ಕಥೆ – ಅರವಿಂದ್ ಜೋಷಿ
ಬಾಲ್ಯದ ಗೆಳತಿಯರಾದ ರಶ್ಮಿ ಮತ್ತು ದೀಪಿಕಾ ಬಹಳ ಆದರ್ಶ ಸ್ನೇಹ ಹೊಂದಿದ್ದರು. ಮದುವೆಯಾದ ನಂತರ ಬೇರೆ ಬೇರೆ ಊರಿನಲ್ಲಿದ್ದರು, ಮುಂದೇ ಒಂದೇ ಊರಿನಲ್ಲಿ ಇರುವಂತಾಯಿತು. ಈ ಮಧ್ಯೆ ತನ್ನ ಬರ್ತ್ ಡೇ ಸಮಾರಂಭದಲ್ಲಿ ಚಿನ್ನದ ಸರ ಕಳೆದುಕೊಂಡ ರಶ್ಮಿ, ಅಲ್ಲಿಗೆ ಬಂದಿದ್ದ ದೀಪಿಕಾ ಅದನ್ನು ಕದ್ದಿರಬಹುದೇ ಎಂದು ಅನುಮಾನಿಸಿದಳು. ಮುಂದೆ ಏನಾಯಿತು……?
“ದೀಪೂ ಮಿಸ್ ಮಾಡ್ಕೊಬೇಡ ಕಣೇ, ಖಂಡಿತಾ ಬಾ…. ಐ ಆ್ಯಮ್ ವೇಟಿಂಗ್ ಈಗರ್ಲಿ……” ಎಂದು ಕಳೆದ ಒಂದು ವಾರದಿಂದಲೂ ದೀಪಿಕಾಳ ಬಾಲ್ಯ ಸ್ನೇಹಿತೆ ರಶ್ಮಿ, ದಿನಕ್ಕೆ ಎರಡು ಮೂರು ಬಾರಿಯಾದರೂ ಫೋನ್ ಮೂಲಕ ಅವಳಿಗೆ ತಿಳಿಸುತ್ತಲೇ ಇದ್ದಳು.
ಪ್ರತಿ ಬಾರಿ ಅವಳಿಗೆ ಉತ್ತರಿಸುವಾಗೆಲ್ಲ ದೀಪಿಕಾ ಅಷ್ಟೇ ಆತ್ಮೀಯವಾಗಿ, “ಮಿಸ್ ಮಾಡಲ್ಲಾ ಕಣೇ…. ಅಟ್‌ಎನಿ ಕಾಸ್ಟ್ ಬಂದೇ ಬರ್ತೀನಿ….” ಎಂದು ಹೇಳುತ್ತಿದ್ದಳು.
ರಶ್ಮಿ ನಗರದ ಪ್ರತಿಷ್ಠತ ಉದ್ಯಮಿ ವಾಮನ ರಾವ್ ರ ಏಕೈಕ ಪುತ್ರಿ. ದೀಪಿಕಾ ಮಧ್ಯಮ ವರ್ಗಕ್ಕೆ ಸೇರಿದ ಸರ್ಕಾರಿ ನೌಕರ ಗೋಪಾಲಯ್ಯನ ಮಗಳು.
ರಶ್ಮಿಯ ಬಂಗಲೆಯ ಹಿಂಭಾಗದ ರಸ್ತೆಯ ಎರಡನೇ ತಿರುವಿನಲ್ಲಿ ದೀಪಿಕಾಳ ಮನೆ ಇತ್ತು ಅದು ಪುಟ್ಟದಾದರೂ ತುಂಬಾ ಅಚ್ಚುಕಟ್ಟಾಗಿತ್ತು. ಅಲ್ಲಿ ಅವಳು ತನ್ನ ತಾಯಿ, ತಂದೆ ಹಾಗೂ ಅಣ್ಣನೊಂದಿಗೆ ವಾಸಿಸುತ್ತಿದ್ದಳು. ಸಮವಯಸ್ಕರಾದ ರಶ್ಮಿ ಮತ್ತು ದೀಪಿಕಾ ಬಾಲ್ಯದಿಂದ ಎಂದರೆ ಮೂರನೇ ತರಗತಿಯಿಂದಲೂ ಪಕ್ಕಾ ಸ್ನೇಹಿತೆಯಾಗಿದ್ದರು. ಹಬ್ಬ ಹರಿದಿನಗಳಲ್ಲಿ ಪರಸ್ಪರರ ಮನೆಗೆ ಹೋಗಿ ಯಾವ ಹಮ್ಮು ಬಿಮ್ಮು ಇಲ್ಲದೆ ಸಂಭ್ರಮಿಸುತ್ತಿದ್ದರು.
ಆಗೆಲ್ಲ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಬೆಳೆದಿದ್ದ ರಶ್ಮಿ, ಅಂತಸ್ತಿಗೆ ತಕ್ಕಂತೆ ಜರತಾರಿ ಲಂಗ, ಒಂದೆರಡು ಚಿನ್ನದ ಒಡವೆ ಧರಿಸಿದರೆ, ದೀಪಿಕಾ ತನ್ನ ಮನೆಯವರ ಆರ್ಥಿಕ ಮಟ್ಟಕ್ಕೆ ತಕ್ಕಂತೆ ಸಾಧಾರಣ ಬಟ್ಟೆ ಧರಿಸಿ ತೃಪ್ತಿ ಪಡುತ್ತಿದ್ದಳು. ದಿನ ಕಳೆದಂತೆ ಗೆಳತಿಯರಿಬ್ಬರೂ ಬೆಳೆಯುತ್ತಾ ಹೋದಂತೆ ಅದೇಕೋ ರಶ್ಮಿ ಕೊಂಚ ಅಹಂನತ್ತ ವಾಲಿದ್ದರೆ, ದೀಪಿಕಾ ಮಾತ್ರ ಒಂದಿನಿತೂ ಬದಲಾಗಿರಲಿಲ್ಲ. ಕಾಲೇಜು ವ್ಯಾಸಂಗ ಪೂರೈಸಿದ ಇಬ್ಬರೂ ಉತ್ತಮ ಅಂಕಗಳೊಂದಿಗೆ ಡಿಗ್ರಿ ಪದವಿ ಪಡೆದಿದ್ದರು. ತನ್ನ ಮನೆಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೀಪಿಕಾ ಮುಂದೆ ಓದುವುದನ್ನು ನಿಲ್ಲಿಸಿದ್ದಳು. ಆದರೆ ರಶ್ಮಿ ತನ್ನ ಓದು ಮುಂದುವರಿಸಿ, ಸ್ನಾತಕೋತ್ತರ ಪದವಿ ಪಡೆದಳು. ಈ ನಡುವೆ ದೀಪಿಕಾಳಿಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಅವರ ಪೋಷಕರು ನೋಡಿ ಗೊತ್ತುಪಡಿಸಿದ ಶ್ರೀಕಾಂತ್ ನನ್ನು ಮದುವೆ ಆಗಿದ್ದಳು. ಶ್ರೀಕಾಂತ್ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದು, ಅವನು ದೀಪಿಕಾಳ ಗುಣ ಸ್ವಭಾವಕ್ಕೆ ತಕ್ಕವನಾಗಿದ್ದ. ಮದುವೆ ಆಗಿ ಎರಡು ಮೂರು ತಿಂಗಳ ನಂತರ ಶ್ರೀಕಾಂತ್ ಗೆ ಉತ್ತರ ಭಾರತದ ಬಿಹಾರ್ ರಾಜ್ಯದ ಒಂದು ಜಿಲ್ಲೆಗೆ ವರ್ಗವಾಗಿತ್ತು. ಹೀಗೆ ಇವರು ಅಲ್ಲಿಗೆ ಹೋಗಿ ಹತ್ತು ವರ್ಷಗಳೇ ಕಳೆದು ಹೋಗಿದ್ದವು.
ಇಷ್ಟಾದರೂ ದೀಪಿಕಾ ತನ್ನ ಬಾಲ್ಯದ ಗೆಳತಿ ರಶ್ಮಿಯೊಂದಿಗೆ ಸಂಪರ್ಕದಲ್ಲಿದ್ದು ಸಮಯ ದೊರೆತಾಗೆಲ್ಲ ಪರಸ್ಪರ ಕಷ್ಟ ಸುಖ ವಿಚಾರಿಸಿಕೊಂಡು ತೃಪ್ತಿಪಡುತ್ತಿದ್ದರು. ಈ ನಡುವೆ ರಶ್ಮಿಯೂ ಸಹ ಸಂಬಂಧಿಕರ ಪೈಕಿ ಕೇಶವ್ ರಾವ್ ನನ್ನು ವರಿಸಿ ಮದುವೆ ಆಗಿದ್ದಳು. ಕೇಶವ್ ರಾವ್ ಶ್ರೀಮಂತಿಕೆಯಲ್ಲಿ ರಶ್ಮಿಗಿಂತ ಎರಡು ತೂಕ ಹೆಚ್ಚಿಗೇ ಇದ್ದ. ಇದರಿಂದಾಗಿ ಮೊದಲೇ ಅಹಂನತ್ತ ವಾಲಿದ್ದ ರಶ್ಮಿ ಈಗ ಇನ್ನಷ್ಟು ಜಂಭಪಡುವಂತಾಗಿದ್ದಳು.
ತಾನಿದ್ದ ಊರು ಬಹಳವೇ ದೂರ ಇದ್ದುದರಿಂದ ಹಾಗೂ ಪತಿಗೆ ರಜೆ ದೊರೆಯದ ಪ್ರಯುಕ್ತ ದೀಪಿಕಾಳಿಗೆ ತನ್ನ ಆಪ್ತ ಗೆಳತಿಯ ಮದುವೆಗೆ ಹಾಜರಾಗಲು ಆಗಿರಲಿಲ್ಲ. ಇದರಿಂದಾಗಿ ಇಬ್ಬರೂ ಗೆಳತಿಯರು ಕೆಲವು ದಿವಸ ಬೇಸರದಿಂದ ಇದ್ದರಾದರೂ, ಆನಂತರ ವಾಸ್ತವ ಸಂಗತಿ ಗೊತ್ತಾದ ಮೇಲೆ ಮತ್ತೆ ಎಂದಿನಂತೆ ಇರತೊಡಗಿದರು.
ಈಗ ಕಳೆದ ಆರು ತಿಂಗಳುಗಳ ಹಿಂದಷ್ಟೇ ದೀಪಿಕಾಳ ಪತಿ ಶ್ರೀಕಾಂತ್ ಗೆ ಪ್ರಮೋಷನ್ ದೊರೆತಿದ್ದರಿಂದ, ಗೆಳತಿ ರಶ್ಮಿ ಇದ್ದಂತಹ ಅಂದರೆ ತಾನು ಬಾಲ್ಯದಲ್ಲಿ ಬೆಳೆದ ಊರಿಗೆ ವರ್ಗಾಯಿಸಿ, ಬ್ಯಾಂಕ್ ಮ್ಯಾನೇಜರ್ ಎಂದು ನೇಮಕ ಮಾಡಿದ್ದರು. ಹೀಗಾಗಿ ಈ ಬಾಲ್ಯದ ಗೆಳತಿಯರಲ್ಲಾದ ಸಂತೋಷ ಆಪಾರವಾಗಿತ್ತು. ಪ್ರತಿ ಶನಿವಾರ-ಭಾನುವಾರ ಬಂತೆಂದರೆ ಸಾಕು ಇಬ್ಬರೂ ಪರಸ್ಪರರ ಮನೆಗೆ ಹೋಗಿ ಮನಸೇಚ್ಛೇ ತೃಪ್ತಿ ಆಗುವ ತನಕ ಮಾತನಾಡಿ ಕಾಲ ಕಳೆಯುತ್ತಿದ್ದರು.
ಮುಂದಿನ ತಿಂಗಳು ಐದನೇ ತಾರೀಖು ತಾನು ಮದುವೆ ಆಗಿ ಹತ್ತು ವರ್ಷ ಪೂರೈಸಿದ್ದು, ಹಾಗೂ ಅಂದೇ ತನ್ನ ಹುಟ್ಟುಹಬ್ಬ ಇದ್ದುದರಿಂದ ಎರಡನ್ನೂ ತುಂಬಾ ಗ್ರಾಂಡ್ ಆಗಿ ಆಚರಿಸುವ ಸಿದ್ಧತೆ ಮಾಡಿಕೊಂಡಿದ್ದ ರಶ್ಮಿ, ಅಂದಿನಿಂದಲೇ ತನ್ನ ಆಪ್ತ ಗೆಳತಿಗೆ ಫೋನ್ ಮೂಲಕ ನೆನಪಿಸುತ್ತಲೇ ಇದ್ದಳು.
ಇತ್ತ ದೀಪಿಕಾ, ತಾನು ತನ್ನ ಗೆಳತಿಯ ಮದುವೆಗೆ ಹೋಗಲಾಗಲಿಲ್ಲ. ಈಗ ಅವಳು ಮದುವೆಯಾದ ಹತ್ತನೇ ವಾರ್ಷಿಕೋತ್ಸವಕ್ಕೆ ಹೋಗಲು ಅಷ್ಟೇ ಉತ್ಸುಕಳಾಗಿದ್ದಳು. ಅಂತೂ ಆ ದಿನ ಬಂದೇಬಿಟ್ಟಿತು. ಅಂದು ರಶ್ಮಿಯ ಭವ್ಯವಾದ ಮನೆ ಬಣ್ಣ ಬಣ್ಣದ ವಿದ್ಯುತ್‌ದೀಪಗಳಿಂದ ಝಗಮಗಿಸತೊಡಗಿತ್ತು. ಆಹ್ವಾನಿತ ಅತಿಥಿಗಳು ಒಬ್ಬೊಬ್ಬರಾಗಿ ಬಂದು ದೊಡ್ಡ ಹಾಲ್ ನಲ್ಲಿ ಜಮಾಯಿಸಿದ್ದರು.
ಮೈ ತುಂಬ ಬೆಲೆಬಾಳುವ ಆಭರಣ ತೊಟ್ಟ ರಶ್ಮಿ, ಅವಳದೇ ಗತ್ತಿನಿಂದ ಓಡಾಡುತ್ತಿದ್ದರೂ, ಕಣ್ಣುಗಳು ಮಾತ್ರ ಆಪ್ತ ಗೆಳತಿಯನ್ನು ಹುಡುಕುತ್ತಿದ್ದ. ಮನದಲ್ಲಿ, `ಖಂಡಿತ ಬಂದೇ ಬರ್ತೀನಿ ಎಂದು ಹೇಳಿದ್ದಳು, ಇನ್ನೂ ಯಾಕೆ ಬಂದಿಲ್ಲ…?’ ಎಂದು ಚಡಪಡಿಸಿದಳು. `ಹೇಗಾದರಾಗಲಿ ವಿಚಾರಿಸೋಣ,’ ಎಂದುಕೊಂಡು ಫೋನ್ ಮಾಡಲು ಮುಂದಾದಳು.
ಆಗ ಮನೆ ಎದುರು ಆಟೋದಿಂದ ದೀಪಿಕಾ ಇಳಿದು ಬರುತ್ತಿರುವುದು ಕಂಡು ಹಿಗ್ಗಿ ಹೀರೇಕಾಯಿಯಾಗಿ ಬಾಗಿಲಲ್ಲೇ ಅವಳನ್ನು ಆತ್ಮೀಯತೆಯಿಂದ ತಬ್ಬಿಕೊಂಡು, “ಈಗ ನನಗೆ ಸಮಾಧಾನ ಆಯ್ತು ನೋಡು ಬಾ….,” ಎಂದು ಒಳಗೆ ಕರೆದೊಯ್ದಳು.
“ಅದ್ಸರಿ ಎಲ್ಲೇ ನಿನ್ನ ಹಬ್ಬಿ…..?” ಎಂದು ಕೇಳಿದಳು ರಶ್ಮಿ.
“ಇಲ್ಲಾ ಕಣೆ ಯಾವುದೋ ಅರ್ಜೆಂಟ್ ಕೆಲಸ ಇದೆ, ನೀನು ಹೋಗಿ ಬಾ ಅಂದ್ರು….” ಎಂದಳು ರಶ್ಮಿ.
“ಸಧ್ಯ ನೀನಾದರೂ ಬಂದೆಯಲ್ಲ ಮಾರಾಯ್ತಿ….. ಬಾ,” ಎನ್ನುತ್ತಾ ಒಳಗೆ ಕರೆತಂದು, ಹಜಾರದಲ್ಲಿ ಕುಳಿತಿದ್ದ ಕೆಲವು ಮುಖ್ಯ ಅತಿಥಿಗಳಿಗೆ ಅವಳ ಪರಿಚಯ ಮಾಡಿಕೊಟ್ಟಳು.
ಸಂಪ್ರದಾಯದ ಪ್ರಕಾರ ಪೂಜೆ ಪುನಸ್ಕಾರ, ಊಟ ಮುಗಿದ ನಂತರ ರಶ್ಮಿ ತನ್ನ ಗೆಳತಿಯನ್ನು ಮಹಡಿ ಮೇಲಿದ್ದ ತನ್ನ ಕೋಣೆಗೆ ಕರೆದೊಯ್ದು, ಇತ್ತೀಚೆಗೆ ತಾನು ಖರೀದಿಸಿದ್ದ ಬೆಲೆ ಬಾಳುವ ಸೀರೆ, ತನ್ನ ಮೇಲಿದ್ದ ಆಭರಣಗಳನ್ನಲ್ಲದೆ ಅಲ್ಮೇರಾದಲ್ಲಿ ಇಟ್ಟಿದ್ದ ಇನ್ನೂ ಕೆಲವು ಆಭರಣಗಳನ್ನು ತೋರಿಸಿದಳು. ಒಂದಕ್ಕಿಂತ ಒಂದು ಹೊಸ ಡಿಸೈನ್ ನ ಆಭರಣಗಳನ್ನು ಕಣ್ತುಂಬ ನೋಡುತ್ತಿದ್ದ ದೀಪಿಕಾ, “ವಾವ್… ಸೂಪರ್, ಎ ಒನ್, ಫೆಂಟಾಸ್ಟಿಕ್….” ಎಂದು ಹೇಳುತ್ತಿದ್ದರೆ ರಶ್ಮಿ ಒಳಗೊಳಗೇ ಬೀಗುತ್ತಿದ್ದಳು. ಇದೆಲ್ಲ ಸುಮಾರು ಒಂದೂವರೆ ಗಂಟೆತನಕ ನಡೆಯಿತು.
ತನ್ನ ಮೊಬೈಲ್ ನಲ್ಲಿ ಟೈಂ ನೋಡಿಕೊಂಡ ದೀಪಿಕಾ, “ಏ…. ತುಂಬಾ ಟೈಂ ಆಯ್ತು ಕಣೇ…. ಇವ್ರು ಮನೇಲಿ ಕಾಯ್ತಾ ಇರ್ತಾರೆ. ಜೊತೆಗೆ ಈ ಹೊತ್ತಿನಲ್ಲಿ ನಮ್ಮ ಏರಿಯಾಕ್ಕೆ ಆಟೋದವರು ಬರಲು ಹಿಂದೇಟು ಹಾಕುತ್ತಾರೆ,” ಎಂದಳು.
“ಏಯ್….. ಅದಕ್ಯಾಕೆ ವರಿ ಮಾಡ್ಕೋತಿ. ನಮ್ಮ ಡ್ರೈವರ್ ಗೆ ಹೇಳ್ತೀನಿ, ಅವನು ಬಿಟ್ಟು ಬರ್ತಾನೆ,” ಎಂದಳು ರಶ್ಮಿ.
“ಆಯ್ತು….” ಎಂದ ದೀಪಿಕಾ, ಮತ್ತರ್ಧ ಗಂಟೆ ಬಳಿಕ, “ನಾನು ಹೊರಡ್ತೀನಿ,” ಎಂದಳು.
ಅದಕ್ಕೆ ರಶ್ಮಿ, “ಏಯ್ ಸ್ವಲ್ಪ ತಾಳು….” ಎಂದವಳೇ ಅಲ್ಮೇರಾದಿಂದ ಮತ್ತಷ್ಟು ಆಭರಣಗಳನ್ನು ಹಾಕಿಕೊಂಡು ಬಂದು, “ದೀಪಿಕಾ, ನನ್ನನ್ನು ಹಗ್ ಮಾಡ್ಕೋ…. ಒಂದು ಸೆಲ್ಛಿ ತಗೋತೀನಿ,” ಎಂದಳು.
“ಏಯ್ ಬೇಡಾ ಕಣೇ….. ಇದೆಂಥಾ ಹುಚ್ಚು ನಿನಗೆ,” ಎಂದು ಅಸಮ್ಮತಿಸಿದರೂ ಗೆಳತಿಯ ಬಲವಂತಕ್ಕೆ ಅವಳನ್ನು ಅಪ್ಪಿಕೊಂಡು ಸೆಲ್ಛಿ ತೆಗೆದುಕೊಳ್ಳಲು ಅನುಮತಿಸಿದಳು.
ದೀಪಿಕಾ ಹೊರಟು ನಿಂತಾಗ ರಶ್ಮಿ ಅವಳಿಗೆಂದೇ ತಂದಿದ್ದ ರೇಷ್ಮೆ ಸೀರೆ, ಸಿಹಿ, ಹಣ್ಣುಹಂಪಲು ತಾಂಬೂಲ ಕೊಟ್ಟು, ಡ್ರೈವರ್ ಗೆ ಕರೆದುಕೊಂಡು ಹೋಗಿ ಬಿಡುವಂತೆ ಹೇಳಿ, ಆತ್ಮೀಯವಾಗಿ ಗೆಳತಿಯನ್ನು ಬೀಳ್ಕೊಟ್ಟಳು.
ಕಾರ್ಯಕ್ರಮಕ್ಕೆ ಬಂದವರೆಲ್ಲ ನಿರ್ಗಮಿಸಿದ ನಂತರ ರಶ್ಮಿ ತನ್ನ ರೂಮಿಗೆ ಬಂದು ಅಲ್ಲಲ್ಲಿ ಚದುರಿದ್ದ ಆಭರಣ, ಸೀರೆಗಳನ್ನು ತೆಗೆದು ಒಪ್ಪವಾಗಿ ಇಡತೊಡಗಿದಳು. ಇತ್ತೀಚೆಗೆ ಅವಳ ಪತಿ ಕೊಡಿಸಿದ್ದ ಆಕರ್ಷಕ ಡಿಸೈನ್ ನ ದಪ್ಪ ಗಾತ್ರದ ಅವಲಕ್ಕಿ ಸರ ಕಾಣದಿದ್ದುದು ಅವಳ ಗಮನಕ್ಕೆ ಬಂದಿತು. ತುಸು ಗಾಬರಿಗೊಂಡ ಅವಳು ಮತ್ತೆ ಮತ್ತೆ ಅವೆಲ್ಲಾ ಹುಡುಕಿದಳಾದರೂ, ಊಹ್ಞೂಂ…. ಅದು ಅವಳಿಗೆ ಕಾಣವೇ ಇಲ್ಲ…. `ಎಲ್ಲಿ ಹೋಯ್ತು….? ಇಂದು ಅದನ್ನು ಧರಿಸಿ ಈ ರೂಮು ಬಿಟ್ಟು ಆಚೆ ಎಲ್ಲೂ ಹೋಗಲಿಲ್ಲ. ಆದರೂ…..’ ಎಂದುಕೊಂಡು ಸೆಲ್ಛೀ ಫೋಟೋ ನೋಡಿದಳು.
`ಹ್ಞಾಂ…. ಅದು ಇಲ್ಲಿ ಇದೆ. ಹಾಗಾದರೆ…..? ಈ ರೂಮಿನಲ್ಲಿ ನಾನು ಮತ್ತು ದೀಪಿಕಾಳನ್ನು ಬಿಟ್ಟರೆ ಯಾರೂ ಬಂದಿಲ್ಲ ಮತ್ತೆ…..?’ ನೂರೆಂಟು ಪ್ರಶ್ನೆ, ಅನುಮಾನಗಳು ತಲೆ ತಿನ್ನತೊಡಗಿದವು.
`ತನ್ನ ಪತಿ ಅದರ ಬಗ್ಗೆ ಕೇಳಿದರೆ ಏನೆಂದು ಉತ್ತರಿಸುವುದು…. ಅದು ಲಕ್ಷಾಂತರ ರೂಪಾಯಿ ಮೌಲ್ಯದ ಸರ. ಛೇ… ಇದೇನಾಯಿತು,’ ಎನ್ನುವ ತಳಮಳ ಆರಂಭವಾಯಿತು.
ಆವರೆಗೂ ಖುಷಿಯಿಂದ ಅರಳಿದ್ದ ಅವಳ ಮುಖ ಬಾಡಿದ ಹೂವಿನಂತಾಯಿತು. ಆಗ ಅವಳ ಒಂದು ಮನಸ್ಸು, `ಯಾಕೆ ಇಷ್ಟು ಟೆನ್ಶನ್ ಮಾಡ್ಕೊತೀಯಾ…. ಒಂದು ಮಾತು ದೀಪಿಕಾಳನ್ನು ಕೇಳು…. ಕೇಳು…’ ಕೂಗಿಕೊಂಡಿತು. ಮತ್ತೊಂದು ಮನಸ್ಸು, `ಛೇ…. ಬೇಡ ರಶ್ಮಿ ಬೇಡ…. ಆ ರೀತಿ ಏನಾದರೂ ನೀನು ಕೇಳಿದರೆ, ಅವಳ ಮನಸ್ಸು ಎಷ್ಟು ಘಾಸಿಯಾಗುತ್ತೆ, ಯೋಚನೆ ಮಾಡಿದ್ದೀಯಾ….? ಅವಳು ನಿನ್ನ ಪ್ರಾಣ ಸ್ನೇಹಿತೆ ಅನ್ನೋದನ್ನು ಮರೆತೆಯಾ….? ಒಂದು ವೇಳೆ ನೀನು ಅವಳನ್ನು ಕೇಳಿದರೆ, ನಿನ್ನ ಅವಳ ಗಾಢ ಸ್ನೇಹಕ್ಕೆ ನೀನೇ ಕೊಡಲಿ ಏಟು ಕೊಟ್ಟಂತಾಗಲ್ವಾ….. ಯೋಚಿಸಿ ಹೆಜ್ಜೆ ಇಡು,’ ಎಂದು ಇನ್ನಿಲ್ಲದಂತೆ ಹೇಳಿತು.
ಆದರೆ ರಶ್ಮಿಗೆ ಆಗುತ್ತಿದ್ದ ತಳಮಳ ಅದ್ಯಾವುದನ್ನೂ ಲೆಕ್ಕಿಸಲಿಲ್ಲ. ಅವಳು ಗೆಳತಿಗೆ ಫೋನ್ ಮಾಡಲೆಂದು ಫೋನ್ ಎತ್ತಿಕೊಂಡಳು. ಆಗ ಸಮಯ ರಾತ್ರಿ ಹನ್ನೆರಡು ಗಂಟೆಯಾಗಿತ್ತು. ದೀಪಿಕಾ ನಿದ್ರೆಗೆ ಜಾರಿದ್ದಳು. ಪಕ್ಕದಲ್ಲಿದ್ದ ಫೋನ್ ರಿಂಗಣಿಸಿದಾಗ, `ಈ ಸರಿ ಹೊತ್ತಿನಲ್ಲಿ ಯಾರಪ್ಪಾ…’ ಎಂದು ಫೋನ್ ಎತ್ತಿಕೊಂಡಳು.
`ಅರೆ….. ರಶ್ಮಿಯಿಂದ ಕಾಲ್….’ ಸ್ವಲ್ಪ ಹೊತ್ತು ಆಶ್ಚರ್ಯ ಗಾಬರಿ, ಎರಡೂ ಆಯಿತು. ಸಾವರಿಸಿಕೊಂಡು, “ಹಲೋ ರಶ್ಮೀ….. ಇದೇನೇ ಇಷ್ಟು ಹೊತ್ತಿನಲ್ಲಿ ….. ಏನು ಸಮಾಚಾರ,” ಎಂದು ಕೇಳಿದಳು.
ಆ ಕಡೆಯಿಂದ ರಶ್ಮಿ, “ಏನಿಲ್ಲಾ ದೀಪೂ….. ಆ ನನ್ನ ಹೊಸ ಅವಲಕ್ಕಿ ಸರ….” ಎಂದು ಹೇಳುತ್ತಿದ್ದವಳ ಕಣ್ಣು ಕಿಟಕಿಯ ದೊಡ್ಡ ಪರದೆ ಹಿಂದಿದ್ದ ಫ್ರೇಮ್ ನಡಿ ಹೋಯಿತು. ಅಲ್ಲಿ ಏನೋ ಫಳಫಳ ಎಂದು ಹೊಳೆಯುತ್ತಿದ್ದ ವಸ್ತು ಕಾಣಿಸಿತು. ಮೊಬೈಲ್ ಹಿಡಿದುಕೊಂಡೇ ಅವಳು ಅವಸರವಸರವಾಗಿ ಅಲ್ಲಿಗೆ ಹೋದಳು. ಅದುವರೆಗೂ ಅವಳು ಯಾವುದನ್ನು ಹುಡುಕುತ್ತಿದ್ದಳೋ ಆ ಸರ ಅಲ್ಲಿ ಕಂಡಾಗ ಖುಷಿಯಾಯಿತು.
ಅಷ್ಟರಲ್ಲಿ ಈ ಕಡೆಯಿಂದ ದೀಪಿಕಾ, “ಹಲೋ ರಶ್ಮಿ…. ಯಾಕೆ ಏನಾಯ್ತು…. ಏನೂ ಮಾತಾಡ್ತಿಲ್ಲ….. ಸರ ಏನಾದರೂ ಕಳೆದು ಹೋಯ್ತಾ….. ಹೇಳೇ….?” ಎಂದು ನಾಲ್ಕೈದು ಬಾರಿ ಕೇಳುತ್ತಲೇ ಇದ್ದಳು.
ಸರ ಕೈಗೆ ಸಿಕ್ಕಿದ ಸಂತೋಷದಲ್ಲಿ ರಶ್ಮಿ, “ಏನಿಲ್ಲಾ ಕಣೇ ದೀಪೂ…. ಆ ಸರ ನಿನಗೆ ಇಷ್ಟ ಆಯ್ತಲ್ವಾ….” ಎಂದು ಮಾತು ತಿರುಗಿಸಿದಳು.
“ಅಯ್ಯೋ ಪೆದ್ದಿ…. ಅದು ತುಂಬಾ ಚೆನ್ನಾಗಿದೆ ಎಂದು ನಾನು ಆಗಲೇ ಹೇಳಿದ್ದೆ ಆಲ್ವಾ….. ಮತ್ಯಾಕೆ ಇಷ್ಟು ಹೊತ್ತಿನಲ್ಲಿ ಫೋನ್ ಮಾಡಿದೀಯಾ…. ನಿನಗಿನ್ನೂ ನಿದ್ದೆ ಬಂದಿಲ್ವಾ…. ನನಗೆ ನಿದ್ದೆ ಬರ್ತಿದೆ ಗುಡ್ ನೈಟ್ ಕಣೇ…..” ಎಂದು ಕಾಲ್ ಕಟ್ ಮಾಡಿದಳು.
ಇತ್ತ ರಶ್ಮಿ ಮನದಲ್ಲೇ, `ಸರ ಕಾಣೆಯಾದ ಬಗ್ಗೆ ದೀಪಿಕಾಳ ಬಳಿ ಕೇಳಿದ್ದರೆ…. ಓ ಮೈ ಗಾಡ್…..’ ಎನ್ನುತ್ತಾ ಪೋನ್ ಪಕ್ಕಕ್ಕಿಟ್ಟಳು.
ಅಷ್ಟರಲ್ಲಿ ಅಲ್ಲಿಗೆ ಬಂದ ಅವಳ ಪತಿ, “ಇದ್ಯಾಕೆ ರಶ್ಮಿ, ಯಾಕಿನ್ನೂ ಮಲಗಿಲ್ಲ…..?” ಎಂದು ಕೇಳಿದ.
“ಏನಿಲ್ಲಾ ರ್ರೀ…. ಎಲ್ಲಾ ಆಭರಣ ವಸ್ತ್ರ ತೆಗೆದಿರಿಸುತ್ತಿದ್ದೆ,” ಎಂದಳು. ಅಷ್ಟೊತ್ತಿಗೆ ಅವಳ ಮನದಲ್ಲಿ ಆಗುತ್ತಿದ್ದ ತಳಮಳ ಪೂರ್ತಿ ತಳ ಕಂಡಿತು. ಖುಷಿ ಖುಷಿಯಿಂದ ಮಲಗಲು ಮುಂದಾದಳು.





