ಕಥೆ – ಅಮುದಾ
ಕಿಲಕಿಲ ನಗು, ಹರಟೆ, ಕೇಕೆಗಳಿಂದ ಮಧ್ಯಾಹ್ನ ಗಡದ್ದಾಗಿ ಉಂಡು, ನಿದ್ದೆಗೆ ಜಾರಿದ್ದ ಗೌತಮನಿಗೆ ಪಟಕ್ಕನೆ ಎಚ್ಚರವಾಯಿತು. ಅಂದು ಭಾನುವಾರ ಬೇರೆ. ಯಾರಾದರೂ ನೆಂಟರು ಉದಯವಾದರೇನೋ ಎಂದುಕೊಳ್ಳುತ್ತಾ, ಕಣ್ಣು ತಿಕ್ಕುತ್ತಾ ರೂಮಿನಿಂದ ಹೊರಗೆ ಬಂದು ಕೆಳಗೆ ಬಗ್ಗಿ ನೋಡಿದನು.
ಹಜಾರದಲ್ಲಿ ಯಾರೋ ನಾಲ್ಕು ಜನ ಹುಡುಗಿಯರು, ಅಮ್ಮ ಮತ್ತು ತಂಗಿ ಇಂಚರಾ ಎಲ್ಲರೂ ಕೂಡಿ ಕುಳಿತು ಹರಟೆ ಹೊಡೆಯುತ್ತಿದ್ದರು.
ಬಹುಶಃ ಅವರೆಲ್ಲ ಇಂಚರಾಳ ಗೆಳತಿಯರು ಇರಬಹುದು. `ಆಕೆಗೆ ಒಂದಿಷ್ಟಾದರೂ ಪ್ರಜ್ಞೆ ಬೇಡ್ವಾ? ಅಣ್ಣ ಮಲಗಿದ್ದಾನೆ. ಬಾಯಿ ತುಸು ಕಮ್ಮಿ ಮಾಡ್ಬೇಕು ಅಂತ!’ ಎಂದು ಮನದಲ್ಲೇ ಬೈಯ್ದುಕೊಂಡ.
ಡಿಗ್ರಿ ಕ್ಲಾಸಿನ ಇಂಚರಾಗೆ ಅಣ್ಣನನ್ನು ರೇಗಿಸುವುದು, ಕೆಣಕುವುದು ಎಂದರೆ ಬಲು ಹಿಗ್ಗು! ಅವಳು ಹಾಗೆಲ್ಲ ಯೋಚನೆ ಮಾಡ್ತಾಳಾ?! ಇವಳೂ ಒಬ್ಬ ತಂಗೀನೇ… ಎಂದುಕೊಳ್ಳುತ್ತಾ ಕೆಳಗೆ ಕೂತವರನ್ನು ಒಂದು ಕ್ಷಣ ದಿಟ್ಟಿಸಿದ. ಅದರಲ್ಲಿ ಒಬ್ಬ ಯುವತಿ ಅವನನ್ನು ತೀವ್ರವಾಗಿ ಸೆಳೆದಳು.
ಏನು ಚೆಲುವೆ! ಅಬ್ಬಾ ಆಕೆಯ ಬಣ್ಣ ಇನ್ನೂ ಎದ್ದು ಕಾಣುವಂತೆ ನೀಲಿ ಬಣ್ಣದ ಕೊರಳು ಪೂರ್ತಿ ಕವರಾದ ಹೈನೆಕ್ ಕಾಲರ್ ಇರುವಂಥ ಚೂಡಿದಾರ್ ಹಾಕಿದ್ದಳು. ಆಕೆ ನಕ್ಕರೆ ಬೆಳ್ಳನೆ ಮುಖದ ತುಂಬಾ ಕೆಂಗುಲಾಬಿ ಅರಳುತ್ತಿತ್ತು. ಅವಳ ಪಾದಗಳು ಎಷ್ಟು ಸುಂದರ! ಕೆಳಗೆ ನೆಲಕ್ಕೆ ಊರಿದ್ದ ಒತ್ತಡಕ್ಕೆ ಸುತ್ತಲೂ ಕೆಂಪಾದ ಬಣ್ಣಬಂದಿತ್ತು. ಆಕೆಯ ಕಡುಗಪ್ಪಾದ ಕೂದಲನ್ನು ಕ್ಲಿಪ್ ಒಂದರಲ್ಲಿ ಬಲವಂತವಾಗಿ ಬಂಧಿಸಲಾಗಿತ್ತು. ಹಣೆಯ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳಿಗೆ ಅವನು ಪೂರ್ತಿ ತನ್ಮಯನಾಗಿ ಹೋದ!
ನಾಲ್ಕೈದು ಮೆಟ್ಟಿಲು ಹತ್ತಿದರೆ ಮೇಲಿನ ಕೋಣೆ, ಅದರ ಹೊರಗೆ ಇರುವ ಕಟಾಂಜನದ ಹತ್ತಿರ ನಿಂತು ನೋಡಿದರೆ ಕೆಳಗೆಲ್ಲ ಸ್ಪಷ್ಟವಾಗಿಯೇ ಕಾಣುತ್ತಿತ್ತು. ಅಷ್ಟರಲ್ಲಿ ಅಲ್ಲೊಬ್ಬಳು ಯುವತಿ ಮೇಲೆ ದೃಷ್ಟಿ ಹಾಯಿಸಿದಳು.
ಹೀಗೆ ನಿಂತು ನೋಡುವುದು ತಪ್ಪಾಗುತ್ತದೆ ಎಂದುಕೊಂಡ ಗೌತಮ್ ಮತ್ತೆ ರೂಮಿನೊಳಗೆ ಹೋಗಿ ಲ್ಯಾಪ್‌ಟಾಪ್ ನೋಡುತ್ತಾ ಕುಳಿತ.
ಸರಿಯಾಗಿ ಒಂದು ಗಂಟೆಗೆಲ್ಲ ಗಲಾಟೆ ಶಾಂತವಾಯಿತು. ಅವರೆಲ್ಲ ಹೋದರೆಂದು ಗೊತ್ತು ಮಾಡಿಕೊಂಡ ಗೌತಮ್ ಕೆಳಗೆ ಹಜಾರಕ್ಕೆ ಇಳಿದುಬಂದ. ಅವನು ಬಂದ ಸದ್ದಿಗೆ ಅಮ್ಮ ಕಾಫಿ ತಂದುಕೊಟ್ಟಳು.
ಅವನ ಕಣ್ಣುಗಳು ಇಂಚರಾಳನ್ನು ಹುಡುಕುತ್ತಿತ್ತು, “ಎಲ್ಲಿ ಅವಳು?” ಅಂದವನಿಗೆ, “ಗೆಳತಿಯರನ್ನು ಆ ಕೊನೆ ತನಕ ಬಿಟ್ಟುಬರಲು ಹೋಗಿದ್ದಾಳೆ,” ಎಂದು ಅಮ್ಮನಿಂದ ತಿಳಿಯಿತು.
“ಮನೆಯಲ್ಲಿ ಇದುವರೆಗೆ ಕೂತು ಹರಟಿದ್ದು ಸಾಕಾಗ್ಲಿಲ್ಲವೇನೋ…?” ಎಂದು ಕಿಚಾಯಿಸಿದ.
“ಇರಲಿ ಬಿಡೋ. ಮದುವೆಯಾಗಿ ಹೋದ ಮೇಲೆ ಹೀಗೆಲ್ಲ ಇರೋಕಾಗುತ್ತಾ?” ಎನ್ನುತ್ತಾ ಒಳಗೆ ಹೋದರು ಅಮ್ಮ.
ಸಾಫ್ಟ್ ವೇರ್ ಎಂಜಿನಿಯರ್ ಆದ ಗೌತಮನಿಗೆ ಕೆಲಸ ಸಿಕ್ಕು ಎರಡು ವರ್ಷಗಳಾಗಿತ್ತು. ಈಗ ಅವನಿಗೆ ಹೆಣ್ಣು ನೋಡಲು ಶುರು ಮಾಡಿದ್ದರು.
ಅಷ್ಟರಲ್ಲಿ ಒಳಗೆ ಬಂದ ತಂಗಿಗೆ, “ಏನೇ ನೀನು! ಅಣ್ಣ ಅನ್ನೋ ಕಾಳಜಿ ಒಂದಿಷ್ಟಾದರೂ ಇದೆಯಾ? ನಿದ್ದೆ ಮಾಡ್ತಿದ್ದಾನೆ. ಡಿಸ್ಟರ್ಬ್ ಮಾಡ್ಬಾರ್ದು ಅನ್ನೋದು ಗೊತ್ತಾಗಲ್ವಾ?”
“ಆಹಾಹಾ….! ಏನು ನಿದ್ದೆ ಮಾಡೋದು? ರಾತ್ರಿಯೆಲ್ಲಾ ಗಸ್ತು ತಿರುಗೋಕೆ ಹೋಗ್ತೀಯಾ?”
“ಯಾರೇ ಅದು ಅಷ್ಟು ಜನ ಬಂದಿದ್ರು?”
“ಮತ್ತ್ಯಾರು? ನನ್ನ ಗೆಳತಿಯರು. ಅದರಲ್ಲಿ ಒಬ್ಬಳು ನನ್ನ ಜೂನಿಯರ್, ಪಿಯುಸಿ ಓದ್ತಿದ್ದಾಳೆ.”
ಗೌತಮ್ ಸುಮ್ಮನಾದ. ಮನದಲ್ಲೇ ಯೋಚಿಸಿದ. ತನಗೆ ಚಂದ ಕಂಡ ಯುವತಿ ಇವಳ ಕ್ಲಾಸ್‌ಮೇಟಾ? ಅಥವಾ ಜ್ಯೂನಿಯರ್ರಾ? ಅದನ್ನೇನಾದರೂ ಇವಳ ಬಳಿ ಕೇಳಿದರೆ, ಅದನ್ನೇ ರೇಗಿಸೋಕೆ ವಸ್ತು ಮಾಡಿಕೊಂಡು ಅಪ್ಪ ಅಮ್ಮನ ಮುಂದೆ ಲೇವಡಿ ಮಾಡುತ್ತಾಳೆ ಎಂದುಕೊಂಡು ಸುಮ್ಮನಾದ.
ಆ ಹುಡುಗಿಯನ್ನು ನೋಡಿದಾಗಿನಿಂದ ಗೌತಮನಿಗೆ ಅವಳ ಬಗ್ಗೆ ಕ್ರೇಝ್ ಆಗಿಬಿಟ್ಟಿತು. ಬರೀ ಅವಳದೇ ಧ್ಯಾನ! ಒಮ್ಮೆ ತಡೆಯದೆ ತಂಗಿಯನ್ನು ಕೇಳಿಯೇಬಿಟ್ಟ.
“ಏನೇ ಆ ನೀಲಿ ಬಣ್ಣದ ಚೂಡಿದಾರ್ ಹಾಕಿದ್ಲಲ್ಲ ಅವಳ್ಯಾರೇ? ನಿನ್ನ ಕ್ಲಾಸ್‌ಮೇಟಾ ಇಲ್ಲಾ ಜ್ಯೂನಿಯರಾ?” ಆಫೀಸಿನಲ್ಲಿ, ಮನೆಯಲ್ಲಿ ಸದಾ ಅವಳದೇ ಧ್ಯಾನ ಮಾಡುತ್ತಿದ್ದ.
“ನೀನು ಯಾರನ್ನು ಕೇಳ್ತಿದೀಯೋ ಏನೋ? ಅವರೆಲ್ಲಾ ಯಾವಯಾವ ಕಲರ್ ಬಟ್ಟೆ ಹಾಕಿದ್ರು ಅಂತ ನಂಗಂತೂ ನೆನಪಾಗ್ತಿಲ್ಲಪ್ಪ….!” ಎಂದು ಒಂದು ಕ್ಷಣ ಸುಮ್ಮನಾಗಿ, “ನೋಡೋ, ನನ್ನ ಫ್ರೆಂಡ್ಸ್ ಗೆಲ್ಲಾ ನೀನು ಕಾಳು ಹಾಕಕ್ಕೆ ಬರಬೇಡ. ನೀನು ಸುರಸುಂದರಾಂಗ ಎಂದು ಅವರೂ ನಿನ್ನ ಮೆಚ್ಚುಗೆಯಿಂದ ನೋಡ್ತಾರೆ… ಹಾಗಂತ ನೀನು ಗಾಳೀಲಿ ಹಾರಕ್ಕೆ ಹೋಗ್ಬೇಡ….” ಎಂದು ರೇಗಿಸಿದಳು.
ಗೌತಮ್ ತನ್ನ ಪಟ್ಟುಬಿಡಲಿಲ್ಲ, “ಅದೇ ಕಣೇ! ಅವತ್ತು ಭಾನುವಾರ ಬಂದಿದ್ರಲ್ಲ, ನಿಮ್ಮ ಗೆಳತಿಯರದೆಲ್ಲಾ ಮದುವೆಯಾಗಿದೆಯಾ? ಯಾಕೆಂದರೆ… ನಿಂದು ಇನ್ನೂ ಆಗಿಲ್ವಲ್ಲಾ…. ನಿನ್ನ ಮದುವೆನೂ ಬೇಗ ಮಾಡ್ಬೇಕಲ್ಲ! ಅದಕ್ಕೆ ಕೇಳ್ದೆ…. ನೀನು ಸುಮ್ನೆ ಏನೇನೋ ಕಲ್ಪಿಸಿಕೊಳ್ಳಬೇಡ.”
“ಓ…! ಯಾವುದೋ ಅಯಸ್ಕಾಂತಕ್ಕೆ ನೀನು ಕಬ್ಬಿಣ ಆಗಿದ್ದೀಯಾ…?! ಹೆಸರಿಗೆ ನನ್ನ ಕಾಳಜಿ…. ಆಯ್ತಪ್ಪಾ ಅವರು ಯಾರಿಗೂ ಇನ್ನೂ ಮದುವೆ ಆಗಿಲ್ಲ. ನಿಂಗೆ ಯಾರಾದ್ರೂ ಇಷ್ಟ ಆಗಿದ್ರೆ ಹೇಳು. ನಾನು ಸೇತುವೆ ಆಗ್ತೀನಿ. ಅವರನ್ನೇ ಮದುವೆ ಆಗು. ನನ್ನ ಗೆಳತೀನೇ ನನಗೆ ಅತ್ತಿಗೆಯಾಗಿ ಬರ್ತಾಳೇ ಅಂದ್ರೆ….. ಅದೂ ಒಂದು ಭಾಗ್ಯ ತಾನೆ…!” ಎಂದಳು ಜೋರಾಗಿ ನಗುತ್ತಾ.
“ಏಯ್….. ಶ್….! ಮೆಲ್ಲಗೆ ಮಾತಾಡು. ಅಪ್ಪ ಅಮ್ಮ ಕೇಳಿಸಿಕೊಂಡು ಬಿಟ್ಟಾರು,” ಎಂದವನಿಗೆ,
“ಹಾಗಾದರೆ ಮನೆಯಲ್ಲಿ ನೋಡೋ ಹುಡುಗಿಗೆ ಗಂಭೀರವಾಗಿ ತಾಳಿಕಟ್ಟು,” ಎಂದಳು ಮತ್ತೆ ನಗುತ್ತಾ.
ಇಂಚರಾ ಯಾವ ಮಾಹಿತಿಯನ್ನೂ ಅಷ್ಟು ಸುಲಭವಾಗಿ ಕೊಡುವವಳಲ್ಲ. ಅವಳಿಗೆ ಟ್ರೀಟ್ ಕೊಡ್ಬೇಕು, ಮಸ್ಕಾ ಹೊಡೀಬೇಕು, ಗಿಫ್ಟ್ ಕೊಡಬೇಕು. ಸ್ವಲ್ಪ ದುಬಾರಿನೇ…. ಆದರೂ ಅವಳನ್ನು ಕೇಳಲೇಬೇಕು… ಹೇಗಾದರೂ ಮಾಡಿ ಆ ಹುಡುಗಿಯ ಬಗ್ಗೆ…. ತಿಳಿದುಕೊಳ್ಳಬೇಕೆಂದುಕೊಂಡ.
ಗೌತಮ್ ಮನೆಯಲ್ಲಿದ್ದಾಗ, ಮನೆಯ ಕರೆಗಂಟೆ ಶಬ್ದವಾದರೆ ಸಾಕು `ಅವಳೇ ಬಂದಳೇನೋ,’ ಎಂದು ಕುತೂಹಲದಿಂದ ನೋಡುತ್ತ ನಿರಾಶನಾಗುತ್ತಿದ್ದ.
ಈಗೀಗ ಗೌತಮ್, ಇಂಚರಾ ಕೇಳದೇ ಇದ್ದರೂ ಅವಳ ಕಾಲೇಜಿಗೆ ಡ್ರಾಪ್ ಕೊಡುತ್ತಾನೆ. ಕೆಲವೊಮ್ಮೆ ಅವನು ಫ್ರೀಯಾಗಿದ್ದರೆ ಅವಳು ಮನೆಗೆ ಬರುವ ಸಮಯ ಕೇಳಿ, ಕರೆದುಕೊಂಡು ಬರಲೂ ಹೋಗುತ್ತಾನೆ. ಅಣ್ಣನ ದಿಢೀರ್ ಹೆಚ್ಚಿನ ಕಾಳಜಿಗಾಗಿ ಇಂಚರಾ ಬೆರಗಾದಳು. ಅವನನ್ನು ರೇಗಿಸಲು ಬೇಕಾದಷ್ಟು ಅವಕಾಶಗಳು ಅವಳಿಗೆ ಸಿಗತೊಡಗಿದವು. ಆದರೆ ಆ ಹುಡುಗಿಯನ್ನು ನೋಡಲು ಚಾತಕಪಕ್ಷಿಯಂತೆ ಕಾಯುತ್ತಿದ್ದ ಗೌತಮನಿಗೆ ಮಾತ್ರ ಮತ್ತೊಮ್ಮೆ ಅವಳ ದರ್ಶನವಾಗಲೇ ಇಲ್ಲ!
ಆಫೀಸಿನಲ್ಲಾಗಲಿ ಅಥವಾ ಮನೆಯಲ್ಲಿ ಏನಾದರೂ ಮೂಡ್ ಕೆಟ್ಟು ಟೆನ್ಶನ್ ಆದಾಗ ಗೌತಮ್ ಆ ಹುಡುಗಿಯನ್ನು ನೆನಪು ಮಾಡಿಕೊಳ್ಳುತ್ತಿದ್ದ. ಮನಸ್ಸು ಚಮತ್ಕಾರಿಕವಾಗಿ ಮೃದುವಾಗುತ್ತಿತ್ತು. ಉತ್ಸಾಹ ಬರುತ್ತಿತ್ತು. ಮಧುರ ಭಾವನೆಗಳಿಂದ ರೋಮಾಂಚಿತನಾಗುತ್ತಿದ್ದ. ಅವನಿಗೆ ಅಷ್ಟೊಂದು ಕ್ರೇಜ್ ಆಗಿಬಿಟ್ಟಿತ್ತು.
ಈಗೀಗ ಅವನು ಕನ್ನಡಿ ಮುಂದೆ ಹೆಚ್ಚು ಹೊತ್ತು ನಿಲ್ಲುತ್ತಿದ್ದ. ಪ್ಯಾಂಟ್ ಶರ್ಟ್ ಆರಿಸಿ ಆರಿಸಿ ತೊಡುತ್ತಿದ್ದ. ಡಿಯೋ ಸಿಂಪಡಿಸಿಕೊಂಡು, ಎಲ್ಲಾ ಕೋನದಲ್ಲಿಯೂ ತನ್ನನ್ನು ಮತ್ತೊಮ್ಮೆ ಕನ್ನಡಿಯಲ್ಲಿ ಪರಿಶೀಲಿಸಿಕೊಂಡು ರೂಮಿನಿಂದ ಹೊರಬರುತ್ತಿದ್ದ.
ಕೆಲವು ದಿನಗಳಿಂದ ಅವನಲ್ಲಾದ ಬದಲಾವಣೆಗಳನ್ನು ಗಮನಿಸುತ್ತಿದ್ದ ಇಂಚರಾ, “ಅಣ್ಣಾ! ಇನ್ನು ಸಾಕು ನಾಟಕ, ನಿನ್ನ ಮನಸ್ಸು ಕದ್ದ ಆ ಚೆಲುವೆ ಯಾರು?” ಎಂದು ಕೇಳಿಯೇಬಿಟ್ಟಳು.
“ಅದನ್ನು ನೀನೇ ಹೇಳಬೇಕು! ನನಗೇನು ಗೊತ್ತು?!” ಎಂದ ಅವನ ಮಾತನ್ನು ತಮಾಷೆ ಎಂದುಕೊಂಡು ನಗುತ್ತಾ ಹೋದಳು.
ಗೌತಮ್, `ಇನ್ನು ತಡಮಾಡೋದು ಬೇಡ, ಬರುವ ಭಾನುವಾರ ಇಂಚರಾಳನ್ನು ಕೂರಿಸಿಕೊಂಡು ಆ ಹುಡುಗಿಯ ಬಗ್ಗೆ ಗಂಭೀರವಾಗಿ ಕೇಳಿಯೇ ಬಿಡಬೇಕು. ಎಲ್ಲಾ ಹೊಂದಿಕೆಯಾದರೆ ಆ ಹುಡುಗಿಯನ್ನೇ ಯಾಕೆ ಮದುವೆಯಾಗಬಾರದು?’ ಎಂದು ಮನಸ್ಸಿನಲ್ಲಿ ಒಂದು ಮುನ್ನುಡಿ ಬರೆದುಬಿಟ್ಟ.
ಅಂದು ಭಾನುವಾರ ಗೆಳತಿ ಮನೆಗೆ ಹೋಗಿದ್ದ ಇಂಚರಾಳನ್ನು ಕಾಯುತ್ತಿದ್ದ ಗೌತಮ್.
ಸಂಜೆ ನಾಲ್ಕು ಗಂಟೆಯಾಗಿತ್ತು. ಕರೆಗಂಟೆ ಸದ್ದಾಯಿತು. ರೂಮಿನಲ್ಲಿದ್ದ ಗೌತಮನ ಚುರುಕಾದ ಕಿವಿಗಳು ನೆಟ್ಟಗಾದವು. ತಕ್ಷಣ ಹೊರಗೆ ಬಂದು ಕೆಳಗೆ ಬಾಗಿಲ ಕಡೆ ನೋಡತೊಡಗಿದ. ಅಮ್ಮ ಬಾಗಿಲು ತೆಗೆದರು….ಒಳಗೆ ಬಂದ ವ್ಯಕ್ತಿಯನ್ನು ನೋಡಿದ ಗೌತಮನಿಗೆ ತನ್ನ ಕಣ್ಣನ್ನು ತಾನೇ ನಂಬಲಾಗುತ್ತಿಲ್ಲ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು. ಅವಳು ಬೇರೆ ಯಾರೂ ಅಲ್ಲ, ಅದೇ ಚೆಲುವೆಯಾಗಿದ್ದಳು. ಜೊತೆಗೆ ಇನ್ನೊಬ್ಬ ಹುಡುಗಿಯೂ ಇದ್ದಳು.
ಅವರ ಮಾತುಗಳನ್ನು ಗೌತಮ್ ಮರೆಯಲ್ಲಿ ನಿಂತು ಕೇಳಿಸಿಕೊಳ್ಳತೊಡಗಿದ. ಅಷ್ಟರಲ್ಲಿ ಇಂಚರಾ ಬಂದಳು.
“ಓ…. ಆಶಾ, ಯಾವಾಗ ಬಂದ್ರಿ?” ಎನ್ನುತ್ತಾ ಇಬ್ಬರನ್ನೂ ಮಾತಾಡಿಸಿ ಆ ಹುಡುಗಿ ಪಕ್ಕದಲ್ಲಿ ಕುಳಿತಳು.
ಆ ಚೆಲುವೆ ಅಮ್ಮನ ಕೈಗೊಂದು ಪೇಪರ್ ಕವರ್ ಕೊಟ್ಟಳು. ಅದರಲ್ಲಿ ಏನಿರಬಹುದು….? ಕುತೂಹಲ, ಕಾತರದಿಂದ ಗೌತಮ್ ನೋಡತೊಡಗಿದ. ಅಮ್ಮ ಅದರಿಂದ ಒಂದು ಫೋಟೋ ತೆಗೆದರು. ಅದ್ಯಾರ ಫೋಟೋ ಅಂತ ಗೊತ್ತಾಗಲಿಲ್ಲ. “ಹುಡುಗಿ ಏನೋ ನೋಡಕ್ಕೆ ಚೆನ್ನಾಗಿದ್ದಾಳೆ….” ಎನ್ನುತ್ತಾ ಅಮ್ಮ ಆ ಕವರ್‌ನಿಂದ ಹಾಳೆಯೊಂದನ್ನು ತೆಗೆದರು.
“ಅದು ಆ ಹುಡುಗಿಯ ಎಲ್ಲಾ ವಿವರಗಳು,” ಎಂದು ಚೆಲುವೆ ಹೇಳಿದಳು.
“ಅವಳು ನಮ್ಮ ಸಂಬಂಧಿಕರಿಗೆ ಪರಿಚಯದವಳು. ತುಂಬಾ ಒಳ್ಳೆಯ ಜನ. ಹುಡುಗೀನೂ ಅಷ್ಟೆ. ಎಂಜಿನಿಯರಿಂಗ್ ಮುಗಿಸಿದ್ದಾಳೆ. ಎಲ್ಲಾ ಕೂಡಿ ಬಂದರೆ ನಿಮ್ಮ ಮಗನಿಗೆ ಒಳ್ಳೇ ಜೋಡಿಯಾಗಬಹುದು,” ಎಂದಳು ಚೆಲುವೆ ನಗುತ್ತಾ.
ಆಕೆಯ ಮಾತು ಕೇಳಿ ಗೌತಮ್ ಭೂಮಿಗಿಳಿದುಹೋದ. ಅವನ ಮನಸ್ಸು ಕುಟುಕಿದಂತಾಯ್ತು. `ನನಗಾಗಿ ಮದುವೆ ಪ್ರಸ್ತಾಪ ತಂದಿರುವ ನೀನೇ ನನಗೆ ಇಷ್ಟವಾಗಿದ್ದೀಯಾ! ನಿನ್ನ ಮೇಲೆ ನನಗೆ ವಿಪರೀತ ಕ್ರಷ್ ಆಗಿದೆ ಚೆಲುವೆ,’ ಎಂದು ಅವನ ಮನ ಚೀರಿ ಚೀರಿ ಹೇಳಿತು. ಅವರ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳಲು ಅವನಿಗೆ ಮನಸ್ಸಾಗಲಿಲ್ಲ. ಸುಮ್ಮನೆ ರೂಮಿಗೆ ಹೋಗಿ ಕುಳಿತುಕೊಂಡ. ಸ್ವಲ್ಪ ಹೊತ್ತಿನ ನಂತರ ಇಂಚರಾ ಮತ್ತು ತಾಯಿ ರೂಮಿಗೆ ಬಂದು ಆ ಕವರ್ ಕೊಡುತ್ತಾ, “ನೋಡೋ ಹುಡುಗಿ ಹೇಗಿದ್ದಾಳೆ…. ಅವಳ ಬಯೋಡೇಟಾನೂ ಅದರಲ್ಲಿ ಇದೆ,” ಎಂದು ಅಮ್ಮ ಹೇಳಿದರು.
“ಆಯಿತಮ್ಮ ಆಮೇಲೆ ನೋಡ್ತೀನಿ. ಅಮ್ಮಾ ಟೀ ಬೇಕು,” ಎಂದ. ಅಮ್ಮ ಒಳಗೆ ಹೋಗುವುದನ್ನೇ ಕಾಯುತ್ತಿದ್ದ ಗೌತಮ್.
“ಏನೇ ಇಂಚಿ…. ನಿನ್ನ ಗೆಳತಿ ಶಿಕ್ಷಣದ ಜೊತೆ ಜೊತೆಗೆ ವಧೂವರರನ್ನು ಜೋಡಿಸುವ ಕೆಲಸಾನೂ ಮಾಡ್ತಾಳಾ?” ಎಂದ.
“ಈಗ ಬಂದಿದ್ದು ನನ್ನ ಗೆಳತಿಯರಲ್ಲ. ಅವಳು ನನ್ನ ಜ್ಯೂನಿಯರ್ ಆಶಾ ಮತ್ತು ಹುಡುಗಿ ಜಾತಕ ಕೊಟ್ರಲ್ಲ ಅವರು ಆಶಾಳ ತಾಯಿ!”
“ಏನು! ಅವರಿಗೆ ಅಷ್ಟು ದೊಡ್ಡ ಮಗಳಿದ್ದಾಳಾ….. ಮತ್ತೆ ಅವತ್ತು ಕೇಳಿದಾಗ ಎಲ್ಲರೂ ನನ್ನ ಗೆಳತಿಯರು…. ಯಾರಿಗೂ ಮದುವೆ ಆಗಿಲ್ಲ ಅಂದೆ….” ಎಂದು ಸಿಡಿಮಿಡಿಗೊಂಡ ಗೌತಮ್.
ಅಣ್ಣನ ಮನಸ್ಸನ್ನು ಅರ್ಥ ಮಾಡಿಕೊಂಡ ಇಂಚರಾ, “ನೀನು ಅವರನ್ನು ತಲೆಯಲ್ಲಿಟ್ಟುಕೊಂಡು ಕೇಳಿದೆ ಎಂದು ನನಗೆ ಗೊತ್ತಾಗಲಿಲ್ಲ. ನಾನು ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಉಳಿದವರನ್ನಷ್ಟೇ ನನ್ನ ಗೆಳತಿಯರು ಎಂದಿದ್ದೆ…. ನೀನು ತಪ್ಪು ತಿಳಿದುಕೊಂಡೆ…. ಸರಿಯಾಗಿ ಕೇಳಿದ್ದರೆ ಹೇಳುತ್ತಿದ್ದೆನಲ್ಲ,” ಎಂದಳು.
“ಮತ್ತೆ ಅವರ ಕಾಲುಗಳಲ್ಲಿ ಕಾಲುಂಗುರವೇ ಇಲ್ಲ….?!”
“ಓ! ಅದಾ…. ಅವರ ಕಾಲುಬೆರಳುಗಳು ತುಂಬಾ ಒತ್ತೊತ್ತಾಗಿರುವುದರಿಂದ. ನೀರಿನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಿದರೆ ಬೆರಳುಗಳ ಸಂದಿಯಲ್ಲಿ ಸೆಲೆಯುತ್ತದೆ. ಆದ್ದರಿಂದ ಅವರು ಅಂತಹ ತೊಂದರೆಯಾದಾಗ ಕಾಲುಂಗುರ ಹಾಕುವುದಿಲ್ಲ,” ಎಂದಳು.
“ಆದರೆ ಅವರನ್ನು ನೋಡಿದರೆ ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳೆ ಎಂದರೆ ನಂಬೋದಿಕ್ಕೆ ಆಗಲ್ಲ….. ಒಳ್ಳೇ ಕಾಲೇಜ್ ಹುಡುಗಿ ಥರ ಕಾಣಿಸ್ತಾರಪ್ಪಾ,” ಎಂದ ಗೌತಮ್ ನಿರಾಸೆಯಿಂದ.
“ಅಣ್ಣಾ….! ಶರೀರವನ್ನು ನೀಟಾಗಿ ಇಟ್ಕೋಳ್ಳೋದು ಕೇವಲ ಮಾಡೆಲ್ ಗಳು, ಸೆಲೆಬ್ರಿಟಿಗಳು ಅವರಿಗಷ್ಟೇ ಸೀಮಿತವಾಗಿರುತ್ತದಾ?” ಎಂದು ಕೇಳಿ ಮತ್ತೆ ಮುಂದುವರಿಸಿದಳು,
“ಆ…. ಆಂಟಿ! ಯೋಗ, ಧ್ಯಾನ, ವ್ಯಾಯಾಮ ಮಾಡ್ತಾರೆ. ಯಾವಾಗಲೂ ಸಂತೋಷವಾಗಿ ಚಟುಟಿಕೆಯಿಂದಿರುತ್ತಾರೆ. ಪರಿಶ್ರಮ ಪಟ್ಟರೆ ಯಾರು ಬೇಕಾದರೂ ಸುಂದರವಾಗಿ ಕಾಣಿಸಬಹುದು. ಗೃಹಿಣಿಯರೂ ಸ್ವಪ್ರಯತ್ನದಿಂದ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದಕ್ಕೇ ಅವರೇ ಉದಾಹರಣೆ…” ಎಂದು ಹೇಳುತ್ತಲೇ ಇದ್ದಳು ಇಂಚರಾ.
`ಆ ಚೆಲುವೆ’ ಮದುವೆಯಾದವಳೆಂದು ತಿಳಿದ ಗೌತವ್ ಭ್ರಮನಿರಸನಗೊಂಡಿದ್ದ. ಆಶ್ಚರ್ಯದಿಂದ ಬೆಪ್ಪಾಗಿದ್ದ. ಮಾತುಗಳೇ ಹೊರಡದೆ ಮೂಕನಂತಾಗಿದ್ದ……