ತಾನು ಮಾಡಿದ್ದೆಲ್ಲಾ ಸರಿ ಎಂಬ ಹಠಮಾರಿ ಸ್ವಭಾವದ ಸಂಯುಕ್ತಾ, ಕಂಡೂ ಕೇಳರಿಯದ ಯಾವುದೋ ಅಪರಿಚಿತನನ್ನು ನಂಬಿಕೊಂಡು, ಮನೆಯವರ ವಿರೋಧದ ನಡುವೆ, ಅವನನ್ನೇ ವರಿಸಿ ವಿದೇಶಕ್ಕೆ ಹಾರಿದಳು. ಮುಂದೆ ಅವಳ ಭವಿಷ್ಯ…….?
ಸಂಯುಕ್ತಾ ಬಹಳ ಹುಡುಗಾಟ ಸ್ವಭಾವದ ಹುಡುಗಿ. ಈ ಸಾಮಾಜಿಕ ಜಾಲತಾಣದ ಮಾಯಾಜಾಲಕ್ಕೆ ಸಂಪೂರ್ಣವಾಗಿ ಮಾರುಹೋಗಿದ್ದಳು. ಆಗ ತಾನೇ ಪದವಿ ಶಿಕ್ಷಣವನ್ನು ಮುಗಿಸಿದ್ದಳು. ಅವಳ ಮನೆಯವರು ಅವಳಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಅವಳಿಗೂ ಸಮ್ಮತಿ ಇತ್ತು. ಆದರೆ ಹೆತ್ತವರು ಯಾವ ಹುಡುಗನನ್ನು ತೋರಿಸಿದರೂ ಸಂಯಕ್ತಾ ಒಪ್ಪುತ್ತಿರಲಿಲ್ಲ. ಅವಳ ಮದುವೆಯ ಕಲ್ಪನೆಯೇ ಬೇರೆಯಾಗಿತ್ತು. ಬಹಳಷ್ಟು ಸಮಯ ಫೇಸ್ ಬುಕ್, ಇನ್ ಸ್ಟ್ರಾಗ್ರಾಮ್ ನಲ್ಲಿಯೇ ಕಳೆಯುತ್ತಿದ್ದಳು.
ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕುತ್ತಾ ತನಗೆ ಬರುವ ಪ್ರತಿಕ್ರಿಯೆಗಳನ್ನು ಎಣಿಸುತ್ತಾ ದಿನವಿಡೀ ಅದರಲ್ಲಿ ಮಗ್ನಳಾಗಿರುತ್ತಿದ್ದಳು. ಗೆಳತಿಯರು ಹಾಕುವ ಫೋಟೋಗಳನ್ನು ನೋಡುತ್ತಾ ತಾನೂ ಕೂಡ ಇಂತಹ ಜಾಗಕ್ಕೆ ಹೋಗಿ ಫೋಟೋ ತೆಗೆಸಿಕೊಳ್ಳಬೇಕು, ಫಾರಿನ್ ಟ್ರಿಪ್ ಗೆ ಹೊರಡಬೇಕು, ವಿದೇಶದಲ್ಲಿರುವ ಹುಡುಗನನ್ನೇ ಮದುವೆಯಾಗಬೇಕು. ವಾರಾಂತ್ಯದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಫೋಟೋ ತೆಗೆದು ಜಾಲತಾಣದಲ್ಲಿ ಹಾಕುತ್ತಾ ಮೆರೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಸಾಮಾಜಿಕ ಜಾಲತಾಣಗಳು ಇಲ್ಲದೇ ಬದುಕಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಮಾರುಹೋಗಿದ್ದಳು.
ಹೀಗಿರುವಾಗ ಫೇಸ್ ಬುಕ್ ನಲ್ಲಿ ಸಂತೋಷ್ ಎಂಬ ಹುಡುಗನ ಪರಿಚಯವಾಯಿತು. ಅವನ ರಂಗು ರಂಗಿನ ಮಾತಿಗೆ ಮರುಳಾದ ಸಂಯುಕ್ತಾ ಅವನನ್ನು ಪ್ರೀತಿಸತೊಡಗಿದಳು. ಅವನು ಹೊರದೇಶದಲ್ಲಿ ವಾಸವಾಗಿದ್ದ. ಇವಳಿಗೂ ಹೊರದೇಶದ ವ್ಯಾಮೋಹ ಹೆಚ್ಚಾಗಿದ್ದರಿಂದ ಅವನಿಗೆ ಬೇಗ ಮನಸೋತಳು. ಮನೆಯಲ್ಲಿ ತಾಯಿ ತಂದೆ ಬಳಿ ಅವನನ್ನೇ ಮದುವೆ ಆಗ್ತೀನಿ ಎಂದು ಹಠ ಹಿಡಿದಳು. ಅವಳ ಮನೆಯವರು ಇದಕ್ಕೆ ಸ್ವಲ್ಪ ಒಪ್ಪಿಗೆ ಕೊಡಲಿಲ್ಲ. ಬೇರೆ ದೇಶ, ಕುಲ ಗೋತ್ರ ಒಂದೂ ಗೊತ್ತಿಲ್ಲ, ಅವನ ಪೋಷಕರು ಬಂಧು ಬಳಗದವರ ವಿವರಗಳೂ ತಿಳಿಯುತ್ತಿಲ್ಲ. ಈ ಮದುವೆ ಬೇಡವೆಂದು ಪರಿಪರಿಯಾಗಿ ಹೇಳಿದರೂ ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಮ ದಾನ ಭೇದ ದಂಡೋಪಾಯಗಳನ್ನು ಪ್ರಯೋಗಿಸಿದರೂ ಅವಳು ಪಟ್ಟು ಸಡಿಲಿಸಲಿಲ್ಲ. ಅವಳ ಸ್ನೇಹಿತೆಯರಿಂದ, ಪ್ರೀತಿ ಪಾತ್ರರಿಂದ ಹೇಳಿಸಿ ನೋಡಿದರು. ಅವಳು ಯಾವುದಕ್ಕೂ ಬಗ್ಗಲಿಲ್ಲ. ಅವಳ ತಾಯಿ ಮಗಳಿಗೆ ಅಕ್ಕರೆ ಪ್ರೀತಿಯಿಂದ, “ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ಹತ್ತಿರ ಹೋದರೆ ಅದರ ನಿಜಸ್ವರೂಪ ತಿಳಿಯುವುದು. ನಿನಗೆ ತಿಳಿವಳಿಕೆ ಕಡಿಮೆ, ಬದುಕಿನ ಅರಿವಿಲ್ಲ. ನಿನ್ನ ನಿರ್ಧಾರ ಬದಲಿಸಿಕೊ,” ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವಳು ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.
ಸಂತೋಷ್ ಕೆಲಸದ ನಿಮಿತ್ತ ಭಾರತಕ್ಕೆ ಬಂದ ಸಂದರ್ಭದಲ್ಲಿ ಇಬ್ಬರೂ ರಿಜಿಸ್ಟರ್ ಮದುವೆಯಾದರು. ಇವರಿಬ್ಬರ ಮನೆಯಿಂದ ಯಾರೂ ಉಪಸ್ಥಿತರಿರಲಿಲ್ಲ. ಮದುವೆಯಾಗಿ ಸಂಯುಕ್ತಾ ಸಂತೋಷ್ ನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಮಗಳ ನಡವಳಿಕೆಯಿಂದ ಮನನೊಂದ ಮನೆಯವರು ಈ ಮದುವೆಗೆ ತಮ್ಮ ಒಪ್ಪಿಗೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಿಂದ ಹೋಟೆಲ್ ನಲ್ಲಿ ಉಳಿದರು.
ವೀಸಾ ಪ್ರಕ್ರಿಯೆ ಮುಗಿದ ಬಳಿಕ ಸಂಯುಕ್ತಾ ಗಂಡನ ಜೊತೆ ವಿದೇಶಕ್ಕೆ ಹಾರಿದಳು. ಹೆತ್ತವರು, ಮನೆಯವರ ಜೊತೆ ಸಂಪರ್ಕ ಕಡಿದುಕೊಂಡಳು. ವಿದೇಶಕ್ಕೆ ಹೋಗಿ ಒಂದಾರು ತಿಂಗಳು ಎಲ್ಲ ಸರಿಯಾಗಿತ್ತು. ನಂತರ ಸಂಯುಕ್ತಾಳಿಗೆ ಸಂತೋಷನ ಒಂದೊಂದೇ ನಿಜರೂಪ ತಿಳಿಯತೊಡಗಿತು. ಅವನು ದುಶ್ಚಟಗಳಿಗೆ ದಾಸನಾಗಿದ್ದ. ಅವನ ನಡವಳಿಕೆ ಸರಿ ಇರಲಿಲ್ಲ. ಅವನು ಪೋಷಕರೊಂದಿಗೆ ಜಗಳವಾಡಿ ದೂರವಾಗಿದ್ದ. ಹತ್ತಿರದಲ್ಲಿ ಸ್ನೇಹಿತರು ಯಾರೂ ಇರಲಿಲ್ಲ. ಹೆತ್ತವರ ಬಗ್ಗೆ ವಿಚಾರಿಸಿದಾಗೆಲ್ಲಾ ಸಂಯುಕ್ತಾಳನ್ನು ಚೆನ್ನಾಗಿ ಹೊಡೆಯುತ್ತಿದ್ದ. ಎಲ್ಲಿ ತನ್ನ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತಾಳೋ ಎಂದು ಅವಳ ಪಾಸ್ ಪೋರ್ಟ್ ಕಸಿದುಕೊಂಡು, ಅವಳ ಕೈಗೆ ಮೊಬೈಲ್ ಸಿಗದಂತೆ ಮಾಡಿದ್ದ. ಮನೆಯಲ್ಲಿ ಅವಳ ಪರಿಸ್ಥಿತಿ ಖೈದಿಯಂತಾಗಿತ್ತು. ಮೊಬೈಲ್ ಬಳಸಿ ಸಾಮಾಜಿಕ ಜಾಲತಾಣದ ಮೂಲಕ ತನ್ನ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎನ್ನುವ ಹೆದರಿಕೆ ಅವನಿಗಿತ್ತು. ಆದ್ದರಿಂದ ಅವಳಿಂದ ಮೊಬೈಲ್ ಕಸಿದುಕೊಂಡಿದ್ದ.
ದಿನ ಕಳೆದಂತೆ ಅವಳಿಗೆ ನೀಡುತ್ತಿದ್ದ ಹಿಂಸೆ ಹೆಚ್ಚುತ್ತಾ ಹೆಚ್ಚುತ್ತಾ ಸಂಯುಕ್ತಾಳ ಪರಿಸ್ಥಿತಿ ಹದಗೆಡುತ್ತಾ ಹೋಯಿತು. ಇವನ ಬಣ್ಣದ ಮಾತಿಗೆ ಮರುಳಾಗಿ ಚಿನ್ನದಂತಹ ತನ್ನ ಅಮ್ಮ ಅಪ್ಪನನ್ನು ಬಿಟ್ಟು ಬಂದು ತಪ್ಪು ಮಾಡಿದ್ದರ ಫಲ ತಾನು ಉಣ್ಣುತ್ತಿರುವುದಾಗಿ ಅವಳಿಗೆ ಅನಿಸತೊಡಗಿತು. ತನ್ನ ತಪ್ಪಿಗೆ ಅವಳಿಗೆ ಪಶ್ಚಾತ್ತಾಪ ಉಂಟಾಯಿತು. ಅವಳಿಗೆ ಅಕ್ಕಪಕ್ಕದಲ್ಲಿ ಯಾರ ಪರಿಚಯವೂ ಇರಲಿಲ್ಲ. ಜೊತೆಗೆ ಅಲ್ಲಿಯ ಪ್ರಾದೇಶಿಕ ಭಾಷೆಯೂ ಗೊತ್ತಿರಲಿಲ್ಲ.
ಒಂದು ದಿನ ಅವರ ಜಗಳ ತಾರಕಕ್ಕೆ ಹೋಗಿ ಅವಳ ಕೈಗೆ ಬೆಂಕಿ ತಾಗಿಸಿದ. ಅವಳು ನೋವು ತಾಳಲಾರದೇ ಅಲ್ಲಿದ್ದ ಹೂವಿನ ಕುಂಡವನ್ನು ಅವನ ತಲೆಗೆ ಹೊಡೆದಳು. ಅವನಿಗೆ ಬಿದ್ದ ಪೆಟ್ಟಿಗೆ ಅವನು ಮೂರ್ಛೆ ಹೋದ. ಇದೇ ಸಮಯ ಸಾಧಿಸಿ ಅವಳು ತನ್ನ ಮೊಬೈಲ್ ನ್ನು ಅವನಿಂದ ಕಿತ್ತುಕೊಂಡು ಸ್ಥಳೀಯ ಹೆಲ್ಪ್ ಲೈನ್ ಸಹಾಯವಾಣಿಯ ನಂಬರ್ ಹುಡುಕಿ ಭಾರತೀಯ ದೂತವಾಸವನ್ನು ಸಂಪರ್ಕಿಸಿದಳು. ಇವಳ ದೂರಿನ ಆಧಾರದ ಮೇಲೆ ಸಂತೋಷ್ ನನ್ನು ಬಂಧಿಸಲಾಯಿತು. ಅವಳು ಮಾತೃ ದೇಶಕ್ಕೆ ವಾಪಸ್ಸಾದಳು.
ತನ್ನ ಹೆತ್ತವರ ಪಾದಕ್ಕೆ ಬಿದ್ದು, “ದೂರದ ಬೆಟ್ಟ ನುಣ್ಣಗೆ ಎಂದು ನೀವು ಹೇಳಿದ್ದನ್ನು ನಾನು ಕೇಳಲಿಲ್ಲ. ನನ್ನಿಂದ ಬಹಳ ದೊಡ್ಡ ತಪ್ಪಾಯಿತು. ನಿಮ್ಮ ಪ್ರೀತಿ ಕಾಳಜಿಗೆ ನಾನು ಅಪಮಾನ ಮಾಡಿ ಹೋದೆ, ಈಗ ಸರಿಯಾದ ಫಲವನ್ನೇ ಉಂಡಿದ್ದೇನೆ. ನನ್ನ ಮಹಾಪರಾಧವನ್ನು ಮನ್ನಿಸಿ,” ಎಂದು ಬೇಡಿಕೊಂಡಳು.
ಇವಳ ಸ್ಥಿತಿ ಕಂಡು ಪೋಷಕರಿಗೆ ಮನಸ್ಸು ತಡೆಯಲಾಗಲಿಲ್ಲ. ಪಶ್ಚಾತ್ತಾಪದಿಂದ ನೊಂದಿರುವ ಮಗಳು ಇನ್ಯಾವತ್ತೂ ತಪ್ಪು ಹೆಜ್ಜೆ ಇಡುವುದಿಲ್ಲ ಎಂಬುದನ್ನು ಮನಗಂಡು, ಅವಳನ್ನು ಸಂತೈಸಿ ಆದರಿಸಿದರು. ನಡೆದಿದ್ದನ್ನು ಕೆಟ್ಟ ಕನಸೆಂದು ಮರೆತು ಹೊಸ ಜೀವನದೆಡೆಗೆ ದೃಢ ಹೆಜ್ಜೆಯನ್ನು ಇಡುವಂತೆ ಧೈರ್ಯ ತುಂಬಿದರು.
ಬಹಳ ದಿನಗಳ ನಂತರ ಸಂಯುಕ್ತಾಳ ತುಟಿಯಂಚಿನಲ್ಲಿ ಸಮಾಧಾನದ ನಗೆಯೊಂದು ಮಿಂಚಿತು!





