ಸಂಗೀತ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದು, ಅತಿ ಚಿಕ್ಕ ಪ್ರಾಯದಲ್ಲೇ ಮೇರು ಮಟ್ಟಕ್ಕೆ ಏರಿರುವ ಮಲೆನಾಡಿನ ಯುವ ಸಾಧಕಿ ಗಾನಕೋಗಿಲೆ ಸಾಧ್ವಿನಿ ಕೊಪ್ಪರ ಬಗ್ಗೆ ಪರಿಚಯ ಹೊಂದೋಣವೇ…..?

ಸಂಗೀತದ ಸಪ್ತ ಸ್ವರಗಳು ನಮ್ಮ ಮನಸ್ಸನ್ನು ತಣಿಸುತ್ತದೆ. ಸಂಗೀತ ಸ್ವರ, ಶ್ರುತಿ, ರಾಗ, ಲಯದ ಸಮತೋಲಿತ ಮಿಶ್ರಣ. ಕಠಿಣ ಪರಿಶ್ರಮದಿಂದ ಮಾತ್ರ ಶ್ರುತಿ ಹಾಗೂ ಲಯಬದ್ಧವಾಗಿ ಹಾಡಲು ಸಾಧ್ಯವಾಗುತ್ತದೆ. ತೊದಲು ನುಡಿಯುತ್ತಿರುವಾಗಲೇ ಸಪ್ತ ಸ್ವರಗಳನ್ನು ಸರಾಗವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದ, ಶಾಸ್ತ್ರೀ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಯುವ ಸಾಧಕಿ ಸಾಧ್ವಿನಿ ಕೊಪ್ಪರವರ ಕಿರು ಪರಿಚಯವೇ ಈ ಲೇಖನ.

ಸಾಧ್ವಿನಿ ಕೊಪ್ಪ ಮಲೆನಾಡಿನ ಈ ತಲೆಮಾರಿನ ಗಾನಕೋಗಿಲೆ ಎಂದರೆ ತಪ್ಪಾಗಲಾರದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಇವರ ಹುಟ್ಟೂರು. ಸಾಧ್ವಿನಿ ತಾವು ಮೂವರು ವರ್ಷವಿದ್ದಾಗಲೇ ಸಂಗೀತ ಕಲಿಕೆಯನ್ನು ಪ್ರಾರಂಭಿಸಿದರು. ಸಂಗೀತದ ಹಿನ್ನೆಲೆ ಕುಟುಂಬದಲ್ಲಿ ಇತ್ತು. ಸಾಧ್ವಿನಿ ತಂದೆ ಶ್ರೀನಿಧಿ ಹಾಗೂ ತಾಯಿ ಶೋಭಾ `ಶ್ರೀ ನಾದಬ್ರಹ್ಮ ಸಂಗೀತ ಹಾಗೂ ನೃತ್ಯ ಶಾಲೆ’ ನಡೆಸುತ್ತಿದ್ದು, ಸಂಗೀತದ ಬೇರುಗಳು ಸಾಧ್ವಿನಿಯ ಬಾಲ್ಯದಲ್ಲಿ ಗಟ್ಟಿಯಾಗಿ ರೂಪುಗೊಳ್ಳಲು ಕಾರಣವಾಯಿತು.

ಸಾಧ್ವಿನಿ ತಮ್ಮ ಐದನೇ ವಯಸ್ಸಿಗೆ ವೇದಿಕೆಯನ್ನೇರಿ ಸಂಗೀತದ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು. ಸಾಧ್ವಿನಿ ವಿದ್ವಾನ್‌ ಮತ್ತೂರು ಟಿ. ಗೋಪಾಲ್ ರವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುವುದರ ಜೊತೆಗೆ ವಿದ್ವಾನ್ ಎಂ.ಇ. ನಟರಾಜ್‌ ರ ಬಳಿ ವಯೋಲಿನ್‌ ಹಾಗೂ ವಿದ್ವಾನ್‌ ನಾರಾಯಣ್‌ (ಬೆಂಗಳೂರು)ರ ಬಳಿ ಭರತನಾಟ್ಯವನ್ನು ಅಭ್ಯಸಿಸಿ ಸಂಗೀತ, ವಾದ್ಯ ಹಾಗೂ ನೃತ್ಯ ಕಲೆಯಲ್ಲೂ ಪರಿಣಿತಿ ಪಡೆದಿರುವ ಬಹುಮುಖ ಪ್ರತಿಭೆಯೆಂದರೆ, ಅತಿಶಯೋಕ್ತಿ ಆಗಲಾರದು.

ಸಂಗೀತದ ವಿವಿಧ ಪ್ರಕಾರಗಳಲ್ಲಿ ಮುನ್ನಡೆ

ಸಾಧ್ವಿನಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಚಿತ್ರ ಸಂಗೀತ, ಫ್ಯೂಷನ್‌ ಸಂಗೀತ…. ಹೀಗೆ ಬೇರೆ ಬೇರೆ ಪ್ರಕಾರದ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ದೇಶದಾದ್ಯಂತ ನೀಡಿದ್ದಾರಲ್ಲದೆ, ಅಮೆರಿಕಾ, ಓಮನ್‌ ದೇಶಗಳನ್ನು ಒಳಗೊಂಡಂತೆ ಅನೇಕ ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಸರಾಂತ ಕಲಾವಿದರಾದ ವಿಜಯ ಪ್ರಕಾಶ್‌, ರಾಜೇಶ್ ಕೃಷ್ಣನ್‌, ರಾಜೇಶ್‌ ವೈದ್ಯ ಮುಂತಾದವರೊಂದಿಗೆ ಸಂಗೀತ ಕಾರ್ಯಕ್ರಮಗಳಲ್ಲಿ ಗಾಯಕಿಯಾಗಿ ವೇದಿಕೆ ಹಂಚಿಕೊಂಡಿದ್ದಾರೆ.

ಇವರು ಆಕಾಶವಾಣಿ ಕಲಾವಿದೆ ಹಾಗೂ ಹಲವಾರು ಭಕ್ತಿಗೀತೆ, ಭಾವಗೀತೆ, ನೃತ್ಯರೂಪಕ ಧ್ವನಿ ಸುರುಳಿಗಳಲ್ಲಿ ಹಾಡಿದ್ದಾರೆ. ಝೀ ಕನ್ನಡ ಸರಿಗಮಪ 15ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಆದ ಸಾಧ್ವಿನಿ ಕೊಪ್ಪ ತೀರ್ಪುಗಾರರಿಂದ `ಸ್ವರಶ್ರೀ’ ಹಾಗೂ `ಫಿರ್ಯಸ್‌ಸಿಂಗರ್‌’ ಎಂಬ ಬಿರುದನ್ನು ಪಡೆದಿದ್ದಾರೆ.

ವಿದ್ಯಾಭ್ಯಾಸದಲ್ಲೂ ಮೇಲುಗೈ

ಸಂಗೀತದ ಜೊತೆಗೆ ವಿದ್ಯಾಭ್ಯಾಸದಲ್ಲೂ ಸಾಧನೆಗೈದಿರುವ ಸಾಧ್ವಿನಿ ಎಂ.ಬಿ.ಎ ಪದವೀಧರೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿ, ಹೆಸರಾಂತ ಸಂಗೀತ ನಿರ್ದೇಶಕರ ಹಾಡುಗಳಿಗೆ, ಸಂಯೋಜನೆಗೆ ದನಿಯಾಗಿದ್ದಾರೆ. ಇದರ ಜೊತೆಗೆ ಕನ್ನಡ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸಂಗೀತ ಸಂಯೋಜನೆಯನ್ನು ಕೂಡ ನೀಡಿದ್ದಾರೆ.

ಹಲವು ಪ್ರಶಸ್ತಿಗಳ ಸರಮಾಲೆ

20ರ ಹರೆಯದ ಯುವ ಸಾಧಕಿಗೆ ಹಲವಾರು ಪ್ರಶಸ್ತಿಗಳು ಹಾಗೂ ಬಿರುದುಗಳು ಸಂದಿವೆ. ಮುಖ್ಯಮಂತ್ರಿಗಳಿಂದ `ಕಲಾಶ್ರೀ’ ಹಾಗೂ `ಅಸಾಧಾರಣ ಪ್ರತಿಭೆ’ ಪ್ರಶಸ್ತಿಗಳಲ್ಲದೆ, ಅನೇಕ ಸಂಘ ಸಂಸ್ಥೆಗಳಿಂದ `ಗಾನಶ್ರೀ, ಮಲೆನಾಡ ಶ್ರೀ, ಗಾನ ಕೋಗಿಲೆ’ ಮುಂತಾದ ಹತ್ತು ಹಲವು ಬಿರುದುಗಳ ಜೊತೆ ಯಶ್‌ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ಹೆಗ್ಗಳಿಕೆ ಇವರದಾಗಿದೆ.

ಮಲೆನಾಡ ಮಡಿಲಿನ ಹೆಮ್ಮೆಯ ಗಾನ ಕೋಗಿಲೆಯಾದ ಸಾಧ್ವಿನಿ ಕೊಪ್ಪ ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಗೈದು ಇನ್ನೂ ಎತ್ತರದ ಮಜಲುಗಳನ್ನು ತಲುಪಲಿ. ತನ್ಮೂಲಕ ಸಂಗೀತ ಕಲಾ ಸೇವೆಯನ್ನು ನಾಡಿನ ಕೀರ್ತಿಯನ್ನು ಎಲ್ಲೆಡೆ ಹರಡಲಿ. ಕೇಳುಗ ದೊರೆಗಳ ಹಾರೈಕೆ, ಪ್ರೋತ್ಸಾಹ ಎಂದಿಗೂ ಆಕೆಯ ಜೊತೆಯಲ್ಲಿ ಇರಲಿ ಎಂಬುದೇ ಈ ಕಿರುಪರಿಚಯ ಲೇಖನದ ಆಶಯ.

ಮಲೆನಾಡ ಯುವ ಪ್ರತಿಭೆ ಸಾಧ್ವಿನಿ ಕೊಪ್ಪರನ್ನು ಪರಿಚಯಿಸಲು ಮಲೆನಾಡಿನವಳೇ ಆದ ನನಗೆ ಇದು ಹೆಮ್ಮೆಯ ವಿಷಯ.

ಚೇತನಾ ಭಾರ್ಗವ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ