ಸಿಂಗಾಪೂರ್‌ನಲ್ಲಿ ಒಂದಕ್ಕಿಂತ ಒಂದು ಆಕರ್ಷಣೆಗಳು ಪ್ರವಾಸಿಗರ ಮನಸೆಳೆಯುತ್ತವೆ. ಆದರೆ ಈ ಎಲ್ಲವುಗಳಿಗಿಂತ ವಿಭಿನ್ನವಾದುದು ನೈಟ್‌ ಸಫಾರಿ ಅರ್ಥಾತ್‌ ನಿಶಾ ವನ್ಯ ವಿಹಾರ. ಇಡೀ ವಿಶ್ವದಲ್ಲೇ ಮೊಟ್ಟ ಮೊದಲನೆಯದಾಗಿ ಪ್ರಾರಂಭಿಸಲಾದ ಈ ನಿಶಾ ವನ್ಯ ವಿಹಾರ ಅಥವಾ ನೈಟ್‌ ಸಫಾರಿ ನಿಜಕ್ಕೂ ವಿಶಿಷ್ಟ! ಸಿಂಗಾಪೂರ್‌ಗೆ ಹೋದವರು ಇಲ್ಲಿಗೆ ಭೇಟಿ ನೀಡದೆ ಇರಲಾರರು. 68 ಎಕರೆಗಳಷ್ಟು ವನ್ಯ ಪ್ರದೇಶದಲ್ಲಿ ಪಸರಿಸಿರುವ ಈ ನಿಶಾ ಧಾಮವನ್ನು 1994ರ ಮೇ ತಿಂಗಳಲ್ಲಿ ಸಾರ್ವಜನಿಕರಿಗಾಗಿ ತೆರೆಯಲಾಯಿತು.

ಸಿಂಗಾಪೂರ್‌ನ ಮೃಗಾಲಯದ ಪಕ್ಕದಲ್ಲೇ ಇರುವ ಈ ತಾಣದಲ್ಲಿ 130 ಜಾತಿಯ 250 ಪ್ರಾಣಿಗಳಿವೆ. ವರ್ಷವೊಂದರಲ್ಲಿ 11 ಲಕ್ಷ ಜನ ಭೇಟಿ ನೀಡುವ ಈ ನೈಟ್‌ ಸಫಾರಿ ಅತ್ಯಂತ ಜನಪ್ರಿಯವೂ ಹೌದು. ಪೂರ್ಣವಾಗಿ ತೆರೆದ ತಾಣದಲ್ಲಿ ಏಳು ವಿಭಾಗಗಳಿದ್ದು, ಅವುಗಳನ್ನು ನಡೆದು ಅಥವಾ ಟ್ರಾಮ್ನಲ್ಲಿ ಹೋಗಿ ನೋಡಬಹುದು. ಟ್ರಾಮ್ನಲ್ಲಿ ಹೋಗುವಾಗ ನೋಡುಗರಿಗೆ ವಿವರಣೆ ನೀಡಲಾಗುತ್ತದೆ. ನೋಡುಗರಿಗೆ ಸ್ಪಷ್ಟವಾಗಿ ಕಾಣುವಂತೆ ಬೆಳದಿಂಗಳಿನಂತಹ ಬೆಳಕನ್ನು ಮೂಡಿಸಲಾಗಿದೆ.

ಲಂಡನ್‌ ಮೂಲದ ಸೈಮನ್‌ ಕಾರ್ಡರ್‌ ಮಾಡಿರುವ ಬೆಳಕಿನ ವಿನ್ಯಾಸ, ಯಾವುದೇ ರೀತಿಯಲ್ಲಿ ಪ್ರಾಣಿಗಳಿಗೆ ಶಾಂತಿ ಭಂಗವಾಗದಂತೆ, ಕೆರಳಿಸದಂತೆ ಅನುಕೂಲಕರವಾಗಿದೆ. ಯಾವುದೇ ಬೋನು ಪಂಜರಗಳಿಲ್ಲದೆ ನೈಸರ್ಗಿಕವಾಗಿ ಅವುಗಳನ್ನು ನೋಡುಗರಿಂದ ದೂರವಿರಿಸಲಾಗಿದೆ. ನೈಟ್‌ ಸಫಾರಿಯಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ತಂಬೂರಕರ್‌ ಕಾಡಿನ ಜನಾಂಗದ ನೃತ್ಯ ನಿಮ್ಮ ಆ ರಾತ್ರಿಯ ನೀರವತೆಯಲ್ಲೂ ಬೆಚ್ಚಗೆ ಮಾಡುತ್ತದೆ.

ಅವರ ಸಾಂಸ್ಕೃತಿಕ ನೃತ್ಯ ನಿಮ್ಮ ಮನಸೆಳೆದರೆ ಬೆಂಕಿಯನ್ನು ಉಗುಳುವ ಪ್ರದರ್ಶನ ವಾತಾವರಣದಲ್ಲಿ ಬಿಸಿಯನ್ನುಂಟು ಮಾಡುತ್ತದೆ. ನೃತ್ಯವನ್ನು ನೋಡುತ್ತಾ ಅಲ್ಲಿಯ ರುಚಿಕರ ಊಟ ಮಾಡಬಹುದು. ಇಲ್ಲವಾದಲ್ಲಿ ಊಟ ಮಾಡಿಕೊಂಡು ಬಂದರೆ ಪ್ರದರ್ಶನವನ್ನು ನಿರಾಳವಾಗಿ ನೋಡಬಹುದು. ಮುಂದೆ ನಿಮ್ಮ ಪಯಣ ಟ್ರಾಮ್ನತ್ತ.

ಟ್ರಾಮ್ನಲ್ಲಿ ಸಾಗುವಾಗ ಮೈಯೆಲ್ಲಾ ಒಂದು ರೀತಿಯಲ್ಲಿ ಉದ್ವೇಗಗೊಳ್ಳುತ್ತದೆ. ರಾತ್ರಿಯ ವೇಳೆ ಆ ಪ್ರಾಣಿಗಳು ಹೇಗೆ ಕಾಣುತ್ತವೆ ಎನ್ನುವ ಕುತೂಹಲ, ಜೊತೆಗೆ ಪೂರಾ ಕತ್ತಲು. ಆ ಕತ್ತಲಲ್ಲಿ ನಲವತ್ತು ನಿಮಿಷದ ಟ್ರಾಮ್ ಸವಾರಿಯಲ್ಲಿ ಸಾಗುವಾಗ ಅಲ್ಲಿನ ಗೈಡ್‌ ಮೆಲು ಧ್ವನಿಯಲ್ಲಿ ವಿವರಣೆಯನ್ನು ನೀಡುತ್ತಲೇ ಇರುತ್ತಾರೆ. ಕ್ಷಣ ಕ್ಷಣಕ್ಕೂ ಬದಲಾಗುವ ಪರಿಸರ, ಬೇರೆ ಬೇರೆಯ ಸಸ್ಯವರ್ಗ ಮತ್ತು ಪ್ರಾಣಿಗಳಿಗೆ ಅನುಗುಣವಾದ ತಾಣ, ನೋಟ ಈ ರೀತಿಯಾದರೆ ಅರಣ್ಯದ ನೀರವ ಮೌನ, ಹರಿಯುವ ನೀರಿನ ಜುಳು ಜುಳು ನಿನಾದ, ಕೀಟಗಳು ಗುಂಯ್ ಗುಡುವಿಕೆ, ಆಗಾಗ ನೀವು ನೋಡುವ ಪ್ರಾಣಿಗಳ ಹ್ಞೂಂಕಾರ, ಹಾಗೆಯೇ ಸಾಗುತ್ತಾ ಹೋಗುವಾಗ ನಲವತ್ತು ನಿಮಿಷವಾದದ್ದೇ ಗೊತ್ತಾಗದು. ರೋಮಗಳು ನಿಮಿರುತ್ತವೆ, ಮನ ಉದ್ವೇಗಗೊಳ್ಳುತ್ತದೆ. ಏನೋ ಒಂದು ವಿಭಿನ್ನ ರೀತಿಯ ಅನುಭವ ನಿಮ್ಮದಾಗುತ್ತದೆ.

ಹಿಮಾಲಯದ ತಪ್ಪಲು

ಮೊದಲು ಎದುರಾಗುವುದು ಹಿಮಾಲಯದ ಪರ್ವತ ಶ್ರೇಣಿಯ ತದ್ರೂಪ. ಇಳಿಜಾರಿನ ಕಲ್ಲುಗಳ ಮೇಲೆ ಬೆಳೆದಿರುವ ಹಸಿರು, ಹರಿಯುವ ನದಿ ಸದ್ದು, ಅಲ್ಲಿ ಸದೃಢವಾಗಿ ನಿಂತಿರುವ ವಿಶ್ವದಲ್ಲೇ ಅತ್ಯಂತ ದೊಡ್ಡ ವನ್ಯ ಆಡು (ವೈಲ್ಡ್ ಗೋಟ್‌ ಮಾರ್ಕೋರ್ಸ್‌). ರಾತ್ರಿಯ ನಿಶ್ಶಬ್ದದಲ್ಲಿ ಮೆಲ್ಲಗೆ ತಮ್ಮ ಮೇವನ್ನು ಮೇಯುತ್ತಿರುವ ವನ್ಯಜೀವಿಗಳು, ಅವುಗಳನ್ನೆಲ್ಲಾ ನೋಡುತ್ತಾ ಮುಂದೆ ಸಾಗಿದಾಗ, ಕುರಿಗಳ ಪುರಾತನ ಕಾಲದ ವಂಶಜರಾದ ಮೌಪ್ಲೇನ್ಸ್ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ಎದುರಾಗುವುದು ಅದಕ್ಕಿಂತ ವಿಭಿನ್ನವಾದ ಪರಿಸರದಲ್ಲಿರುವ ಬಾರಾಸಿಂಗ್‌ ಜಿಂಕೆ ಅಂದರೆ ಹನ್ನೆರಡು ಕೊಂಬುಗಳಿರುವ, ಕೊಂಬುಗಳು ಹನ್ನೆರಡು ಕವಲುಗಳಾಗಿ ಹೊಮ್ಮಿರುವ ಸುಂದರ ಜಿಂಕೆಗಳ ಗುಂಪು. ಜಿಂಕೆಗಳನ್ನು ನೋಡಿ ಅಚ್ಚರಿಪಡುವಷ್ಟರಲ್ಲಿ ಬೆಳ್ಳನೆಯ ಹೊಳೆಯುವ ಮಂಚೂರಿಯನ್‌ ಬಕಪಕ್ಷಿಗಳು. ನಡೆದಾಡುವುದನ್ನು ನೋಡುತ್ತಲೇ ಮುಂದೆ ಸಾಗಿದಾಗ ತನ್ನ ಮೈಮೇಲೆ ಕಪ್ಪು ಪಟ್ಟೆಗಳಿಂದ ಅಲಂಕೃತವಾದ ಹೈನಾಗಳನ್ನು ನೋಡುವ ಭಾಗ್ಯ ನಿಮ್ಮದಾಗುತ್ತದೆ. ಏಷ್ಯಾದಲ್ಲಿ ಮಾತ್ರ ದೊರಕುವ ಈ ಹೈನಾಗಳು ರಾತ್ರಿಯ ವೇಳೆ ಚುರುಕಾಗಿರುತ್ತವೆ. ಹೀಗಾಗಿ ಬೇರೆ ಪ್ರಾಣಿಗಳು ತಿಂದುಳಿದ ಆಹಾರವನ್ನು ತಿನ್ನುವ ಸ್ಕ್ಯಾವೆಂಜರ್‌ ಎಂದು ಹೆಸರು ಪಡೆದಿರುವ ಈ ಮೃಗ ತನ್ನ ಆಹಾರವನ್ನು ತಿನ್ನುವ ದೃಶ್ಯ ನೋಡಲು ಸಿಗಬಹುದು.

ಭಾರತೀಯ ಉಪಖಂಡ

ಅಲ್ಲಿಂದ ಭಾರತದ ದಟ್ಟ ಗಿರ್‌ ಅರಣ್ಯದಂತೆಯೇ ರೂಪಿಸಲಾದ ತಾಣದಲ್ಲಿ ಶ್ರೀಮದ್ ಗಾಂಭೀರ್ಯದಿಂದ ನಡೆದಾಡುತ್ತಿರುವ ನಟರಾಜ ಗಿರ್‌ ಸಿಂಹಗಳನ್ನು ವೀಕ್ಷಿಸಬಹುದು. ಆಫ್ರಿಕಾದ ಸಿಂಹಗಳಿಗಿಂತ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾದರೂ ಅಷ್ಟೇ ಚುರುಕು ಮತ್ತು ಜೋರು ಸ್ವಭಾವದ್ದಾಗಿರುವ ಈ ತಳಿಗಳ 300 ಸಿಂಹಗಳು ಮಾತ್ರ ಈ ಜಾಗದಲ್ಲಿ ಉಳಿದಿವೆ. ಇಲ್ಲಿನ ಸಿಂಹಗಳ ಸಂತತಿಯನ್ನು ಹೆಚ್ಚಿಸುವಲ್ಲಿ ನೈಟ್‌ ಸಫಾರಿ ಹೆಚ್ಚಿನ ಮಹತ್ವದ ಪಾತ್ರ ಪಡೆದಿದೆ.

ನೀವು ನೋಡುವ ಮೊದಲೇ ತನ್ನ ಉಸಿರಾಟದ ಸದ್ದಿನಿಂದ ನಿಮ್ಮ ಗಮನವನ್ನು ಸೆಳೆಯುವ ಸೋಮಾರಿ ಕರಡಿ ತನ್ನ ಕವಳಕ್ಕಾಗಿ ಸಿದ್ಧತೆ ನಡೆಸುತ್ತಿರುವ ದೃಶ್ಯ ಕಂಡುಬರುತ್ತದೆ. ಆ ದೃಶ್ಯವನ್ನು ಸವಿಯುತ್ತಿರುವಂತೆಯೇ ಈಸ್ಟ್ ಲಾಡ್ಜ್ ನಿಲ್ದಾಣವನ್ನು ತಲುಪುತ್ತೀರಿ. ಆಸಕ್ತಿ ಇದ್ದಲ್ಲಿ ಅಲ್ಲಿ ಇಳಿದು ನಡೆದಾಡುತ್ತಲೇ ಆ ತಾಣವನ್ನು ಮತ್ತೂ ವಿವರವಾಗಿ ನೋಡಬಹುದು.

ಸಮಭಾಜಕ ವೃತ್ತದಲ್ಲಿನ ಆಫ್ರಿಕಾ

ಭಾರತೀಯ ಉಪಖಂಡದಿಂದ ಮುಂದೆ ಸಾಗಿದಾಗ ಸಮಭಾಜಕ ವೃತ್ತದಲ್ಲಿರುವ ಆಫ್ರಿಕಾವನ್ನು ತಲುಪಿಬಿಡುತ್ತೀರಾ. ಅಲ್ಲಿ ನೋಡಲು ಸಾಕಷ್ಟು ಪ್ರಾಣಿಗಳು ದೊರಕುತ್ತವೆ. ತನ್ನ ಉದ್ದವಾದ ಕತ್ತನ್ನು ಎತ್ತರಕ್ಕೆ ಏರಿಸಿ ನಿಂತ ಜಿರಾಫೆಗಳು, ನುಣುಪಾದ, ಮುಟ್ಟಿದರೆ ಜಾರುತ್ತದೆಯೇನೋ ಎನಿಸುವ, ಹೊಳೆಯುವ ಮೈಮೇಲೆ ಯಾರೋ ಚಿತ್ರಕಾರ ಬರೆದಂತಿರುವ ಕಪ್ಪನೆಯ ಪಟ್ಟೆಗಳಿಂದ ಅಲಂಕೃತ ಝೀಬ್ರಾಗಳು, ಭಾರೀ ಗಾತ್ರದ ಮೈಯನ್ನು ಹೊತ್ತ ನೀರಾನೆಗಳು, ಕಪ್ಪನೆಯ ಚುಕ್ಕೆಗಳನ್ನು ಮೈತುಂಬಾ ಬರೆಸಿಕೊಂಡಂತಿರುವ ಹೈನಾಗಳು, ಟ್ರಾಮ್ ಟೂರಿನ ನಂತರ ನಡೆದುಕೊಂಡು ಹೋದಾಗ ಎಲ್ಲ ಪ್ರಾಣಿಗಳು ಶಾಂತವಾಗಿ ಮೇವನ್ನು ಮೇಯುವ ದೃಶ್ಯವನ್ನು ಕಾಣಬಹುದು. ಸನ್ನಾದ ಹುಲ್ಲುಗಾವಲಿನಲ್ಲಿ ಹೀಗೆಯೇ ಸಾಗುತ್ತಾ ಹೋದಾಗ ಎಷ್ಟು ಮೆಲ್ಲಗೆ ಸಾಗಿದರೂ ಬಹಳ ಸೂಕ್ಷ್ಮವಾದ ಕಿವಿ ಮತ್ತು ಕಣ್ಣಿನ ದೃಷ್ಟಿಯನ್ನು ಹೊಂದಿರುವ ನೋಡಲು ನಾಯಿಯಂತಿದ್ದರೂ ಬೆಕ್ಕಿನ ಜಾತಿಗೆ ಹತ್ತಿರವಾದ ಈ ಪ್ರಾಣಿ ಬೇಟೆಯಾಡುವುದರಲ್ಲಿ ಬಹಳಷ್ಟು ಪರಿಣಿತಿಯನ್ನು ಹೊಂದಿದೆ. ಅದರ ಜೋರಾದ ಗಂಟಲಿನ ಸದ್ದಿನಿಂದ ಈ ಪ್ರಾಣಿ ನಗುವ ಹೈನಾ ಎನ್ನುವ ಹೆಸರನ್ನು ಪಡೆದುಕೊಂಡಿದೆ.

ಟ್ರಾಮ್ನ ಮತ್ತೊಂದು ಪಕ್ಕದಲ್ಲಿ ಮೈಮೇಲೆ ನುಣುಪಾದ, ಮುಟ್ಟಿದರೆ ಜಾರುವಂತಹ ಬೆಚ್ಚನೆಯ ಚರ್ಮವನ್ನು ಮೈದುಂಬಿಸಿಕೊಂಡ ಆಫ್ರಿಕಾದ ಜಿಂಕೆಗಳು ಮೇವಿಗಾಗಿ ನೀರನ್ನು ಹಾದುಹೋದರೂ ಬೆಚ್ಚಗಿರುತ್ತವೆ. ಅಲ್ಲಿಂದ ಮುಂದೆ ಸಾಗಿದಾಗ ಆಫ್ರಿಕಾದ ದೊಡ್ಡ ಜಿಂಕೆ ಎನಿಸಿಕೊಂಡ ಬೊಂಗಾಸ್‌ನ ಸುತ್ತಿಕೊಂಡ ಕೊಂಬುಗಳನ್ನು ಹೊತ್ತುಕೊಂಡ ಜೀವಿಗಳು ನೋಡ ಸಿಗುತ್ತವೆ. ಇಂಡೋ ಮಲಯನ್‌ ತಾಣದ ದಟ್ಟವಾದ ಮಳೆ ಕಾಡಾದ ಇಂಡೋ ಮಲಯನ್‌ ವಿಭಾಗಕ್ಕೆ ನೀವು ಬಂದು ತಲುಪಿರುತ್ತೀರಿ. ದವಡೆಗಳಿಂದ ಹೊರ ಚಾಚಿರುವ ಕೋರೆಹಲ್ಲನ್ನು ಹೊಂದಿರುವ ವಿಶಿಷ್ಟ ರೀತಿಯ ಹಂದಿ ಬಾಬಿರೂಸಾ ನೋಡುತ್ತೀರಿ, ಹೊರ ಚಾಚಿರುವ ಅಲಂಕೃತ ರೀತಿಯಲ್ಲಿರುವ ಕೋರೆ ಹಲ್ಲು ಅಥವಾ ಕೊಂಬು, ಹೆಣ್ಣು ಹಂದಿಯನ್ನು ಆಕರ್ಷಿಸಲು ಅನುಕೂಲವಂತೆ. ಅಲ್ಲಿಂದ ಪಕ್ಕದಲ್ಲೆ ಮಲಯನ್‌ ಹುಲಿ ಮನಸೆಳೆಯುತ್ತದೆ.

ಏಷ್ಯಾದ ಮಳೆ ಕಾಡು

ಈಗ ಈಶಾನ್ಯ ಏಷ್ಯಾದ ಮಳೆ ಕಾಡಿಗೆ (ಗಿರ್‌ ರೇನ್‌ ಫಾರೆಸ್ಟ್) ನಿಮ್ಮ ಪ್ರವೇಶ. ಅಲ್ಲಿ ನಮ್ಮ ವರಾಹಾವತಾರದ ಉದ್ದನೆಯ ಸೊಂಡಿಲಿನ ಹಂದಿಯಂತಿರುವ ಮಲಯನ್‌ ಟಪಿರ್‌ಗಳು, ಕಪ್ಪನೆಯ ಮೈಮೇಲೆ ಬಿಳಿಯ ಶಾಲು ಹೊದ್ದಂತೆ ಕಾಣುವ ಈ ಪ್ರಾಣಿಗಳು ಎಲೆ ಮತ್ತು ಕಾಂಡಗಳನ್ನು ತಿನ್ನುತ್ತಾ  ಬಿಡುಬೀಸಾಗಿ ಓಡಾಡುವುದನ್ನು ನೋಡುತ್ತೀರಿ. ಇನ್ನು ಮಳೆ ಕಾಡೆಂದ ಮೇಲೆ ಗಜರಾಜನ ಕುಟುಂಬದ ದರ್ಶನಾಗಲೇ ಬೇಕು. ಏಷ್ಯಾದ ಹೆಣ್ಣು ಆನೆಗಳ ಹಿಂಡು ಅವುಗಳ ಮರಿಗಳೊಡನೆ ಅಡ್ಡಾಡುವುದನ್ನು ಕಾಣುತ್ತೀರಿ. ಹಾಗೆಯೇ ತನ್ನ ಸುಂದರ ದಂತಗಳನ್ನು ಚಾಚುತ್ತಾ ಹೆಣ್ಣಾನೆಗಳನ್ನು ಆಕರ್ಷಿಸಲು ಪ್ರಯತ್ನಿಸುವ ಗಂಡಾನೆಯತ್ತಲೂ ದೃಷ್ಟಿ ಹಾಯಿಸಿ. ಆನೆಗಳೊಂದಿಗೆ ಹೆಚ್ಚಿನ ಸಾಂಗತ್ಯ ಬೇಕಿದ್ದಲ್ಲಿ ಪ್ರೀಮಿಯರ್‌ ಸಫಾರಿ ಅಡ್ವೆಂಚರ್‌ ಟೂರ್‌ನ್ನು ಆಯ್ಕೆ ಮಾಡಿಕೊಳ್ಳಬಹುದು.

ಬರ್ಮಾದ ಗುಡ್ಡದ ಕಂದಕ

ಏಷ್ಯಾದ ಮಳೆ ಕಾಡಿನಿಂದ ಕೆಳಗಿಳಿದರೆ ಬರ್ಮಾದ ಗುಡ್ಡದ ಕಂದಕಗಳತ್ತ ಸಾಗುತ್ತೀರಿ. ಅಲ್ಲೊಂದಷ್ಟು ಪ್ರಾಣಿಗಳು ರಾತ್ರಿಯ ಮಂದಬೆಳಕಿನಲ್ಲಿ ಯಾರೂ ಬರುವುದಿಲ್ಲ ಎಂಬ ನಿರಾಳದಲ್ಲಿ ಮೇವನ್ನು ಕಬಳಿಸುತ್ತಿರುವುದನ್ನು ಕಾಣುತ್ತೀರಿ.  ಏಷ್ಯಾದ ಅತಿ ದೊಡ್ಡ ಜಿಂಕೆಯಾದ ಸಾಂಬಾರ್‌, ಮೈ ತುಂಬಾ ಚುಕ್ಕೆಯ ರಂಗೋಲಿಯನ್ನಿರಿಸಿಕೊಂಡು ಸುಂದರವಾಗಿ ಕಾಣುವ ಜಿಂಕೆಗಳ ಗುಂಪು, ಅನೇಕ ಬಾರಿ ಇವು ಟ್ರಾಮನ್ನು ಹಾದು ಹೋಗುವುದೂ ಉಂಟು. ಇವುಗಳೇ ಅಲ್ಲದೆ, ವಿಶ್ವದ ಅತಿ ಎತ್ತರದ ಹಾರುವ ಪಕ್ಷಿಗಳಾದ ಸಾರಸ್‌ ಬಕಪಕ್ಷಿಗಳನ್ನು ಕಾಣಬಹುದು. ನೇಪಾಳದ ನದಿ ತೀರದಲ್ಲಿ  ಸಾಗುವಾಗ ಭಾರತೀಯ ತೋಳದ ಕೂಗನ್ನು ಕೇಳಬಹುದು. ಕೆಲವರು ಚಂದ್ರನನ್ನು ಕಂಡು ಕೂಗು ಹಾಕುತ್ತವೆ ಎಂದರೆ ಹಲವರು ಮತ್ತೇನೋ ಕಾರಣವನ್ನು ನೀಡುತ್ತಾರೆ. ಮುಂದೇನು ಎನ್ನುವಾಗಲೇ ದಪ್ಪನೆಯ ಬೂದು ಬಣ್ಣದ ಒರಟು ಚರ್ಮದ, ಭಯ ಹುಟ್ಟಿಸುವ ಕೊಂಬುಗಳನ್ನು ಹೊತ್ತ ದೊಡ್ಡ ಗಾತ್ರದ ಏಷ್ಯಾದ ಘೇಂಡಾಮೃಗ ಕಂಡು ಕಣ್ಣರಳಿಸುವಂತಾಗುತ್ತದೆ. ಮನುಜ ಯಾರನ್ನು ತಾನೇ ಬಿಡುತ್ತಾನೆ? ಈ ಬೃಹತ್‌ ಗಾತ್ರದ ಜೀವಿಯನ್ನೂ ಅದರ ಕೊಂಬಿಗಾಗಿ ಸಾಯಿಸುತ್ತಾನೆ. ಹೀಗಾಗಿ ಈಗ 2000 ರೈನೋಗಳಷ್ಟೇ ಈ ವಿಶ್ವದಲ್ಲಿ ಉಳಿದಿವೆ. ಮುಂದೆ ಸಾಗಿದರೆ ಆರು ಅಡಿ ಎತ್ತರಕ್ಕೆ ಹಾರಬಲ್ಲ ಕಾಡು ಹಸುಗಳು ಕಾಣುತ್ತವೆ.

ಬರ್ಮಾದ ಗುಡ್ಡದ ತಪ್ಪಲು

ನಿಮ್ಮ ಟ್ರಾಮ್ ಟೂರಿನ ಕೊನೆಯ ಹಂತಕ್ಕೆ ತಲುಪುತ್ತಿದ್ದೀರಿ. ಇಲ್ಲಿ ಕಾಡಿನ ಪಶುಗಳು ಸುಮ್ಮನೆ ಹುಲ್ಲು ಮೇಯುತ್ತಿರುವುದನ್ನು ನೋಡಬಹುದು. ಒಮ್ಮೆಲೇ ಆರು ಅಡಿ ಬೇಲಿಯನ್ನು ದಾಟುವಂತಹ, ಬೆನ್ನಿನ ಮೇಲೆ ಎತ್ತರದ ಡುಬ್ಬವನ್ನು ಹೊಂದಿರುವ ಒಂದು ಟನ್‌ ತೂಕವುಳ್ಳ ಗೌರ್‌ ಜಾತಿಯ ಪಶುವನ್ನು ನೋಡುತ್ತೀರಿ. ಪಕ್ಕದಲ್ಲೇ ಕುಳ್ಳನೆಯ, ಚೂಪಾದ ಕೊಂಬುಗಳನ್ನು ತನ್ನ ನೆತ್ತಿಯ ಮೇಲೆ ಅಲಂಕರಿಸಿಕೊಂಡಿರುವ ಮತ್ತು ಆ ಕೊಂಬುಗಳು ಎದ್ದು ಕಾಣುವಂತೆ ಕೊಂಬಿರುವುದರಿಂದ ಅದರ ಬಣ್ಣವೇ ತಿಳಿಯುವುದಿಲ್ಲ. ಆ ಕೊಂಬಿಗೆ ಒಂದು ಅಂಚನ್ನಿಟ್ಟು ಅಂಟಿಸಿರುವಂತೆ  ಕಾಣುವ ಬೆಂಟೆಂಗ್‌ನ ದರ್ಶನವಾಗುತ್ತದೆ. ಅಷ್ಟರಲ್ಲಿ ಹೊಂಬಣ್ಣದ ಜಿಂಕೆಯನ್ನು ಕಾಣಬಹುದು. ಆ ಸೂಕ್ಷ್ಮಜೀವಿಯನ್ನು ನೋಡಿ ಆನಂದಿಸುತ್ತಿರುವಂತೆಯೇ ಮಲೇಷಿಯಾದ ರಾಷ್ಟ್ರೀಯ ಪ್ರಾಣಿಯಾದ ವ್ಯಾಘ್ರ ನಿಮ್ಮ ಮುಂದೆ ಹಾಜರು. ಬೇಸರದ ವಿಷಯವೆಂದರೆ ಮನುಜ ಎಲ್ಲರಿಗಿಂತಲೂ ಕ್ರೂರ, ದುರಾಸೆಯಿಂದ ಈ ಹುಲಿಗಳ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾನೆ. ಇದರ ಸಂಖ್ಯೆ 500ಕ್ಕಿಂತಲೂ ಕಡಿಮೆಯಾಗಿದೆ. ಕೊನೆಯದಾಗಿ ಕಪ್ಪನೆಯ ದೊಡ್ಡ ಕಿವಿಯ ಕರಡಿ ಈಗ ನಿಮ್ಮ ಮುಂದಿದೆ. ಅವುಗಳಲ್ಲಿ ಕೆಲವು ಕರಡಿಗಳ ಮಂಭಾಗ ಬೆಳ್ಳಗಿದ್ದು ಆಕರ್ಷಕ ಎನಿಸುತ್ತದೆ. ಈ ಯಾವ ಪ್ರಾಣಿಯನ್ನೂ ಮನುಜ ಬಿಟ್ಟಿಲ್ಲ.

ಇಲ್ಲಿಗೆ ನಿಮ್ಮ ಟ್ರಾಮ್ ಟೂರ್‌ ಮುಗಿಯಿತು ಎಂದುಕೊಳ್ಳುತ್ತಿರುವಂತೆಯೇ ಆ್ಯಂಫಿ ಥಿಯೇಟರ್‌ನಲ್ಲಿ ಪ್ರಾಣಿಗಳ, ಹೆಬ್ಬಾವಿನ ಜೊತೆ ಆಟ ಪಾಠ, ಪ್ರೇಕ್ಷಕರನ್ನು ಒಳಗೊಂಡಂತೆ ವಿವಿಧ ಆಟಗಳ ಪ್ರದರ್ಶನ, ಅಲ್ಲಿಗೆ ಒಂದು ಹಂತಕ್ಕೆ ನೈಟ್‌ ಸಫಾರಿ ಮುಗಿಯುತ್ತದೆ.

– ಮಂಜುಳಾ ರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ