ಕಥೆ – ಶಶಿ ಅರುಣ್
ಒಂದು ದೊಡ್ಡ ತಪ್ಪು ಸುಂದರ್ ನ ಸಂತೋಷವನ್ನು ಕಸಿದುಕೊಂಡಿತ್ತು. ಮಾತ್ರವಲ್ಲ, ಅವನು ತನ್ನನ್ನು ತಾನು ಕತ್ತಲೆಯಲ್ಲಿಯೇ ಇರಿಸಿಕೊಳ್ಳಲಾರಂಭಿಸಿದ. ದೀಪಾವಳಿಯ ರಾತ್ರಿಯೂ ಅವನು ದೀಪಗಳನ್ನು ಬೆಳಗಿಸದಿದ್ದಾಗ, ನೆರೆಹೊರೆಯವರಿಗೆ ಅವನ ಬಗ್ಗೆ ಅನುಮಾನ ಮೂಡಿತು. ನಂತರ…..
ಪಟಾಕಿಗಳ ಸದ್ದು ನಿರಂತರವಾಗಿ ಪ್ರತಿಧ್ವನಿಸುತ್ತಿತ್ತು. ಎಲ್ಲೆಡೆಯಿಂದ ಅಪ್ಪಳಿಸುತ್ತಿದ್ದ ಪಟಾಕಿಗಳ ಶಬ್ದ ಕಿವಿಯ ಪರದೆಯನ್ನೇ ಹರಿದುಬಿಡುವುದೇನೋ ಎಂಬಂತೆ ಭಾಸವಾಗುತ್ತಿತ್ತು. ಬೆಳಗ್ಗೆಯಿಂದಲೂ ಸುಂದರ್ ಏನನ್ನೂ ತಿಂದಿರಲಿಲ್ಲ. ಅಲ್ಲದೆ, ಅವನಿಗೆ ಹಾಸಿಗೆಯಿಂದ ಮೇಲೇಳಲೂ ಮನಸ್ಸಿರಲಿಲ್ಲ. ಪ್ರತಿಕ್ಷಣ ಮನಸ್ಸಿನ ತಳಮಳದಲ್ಲಿ ಅವನು ಗಾಢವಾಗಿ ಮಗ್ನನಾಗಿಬಿಟ್ಟಿದ್ದ. ಮನಸ್ಸಿನಲ್ಲಿ ಏಳುತ್ತಿದ್ದ ಚಿಂತೆಯ ಅಲೆಗಳ ಏರಿಳಿತಗಳು ಅವನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿವೆ ಎಂದು ಸುಂದರ್ ಗೆ ಅರಿಯಲು ಸಾಧ್ಯವಾಗಲಿಲ್ಲ. ಆದರೆ ಅವನಿಗೆ ಮಲಗುವುದು ಸಹ ಅಸಹನೀಯವಾಗಿತ್ತು. ಕಿಟಕಿಗಳ ಮೂಲಕ ಆಕಾಶ ನೀಲಿ ಗೋಳಗಳ ಹಸಿರುಕೆಂಪು ಹೊಳಪು ಬಣ್ಣಗಳು ಬಲವಂತವಾಗಿ ಕಣ್ಣುಗಳಲ್ಲಿ ಪ್ರವೇಶಿಸಲು ಪ್ರಯತ್ನಿಸುವಂತೆ ತೋರುತ್ತಿತ್ತು.
ಸುಂದರ್ ಕಿರಿಕಿರಿಯಿಂದ ಕಣ್ಣುಗಳನ್ನು ಮುಚ್ಚಿದ. ಅವನು ತನ್ನ ಎಲ್ಲಾ ಶಕ್ತಿ ಪ್ರಯೋಗಿಸಿ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಆದರೆ ಮರುಕ್ಷಣವೇ, ಪ್ರಖರವಾದ ಬೆಳಕು ಅವನ ಕಣ್ಣಿನ ರೆಪ್ಪೆಗಳನ್ನು ತನ್ನಿಂದ ತಾನೇ ತೆರೆಯುವಂತೆ ಮಾಡಿದ್ದ.
ರಜನಿ ತನ್ನ ಮೃದುವಾದ ಬೆರಳುಗಳಿಂದ ಆತನ ಕಣ್ಣಿನ ರೆಪ್ಪೆಗಳನ್ನು ಬಲವಂತವಾಗಿ ತೆರೆಯುತ್ತಿದ್ದಂತೆ…. ಅಂದು ಸುಂದರ್ ಕಿರಿಕಿರಿಗೊಳ್ಳುತ್ತಿದ್ದ. ಆದರೆ ಇಂದು ಅವನಿಗೆ ಮಲ್ಲಿಗೆಯ ಮುದ್ದಾದ ಮೊಗ್ಗುಗಳನ್ನು ಚುಂಬಿಸುವಂತೆ ಭಾಸವಾಗುತ್ತಿತ್ತು. ಅನಾಯಾಸವಾಗಿ ಅವನ ಕೈ ಅವನ ತುಟಿಗಳನ್ನು ತಲುಪಿತು. ಆದರೆ ಇದು ಏನು? ಆ ಶಾಖ ಇಲ್ಲ, ಆ ನಡುಕ ಇಲ್ಲ. ಸುಂದರ್ ಭಯದಿಂದ ಕಣ್ಣು ತೆರೆದ.
ಹೌದು, ಇಲ್ಲಿಗೆ ವರ್ಗವಾಗಿ ಹೊಸದಾಗಿ ನೇಮಕವಾದಾಗಿನಿಂದ ಹೀಗೇ ಆಗುತ್ತಿತ್ತು. ಅವನಿಗೆ ಒಂದು ಹಳೆಯ ಮೂರು ಕೋಣೆಗಳ ಮನೆ ದೊರೆತಿತ್ತು. ಆ ಮನೆ ನಗರದ ಹೊರಭಾಗದಲ್ಲಿತ್ತು. ಹಾಗೂ ಅಲ್ಲಿನ ಸುತ್ತಮುತ್ತಲಿನ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿತ್ತು. ಒಂದು ದಿನ ಬೆಳಗ್ಗೆ ಎದ್ದ ಅವನು, ಚಹಾ ಮಾಡಿಕೊಂಡು ಬಂದು ಎಂದಿನಂತೆ ವರಾಂಡದ ಕುರ್ಚಿಯ ಮೇಲೆ ಕುಳಿತ. ಚಹಾ ಮುಂದಿಟ್ಟುಕೊಂಡು ತನ್ನ ಮೊಬೈಲ್ ನೋಡಲಾರಂಭಿಸಿದ. ಚಹಾ ಕಪ್ ಎತ್ತಿಕೊಂಡು ಒಂದು ಸಿಪ್ ಕುಡಿಯುತ್ತಿದ್ದಾಗ ಅವನು ಅಚ್ಚರಿಗೊಂಡ. ಮನೆಯ ಹುಲ್ಲುಹಾಸಿನಲ್ಲಿರುವ ಕಲ್ಲಿನ ಮೇಲಿಂದ ಸುರಿಯು ಕಾರಂಜಿ ನೀರಿನಲ್ಲಿ ಹುಡುಗಿಯೊಬ್ಬಳು ತನ್ನ ಗುಲಾಬಿ ರೆಕ್ಕೆಯನ್ನು ಬಡಿಯುತ್ತಿದ್ದಂತೆ ಅವನಿಗೆ ಕಂಡುಬಂತು. ಸುಂದರ್ ಬಿಟ್ಟ ಕಣ್ಣುಗಳನ್ನು ಬಿಟ್ಟುಕೊಂಡು ಎವೆಯಿಕ್ಕದೆ ನೋಡುತ್ತಲೇ ಇದ್ದ. ಚಹಾ ಕಪ್ ಅವನ ಕೈಯಲ್ಲೇ ಇತ್ತು. ಮನೆ ಸ್ವಚ್ಛಗೊಳಿಸಲು ಬಂದ ಕೆಲಸದವಳ ಧ್ವನಿ ಕೇಳಿದಾಗ ಅವನು ಗಾಬರಿಗೊಂಡು ಎಚ್ಚೆತ್ತುಗೊಂಡ.
“ಅವಳು ಇಲ್ಲಿನ ಪ್ಲಂಬರ್ ಮಗಳು. ಅವಳು ನಿನ್ನೆ ರಾತ್ರಿಯಷ್ಟೇ ಬೇರೆ ಊರಿನಿಂದ ಬಂದಿದ್ದಾಳೆ. ಅವಳು ಚಿಕ್ಕವಳಿದ್ದಾಗಿನಿಂದಲೂ ಈ ಕಾರಂಜಿಯಲ್ಲಿ ಸ್ನಾನ ಮಾಡುತ್ತಾಳೆ ಹಾಗೂ ಇಷ್ಟು ದೊಡ್ಡವಳಾದರೂ ಅವಳು ತನ್ನ ತುಂಟತನ ನಿಲ್ಲಿಸಿಲ್ಲ. ಅವಳ ತಂದೆ ಈ ಕಾರಂಜಿಯ ಪಂಪ್ ರಿಪೇರಿ ಮಾಡುತ್ತಾರೆ.”
ಸುಂದರ್ ಮಾತ್ರವಲ್ಲ, ಆ ಹುಡುಗಿಯೂ ಸಹ ಕೆಲಸದವಳ ಧ್ವನಿಯಿಂದ ಗಾಬರಿಗೊಂಡಳು. ನೀರಿನಲ್ಲಿ ಆಡಿಸುತ್ತಿದ್ದ ತನ್ನ ಕಾಲುಗಳನ್ನು ಹಿಂತೆಗೆದುಕೊಂಡು, ಆ ಸ್ಥಳವನ್ನು ದಿಟ್ಟಿಸಲಾರಂಭಿಸಿದಳು. ಸುಂದರ್ ದಿಗ್ಭ್ರಮೆಗೊಂಡ. ಒಬ್ಬ ಸ್ತ್ರೀ ಆಕೃತಿ ಇಷ್ಟು ಸುಂದರವಾಗಿ ಇರಬಹುದೆಂದು ಅವನು ಎಂದಿಗೂ ಊಹಿಸಿರಲಿಲ್ಲ. ಅವಳ ಗುಲಾಬಿ ಬಣ್ಣದ ಬಟ್ಟೆಯುವ ಅವಳ ಮುಖವನ್ನು ಇನ್ನಷ್ಟು ಸುಂದರವಾಗಿಸಿತ್ತು. ಅವಳ ಇಡೀ ದೇಹ ಒದ್ದೆಯಾಗಿ ಕಾಣುತ್ತಿತ್ತು. ಬೆಟ್ಟದ ಮಹಿಳೆಯರು ಅಷ್ಟೊಂದು ತೀಕ್ಷ್ಣವಾದ ಸೌಂದರ್ಯ ಮೈದುಂಬಿಕೊಂಡಿರುತ್ತಾರೆಯೇ ಎನಿಸಿತು.
ಅವನು ಹೀಗೆ ಯೋಚಿಸುತ್ತಿದ್ದಾಗಲೇ ಕೆಲಸದವಳ ಧ್ವನಿ ಮತ್ತೆ ಕೇಳಿಸಿತು, “ರಜನಿ ನೀನು ಇಷ್ಟು ದೊಡ್ಡವಳಾಗಿದ್ದೀಯ. ಕಾರಂಜಿಯಲ್ಲಿ ಸ್ನಾನ ಮಾಡುವ ನಿನ್ನ ಆಸೆ ಇನ್ನೂ ಮುಗಿದಿಲ್ಲವೇ?” ಎನ್ನುತ್ತಾ ಸುಂದರ್ ಕಡೆ ತಿರುಗಿ, “ನೀವು ಚಹಾ ಕುಡಿಯಿರಿ. ಆಕೆ ಇನ್ನು ಮುಂದೆ ಈ ಕಾರಂಜಿಯಲ್ಲಿ ಸ್ನಾನಕ್ಕೆ ಬರದಂತೆ ಅವಳಿಗೆ ಹೇಳುತ್ತೇನೆ,” ಎಂದು ಹೇಳಿದಳು.
“ಬೇಡ ಮಾಲತಿ, ಆ ಹುಡುಗಿಗೆ ಏನೂ ಹೇಳುವ ಅಗತ್ಯವಿಲ್ಲ,” ಎಂದು ಸುಂದರ್ ಚಹಾ ಕುಡಿಯಲು ಆರಂಭಿಸಿದ.
ಅಷ್ಟರಲ್ಲಿ ಆ ಹುಡುಗಿ ಅಲ್ಲಿಂದ ಹೊರಟುಹೋಗಿದ್ದಳು ಹಾಗೂ ಕಾರಂಜಿಯಲ್ಲಿನ ನೀರು ಅದೇ ಗಾಢ ಬಣ್ಣದಲ್ಲಿ ನಿಂತಿತ್ತು.
“ಈ ಕಾರಂಜಿ ಎಷ್ಟು ಸುಂದರವಾಗಿದೆ! ಅದು ನಿಜವಾಗಿಯೂ ಪರ್ವತದಿಂದ ಧುಮ್ಮಿಕ್ಕು ಜಲಪಾತದಂತೆ,” ಸುಂದರ್ ತನ್ನಷ್ಟಕ್ಕೆ ತಾನೇ ಹೇಳಿಕೊಂಡ.
ಇದಾದ ನಂತರ ದಿನಗಳು ಕಳೆದಂತೆ ರೆಕ್ಕೆ ಹಚ್ಚಿದ ಪಕ್ಷಿಯಂತೆ ಅವನು ಹಾರಾಡಲಾರಂಭಿಸಿದ. ರಜನಿಯ ಮದುವೆ ಇನ್ನೂ ನಿಶ್ಚಯವಾಗಿಲ್ಲ ಎಂಬುದನ್ನು ಸುಂದರ್, ಮಾಲತಿಯಿಂದ ತಿಳಿದುಕೊಂಡ. ರಜನಿ ಪರಿಶಿಷ್ಟ ಜಾತಿಯವಳಾಗಿದ್ದು, ಓದುವುದರಲ್ಲಿ ಬಹಳ ಜಾಣೆಯಾಗಿದ್ದಳು. ಅವಳ ತಂದೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು. ಅದು ಅವರಿಗೆ ಉತ್ತಮ ಆದಾಯವನ್ನೂ ತಂದುಕೊಟ್ಟಿತ್ತು. ರಜನಿ ಒಪ್ಪಂದಗಳ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳುತ್ತಿದ್ದಳು. ಸುಂದರ್, ರಜನಿಯ ಪೋಷಕರನ್ನು ಭೇಟಿಯಾಗಿ ರಜನಿಯೊಂದಿಗೆ ವಿವಾಹದ ಪ್ರಸ್ತಾಪವನ್ನು ಮಾಡಿದ. ಸುಂದರ್ ಮೇಲ್ಜಾತಿಯವನಾಗಿದ್ದು, ಹೆಸರಿಗೆ ತಕ್ಕಂತೆ ಸುಂದರವಾಗಿ, ಆಕರ್ಷಕವಾಗಿದ್ದ. ಮೇಲಾಗಿ ಸರ್ಕಾರಿ ವೈದ್ಯ. ಅವನನ್ನು ತಮ್ಮ ಅಳಿಯನನ್ನಾಗಿ ಮಾಡಿಕೊಳ್ಳುವಲ್ಲಿ ರಜನಿಯ ಪೋಷಕರಿಗೆ ಯಾವ ಆಕ್ಷೇಪಣೆಯೂ ಇರಲಿಲ್ಲ.
ರಜನಿಯ ಸೌಂದರ್ಯವನ್ನು ನೋಡಿದ ಸುಂದರ್ ನ ತಾಯಿ ಕೂಡ ತಕ್ಷಣ ಆಕೆಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಒಪ್ಪಿಕೊಂಡರು. ಆದರೆ ರಜನಿಯ ಜಾತಿಯ ಬಗ್ಗೆ ಆಕೆಗೆ ಸ್ವಲ್ಪ ಅಸಮಾಧಾನವಿತ್ತು. ಆದರೆ ಸುಂದರ್ ನ ತಾಯಿ ತನ್ನ ಯೌವನದಲ್ಲಿ ಕಮ್ಯುನಿಸ್ಟ್ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದರು ಹಾಗೂ ಅವರು ಪಾಠ ಕಲಿಸುತ್ತಿದ್ದ ಸ್ಥಳ ಎಲ್ಲಾ ಜಾತಿಯ ಹುಡುಗಿಯರು ಬರುವಂಥದ್ದಾಗಿತ್ತು. ಹಾಗಾಗಿ ಹೆಚ್ಚಿನ ಆಕ್ಷೇಪಣೆಯೂ ಇರಲಿಲ್ಲ.
ಕೆಲವು ದಿನಗಳು ಕಾದ ನಂತರ ಮದುವೆ ನಿಶ್ಚಯವಾಯಿತು. ಅವನ ಇಚ್ಛೆಯಂತೆ ಸುಂದರ್ ರಜನಿಯನ್ನು ವಿವಾಹವಾಗಿ ಮನೆಗೆ ಕರೆತಂದ. ಹಗಲಿರುಳು ರಜನಿಯ ಪ್ರೀತಿಯಲ್ಲಿ ಮಳುಗಿಹೋದ. ಆ ಅಮಲು ಎಷ್ಟು ಆಳವಾಗಿತ್ತೆಂದರೆ, ಅವನಿಗೆ ಯಾವುದರ ಬಗ್ಗೆ ಯೋಚಿಸಲೂ ಸಹ ಸಮಯ ಸಿಗುತ್ತಿರಲಿಲ್ಲ. ಅವನ ಸ್ನೇಹಿತರು ಅವನೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದರು. ಆದರೆ ಇದು ಅವನ ಮೇಲೆ ಯಾವುದೇ ಪರಿಣಾಮವನ್ನೂ ಬೀರಲಿಲ್ಲ. ಅವನು ಮಾತ್ರ ರಜನಿಯಲ್ಲಿ ತನ್ನ ಜೀವನವನ್ನು ನೋಡುತ್ತಿದ್ದ.
ಸುಂದರ್ ಗೆ ಭಾನುವಾರ ಹಗಲಿನಲ್ಲಿ ಮಲಗುವ ಅಭ್ಯಾಸವಿತ್ತು. ಮದುವೆ ಆಗಿ ಒಂದು ವರ್ಷ ಕೂಡಾ ಆಗಿರಲಿಲ್ಲ. ಒಂದು ದಿನ, ಇದ್ದಕ್ಕಿದ್ದಂತೆ, ಸುಂದರ್ ಮಲಗಿದ್ದಾಗ, ಯಾರೋ ತಮ್ಮ ಬೆರಳುಗಳಿಂದ ಅವನ ಕಣ್ಣಿನ ರೆಪ್ಪೆಗಳನ್ನು ಬಿಡಿಸಿದಂತಾಯಿತು. ಸುಂದರ್ ಆತುರದಿಂದ ಕಣ್ಣುಬಿಟ್ಟು ಮೇಲೆ ನೋಡಿದ. ರಜನಿ ಹತ್ತಿರದಲ್ಲಿ ನಿಂತು ನಗುತ್ತಿದ್ದಳು. ಸುಂದರ್ ಕಿರಿಕಿರಿಯಿಂದ ತನ್ನನ್ನು ಮಲಗಲು ಏಕೆ ಬಿಡುತ್ತಿಲ್ಲ ಎಂದು ಕೇಳಲು ಹೊರಟಾಗ, ರಜನಿ “ಅಭಿನಂದನೆಗಳು,” ಎಂದು ಹೇಳಿದಳು.
“ಏನು ಹೇಳ್ತಿದ್ದೀಯಾ? ಇದು ಇಷ್ಟು ಬೇಗ ಹೇಗೆ ಆಯ್ತು? ನಾನು ಇನ್ನೂ ಅದರ ಬಗ್ಗೆ ಯೋಚಿಸಿಯೂ ಇರಲಿಲ್ಲ,” ಸುಂದರ್ ನ ಮುಖ ಕಳೆಗುಂದಿತ್ತು.
“ಹಾಗಾದರೆ ಎಲ್ಲವೂ ನಿಮ್ಮ ಆಲೋಚನೆಗಳಿಂದಲೇ ಆಗುತ್ತದೆಯೇ? ಇದನ್ನು ಕೇಳಿದ ನಂತರ ನೀವು ಸಂತೋಷದಿಂದ ಕುಣಿದಾಡುತ್ತೀರಿ ಎಂದು ನಾನು ಅಂದುಕೊಂಡಿದ್ದೆ. ಆದರೆ ಏನೋ ತುಂಬಾ ತಪ್ಪು ನಡೆದಿದೆ ಎಂಬಂತೆ ನೀವು ಭಯಭೀತರಾಗಿದ್ದೀರಿ. ಇದರಲ್ಲಿ ಭಯಪಡುವಂಥದ್ದಾದರೂ ಏನಿದೆ? ಇದೇನು ಕಳ್ಳತನವೇ? ನಾವಿಬ್ಬರೂ ಈಗ ಪತಿಪತ್ನಿ.”
“ಇಲ್ಲ ರಜನಿ, ಇದು ಸರಿಯಲ್ಲ. ನಮಗೆ ಇಷ್ಟು ಬೇಗ ಮಗು ಬೇಡ,” ಎಂದು ಸುಂದರ್ ದೃಢವಾದ ಧ್ವನಿಯಲ್ಲಿ ಹೇಳಿದ ನಂತರ ಎಲ್ಲ ಕೊನೆಗೊಂಡಿತು. ರಜನಿಯ ಕೋಪ ಹಾಗೂ ಕಣ್ಣೀರು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಸುಂದರ್, ರಜನಿಗೆ ಇಂಜೆಕ್ಷನ್ ನೀಡುವ ಮೂಲಕ ಅವಳು ತಾಯಿಯಾಗುವುದನ್ನು ತಪ್ಪಿಸಿದ. ರಜನಿ ತಪ್ಪಿತಸ್ತ ಭಾವನೆಯಿಂದ ಕೊರಗಲಾರಂಭಿಸಿದಳು.
ಕೆಲವು ದಿನಗಳ ನಂತರ ಎಲ್ಲ ಮತ್ತೆ ಸಾಮಾನ್ಯವಾಯಿತು. ರಜನಿ ಕೂಡ ಎಲ್ಲವನ್ನೂ ಮರೆತು ತನ್ನ ಗಂಡನೊಂದಿಗೆ ಸಂತೋಷದಿಂದ ಇರಲು ಪ್ರಯತ್ನಿಸಿದಳು. ಹಾಗೇ ಮೂರು ವರ್ಷಗಳು ಕಣ್ಮುಚ್ಚಿ ತೆಗೆಯುಷ್ಟರಲ್ಲಿ ಕಳೆದುಹೋದ. ಮೂರು ವರ್ಷಗಳ ನಂತರ ಮತ್ತೆ ಅದು ಸ್ಛೋಟಗೊಂಡಿತು.

ಒಂದು ದಿನ ಇದ್ದಕ್ಕಿದ್ದಂತೆ ಸುಂದರ್ ಕೇಳಿದ, “ಏಕೆ ಎಲ್ಲವೂ ಸರಿಯಾಗಿದೆಯೇ?” ಆ ದಿನವೇ ರಜನಿ ಒಂದು ತಿಂಗಳ ನಂತರ ತನ್ನ ತಾಯಿಯ ಮನೆಯಿಂದ ಹಿಂದಿರುಗಿದ್ದಳು.
ರಜನಿ ಸ್ವತಃ ಅವನಿಗೆ ಹೇಳಬೇಕು ಎಂದುಕೊಂಡಳು. ಆದರೆ ರಾತ್ರಿ ಹೇಳೋಣ ಎಂದು ಯೋಚಿಸಿ ಸುಮ್ಮನಾಗಿದ್ದಳು. ಸುಂದರ್ ಸ್ವತಃ ಕೇಳಿದ್ದನ್ನು ನೋಡಿ, ಒಂದು ನಿಗೂಢ ನಗುವಿನೊಂದಿಗೆ, “ಹೌದು ಎಲ್ಲವೂ ಚೆನ್ನಾಗಿದೆ. ಈ ಬಾರಿ ಯಾವುದೇ ಆತುರವಿಲ್ಲ. ಈಗ ನಿಮಗೆ ಕಥೆ ಕಟ್ಟಲು ಸಹ ನಾಚಿಕೆ ಆಗುವುದಿಲ್ಲ, ಓಕೆನಾ?” ಎಂದಳು.
“ಏನು ಹೇಳ್ತಿದ್ದೀಯಾ? ಮತ್ತೆ ಏನಾದರೂ ತಪ್ಪಾಯಿತೇ? ಅದಕ್ಕೆ ನಾನು ಹೇಳುತ್ತಿದ್ದೆ. ಹೆಚ್ಚು ದಿನ ಹೋಗಬೇಡ ಅಂತ. ಹೇಗೋ, ಇನ್ನೂ ಏನೂ ತಪ್ಪಾಗಿಲ್ಲ. ಈಗ 7 ವಾರಗಳು ಮಾತ್ರ ಆಗಿವೆ. ನನಗೆ ನಿನ್ನ ದಿನಾಂಕಗಳು ಸರಿಯಾಗಿ ನೆನಪಿದೆ,” ಎಂದು ಸುಂದರ್ ಧೈರ್ಯ ತುಂಬುವ ಧ್ವನಿಯಲ್ಲಿ ಹೇಳಿದ.
“ಮತ್ತೆ ಏನು ಹೇಳ್ತಿದ್ದೀಯ ನೀನು…?” ಸುಂದರ್ ಅವಳ ಮಾತಿಗೆ ಅಡ್ಡಿಪಡಿಸಿ, “ಹೌದು, ಈಗ ಬೇಡ, ನಮಗೆ 5 ವರ್ಷಕ್ಕಿಂತ ಮೊದಲು ಮಗು ಬೇಡ,” ಎಂದು ಹೇಳಿದಾಗ, ರಜನಿ ತನ್ನ ಮಾತನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
“ಇಲ್ಲ…. ಇಲ್ಲ. ಈಗ ನಾನು ಇದನ್ನು ನಿರಾಕರಿಸಲು ಸಾಧ್ಯವಿಲ್ಲ!” ರಜನಿ ಭಯದಿಂದ ನಡುಗಲು ಪ್ರಾರಂಭಿಸಿದಳು. ಮೊದಲನೆಯದಾಗಿ, ಅವಳು ತನ್ನ ಹಿಂದಿನ ನೋವನ್ನು ನೆನಪಿಸಿಕೊಳ್ಳುತ್ತಾ ಗಲಿಬಿಲಿಗೊಳ್ಳುತ್ತಿದ್ದಳು. ಎರಡನೆಯದಾಗಿ, ಪ್ರತಿ ಬಾರಿಯೂ ತನ್ನಲ್ಲಿನ ಮಾತೃವಾತ್ಸಲ್ಯದ ಕತ್ತು ಹಿಸುಕುವುದನ್ನು ಸಹಿಸಲು ಅವಳಿಗೆ ಸಾಧ್ಯವಾಗಲಿಲ್ಲ.
“ನೀನಿನ್ನು ತುಂಬಾ ಚಿಕ್ಕವಳು. ಇಷ್ಟು ಬೇಗ ಮಕ್ಕಳಾದರೆ ಏನಾಗುತ್ತದೆ ಅಂತ ನಿನಗೆ ಗೊತ್ತಾ? ನಿನ್ನ ಸೌಂದರ್ಯ ಸಂಪೂರ್ಣವಾಗಿ ಹಾಳಾಗಿಬಿಡುತ್ತದೆ,” ಎಂದು ಸಮಾಧಾನಪಡಿಸುತ್ತಾ ಹೇಳಿದ ಸುಂದರ್, “ಹಠ ಮಾಡಬೇಡ, ಮಕ್ಕಳನ್ನು ಹೆರುವುದರಲ್ಲಿ ಸಂತೋಷವಿದೆ ಅನ್ನೋ ನಿಮ್ಮ ಜಾತಿಯ ಅನಿಸಿಕೆಗಳಿಂದ ಹೊರಗೆ ಬಾ. ಎಷ್ಟು ಸುಂದರವಾಗಿರುವ 30 ವರ್ಷದ ಹುಡುಗಿಯರೂ ಮಕ್ಕಳನ್ನು ಹೆತ್ತು ರಕ್ತಹೀನತೆಗೆ ಬಲಿಯಾಗುತ್ತಾರೆ ಎಂಬುದನ್ನು ನೀನು ಆಸ್ಪತ್ರೆಯಲ್ಲಿ ನೋಡಿಲ್ಲವೇ?”
ಆದರೆ ರಜನಿ ಇದಕ್ಕೆ ಒಪ್ಪಲಿಲ್ಲ. ಅವಳು ತನ್ನ ಅತ್ತೆಗೂ ಎಲ್ಲಾ ವಿಷಯ ಹೇಳಿದಳು. ತಾಯಿ ತನ್ನ ಮಗನ ಮನವೊಲಿಸಲು ಬಹಳ ಪ್ರಯತ್ನಪಟ್ಟರು. ಆದರೆ ಮಗ ಮಾತ್ರ ಸುಮ್ಮನಾಗಲಿಲ್ಲ. ಒಂದು ದಿನ ಸುಂದರ್, ರಜನಿಯನ್ನು ಇದ್ದಕ್ಕಿದ್ದಂತೆ ಲಕ್ನೋ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ.
ರಜನಿಗೆ ದುಃಖ ತಡೆಯಲಾಗಲಿಲ್ಲ. ಅವಳಿಗೆ ಈ ಕ್ರೌರ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ದುಃಖದಲ್ಲೇ ಅವಳು ಹಾಸಿಗೆ ಹಿಡಿದಳು. ಇದರಿಂದ ಚೇತರಿಸಿಕೊಳ್ಳಲು ಅವಳಿಗೆ ತಿಂಗಳುಗಳೇ ಬೇಕಾದವು.
ಕಾಲ ಎಲ್ಲ ಗಾಯಗಳನ್ನೂ ಗುಣಪಡಿಸುತ್ತದೆ. ರಜನಿಯೂ ಸಹ ಹಿಂದಿನದನ್ನೆಲ್ಲಾ ಮರೆತು ತನ್ನ ಪತಿಯೊಂದಿಗೆ ಸಹಕರಿಸಲು ಪ್ರಾರಂಭಿಸಿದಳು. ಆದರೆ ಅವಳಲ್ಲಿ ಮೊದಲಿನ ಉತ್ಸಾಹ, ಸಂತೋಷ ಮತ್ತು ಸೌಂದರ್ಯ ಇರಲಿಲ್ಲ. ಏನತ್ಮಧ್ಯೆ ಸುಂದರ್ ಕೂಡ ಸರ್ಕಾರಿ ಆಸ್ಪತ್ರೆಯ ತನ್ನ ಕೆಲಸವನ್ನು ಬಿಟ್ಟು ತನ್ನದೇ ಆದ ಖಾಸಗಿ ನರ್ಸಿಂಗ್ ಹೋಂ ತೆರೆದ.
ಅವನ ನರ್ಸಿಂಗ್ ಹೋಂ ಶೀಘ್ರದಲ್ಲೇ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಏಕೆಂದರೆ ಅವನ ನಿಜವಾದ ಕೆಲಸ ಅನಗತ್ಯ ಪ್ರೀತಿಯ ಕತ್ತು ಹಿಸುಕುವುದು. ಅವನು ಅನೇಕ ನರ್ಸ್ ಗಳನ್ನು ಮತ್ತು ಒಬ್ಬ ಮಹಿಳಾ ವೈದ್ಯರನ್ನು ತನ್ನ ಸ್ಥಳದಲ್ಲಿ ಇರಿಸಿಕೊಂಡಿದ್ದ.
ಸುಂದರ್ ತನ್ನ ಮಾಲಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದ. ನರ್ಸಿಂಗ್ ಹೋಮ್ ನ ತೋಟದಲ್ಲಿ ಒಣಗಿದ ಅಥವಾ ಬಾಡಿದ ಹೂಗಳು ಇರಬಾರದು. ಅವನು ಯಾವಾಗಲೂ ತಾಜಾ ಹಾಗೂ ಅರಳಿರುವ ಹೂಗಳನ್ನೇ ಇಷ್ಟಪಡುತ್ತಿದ್ದವು. ಹೂಗಳು ಯಾವುದೇ ಇರಲಿ ಮಲ್ಲಿಗೆ, ಗುಲಾಬಿ, ಚೆಂಡುಹೂವು ಯಾವುದೇ ಆಗಿರಲಿ. ಅವು ತಾಜಾವಾಗಿರಬೇಕಷ್ಟೆ.
ಅವರ ಸ್ವಂತ ನರ್ಸಿಂಗ್ ಹೋಂನಲ್ಲೂ ಇದೇ ಪರಿಸ್ಥಿತಿ ಇತ್ತು. ಆತನ ಇಚ್ಛೆಗೆ ಮಣಿಯದ ಯಾವುದೇ ನರ್ಸ್ ಅಥವಾ ವೈದ್ಯರು ಆತನಿಗೆ ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ಆತ ಯಾವಾಗಲೂ ತಾಜಾ ಹೂಗಳಿಗಾಗಿ ಹುಡುಕುತ್ತಿದ್ದ. ನಿರುದ್ಯೋಗದಿಂದಾಗಿ ಅವನಿಗೆ ಒಂದರ ನಂತರ ಒಂದರಂತೆ ಅಪರೂಪದ ಪರಿಮಳಯುಕ್ತ ಹೂಗಳನ್ನೂ ಪಡೆಯುತ್ತಿದ್ದವು.
ಅವನು ರಜನಿಯನ್ನು ಬಹುತೇಕ ಮರೆತೇಬಿಟ್ಟಿದ್ದ. ಪುರುಷತ್ವ ಮತ್ತು ಸಂಪತ್ತಿನ ಅಮಲಿನಲ್ಲಿದ್ದ ಅವನಿಗೆ ರಜನಿ ಬಾಡಿದ ಹೂವಿನಂತೆ ಕಾಣುತ್ತಿದ್ದಳು. ಅವಳೊಂದು ಶಾಶ್ವತ ಬಂಧವಾಗಿ, ಅವನ ಕುತ್ತಿಗೆಯ ಸುತ್ತ ಬಲವಾದ ಸರಪಳಿಯಾಗಿ ಮಾರ್ಪಟ್ಟಿದ್ದರಿಂದ ಅದನ್ನು ಕಿತ್ತು ಎಸೆಯಲು ಅವನಿಗೆ ಸಾಧ್ಯವಾಗಲಿಲ್ಲ.
ಆದರೆ ಶೀಘ್ರದಲ್ಲೇ ಈ ಬಂಧದಿಂದ ಮುಕ್ತಿ ಪಡೆಯಲು ಅವನೊಂದು ನೆಪ ಕಂಡುಕೊಂಡ. ಅವರ ಮದುವೆಯಾಗಿ ಐದು ವರ್ಷಗಳು ಕಳೆದಿದ್ದ. ರಜನಿ ಸುಮಾರು ನಾಲ್ಕು ತಿಂಗಳಿನಿಂದ ತನ್ನ ಹೆತ್ತವರ ಮನೆಯಲ್ಲಿದ್ದಳು. ಸುಂದರ್ ಪದೇ ಪದೇ ವಿನಂತಿಸಿದರೂ ಅವಳು ಹಿಂದಿರುಗಿ ಬರಲು ಒಪ್ಪುತ್ತಿರಲಿಲ್ಲ. ಅವನು ಅವಳನ್ನು ತಾನೇ ಹೋಗಿ ಕರೆತರಲು ಬಯಸಿದ. ಆದರೆ, ಅವನಿಗೆ ಸಮಯ ಸಿಗುತ್ತಿರಲಿಲ್ಲ.
ಅವನು ಅವಳನ್ನು ಕರೆತರಲು ಕೆಲಸದವರನ್ನು ಕಳುಹಿಸಿದಾಗ, ರಜನಿ ತಾನು ಈಗ ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಳು. ಈಗ ಅವನ ಅನುಮಾನ ನಂಬಿಕೆಯಾಗಿ ಬದಲಾಗಲು ಪ್ರಾರಂಭವಾಯಿತು. ಅವನು ಕರೆ ಮಾಡಿ ತಾನು ತೀವ್ರ ಅಸ್ವಸ್ಥನಾಗಿದ್ದೇನೆ ಎಂದು ಹೇಳಿದ. ಇದನ್ನು ಕೇಳಿದ ರಜನಿ ಭಯಪಟ್ಟುಕೊಂಡು ಊರಿನಿಂದ ಧಾವಿಸಿ ಬಂದಳು.
ರಜನಿ ಬಂದು ನೋಡಿದಾಗ, ಸುಂದರ್ ಸಂಪೂರ್ಣವಾಗಿ ಆರೋಗ್ಯವಾಗಿದ್ದ. ರಜನಿಯನ್ನು ನೋಡಿದ ಸುಂದರ್ ಗೆ ಬಹಳ ಕೋಪಬಂತು. ಏಕೆಂದರೆ ರಜನಿ ಮತ್ತೆ ತಾಯಿಯಾಗಲಿದ್ದಳು. ಅವಳೀಗ ನಾಲ್ಕು ತಿಂಗಳ ಗರ್ಭಿಣಿ ಎಂದು ಅರ್ಥ ಮಾಡಿಕೊಳ್ಳಲು ಅವನಿಗೆ ಬಹಳ ಸಮಯ ಬೇಕಾಗಲಿಲ್ಲ. ಈ ಬಾರಿ ಅವನು ರಜನಿಯ ಬಳಿ ಏನನ್ನೂ ಕೇಳಲಿಲ್ಲ. ಅವಳು ರಾತ್ರಿ ಮಲಗಿದಾಗ, ಅವಳಿಗೆ ತಿಳಿಯದಂತೆ ಪ್ರಜ್ಞೆ ತಪ್ಪಿಸಿ, ಎಲ್ಲಾ ಕೆಲಸಗಳನ್ನು ತೃಪ್ತಿಯಿಂದ ಮುಗಿಸಿ, ಶಾಂತವಾಗಿ ಮಲಗಿದ.
ಬೆಳಗ್ಗೆ ರಜನಿ ಕಣ್ಣು ತೆರೆದಾಗ, ಅವಳ ಗಂಟಲು ತುಂಬಾ ಒಣಗಿತ್ತು. ಇಡೀ ದೇಹದಲ್ಲಿ ಜೀವವೇ ಇಲ್ಲದಂತಾಗಿತ್ತು. ತಲೆ ಎತ್ತಲು ಪ್ರಯತ್ನಿಸಿದಾಗ, ಅವಳ ತಲೆಯೇ ಭಾರವಾದಂತಾಗಿತ್ತು. ಅವಳು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳು ಮೊದಲು, ಯಾರೋ ಅವಳ ಬಾಯಿಗೆ ಬಿಸಿಯಾದದ್ದನ್ನು ಇಟ್ಟರು. ಅವಳು ಕಷ್ಟಪಟ್ಟು ನುಂಗಿ ಮತ್ತೆ ಕಣ್ಣು ತೆರೆಯಲು ಪ್ರಯತ್ನಿಸಿದಳು. ಆದರೆ ಅದು ಅಸ್ಪಷ್ಟವಾಗಿತ್ತು. ಅವಳಿಗೆ ಏನೂ ಅರ್ಥವಾಗಲಿಲ್ಲ. ಈ ಸ್ಥಿತಿಯಲ್ಲಿ ಅವಳು ಎಷ್ಟು ಹೊತ್ತು ಮಲಗಿದ್ದಳೆಂದು ಅವಳಿಗೆ ತಿಳಿದಿರಲಿಲ್ಲ. ಇಂಜೆಕ್ಷನ್ ನೀಡಿ ಮತ್ತೆ ಅವಳ ಬಾಯಿಗೆ ಬಿಸಿಯಾದದ್ದನ್ನು ಹಾಕಿದ. ಈ ಬಾರಿ ಬಿಸಿಯಾದದ್ದು ಹಾಲು ಎಂದು ಅವಳು ಅರಿತುಕೊಂಡಳು. ಧೈರ್ಯ ತಂದುಕೊಂಡ ಅವಳು, ನಿಧಾನವಾಗಿ ಕಣ್ಣು ತೆರೆದಳು. ನರ್ಸ್ ಮತ್ತು ತನ್ನ ಗಂಡ ಹತ್ತಿರದಲ್ಲಿ ನಿಂತಿರುವುದು ಅವಳಿಗೆ ಕಾಣಿಸಿತು.
ರಜನಿ ನಡುಗಿದಳು. ಅವಳ ಕೈ ಅನಾಯಾಸವಾಗಿ ಹೊಟ್ಟೆಯ ಮೇಲೆ ಹೋಯಿತು. ಅವಳಿಗೆ ತೀವ್ರವಾಗಿ ನೋವಾಗುತ್ತಿತ್ತು, ಶಕ್ತಿಮೀರಿ “ಇಲ್ಲ…..” ಎಂದು ಕಿರುಚಿದಳು. ನಂತರ ಮತ್ತೆ ಮೂರ್ಛೆ ಹೋದಳು.
ಸುಂದರ್ ಆಘಾತಕ್ಕೊಳಗಾದ. ನಂತರದ ಎಲ್ಲಾ ಘಟನೆಗಳು ಬಿರುಗಾಳಿಯಂತೆ ನಡೆದ. ರಜನಿ ಮತ್ತೆ ಮತ್ತೆ ಪ್ರಜ್ಞೆ ತಪ್ಪುವುದು, ಪ್ರಜ್ಞೆ ಬಂದಾಗ ಕಿರುಚುವುದು, ಮತ್ತೆ ಮತ್ತೆ ಭಯದಿಂದ ಮೂರ್ಛೆ ಹೋಗುವುದು ನಡೆಯುತ್ತಲೇ ಇತ್ತು. ಇದರಿಂದ ಸುಂದರ್ ಚಿಂತೆಗೀಡಾದ. ರಜನಿ ಕೇವಲ ಅಸ್ಥಿಪಂಜರವಾಗಿ ಮಾರ್ಪಟ್ಟಿದ್ದಳು. ಸುಂದರ್ ರಜನಿಯ ಪೋಷಕರು ಮತ್ತು ಸಹೋದರನಿಗೆ ಕರೆ ಮಾಡುವಂತೆ ಒತ್ತಾಯಿಸಲಾಯಿತು. ವೈದ್ಯಕೀಯ ಕಾಲೇಜಿನ ವೈದ್ಯರು ರಜನಿ ತೀವ್ರ ಮಾನಸಿಕ ಆಘಾತ ಅನುಭವಿಸುತ್ತಿದ್ದಾಳೆ ಎಂದು ಹೇಳಿದರು.
ಪರಿಣಾಮ ಇಷ್ಟೊಂದು ಭೀಕರವಾಗಿರುತ್ತದೆ ಎಂದು ಸುಂದರ್ ಊಹಿಸಿರಲಿಲ್ಲ. ರಜನಿ ಆರು ತಿಂಗಳಲ್ಲಿ ಬಹಳ ಕಷ್ಟಪಟ್ಟು ಚೇತರಿಸಿಕೊಂಡಳು. ಆದರೆ ಈಗ ಅವಳು ಸುಂದರ್ ಜೊತೆ ಜೀವನ ನಡೆಸಲು ನಿರಾಕರಿಸಿ, ತನ್ನ ಪೋಷಕರ ಜೊತೆ ಹೊರಟು ಹೋದಳು. ಕೆಲವು ದಿನಗಳ ನಂತರ ಸುಂದರ್ ನ್ಯಾಯಾಲಯದಿಂದ ರಜನಿ ವಿಚ್ಛೇದನ ಬಯಸುತ್ತಿರುವ ಪತ್ರವನ್ನು ಪಡೆದ. ಎರಡೂ ಕಡೆಯಿಂದ ಇದಕ್ಕೆ ಆಸಕ್ತರಾಗಿದ್ದ ಕಾರಣ ವಿಚ್ಛೇದನ ಬಹಳ ಬೇಗ ದೊರೆಯಿತು.
ರಜನಿಯನ್ನು ದೂರ ಮಾಡಿಕೊಂಡ ಸುಂದರ್ ನೆಮ್ಮದಿಯ ನಿಟ್ಟುಸಿರುಬಿಟ್ಟ. ಒಣಗಿದ್ದ ಹೂವನ್ನು ಕಿತ್ತು ಹಾಕಲು ಅವನು ಈಗಾಗಲೇ ಬಯಸಿದ್ದ. ಈಗ ಅವನು ತನ್ನ ಇಚ್ಛೆಯಂತೆ ಬದುಕಲು ಪ್ರಾರಂಭಿಸಿದ್ದ. ಅವನ ತಾಯಿ ಈಗಾಗಲೇ ತೀರಿಹೋಗಿದ್ದರು. ಈಗ ಅವನ ಹೆಂಡತಿಯೂ ಹೋದ ನಂತರ, ಅವನಿಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಪ್ರತಿದಿನ ಹೊಸ ಅಭಿರುಚಿ, ಹವ್ಯಾಸಗಳು.
“ಒಂಟಿ ಜೀವನ ಎಷ್ಟು ಆಹ್ಲಾದಕರ. ನೀವು ಯಾವಾಗ ಬೇಕಾದರೂ ತಿನ್ನಬಹುದು, ಯಾವಾಗ ಬೇಕಾದರೂ ಮಲಗಬಹುದು, ನಿಮ್ಮನ್ನು ತಡೆಯಲು ಯಾರೂ ಇಲ್ಲ,” ಎಂದು ಅವನು ಹೆಮ್ಮೆಯಿಂದ ಹೇಳುತ್ತಿದ್ದ. ಯಾರಾದರೂ ಅವನನ್ನು ಮರು ಮದುವೆಯಾಗುವಂತೆ ಹೇಳಿದಾಗೆಲ್ಲಾ ಅವರ ಬಗ್ಗೆ ಸಿಡಿಮಿಡಿಗೊಳ್ಳುತ್ತಿದ್ದ.
“ಅಯ್ಯೋ, ಅದನ್ನು ಬಿಡಿ. ಮಾರುಕಟ್ಟೆಯಲ್ಲಿ ರುಚಿಕರಾದ, ನಾನಾ ಭಕ್ಷ್ಯಗಳು ಸುಲಭವಾಗಿ ಲಭ್ಯವಾಗುವಾಗ, ಮನೆಯಲ್ಲಿ ಹೆಂಡತಿ ಎಂಬ ಒಣಗಿದ ರೊಟ್ಟಿಯನ್ನು ಸವಿಯುವುದು ಮೂರ್ಖತನವಲ್ಲದೆ ಮತ್ತಿನ್ನೇನು…..?” ಎಂದು ಉಡಾಫೆಯಿಂದ ಹೇಳುತ್ತಿದ್ದ.
ಜನ ಹೇಳಲು ಸಾಧ್ಯವಾಗುವಷ್ಟು ದಿನ ಅವನಿಗೆ ಸಲಹೆ ನೀಡಿದರು. ನಂತರ ನಿಧಾನವಾಗಿ ಎಲ್ಲರೂ ಮೌನವಾದರು. ಹೀಗೆಯೇ 15 ವರ್ಷಗಳು ಉರುಳಿದವು.
ಸುಂದರ್ ಗೂ ಒಂದೇ ಸ್ಥಳದಲ್ಲಿ ವಾಸಿಸುವುದು ಬೇಸರ ತಂದಿತ್ತು. ಈಗ ಅವನ ಅಭ್ಯಾಸ ಮೊದಲಿನಂತಿರಲಿಲ್ಲ. ಏಕೆಂದರೆ ಅವನು ವೈದ್ಯನಾಗಿ ಸಾಕಷ್ಟು ಖ್ಯಾತನಾಗಿದ್ದ. ಆದ್ದರಿಂದ ಬೇಸತ್ತು ಬೆಂಗಳೂರಿನ ನರ್ಸಿಂಗ್ ಹೋಂಗೆ ಸೇರಿ, ಸಮೀಪದಲ್ಲೇ ಒಂದು ಮನೆಯನ್ನೂ ಮಾಡಿದ.
ಅವನು ಅಲ್ಲಿಗೆ ಬಂದ ಎರಡನೇ ದಿನ, ತನ್ನ ಕೋಣೆಯಲ್ಲಿ ನಿಂತು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ ಎದುರು ಮನೆಯ ಬಾಲ್ಕನಿಯತ್ತ ಅವನ ದೃಷ್ಟಿಹರಿಯಿತು ಅಲ್ಲಿನ ದೃಶ್ಯ ನೋಡಿ ಆಶ್ಚರ್ಯಚಕಿತನಾದ. ರಜನಿ ಗುಲಾಬಿ ಬಣ್ಣದ ಸೀರೆಯುಟ್ಟು ತನ್ನ ಕೂದಲನ್ನು ಒಣಗಿಸುತ್ತಾ ನಿಂತಿದ್ದಳು. ಈಗ ಅವಳು ಮೊದಲಿಗಿಂದ ದಷ್ಟಪುಷ್ಟವಾಗಿ, ಲಕ್ಷಣವಾಗಿ ಕಾಣುತ್ತಿದ್ದಳು. ಅವಳ ಮುಖದ ಹೊಳಪು ಹಾಗೆಯೇ ಇತ್ತು. ಸುಂದರ್ ಅವಳನ್ನು ನೋಡುತ್ತಲೇ ನಿಂತ.
ಅವನು ಅವಳನ್ನೇ ನೋಡುತ್ತಾ ಏನೋ ಯೋಚಿಸುತ್ತಿದ್ದಾಗ, ಎರಡು ಮುದ್ದಾದ ಮಕ್ಕಳು ಓಡಿ ಬಂದು ರಜನಿಯನ್ನು ಅಪ್ಪಿಕೊಂಡ. ಸುಂದರ್ ಮನಸ್ಸು ಸ್ವಲ್ಪ ಕಸಿವಿಸಿಗೊಂಡಿತು. ಮುದ್ದಾದ ಗೊಂಬೆಯಂತಿದ್ದ ಹುಡುಗಿ, ಪುಟಾಣಿ ರಜನಿಯಂತೆ ಕಂಡಳು. ಹುಡುಗ… ಅವನ ಮುಖ ಆ ಹುಡುಗಿಯ ಮುಖಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಹುಡುಗಿ ತುಂಬಾ ಸುಂದರವಾಗಿದ್ದಳು. ಆದರೆ ಹುಡುಗ ಗೋಧಿ ಮೈಬಣ್ಣ ಹೊಂದಿದ್ದ. ಸುಂದರ್ ಗೆ ಆ ಮಕ್ಕಳೊಂದಿಗೆ ಆಟವಾಡಬೇಕು ಎನಿಸಿತು.
ಅವನು ಅವರನ್ನೇ ನೋಡುತ್ತಿದ್ದ. ಅಷ್ಟರೊಳಗೆ ಒಳಗಿನಿಂದ ಒಬ್ಬ ಎತ್ತರದ ನಿಲುವು, ದಷ್ಟಪುಷ್ಟ ಮೈಕಟ್ಟಿನ ಸುಂದರವಾದ ವ್ಯಕ್ತಿಯೊಬ್ಬ ಸ್ಟೆತಾಸ್ಕೋಪ್ ಹಿಡಿದು ಹೊರಬಂದ.
“ಸರಿ, ನಾನು ಹೊರಡುತ್ತೇನೆ….” ಎಂದು ಮುಗುಳ್ನಗುತ್ತಾ ರಜನಿಯತ್ತ ನೋಡಿದ.
ಎರಡು ಮಕ್ಕಳೂ ತಮ್ಮ ತಂದೆಯನ್ನು ಅಪ್ಪಿಕೊಂಡು, “ಅಪ್ಪಾ…. ಸಂಜೆ ಬೇಗ ಮನೆಗೆ ಬನ್ನಿ. ನಾವು ಸಂಜೆ ಕಬ್ಬನ್ ಪಾರ್ಕ್ ಗೆ ಹೋಗೋಣ,” ಎಂದ.
“ಸರಿ, ನೀವೆಲ್ಲರೂ ರೆಡಿಯಾಗಿರಿ. ಹೋ ಮೇಡಂ…. ನೀವು ಚೆನ್ನಾಗಿ ಮೇಕಪ್ ಮಾಡಿಕೊಂಡು, ನಿನ್ನೆ ನಾನು ತಂದ ಸೀರೆ ಉಟ್ಟುಕೊಳ್ಳಿ,” ಎಂದು ರಜನಿಗೆ ಹೇಳಿದ ಆ ವ್ಯಕ್ತಿ.
“ಸರಿ ಡಿಯರ್, ನಾನು ಖಂಡಿತಾ ಅದೇ ಸೀರೆಯನ್ನು ಉಟ್ಟುಕೊಳ್ತೀನಿ,” ಎಂದು ರಜನಿ ನಗುತ್ತಾ ಹೇಳಿದಳು.
ಸುಂದರ್ ನ ಹೃದಯದಲ್ಲಿ ಗರಗಸ ಹಾದುಹೋದಂತೆ ಭಾಸವಾಯಿತು. `ರಜನಿ ತುಂಬಾ ಖುಷಿಯಾಗಿದ್ದಾಳೆ. ಅವಳ ಮಕ್ಕಳು ತುಂಬಾ ಮುದ್ದಾಗಿದ್ದಾರೆ ಹಾಗೂ ಆ ವ್ಯಕ್ತಿ ಸಹ ಸಂತೋಷವಾಗಿ ನಗುನಗುತ್ತಿದ್ದಾನೆ. ಆದರೆ ನಾನು ಎಂದಿಗೂ ಇಷ್ಟು ಮುಕ್ತನಾಗಿ ನಗಲು ಸಾಧ್ಯವಾಗಿರಲಿಲ್ಲ,’ ಎಂದುಕೊಂಡ ಸುಂದರ್ ಕೋಣೆಗೆ ಹೋಗಿ ಹಾಸಿಗೆ ಮೇಲೆ ಬಿದ್ದುಕೊಂಡ. ಅವನಿಗೆ ಬೇಗ ಬಾ ಎಂದು ಹೇಳಲು ಯಾರೂ ಇರಲಿಲ್ಲ. ಅವನು ಯಾರೊಂದಿಗೆ ನಡೆಯಬೇಕು, ಯಾರೊಂದಿಗೆ ಮಾತನಾಡಬೇಕು? ಅವನು ನರ್ಸಿಂಗ್ ಹೋಂಗೆ ಹೊರಡಲು ಎದ್ದ. ಡ್ರೆಸ್ಸಿಂಗ್ ಟೇಬಲ್ ಮುಂದೆ ನಿಂತು ತನ್ನ ಕೂದಲನ್ನು ಬಾಚಿಕೊಳ್ಳುವಾಗ ಕನ್ನಡಿಯಲ್ಲಿ ತನ್ನನ್ನೊಮ್ಮೆ ನೋಡಿದ, ಅವನ ಕೂದಲು ಅರ್ಧಕ್ಕಿಂತ ಹೆಚ್ಚು ಬೂದು ಬಣ್ಣಕ್ಕೆ ತಿರುಗಿತ್ತು, ಅವನ ಮುಖದಲ್ಲಿ ಸುಕ್ಕುಗಳು ಕಂಡುಬಂದವು. ಅವನ ಕಣ್ಣುಗಳ ಕೆಳಗಿನ ಭಾಗ ಊದಿಕೊಂಡು ಕಪ್ಪಾಗಿತ್ತು. ಅವನೀಗ ಕೇವಲ 4-5 ವರ್ಷವಾಗಿತ್ತು. ಆದರೆ ಅವನು 60 ವರ್ಷಕ್ಕಿಂತ ಕಡಿಮೆ ಇಲ್ಲದವನಂತೆ ಕಾಣುತ್ತಿದ್ದ. ಆದರೆ ರಜನಿಗೆ 35 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರೂ ಇನ್ನೂ 26-27ರ ತರುಣಿಯಂತೆ ಕಾಣುತ್ತಿದ್ದಳು. ಮಕ್ಕಳನ್ನು ಹೆತ್ತ ನಂತರ ಮಹಿಳೆಯರು ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ ಎಂದು ಅವನು ಭಾವಿಸಿದ್ದ. ಆದರೆ ರಜನಿಯ ಬದುಕಿನಲ್ಲಿ ಬೇರೆ ರೀತಿಯೇ ಆಗಿತ್ತು. ವಯಸ್ಸನ್ನು ಹೇಗೆ ತಾನೇ ನಿಲ್ಲಿಸಬಹುದು? ಮುಂದೆ ಸಾಗುವ ಬದಲು, ಅವನ ಮುಖ ಯಾವಾಗಲೂ ಉದ್ವಿಗ್ನವಾಗಿ ಕಾಣುತ್ತದೆ.
ಸುಂದರ್ ಪ್ರತಿದಿನ ರಜನಿ ಮತ್ತು ಅವಳ ಕುಟುಂಬವನ್ನು ರಹಸ್ಯವಾಗಿ ಗಮನಿಸತೊಡಗಿದ. ಅವನಿಗೆ ದಿನೇ ದಿನೇ ಚಡಪಡಿಕೆ ಹೆಚ್ಚ ತೊಡಗಿತು.
ಅಂದು ಕಿಟಕಿಯ ಬಳಿ ಹೋಗಿ ನಿಂತ. ರಜನಿ ಮತ್ತು ಪತಿ, ಮಕ್ಕಳಿಬ್ಬರೂ ಪಟಾಕಿ ಸಿಡಿಸುತ್ತಾ ಹೂಕುಂಡಗಳನ್ನು ಉರಿಸುತ್ತಿದ್ದರು. ಅವರ ಮನೆ ಮೇಣದ ಬತ್ತಿಯ ಬೆಳಕಿನಿಂದ ಕಂಗೊಳಿಸುತ್ತಿತ್ತು. ನೆರೆಹೊರೆ ಮಾತ್ರವಲ್ಲ, ಇಡೀ ನಗರವೇ ಬೆಳಕಿನಿಂದ ತುಂಬಿತ್ತು. ನೆಲದ ಮೇಲೆ ತಿರುಗುವ ಭೂಚಕ್ರಗಳು ಆಕಾಶದಲ್ಲಿ ಹರಡುತ್ತಿದ್ದ ವರ್ಣರಂಜಿತ ನಕ್ಷತ್ರಗಳು ಇದ್ದವು. ಎಲ್ಲಾದರೂ ಶೂನ್ಯತೆ ಅಥವಾ ಕತ್ತಲೆ ಇತ್ತು ಎಂದರೆ, ಅದು ಸುಂದರ್ ಮನೆಯಲ್ಲಿ ಮಾತ್ರ. ರಜನಿ ಮತ್ತು ಅವಳ ಪತಿ, ಮಕ್ಕಳು ಒಳಗೆ ಹೋಗಿದ್ದರು. ಅಚಾನಕ್ಕಾಗಿ ನಗುವಿನ ಅಲೆಯೊಂದು ಕೇಳಿ ಬಂದಿತು. ಸುಂದರ್ ಗಲಿಬಿಲಿಗೊಂಡು ನೋಡಿದ. ರಜನಿಯ ಪತಿ ತನ್ನಿಬ್ಬರು ಮಕ್ಕಳೊಂದಿಗೆ ಸುಂದರ್ ನ ಫ್ಲಾಟ್ ಬಾಲ್ಕನಿ ಮತ್ತು ಮೆಟ್ಟಿಲುಗಳ ಮೇಲೆ ಮೇಣದ ಬತ್ತಿ ಹಚ್ಚುತ್ತಿದ್ದ.
ಸುಂದರ್ ಹೊರಗೆ ಬಂದಾಗ, “ನನ್ನ ಹೆಸರು ಡಾಕ್ಟರ್ ರಾಕೇಶ್. ನಿಮ್ಮ ಮನೆಯಲ್ಲಿ ಕತ್ತಲೆ ಕಂಡಾಗ, ಬಹುಶಃ ನೀವು ಎಲ್ಲೋ ಹೋಗಿರಬಹುದು ಅಥವಾ ನೀವು ಅನಾರೋಗ್ಯದಿಂದ ಇರಬಹುದು ಎಂದು ಭಾವಿಸಿದೆ. ದೀಪಾವಳಿಯಂದು ನೆರೆಮನೆಯವರ ಮನೆಯಲ್ಲಿ ದೀಪ ಹಚ್ಚುವುದು ನಮ್ಮ ಪದ್ಧತಿ. ಹಾಗಾಗಿ ನಾವು ಬಂದಿದ್ದೇವೆ. ನೀವು ಆರೋಗ್ಯವಾಗಿದ್ದೀರಾ….?” ಎಂದು ಕೇಳಿದ ರಜನಿಯ ಪತಿ.
“ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ತಾವು ಬಂದಿದ್ದಕ್ಕೆ ತುಂಬಾ ಧನ್ಯವಾದಗಳು. ಒಳಗೆ ಬನ್ನಿ,” ಎಂದ. ಅವರು ಕೋಣೆ ಪ್ರವೇಶಿಸಿದಾಗ, ರಜನಿಯ ಮಗಳು ಜಿಗಿದು ಸ್ವಿಚ್ ಆನ್ ಮಾಡಿದಳು. ಅದು ಕೋಣೆಯನ್ನು ಬೆಳಕಿನಿಂದ ತುಂಬಿಸಿತು. “ನೀವು ಕತ್ತಲೆಯಲ್ಲಿ ಇರಲು ಇಷ್ಟಪಡುತ್ತೀರಾ….? ಈ ದಿನ ಮನೆಯಲ್ಲಿ ಕತ್ತಲೆ ಇರುವುದು ಒಳ್ಳೆಯದಲ್ಲ ಎಂದು ನನ್ನ ತಾಯಿ ಹೇಳುತ್ತಾರೆ,” ಎಂದು ನಗುತ್ತಾ ಹೇಳಿದಳು.
ಸುಂದರ್ ತನ್ನ ಮನದಲ್ಲಿ ಈ ಕತ್ತಲೆಯನ್ನು ತಾನೇ ತಂದುಕೊಂಡದ್ದು ಎಂದು ಹೇಗೆ ತಾನೇ ಹೇಳಬಲ್ಲ….? ತನ್ನ ಇಡೀ ಜೀವನ ಕತ್ತಲೆಯಿಂದ ಆವೃತ್ತವಾಗಿದೆ. ಇನ್ನು ಕೇವಲ ಒಂದು ದೀಪಾವಳಿಯಿಂದ ಏನು ತಾನೇ ಬದಲಾಗಲು ಸಾಧ್ಯ…..? ಅವನ ಮನದ ಯೋಚನೆಗಳಿಗೆ ಕೊನೆ ಮೊದಲಿರಲಿಲ್ಲ.





