ಅಮಾಯಕ ಹಳ್ಳಿ ಹುಡುಗಿಯಾಗಿದ್ದ ಲಾವಣ್ಯಾ ಆಕಸ್ಮಿಕವಾಗಿ ಕನ್ನಡ ಚಿತ್ರರಂಗಕ್ಕೆ ಬಂದು ಆಕಾಶದೆತ್ತರಕ್ಕೆ ಬೆಳೆದುಬಿಟ್ಟಳುಮುಂದೆ ಅದೇ ವೇಗದಲ್ಲಿ ಅವನತಿಗೆ ಈಡಾದಳು. ಮುಂದೆ ಅವಳ ಭವಿಷ್ಯ……..?

“ಹ್ಹ…..ಹ್ಹ….ಹ್ಹ….ಹ್ಹಾ……”

“ಯಾರು…..? ಯಾರು….?”

“ನಾನಾರೆಂದು ಆಮೇಲೆ ತಿಳಿಸುವೆ. ನಿನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ನೀನು ಅದೆಷ್ಟು ಜನರ ಮನಸ್ಸಿಗೆ ನೋವನ್ನು ಉಣಿಸಿರುವಿಯೆಂಬುದು ನೆನಪಿದೆಯಾ…..?”

“ನಾನಾ…..? ನಾನ್ಯಾರ ಮನಸ್ಸನ್ನು ನೋಯಿಸಿದ್ದೇನೆ…..? ಛೇ, ಛೇ! ಇಲ್ಲವಲ್ಲ….!”

“ಇಲ್ಲವೇನೇ ಸುಬ್ಬಕ್ಕಾ……? ಲಾವಣ್ಯಾ, ನೀನು ಮಾಡಿದ ತಪ್ಪು ನಿನಗೆ ಅದು ಹೇಗೆ ಗೊತ್ತಾಗುತ್ತೆ ಬಿಡು….? ನಮ್ಮ ಬೆನ್ನು ನಮಗೆ ಕಾಣುವುದಿಲ್ಲವಲ್ಲ ಹಾಗೆ ನಮ್ಮ ತಪ್ಪುಗಳೂ ನಮಗೆ ಕಾಣುವುದೇ ಇಲ್ಲ. ಮೇಲಾಗಿ ಪ್ರತಿಯೊಬ್ಬ ಮನುಷ್ಯನಿಗೆ ತಾನು ಮಾಡಿದ್ದೆಲ್ಲ ಸರಿ ಎಂದೇ ಕಾಣುತ್ತಿರುತ್ತಿದೆ. ಅದಕ್ಕೆ ಸ್ವ ಸಮರ್ಥನೆಯೂ ಕೂಡ ಇರುತ್ತದೆ.”

“ಇಲ್ಲ, ಇಲ್ಲ…. ನೀನು ಹೇಳುವುದೆಲ್ಲ ಸುಳ್ಳು. ಸುಮ್ಮಸುಮ್ಮನೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವಿ? ನಾನ್ಯಾವ ತಪ್ಪನ್ನೂ ಮಾಡಿಲ್ಲ.”

“ಮತ್ತದೇ ಸಮರ್ಥನೇ…..! ನಿನ್ನ ಯಶಸ್ಸಿಗೆ ಕಾರಣರಾದವರೆಲ್ಲರನ್ನೂ ಜಾಡಿಸಿ ಒದ್ದೆಯಲ್ಲ…..?”

“ನಾನಾ…..? ಇನ್ನೊಮ್ಮೆ ಹಾಗೆ ಹೇಳಿದರೆ ಕತ್ತು ಹಿಸುಕಿ ನೀನು ಹುಟ್ಟಿಲ್ಲ ಎಂದು ಅನಿಸಿಬಿಡ್ತೀನಿ.”

“ನೋಡು ನೋಡು…. ಕೋಪ ಮುಂಗೋಪ ಬಹಳ ನಿನಗೆ. ಈ ಕೋಪವೇ ನಿನ್ನನ್ನು ಹಾಳು ಮಾಡಿದ್ದು. ಆನೆ ನಡೆದಿದ್ದೇ ಹಾದಿ ಎಂಬಂತೆ ನೀನು ಆಡಿದ್ದೇ ಆಟವಾಗಿತ್ತು. ನಿನ್ನ ಮೊಂಡುತನ, ಸಿಡುಕುತನ, ವಿತಂಡವಾದ ನಿನ್ನ ಅವನತಿಗೆ ಕಾರಣಾಗಲಿಲ್ಲವೇ…..?”

“ಏಯ್‌….. ಸುಳ್ಳು ಸುಳ್ಳು ಏಕೆ ಬೊಗಳುತ್ತಿರುವಿ…..?”

“ನಾನೇಕೆ ಸುಳ್ಳು ಹೇಳಲಿ….? `ಸುಳ್ಳು ನಮ್ಮಲ್ಲಿಲ್ಲಯ್ಯಾ…. ಸುಳ್ಳೇ ನಮ್ಮನೆ ದೇವರು….’ ಎಂಬುದು ನಿನ್ನ ನಡತೆಯಾಗಿತ್ತು. ನಿಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬಂದಿದ್ದ ಚಲನಚಿತ್ರ ರಂಗದ ಹೆಸರಾಂತ ನಿರ್ದೇಶಕ ಮಲ್ಲಿನಾಥ್‌ ಅಂದು ನೀನು ಅಭಿನಯಿಸಿದ್ದ ನಾಟಕವನ್ನು ವೀಕ್ಷಿಸಿ ನಿನ್ನ ಅಭಿನಯ ಚಾತುರ್ಯವನ್ನು ಮೆಚ್ಚಿಕೊಂಡರು. `ಈ ಹುಡುಗಿಯಲ್ಲಿ ಪ್ರತಿಭೆ ಇದೆ, ನಟನಾ ಕೌಶಲ್ಯವಿದೆ, ಅವಳೆದೆಯಲ್ಲಿ ಕಲೆಯ ತುಡಿತವಿದೆ, ಉಳಿಯ ಏಟು ಬಿದ್ದಾಗ ಕಲ್ಲು ಚಪ್ಪಡಿಯಲ್ಲೂ ಕಲೆ ಅರಳುವಂತೆ ತಿದ್ದಿ ತೀಡಿದರೆ ಅವಳಲ್ಲಿನ ಅದ್ಭುತ ಪ್ರತಿಭೆ ಹೊರಬರಬಹುದು, ಕನ್ನಡದ ನಂ.ಒನ್‌ ನಾಯಕಿಯಾಗಿ ಹೊರಹೊಮ್ಮಬಹುದು, ಇವಳೇ ಬೆಳ್ಳಿ ತೆರೆಯ ಭಾವಿ ಯುವರಾಣಿ,’ ಎಂದು ಅಂದುಕೊಂಡ ನಿರ್ದೇಶಕರು ನಿನಗೆ ಒಪ್ಪುವಂಥ ಚಿತ್ರಕಥೆ ಒಂದನ್ನು ರಚಿಸಿ, ನಿನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

“ತಮ್ಮ ಸತತ  ಪ್ರಯತ್ನ, ಶ್ರಮದಿಂದ ಅಭಿನಯದಲ್ಲಿ ಇನ್ನೂ ಕಸುಗಾಯಿಯಂತಿದ್ದ ನಿನ್ನನ್ನು ಹಣ್ಣಾಗುವಂತೆ ರೂಪಿಸಿದರು. ಅಕ್ಕಸಾಲಿಗನ ಮೂಸೆಯಲ್ಲಿ ಆಕರ್ಷಕ ರೂಪು ತಳೆಯುವ ಚಿನ್ನದಂತೆ ನಿನ್ನಲ್ಲಿದ್ದ ನಟನಾ ಕೌಶಲ್ಯಕ್ಕೆ ಮೆರುಗು ತಂದಿದ್ದರು. ಆಗ ಬೆಳ್ಳಿ ತೆರೆಯಲ್ಲಿದ್ದ ನಟಿಯರು ಒಬ್ಬರಿಗಿಂತ ಒಬ್ಬರು ಚೆಂದುಳ್ಳಿ ಚೆಲುವೆಯರು. ಅವರ ಅಭಿನಯ ಅಷ್ಟೇ ಮನೋಜ್ಞವಾಗಿತ್ತು. ಅವರಂತೆ ನೀನೇನು ಅಪ್ರತಿಮ ಸುಂದರಿಯಾಗಿರಲಿಲ್ಲ. ಒಂದೆಂದರೆ ನಿನ್ನ ಕಣ್ಸೆಳೆಯುವ ಮೈಮಾಟದಿಂದ ಚಿತ್ರರಸಿಕರ ಹೃದಯದಲ್ಲಿ ರಾರಾಜಿಸತೊಡಗಿದೆ. ದಿನ ಬೆಳಗಾಗುವುದರೊಳಗೆ ನೀನು ಸ್ಟಾರ್‌ ಆಗಿಬಿಟ್ಟೆ.”

coral-story

ಲಾವಣ್ಯಾಳ ಮನಸ್ಸಿನ ವಾಹನಕ್ಕೆ ರಿಸರ್ವ್ ಗೇರ್‌ ಬಿತ್ತು.

“ಲಾವಣ್ಯಾ, ಹಾರ್ದಿಕ ಅಭಿನಂದನೆಗಳು. ನಿನ್ನ ಅಭಿನಯ ಸೂಪರ್ಬ್‌. ನಾಟಕದಲ್ಲಿನ ಆ ಕ್ಲಿಷ್ಟ ಪಾತ್ರಕ್ಕೆ ನೀನು ಜೀವ ತುಂಬಿದ್ದು ಪ್ರಶಂಸನೀಯ. ಸೂಕ್ತ ತರಬೇತಿ, ನಿರ್ದೇಶನ ದೊರೆತರೆ ನೀನು ಅಭಿನಯದಲ್ಲಿ ಉತ್ತುಂಗಕ್ಕೆ ಏರಬಹುದು.”

“ನನ್ನ ಅಭಿನಯ ತಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು ಸರ್‌. ಎಲ್ಲಾ ನಿಮ್ಮಂಥಹ ಹಿರಿಯರ ಆಶೀರ್ವಾದ ಅಷ್ಟೇ. ತಮ್ಮ ಹೊಗಳಿಕೆ ಅದೇನಿದ್ದರೂ ನಮ್ಮ ಕಾಲೇಜಿನ ಕನ್ನಡ ಉಪನ್ಯಾಸಕರಾದ ಚಿರಂಜೀವಿ ಸರ್‌ ಗೆ ಸಲ್ಲಬೇಕು ಅಷ್ಟೇ. ಅವರು ಹೇಳಿಕೊಟ್ಟಂತೆ ನಾನು ಅಭಿನಯಿಸಿದ್ದೇನೆ,” ಖುಷಿಯ ಪರಾಕಾಷ್ಠೆಯನ್ನು ಅನುಭವಿಸುತ್ತಿದ್ದ ಲಾವಣ್ಯಾ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮಲ್ಲಿನಾಥ್‌ ಅವರ ಪಾದಗಳಿಗೆ ಎರಗಿದಳು.

“ಶುಭವಾಗಲಿ ಲಾವಣ್ಯಾ….” ಎಂದೆನ್ನುತ್ತಾ ಮಲ್ಲಿನಾಥ್‌ ಲಾವಣ್ಯಾಳನ್ನು ತೋಳಿಡಿದು ಮೇಲಕ್ಕೆತ್ತಿದರು. ರಂಗೇರಿದ್ದ ಅವಳ ಸೇಬುಗಲ್ಲಗಳಲ್ಲಿ ನೆಟ್ಟಿದ್ದ ಅವರ ದೃಷ್ಟಿ ನಿಧಾನವಾಗಿ ಅವಳ ಚಿಗರೆ ಕಂಗಳಲ್ಲಿ ನೆಲೆ ನಿಂತಿತು. ನಾಲ್ಕೂ ಕಣ್ಣುಗಳ ನೋಟ ಬೆರೆತಾಗ ಲಾವಣ್ಯಾ ನಾಚಿಕೆಯಿಂದ ತಕ್ಷಣ ತನ್ನ ಮೊಗವನ್ನು ಕೆಳಗೆ ಹಾಕಿದಾಗ ಮಲ್ಲಿನಾಥ್‌ ರ ತುಂಬು ಕಣ್ಣುಗಳು ಲಾವಣ್ಯಾಳ ಮೈಮೇಲೆಲ್ಲಾ ಹರಿದಾಡಿದವು.

`ಹುಡುಗಿ ಪರವಾಗಿಲ್ಲ, ಭಾರೀ ಚೆಲುವೆ ಎಂದೆನಿಸಿಕೊಳ್ಳದಿದ್ದರೂ ಸೂಜಿಗಲ್ಲಿನಂತೆ ಸೆಳೆಯುವ ಇವಳ ಮಾದಕ ಅಂಗಸೌಷ್ಠವದಲ್ಲಿ ಅದೇನೋ ಒಂಥರ ವಿಶೇಷ ಆಕರ್ಷಣೆ ಇದೆ. ಇವಳ ಪುಟ್ಟ ಬಾಯಿಯಿಂದ ಬರುವ ಡೈಲಾಗ್‌ ಡೆಲಿವರಿ, ಬಾಡಿ ಲ್ಯಾಂಗ್ವೇಜ್‌, ಭಾವಾಭಿನಯ ತುಂಬಾ ವಿಶೇಷ ಎಂದೆನಿಸುತ್ತಿವೆ. ಧ್ವನಿಯಲ್ಲಿ ಒಂಥರ ಮಾರ್ದತೆ ಇದೆ,’ ಎಂದು ಮನದೊಳಗೇ ಅಂದುಕೊಂಡರು ಮಲ್ಲಿನಾಥ್‌.

“ನಿನಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆಯೇ….?” ಮಲ್ಲಿನಾಥರ ಮಾತಿನಿಂದ ಲಾವಣ್ಯಾಳ ಎದೆಯೊಳಗೆ ಜೇನು ಸುರಿದ ಅನುಭವ.

`ಗಗನವು ಎಲ್ಲೋ, ಭೂಮಿಯು ಎಲ್ಲೋ….?’ ಎಂಬ ಹಾಡನ್ನು ಜ್ಞಾಪಿಸಿಕೊಂಡ ಅವಳೆದೆಯಲ್ಲಿ ಅದೇನೋ ಅವ್ಯಕ್ತ ಪುಳಕ. ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಅವಳಿಗೆ 20 ವರ್ಷಗಳ ವಯಸ್ಸಿನ ಅವಧಿಯಲ್ಲಿ ಹಿಂದೆಂದೂ ಅಂತಹ ಮಧುರ ಭಾವನೆ ಹೃದಯವನ್ನು ಮೀಟಿರಲಿಲ್ಲ. ಥಟ್ಟನೇ ಅವಳ ಹೃದಯದ ಬಡಿತ ಏರಿತ್ತು. ಸಂತೋಷದ ಭರದಲ್ಲಿ ಎದೆ ಕಮ್ಮಾರನ ತಿದಿಯಂತಾಗಿತ್ತು. ಕೆನ್ನೆಗಳು ಕೆಂಪಿನೋಕುಳಿಯಿಂದ ರಂಗೇರಿದ್ದವು. ಹೇಗೋ ಸಾವರಿಸಿಕೊಂಡಳು.

“ತುಂಬಾ ಆಸೆ ಇದೆ ಸರ್‌,” ಎಂದು ಮೆಲ್ಲಗೆ ನುಲಿದಳು. ಮಲ್ಲಿನಾಥರಿಗೆ ಕೋಗಿಲೆ ಉಲಿದ ಹಾಗೆ ಕೇಳಿಸಿತು.

“ಡಟ್ಸ್ ಗುಡ್‌. ಇನ್ನೊಂದು ತಿಂಗಳಲ್ಲಿ ನಿನ್ನ ಪದವಿ ಪರೀಕ್ಷೆಗಳು ಮುಗಿಯುತ್ತವೆ. ಆಗ ನೀನು ಬೆಂಗಳೂರಿನ ಗಾಂಧೀನಗರಕ್ಕೆ ಬಂದು ನನ್ನನ್ನು ಕಾಣು. ಅಷ್ಟರಲ್ಲಿ ನಿನಗೆ ಸೂಕ್ತವಾಗುವಂಥ ಕಥೆಯೊಂದರ ಸ್ಕ್ರಿಪ್ಟ್ ತಯಾರಿಸಿಡುವೆ,” ಎಂದೆನ್ನುತ್ತಾ ತಮ್ಮ ವಿಳಾಸದ ಕಾರ್ಡನ್ನು ಲಾವಣ್ಯಾಳ ಕೈಯಲ್ಲಿಟ್ಟಿರುವ ಮಲ್ಲಿನಾಥ್‌.

ಹೃತ್ಪೂರ್ವಕ ಧನ್ಯವಾದ ಹೇಳಿ ಮುಗುಳ್ನಗುತ್ತಾ ಲಾವಣ್ಯಾ ಹಂಸಗಮನೆಯಾಗಿ ಮಲ್ಲಿನಾಥರಿಂದ ದೂರ ಸರಿದಿದ್ದಳು. ಅವಳ ಲಾಸ್ಯದ ನಡಿಗೆಯಲ್ಲೂ ಸೌಂದರ್ಯ ಕಂಡರು ಮಲ್ಲಿನಾಥ್‌.

`ಚಿಗುರು’ ಲಾವಣ್ಯಾಳ ಮೊದಲ ಸಿನಿಮಾ. ನಿರ್ದೇಶಕ ಮಲ್ಲಿನಾಥರ ಸಮರ್ಥ ಸಾರಥ್ಯದಲ್ಲಿ ಸಿನಿಮಾ ವಿಧ್ಯುಕ್ತವಾಗಿ ಸೆಟ್ಟೇರಿತು. ಲಾವಣ್ಯಾಳಿಗೆ ಕ್ಯಾಮೆರಾ ಎದುರಿಸುತ್ತಿರುವುದು ಇದು ಮೊದಲ ಅನುಭವ. ನಾಯಕ ರಾಹುಲ್‌. ಆಗಷ್ಟೇ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದ ಚಾಕಲೇಟ್ ಹೀರೋ. ಮಲ್ಲಿನಾಥರೇ ಅವನನ್ನೂ ಸಿನಿಮಾ ರಂಗಕ್ಕೆ ಪರಿಚಯಿಸಿದ್ದು. ಇವರ ನಿರ್ದೇಶನದಲ್ಲಿ ಇದು ಮೂರನೇ ಚಿತ್ರ. ಮೋಹನ್‌ ಕುಮಾರ್‌ ಮಲ್ಲಿನಾಥ್‌ ರ ನೆಚ್ಚಿನ ನಿರ್ಮಾಪಕರು.

ಲಾವಣ್ಯಾಳಿಗೆ ತುಂಬಾ ಅಳುಕು, ಭಯವಿದ್ದರೂ ಅವಳ ಅಭಿನಯದ ಮೊದಲ ಶಾಟ್‌ ಒಂದೇ ಟೇಕ್‌ ನಲ್ಲಿ ಓಕೆಯಾಗಿಬಿಟ್ಟಿತು. ಮಲ್ಲಿನಾಥ್‌, ಮೋಹನ್‌ ಕುಮಾರ್‌, ರಾಹುಲ್‌, ಛಾಯಾಗ್ರಾಹಕ ಬಸವರಾಜ್‌ ಎಲ್ಲರಿಗೂ ಖುಷಿಯೋ ಖುಷಿ! ತನ್ನ ಆಯ್ಕೆ, ಪ್ರಯತ್ನ, ಸಫಲವಾಗಿದ್ದಕ್ಕೆ ನಿರ್ದೇಶಕ ಅಭಿಮಾನದಿಂದ ಬೀಗಿದ. ಅಭಿನಯ ಕರಗತವಾಗುತ್ತಿದ್ದಂತೆ ಲಾವಣ್ಯಾ ಮೈಚಳಿ ಬಿಟ್ಟು, ಲೀಲಾಜಾಲವಾಗಿ ಅಭಿನಯಿಸಿ ತನ್ನ ಪಾತ್ರಕ್ಕೆ ಜೀವ ತುಂಬಿದಳು.

ಬರೋಬ್ಬರಿ ಆರು ತಿಂಗಳ ನಂತರ `ಚಿಗುರು’ ಬೆಳ್ಳಿತೆರೆಯಲ್ಲಿ ಬಿಡುಗಡೆಯಾಯಿತು. ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್‌ ನ ಎರಡು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತು. ಬಿಡುಗಡೆಯಾದ ಮೊದಲ ದಿನವೇ ಚಿತ್ರ ರಸಿಕರ ಹೃನ್ಮನಗಳನ್ನು ಗೆದ್ದಿತು. ಬೆಳ್ಳಂಬೆಳಗಾಗುತ್ತಿದ್ದಂತೆ ಲಾವಣ್ಯಾ ಸ್ಟಾರ್‌ ಆಗಿಬಿಟ್ಟಳು. `ಚಿಗುರು’ ಬಿಡುಗಡೆಯಾದಲ್ಲೆಲ್ಲಾ ಜಯಭೇರಿ ಬಾರಿಸತೊಡಗಿತು. ಆ ವರ್ಷದ ಸೂಪರ್‌ ಡೂಪರ್‌ ಹಿಟ್‌ ಸಿನಿಮಾ ಎಂದು ಗುರುತಿಸಲ್ಪಟ್ಟಿತು. ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಹಾಸನ, ವಿಜಾಪುರ, ಕಲಬುರ್ಗಿ, ಬೀದರ್‌, ರಾಯಚೂರು, ಮಂಗಳೂರು ಮುಂತಾಗಿ ಒಟ್ಟು 25 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು. ಚಿತ್ರದ ಯಶಸ್ಸಿಗೆ ಮಲ್ಲಿನಾಥ್‌ ಮತ್ತು ಲಾವಣ್ಯಾ ಕಾರಣ ಎಂದು ಚಿತ್ರರಸಿಕರು, ಪತ್ರಿಕೆಯವರು ಹಾಡಿ ಹೊಗಳತೊಡಗಿದರು. ಎಲ್ಲಾ ವರ್ಗದ ಸಿನಿಪ್ರಿಯರಿಗೆ ಲಾವಣ್ಯಾ ಇಷ್ಟವಾಗಿಬಿಟ್ಟಳು.

`ಚಿಗುರು’ ರಾಷ್ಟ್ರಮಟ್ಟದಲ್ಲೂ ಸುದ್ದಿ ಮಾಡಿತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು. ಮಲ್ಲಿನಾಥರಿಗೆ ಆ ವರ್ಷದ ಶ್ರೇಷ್ಠ ನಿರ್ದೇಶಕರೆಂದು ರಾಜ್ಯೋತ್ಸವ ಪ್ರಶಸ್ತಿ ದಕ್ಕಿತು. ಶ್ರೇಷ್ಠ ನಟಿ ಎಂದು ರಾಜ್ಯೋತ್ಸವ ಮತ್ತು ರಾಷ್ಟ್ರ ಪ್ರಶಸ್ತಿಗಳೆರಡೂ ಲಾವಣ್ಯಾಳ ಮುಡಿಗೇರಿದವು. ಅತ್ಯುತ್ತಮ ಕಥೆ, ಛಾಯಾಗ್ರಹಣ, ಸಂಗೀತ, ಹಾಡು, ಗಾಯಕ, ಗಾಯಕಿಯರಿಗೆ ನೀಡುವ ರಾಜ್ಯ ಪ್ರಶಸ್ತಿಗಳು `ಚಿಗುರು’ ಚಿತ್ರಕ್ಕೆ ಲಭಿಸಿದವು.

ಲಾವಣ್ಯಾಳ ಮುಂದಿನ ಚಿತ್ರ `ಮೊಗ್ಗು’ ಮಲ್ಲಿನಾಥರ ನಿರ್ದೇಶನದಲ್ಲಿ ಒಳ್ಳೆಯ ತುರುಸಿನಿಂದ ಸೆಟ್ಟೇರಿತು. ಅದೇ ಬ್ಯಾನರ್ ಅಡಿಯಲ್ಲಿ ಅದೇ ಹುಮ್ಮಸ್ಸಿನಿಂದ `ಮೊಗ್ಗು’ ಈ ಸಲ `ಚಿಗುರು’ ಚಿತ್ರದಂತೆ ಜಯಭೇರಿ ಬಾರಿಸಿತು. ಲಾವಣ್ಯಾಳ ಅಭಿನಯ ಕಲೆಗೆ ಮತ್ತೊಮ್ಮೆ ರಾಜ್ಯೋತ್ಸವ ಪ್ರಶಸ್ತಿಯ ಗರಿ. ಮತ್ತೊಮ್ಮೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು. ಲಾವಣ್ಯಾಳ ಯಶೋಗಾಥೆ ಹೀಗೇ ನಾಗಾಲೋಟದಿಂದ ಮುಂದುವರಿಯಿತು. ಆ ವರ್ಷದ ಕೊನೆಗೆ ಅದೇ ಬ್ಯಾನರ್‌ ಅಡಿಯಲ್ಲಿ ಲಾವಣ್ಯಾಳ ಅಭಿನಯದ ಮೂರನೇ ಚಿತ್ರ, `ಮರವನ್ನಪ್ಪಿದ ಬಳ್ಳಿ’ ಸೆಟ್ಟೇರುವಷ್ಟರಲ್ಲಿ ಗಾಂಧೀನಗರದ ಹೆಸರಾಂತ ನಿರ್ಮಾಪಕರು, ನಿರ್ದೇಶಕರು ಗೆಲ್ಲುವ ಕುದುರೆ ಲಾವಣ್ಯಾಳನ್ನು ಹುಡುಕಿಕೊಂಡು ಬರತೊಡಗಿದರು.

ಸಿನಿ ರಂಗದಲ್ಲಿನ ತನ್ನ ಪ್ರತಿಯೊಂದು ಹೆಜ್ಜೆಗೂ ತನ್ನ ಗಾಡ್‌ ಫಾದರ್‌ ಮಲ್ಲಿನಾಥರ ಅಭಿಪ್ರಾಯ, ಮಾರ್ಗದರ್ಶನ, ಆಶೀರ್ವಾದವನ್ನು ಪಡೆದುಕೊಂಡೇ ಮುಂದಡಿಯಿಡುವ ರೂಢಿಯನ್ನು ಬೆಳೆಸಿಕೊಂಡು ಬಂದಿದ್ದಳು. ಒಳ್ಳೊಳ್ಳೇ ಆಫರ್‌ ಗಳು ಬರುತ್ತಿದ್ದಂತೆ ಲಾವಣ್ಯಾ ವಿಷಯವನ್ನು ಮಲ್ಲಿನಾಥರ ಕಿವಿಗೆ ಹಾಕಿ ಅಭಿಪ್ರಾಯ ತಿಳಿಸಲು ವಿನೀತಳಾಗಿ ಕೇಳಿಕೊಂಡಳು.

“ನೋಡು ಲಾವಣ್ಯಾ, ನೀನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿರುವ ಕಾಲವಿದು. ನಿನ್ನಲ್ಲಿ ಅದ್ಭುತ ಕಲೆ, ಪ್ರತಿಭೆ ಇದೆ. ಹೀಗಿರುವಾಗ ನಿನ್ನನ್ನು ಹಾಕಿಕೊಂಡು ಸಿನಿಮಾ ಮಾಡಿ ಲಾಭ ಪಡೆಯುವುದು ಎಲ್ಲರ ಲೆಕ್ಕಾಚಾರ, ಜಗತ್ತು ವಿಶಾಲವಾಗಿದೆ. ಒಳ್ಳೆಯ ನಿರ್ಮಾಪಕರು, ನಿರ್ದೇಶಕರು, ನಾಯಕರ ಜೊತೆಗೆ ಅಭಿನಯಿಸುವುದರಿಂದ ನಿನ್ನಲ್ಲಿನ ಪ್ರತಿಭೆ ಎಂಬ ಹೂ ಇನ್ನಷ್ಟು ಅರಳಿ, ಅದರ ಸುವಾಸನೆ ನಾಡಿನ ಮೂಲೆ ಮೂಲೆಗೂ ಹರಡಿ ನಿನಗೆ ಒಳ್ಳೆಯ ಹೆಸರು ತಂದುಕೊಡಬಹುದು. ಕಥೆಗಳ ಆಯ್ಕೆ ಮುಖ್ಯ. ನಿನಗೆ ಸರಿಹೊಂದುವಂಥ, ನಿನ್ನಲ್ಲಿನ ಪ್ರತಿಭೆಗೆ ಸವಾಲೆಸೆಯುವಂತಹ ಚಾಲೆಂಜಿಂಗ್‌ ಪಾತ್ರಗಳಿದ್ದರೆ ಒಪ್ಪಿಕೊ. ಕಥೆಗಳಲ್ಲಿ ಗಟ್ಟಿತನವಿರದಿದ್ದರೆ ಬೇಡ.

burf-pighal-gai-story1

“ಹಾಗೇ ಒಂದು ಮಾತು. ಸಮಯಕ್ಕೆ ಪ್ರಾಮುಖ್ಯತೆ ಕೊಡು. ಪಂಕ್ಚುಯಾಲಿಟಿ ಅನ್ನೋದು ಇದೆಯಲ್ಲ, ಅದಕ್ಕೆ ತುಂಬಾ ಮಹತ್ವವಿದೆ. ಅದನ್ನು ಕಾಯ್ದುಕೊಂಡು ಹೋಗಬೇಕು. ಸರಿಯಾದ ಸಮಯಕ್ಕೆ ಶೂಟಿಂಗ್‌ ಗೆ ಹೋಗಬೇಕು. ಯಾರನ್ನೂ, ಯಾವತ್ತೂ ಕಾಯಿಸಬೇಡ, ಕಾಡಿಸಬೇಡ. ಈ ಉದ್ಯಮದಲ್ಲಿ ಹಣ ಎನ್ನುವುದು ಎಲ್ಲವನ್ನೂ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ಹಣವನ್ನು ಚೆಲ್ಲಿ ಹಣವನ್ನು ಬಾಚಿಕೊಳ್ಳುವುದೇ ನಿರ್ಮಾಪಕನ ಗುರಿ. ದುಡ್ಡಿನ ಹಿಂದೆ ಹೋಗಬೇಡ. ಪರಿಶ್ರಮ, ಶ್ರದ್ಧೆ, ಕರ್ತವ್ಯನಿಷ್ಠೆ, ಪ್ರಾಮಾಣಿಕ ಪ್ರಯತ್ನವಿದ್ದರೆ ಹಣ ತಾನಾಗಿಯೇ ಬರುತ್ತದೆ.

“ಕೇಳಿದವರಿಗೆಲ್ಲಾ ಕಾಲ್ ಶೀಟ್‌ ಕೊಟ್ಟು ಕೊಟ್ಟ ಮಾತನ್ನು ನಿಭಾಯಿಸಲು ಸಾಧ್ಯವಾಗದೇ ತೊಂದರೆಗೆ ಸಿಲುಕಿಕೊಳ್ಳಬೇಡ. ಅತ್ಯುತ್ತಮ ಕಥೆಯ ಸ್ಕ್ರಿಪ್ಟ್ ತಯಾರಾದಾಗ ನಾನೂ ನಿನ್ನನ್ನು ಸಂಪರ್ಕಿಸುತ್ತೇನೆ. ಸಮಯ ಹೊಂದಾಣಿಕೆ ಮಾಡಿಕೊಂಡು ಕಾಲ್ ಶೀಟ್‌ ಕೊಡುವುದನ್ನು ಮರೆಯಬೇಡ,” ಮಲ್ಲಿನಾಥ್‌ ಸಿನಿರಂಗದಲ್ಲಿನ ಒಳಗು ಹೊರಗುಗಳನ್ನು ಚುಟುಕಾಗಿ ತೆರೆದಿಟ್ಟಿದ್ದರು.

“ಸರ್‌, ಇಂದು ನಾನು ಈ ಮಟ್ಟದಲ್ಲಿ ಇರುವುದಕ್ಕೆ ನೀವೇ ಕಾರಣರು. ಕಾಡುಗಲ್ಲಿನಂತಿದ್ದ ನನ್ನನ್ನು ಕಡೆದು ಒಂದು ರೂಪು ಕೊಟ್ಟರು ನೀವು. ನನ್ನ ಪ್ರತಿ ಉಸಿರಾಟದಲ್ಲಿ ನಿಮ್ಮ ನೆನಪು ತುಂಬಿದೆ. ನೀವು ನನಗೆ ಸದಾಕಾಲ ಪೂಜ್ಯರು, ಪ್ರಾತಃಸ್ಮರಣೀಯರು. ಅದಕ್ಕಾಗಿಯೇ ಬೇರೆ ಬ್ಯಾನರ್‌ ಅಡಿಯಲ್ಲಿ ಅಭಿನಯಿಸಲು ನಿಮ್ಮ ಅಭಿಪ್ರಾಯ ಕೇಳಿದ್ದು. ನೀವು ರಾತ್ರಿ 1-2 ಗಂಟೆಗೆ ಫೋನ್‌ ಮಾಡಿದರೂ, ನಿಮ್ಮ ಚಿತ್ರಕ್ಕೆ ಕಾಲ್ ಶೀಟ್‌ ಕೊಡುವೆ. ಅದು ನನ್ನ ಧರ್ಮವೂ ಹೌದು. ನೀವು ಕಾಲಲ್ಲಿ  ತೋರಿಸಿದ್ದನ್ನು ತಲೆಯ ಮೇಲೆ ಹೊತ್ತುಕೊಂಡು ನಡೆಯುವೆ. ನಿಮ್ಮ ಆಶೀರ್ವಾದ ಹಾರೈಕೆಗಳು ಸದಾ ನನ್ನ ಮೇಲಿರಲಿ,” ವಿನೀತಳಾಗಿ ಹೇಳುತ್ತಾ ಲಾವಣ್ಯಾ ಮಲ್ಲಿನಾಥರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದರು. ಮಲ್ಲಿನಾಥರೂ ಹೃದಯತುಂಬಿ ಹರಸಿದ್ದರು.

ಅಷ್ಟರಲ್ಲಿ ಲಾವಣ್ಯಾಳಿಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದುಕೊಂಡಿತ್ತು. ಕನ್ನಡ ಚಿತ್ರರಂಗದ ಆಗಿನ ಸೂಪರ್‌ ಸ್ಟಾರ್ ಹೇಮಂತ್‌ ರ ಜೊತೆಗೆ ನಟಿಸುವ ಭಾಗ್ಯ ಲಾವಣ್ಯಾಳಿಗೆ ಒದಗಿ ಬಂದಿತ್ತು. ಅವರ ನೆಚ್ಚಿನ ನಿರ್ಮಾಪಕ ಬಸಂತ್‌, ಲಾವಣ್ಯಾಳ ಅಮೋಘ ಅಭಿನಯದ ಬಗ್ಗೆ ಹೇಮಂತ್‌ ರಿಗೆ ತಿಳಿಸುತ್ತಾ ಆಕೆಯನ್ನು ತಮ್ಮ ಬ್ಯಾನರ್‌ ಗೆ ಕರೆದುಕೊಂಡು ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಹೇಮಂತ್‌ ಲಾವಣ್ಯಾರ ಜೋಡಿಯಲ್ಲಿ `ಮೊಗ್ಗರಳಿ ಹೂವಾಗಿ’ ಎಂಬ ಚಿತ್ರ ಸೆಟ್ಟೇರಿತು.

ಹೇಮಂತ್‌ ಲಾವಣ್ಯಾರ ಜೋಡಿಯನ್ನು ಪ್ರೇಕ್ಷಕರು ತುಂಬಾ ಮೆಚ್ಚಿಕೊಂಡರು. `ಮೊಗ್ಗರಳಿ ಹೂವಾಗಿ’ ಆ ವರ್ಷದ ಸೂಪರ್ ಡೂಪರ್‌ ಹಿಟ್‌ ಚಿತ್ರವೊಂದು ಹೊರಹೊಮ್ಮಿತು. ಆ ಚಿತ್ರಕ್ಕೆ ವರ್ಷದ ಅತ್ಯುತ್ತಮ ಚಿತ್ರ ಹೇಮಂತ್‌ ಗೆ ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿತು. ಮುಂದೆ 3-4 ಚಿತ್ರಗಳಲ್ಲಿ ಈ ಜೋಡಿ ಮಿಂಚಿತು. ನೋಡುಗರ ಹೃದಯ ಸೂರೆ ಮಾಡಿತು. ಅತ್ಯುತ್ತಮ ಅಭಿನಯಕ್ಕಾಗಿ ಮತ್ತೆರಡು ರಾಜ್ಯ ಪ್ರಶಸ್ತಿಗಳು ಲಾವಣ್ಯಾಳ ಮುಡಿಗೇರಿದ್ದವು.

ಬೇರೆ ಬೇರೆ ಬ್ಯಾನರ್‌ ಗಳಲ್ಲಿ ಅಭಿನಯಿಸಿ ಲಾವಣ್ಯಾ ತನ್ನ ಮನೋಜ್ಞ ಸಹಜ ಅಭಿನಯದಿಂದ ಚಿತ್ರರಸಿಕರ ಮನೆ ಮಾತಾದಳು. ಮಲ್ಲಿನಾಥರ ನಿರ್ದೇಶನದಲ್ಲಿ ಮತ್ತೆರಡು ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಳು. ಉದಯೋನ್ಮುಖ ನಟ ಶಿಶಿರನ ಜೊತೆಗೆ ಐದು ಚಿತ್ರಗಳಲ್ಲಿ ನಟಿಸಿ ಲಾವಣ್ಯಾ ತನ್ನ ಛಾಪು ಮೂಡಿಸಿದಳು. ಹೆಚ್ಚಿನ ಸಂಭಾವನೆಯ ಆಮಿಷ ಒಡ್ಡಿ ಕೆಲವು  ನಿರ್ಮಾಪಕರು ಲಾವಣ್ಯಾಳ ಕಾಲ್ ಶೀಟ್‌ ಪಡೆದು ಚಿತ್ರ ಆರಂಭಿಸಿದರು.

ಕೆಲವು ಕ್ಷಣಗಳ ನಂತರ, “ಏನನ್ನು ನೆನಪಿಸುತ್ತಿರುವಿ ಲಾವಣ್ಯಾ…..? ನಿನ್ನ ಗಾಡ್‌ ಫಾದರ್‌ ಮಲ್ಲಿನಾಥರಿಗೆ ಮೊದಮೊದಲು ನೀನು ತುಂಬಾ ವಿಧೇಯಳಾಗಿದ್ದಿ. ಚಿತ್ರರಂಗದಲ್ಲಿ ಚಿಗುರಿ ಹೆಮ್ಮರವಾಗಿ ಬೆಳೆದಂತೆ ನೀನು ಮಾಡಿದ್ದೇನು? ಗುರುವಿಗೇ ತಿರುಮಂತ್ರ ಹಾಕಿದವಳು ನೀನು. ಅಷ್ಟ ಮದಗಳಲ್ಲಿ ಯೌವನ ಮದ, ಹಣ ಮದ, ಯಶಸ್ಸಿನ ಮದ ನಿನ್ನನ್ನು  ಹಾದಿ ತಪ್ಪಿಸತೊಡಗಿದ್ದು, ನಿನ್ನ ಅರಿವಿಗೆ ಬರಲೇ ಇಲ್ಲ.

“ಮೊದಲನೆಯದಾಗಿ ನಿನಗಾಗಿ ಕಥೆಯೊಂದನ್ನು ರೆಡಿ ಮಾಡಿಕೊಟ್ಟುಕೊಂಡು ನಿನ್ನ ಕಾಲ್ ಶೀಟ್‌ ಗಾಗಿ ಮಲ್ಲಿನಾಥ್ ಪರದಾಡಿದ್ದು ನಿನಗೆ ನೆನಪಿರಬೇಕಲ್ಲವೇ….? ಸಾಕಷ್ಟು ಗೋಳಾಡಿಸಿ ಹೇಗೋ ಕಾಲ್ ಶೀಟ್‌ ಕೊಟ್ಟೆ. ಆಮೇಲೆ…..? ಒಂದಿನನಾದ್ರೂ ನೀನು ಶೂಟಿಂಗ್‌ ಗೆ ಸರಿಯಾದ ವೇಳೆಗೆ ಹೋದೆಯಾ? ಊಹ್ಞೂಂ ಇಲ್ಲವೇ ಇಲ್ಲ. ಇಡೀ ತಂಡವನ್ನು ಸತಾಯಿಸಿದ್ದೇ ಸತಾಯಿಸಿದ್ದು. ಎಲ್ಲರೂ ನಿನಗಾಗಿ ಕಾದಿದ್ದೇ ಕಾದಿದ್ದು. ಮಲ್ಲಿನಾಥರನ್ನು ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟಿದ್ದಿ.

“ನಿನ್ನ ಮೇಲಿನ ಅಭಿಮಾನಕ್ಕಾಗಿ ಮಲ್ಲಿನಾಥರು ನಿರ್ಮಾಪಕರ ಇಲ್ಲಸಲ್ಲದ ಮಾತುಗಳನ್ನು ಜೀರ್ಣಿಸಿಕೊಳ್ಳಬೇಕಾಗಿ ಬಂದಿತು. ಅದೆಷ್ಟು ನೊಂದುಕೊಂಡರೋ, ವ್ಯಥೆಪಟ್ಟರೋ, ಅದು ಅವರಿಗೇ ಗೊತ್ತು. ಅವರ ಚಡಪಡಿಕೆ ನಿನಗೆ ಅರ್ಥವಾಗಲೇ ಇಲ್ಲ. ಅವರು ಬರೀ ಸಿನಿ ನಿರ್ದೇಶಕನಂತೆ ನಿನ್ನೊಂದಿಗೆ ನಡೆದುಕೊಂಡಿರಲಿಲ್ಲ. ನಿನಗೆ ಅವರು ಗಾಡ್‌ ಫಾದರ್‌ ಮಾತ್ರವಲ್ಲ ಹಿರಿಯಣ್ಣನೂ ಆಗಿದ್ದರು.

“ಹಾಗೇನಾದರೂ ಶೋಷಣೆ ಮಾಡುವುದಾಗಿದ್ದರೆ ತಾವಾಗಿಯೇ ಕರೆದು ಮೊದಲನೇ ಸಿನಿಮಾಕ್ಕೆ ಅವಕಾಶ ಕಲ್ಪಿಸಿಕೊಡುವಾಗ ಮೊದಲು ನಿನ್ನನ್ನು ಮಂಚಕ್ಕೆ ಕರೆದು ಅಲ್ಲಿ ನೀನು ಪಾಸಾದ ಮೇಲೆ ಸಿನಿರಂಗಕ್ಕೆ ಪರಿಚಯಿಸುತ್ತಿದ್ದರು. ಆದರೆ ಅವರು ಹಾಗೇನೂ ಮಾಡಲಿಲ್ಲ. ಸಿನಿ ರಂಗದಲ್ಲೂ ತತ್ವನಿಷ್ಠೆ, ನೈತಿಕತೆಯ ಬೆಲೆಯನ್ನು ಉಳಿಸಿಕೊಂಡು ಬಂದ ಏಕೈಕ ಧೀಮಂತ ವ್ಯಕ್ತಿ ಅವರು. ನೀನು ನಟಿಸಿದ ಚಿತ್ರಗಳ ನಿರ್ಮಾಪಕರಿಗೂ ಅದೇ ಪಾಠ ಮಾಡಿದರು ಅವರು.

“ನಟಿಯರಿಗೆ ಭಾವಾಭಿನಯ ಹೀಗಿರಬೇಕು, ಬಾಡಿ ಲ್ಯಾಂಗ್ವೇಜ್‌ ಹೀಗಿರಬೇಕು ಎಂದು ತೋರಿಸುವ ನೆಪದಲ್ಲಿ ಬಹುತೇಕ ನಿರ್ದೇಶಕರು ನಟಿಯರ ದೇಹದ ಬಹುತೇಕ ಪ್ರಮುಖ ಭಾಗಗಳನ್ನು ಮುಟ್ಟಿ ತಟ್ಟಿ ನಿರ್ದೇಶಿಸುವುದು ಸಾಮಾನ್ಯವಾದುದು. ಆದರೆ ಮಲ್ಲಿನಾಥರು ನಿನ್ನೊಂದಿಗೆ ಹಾಗೆಂದೂ ಮಾಡಲಿಲ್ಲ. ನಿನ್ನ ಕೊನೆಯ ಚಿತ್ರವನ್ನು ನಿರ್ದೇಶಿಸುವಾಗ ಅವರು ತಮ್ಮೊಳಗೆ ಏನಂದುಕೊಂಡರೋ ಏನೋ? ಮುಂದೆಂದೂ ನಿನ್ನನ್ನು ಹಾಕಿಕೊಂಡು ಚಿತ್ರವನ್ನು ನಿರ್ದೇಶಿಸಬಾರದು ಎಂದುಕೊಂಡರೋ ಏನೋ? ಹಾಗೆ ಮಾಡಿದರು. ಉಂಡ ಮನೆಗೆ ಎರಡು ಬಗೆದವಳು ನೀನು. ಅವರ ನಿರ್ದೇಶನದ ಕೊನೆಯ ಚಿತ್ರಕ್ಕೂ ರಾಜ್ಯೋತ್ಸವ ಪ್ರಶಸ್ತಿಯನ್ನು ಬಾಚಿಕೊಂಡದ್ದನ್ನೂ ಮರೆತವಳು ನೀನು. ಪ್ರಶಸ್ತಿಗಳೆಲ್ಲ ನಿನ್ನ ಸ್ವಪ್ರತಿಭೆಯಿಂದಲೇ ಬಂದಿದ್ದು ಎಂದು ಅಂದುಕೊಂಡವಳು ನೀನು. ನಿನ್ನ ಪ್ರತಿಭೆಯ ಜೊತೆಗೆ ಮಲ್ಲಿನಾಥರ ಪರಿಶ್ರಮ ಇತ್ತೆಂಬುದು ನಿನ್ನ ಅರಿವಿಗೇ ಇರಲಿಲ್ಲ. ನಿನ್ನಂತಹ ಕೃತಘ್ನಳು ಯಾರೂ ಇರಲಿಕ್ಕಿಲ್ಲ.

“ಎರಡನೆಯದಾಗಿ ನಿನ್ನೊಂದಿಗೆ ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದವನು ರಾಹುಲ್‌. ನಿನ್ನಂತೆ ಅವನಿಗೆ ಅಪ್ರತಿಮ ಪ್ರತಿಭೆ ಇರದಿದ್ದರೂ ನಿರ್ದೇಶರ ಪರಿಶ್ರಮಕ್ಕೆ ನ್ಯಾಯ ಒದಗಿಸದೇ ಇರುತ್ತಿರಲಿಲ್ಲ. ನಿನ್ನ ನಟನೆಯ ಜೊತೆಗೆ ಅವನ ನಟನೆ ಮಸುಕಾಗುತ್ತಿದ್ದುದರಿಂದ ನಿನ್ನ ನಟನೆ ಢಾಳಾಗಿ ಕಾಣುತ್ತಿತ್ತು. ಹೀಗಾಗಿ ಪ್ರಶಸ್ತಿಗಳೆಲ್ಲ ನಿನ್ನ ಮುಡಿಗೇರುತ್ತಿದ್ದುದು ಗಮನಿಸಬೇಕಾದ ಅಂಶ. ರಾಹುಲ್ ‌ನಿಂದಲೂ ನೀನು ನಟನೆಯ ಬಗ್ಗೆ ಬಹಳಷ್ಟು ಕಲಿತಿದ್ದೂ ಇದೆ. ಅದೆಲ್ಲವನ್ನೂ ನೀನು ಚಿತ್ರರಂಗದಲ್ಲಿ ಬೆಳೆದಂತೆಲ್ಲ ಮರೆತದ್ದೂ ಇದೆ. ಸೌಮ್ಯಾ ಸ್ವಭಾವದ ಮಿತಭಾಷಿ ವಿನಯವಂತ ರಾಹುಲ್ ‌ನನ್ನು ನೀನು ಮೊದ ಮೊದಲು ತುಂಬಾ ಇಷ್ಟಪಟ್ಟಿದ್ದೂ ಉಂಟು. ಅರಿತೋ, ಅರಿಯದೆಯೋ ಆರಾಧಿಸಿದ್ದೂ ಉಂಟು ಅಲ್ಲವೇ?

“ನೀನು ಅವನೊಂದಿಗೆ ತಂಬಾ ಸಲುಗೆಯಿಂದ ಆತ್ಮೀಯವಾಗಿ ವರ್ತಿಸುತ್ತಿದ್ದುದನ್ನು ಅವನು ತಪ್ಪಾಗಿ ಭಾವಿಸಿದನೇನೋ? ಅದನ್ನು ಅವನು ನಿಜವಾದ ಪ್ರೀತಿ ಎಂದೇ ಗ್ರಹಿಸಿದ್ದೂ ಉಂಟು. ಅವನೊಂದಿಗೆ ನಾಲ್ಕೈದು ಚಿತ್ರಗಳಲ್ಲಿ ನಟಿಸುವಷ್ಟರಲ್ಲಿ ನೀನು ಅವನೊಂದಿಗೆ ಪ್ರಣಯ ಸನ್ನಿವೇಶಗಳಲ್ಲಿ ಇನ್ನೂ ತುಂಬಾ ಫ್ರೀಯಾಗಿ ನಟಿಸಲು ಮುಂದಾಗಿದ್ದಿ.

“ನಿನ್ನೊಂದಿಗೆ ನಾಲ್ಕನೆಯ ಚಿತ್ರದಲ್ಲಿ ನಟಿಸುತ್ತಿದ್ದಾಗ ರಾಹುಲ್ ‌ತನ್ನ ಮನದಿಂಗಿತವನ್ನು ಬಿಚ್ಚಿಟ್ಟಾಗ ಅವನಿಗೆ ಹೇಳಿದ್ದೇನು ಅಂತ ಗೊತ್ತಾ….? `ಅಂತಹದ್ದನ್ನೆಲ್ಲ ಮನಸಲ್ಲಿ ಇಟ್ಟುಕೊಂಡು ಮಂಡಿಗೆ ತಿನ್ನಬೇಡಿ. ಏನೋ ಆತ್ಮೀಯತೆಯಿಂದ ವರ್ತಿಸಿದರೆ ಅದಕ್ಕೆ  ಪ್ರೀತಿ, ಪ್ರೇಮದ ಬಣ್ಣ ಹಚ್ಚುವುದೇ? ನೋ ನೋ…. ಅದು ಸಾಧ್ಯವಿಲ್ಲ. ಸೂಪರ್‌ ಸ್ಟಾರ್‌ ಗಿರಿಗೆ ಏರಿದವಳು ನಾನು. ನನಗೂ, ನಿಮಗೂ ಸಾಮ್ಯತೆ ಇಲ್ಲವೇ ಇಲ್ಲ. ನೀವು ಚಿತ್ರರಂಗದಲ್ಲಿ ಹತ್ತು ವರ್ಷ ನಟಿಸಿದ್ದರೂ ನನ್ನ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ. ಇನ್ನೊಂದು ಸಾರಿ ಇಂತಹ ಮಾತನ್ನಾಡಬೇಡಿರಿ,’ ಎಂದು ತುಂಬಾ ಗರಂ ಆಗಿ ಹೇಳಿ ಅವನ ತೇಜೋವಧೆ ಮಾಡಿದ್ದಿ.

“ಆದರೂ ರಾಹುಲ್ ‌ನಿನ್ನ ಬಳಿ, `ಲಾವಣ್ಯಾ, ನಿಜ ಹೇಳಿ, ನೀವು ನನ್ನನ್ನು ಪ್ರೀತಿಸಲಿಲ್ಲವೇ…..? ದಾಂಪತ್ಯ ಜೀವನಕ್ಕೂ ಸ್ಟಾರ್ ಗಿರಿಗೂ ಸಂಬಂಧವೇ ಇಲ್ಲ. ಹೃದಯ ಹೃದಯಗಳು ಬೆಸೆದು ಒಂದಾದರೆ ಉಳಿದವುಗಳೆಲ್ಲ ನಗಣ್ಯ ಎಂದು ನಾನಂದುಕೊಂಡಿದ್ದೇನೆ. ಸರಿಯಾಗಿ ಯೋಚಿಸಿ ನಿಧಾನವಾಗಿ ನಿಮ್ಮ ಅಭಿಪ್ರಾಯ ತಿಳಿಸಿ. ಈಗಲೂ ಕಾಲ ಮಿಂಚಿಲ್ಲ,’ ಎಂದು ಬಹಳ ನಯವಾಗಿ ವಿನಂತಿಸಿಕೊಂಡಿದ್ದ.

“ಅದಕ್ಕೆ ನೀನು, `ಇಲ್ಲವಲ್ಲ. ನಾನೆಂದಾದರೂ ಹಾಗೆ ಹೇಳಿದ್ದಿದೆಯೇ….? ಸಾಧ್ಯವೇ ಇಲ್ಲ. ಮುಂದೆ ಈ ಪ್ರೀತಿ, ಪ್ರೇಮದ ಬಗ್ಗೆ ಮಾತು ಬೇಡವೇ ಬೇಡ. ಇಲ್ಲಿಗೇ ಈ ವಿಷಯ ಕೊನೆಗೊಳ್ಳಲಿ,’ ಎಂದು ನಿಷ್ಠೂರವಾಗಿ ಹೇಳಿ ಅವನ ಬಾಯಿಯನ್ನು ಮುಚ್ಚಿಸಿದ್ದಿ. ಪಾಪ ಅವನು ಹಾಗೇ ಮೌನಿಯಾದ ಅಲ್ವೇ…..?

“ಮೂರನೆಯದಾಗಿ, ನೀನು ಗೋಳು ಹೊಯ್ಕೊಂಡಿದ್ದು ಅಂತಿಂಥ ವ್ಯಕ್ತಿಯನ್ನಲ್ಲ. ಸೂಪರ್‌ ಸ್ಟಾರ್‌ ಹೇಮಂತ್‌ ನನ್ನೂ ನೀನು ಬಿಡಲಿಲ್ಲ. ವಯಸ್ಸು, ಅಭಿನಯದಲ್ಲಿ ನಿನಗಿಂತಲೂ ತುಂಬಾ ತುಂಬಾ ಸೀನಿಯರ್‌ ಆಗಿದ್ದ ಅವರ ಜೊತೆಗೆ ನಟಿಸಿದ ಮೊದಲ ನಾಲ್ಕು ಚಿತ್ರಗಳ ಸಮಯದಲ್ಲಿ ನೀನು ಅವರಿಗೆ ತುಂಬಾ ವಿಧೇಯಳಾಗಿ ವರ್ತಿಸುತ್ತಿದ್ದೆ. ಮುಂದೆ ಮಲ್ಲಿನಾಥರನ್ನು ಗೋಳಾಡಿಸಿದಂತೆ ಹೇಮಂತ್‌ ರನ್ನೂ ತುಂಬಾ ಸತಾಯಿಸಿದಿ.

“ಸರಿಯಾದ ಸಮಯಕ್ಕೆ ನೀನು ಶೂಟಿಂಗ್‌ ಗೆ ಹಾಜರಾಗದೇ ಇದ್ದುದರಿಂದ ಅದೆಷ್ಟೋ ಸಲ ಶೂಟಿಂಗ್‌ ನ್ನು ಕ್ಯಾನ್ಸಲ್ ಮಾಡಬೇಕಾಯಿತು. ಹೇಮಂತ್‌ ಚಿತ್ರದ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ಇತರ ತಂತ್ರಜ್ಞರೆಲ್ಲರ ಜೊತೆಗೆ ನಿನ್ನ ಬರುವಿಕೆಗಾಗಿ ಕಾದು ಕಾದು ಬೇಸರಪಟ್ಟುಕೊಂಡಿದ್ದಿದೆ. ಅವರಿಗೆ ಎಷ್ಟೇ ಅವಮಾನ ಮಾಡಿದರೂ ಕೋಪಿಸಿಕೊಳ್ಳದೇ ಪಂಕ್ಚುಯಾಲಿಟಿಯ ಬಗ್ಗೆ ನಿನಗೆ ಉಪದೇಶ ಮಾಡುತ್ತಿದ್ದರು. ಆದರೆ ನೀನು ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಹೀಗಾಗಿ ಎರಡು ಪ್ರತಿಭೆಗಳು ಮುಂದೆ ಒಂದೇ ಚಿತ್ರದಲ್ಲಿ ಜೊತೆಯಾಗಿ ನಟಿಸಲೇ ಇಲ್ಲ. ನಿನ್ನ ಸ್ವಭಾವ ತಿಳಿದುಕೊಂಡಿದ್ದ ಯಾವ ನಿರ್ಮಾಪಕನೂ ನಿನ್ನನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂದು ಇಷ್ಟಪಡಲಿಲ್ಲ.

“ನಾಲ್ಕನೆಯದಾಗಿ ನೀನು ಶಿಶಿರನೊಂದಿಗೆ ನಟಿಸಲು ಶುರು ಮಾಡಿದಿ. ಅಂದಿನಿಂದ ರಾಹುಲ್ ‌ನ ಮೇಲಿದ್ದ ನಿನ್ನ ಒಲವಿನ ಹರಿವು ಶಿಶಿರನ ಕಡೆಗೆ ಹರಿದಿತ್ತು. ನಿಜವಾಗಿಯೂ ನೀನು ಒಂದು ಕಾಲದಲ್ಲಿ ರಾಹುಲ್ ‌ನನ್ನು ಮನಸಾರೆ ಮೆಚ್ಚಿಕೊಂಡು ಪ್ರೀತಿಸಿದ್ದು ಕಟು ಸತ್ಯವೇ. ಅಂದು ಶಿಶಿರನೊಂದಿಗೆ ಮಡಿಕೇರಿಯಲ್ಲಿ ಹೊರಾಂಗಣ ಚಿತ್ರೀಕರಣದಲ್ಲಿದ್ದಾಗ, ಹಾಡಿನ ಶೂಟಿಂಗ್‌ ನಡೆದಿತ್ತು. ಡ್ಯೂಯೆಟ್ ಹಾಡುವಾಗ ನಾಯಕಿ ಒಂದು ಕ್ಷಣ ನಾಯಕನನ್ನು ಬಲವಾಗಿ ತಬ್ಬಿಕೊಂಡು ಸಂಭ್ರಮಿಸುವ ದೃಶ್ಯವಿತ್ತು. ಆಗ ನೀನು ಮಾಡಿದ್ದೇನು…..? ಶಿಶಿರನನ್ನು ಬಲವಾಗಿ ತಬ್ಬಿಕೊಂಡು ನೀನು ಸಂಭ್ರಮಿಸಿದ್ದು ತುಸು ಹೊತ್ತಲ್ಲ, ಬಹಳ ಹೊತ್ತಿನವರೆಗೆ.

“ಅನನ್ನು ತಬ್ಬಿಕೊಂಡು ಸಂಭ್ರಮಿಸಿದ್ದಲ್ಲದೇ, `ಶಿಶಿರ್‌, ಐ ಲವ್ ಯೂ ಸೋ ಮಚ್‌….’ ಎಂದು ಅವನೆದೆಯಲ್ಲಿ ಉಸುರಿದ್ದೂ ಇದೆ. ಛಾಯಾಗ್ರಾಹಕ ಮತ್ತು ನಿರ್ದೇಶಕ ದೂರದಲ್ಲಿ ಇದ್ದುದರಿಂದ ನಿನ್ನ ಮಾತುಗಳು ಅವರ ಕಿವಿಗೆ ಬೀಳಲಿಲ್ಲ ಅಷ್ಟೇ. ಕೊನೆಗೆ ಕಟ್ ಕಟ್‌ ಎಂದು ನಿರ್ದೇಶಕ ಜೋರಾದ ಧ್ವನಿಯಲ್ಲಿ ಹೇಳಿದಾಗಲೇ ನೀನು ನಿನ್ನ ಹಿಡಿತನ್ನು ಸಡಿಲಿಸಿದ್ದು. ಶಿಶಿರ ಅಚ್ಚರಿಯಿಂದ ದೂರ ಸರಿದು ನಿಂತಿದ್ದ.

“ಅಂದು ರಾತ್ರಿ ಮಡಿಕೇರಿಯ ಪ್ರವಾಸಿ ಮಂದಿರದಲ್ಲಿ ನೀನು ಶಿಶಿರನ ಕೋಣೆಗೆ ಹೋಗಿ ನಿನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಾಗ ನಡೆದದ್ದು.”

“ಶಿಶಿರ್‌, ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ…..”

“ಸಾರಿ ಲಾವಣ್ಯಾ, ನಾನಂತೂ ನಿನ್ನನ್ನು ಪ್ರೀತಿಸುತ್ತಿಲ್ಲ. ಚಿತ್ರರಂಗದಲ್ಲಿರುವ ಹುಡುಗಿಯನ್ನು ಮದುವೆಯಾಗಲು ನನಗಿಷ್ಟವಿಲ್ಲ. ಅದಕ್ಕಾಗಿ ನಾನು ಈಗಾಗಲೇ ನನಗಿಷ್ಟವಾಗಿರುವ ಒಂದು ಹುಡುಗಿಯನ್ನು ಆರಿಸಿಕೊಂಡಿರುವೆ. ಲಾವಣ್ಯಾ, ರಾಹುಲ್ ‌ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದ. ಅವನ ಪ್ರೀತಿಯನ್ನು ಒಪ್ಪಿಕೊಳ್ಳದೇ ನೀನು ಬಹುದೊಡ್ಡ ತಪ್ಪು ಮಾಡಿಬಿಟ್ಟೆ,” ಶಿಶಿರ್‌ ತುಂಬಾ ನಿಷ್ಠೂರವಾಗಿ ತಿಳಿಸಿದ್ದ.

“ನಿನ್ನ ಆಸೆಯ ಬಲೂನು ಪಟ್ಟೆಂದು ಒಡೆದಿತ್ತು. ಅವನು ನಿನಗೆ ಮುಂದೆ ಮಾತಾಡಲಿಕ್ಕೆ ಅವಕಾಶವನ್ನೇ ಕೊಡಲಿಲ್ಲ. ಅಂದಿನಿಂದ `ನಾನು ಜೀವನದಲ್ಲಿ ಸೋತುಹೋದೆ’ ಎಂಬ ಭಾವ ನಿನ್ನ ಮನಸ್ಸನ್ನು ತುಂಬತೊಡಗಿತು. ನಿನ್ನ ಸಿಡುಕುತನ, ಹಠಮಾರಿತನ, ಪೊಗರು ನಿನ್ನ ವೃತ್ತಿ ಜೀವನಕ್ಕೆ ಮುಳುಗವಾತೊಡಗಿದವು. ಅವಕಾಶಗಳು ಕೈತಪ್ಪಿ ಹೋಗತೊಡಗಿದವು. ಕಾಲ್ ಶೀಟ್‌ ಗಾಗಿ ನಿನ್ನನ್ನು ಹುಡುಕಿಕೊಂಡು ಬರುತ್ತಿದ್ದ ನಿರ್ಮಾಪಕರು, `ಸಿಡುಕಿನ, ಸೊಪ್ಪಿನ ಮುದ್ದೆಯ ಆ ನಟಿ ಬೇಡವೇ ಬೇಡ,’ ಎಂದು ಅಂದುಕೊಳ್ಳುತ್ತಾ ದೂರವೇ ಉಳಿದರು.

“ಗಾಂಧೀನಗರದಲ್ಲಿ ನಿನಗೆ ಬೇಡಿಕೆ ಕಡಿಮೆಯಾಯಿತು. ಕೈಯಲ್ಲಿದ್ದ ಒಂದೆರಡು ಚಿತ್ರಗಳನ್ನು ಬಿಟ್ಟರೆ ಹೊಸ ಚಿತ್ರಗಳಿಗೆ ಆಫರ್ ಬರಲಿಲ್ಲ. ಸುಮಾರು ಹತ್ತು ವರ್ಷಗಳವರೆಗೆ ಕನ್ನಡ ಚಿತ್ರರಂಗದಲ್ಲಿ ಸಾಮ್ರಾಜ್ಞಿಯಾಗಿ ಮೆರೆದ ಲಾವಣ್ಯಾಳ ಹೊಳಪು ಮಸುಕಾಗತೊಡಗಿತು. ಎಲ್ಲದಕ್ಕೂ ನಿನ್ನ ನಡತೆಯೇ ಕಾರಣ. ಮೇಲೇರಿದ್ದ ನಿನ್ನ ಯಶಸ್ಸಿನ ಗ್ರಾಫ್‌ ನೆಲಕಚ್ಚತೊಡಗಿತು. ಒಂದು ವಿಧದಲ್ಲಿ ನೀನು ಏಕಾಂಗಿಯಾಗಿಬಿಟ್ಟೆ. ಏಕಾಂಗಿತನ, ಖಿನ್ನತೆ ನಿನ್ನ ಮನಸ್ಸನ್ನು ಆರಿಸತೊಡಗಿದ. ಕೆಲವೊಂದು ಸಲ ಅಸಹಾಯಕತೆಯಲ್ಲಿ ಅರೆಹುಚ್ಚಿಯಂತೆ ಮಾತಾಡಲು ಮುಂದಾಗಿದ್ದಿ. ನಿದ್ರೆ ಮಾತ್ರೆ ಇಲ್ಲದೇ ನಿದ್ರಿಸಲು ನೀನು ಅಶಕ್ತಳಾಗಿದ್ದಿ. ಗುಂಡಿನ ಗಮ್ಮತ್ತೂ ನಿನ್ನ ಸಂಗಾತಿಯಾಗತೊಡಗಿತು.

“ಅಂದು ನಿನ್ನ ಕೈಯಲ್ಲಿದ್ದ ಕೊನೆಯ ಚಿತ್ರದ ಶೂಟಿಂಗ್‌ ಆಗುಂಬೆ ಬೆಟ್ಟದಲ್ಲಿ ನಡೆದಿತ್ತು. ನಿನ್ನ ಅಭಿನಯ ಹಳಿ ತಪ್ಪಿದ ರೈಲಿನಂತಾಗಿತ್ತು. ಒಂದೊಂದು ದೃಶ್ಯ ಅಂತಿಮವಾಗುವುದಕ್ಕೆ ನಿರ್ದೇಶಕರು ಹಲವಾರು ಶಾಟ್‌ ಗಳನ್ನು ತೆಗೆದುಕೊಳ್ಳಬೇಕಾಯಿತು. ಬಹಳಷ್ಟು ಟೇಕ್‌ ಗಳ ನಂತರ ನಿರ್ದೇಶಕರು ಒಲ್ಲದ ಮನಸ್ಸಿನಿಂದ ಶಾಟ್‌ ಓ.ಕೆ. ಮಾಡುತ್ತಿದ್ದರಷ್ಟೇ…..”

“ಹೌದೇ….? ಹಾಗಾದರೆ ಇಷ್ಟೊತ್ತಿನವರೆಗೆ ನನ್ನ ಪೂರ್ವಾಪರ ಹೇಳಿದ ನೀನ್ಯಾರು…..?”

“ನಾನಾ…..? ಹ್ಹ…. ಹ್ಹ…..ಹ್ಹಾ……! ನಾನಾ…..? ನಾನೇ ನಿನ್ನ ಅಂತರಾತ್ಮ….. ! ಹ್ಹ ….. ಹ್ಹ….. ಹ್ಹಾ…..!”

ಅಂದು ರಾತ್ರಿ ಅದೇನನ್ನಿಸಿತೋ ಏನೋ? ಊಟಕ್ಕೆ ಮೊದಲು ಮಿತಿಮೀರಿದ ಡ್ರಿಂಕ್ಸ್ ಸೇವಿಸಿದ ಲಾವಣ್ಯಾ, ಕುಡಿತದ ನಶೆಯಲ್ಲಿ ಬಾಟಲಿಯಲ್ಲಿದ್ದ ನಿದ್ದೆ ಮಾತ್ರೆಗಳೆಲ್ಲವನ್ನೂ ಸೇವಿಸಿದ್ದಳು. ಮರುದಿನ ಅವಳಿಗೆ ಸೂರ್ಯೋದಯವಾಗಲಿಲ್ಲ.

ಅರಳಿ ಘಮಘಮಿಸುತ್ತಿದ್ದ ಲಾವಣ್ಯಾ ಎಂಬ ಮಲ್ಲಿಗೆ ಬಳ್ಳಿ ಹಾಗೆ ಕಮರಿ ಹೋಯಿತು. ಸ್ವಯಂಕೃತ ಅಪರಾಧದಿಂದ ಪ್ರತಿಭಾನ್ವಿತ ನಟಿಗೆ ಚಿತ್ರರಂಗದ ನಂಟು ಶಾಶ್ವತವಾಗಿ ಕಡಿದು ಹೋಗಿತ್ತು…..

ಸ್ವಯಂಕೃತ ಅಪರಾಧದಿಂದ ಪ್ರತಿಭಾನ್ವಿತ ನಟಿಗೆ ಚಿತ್ರರಂಗದ ನಂಟು ಶಾಶ್ವತವಾಗಿ ಕಡಿದು ಹೋಗಿತ್ತು…..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ