ದೀಪಾವಳಿ 3 ದಿನಗಳ ದೊಡ್ಡ ಹಬ್ಬವಾಗಿ ಇಡೀ ರಾಷ್ಟ್ರಾದ್ಯಂತ ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಇದನ್ನು ಕಾಲಕ್ಕೆ ತಕ್ಕಂತೆ ಆಧುನಿಕ ಶೈಲಿಯಲ್ಲಿ ಹೊಸ ಬಗೆಯಲ್ಲಿ ಏಕೆ ಆಚರಿಸಬಾರದು….?
ಕಳೆದ 1 ವಾರದಿಂದ ಪ್ರಿಯಾ ದೀಪಾವಳಿ ಹಬ್ಬಕ್ಕಾಗಿ ಶಾಪಿಂಗ್ ನಲ್ಲಿ ಬಿಝಿ. ಇಂದು ಅವಳು ಹೊಸ ಡ್ರೆಸ್ ಕೊಳ್ಳಲು ಹೊರಟಿದ್ದಳು. ಅವಳ ಅತ್ತೆಮನೆಯವರು, ಪ್ರಿಯಾ ಈ ಸಲ ಸುಂದರ ಸೀರೆ, ಬ್ಯೂಟಿಫುಲ್ ಸಲ್ವಾರ್ ಸೂಟ್ ಮುಂತಾದ ಎಥ್ನಿಕ್ ಡ್ರೆಸ್ ತರಬಹುದೆಂದು ಎಣಿಸುತ್ತಿದ್ದರು. ಏಕೆಂದರೆ ಎಲ್ಲೆಡೆ ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಎಥ್ನಿಕ್ ಡ್ರೆಸೆಸ್ ಮಾತ್ರವೇ ಹೆಚ್ಚು ಸೂಕ್ತ ಎಂದು ಬಹುತೇಕರು ಭಾವಿಸುತ್ತಾರೆ.
ಆದರೆ ಪ್ರಿಯಾಳ ಮನದಲ್ಲಿ ಬೇರೆಯೇ ವಿಚಾರವಿತ್ತು. ಅವಳು ಸಂಜೆ ವಾಪಸ್ಸು ಮನೆ ಸೇರಿದಾಗ, ಅವಳ ಬಳಿ ಹಲವಾರು ವೆಸ್ಟ್ರನ್ ಡ್ರೆಸೆಸ್ ಇದ್ದವು. ಅವಳು ತಂದಿದ್ದರಲ್ಲಿ ಮೆರೂನ್ ಕಲರ್ ನ ಸ್ಟೈಲಿಶ್ ಮಿಡಿಯ ಬಾಹುಗಳಲ್ಲಿ ಗೋಲ್ಡನ್ ಸ್ಟೋನ್ಸ್ ಹುದುಗಿಸಲಾಗಿತ್ತು. ಅದರ ಮೇಲೆ ಗೋಲ್ಡನ್ ಕಲರಿನ ಜ್ಯಾಕೆಟ್ ಇತ್ತು. ಒಟ್ಟಾರೆ ಆ ಡ್ರೆಸ್ ಇತರ ಎಲ್ಲಾ ಉಡುಗೆಗಳಿಗಿಂತ ಮಿರಿ ಮಿರಿ ಮಿಂಚುತ್ತಿತ್ತು. ಮನೆಯ ಹಿರಿಯರು ಏನೆಂದುಕೊಳ್ಳುತ್ತಾರೋ ಎಂದು ಅವಳಿಗೆ ಅಳುಕಿದ್ದೇ ಇತ್ತು. ಹೀಗಾಗಿ ಅವಳು ಅತ್ತೆ ಬಳಿ ವಿನಮ್ರಳಾಗಿ, “ಹಬ್ಬದ ದಿನ ಸಂಜೆಗೆ ನಾನು ಇದೇ ಡ್ರೆಸ್ ಹಾಕಿಕೊಳ್ಳಲೇ ಅತ್ತೆ?” ಎಂದು ಕೇಳಿದಳು.
ಅತ್ತೆ ಅವಳ ಕಡೆ ಆಶ್ಚರ್ಯದಿಂದ ನೋಡುತ್ತಾ, “ಇದೇನಮ್ಮ, ಹಬ್ಬಕ್ಕೆ ಲಕ್ಷಣವಾಗಿ ರೇಷ್ಮೆ ಸೀರೆ ಕೊಳ್ಳಬಾರದಿತ್ತೇ?” ಎಂದು ಕೇಳಿದರು.
“ಅಯ್ಯೋ…. ಕಳೆದ ವರ್ಷ ನನ್ನ ಹೊಸ ಸೀರೆಗೆ ಹೊರಗೆ ದೀಪ ಜೋಡಿಸುವಾಗ ಬೆಂಕಿ ತಗುಲಿ ಎಂಥ ಅನಾಹುತವಾಯಿತು ಅಂತ ನಿಮಗೆ ನೆನಪಿಲ್ಲವೇ?” ಎಂದು ಪ್ರಿಯಾ ಕೇಳಿದಳು.
“ಅದೇನೋ ನೆನಪಿದೆ ಕಣೆ. ಆದರೆ ಅದು ನಿನ್ನ ನಿರ್ಲಕ್ಷ್ಯದಿಂದಾಗಿ ಆಗಿದ್ದು ಅಲ್ಲವೇ? ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಲಕ್ಷಣವಾಗಿ ಸೀರೆ ಉಟ್ಟು, ಸರಭರ ಓಡಾಡುತ್ತಾ, ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರೆ ಗೃಹಿಣಿಗೆ ಎಂಥ ಚಂದ ಅಲ್ಲವೇ….?” ಅತ್ತೆ ವಿವರಿಸಿದರು.
ಅಷ್ಟರಲ್ಲಿ ಅವಳ ಪತಿ ವಿನೋದ್ ಹೇಳಿದ, “ಹಾಗಲ್ಲಮ್ಮ…. ಯಾರಿಗೆ ಯಾವುದು ಸ್ಟೈಲಿಶ್ ಹಾಗೂ ಕಂಫರ್ಟೆಬಲ್ ಎನಿಸುತ್ತದೋ ಅದನ್ನೇ ಧರಿಸಬೇಕು. ಅದನ್ನು ಬಿಟ್ಟು ಯಾವುದು ಅತಿ ಭಾರಿ ಎನಿಸುತ್ತದೋ ಅಂಥದನ್ನು ಧರಿಸಿದರೆ ಸುಖವಾಗಿ ಓಡಾಡುವುದಾದರೂ ಹೇಗೆ? ಇವಳಿಗೆ ಅಚ್ಚುಕಟ್ಟಾಗಿ ನೆರಿಗೆ ಹಿಡಿದು ಸರಿಯಾಗಿ ಸೀರೆ ಉಡಲಿಕ್ಕೂ ಬರೋದಿಲ್ಲ. ಅದನ್ನು ಟಿಪ್ ಟಾಪಾಗಿ ಉಟ್ಟ ಮೇಲೆ ಸರಿಯಾಗಿ ಮೇಂಟೇನ್ ಮಾಡಬೇಕು. ಆದರೂ ಅವಳು ಮದುವೆಯಾದ 3 ವರ್ಷಗಳೂ ಸೀರೆ ಉಟ್ಟುಕೊಂಡೇ ಹಬ್ಬ ಮಾಡಿದಳಲ್ಲವೇ? ಆದರೆ ಕಳೆದ ವರ್ಷವಂತೂ ದೀಪದ ಉರಿ ಇವಳ ಸೀರೆಗೆ ತಗುಲಿ ದೊಡ್ಡ ಅನಾಹುತ ಆಗುವುದರಲ್ಲಿತ್ತು, ಸ್ವಲ್ಪದರಲ್ಲಿ ಅದು ಬಗೆಹರಿಯಿತು. ಹಾಗಾಗಿ ಅವಳು ಈ ಸಲ ಸೀರೆ ಬಿಟ್ಟು ಬೇರೆ ಡ್ರೆಸ್ ಧರಿಸಿ ಓಡಾಡಿದರೆ ತಪ್ಪೇನು?”
ಅತ್ತೆ ಮತ್ತೆ ಆ ಡ್ರೆಸ್ ನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಮುಖ ಸಪ್ಪೆ ಮಾಡಿಕೊಂಡರು. “ಇರಲಿ ಬಿಡಮ್ಮ, ಒಮ್ಮೆ ಅವಳು ಅದನ್ನು ಧರಿಸಿ ನಿನಗೆ ತೋರಿಸಲಿ. ಆಗ ಅದು ಎಷ್ಟು ಚೆನ್ನಾಗಿದೆ ಅಂತ ನಿನಗೇ ಗೊತ್ತಾಗುತ್ತೆ!” ಎಂದ ವಿನೋದ್.
ತಕ್ಷಣ ಪ್ರಿಯಾ ಆ ಡ್ರೆಸ್ ಧರಿಸಿ ಬಂದಾಗ, ನಿಜಕ್ಕೂ ಅದು ಅವಳಿಗೆ ಪರ್ಫೆಕ್ಟ್ ಫಿಟ್ ಆಗಿ ಮಿಂಚುತ್ತಿತ್ತು. ವಿನೋದ್ ಗೆ ಭಾರಿ ಖುಷಿ ಎನಿಸಿತು. ಆ ಡ್ರೆಸ್ ನಿಂದಾಗಿ ಪ್ರಿಯಾ ಬಹಳ ಬ್ಯೂಟಿಫುಲ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದಳು. ಇಂಥ ದೊಡ್ಡ ಹಬ್ಬಗಳ ಸಂಜೆಗೆ ಅದು ಹೇಳಿ ಮಾಡಿಸಿದಂತಿತ್ತು.
ಆಗ ಅತ್ತೆ ಪ್ರೀತಿಯಿಂದ ಅವಳ ತಲೆ ನೇವರಿಸುತ್ತಾ, “ಹಳೆಯ ವಿಚಾರಧಾರೆ, ಸಂಪ್ರದಾಯಗಳನ್ನು ಬದಲಿಸಲಾಗದು. ಆದರೆ ನನಗೆ ನಿನ್ನ ಈ ಹೊಸ ವಿಚಾರಧಾರೆ, ಆಧುನಿಕ ಡ್ರೆಸ್ ಬಗ್ಗೆ ಆಕ್ಷೇಪಣೆ ಇಲ್ಲ, ನಿನಗೆ ಇದು ಚೆನ್ನಾಗಿ ಒಪ್ಪುತ್ತಿದೆ. ನಿನ್ನ ಮನಸ್ಸಿಗೆ ಯಾವುದು ಸರಿ ತೋಚುತ್ತದೋ ಹಾಗೇ ಮಾಡಮ್ಮ. ಅದರಲ್ಲಿ ನಿನಗೆ ಹೆಚ್ಚಿನ ಸಂತೋಷವಿದ್ದರೆ ನಾನ್ಯಾಕೆ ಅಡ್ಡಿಪಡಿಸಲಿ? ಹಬ್ಬ ಅಂತಂದ್ರೆ ಸಂತೋಷ ಹೆಚ್ಚಿಸುವ ಸಂದರ್ಭ. ಹೀಗಾಗಿ ಪ್ರತಿಯೊಬ್ಬರೂ ಖುಷಿ ಖುಷಿಯಾಗಿ ಇರಬೇಕಾದುದು ಬಲು ಮುಖ್ಯ!”
ಇದನ್ನು ಕೇಳಿಸಿಕೊಂಡ ಪ್ರಿಯಾ ಅತ್ತೆಯನ್ನು ಅಪ್ಪಿ ತನ್ನ ಸಂತಸ ವ್ಯಕ್ತಪಡಿಸಿದಳು. ವಿನೋದ್ ಗಂತೂ ತನ್ನ ಹೋಳಿಗೆ ಜಾರಿ ತುಪ್ಪಕ್ಕೆ ಬಿದ್ದಂತೆ ಅನಿಸಿತು.
ಮನ ಬಯಸಿದ್ದನ್ನು ಧರಿಸಿ
ಸಾಮಾನ್ಯವಾಗಿ ಎಲ್ಲೆಡೆ ದೀಪಾವಳಿ, ಯುಗಾದಿ, ನವರಾತ್ರಿಗಳಂಥ ದೊಡ್ಡ ಹಬ್ಬಗಳಲ್ಲಿ ಹೆಂಗಸರು ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಸಲ್ವಾರ್ ಸೂಟ್, ಚೂಡೀದಾರ್, ಲಹಂಗಾಚೋಲಿ, ಲಂಗಾದಾವಣಿ ಇತ್ಯಾದಿಗಳನ್ನೇ ಧರಿಸಬೇಕೆಂದು ಹಿರಿಯರು ಬಯಸುತ್ತಾರೆ. ಆದರೆ ಇಂಥ ಸಡಿಲ ಉಡುಗೆಗಳಿಗೆ ದೀಪ ಹೆಚ್ಚು ಬೆಳಗಿಸುವ ಈ ಹಬ್ಬದಲ್ಲಿ, ಬೆಂಕಿ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಇವು ಕಂಫರ್ಟೆಬಲ್ ಎನಿಸುವುದಿಲ್ಲ. ಒಮ್ಮೆ ಸೀರೆಯ ಸೆರಗು, ದಾವಣಿಯ ಅಂಚು, ದುಪಟ್ಟಾ ತುದಿ ಇತ್ಯಾದಿಗಳನ್ನು ಎಷ್ಟೇ ಸಂಭಾಳಿಸಿಕೊಂಡು ಕಾರ್ಯ ನಿರ್ವಹಿಸಿದರೂ, ಏನಾದರೊಂದು ಎಡವಟ್ಟು ತಪ್ಪಿದ್ದಲ್ಲ. ಇದರ ಬದಲು ನಿಮ್ಮ ಮನಸ್ಸು ಬಯಸಿದ ಡ್ರೆಸ್ ಧರಿಸಿ ಸಂಭ್ರಮಿಸಿರಿ. ಎಷ್ಟೇ ಕಷ್ಟವಾದರೂ ಸರಿ, ಸಾಂಪ್ರದಾಯಿಕ ಉಡುಗೆಗಳನ್ನೇ ಧರಿಸಬೇಕು ಎಂಬ ನಿಯಮವೇನಿಲ್ಲ. ಅದನ್ನು ಧರಿಸಿದರೇನೇ ನೀವು ಬ್ಯೂಟಿಫುಲ್ ಆಗಿ ಕಾಣುವಿರಿ ಎಂದು ಅರ್ಥ ಅಲ್ಲ!
ನಿಮ್ಮ ಮನಸ್ಸಿಗೆ ಕಂಫರ್ಟೆಬಲ್ ಎನಿಸಿದರೆ ನೀವು ಯಾವುದೇ ಆಧುನಿಕ ವೆಸ್ಟರ್ನ್ ಡ್ರೆಸ್ ಧರಿಸಬಹುದು. ನೀವು ನಿಮ್ಮ ಪರ್ಸನಲ್ ಯೋಚನೆಗೆ ತಕ್ಕಂತೆ ತುಸು ಭಿನ್ನವಾದ, ಕ್ರಿಯೇಟಿವ್ ವಿಚಾರಧಾರೆಗೆ ಪೂರಕವಾಗಿ, ನಿಮ್ಮ ಮನಸ್ಪೊಪ್ಪುವ ಡ್ರೆಸ್ ತಂದು ನಿಮ್ಮದೇ ರೀತಿಯಲ್ಲಿ ಹಬ್ಬ ಆಚರಿಸಿ. ನೀವು ಅತಿ ಎಚ್ಚರಿಕೆಯಿಂದ ಇಲ್ಲಿ ಡ್ರೆಸ್ ಆರಿಸುವಾಗ ಗಮನಿಸಬೇಕಾದುದು ಎಂದರೆ, ಆ ಡ್ರೆಸ್ ನಿಮ್ಮ ಫಿಟ್ಟಿಂಗ್ ಗೆ ತಕ್ಕಂತಿದೆಯೇ, ಅದರಿಂದ ಮುಜುಗರವಿಲ್ಲದೆ ನೀವು ಕಂಫರ್ಟೆಬಲ್ ಆಗಿ ಓಡಾಡಬಹುದೇ…… ಇತ್ಯಾದಿ ಯೋಚಿಸಿ ನಿರ್ಧರಿಸಿ.
ಆ ಡ್ರೆಸ್ ತುಸು ಬ್ರೈಟ್ ಕಲರ್ ಆಗಿದ್ದರೆ, ಕಣ್ಣು ಕೋರೈಸುವ ಬೆಳಕಿನ ಹಬ್ಬ ಅಥವಾ ಗ್ರಾಂಡ್ ಫಂಕ್ಷನ್ ಗೆ ಹೆಚ್ಚು ಒಪ್ಪುತ್ತದೆ. ಅದರ ಮೇಲೆ ಹೆಚ್ಚಿನ ವರ್ಕ್ (ಕಸೂತಿ, ಮೆಷಿನ್ ಪ್ರಿಂಟ್ಸ್ ಇತ್ಯಾದಿ) ಇದ್ದರೆ ಇಂಥ ದೊಡ್ಡ ಹಬ್ಬಗಳ ವಾತಾವರಣಕ್ಕೆ ಬೇಗ ಹೊಂದುತ್ತವೆ. ಇದರಿಂದ ನೀವು ಗುಂಪಿನಲ್ಲಿ ನಾಲ್ವರ ಮಧ್ಯೆ ಎದ್ದು ಕಾಣುತ್ತೀರಿ, ಇತರರಿಗಿಂತ ಅತಿ ಸುಂದರವಾಗಿಯೂ ಕಾಣುವಿರಿ.
ನಮ್ಮ ಜೀವನದಲ್ಲಿ ದೀಪಾವಳಿಯಂಥ ದೊಡ್ಡ ಹಬ್ಬಗಳು ಬಲು ವಿಶಿಷ್ಟ ಎನಿಸುತ್ತವೆ. ದೈನಂದಿನ ಬೋರಿಂಗ್ ಯಾಂತ್ರಿಕ ಕ್ರಿಯೆಗಳಿಂದ ದೂರವಾಗಿ, ನಮ್ಮ ಬಂಧುಮಿತ್ರರು, ಆಪ್ತೇಷ್ಟರೊಂದಿಗೆ ಬೆರೆತು ಇಂಥ ಹಬ್ಬಗಳನ್ನು ಸಂಭ್ರಮಿಸುತ್ತೇವೆ. ಪ್ರತಿಯೊಂದು ಸಮಸ್ಯೆ, ತೊಂದರೆಗಳನ್ನು ಬದಿಗಿರಿಸಿ ಹಬ್ಬದ ನೆಪದಲ್ಲಿ ಕೆಲವು ಘಂಟೆಗಳಾದರೂ ಸಂತಸದಿಂದ ಕಳೆಯಲು ಯತ್ನಿಸುತ್ತೇವೆ. ನಮ್ಮ ಮುಂದಿನ ದಿನಗಳಿಗೆ ಈ ಕ್ಷಣಗಳ ಸವಿ ನೆನಪೇ ಆಧಾರ.
ಸಾಮಾನ್ಯವಾಗಿ ಎಲ್ಲಾ ಗೃಹಿಣಿಯರೂ ಈ ದೀಪಾವಳಿ ಹಬ್ಬಕ್ಕೆ ವಾರ ಇದೆ ಎನ್ನುವಾಗಲೇ ಮನೆಯ ಕ್ಲೀನಿಂಗ್, ಗೃಹಾಲಂಕಾರ, ಹಲವು ವ್ಯಂಜನಗಳ ತಯಾರಿ ಇತ್ಯಾದಿ ಕೆಲಸಗಳಲ್ಲಿ ಸಂಪೂರ್ಣ ಬಿಝಿ ಆಗಿಹೋಗುತ್ತಾರೆ. ಇದರ ಮಧ್ಯೆ ಡ್ರೆಸ್ ಗಾಗಿ ಶಾಪಿಂಗ್, ಅಗತ್ಯದ ವಸ್ತುಗಳ ಖರೀದಿ, ಹಬ್ಬದ ಶುಭಾಶಯ ಕೋರುವ ಕಾರ್ಡ್ಸ್ ಕಳುಹಿಸುವಿಕೆ, ಸಂಜೆಯ ಅಲಂಕಾರಕ್ಕಾಗಿ ಸ್ಟಾರ್ ತಯಾರಿ, ಸೀರಿಯಲ್ ಸೆಟ್ ಲೈಟುಗಳ ಅರೇಂಜ್ ಮೆಂಟ್ ಮುಂತಾದ ಕೆಲಸಗಳಿಂದ ಕೈ ಬಿಡುವೇ ಇಲ್ಲವಾಗುತ್ತದೆ. ಇದರಲ್ಲಿ ನೀವು ನಿಮ್ಮನ್ನೇ ಮರೆತು, ಹಬ್ಬ ಎಂಜಾಯ್ ಮಾಡುವುದನ್ನು ಬಿಟ್ಟು, ಅತಿಥಿ ಸತ್ಕಾರ ಇತ್ಯಾದಿಗಳಲ್ಲೇ ಮುಳುಗಿಹೋದರೆ, ಹಬ್ಬ ಮುಗಿದರೆ ಸಾಕಪ್ಪ ಎನಿಸುವಂತೆ ಆಗಬಾರದು.
3 ದಿನಗಳ ಮೋಜು
ಯುಗಾದಿ ತರಹ ದೀಪಾವಳಿ ಹಬ್ಬ ಒಂದೇ ದಿನಕ್ಕೆ ಮುಗಿಯುವಂಥದ್ದಲ್ಲ. ನರಕ ಚತುರ್ದಶಿಯಿಂದ ಆರಂಭವಾಗಿ ಮಾರನೇ ದಿನದ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆಯಲ್ಲಿ ಮುಂದುವರಿದು, 3ನೇ ದಿನ ಬಲಿಪಾಡ್ಯಮಿಯಲ್ಲಿ ಕೊನೆಗೊಳ್ಳುತ್ತದೆ. ಅಂದು ಪ್ರತಿ ಗೃಹಿಣಿಯೂ ಗಂಡನೊಂದಿಗೆ ತವರಿಗೆ ಹೋಗಿ ಸಂಭ್ರಮಿಸುವುದು ವಾಡಿಕೆ. 2 ದಿನಗಳ ಹಬ್ಬವನ್ನು ತನ್ನ ಮನೆಯಲ್ಲೇ ಮುಗಿಸಿ, ಕೊನೆಯ ದಿನ ತವರಿನಲ್ಲಿ ತನ್ನ ಒಡಹುಟ್ಟಿದವರೊಂದಿಗೆ ಹಬ್ಬ ಆಚರಿಸುವುದು ರೂಢಿ. ಮೊದಲ ವರ್ಷ ಅಳಿಯ ಮಾವನ ಮನೆಗೆ ಈ ಹಬ್ಬಕ್ಕೆ ಬಂದಾಗ ಆ ಸಂಭ್ರಮ, ಸಡಗರವೇ ಬೇರೆ ಲೆವೆಲ್!
ಇದೆಲ್ಲ ಇಂದಿನ ಆಧುನಿಕ ಯುಗದಲ್ಲಿ ಅತಿ ಯಾಂತ್ರಿಕವಾಗಿಬಿಟ್ಟಿದೆ. ಹಿಂದಿನ ದಿನಗಳಲ್ಲಿ ಆ ಹಬ್ಬಗಳಲ್ಲಿದ್ದ ಸೊಗಸು ಈಗ ಇಲ್ಲವೇ ಇಲ್ಲ. ಇದರ ಬದಲಿಗೆ ಗಂಡನ ಮಿತ್ರರು, ತನ್ನ ಫ್ರೆಂಡ್ಸ್ ಎಲ್ಲರನ್ನು 3 ದಿನಗಳಲ್ಲಿ ಒಂದು ದಿನ ಮನೆಗೆ ಕರೆದು ದೀಪಾವಳಿ ಪಾರ್ಟಿ ಏರ್ಪಡಿಸುವುದೇ ಈಗ ಹೊಸ ಟ್ರೆಂಡ್ ಆಗಿದೆ. ಇಲ್ಲಿ ಮನಬಿಚ್ಚಿ ಫ್ರೆಂಡ್ಸ್ ಜೊತೆ ಬೆರೆತು ಎಂಜಾಯ್ ಮಾಡಬಹುದು. ಒಂದು ದಿನ ಅವರನ್ನು ನಿಮ್ಮ ಮನೆಗೆ ಕರೆಸಿ, ಮತ್ತೊಂದು ದಿನ ನೀವು ಅತಿಥಿಗಳಾಗಿ ಅವರ ಮನೆಗೆ ಹೋಗಿ. ಅಲ್ಲಿಯೂ ಸಹ ಇತರ ಎಲ್ಲಾ ಫ್ರೆಂಡ್ಸ್ ಬಂದಿರುವುದರಿಂದ, ಮೋಜು ಮಸ್ತಿಗಳಿಂದ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಈ ರೀತಿ ಹಳೆಯ ನೆನಪುಗಳನ್ನು ತಾಜಾಗೊಳಿಸಿ. ಹೀಗೆ ಬೇರೆ ಬೇರೆ ಪಾರ್ಟಿ ಅಟೆಂಡ್ ಮಾಡಿ ಎಂಜಾಯ್ ಮಾಡಿ. ಹೀಗೆ ದೀಪಾವಳಿ ಪಾರ್ಟಿ 3-4 ದಿನಗಳಲ್ಲದೆ, ಒಂದು ವಾರದವರೆಗೆ ಎಳೆದರೂ ಆಶ್ಚರ್ಯವಿಲ್ಲ. ಇಲ್ಲೆಲ್ಲ ಅಂತ್ಯಾಕ್ಷರಿ, ಹಾಡು, ಡ್ಯಾನ್ಸ್ ಇತ್ಯಾದಿಗಳಿಂದ ಸಂಭ್ರಮಿಸಿ. ಫ್ರೆಂಡ್ಸ್ ಮಧ್ಯೆ ಹಿಂದಿನ ಏನೇ ಮನಸ್ತಾಪಗಳಿದ್ದರೂ ಅವನ್ನೆಲ್ಲ ಮರೆತು ಸಂಭ್ರಮದಿಂದ ಪಾರ್ಟಿಯಲ್ಲಿ ಪಾಲ್ಗೊಳ್ಳಿ. ಈ ರೀತಿ ನಾಲ್ವರ ಜೊತೆ ಬೆರೆತು ನಕ್ಕು ನಲಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕ ಎನಿಸುತ್ತದೆ.
ಬಿಂದಾಸ್ ಆಗಿರಿ
ದೀಪಾವಳಿ ಹಬ್ಬ ಅಂದರೇನೇ ಮನಬಿಚ್ಚಿ ಖುಷಿ ಖುಷಿಯಾಗಿ ಎಲ್ಲರ ಜೊತೆ ಬೆರೆತು, ನಕ್ಕು ನಲಿದು ಸಡಗರ ಸಂಭ್ರಮ ಹೆಚ್ಚಿಸಿಕೊಳ್ಳುವುದು ಅಂತ. ಇದನ್ನು ಯಾವುದೋ ಬಂಧನ, ವಿವಶತೆಯಿಂದ ಆಚರಿಸಬೇಡಿ. ಸಂಪ್ರದಾಯದ ಸಂಕೋಲೆಯಲ್ಲಿ ಸಿಲುಕಿರುವಾಗ ಅದನ್ನು ಬಿಡವಾದೀತೇ ಎಂದು ಯೋಚಿಸಬೇಡಿ. ಆದ್ದರಿಂದ ಬಿಂದಾಸ್ ಆಗಿ ಹಬ್ಬ ಆಚರಿಸಿ. ನಿಮ್ಮ ಮನಸ್ಸು ಬಯಸುವಂತೆ ನೀವು ದೀಪಾವಳಿ ಆಚರಿಸಿ. ಹಬ್ಬ ಅಂದ ಮೇಲೆ ಸಿಹಿ ಸವಿಯದಿರಲು ಸಾಧ್ಯವೇ? ಆದ್ದರಿಂದ ದಿಲ್ ಖುಷ್ ಆಗುವಷ್ಟು ಸ್ವೀಟ್ ಸೇವಿಸಿ. ಅಯ್ಯೋ…. ಇದರಿಂದ ಕ್ಯಾಲೋರಿ ಹೆಚ್ಚಿ ಡುಮ್ಮಿ ಆಗಿಬಿಟ್ಟರೆ ಎಂದೆಲ್ಲ ಯೋಚಿಸಬೇಡಿ. ಆದಷ್ಟೂ ಮನೆಯಲ್ಲೆ ಮಾಡಿದ ಸಿಹಿ ತಿನಿಸಿಗೆ ಆದ್ಯತೆ ಕೊಡಿ. 12 ದಿನ ಮನಸ್ಸಿಗೆ ಬಂದಂತೆ ಸಿಹಿ ಸವಿದರೆ, ಯಾವ ದೊಡ್ಡ ಅನಾಹುತ ಆಗಿಹೋಗುವುದಿಲ್ಲ. ನಿಮ್ಮ ಇಚ್ಛೆ ಇರುವಂತೆ ಹಬ್ಬ ಆಚರಿಸಿ ಎಂಜಾಯ್ ಮಾಡಿ.
ಹಬ್ಬಗಳ ಈ ಸೀಸನ್ ನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಯಾವುದೇ ಬಂಧನಗಳಿಲ್ಲದ ಹೊಸ ಬಗೆಯ ಮತ್ತು ತುಂಬಿದ ಬದುಕಿನ ಆನಂದ ಅನುಭವಿಸಿ. ಈಗ ನಿಮ್ಮ ಬಳಿ ಹಬ್ಬಕ್ಕಾಗಿ ಬೇಕಾದಷ್ಟು ರಜೆ ಇರುತ್ತದೆ. ಹೆಚ್ಚು ದಿನ ರಜೆ ಇಲ್ಲದೆ ಒಂದೇ ದಿನ ಇದ್ದಾಗ, ಉಳಿದ ದಿನಗಳಲ್ಲಿ ಆಫೀಸಿಗೆ ಹೋಗಿ ಬಂದರೂ, ಹಬ್ಬದ ಈ ಮೂಡ್ ನಲ್ಲಿ ಮುಳುಗಿಬಿಡಿ. ಸಂಜೆ ಹೊರಗೆ ಹೋಗಿ ಶಾಪಿಂಗ್ ಮಾಡಿ, ಹೊಸ ಹೊಸ ಸಾಮಗ್ರಿ ಕೊಂಡು ತನ್ನಿ. ಇದರಿಂದ ದೀಪಾವಳಿಯ ಎಲ್ಲಾ ದಿನಗಳೂ ನಿಮ್ಮ ಮನದಲ್ಲಿ ಬೆಳಕು ತುಂಬಿರುವಂತೆ ಮಾಡಿ.
ಹಬ್ಬಗಳಲ್ಲಿ ಜಗಳ ಮರೆತುಬಿಡಿ
ಯಾವುದೋ ಹಳೆಯ ಮನಸ್ತಾಪದ ನೆಪದಿಂದ, ನಿಮ್ಮ ಆಪ್ತರಲ್ಲಿ ಯಾರೊಂದಿಗೋ ಮಾತು ಬಿಟ್ಟಿದ್ದರೆ, ಜಗಳ ಆಡಿದ್ದರೆ ಅದನ್ನೆಲ್ಲ ಈ ಫೆಸ್ಟಿವಲ್ ಸೀಸನ್ ನಲ್ಲಿ ಖಂಡಿತಾ ಮುಂದುರಿಸಬೇಡಿ. ಸುಪ್ರಿಯಾ ಮಾಡಿದ್ದೂ ಹೀಗೇ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಅವಳು ತನ್ನ ಹಿರಿಯ ಓರಗಿತ್ತಿ ರೇವತಿ ಜೊತೆ ಹಬ್ಬಕ್ಕೆ 3 ವಾರ ಹಿಂದೆ ಜಗಳ ಆಡಿದ್ದಳು. ವಿಷಯ ಅತಿ ಕ್ಷುಲ್ಲಕವಾಗಿದ್ದರೂ, ಇಬ್ಬರೂ ತಮ್ಮ ಅಹಂ ದೆಸೆಯಿಂದಾಗಿ ಅದನ್ನು ಮರೆಯಲಿಲ್ಲ, ತಾವಾಗಿ ಮಾತನಾಡಿಸಲು ಮುಂದಡಿ ಇಡಲಿಲ್ಲ. ಇಬ್ಬರೂ ಒಂದೇ ಮಹಲಿನ ಮೇಲೆ ಕೆಳಗಿನ ಮಹಡಿ ಮನೆಗಳಲ್ಲಿ ವಾಸಿಸುತ್ತಿದ್ದರು. ಮಕ್ಕಳು ಆಟ ಆಡುವಾಗ ಮಾಡಿಕೊಂಡ ಸಣ್ಣ ಜಗಳನ್ನೇ ಇವರು ತಮ್ಮದಾಗಿಸಿಕೊಂಡು, ಅದನ್ನೇ ದೊಡ್ಡದು ಮಾಡಿಕೊಂಡಿದ್ದರು. ಎರಡೇ ದಿನಗಳಲ್ಲಿ ಆ ಜಗಳ ಮರೆತಿದ್ದ ಇಬ್ಬರ ಮಕ್ಕಳೂ ಎಂದಿನಂತೆ ಹಾಯಾಗಿ ಆಟವಾಡಿಕೊಂಡಿದ್ದ.
ಈ ಘಟನೆಯಿಂದ ಇಬ್ಬರೂ ಕಲೆತು ಸಂಭ್ರಮದಿಂದ ದೀಪಾವಳಿ ಆಚರಣೆಗೆ ತೊಡಗಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಔಪಚಾರಿಕವಾಗಿ ಒಂದಿಷ್ಟು ದೀಪ ಬೆಳಗಿ ಮನೆ ಮುಂದುವರಿಸಿ, ಮಕ್ಕಳಿಗೆ ಒಂದಿಷ್ಟು ಪಟಾಕಿ ತೆಗೆಸಿಕೊಟ್ಟು, ಇಬ್ಬರೂ ಮನೆಯೊಳಗೇ ಉಳಿದುಬಿಟ್ಟರು. ಆ ಮಕ್ಕಳು ಎಲ್ಲವನ್ನೂ ಮರೆತು ಹಾಯಾಗಿ ಒಟ್ಟಿಗೆ ಕಲೆತು ಪಟಾಕಿ ಹಚ್ಚುತ್ತಾ, ಅಮ್ಮಂದಿರು ಮಾಡಿಟ್ಟಿದ್ದ ತಿಂಡಿ ತಿನಿಸು ಬದಲಾಯಿಸಿಕೊಂಡು ತಮ್ಮದೇ ರೀತಿಯಲ್ಲಿ ಹಬ್ಬ ಆಚರಿಸಿಕೊಂಡರು. ಈ ಹೆಂಗಸರ ಗಲಾಟೆಯಿಂದಾಗಿ ಸ್ವಂತ ಅಣ್ಣತಮ್ಮಂದಿರು ಸಹ ಹಾರ್ದಿಕವಾಗಿ ಹಬ್ಬದಲ್ಲಿ ಪಾಲ್ಗೊಳ್ಳಲಾಗದೆ, ಪರಸ್ಪರ ಕಲೆತು ಶುಭಾಶಯ ಸಹ ವಿನಿಮಯ ಮಾಡಿಕೊಳ್ಳಲಾಗದೆ, ಬಿಸ್ ನೆಸ್ ನೆಪದಲ್ಲಿ, ಹಬ್ಬದ ಪೂಜೆ ಮುಗಿಸಿ ಬೇಗ ಬೇಗ ಅಂಗಡಿಗೆ ಹೊರಟುಬಿಟ್ಟರು.
ಹಿಂದೆಲ್ಲ ಎರಡೂ ಕುಟುಂಬಗಳು ಒಟ್ಟಾಗಿ ಬೆರೆತು ಹೆಚ್ಚಿನ ಸಡಗರ ಸಂಭ್ರಮಗಳಿಂದ ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಹೆಂಗಳೆಯರ ಓಡಾಟ, ಮಕ್ಕಳ ನಲಿದಾಟ, ಗಂಡಸರ ಖುಷಿ ಎಲ್ಲಾ ಸೇರಿ ಇಡೀ ಹಬ್ಬ ಹೆಚ್ಚು ಕಳೆಗಟ್ಟುತ್ತಿತ್ತು! ಆದರೆ ಈ ಸಲ ಇಬ್ಬರ ಮನೆಗೂ ಯಾವ ನೆಂಟರು ಸಹ ಬರಲಿಲ್ಲ. ಇಬ್ಬರ ಮನೆಗೂ ಅದೇ ನೆಂಟರು ಬರಬೇಕಾದುದರಿಂದ, ಒಬ್ಬರನ್ನು ಬಿಟ್ಟು ಒಬ್ಬರ ಮನೆಗೆ ಅಥವಾ ಇಬ್ಬರ ಮನೆಗೂ ಏಕಕಾಲಕ್ಕೆ ಹೋಗಲಾಗದೆ, ಇವರ ಗೊಡವೆಯೇ ಬೇಡ ಎಂದು ಅವರು ದೂರ ಉಳಿದರು. ಕೇವಲ ಫ್ರೆಂಡ್ಸ್ ಮಾತ್ರ ಭೇಟಿ ನೀಡಿ ಹೊರಟರಷ್ಟೆ. ಇದನ್ನು ಎರಡೂ ಮನೆಯ ಗೃಹಿಣಿಯರು ಅರ್ಥ ಮಾಡಿಕೊಂಡರು. ಮಾನಸಿಕ ಒತ್ತಡ ಕಡಿಮೆ ಆಗದ ಕಾರಣ ಎರಡೂ ಮನೆಗಳಲ್ಲಿ ಪತಿಪತ್ನಿ ವಿನಾಕಾರಣ ಕಿತ್ತಾಡಿಕೊಂಡರು. ಅತಿ ಸಂಭ್ರಮವಾಗಿ ಕಳೆಯಬೇಕಿದ್ದ ಹಬ್ಬದ ವಾತಾರಣ ಇಬ್ಬರ ಹೆಂಗಸರ `ಅಹಂ’ನಿಂದಾಗಿ ಬೇಸರದಲ್ಲಿ ಬದಲಾಯಿತು.
ನಾವು ಯಾರ ಜೊತೆ ಜಗಳ ಆಡಿಕೊಂಡಿದ್ದರೂ ಹಬ್ಬದ ಸಂದರ್ಭದಲ್ಲಿ ನಮ್ಮ ಮೂಡ್ ಪೂರ್ತಿ ಕೆಟ್ಟು ಹೋಗುತ್ತದೆ. ಇದರಿಂದ ಹಬ್ಬಗಳಂಥ ವಾತಾವರಣ ಹದಗೆಡುತ್ತದೆ. ಹೀಗಾಗಿ ಯಾವುದೇ ಹಬ್ಬವಿರಲಿ, ಪತಿ ಪತ್ನಿ ಅಥವಾ ಹತ್ತಿರದವರು, ಫ್ರೆಂಡ್ಸ್ ಯಾರೇ ಆಗಲಿ, ಈ ರೀತಿ ಜಗಳ ಮಾಡಿಕೊಳ್ಳಲೇಬಾರದು. ಹಬ್ಬದ ನೆಮ್ಮದಿ ಕೆಡಿಸಿಕೊಂಡ ಮೇಲೆ ಇನ್ನೆಂಥ ಆಚರಣೆ? ಏನೇ ವಿಚಾರವಿರಲಿ, ಒಂದೆಡೆ ಕುಳಿತು ಹಾರ್ದಿಕ ಮಾತುಕತೆಯಿಂದ ಅದನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಮನಸ್ಸೇ ಎಲ್ಲದಕ್ಕೂ ಮೂಲ, ಮನಸ್ಸು ಸರಿ ಇದ್ದಾಗ, ಎಂಥ ಕಷ್ಟ ಬಂದರೂ ಸೈರಿಸಿಕೊಂಡು ಪರಿಸ್ಥಿತಿ ಸರಿಪಡಿಸಿಕೊಳ್ಳಬಹುದು.

ದಂಪತಿ ಒಟ್ಟಾಗಿ ತಯಾರಿ ನಡೆಸಿ
ಪತಿಪತ್ನಿ ಇಬ್ಬರೂ ಒಟ್ಟಾಗಿ ಕಲೆತು ಹಬ್ಬದ ತಯಾರಿ ನಡೆಸಿದಾಗ ಮಾತ್ರ, ಆ ಹಬ್ಬ ಹೆಚ್ಚು ಕಳೆಗಟ್ಟುತ್ತದೆ. ಇಬ್ಬರೂ ಚರ್ಚಿಸಿ ಒಟ್ಟಾಗಿ ಕೆಲಸ ಆರಂಭಿಸಿ. ಕೂಡಿ ಶಾಪಿಂಗ್ ಮಾಡಿ, ಮನೆಗೆ ಬೇಕಾದ ಸಾಮಗ್ರಿ ಕೊಂಡು ತನ್ನಿ, ಎರಡೂ ಕಡೆಯವರನ್ನು ಹಬ್ಬಕ್ಕೆ ಆಹ್ವಾನಿಸಿ, ಯಾರ ಮನೆಗೆ ಅತಿಥಿಗಳಾಗಿ ಹೋಗಬೇಕೆಂಬುದನ್ನು ನಿರ್ಧರಿಸಿ, ಮಕ್ಕಳಿಗಾಗಿ ಏನೇನು ತರಬೇಕು, ಅವರನ್ನು ಹಬ್ಬದಲ್ಲಿ ಹೇಗೆ ಇನ್ ವಾಲ್ವ್ ಮಾಡಿಕೊಳ್ಳಬೇಕು, ಎಲ್ಲವನ್ನೂ ಕೂಡಿ ನಿರ್ಧರಿಸಿ. ಇದರಿಂದ ಶಾಪಿಂಗ್ ಮಾಡುವಾಗ ಪರಸ್ಪರ ಐಡಿಯಾ ಹಂಚಿಕೊಳ್ಳಬಹುದು. ಒಬ್ಬರೇ ಕೊಂಡುತಂದರೆ, ಇನ್ನೊಬ್ಬರು ಅದರ ಬಗ್ಗೆ ಟೀಕೆ ಟಿಪ್ಪಣಿ ಮಾಡುವಂತೆ ಆಗಬಾರದು. ಹೀಗಾಗಿ ಹಬ್ಬದ ಎಲ್ಲಾ ಕೆಲಸಗಳೂ ಇಬ್ಬರ ಸಹಮತದಿಂದಲೇ ನಡೆಯುವಂತಿರಲಿ. ಇದರಿಂದ ಇಬ್ಬರಿಗೂ ಒಟ್ಟಿಗೆ ಗುಡ್ ಕ್ವಾಲಿಟಿ ಟೈಂ ಕಳೆದಂತಾಗುತ್ತದೆ.
ಅದೇ ತರಹ ನೀವು ದೀಪಾವಳಿ ಪಾರ್ಟಿ ಏರ್ಪಡಿಸಿದ್ದರೆ, ಬರುವ ಅತಿಥಿಗಳ ಮುಂದೆ ಇಬ್ಬರೂ ಕೂಡಿಯೇ ನಿರ್ಧರಿಸಿದ ಡೆಕೋ, ಮೆನು, ಅರೇಂಜ್ ಮೆಂಟ್ ಗಳಿಂದಾಗಿ ಎಲ್ಲರ ಎದುರು ಆದರ್ಶ ಜೋಡಿ ಎನಿಸುವಿರಿ. ಇದರಿಂದ ಒಟ್ಟು ಎಷ್ಟು ಬಜೆಟ್ ಒಳಗೆ ಎಲ್ಲವನ್ನೂ ನಿಭಾಯಿಸಬಹುದು ಎಂಬುದನ್ನು ಮೊದಲೇ ಚರ್ಚಿಸಿ ನಿರ್ಧರಿಸಬಹುದು. ಪತ್ನಿ ತನ್ನ ಪಾಡಿಗೆ ಕೆಲಸದಲ್ಲಿ ಬಿಝಿ, ಪತ್ನಿ ಮಾತ್ರವೇ ಎಲ್ಲವನ್ನೂ ನಿಭಾಯಿಸಬೇಕು ಎಂಬ ಹಳೆಯ ಕಂದಾಚಾರ ಮರೆತುಬಿಡಿ. ಇಬ್ಬರೂ ಕೂಡಿ ಏನೇ ಮಾಡಿದರೂ ಅದು ಬಹಳ ಚೆನ್ನಾಗಿರುತ್ತದೆ.
ಮುನಿದವರ ಓಲೈಸಿ
ನಾವು ಯಾವುದೇ ಕಾರಣಕ್ಕೆ ಹತ್ತಿರದವರೊಂದಿಗೆ ಮುನಿಸಿಕೊಂಡಿರಬಹುದು, ಯಾವುದೋ ನೆಪಕ್ಕಾಗಿ ನೆಂಟರು ದೂರ ಸರಿದಿರಬಹುದು, ಇಂಥ ಯಾವುದೇ ಸಣ್ಣಪುಟ್ಟ ಮನಸ್ತಾಪವಿದ್ದರೂ ಹಬ್ಬದ ಸಂದರ್ಭದಲ್ಲಿ ಅದನ್ನೆಲ್ಲ ಸಂಪೂರ್ಣ ಮರೆತುಬಿಡಿ. ನೆಂಟರಿಷ್ಟರು, ಫ್ರೆಂಡ್ಸ್ ಯಾರೇ ಇರಲಿ, ತಾವಾಗಿ ಅವರು `ಅಹಂ’ ಬಿಟ್ಟು ಒಂದು ಹೆಜ್ಜೆ ಇಳಿಯದಿದ್ದರೆ, ಅದನ್ನು ಮರೆತು, ನೀವೇ ಒಂದು ಹೆಜ್ಜೆ ಮುಂದೆ ಬಂದು ಅವರಿಗೆ ಶುಭಾಶಯ ಕೋರಿ ಎಂದಿನಂತೆ ಹಾರ್ದಿಕವಾಗಿ ಮಾತನಾಡುತ್ತಾ ಹಬ್ಬಕ್ಕೆ ಮನೆಗೆ ಆಹ್ವಾನಿಸಿ.
ಇಂಥ ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಎಂದೂ ತೂಗುಯ್ಯಾಲೆಯಲ್ಲಿ ಇರಿಸಿಕೊಳ್ಳಬೇಡಿ. ನಿಮ್ಮ ಪ್ರಯತ್ನ ನೀವು ಮಾಡಿ, ನಿಷ್ಠೂರ ಮಾಡಿಕೊಳ್ಳದೆ ಮುನಿದವರನ್ನು ಓಲೈಸಲು ಯತ್ನಿಸಿ. ನಿಮ್ಮ ಹಲವು ಪ್ರಯತ್ನಗಳಿಗೂ ಅವರು ಮಣಿಯದ್ದಿದರೆ ಏನೂ ಮಾಡಲಾಗದು. ಕರೆಯುವುದು ನಿಮ್ಮ ಕರ್ತವ್ಯ, ಅದನ್ನು ಮನ್ನಿಸಿ, ಅವರು ನಿಮ್ಮ ಮನೆಗೆ ಬಂದರೆ ಸಂತೋಷ, ಬರದೇ ಹಠ ಹೂಡಿದರೆ ಪರಮ ಸಂತೋಷ, ಎಂದು ಬಂದವರೊಂದಿಗೆ ನೀವು ಹಬ್ಬ ಆಚರಿಸಿ. ಈ ರೀತಿ ನಿಮ್ಮ ಮನಸ್ಸು ಬಯಸಿದಂತೆ, ಹಬ್ಬಗಳ ಸಂದರ್ಭವನ್ನು ಆನಂದಮಯ ಆಗಿಸಿಕೊಳ್ಳಿ, ಅನಗತ್ಯ ಕಾರಣಗಳಿಂದಾಗಿ ಅದು ಬಿಗಡಾಯಿಸುವುದು ಬೇಡ.
ಅನಗತ್ಯ ಹಗರಣಗಳು ಬೇಡ
ಯುಗಾದಿ ಅಥವಾ ದೀಪಾವಳಿಯಂಥ ಸಂದರ್ಭಗಳಲ್ಲಿ ಎಲ್ಲರೂ ಒಟ್ಟಿಗೆ ಸೇರಿದಾಗ ಟೈಂಪಾಸಿಗಾಗಿ ಅಂತ ಕಾರ್ಡ್ಸ್ ಆಡುತ್ತಾ ಕುಳಿತುಬಿಡುತ್ತಾರೆ. ಕಾರ್ಡ್ಸ್ ಗೆ ಕೈ ಹೋದ ತಕ್ಷಣ, ಬಾಯಿಗೆ ಮದ್ಯದ ರುಚಿ ಬೇಕೆನಿಸುತ್ತದೆ. ಈ ಜೂಜಿನ ಚಟಕ್ಕೆ ಬಿದ್ದು ಹಣ ಹೂಡಿ, ಅದನ್ನು ಕಳೆದುಕೊಳ್ಳುವುದೂ ಸಹಜ. ಇದರಿಂದ ಬಂದವರ ಎದುರು ಪರಿಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದ ದೀಪಾವಳಿ ಪಾರ್ಟಿ ಮಧ್ಯೆ ಇಂಥ ಅನಗತ್ಯ ಹಗರಣಗಳು ಬೇಡವೇ ಬೇಡ!
ಇದರ ಬದಲಿಗೆ ಅಂತ್ಯಾಕ್ಷರಿ, ಭಾವಗೀತೆ, ಚಿತ್ರಗೀತೆ, ವೀಣೆ, ಸಿತಾರ್, ಗಿಟಾರ್ ನುಡಿಸುವ ಮನರಂಜನೆಯ ಕಾರ್ಯಕ್ರಮಗಳು ಇರಲಿ. ಒಬ್ಬರಾದ ಮೇಲೆ ಒಬ್ಬರು ಹಾಸ್ಯ ಚಟಾಕಿ ಹಂಚಿಕೊಳ್ಳಲಿ. ಒಟ್ಟಾರೆ ಇಡೀ ವಾತಾವರಣ ಆಹ್ಲಾದಕರವಾಗಿರಬೇಕೇ ಹೊರತು ಅನಗತ್ಯ ಹಗರಣಗಳಿಂದ ಮನಸ್ಸು ಮುರಿಯುವಂತೆ ಆಗಬಾರದು. ಆತಿಥೇಯರಾಗಿ ನೀವು ಇಂಥದ್ದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಂದವರಲ್ಲಿ ಕೆಲವರು ಆಡಿಕೊಳ್ಳಬಹುದು, ನಿಮ್ಮನ್ನು ಗೂಶ್ಲು, ಹಳೆ ಕಂದಾಚಾರದವರು ಎನ್ನಬಹುದು. ಇರಲಿ ಬಿಡಿ, ನೆಮ್ಮದಿಯ ವಾತಾವರಣ ಜೂಜು ಹೆಂಡದಿಂದ ಹಾಳಾಗದೆ, ಮನಸ್ಸು ಮನಸ್ಸುಗಳು ಹಿತವಾಗಿ ಬೆರೆತು ನಲಿಯುವಂತಾಗಲಿ. ಓದುಗರೆಲ್ಲರಿಗೂ ಗೃಹಶೋಭಾ ಪರವಾಗಿ `ದೀಪಾವಳಿಯ ಹಾರ್ದಿಕ ಶುಭಾಶಯಗಳು!”
– ಪಂಕಜಾ ಪ್ರಕಾಶ್
ಫೆಸ್ಟಿವಲ್ ಮೇಕಪ್ ಮರೆಯಬೇಡಿ
ನಮ್ಮ ಇಡೀ ದೇಶದಲ್ಲಿ ಎಲ್ಲರೂ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿರುತ್ತಾರೆ. ಈ ದಿನ ಇಡೀ ಮನೆಯ ಗೃಹಾಲಂಕಾರ ಜೋರಾಗಿರುತ್ತದೆ, ಅದರ ಜೊತೆಗೆ ನಿಮ್ಮ ಅಲಂಕಾರದತ್ತಲೂ ಹೆಚ್ಚಿನ ಗಮನ ಕೊಡಿ. ಹೀಗಾಗಿ ಈ ಸಲ ಫೆಸ್ಟಿವಲ್ ಮೇಕಪ್ ಗಾಗಿ ಹೊಸ ಸ್ಟೈಲ್ ಅನುಸರಿಸಬಾರದೇಕೆ? ಮೇಕಪ್ ನಿಮ್ಮ ಪರ್ಸನ್ ಲುಕ್ಸ್ ನ್ನು ಡಿಫೈನ್ ಮಾಡುತ್ತದೆ. ನೀವು ನಿಮ್ಮ ಮೆಚ್ಚಿನ ಕಲರ್, ಫ್ಯಾಬ್ರಿಕ್ಸ್ ಪ್ರಕಾರ ಡ್ರೆಸ್ ಆರಿಸಿ ಮೇಕಪ್ ಮಾಡಿಕೊಳ್ಳಿ. ಇದರಿಂದ ನೀವು ಹೆಚ್ಚು ಬ್ಯೂಟಿಫುಲ್ ಆಗುವುದಲ್ಲದೆ, ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮಗೆ 100% ಸೂಟ್ ಆಗುವಂಥ ಫ್ಯಾಷನ್‌ಮೇಕಪ್ ಮಾತ್ರ ಅನುಸರಿಸಿ. ಯಾರೋ ಹೇಳಿದರೆಂದು, ಯಾವುದನ್ನೋ ಧರಿಸಿ, ಏನೋ ಮೇಕಪ್ ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ಲುಕ್ಸ್ ನಲ್ಲಿ ವೈವಿಧ್ಯತೆ ಇರಲಿ, ಇದರಿಂದ ನಿಮ್ಮ ವ್ಯಕ್ತಿತ್ವ ಎದ್ದು ಕಾಣುತ್ತದೆ. ನಿಮ್ಮ ಮೇಕಪ್ ನಿಮ್ಮ ವ್ಯಕ್ತಿತ್ವದ ಕೈಗನ್ನಡಿ ಆಗಲಿದೆ.
ಮೇಕಪ್ ಮಾಡಿಕೊಳ್ಳುವಾಗ ಹಳೆಯ ವಿಚಾರಗಳನ್ನು ಮರೆತು ನಿಮ್ಮದೇ ಸ್ಟೈಲ್ ಫಾಲೋ ಮಾಡಿ. ವಿಂಗ್ಡ್ ಲೈನರ್ ಬಳಸಿ ನೀವು ನಿಮ್ಮ ಮೇಕಪ್ ನ ಯಾವುದೇ ಬಣ್ಣದ ಥೀಮ್ ಗೂ ಹೆಚ್ಚಿನ ಅಟ್ರಾಕ್ಷನ್ ನೀಡಬಹುದು. ತುಟಿಗಳಿಗೆ ಗಾಢ ಕೆಂಪು ಬಣ್ಣದ ಲಿಪ್ ಸ್ಟಿಕ್ ನೀಡಿ ಇದನ್ನು ಬ್ಯಾಲೆನ್ಸ್ ಮಾಡಬಹುದು. ನೀವು ಯಾವುದೇ ಮೇಕಪ್ ಸ್ಟೈಲ್ ಆರಿಸಿದರೂ, ನಿಮ್ಮ ವೈಯಕ್ತಿಕ ಸ್ಪರ್ಶ ನೀಡಿ, ಹೊಸ ಲುಕ್ಸ್ ಪಡೆಯಿರಿ.
ನೀವು ಸಿಂಪಲ್ ಗ್ಲೋಯಿಂಗ್ ಲುಕ್ ಬಯಸಿದರೆ, ಮಿನಿಮಮ್ ಮೇಕಪ್ ಲುಕ್ಸ್ ಕ್ಯಾರಿ ಮಾಡಿ. ಇದಕ್ಕಾಗಿ ಐ ಮೇಕಪ್ ಬಲು ಸ್ಪೆಷಲ್ ಆಗಿರುತ್ತದೆ. ಎಲ್ಲಕ್ಕೂ ಮೊದಲು ಐಲಿಡ್ಸ್ ಮೇಲೆ ಸಿಲ್ವರ್ ಐ ಶ್ಯಾಡೋ ತೀಡಿರಿ. ಇದಾದ ನಂತರ ಕಣ್ಣು ರೆಪ್ಪೆಗಳಿಗೆ ಮಸ್ಕರಾ ಹಚ್ಚಿರಿ. ಇದರಿಂದ ಕಂಗಳು ದಟ್ಟವಾಗಿ ಕಂಡುಬರುತ್ತವೆ. ನಂತರ ಮ್ಯಾಟ್ ಪಿಂಕ್ ಲಿಪ್ ಸ್ಟಿಕ್ ಹಚ್ಚಿರಿ. ಕೆನ್ನೆಗೆ ಲೈಟ್ ಬ್ಲಶ್ ಪಿಂಕ್ ಕಲರ್ ನ ಬ್ಲಶರ್ ಬಳಸಿರಿ.
ದೀಪಾವಳಿಯ ಬ್ಯೂಟಿಫುಲ್ ಪರ್ಫೆಕ್ಟ್ ಲುಕ್ಸ್ ಗಾಗಿ, ಸನ್ ಕಿಸ್ಡ್ ಗ್ಲೋ ಮೇಕಪ್ ಪರ್ಫೆಕ್ಟ್ ಚಾಯ್ಸ್ ಆಗಿದೆ. ಇಂಥ ಮೇಕಪ್ ಗಾಗಿ ಹೆವಿ ಫೌಂಡೇಶನ್ ಬದಲು CC ಕ್ರೀಂ ಬಳಸಿಕೊಳ್ಳಿ. ಚೀಕ್ ಬೋನ್ಸ್ ಮೇಲೆ ಹೈಲೈಟರ್ ತೀಡಿರಿ. ಕಂಗಳಿಗೆ ಗೋಲ್ಡನ್ ಯಾ ಶಿಮರಿ ಐ ಶ್ಯಾಡೋ ಹಚ್ಚಿರಿ. ಕಾಜಲ್ ಮಸ್ಕರಾ ತೀಡಿದ ನಂತರ ನಿಮ್ಮ ಐ ಮೇಕಪ್ ಕಂಪ್ಲೀಟ್ ಮಾಡಿ. ಮೇಕಪ್ ಫಿನಿಶ್ ಮಾಡಲು ಫೈನ್ ಆಗಿ ಪಿಂಕ್ ಲಿಪ್ ಸ್ಟಿಕ್ ಟಚ್ ಕೊಡಿ.
ಎಥ್ನಿಕ್ ಲುಕ್ಸ್ ಗಾಗಿ ಬ್ರೌನ್ ಯಾ ನ್ಯೂಡ್ ಕಲರ್ ನ ಐ ಶ್ಯಾಡೋ ಹಚ್ಚಿ, ತುಸು ದಪ್ಪಗೆ ಐಲೈನರ್ ಎಳೆಯಿರಿ. ಇದಾದ ಮೇಲೆ ಸಣ್ಣ ಗಾತ್ರದ ಬಿಂದಿ ಇರಿಸಿ. ನೀವು ಹೇಝಲ್ ಕಲರ್ ನ ಐ ಲೆನ್ಸೆಸ್ ಸಹ ಬಳಸಬಹುದು. ಇದರಿಂದ ವೆರಿ ನ್ಯಾಚುರಲ್ ಪರ್ಫೆಕ್ಟ್ ಲುಕ್ ಸಿಗುತ್ತದೆ. ಜೊತೆಗೆ ಮಸ್ಕರಾ ಸಹ ಬಳಸಿರಿ, ಹಾಗೆಯೇ ಪಿಂಕ್/ಪೀಚ್ ಬಣ್ಣದ ಬ್ಲಶ್ ತೀಡುತ್ತಾ ರೆಡ್/ಬ್ರೈಟ್ ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡು, ನಿಮ್ಮ ಲುಕ್ಸ್ ನ್ನು ಕಂಪ್ಲೀಟ್ ಮಾಡಿ. ನಿಮ್ಮ ಹೇರ್ ಸ್ಟೈಲ್ ನಲ್ಲಿ ಒಂದು ಲೋ ಸೈಡ್ ಬನ್ ಮಾಡಿ, ಅದನ್ನು ಬೇಬಿ ಬ್ರೆಥ್ ಹೂನಿಂದ ಅಲಂಕರಿಸಿ. ಈ ಲುಕ್ ನಿಂದ ನೀವು ಫ್ಯೂಷನ್ ಇಂಡಿಯನ್/ಎಥ್ನಿಕ್ ಲುಕ್ ಪಡೆಯುವಿರಿ.
ಗೋ್ಡ ಗ್ಲಾಮ್ ಲುಕ್ ದೀಪಾವಳಿ ಪಾರ್ಟಿಗಳಿಗೆ ಚೆನ್ನಾಗಿ ಸೂಟ್ ಆಗುತ್ತದೆ. ಬೆಳಕಿನ ಹಬ್ಬವಾದ ದೀಪಾಳಿಗಾಗಿ ನೀವು ನಿಮ್ಮ ಮೇಕಪ್ ನಲ್ಲಿ ಗ್ಲಿಟರ್‌ಹೈ ಲೈಟರ್ ಬಳಸುತ್ತಾ, ಹೆಚ್ಚಿನ ಗ್ಲೋ ಪಡೆಯಿರಿ. ಬ್ರೌನ್ ಬಣ್ಣದ ಐ ಶ್ಯಾಡೋದಿಂದ ಕಂಗಳ ಕೆಳ ರೆಪ್ಪೆಯನ್ನು ಕಲರ್ ಮಾಡಿ. ಇದರ ಮೇಲೆ ಕಾಪರ್/ಬ್ರಾನ್ಝ್ ಯಾ ಗೋಲ್ಡನ್ ಕಲರ್ ನ ಐ ಗ್ಲಿಟರ್ ನ್ನು ನಿಮ್ಮ ಬ್ರಶ್ ಗೆ ಹಾಕಿಕೊಂಡು, ಕಂಗಳಿಗೆ ತೀಡಿರಿ. ನಂತರ ಲೈಟ್ ಪಿಂಕ್ ಕಲರ್ ನ ಬ್ಲಶ್ ಹಚ್ಚಿ ನ್ಯೂಡ್ ಯಾ ಬ್ರೌನ್ ಲಿಪ್ ಸ್ಟಿಕ್ ಹಚ್ಚಬಹುದು. ಬ್ರಾಂಝ್ ಬಣ್ಣದ ಹೈಲೈಟರ್ ಬಳಸುತ್ತಾ ನಿಮ್ಮ ಲುಕ್ಸ್ ನ್ನು ಗ್ಲಾಮರಸ್ ಆಗಿಸಿ. ನೀವು ಬಯಸಿದರೆ, ಈ ಲುಕ್ ನಲ್ಲಿ ಐ ಲ್ಯಾಶೆಸ್ ಅಳವಡಿಸುವ ಬದಲು ಹೆವಿ ಮಸ್ಕರಾ ತೀಡಬಹುದು.





