ತಮ್ಮ 94ರ ವಯಸ್ಸಿನಲ್ಲಿ ಆಸ್ಪತ್ರೆ ಸೇರಿ ತಿಂಗಳಾಗುವಷ್ಟರಲ್ಲಿ ಈಗಲೋ ಆಗಲೋ ಎಂಬಂತಾಗಿದ್ದ ರಾಮರಾಯರಿಗೆ ಹೆಂಡತಿ ಬಳಿ ಕೊನೆಯಾಸೆ ಹೇಳಿಕೊಳ್ಳಬೇಕೆನಿಸಿತು.

ರಾಯರು : ರಮಾ, ನಾನು ತೀರಿಕೊಂಡ ಮೇಲೆ ಅಂಗಡಿ ಪೂರ್ತಿ ಮೋಹನನಿಗೆ ಒಪ್ಪಿಸಿಬಿಡು.

ರಮಾ : ಮೋಹನ್‌ಗೆ ಯಾಕೆ? ಸಂತೋಷ್‌ ಅದನ್ನು ಇನ್ನೂ ಚೆನ್ನಾಗಿ ನೋಡಿಕೊಳ್ತಾನೆ.

ರಾಯರು : ಸರಿ ರಮಾ, ನನ್ನ ಕಾರನ್ನು ನನ್ನ ತಮ್ಮ ರಾಮುಗೆ ಕೊಟ್ಟುಬಿಡು.

ರಮಾ : ಅವನಿಗ್ಯಾಕೆ? ನನ್ನ ತಮ್ಮ ರಾಜೂಗೆ ಕೊಡ್ತೀನಿ ಬಿಡಿ.

ರಾಯರು : ಹೋಗಲಿಬಿಡು, ನಮ್ಮ ಈ ಮನೆಯ ಔಟ್‌ಹೌಸ್‌ನ್ನು ನಮ್ಮ ಆಳು ರಂಗನಿಗೆ ಕೊಟ್ಟುಬಿಡು.

ರಮಾ : ಅವನಿಗೆ ಯಾಕೆ….? ನಮ್ಮ ವಾಚ್‌ಮ್ಯಾನ್‌ ನಿಂಗನಿಗೆ ಕೊಡೋಣ.

ರಾಯರು : ಅದೆಲ್ಲ… ಸರಿ, ಒಂದು ವಿಷಯ ಹೇಳು. ಈಗ ಸಾಯುತ್ತಿರುವವರು ನಾನೋ ನೀನೋ?

ರಮಾ : ನೀವು ಯಾಕೆ… ಹ್ಞಾಂ ಹ್ಞಾಂ…. ನೀವೇ!

ಊಟ ಮಾಡುತ್ತಿದ್ದ ರತ್ನಮ್ಮ ಪತಿ ರಮಣಮೂರ್ತಿಗೆ, “ಏನ್ರಿ, ಅಡುಗೆಮನೆಯಿಂದ ಸ್ವಲ್ಪ ಉಪ್ಪಿನ ಡಬ್ಬಾ ತಂದುಕೊಡ್ತೀರಾ?” ಎಂದರು.

ರಮಣಮೂರ್ತಿ ಅಡುಗೆಮನೆಗೆ ಹೋಗಿ ಯಾವ ಶೆಲ್ಫ್ ನಲ್ಲಿ ಹುಡುಕಿದರೂ ಡಬ್ಬಾ ಸಿಗಲಿಲ್ಲ. “ಇಲ್ಲಿ ಡಬ್ಬಾನೇ ಇಲ್ವಲ್ಲೇ…?” ಎಂದು ಸುಸ್ತಾದರು.

ರತ್ನಮ್ಮ ಕುಳಿತಲ್ಲಿಂದಲೇ ಗುಡುಗಿದರು, “ಅಯ್ಯೋ ಬಡ್ಕೊಂಡ್ರು ನಿಮ್ಮ ಜಾಣತನಕ್ಕೆ… ಮಹಾ ಸೋಮಾರಿ, ನಿಮ್ಮ ಕೆಲಸಗಳ್ಳ ಬುದ್ಧಿ ನಂಗೊತ್ತಿಲ್ಲವೇ? ಇಡೀ ದಿನ ಕಾಡುಹರಟೆಯಲ್ಲೇ ಆಗೋಗುತ್ತೆ… ಯಾವ ಕೆಲಸವನ್ನೂ ನೆಟ್ಟಗೆ ಮಾಡಲು ಬರಲ್ಲ. ಮೊಬೈಲ್‌ನಲ್ಲಿ ಸದಾ ವಾಟ್ಸ್ಆ್ಯಪ್‌, ಫೇಸ್‌ಬುಕ್‌ ಅಂತ ಸಾಯೋದು.. ಮುಖಮೂತಿ ತಿಳಿಯವದರಿಗೆ ಗುಡ್‌ ಮಾರ್ನಿಂಗ್‌ ಮೆಸೇಜ್‌ ಕಳಿಸೋದು… ಈ ಹಾಳು ಕಾಟಗಳು ನಮ್ಮನ್ನು ಮುಂದೆ ಕೋರ್ಟಿಗೆ ಎಳೆಯುತ್ತವಷ್ಟೆ. ಫ್ರೆಂಡ್ಸ್ ಜೊತೆ ಅಲೆದಾಟ, ಕಂಡೋರಿಗೆ ಲೈನ್‌ ಹೊಡೆಯೋದು… ಇದೇ ಆಗ್ಹೋಯ್ತು. ಹಾಳಾಗೋಗಲಿ, ಇಲ್ಲೇ ಬಂದು ಊಟ ಮಾಡಿ. ನೀವು ಹೀಗೆ ಮಾಡ್ತೀರಿ ಅಂತಾನೇ ಮೊದಲೇ ಉಪ್ಪಿನ ಡಬ್ಬ ತಂದಿಟ್ಟಿದ್ದೆ.

”ಪತಿಪತ್ನಿ ಇಬ್ಬರಲ್ಲೂ ಕೊನೆ ಮೊದಲು ಇಲ್ಲದಂತೆ ವಾದವಿವಾದ ಶುರುವಾಗಿತ್ತು. ಇಡೀ ದಿನ ಕಳೆದರೂ ವಾದಕ್ಕೆ ಅಂತ್ಯ ಕಾಣಲಿಲ್ಲ. ಕೊನೆಗೆ ಹೆಂಡತಿ ಹೇಳಿದಳು, “ನೀವೀಗ ವಾದದಲ್ಲಿ ಗೆಲ್ಲುವುದು ಮುಖ್ಯವೋ… ನೆಮ್ಮದಿಯಾಗಿ ಇರುವುದೋ?” ಅಲ್ಲಿಗೆ ವಾದ ಮುಗಿಯಿತು!

ಅಜಯ್‌ : ನಿನ್ನೆ ರಾತ್ರಿ ಏನಾಯ್ತು ಗೊತ್ತಾ? ಗುಂಡು ಪಾರ್ಟಿ ಮುಗಿಸಿ ಬಹಳ ತಡವಾಗಿ ಮನೆ ತಲುಪುಷ್ಟರಲ್ಲಿ 12 ಗಂಟೆ ದಾಟಿತ್ತು. ಮನೆಗೆ ಬಂದು ಬೆಲ್ ಬಾರಿಸಿ ಎಷ್ಟು ಹೊತ್ತು ಕಾದರೂ ಹೆಂಡತಿ ಬಂದು ಬಾಗಿಲು ತೆರೆಯುವುದು ಬೇಡವೇ? ಕೊನೆಗೆ ಹೊರಗಿನ ಜಗುಲಿ ಮೇಲೆ ಮಲಗಿ ಇಡೀ ರಾತ್ರಿ ಕಳೆಯಬೇಕಾಯ್ತು.

ವಿಜಯ್‌ : ಛೇ….ಛೇ ! ಬೆಳಗ್ಗೆ ಎದ್ದು ಹೆಂಡತಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡೆ ತಾನೇ?

ಅಜಯ್‌ : ಏ…. ವಿಷಯ ಅದಲ್ಲ. ಅವಳು ನಿನ್ನೆ ಬೆಳಗ್ಗೆ ತವರಿಗೆಂದು ಶಿವಮೊಗ್ಗಕ್ಕೆ ಹೊರಟಿದ್ದಳು. ಮನೆ ಬೀಗದ ಕೈ ನನ್ನ ಜೇಬಿನಲ್ಲೇ ಇತ್ತು. ಹೆಂಡತಿ ತವರಿಗೆ ಹೋದಳೆಂಬ ಖುಷಿಯಲ್ಲಿ ಪಾರ್ಟಿಗೆ ಹೋಗಿ ಗುಂಡು ಹಾಕಿದವನಿಗೆ ಅವಳು ಹೋದದ್ದೇ ಮರೆತು ಹೋಗಬೇಕೇ…..?

ಲೀಲಾ ಮಧ್ಯಾಹ್ನ 3 ಗಂಟೆಗೆ ಗಂಡನ ಆಫೀಸಿಗೆ ಫೋನ್‌ ಮಾಡಿ ಕೇಳಿದಳು, “ಇವತ್ತು ಡಬ್ಬಿ ಕಳುಹಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಏನು ತಿಂದಿರಿ?”

“ಏನೋ ಒಂದು ತಿಂದೆ ಮಾರಾಯ್ತಿ! ಈ ತಿಂಡಿ, ಊಟ, ಡ್ರೆಸ್ಸು, ಒಡವೆ, ಸೀರಿಯಲ್, ಸಿನಿಮಾ…. ಇವನ್ನು ಬಿಟ್ಟರೆ ಬೇರೇನೂ ಕೇಳಕ್ಕೆ ಬರಲ್ವೇ ನಿನಗೆ?” ಎಂದು ಪತಿರಾಯ ಸಿಡುಕಿದ.

ಲೀಲಾ ಹೇಳಿದಳು, “ಸಾರಿ… ಹಾಗಿದ್ರೆ ಇದನ್ನು ಹೇಳಿ. ದಿನೇ ದಿನೇ ಕುಸಿಯುತ್ತಿರುವ ಭಾರತೀಯ ರೂಪಾಯಿಯ ಮೌಲ್ಯ ಉಳಿಸಿಕೊಳ್ಳಲು ಹಣಕಾಸು ಸಚಿವಾಲಯ ಯಾವ ಕ್ರಮ ಕೈಗೊಳ್ಳಬೇಕು? ಕಾಶ್ಮೀರ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಕೇಂದ್ರ ಗೃಹ ಸಚಿವರು ಏನು ಮಾಡಬೇಕು? ನೋಟು ರದ್ದು ಮಾಡಿಯೂ ಕಾಳಧನ ಲೂಟಿಕೋರರನ್ನು ಸಂಪೂರ್ಣ ಕೈದು ಮಾಡಲಾಗದ ಮೋದಿಯವರಿಗೆ ನಿಮ್ಮ ಅಮೂಲ್ಯ ಸಲಹೆಗಳು…”

“ಅದೂ…. ನಮ್ಮ  ಕ್ಯಾಂಟೀನ್‌ನಲ್ಲಿ ಇವತ್ತು ಅನ್ನ ಸಾಂಬಾರ್‌ ಜೊತೆ ಎಲೆಕೋಸು ಪಲ್ಯ, ಕ್ಯಾರೆಟ್‌ ಕೋಸಂಬರಿ ಮಾಡಿದ್ರು…..”

ಕೊರೆಯುವ ಚಳಿಯಲ್ಲಿ ನಡುಗುತ್ತಾ ಹೊರಟಿದ್ದ ಮಹಿಳೆಯರ ಗುಂಪನ್ನು ಕಂಡು ಯಾರೋ ಪಾಪ, ಅವರಿಗೆ ಕಂಬಳಿ ನೀಡಲು ಬಂದರಂತೆ. ಇದರಿಂದ ಕೋಪಗೊಂಡ ಆ ಮಹಿಳೆಯರು, “ಛೀ…ಛೀ! ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ! ನಮ್ಮನ್ನು ಬೀದಿಗೆ ಬಿದ್ದ ಗತಿಗೆಟ್ಟವರು ಅಂದುಕೊಂಡಿರಾ? ನಾವೆಲ್ಲರೂ ಮದುವೆಗೆ ಹೊರಟಿದ್ದೇವೆ!” ಎಂದು ಹೊರಡಿಸುವುದೇ?

ಸುಮಿತ್ರಾ ಇಯರ್ ಸ್ಪೆಷಲಿಸ್ಟ್ ಬಳಿ ಹೋದವಳೇ ಗಂಡನ ಬಗ್ಗೆ ವಿವರ ತಿಳಿಸಿದಳು.

ಸುಮಿತ್ರಾ : ಡಾಕ್ಟರ್‌, ನಮ್ಮ ಯಜಮಾನರು ತುಸು ಕಿವುಡಾಗಿದ್ದಾರೆ ಅನ್ಸುತ್ತೆ. ನಾನು ಅಡುಗೆ ಮನೆಯಿಂದ ಎಷ್ಟು ಕೂಗಿ ಹೇಳಿದರೂ ಹಾಲ್ನಲ್ಲಿರುವ ಅವರಿಗೆ ಕೇಳಿಸೋಲ್ಲ. ಇನ್ನು ರೂಮಿಗೆ ಹೋಗಿಬಿಟ್ಟರಂತೂ ದೇವರೇ ಗತಿ.

ಡಾಕ್ಟರ್‌ : ನೀವು ಅವರನ್ನು ಇಲ್ಲಿಗೆ ಕರೆತನ್ನಿ.

ಸುಮಿತ್ರಾ : ಬೇಡಿ ಡಾಕ್ಟರ್‌, ನಾನು ಅವರನ್ನು ಬಹಳ ಪ್ರೇಮಿಸುತ್ತೇನೆ. ಅವರಿಗೆ ಒಂದು ನ್ಯೂನತೆ ಇರುವುದು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನೀವು ಯಾವುದಾದರೂ ಔಷಧಿ ಮಾತ್ರ ಕೊಡಿ. ಅವರಿಗೆ ತಿಳಿಯದಂತೆ ಆಹಾರದಲ್ಲಿ ಬೆರೆಸಿ ಕೊಡುತ್ತೇನೆ. ಸಹಜವಾಗಿ ಅವರಿಗೆ ಕಿವುಡುತನ ಗುಣವಾಗಲಿ.

ಡಾಕ್ಟರ್‌ : ಸರಿ, ಹಾಗಿದ್ದರೆ ನೀವು ಅವರಿಗೊಂದು ಪರೀಕ್ಷೆ ಕೊಡಿ. ಮೊದಲು 40 ಅಡಿ ದೂರದಿಂದ `ಹೌ ಆರ್‌ ಯೂ’ ಅಂತ ಕೇಳಿ. ಉತ್ತರ ಬರದಿದ್ದರೆ 30 ಅಡಿ ದೂರದಿಂದ ಕೇಳಿ. ಆಗಲೂ ಉತ್ತರ ಇಲ್ಲದಿದ್ದರೆ 20 ಅಡಿ, ಅದಕ್ಕೂ ಕೇಳಿಸದಿದ್ದರೆ 10 ಅಡಿಯಿಂದ ಪ್ರಯತ್ನಿಸಿ. ನಂತರ ಬಂದು ಎಷ್ಟು ಅಡಿಗಳಿಂದ ಅವರು ಉತ್ತರ ಕೊಟ್ಟರೆಂದು ನನಗೆ ತಿಳಿಸಿ. ಅದಕ್ಕೆ ತಕ್ಕಂತೆ ಔಷಧಿಯ ಡೋಸೇಜ್‌ ಬದಲಿಸಿ ಕೊಡುತ್ತೇನೆ.

ಸುಮಿತ್ರಾ ಹಾಗೆಯೇ ಆಗಲೆಂದು ಮನೆಗೆ ಬಂದಲಳೇ ಹಾಲ್ ನ‌ಲ್ಲಿ ಪೇಪರ್‌ ಓದುತ್ತಿದ್ದ ಪತಿ ಬಳಿ 40 ಅಡಿ ದೂರದಿಂದ, `ರಾತ್ರಿಗೆ ಏನು ಅಡುಗೆ ಮಾಡಲಿ?’ ಎಂದು ಕೇಳಿದಳು. ಉತ್ತರ ಬರದಿದ್ದಾಗ 30 ಅಡಿ, 20, ಕೊನೆಗೆ 10 ಅಡಿಗೆ ಬಂದು ಅದೇ ಪ್ರಶ್ನೆ ಕೇಳದಳು. ಆಗಲೂ ಮೌನವೇ ಉತ್ತರ. ಕೊನೆಗೆ ಅವರ ಕಿವಿ ಹತ್ತಿರ ಬಂದು, “ರಾತ್ರಿ ಏನಡಿಗೆ ಮಾಡ್ಲಿ?” ಎಂದು ಜೋರಾಗಿ ಕಿರುಚಿದಳು.

“ನಿನ್ನ ಕಿವುಡುತನಕ್ಕೆ ಬಡ್ಕೊಂಡ್ರು! ಆಗ್ಲಿಂದ ಇದೇ ಪ್ರಶ್ನೆಗೆ ಚಿತ್ರಾನ್ನ ಮಾಡು ಸಾಕು ಅಂತ 5 ಸಲ ಹೇಳಿದ್ದೇನೆ!” ಎಂದಾಗ ಲೀಲಾ ತಾನೇ ಚಿಕಿತ್ಸೆ ಪಡೆಯಬೇಕೇ ಅಂತ ತಲೆ ಚಚ್ಚಿಕೊಂಡಳು.

ಎಲ್ಲರೂ ಹೀಗೆ ಆಗುತ್ತಿದ್ದರೆ ಹೃದಯವಂತರೆಲ್ಲ ಹೃದಯಹೀನರಾಗಬೇಕು. ಹೃದಯವೇ ಇಲ್ಲದಿದ್ದ ಮೇಲೆ ವಿಶಾಲ ಹೃದಯಿಗಳಾಗಲು ಸಾಧ್ಯವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ