್ಟೇ ಪಿಸು ಧ್ವನಿಯಲ್ಲಿ ಮಾತಾಡಿದ್ದರೂ ಸಹ ಅವರಾಡುವ ಮಾತುಗಳು ಮಲ್ಲಿಕಾಳ ಕಿವಿಗೆ ಕೇಳಿಸಿದವು. ಆ ಕ್ಷಣಕ್ಕೆ ಅವಳ ಕಣ್ತುಂಬಿ ಬಂದಿತು. `ಛೇ… ಈ ಹುಡುಗಿಯರು ಕೂಡ ತನ್ನನ್ನು ಸಂಶಯಿಸುತ್ತಾರಲ್ಲಾ…’ ಎಂದು ನೆನೆಸಿ ಅವಳ ಮನಸ್ಸಿಗೆ ಬೇಸರವಾಯಿತು.
ಯಾವುದೋ ಹಳೆಯ ನೆನಪು ಮರುಕಳಿಸಿ ಎದೆಯಲ್ಲಿ ಹಿಂಡಿದಂತಾಯಿತು. ಬೇಡ ಎಂದುಕೊಂಡಷ್ಟೂ ಅದೇ ಹಳೆಯ ನೆನಪುಗಳು ಅವಳನ್ನು ಕಾಡಿ, ಕಣ್ಣೀರಾಗಿ ಹರಿದು ಅವಳ ಕೆನ್ನೆ ತೋಯಿಸಿತು. ತನಗೆ ಒದಗಿರುವ ಇಂತಹ ದುಃಸ್ಥಿತಿಗೆ ಮತ್ತಷ್ಟು ಅವಳು ಒತ್ತರಿಸಿ ಬಂದಿತು. ತನ್ನ ಅಸಹಾಯಕ ಪರಿಸ್ಥಿತಿಗೆ ತನ್ನನ್ನು ತಾನೇ ಹಳಿದುಕೊಂಡಳು. ತನ್ನ ಈಗಿನ ಪರಿಸ್ಥಿತಿ ಮತ್ತು ಸಂದರ್ಭ ನುಂಗಲೂ ಆಗದ, ಉಗಿಯಲು ಆಗದ ಬಿಸಿ ತುಪ್ಪದಂತಾಗಿದೆ ಎನಿಸಿತು.
ನನ್ನ ಇಂದಿನ ಸ್ಥಿತಿಗೆ ಸ್ವತಃ ನಾನೇ ಹೊಣೆ. ಬೇರೆ ಯಾರನ್ನೂ ದೂಷಿಸುವ ಹಾಗಿಲ್ಲ, ಎನ್ನುವ ನೋವು ಆಕೆಯನ್ನು ಮತ್ತಷ್ಟು ಕಾಡಿತು. ಹಾಗೆ ನೋಡಿದರೆ, ಈ ಆಶ್ರಮದಲ್ಲಿ ಇರುವವರೆಲ್ಲರೂ ಒಂದೇ ಹಡಗಿನಲ್ಲಿರುವ ಸಹಪಯಣಿಗರಂತೆ. ಇಲ್ಲಿ ಯಾವುದೇ ತರಹದ ಮುಚ್ಚುಮರೆ, ಮೇಲು ಕೀಳು, ಜಾತಿ ಮತ ಎಂದೂ ಯಾವುದಕ್ಕೂ ಅವಕಾಶವಿಲ್ಲ. ಯಾರಲ್ಲೂ ಯಾವ ವಿಧವಾದ ಭೇದಭಾವ ಇರಲಿಲ್ಲ. ಆದರೆ ಕಳೆದುಹೋದ ನನ್ನ ವೈಯಕ್ತಿಕ ಜೀವನದ ಕಹಿ ಘಟನೆಯನ್ನು ನಾನು ಇವರೊಂದಿಗೆ ಹಂಚಿಕೊಳ್ಳಲು ಮಾತ್ರ ಸಾಧ್ಯವಿಲ್ಲ.
ಆದರೆ ಇಲ್ಲಿರುವ ಯಾವ ಮಗುವಿಗೂ ನನ್ನಿಂದ ಯಾವ ರೀತಿಯ ಅನ್ಯಾಯ ಆಗಿಲ್ಲ ಎಂಬುದನ್ನು ನಾನು ಎದೆ ತಟ್ಟಿಕೊಂಡು ಹೇಳಬಲ್ಲೇ. ಇಲ್ಲಿಗೆ ಬಂದ 9 ವರ್ಷಗಳಲ್ಲಿ ನನ್ನಲ್ಲಿರುವ ಮಾತೃ ವಾತ್ಸಲ್ಯವನ್ನು ಪ್ರತಿ ಮಗುವಿನ ಮೇಲೂ ಸಮನಾಗಿ ಹಂಚಿರುವೆ ಎಂದು ಎದೆ ತಟ್ಟಿ ಹೇಳಬಲ್ಲೇ. ಅದರ ಬಗ್ಗೆ ಎರಡು ಮಾತಿಲ್ಲ. ಮಕ್ಕಳ ಮನಸ್ಸಿನಲ್ಲೂ ಆ ಭಾವನೆ ಬಂದಿದೆ ಅಂದಮೇಲೆ ನನಗೆ ಅಷ್ಟು ಸಾಕಲ್ಲವೇ? ಆದರೆ ಕನ್ನಿಕಾಳ ಮೇಲಿನ ಸೆಳೆತವೇ ಬೇರೆ ಬಗೆಯದು. ಕಳೆದುಹೋದ ನನ್ನ ಬದುಕು ಅದು ನನ್ನದು ಮಾತ್ರ. ನನ್ನ ಗತ ಜೀವನದ ಕೊಂಡಿ ಅವಳು. ನಾನವಳಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ದಾರಿ ಇದೊಂದೇ.
9 ವರ್ಷಗಳ ಹಿಂದೆ ಜಮುನಾ ದೀದಿಗೆ ಮಾತ್ರ ನನ್ನ ಗತ ಜೀವನದ ಗುಟ್ಟು ತಿಳಿದಿತ್ತು. ಅವರು ತೀರಿಹೋದ ಮೇಲೆ ಆ ಒಂದು ಗುಟ್ಟು ನನ್ನಲ್ಲೇ ಅಡಗಿ ಕುಳಿತಿದೆ. ನಾನದನ್ನು ಯಾರ ಮುಂದೆಯೂ ಹಂಚಿಕೊಳ್ಳಲಿಲ್ಲ. ಅದೇ ಇಂದು ನನ್ನೆದೆಯಲ್ಲಿ ಅಗ್ನಿ ಪರ್ವತದಂತೆ ಬೆಳೆದು ಒಳಗೊಳಗೇ ದಹಿಸುತ್ತಿದೆ.
ಕಳೆದುಹೋದ ಹಳೆಯ ನೆನಪುಗಳು ಮಲ್ಲಿಕಾಳನ್ನು ಹಿಂಡುತ್ತಾ ಕಾಡುತ್ತಾ ಹಾಗೇ ಸುತ್ತುರಿದವು. ಮಲ್ಲಿಕಾ ಆ ನೆನಪುಗಳೊಳಗೆ ಜಾರಿದಳು.
ಮಲ್ಲಿಕಾ ತಾಯಿ ತಂದೆಗೆ ಒಬ್ಬಳೇ ಮಗಳು. ತಂದೆ ಗಾರ್ಮೆಂಟ್ ಫ್ಯಾಕ್ಟರಿಯೊಂದರಲ್ಲಿ ಸೂಪರ್ ವೈಸರ್ ಆಗಿದ್ದರು. ತಾಯಿ ಗೃಹಿಣಿ. ಜೀವನ ಹೇಗೋ ಸುಗಮವಾಗಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಇವರಿಬ್ಬರ ಜೀವನದಲ್ಲಿ ಶನಿಯೊಂದು ವಕ್ಕರಿಸಿದ ಹಾಗೆ ಇವಳಿಗೆ ತಿಳಿವಳಿಕೆ ಬರುವ ಮೊದಲೇ ತಾಯಿ ತಂದೆ ಇಬ್ಬರೂ ಬೇರೆ ಬೇರೆ ಆಗಿದ್ದರು. ಮಲ್ಲಿಕಾಳ ತಂದೆ ತನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಹೆಂಗಸಿನೊಂದಿಗೆ ಸ್ನೇಹ ಬೆಳೆಸಿ ಕೈ ಹಿಡಿದಾಕೆಯನ್ನು ಬಿಟ್ಟು ಆಕೆಯನ್ನು ಮದುವೆಯಾಗಿದ್ದ. ಅಲ್ಲಿಗೆ ಅಮ್ಮ ಅಪ್ಪನ ಸಂಬಂಧ ಮುರಿದು ಬಿದ್ದಿತ್ತು. ಮಲ್ಲಿಕಾ ತಂದೆಯ ಪ್ರೀತಿಯ ನೆರಳು ಇಲ್ಲದೆ ಸಿಂಗಲ್ ಪೇರೆಂಟ್ ಆದ ತಾಯಿಯ ಆಶ್ರಯದಲ್ಲಿ ಬೆಳೆದಳು. ಮಲ್ಲಿಕಾಳ ತಂದೆ ಸ್ಛುರದ್ರೂಪಿಯಾಗಿದ್ದ. ಅವಳು ತಂದೆಯ ರೂಪ, ತಾಯಿಯ ಗುಣ ಹೊಂದಿದ್ದಳು.
ಮಲ್ಲಿಕಾಳ ತಾಯಿ ಚಂದ್ರಿಕಾ ಮಗಳನ್ನು ಕಟ್ಟುನಿಟ್ಟಿನಲ್ಲಿ ಬೆಳೆಸಿದ್ದಳು. ಮಲ್ಲಿಕಾ ಕೂಡ ತಾಯಿ ಹಾಕಿದ ಗೆರೆ ದಾಟಿ ನಡೆಯುತ್ತಿರಲಿಲ್ಲ. ಚಂದ್ರಿಕಾ ಗಂಡ ಬಿಟ್ಟುಹೋದ ಮೇಲೆ ಮನೆಕೆಲಸ ಮಾಡಿ ಮಗಳನ್ನು ಕಷ್ಟಪಟ್ಟು ಓದಿಸಿದಳು. ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಪಡೆದು ಪಾಸಾದ ಮಲ್ಲಿಕಾ, ಕಾಲೇಜು ಮೆಟ್ಟಿಲು ಏರಿದ್ದಳು. ತಾನು ತುಂಬಾ ಓದಿ ದೊಡ್ಡ ಹುದ್ದೆಗೇರುವ ಉತ್ತಮ ಭವಿಷ್ಯದ ಬಗ್ಗೆ ರಂಗುರಂಗಿನ ಕನಸು ಕಟ್ಟಿಕೊಂಡಿದ್ದ ಮಲ್ಲಿಕಾ, ಅಂದು ಅದೊಂದು ತಪ್ಪು ಮಾಡದೇ ಹೋಗಿದ್ದರೆ ಇವತ್ತು ಐಎಎಸ್ ಐಪಿಎಸ್ ಅಧಿಕಾರಿಯಾಗಿ ಮೆರೆಯುತ್ತಿದ್ದಳು.
ತಾನೊಂದು ಬಗೆದರೆ ದೈವ ಬೇರೊಂದು ಬಗೆದಿತ್ತು. ಅದುವರೆಗೂ ಸರ್ಕಾರಿ ಶಾಲೆಯಲ್ಲಿ ಓದಿದ ಮಗಳನ್ನು ಪ್ರೈವೇಟ್ ಕಾಲೇಜಿಗೆ ಸೇರಿಸುವುದು ಚಂದ್ರಿಕಾಳಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಆಕೆ ಕೆಲಸ ಮಾಡುವ ಮನೆ ಯಜಮಾನರಾದ ಗಣೇಶ ರಾಯರು, ಮಲ್ಲಿಕಾ ಎಸ್.ಎಸ್.ಎಲ್.ಸಿಯಲ್ಲಿ ಗಳಿಸಿದ ಅಂಕಗಳನ್ನು ನೋಡಿ, “ಚಂದ್ರಿಕಾ, ನಿನ್ನ ಮಗಳು ಎಸ್.ಎಸ್.ಎಲ್.ಸಿ ಯಲ್ಲಿ ಒಳ್ಳೆ ಮಾರ್ಕ್ಗಳನ್ನು ಪಡೆದಿದ್ದಾಳೆ. ಅವಳನ್ನು ಒಂದೊಳ್ಳೆ ಕಾಲೇಜಿಗೆ ಸೇರಿಸು,” ಎಂದು ಹೇಳಿದಲ್ಲದೆ, ತಾನೇ ಅವಳಿಗೆ ಸೀಟು ಕೊಡಿಸುವುದಾಗಿ ವಾಗ್ದಾನವನ್ನು ನೀಡಿದರು.

ಚಂದ್ರಿಕಾಳಿಗೆ ದ್ವಂದ್ವ. ಯಜಮಾನರು ಮಲ್ಲಿಕಾಳನ್ನು ಒಳ್ಳೆಯ ಕಾಲೇಜಿನಲ್ಲಿ ಸೇರಿಸು ಎಂದದ್ದಲ್ಲದೇ, ಅವಳಿಗೆ ತಾವೇ ತಮ್ಮ ವಶೀಲಿಯಿಂದ ಸೀಟು ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಯಾಜಮಾನರೇನೋ ಮಲ್ಲಿಕಾಳಿಗೆ ಸೀಟು ಕೊಡಿಸಬಹುದು. ಆದರೆ ಅಷ್ಟಾದರೆ ಮುಗಿಯಿತೆ…? ಅಲ್ಲಿ ಓದುವ ಮಕ್ಕಳೆಲ್ಲರೂ ಸ್ಥಿತಿವಂತ, ಶ್ರೀಮಂತ ಮನೆಯ ಮಕ್ಕಳಾಗಿರುತ್ತಾರೆ…. ಆದರೆ ನಾವು…? ನಾವು ಇನ್ನೊಬ್ಬರ ಬಳಿ ಹೊರೆದು ತಿಂದು ಬದುಕುವವರು. ಎರಡು ಹೊತ್ತಿನ ಹೊಟ್ಟೆಗಷ್ಟೇ ಅದು ಸರಿ ಹೋಗುತ್ತದೆ.
ಕಾಲೇಜು ಸೇರಿದ ಮೇಲೆ ಅಲ್ಲಿಗೆ ಎಲ್ಲವೂ ಮುಗಿದುಬಿಡುವುದಿಲ್ಲ…. ಓದಲು ಪುಸ್ತಕಗಳು ಬೇಕು, ಹಾಕಲು ಒಳ್ಳೊಳ್ಳೆ ಬಟ್ಟೆ ಬರೆಗಳು, ಮತ್ತೆ ಅದು ಇದು ಅಂತ ಏನೆಲ್ಲಾ ಖರ್ಚಿರುತ್ತೆ. ಅದಕ್ಕೆಲ್ಲ ಬೇಕಾಗುವ ದುಡ್ಡನ್ನು ಹೇಗೆ ಹೊಂದಿಸುವುದು? ಎಲ್ಲದಕ್ಕೂ ಯಜಮಾನರ ಮುಂದೆ ಕೈಯೊಡ್ಡಲಂತೂ ಸಾಧ್ಯವೇ ಇಲ್ಲ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಎಲ್ಲಾ ತಮ್ಮಂಥ ಬಡವರ ಮಕ್ಕಳೆ ಕಲಿಯುವರು. ಆಗ ಅಷ್ಟೊಂದು ಖರ್ಚು ಇರುವುದಿಲ್ಲ. ಜಾಸ್ತಿದುಡ್ಡಿನ ಅವಶ್ಯಕತೆಯೂ ಇರುವುದಿಲ್ಲ.
ಈಗ ಸರ್ಕಾರಿ ಶಾಲೆಯಲ್ಲಿ ಓದಿಯೇ ಇಷ್ಟೊಳ್ಳೆ ಅಂಕ ತೆಗೆದಿದ್ದಾಳೆ. ಹಾಗೆಯೇ ಮುಂದೆಯೂ ತೆಗೀತಾಳೆ ಓದಬೇಕೆಂಬ ಇಚ್ಛೆ ಇರುವವರು ಎಲ್ಲಿ ಓದುವುದಿದ್ದರೂ ಅವರು ಚೆನ್ನಾಗಿಯೇ ಓದುವರು ಎಂದೆಲ್ಲ ಯೋಚಿಸಿದಳು. ಹಾಗೆಂದು ತನ್ನ ಅನಿಸಿಕೆ ಮನದಳಲನ್ನು ಮಗಳ ಮುಂದೆ ಅರುಹಿದಳು. ಆದರೆ ಮಲ್ಲಿಕಾ ತಾಯಿಯ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವಳ ಮನಸ್ಸು ಲಂಗು ಲಗಾಮಿಲ್ಲದ ಕುದುರೆಯ ಹಾಗೆ ದೊಡ್ಡ ಕಾಲೇಜಿನಲ್ಲಿ ಕಲಿಯುವ ಕನಸು ಕಾಣುತ್ತಾ ಕುಣಿದಾಡುತ್ತಿತ್ತು.
“ಅಮ್ಮಾ…. ಸ್ಕೂಲ್ ಹೇಗೋ ಗೌರ್ಮೆಂಟ್ ಸ್ಕೂಲೇ ಆಗೋಯ್ತು. ಈಗ ಒಳ್ಳೆ ಕಾಲೇಜಿನಲ್ಲಿ ಸೀಟು ಸಿಗುತ್ತಿರುವಾಗ ಯಾಕೆ ಬೇಡವೆಂದು ಅಡ್ಡಗಾಲು ಹಾಕ್ತಿಯಾ? ಅಮ್ಮಾ ನಂಗೆ ಚೆನ್ನಾಗಿ ಓದಿ ದೊಡ್ಡ ಹುದ್ದೆಗೆ ಸೇರಿ ನಿನ್ನನ್ನು ಚೆನ್ನಾಗಿ ನೋಡ್ಕೊಬೇಕು ಎನ್ನುವ ಆಸೆ ಇದೆ. ರಾಯರ ಮಕ್ಕಳಾದ ಫಲ್ಗುಣಿ ಮತ್ತು ತ್ರಿವೇಣಿ ಅಕ್ಕಂದಿರ ಹಾಗೆ ಒಳ್ಳೊಳ್ಳೆ ಬಟ್ಟೆಗಳನ್ನು ಧರಿಸಬೇಕು. ದೊಡ್ಡ ಕಾರು ಕೊಂಡು ಸುತ್ತಾಡಬೇಕು ಅಂತ ಏನೇನೋ ಹೊಂಗನಸು ಇದೆಯಮ್ಮಾ…. ಪ್ಲೀಸ್ ನನ್ನಾಸೆಗೆ ತಣ್ಣೀರೆರಚಬೇಡ,” ಎಂದು ಗೋಗರೆದಳು.
ತಾಯಿ ಯಾವುದಕ್ಕೂ ಒಪ್ಪದೇ ಇದ್ದಾಗ ಉಪವಾಸ ಸತ್ಯಾಗ್ರಹ ಹೂಡಿ ಅಂತೂ ಇಂತೂ ತಾಯಿಯನ್ನು ಒಪ್ಪಿಸುವುದರಲ್ಲಿ ಯಶಸ್ವಿಯಾದಳು. ಕೊಟ್ಟ ಮಾತಿನಂತೆ ಗಣೇಶ ರಾಯರು ತಮ್ಮ ವಶೀಲಿ ಉಪಯೋಗಿಸಿ ಮಲ್ಲಿಕಾಳಿಗೆ ಒಂದು ಒಳ್ಳೆಯ ಪ್ರೈವೇಟ್ ಕಾಲೇಜಿನಲ್ಲಿ ಸೀಟು ಕೊಡಿಸಿದರು.
ಕಾಲೇಜು ಸೇರಿದ ಸ್ವಲ್ಪ ದಿನಗಳಲ್ಲೇ ಓದು ಅವಳಿಗೆ ಕಷ್ಟವೆನಿಸತೊಡಗಿತು. ಎಲ್ಲವನ್ನೂ ಇಂಗ್ಲಿಷ್ ನಲ್ಲೇ ಹೇಳುವುದರಿಂದ ಇವಳಿಗೆ ಸ್ವಲ್ಪವೂ ಅರ್ಥವಾಗುತ್ತಿರಲಿಲ್ಲ. ಇಂಗ್ಲಿಷ್ ಇವಳ ಪಾಲಿಗೆ ಕಬ್ಬಿಣದ ಕಡಲೆಯಂತಾಗಿತ್ತು. ಪ್ರೈವೇಟ್ ಕಾಲೇಜು ಸೇರಿ ತಪ್ಪು ಮಾಡಿದೆನೇನೋ ಎಂದು ತನ್ನನ್ನು ತಾನೇ ಹಳಿದುಕೊಂಡಳು ಮಲ್ಲಿಕಾ. ಓದಿನಲ್ಲಿ ಮೊದಲಿರುವ ಹುರುಪು ಉಳಿಯದೆ ಆಸಕ್ತಿ ಕ್ಷೀಣಿಸತೊಡಗಿತು. ಅಮ್ಮನ ಮುಂದೆ ಹೇಳಿಕೊಳ್ಳಲಾರದಾದಳು.
`ಇದು ನೀನೇ ತಂದುಕೊಂಡ ಗತಿ ಅನುಭವಿಸು. ಯಾಕೇ ಅದೇ ಸರ್ಕಾರಿ ಶಾಲೆಯಲ್ಲಿ ಓದಿ ಒಳ್ಳೆ ಅಂಕ ತೆಗೆದಿರಲಿಲ್ಲವೇ…? ಅಲ್ಲಿ ಓದಿ ಅಷ್ಟು ಮಾರ್ಕ್ಸ್ ಪಡೆದಿದ್ದಕ್ಕೆ ತಾನೇ ನಿನಗೆ ಪ್ರೈವೇಟ್ ಕಾಲೇಜಿನಲ್ಲಿ ಓದೋ ಆಸೆ ಹತ್ತಿದ್ದು. ನೀನು ಚೆನ್ನಾಗಿ ಮಾರ್ಕ್ಸ್ ತೆಗೆಯದೆ ಹೋಗಿದ್ದರೆ, ಆಗ ನಿನಗೆ ಸರ್ಕಾರಿ ಕಾಲೇಜು ಗತಿ ಆಗಿರುತ್ತಿತ್ತು. ಓದುವ ಮಕ್ಕಳು ಎಲ್ಲಾದರೂ ಓದುತ್ತಾರೆ,’ ಎಂದೆಲ್ಲಾ ಅಂದು ಅಮ್ಮ ಬಯ್ಯುವಳೋ ಎಂದು ಹೆದರಿ ಸುಮ್ಮನಿದ್ದಳು.
ದೀಪಕ್ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಶ್ರೀಮಂತ ಮನೆತನದ ಸ್ಛುರದ್ರೂಪಿ ಯುವಕ. ಅವನ ತಂದೆ ಊರಿನ ಹೆಸಾರಂತ ಉದ್ಯಮಿ, ಭಾರಿ ಕುಳ. ದೀಪಕ್ ಒಂದು ದುಂಬಿಯ ಹಾಗೆ. ಅವನ ಹಿಂದೆ ಮುಂದೆ ಸದಾ ಬಣ್ಣದ ಚಿಟ್ಟೆಗಳು ಸುಳಿದಾಡುತ್ತಿದ್ದವು. ಅದರಲ್ಲೂ ಕಾಲೇಜಿಗೆ ಬರುವ ಹೊಸ ಹೊಸ ಹುಡುಗಿಯರ ಸಹವಾಸ ಬೆಳೆಸುವುದು ಅವನ ಅನೇಕ ಸ್ವಪ್ರತಿಷ್ಠೆಗಳಲ್ಲಿ ಇದೂ ಒಂದಾಗಿತ್ತು. ಈಗ ಅವನ ಕಣ್ಣು ಸೌಂದರ್ಯದ ಖನಿಯಂತಿರುವ ಮಲ್ಲಿಕಾಳ ಮೇಲೆ ಬಿದ್ದಿತ್ತು. ಅವಳು ತೀರಾ ಬಡವರ ಮನೆ ಹುಡುಗಿ ಎಂದು ತಿಳಿದಿತ್ತು. ಆದರೆ ಕೆಲವು ದಿನಗಳ ಮೋಜಿನ ಆಟಕ್ಕೆ ಯಾರಾದರೇನು? ಎಂಬ ಉಡಾಫೆ.
ಆದರೆ ಬಡವರ ಮನೆ ಹುಡುಗಿಯರು ಸುಲಭವಾಗಿ ಗಾಳಕ್ಕೆ ಬೀಳಲಾರರು. ಅವರಿಗೆ ತಮ್ಮ ಬಡತನದ ಬಗ್ಗೆ ಸ್ವಾಭಿಮಾನ ಜಾಸ್ತಿ ಇರುತ್ತೆ. ಆದರೂ ಪರವಾಗಿಲ್ಲ. ಪಳಗಿಸೋದರಲ್ಲೂ ಒಂಥರಾ ಮಜಾ ಇರುತ್ತೆ ಎಂದುಕೊಂಡು ಗಾಳ ಬೀಸಲು ಸಿದ್ಧನಾಗಿದ್ದ.
ಅಂದು ಲ್ಯಾಬ್ ಮುಗಿಸಿ ಅವಸರವಸರವಾಗಿ ಗೇಟಿನ ಬಳಿ ಬರುವಷ್ಟರಲ್ಲಿ ಬಸ್ಸು ಇವಳ ಮುಂದೆಯೇ ಹಾದುಹೋಯಿತು. ಇನ್ನೊಂದು ಬಸ್ಸಿಗಾಗಿ ಕಾದು ನಿಂತಳು. ಅಷ್ಟರಲ್ಲಿ ಮಳೆ ಸುರಿಯತೊಡಗಿತು. ಮಳೆ ಬರುವ ರಭಸ ನೋಡಿ ಇನ್ನಿದು ಎಷ್ಟೊತ್ತಿಗೆ ನಿಲ್ಲುವುದೋ ಎಂದು ಹೆದರಿಕೊಂಡಳು. ಆಗ ಅವಳ ಬಳಿ ಕಪ್ಪು ಕಾರೊಂದು ಬಂದು ನಿಂತಿತು. `ಛೇ… ಇನ್ಯಾರೊ…. ಮೈಮೇಲೆ ನುಗ್ಗಿ ಬರುತ್ತಾನಲ್ಲಾ…’ ಎಂದ ಬೈದುಕೊಂಡು ಹಿಂದೆ ಸರಿದಳು. ಆಗ ಇವಳು ನಿಂತಿದ್ದ ಕಡೆಯ ಕಾರಿನ ಕಿಟಕಿ ಸರ್ರನೆ ಇಳಿಯಿತು. ಅದರಿಂದ ಇತ್ತ ಬಗ್ಗಿ ಇವಳನ್ನು ನೋಡಿ ಏನೋ ಹೇಳುತ್ತಿರುವ ದೀಪಕ್ ನ ಮುಖ ಕಂಡಿತು. ಮಳೆಯ ಸದ್ದಿನಲ್ಲಿ ಆತ ಹೇಳಿದ್ದೊಂದು ಕೇಳಿಸಲಿಲ್ಲ. ಅವನು ಯಾರಿಗೆ ಹೇಳುತ್ತಿರುವನೆಂದು ಅತ್ತಿತ್ತ ಕತ್ತು ಹೊರಳಿಸಿ ನೋಡಿದಳು. ಯಾರೂ ಇರಲಿಲ್ಲ, ಎಲ್ಲರೂ ತಮ್ಮ ಪಾಡಿಗೆ ತಾವು ನಿಂತಿದ್ದರು.
ಅವನು ಹೇಳುತ್ತಿರುವುದು ತನ್ನನ್ನು ಉದ್ದೇಶಿಸಿಯೇ ಎಂದವಳಿಗೆ ತಿಳಿದಾಗ ಗಾಬರಿಯಾದಳು. ಬ್ಯಾಗ್ ನ್ನು ಎದಗವಚಿ ಹಿಡಿದು ಮತ್ತಷ್ಟು ಮುದುಡಿ ಮುಖ ತಿರುವಿ ನಿಂತಳು. ಐದು ನಿಮಿಷ ಕಳೆಯುವುದರಲ್ಲಿ ಯಾರೋ ತನ್ನ ಬಳಿ ಬಂದಂತಾಯಿತು. ಮೂಗಿಗೆ ಘಮ್ಮೆನ್ನುವ ಸುವಾಸನೆ ಬಡಿದು ಅನಾಯಾಸವಾಗಿ ಕತ್ತು ಅತ್ತ ಹೊರಳಿಸಿದಳು. ಅವಳಿಗೆ ಅತಿ ಸಮೀಪದಲ್ಲಿ ಬಂದು ನಿಂತಿದ್ದ ದೀಪಕ್…..! ಅಷ್ಟು ಸಮೀಪದಲ್ಲಿ ಅವನನ್ನು ನೋಡಿದ ಮಲ್ಲಿಕಾಳಿಗೆ ಬವಳಿ ಬರುವಂತಾಯಿತು.
ಬೆದರಿದ ಹುಲ್ಲೆಯಂತೆ ನಿಂತ ಅವಳನ್ನು ಮಾತಿಗೆಳೆಯುತ್ತಾ ದೀಪಕ್, “ಮಿಸ್ ಜೋರಾಗಿ ಮಳೆ ಬರ್ತಿದೆ. ನಿಮ್ಮ ಬಸ್ ಬೇರೆ ಹೊರಟು ಹೋಯ್ತು ಅಂತ ಕಾಣ್ಸುತ್ತೆ. ನೆಕ್ಸ್ಟ್ ಬಸ್ ಬರೋತನಕ ಯಾಕೆ ಮಳೆಯಲ್ಲಿ ನಿಲ್ತೀರಾ…? ಬನ್ನಿ ನಿಮ್ಮನ್ನು ನನ್ನ ಕಾರಿನಲ್ಲಿ ಡ್ರಾಪ್ ಮಾಡ್ತೀನಿ,” ಎಂದ.
`ಇವನೇನು ಎಂದೂ ಇಲ್ಲದೆ ಇಂದು ನನ್ನನ್ನು ಮನೆಗೆ ಡ್ರಾಪ್ ಮಾಡ್ತಿನಿ ಅಂತ ಹೇಳುತ್ತಿರುವನಲ್ಲ…. ಯಾಕಿರಬಹುದು? ಕನಿಕರದಿಂದ ಇರಬಹುದೆ….? ಇವನಿಗೇಕೆ ನನ್ನ ಮೇಲೆ ಕನಿಕರ…..? ಮಳೆಯಲ್ಲಿ ಸಿಕ್ಕಿ ಹಾಕಿಕೊಂಡಿರುವೆನೆಂಬ ಕಾಳಜಿಯೇ…? ಊಹ್ಞೂಂ ನನ್ನ ಬಗ್ಗೆ ಕಾಳಜಿ ತೋರಿಸಲು ಇವನೇನು ನನ್ನ ನೆಂಟನೆ…..? ಸ್ನೇಹಿತನೆ…..? ಯಾವುದೂ ಅಲ್ಲ. ಇಡೀ ಕಾಲೇಜು ಕ್ಯಾಂಪಸ್ ನಲ್ಲಿ ಯಾರಿಗೂ ಇವನ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲ…. ಯಾವುದೋ ದುರುದ್ದೇಶ ಇಟ್ಕೊಂಡು ಏಕೆ ಬಂದಿರಬಾರದು….? ಅವನು ಎಷ್ಟೇ ಕರೆದರೂ ಊಹ್ಞೂಂ ನಾನು ಹೋಗಬಾರದು,’ ಎಂದು ಮನದಲ್ಲೇ ಅಂದುಕೊಳ್ಳುತ್ತಾ ದೀಪಕ್ ಮಾತಿಗೆ `ಹ್ಞಾಂ…. ಹ್ಞೂಂ….’ ಎನ್ನದೇ ಮೌನವಾಗಿ ನಿಂತಳು.
ದೀಪಕ್ ಮನಸ್ಸಿನಲ್ಲಿ, `ಇದು ಸುಲಭದಲ್ಲಿ ಪಳಗುವ ಹೆಣ್ಣಲ್ಲ. ಇರಲಿ ಇಂಥ ಹೆಣ್ಣನ್ನು ಒಲಿಸಿಕೊಳ್ಳುವುದರಲ್ಲಿ ಇರುವಷ್ಟು ಮಜಾ ಒಲಿದು ಬಂದ ಹೆಣ್ಣಿನಲ್ಲಿ ಇರುವುದಿಲ್ಲ. ತಾಳ್ಮೆಯಿಂದ ಗಾಳ ಬೀಸಬೇಕು,’ ಎಂದು ಮೀಸೆ ಮರೆಯಲ್ಲಿ ನಕ್ಕ.
ಹತ್ತು ನಿಮಿಷಗಳಾದರೂ ಅವನು ಹೋಗದೇ ಹಾಗೆ ನಿಂತಿರುವುದನ್ನು ಗಮನಿಸಿದ ಮಲ್ಲಿಕಾಳಿಗೆ ಕಸಿವಿಸಿ ಆಯಿತು. `ಛೇ… ಇವನ್ಯಾಕೆ ಹೋಗ್ತಿಲ್ಲ….,’ ಎಂದುಕೊಳ್ಳುವಷ್ಟರಲ್ಲಿ ಇವಳ ಬಸ್ ಬಂದಿತು.
ನೆಮ್ಮದಿಯಿಂದ ನಿಟ್ಟಿಸಿರು ಬಿಟ್ಟು ಬಸ್ ಹತ್ತಲು ಧಾವಿಸಿದಳು. ಬರುವಾಗಲೇ ತುಂಬಿಕೊಂಡು ಬಂದಿದ್ದ ಬಸ್ಸಿನಲ್ಲಿ ಕಾಲಿಡಲು ಜಾಗವಿರಲಿಲ್ಲ. ಜನ ನಾಮುಂದು ತಾಮುಂದು ಎಂದು ಬಸ್ ಹತ್ತುವ ನೂಕು ನುಗ್ಗಲಲ್ಲಿ ಮಲ್ಲಿಕಾಳಗೆ ಬಸ್ ಹತ್ತಲು ಸಾಧ್ಯವಾಗದೇ ಹಿಂದುಳಿದುಬಿಟ್ಟಳು. ಅಷ್ಟರಲ್ಲಿ ಕಂಡೆಕ್ಟರ್ ವಿಸಿಲ್ ಹಾಕಿಬಿಟ್ಟ. ಬಸ್ ಬುರ್ರೆಂದು ಮುಂದೆ ಹೋಗೇಬಿಟ್ಟಿತು. “ನಿಲ್ಸಿ…. ನಿಲ್ಸಿ….” ಎಂದು ಅರಚುತ್ತಾ ಅದರ ಹಿಂದೆ ಸ್ವಲ್ಪ ದೂರ ಓಡಿದಳು. ಆದಾಗಲೇ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ನಿಲ್ಲಸದೆ ವೇಗವಾಗಿ ಹೋಗೆಬಿಟ್ಟಿತು.
ಮಲ್ಲಿಕಾಳಿಗೆ ಅಳುವೇ ಬಂದು ಬಿಟ್ಟಿತು. ಅಸಹಾಯಕತೆಯಿಂದ ಕೈ ಕೈ ಹಿಸುಕವಂತಾಯಿತು. ಲೇಟಾದ್ರೆ ಅಮ್ಮ ಗಾಬರಿಯಾಗ್ತಾಳೆ ಅಂತನ್ನಿಸಿ ಕಣ್ಣು ತೇವವಾಯಿತು. ಅಷ್ಟರಲ್ಲಿ ಇವಳ ಸ್ಥಿತಿ ನೋಡಿ ಮೋಡವೇ ದುಃಖಿಸುತ್ತಿರುವಂತೆ ಮತ್ತಷ್ಟು ಜೋರಾಗಿ `ಧೋ….’ ಎಂದು ಮಳೆ ಸುರಿಯ ಹತ್ತಿತು.
ದಪ್ಪ ದಪ್ಪ ಹನಿಗಳಿಂದ ಮಳೆ ಸುರಿಯುತ್ತಿರುವುದನ್ನು ನೋಡುತ್ತಾ ಸುಮ್ಮನೆ ನಿಂತಳು. ಅವಳ ಮೂಗಿಗೆ ಮತ್ತದೇ `ಘಂ…’ ಎನ್ನುವ ಸುವಾಸನೆ ಅಡರಿತು. ಮಲ್ಲಿಕಾ ತಟ್ಟನೆ ತಿರುಗಿ ನೋಡಿದಳು. ಪಕ್ಕದಲ್ಲಿ ಅಮಾಯಕ ಮುಖಭಾವ ಹೊತ್ತ ದೀಪಕ್ ನಿಂತಿದ್ದ.
ಈಗ ಮಲ್ಲಿಕಾ ಮೊದಲಿನಂತೆ ಗಾಬರಿಗೊಳ್ಳಲಿಲ್ಲ. ಏಕೆಂದರೆ ಮಳೆ ನಿಲ್ಲುವ ಸೂಚನೆಯೇ ಇರಲಿಲ್ಲ. ಸುತ್ತಮುತ್ತಲಿ ಜನ ಈಗಾಗಲೇ ಸಾಕಷ್ಟು ಕರಗಿ ಹೋಗಿದ್ದರು. ಮೋಡದ ದೆಸೆಯಿಂದ ಹೊತ್ತಿಗೆ ಮುಂಚೆನೇ ಕತ್ತಲಾವರಿಸಿತ್ತು. ಅವಳ ಬಳಿ ಪಾಸ್ ಬಿಟ್ಟರೆ, ಕೈಯಲ್ಲಿ ನಯಾ ಪೈಸೆಯೂ ಇರಲಿಲ್ಲ. ತಾನೊಬ್ಬಳೇ ಇಲ್ಲಿ ಒಂಟಿಯಾಗಿ ನಿಂತುಕೊಳ್ಳುವುದಕ್ಕಿಂತ ದೀಪಕ್ ಬಳಿ ಇರುವುದೇ ವಾಸಿ ಎನಿಸಿತು ಮಲ್ಲಿಕಾಳಿಗೆ.
ದೀಪಕ್ ಇವಳ ಬಳಿ ಬಂದು, “ಮಿಸ್…. ನಾನು ಇನ್ನೇನು ಕಾರ್ ಸ್ಟಾರ್ಟ್ ಮಾಡಬೇಕು ಅನ್ನುವಷ್ಟರಲ್ಲಿ ಮಳೆ ಮತ್ತಷ್ಟು ಜೋರಾಯಿತು. ನಿಮ್ಮ ಬಸ್ ಬೇರೆ ಹೊರಟು ಹೋಯ್ತು. ನೀವೊಬ್ಬರೇ ಆದಿರಲ್ಲಾ ಅಂದುಕೊಂಡು ಬಂದೆ. ಈಗಲೂ ಹೇಳ್ತಿದೀನಿ, ಬರೋದಾದ್ರೆ ನಾನು ನಿಮ್ಮನ್ನು ನಿಮ್ಮ ಮನೆ ತಲುಪಿಸಿ ಹೊಗ್ತೀನಿ ಹೆದರ್ಕೋಬೇಡಿ…. ನಾನೇನು ನಿಮ್ಮನ್ನು ತಿಂದುಬಿಡಲ್ಲ. ನೀವು ನನ್ನ ಬಗ್ಗೆ ಎಲ್ಲರ ಹಾಗೆ ಏನೋ ಅಂದ್ಕೊಂಡಿರಬಹುದು. ಆದರೆ ನೀವಂದುಕೊಂಡಷ್ಟು ಕೆಟ್ಟವನಲ್ಲ. ನನಗೂ ಹೇಗೆ ನಡೆದುಕೊಳ್ಳಬೇಕು ಅನ್ನುವ ಜವಾಬ್ದಾರಿ ಇದೆ, ಬರೋದಾದ್ರೆ ಬನ್ನಿ ಮನೆಗೆ ಬಿಟ್ಟುಹೋಗ್ತೀನಿ. ಇಲ್ಲದಿದ್ದರೆ ನನಗೆ ಈಗಾಗಲೇ ಲೇಟಾಗಿದೆ ನಾನು ಹೊರಡ್ತೀನಿ,’ ಎಂದು ಹೋಗಲು ಅನುವಾದ.
`ಇಲ್ಲಿ ತಾನೊಬ್ಬಳೇ ನಿಂತರೆ ಕುಡುಕರು, ಬೀದಿ ಕಾಮಣ್ಣರ ಹಾವಳಿ ಶುರುವಾಗುತ್ತದೆ. ಅದಕ್ಕಿಂತ ಇವನ ಕಾರಲ್ಲಿ ಮನೆತನಕ ಡ್ರಾಪ್ ಪಡೆಯೋದೇ ವಾಸಿ. ಹೆಚ್ಚಿಗೆ ಸಲುಗೆ ಕೊಡದೆ ಗಂಭೀರವಾಗಿ ಕುಳಿತರೆ ಸಾಕಲ್ಲವೇ,’ ಎಂದುಕೊಂಡು ಹೊರಡಲಿದ್ದ ಅವನನ್ನು ತಡೆದು, “ನಿಲ್ಲಿ ಸರ್ ನಾನೂ ಬರ್ತೀನಿ…..” ಎನ್ನುತ್ತಾ ಅವನ ಕಾರನ್ನು ಹತ್ತಿ ಕುಳಿತಳು.
ದೀಪಕ್ ಮನದಲ್ಲೇ ನಗುತ್ತಾ….`ಮೀನು ಗಾಳಕ್ಕೆ ಬಿತ್ತು,’ ಎಂದುಕೊಂಡ. ಮೇಲೆ ಮಾತ್ರ ಗಂಭೀರ ಮುಖಭಾಉ ತಾಳುತ್ತಾ, “ನನ್ನ ಹೆಸರು ದೀಪಕ್ ಅಂತ. ನೀವು ಕೇಳಿರಬಹುದು. ನನ್ನನ್ನು ಸರ್ ಎಂದು ಕರೀಬೇಡಿ. ದೀಪಕ್ ಎಂದು ಕರೆದರೆ ಸಾಕು. ನನ್ನನ್ನು ನಿಮ್ಮ ಸ್ನೇಹಿತ ಎಂದುಕೊಳ್ಳಿ,” ಎಂದು ನಯವಾಗಿ ಹೇಳಿದ.
ಅವನ ಮಾತಿಗೆ ಏನೂ ಹೇಳದೆ ಮೌನವಾಗಿ ಕುಳಿತಳು. `ನಾನೇನು ನಿನ್ನ ಸ್ನೇಹ ಮಾಡ್ತೀನಿ ಅಂತ ಭಾವಿಸಿದೆಯಾ…. ಬಾಕಿ ಹುಡುಗಿಯರಂತೆ ನಿನಗೆ ಒಲಿದು ಬರಲು ನಾನೇನು ಬಣ್ಣದ ಚಿಟ್ಟೆಯಲ್ಲ. ಏನೋ ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಇದೊಂದು ಬಾರಿ ನಿನ್ನ ಕಾರಲ್ಲಿ ಕೂತಿದೀನಿ ಅಂದ ಮಾತ್ರಕ್ಕೆ ನಿನ್ನ ಸ್ನೇಹ ಮಾಡ್ತೀನಿ ಅಂತ ತಿಳಿಬೇಡ,’ ಎಂದಕೊಂಡು ಮನದಲ್ಲೇ ನಕ್ಕಳು.
ಇಬ್ಬರೂ ತಮ್ಮ ತಮ್ಮ ಅನಿಸಿಕೆಯ ಭಾವದಲ್ಲಿ ತೇಲಿದರು. ಮನೆ ಹತ್ತಿರ ಬರುತ್ತಿದ್ದಂತೆ ಮಲ್ಲಿಕಾ, ದೀಪಕ್ ಗೆ ಕಾರು ನಿಲ್ಲಿಸಲು ಹೇಳಿದಳು. ತಾನು ಕಾರಲ್ಲಿ ಬಂದಿರುವುದನ್ನು ಅವಳ ತಾಯಿ ನೋಡುವುದು ಅವಳಿಗೆ ಬೇಕಿರಲಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ದೀಪಕ್ ಕಾರಿನಲ್ಲಿ ಬಂದ ತನಗೆ ತಾಯಿಯಿಂದ ನೂರೆಂಟು ಸಾಲುಗಳನ್ನು ಕೇಳಬೇಕಾಗಿ ಬರಬಹುದೆಂಬ ಹೆದರಿಕೆಯಿಂದ ಅನತಿ ದೂರದಲ್ಲಿಯೇ ಕಾರಿನಿಂದ ಇಳಿದು ಅವನಿಗೊಂದು ಥ್ಯಾಂಕ್ಸ್ ಹೇಳಿ ಮನೆಯತ್ತ ನಡೆದಳು.
ಮನೆಗೆ ಹೋಗುವಾಗ, `ಪರವಾಗಿಲ್ಲ ಇವನನ್ನು ಏನೋ ಅಂದುಕೊಂಡಿದ್ದೆ. ನಾವು ಚೆಲ್ಲು ಚೆಲ್ಲಾಗಿರದೆ ನಮ್ಮ ನೆರಳಿಗೆ ಅಂಜುತಾ ಮರ್ಯಾದೆಯಿಂದ ಗಂಭೀರವಾಗಿದ್ದರೆ ಯಾರೂ ಏನೂ ಮಾಡಲಾರರು. ಇವನ ರೂಪಕ್ಕೆ, ಸಿರಿತನಕ್ಕೆ ಮರುಳಾಗಿ ಹುಡುಗಿಯರು ತಾವೇ ಹೋಗಿ ಮೈಮೇಲೆ ಬಿದ್ದರೆ ಯಾವ ಹುಡುಗ ತಾನೇ ನಿರಾಕರಿಸುತ್ತಾನೆ…?’ ಎಂದು ಮನದಲ್ಲೇ ಅಂದುಕೊಂಡಳು.
ಚಂದ್ರಿಕಾ ಆತಂಕದಿಂದ ಬಾಗಿಲ್ಲೇ ಮಗಳ ದಾರಿ ಕಾಯುತ್ತಾ ನಿಂತಿದ್ದಳು. ಮಗಳು ಅವಸರವಾಗಿ ಬರುವುದನ್ನು ಕಂಡು ಸಮಾಧಾನಗೊಂಡಳು. ಬಾಗಿಲ ಬಳಿ ಬರುತ್ತಲೇ, “ಯಾಕೆ ಲೇಟಾಯ್ತು…. ನೋಡು ಗಂಟೆ ಎಷ್ಟಾಯಿತು ಅಂತ. ನನಗೆ ಭಯದಿಂದ ಉಸಿರೇ ನಿಂತ ಹಾಗಾಗಿತ್ತು,” ಎಂದು ಒಂದೇ ಉಸಿರಿನಲ್ಲಿ ಚಂದ್ರಿಕಾ ಮಗಳನ್ನು ತರಾಟೆಗೆ ತೆಗೆದುಕೊಂಡಳು.
ದೀಪಕ್ ಕಾರಿನಲ್ಲಿ ತಾನು ಮನೆವರೆಗೆ ಬಂದೆನೆಂಬ ವಿಷಯವನ್ನು ಮರೆಮಾಚಿ ಬಸ್ ಮಿಸ್ಸಾಗಿ ಬರಲು ಲೇಟಾಯ್ತು ಎಂದು ಮಾತ್ರವೇ ಹೇಳಿದಳು.
ಇದಾದ ನಂತರ ದೀಪಕ್ ನನ್ನು ನೋಡಿದರೆ ಮಲ್ಲಿಕಾಳಿಗೆ ಮೊದಲಿನಷ್ಟು ಭಯವಿರಲಿಲ್ಲ. ದಿನ ಕಳೆದಂತೆ ಇಬ್ಬರಲ್ಲೂ ಸ್ನೇಹ ಬೆಳೆಯಿತು. ಆದರೆ ಸ್ನೇಹ ಪ್ರೀತಿಯಾಗಿ ಬದಲಾಗಲು ಬಹಳ ದಿನವೇನು ಬೇಕಾಗಲಿಲ್ಲ. ಇಬ್ಬರೂ ಆಗಾಗ ಊರ ಮುಂದಿನ ಗುಡ್ಡದತ್ತ ಹೋಗಿ ಅಲ್ಲಿ ಬಹಳ ಹೊತ್ತು `ಮೇಘ ಶ್ಯಾಮ ರಾಧೆಗಾತು, ಆಡುತಿಹಳು ಏನೋ ಮಾತು,’ ಎಂದು ಮುಂದಿನ ಭವಿಷ್ಯದ ಬಗ್ಗೆ ಬಣ್ಣದ ಕನಸುಗಳನ್ನು ಹೆಣೆಯುತ್ತಾ ಆ ಕನಸುಗಳಲ್ಲಿ ಕೂಡ ಒಬ್ಬರನ್ನೊಬ್ಬರು ಅಗಲದಂತೆ ಕೈ ಕೈ ಹಿಡಿದುಕೊಂಡು ಎಷ್ಟೋ ಹೊತ್ತು ಕುಳಿತಿದ್ದು ವಾಪಸ್ಸು ಬರುತ್ತಿದ್ದರು. ಹೀಗೆಯೇ ಇಬ್ಬರ ಕಳ್ಳಾಟ ಮುಂದುವರಿದಿತ್ತು. ಇದರ ಬಗ್ಗೆ ಒಂದು ಸುಳಿವೂ ಸಹ ತಾಯಿಗೆ ಸಿಗದಂತೆ ಎಚ್ಚರ ವಹಿಸಿದಳು ಮಲ್ಲಿಕಾ. ಅಂದು ಶನಿವಾರ ಮಲ್ಲಿಕಾಳಿಗೆ ಒಂದು ಕ್ಲಾಸಿತ್ತು. ಕ್ಲಾಸು ಮುಗಿದಾಗ ಹತ್ತು ಗಂಟೆ. ಇನ್ನೂ ಎರಡು ಕ್ಲಾಸಿನ ಲೆಕ್ಚರರ್ ಅಂದು ರಜೆಯಲ್ಲಿದ್ದರು. ಹಾಗಾಗಿ ಬೇಗ ಮನೆಯತ್ತ ಹೊರಟಿದ್ದಳು. ಬಸ್ ಸ್ಟಾಪಿನತ್ತ ಭರಭರ ಹೆಜ್ಜೆ ಹಾಕುವಾಗ ಅತಿ ಸನಿಹದಲ್ಲಿ ಕಾರು ಬಂದಿತು. ಈ ಕಾರಲ್ಲಿ ಹೋಗುವವರಿಗೆ ನಡಕೊಂಡು ಹೋಗುವವರು ಕಾಣಲ್ವೇನೋ,’ ಎಂದು ಬೈದುಕೊಳ್ಳುತ್ತಾ ಪಕ್ಕಕ್ಕೆ ಸರಿದು ಕಾರಿನತ್ತ ತಿರುಗಿದಳು. ಕ್ಷಣಮಾತ್ರದಲ್ಲಿ ಆ ಕಾರನ್ನು ನೋಡಿ ಅವಳ ಮುಖ ಅರಳಿ ಊರಗಲವಾಯಿತು.
“ಅರೆ, ದೀಪಕ್….” ಎಂಬ ಉದ್ಗಾರ ಅವಳ ಬಾಯಿಂದ ಹೊರಟಿತು. ದೀಪಕ್ ಇವಳ ಕಡೆಯ ಡೋರ್ ಓಪನ್ ಮಾಡುತ್ತಾ, “ಬನ್ನಿ… ಅಮ್ಮಾವ್ರೇ…. ನಿಮ್ಮನ್ನು ಮನೆ ಹತ್ರ ಬಿಡ್ತೀನಿ,” ಎಂದ.
“ನನಗೆ ಕ್ಲಾಸ್ ಇಲ್ಲ ನಾನು ಮನೆಗೆ ಹೊರಟಿರೋದು ನಿನಗೆ ಹೇಗೆ ಗೊತ್ತಾಯ್ತು….? ಏನು ನನ್ನ ಮೇಲೆ ಸಿಐಡಿ ಕೆಲಸ ಮಾಡುತ್ತೀಯಾ….” ಎಂದು ನಗುತ್ತಾ ಅವನ ಕಾರನ್ನು ಹತ್ತಿ ಕುಳಿತಳು.
“ಹೌದು… ನಿನಗೆ ಕ್ಲಾಸ್ ಇಲ್ಲ ನೀನು ಮನೆಗೆ ಹೊರಟೆ ಎಂದು ಪ್ರಿಯಾ ನನಗೆ ಹೇಳಿದಳು. ಅದಕ್ಕೆ ಬಂದೆ. ಹೇಗೂ ನಿನಗೆ ಕ್ಲಾಸ್ ಇಲ್ಲಲಲ್ಲ ನಾವ್ಯಾಕೆ ಬೆಟ್ಟದ ಕಡೆ ಹೋಗಬಾರದು…?”
“ಇಷ್ಟು ಹೊತ್ತಿನಲ್ಲಾ…..?” ಹುಬ್ಬೇರಿಸಿ ಆಶ್ಚರ್ಯಚಕಿತಳಾಗಿ ಕೇಳಿದಳು.
“ಹ್ಞೂಂ…. ಅದಕ್ಕೇನಂತೆ…! ಮನೆಗೆ ಹೋಗಿ ಒಬ್ಬಳೇ ಏನ್ಮಾಡ್ತೀಯಾ….?” ಎನ್ನುತ್ತಾ ಬೆಟ್ಟಕ್ಕೆ ಹೋಗುವ ದಾರಿ ಕಡೆಗೆ ಕಾರನ್ನು ತಿರುಗಿಸಿದ.
“ಓದ ಬೇಕಪ್ಪಾ… ಮುಂದಿನ ತಿಂಗಳು ಎಗ್ಸಾಮ್. ನಿನಗೇನು… ಕೂತು ತಿಂದರೂ ಕರಗದೆ ಇರುವಷ್ಟು ನಿಮ್ಮಪ್ಪ ಮಾಡಿರೋ ಆಸ್ತಿ ಇದೆ. ಆದರೆ ನಮ್ಮ ಮನೇಲಿ ಅಮ್ಮ ಒಬ್ಬರೇ ದುಡಿಯೋದು. ನಾನು ಓದಿ ನಾಲ್ಕು ಕಾಸು ಸಂಪಾದಿಸಬೇಕು. ಈ ಕಾಲೇಜಿಗೆ ಸೇರಿದಾಗಿನಿಂದ ನನ್ನ ಓದು ಕಮ್ಮಿನೇ ಆಗಿದೆ. ಅದರಲ್ಲೂ ನಿನ್ನ ಸ್ನೇಹ ಬೆಳೆಸಿದಾಗಿನಿಂದಲೂ ನಾನೂ ಓದ್ತಾನೆ ಇಲ್ಲ ಅಂದರೆ ಸರಿಯಾಗುತ್ತೆ,” ನಗುತ್ತಾ ಹೇಳಿದಳು ಒಮ್ಮೆಲೇ ಗಂಭೀರ ಮುಖಭಾವದಿಂದ, “ದೀಪಕ್, ನಿನ್ನನ್ನು ಒಂದು ಪ್ರಶ್ನಿಸುವೆ ಕೇಳಿ…?” ಎಂದಳು.
ಏನು ಕೇಳುವಳೋ ಎಂಬ ಅಳುಕು ದೀಪಕ್ ಗೆ, `ಇಷ್ಟು ಮುಂದುವರಿದು ಕೂಡ ಕೈಗೆ ಸಿಗದ ಗಗನ ಕುಸುಮವಾಗುವಳೆ….? ಹಾಗಿದ್ದರೆ ನಾನು ಈ ತನಕ ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಗುವುದೇ…? ಸಭ್ಯತೆಯ ಮುಖವಾಡ ಧರಿಸಿ ಆಡಿದ ನಾಟಕವೆಲ್ಲಾ ಕೈಕೊಟ್ಟ ಪಾತ್ರಧಾರಿಯಿಂದ ಅರ್ಧಕ್ಕೆ ನಿಂತ ನಾಟಕದ ಹಾಗೆ ನನ್ನ ನಾಟಕ ಅರ್ಧಕ್ಕೆ ನಿಂತು ಬಿಡುವುದೇ…..?’ ಎಂದು ಕಳವಳಿಸಿದ ಅವನು ಮೆಲ್ಲಗೆ, “ಕೇಳು ಅದೇನು….?” ಎಂದ.
“ನೀನು ನನ್ನನ್ನು ನಿಜಾಗಲೂ ಪ್ರೀತಿಸ್ತೀಯಾ….?”
“ಹ್ಞೂಂ…. ಹೌದು ನಿಜಾವಾಗಲೂ ಪ್ರೀತಿಸ್ತೀನಿ. ಈಗ ದಿಢೀರ್ ಎಂದು ನಿನಗೇಕೆ ಈ ಅನುಮಾನ…..?”
“ದೀಪಕ್ ನಾವು ತೀರಾ ಬಡವರು. ನೀನೋ ದೊಡ್ಡ ಶ್ರೀಮಂತರ ಮನೆ ಮಗ. ನೀನು ಆಕಾಶ ನಾನು ಭೂಮಿ. ಆಕಾಶ ಭೂಮಿ ಎರಡು ದೂರದಲ್ಲಿ ಒಂದಾಗಿದ್ದಂತೆ ಕಂಡರೂ ಅವು ಒಂದಾಗಲು ಸಾಧ್ಯವಿಲ್ಲ. ಅವುಗಳ ನಡುವಿನ ಅಂತರ ಯಾವತ್ತಿಗೂ ನಿಲುಕದಷ್ಟು ಎತ್ತರದ್ದು. ನಮ್ಮಿಬ್ಬರ ನಡುವಿನ ಅಂತರ ಹಾಗೇ ತಾನೇ? ನಮ್ಮ ತಾಯಿ ಕಷ್ಟಪಟ್ಟು ನನ್ನನ್ನು ಬೆಳೆಸಿದ್ದಾರೆ. ಇದುವರೆಗೂ ನಾನು ಅಮ್ಮ ಹಾಕಿದ ಗೆರೆ ಕೂಡ ದಾಟಿದವಳಲ್ಲ! ಆದರೆ ಅದು ಹೇಗೋ ನಿನ್ನ ಪ್ರೀತಿಯ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದೀನಿ. ಈಗ ನೀನು ನನಗೊಂದು ಸತ್ಯ ಹೇಳಬೇಕು. ನೀನು ನನ್ನ ಮದುವೆ ಆಗ್ತಿಯಾ….? ನಿಮ್ಮ ಮನೇಲಿ ನಮ್ಮ ಮದುವೆನಾ ಒಪ್ಪುತ್ತಾರಾ….?” ಅವಳು ಕೇಳುತ್ತಲೇ ಇದ್ದಳು. ದೀಪಕ್ ಗೆ ಇದ್ಯಾವುದೂ ಕಿವಿ ಮೇಲೆ ಬೀಳಲೇ ಇಲ್ಲ. ಕಾರಣ ಅವನ ತಲೆ ತುಂಬಾ `ಇವಳೆಲ್ಲಿ ಕೈ ತಪ್ಪಿ ಹೋಗುತ್ತಾಳೋ….’ ಎಂಬ ಯೋಚನೆ ಗುಂಯ್ ಗುಟ್ಟುತಿತ್ತು.
“ಹೇಳು ದೀಪಕ್…..” ಎಂದು ಮಲ್ಲಿಕಾ ಜೋರಾಗಿ ಅವನ ತೋಳನ್ನು ಹಿಡಿದು ಅಲುಗಿಸಿದಾಗಲೇ ಅವನು ಯೋಚನೆಯಿಂದ ಹೊರಗೆ ಬಂದು, “ಹ್ಞಾಂ…. ಹ್ಞೂಂ…..” ಎಂದಷ್ಟೇ ಹೇಳಿದ.
ದೀಪಕ್ ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಮಲ್ಲಿಕಾ, ತನ್ನನ್ನು ಮದುವೆ ಆಗಲು ಒಪ್ಪಿದನೆಂದೇ ಭಾವಿಸಿ, “ಇನ್ನೊಂದು ವಿಷಯ…,” ಎಂದಳು.
ದೀಪಕ್ ತನ್ನ ಮನಸ್ಸಿನಲ್ಲಿ , `ಮತ್ತೇನಪ್ಪಾ ಇವಳ ಗೋಳು,’ ಎಂದುಕೊಳ್ಳುತ್ತಾ ಮುಖದಲ್ಲಿ ಮಂದಹಾಸ ತುಂಬಿಕೊಂಡು, “ಏನು ಹೇಳು ಮಲ್ಲಿ….” ಎಂದು ಮಾತಿನಲ್ಲಿ ಜೇನು ತುಂಬಿ ಕೇಳಿದ. “ಏನಿಲ್ಲ ಎಗ್ಸಾಮ್ ಹತ್ತಿರ ಬರುತ್ತಿದೆ. ನಾನು ಚೆನ್ನಾಗಿ ಓದಬೇಕು. ಎಗ್ಸಾಮ್ ಮುಗಿಯೋವರೆಗೂ ನಾವಿಬ್ಬರೂ ಭೇಟಿಯಾಗೋದು ಬೇಡ. ದಯವಿಟ್ಟು ಈ ಒಂದು ತಿಂಗಳು ನೀನು ನನ್ನ ಕಣ್ಮುಂದೆ ಸುತ್ತಾಡಬೇಡ. ಓದು ನನ್ನ ಮುಂದಿನ ಭವಿಷ್ಯದ ಮೈಲಿಗಲ್ಲು. ಎಗ್ಸಾಮ್ ನಲ್ಲಿ ನಾನು ಚೆನ್ನಾಗಿ ಬರೆಯಬೇಕು,” ಎಂದು ವಿನಂತಿಸಿಕೊಂಡಳು.
“ಸರಿ ಆಯ್ತಮ್ಮ…. ನಾನು ನಿನ್ನ ಓದಿಗಾಗಲಿ, ಎಗ್ಸಾಮಿಗಾಗಲಿ ಅಡ್ಡಿ ಬರಲ್ಲ. ಚೆನ್ನಾಗಿ ಓದಿ ಪಾಸಾಗು,” ಎಂದು ತನಗೆ ಬೇಸರವಾಗಿದೆ ಎಂಬಂತೆ ಮುಖ ಮಾಡಿಕೊಂಡು, “ಆದರೆ ಇವತ್ತು ಒಂದು ದಿನ ಇವೆಲ್ಲಾ ವಿಷಯ ಬದಿಗಿಟ್ಟು ನನ್ನ ಜೊತೆ ಇರು. ಇವತ್ತು ನಾವು ಸಂತೋಷವಾಗಿ ಕಾಲ ಕಳೋಣ. ಏನಂತೀಯಾ….?” ಎಂದು ಪ್ರೀತಿಯ ನಾಟಕವಾಡಿದ.
ಮಲ್ಲಿಕಾ ಸಂತೋಷದಿಂದ ಆಗಲಿ ಎಂಬಂತೆ ತಲೆ ಆಡಿಸಿದಳು. ಇಬ್ಬರೂ ಬೆಟ್ಟ ಹತ್ತಿದರು. ಬಿಸಿಲು ನೆತ್ತಿಯ ಮೇಲಿದ್ದರಿಂದ ಅಲ್ಲಿರುವ ಪಾಳು ಮಂಟಪದೊಳಗೆ ಹೋಗಿ ಕುಳಿತರು.
ಒಂದು ಕಾಲದಲ್ಲಿ ಆ ಬೆಟ್ಟದಲ್ಲಿ ವೈಭವೋಪೇತವಾಗಿ ಮೆರೆದಿರಬಹುದಾದ ಅನೇಕ ಪೂಜೆ ಕಾಣದ ದೇವಸ್ಥಾನಗಳು, ಪಾಳುಬಿದ್ದ ಮಂಟಪಗಳಿದ್ದವು. ಯಾರೋ ರಾಜರೋ, ಪಾಳೇಗಾರರೋ ಕಟ್ಟಿಸಿದ್ದವು. ಸಂಜೆಯ ಹೊತ್ತಿನಲ್ಲಿ ಅಲ್ಲಿ ಅನೇಕ ಪ್ರೇಮಿಗಳು ಬರುತ್ತಿದ್ದರು. ಮಟ ಮಟ ಮಧ್ಯಾಹ್ನವಾಗಿದ್ದರಿಂದ ಬೆಟ್ಟದ ಮೇಲೆ ಯಾರೂ ಇಲ್ಲದೆ ನಿರ್ಮಾನುಷವಾಗಿತ್ತು. ಅಲ್ಲಿ ದೀಪಕ್ ಮಲ್ಲಿಕಾ ಇಬ್ಬರೇ. ಕೇಳುವವರೇ ಇರಲಿಲ್ಲ. ಇಬ್ಬರು ಒಬ್ಬರಿಗೊಬ್ಬರು ಆತುಕೊಂಡು ಕುಳಿತರು. ಇಬ್ಬರಲೂ ಮಾತಿಲ್ಲ, ಕಥೆಯಿಲ್ಲ. ಇಬ್ಬರ ಅಂತರಂಗದ ಮೌನ ನೂರು ಮಾತಾಡುತ್ತಲಿತ್ತು.
ಒಮ್ಮೆಲೆ ಮಲ್ಲಿಕಾಳಿಗೆ ಮನೆ, ಓದು, ಎಗ್ಸಾಮ್ ಎಲ್ಲವೂ ನೆನಪಾಗಿ ಥಟ್ಟನೆ ಮೇಲೆದ್ದು, “ನಡಿ ದೀಪಕ್ ಹೊರಡೋಣ. ಬಹಳ ಹೊತ್ತಾಯ್ತು,” ಎಂದು ಎದ್ದು ನಿಲ್ಲುತ್ತಾ ಹೇಳಿದಳು.
“ಇರು ಇನ್ನೊಂದು ಸ್ವಲ್ಪ ಹೊತ್ತು ಕೂತಿದ್ದು ಹೊರಡೋಣ,” ಎನ್ನುತ್ತಾ ಮಲ್ಲಿಕಾಳ ಕೈ ಹಿಡಿದು ಜಗ್ಗಿದ ದೀಪಕ್.
ಈ ಅನಿರೀಕ್ಷಿತ ಎಳೆತದಿಂದಾಗಿ ಇನ್ನೂ ಸರಿಯಾಗಿ ನಿಂತಿರದ ಮಲ್ಲಿಕಾ ಆಯತಪ್ಪಿ ಕುಳಿತಿದ್ದ ದೀಪಕ್ ನ ಮೇಲೆ ಬಿದ್ದಳು. ಬೀಳುತ್ತಿದ್ದ ಅವಳನ್ನು ದೀಪಕ್ ತನ್ನೆರಡು ಕೈಗಳಿಂದ ಬಾಚಿ ತಬ್ಬಿ ಹಿಡಿದ. ಮನದಲ್ಲಿ ಪ್ರೀತಿಯ ಮೊಳಕೆ ಒಡೆದಿದ್ದರೂ ಸಹ ದೀಪಕ್ ನನ್ನು ಅಷ್ಟು ಸನಿಹದಿಂದ ನೋಡಿದ್ದಾಗಲಿ, ಅವನ ಸ್ಪರ್ಶದ ಅನುಭವವಾಗಲಿ ಹೊಂದಿರದ ಮಲ್ಲಿಕಾಳಿಗೆ ಮೊದಲ ಬಾರಿಗೆ ಪುರುಷ ಸ್ಪರ್ಶದ ಅನುಭವವಾಯಿತು. ಅದೂ ತನ್ನ ಪ್ರಿಯತಮನ ಸ್ಪರ್ಶ ಅವಳಿಗೆ ಪುಳಕವನ್ನು ಉಂಟು ಮಾಡಿತು. ಅನಾಯಾಸವಾಗಿ ಒದಗಿ ಬಂದ ಅವಕಾಶವನ್ನು ಸದುಪಯೋಗ ಪಡೆದುಕೊಂಡ ದೀಪಕ್, ಉನ್ಮಾದದಿಂದ ಉನ್ನತ್ತಗೊಂಡು ಅದರುತ್ತಿರುವ ಅವಳ ಅಧರಗಳನ್ನು ತನ್ನ ಅಧರಗಳಿಂದ ಬಂಧಿಸಿ ದೀರ್ಘವಾಗಿ ಚುಂಬಿಸಿದ.
ಹುಣ್ಣಿಮೆಯ ಚಂದಿರನ ಕಂಡ ಸಮುದ್ರ ಉನ್ಮಾದದಿಂದ ಸೊಕ್ಕೇರಿಸಿಕೊಂಡು ಉಕ್ಕೇರಿ ಬಂದು ಅಲೆಗಳಿಂದ ಅಪ್ಪಳಿಸುವಂತೆ, ಕಪ್ಪನೆಯ ಮೋಡಗಳಿಂದ ದಟ್ಟೈಸಿದ ಬಾನು ಭುವಿಯ ದಾಹ ತಣಿಸಲು ಭೋರ್ಗರೆದು ಮಳೆ ಸುರಿಸುವಂತೆ ಈ ಎರಡೂ ದೇಹಗಳು ಒಂದಾಗಿ ಸುಖಿಸಿದವು. ಆ ಹೊತ್ತು ಇಬ್ಬರಿಗೂ ಬಾಹ್ಯ ಪ್ರಪಂಚ ಶೂನ್ಯವಾಗಿ ಅವರದಾದ ಒಂದು ಹೊಸ ಪ್ರಪಂಚ ತೆರೆದುಕೊಂಡಿತ್ತು. ಆ ಹೊಸ ಪ್ರಪಂಚದಲ್ಲಿ ಇಬ್ಬರೂ ಮನಸೋ ಇಚ್ಛೆ ವಿಹರಿಸಿದರು. ಎಷ್ಟೋ ಹೊತ್ತಿನ ನಂತರ ಮಲ್ಲಿಕಾಳಿಗೆ ಮನೆಯ ನೆನಪಾಯಿತು. ದೀಪಕ್ ನಿಗೆ ಮನೆಗೆ ಹೋಗೋಣವೆಂದು ಅವಸರಿಸಿದಳು. ದೀಪಕ್ ಮಾಮೂಲಿನ ಸ್ಥಳದಲ್ಲಿ ಅವಳನ್ನು ಇಳಿಸಿ ಬೈ ಹೇಳಿ ಹೋದ. ಮುಂದೆ ಮಲ್ಲಿಕಾ, ದೀಪಕ್ ನನ್ನು ಭೇಟಿಯಾಗಲು ಹೋಗಲಿಲ್ಲ. ಪೂರ್ತಿಯಾಗಿ ತನ್ನನ್ನು ಓದಿನಲ್ಲಿ ತೊಡಗಿಸಿಕೊಂಡಳು. ದೀಪಕ್ ಅವಳನ್ನು ಡಿಸ್ಟರ್ಬ್ ಮಾಡಲಿಲ್ಲ. ಮಲ್ಲಿಕಾ ಎಗ್ಸಾಮ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆದು ಪಾಸಾಗಿದ್ದಳು. ಕಾಲೇಜಿಗೆ ಒಂದು ತಿಂಗಳ ರಜೆ ಸಿಕ್ಕಿತು.
ಆ ದಿವಸ ಮಲ್ಲಿಕಾ ಬೆಳಗ್ಗೆ ಏಳುತ್ತಲೇ ಯಾಕೋ ಸುಸ್ತು, ಹೊಟ್ಟೆ ತೊಳೆಸುವ ರೀತಿ ಸಂಕಟವಾಗುತ್ತಿತ್ತು. ವಾಂತಿ ಬರುವ ಹಾಗನಿಸಿತು. ಎರಡು ಬಾರಿ ಬಚ್ಚಲಿಗೆ ಹೋಗಿ ವಾಂತಿ ಮಾಡಿ ಬಂದಳು. ಚಂದ್ರಿಕಾಳಿಗೆ ಗಾಬರಿ, “ಮಲ್ಲಿ, ಯಾಕೆ ಎರಡೆರಡು ಸಲ ವಾಂತಿ ಮಾಡಿದೆ…? ಯಾಕೆ ಏನಾ….” ಎಂದು ಕೇಳುತ್ತಿದ್ದ ತಾಯಿಯ ಮಾತನ್ನು ಅರ್ಧದಲ್ಲೇ ತಡೆಯುತ್ತಾ, “ಏನಿಲ್ಲಾ ಬಿಡಮ್ಮಾ…… ನಿನ್ನೆ ಸ್ವಾತಿ ಪಾಠ ಹೇಳಿಸಿಕೊಳ್ಳಲು ಬಂದಾಗ ಅವಳ ಕೈಯಲ್ಲಿ ಎಳೆ ಹುಣಿಸೇ ಕಾಯಿ ಇರೋದು ನೋಡಿ, ಅವಳಿಂದ ತಗೊಂಡು ತಿಂದೆ. ಅದಕ್ಕೆ ಅದು ತೊಳಿಸಿರಬಹುದು.”
ಚಂದ್ರಿಕಾ ಅಷ್ಟೆಕ್ಕೇ ಸುಮ್ಮನಾದರೂ, ಮಲ್ಲಿಕಾಳಿಗೆ ಸುಮ್ಮನಿರಲು ಆಗಲಿಲ್ಲ. `ತಾನು ಪ್ರೆಗ್ನೆಂಟ್ ಆಗಿದ್ದೇನೆ,’ ಎಂದು ತಿಳಿದು ನಡುಗಿದಳು. ಮೊದಲು ದೀಪಕ್ ಗೆ ವಿಷಯ ತಿಳಿಸಬೇಕೆಂದು ಫೋನ್ ಮಾಡಿದರೂ ಅತ್ತಲಿಂದ ಸ್ವಿಚ್ ಆಫ್ ಎಂದು ಬರುತ್ತಿತ್ತು. ಮಲ್ಲಿಕಾಳಿಗೆ ಚಿಂತ ಅಧಿಕವಾಯಿತು. ಕಾಲೇಜು ಪುನರಾರಂಭವಾಗುವ ದಿನಗಳನ್ನು ಎಣಿಸುತ್ತಾ ಚಾತಕ ಪಕ್ಷಿಯಂತೆ ಕಾಯತೊಡಗಿದಳು.
ಕಾಲೇಜು ಆರಂಭವಾದ ಮೊದಲ ದಿನವೇ ಕಾಲೇಜಿಗೆ ಓಡಿದಳು. ದೀಪಕ್ ಕಾಲೇಜಿಗೆ ಬರಲು ಸಾಧ್ಯವಿರಲಿಲ್ಲ. ಏಕೆಂದರೆ ಅವನ ಕೊನೆಯ ವರ್ಷ ಮುಗಿದಿತ್ತು. ಮಲ್ಲಿಕಾ ದೀಪಕ್ ಗೆಳೆಯರ ಪಟಾಲಂನನ್ನು ಹುಡುಕಿದಳು. ಅವನ ಬ್ಯಾಚಿನವರು ಯಾರೂ ಅಲ್ಲಿರಲಿಲ್ಲ. ಪುಣ್ಯಕ್ಕೆ ಅವನ ಗೆಳಯರ ಬಳಗದಲ್ಲಿ ಜೂನಿಯರ್ ಗಳು ಕೂಡ ಇದ್ದರು. ಅವರನ್ನು ಕೇಳಿ ದೀಪಕ್ ಬಗ್ಗೆ ವಿಚಾರಿಸಿದಳು. ಯಾರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. ಕಡೆಗೆ ಬಿಎ ಎರಡನೇ ವರ್ಷದ ಸ್ಟೂಡೆಂಟ್ ಲೂಸಿಯ ಬಳಿ ದೀಪಕ್ ಬಗ್ಗೆ ಕೇಳಿದಳು.
ಇವಳು ದೀಪಕ್ ಬಗ್ಗೆ ಕೇಳಿದಾಗ ಲೂಸಿ ಜೋರಾಗಿ ನಗುತ್ತಾ, “ಅಯ್ಯೋ ಹುಚ್ಚೀ…. ನೀನಿನ್ನು ದೀಪಕ್ ನ ಕನಸಿನಲ್ಲೇ ಮುಳುಗಿರುವೆಯಾ…? ಅವನೊಂದು ದುಂಬಿಯ ಹಾಗೆ ಕಣೇ, ಈಗಾಗಲೇ ಅವನು ಮತ್ತೊಂದು ಹೂವಿನ ಮಕರಂದ ಹೀರಲು ಹೊಂಚು ಹಾಕುತ್ತಿರಬಹುದು” ಎಂದಳು.
“ಮತ್ತೆ…. ನಾನು, ದೀಪಕ್ ಒಟ್ಟಿಗೆ ಓಡಾಡುವಾಗ ನೀನು ಹೊಟ್ಟೆಕಿಚ್ಚು ಪಡುತ್ತಿದ್ದೆ, ಅವನ ಜೊತೆ ಜಗಳ ಆಡ್ತಿದ್ದೆ,” ಮಲ್ಲಿಕಾ ಅಮಾಯಕತೆಯಿಂದ ಪ್ರಶ್ನಿಸಿದಳು.
“ಹೌದು ಮಲ್ಲಿಕಾ, ನೀನು ಹೇಳಿದ್ದು ಸರಿ. ದೀಪಕ್ ನನ್ನು ನಾನು ನಿನ್ನ ಹಾಗೆಯೇ ಹುಚ್ಚಿಯಂತೆ ಪ್ರೀತಿಸುತ್ತಿದ್ದೆ. ಆದರೆ ಕ್ರಮೇಣ ಅವನು ಯಾರನ್ನೂ ಪ್ರೀತಿಸುವವನಲ್ಲ. ಅವನಿಗೆ ಇದೆಲ್ಲ ಒಂದು ಟೈಂಪಾಸ್ ಶೋಕಿ ಎಂದು ಅರಿವಾಗಿ ನಾನು ಹಿಂದೆ ಸರಿದುಬಿಟ್ಟೆ,” ಎಂದು ಲೂಸಿ ಹೇಳಿದಳು.
ಅವಳ ಮಾತನ್ನು ಕೇಳಿ ಮಲ್ಲಿಕಾ ಕಣ್ತುಂಬಿ ಕೊಂಡು, “ಈಗೇನು ಮಾಡ್ಲಿ ನಾನು?” ಎಂದು ಮುಗ್ಧವಾಗಿ ಕೇಳಿದಳು.
“ಏನ್ಮಾಡ್ತೀಯಾ…. ಅವನನ್ನು ಮರೆತು ಚೆನ್ನಾಗಿ ಓದಿ ನಿನ್ನ ಮುಂದಿನ ಭವಿಷ್ಯ ರೂಪಿಸಿಕೊ….”
“ಪ್ರೀತಿ, ಪ್ರೇಮ ಅಂತ ಅಷ್ಟೇ ಆಗಿದ್ರೆ ಮರೆಯಲು ಪ್ರಯತ್ನಿಸ ಬಹುದಿತ್ತೇನೋ… ಈಗ ಮರೆಯಲಾಗದಂತಹ ಉಡುಗೊರೆ ಕೊಟ್ಟು ಹೋಗಿದ್ದಾನೆ. ನನಗೀಗ 3 ತಿಂಗಳು. ಈ ವಿಷಯ ನಮ್ಮ ತಾಯಿಗೆ ಗೊತ್ತಿಲ್ಲ. ಗೊತ್ತಾದ್ರೆ ಎದೆಯೊಡೆದು ಸತ್ತೇ ಹೋಗುತ್ತಾರೆ,” ಎಂದು ಬಿಕ್ಕಿದಳು.
“ಮಲ್ಲಿಕಾ, ನೀನು ತುಂಬಾ ಮುಗ್ಧೆ, ಅತ್ಯಂತ ಭಾವಜೀವಿ. ಮೊದಲು ಅವನ ಪಿಂಡವನ್ನು ತೆಗೆಸಿ ಬಿಸಾಕು. ಎಲ್ಲಾ ಮರೆತು ಏನೂ ಆಗಿಲ್ಲದವಳಂತೆ ಜೀವನ ಮಾಡು. ಇಲ್ಲದಿದ್ದರೆ ನಿನ್ನ ಭವಿಷ್ಯವೇ ಹಾಳಾಗುತ್ತದೆ. ನೀನು ಎಷ್ಟು ಹುಡುಕಿದರೂ ದೀಪಕ್ ಸಿಗಲ್ಲ, ಒಂದು ವೇಳೆ ಸಿಕ್ಕರೂ ನಿನ್ನನ್ನು ಮದುವೆ ಆಗ್ತಾನೆ ಅನ್ನೋದು ಶುದ್ಧ ಸುಳ್ಳು. ಲೋ ಮಿಡಲ್ ಕ್ಲಾಸ್ ನ ನಾವೆಲ್ಲ ಅವನಿಗೆ ಯಾವ ಲೆಕ್ಕ…. ಚಿನ್ನದ ತಟ್ಟೆಯಲ್ಲಿ ಊಟ ಮಾಡುವಷ್ಟು ಶ್ರೀಮಂತ ಅವನು.” ಎಂದು ಹೇಳಿದಳು. ಚೆಲ್ಲು ಚೆಲ್ಲು ಸ್ವಭಾವದ ಹುಡುಗಿ ಲೂಸಿ ಕಡೆಯಿಂದ ಗಂಭೀರವಾಗಿ ಬುದ್ಧಿವಾದ ಹೇಳಿಸಿಕೊಳ್ಳುವಂತೆ ಆಯಿತಲ್ಲಾ….. ನನ್ನ ಜನ್ಮಕ್ಕಿಷ್ಟು….ಇವಳಿಗಿಂತ ಕಡೆಯಾಗಿ ಹೋದೆನಲ್ಲಾ…..! ಎನಿಸಿ ಒಳಗೊಳಗೆ ವಿಪರೀತ ನಾಚಿಕೆ, ಅವಮಾನ ಆಯಿತು.
`ಛೇ… ಅಮ್ಮಾ, ನನ್ನ ಎಷ್ಟು ಸಂಸ್ಕಾರದಿಂದ ಕಷ್ಟಪಟ್ಟು ಬೆಳೆಸಿದರು. ನಾನು ಇದುವರೆಗೂ ಅಮ್ಮ ಹಾಕಿದ ಗೆರೆಯೇ ದಾಟಲಿಲ್ಲ. ಅಮ್ಮ ಹೇಳಿದಂತೆ ಗವರ್ನಮೆಂಟ್ ಕಾಲೇಜಿನಲ್ಲಿ ಓದಿದ್ರೆ ಇಷ್ಟೆಲ್ಲಾ ಮೋಸ ಹೋಗುವ ಛಾನ್ಸ್ ಇರುತ್ತಿರಲಿಲ್ಲ. ಯಾವುದೋ ಮೋಹ ಪಾಶಕ್ಕೆ ಸಿಲುಕಿ ಯಾವುದೇ ಸತ್ಯವಲ್ಲದ ಭರವಸೆಯನ್ನು ನಂಬಿ, ನನ್ನ ಮುಂದಿನ ಭವಿಷ್ಯದ ಕನಸು ಎಲ್ಲವೂ ಹಾಳಾಗಿ ಹೋದವು,’ ಎಂದು ನೆನೆಸಿ ಬಿಕ್ಕಿ ಬಿಕ್ಕಿ ಅತ್ತಳು.
ಕಡೆಗೆ ಏನೋ ನಿರ್ಧರಿಸಿದವಳಂತೆ ಕಣ್ಣೊರೆಸಿಕೊಂಡು ಕ್ಲಾಸಿಗೆ ಚಕ್ಕರ್ ಹೊಡೆದು ಮನೆಗೆ ಬಂದಳು. ರೂಮಿಗೆ ಹೋಗಿ ಹಗ್ಗವೊಂದನ್ನು ತೆಗೆದುಕೊಂಡು ಅದಕ್ಕೆ ಕುಣಿಕೆ ಹಾಕಿ ಒಂದು ಪ್ಲಾಸ್ಟಿಕ್ ಚೇರ್ ಇಟ್ಟುಕೊಂಡು ಹಗ್ಗದ ಇನ್ನೊಂದು ತುದಿಯನ್ನು ಫ್ಯಾನಿಗೆ ಬಿಗಿದು ಕುಣಿಕೆಗೆ ಕತ್ತನ್ನು ಒಡ್ಡಿಕೊಂಡಳು. ಉಸಿರು ಕಟ್ಟುವಂತಾಯಿತು. ಆದರೆ ಹೆದರಿಕೆ ಶುರುವಾಯಿತು.
`ಇಲ್ಲಾ ನಾನು ಸಾಯಲೇಬೇಕು. ಬದುಕಿದ್ದರೆ ಈ ಸಮಾಜ ನನ್ನನ್ನು ಬಾಳಲು ಬಿಡುವುದಿಲ್ಲ. ಇಷ್ಟು ದಿವಸ ಎಲ್ಲರ ಬಾಯಲ್ಲೂ ತಾಯಿಗೆ ತಕ್ಕ ಮಗಳು ಎಂದು ಕರೆಸಿಕೊಂಡು ನಾನು, ಈಗ ತಂದೆಗೆ ತಕ್ಕ ಮಗಳಾಗಿ ಬದಲಾಗಿದ್ದೇನೆ. ನನ್ನನ್ನು ಹೊಗಳಿದ ಅದೇ ಜನ ಈಗ ಛೀ….ಥೂ ಎಂದು ನನ್ನ ಮುಖಕ್ಕೆ ಉಗಿಯುವುದರಲ್ಲಿ ಸಂದೇಹವಿಲ್ಲ,’ ಅವಳಿಗೆ ಅಮ್ಮನ ನೆನಪಾಗಿ ಕಣ್ತುಂಬಿ ಬಂತು, `ಅಮ್ಮಾ…. ನನ್ನ ಕ್ಷಮಿಸಮ್ಮಾ ನೀನಂದುಕೊಂಡಂತೆ, ನಾನು ಒಳ್ಳೆಯ ಮಗಳಲ್ಲ,’ ಎಂದುಕೊಂಡು ಕಾಲಿನಿಂದ ಚೇರನ್ನು ನೂಕಿದಳು.
ಫ್ಯಾನಿಗೆ ಜೋತಾಡುತ ಕಾಲು ಬಡಿದಳು. ಕುಣಿಕೆಯ ಬಿಗಿತ ಹೆಚ್ಚಾಗಿ ನಾಲಿಗೆ ಆಚೆ ಬರಲು ಹವಣಿಸಿತು. ಕಣ್ಣು ಗುಡ್ಡೆ ಕಿತ್ತು ಬರುವಂತಾದವು. ಯಮ ತನ್ನನ್ನು ಎಳೆದೊಯ್ಯಲು ಕಾಯುತ್ತಿದ್ದಾನೆ ಎನಿಸಿತು. ಅವಳಿಗೆ ಬಾಯಿ ಒಣಗಿ ವಿಪರೀತ ಸಂಕಟವಾಗುತ್ತಿತ್ತು. ಜೋರಾಗಿ ಕಿರುಚಬೇಕು ಎನಿಸಿತು. ಆದರೆ ಬಾಯಿ ತೆರೆಯಲಂತೂ ಸಾಧ್ಯವೇ ಇರಲಿಲ್ಲ. ಅಷ್ಟರಲ್ಲಿ `ದೊಪ್’ ಎಂಬ ಸದ್ದು ಯಾರದೋ ಹೆಣ್ಣು ಧ್ವನಿ, `ಮಲ್ಲಿಕಾ ಮಲ್ಲಿಕಾ….’ ಎಂದು ಕೂಗುತ್ತಿದ್ದಾರೆ, ಮೈ ಮುಟ್ಟಿ ಅಲುಗಾಡಿಸುತ್ತಿದ್ದಾರೆ. ಆ ಅಲುಗಾಟಕ್ಕೆ ಕಡೆಗೂ ಮಲ್ಲಿಕಾಳಿಗೆ ಎಚ್ಚರಾಯಿತು.`ಅರೇ…. ನಾನು ಸಾಯಲಿಲ್ಲವೇ…?’ ಅಚ್ಚರಿ ಆಯ್ತು. ಪಕ್ಕದಲ್ಲಿ ಕುಳಿತಿದ್ದ ಅಮ್ಮ, “ಮಲ್ಲಿ… ಮಲ್ಲಿ… ಏನಾಯ್ತೆ…? ನೇಣು ಹಾಕ್ಕೊಳಕ್ಕೆ ಹೋಗಿದ್ಯಾ…..? ಯಾಕೆ …. ನೇಣು ಹಾಕಿಕೊಳ್ಳುವಂತಾದ್ದು ನಿನಗೆ ಏನಾಯ್ತು….?” ಎಂದೆಲ್ಲಾ ಪ್ರಶ್ನಿಸಿದಳು.
ಅಮ್ಮನನ್ನು “ಅಮ್ಮಾ……” ಎಂದು ಆರ್ದ್ರವಾಗಿ ಕೂಗಿ ತಬ್ಬಿಕೊಂಡು ಗೊಳೋ ಎಂದು ಅಳಲಾರಂಭಿಸಿದಳು.
ಮಗಳ ಇಂತಹ ನಿರ್ಧಾರ ಏಕೆಂದು ತಿಳಿಯದಿದ್ದರೂ ಮಗಳು ಸಾವಿನ ಬಾಗಿಲು ತಟ್ಟಿದ್ದಂತೂ ದಿಟವೇ! ಚಂದ್ರಿಕಾ ಮಗಳನ್ನು ತಬ್ಬಿ ಹಿಡಿದು ಅತ್ತಳು. ಅತ್ತು ಅತ್ತೂ ಸಮಾಧಾನಗೊಂಡ ಮಗಳಿಗೆ ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣ ಏನೆಂದು ಕೇಳಿದಾಗ, ಮಲ್ಲಿಕಾ ನಾಚಿಕೆ ಬಿಟ್ಟು ಎಲ್ಲವನ್ನೂ ಅಮ್ಮನ ಎದುರು ಹೇಳಿದಳು. ಮಗಳು ಹೇಳಿದ್ದು ಮೌನವಾಗಿ ಕೇಳಿಸಿಕೊಂಡ ಚಂದ್ರಿಕಾ ಅದ್ಯಾರಿಗೋ ಫೋನ್ ಮಾಡಿ ಏನೋ ಮಾತಾಡಿದಳು.
“ಹ್ಞೂಂ…. ಆಯ್ತು ನಾಳೆ ಬರ್ತೀವಿ,” ಎಂದು ಫೋನ್ ಇಟ್ಟಳು.
ಅಮ್ಮಾ ಮಗಳು ಮಾರನೇ ದಿನವೇ ಊರು ಬಿಟ್ಟು ಚಂದ್ರಾಪುರದಲ್ಲಿದ್ದ ಚಂದ್ರಿಕಾಳ ಗೆಳತಿ ಮನೆ ಸೇರಿದರು. ಆಕೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು. ಮಗಳ ಬಾಣಂತನ ಮುಗಿಯುವವರೆಗೂ ಅಲ್ಲಿಯೇ ಇರುವುದೆಂದು ನಿರ್ಧರಿಸಿ ಬಂದಿದ್ದ ಚಂದ್ರಿಕಾ, ಮೊದಲಿಗೆ ಮಗಳನ್ನು ದೇವರ ಮುಂದೆ ಕೂರಿಸಿ ಅವಳ ಕುತ್ತಿಗೆಗೊಂದು ತಾಳಿ ಕಟ್ಟಿದಳು. ಸಮಾಜದ ದೃಷ್ಟಿಯಲ್ಲಿ ಮಗಳು ಮದುವೆಯಾದ ಹೆಣ್ಣಾಗಿರಲಿ, ಎಂಬುದು ಚಂದ್ರಿಕಾಳ ಉದ್ದೇಶವಾಗಿತ್ತು.
ಮಲ್ಲಿಕಾಳಿಗೆ ದಿನ ತುಂಬಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗು ದೀಪಕ್ ನನ್ನೇ ಹೋಲುತ್ತಿತ್ತು. ಮಗುವಿನ ಮುಖ ನೋಡಿ ಹಳೆಯ ಕಹಿ ಘಟನೆ ಮರೆಯಲು ಯತ್ನಿಸುತ್ತಿರುವಂತೆಯೇ ಮಲ್ಲಿಕಾಳ ಬಾಳಲ್ಲಿ ಮತ್ತೊಂದು ಆಘಾತ ಹೊಂಚು ಹಾಕಿ ಕಾಯುತ್ತಿತ್ತು.
ರಾತ್ರಿ ಮಲಗಿದ್ದಲ್ಲಿಯೇ ಚಂದ್ರಿಕಾ ಹೃದಯಾಘಾತವಾಗಿ ಸಾವನ್ನಪ್ಪಿದಳು. ಬದುಕಿರುವವರೆಗೂ ಬರೀ ಕಷ್ಟವನ್ನೇ ನೋಡಿದ ಜೀವ, ಕಡೆಗೆ ಬದುಕು ಸಾಕೆನಿಸಿ ಚಿರನಿದ್ರೆಗೆ ಶರಣಾಗಿತ್ತು. ತಂದೆಯ ನೆನಪೇ ಇಲ್ಲದ ಮಲ್ಲಿಕಾಳಿಗೆ ಅಮ್ಮನೇ ಸರ್ವಸ್ವವಾಗಿದ್ದಳು. ಈಗ ಆ ಅಮ್ಮನೂ ಇಲ್ಲವಾದಳು. ತನ್ನ ಸರ್ವಸ್ವವಾಗಿದ್ದ ಅಮ್ಮನನ್ನು ಕಳೆದುಕೊಂಡ ಮಲ್ಲಿಕಾ ಕಂಗಾಲಾದಳು. ಹೊರಗಿನ ಪ್ರಪಂಚ ಏನೆಂದು ಹೇಗೆಂದು ತಿಳಿಯುವ ಮುನ್ನವೇ ತಾನು, ಇಂತಹ ದುಃಸ್ಥಿತಿಯನ್ನು ತಂದುಕೊಂಡದ್ದಕ್ಕಾಗಿ ಪೇಚಾಡಿ ಒದ್ದಾಡಿದಳು. ಅವಳ ಕಣ್ಮುಂದೆ ಶೂನ್ಯತೆ ಆವರಿಸಿತ್ತು. ಒಂದು ಕಪ್ಪಾದ ಗೋಲ ಆ ಗೋಲದೊಳಗೆ ಸಿಲುಕಿದ ತಾನು ಅದರಿಂದ ಹೊರ ಬರಲು ಸಾಧ್ಯವಾಗದೆ ಒಳಗಿರಲು ಆಗದೇ ಒದ್ದಾಡುತ್ತಿರುವಂತೆ ಕಲ್ಪಿಸಿಕೊಂಡು ನಡುಗಿದಳು.
ತನ್ನ ಬದುಕು ಕೊನೆಗಾಣಿಸಿಕೊಳ್ಳಲೇಬೇಕೆಂದು ನಿರ್ಧರಿಸಿ, ಆ ರಾತ್ರಿ 1 ತಿಂಗಳ ಮಗುವನ್ನು ಎತ್ತಿಕೊಂಡು ಆ ಊರಿನಿಂದ ಹೊರಟು ರೈಲ್ವೇ ಸ್ಟೇಷನ್ ನತ್ತ ನಡೆದಳು.
ಅದೊಂದು ಚಿಕ್ಕ ಊರು. ರಾತ್ರಿ ಸಮಯ 10 ಗಂಟೆಯಾಗಿತ್ತು. ಸ್ಟೇಷನ್ ನಲ್ಲಿ ಹೇಳಿಕೊಳ್ಳುವಂತಹ ಗದ್ದಲ ಇರಲಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ಪ್ರಯಾಣಿಕರು ಅಲ್ಲಿದ್ದ ಕಲ್ಲು ಬೆಂಚುಗಳ ಮೇಲೆ ಕುಳಿತು ತಮ್ಮ ರೈಲಿಗಾಗಿ ಕಾಯುತ್ತಿದ್ದರು. ಕೆಲವರು ರೈಲಿಗಾಗಿ ಕಾದು ಕಾದು ಸಾಕಾಗಿ ಅಲ್ಲೇ ಬೆಂಚುಗಳು ಮೇಲೆ ಮಲಗಿ ನಿದ್ರಿಸುತ್ತಿದ್ದರು.
ಮಲ್ಲಿಕಾ ಮುಂದೆ ಮುಂದೆ ಜನ ಸಂಚಾರವಿಲ್ಲದ ಕಡೆ ನಡೆದಳು. ತನ್ನ ಯೋಚನೆಯಲ್ಲೇ ಮುನ್ನಡೆಯುತ್ತಿದ್ದವಳ ದೃಷ್ಟಿ ಅಚಾನಕ್ಕಾಗಿ ಬಲಗಡೆಗೆ ಹೊರಳಿತು. ಆ ಕಡೆ ದೃಷ್ಟಿ ಹರಿಸಿದಂತೆ ಮಲ್ಲಿಕಾಳ ಬಾಡಿದ ಮುಖ ಅರಳಿತು. ಆ ಒಂದು ದೃಷ್ಟಿ ಅವಳ ಅದುವರೆಗಿನ ದೃಷ್ಟಿಕೋನವನ್ನೇ ಬದಲಿಸಿತು. ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೆಯೇ ಎಂದು ಅತ್ತ ಒಮ್ಮೆ ಇತ್ತ ಒಮ್ಮೆ ನೋಡಿದಳು. ಅಲ್ಲಿ ಯಾರೂ ಇಲ್ಲವೆಂದು ಖಚಿತವಾದ ಮೇಲೆ ಅತ್ತ ನಡೆದಳು. ತಾನು ನೋಡಿದ ವಸ್ತುವನ್ನು ಸಮೀಪಿಸಿದಳು. ಅದೊಂದು ತೊಟ್ಟಿಲು. ಸುತ್ತಲೂ ಮರದ ಸ್ಟಾಂಡ್ ನಡುವೆ ತೂಗುವ ತೊಟ್ಟಿಲು, ಅದರ ಮೇಲೆ ದಪ್ಪ ಅಕ್ಷರಗಳಲ್ಲಿ `ಮಮತೆಯ ತೊಟ್ಟಿಲು’ ಎಂದು ಬರೆಯಲಾಗಿತ್ತು. ತನ್ನಂಥ ನಿರ್ಭಾಗ್ಯ ಹೆಣ್ಣುಮಕ್ಕಳು ಹೆತ್ತ ದೌರ್ಭಾಗ್ಯ ಮಕ್ಕಳಿಗಾಗಿ ಅದನ್ನು ಅಲ್ಲಿ ಇರಿಸಲಾಗಿತ್ತು. ಇಂತಹ ಒಂದು ದುರ್ಗತಿ ತನಗೆ ಬರುವುದೆಂದು ಅವಳು ಕನಸಿನಲ್ಲೂ ಎಣಿಸಿರಲಿಲ್ಲ. ಮಗುವನ್ನು ಬಟ್ಟೆಯಲ್ಲಿ ಸುತ್ತಿ ಆ ತೊಟ್ಟಿಲಲ್ಲಿ ಮಗುವನ್ನು ಮಲಗಿಸಿದಳು.
ಅಷ್ಟರಲ್ಲಿ ದೂರದಲ್ಲಿ ರೈಲು ಬರುವ ಶಬ್ದ ಕೇಳಿಸಿತು. ಭರಭರನೇ ರೈಲಿನ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕಿದಳು. ರೈಲು ಸಮೀಪಸುತ್ತಿದ್ದಂತೆ ಅವಳ ಎದೆ ನಗಾರಿಯಂತೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಕಾಲು ಮೇಲೇಳದಾಯಿತು. ಹೆಜ್ಜೆಯನ್ನು ಯಾರೋ ಬಲವಾಗಿ ಹಿಂದಕ್ಕೆ ಎಳೆಯುತ್ತಿರವರೇನೋ ಎಂಬಂತೆ ಭಾಸವಾಯಿತು.
ಅಷ್ಟರಲ್ಲಿ ಹಿಂದಿನಿಂದ ಕೆಲವು ದನಿಗಳು ಕೇಳಿಸಿ, ತನ್ನ ನಿರ್ಧಾರ ಬದಲಿಸಿ ಹಿಂತಿರುಗಿ ದುಡ ದುಡನೇ ಹೆಜ್ಜೆ ಹಾಕುತ್ತಾ ತೊಟ್ಟಿಲಿಗೆ ತುಸು ದೂರದಲ್ಲಿ ಮರೆಯಲ್ಲಿ ನಿಂತು ನೋಡತೊಡಗಿದಳು. ಅಲ್ಲಿನ ರೈಲ್ವೇ ಪೊಲೀಸರು ಅವರಿವರಲ್ಲಿ ಮಗುವಿನ ಬಗ್ಗೆ ವಿಚಾರಿಸುತ್ತಿದ್ದರು. ಅಲ್ಲಿನವರಿಂದ ಸಮರ್ಪಕ ಉತ್ತರ ಬಾರದಿದ್ದಾಗ, ಪೊಲೀಸರು ಮಗುವನ್ನು ತಮ್ಮ ಸ್ಟೇಷನ್ ನ್ನಿನ ಆಫೀಸ್ರೂಮಿಗೆ ಎತ್ತಿಕೊಂಡು ಹೊರಟರು.
ಒಂದು ಕ್ಷಣ ಮಲ್ಲಿಕಾಳ ಮನಸ್ಸಿನಲ್ಲಿ, `ಇದು ನನ್ನ ಮಗು ಕೊಡಿ,’ ಎಂದು ಕೇಳಲೇ ಎನಿಸಿತು. `ಅದು ನನ್ನದೇ ಮಗು ಎಂದು ಹೇಗೆ ನಂಬುವರು….? ನನ್ನನ್ನೇ ಮಕ್ಕಳ ಕಳ್ಳಿ ಎಂದು ಭಾವಿಸಿ ಜೈಲಿಗಟ್ಟಿದರೆ, ಇಲ್ಲಾ ನೀತಿಗೆಟ್ಟವಳು, ಅನೈತಿಕ ಚಟುವಟಿಕೆ ನಡೆಸುವವಳು ಎಂದು ಭಾವಿಸಿ ಅದಕ್ಕೂ ನನ್ನನ್ನು ಜೈಲಿಗಟ್ಟಿದರೆ….? ನಾನು ನನ್ನ ಮಗುವನ್ನು ದೂರ ಮಾಡಿ ಸುಖಾಸುಮ್ಮನೆ ಜೈಲಿನಲ್ಲಿ ಕೊಳೆಯುವ ಹಾಗಾಗಿ ಜೀವನ ಪರ್ಯಂತ ಒಂದು ಕಳಂಕ ನನ್ನನ್ನು ತಟ್ಟಿಬಿಡುವುದು. ಈಗ ಸಾಯಲು ಹೋಗಿ ಸಾಯಲಾರದೆ ಓಡಿ ಬಂದೆ. ಮುಂದೆ ನಾನೇನಾದರೂ ಇವರ ಕೈಯಲ್ಲಿ ಸಿಕ್ಕಿಕೊಂಡರೆ ಬದುಕಿದ್ದು ಸತ್ತಂತೆ,’ ಎಂದುಕೊಳ್ಳುತ್ತಾ ಮೌನವಾಗಿ ಕಣ್ಣೀರಿಟ್ಟಳು.
ಮರೆಯಿಂದ ಆಚೆ ಬರುತ್ತಲೇ ಯಾರೋ ಇಬ್ಬರು ಮಧ್ಯ ವಯಸ್ಸಿನ ಹೆಂಗಸರು ಆಫೀಸ್ ರೂಮಿಗೆ ಬಂದು ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಮಲ್ಲಿಕಾಳ ಕಣ್ಣಿಗೆ ಬಿತ್ತು. ಆತಂಕದಿಂದ ಅತ್ತ ಹೆಜ್ಜೆ ಹಾಕಿದಳು. ಅವರಲ್ಲಿ ಯಾರೋ ಒಬ್ಬರು, “ಒಂದು ತಿಂಗಳ ಮಗು. ಪಾಪ ಇದು ಯಾರೋ ನೀತಿಗೆಟ್ಟ ಹೆಂಗಸು, ತನಗದು ಬೇಡ ಅಂತಲೋ ಅಥವಾ ತನ್ನ ದಾರಿಗದು ಅಡ್ಡ ಅಂತಲೋ ಇಲ್ಲಿ ತಂದು ಮಲಗಿಸಿ ಹೋಗಿದ್ದಾಳೆ. ಎಂತಹ ತಾಯಿರೀ ಅವಳು…..? ದೇವರು ಇಂಥವರಿಗೆ, ಹೆತ್ತು ಬೀದಿಲಿ ತಂದು ಬಿಸಾಕುವಂತರಿಗೆ ಮಕ್ಕಳನ್ನು ಕೊಡುತ್ತಾನೆ. ಎಷ್ಟೋ ಜನ ಮಕ್ಕಳಿಗಾಗಿ ಹಂಬಲಿಸುತ್ತಾರೋ ಅಂತವರಿಗೆ ಮಕ್ಕಳ ಭಾಗ್ಯ ಕೊಡುವುದಿಲ್ಲ. ಎಲ್ಲಾ ಅವರವರ ಅದೃಷ್ಟ. ಈ ಮಕ್ಕಳ ಕರ್ಮ” ಎನ್ನುವ ಮಾತುಗಳು ಕೇಳಿಸಿದವು.
ಆ ದುಃಖದಲ್ಲೂ `ಈ ಸಮಾಜ ಎಲ್ಲದಕ್ಕೂ ಬರೀ ಹೆಣ್ಣನ್ನೇ ದೂರುತ್ತದೆ. ಅದಕ್ಕೆ ಕಾರಣರಾದವರನ್ನು ಬಿಟ್ಟೇ ಬಿಡುತ್ತಾರೆ,’ ಎಂದು ಮಲ್ಲಿಕಾಳಿಗೆ ಕೋಪ ಉಕ್ಕಿ ಬಂತು. ಆ ಹೆಂಗಸರನ್ನು ಅನುಸರಿಸಿ ನಡೆದಳು ಮಲ್ಲಿಕಾ. ಅವರಿಬ್ಬರು ಒಂದು ಆಟೋವನ್ನೇರಿದರು. ಮಲ್ಲಿಕಾ ಕೂಡ ಮತ್ತೊಂದು ಆಟೋವನ್ನು ಹತ್ತಿ ಮುಂದಿನ ಆಟೋವನ್ನು ಫಾಲೋ ಮಾಡಿದಳು. ಆ ಆಟೋ ಒಂದರ್ಧ ಕಿ.ಮೀವರೆಗೂ ಮೆಯ್ನ್ ರೋಡ್ ನಲ್ಲಿ ಹೋಗಿ ಮುಂದೆ ಎಡಕ್ಕೆ ತಿರುಗಿ, ಕಿರು ದಾರಿಯಲ್ಲಿ ಸಾಗಿ, ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿ ಸುಮಾರು ದೂರು ಹೋದ ನಂತರ ಎರಡಂತಸ್ತಿನ ಕಟ್ಟಡದ ಮುಂದೆ ನಿಂತಿತು.
ಮಲ್ಲಿಕಾ ಕೂಡ ತುಸು ದೂರದಲ್ಲಿ ತನ್ನ ಆಟೋ ನಿಲ್ಲಿಸಿ ಕೆಳಗಿಳಿದು ಮುಂದೆ ಬಂದಳು. ಮೇಲೆ ದೊಡ್ಡದಾದ ಅಕ್ಷರಗಳಲ್ಲಿ `ಬಾಪೂಜಿ ಚಿಲ್ಡ್ರನ್ ಹೋಮ್’ ಎಂದು ಬೋರ್ಡ್ ತೂಗು ಹಾಕಲಾಗಿತ್ತು.
ಮಲ್ಲಿಕಾಳಿಗೆ ತನ್ನ ಮಗು ಆ ಅನಾಥಾಶ್ರಮ ಸೇರಿಕೊಂಡಿರುವುದು ಮನಸ್ಸಿಗೆ ಸಮಾಧಾನ ಆಯಿತು. ತನ್ನ ಮಗುವನ್ನು ತೊರೆದು ಹೋಗಲು ಈಗ ಮಲ್ಲಿಕಾಳಿಗೆ ಮನಸ್ಸಾಗಲಿಲ್ಲ. ಅವಳ ತಲೆಯಲ್ಲೊಂದು ಯೋಚನೆ ಹೊಳೆಯಿತು. ಅವಳೂ ಅನಾಥಾಶ್ರಮದ ಒಳ ಹೊಕ್ಕಳು.
ಅಲ್ಲೊಬ್ಬ ವಯಸ್ಸಾದ ಮಹಿಳೆ ಇದ್ದರು. ಈ ರಾತ್ರಿಯಲ್ಲಿ ಇವಳೇಕೆ ಇಲ್ಲಿಗೆ ಬಂದಿದ್ದಾಳೆ ಎಂಬಂತೆ ಅವಳತ್ತ ನೋಡಿದರು. ಅದನ್ನು ಅರ್ಥ ಮಾಡಿಕೊಂಡ ಮಲ್ಲಿಕಾ, ಆಕೆಗೆ ತನ್ನ ಹೆಸರು ಹೇಳಿ ತಾನೊಬ್ಬ ಅನಾಥೆ. ಇಲ್ಲೇ ಏನಾದರೂ ಕೆಲಸ ಕೊಟ್ಟರೆ ಮಾಡಿಕೊಂಡು ಇಲ್ಲೇ ಇರಲು ಅನುಮತಿ ನೀಡಿ ಎಂದು ಅಲವತ್ತುಕೊಂಡಳು. ಆ ಆಶ್ರಮ ಅನಾಥ ಮಕ್ಕಳಿಗೆ ಮತ್ತು ಅಸಹಾಯಕ ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ಇತ್ತು. ಕರುಣಾಮಯಿಯಾದ ಆ ಅನಾಥಾಶ್ರಮದ ಮೇಲ್ವಿಚಾರಕಿ ಮಲ್ಲಿಕಾಳಿಗೆ ರಕ್ಷಣೆ ಕಲ್ಪಿಸಿದರು.
ಮಲ್ಲಿಕಾಳಿಗೆ ಸಾಯುವ ನಿರ್ಧಾರ ತಪ್ಪಿ ತನ್ನ ಮಗುವನ್ನು ನೋಡುತ್ತಾ ದಿನ ಕಳೆಯುವ ಅವಕಾಶ, ಆಸರೆ ಸಿಕ್ಕಿತು. ಆ ವಯಸ್ಸಾದ ಮಹಿಳೆಯೇ ಜಮುನಾ ದೀದಿ. ಎಲ್ಲರೂ ಆಕೆಯನ್ನು ಜಮುನಾ ದೀದಿ ಎಂದು ಕರೆಯುತ್ತಿದ್ದರು. ಸಿರಿವಂತಳಾದ ಆದರೆ ಮಕ್ಕಳಿಲ್ಲದ ಆಕೆ ತನ್ನ ಪತಿಯ ಸಹಕಾರದಿಂದ ಈ ಆಶ್ರಮವನ್ನು ಹುಟ್ಟು ಹಾಕಿ ಇಂತಹ ಅನಾಥ ಮಕ್ಕಳಲ್ಲಿ ತಮ್ಮ ಮಕ್ಕಳಿಲ್ಲದ ಕೊರಗು, ನೋವನ್ನು ನೀಗಿಸಿಕೊಂಡು ಬದುಕುತ್ತಿದ್ದರು. ಮುಂದೆ ಅವರ ಪತಿ ತೀರಿಕೊಂಡ ನಂತರ ನೊಂದ ಕೆಲವು ಮಹಿಳೆಯರ ಸಹಕಾರದಿಂದ ಮುನ್ನಡೆಸಿಕೊಂಡು ಬಂದಿದ್ದರು. ಈಗವರಿಗೆ ವಯಸ್ಸಾಗಿ ಯಾರಾದರೂ ತಾಯಿ ಹೃದಯವುಳ್ಳ ಅಂತಃಕರಣದ ಮನಸ್ಸಿನ ಸಮರ್ಥ ರೀತಿಯಲ್ಲಿ ಆಶ್ರಮವನ್ನು ಮುನ್ನಡೆಸುವ ಹೆಣ್ಣೊಬ್ಬಳ ಅವಶ್ಯಕತೆ ಅವರಿಗಿತ್ತು. ಅದೇ ಸಮಯಕ್ಕೆ ಮಲ್ಲಿಕಾ ಆಶ್ರಮಕ್ಕೆ ಬಂದಿದ್ದು ಎಷ್ಟೋ ಸಮಾಧಾನವಾಗಿತ್ತು.
ಮಲ್ಲಿಕಾಳಲ್ಲಿದ್ದ ತಾಯ್ತನವನ್ನು ಆಕೆ ಅವಳನ್ನು ನೋಡಿದ ಕೂಡಲೇ ಗುರುತಿಸಿದ್ದರು. ಅಲ್ಲದೇ ಒಂದು ಅನಾಥ ಮಗುವಿನ ಹಿಂದೆಯೇ ಅವಳು ಕೆಲಸ ಕೇಳಿಕೊಂಡು ಬರಲು ಹೇಗೆ ಸಾಧ್ಯ….? ಎಂದು ಅವರ ಮನ ತರ್ಕಿಸಿತ್ತು. ಆ ಸಮಯಕ್ಕೆ ಏನೂ ಕೇಳದೆ ಅವಳನ್ನು ಸೇರಿಸಿಕೊಂಡಿದ್ದರು. ಕೆಲವು ದಿನಗಳಾದ ಮೇಲೆ ಅವಳ ನಡೆ ನುಡಿ ಗಮನಿಸಿ ನಿಧಾನವಾಗಿ ಮಾತಿಗೆಳೆದು ಅವಳಿಂದ ಎಲ್ಲಾ ಕೇಳಿ ತಿಳಿದುಕೊಂಡರು.
ತನ್ನ ಮಗಳು ಬೆಳೆಯುವಲ್ಲಿಯೇ ತಾನೂ ಇರಬೇಕೆನ್ನುವ ಈಕೆ ಖಂಡಿತಾ ಇಲ್ಲಿಂದ ಎಲ್ಲೂ ಹೋಗಲಾರಳು, ಯಾವ ಮಕ್ಕಳಿಗೂ ಅನ್ಯಾಯ ಮಾಡಲಾರಳು ಎಂದು ನಿರ್ಧರಿಸಿದ ಜಮುನಾ ದೀದಿ ಮಲ್ಲಿಕಾಳನ್ನು ತಮ್ಮ ಸಮಾಜ ಸೇವೆಯ ವಾರಸುದಾರಳನ್ನಾಗಿ ಮಾಡಿದರು. ಮುಂದೆರಡು ವರ್ಷಗಳಲ್ಲಿ ವಯೋಸಹಜ ಅನಾರೋಗ್ಯದಿಂದ ಜಮುನಾ ದೀದಿ ತೀರಿಕೊಂಡರು. ಮಲ್ಲಿಕಾ ತನ್ನ ಮಗಳು ಕೇಳಬಹುದಾದ ಪ್ರಶ್ನೆಗಳಿಗೆ ಹೆದರಿ ತನ್ನ ಮಕ್ಕಳನ್ನು ಅನಾಥ ಮಕ್ಕಳ ಹಾಗೆಯೇ ಬೆಳೆಸಿದ್ದಳು. ತಾನು ಕನ್ನಿಕಾಳಿಗೆ ತಾಯಿ ಎಂದು ಹೇಳಲೇ ಇಲ್ಲ.
ಮೆಲುವಾಗಿ ನರಳಿದ ಕನ್ನಿಕಾಳ ಧ್ವನಿ ಕೇಳಿದ್ದರಿಂದ ಮಲ್ಲಿಕಾ ವಾಸ್ತವಕ್ಕೆ ಬಂದಳು. ಅವಳ ಹಣೆ ಮುಟ್ಟಿ ನೋಡಿದಳು ಜ್ವರ ಪೂರ್ತಿ ಇಳಿದು ಮೈಯೆಲ್ಲಾ ಬೆವತ್ತಿತ್ತು. ಮುಂದೆರಡು ದಿವಸ ಔಷಧೋಪಚಾರದಿಂದ ಕನ್ನಿಕಾ ಅರಾಮವಾಗಿ ಓಡಾಡುವಂತಾದಾಗ ಮಲ್ಲಿಕಾ ನೆಮ್ಮದಿಯ ನಿಟ್ಟುಸಿರುಬಿಟ್ಟಳು.
ಅಂದು ಆಫೀಸ್ ರೂಮಿನಲ್ಲಿ ಕುಳಿತ ಮಲ್ಲಿಕಾ ಕೆಲಸದಲ್ಲಿ ಮುಳುಗಿಹೋಗಿದ್ದಳು. “ಎಕ್ಸ್ ಕ್ಯೂಸ್ ಮಿ….” ಎಂದು ಯಾರೋ ಹೇಳಿದ್ದನ್ನು ಕೇಳಿ ತಲೆ ಎತ್ತದೆ, “ಎಸ್…..” ಎಂದಳು.
“ಮ್ಯಾಮ್….. ನಮಗೊಂದು ಮಗು ದತ್ತು ಬೇಕಿತ್ತು,” ಅಳುಕಿನಿಂದ ಧ್ವನಿ ಕೇಳಿತು.
ಮಲ್ಲಿಕಾ ಫೈಲ್ ಮುಚ್ಚಿಟ್ಟು, ಬಂದವರನ್ನು ನೋಡಿದಳು. ಶ್ರೀಮಂತ ಮನೆತನದ ದಂಪತಿಗಳಿಬ್ಬರು ದೈನ್ಯತೆಯ ಮುಖಭಾವದಿಂದ ನಿಂತಿದ್ದರು. ನಿಂತಿರುವ ವ್ಯಕ್ತಿಯನ್ನು ನೋಡಿ ಮಲ್ಲಿಕಾ ಥಟ್ಟನೆ ಬೆಚ್ಚಿಬಿದ್ದಳು. ಅವಳಿಗೆ ಅರಿವಿಲ್ಲದೆಯೇ ಅವಳ ಮನಸ್ಸು `ದೀ…ಪ…ಕ್….’ ಎಂದು ಉದ್ಗರಿಸಿತು. ಅವನೂ ಅವಳನ್ನು ನೋಡಿ ಬೆಚ್ಚಿಬಿದ್ದನಲ್ಲದೆ, ಅವನ ಮುಖ ವಿವರ್ಣವಾಯಿತು. ನಿಂತಲ್ಲೇ ಚಡಪಡಿಸತೊಡಗಿದ. ತಕ್ಷಣ ಸಾವರಿಸಿಕೊಂಡ ಮಲ್ಲಿಕಾ, ಅದನ್ನು ಗಮನಿಸಿಯೂ, ಗಮನಿಸದವಳಂತೆ ತಲೆ ಕೊಡವಿಕೊಂಡು ಮಾರ್ಯದೆಯಿಂದ, “ಕುಳಿತುಕೊಳ್ಳಿ….” ಎಂದು ಕುರ್ಚಿಯ ಕಡೆ ಕೈ ತೋರಿಸಿದಳು.
`ಏನು….?” ಎಂಬಂತೆ ಅವರತ್ತ ನೋಡಿದಳು. ದೀಪಕ್ ಮಾತೇ ಬಾರದವನಂತೆ ಬೆದರು ಕಂಗಳಿಂದ ಇವಳನ್ನೇ ನೋಡುತ್ತಾ ಕುಳಿತಿದ್ದ. ಅವನು ನೋಡುವ ಪರಿಯೇ ಮಲ್ಲಿಕಾಳಿಗೆ ಮುಜುಗರ ತರಿಸಿತು.
ಇದಾವುದರೂ ಅರಿವಿಲ್ಲದ ದೀಪಕ್ ನ ಹೆಂಡತಿ, “ನಮಗೊಂದು ದತ್ತು ಮಗು ಬೇಕಾಗಿದೆ. ನಮಗೆ ಎಲ್ಲವನ್ನೂ ಕರುಣಿಸಿದ ಆ ದೇವರು ಮಕ್ಕಳ ಭಾಗ್ಯ ಕರುಣಿಸಲಿಲ್ಲ,” ಎಂದಳು.
ಮಲ್ಲಿಕಾ ಆಶ್ಚರ್ಯದಿಂದ ದೀಪಕ್ ಕಡೆ ನೋಡಿದಳು. ಅವನು ತಲೆ ತಗ್ಗಿಸಿದ. ಅವನ ಹೆಂಡತಿ ಮುಂದುವರಿಸಿದಳು, “ನನಗೆ ಎರಡು ಬಾರಿ ಅಬಾರ್ಷನ್ ಆಯಿತು. ಮೂರನೇ ಬಾರಿಯ ಪ್ರಯತ್ನಕ್ಕೂ ಮುನ್ನವೇ ಇವರು ಅಪಘಾತವೊಂದರಲ್ಲಿ ತಮ್ಮ ಪುರುಷತ್ವವವನ್ನೇ ಶಾಶ್ವತವಾಗಿ ಕಳೆದುಕೊಂಡರು,” ಎಂದು ದತ್ತು ಪಡೆಯುವ ಕಾರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಅಳತೊಡಗಿದಳು.
`ಮಾಡಿದ ಪಾಪ ಕರ್ಮ ಯಾರನ್ನೂ ಬಿಡುವುದಿಲ್ಲ. ನಾನು ಮಾಡಿದ ಪಾಪಕ್ಕೆ ಕಣ್ಮುಂದೆ ಮಗಳಿದ್ದರೂ ಹೇಳಲಾಗದೆ, ಅವಳನ್ನು ಅಪ್ಪಿ ಮುದ್ದಿಸಲಾಗದೆ ಒದ್ದಾಡುತ್ತಿದ್ದೇನೆ. ನನ್ನದೇನು ಇವತ್ತೊ, ನಾಳೆಯೋ…. ಮಗಳು ಬೆಳೆದು ದೊಡ್ಡವಳಾಗಿ ಅವಳಿಗೆ ತಿಳಿವಳಿಕೆ ಬಂದಾಗ ತಿಳಿಸಿ ಹೇಳಬಹುದು. ಆದರೆ ನೀನು ನನಗೆ ಮಾಡಿದ ಮೋಸದಿಂದ ಇಂದು ಮಕ್ಕಳ ಭಾಗ್ಯವಿಲ್ಲದೇ ಒದ್ದಾಡುತ್ತಿರುವೆ. ನಿನ್ನ ಪುರುಷತ್ವದ ಅಹಂಗೆ ಆ ದೇವರು ಸರಿಯಾದ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಅನುಭವಿಸು,’ ಎಂದು ಮನಸ್ಸಿನಲ್ಲೇ ಹೀಗಳೆಯುತ್ತ ಅವನತ್ತ ದುರುಗುಟ್ಟಿ ನೋಡಿದಳು.
ಅವಳ ನೋಟದಲ್ಲಿದ್ದ ತೀಕ್ಷ್ಣತೆ, ತಿರಸ್ಕಾರ, ವ್ಯಂಗ್ಯ ಭಾವವನ್ನು ಎದುರಿಸಲಾರದೆ ದೀಪಕ್ ತಲೆ ತಗ್ಗಿಸಿದ.





