ಅತ್ತ ಅಲ್ಲೂ ಸಲ್ಲದ, ಇತ್ತ ಇಲ್ಲೂ ಸಲ್ಲದರು

ಅಮೆರಿಕಾದಿಂದ ಅಕ್ರಮ ರೀತಿಯಲ್ಲಿ ಒಳಬಂದ ನುಸುಳುಕೋರರನ್ನು ಮಿಲಿಟರಿ ಪ್ಲೇನುಗಳ ಮುಖಾಂತರ ಟೆಕ್ಸಾಸ್‌ ನಿಂದ ಪಂಜಾಬ್‌ ನ ಅಮೃತಸರ ಮೂಲೆಗೆ ರವಾನಿಸಿದಾಗ, ಭಾರತ ಸರ್ಕಾರ ಮೌನವಾಗಿದ್ದದ್ದನ್ನು ಅರ್ಥೈಸಿಕೊಳ್ಳಬಹುದು. ಇಂಥ ನುಸುಳುಕೋರರು ವೀಸಾರಹಿತರಾಗಿ, ಕಾನೂನುಬಾಹಿರ ವಿಧಾನಗಳಿಂದ, ವಿಶ್ವದ ಅನೇಕ ದೇಶಗಳನ್ನು ಹಾದು, ಕಾಡುಮೇಡು ಅಲೆದು, ಅಂತೂ ಅಮೆರಿಕಾ ತಲುಪಿಬಿಡುತ್ತಾರೆ. ವಿಶ್ವಗುರು ಭಾರತ ಬಿಟ್ಟು ಈ ಧನಭೂಮಿಗೆ ಬಂದುಬಿಟ್ಟೆಲ್ಲ ಎಂದು ಹಿರಿ ಹಿರಿ ಹಿಗ್ಗುತ್ತಾರೆ. ಗುಲಾಮರಾಗಿದ್ದರೂ ಈ ನಾಡೇ ಸ್ವರ್ಗ ಎಂದು ಭಾವಿಸುತ್ತಾರೆ.

ರಾಜಮಾರ್ಗದಲ್ಲಿ ಭಾರತದಿಂದ ಅಮೆರಿಕಾ ತಲುಪಲು ಲಕ್ಷಾಂತರ ರೂ. ಖರ್ಚಾಗುತ್ತದೆ. ಅದೇ ಕಳ್ಳ ಮಾರ್ಗದಲ್ಲಿ ವೀಸಾ ರಹಿತರಾಗಿ ಕಾನೂನುಬಾಹಿರವಾಗಿ ಹೊರಟರೆ ಖರ್ಚು ಎಷ್ಟೋ ಕಡಿಮೆ ಆಗುತ್ತದೆ. ಒಂದು ವರದಿಯ ಪ್ರಕಾರ, ಕಳೆದ ಕೆಲವೇ ವರ್ಷಗಳಲ್ಲಿ 20-30 ಸಾವಿರ ಭಾರತೀಯರಿಗೆ, ವರ್ಕ್‌ ವೀಸಾ ಸಿಗದ ಕಾರಣ, ಬೇರೆ ದೇಶದ ಕಾಡುಮೇಡು ಅಲೆದು, ಜೀವವನ್ನು ಅಂಗೈಲಿ ಹಿಡಿದು, ಅಮೆರಿಕಾ ತಲುಪಿದ್ದಾರಂತೆ! ಟ್ರಂಪಣ್ಣ ಸುಮ್ಮನೇ ಬಿಟ್ಟಾನಾ? ಇವರ ಮೇಲೆ ಹದ್ದಿನಂತೆ ಹರಿಹಾಯ್ದು, ನಿಷ್ಕರುಣೆಯಿಂದ ಅವರನ್ನು ಹಿಡಿದು, ಭಾರತ ಅಥವಾ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ರವಾನೆ ಮಾಡುತ್ತಿದ್ದಾರೆ.

ಭಾರತವಂತೂ ಈ ರೀತಿ ಅಸಂಖ್ಯಾತ ಬಾಂಗ್ಲಾದೇಶಿಗಳು, ಬರ್ಮಾ, ಶ್ರೀಲಂಕಾ, ನೇಪಾಳದಂಥ ಕಾನೂನುಬಾಹಿರ ನುಸುಳುಕೋರರನ್ನು, ಉಗುಳಲಾರದೆ ನುಂಗಲಾರದೆ ಬಿಸಿ ತುಪ್ಪವಾಗಿ ಸಹಿಸುತ್ತಿದೆ. ಅದರಲ್ಲೂ ಹೀಗೆ ಬಂದ ಮುಸ್ಮಾನರ ಸಂಖ್ಯೆ ಅತಿ ಹೆಚ್ಚು. ವೋಟ್‌ ಬ್ಯಾಂಕಿಂಗ್‌ ಗಾಗಿ ಅನಾದಿಕಾಲದಿಂದಲೂ ಇವರನ್ನು ಸಹಿಸಲಾಗುತ್ತಿದೆ.

ಅಮೆರಿಕಾ ಇಂಥವರನ್ನು ಹೀಗೆ ನಡೆಸಿಕೊಳ್ಳುತ್ತಿರುವುದು, ಅವರ ಕಾನೂನಿನ ಪ್ರಕಾರ ಸರಿ ಇರಬಹುದು, ಆದರೆ ಮಾನವೀಯತೆ ಅಂತೂ ಅಲ್ಲ. ಇಂಥ ನುಸುಳುಕೋರರು ಯಾವ ದೇಶದವರೇ ಆಗಿರಲಿ, ಅಮೆರಿಕಾದ ಎಂಥ ಹೀನಾಯ ಕೆಲಸವನ್ನೇ ಆಗಲಿ, ಅತಿ ನಿಷ್ಠೆಯಿಂದ ಅತಿ ಕಡಿಮೆ ಸಂಬಳಕ್ಕೆ ಮಾಡಿಕೊಡುತ್ತಾರೆ. ತಮ್ಮ ದೇಶದ ಕೈಲಾಗದ ಸರ್ಕಾರಕ್ಕಿಂತ ವಾಸಿ ಎಂದು ಅಲ್ಲಿ ನೆಲೆ ನಿಲ್ಲುತ್ತಾರೆ. ಯಾವ ಯಾವ ದೇಶದಿಂದ ಪ್ರಜೆಗಳು ಇಷ್ಟು ಅಪಾಯ ಎದುರಿಸಿಯಾದರೂ ಅಲ್ಲಿಯವರೆಗೆ ತಲುಪಿದ್ದಾರೋ, ಅಲ್ಲಿನ ಸರ್ಕಾರ ಮೋಜು ಉಡಾಯಿಸುತ್ತಿದ್ದರೆ, ಸಾಮಾನ್ಯ ಪ್ರಜೆಗಳು ಕಷ್ಟ ಅನುಭವಿಸುತ್ತಿದ್ದಾರೆ!

ಈಗ ಇಲ್ಲಿಂದ ಅಲ್ಲಿಗೆ ಹೀಗೆ ಅಪಾಯ ಎದುರಿಸಿ ಹೋಗಬಯಸುವ ಯುವಜನತೆ, ಇಡೀ ಜೀವಮಾನ ಸವೆಸಿ ಮನೆಯವರು ಕೂಡಿಟ್ಟಿರುವ ಹಣ, ಮನೆಯವರನ್ನೆಲ್ಲ ಶಾಶ್ವತವಾಗಿ ತೊರೆದು ಅಲ್ಲಿಗೆ ಹೋಗಬೇಕಾಗುತ್ತದೆ. ಹೀಗೆ ನುಸುಳಿ ಬಂದವರು ಹೆಜ್ಜೆ ಹೆಜ್ಜೆಗೂ ಅಪಾಯ ಎದುರಿಸುತ್ತಿರುತ್ತಾರೆ. ಇಷ್ಟೆಲ್ಲ ಗೊತ್ತಿದ್ದರೂ, ಇಲ್ಲಿನ ನಿರುದ್ಯೋಗದ ಬವಣೆಗಿಂತ ಅಲ್ಲಾದರೂ ನೆಮ್ಮದಿ ಕಾಣಲಿ, ಎಂದು ಮನೆಯವರು ಬಯಸುತ್ತಾರೆ.

ಹೀಗೆ ಅಲ್ಲಿಗೆ ಹೊರಟ ಪ್ರತಿ ನುಸುಳುಕೋರರೂ, ತಮ್ಮ ಮನೆಯವರ ದೈನೇಸಿತನ ನೋಡಲಾಗದೆ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಹಾಗೆ ಹೊರಡುವವರು ಒಂದು ರೀತಿ ಯುದ್ಧಕ್ಕೆ ಹೊರಟ ಸೈನಿಕನಂತೆಯೇ, ಜೀವದೊಂದಿಗೆ ಬಂದರೂ ಬರಬಹುದು, ಇಲ್ಲದಿದ್ದರೆ ಇಲ್ಲ! ದೇಶ/ಧರ್ಮಕ್ಕಾಗಿ ಯುದ್ಧ ನಡೆಯುತ್ತದೆ. ಆದರೆ ಇಲ್ಲಿ ಇವರ ಸಂಘರ್ಷ ತಮಗಾಗಿ, ತಮ್ಮ ಪರಿವಾರಕ್ಕಾಗಿ ನಡೆಯುತ್ತಿದೆ. ಅಲ್ಲಿಗೆ ಹೋದವರು ತಮ್ಮ ಮನೆಯವರಿಗೆ ಯಾವುದೋ ರೂಪದಲ್ಲಿ ಸಂಪಾದಿಸಿದ ಹಣ ಕಳುಹಿಸುತ್ತಾರೆ, ಆ ಆಸೆಯಿಂದಲೇ ಅವರನ್ನು ಮನೆಯವರು ಕಳಿಸಿಕೊಡುತ್ತಾರೆ.

ಹೀಗೆ ಟ್ರಂಪಣ್ಣ ಅವರನ್ನು ಅಲ್ಲಿಂದ ಓಡಿಸುವುದರಿಂದ, ಆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಏನೇ ಪರಿಣಾಮ ಆಗಿರಲಿ, ಇವರ ಮನೆಯವರ ಆರ್ಥಿಕ ಸ್ಥಿತಿಯಂತೂ ಖಂಡಿತಾ ಹೀನಾಯ ಆಗಿಹೋಗಿರುತ್ತದೆ. ಇದ್ದಬದ್ದ ಮನೆಮಠ, ಜಮೀನು ಮಾರಿ ಹೇಗೋ ಅಲ್ಪ ಹಣದಲ್ಲಿ ಅಲ್ಲಿ ತಲುಪುವ ಈ ಮಂದಿ, ತಮ್ಮ ಪರಿವಾರದವರಿಗೆ ಒಂದು ದೊಡ್ಡ ಹೊರೆಯಾಗುತ್ತಾರೆ. ಅಮೆರಿಕಾದಿಂದ  ಇವರೇನೂ ದೊಡ್ಡ ವಿದ್ಯೆ ಕಲಿತು ಬರುವುದಿಲ್ಲ. ಏಕೆಂದರೆ ಇವರನ್ನು ಅಲ್ಲಿ ಕಸಮುಸುರೆ, ಇನ್ನಿತರ ಹೀನಾಯ ಕೂಲಿಗೆಲಸಗಳಿಗಷ್ಟೇ ಬಳಸಿಕೊಳ್ಳಲಾಗುತ್ತದೆ. ಇವರಲ್ಲಿ ಹೆಚ್ಚಿನ ಮಂದಿ ಮೇಲು ಜಾತಿಯವರು. ಅವರಿಗೆ ಕೆಲಸ ನಿಭಾಯಿಸುವಷ್ಟು ಆಂಗ್ಲ ಗೊತ್ತು. ಭಾರತದಲ್ಲಿ ಎಂದೂ ಮಾಡದಂಥ ಹೀನಾಯ ವೃತ್ತಿಗಳನ್ನೆಲ್ಲ, ಬದುಕು ಕಟ್ಟಿಕೊಳ್ಳಲಿಕ್ಕಾಗಿ ಅಲ್ಲಿ ಮಾಡಲೇಬೇಕಾಗುತ್ತದೆ. ಇವರು ಇಲ್ಲಿಗೆ ವಾಪಸ್ಸು ಬಂದರೆ, ಮನೆಯವರಿಗೆ ಮತ್ತಷ್ಟು ದೊಡ್ಡ ಹೊರೆ ಆಗುತ್ತಾರೆ. ಪಾಪ, ಇಂಥವರನ್ನು ಅಪರಾಧಿ ಎಂಬಂತೆ ನೋಡಲಾಗುತ್ತದೆ. ಇಂಟರ್‌ ನೆಟ್‌ ನಿಂದ ಇಡೀ ವಿಶ್ವವೇ ಒಂದಾಗಿರುವಾಗ, ಡೇಟಾ, ಮಾಹಿತಿ ತರಹ ಜನ ಸಂಪಾದನೆಗಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬರಲು ಅನುಮತಿ ನೀಡಬೇಕು. ಬೇಡಿಕೆ ಪೂರೈಕೆಯ ಸಿದ್ಧಾಂತದ ಪ್ರಕಾರ, ಈ ಜನ ಕೆಲಸ ಗಿಟ್ಟಿಸುತ್ತಾರೆ. ಅಲ್ಲಿ ಇಂಥ ನುಸುಳುಕೋರರ ಸಂಖ್ಯೆ ಅತಿ ಎನಿಸಿದಾಗ, ಕೆಲಸವೇ ಇಲ್ಲ ಅಂತಾದಾಗ, ಇಂಥ ನುಸುಳುಕೋರುತನ ತಂತಾನೇ ನಿಂತುಹೋಗುತ್ತದೆ. ಆದರೆ ಇಂದೂ ಸಹ ಅಮೆರಿಕಾದಲ್ಲಿ ಇಂಥ ಕೆಲಸಗಾರರ ಸಂಖ್ಯೆಗೆ ಬೇಡಿಕೆ ಬಹಳ ಹೆಚ್ಚು.

ಅಮೆರಿಕಾದ ಅತಿ ಶ್ರೀಮಂತ ಯುವಜನತೆ ಇದೀಗ ಕಡುಸೋಮಾರಿಗಳಾಗಿದ್ದಾರೆ. ಅವರು ಸದಾ ನೆಟ್‌, ಮೊಬೈಲ್ ಗೇಮ್ಸ್, ಸೆಕ್ಸ್/ರೇವಾ ಪಾರ್ಟಿ, ಡ್ರಗ್ಸ್, ಡ್ರಿಂಕ್ಸ್ ಇತ್ಯಾದಿಗಳಿಗೆ ಬಲಿಯಾಗಿ ತಮ್ಮ ಯಾವುದೇ ಕೆಲಸಕ್ಕೂ ನಾಲಾಯಕ್‌ ಆಗಿದ್ದಾರೆ. ಹೀಗಾಗಿಯೇ ಇಂಥ ನುಸುಳುಕೋರರಿಗೆ ಅಲ್ಲಿ ಕೆಲಸ ಇದ್ದೇ ಇರುತ್ತದೆ. ಈಗ ಟ್ರಂಪಣ್ಣನ ಈ ಹೊಸ ನೀತಿಯಿಂದಾಗಿ ಅಲ್ಲಿನ ಪ್ರಜೆಗಳು ಮಹಾ ತೊಂದರೆಗೆ ಈಡಾಗಿದ್ದಾರೆ. ಅದೇ ತರಹ ಇಲ್ಲಿಂದ ಕಳಿಸಿಕೊಟ್ಟರೂ ಸಹ.

ಇಲ್ಲಿ ಆಶ್ಚರ್ಯದ ವಿಚಾರ ಅಂದ್ರೆ, ಯಾವ ಭಾರತೀಯರು ಕಾನೂನುಬದ್ಧವಾಗಿ ಅಮೆರಿಕಾ ತಲುಪಿದ್ದರೋ, ಅಲ್ಲೇ ಮನೆ ಆಸ್ತಿ ಮಾಡಿಕೊಂಡರೋ, ಅವರಿಗೆ ಹೀಗೆ ಬಂದ ತಮ್ಮದೇ ದೇಶದ ನುಸುಳುಕೋರರತ್ತ ಕಿಂಚಿತ್ತೂ ಮಮಕಾರವಿಲ್ಲ. ಇವರತ್ತ ತಿರಸ್ಕಾರದಿಂದ ನೋಡುತ್ತಾರೆ. `ಅಮೆರಿಕನ್‌ ರಿಟರ್ನ್ಡ್’ ಬದಲು `ರಿಟರ್ನ್ಡ್ ಫ್ರಂ ಅಮೆರಿಕಾ’ ಎಂದು ಇಂಥ ಜನರತ್ತ ವ್ಯಂಗ್ಯವಾಗಿ ನೋಡಲಾಗುತ್ತಿದೆ!

ಪತಿ ಪತ್ನಿ ಮತ್ತು 3ನೇ ವ್ಯಕ್ತಿ

ಮನೆಯಲ್ಲಿ ಮುದ್ದಾದ ಪತ್ನಿ ಇದ್ದರೂ, ಚಪಲಕ್ಕಾಗಿ ಮತ್ತೊಂದಕ್ಕೆ ಆಸೆಪಡುವ ಗಂಡು, ಬಾಡಿಗೆ ಹಣ ಕೊಟ್ಟಾದರೂ ಪತ್ನಿಯನ್ನು  ಕಂಡವರ ಕೈಲಿ ಕೊಲ್ಲಿಸಿ, ತನ್ನ ಪ್ರೇಯಸಿಯತ್ತ ಓಡಿಹೋಗುವುದು ಮಾಮೂಲಿ ವಿಷಯ ಆಗುತ್ತಿದೆ. ಆದರೆ ಯಾವ ಪ್ರಕರಣಗಳಲ್ಲಿ ಇಂಥ ಗಂಡ ಸಿಕ್ಕಿ ಬಿದ್ದಿದ್ದಾನೋ, ಅವನು, ಅವನ ಪ್ರೇಯಸಿಗೆ ಮುಂದೆ ದುರ್ಗತಿ ತಪ್ಪಿದ್ದಲ್ಲ. 1973ರಲ್ಲಿ ದೆಹಲಿಯ ಐ ಸರ್ಜನ್‌ನರೇಂದ್ರಸಿಂಗ್‌ ಜೈನ್‌, ಹೀಗೆ ಹಣ ತೆತ್ತು ಪರರ ಕೈಲಿ ಪತ್ನಿಯ ಕೊಲ್ಲಿಸಿದ. ಏಕೆಂದರೆ ಆತ ತನ್ನ ಸೆಕ್ರೆಟರಿಯನ್ನು ಪ್ರೇಮಿಸಿದ. ಇವರು ಕಾರಿನಿಂದ ಇಳಿದು ಒಂದೆಡೆ ಹೋಗುತ್ತಿದ್ದಾಗ, ಈತನ ಕಣ್ಣ ಮುಂದೆಯೇ ಪತ್ನಿಯನ್ನು ದಾರುಣವಾಗಿ ಇರಿದು ಕೊಲ್ಲಲಾಯಿತು.

ನಂತರ ಸಿಕ್ಕಿಬಿದ್ದ ಈ ಡಾಕ್ಟರ್‌ ಹಾಗೂ ಆತನ ಪ್ರೇಯಸಿಗೆ ಶಿಕ್ಷೆ ಏನೋ ಆಯಿತು, ಅನೇಕ ವರ್ಷ ಕಂಬಿ ಎಣಿಸುತ್ತಾ ಇರಬೇಕಾಯ್ತು. ಇಷ್ಟಾದ ಮೇಲೆ ಅವರ ನಡುವೆ ಇನ್ನೆಲ್ಲಿಯ ಪ್ರೇಮ? ಅದು ಉರಿದು ಬೂದಿಯಾಗಿತ್ತು.

ಇಂಥ ಹಗರಣ ದಿನನಿತ್ಯ ದೇಶವಿಡೀ ನಡೆಯುತ್ತಲೇ ಇರುತ್ತದೆ. 10ರಲ್ಲಿ ಒಬ್ಬ ಪತಿ ಮಾತ್ರವೇ ಸಿಕ್ಕಿ ಬೀಳುತ್ತಾನೆ. ಯಾರು ಸಿಕ್ಕಿ ಬೀಳುತ್ತಾರೋ, ಯಾರು ತಪ್ಪಿಸಿಕೊಳ್ಳುತ್ತಾರೋ ಖಂಡಿತಾ ಹೇಳಲಾಗದು.

ಅತ್ತ ಲೂಧಿಯಾನಾದ 35 ವರ್ಷದ ಅನೋರ್‌ ಮಿತ್ತಲ್ ನನ್ನು ಇಂಥ ಹಗರಣದಲ್ಲಿ ಬಂಧಿಸಲಾಯಿತು. ಆತ ಪ್ರತಿಜ್ಞಾ ಎಂಬ ಹುಡುಗಿ ಹಿಂದೆ ಸುತ್ತುತ್ತಿದ್ದ. ಆತ 2.5 ಲಕ್ಷ ಹಣ ಕೊಟ್ಟು, ಡಕಾಯಿತಿ ನೆಪದಲ್ಲಿ ತನ್ನ ಕಣ್ಣೆದುರೇ ಹೆಂಡತಿಯ ಕೊಲ್ಲಿಸಿದ. ನಂತರ ಪೊಲೀಸರು ಈ ಮಹಾಶಯ, ಇವನ ಪ್ರೇಯಸಿ, ಹಣದಾಸೆಗೆ ಕೊಲೆಗೈದವರನ್ನು ಬಂಧಿಸಿದರು.

ವಿವಾಹಿತ ವ್ಯಕ್ತಿ 3ನೇಯವರ ಸಹವಾಸಕ್ಕೆ ಬಿದ್ದಾಗ, ಕಟ್ಟಿಕೊಂಡವರನ್ನು ಫಿನಿಶ್‌ ಮಾಡುವುದು ಸುಲಭ ಅಲ್ಲ ಎಂದು ಗೊತ್ತಿರಬೇಕು. ನಮ್ಮಲ್ಲಿನ ವಿಚ್ಛೇದನದ ಕಾನೂನು ತಾರ್ಕಿಕವಾಗಿರದ್ದಿದ್ದರೆ, ಎಷ್ಟೋ ಪತ್ನಿಯರು ಬದುಕುಳಿಯುತ್ತಿದ್ದರು, ಪ್ರೇಯಸಿ ಕಂಬಿ ಎಣಿಸಬೇಕಿರಲಿಲ್ಲ. ಇಬ್ಬರ ಮಧ್ಯೆ 3ನೆಯವರು ನುಸುಳಿದಾಗ, ಒಂದಿಷ್ಟು ಹಣ ಕೊಟ್ಟು ದಾರಿ ಸರಿ ಮಾಡಿಕೊಂಡು, ಡಿವೋರ್ಸ್‌ ಪಡೆಯುತ್ತಿದ್ದರು. ಈಗ ಹಿಂದೂ ವಿವಾಹ ಕಾನೂನು ಹಾಗೂ ಕೋರ್ಟುಗಳ ನಿರ್ಲಕ್ಷ್ಯದಿಂದಾಗಿ, ಈಗ ಇಂಥ ಕೊಲೆಗಳು ಮಾಮೂಲಿ ಆಗಿಹೋಗಿವೆ. ವಿವಾಹಿತರು ಹೀಗೆ ಗೊತ್ತಿದ್ದೂ 3ನೆಯವರ ಸಹವಾಸಕ್ಕೆ ಹೋಗುವುದು ಏನೂ ಅತಿಶಯವಲ್ಲ, ಅನೈತಿಕತೆಯ ಯೋಚನೆ ಬರೋದೇ ಇಲ್ಲ. ಇದು ಸಾಮಾಜಿಕ ಅಲ್ಲ ಅಷ್ಟೆ. ಯಾರ ಜೊತೆ ಜೀವನವಿಡೀ ಇರ್ತೀನಿ ಅಂತ ವಚನ ಕೊಟ್ಟಿದ್ದರೋ, ಅವರಿಂದ ವಿಮುಖರಾಗಲು ಬಯಸುತ್ತಾರೆ. ಇದು ಪಾರಸ್ಪರಿಕ ಅಪರಾಧವೇ ಹೊರತು ಸಾಮಾಜಿಕ ಅಪರಾಧವಲ್ಲ. ಪತಿ ಪತ್ನಿ ಇಬ್ಬರಲ್ಲಿ ಯಾರ ಮನದಲ್ಲಿ ಯಾವಾಗ 3ನೆಯವರಿಗೆ ಪ್ರೇಮಾಂಕುರ ಆಗುತ್ತದೋ ಹೇಳಲಾಗದು. ಹಾಗೊಮ್ಮೆ ಆದಾಗ, ಯಾವುದು ಸರಿ ತಪ್ಪು, ಒಳ್ಳೆಯದು ಕೆಟ್ಟದ್ದು, ಅಂತೆಲ್ಲ ತರ್ಕ ಮಾಡುವುದು ನಿರರ್ಥಕ ಆಗುತ್ತದೆ.

ಪತ್ನಿ ತನಗೆ ಗಂಟು ಬಿದ್ದಿರುವ ಹೊರೆ ಎಂದೇ ಎಷ್ಟೋ ಪತಿಯರು ಭಾವಿಸುತ್ತಾರೆ. ತನಗೆ ಬೇಕಿಲ್ಲದ ಪ್ರಾಡಕ್ಟ್ ನ್ನು ವಿಸರ್ಜಿಸುವಂತೆ ಇದನ್ನೇಕೆ ಮಾಡಲಾಗದು ಎಂದು ಹಪಹಪಿಸುತ್ತಾರೆ. ಹೀಗಿರುವಾಗ 3ನೆಯವರೊಂದಿಗೆ ಪ್ರೇಮವಾದಾಗ, ಆತ ಮತ್ತಷ್ಟು ಹುಚ್ಚನಾಗುತ್ತಾನೆ. ಕೊಲೆ ಮಾಡಿಸುವುದೊಂದೇ ಉಳಿದ ದಾರಿ ಎಂದುಕೊಳ್ತಾನೆ. ಯಾವ ಪ್ರಕರಣದಲ್ಲಿ ಯುವಪತ್ನಿ ಕೊಲೆ ಆಗಿರುತ್ತಾಳೋ, ಪತಿ 12 ವರ್ಷದಲ್ಲೇ ಮರು ಮದುವೆ ಆದರೆ, ಆಕೆಯ ಸಾವು ಸಹಜವಲ್ಲ, ಕೊಲೆ ಎಂಬುದು ನಿಸ್ಸಂದೇಹ!

ಸಾಮಾನ್ಯವಾಗಿ ಅಂಥ ಪತಿಯ ಮನೆಯವರು ವಿಷಯ ಗೊತ್ತಿದ್ದೂ ಸುಮ್ಮನಾಗುತ್ತಾರೆ. ಮನೆಗೆ ಗಳಿಸುವ ಗಂಡನ್ನು ಜೇಲಿಗೆ ಹಾಕಿಸಿ, ಅವರೇಕೆ ಆದಾಯ ಕಳೆದುಕೊಂಡಾರು? ಅತ್ತ ಮೃತ ಪತ್ನಿಯ ತವರಿನವರು ಸಹ ಎಷ್ಟೋ ಸಲ ಮೌನವಾಗಿದ್ದು ಬಿಡುತ್ತಾರೆ, ಅಳಿಯ ಅನ್ನಿಸಿಕೊಂಡವನು ಜೇಲಿಗೆ ಹೋದರೂ ಸತ್ತ ಮಗಳು ಮತ್ತೆ ಬಲಾರಳು ಎಂದು ನಿಡುಸುಯ್ಯುತ್ತಾರೆ. ಈ ಸಮಸ್ಯೆಗಿರುವ ಒಂದೇ ಸರಳ ಪರಿಹಾರ ಎಂದರೆ, ಸುಲಭವಾಗಿ ವಿಚ್ಛೇದನ ಸಿಗುವಂತಾಗಬೇಕು. ಮದುವೆ ಅಂದ್ರೆ ಶುದ್ಧ ಸಂಸ್ಕಾರ ಎಂದೇ ಭಾವಿಸಿರುವ ಕೇಂದ್ರ ಸರ್ಕಾರ, ಈ ಕುರಿತು ಏನೂ ಹೇಳದೆ ತೆಪ್ಪಗಿದ್ದುಬಿಟ್ಟಿರುವುದು ವಿಷಾದನೀಯ.

ಖಾಲಿ ಕೂರುವುದು ದೊಡ್ಡ ಆಪತ್ತು

ಒಂಟಿತನ ಕಾಡುತ್ತಿದೆ, ಬದುಕು ಅಸಹನೀಯ ಎನಿಸಿದಾಗ ಜನ ಸತ್ತ ತಮ್ಮ ಬೆಕ್ಕಿಗಾಗಿಯೂ ತಮ್ಮ ಪ್ರಾಣ ನೀಡಲು ಮುಂದಾಗುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ, ಉ.ಪ್ರ. ರಾಜ್ಯದ ಅಮರೋಹ ಎಂಬಲ್ಲಿ ನಡೆದಿದೆ. ತನ್ನ ಪತಿಗೆ ವಿಚ್ಛೇದನ ನೀಡಿದ್ದ ಒಬ್ಬಾಕೆ, ತವರಿನಲ್ಲಿ ಹೆತ್ತವರೊಂದಿಗಿದ್ದಳು. ಆಕೆಯ ಸಾಕುಬೆಕ್ಕು ಜ್ವರ ಬಂದು ಸತ್ತಿದ್ದರಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಳು!

ಈಕೆಯ ಮದುವೆಯಾಗಿ 10 ವರ್ಷ ಕಳೆದಿತ್ತು. ಗಂಡನ ಜೊತೆ ಹೊಂದಾಣಿಕೆ ಆಗದೆ 2 ವರ್ಷಗಳ ನಂತರ ಡಿವೋರ್ಸ್‌ ಪಡೆದಿದ್ದಳು. ಅದಾದ ಮೇಲೆ ಆಕೆ ಮಹಾನ್‌ ಡಿಪ್ರೆಶನ್‌ ಗೆ ತುತ್ತಾಗಿದ್ದಳು. ಆದರೆ ಯಾವುದೋ ಒಂದು ಬೀದಿ ಬೆಕ್ಕನ್ನು ತಂದು ತನ್ನ ಸ್ವಂತ ಮಗುವಿನಂತೆ ಸಾಕುತ್ತಾ, ಅದರೊಂದಿಗೆ ಮುಂದಿನ 3 ವರ್ಷ ಹಾಯಾಗಿದ್ದಳು. ಬೆಕ್ಕು ಸತ್ತ 3 ದಿನ ಆದರೂ ಅದನ್ನು ಹೂಳಲು ಆಕೆ ಒಪ್ಪಲಿಲ್ಲ. ಬೆಕ್ಕಿಲ್ಲದೆ ತಾನು ಬದುಕಲಾರೆ ಎಂದು ಖಾತ್ರಿಯಾದಾಗ ಆಕೆ ಆತ್ಮಹತ್ಯೆಗೆ ಶರಣಾದಳು. ಜನ ಇಂಥ ಡಿಪ್ರೆಶನ್‌ ಗೆ ಇಳಿದಾಗ ಜೊತೆಗಿನ ಕುಟುಂಬದವರೇ ಕಾಪಾಡಿಕೊಳ್ಳಬೇಕು. ಬಾಲ್ಯದಿಂದಲೂ ಹೆಣ್ಣುಮಕ್ಕಳಿಗೆ ಮುಂದೆ ನೌಕರಿಗೆ ಸೇರಬೇಕು ಎಂದು ಕಲಿಸುವುದೇ ಇಲ್ಲ. ಏನಿದ್ದರೂ ಆಕೆ ಮುಂದೆ ದೊಡ್ಡವಳಾಗಿ, ಆದರ್ಶ ಗೃಹಿಣಿಯಾಗಿ, ಗಂಡ ಮನೆ ಮಕ್ಕಳನ್ನು ನೋಡಿಕೊಳ್ಳಬೇಕೆಂದೇ ಕಲಿಸಲಾಗುತ್ತದೆ. ಅಕಸ್ಮಾತ್‌ ಇಂಥ ಹುಡುಗಿಯರಿಗೆ ಮದುವೆ ಆಗದಿದ್ದರೆ ಅಥವಾ ಅದು ವಿಫಲವಾದರೆ, ತಮ್ಮನ್ನೇ ತಾವು ದೋಷಿಗಳೆಂದು ಭಾವಿಸುತ್ತಾ ಕಣ್ಣೀರುಗರೆಯುತ್ತಾರೆ. ಧರ್ಮಾಂಧರು ಇಂಥವರನ್ನು ಮರುಳುಗೊಳಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ ಅಥವಾ ತವರಿನಲ್ಲೇ ಕೊರಗುತ್ತಾ ಅತಿಯಾದ ಡಿಪ್ರೆಶನ್‌ ಗೆ ಒಳಗಾಗುತ್ತಾರೆ.

ಪ್ರತಿ ಹುಡುಗಿಯ ಮನದಲ್ಲೂ ಬಾಲ್ಯದಿಂದೀ ಅವಳು ತನ್ನದಾದ ಕೆರಿಯರ್‌ ಹೊಂದಿರಲೇ ಬೇಕು ಎಂದು ತಿದ್ದಿ ಬೆಳೆಸಿದರೆ, ಹೀಗಾಗಲು ಸಾಧ್ಯವಿಲ್ಲ. ಆಗ ಅವಳು ಮದುವೆಯೊಂದೇ ತನ್ನ ಜೀವನದ ಸಾರ್ಥಕ ಗುರಿ ಎಂದು ಭಾವಿಸುವುದಿಲ್ಲ. ಮುಂದೆ ಹೊಸ ಹೊಸ ಕೆಲಸ ಸಿಗುತ್ತಿರುತ್ತದೆ, ಹೊಸ ಜನರ ಪರಿಚಯವಾದಂತೆ ಪ್ರಪಂಚ ವಿಸ್ತಾರಗೊಳ್ಳುತ್ತದೆ, ಹೊಸ ಹೊಸ ಸವಾಲು ಎದುರಾಗುತ್ತದೆ.

ಕೆಲಸಕ್ಕೆ ಹೋಗುವ ಹುಡುಗಿಯರು ಎಷ್ಟೇ ಒಬ್ಬಂಟಿ ಆಗಿರಲಿ, ಅವಳಿಗೆ `ನಾಳೆಯು ಬರಲಿ’ ಎಂಬ ಆಸೆ ಇದ್ದೇ ಇರುತ್ತದೆ. ಆಗ ಅವಳು ಜೀವನದಲ್ಲಿ ಏನನ್ನಾದರೂ ಹೊಸತನ್ನು ಮಾಡಲು ಸಾಧ್ಯವಾಗುತ್ತದೆ. ಟೆನ್ಶನ್‌ ತುಂಬಿದ ನೌಕರಿ, ಚಿಂತೆಯ ಗೂಡಾದ ಮನೆಗಿಂತ ಎಷ್ಟೋ ವಾಸಿ.

ಯಾವ ಹೆಣ್ಣಿಗೆ ಹೆಚ್ಚಿನ ಕೌಶಲ್ಯವಿದೆಯೋ, ಅವಳು ಏನಾದರೂ ಹೊಸ ಸಾಹಸ ಮಾಡಲು ತುಡಿಯುತ್ತಿರುತ್ತಾಳೆ. ಇಂಥವರೇ ಸಣ್ಣಪುಟ್ಟ ಬಿಸ್‌ ನೆಸ್‌ ಸ್ಟಾರ್ಟ್‌ ಮಾಡಿ, ಮುಂದೆ ಗಟ್ಟಿ ಕುಳ ಎನಿಸುತ್ತಾರೆ. ಲಾಭಹಾನಿಗಳ ಪಾಠ ಅವಳಿಗೆ ಜೀವನದ ವಾಸ್ತವತೆ ಕಲಿಸತ್ತದೆ. ಈ ಕೆಲಸದಲ್ಲಿ ಬಿಡುವು ಸಿಕ್ಕಿದರೆ ತಾನೇ ಆಕೆ ಡಿಪ್ರೆಶನ್‌ ಕುರಿತು ಯೋಚಿಸುವುದು? ಡಿಪ್ರೆಶನ್‌ ಗೆ ಮೂಲ, ಭವಿಷ್ಯದ ಕುರಿತಾದ ಭಯ.ಸಾಕುಪ್ರಾಣಿಗಳು ನಮಗೆ ಪ್ರೀತಿವಾತ್ಯಲ್ಯ ತೋರುತ್ತವೆ, ಅಂದ ಮಾತ್ರಕ್ಕೆ ಅವುಗಳ ಆಯುಸ್ಸು, ನಮಗಿಂತ ಬಹಳ ಕಡಿಮೆ ಎಂಬುದನ್ನು ನಿರ್ಲಕ್ಷಿಸಬಾರದು. ಅವುಗಳತ್ತ ನಮ್ಮ ಅತಿಯಾದ ವ್ಯಾಮೋಹ, ನಮ್ಮ ಜೀವನವನ್ನೇ ಬಲಿಕೊಡುವ ಮಟ್ಟಕ್ಕೆ ಹೋಗಬಾರದು. ಮನೋಚಿಕಿತ್ಸಕರೇನೋ ಒಂಟಿ ಜೀವಗಳಿಗೆ, ಸಾಕುಪ್ರಾಣಿ ಇರಿಸಿಕೊಂಡು ಪ್ರೀತಿ ಹಂಚಿಕೊಳ್ಳಿ ಅಂತಾರೆ, ಆದರೆ ಅವುಗಳ ಆರೈಕೆ ಸಣ್ಣ ಕೂಸಿಗೆ ಮಾಡಬೇಕಾದಷ್ಟೇ ಮುಖ್ಯ ಎಂಬುದನ್ನು ಮರೆಯಬಾರದು. ದುರ್ಬಲ ಮನಸ್ಸಿನವರು ಇಂಥ ವ್ಯಾಮೋಹ ಇರಿಸಿಕೊಳ್ಳಬಾರದು.

ಒಂದು ನೌಕರಿ, ಒಂದು ಬಿಸ್‌ ನೆಸ್‌, ಒಂದು ಸ್ಕಿಲ್‌…. ಈ ತರಹದ ಡಿಪ್ರೆಶನ್‌ ಓಡಿಸುವಲ್ಲಿ ಮೂಲ. ಪ್ರತಿಯೊಬ್ಬರೂ ಅತಿ ದಕ್ಷರಾಗಿರಲು ಸಾಧ್ಯವಿಲ್ಲ, ಆದರೆ ಎಷ್ಟು ಸಾಧ್ಯವೋ ಅಷ್ಟರಲ್ಲಿ ಬದುಕು ಕಟ್ಟಿಕೊಳ್ಳಬೇಕು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ