ಕಥೆ –  ಸ್ವಾತಿ ಕಿರಣ್‌

ಕವಿತಾಗೆ ಆಗತಾನೇ ಮದುವೆಯಾಗಿತ್ತು. ಅದು ಅರೇಂಜ್ಡ್  ಮ್ಯಾರೇಜ್‌ ಆಗಿದ್ದರೂ ಲವ್ಗೇನೂ ಕಡಿಮೆ ಇರಲಿಲ್ಲ. ಮದುವೆಗೆ ಮೊದಲು ಕವಿತಾ ಮತ್ತು ಪ್ರವೀಣ್‌ ಆಗಾಗ್ಗೆ ಫೋನ್‌ನಲ್ಲಿ ಮಾತಾಡುತ್ತಿದ್ದರು. ಮನೆಯವರಿಗೆ ಗೊತ್ತಿಲ್ಲದಂತೆ ಇಬ್ಬರೂ ಹಲವಾರು ಬಾರಿ ಭೇಟಿಯಾಗಿದ್ದರು. ಪರಸ್ಪರರನ್ನು ಮೆಚ್ಚಿದ ಮೇಲೆಯೇ ಇಬ್ಬರೂ ಮದುವೆಗೆ ಒಪ್ಪಿದ್ದರು. ಮದುವೆಯ ನಂತರದ ಜವಾಬ್ದಾರಿಯನ್ನು ನಿಭಾಯಿಸಲು ಕವಿತಾ ಪ್ರಯತ್ನಿಸುತ್ತಿದ್ದಳು.

ಅಂದು ಕವಿತಾ ಆಫೀಸಿನಿಂದ ಬೇಗ ಬಂದಿದ್ದಳು. ಬೇಗನೆ ಬಟ್ಟೆ ಬದಲಿಸಿ ಇಂಟರ್‌ನೆಟ್‌ ಆನ್‌ ಮಾಡಿದಳು ಮತ್ತು ಹೈದರಾಬಾದಿ ಬಿರಿಯಾನಿಯ ರೆಸಿಪಿ ಹುಡುಕಿದಳು. ಅದು ಪ್ರವೀಣ್‌ನ ಫೇವರಿಟ್‌ ಡಿಶ್‌ ಕೂಡ ಆಗಿತ್ತು. ಕವಿತಾ ಅಕ್ಕಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಯಲು ಬಿಟ್ಟು ಮಸಾಲೆ ಹಾಕಿ ತಯಾರಿಸಿದಳು.  ನಂತರ ಕುಕ್ಕರ್‌ನಲ್ಲಿ ಸೀಟಿಗಾಗಿ ಕಾಯತೊಡಗಿದಳು.

ಕವಿತಾ ಪ್ರವೀಣ್‌ಗೆ ಫೋನ್‌ ಮಾಡತೊಡಗಿದಳು. ಆದರೂ ಪ್ರವೀಣ್‌ ಫೋನ್‌ ಎತ್ತಲಿಲ್ಲ . ಕವಿತಾ ಗಡಿಯಾರ ನೋಡಿದಳು. ಸಂಜೆ 6 ಗಂಟೆಯಾಗಿತ್ತು. ಕೆಲಸ ಜಾಸ್ತಿ ಇರಬಹುದು ಎಂದುಕೊಂಡಳು. ಬಿರಿಯಾನಿ ಮಾಡಿ ಆಮೇಲೆ ತಿರುಗಿ ಫೋನ್‌ ಮಾಡಿದರಾಯ್ತು ಎಂದುಕೊಂಡಳು. ನಂತರ ಎಲ್ಲವನ್ನೂ ಕುಕ್ಕರ್‌ಗೆ ಹಾಕಿ ಸೀಟಿಗಾಗಿ ಕಾಯತೊಡಗಿದಳು.

ಇದಕ್ಕೆ ಹಿಂದೆ ಕವಿತಾ ಟೀ ಮತ್ತು ಮ್ಯಾಗಿ ಬಿಟ್ಟು ಬೇರೇನೂ ಮಾಡಿರಲಿಲ್ಲ. ಓದು ಹಾಗೂ ನೌಕರಿಯ ಧಾವಂತದಲ್ಲಿ ಅವೆಲ್ಲವನ್ನು ಕಲಿಯುವ ಅವಕಾಶ ಸಿಗಲಿಲ್ಲ. ಅಡುಗೆ ಮಾಡಲು ಅವಳಿಗೆ ವಿಶೇಷ ಅಭಿರುಚಿಯೇನೂ ಇರಲಿಲ್ಲ. ಆದರೆ ಪ್ರವೀಣ್‌ಗಾಗಿ ಅವೆಲ್ಲವನ್ನೂ ಮಾಡಲು ಖುಷಿಯಾಗುತ್ತಿತ್ತು.

ಇನ್ನಷ್ಟು ರೆಸಿಪಿಗಳನ್ನು ಚೆಕ್‌ ಮಾಡೋಣ ಎಂದುಕೊಂಡಳು ಕವಿತಾ. ಚೆಕ್‌ ಮಾಡುತ್ತಾ ಮಾಡುತ್ತಾ ಅವಳು ಕ್ಯಾರೆಟ್‌ ಹಲ್ವಾ, ಗುಲಾಬ್‌ ಜಾಮೂನ್‌ ಮತ್ತು ಹಾಲುಖೀರು ಇತ್ಯಾದಿಗಳ ರೆಸಿಪಿಗಳನ್ನು ಓದಿದಳು ಮತ್ತು ಸೇವ್ ಮಾಡಿದಳು. ಹೀಗೆ ಮಾಡುವಾಗ ಅವಳು ಕುಕ್ಕರ್‌ನ ಸೀಟಿಗಳನ್ನು ಎಣಿಸಲು ಮರೆತುಬಿಟ್ಟಳು. ಏನೋ ಸೀದುಹೋದ ವಾಸನೆ ಬಂದಾಗ ಅವಳಿಗೆ ಬಿರಿಯಾನಿಯತ್ತ ಗಮನ ಹೋಯಿತು. ಅವಳು ಕೂಡಲೇ ಗ್ಯಾಸ್‌ ಆರಿಸಿದಳು. ಕುಕ್ಕರ್‌ನ ಮುಚ್ಚಳ ತೆಗೆದು ನೋಡಿದಾಗ ಬಿರಿಯಾನಿ ಸೀದುಹೋಗಿತ್ತು.

ಅಷ್ಟು ಕೆಲಸ ವ್ಯರ್ಥವಾಗಿತ್ತು. ಕವಿತಾಗೆ ಅಳುವಂತಾಯ್ತು. ಆದರೆ ಅವಳು ಸೋಲೊಪ್ಪಿಕೊಳ್ಳಲು ಸಿದ್ಧಳಿರಲಿಲ್ಲ. ಅವಳು ಮತ್ತೆ ಮೊದಲಿನಿಂದ ಶುರು ಮಾಡಿದಳು. ಈ ಬಾರಿ ಬಹಳ ಎಚ್ಚರಿಕೆಯಿಂದ ಅವಳು ಅಡುಗೆಮನೆಯಿಂದ ಅಲ್ಲಾಡಲಿಲ್ಲ. ಕೊನೆಗೂ ಬಿರಿಯಾನಿ ರೆಡಿಯಾಯಿತು. ಎಲ್ಲ ಮುಗಿಸುವಷ್ಟರಲ್ಲಿ 7 ಗಂಟೆ ಆಯಿತು. ಕವಿತಾ ಮತ್ತೆ ಪ್ರವೀಣ್‌ಗೆ ಫೋನ್‌ ಮಾಡಿದಳು. ಈ ಬಾರಿಯೂ ಮೊಬೈಲ್‌ ರಿಂಗ್‌ ಆಗುತ್ತಿತ್ತು . ಅವನು ಫೋನ್‌ ಎತ್ತಲಿಲ್ಲ. ಕವಿತಾ ಆಫೀಸಿಗೆ ಫೋನ್‌ ಮಾಡಿದಾಗ ಪ್ರವೀಣ್‌ ಆಚೆ ಹೊರಟು ಅರ್ಧ ಗಂಟೆಯಾಯಿತೆಂದು ರಿಸೆಪ್ಶನಿಸ್ಟ್ ಹೇಳಿದಳು. ಪ್ರವೀಣ್‌ ಬಹುಶಃ  ಡ್ರೈವ್‌ ಮಾಡುತ್ತಿರಬಹುದು ಅದಕ್ಕೆ ಫೋನ್‌ ಎತ್ತುತ್ತಿಲ್ಲ ಎಂದು ಕವಿತಾ ಯೋಚಿಸುತ್ತಿದ್ದಳು. ಆಫೀಸಿನಿಂದ ಮನೆಗೆ ಬರಲು 45 ನಿಮಿಷಗಳಾಗುತ್ತದೆ. ಪ್ರವೀಣ್‌ ಮನೆ ತಲುಪುತ್ತಿರಬಹುದು. ಕವಿತಾ ತನ್ನ ಫೇವರಿಟ್‌ ಕ್ರಾಕರಿ, ಕ್ಯಾಂಡಲ್ಸ್ ತೆಗೆದಳು. ಜೊತೆಗೆ ರೊಮ್ಯಾಂಟಿಕ್‌ ಡಿನ್ನರ್‌ ರೆಡಿ ಮಾಡಿ ಪ್ರವೀಣ್‌ಗಾಗಿ ಕಾಯತೊಡಗಿದಳು. ಆದರೆ ಎಂಟುವರೆಯಾದರೂ ಪ್ರವೀಣ್‌ ಕಾಣಲಿಲ್ಲ. ಕವಿತಾಗೆ ಕೊಂಚ ಚಿಂತೆಯಾಯಿತು. ಮತ್ತೆ ಫೋನ್‌ ಮಾಡಿದಾಗ ಪ್ರವೀಣ್‌ ಫೋನ್‌ ಎತ್ತಿ ಬೇಗ ಬೇಗ ಹೇಳಿದ, “ನಾನು ಸ್ವಲ್ಪ ಬಿಜಿಯಾಗಿದ್ದೀನಿ. ಮನೆಗೆ ಬರೋದು ಲೇಟಾಗುತ್ತೆ… ನೀನು ಊಟ ಮಾಡಿಬಿಡು ಬೈ.

”ಇಷ್ಟು ಹೇಳಿ ಅವನು ಫೋನ್‌ ಕಟ್‌ ಮಾಡಿದ. ಕವಿತಾಳ ಮೂಡ್‌ ಹಾಳಾಯಿತು. ಪ್ರವೀಣ್‌ ತನಗೆ ಮಾತಾಡಲು ಅಕಾಶ ಕೊಡಲಿಲ್ಲ ಎಂದು ದುಃಖ ಆಯಿತು. ಅವಳು ಫೋನ್‌ ಮಾಡಿದ್ದು ಏಕೆಂದು ಸಹ ಕೇಳಲಿಲ್ಲ.

ಕವಿತಾಗೆ ಅಷ್ಟು ದುಃಖವಾಗಿದೆಯೆಂದು ಪ್ರವೀಣ್‌ಗೆ ಸ್ವಲ್ಪವೂ ತಿಳಿಯಲಿಲ್ಲ. ಅವನ ಗಮನವೆಲ್ಲಾ ತನ್ನ ಟೆನಿಸ್‌ ಮ್ಯಾಚ್‌ ಬಗ್ಗೆ ಇತ್ತು. ಮೊದಲ ಮ್ಯಾಚನ್ನು ಅವನು ತನ್ನ ಆಫೀಸ್‌ನ ಜ್ಯೂನಿಯರ್‌ನಿಂದ ಸೋತಿದ್ದ. ಸ್ಟೇಟ್ ಲೆವೆಲ್ ಚ್ಯಾಂಪಿಯನ್‌ ಒಬ್ಬ ಹೊಸಬನಿಂದ ಸೋತಿದ್ದು ಅವನಿಗೆ ಅರಗಿಸಿಕೊಳ್ಳಲಾಗಿರಲಿಲ್ಲ. ಇಂದು ಇನ್ನೊಂದು ಮ್ಯಾಚ್‌ ಇತ್ತು. ಅದರಲ್ಲಿ ಪ್ರವೀಣ್‌ ತನ್ನೆಲ್ಲಾ ಶಕ್ತಿ ಉಪಯೋಗಿಸಿ ಗೆದ್ದುಬಿಟ್ಟ.

ಅವನು ಹೊರಡುವಾಗ ಜ್ಯೂನಿಯರ್‌ ತನ್ನೊಂದಿಗೆ ಕಾಫಿ ಕುಡಿಯಲು ಕರೆದ. ಪ್ರವೀಣ್‌ಗೆ ಬೇಡ ಎನ್ನಲಾಗಲಿಲ್ಲ. ನಂತರ ತನ್ನ ಗೆಲುವನ್ನು ಕವಿತಾಳೊಂದಿಗೆ ಸೆಲೆಬ್ರೇಟ್‌  ಮಾಡಲು ಮನೆಗೆ ಹೋದ. ಅಲ್ಲಿ ಮನೆಯಲ್ಲಿ  ಕವಿತಾ ಊಟ ಮಾಡಿರಲಿಲ್ಲ. ಅವಳು ಹೇಗೋ ಅಳು ನಿಲ್ಲಿಸಿ ಕೆಟ್ಟ ಕೋಪದಿಂದ ಸೋಫಾದ ಮೇಲೆ ಮಲಗಿದ್ದಳು. ಮನೆಗೆ ಬಂದಕೂಡಲೇ ಪ್ರವೀಣ್‌ ಕವಿತಾಗೆ ಗೇಮ್ ಬಗ್ಗೆ ಹೇಳತೊಡಗಿದ ತನ್ನ ಗೆಲುವಿನ ಖುಷಿಯಲ್ಲಿ ಕವಿತಾಳ ಮೂಡ್‌ ಹಾಳಾಗಿದೆ ಎಂಬುದನ್ನು ಅವನು ಗಮನಿಸಲೇ ಇಲ್ಲ. ಪ್ರವೀಣ್‌ ಅದೇ ಎಗ್ಸೈಟ್‌ಮೆಂಟ್‌ನಲ್ಲಿ ಅವಳನ್ನು ಕೇಳಿದ, “ಊಟ ಮಾಡಿದ್ಯಾ?”

ಕವಿತಾ ಏನೂ ಉತ್ತರ ಕೊಡದೆ ಪ್ರವೀಣ್‌ಗೆ ಊಟ ಬಡಿಸಿ ಬೆಡ್‌ರೂಮಿಗೆ ಹೊರಟು ಹೋದಳು. ಕವಿತಾ ಜೋರಾಗಿ ಬಾಗಿಲು ಹಾಕಿಕೊಂಡಾಗ ಪ್ರವೀಣ್‌ ಗಮನ ಡೈನಿಂಗ್‌ ಟೇಬಲ್ ಕಡೆ ಹೋಯಿತು. ಆಗ ಅವನಿಗೆ ಕವಿತಾ ರೊಮ್ಯಾಂಟಿಕ್‌ ಡಿನ್ನರ್‌ನ ಪ್ಲ್ಯಾನ್‌ ಮಾಡಿದ್ದು ಗೊತ್ತಾಯಿತು. ಅವನು ತಡವಾಗಿ ಬಂದಿದ್ದಕ್ಕೆ ಅವಳ ಮೂಡ್‌ ಹಾಳಾಗಿತ್ತು. ಪ್ರವೀಣ್‌ ಪ್ಲೇಟ್‌ನಲ್ಲಿ ಕವಿತಾಗೆ ಊಟ ಬಡಿಸಿಕೊಂಡು ರೂಮಿನ ಬಾಗಿಲನ್ನು ತಟ್ಟುತ್ತಾ ಹೇಳಿದ, “ಸಾರಿ ಕವಿತಾ, ನೀನು ಹೀಗೆ ಪ್ಲ್ಯಾನ್‌ ಮಾಡ್ತಿದ್ದೀಯಾಂತ ಗೊತ್ತಿದ್ರೆ ನಾನು ಬೇಗನೆ ಬರ್ತಿದ್ದೆ.

”ಕವಿತಾ ಕೋಪದಿಂದ ಒಳಗಿನಿಂದಲೇ ಕಿರುಚಿದಳು, “ ಅದನ್ನು ಹೇಳೋಕೇ ಫೋನ್‌ ಮಾಡಿದ್ದು. ಆದರೆ ನಿಮಗೆ, ನನ್ನ ಮಾತು ಕೇಳೋಕೆ ಪುರಸತ್ತೇ ಇಲ್ಲ. ನನಗಿಂತಾ ನಿಮಗೆ ಟೆನಿಸ್‌ ಮ್ಯಾಚ್‌ ಇಂಪಾರ್ಟೆಂಟ್‌.”

“ಹಾಗೇನಿಲ್ಲ…. ವಿಷಯಾನ ಯಾಕೆ ದೊಡ್ಡದು ಮಾಡ್ತಿದ್ದೀಯ?” ಎಂದು ಪ್ರವೀಣ್‌ ಬಾಗಿಲು ತೆರೆದ.

ಕವಿತಾ ಹೇಳಿದಳು, “ಸಂಜೆಯಿಂದ ನಿಮಗಾಗಿ ಪಲಾವ್‌ ಮಾಡುತ್ತಿದ್ದೇನೆ. ಇಲ್ಲಿ ನಾನು ತಲೆಕೆಡಿಸಿಕೊಂಡಿದ್ರೆ ನೀವು ಅಲ್ಲಿ ಮಜವಾಗಿ ಟೆನಿಸ್‌ ಆಡ್ತಿದ್ರಿ.”

ಪ್ರವೀಣ್‌ ವಿಷಯವನ್ನು ಸಂಭಾಳಿಸಲು ಪ್ರಯತ್ನಿಸಿದ, “ಕವಿತಾ, ಇದಕ್ಕೆ ನೀನು ಇಷ್ಟೊಂದು ತಲೆಕೆಡಿಸ್ಕೋಬೇಕಿರಲಿಲ್ಲ. ಹೋಟೆಲ್ನಿಂದ ಊಟ ತರಿಸಬಹುದಿತ್ತು.”

“ಹೌದು, ನಿಮ್ಮಮ್ಮ  ದಿನಾ ಫೋನ್‌ ಮಾಡಿ ಕೇಳ್ತಾರೆ. ಕವಿತಾ ಇವತ್ತೇನು ಅಡುಗೆ ಮಾಡಿದ್ದೀಯಾಂತ. ಅವರಿಗೆ ಏನು ಹೇಳೋದು?”

“ಈಗ್ಯಾಕೆ ಅಮ್ಮನ ವಿಷಯ?”

“ಸರಿ. ಅವರ ವಿಷಯ ಬೇಡ, ನಿಮಗೇ ಅರ್ಥ ಆಗಲ್ಲ. ನೀವು ಗಂಡಸರಿಗೆ ಮದುವೆಯ ನಂತರ ಯಾವ ಒತ್ತಡ ಇರಲ್ಲ. ಹೆಂಗಸರಿಗೇ ಎಲ್ಲ ಒತ್ತಡ, ತಲೆ ಬಿಸಿ.”

“ನೀನು ಇಷ್ಟೆಲ್ಲಾ ಕಷ್ಟಪಡೂಂತ ನಾನು ಹೇಳಿದ್ನಾ?”

“ನೀವು ಹೇಳಲಿಲ್ಲ, ನಾನೇ ಹುಚ್ಚಿ ತರಹ ನಿಮಗೆ ಏನಾದರೂ ಮಾಡೋಣಾಂತ ಇಷ್ಚ ಪಟ್ಟೆ. ಅದಕ್ಕೆ ಹೊಗಳೋದು ಇರಲಿ… ಆಯ್ತು ನೀವು ತಿನ್ನಿ. ನನಗೆ ಹಸಿವೆ ಇಲ್ಲ,” ಎಂದು ಕವಿತಾ ಮಗ್ಗಲು ಬದಲಿಸಿದಳು.

ಏನು ಮಾಡೋದೂಂತ ಪ್ರವೀಣ್‌ಗೆ ಅರ್ಥ ಆಗಿರಲಿಲ್ಲ. ಪಲಾವ್‌ನ ಗಮಲು ಸೊಗಸಾಗಿತ್ತು. ಹಸಿವು ಆಗಿತ್ತು. ಒಂದು ವೇಳೆ ತಿಂದರೆ ನಾಳೆ ಕವಿತಾ ವ್ಯಂಗ್ಯವಾಗಿ ಮಾತಾಡ್ತಾಳೆ. ನಾನು ಉಪವಾಸ ಮಲಗಿಕೊಂಡೇ ನೀವು ಆರಾಮಾಗಿ ಪಲಾವ್ ತಿಂದ್ರಿ ಅಂತ. ಒಂದು ವೇಳೆ ತಿನ್ನಲಿಲ್ಲ ಅಂದ್ರೆ ನಾನು ಅಷ್ಟು ಕಷ್ಟಪಟ್ಟು ಅಡುಗೆ ಮಾಡಿದ್ರೆ, ನೀವು ರುಚಿ ಕೂಡ ನೋಡಲಿಲ್ಲ ಅಂತ ಬೈತಾಳೆ. ಏನ್ಮಾಡೋದು?

ಸ್ವಲ್ಪ ಹೊತ್ತು ಗೊಂದಲದಲ್ಲಿ ಸಿಲುಕಿದ ನಂತರ ಪ್ರವೀಣ್‌ ಪಲಾವ್ ತಿಂದ. ಬಹಳ ರುಚಿಯಾಗಿತ್ತು. ಕವಿತಾ ನಿಜಕ್ಕೂ ಬಹಳ ಶ್ರಮವಹಿಸಿದ್ದಾಳೆ ಎಂದು ಅವನಿಗೆ ಅನ್ನಿಸಿತು. ನಾಳೆಯಿಂದ ಸಂಜೆ ಬೇಗ ಮನೆಗೆ ಬರಬೇಕೆಂದು ನಿಶ್ಚಯಿಸಿದ. ಮರುದಿನ ಬೆಳಗ್ಗೆ ಅವನು ಪಲಾವ್‌ನ್ನು ಹೊಗಳಿದ. ಹಾಗೆ ಇನ್ನು ಮೇಲೆ ಮನೆಗೆ ಬೇಗನೆ ಬರುವುದಾಗಿ ಹೇಳಿದ. ಕವಿತಾಳ ಕೋಪ ಕೊಂಚ ಕಡಿಮೆಯಾಯಿತು.

ನಂತರ ಪ್ರವೀಣ್‌ ಸಂಜೆ ನೇರವಾಗಿ ಮನೆಗೆ ಬರತೊಡಗಿದ. ಕವಿತಾ ಅಡುಗೆಮನೆಯಲ್ಲಿ ಹೊಸ ಹೊಸ ತಿಂಡಿಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಳು. ಪ್ರವೀಣ್‌ ವೀಡಿಯೋ ಗೇಮ್ಸ್ ಆಡುತ್ತಿದ್ದ. ಆದರೆ 1 ವಾರ ಕಳೆಯುವಷ್ಟರಲ್ಲಿ ಇಬ್ಬರಲ್ಲೂ ಮತ್ತೆ ಜಗಳ ಉಂಟಾಯಿತು. ಪ್ರವೀಣ್‌ ವೀಡಿಯೋಗೇಮ್ಸ್ ನಲ್ಲಿ  ತಲ್ಲೀನನಾಗಿರುವುದನ್ನು ಕಂಡು ಕವಿತಾ ಹೇಳಿದಳು, “ಬರೀ ವೀಡಿಯೋ ಗೇಮ್, ಆಡೋ ಹಾಗಿದ್ರೆ ಮನೆಗೆ ಬರೋದ್ಯಾಕೆ?”

“ನಿನಗೋಸ್ಕರ ನನ್ನ ಇಷ್ಟದ ಆಟ ಬಿಟ್ಟು ಬಿಟ್ಟೆ. ಆದರೂ ನೀನು ಕೋಪಿಸಿಕೊಳ್ತಿದ್ದೀಯ. ನೀವು ಹೆಂಗಸರಿಗೆ ಏನೂ ಅರ್ಥ ಆಗಲ್ಲ. ನಾನು ಏನು ಮಾಡಬೇಕೂಂತ ನೀನೇ ಹೇಳು. ನಿನ್ನ ಪ್ರಕಾರಾನೇ ನಡೆದುಕೊಳ್ತಿದ್ದೀನಿ. ಆದರೂ ನಿನಗೆ ಖುಶಿಯಿಲ್ಲ. ಅಡುಗೆ ಮಾಡಲ್ಲ  ಅಂದ್ರೆ ಬೇಡ ಬಿಡು. ಇಷ್ಟೊಂದು ಸಿಡುಕೋದ್ಯಾಕೆ?” ಎಂದ.

ಕವಿತಾಗೆ ಕೂಡ ಗೊಣಗುವುದು, ಪರಸ್ಪರ ಕೊರೆತೆಗಳನ್ನು ಪಟ್ಟಿ ಮಾಡುವುದು ಇಷ್ಟವಿರಲಿಲ್ಲ. ಅದನ್ನೇ ಯೋಚಿಸಿ ಅವಳು ಪ್ರತಿಯಾಡಲಿಲ್ಲ. ಅವಳಿಗೆ ಪ್ರವೀಣ್‌ನ ಸಮಯ ಹಾಗೂ ಜೊತೆ ಮಾತ್ರ ಬೇಕಾಗಿತ್ತು. ಆದರೆ ಹೀಗೆ ಜಗಳ ಆಡಿ ಅಲ್ಲ. ಎಲ್ಲಿ ಏನು ತಪ್ಪಾಯಿತೆಂದು ರಾತ್ರಿಯಿಡೀ ಯೋಚಿಸುತ್ತಿದ್ದಳು. ಅದನ್ನು ಸರಿಪಡಿಸಲೇಬೇಕು. ಮರುದಿನ ಸಂಜೆ ಅವಳು ಬೇಕೆಂದೇ ಪ್ರವೀಣ್‌ ಬಂದ ನಂತರವೇ ಮನೆಗೆ ಬಂದಳು.  ಪ್ರವೀಣ್‌ ಎಂದಿನಂತೆ ವೀಡಿಯೋಗೇಮ್ ಆಡುತ್ತಿದ್ದ. ಅವನು ಗೇಮ್ನಿಂದ ದೃಷ್ಟಿ ತೆಗೆಯದೆ “ಗುಡ್‌ ಈವಿನಿಂಗ್‌” ಎಂದ. ಅವನು ತಲೆಯೆತ್ತಿ ತನ್ನನ್ನು ನೋಡದಿದ್ದುದು ಕವಿತಾಗೆ ಪಿಚ್ಚೆನಿಸಿತು. ಆದರೂ ಅವಳು ತನ್ನ ಸ್ವರ ತಗ್ಗಿಸಿಕೊಂಡು, “ಬಹಳ ಆಯಾಸ ಆಗಿದೆ. 1 ಕಪ್‌ ಕಾಫಿ ಕೊಡ್ತೀರಾ?” ಎಂದಳು.

ಪ್ರವೀಣ್‌ಗೆ ಕೊಂಚ ತಬ್ಬಿಬ್ಬಾಯಿತು ಕವಿತಾ ಅವನನ್ನು ಎಂದೂ 1 ಲೋಟಾ ನೀರು ಕೇಳಿರಲಿಲ್ಲ, ಆದರೂ “ಆಯ್ತು ಆಯ್ತು,” ಎನ್ನುತ್ತಾ ಎದ್ದು ಅಡುಗೆಮನೆಗೆ ಹೋದ. ನಂತರ ಕೊಂಚ ಸಂಕೋಚದಿಂದ “ಆದರೆ ನನಗೆ ಕಾಫಿ ಮಾಡೋಕೆ ಬರಲ್ಲ,” ಎಂದ.

ಕವಿತಾ ನಗುತ್ತಾ, “ಪರವಾಗಿಲ್ಲ, ನಾನು ಹೇಳ್ತೀನಿ, ನೀವು ಮಾಡಿ,” ಎಂದಳು.

ಪ್ರವೀಣ್‌ ಆ ನಗುವಿಗಾಗಿ ಏನು ಬೇಕಾದರೂ ಮಾಡೋಕೆ ಸಿದ್ಧನಿದ್ದ. ಅವನು ಮಾಡಿದ ಕಾಫಿ ತುಂಬಾ ಲೈಟ್‌ ಆಗಿತ್ತು. ಆದರೂ ಅವಳಿಗಾಗಿ ಬಹಳ ಪ್ರೀತಿಯಿಂದ ಮಾಡಿದ್ದ. ಅದನ್ನು ಕುಡಿದು ಕವಿತಾಳ ಆಯಾಸವೆಲ್ಲ ದೂರವಾಯಿತು. ನಂತರ ಪ್ರವೀಣ್‌ ಗೇಮ್ ರಿಮೋಟ್‌ ಎತ್ತಿಕೊಂಡಾಗ ಕವಿತಾ ಗೇಮ್ಸ್ ನ್ನು 2 ಪ್ಲೇಯರ್ಸ್‌ ಮೋಡ್‌ಗೆ ಸೆಟ್‌ ಮಾಡಿದ್ದನ್ನು ನೋಡಿದ. ಪ್ರವೀಣ್‌ ಅವಳನ್ನು ರೇಗಿಸುತ್ತಾ, “ನೀನು ಸೋಲ್ತಿಯಾ, ನಾನು ಈ ಗೇಮ್ನಲ್ಲಿ ಎಕ್ಸ್ ಪರ್ಟ್‌!” ಎಂದ.

ಆರಂಭದಲ್ಲಿ ಕವಿತಾ 2 ಗೇಮ್ ಸೋತಳು. ಮೂರನೆಯ ಗೇಮ್ನಲ್ಲಿ ಅವಳು ಪ್ರವೀಣ್‌ಗೆ ಟಾಂಗ್‌ ಕೊಟ್ಟಳು. ಒಂದರ ನಂತರ ಇನ್ನೊಂದು ಗೇಮ್ ಕ್ರಮ ಆರಂಭವಾಯಿತು. 9 ಗಂಟೆಯಾದಾಗ  ಊಟದ ಯೋಚನೆ ಬಂತು. ಕವಿತಾ ಕುಕ್ಕರ್‌ನಲ್ಲಿ ಅಕ್ಕಿ  ಬೇಳೆ ಹಾಕಿದಾಗ ಹಿಂದಿನಿಂದ ಪ್ರವೀಣ್‌ ಬಂದು, “ಹೆಲ್ಪ್ ಮಾಡ್ಲಾ?” ಎಂದ. ಕವಿತಾ ತರಕಾರಿಗಳನ್ನು ಕತ್ತರಿಸಲು ಕೊಟ್ಟಳು. ಅಂತೂ ಅಡುಗೆ ಸಿದ್ಧವಾಯಿತು. “ಬಹಳ ದಿನಗಳ ನಂತರ ಇವತ್ತಿನ ಸಂಜೆ ಚೆನ್ನಾಗಿ ಕಳೆಯಿತು,” ಎನ್ನುತ್ತಾ ಪ್ರವೀಣ್‌ ಕವಿತಾಳನ್ನು ತನ್ನತ್ತ ಎಳೆದುಕೊಂಡ.

ಕವಿತಾ ನಗುತ್ತಾ ಹೇಳಿದಳು, “ನಾಳೆ ನಿಮ್ಮ ಜ್ಯೂನಿಯರ್‌ ಹಾಗೂ ಅವರ ವೈಫ್‌ನ್ನು ಮಿಕ್ಸೆಡ್‌ ಡಬಲ್ಸ್ ಆಟಕ್ಕೆ ಕರೀರಿ.”

“ಆದರೆ ಅವರ ವೈಫ್ ಸ್ಟೇಟ್‌ ಲೆವೆಲ್‌ ಪ್ಲೇಯರ್‌. ನನ್ನ ಜ್ಯೂನಿಯರ್‌ಗೆ ಅವರೇ ಹೇಳಿಕೊಟ್ಟಿದ್ದು.”

“ನೀವು ಕರೀರೀ ಅವರನ್ನು, ಅವರು ಸ್ಟೇಟ್‌ ಲೆವೆಲ್‌ ಪ್ಲೇಯರ್‌ ಆಗಿದ್ರೆ ನಾನು ನ್ಯಾಶನಲ್ ಲೆವೆಲ್‌ ಪ್ಲೇಯರ್‌.”

ಪ್ರವೀಣ್‌ ಬೆಚ್ಚಿ ಹೇಳಿದ,“ನೀನು ಮೊದಲೇ ಯಾಕೆ ಹೇಳಲಿಲ್ಲ?”

“ನಿಮ್ಮ ಮೇಲ್‌ ಈಗೋಗೆ ಹರ್ಟ್‌ ಆಗಬಾರ್ದೂಂತ ಹೇಳಲಿಲ್ಲ,” ಕವಿತಾ ರೇಗಿಸುವಂತೆ ಹೇಳಿದಳು.

“ಅರೆ, ನೌ ವಿ ಆರ್‌ ಎ ಟೀಮ್……!  ನಮ್ಮಿಬ್ಬರ ಮಧ್ಯೆ ಈಗೋಗೆ ಜಾಗವಾದರೂ ಎಲ್ಲಿದೆ?” ಎನ್ನುತ್ತಾ ಪ್ರವೀಣ್‌ ಕವಿತಾಳನ್ನು ತನ್ನ ಬಾಹುಗಳಲ್ಲಿ ಬಿಗಿದಪ್ಪಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ