ಊರಿನ ಅತಿ ಸಿರಿವಂತನಾದ ರಘುನಾಥ್ರಾವ್ ಸ್ವಪ್ರತಿಷ್ಠೆಗೆ ಕಟ್ಟುಬಿದ್ದು ಮಗಳು ನಂದಿನಿ ಪ್ರೀತಿಸುತ್ತಿದ್ದ ನಂದೀಶನೊಂದಿಗೆ ಮದುವೆ ಆಗಲು ಬಿಡಲಿಲ್ಲ. ಇವರ ಅಪೇಕ್ಷೆಗೆ ತಕ್ಕಂತೆ ವಿಧಿ ಇಲ್ಲದೆ ಬೇರೊಬ್ಬನನ್ನು ಮದುವೆಯಾದ ನಂದಿನಿ, ಎಂದೂ ಜೀವನದಲ್ಲಿ ನೆಮ್ಮದಿ ಕಾಣದೆ ತೀರಿಕೊಂಡಳು. ಮುಂದೆ ಮೊಮ್ಮಗಳು ನಂದಿತಾ ಇದೇ ತರಹ ಪ್ರೇಮ ಪ್ರಸಂಗಕ್ಕೆ ಸಿಲುಕಿದಾಗ, ತಾತಾ ಮದುವೆಗೆ ಒಪ್ಪಿದರೇ……?

“ರಘುನಾಥ್‌ ರಾವ್‌….. ರಘುನಾಥ್‌ ರಾವ್‌……” ಎಂದು ಯಾರೋ ಕೂಗಿದ ಸದ್ದು ಕೇಳಿ ರಘುನಾಥ್‌ ರಾವ್ ‌ಹಿಂತಿರುಗಿ ನೋಡಿದರು.

ನರ್ಸ್‌ ಅವರ ಬಳಿ ಬಂದು, “ನಿಮ್ಮ ಮಗಳು ನಿಮಗೆ ಈ ಲೆಟರ್‌ ಕೊಟ್ಟಿದ್ದಾರೆ,” ಎಂದಷ್ಟೇ ಹೇಳಿ ಹೊರಟು ಹೋದಳು.

ಕಳೆದ ಇಪ್ಪತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ತಮ್ಮ ಮಗಳು ನಂದಿನಿ ಬದುಕುಳಿಯುವ ಬಗ್ಗೆ ಸಂದೇಹವಿದೆ ಎಂದು ಡಾಕ್ಟರ್‌ ಮೂರು ದಿನಗಳ ಮೊದಲೇ ತಿಳಿಸಿಯಾಗಿತ್ತು. ಆದರೂ ಮನಸಿನ ಮೂಲೆಯಲ್ಲಿ ಎಲ್ಲೋ ಒಂದು ಚಿಕ್ಕ ಭರವಸೆ. ಏಕೆಂದರೆ ಇವತ್ತು ನಂದಿನಿ ಕಣ್ಣು ಬಿಟ್ಟು ಒಮ್ಮೆ ಅವರನ್ನು ನೋಡಿದ್ದಾಳೆ. ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದ ಮಗಳು ಪತ್ರದಲ್ಲಿ ಏನು ಬರೆದಿದ್ದಾಳೆ ಎಂದು ನೋಡುವ ತವಕದಿಂದ ಪತ್ರ ಬಿಡಿಸಿ ಓದಿದರು. ನಡುಗುವ ಕೈಗಳಿಂದ ಬರೆಯುವ ಸಾಹಸ ಮಾಡಿರಬಹುದೆಂದು ಅಸ್ಪಷ್ಟ ಅಕ್ಷರಗಳನ್ನು ನೋಡಿದರೇ ತಿಳಿಯುತ್ತಿತ್ತು, ಆದರೂ ಓದಲು ಪ್ರಯತ್ನಿಸಿದರು.

`ನೆಮ್ಮದಿಯಿಂದ ಸಾಯೋದಕ್ಕಾದರೂ ಬಿಡಿ…..’ ಅವಳು ಬರೆದದ್ದು ಇಷ್ಟೇ. ರಾಯರ ಕಣ್ಣು ಮಂಜಾಯಿತು. ಮಗಳು ಮಲಗಿದ್ದ ಕೋಣೆಯ ಕಡೆ ಅವಸರದಲ್ಲಿ ಹೆಜ್ಜೆ ಹಾಕಿದರು.

ಅಷ್ಟರಲ್ಲಿ “ಡಾಕ್ಟರ್‌…. ಡಾಕ್ಟರ್‌….” ಎಂದು ಬೊಬ್ಬೆ ಹೊಡೆಯುತ್ತಾ ನರ್ಸ್‌ ಅದೇ ಕೋಣೆಯಿಂದ ಹೊರಗೆ ಓಡಿ ಬರುವುದು ಕಂಡಿತು. ಕೆಲವೇ ಕ್ಷಣಗಳಲ್ಲಿ ಡಾಕ್ಟರ್‌ ಬಂದು ನಂದಿನಿಯನ್ನು ಪರೀಕ್ಷಿಸಲು ಕೋಣೆಯೊಳಗೆ ಹೋದರು. ರಾಯರು ಅವರ ಹಿಂದೆಯೇ ಹೋದರು.

ನಂದಿನಿಯನ್ನು ಪರೀಕ್ಷಿಸಿದ ಡಾಕ್ಟರ್‌, “ಶೀ ಈಸ್‌ ನೋ ಮೋರ್‌……” ಎಂದು ಡಾಕ್ಟರ್‌ ಅಂದಾಗ ರಘುನಾಥ್‌ ರಾಯರು, “ನಂದಿನಿ….!” ಎಂದು ಜೋರಾಗಿ ಕಿರುಚಿದರು.

“ಏನಾಯ್ತು ಯಜಮಾನ್ರೆ…..?” ಎಂದು ಸೋಮಯ್ಯ ಕೇಳಿದ.

ಮಂಚದಿಂದ ದಢಕ್ಕನೆ ಎದ್ದು ಕುಳಿತ ರಾಯರಿಗೆ ಸೋಮಯ್ಯ ಒಂದು ಗ್ಲಾಸ್‌ ನೀರು ಕೊಟ್ಟು, “ಏನಾಯ್ತು ಯಜಮಾನ್ರೆ…..? ಪುನಃ ಅದೇ ಆಸ್ಪತ್ರೆಯ ಕನಸು ಕಂಡಿರಾ…..? ಸ್ವಲ್ಪ ನೀರು ಕುಡಿಯಿರಿ,” ಎಂದ.

ನೀರು ಕುಡಿದು ಸಾವರಿಸಿಕೊಂಡ ರಾಯರು ಹಾಸಿಗೆಯಿಂದ ಎದ್ದು ಈಸಿ ಚೇರ್‌ ಮೇಲೆ ಕುಳಿತು ಹಾಗೆಯೇ ಕಣ್ಮುಚ್ಚಿಕೊಂಡರು.  ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದಿದ್ದ ಕೆಲವು ಘಟನೆಗಳು ಆಗಾಗ್ಗೆ ಕನಸಿನಲ್ಲಿ ಬಂದು ಅವರ ನಿದ್ದೆ, ನೆಮ್ಮದಿ ಮತ್ತು ಆರೋಗ್ಯವನ್ನು ಹದಗೆಡಿಸಿದ್ದವು.

ರಘುನಾಥ ರಾಯರು ಮಲ್ಲಿಗೆ ಹಿತ್ಲು ಎಂಬ ಊರಿನ ಹೆಸರಾಂತ ಶ್ರೀಮಂತ ವ್ಯಕ್ತಿ. ಆ ಊರಿನ ಯಜಮಾನ ಎಂದೇ ಹೇಳಬಹುದು. ಏಕೆಂದರೆ ಅವರು ಬಹುದೊಡ್ಡ ಆಸ್ತಿ ಮತ್ತು ಅಂತಸ್ತನ್ನು ಹೊಂದಿದ್ದವರು ಮಾತ್ರವಲ್ಲ, ಊರಿನ ಎಲ್ಲಾ ವ್ಯಾಜ್ಯಗಳನ್ನು ಬಗೆಹರಿಸುತ್ತಾ ಇದ್ದುದೂ ಅವರೇ. ನ್ಯಾಯ ತೀರ್ಮಾನ ಮಾಡಿ ಅವರು ನೀಡಿದ ತೀರ್ಪು ಅಂತಿಮ. ಅದನ್ನು ಯಾರೂ ವಿರೋಧಿಸುತ್ತಿರಲಿಲ್ಲ.

ಅವರದ್ದು ಅವಿಭಕ್ತ ಕುಟುಂಬ. ಅಣ್ಣ ತಮ್ಮಂದಿರು, ಅವರ ಹೆಂಡತಿಯರು ಮತ್ತು ಮಕ್ಕಳು ಎಲ್ಲರೂ ಒಟ್ಟಿಗೆ ಒಂದೇ ಸೂರಿನಡಿ ಇರುತ್ತಿದ್ದುದು. ಆ ಮನೆ ಮಲ್ಲಿಗೆ ಅರಮನೆ ಎಂದೇ ಹೆಸರುವಾಸಿಯಾಗಿತ್ತು.

ರಘುನಾಥ ರಾಯರಿಗೆ ಇಬ್ಬರು ಗಂಡುಮಕ್ಕಳು. ಎಲ್ಲೆಡೆ ಹರಕೆ ಹೊತ್ತ ಮೇಲೆ ಹುಟ್ಟಿದ ಹೆಣ್ಣು ಮಗುವೇ ನಂದಿನಿ. ಗಂಡು ಮಕ್ಕಳಿಬ್ಬರಿಗೂ ಮದುವೆಯಾಗಿತ್ತು. ನಂದಿನಿ ಅಪ್ರತಿಮ ಸುಂದರಿ ಅಲ್ಲದಿದ್ದರೂ ಅವಳ ಸುಂದರ ಮೈಮಾಟಕ್ಕೆ ಹುಡುಗರು ಮಾರು ಹೋಗುತ್ತಿದ್ದರು.

ಪಕ್ಕದ ಊರಿನ ಗುಲಾಬಿ ಹಿತ್ಲಿನ ಯುವಕ ನಂದೀಶ, ನಂದಿನಿಯ ಚಿಕ್ಕಪ್ಪನ ಮಗ ಚಂದ್ರಕಾಂತನ ಆತ್ಮೀಯ ಗೆಳೆಯ. ಅವರಿಬ್ಬರೂ ಬಾಲ್ಯ ಸ್ನೇಹಿತರು. ಒಂದು ದಿನ ಒಬ್ಬರನ್ನೊಬ್ಬರು ಭೇಟಿಯಾಗದೆ ಇರುತ್ತಿರಲಿಲ್ಲ.

ನಂದೀಶನ ಮನೆಯವರು ಸಿರಿವಂತರಲ್ಲ. ನಂದೀಶನ ತಂದೆ ಮಲ್ಲಿಗೆ ಹಿತ್ಲಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಆ ದೇವಸ್ಥಾನದ ಮೊಕ್ತೇಸರರು ಬೇರೆ ಯಾರೂ ಅಲ್ಲ, ರಘುನಾಥ ರಾಯರೇ! ನಂದೀಶ ಪಿ.ಯು.ಸಿ ಕಲಿತು ಮುಂದಕ್ಕೆ ವಿದ್ಯಾಭ್ಯಾಸ ಮಾಡಲಿಲ್ಲ. ಕಾರಣ ಮನೆಯಲ್ಲಿ ಬಡತನ, ತಂಗಿಯರಿಬ್ಬರನ್ನು ಓದಿಸಬೇಕಿತ್ತು. ನಂದೀಶ್‌ ಆಟೋರಿಕ್ಷಾ ಓಡಿಸಿ ಹಣ ಸಂಪಾದನೆ ಮಾಡತೊಡಗಿದ.

ಆ ಕಾಲದಲ್ಲಿ ಆ ಊರಿನಲ್ಲಿ ನಂದೀಶನೊಬ್ಬನದೇ ಆಟೋ ಇದ್ದುದು. ಆದ್ದರಿಂದ ಅವನಿಗೆ ಒಳ್ಳೆಯ ಲಾಭವಿತ್ತು. ಮಲ್ಲಿಗೆ ಮನೆಯವರಿಗೆ ಎಲ್ಲಿಗೆ ಹೋಗಬೇಕೆಂದಿದ್ದರೂ ನಂದೀಶ ತನ್ನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ.

ನಂದೀಶ ಸ್ಛುರದ್ರೂಪಿ. ಬೆಳ್ಳಗಿನ ಮುಖ, ಚಿಗುರು ಮೀಸೆ, ಗಟ್ಟಿಮುಟ್ಟಾದ ದೇಹ. ಆಗಷ್ಟೇ ಹದಿನೆಂಟಕ್ಕೆ ಪಾದಾರ್ಪಣೆ ಮಾಡಿದ್ದ ನಂದಿನಿ ಪ್ರತಿದಿನ ಮನೆಗೆ ಬರುತ್ತಿದ್ದ ನಂದೀಶನಿಗೆ ಮನಸೋತಳು.

ಚಂದ್ರಕಾಂತನೊಂದಿಗೆ ಊಟ, ತಿಂಡಿ ಎಂದು ಬಹಳ ಹೊತ್ತು ನಂದೀಶ ಮಲ್ಲಿಗೆ ಅರಮನೆಯಲ್ಲಿಯೇ ಇರುತ್ತಿದ್ದ. ನಂದಿನಿ ಮತ್ತು ನಂದೀಶರಿಬ್ಬರ ಮಧ್ಯೆ ಸ್ನೇಹಾಂಕುರಗೊಂಡು ಅದು ಬರೇ ಸ್ನೇಹವಲ್ಲ ಪ್ರೀತಿ ಎಂಬುದಾಗಿ ಅವರು ಅರಿತುಕೊಳ್ಳಲು ತುಂಬಾ ಸಮಯ ಬೇಕಾಗಲಿಲ್ಲ.

ದಿನೇ ದಿನೇ ಅವರಿಬ್ಬರ ಮಧ್ಯೆ ಆತ್ಮೀಯತೆ, ಸಲಿಗೆ ಹೆಚ್ಚಿತು. ಮನೆಯವರಿಗೆ ತಿಳಿಯದಂತೆ ನಂದಿನಿ ಕದ್ದುಮುಚ್ಚಿ ನಂದೀಶನ ಆಟೋದಲ್ಲಿ ಅವನೊಂದಿಗೆ ಸುತ್ತಾಡಿಕೊಂಡು ಆಪ್ತ ಸಮಯ ಕಳೆಯುತ್ತಿದ್ದಳು.

ಹದಿನೆಂಟು ತುಂಬಿದ ಮಗಳಿಗೆ ರಾಯರು ವರಾನ್ವೇಷಣೆ ಶುರು ಮಾಡಿದರು. ಇದರಿಂದ ಹೆದರಿದ ನಂದಿನಿ, ನಂದೀಶನಲ್ಲಿ ತನ್ನ ಮನೆಗೆ ಬಂದು ತಂದೆಯಲ್ಲಿ ಬಳಿ ತಮ್ಮ ಮದುವೆಯ ವಿಚಾರ ಮಾತನಾಡಬೇಕೆಂದು ಕೇಳಿದಳು.

ನಂದೀಶ ಹೆದರಿಕೊಂಡೇ ತನ್ನ ತಂದೆಯ ಬಳಿ ವಿಷಯ ಪ್ರಸ್ತಾಪಿಸಿದ. ಊರಿನ ಯಜಮಾನ ತನ್ನ ಮಗಳನ್ನು ಕೇವಲ ಒಬ್ಬ ಅರ್ಚಕನ ಮಗನಿಗೆ ಮದುವೆ ಮಾಡಿ ಕೊಡಲಾರ ಎಂಬ ಕಟುಸತ್ಯದ ಅರಿವಿದ್ದರೂ ಒಬ್ಬನೇ ಮಗನ ಸಂತೋಷಕ್ಕಾಗಿ ಮಲ್ಲಿಗೆ ಅರಮನೆಗೆ ಬಂದು, ರಘುನಾಥ ರಾಯರಲ್ಲಿ ತಮ್ಮ ಮಗಳು ನಂದಿನಿಯನ್ನು ನಂದೀಶನಿಗೆ ಮದುವೆ ಮಾಡಿಕೊಂಡುವಂತೆ ನಂದೀಶನ ತಂದೆ ಕೇಳಿಕೊಂಡರು.

ರಘುನಾಥ ರಾಯರಿಗೆ ಕೋಪದಲ್ಲಿ ಪಿತ್ತ ನೆತ್ತಿಗೇರಿತು. ಯಾವ ರೀತಿಯಲ್ಲೂ ತಮಗೆ ಸರಿಹೋಗದ ಒಂದು ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿ ಕೊಡುವುದು ತಮ್ಮ ಘನತೆ, ಗೌರವಕ್ಕೆ ಕಡಿಮೆ ಎಂದುಕೊಂಡ ರಾಯರು ನಂದೀಶನ ತಂದೆಗೆ ಬಾಯಿಗೆ ಬಂದಂತೆ ಬೈದು, ಅವಮಾನಗೊಳಿಸಿ ಮನೆಯಿಂದ ಹೊರಗಟ್ಟಿದರು.

ಆದಷ್ಟು ಬೇಗ ಮಗಳನ್ನು ಮದುವೆ ಮಾಡಿ ಕೊಡಬೇಕೆಂದುಕೊಂಡು ರಾಯರು ಅವಿರತ ಪ್ರಯತ್ನಪಟ್ಟರೂ, ನಂದಿನಿಯ ಜಾತಕಕ್ಕೆ ಕೂಡಿ ಬರುವ ಸಂಬಂಧ ಸಿಗಲೇ ಇಲ್ಲ. ನಂದಿನಿಯನ್ನು ಹೊರಗಡೆ ಹೋಗದಂತೆ ಮನೆಯಲ್ಲೇ ಕೂಡಿಟ್ಟರು.

ನಂದೀಶ್‌ ಈಗ ಮಲ್ಲಿಗೆ ಅರಮನೆಗೆ ಬರುವಂತೆಯೂ ಇರಲಿಲ್ಲ. ನಂದಿನಿಯ ಪ್ರೀತಿ, ಅವಳ ನೆನಪು, ಅಗಲಿಕೆ ಅವನ ನೆಮ್ಮದಿ ಕೆಡಿಸಿ ಅವನು ಮಾನಸಿಕವಾಗಿ ಕುಂದಿಹೋದ. ಅವನ ಆರೋಗ್ಯದಲ್ಲಿ ವಿಪರೀತ ಎಡವಟ್ಟು ಕಂಡ ಅವನ ಹೆತ್ತವರು ಅವನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಅವನ ದೇಹ ಯಾವುದೇ ಔಷಧಿಗೂ ಸ್ಪಂದಿಸಲಿಲ್ಲ. ಮರಣ ಶಯ್ಯೆಯಲ್ಲಿದ್ದ ಮಗ ತಾನು ಸಾಯುವ ಮುನ್ನ ಒಂದೇ ಒಂದು ಸಲ ನಂದಿನಿಯ ಮುಖವನ್ನು ಕಣ್ತುಂಬಾ ನೋಡಿ ಸಾಯಬೇಕು ಎಂಬ ಅಂತಿಮ ಕೋರಿಕೆಯನ್ನು ತನ್ನ ಅಮ್ಮನ ಮುಂದಿಟ್ಟ. ಅವನ ತಾಯಿ ಮಲ್ಲಿಗೆ ಮನೆಯ ಅಂಗಳಕ್ಕೆ ಬಂದು ಮಗನ ಅಂತಿಮ ಕೋರಿಕೆಯನ್ನು ನೇರವೇರಿಸಲು ಒಂದೇ ಒಂದು ಸಲ ನಂದಿನಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಬೇಕಾಗಿ ಬಿಕ್ಕಿ ಬಿಕ್ಕಿ ಅತ್ತು ಅಂಗಲಾಚಿ ಬೇಡಿದರೂ ರಘುನಾಥ ರಾಯರ ಮನಸ್ಸು ಕರಗಲಿಲ್ಲ. ಇದೆಲ್ಲವನ್ನೂ ಮೇಲಿನ ಮಹಡಿಯ ಕೋಣೆಯ ಕಿಟಕಿಯಿಂದ ಗಮನಿಸುತ್ತಿದ್ದ ನಂದಿನಿ ವಿಲವಿಲ ಒದ್ದಾಡಿದಳು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ನಂದೀಶ್‌ ಸಾಯುತ್ತಿದ್ದಾನೆ ಎಂದು ಗೊತ್ತಾದಾಗ ಅವಳಿಗೆ ತಾನು ನಿಂತ ನೆಲ ಒಮ್ಮೆ ಬಾಯಿ ಬಿಡಬಾರದೇ? ಎಂದು ಅನಿಸಿತು. ನಂದೀಶನ ತಾಯಿ ಅಸಹಾಯಕರಾಗಿ ಅಳುತ್ತಲೇ ಹಿಂದಿರುಗಿ ಹೋದರು. ಮರುದಿನವೇ ನಂದೀಶನ ಸಾವಿನ ಸುದ್ದಿ ಮಲ್ಲಿಗೆ ಅರಮನೆಗೂ ತಲುಪಿತ್ತು.

ನಂದೀಶನ ಸಾವು ನಂದಿನಿಯ ಬದುಕುವ ಉತ್ಸಾಹವನ್ನೇ ಸಾಯಿಸಿತ್ತು. ಅವಳು ಜೀವಂತ ಗೊಂಬೆಯಂತೆ ಯಾರಲ್ಲಿಯೂ ಮಾತನಾಡದೆ ತನ್ನ ಸಂಕಟ ಹೇಳಿಕೊಳ್ಳಲಾಗದೆ ಮಮ್ಮಲ ಮರುಗಿದಳು.

ಕೆಲವೇ ತಿಂಗಳುಗಳಲ್ಲಿ ರಾಯಚೂರಿನ ಹೆಸರಾಂತ ಶ್ರೀಮಂತ ಮನೆತನದ ಹುಡುಗನ ಜೊತೆ ನಂದಿನಿಯ ಮದುವೆ ನಡೆಯಿತು. ತನ್ನ ಗಂಡ ದುಶ್ಚಟಗಳ ದಾಸ ಎಂದು ತಿಳಿಯಲು ನಂದಿನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಹೃದಯ ತುಂಬಾ ನಂದೀಶನನ್ನೇ ತುಂಬಿಕೊಂಡಿದ್ದ ನಂದಿನಿಗೆ ತನ್ನ ಗಂಡನೊಂದಿಗೆ ಸಂಸಾರ ನಡೆಸುವುದು ಕಷ್ಟಸಾಧ್ಯವಾಗಿತ್ತು. ಅವನು ಹತ್ತಿರ ಬಂದು ಮೈ ಮುಟ್ಟಿದರೆ ಚೇಳುಗಳು ಮೈ ಮೇಲೆ ಹರಿದ ಅನುಭವ, ಆರೋಗ್ಯ ಸರಿ ಇಲ್ಲ ಎಂದು ಸುಳ್ಳ ನೆಪ ಹೇಳಿ ಗಂಡನಿಂದ ದೂರವಿರಲು ಪ್ರಯತ್ನಿಸಿದಳು.

ಅವಳ ಪ್ರೀತಿಯ ರಹಸ್ಯ ರಹಸ್ಯವಾಗಿ ಉಳಿಯಲಿಲ್ಲ. ನಂದೀಶನೊಂದಿಗಿನ ತನ್ನ ಹೆಂಡತಿಯ ಪ್ರೀತಿಯ ವಿಚಾರ ತಿಳಿದು ಅವಳ ಗಂಡ ಬಹಳ ಕುಪಿತನಾದ. ತನ್ನ ಕ್ರೋಧ ಮತ್ತು ಆಕ್ರೋಶದಿಂದ ಆ ದಿನ ನಂದಿನಿ ಎಷ್ಟೇ ವಿರೋಧಿಸಿದರೂ ಅವಳ ಮೇಲೆ ಅಮಾನುಷವಾಗಿ ಬಲಾತ್ಕಾರವೆಸಗಿದ. ಅವಳನ್ನು ಬಂಧಿಸಿ ಕೋಣೆಯಲ್ಲಿಟ್ಟ. ಇದಕ್ಕೆ ಅತ್ತೆ ಅನ್ನಿಸಿಕೊಂಡವಳ ಸಹಕಾರ ಕೂಡ ಸಾಕಷ್ಟಿತ್ತು. ಊಟ, ತಿಂಡಿ ಕೊಡಲು ಮಾತ್ರ ಕೋಣೆಯ ಬಾಗಿಲು ತೆರೆಯಲಾಗುತ್ತಿತ್ತು. ನಂದಿನಿಯ ಗಂಡ ವಿಚಿತ್ರ ಹಿಂಸೆ ಕೊಟ್ಟು ಅವಳ ಮೇಲೆ ಅತ್ಯಾಚಾರವೆಸಗುತ್ತಿದ್ದ. ಅವಳ ನರಳಾಟ ಚೀರಾಟ ಯಾರಿಗೂ ಕೇಳಿಸಲೇ ಇಲ್ಲ. ನಂದಿನಿ ಗರ್ಭಿಣಿಯಾದಳು.

ಮಗಳನ್ನು ಮದುವೆ ಮಾಡಿಕೊಟ್ಟ ಮೇಲೆ ಅವಳನ್ನು ನೋಡಲೇ ಇಲ್ಲ. ತುಂಬಾ ಸಮಯವಾಯಿತು ಎಂದುಕೊಂಡು ನಂದಿನಿಯ ತಾಯಿ, ಅವಳ ಅಣ್ಣ ಚಂದ್ರಕಾಂತ ಮತ್ತು ಅತ್ತಿಗೆ ಸುಧಾ ನಂದಿನಿಯ ಮನೆಗೆ ಹೋದರು. ಅವಳ ಅಸ್ಥೆಯನ್ನು ನೋಡಿ ಗಾಬರಿಗೊಂಡರು. ನಂದಿನಿ ಮಾತೇ ಮರೆತಂತಿದ್ದಳು. ಗರ್ಭಿಣಿಯಾಗಿ ಬಹುಶಃ ಬಯಕೆ ಸಂಕಟದಿಂದ ಮಗಳು ಸುಸ್ತಾಗಿ ಹೋಗಿರಬಹುದೆಂದು ಕಲ್ಪಿಸಿಕೊಂಡು ನಂದಿನಿಯನ್ನು ಸ್ವಲ್ಪ ಸಮಯ ತಾವು ನೋಡಿಕೊಳ್ಳುವುದಾಗಿ ಹೇಳಿ ಮಲ್ಲಿಗೆ ಅರಮನೆಗೆ ಕರೆದುಕೊಂಡು ಬಂದರು.

ಮಲ್ಲಿಗೆ ಅರಮನೆಗೆ ಬಂದ ನಂದಿನಿ ಮೌನ ಗೌರಿಯಾಗಿಬಿಟ್ಟಿದ್ದಳು. ಅವಳ ಅತ್ತಿಗೆ ಸುಧಾ ಅದೇ ಊರಿನ ಹುಡುಗಿ. ನಂದಿನಿಯ ಆಪ್ತ ಗೆಳತಿ ಕೂಡ. ಸುಧಾ ನಂದಿನಿಯನ್ನು ಒತ್ತಾಯ ಮಾಡಿ ಮಾತನಾಡಿಸಿದಾಗ, ನಂದಿನಿ ಅತ್ತಿಗೆಯ ಬಳಿ ಎಲ್ಲಾ ವಿಷಯ ಹೇಳಿಕೊಂಡು ಅತ್ತಳು.

ಕೆಲವೇ ದಿನಗಳಲ್ಲಿ ನಂದಿನಿಯ ಆರೋಗ್ಯ ಬಹಳವಾಗಿ ಕೆಟ್ಟಿತು. ಶಕ್ತಿಹೀನಳಾಗಿ ಬಳಲಿದ್ದ ಮಗಳನ್ನು ರಾಯರು ಆಸ್ಪತ್ರೆಗೆ ಸೇರಿಸಿದರು. ಅವಳ ಸ್ಥಿತಿ ಸುಧಾರಿಸಿಕೊಳ್ಳಲಿಲ್ಲ. ಬದುಕಿ ಉಳಿಯುವ ಆಸಕ್ತಿಯನ್ನೇ ಕಳೆದುಕೊಂಡಿದ್ದ ನಂದಿನಿ, ವೈದ್ಯರ ಚಿಕಿತ್ಸೆಗೆ ಎಳ್ಳಷ್ಟೂ ಸ್ಪಂದಿಸಲಿಲ್ಲ. ಗಂಡನ ಮನೆಯವರಿಗೆ ವಿಷಯ ತಿಳಿಸಿದರೂ ಅವರು ಯಾರೂ ಬರಲಿಲ್ಲ. ಕೊನೆಗೆ ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡ ನಂದಿನಿ, ಕೊನೆಯುಸಿರೆಳೆದಳು.

ಕಾಕತಾಳೀಯವೇನೋ ಎಂಬಂತೆ ನಂದೀಶ ತೀರಿಕೊಂಡ ಏಪ್ರಿಲ್ ಇಪ್ಪತ್ತೆಂಟನೇ ದಿನದಂದೇ ಮರು ವರ್ಷ ನಂದಿನಿ ಕೂಡ ತೀರಿಕೊಂಡಳು. ಬಹುಶಃ ಅಷ್ಟು ದಿನ ಅವಳು ಉಸಿರು ನಿಲ್ಲದಂತೆ ಬಿಗಿಹಿಡಿದು ಕುಳಿತಿದ್ದಳೇನೋ? ಅವಳ ಉತ್ತರಕ್ರಿಯೆ ಮುಗಿಯಿತು.

ಒಂದು ದಿನ ಸುಧಾ ರಘುನಾಥ ರಾಯರ ಬಳಿ ಬಂದು, “ಮಾವು ಇದು ನಿಮಗಾಗಿ ನಂದಿನಿ ಬರೆದ ಪತ್ರ. ಅವಳಿಲ್ಲದಾಗ ಈ ಪತ್ರವನ್ನು ನಾನು ನಿಮಗೆ ಕೊಡಬೇಕು ಎಂದು ಹೇಳಿದ್ದಳು,” ಎಂದು ಹೇಳಿ ಪತ್ರವನ್ನು ಕೊಟ್ಟು ತನ್ನ ಕಣ್ಣೊರೆಸಿಕೊಂಡು ಹೊರ ನಡೆದಳು.

lal-joda-story1

`ತೀರ್ಥರೂಪರಲ್ಲಿ ನಿಮ್ಮ ಮಗಳು ನಂದಿನಿ ಬೇಡುವ ಆಶೀರ್ವಾದಗಳು. ನೀವು ಈ ಪತ್ರ ಓದುವಾಗ ನಾನು ಬದುಕಿರುವುದಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ನಾನು ನಿಮಗೆ ಹೇಳಬೇಕು ಅದಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ.`ನನಗೆ ಯಾವುದೇ ಕೊರತೆ ಬಾರದಂತೆ ನನ್ನ ಬೆಳೆಸಿದ್ದೀರಿ. ಬೇಕೆಂದದ್ದೆಲ್ಲ ಕೇಳುವ ಮೊದಲೇ ಕೊಡುತ್ತಿದ್ದಿರಿ. ಆದರೆ ಜೀವನದ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಕೊಡಲೇ ಇಲ್ಲ. ಮುಂದಕ್ಕೆ ಓದುವ ಆಸೆ ಇದ್ದರೂ ಹೈಸ್ಕೂಲ್ ‌ಓದು ಮುಗಿಸಿದ ಮೇಲೆ ನನ್ನನ್ನು ಕಾಲೇಜಿಗೆ ಸೇರಿಸಲಿಲ್ಲ. ನನ್ನ ಓದನ್ನು ಅಲ್ಲಿಗೇ ಕೊನೆಗೊಳಿಸಿದಿರಿ. ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ಹುಡುಗ ನಿಮ್ಮ ಅಂತಸ್ತಿಗೆ ಸರಿ ಹೊಂದುವುದಿಲ್ಲ ಎಂದು ಬೇಡ ಎಂದಿರಿ. ಶ್ರೀಮಂತ ಹುಡುಗನಿಗೆ ಕೊಟ್ಟು ನನ್ನ ಮದುವೆಯೂ ಮಾಡಿದಿರಿ. ನನ್ನ ಗಂಡ ಅನಿಸಿಕೊಂಡವನಿಗೆ ತನ್ನ ಹೆಂಡತಿಗೆ ಹೊಸ ಮನೆ, ಹೊಸ ಸಂಬಂಧಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದೆಂದು ಸಾಮಾನ್ಯ ಜ್ಞಾನವೂ ಇರಲಿಲ್ಲ. ನನ್ನ ದುರಾದೃಷ್ಟಕ್ಕೆ ನಂದೀಶನೊಂದಿಗಿದ್ದ ನನ್ನ ಪ್ರೀತಿಯ ವಿಷಯ ತಿಳಿದ ಅವನು ಸಿಟ್ಟು ಮತ್ತು ಆಕ್ರೋಶದಿಂದ ಕೋಣೆಯಲ್ಲಿ ನನ್ನನ್ನು ಪ್ರಾಣಿಯಂತೆ ಕೂಡಿಟ್ಟು ಪ್ರತಿದಿನ ರಾಕ್ಷಸನಂತೆ ನುಗ್ಗಿ ನನ್ನ ಮೇಲೆ ಬಲಾತ್ಕಾರವೆಸಗುತ್ತಿದ್ದ.

`ಇವೆಲ್ಲದರಿಂದ ನೊಂದು ಸೋತು ಹೈರಾಣಾದ ನಾನು ಬದುಕುವ ಆಸೆ ಇಲ್ಲದೆ ಪ್ರತಿಕ್ಷಣ ಸಾಯುತ್ತಿದ್ದೆ. ಅಂದು ನಂದೀಶನ ತಾಯಿ ಬಂದು ಸಾಯುತ್ತಿರುವ ತನ್ನ ಮಗನಿಗೆ ಒಮ್ಮೆ ನಿಮ್ಮ ಮಗಳ ಮುಖ ತೋರಿಸಬೇಕೆಂದು ಗೋಗರೆದಾಗ ಎಷ್ಟು ನಿರ್ದಾಕ್ಷಿಣ್ಯವಾಗಿ `ಇಲ್ಲ’ ಎಂದು ಹೇಳಿ ಕಳುಹಿಸಿದಿರಿ. ಅಪ್ಪಾ…. ಹೇಗೂ ಅವನು ಸಾಯುವವನು, ಅವನಿಂದ ನನಗೂ ನಿಮಗೂ  ಯಾವ ತೊಂದರೆಯೂ ಇಲ್ಲ ಎಂದು ಗೊತ್ತಿದ್ದರೂ ನೀವು ಅಮಾನವೀಯತೆಯನ್ನು ಮೆರೆದಿರಿ.

`ಊರಿನಲ್ಲಿ ಏನೇ ಜಗಳ, ಕಲಹಗಳಾದರೂ ಒಬ್ಬ ಯಜಮಾನನಾಗಿ ನ್ಯಾಯ ತೀರ್ಮಾನ ಮಾಡಿ ಸರಿಯಾದ ತೀರ್ಪು ನೀಡಲು ಬದ್ಧರಾಗಿರುವ ನೀವು, ನಿಮ್ಮ ಮಗಳ ಜೀವನದಲ್ಲಿ ನಡೆದ ಅನ್ಯಾಯಕ್ಕೆ ಏನು ಹೇಳುವಿರಿ? ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಎಲ್ಲರಿಗೂ ಆದರ್ಶಪ್ರಾಯವಾಗಿ ಇರಬೇಕಿದ್ದ ನೀವು ಅಂದು ನಂದೀಶನ ತಾಯಿಯ ಜೊತೆ ಎಷ್ಟು ಕೀಳಾಗಿ ನಡೆದುಕೊಂಡಿರಿ?

`ಪ್ರತಿ ಕ್ಷಣ ನರಕಯಾತನೆ ಅನುಭವಿಸುತ್ತಿರುವ ನನ್ನಲ್ಲಿ ಅದೆಷ್ಟೋ ಪ್ರಶ್ನೆಗಳಿವೆ. ಒಂದಕ್ಕೂ ಉತ್ತರವಿಲ್ಲ. ಒಂದು ಹೆಣ್ಣಾಗಿ ಹುಟ್ಟಿದ್ದೇ ನನ್ನ ತಪ್ಪೇ…..? ಸಾಯದೆ ತನ್ನ ಜೊತೆಗಿದ್ದು ಬದುಕಬೇಕಾಗಿದ್ದ ಹುಡುಗನನ್ನು, ಜೀವನ ಸಂಗಾತಿಯಾಗಿ ಆರಿಸಿಕೊಳ್ಳುವ ಹಕ್ಕು ನನಗಿಲ್ಲವೇ? ಏಕೆ ಇಲ್ಲ…..? ಅಂದು ಸಾಯುತ್ತಿದ್ದ ನಂದೀಶನಿಗೆ ನನ್ನ ಮುಖವನ್ನು ತೋರಿಸುತ್ತಿದ್ದಲ್ಲಿ ಅವನು ನೆಮ್ಮದಿಯಾಗಿ ಪ್ರಾಣ ಬಿಡುತ್ತಿದ್ದನೇನೋ….? ಆದರೆ ನೀವು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಯಾಕೆ? ಅದರಿಂದ ನೀವು ಸಾಧಿಸಿದ್ದಾದರೂ ಏನು? ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಲು ಬಯಸಿದರೂ ನೀವು ಈ ಪತ್ರ ಓದುವಾಗ ನಾನು ಬದುಕಿರುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು.

`ಆದರೆ ಮಲ್ಲಿಗೆ ಅರಮನೆಯ ಮಗಳ ಜೊತೆ ನಡೆದ ಈ ತಪ್ಪು, ಅನ್ಯಾಯ ಮಲ್ಲಿಗೆ ಹಿತ್ಲಿನ ಯಾವುದೇ ಹೆಣ್ಣು ಮಗಳ ಜೊತೆ ನಡೆಯಬಾರದು ಅನ್ನುವುದೇ ನನ್ನ ಆಸೆ. ಮುಂದಿನ ಜನ್ಮ ಅಂತ ಒಂದಿದ್ದರೆ ಹೆಣ್ಣು ಜನ್ಮ ಬೇಡ. ಒಂದು ವೇಳೆ ಹೆಣ್ಣಾಗಿ ಹುಟ್ಟಿದರೆ ನಂದೀಶನೇ ನನ್ನ ಗಂಡನಾಗಿ ಸಿಗಲಿ ಎನ್ನುವುದೇ ನನ್ನ ಕನಸು, ಆಸೆ. ನಿಮಗೆ ನನ್ನ ಕೊನೆಯ ನಮಸ್ಕಾರ.`ಇಂತೀ ನಿಮ್ಮ ಪ್ರೀತಿಯ ನಂದಿನಿ.’

ಇದು ಸುಮಾರು ಮೂವತ್ತು ವರ್ಷಗಳ ಹಿಂದೆ ಮಲ್ಲಿಗೆ ಅರಮನೆಯಲ್ಲಿ ನಡೆದ ದುರಂತ. ಆ ಘಟನೆಯ ನಂತರ ರಘುರಾಮ ರಾಯರು ಯಾವುದೇ ಶುಭ ಸಮಾರಂಭಗಳಿಗೆ ಹೋಗಲಿಲ್ಲ. ಯಾವುದೇ ನ್ಯಾಯ ತೀರ್ಮಾನ ಮಾಡಲಿಲ್ಲ. ಮಗಳ ಸಾವು ತಮ್ಮಿಂದಲೇ ಆಗಿದೆ ಎಂಬ ಅಪರಾಧಿ ಪ್ರಜ್ಞೆಯಿಂದ ಕುಗ್ಗಿ ಹೋಗಿದ್ದರು.

ನಂದಿನಿಯ ಸಾವಿನ ನಂತರ ಆ ಮನೆಯಲ್ಲಿ ಚಂದ್ರಕಾಂತ ಮತ್ತು ಸುಧಾರಿಗೆ ಹುಟ್ಟಿಗ ಮಗುವೇ ನಂದಿತಾ. ನಂದಿತಾ ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಳು. ತನ್ನ ಸಹೋದ್ಯೋಗಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ಹುಡುಗ ಒಳ್ಳೆಯ ಮನೆತನದವನೇ ಆದರೂ ಮಲ್ಲಿಗೆ ಅರಮನೆಯವರಷ್ಟು ಸ್ಥಿತಿವಂತನಲ್ಲ. ಮೇಲಾಗಿ ಹುಡುಗನ ಕಡೆಯವರು ಬ್ರಾಹ್ಮಣರಾದರೂ ಪಂಗಡ ಬೇರೆ. ಚಂದ್ರಕಾಂತ ಮತ್ತು ಸುಧಾರಿಗೆ ಹುಡುಗ ಇಷ್ಟವಾಗಿದ್ದ. ಆದರೆ ರಘುನಾಥ ರಾಯರು ಒಪ್ಪುವರೇ….? ಅಷ್ಟಲ್ಲದೆ ಮಗಳಿಂದಲೇ ಅಂತಹ ನೋವನ್ನು ಅನುಭವಿಸಿದ ಮೇಲೆ ಪುನಃ ಮೊಮ್ಮಗಳು ಕೂಡ ಹಾಗೆಯೇ ಮಾಡಿದರೆ ಆ ನೋವನ್ನು ತಡೆದುಕೊಳ್ಳುವರೆ…..? ಎಂಬ ಭಯ.

ನಂದಿನಿ ತೀರಿಕೊಂಡ ಮೇಲೆ ಚಂದ್ರಕಾಂತ್‌ ಮತ್ತು ಸುಧಾ ಅವಳ ನೆನಪಿಗಾಗಿಯೇ ತಮಗೆ ಹುಟ್ಟಿದ ಮಗುವಿಗೆ ನಂದಿತಾ ಎಂದೇ ಹೆಸರಿಟ್ಟಿದ್ದರು. ಅವಳು ಬೆಳೆದು ದೊಡ್ಡವಳಾದ ಮೇಲೆ ಮನೆಯಲ್ಲಿ ನಡೆದಿದ್ದ ಎಲ್ಲಾ ಸಂಗತಿಗಳನ್ನೂ ಕೂಡ ಅವಳಿಗೆ ತಿಳಿಸಿದ್ದರು.

“ನೋಡು ನಂದಿತಾ…. ನಿನ್ನ ತಾತ ಇವತ್ತು ಯಾರ ಜೊತೆಯೂ ಮಾತಾಡುವುದಿಲ್ಲ. ಇವತ್ತು ನಂದಿನಿ ಅತ್ತೆ ತೀರಿಕೊಂಡ ದಿನ. ತಾತ ಇವತ್ತು ಅವರ ಕೋಣೆಯಿಂದ ಹೊರಗೆ ಬರುವುದಿಲ್ಲ. ನಾಳೆ ಅವರ ಜೊತೆ ಮಾತನಾಡುವಿಯಂತೆ,” ಎಂದು ಸುಧಾ, ತಾತನ ಜೊತೆ ಮಾತನಾಡಬೇಕೆಂದು ಹಠ ಹಿಡಿದ ತನ್ನ ಮಗಳಿಗೆ ತಿಳಿಹೇಳಿದಳು.

ಆದರೆ ತಾತನ ಜೊತೆ ಮಾತನಾಡಲೇಬೇಕೆಂದು ನಿರ್ಧರಿಸಿದ್ದ ನಂದಿತಾ, ಅವರ ಕೋಣೆಯೊಳಗೆ ನಿಧಾನವಾಗಿ ಹೆಜ್ಜೆ ಇಟ್ಟಳು. ನಂದಿನಿಯ ಭಾವಚಿತ್ರದ ಮುಂದೆ ಇದ್ದ ಈಸಿ ಚೇರ್‌ ನಲ್ಲಿ ರಾಯರು ಕಣ್ಮುಚ್ಚಿ ಕುಳಿತಿದ್ದರು. ನಂದಿತಾ ಅಲ್ಲಿಗೆ ಬಂದದ್ದು ಕೂಡ ಅವರಿಗೆ ತಿಳಿಯಲಿಲ್ಲ. ನಂದಿತಾ ನಂದಿನಿಯ ಭಾವಚಿತ್ರವನ್ನು ನೋಡಿದಳು. ನಂದಿನಿಯ ಮುಖದಲ್ಲಿ ನಿಷ್ಕಲ್ಮಶವಾದ ಮುಗುಳ್ನಗೆ, ಕಂಗಳಲ್ಲಿ ನೂರಾರು ವರ್ಷ ಸಂತೋಷವಾಗಿ ಬಾಳಬೇಕೆಂಬ ಕನಸುಗಳಿಂದ ಕೂಡಿ ಹೊಳಪಿತ್ತು. ಅಲ್ಲೇ ಹರಿವಾಣದಲ್ಲಿದ್ದ ಪಾರಿಜಾತ ಹೂಗಳನ್ನು ತೆಗೆದುಕೊಂಡು ಭಾವಚಿತ್ರಕ್ಕಿಟ್ಟು ನಮಸ್ಕರಿಸಿದಳು.

ತಾತ ಕಣ್ಣು ತೆರೆಯಲಿಲ್ಲ ಎಂಬುದನ್ನು ಗಮನಿಸಿ ನೆಲದಲ್ಲಿಯೇ ಅವರ ಕಾಲ ಬಳಿ ಕುಳಿತು ಅವರ ಕೈಗಳನ್ನು ಹಿಡಿದುಕೊಂಡು, “ತಾತಾ…..” ಎಂದಳು. ಯಾರೂ ಆ ದಿನ ಅವರ ಬಳಿ ಮಾತನಾಡುವುದಿಲ್ಲ, ಅವರು ಮಾತನಾಡುವುದೂ ಇಲ್ಲ. ಹೀಗಿರುವಾಗ ಕೋಣೆಗೆ ಬಂದು ಮೊಮ್ಮಗಳು ಮಾತನಾಡಿಸಿದಾಗ ಅವರಿಗೆ ಅಚ್ಚರಿಯಾಯಿತು.

`ಏನು?” ಎಂಬಂತೆ ಮೊಮ್ಮಗಳ ಮುಖ ನೋಡಿದರು.

“ತಾತಾ…. ಆ ದೇವರು ಎಷ್ಟು ನಿಷ್ಠೂರವಾಗಿ ಕೆಲವರ ಹಣೆಬರಹ ಬರಿತಾನೇ ಅಲ್ವಾ…..? ನಂದಿನಿ ಅತ್ತೆಯ ವಿಷಯದಲ್ಲಿ ದೇವರು ತುಂಬಾ ಅನ್ಯಾಯ ಮಾಡಿದಾನೆ ಅಲ್ವಾ ತಾತಾ……?”

ರಾಯರು ಮಾತನಾಡಲಿಲ್ಲ. ಅವರ ಮುಖದಲ್ಲಿ ನೋವಿನ ಎಳೆಗಳನ್ನು ಗಮನಿಸಿದ ನಂದಿತಾ, “ತಾತಾ….ಎಲ್ಲ ದೇವರ ಆಟ. ಆ ವಿಧಿಯ ಲೀಲೆ. ನನಗೆ ನಂದಿನಿ ಅತ್ತೆಯ ಕಥೆ ಸಂಪೂರ್ಣವಾಗಿ ಗೊತ್ತಿದೆ. ಅತ್ತೆಯ ಸಾವಿಗೆ ನೀವೇ ಕಾರಣ ಎಂಬ ಅಪರಾಧಿ ಪ್ರಜ್ಞೆಯಿಂದ ನೀವು ಬಳಲುತ್ತಿರುವುದೂ ನನಗೆ ಗೊತ್ತು. ಇಷ್ಟೂಕ್ಕೂ ನೀವು ಆ ಮದುವೆಗೆ ವಿರೋಧಿಸಿದ್ದರ ಹಿಂದೆ ಅತ್ತೆಯ ಮೇಲಿದ್ದ ಅಪಾರ ಪ್ರೀತಿ, ಕಾಳಜಿಯೇ ಕಾರಣ ಅಲ್ವಾ ತಾತಾ…..?

“ಈ ವಂಶದ ಘನತೆ, ಗೌರವವನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದಲೇ ನೀವು ಅತ್ತೆಯ ಮದುವೆ ವಿಚಾರದಲ್ಲಿ ಸ್ವಲ್ಪ ಕಟ್ಟುನಿಟ್ಟಾಗಿ ವರ್ತಿಸಿರಬಹುದು. ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದ ನಂದೀಶನನ್ನು ಸಾಯುವ ಸ್ಥಿತಿಯಲ್ಲಿ ನೋಡಿದರೆ ಎಲ್ಲಿ ನಂದಿನಿ ಅತ್ತೆ ನೋವಿನಲ್ಲಿ ತತ್ತರಿಸಿ ಹೋದಾರೋ ಎಂಬ ಭಯ ಮತ್ತು ಕಾಳಜಿಯಿಂದ ನೀವು ಅತ್ತೆಗೆ ನಂದೀಶನನ್ನು ಆಸ್ಪತ್ರೆಯಲ್ಲಿ ನೋಡುವ ಅವಕಾಶ ಕೊಟ್ಟಿರಲಿಕ್ಕಿಲ್ಲ.

“ಹೀಗೆ ಪ್ರತಿಯೊಂದು ವಿಷಯವನ್ನೂ ಋಣಾತ್ಮಕ ದೃಷ್ಟಿಕೋನದಿಂದಲೂ, ಧನಾತ್ಮಕ ದೃಷ್ಟಿಕೋನದಿಂದಲೂ ನಾವು ಯೋಚಿಸಬಹುದು. ಕೆಲವೊಂದು ವಿಷಯಗಳು, ಘಟನೆಗಳು ನಮ್ಮ ಹತೋಟಿಗೆ ಬಾರದೆ ಕೈಮೀರಿ ಹೋಗಿ ಬಿಡುತ್ತವೆ. ಅದರಿಂದ ನಮಗೆ ಪಾಠ ಸಿಗುತ್ತದೆ. ನಡೆದುಹೋದ ಘಟನೆಗೆ ಚಿಂತಿಸಿ ಕುಳಿತರೆ ಪ್ರಯೋಜನವಿಲ್ಲ. ಅತ್ತೆಯ ಸಾವಿಗೆ ನೀವು ಸಾಕಷ್ಟು ಪ್ರಾಯಶ್ಚಿತ್ತ ಅನುಭವಿಸಿಯಾಗಿದೆ.

“ತಾತಾ… ಸಾಕು. ಇನ್ನು ನೀವು ಇರುವಷ್ಟು ಕಾಲ ನೆಮ್ಮದಿಯಿಂದ ಬಾಳಬೇಕು. ಎಷ್ಟೋ ಜನ ಹೆಣ್ಣುಮಕ್ಕಳಿಗೆ ಇಂತಹ ಅನ್ಯಾಯ ನಡೆಯುತ್ತಿರುತ್ತದೆ. ಅತ್ತೆ ಹೇಳಿದಂತೆ ಅವರಿಗಾದ ನೋವು ಇನ್ಯಾವ ಹೆಣ್ಣುಮಕ್ಕಳಿಗೂ ಆಗೋದು ಬೇಡ. ಈ ಮಲ್ಲಿಗೆ ಹಿತ್ಲಿನ ಯಜಮಾನನಾಗಿ ಮಲ್ಲಿಗೆ ಹಿತ್ಲಿನ ಯಾವುದೇ ಹೆಣ್ಣುಮಗಳಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ತಾತಾ… ಈಗ ನೀವು ಹಿಂದಿನ ಕಹಿ ನೆನಪುಗಳನ್ನೆಲ್ಲಾ ಮರೆತು ಹೊಸ ವಿಚಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಹೊಸ ಜಾಗೃತಿಯನ್ನು ಮೂಡಿಸಬೇಕಾಗಿದೆ,” ಎಂದು ದೀರ್ಘವಾಗಿ ಮಾತನಾಡಿದಳು.

ಒಂದು ಕ್ಷಣ ಮಾತು ನಿಲ್ಲಿಸಿ ನಂದಿತಾ ತಾತನ ಮುಖ ನೋಡಿದಳು. ಈಗ ಅವರ ಮುಖದಲ್ಲಿ ತಾನೇನನ್ನೋ ಸಾಧಿಸುತ್ತೇನೆ ಎಂಬಂತಹ ಆತ್ಮವಿಶ್ವಾಸ ಕಾಣುತ್ತಿತ್ತು.

“ತಾತಾ…. ನಿಮಗೆ ಇನ್ನೊಂದು ವಿಚಾರ ಹೇಳಬೇಕಿತ್ತು. ಹೆತ್ತವರು ಯಾವತ್ತೂ ಅವರ ಮಕ್ಕಳ ಸುಖ ಸಂತೋಷದ ಬಗ್ಗೆಯೇ ಚಿಂತಿಸುತ್ತಾರೆ. ಇದು ಸತ್ಯ. ಅದರಲ್ಲೂ ಹೆಣ್ಣುಮಕ್ಕಳ ಮದುವೆ ವಿಚಾರದಲ್ಲಂತೂ ಬಹಳ ಕಟ್ಟುನಿಟ್ಟು. ಪ್ರೇಮ ವಿವಾಹಕ್ಕೆ ಅವರು ಒಪ್ಪಿಗೆ ಕೊಡುವುದಿಲ್ಲ. ಪ್ರೀತಿಸಿದ ಹುಡುಗ ಮದುವೆಯಾದ ಮೇಲೆ ಎಲ್ಲಿ ಕೈ ಕೊಡುತ್ತಾನೋ ಎಂಬ ಭಯ ಹೆತ್ತವರಿಗೆ ಇದ್ದೇ ಇರುತ್ತದೆ. ಆದರೆ ಎಷ್ಟೋ ಸಲ ಗುರುಹಿರಿಯರು ನಿಶ್ಚಯಿಸಿ ಮಾಡಿದ ಮದುವೆಯೇ ಮುರಿದು ಬಿದ್ದ ಸಾಕಷ್ಟು ಉದಾಹರಣೆಗಳಿವೆ. ನಮ್ಮ ನಂದಿನಿ ಅತ್ತೆಯ ದುರಂತವೇ ಇದಕ್ಕೆ ಸಾಕ್ಷಿ.

“ಮನೆ, ಮನೆತನ, ಜಾತಕ ಎಲ್ಲವನ್ನೂ ನೋಡಿ ಮದುವೆ ಮಾಡಿದಿರಿ. ಆದರೆ ನಂದಿನಿ ಅತ್ತೆ ಗಂಡ ಎಂಬ ರಾಕ್ಷಸನ ಕೈಯಲ್ಲಿ ಸೆಣಸಾಡಿ ಸೋತು ಹೋಗಿ ಪ್ರಾಣಬಿಟ್ಟರಲ್ಲ ತಾತಾ……? ಗಂಡು ಹೆಣ್ಣು ಒಬ್ಬರನ್ನೊಬ್ಬರು ನೋಡಿ ಅರ್ಥ ಮಾಡಿಕೊಂಡು, ಪರಸ್ಪರ ತಮ್ಮ ಬೇಕು ಬೇಡಗಳನ್ನು ಅರಿತುಕೊಂಡ ಮೇಲೆ ಮದುವೆಯಾದರೆ ಅವರ ವೈವಾಹಿಕ ಜೀವನ ಇನ್ನೂ ಸುಖಮಯವಾಗಿರುತ್ತದೆ ಎಂದು ನನ್ನ ಅನಿಸಿಕೆ.

“ಬೆಳೆದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನನ್ನ ನಂಬಿಕೆ. ತಮ್ಮ ಬಾಳ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಮಕ್ಕಳಿಗೆ ಹೆತ್ತವರು ಕೊಡಬೇಕು ಅಲ್ವೇ ತಾತಾ…..? ಇನ್ನು ಹುಡುಗ ಹುಡುಗಿಯ ಧರ್ಮಗಳೇ ಬೇರೆ ಆಗಿದ್ದಲ್ಲಿ ಸಮಾಜ ಒಪ್ಪುವುದಿಲ್ಲ ಗೊತ್ತು, ಮನೆಯಲ್ಲಿಯೂ ಒಪ್ಪುವುದಿಲ್ಲ. ಏಕೆಂದರೆ ಅವರಿಬ್ಬರ ಆಚಾರವಿಚಾರ ಮತ್ತು ಸಂಸ್ಕೃತಿಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ.

“ಮದುವೆಯಾದ ಮೇಲೆ ಹೊಂದಾಣಿಕೆ ಬರೋದು ಕಷ್ಟ ಎಂಬುದೂ ಗೊತ್ತು. ಆದರೆ ಪ್ರೀತಿಸಿದ ಹುಡುಗನನ್ನು ಮರೆಯಲು ಸಾಧ್ಯವೇ ಆಗದೆ, ಕೈ ಹಿಡಿದ ಗಂಡನಿಗೆ ತನ್ನ ತನುಮನವನ್ನು ಒಪ್ಪಿಸಲೂ ಸಾಧ್ಯವಾಗದೆ ಕೊರಗಿ, ಕೊರಗಿ ಪ್ರಾಣವನ್ನೇ ಕಳೆದುಕೊಳ್ಳುವುದಕ್ಕಿಂತ ಪ್ರೀತಿಸಿದವನನ್ನು ಮದುವೆಯಾಗುವ ಅವಕಾಶ ಕೊಡುವುದು ಒಳ್ಳೆಯದು ತಾನೇ…..? ಅಂತರ್ಜಾತೀಯ ವಿವಾಹವಾಗುವುದು ಸರಿ ಎಂದು ನಾನು ತೋರಿಸಿಕೊಡುತ್ತಿಲ್ಲ. ಅಂತರ್ಜಾತೀಯ ವಿವಾಹ ಮಾಡಿಕೊಂಡು ಸಮಾಜವನ್ನು ಎದುರಿಸುವ ಶಕ್ತಿ ಇದ್ದವರು ಮಾತ್ರ ಆ ಸಾಹಸಕ್ಕೆ ಕೈ ಹಾಕುತ್ತಾರೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಪ್ರಾಣಕ್ಕಿಂತ ಆ ಆಚಾರ, ವಿಚಾರ ಮತ್ತು ಜಾತಿ ಮುಖ್ಯವಲ್ಲ ಎಂಬುದು ನನ್ನ ಭಾವನೆ.

“ತಾತಾ…. ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನ ಹೆಸರು ಸಾಕ್ಷತ್‌. ಜಾತಿ ನಮ್ಮದೇ, ಆದ್ರೆ ಪಂಗಡ ಬೇರೆ ಅಷ್ಟೇ. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಅವರ ಮನೆಯವರೂ ಒಪ್ಪಿದ್ದಾರೆ. ನನ್ನ ಅಮ್ಮ ಅಪ್ಪನಿಗೆ ವಿಷಯ ತಿಳಿಸಿದ್ದೇನೆ. ಈ ಮದುವೆಗೆ ನೀವು ಒಪ್ಪುವುದಿಲ್ಲವೆಂದು ಹೇಳಿದ್ರು. ನಿಮ್ಮನ್ನು ಒಪ್ಪಿಸುವ ಜವಾಬ್ದಾರಿ ನಂದು ಅಂದೆ. ಅತ್ತೆ ತೀರಿಕೊಂಡ ಮೇಲೆ ಈ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯಲಿಲ್ಲವಂತೆ. ನನ್ನ ಮದುವೆ ಇದೇ ಮನೆಯಲ್ಲಿ ನೀವೇ ಮುಂದೆ ನಿಂತು ಮಾಡಿಕೊಡಬೇಕೆಂಬುದು ನನ್ನ ಅಸೆ.

“ತಾತಾ…  ಎರಡು ತಿಂಗಳ ಬಳಿಕ ಸಾಕ್ಷತ್‌ ಫಾರಿನ್‌ ಗೆ ಹೋಗ್ತಾ ಇದ್ದಾನೆ. ಅವನು ಹೋಗುವ ಮೊದಲೇ ನಮ್ಮ ಮದುವೆ ಮಾಡಬೇಕೆಂಬುದು ಅವನ ಹೆತ್ತವರ ಆಸೆ. ತಾತಾ…. ನೀವು ಈ ಮದುವೆಗೆ ಒಪ್ಪಿ, ಇದೇ ಮನೆಯಲ್ಲಿ, ನಮ್ಮ ಮಲ್ಲಿಗೆ ಅರಮನೆಯಲ್ಲಿ ನೀವೇ ಮುಂದೆ ನಿಂತು ನಮ್ಮ ಮದುವೆಯನ್ನು ನಡೆಸಿ ಕೊಡುವಿರಾ ಪ್ಲೀಸ್‌ ತಾತಾ….” ಎನ್ನುತ್ತಾ ನಂದಿತಾ ರಘುನಾಥರಾಯರ ಪಾದಕ್ಕೆರಗಿದಳು.

ರಾಯರು ಅವಳ ಭುಜ ಹಿಡಿದು ಮೇಲೆತ್ತಿ ನಂದಿನಿಯ ಭಾವಚಿತ್ರವನ್ನೊಮ್ಮೆ ನೋಡಿ ಕಣ್ಣೊರೆಸಿಕೊಂಡರು. ಕುಳಿತಲ್ಲಿಂದ ಎದ್ದು ಉತ್ಸಾಹದಿಂದ ಕೋಣೆಯಿಂದ ಹೊರ ಬಂದು, “ಸೋಮಯ್ಯಾ…. ಕೃಷ್ಣಾಚಾರಿಗೆ ಫೋನ್‌ ಮಾಡಿ ನಾಳೆಯೇ ನಮ್ಮ ಮನೆಗೆ ಸುಣ್ಣ ಬಣ್ಣ ಹೊಡೆಯಲಿಕ್ಕೆ ಜನರನ್ನು ಕಳುಹಿಸಲು ಹೇಳು….. ಸದ್ಯದಲ್ಲೇ ಈ ಮಲ್ಲಿಗೆ ಅರಮನೆಯಲ್ಲಿ ನನ್ನ ಮೊಮ್ಮಗಳ ಮದುವೆ ಇದೆ,” ಎಂದರು.

ರಾಯರ ಮಾತು ಕೇಳಿ ಅಚ್ಚರಿಗೊಂಡ ಸೋಮಯ್ಯ ನಂದಿತಾಳ ಮುಖ ನೋಡಿದ. ಅವಳು ಮುಗುಳ್ನಗುತ್ತಾ, “ಅಷ್ಟೇ ಅಲ್ಲ ಸೋಮಯ್ಯಾ…. ತಾತನಿಗೆ, ನಿನಗೆ ಮತ್ತೆ ನಮ್ಮ ಮನೆಯರಿಗೆಲ್ಲಾ ಹೊಸ ಬಟ್ಟೆ ತಗೋಬೇಕು. ಎಲ್ಲಾ ಒಟ್ಟಿಗೆ ಬೆಂಗಳೂರಿಗೆ ಹೋಗಿ ಬರೋಣ,” ಎಂದಳು.

ಮೂವತ್ತು ವರ್ಷಗಳಿಂದ ಪಶ್ಚಾತ್ತಾಪದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ತತ್ತರಿಸಿ ಹೋಗಿದ್ದ ರಘುನಾಥ ರಾಯರಿಗೆ ನಂದಿತಾ ಪ್ರೀತಿ, ಕಾಳಜಿ ತೋರಿಸಿ, ಅಪರಾಧಿ ಪ್ರಜ್ಞೆಯಿಂದ ಅವರನ್ನು ಬಿಡುಗಡೆಗೊಳಿಸಿ ಅವರ ಹೃದಯಕ್ಕೆ ತಂಪೆರೆದಿದ್ದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ