ಭಾರತ ದೇಶದ ಕಾಫಿ ತವರೂರು ಕರ್ನಾಟಕ

ಭಾರತದಲ್ಲಿ ಕಾಫಿ ಎಂದರೆ ಮೊದಲು ನೆನಪಾಗುವ ರಾಜ್ಯ ಕರ್ನಾಟಕ. ಇಂದು ದೇಶದ ಒಟ್ಟು ಕಾಫಿ ಉತ್ಪಾದನೆಯ ಸುಮಾರು 65–70% ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಪ್ರದೇಶಗಳು ವಿಶ್ವದ ಅತ್ಯುತ್ತಮ ನೆರಳಿನ (Shade-grown) ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಹೆಸರುವಾಸಿಯಾಗಿವೆ. ಆದರೆ ಈ ಯಶಸ್ಸಿನ ಹಿಂದೆ ಸುಮಾರು 350 ವರ್ಷಗಳ ಇತಿಹಾಸಸಾಹಸ, ಬ್ರಿಟಿಷರ ಆಡಳಿತ ಸುಧಾರಣೆ, ವೈಜ್ಞಾನಿಕ ಕೃಷಿ ಮತ್ತು ಸಾವಿರಾರು ರೈತರ ಪರಿಶ್ರಮ ಅಡಗಿದ್ದು ಆ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ.


ಬಾಬಾಬುಡನ್ ತಂದ ಏಳು ಬೀಜಗಳು

ಭಾರತದಲ್ಲಿ ಕಾಫಿ ಬೆಳೆಯುವ ಇತಿಹಾಸ 17ನೇ ಶತಮಾನದಿಂದ ಆರಂಭವಾಗುತ್ತದೆ. ಸುಮಾರು 1670ರ ಅವಧಿಯಲ್ಲಿ, ಚಿಕ್ಕಮಗಳೂರಿನ ಸೂಫಿ ಸಂತ ಹಜರತ್ ದಾದಾ ಹಯಾತ್ ಮೀರ ಖಲಂದರ್, ಜನಪ್ರಿಯವಾಗಿ ಬಾಬಾಬುಡನ್ ಎಂದು ಕರೆಯಲ್ಪಡುವವರು, ಹಜ್ ಯಾತ್ರೆಗಾಗಿ ಯೆಮೆನ್‌ನ ಮೋಖಾ (Mocha) ನಗರಕ್ಕೆ ತೆರಳಿದ್ದರು. ಆ ಸಮಯದಲ್ಲಿ ಯೆಮೆನ್ ದೇಶವು ಕಾಫಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿತ್ತುಕಾಫಿ ಬೀಜಗಳನ್ನು ಬೇರೆ ದೇಶಗಳಿಗೆ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಆದರೂ ಬಾಬಾಬುಡನ್ ಅವರು ಏಳು ಕಾಫಿ ಬೀಜಗಳನ್ನು ತಮ್ಮ ಉಡುಪಿನೊಳಗೆ ಅಡಗಿಸಿಕೊಂಡು ಭಾರತಕ್ಕೆ ತಂದರು ಎಂಬುದು ಜನಪ್ರಿಯ ಐತಿಹಾಸಿಕ ನಂಬಿಕೆಯಾಗಿದ್ದು  ಅವರು ಹಾಗೆ ತಂದ ಆ ಬೀಜಗಳನ್ನು ಅಂದಿನ ದತ್ತಪೀಠ (ಬಾಬಾಬುಡನ್ ಗಿರಿ) ಬೆಟ್ಟಗಳಲ್ಲಿ ನೆಟ್ಟು ಅದು ಹೆಮ್ಮರವಾಗಿ ಭಾರತದಲ್ಲಿ ಕಾಫಿ ಕೃಷಿಯ ಆರಂಭ ಆಗಿದೆ ಎಂದೇ ಪರಿಗಣಿಸಲಾಗುತ್ತದೆ.  ಆದರೆ ಇದಕ್ಕೆ ಪುರಾವೆ ಎನ್ನುವಂತಹ ಯಾವುದೇ ಐತಿಹ್ಯವಾಗಲೀ ದಾಖಲೆ ಇಲ್ಲದಿದ್ದರೂ, ಜನರ ಮನಸ್ಸಿನಲ್ಲಿ ಇದೇ ಸತ್ಯ ಎಂಬುದನ್ನು ಹೇರಲಾಗಿರುವುದು ವಿಪರ್ಯಾಸ..


ಮನೆ ಹಿತ್ತಲಿನ ಬೆಳೆಯಿಂದ ವಾಣಿಜ್ಯ ಬೆಳೆವರೆಗೆ

ಸ್ಥಳೀಯ ರೈತರು, ತಮ್ಮ ಮನೆಗಳ ಹಿತ್ತಲಿನಲ್ಲಿ, ತೋಟಗಳ ಅಂಚಿನಲ್ಲಿ, ಕಾಡಿನ ನಡುವೆ, ಸಣ್ಣ ಪ್ರಮಾಣದಲ್ಲಿ ಕಾಫಿ ಗಿಡಗಳನ್ನು ಬೆಳೆಸಿ ತಮ್ಮ ಮನೆಗೆ ಬಳಸುತ್ತಿದ್ದದ್ದಲ್ಲದೇ ಹೆಚ್ಚಾಗಿ ಉಳಿದಿದ್ದನ್ನು ಮತ್ತೊಬ್ಬರಿಗೆ ಹಂಚುವ ಇಲ್ಲವೇ ಮತ್ತೊಂದು ಪದಾರ್ಥಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ದತಿ ರೂಡಿಯಲ್ಲಿತ್ತು. ಇನ್ನೂ ಹೆಚ್ಚಾದಲ್ಲಿ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದರೇ ಹೊರತು, ಕಾಫಿಗೆ ಎಂದೇ ಯಾವುದೇ ಸಂಘಟಿತ ಮಾರುಕಟ್ಟೆ ಅಥವಾ ರಫ್ತು ವ್ಯವಸ್ಥೆ ಇರಲಿಲ್ಲ.


ಕಾಫಿ ವ್ಯಾಪಾರದ ಮೇಲೆ ಪ್ಯಾರಿ ಕಂಪನಿಯ ಏಕಸ್ವಾಮ್ಯ

1823 ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್  ತಮ್ಮ ಸಂಸ್ಥಾನದಲ್ಲಿ ಬೆಳೆಯುವ ಕಾಫೀ ಬೆಳೆಗೆ ದೇಶವಿದೇಶಗಳಲ್ಲಿ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ  ಸಂಸ್ಥಾನದಾದ್ಯಂತ ಬೆಳೆಯುವ ಕಾಫಿಯ ಖರೀದಿ ಮತ್ತು ರಫ್ತಿನ ಸಂಪೂರ್ಣ ಏಕಸ್ವಾಮ್ಯದ ಹಕ್ಕನ್ನು ‘ಪ್ಯಾರಿ ಕಂಪನಿ’ಯ ಜೆ.ಎಚ್. ಜಾಲಿ ಎಂಬ ಬ್ರಿಟಿಷ್ ವ್ಯಾಪಾರಿಗೆ ನೀಡಿದ್ದರು. ಇದರಿಂದಾಗಿ, ಸಾಮಾನ್ಯ ಜನರಿಗೆ ಸ್ವತಂತ್ರವಾಗಿ ಕಾಫಿ ತೋಟಗಳನ್ನು ಆರಂಭಿಸಲು ಅಥವಾ ವಿಸ್ತರಿಸಲು ಯಾವುದೇ ಪ್ರೋತ್ಸಾಹ ಸಿಗುತ್ತಿರಲಿಲ್ಲ.


ಮೈಸೂರು ಸಂಸ್ಥಾನದಲ್ಲಿ ಕಾಫಿ ಕ್ರಾಂತಿಗೆ ಕಾರಣವಾದ ಆಡಳಿತ ಬದಲಾವಣೆ

1831ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ದಸರಾ ಸಮಯದಲ್ಲಿ ದುಂದು ವೆಚ್ಚ ಮಾಡಿದರು ಎಂಬ ಆರೋಪದಡಿಯಲ್ಲಿ   ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್, ಮೈಸೂರು ಸಂಸ್ಥಾನದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, 1834ರಲ್ಲಿ ಸರ್ ಮಾರ್ಕ್ ಕಬ್ಬನ್ ಮೈಸೂರು ರಾಜ್ಯದ ಮುಖ್ಯ ಕಮಿಷನರ್ ಆಗಿ ನೇಮಕಗೊಂಡರು.


ಮಾರ್ಕ್ ಕಬ್ಬನ್ ತಂದ ಐತಿಹಾಸಿಕ ಬದಲಾವಣೆ

ಮಾರ್ಕ್ ಕಬ್ಬನ್ ಅಧಿಕಾರ ವಹಿಸಿಕೊಂಡ ನಂತರ ಪ್ಯಾರಿ ಕಂಪನಿಯ ಪ್ಯಾರಿ ಕಂಪನಿಯ ಏಕಸ್ವಾಮ್ಯವನ್ನು ರದ್ದು ಮಾಡಿ, ಇಡೀ ವ್ಯವಸ್ಥೆಯನ್ನೇ ಬದಲಿಸಿದರು. ಕಾಫಿ ವ್ಯಾಪಾರವನ್ನು ಮುಕ್ತ ಮಾರುಕಟ್ಟೆಗೆ ತಂದರು. ಭೂಮಿಯ ವಿಸ್ತೀರ್ಣದ ಬದಲು ಉತ್ಪಾದನೆಯ ತೂಕದ ಆಧಾರದ ಮೇಲೆ “ಹಲಾತ್” ತೆರಿಗೆ ವ್ಯವಸ್ಥೆ ಜಾರಿಗೊಳಿಸಿದರು. ಸಣ್ಣ ರೈತರಿಗೆ ಅನುಕೂಲವಾಗುವಂತೆ ಸರಳ ತೆರಿಗೆ ನೀತಿಯನ್ನು ರೂಪಿಸಿದರು. ಈ ನಿರ್ಧಾರದಿಂದ ಮಲೆನಾಡಿನಲ್ಲಿ ಕಾಫಿ ಉದ್ಯಮಕ್ಕೆ ಹೊಸ ಜೀವ ದೊರಕಿತು.


ಮೊದಲ ಯುರೋಪಿಯನ್ ಕಾಫಿ ತೋಟಗಳು

ಕಬ್ಬನ್ ಅವರ ಸುಧಾರಣೆಯ ನಂತರ,

  • 1840ರಲ್ಲಿ ಥಾಮಸ್ ಕ್ಯಾನನ್ ಚಿಕ್ಕಮಗಳೂರಿನ ಮೈಲಿಮನೆಯಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಕಾಫಿ ತೋಟ ಆರಂಭಿಸಿದರು.
  • 1843ರಲ್ಲಿ ಫ್ರೆಡೆರಿಕ್ ಗ್ರೀನ್ ಸಕಲೇಶಪುರದಲ್ಲಿ ಕಾಫಿ ಕೃಷಿ ಆರಂಭಿಸಿದರು.

ಈ ಇಬ್ಬರ ಯಶಸ್ಸು ಯುರೋಪಿನ ಅನೇಕ ಯುವಕರನ್ನು ಭಾರತಕ್ಕೆ ಸೆಳೆಯಿತು. ಅವರಲ್ಲೊಬ್ಬನೇ ಸ್ಕಾಟ್ಲೆಂಡ್‌ನ ರಾಬರ್ಟ್ ಹೆನ್ರಿ ಎಲಿಯಟ್.


ಸ್ಕಾಟ್ಲೆಂಡ್‌ನಿಂದ ಸಕಲೇಶಪುರಕ್ಕೆ ಬಂದು, ಕರ್ನಾಟಕದ ಕಾಫಿ ಉದ್ಯಮದ ದಿಕ್ಕನ್ನೇ ಬದಲಿಸಿದ 18 ವರ್ಷದ ಸಾಹಸಿ ರಾಬರ್ಟ್ ಹೆನ್ರಿ ಎಲಿಯಟ್

1855ನೇ ಇಸವಿ. ಸ್ಕಾಟ್ಲೆಂಡ್‌ನ ಕೇವಲ 18 ವರ್ಷದ ಸಾಹಸಿ ಯುವಕ ರಾಬರ್ಟ್ ಹೆನ್ರಿ ಎಲಿಯಟ್ (Robert Henry Elliot) ತನ್ನ ಬದುಕಿನ ಅತ್ಯಂತ ದೊಡ್ಡ ನಿರ್ಧಾರವೊಂದನ್ನು ಕೈಗೊಂಡನು. ಯುರೋಪಿನ ಸುರಕ್ಷಿತ ಜೀವನವನ್ನು ತೊರೆದು, ಸುಮಾರು 21 ಸಾವಿರ ಕಿಲೋಮೀಟರ್ ದೂರದಲ್ಲಿದ್ದ ಭಾರತದ ಮಲೆನಾಡಿನಲ್ಲಿ ಕಾಫಿ ಕೃಷಿಯಲ್ಲಿ ಅದೃಷ್ಟ ಪರೀಕ್ಷಿಸಬೇಕು ಎಂಬ ಮಹತ್ವಾಕಾಂಕ್ಷೆಯ ಕನಸಿನೊಂದಿಗೆ ಹಡಗೇರಿದನು. ಆ ಕಾಲದಲ್ಲಿ ವಿಮಾನಗಳಿರಲಿಲ್ಲ, ಆಧುನಿಕ ಸಾರಿಗೆ ಸೌಲಭ್ಯಗಳಿರಲಿಲ್ಲ. ಸಮುದ್ರ ಮಾರ್ಗದ ಪ್ರಯಾಣವೇ ಏಕೈಕ ಆಯ್ಕೆಯಾಗಿತ್ತು. ಮೂರು-ನಾಲ್ಕು ತಿಂಗಳುಗಳ ಸುದೀರ್ಘ ಸಮುದ್ರಯಾನದ ಬಳಿಕ ಬಾಂಬೆ (ಇಂದಿನ ಮುಂಬೈ) ತಲುಪಿದ ಎಲಿಯಟ್ ಅಲ್ಲಿಂದ ಉಪ್ಪು ಸಾಗಿಸುತ್ತಿದ್ದ ಸಣ್ಣ ಹಡಗಿನಲ್ಲಿ ಮಂಗಳೂರಿಗೆ ಬಂದನು. ನಂತರ ಎತ್ತಿನಗಾಡಿ, ಕುದುರೆ ಮತ್ತು ಕಾಲ್ನಡಿಗೆಯ ಮೂಲಕ ಪಶ್ಚಿಮ ಘಟ್ಟಗಳ ದುರ್ಗಮ ಕಾಡುಗಳನ್ನು ದಾಟಿ ಕೊನೆಗೂ ಸಕಲೇಶಪುರದ ಬ್ರಿಟಿಷ್ ಪ್ಲ್ಯಾಂಟರ್ ಫ್ರೆಡೆರಿಕ್ ಗ್ರೀನ್ ಅವರ ಕಾಫಿ ತೋಟವನ್ನು ತಲುಪಿದನು.

ಅಲ್ಲಿಂದ ಆರಂಭವಾದ ಪಯಣ, ಮುಂದೆ ಕರ್ನಾಟಕದ ಕಾಫಿ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿ ಉಳಿಯಿತು.


ಒಂದು ವರ್ಷದ ತರಬೇತಿ… 19ನೇ ವಯಸ್ಸಿನಲ್ಲೇ ಸ್ವಂತ ಎಸ್ಟೇಟ್

1855ರಲ್ಲಿ ಸಕಲೇಶಪುರಕ್ಕೆ ಬಂದ ಎಲಿಯಟ್, ಫ್ರೆಡೆರಿಕ್ ಗ್ರೀನ್ ಅವರ ಬಳಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆದ ನಂತರ ಮಲೆನಾಡಿನ ಮಣ್ಣಿನ ಗುಣ, ಮಳೆ, ಹವಾಮಾನ, ಸ್ಥಳೀಯ ಕೃಷಿ ಪದ್ಧತಿ, ಕಾರ್ಮಿಕ ವ್ಯವಸ್ಥೆ  ಎಲ್ಲವನ್ನೂ ಅಧ್ಯಯನ ಮಾಡಿ ಕೇವಲ 19ನೇ ವಯಸ್ಸಿನಲ್ಲಿ1856ರಲ್ಲಿ, ಸಕಲೇಶಪುರ ತಾಲ್ಲೂಕಿನ ಹಾನ್ಬಾಳ್ ಸಮೀಪದ ಬಾರ್ಟ್‌ಚಿನ್‌ಹಳ್ಳದಲ್ಲಿ ತಮ್ಮದೇ ಆದ ಕಾಫಿ ತೋಟ ಆರಂಭಿಸುವ ಮೂಲಕ ಸಕಲೇಶಪುರ ಪ್ರದೇಶದ ಎರಡನೇ ಯುರೋಪಿಯನ್ ಕಾಫಿ ಪ್ಲ್ಯಾಂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ಕೇವಲ ಪ್ಲ್ಯಾಂಟರ್ ಅಲ್ಲ… ಕೃಷಿ ಸಂಶೋಧಕ

ಎಲಿಯಟ್ ಇತರೇ ಕಾಫೀ ತೋಟದ ಮಾಲಿಕರಂತೆ ಕೇವಲ ಸಾಮಾನ್ಯ ತೋಟದ ಮಾಲೀಕರಾಗದೇ. ಕಾಫಿ ಬೆಳೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾದಾಗ, ಆರಂಭದ ದಿನಗಳಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಅವುಗಳಲ್ಲಿ ಪ್ರಮುಖವಾಗಿ ಹೇಳೀ ಕೇಳಿ ಸಕಲೇಶಪುರ ದುರ್ಗಮ ಕಾಡಿನ ಪ್ರದೇಶವಾಗಿದ್ದು ಸರಿಯಾದ ರಸ್ತೆ ಇಲ್ಲದ ಪ್ರದೇಶವಾಗಿದ್ದರಿಂದ ಸಾರಿಗೆ ಸಮಸ್ಯೆಯಲ್ಲದೇ, ತೋಟಕ್ಕೆ ಆಗ್ಗಿದ್ದಾಗ್ಗೆ ಕಾಡು ಪ್ರಾಣಿಗಳ ಕಾಟವೂ ಹೆಚ್ಚಾಗಿತ್ತು. ಕಾಫೀ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇತ್ತು. ಇವೆಲ್ಲವನ್ನು ಮೀರಿ ತಮ್ಮ ತೋಟವನ್ನು ಲಾಭದಾಯಕ ಮಾದರಿಯನ್ನಾಗಿ ರೂಪಿಸಿದರು. ನಂತರ ತಮ್ಮ ಕಾಫಿ ತೋಟಗಳನ್ನು ಮಂಜರಾಬಾದ್‌ನಿಂದ ಬಾಬಾಬುಡನ್ ಗಿರಿಯವರೆಗೆ ವಿಸ್ತರಿಸಿದರು.

ಇವರ ವ್ಯವಸ್ಥಿತ ಬೇಸಾಯ ಕ್ರಮದಿಂದಾಗಿ ಇವರ ತೋಟದಲ್ಲಿ ಬೆಳೆದ ಕಾಫಿ ಅಂದಿನ ಕೇವಲ ಮೈಸೂರು ಪ್ರಾಂತ್ಯದಲ್ಲಿನ ಅತ್ಯುನ್ನತ ಗುಣಮಟ್ಟದ ಕಾಫಿ ಎಂದು ಹೆಸರುವಾಸಿಯಾಗಿದ್ದಲ್ಲದೇ, ಲಂಡನ್ ಮಾರುಕಟ್ಟೆಯಲ್ಲಿಯೂ “ಮೈಸೂರು ಕಾಫಿ” (Mysore Coffee) ಎಂಬ ವಿಶಿಷ್ಟ ಬ್ರಾಂಡ್ ನಿಂದ ಪ್ರಸಿದ್ಧಿಯನ್ನು ಪಡೆಯಿತು.

 


ನೆರಳಿನ ಕಾಫಿ ಪದ್ಧತಿಯ ಹರಿಕಾರ

ಆ ಕಾಲದಲ್ಲಿ ಅನೇಕ ಯುರೋಪಿಯನ್ ಪ್ಲ್ಯಾಂಟರ್‌ಗಳು ಕಾಫಿ ಬೆಳೆಯಲು ಸಾವಿರಾರು ಮರಗಳನ್ನು ಕಡಿದು ಕಾಡುಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದರು. ಆದರೆ ಎಲಿಯಟ್ ಈ ಪದ್ಧತಿಯನ್ನು ವಿರೋಧಿಸಿದರು. ಅವರು, ದೊಡ್ಡ ಮರಗಳನ್ನು ಹಾಗೆಯೇ ಉಳಿಸಿಕೊಂಡು, ಅವುಗಳ ನೈಸರ್ಗಿಕ ನೆರಳಿನಲ್ಲೇ ಕಾಫಿ ಗಿಡಗಳನ್ನು ಬೆಳೆಯುವ ಪದ್ಧತಿಯನ್ನು ಜಾರಿಗೆ ತಂದರು. ಈ ಪದ್ಧತಿಯಿಂದ, ಮಣ್ಣಿನ ಸವೆತ ಕಡಿಮೆಯಾಯಿತು. ಕೀಟಬಾಧೆ ಸಹಜವಾಗಿ ನಿಯಂತ್ರಿತವಾಯಿತು. ಮಳೆನೀರು ಹೆಚ್ಚು ಕಾಲ ಉಳಿಯಿತು. ಜೀವ ವೈವಿಧ್ಯತೆ ಕಾಪಾಡಲ್ಪಟ್ಟಿತು. ಇಂದು ವಿಶ್ವದಾದ್ಯಂತ ಭಾರತಕ್ಕೆ “Shade Grown Coffee” (ನೆರಳಿನ ಕಾಫಿ) ಎಂಬ ಹೆಗ್ಗಳಿಕೆ ದೊರಕಲು ಎಲಿಯಟ್ ಅವರ ಈ ದೂರದೃಷ್ಟಿಯೂ ಒಂದು ಪ್ರಮುಖ ಕಾರಣವಾಗಿದೆ.


ಸ್ಥಳೀಯ ಕಾರ್ಮಿಕರೊಂದಿಗೆ ಮಾನವೀಯ ಸಂಬಂಧ

ಎಲಿಯಟ್ ತಮ್ಮ ಕಾರ್ಮಿಕರನ್ನು ಕೇವಲ ಕೂಲಿಕಾರರಂತೆ ಕಾಣದೇ. ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿದರು. ಅವರೊಡನೆ ಸರಿಯಾಗಿ ಸಂವಹನೆ ನಡೆಸುವ ಸಲುವಾಗಿ ಕನ್ನಡ ಭಾಷೆಯನ್ನು ಅತೀ ಶೀಘ್ರವಾಗಿ ಕಲಿತಿದ್ದಲ್ಲದೇ, ಮಲೆನಾಡಿನ ಬದುಕನ್ನು ಅರ್ಥಮಾಡಿ ಕೊಂಡು ಅವರ ಹಬ್ಬ ಹರಿದಿನಗಳಲ್ಲಿ ಅವರೊಂದಿಗೆ ಸಡಗರದಿಂದ ಸಂಭ್ರಮಿಸುವ ಮೂಲಕ ತಾನೊಬ್ಬ ಹೊರಗಿನವ ಎಂಬ ಭಾವನೆಯನ್ನು ಮೂಡದಂತೆ ನೋಡಿಕೊಂಡರು. ಕಾರ್ಮಿಕರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಲ್ಲದೇ, ಅಂದಿನ ಕಾಲದಲ್ಲಿ ಸೊಳ್ಳೆ ಕಡಿತದಿಂದ ವಿಪರೀತವಾದ ಹಬ್ಬುತ್ತಿದ್ದ ಮಲೇರಿಯಾ ನಿಯಂತ್ರಣಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಲ್ಲದೇ ಹಲವಾರು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರದ ಗಮನವನ್ನು ಸೆಳೆಯುವುದರಲ್ಲಿ ಸಫಲರಾದರು.

ನಂತರದ ದಿನಗಳಲ್ಲಿ ಮಲೆನಾಡಿನ ಹವಾಮಾನವು ಯುರೋಪಿನಷ್ಟೇ ಉತ್ತಮವಾಗಿ ಮತ್ತು ಪ್ರಶಾಂತವಾಗಿದ್ದರಿಂದ ಇಲ್ಲಿ ಕಾಫೀ ಪ್ಲಾಂಟೇಷನ್ ನಡೆಸಲು ಬಂದ ಹಲವಾರು ಯೂರೂಪಿಯನ್ನರಿಗೆ ಬ್ರಿಟೀಷರು ಯಾವುದೇ ಆಡ್ಡಿ ಆತಂಕಗಳಿಲ್ಲದೇ ಎಗ್ಗಿಲ್ಲದೇ ಅನುಮತಿ ನೀಡಿದ ಪರಿಣಾಮ ಮಲೆನಾಡಿನ ಕಾಡಿನ ಮಧ್ಯೆ ದೊಡ್ಡ ಪಾಶ್ಚಾತ್ಯ ವಾಸ್ತುಶಿಲ್ಪದ ಐಶಾರಾಮ್ಯ ಬಂಗಲೆಗಳ ಜೊತೆಗೆ ಅವರ ಪ್ರಾರ್ಥನೆಗಳನ್ನು ಸಲ್ಲಿಸುವ ಸಲುವಾಗಿ ಸ್ಥಾಪಿತವಾದ ಚರ್ಚುಗಳು ಕ್ರಮೇಣ ಸ್ಥಳೀಯರನ್ನು ಅದರಲ್ಲೂ ಕಾಫೀ ಪ್ಲಾಂಟೇಷನ್ನುಗಳಲ್ಲಿ ಕೆಲಸ ಮಾಡುವವರನ್ನು ಬಲವಂತದಿಂದಲೋ ಇಲ್ಲವೇ ಅಮೀಷಗಳಿಂದಲೂ ಇಲ್ಲವೇ ಅವರ ಪಾಶ್ಚಾತ್ಯ ಜೀವನ ಶೈಲಿಗೆ ಮನಸೋತ ಅನೇಕರು ಕ್ರಿ‌ಶ್ಚಿಯನ್ ಮತಕ್ಕೆ ಮತಾಂತರವಾಗಿ ಒಂದು ರೀತಿಯ ಮಿನಿ ಇಂಗ್ಲೇಂಡ್ ಆಗಿತ್ತು ಎನ್ನುವುದಕ್ಕೆ, ಇಂದಿಗೂ ಸಹಾ ಅಲ್ಲಿನ ಬಹುತೇಕ ಪ್ಲಾಂಟೇಷನ್ನುಗಳ ಮಾಲಿಕರು ಕ್ರಿಶ್ಚಿಯನ್ನರೇ ಆಗಿರುವುದು ಸಾಕ್ಷಿಯಾಗಿದೆ.


ಮೈಸೂರು ಜನಪ್ರತಿನಿಧಿ ಸಭೆಯ ಸದಸ್ಯ

ಬ್ರಿಟೀಷ್ ಅಧಿಕಾರಿಗಳು ಅದರಲ್ಲೂ ವಿಶೇಷವಾಗಿ ಕನ್ನಿಂಗ್ ಹ್ಯಾಮ್ ನೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದ ಪರ್ಷಿಯನ್ ಕುದುರೇ ವ್ಯಾಪಾರ್ ಅಲಿ ಅಸ್ಗರ್ ಮತ್ತು ಅಂದಿನ ಈಸ್ಟ್ ಇಂಡಿಯಾ ಕಂಪನಿಗೆ ದಿನಸಿ ಸರಬರಾಜಲ್ಲದೇ ಮತ್ತು ಆಗ್ಗಾಗ್ಗೆ ಸಾಲವನ್ನೂ ಕೊಡುವಷ್ಟು ಶ್ರೀಮಂತರಾಗಿದ್ದ ಲಕ್ಷ್ಮೀ ನರಸು ಚೆಟ್ಟಿಯವರ ನೆರವು ಮತ್ತು ಮದ್ರಾಸ್ ಪ್ರಾವಿನೆನ್ಸಿಯೊಂದಿಗೆ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಆವರ ನಿರಂತರವಾದ ಪತ್ರವ್ಯವಹಾರದ ಫಲವಾಗಿ ಇಂಗ್ಲೇಂಡಿನ ರಾಣಿ ಮೈಸೂರು ಸಂಸ್ಥಾನಕ್ಕೆ ಮರಳಿ ಅಧಿಕಾರವನ್ನು ಹಸ್ತಾಂತರಿಸಿದಾಗ, ಅಧಿಕಾರಕ್ಕೆ ಬಂದ ಮಹಾರಾಜ ಹತ್ತನೇ ಚಾಮರಾಜ ಒಡೆಯರ್ ಅವರು ರಾಜತ್ವಕ್ಕಿಂತಲೂ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ 1881ರಲ್ಲಿ ಅವರು ಭಾರತದಲ್ಲೇ ಮೊದಲ ಬಾರಿಗೆ ಮೈಸೂರು ಜನಪ್ರತಿನಿಧಿ ಸಭೆ ಆರಂಭಿಸಿದಾಗ, ರಾಬರ್ಟ್ ಹೆನ್ರಿ ಎಲಿಯಟ್ ಅವರು ಮಂಜರಾಬಾದ್ ಪ್ರದೇಶದ ಪ್ಲ್ಯಾಂಟರ್‌ಗಳ ಪ್ರತಿನಿಧಿಯಾಗಿ ಆಯ್ಕೆಯಾಗಿಮಲೆನಾಡಿನ ರಸ್ತೆ ನಿರ್ಮಾಣ, ಮಂಗಳೂರು ಬಂದರಿಗೆ ರೈಲು ಸಂಪರ್ಕ, ಕಾಫಿ ಸಾಗಾಣಿಕೆ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಇವುಗಳ ಬಗ್ಗೆ ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸಿ ಕೆಲ ಮೂಲಭೂತ ಸೌಕರ್ಯಗಳನ್ನು ತರಲು ಕಾರಣೀಭೂತರಾದರು


ಇತಿಹಾಸದ ದಾಖಲೆಗಳಾಗಿ ಉಳಿದ ಅವರ ಪುಸ್ತಕಗಳು

ಎಲಿಯಟ್ ಭಾರತದಲ್ಲಿ ತಾವು ಕಳೆದ ನಾಲ್ಕು ದಶಕಗಳ ಅನುಭವವನ್ನು ಪುಸ್ತಕಗಳ ಮೂಲಕ ದಾಖಲಿಸಿದ್ದು ಅವುಗಳಲ್ಲಿ ಪ್ರಮುಖವಾಗಿ 1871 ರಲ್ಲಿ ಪ್ರಕಟಿಸಿದ The Experiences of a Planter in the Jungles of Mysore  ಈ ಪುಸ್ತಕ ಹೊಸ ಪ್ಲ್ಯಾಂಟರ್‌ಗಳಿಗೆ ಮಾರ್ಗದರ್ಶಿಯಾಯಿತು. ಮತ್ತೆ 1898ರಲ್ಲಿ ಪ್ರಕಟಿಸಿದ Gold, Sport, and Coffee Planting in Mysore  ಈ ಕೃತಿ ಇಂದಿಗೂ ಕರ್ನಾಟಕದ ಕಾಫಿ ಇತಿಹಾಸದ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದ್ದು, ಈ ಪುಸ್ತಕದಲ್ಲಿ ಅವರು ಕಾಫಿ ಕೃಷಿ, ಮಲೆನಾಡಿನ ಪರಿಸರ, ಇಲ್ಲಿರುವ ಕಾಡು ಪ್ರಾಣಿಗಳು ಮತ್ತು ಅವುಗಳಿಂದ ಅನುಭವಿಸಿದ ಕಾಟ, ಬ್ರಿಟಿಷ್ ಕಾಲದ ಜೀವನ, ಸ್ಥಳೀಯ ಜನ ಜೀವನ, ಬೇಟೆಯ ಅನುಭವ, ಕೃಷಿ ತಂತ್ರಜ್ಞಾನ ಮುಂತಾದ ತಮ್ಮ ಅಮೂಲ್ಯವಾದ ಅನುಭವಗಳನ್ನು ದಾಖಲಿಸಿರುವುದು ಇಂದಿಗೂ ಇತಿಹಾಸಕಾರರಿಗೆ ಅಮೂಲ್ಯ ಮಾಹಿತಿಯ ಮೂಲವಾಗಿರುವುದು ಗಮನಾರ್ಹವಾಗಿದೆ.


ಕಾಫಿ ಉದ್ಯಮದ ವಿಸ್ತರಣೆ

ಎಲಿಯಟ್ ಭಾರತಕ್ಕೆ ಬಂದಾಗ ಮೈಸೂರು ಪ್ರದೇಶದಲ್ಲಿ ಕೇವಲ ಸುಮಾರು 5,000 ಎಕರೆ ಪ್ರದೇಶದಲ್ಲಿ ಮಾತ್ರ ಕಾಫಿ ಬೆಳೆಯಲಾಗುತ್ತಿತ್ತು. ಅವರು ಭಾರತವನ್ನು ತೊರೆಯುವ ವೇಳೆಗೆ ಈ ವಿಸ್ತೀರ್ಣ ಸುಮಾರು 1,50,000 ಎಕರೆಗಳಿಗೆ ಹೆಚ್ಚಾಗಿತ್ತು. ಇದರಲ್ಲಿ ಅವರಂತಹ ಆರಂಭಿಕ ಪ್ಲ್ಯಾಂಟರ್‌ಗಳ ಕೊಡುಗೆ ಅಪಾರವಾಗಿದೆ.


ಸಾವಯವ ಕೃಷಿಯ ಮುಂಚೂಣಿ ಚಿಂತಕ

1898ರ ನಂತರ ಎಲಿಯಟ್ ತಮ್ಮ ತಾಯ್ನಾಡಾದ ಸ್ಕಾಟ್ಲೆಂಡ್‌ಗೆ ಮರಳಿದರು. ಅಲ್ಲಿ ಅವರು Clifton Park System ಎಂಬ ಹೊಸ ಕೃಷಿ ವಿಧಾನವನ್ನು ಅಭಿವೃದ್ಧಿಪಡಿಸಿದರು. ಈ ಪದ್ಧತಿಯ ಮುಖ್ಯ ಲಕ್ಷಣಗಳೆಂದರೆ, ರಾಸಾಯನಿಕ ಗೊಬ್ಬರದ ಬಳಕೆ ಇಲ್ಲದೇ, ಆಳವಾದ ಬೇರುಬಿಡುವ ಹುಲ್ಲುಗಳ ಬಳಕೆಯಿಂದಾಗಿ, ನೈಸರ್ಗಿಕವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ವಿಧಾನವನ್ನು ತೋರಿಸಿಕೊಟ್ಟರು. ಇಂದಿಗೂ ಈ ವಿಧಾನವನ್ನು ಜಾಗತಿಕ ಸಾವಯವ ಕೃಷಿಯ ಆರಂಭಿಕ ಚಿಂತನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.


ಕೊನೆಯ ಮಾತು

1914ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ರಾಬರ್ಟ್ ಹೆನ್ರಿ ಎಲಿಯಟ್ ನಿಧನರಾದರೂ, ಕರ್ನಾಟಕದ ಮಲೆನಾಡಿನಲ್ಲಿ  ಅವರು ಬಿತ್ತಿದ ಕಾಫಿ ಗಿಡಗಳು ಕೇವಲ ಉದ್ಯಮವನ್ನಷ್ಟೇ ಅಲ್ಲ, ಪರಿಸರ ಸಂರಕ್ಷಣೆ, ವೈಜ್ಞಾನಿಕ ಕೃಷಿ ಮತ್ತು ಸುಸ್ಥಿರ ಅಭಿವೃದ್ಧಿಯ ತತ್ವವನ್ನೂ ಬೆಳೆಸಿದವು. ಇಂದು ವಿಶ್ವದ ಅತ್ಯುತ್ತಮ ನೆರಳಿನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕರ್ನಾಟಕದ ಹೆಸರು ಗೌರವದಿಂದ ಉಲ್ಲೇಖವಾಗುವುದಾದರೆ, ಅದರ ಹಿಂದೆ ಮಾರ್ಕ್ ಕಬ್ಬನ್ ಅವರ ಆಡಳಿತ ಸುಧಾರಣೆಗಳ ಜೊತೆಗೆ ರಾಬರ್ಟ್ ಹೆನ್ರಿ ಎಲಿಯಟ್ ಅವರ ದೂರದೃಷ್ಟಿ, ಸಂಶೋಧನಾ ಮನೋಭಾವ ಮತ್ತು ಪರಿಸರಸ್ನೇಹಿ ಕೃಷಿ ಚಿಂತನೆಯೂ ಅಷ್ಟೇ ದೊಡ್ಡ ಪಾತ್ರ ವಹಿಸಿದೆ.

ಇತಿಹಾಸವು  ರಾಬರ್ಟ್ ಹೆನ್ರಿ ಎಲಿಯಟ್  ಅವರನ್ನು ಕೇವಲ ಒಬ್ಬ ಬ್ರಿಟಿಷ್ ಪ್ಲ್ಯಾಂಟರ್ ಎಂದು ಮಾತ್ರ ನೆನಪಿಸಿಕೊಳ್ಳದೇ,  ಕರ್ನಾಟಕದ ಕಾಫಿ ಉದ್ಯಮಕ್ಕೆ ಸುಸ್ಥಿರ ಭವಿಷ್ಯದ ಅಡಿಪಾಯ ಹಾಕಿದ ದೂರದೃಷ್ಟಿಯ ಕೃಷಿ ಚಿಂತಕ ಎಂದೇ ಸ್ಮರಿಸಲೇ ಬೇಕು ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?

ನಿಮ್ಮವನೇ

ಉಮಾಸುತ

19ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ಕಾಫೀ ಕ್ಯೂರಿಂಗ್ ಕಂಪನಿ ಆರಂಭಿಸಿ, ಬೆಂಗಳೂರಿಗರಿಗೆ ತಾಜಾ ತಾಜಾ ಫಿಲ್ಟರ್ ಕಾಫೀ ಪುಡಿಯನ್ನು ಪರಿಚಯಿಸಿದ ಅಸಾಧಾರಣ ಕಾಫೀ ಪ್ಲಾಂಟರ್ ಮಹಿಳೆ ಕಾಫಿ ಪುಡಿ ಸಾಕಮ್ಮನವರ ಕುರಿತಾದ ಮಾಹಿತಿಯನ್ನು ಈ ಲಿಂಕ್ ಮೂಲಕ ತಿಳಿಯಿರಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ