ತೇಜಸ್ವಿನಿ ಶರ್ಮ

ಒಂದೊಳ್ಳೆ ಬ್ರೇಕ್ ನಿರೀಕ್ಷೆಯಲ್ಲಿ ಕನ್ನಡದ ಭರವಸೆಯ ನಟಿ ತೇಜಸ್ವಿನಿ ಶರ್ಮ ತಮ್ಮ ಕುರಿತು ಹೇಳಿರುವುದೇನು…?

ನಟಿ ತೇಜಸ್ವಿನಿ ಶರ್ಮ ತಮ್ಮ ಸೌಂದರ್ಯ, ಪ್ರತಿಭೆ ಎರಡರಿಂದಲೂ ಗಮನ ಸೆಳೆದರು. ಈಗಾಗಲೇ 4 ಕನ್ನಡ ಸಿನಿಮಾ ಹಾಗೂ ಒಂದು ವೆಬ್‌ ಸೀರೀಸ್‌ ನಲ್ಲಿ ತೇಜಸ್ವಿನಿ ಶರ್ಮ ನಟಿಸಿದ್ದು ಒಂದೊಳ್ಳೆ ಬ್ರೇಕ್‌ ನ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟಿಯಾಗುವ ಪ್ರಯತ್ನದಲ್ಲಿರುವ ತೇಜಸ್ವಿನಿ ಶರ್ಮ ಮೂಲತಃ ಕೊಡಗಿನವರು. ಲಿಖಿತ್‌ ಶೆಟ್ಟಿ ಅಭಿನಯದ `ಫುಲ್ ಮೀಲ್ಸ್’ ಸಿನಿಮಾದಲ್ಲಿ ತೇಜಸ್ವಿನಿ ಶರ್ಮ ನಾಯಕಿಯಾಗಿದ್ದರು. ಇದಕ್ಕೆ ಮುನ್ನ ಪ್ರಮೋದ್‌ ಜೊತೆ `ಇಂಗ್ಲಿಷ್‌ ಮಂಜ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಮಾಡರ್ನ್‌, ಸಾಂಪ್ರದಾಯಿಕ ಎರಡೂ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಈ ನಟಿ ತಮ್ಮ ಸೋಶಿಯಲ್ ಮೀಡಿಯಾದಿಂದಲೂ ಸಾಕಷ್ಟು ಜನಪ್ರಿಯರಾಗಿದ್ದಾರೆ. `ಫುಲ್ ಮೀಲ್ಸ್’ ಸಿನಿಮಾದಲ್ಲಿನ ಇವರ ಅಭಿನಯ ಪ್ರೇಕ್ಷಕರ ಮನ ಗೆದ್ದಿದೆ. ಇಂತಹ ನಟಿ ತಮ್ಮ ಅನುಭವದ ಜೊತೆಗೆ ಮುಂದಿನ ಭವಿಷ್ಯದ ಕನಸಿನ ಕುರಿತಂತೆ `ಗೃಹಶೋಭಾ’ ಜೊತೆಗೆ ಮಾತನಾಡಿದ್ದು ಅವರ ಮಾತುಕಥೆ ಸಾರಾಂಶ ಇಲ್ಲಿದೆ.

ಬಾಲ್ಯ ವಿದ್ಯಾಭ್ಯಾಸ

ತೇಜಸ್ವಿನಿ ಶರ್ಮ ತಮ್ಮ ಬಾಲ್ಯ ಹಾಗೂ ವಿದ್ಯಾಭ್ಯಾಸದ ಬಗೆಗೆ ಮಾತನಾಡುತ್ತಾ, “ನಾನು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿ, ನನ್ನ ತಾಯಿ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕುಟುಂಬದವರು. ನಾನು ಕೊಡಗಿನ ಸೇಂಟ್‌ ಜೋಸೆಫ್ ಸ್ಕೂಲ್ ‌ನಲ್ಲಿ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾಭ್ಯಾಸ ನಡೆಸಿದೆ. ಓದುವುದು ಎಂದರೆ ನನಗೆ ಬಹಳ ಇಷ್ಟವಿತ್ತು. ನಾನು ಹತ್ತನೇ ತರಗತಿ ಹಾಗೂ ಪಿಯುಸಿಗಳಲ್ಲಿ ಟಾಪರ್‌ ಆಗಿದ್ದೆ. ಆ ನಂತರ ನಾನು ಎಂಜಿನಿಯರಿಂಗ್‌ ಮಾಡಿದೆ.

“ಬಾಲ್ಯದಲ್ಲಿ ಕೆಲವು ವರ್ಷ ನೃತ್ಯಾಭ್ಯಾಸ ಸಹ ನಡೆಸಿದ್ದು, ಮಂಗಳೂರಿನ ಒಂದು ಸಂಸ್ಥೆಯಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದೆ. ಬಳಿಕ ನಾನೇ ನೋಡಿ ನೋಡಿ ನೃತ್ಯಭ್ಯಾಸ ಮಾಡಿದೆ. ಎಂಜಿನಿಯರಿಂಗ್‌ ಮಾಡುವ ಸಮಯದಲ್ಲಿ ನಾನು ಬ್ಯಾಕ್ ಸ್ಟೇಜ್‌ ಕೆಲಸಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಿದ್ದೆ. ಜೊತೆಗೆ ಸ್ಟೀಲರ್ಸ್‌ ಎಂಬ ಡ್ಯಾನ್ಸ್ ಟೀಂ ಒಂದನ್ನು ಕಟ್ಟಿಕೊಂಡು ನೃತ್ಯ ಪ್ರದರ್ಶನ ಹಾಗೂ ಸಣ್ಣ ಸಣ್ಣ ಕಿರು ನಾಟಕ ಪ್ರದರ್ಶನ ಕೊಡುತ್ತಲಿದ್ದೆ,” ಎಂದರು.

unnamed5

ವರ್ಲ್ಡ್ ಸೂಪರ್ಮಾಡೆಲ್

ಇದಾದ ನಂತರ ಎರಡು ವರ್ಷ ಒಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ತೇಜಸ್ವಿನಿ ಬಳಿಕ ಅಲ್ಲಿಂದ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ಅಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ನಂತರ ವರ್ಲ್ಡ್ ಸೂಪರ್‌ ಮಾಡೆಲ್ ‌ಸೌತ್‌ ಏಷ್ಯಾ-2017ರ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.

ಚಿತ್ರರಂಗಕ್ಕೆ ಬರುವ ಕುರಿತು

ತಾವು ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಪ್ರಾರಂಭಿಸಿದುದರ ಕುರಿತು ಹೇಳಿದ ನಟಿ, “ಬಾಲ್ಯದಲ್ಲಿ ನನಗೆ ನಾನು ಚಿತ್ರರಂಗಕ್ಕೆ ಬರುವ ಕುರಿತು ಯಾವ ಕನಸೂ ಇರಲಿಲ್ಲ. ನನ್ನ ತಂದೆ ಒಬ್ಬ ರಂಗಭೂಮಿ ಕಲಾವಿದರಾಗಿದ್ದರು ಎನ್ನುವುದು ಬಿಟ್ಟರೆ, ನಾನು ಚಿತ್ರಗಳಲ್ಲಿ ಅಭಿನಯಿಸುವ ಕಲ್ಪನೆ ಇರಲಿಲ್ಲ. “ನನಗೆ ಪೊಲೀಸ್‌ ಅಧಿಕಾರಿ ಆಗಬೇಕೆಂದು ಆಸೆ ಇತ್ತು. ಇದೊಂದು ಡೆಸ್ಟಿನಿ ಎನ್ನಬಹುದು. ಒಮ್ಮೆ ಕ್ಯಾಮೆರಾ ಮುಂದೆ ಬಂದಾಗ ನನಗೆ  ಇದು ನನ್ನ ಕ್ಷೇತ್ರ ಎನ್ನುವ ಸ್ಪಷ್ಟತೆ ಸಿಕ್ಕಿತು.  ಹಾಗಾಗಿ ಇಲ್ಲಿಯೇ ಮುಂದುವರಿದಿದ್ದೇನೆ.

“ನನಗೆ `ಫ್ಲ್ಯಾಟ್‌’ ಎನ್ನುವ ಸಿನಿಮಾದಲ್ಲಿ ಮೊದಲು ಅವಕಾಶ ಸಿಕ್ಕಿತು. ಇದೊಂದು ನಾಯಕಿ ಪ್ರಧಾನ ಚಿತ್ರ. ಹೊಸ ನಿರ್ದೇಶಕ ಕಿಶೋರ್‌ ಎಂ.ಸಿ. ನಿರ್ದೇಶನ ಮಾಡ್ಡಿದ್ದ ಈ ಚಿತ್ರದಲ್ಲಿ `ರಾಧಾರಮಣ’ ಧಾರಾವಾಹಿಯ ಖ್ಯಾತಿಯ ಸ್ಕಂದ ಅಶೋಕ್‌, `ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ ಜೊತೆಗೆ ನಾನು ಕಾಣಿಸಿಕೊಂಡಿದ್ದೆ.

“ಆ ಸಿನಿಮಾ ಡಿಸೆಂಬರ್‌ 2022ರಲ್ಲಿ ತೆರೆಕಂಡಿತ್ತು. ಆಗಿನ್ನೂ ನಾನು ಕೆಲಸ ಮಾಡುತ್ತಲೇ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಆದರೆ ದಿನ ಕಳೆದಂತೆ ಕೆಲಸ ಹಾಗೂ ಅಭಿನಯ ಎರಡನ್ನೂ ಒಟ್ಟಿಗೆ ಮಾಡುವುದು ಕಷ್ಟವಾಗತೊಡಗಿತು. ಆಗ ಕೆಲಸ ಬಿಟ್ಟು ಪರಿಪೂರ್ಣವಾಗಿ ಅಭಿನಯದಲ್ಲಿ ತೊಡಗಿದೆ. ಅಲ್ಲಿಂದ ನನ್ನ ಚಿತ್ರರಂಗದ ಪಯಣ ಪ್ರಾರಂಭವಾಗಿತ್ತು,” ಎನ್ನುತ್ತಾರೆ.

ಮುಂದುವರಿದ ನಟನೆಯ ಕೆರಿಯರ್‌ ತೇಜಸ್ವಿನಿ ಅಭಿನಯಿಸದ ಎರಡನೇ ಚಿತ್ರ `ಮೇರಿ’ ಮಾರ್ಚ್‌ 2023ರಲ್ಲಿ ತೆರೆಗೆ ಬಂದಿತು. ಆನಾ ಖ್ಯಾತಿಯ ಮನೋಜ್‌ ಪಿ. ನಡಲುಮನೆ ನಿರ್ದೇಶನ ಮಾಡಿದ್ದ ಈ ಸಿನಿಮಾ ಥ್ರಿಲ್ಲರ್‌ ಡ್ರಾಮಾ ಕಥಾಹಂದರ ಹೊಂದಿದ್ದು, ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆ ಹೊಂದಿತ್ತು. ವಿಕಾಸ್‌ ಉತ್ತಪ್ಪ, ಅನೂಷಾ ಕೃಷ್ಣ, ಚೇತನ್‌ ವಿಕ್ಕಿ, ಜೊತೆಗೆ ತೇಜಸ್ವಿನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇದರ ನಂತರ 2023ರಲ್ಲಿ ಆರ್ಯ ಎಂ. ಮಹೇಶ್‌ ನಿರ್ದೇಶನದ `ಇಂಗ್ಲಿಷ್‌ ಮಂಜ’ ಚಿತ್ರದಲ್ಲಿ ತೇಜಸ್ವಿನಿ ನಾಯಕಿಯಾಗಿ ಅಭಿನಯಿಸಿದರು. `ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಖ್ಯಾತಿಯ ಪ್ರಮೋದ್‌ ಮಂಜ ನಾಯಕರಾಗಿ ನಟಿಸಿದ್ದ ಸಿನಿಮಾದಿಂದ ತೇಜಸ್ವಿನಿಗೆ ಮತ್ತಷ್ಟು ಅವಕಾಶ ಸಿಕ್ಕಿತು.

unnamed7

ವೆಬ್ಸೀರೀಸ್ಗೆ ಎಂಟ್ರಿ

ತೇಜಸ್ವಿನಿ ಶರ್ಮ ಮಾಧ್ಯಮ ಅನೇಕ ಸಂಸ್ಥೆ ನಿರ್ಮಾಣದ `ಸೂಪರ್‌ ಕಪ್‌’ ಹೆಸರಿನ ವೆಬ್‌ ಸರಣಿಯಲ್ಲಿ ಸಹ ಅಭಿನಯಿಸಿದ್ದಾರೆ. ಆ ವೆಬ್‌ ಸರಣಿ ಮೂರು ಸೀಸನ್‌ ಆಗಿ ಬಂದಿತ್ತು. ಮಾಡರ್ನ್‌ ಯುವ ಜೋಡಿಗಳ ನಿತ್ಯ ಬದುಕಿನ ಸ್ವಾರಸ್ಯಕರ ಹವಾಸ್ಯ ಪ್ರಸಂಗಗಳೇ ಇದರಲ್ಲಿ ಪ್ರಧಾನ ಅಂಶವಾಗಿತ್ತು. `ನಮ್ಮನೆ ಯುವರಾಣಿ’ ಸೀರಿಯಲ್ ನಲ್ಲಿ ನಟ ರಾಘವೇಂದ್ರ ಜೊತೆ ತೇಜಸ್ವಿನಿ ಕಾಣಿಸಿಕೊಂಡಿದ್ದರು. ಮಾಧ್ಯಮ ಅನೇಕ ಯೂಟ್ಯೂಬ್‌ ಚಾನೆಲ್ ‌ನಲ್ಲಿ ಈ ವೆಬ್‌ ಸರಣಿ ಪ್ರಸಾರವಾಗಿತ್ತು.

ಕೊಡಗಿನ ಚಿತ್ರಗಳು

ಇದರೊಡನೆ ಕೊಡಗು ಭಾಷೆಯಲ್ಲಿ `ಕೊಡಗ್‌ ರ ಸಿಪಾಯಿ’ ಎನ್ನುವ ಸಿನಿಮಾದಲ್ಲಿ ಸಹ ತೇಜಸ್ವಿನಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೆಪ್ಟೆಂಬರ್‌ 2019ರಂದು ತೆರೆಗೆ ಬಂದಿತ್ತು. ಚಿತ್ರದಲ್ಲಿ ತೀತಿಮಾಡ ಅರ್ಜನ್‌ ದೇವಯ್ಯರೊಂದಿಗೆ ತೇಜಸ್ವಿನಿ ಶರ್ಮ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ 2020ರಲ್ಲಿ ಪ್ರದರ್ಶನ ಕಂಡಿತ್ತು. ಕೊಡಗಿನ ಸೈನಿಕರೊಬ್ಬರ ನಿವೃತ್ತಿ ಜೀವನ ಕಥೆಯನ್ನು ತಿಳಿಸುವ ಈ ಸಿನಿಮಾದ ಕಥೆಯನ್ನು ಉಳುಗಂಡ ಕಾವೇರಿ ಬರೆದಿದ್ದರೆ, ಕೊಟ್ಟು ಕತ್ತೀರ ಪ್ರಕಾಶ್‌ ಕಾರ್ಯಪ್ಪ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ನಾನಾ ಕಡೆಗಳಲ್ಲಿ ವಿಶೇಷ ಪ್ರದರ್ಶನ ಕಂಡು ತೇಜಸ್ವಿನಿ ಶರ್ಮರ ವೃತ್ತಿ ಬದುಕಿನಲ್ಲಿ ಮಹತ್ವದ್ದು ಎನಿಸಿಕೊಂಡಿತು. ಇದರ ಬಳಿಕ ತೇಜಸ್ವಿನಿ `ಬಾ ಬಟ್ಟೆಲ್‌’ ಎನ್ನುವ ಕೊಡ ಕಿರುಚಿತ್ರವೊಂದರಲ್ಲಿ ಸಹ ಅಭಿನಯಿಸಿದ್ದರು.

ಫುಲ್ ಮೀಲ್ಸ್ ಕಳೆದ ವರ್ಷ 2025 ನವೆಂಬರ್‌ ನಲ್ಲಿ ತೆರೆಕಂಡ `ಫುಲ್ ಮೀಲ್ಸ್’ ತೇಜಸ್ವಿನಿಯವರ ಇತ್ತೀಚಿನ ಚಿತ್ರವಾಗಿದೆ. ಈ ಚಿತ್ರದ ಕುರಿತು ಮಾತನಾಡಿದ ನಟಿ, “ಈ ಚಿತ್ರದ ನನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಇದರಿಂದ ನನಗೆ ಮತ್ತಷ್ಟು ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ,” ಎಂದಿದ್ದಾರೆ.

ತಮಿಳಿನಲ್ಲಿ ಸಹ ತಮ್ಮ ಅದೃಷ್ಟ ಪರೀಕ್ಷೆಗಿಳಿದಿರು ನಟಿ `ಬೆಲಡೋನ’ ಎನ್ನುವ ತಮಿಳು ಸಿನಿಮಾದಲ್ಲಿ ಸಹ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ವರ್ಷದಲ್ಲೇ ತೆರೆಗೆ ಬರುವ ನಿರೀಕ್ಷೆ ಇದೆ.

ಕೊಡಗಿನವರಾದ ತೇಜಸ್ವಿನಿ ಶರ್ಮ ಮೊದಲು ಮಾಂಸಾಹಾರ ಸೇವಿಸುತ್ತಿದ್ದರೂ, ಕಳೆದ ಎಂಟು ವರ್ಷದಿಂದ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಅವರು ಮೆಡಿಟೇಶನ್‌ ಹಾಗೂ ಇತರೆ ತರಬೇತಿ ಪಡೆಯುತ್ತಲೂ ಆಹಾರ ಪದ್ಧತಿಯನ್ನು ಬದಲಿಸಿಕೊಂಡಿದ್ದಾರೆ. ಅವರ ಸ್ನೇಹಿತೆಯರಿಗೆ ಈಗಲೂ ಮಾಂಸಾಹಾರದ ಅಡುಗೆ ಮಾಡಿಕೊಡುತ್ತಾರೆ. ಆದರೂ ಅವರೆಂದೂ ತಿನ್ನುವುದಿಲ್ಲವಂತೆ. ಅಕ್ಕಿ ರೊಟ್ಟಿ ತನ್ನಿಷ್ಟದ ತಿಂಡಿ ಎನ್ನುವ ನಟಿ ಅಮ್ಮನ ಅಡುಗೆ ಬಹಳ ಇಷ್ಟಪಡುತ್ತಾರೆ. ಅಲ್ಲದೆ, ಅವರೇ ಮಾಡು ಟೊಮೇಟೊ ಬಾತ್‌ ಸಹ ಇಷ್ಟಪಡ್ತೀನಿ ಎನ್ನುತ್ತಾರೆ.

ಇನ್ಸ್ಪಿರೇಶನ್

“ನನಗೆ ಡಾ. ರಾಜ್‌ ಕುಮಾರ್‌ ರಿಂದ ಇಂದಿನ ರಾಕಿಂಗ್‌ ಸ್ಟಾರ್‌ ಯಶ್‌, ರಿಷಬ್‌ ಶೆಟ್ಟಿ ಎಲ್ಲರೂ ಸಹ ಇನ್‌ ಸ್ಪಿರೇಶನ್‌ ಆಗಿದ್ದಾರೆ. ಯಾರೋ ಒಬ್ಬರು ಇನ್‌ ಸ್ಪಿರೇಶ್‌ ಎನ್ನಲು ಬರುವುದಿಲ್ಲ,” ಎನ್ನುವ ನಟಿ, “ನನಗೆ ಪೌರಾಣಿಕ, ಐತಿಹಾಸಿಕ ಪಾತ್ರಗಳು ಅದರಲ್ಲಿಯೂ ಒಂದು ಪ್ರಮುಖ ಮಹಾರಾಣಿಯಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ.

“ಜೊತೆಗೆ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಇಷ್ಟ ಇದೆ. ಒಂದು `ರಾಮ್ ಕಾಮ್’ ಅಥವಾ `ಸೈಯಾರಾ’ದಂತಹ ಸ್ವೀಟ್‌ ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ಸಹ ಅಭಿನಯಿಸುವ ಇಚ್ಛೆ ಇದೆ,” ಎಂದು ತಮ್ಮ ಮನದ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡಕ್ಕೆ ಮೊದಲ ಆದ್ಯತೆ

“ನನ್ನ ಆದ್ಯತೆ ಎಂದೂ ಕನ್ನಡದಲ್ಲೇ ಇರಬೇಕು. ಹೆಚ್ಚು ಒಳ್ಳೆಯ ಅವಕಾಶ ಸಿಕ್ಕರೆ ಇಲ್ಲಿಯೇ ಬೆಳೆಯಬೇಕು ಎನ್ನುವುದೇ ನನ್ನ ಗುರಿ. ಈಗ ಎಲ್ಲಾ ನಟಿಯರೂ ಕನ್ನಡದೊಡನೆ ಪರಭಾಷೆಗಳಲ್ಲಿ ಸಹ ಅಭಿನಯಿಸುವಂತೆ ನಾನೂ ಅಲ್ಲಿ ಕೆಲವೊಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ಆದರೆ ನನ್ನ ಮೊದಲ ಆದ್ಯತೆ ಎಂದೂ ಮಾತೃಭಾಷೆ ಕನ್ನಡವೇ ಆಗಲಿದೆ,” ಎಂದು ನಟಿ ತೇಜಸ್ವಿನಿ ಹೇಳಿದ್ದಾರೆ.

“ನನ ಹೆಸರು ಹಾಗೂ ನನ್ನನ್ನು ನೋಡಿ ಬಹುತೇಕರು ನಾನು ಉತ್ತರ ಭಾರತದವಳು ಎಂದುಕೊಳ್ಳುತ್ತಾರೆ. ಆದರೆ ಈಗೀಗ ನಾನು ಕನ್ನಡದವಳು ಎನ್ನುವುದು ತಿಳಿಯುತ್ತಿದೆ,” ಎನ್ನುವ ನಟಿ ತಮಗೆ ಮುಂದಿನ ದಿನಗಳಲ್ಲಿ ನಿರ್ದೇಶನ ಹಾಗೂ ನಿರ್ಮಾಣ ಮಾಡುವ ಬಯಕೆ ಇದೆಯೇ ಎಂದು ಕೇಳಿದಾಗ, “ಭವಿಷ್ಯದಲ್ಲಿ ನನ್ನ ರೀತಿಯಲ್ಲಿ ಯಾರೇ ಹೊಸಬರು ಬಂದರೂ ನಾನೂ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತೊಡಗಿಕೊಳ್ಳುವ ಆಸೆ ಇದೆ,” ಎಂದು ಉತ್ತರಿಸಿದ್ದಾರೆ. ಆ ಮೂಲಕ ತಾವು ಸಹ ಭವಿಷ್ಯದಲ್ಲಿ ಸಿನಿಮಾ ನಿರ್ಮಾಣ ಮಾಡುವ ಸೂಚನೆ ನೀಡಿದ್ದಾರೆ.

ಕಾಲಕ್ಕೆ ತಕ್ಕಂತೆ ಪೈಪೋಟಿ

ಚಿತ್ರರಂಗಕ್ಕೆ ಬರಬೇಕಾದರೆ ಇಂದಿನ ದಿನಗಳಲ್ಲಿ ಸ್ಪರ್ಧೆಯಲ್ಲಿ ಜಯಿಸುವ ತಯಾರಿಯೊಡನೆ ಬರಬೇಕು. ಇಂದಿನ ಸೋಶಿಯಲ್ ಮೀಡಿಯಾ ಕಾಲದಲ್ಲಿ ಎಲ್ಲೆಡೆ ಜೋರಾದ ಕಾಂಪಿಟೇಶನ್ಸ್ ಇದೆ. ಹಾಗಾಗಿ ನಿರೀಕ್ಷೆಯಿಂದ ಬರುವವರು ತಾಳ್ಮೆ ವಹಿಸಿ ಕಾಯಬೇಕು. ಅವಕಾಶ ಸಿಕ್ಕಾಗ ಉತ್ತಮವಾಗಿ ಬಳಸಿಕೊಳ್ಳಬೇಕು, ನಟಿಯರಿಗೆ ಅವಕಾಶಗಳು ಬಹಳ ಸಾಲಾಗಿವೆ. ಹಿಂದಿನವರ ರೀತಿಯಲ್ಲಿ ಅವಕಾಶ ದೊರಕುವುದಿಲ್ಲ. ಒಬ್ಬಳು ಒಂದು ಸಿನಿಮಾಗೆ ನಾಯಕಿಯಾಗಿದ್ದರೆ ಮತ್ತೊಂದು ಸಿನಿಮಾಗೆ ಮತ್ತೊಬ್ಬ ನಾಯಕಿ ಇರುತ್ತಾರೆ. ಅಷ್ಟು ಸ್ಪರ್ಧೆ ಇದ್ದು ಸಿನಿಮಾ ಗೆದ್ದರೆ ಮಾತ್ರ ನಾಯಕಿಗೆ ಹೊಸ ಅವಕಾಶ ಎಂಬಂತಾಗಿದೆ.

“ಜನರನ್ನು ಚಿತ್ರಮಂದಿರಗಳಿಗೆ ಕರೆತರುವುದು ದೊಡ್ಡ ಸಾಲಾಗಿದೆ! ನಾಯಕಿ ಪಾತ್ರಕ್ಕೆ ಹೆಚ್ಚು ಒತ್ತು ಕೊಡುವ ಕಥೆ ಬರಬೇಕಿದೆ. ಹಾಗಾದರೆ ಮಾತ್ರ ನಟಿಯರು ಜನರಿಂದ ಗುರುತಿಸಿಕೊಳ್ಳಬಹುದು. ನಾಯಕನಷ್ಟೇ ಪ್ರಾಶಸ್ತ್ಯ ನಾಯಕಿಗೂ ಇರುವಂತಹ ಪಾತ್ರಗಳು ಸಿಕ್ಕಬೇಕಿದೆ. ಆಗ ನಮ್ಮಂತಹ ನಟಿಯರಿಗೆ ಹೆಚ್ಚು ಅವಕಾಶ ಸಿಕ್ಕುತ್ತದೆ,” ಎನ್ನುವುದು ತೇಜಸ್ವಿನಿ ಶರ್ಮರ ಮಾತು.

ರಾಘವೇಂದ್ರ ಅಡಿಗೆ ಎಚ್ಚೆನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ