ದೀಪಾವಳಿ ಎಂದರೆ ಮನೆ ಮನಗಳಲ್ಲಿ ಹಬ್ಬದ ತಯಾರಿ ಆರಂಭವಾಗುತ್ತದೆ. ಈಗ ಬರಲಿರುವ ಹಬ್ಬದ ತಯಾರಿಯಲ್ಲಿ ಮನೆಯನ್ನು ಶುಚಿಗೊಳಿಸುವುದು ಮತ್ತು ಬಣ್ಣ ಹಚ್ಚುವುದು ಅತ್ಯಂತ ಮಹತ್ವದ್ದಾಗಿದೆ. ಹಾಗಾದರೆ, ಈ ದೀಪಾವಳಿಯಂದು ನಾವು ನಮ್ಮ ಮನೆಗೆ ಹೊಂದಿಕೆ ಆಗುವಂತಹ ಬಣ್ಣಗಳ ಮೂಲಕ ಹೊಸ ರೂಪವನ್ನು ಏಕೆ ನೀಡಬಾರದು? ಇದರಿಂದ ನಮ್ಮ ಮನೆಯನ್ನೇಕೆ ಇನ್ನಷ್ಟು ಸುಂದರಗೊಳಿಸಬಾರದು?
ಅದು ಮನೆಯಾಗಿರಲಿ ಅಥವಾ ಯಾವುದೇ ಕೋಣೆಯಾಗಿರಲಿ, ಸರಿಯಾದ ಬಣ್ಣಗಳ ಸಮಯೋಜನೆಯಿಂದ ಅದನ್ನು ಸುಂದರವಾಗಿ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಸರಿಯಾದ ಬಣ್ಣಗಳ ಆಯ್ಕೆ, ಈ ಮಾಹಿತಿಯ ಮೂಲಕ ನಿಮ್ಮ ಮನೆಯನ್ನು ಹೇಗೆ ಸುಂದರವಾಗಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಬಿಳಿ ಅಥವಾ ತಿಳಿ ಬಣ್ಣದ ಆಯ್ಕೆ
ಹೆಚ್ಚಿನ ಜನರು ಮನೆಯ ಗೋಡೆಗಳಿಗೆ ಬಿಳಿ ಅಥವಾ ತಿಳಿ ಬಣ್ಣವನ್ನು ಆರಿಸುತ್ತಾರೆ. ಏಕೆಂದರೆ, ಅದು ಕ್ಲಾಸಿ ಲುಕ್ ನೀಡುತ್ತದೆ. ಅದು ಯಾವಾಗಲೂ ನೋಡಲು ಚೆನ್ನಾಗಿಯೇ ಕಾಣುತ್ತದೆ. ಬಿಳಿ ಅಥವಾ ತಿಳಿ ಬಣ್ಣದ ಗೋಡೆಗಳು ಇಡೀ ಕೋಣೆಯನ್ನು ದೊಡ್ಡದಾಗಿ ಮತ್ತು ಉತ್ತಮವಾಗಿ ಕಾಣುವಂತೆ ಮಾಡಿ, ಉತ್ತಮ ಬೆಳಕನ್ನು ನೀಡುತ್ತದೆ. ಕೊಠಡಿ ಅಥವಾ ಮನೆಯಲ್ಲಿ ಇರುವ ಪೀಠೋಪಕರಣಗಳು ಅಥವಾ ಅಲಂಕಾರಿಕ ವಸ್ತುಗಳ ಮೇಲೆ ನೋಡುಗರ ಗಮನ ಸೆಳೆಯುತ್ತದೆ.
ಈ ರೀತಿಯ ಬಣ್ಣಗಳನ್ನು ಆರಿಸಿ
ಕಾಂಟ್ರಾಸ್ಟ್ ಬಣ್ಣಗಳನ್ನು ಆರಿಸುವ ಮೂಲಕ ನೀವು ನಿಮ್ಮ ಮನೆಯನ್ನು ಕಲರ್ ಫುಲ್ ಆಗಿ ಮಾಡಬಹುದು. ಇದಕ್ಕಾಗಿ ನೀವು ಹಳದಿ ಬಣ್ಣದೊಂದಿಗೆ ಕೆಂಪು, ಕಿತ್ತಳೆಯೊಂದಿಗೆ ಹಸಿರು ಅಥವಾ ಹಳದಿ ಇತ್ಯಾದಿ ಬಣ್ಣಗಳ ಕಾಂಬಿನೇಶನ್ ಮಾಡಬಹುದು. ಆದರೆ ಈ ಆಯ್ಕೆ ಮಾಡಿಕೊಂಡಿದ್ದೀರಿ, ನಂತರ ಅಲಂಕಾರಕ್ಕಾಗಿ ಬಳಸುವ ಕರ್ಟನ್ ಗಳು, ಬೆಡ್ ಶೀಟ್, ಕುಶನ್ ಅಥವಾ ಸೋಫಾ ಕವರ್ ನಂತಹ ಯಾವುದೇ ವಸ್ತುವನ್ನು ಇರಿಸುವುದು ಉತ್ತಮವಾಗಿರುತ್ತದೆ.
ನೀವು ಗೋಡೆಗಳಿಗೆ ಕೆಂಪು ಬಣ್ಣನ್ನು ಆರಿಸಿದ್ದರೆ, ಬೆಡ್ ಶೀಟ್ ಅಥವಾ ಕುಶನ್ ಗಳನ್ನು ಹಸಿರು ಬಣ್ಣದಲ್ಲಿ ಆಯ್ಕೆ ಮಾಡಬಹುದು. ಅದೇ ರೀತಿ, ನೀಲಿ ಮತ್ತು ಕಿತ್ತಳೆ ಬಣ್ಣದ ಕಾಂಟ್ರಾಸ್ಟ್ ಸಂಯೋಜನೆಗಳನ್ನು ಸಹ ಮಾಡಬಹುದು. ಈ ಬಣ್ಣಗಳ ಸಮನ್ವಯದಿಂದ ಮನೆಯನ್ನು ಅಲಂಕರಿಸುವುದರಿಂದ ಮನೆ ಕಳೆಕಳೆಯಾಗಿ ಕಾಣುತ್ತದೆ.
ಒಂದೇ ಬಣ್ಣದ ಶೇಡಿನ ಆಯ್ಕೆ
ಒಂದೇ ಕೋಣೆಯೊಳಗೆ ಒಂದೇ ಬಣ್ಣದ ವಿವಿಧ ಶೇಡ್ ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಮನೆಗೆ ವಿಭಿನ್ನ ಮತ್ತು ಸುಂದರವಾದ ಲುಕ್ ನೀಡಬಹುದು. ಅದೇ ಕೋಣೆಯ ಗೋಡೆಯು ಕಡು ನೀಲಿ ಬಣ್ಣವನ್ನು ಹೊಂದಿರಬೇಕು ಮತ್ತು ಹೈಲೈಟ್ ಮಾಡಿದ ಗೋಡೆಗೆ ಕಡು ನೀಲಿ ಹಾಗೂ ತಿಳಿ ನೀಲಿ ಬಣ್ಣ ಹಚ್ಚಬಹುದು.
ಇತ್ತೀಚಿನ ದಿನಗಳಲ್ಲಿ ಇದು ಬಹಳ ಟ್ರೆಂಡ್ ನಲ್ಲಿದೆ ಮತ್ತು ಒಂದು ಗೋಡೆಯ ಮೇಲೆ ಅದೇ ಬಣ್ಣದ ಕಾಂಟ್ರಾಸ್ಟ್ ಪೇಪರ್ ನ್ನು ಹಚ್ಚುವ ಟ್ರೆಂಡ್ ಇದೆ. ನಂತರ ಇರುವ ಜಾಗಕ್ಕೆ ತಿಳಿ ನೀಲಿ ಅಥವಾ ಬಿಳಿ ಬಣ್ಣಕ್ಕೆ ಸ್ಥಾನ ನೀಡಬಹುದು. ಅಂತೆಯೇ, ಇದನ್ನು ಇತರ ಬಣ್ಣಗಳ ಫಲಕಗಳೊಂದಿಗೆ ಸಹ ಮಾಡಬಹುದು.
ಕೋಣೆಗೆ ಅನುಗುಣವಾದ ಬಣ್ಣಗಳು
ಬಣ್ಣಗಳ ಸರಿಯಾದ ಬಳಕೆಯಿಂದ, ಮನೆಯನ್ನು ಸ್ಟೈಲಿಶ್ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಆದ್ದರಿಂದ ದಿನದ ಹೆಚ್ಚಿನ ಸಮಯವನ್ನು ಕಳೆಯುವ ಕೋಣೆಗಳಲ್ಲಿ ಮತ್ತು ಬಳಸದ ಕೋಣೆಗಳಲ್ಲಿಯೂ ಸಹ ಬೆಳಕು ಮತ್ತು ಕಣ್ಣಿಗೆ ತಂಪು ನೀಡುವಂತಹ ಶಾಂತಿಯುತ ಬಣ್ಣಗಳನ್ನು ಬಳಸಬಹುದು ಎಂಬುದು ನೆನಪಿರಲಿ. ಇನ್ನು ಕೆಲವು ಗಂಟೆಗಳ ಕಾಲ ಮಾತ್ರ ಬಳಸುವ ಕೊಠಡಿಗೂ ಗಾಢವಾದ ಬಣ್ಣಗಳನ್ನು ಬಳಸುವುದರಿಂದ ತೊಂದರೆಯಿಲ್ಲ.
ನಿಮ್ಮ ಕೋಣೆಯೊಳಗೆ ಸಾಕಷ್ಟು ಸೂರ್ಯನ ಬೆಳಕು ಬರುತ್ತಿದ್ದರೆ, ಬೆಳಕನ್ನು ಕಡಿಮೆ ಮಾಡಲು ಗಾಢ ಬಣ್ಣಗಳನ್ನು ಬಳಸಬಹುದು. ಮತ್ತೊಂದೆಡೆ, ಸೂರ್ಯನ ಬೆಳಕು ಬರದಿದ್ದ ಕೋಣೆಗೆ ಹಳದಿ ಅಥವಾ ಬಿಳಿ ಬಣ್ಣವನ್ನು ಬಳಸಬಹುದು. ಮನೆಯಲ್ಲಿನ ಒಂದೊಂದು ಕೋಣೆಗೂ ವಿಭಿನ್ನವಾದ ಬಣ್ಣಗಳನ್ನು ಬಳಸಬಹುದು. ಮನೆಯಲ್ಲೇನಾದರೂ ಧ್ಯಾನಕ್ಕಾಗಿಯೇ ಒಂದು ಕೋಣೆ ಇದ್ದರೆ, ಅಲ್ಲಿಗೆ ಬಿಳಿ ಅಥವಾ ಯಾವುದೇ ತಿಳಿ ಬಣ್ಣವನ್ನು ಆರಿಸುವುದು ಸೂಕ್ತ.
ಏಕೆಂದರೆ ಈ ಬಣ್ಣ ಮನಸ್ಸಿಗೆ ಆಹ್ಲಾದತೆ ಹಾಗೂ ಶಾಂತಿಯನ್ನು ನೀಡುತ್ತದೆ. ಅಡುಗೆಮನೆ, ಸ್ನಾನದ ಗೃಹ ಇತ್ಯಾದಿಗಳಲ್ಲಿ ನೀವು ಬಿಳಿ ಬಣ್ಣ, ಪೀಚ್ ಅಥವಾ ಯಾವುದೇ ತಿಳಿ ಬಣ್ಣವನ್ನು ಆಯ್ಕೆ ಮಾಡಬಹುದು. ಇದರಿಂದ ಮನೆಯ ತುಂಬಾ ಸಾಕಷ್ಟು ಬೆಳಕು ಇರುವಂತೆ ಕಾಣಿಸುತ್ತದೆ.
ಬೆಳಕಿಗೂ ಸಹ ಗಮನ ಕೊಡಿ
ಮನೆಯ ಅಲಂಕಾರಕ್ಕೆ ಬಣ್ಣಗಳನ್ನು ಆಯ್ಕೆ ಮಾಡುವಾಗ, ಆ ಸ್ಥಳದಲ್ಲಿ ಬೆಳಕು ಹೇಗಿದೆ? ಹೆಚ್ಚಿದೆಯೋ ಕಡಿಮೆ ಇದೆಯೋ? ಅಲ್ಲಿಗೆ ಯಾವ ಬಣ್ಣ ಸೂಕ್ತವಾಗುವುದು? ಯಾವ ಬಣ್ಣ ಹಾಕಿದಾಗ ಆ ಕೊಠಡಿ ಎದ್ದು ಕಾಣುತ್ತದೆ? ಎಂಬುದನ್ನು ತಿಳಿದುಕೊಳ್ಳಬೇಕೆಂದರೆ, ಇದಕ್ಕಾಗಿ, ಬೆಳಕನ್ನು ವಿಭಜಿಸುವ ಜಾಣ್ಮೆ ಅಗತ್ಯ. ಬೆಳಕು ಸರಿಯಾದ ಪ್ರಮಾಣದಲ್ಲಿ ಗೋಡೆಯ ಮೇಲೆ ಬೀಳುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಇಂತಹ ಗುರುತಿಸುವಿಕೆಗಳು ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ.
ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಬೆಳಕಿನಲ್ಲಿ ಒಂದೇ ಬಣ್ಣ ವಿಭಿನ್ನವಾಗಿ ಕಾಣುತ್ತದೆ ಮತ್ತು ನಿರ್ದಿಷ್ಟ ಕೋನದಿಂದ ಅದರ ಮೇಲೆ ಬೆಳಕು ಬಿದ್ದಾಗ, ಆ ಬಣ್ಣದ ಪರಿಣಾಮ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಆದ್ದರಿಂದ ಬಣ್ಣಗಳನ್ನು ಆಯ್ಕೆ ಮಾಡುವಾಗ, ಪ್ರತಿ ಬೆಳಕಿನಲ್ಲಿಯೂ ನಿಮಗೆ ಉತ್ತಮವಾಗಿ ಕಾಣುವ ಬಣ್ಣದ ಶೇಡ್ ಗಳನ್ನು ಆರಿಸಿಕೊಳ್ಳುವುದು ಸೂಕ್ತ.
ಹೆಚ್ಚು ಬಣ್ಣಗಳನ್ನು ಬಳಸಬೇಡಿ
ಒಂದೇ ಕೋಣೆಯಲ್ಲಿ ಎಲ್ಲ ಪ್ರಕಾಶಮಾನವಾಗಿ ಇದ್ದರೆ, ಕಣ್ಣಿಗೂ ಬೆರಗು ನೀಡುತ್ತದೆ. ಅದೇ ರೀತಿ ಒಂದು ಕೋಣೆಯಲ್ಲಿ ಹಲವಾರು ಬಣ್ಣಗಳಿಗೆ ಅವಕಾಶ ಕೊಟ್ಟಾಗ, ಸುಂದರವಾಗಿ ಕಾಣುವ ಬದಲು ಆ ಕೋಣೆ ವಿಚಿತ್ರವಾಗಿ ಕಾಣಿಸುತ್ತದೆ. ಆದ್ದರಿಂದ ನೀವು ಮನೆಯನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲು ಬಯಸಿದರೆ, ಅವುಗಳನ್ನು ಬೇರೆ ಬೇರೆ ಕೋಣೆಗಳಲ್ಲಿ ಬಳಸಬಹುದು. ಒಂದೇ ಕೋಣೆಯಲ್ಲಿ ಹಲವಾರು ಬಣ್ಣಗಳನ್ನು ಬಳಸದಿರುವುದು ಒಳ್ಳೆಯದು. ಇದರಿಂದ ಅದರ ಸೌಂದರ್ಯ ಕೆಡುತ್ತದೆ.
ಅಲಂಕಾರದಿಂದ ಹೊಸ ಚೈತನ್ಯ
ನೀವು ಮನೆಯಲ್ಲಿ ಯಾವುದೇ ಕೋಣೆಗೆ ಹೊಸ ಚೈತನ್ಯವನ್ನು ನೀಡಲು, ಧನಾತ್ಮಕ ಶಕ್ತಿಯನ್ನು ತುಂಬಲು ಬಯಸಿದರೆ ಕರ್ಟನ್, ಕುಶನ್, ಕಾರ್ಪೆಟ್ ಗಳಂತಹ ವಸ್ತುಗಳನ್ನು ಅಲಂಕಾರಕ್ಕಾಗಿ ಬಳಸಬಹುದು. ತಾಜಾ ಹೂ, ಪುಸ್ತಕ ಮತ್ತು ದೀಪಗಳು ಕೂಡ ನಿಮ್ಮ ಕೋಣೆಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತವೆ. ನೀವು ಬಣ್ಣಗಳೊಂದಿಗೆ ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಇದನ್ನು ಊಟದ ಕೋಣೆಯಿಂದ ಪ್ರಾರಂಭಿಸುವುದು ಉತ್ತಮ. ಇದರಿಂದ ನೀವು ಊಟ ಮಾಡುವಾಗ ಶಾಂತ ಅನುಭವ ಪಡೆಯಬಹುದು.
ಡೈನಿಂಗ್ ಟೇಬಲ್ ಮೇಲೆ ದೀಪ ಇಡಿ. ಇದರಿಂದ ಟೇಬಲ್ ನ ಅಂದ ಮತ್ತಷ್ಟು ಹೆಚ್ಚುತ್ತದೆ. ಮೇಜಿನ ಸುತ್ತಲೂ ಏಕರೂಪದ ಲೈಟಿಂಗ್ ಇರಲಿ. ಆದರೆ, ಟೇಬಲ್ ಮೇಲೆ ದೀಪವನ್ನು ಇರಿಸುವಾಗ, ಬೆಳಕು ನೇರವಾಗಿ ಕಣ್ಣುಗಳ ಮೇಲೆ ಬೀಳಬಾರದು ಮತ್ತು ಹೆಚ್ಚು ಪ್ರಕಾಶಮಾನವಾಗಿ ಇರಬಾರದು. ಇದರಿಂದ ನೀವು ಊಟ ಮಾಡುವಾಗ ಯಾವುದೇ ಸಮಸ್ಯೆ ಎದುರಾಗಬಾರದು.
ಬಣ್ಣಗಳು ನಿಮ್ಮ ಮನೋವಿಜ್ಞಾನದ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ಸರಿಯಾದ ಬಳಕೆಯು ಮನಸ್ಸನ್ನು ಶಾಂತವಾಗಿ ಇರಿಸುತ್ತದೆ. ಇನ್ನು ಮನಸ್ಸು ಶಾಂತವಾಗಿ ಇರಬೇಕಾದ ವಿಚಾರಕ್ಕೆ ಬಂದರೆ, ಮನೆಗಿಂತ ಬೇರೆ ಜಾಗ ಮತ್ಯಾವುದೂ ಇಲ್ಲ. ಹಾಗಾಗಿ ಮನೆಯ ಒಳಭಾಗಕ್ಕೆ ಸರಿಯಾದ ಬಣ್ಣಗಳ ಆಯ್ಕೆ ಬಹಳ ಮುಖ್ಯ, ಏಕೆಂದರೆ ನಾವು ಇಲ್ಲಿ ದೀರ್ಘಕಾಲ ಇರುತ್ತೇವೆ. ಆಗ ಆ ಬಣ್ಣಗಳು ನಮ್ಮ ಮೇಲೆ ಸರಿಯಾದ, ಧನಾತ್ಮಕ, ಸಂತೋಷ ಹಾಗೂ ಆಹ್ಲಾದಕರ ಪರಿಣಾಮ ಬೀರುತ್ತದೆ. ಆಗ ಮಾತ್ರ ನಾವು ಮನೆಯಲ್ಲಿ ಸಂತೋಷ ಹಾಗೂ ನೆಮ್ಮದಿಯಿಂದ ನೆಲೆಸಬಹುದು.
– ಶೋಭಾ ಕುಮಾರ್





