ನನಗೆ ಒಂದು, ಎರಡು ಮತ್ತು ಮೂರನೇ ತರಗತಿಯಲ್ಲಿ ಕಲಿಸಿದ ಇಬ್ಬರು ಶಿಕ್ಷಕರು ಕಣುಮಪ್ಪ ಮತ್ತು ತಿಪ್ಪಯ್ಯ ಗುರುಗಳನ್ನು ಮರೆಯಲು ಸಾಧ್ಯವಿಲ್ಲ. ಕಣುಮಪ್ಪ ಮಾಸ್ತರರಿಗೆ ದೊಡ್ಡ ಮೀಸೆ, ಶಾಲೆಗೆ ಸೇರಿದ ಹೊಸದರಲ್ಲಿ ಅದನ್ನು ನೋಡಿ ಭಯಪಟ್ಟು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿದ್ದೆ.ಆದರೆ ಕಣುಮಪ್ಪ ಗುರುಗಳು ನನಗೆ ಬಹಳಷ್ಟು ಪ್ರೀತಿ, ಆತ್ಮೀಯತೆಯನ್ನು ತೋರಿಸುತ್ತಿದ್ದರು.
ಮನೆಯಲ್ಲಿ ಕೊನೆಯವಳಾದ ನನಗೆ ಮನೆಯಲ್ಲಿ ಬಹಳ ಮುದ್ದು ಮಾಡುತ್ತಿದ್ದರು. ಕಣುಮಪ್ಪ ಗುರುಗಳು ಕೂಡಾ ಮುದ್ದು ಮಾಡಿ, ಶಾಲೆಗೆ ಬರಲು ಹೆದರಿ ಕೊಳ್ಳಬಾರದು ಎಂದು ಹೇಳಿ ಧೈರ್ಯ ತುಂಬಿದ್ದರು.ಅವರು ಚಿತ್ರ ಬಹಳ ಚೆನ್ನಾಗಿ ಬಿಡಿಸುತ್ತಿದ್ದರು.ನನ್ನ ನೋಟ್ ಪುಸ್ತಕಗಳನ್ನು ತೆಗೆದುಕೊಂಡು ಮೊದಲನೇ ಪೇಜಿನಲ್ಲಿ ನನ್ನ ಹೆಸರನ್ನು ಚಿತ್ತಾರ ಮಾಡಿ ಬರೆದು ಕೊಡುತ್ತಿದ್ದರು. ನನಗೆ ಅದನ್ನು ನೋಡಿದಾಗ ಬಹಳ ಖುಷಿ ಆಗುತ್ತಿತ್ತು. ಒಮ್ಮೊಮ್ಮೆ ಚಾಕೋಲೇಟ್ ಕೊಡಿಸುತ್ತಿದ್ದರು. ಹಾಗಾಗಿ ಶಾಲೆಗೆ ಹೋಗಲು ಆಸಕ್ತಿ ಹುಟ್ಟಿತು. ಆ ಗುರುಗಳ ಬಗ್ಗೆ ಇದ್ದ ಭಯ ಹೋಯಿತು.
ನಮ್ಮಪ್ಪ ಟೀಚರ್ ಹಾಗಾಗಿ ನನಗೆ ಟೆಕ್ಸ್ಟ್ ಪುಸ್ತಕಗಳನ್ನು ಶಾಲೆಯಿಂದ ತಂದು ಕೊಡುತ್ತಿದ್ದರು. ನನಗೆ ಪುಸ್ತಕ ಹರಿಯುವುದು ಎಂದರೆ ಬಹಳ ಇಷ್ಟದ ಕೆಲಸ.
ಶಾಲೆಯಲ್ಲಿ ಕುಳಿತುಕೊಂಡು ಪುಸ್ತಕ ಹರಿದು ಹರಿದು ಹಾಕುತ್ತಿದ್ದೆ.ಯಾರಾದರೂ ಯಾಕೆ ಹೀಗೆ ಪುಸ್ತಕ ಹರಿಯುತ್ತೀಯಾ ಹರಿಯಬೇಡ ಅಂದರೆ ನಮ್ಮಪ್ಪ ಮೇಷ್ಟ್ರು, ಹೊಸ ಪುಸ್ತಕ ತಂದು ಕೊಡುತ್ತಾರೆ ನಿನಗ್ಯಾಕೆ ಬೇಕು ಹೋಗೆ ಎಂದು ಜಂಬದಿಂದ ಹೇಳುತ್ತಿದ್ದೆ.
ಮನೆಯಲ್ಲಿ ಹೊಸ ಪುಸ್ತಕ ಯಾಕೆ ಹರಿದು ಹೋಯಿತು ಅಂತ ಕೇಳಿದರೆ ಬ್ಯಾಗಿನಲ್ಲಿ ಇಟ್ಟು ಕೊಂಡಿದ್ದೆ, ಹೇಗೆ ಹರಿದು ಹೋಯಿತು ಅಂತ ಗೊತ್ತಿಲ್ಲ ಎಂದು ಮುಗ್ಧವಾಗಿ, ಮುದ್ದಾಗಿ ಹೇಳುತ್ತಿದ್ದೆ.

ಪರೀಕ್ಷೆ ನಡೆಯುತ್ತಿದ್ದಾಗ ಒಂದು ದಿನ ಶಾಲೆಗೆ ತನಿಖಾಧಿಕಾರಿಗಳು ಬಂದರು. ತನಿಖಾಧಿಕಾರಿಗಳು ನಮ್ಮ ಕಣುಮಪ್ಪ ಗುರುಗಳಿಗೆ ನೀವು ಏನು ಪಾಠ ಮಾಡುತ್ತೀರಿ, ವಿದ್ಯಾರ್ಥಿಗಳು ಪರೀಕ್ಷೆ ಹೇಗೆ ಬರೆಯುತ್ತಿದ್ದಾರೆ ಎಂದು ಕೇಳಿದರು.ಆಗ ನಮ್ಮ ಕಣುಮಪ್ಪ ಗುರುಗಳು ನನ್ನ ಉತ್ತರ ಪತ್ರಿಕೆಯನ್ನು ತೋರಿಸಿದರು.ತನಿಖಾಧಿಕಾರಿಗಳು ನನ್ನ ಉತ್ತರ ಪತ್ರಿಕೆಯನ್ನು ನೋಡಿ ಶಹಬ್ಬಾಸ್, ಗುಡ್ ಎಂದರು. ನನಗೆ ಸ್ವಲ್ಪ ಸಮಾಧಾನ ಬಂತು.ನಂತರ ಪರೀಕ್ಷೆ ಮುಗೀತು . ರಿಸಲ್ಟ್ ದಿನ ಶಾಲೆಗೆ ಹೋಗಲು ಭಯ , ಅದಕ್ಕೆ ಮನೆಯಲ್ಲಿ ಮಣ್ಣು ಕಲಸಿಕೊಂಡು ಅಡುಗೆ ಸಾರು ಆಟ ಆಡುತ್ತಿದ್ದೆ.ಯಾರೋ ಬಂದು ಹೆಡ್ ಮಾಸ್ಟರ್ ಕರೀತಾ ಇದ್ದಾರೆ ನೀನು ಫೇಲ್ ಆಗಿದ್ದೀಯಾ ಬಾ ಇದೆ ನಿನಗೆ ಎಂದರು.ಹೆಡ್ ಮಾಸ್ಟರ್ ಅಂದರೆ ಬಹಳ ಭಯ .ಅದು ಫೇಲ್ ಬೇರೆ ಆಗಿದ್ದಿನಿ ಅಂತ ಹೇಳಿದರಲ್ಲ , ಇನ್ನೂ ಭಯ. ಜಡೆ ಕೂಡ ಹಾಕಿಕೊಳ್ಳದೆ ಕೆದರಿದ ಕೂದಲು ಬಿಟ್ಟು ಕೊಂಡು, ಆಡುತ್ತಿದ್ದ ಮಣ್ಣಿನ ಕೈ ಕೂಡಾ ತೊಳೆದು ಕೊಳ್ಳದೆ ಓಡಿದೆ.ಅಲ್ಲೇ ನಿಂತಿದ್ದ ಕಣುಮಪ್ಪ ಗುರುಗಳು ನಡಿ ಫೇಲ್ ಆಗಿದ್ದಿ ಇದೆ ಹೆಡ್ ಮಾಸ್ಟರ್ ಹತ್ತಿರ ಎಂದರು.ಭಯದಿಂದ ಗುರುಗಳ ಜೊತೆ ಒಳಗೆ ಹೋದೆ.ಹೆಡ್ ಮಾಸ್ಟರ್ ಯಾಕೆ ಹೀಗಿದ್ದಿಯಾ , ಕ್ಲೀನ್ ಆಗಿ ಜಡೆ ಹಾಕಿ ಕೊಳ್ಳಬಾರದೇ ಎಂದರು.ನಮ್ಮ ಗುರುಗಳು ಶಾಲೆಗೆ ರಜ ಅದಕ್ಕೆ ಹಾಗಿದ್ದಾಳೆ, ನನ್ನ ತರಗತಿಯ ಬುದ್ಧಿವಂತ ವಿದ್ಯಾರ್ಥಿನಿ ಎಂದು ಹೆಮ್ಮೆಯಿಂದ ಹೇಳಿದರು . ನಂತರ ಹೆಡ್ ಮಾಸ್ಟರ್ ನನಗೆ ಒಂದು ಸ್ಲೇಟ್ ಕೊಟ್ಟು ತರಗತಿಯಲ್ಲಿ ಅತೀ ಹೆಚ್ಚಿನ ಅಂಕ ಪಡೆದು ಪಾಸಾಗಿದ್ದಿಯ , ಮುಂದೆ ಕೂಡ ಹೀಗೆ ಓದಬೇಕು ಎಂದರು.ನಾನು ಅಬ್ಬಾ ನಾನು ಫೇಲ್ ಆಗಿಲ್ಲ ಅಂತ ಖುಷಿಯಿಂದ ಸ್ಲೇಟ್ ತೆಗೆದು ಕೊಂಡು ಓಟ ಕಿತ್ತುಬಿಟ್ಟೆ.
ಶುಭಾ ಶ್ರೀನಾಥ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





