ಕ್ರಿಕೆಟ್ ಆನ್ನೋದು ಭಾರತ ದೇಶದಲ್ಲಿ ಒಂದು ರೀತಿಯ ಧರ್ಮವೇ ಆಗಿ ಹೋಗಿದೆ. ಇತರೇ ವಿಷಯಗಳಲ್ಲಿ ವಿಶ್ವಗುರುವಾಗುವುದರಲ್ಲಿ ಮುನ್ನುಗ್ಗುತಿರುವ ಭಾರತ, ಕ್ರಿಕೆಟ್ಟಿನಲ್ಲಿ ಭಾರತ ಈಗಾಗಾಲೇ ವಿಶ್ವಗುರುವಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ. ಇನ್ನು ಭಾರತೀಯ ಕ್ರಿಕೆಟ್ಟಿಗೆ ಕರ್ನಾಟಕದ ಕೊಡುಗೆ ಅನನ್ಯ ಮತ್ತು ಅವರ್ಣನೀಯ. ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯ್ಯದ್ ಕಿರ್ಮಾನಿ, ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್ ರಂತಹ ಅತ್ಯದ್ಭುತ ದಾಂಡಿಗರಾದರೇ, ಬಿ.ಎಸ್. ಚಂದ್ರಶೇಖರ್, ಪ್ರಸನ್ನ, ಅನಿಲ್ ಕುಂಬ್ಲೇ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ರಂತಹ ಉತೃಕ್ಷ್ಟ ಎಸೆತಗಾರನ್ನು ನೀಡಿದೆಯಲ್ಲದೇ, ಒಂದು ಕಾಲದಲ್ಲಿ ಭಾರತ ತಂಡದ 11 ಆಟಗಾರರಲ್ಲಿ, ಕರ್ನಾಟಕ 7 ಆಟಗಾರರಿದ್ದದ್ದು ದಾಖಲೆಯಾಗಿದೆ. ಇವೆಲ್ಲರು ಮೈದಾನದಲ್ಲಿ ಇಂತಹ ಸಾಧನೆಗಳನ್ನು ಮಾಡಿದ್ದರೆ, ಮೈದಾನದ ಹೊರಗಿದ್ದು ಎಲೆಮರೆಕಾಯಿಯಂತೆ ಸದ್ದಿಲ್ಲದೇ ನೂರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅಧಿಕೃತವಾಗಿ ಅಂಕಿ ಸಂಖ್ಯಾ ಶಾಸ್ತ್ರಜ್ಞರಾಗಿ ಶತಕವನ್ನು ಸಾಧಿಸಿಸಿರುವ ಅಪರೂಪದ ಎಚ್. ಆರ್. ಗೋಪಾಲಕೃಷ್ಣ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಹಿರಿಸಾವೇ ಮೂಲದವರಾದ ಶ್ರೀ ಗೋಪಾಲಕೃಷ್ಣ ಅವರು ಆಗಸ್ಟ್ 12, 1946 ರಂದು ಚನ್ನರಾಯಪಟ್ನದಲ್ಲಿ ಜನಿಸಿದರೂ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸವೆಲ್ಲಾ ನೆಡೆದದ್ದು ಬೆಂಗಳೂರಿನಲ್ಲಿಯೇ. ಜಯನಗರ 4 ನೇ ಬ್ಲಾಕ್‌ನ ದೀರ್ಘಕಾಲದ ನಿವಾಸಿಗಳಾಗಿದ್ದು ಈಗ ವಸಂತ ನಗರದಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೇ ಕ್ರಿಕೆಟ್ ಆಟದ ಒಲವಿದ್ದ ಶ್ರೀಯುತರು, ಉತ್ತಮ ಎಡಗೈ ಸ್ಪಿನ್ನರ್ ಮತ್ತು ಉಪಯುಕ್ತ ಬ್ಯಾಟ್ಸ್ಮನ್ ಕೂಡಾ ಆಗಿದ್ದರು. ಆಟದ ಜೊತೆ ಓದಿನಲ್ಲಿಯೂ ಚುರುಕಾಗಿದ್ದ ಗೋಪಾಲಕೃಷ್ಣ ಅವರು ಪ್ರತಿಷ್ಠಿತ ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗಲೇ ಕಾಲೇಜ್ ತಂಡದ ಭಾಗವಾಗಿದ್ದಲ್ಲದೇ, ಬೆಂಗಳೂರು ಕ್ರಿಕೆಟರ್ಸ್-ಬಿ ತಂಡ ಮತ್ತು 2004ರಲ್ಲಿಯೇ ವಜ್ರ ಮಹೋತ್ಸವವನ್ನು ಆಚರಿಸಿಕೊಂಡ ಏಕೈಕ ಕ್ಲಬ್ ಮತ್ತು ಅತ್ಯಂತ ಹಳೆಯ ಕ್ರಿಕೆಟ್ ಕ್ಲಬ್ ಆದ ನ್ಯಾಷನಲ್ ಯುನೈಟೆಡ್ ಕ್ರಿಕೆಟ್ ಕ್ಲಬ್ ಪರವಾಗಿಯೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಲೀಗ್ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದವರು.
ತಮ್ಮ ಇಂಜಿನೀಯರಿಂಗ್ ಪದವಿಯನಂತರ ಯಾವುದೇ ಕಂಪನಿಗಳಿಗೆ ಸೇರದೇ, ಕ್ರಿಕೆಟ್ ಆಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಬ್ಯಾಂಕಿನಲ್ಲಿ ಅಧಿಕಾರಿಗಳಾಗಿ ಸೇರಿಕೊಂಡು ಬ್ಯಾಂಕ್ ಪರವಾಗಿಯೂ ಕ್ರಿಕೆಟ್ ಆಟವಾಡಿದ್ದಲ್ಲದೇ, ಪಂದ್ಯಾವಳಿಯ ನಡುವೆಯೂ ಸ್ಕೋರರ್ ಆಗಿ ಕೆಲಸ ಮಾಡಲು ಇಚ್ಚಿಸುತ್ತಿದ್ದರು. ಅದೊಮ್ಮೆ ತಮ್ಮ ಸಹಪಾಠಿಗಳಾಗಿದ್ದ ಮಾಜೀ ಕರ್ನಾಟಕ ತಂಡದ ಆಟಗಾರ ಮತ್ತು ಕೋಚ್ ಆಗಿದ್ದ ಬಿ. ರಘುನಾಥ್ (ಮಿಥುನ್ ಬಿರಾಲ ಅವರ ತಂದೆ) ತಾವು ರಣಜಿ ಪಂದ್ಯವಳಿಯಲ್ಲಿ ಎಷ್ಟು ರನ್ ಗಳಿಸಿದ್ದೇನೆ? ಎಂಬ ಪ್ರಶ್ನೆಯನ್ನು ಗೋಪಾಕಷ್ಣರ ಬಳಿ ಕೇಳಿದಾಗ, ಅವರ ಬಳಿ ಉತ್ತರವಿಲ್ಲದಿದ್ದಾಗ, ರಘುನಾಥ್ ಅವರು ಗೋಪಾಲಕೃಷ್ಣರವರಿಗೆ ಈ ರೀತಿಯಾದ ಅಂಕಿ ಅಂಶಗಳನ್ನು ಸ್ಕೋರರ್ ಬಳಿ ಇದ್ದರೆ ಮುಂದೆ ಉಪಯೋಗಕ್ಕೆ ಬರುತ್ತದೆ. ಎಂದು ಹೇಳಿದ್ದನ್ನೇ ತುಂಬಾ ಗಂಭೀರವಾಗಿ ಸ್ವೀಕರಿಸಿ ಅಂದಿನಿಂದಲೇ ಪ್ರತಿಯೊಂದು ಪಂದ್ಯಾವಳಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಎಲ್ಲವನ್ನೂ ದಾಖಲಿಸುತ್ತಾ ಹೊದಂತೆಲ್ಲಾ ಅವರಿಗೇ ಅರಿವಿಲ್ಲದಂತೆ ಕೆಲವೇ ವರ್ಷಗಳಲ್ಲಿ ಅವರೊಬ್ಬ ಕ್ರಿಕೆಟ್ ಅಂಕಿ ಅಂಶದ ಗಣಿಯಾಗಿ ಬಿಟ್ಟಿದ್ದರು.
1972 ರಲ್ಲಿ ಅಂದಿನ ಮೈಸೂರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಕ್ರಿಕೆಟ್ ಅಂಪೈರಿಂಗ್ ಪರೀಕ್ಷೆಗೆ ಹಾಜರಾಗಿದ್ದ ಅರವತ್ತು ಅಭ್ಯರ್ಥಿಗಳ ಪೈಕಿ ಕೇವಲ ಒಬ್ಬರು ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅವರು ಬೇರೆ ಯಾರೂ ಆಗಿರದೇ ನಮ್ಮ ಗೋಪಾಲಕೃಷ್ಣ ಅವರಾಗಿದ್ದರು. ತಮ್ಮ ಚೊಚ್ಚಲು ಪ್ರಯತ್ನದಲ್ಲೇ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.





