ತಾನಾಗಿ ಅನಿರುದ್ಧ್ ಪ್ರೇಮಿಸಿ ಬಯಸಿದ ಹುಡುಗಿಯರು ಅವನ ಕೈಗೆಟುಕದ ಗಗನಕುಸುಮಗಳಾಗಿದ್ದರು. ಕೊನೆಗೆ ಅವನು ಯಾರನ್ನು ಕೈಹಿಡಿಯುವಂತಾಯಿತು…..?
ಅನಿರುದ್ಧ್ ಸಾನ್ವಿ ಹೋದ ದಾರಿಯನ್ನೇ ನೋಡುತ್ತಾ ಕುಳಿತ. `ಇದೇನು ಹೇಳಿ ಹೋದಳು….? ಅವಳು ತನ್ನ ಪ್ರೀತಿ ಬಾಲಿಶ ಎಂದುಬಿಟ್ಟಳಲ್ಲ. ನನಗಿಂತ ಇವಳ್ಯಾವ ಮಹಾ ದೊಡ್ಡವಳು…? ಇವಳನ್ನು ಒಲಿಸಿಕೊಳ್ಳಲು ನಾನು ಕಡಿಮೆ ಪ್ರಯತ್ನ ಪಟ್ಟಿದ್ದೇನೆಯೇ…? ಇಷ್ಟು ದಿನ ಇಲ್ಲದ್ದು ಈಗೇಕೆ ಅನಿಸಿತು?’ ಎಂಬ ಯೋಚನೆಯಲ್ಲಿಯೇ ಮುಳುಗಿದ್ದ.
ಸಾನ್ವಿ, ಅನಿರುದ್ಧ್ ಹೈಸ್ಕೂಲ್ ನಿಂದಲೂ ಸ್ನೇಹಿತರು. ಊರ್ವಶಿಯ ಬೆನ್ನ ಹಿಂದೆ ಬಿದ್ದಿದ್ದ ಅನಿರುದ್ಧ್ ಗೆ ಸಾನ್ವಿ ಎಂದರೆ ಅಷ್ಟಕ್ಕಷ್ಟೇ. ಯಾವಾಗಲೂ ಅವಳು ಓದುವುದರಲ್ಲಿಯೂ ಮುಂದು. ಅನಿರುದ್ಧ್ ಗೆ ಓದುವುದಕ್ಕಿಂತ ಮಿಕ್ಕೆಲ್ಲ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ.
ಊರ್ವಶಿ ಒಳ್ಳೆಯ ನೃತ್ಯಗಾರ್ತಿ. ಹಾಗಾಗಿ ಆಗಾಗ ಅವರಿಬ್ಬರ ಭೇಟಿ ಅನಿವಾರ್ಯವಾಗುತ್ತಿತ್ತು. ಗೆಳೆಯ ಶ್ರೀಕರನೊಂದಿಗೆ ಊರ್ವಶಿಯ ಓಡಾಟ ಹೆಚ್ಚಾಗುತ್ತಾ ಇಬ್ಬರೂ ಪ್ರೇಮದಲ್ಲಿ ಸಿಲುಕ್ಕಿದ್ದರು. ಆದರೆ ಅನಿರುದ್ಧ್ ಮನದಲ್ಲಿಯೇ ಊರ್ವಶಿಯ ಧ್ಯಾನ ಮಾಡುತ್ತಾ ಅವಳನ್ನು ಆರಾಧಿಸುತ್ತಿದ್ದ.
ಊರ್ವಶಿ ಅನಿರುದ್ಧ್ ನೊಂದಿಗೆ ಸಹ ಚೆನ್ನಾಗಿಯೇ ಇರುತ್ತಿದ್ದುದರಿಂದ ಅವನಿಗೆ ಅವಳ ಪ್ರೇಮದ ಬಗ್ಗೆ ಎಂದೂ ಅಪನಂಬಿಕೆ ಉಂಟಾಗಿರಲಿಲ್ಲ. ಅವರ 12ನೇ ತರಗತಿಯ ಪರೀಕ್ಷೆ ಮುಗಿದು ಹೋಗಿತ್ತು.
ಶ್ರೀಕರ್ ಹಾಗೂ ಊರ್ವಶಿ ಇಬ್ಬರೂ ಎಂಜಿನಿಯರಿಂಗ್ ಸೇರಲು ನಿರ್ಧರಿಸಿದ್ದರು. ಅನಿರುದ್ಧ್ ಮೆಡಿಕಲ್ ಎಂದು ಎಂಟ್ರೆನ್ಸ್ ಎಗ್ಸಾಮ್ ಬರೆದಿದ್ದ. ಊರ್ವಶಿ ತನ್ನನ್ನೇ ಅನುಸರಿಸುತ್ತಾಳೆ, ತನ್ನ ಪ್ರೀತಿ ಅವಳು ಎಂದು ನಂಬಿದ್ದ ಅವನಿಗೆ ಸೋಮೇಶ್ ಹೇಳುವವರೆಗೂ ಗೊತ್ತೇ ಆಗಿರಲಿಲ್ಲ.
ಅವನಿಗೆ ಮೊದಲ ಬಾರಿ ಪ್ರೀತಿಯಲ್ಲಿ ಪರಾಭಾವವಾಗಿತ್ತು. ಅವಳನ್ನು ಜಬ್ಬರಿಸಿ ಕೇಳಬೇಕು ಎಂದುಕೊಂಡಿದ್ದವನಿಗೆ ಏನು ಕೇಳಲು ಮನಸ್ಸಾಗದೆ ತನ್ನ ನೋವನ್ನು ನುಂಗಿಕೊಂಡು ತನ್ನೆಲ್ಲ ಆಸಕ್ತಿಯನ್ನು ಓದಿನಲ್ಲಿ ಕೇಂದ್ರೀಕರಿಸಿದ್ದ.
ಮೆಡಿಕಲ್ ನಲ್ಲಿ ಸೀಟು ಸಿಕ್ಕಿ ಅವನು ಕಿಮ್ಸ್ ನಲ್ಲಿ ಪ್ರವೇಶ ಪಡೆದಾಗ ಮನೆಯವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನೂ ಬಹಳ ಖುಷಿಯಾಗಿದ್ದ. ಮೊದಲ ದಿನವೇ ಕಾಲೇಜಿನಲ್ಲಿ ಸಾನ್ವಿಯ ಭೇಟಿಯಾಗಿತ್ತು. ಸಾನ್ವಿಯನ್ನು ನೋಡಿ ಅವನಿಗೆ ಬಹಳ ಸಂತೋಷವಾಗಿತ್ತು. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಸ್ನೇಹ ಯಾವಾಗ ಪ್ರೀತಿಗೆ ತಿರುಗಿತ್ತೋ ಇಬ್ಬರಿಗೂ ಗೊತ್ತಾಗಲಿಲ್ಲ.
ಓದು ಮುಗಿದು ಹೌಸ್ಮನ್ ಶಿಪ್ ಮಾಡುವಾಗ ಅನಿರುದ್ಧನಿಗೆ ಸಾನ್ವಿಯನ್ನು ಒಂದು ದಿನ ನೋಡದೆ ಇರುವುದೂ ಕಷ್ಟವಾಗುತ್ತಿತ್ತು. ಇಬ್ಬರ ಭಾವನೆಗಳು ಆಸೆಗಳು ಹೆಚ್ಚು ಕಮ್ಮಿ ಒಂದೇ ರೀತಿ ಇರುತ್ತಿದ್ದವು. ಹಾಗಾಗಿ ಸಹಜವಾಗಿ ಅನಿರುದ್ಧ್ ಅವಳ ಪ್ರೇಮದಲ್ಲಿ ಬಂಧಿಯಾಗತೊಡಗಿದ್ದ.
ಮದುವೆಯಾದರೆ ಸಾನ್ವಿಯನ್ನೇ ಎನಿಸಿ, ತನ್ನ ಮನದಾಸೆಯನ್ನು ಗೆಳೆಯನಲ್ಲಿ ಹೇಳಿಕೊಂಡಿದ್ದ.
“ನಿನಗೆ ಅವಳ ಮೇಲೆ ಅಷ್ಟು ಆಸೆ ಪ್ರೀತಿ ಇದ್ದರೆ ಪ್ರಪೋಸ್ ಮಾಡು,” ಎಂದು ಗೆಳೆಯ ಸನ್ನಿ ಹೇಳಿದ.
ಸಮಯ ಹೀಗೆ ಇರುವಾಗ ಇಬ್ಬರೂ ಡಾಕ್ಟರ್ಸ್ ಆಗಿದ್ದರು. ಅನಿರುದ್ಧ್ ಗೆ ಅವಳನ್ನು ನೋಡುವುದರಲ್ಲಿಯೇ ಏನೋ ಪ್ರೀತಿ. ಅವನ ಕಣ್ಣುಗಳಿಗೆ ಅವಳು ಸದಾ ದೇವಲೋಕದಿಂದ ಇಳಿದು ಬಂದ ಅಪ್ಸರೆಯಂತೆ ಕಾಣುತ್ತಿದ್ದಳು.
ಅನಿರುದ್ಧ್ ನನ್ನು ಅದೆಷ್ಟೋ ಹುಡುಗಿಯರು ಪ್ರೀತಿಸಲು ಸಿದ್ಧರಿದ್ದರೂ, ಅವನಿಗೆ ಸಾನ್ವಿಯ ವಿನಾ ಬೇರಾರು ಕಾಣುತ್ತಿರಲಿಲ್ಲ. ಅವಳು ಕಾಲೇಜಿಗೆ ಬರುವುದು ಬಹಳ ಕಡಿಮೆಯಾಗಿತ್ತು. ಕಾಲ್ ಮಾಡಿದರೂ ಸಿಗುತ್ತಿರಲಿಲ್ಲ. ತನ್ನ ಕಾಲ್ ಕಂಡಕೂಡಲೇ ಉತ್ತರಿಸುತ್ತಾ, ಆಕ್ಷೇಪಿಸುತ್ತಾ ಇರುತ್ತಿದ್ದವಳಿಗೆ ಇದೇನಾಯಿತು? ಎಂದು ಮನದಲ್ಲಿಯೇ ಅನಿರುದ್ಧ್ ಕೊರಗುತ್ತಿದ್ದ.
ಅವನ ತೊಳಲಾಟ ನೋಡಲಾರದ ಗೆಳೆಯ ಸನ್ನಿ, “ನೋಡೋ, ಸುಮ್ಮನೆ ಹೀಗೆ ಚಡಪಡಿಸುವುದಕ್ಕಿಂತ ಒಮ್ಮೆ ಅವಳಿಗೆ ಪ್ರಪೋಸ್ ಮಾಡು. ಅವಳ ಮನದಲ್ಲಿ ಏನಿದೆ ಎಂದಾದರೂ ಗೊತ್ತಾಗುತ್ತದೆ,” ಎಂದ.
“ಇಲ್ವೋ, ನಾನು ಅವಳನ್ನು ಪ್ರೀತಿಸುತ್ತೇನೆ. ಅವಳನ್ನು ಕಳೆದುಕೊಂಡು ನಾನು ಬಾಳಲಾರೆ ಎಂದು ನನಗೇ ಚೆನ್ನಾಗಿ ಗೊತ್ತಿದೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ,” ಎಂದ.
“ಇರಬಹುದು. ಒಂದುವೇಳೆ ನಿನ್ನ ಅನಿಸಿಕೆ ಸುಳ್ಳಾಗಿ ನಿನ್ನದು ಒನ್ ವೇ ಪ್ರೀತಿಯಾಗಿದ್ದರೆ ಏನು ಮಾಡ್ತಿ? ಯಾವುದಕ್ಕೂ ಒಮ್ಮೆ ಕೇಳಿಯೇ ಬಿಡು,” ಎಂದು ಹುರಿದುಂಬಿಸಿದ.
ಅನಿರುದ್ಧ್ ಗೂ ಅದು ಸರಿ ಎನಿಸಿತ್ತು. `ಹೌದು ಕೇಳುವುದರಲ್ಲಿ ತಪ್ಪೇನಿದೆ? ಅವಳು ಎಸ್ ಎಂದರೆ ತಡಮಾಡದೆ ಅಮ್ಮನ ಕಿವಿಗೆ ಹಾಕಿಬಿಟ್ಟರಾಯಿತು. ಹೇಗೂ ಅಮ್ಮನಿಗೆ ಆಂಟಿಯ ಪರಿಚಯವಿದೆ. ಅವರು ನಮ್ಮವರೇ. ಹಾಗಾಗಿ ಏನೂ ಪ್ರಾಬ್ಲಮ್ ಇರಲಾರದು. ನಾವಿಬ್ಬರೂ ಜೋಡಿ ಹಕ್ಕಿಗಳಂತೆ ಮದುವೆಯಾಗುವವರೆಗೂ ವಿಹರಿಸಬಹುದು,’ ಎಂದು ಮನದಲ್ಲಿ ಮಂಡಿಗೆ ಮೆದ್ದಿದ್ದ.
ಬಹಳ ದಿನಗಳ ನಂತರ ಅಂದು ಆಕಸ್ಮಿಕವಾಗಿ ಸಾನ್ವಿ ಸಿಕ್ಕಾಗ ಅವನಿಗೆ ಸಿಕ್ಕಾಪಟ್ಟೆ ಖುಷಿಯಾಗಿತ್ತು. ಅವಳೂ ಇವನನ್ನು ಕಂಡು ಹತ್ತಿರ ಬಂದು ಮಾತನಾಡಿಸಿದಳು. ಇಬ್ಬರೂ ಭವಿಷ್ಯದ ಬಗ್ಗೆ ಅದೂ ಇದೂ ಮಾತನಾಡಿದ ನಂತರ ಅನಿರುದ್ಧ್ ಅವಳಿಗೆ ಧೈರ್ಯವಾಗಿ ಪ್ರಪೋಸ್ ಮಾಡಿಯೇಬಿಟ್ಟ.

ಸ್ವಾತಿ ನಗುತ್ತಾ, “ಅನಿರುದ್ಧ್ ನೀನಿನ್ನೂ ಚಿಕ್ಕ ಹುಡುಗನಂತೆ ಆಡುತ್ತಿ. ನಿನ್ನ ಪ್ರೀತಿಯಲ್ಲಿ ಪರಿಪಕ್ವತೆ ಇಲ್ಲ. ಒಬ್ಬ ಪ್ರೇಮಿಯಾಗಲು ಕೆಲವು ಅರ್ಹತೆಗಳು ನಿನ್ನಲ್ಲಿಲ್ಲ. ಪುಟ್ಟ ಹುಡುಗ ನನ್ನನ್ನು ಮದುವೆಯಾಗ್ತೀಯಾ? ಎಂದೋ ನಾನು ನಿನ್ನನ್ನು ಮದುವೆಯಾಗ್ತೀನಿ ಎನ್ನುವ ಹಾಗಿದೆ. ಮೆಚ್ಚುರ್ನೆಸ್ ನಿನ್ನಲ್ಲಿ ಕಾಣುವುದಿಲ್ಲ. ಎಂದೂ ನಿನ್ನಲ್ಲಿ ಉನ್ಮಾದ, ಉತ್ಕರ್ಷ, ಪ್ರೇಮದ ಉತ್ಕಟತೆಯೇನೂ ಕಂಡಿಲ್ಲ. ನಿನ್ನ ಪ್ರೇಮ ಬಾಲಿಶವಾದದ್ದು. ಐ ಆ್ಯಮ್ ಸಾರಿ…. ನಿನ್ನನ್ನು ಕಂಡಾಗ ನನಗೇ ಆ ಭಾವನೆ ಹುಟ್ಟುತ್ತಿಲ್ಲ,” ಎಂದು ಹೊರಟುಬಿಟ್ಟಾಗ ಅನಿರುದ್ಧನಿಗೆ ಆಘಾತವಾದಂತಾಗಿತ್ತು.
`ನನ್ನ ಪ್ರೇಮ ಬಾಲಿಶವೇ…. ಹದ್ದು ಮೀರಿ ನಡೆಯುವುದೇ ಪ್ರೇಮವೇ….? ಆರಾಧನೆಗೆ ಬೆಲೆ ಇಲ್ಲವೇ…? ಸಂಯಮದಿಂದ ನಡೆದುಕೊಂಡರೂ ತಪ್ಪೇ? ಈ ಹುಡುಗಿಯರು ನಿರೀಕ್ಷಿಸುವುದೇನು….? ಇಷ್ಟು ದಿನ ನೀನೇ ನನ್ನವಳು ಎಂಬ ಭಾವನೆಯಲ್ಲಿಯೇ ಇದ್ದೆನಲ್ಲ…. ನನ್ನ ಪ್ರೇಮಕ್ಕೂ ಪ್ರೀತಿಗೂ ಬೆಲೆಯಿಲ್ಲ ಎನಿಸುತ್ತೆ. ಇನ್ನೆಂದೂ ಪ್ರೀತಿ ಮಾಡಬಾರದು, ತನ್ನದು ಏಕೋ ಎಲ್ಲಾ ಕಡೆಯೂ ಒನ್ ವೇ ಪ್ರೀತಿ ಆಗುತ್ತಿದೆ,’ ಎನಿಸಿ ನಿರಾಶೆಯಾಗಿತ್ತು.
ತನ್ನ ಬಾಳಿನಲ್ಲಿ ಪ್ರೀತಿಗೂ ಪ್ರೇಮಕ್ಕೆ ಅವಕಾಶವಿಲ್ಲ ಎಂದು ನೆನೆಸಿ ಬಹಳ ಬೇಸರವಾದರೂ ಮತ್ತೊಮ್ಮೆ ತನ್ನನ್ನು ತಾನೂ ಸಂಭಾಳಿಸಿಕೊಂಡ. ದಿನಗಳು ಉರುಳ ತೊಡಗಿತ್ತು. ಸ್ಥಿತಿವಂತನಾಗಿದ್ದ ಅವನಿಗೆ ಮುಂದೆ ಸ್ಪೆಷಲೈಸೇಷನ್ ಮಾಡುವುದೇನೂ ತೊಂದರೆಯಾಗದೇ ಹೃದ್ರೋಗ ತಜ್ಞನಾದ.
ಮದುವೆಯಾಗು ಎಂಬ ಅಮ್ಮನ ವರಾತಕ್ಕೆ ಕಟ್ಟುಬಿದ್ದು ಒಪ್ಪಿದಾಗ ಮೊದಲು ಬಂದದ್ದೇ ಸಾನ್ವಿಯ ಸಂಬಂಧ. ಅವನಿಗೆ ಕುಣಿದಾಡುವಷ್ಟು ಖುಷಿಯಾದರೂ ಬೇಡವೆಂದುಬಿಟ್ಟಿದ್ದ. ನಂತರ ಒಂದೆರಡು ಹುಡುಗಿಯರು ಅವನಿಗೆ ಇಷ್ಟವಾಗಿರಲಿಲ್ಲ. ರೀಮಾ ಅವನಿಗೆ ಬಹಳ ಇಷ್ಟವಾಗಿದ್ದಳು. ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿ ಎರಡು ಮನೆಯವರೂ ಒಪ್ಪಿ ಮದುವೆ ಜೋರಾಗಿಯೇ ಆಗಿತ್ತು.
ಅವಳು ಉಪನ್ಯಾಸಕಿ. ಮದುವೆಯ ಮೊದಲ ರಾತ್ರಿಯಂದು ಅವಳನ್ನು ಅಪ್ಪಿಕೊಂಡಾಗ, “ಡಾ. ಸಾಹೇಬರೇ, ಇಷ್ಟು ಅರ್ಜೆಂಟ್ ಏಕೇ ನಾವು ಸ್ವಲ್ಪ ದಿನ ಪ್ರೇಮದಲ್ಲಿ ಕಳೆದರಾಗದೇ,” ಎಂದಳು.
ಅವಳನ್ನು ಬಿಗಿಯಾಗಿ ಅಪ್ಪಿ ಚುಂಬಿಸುತ್ತಾ, “ಪ್ರೇಮದಲ್ಲಿ ಉನ್ಮಾದ, ಉತ್ಕಟತೆ ಇರಬೇಕು. ಇದೂ ನಮ್ಮ ಮೊದಲ ರಾತ್ರಿಯ ಪ್ರೇಮ. ಜೀವನದುದ್ದಕ್ಕೂ ನಿನ್ನನ್ನು ಪ್ರೀತಿಸುತ್ತಲೇ ಇರುವೆ. ಜೀವನವಿಡೀ ಪ್ರೀತಿಯಲ್ಲಿಯೇ ಕಳೆಯೋಣ. ಆದ್ದರಿಂದ ನಮ್ಮ ಮೊದಲ ಪ್ರೇಮ ಮಿಲನದ ರಾತ್ರಿ. ಎಲ್ಲರ ಬಾಳಲ್ಲೂ ಸಿಹಿ ನೆನಪಾಗಿ ಉಳಿಯುವ ರಾತ್ರಿ ಇದು ಅಲ್ಲವೇ?” ಎಂದಾಗ ನಾಚಿದ ಅವಳು ಅವನ ಬಾಹುಗಳಲ್ಲಿ ಹುದುಗಿದ್ದಳು.
`ಹೌದು ಪ್ರೇಮದಲ್ಲಿ ಉತ್ಕಟತೆ ಇರಲೇ ಬೇಕು ಇದೇ ಸರಿ,’ ಎಂದುಕೊಳ್ಳುತ್ತಾ ಅವಳನ್ನು ಆರಿಸಿಕೊಂಡಿದ್ದ.





