ತೆಳುವಾದ ಶರೀರವನ್ನು ಪಡೆಯುವ ಹುಚ್ಚು ಹೇಗೆ ಮಾರಣಾಂತಿಕ ರೂಪ ಪಡೆಯುತ್ತದೆಂದು ತಿಳಿದುಕೊಳ್ಳುವುದು ಬಹಳ ಅಗತ್ಯ. ಈ ಕುರಿತು ಸಂಪೂರ್ಣವಾಗಿ ವಿವರಗಳನ್ನು ತಿಳಿಯೋಣವೇ…….?
ಫ್ಯಾಷನ್ ಪ್ರಪಂಚದಲ್ಲಿ ಫ್ರಾನ್ಸ್ ಇಡೀ ವಿಶ್ವದ ಮುಂದಾಳತ್ವ ವಹಿಸುತ್ತಿದೆ. ಆದರೆ ಇತ್ತೀಚೆಗೆ ಫ್ರೆಂಚ್ ಸರ್ಕಾರ ಎಂತಹ ತೀರ್ಮಾನ ತೆಗೆದುಕೊಂಡಿದೆ ಎಂದರೆ ಈಗ ಫ್ಯಾಷನ್ ಲೋಕದಲ್ಲಿ ಸೌಂದರ್ಯದ ಮಾಪನ ಬದಲಾಗುತ್ತಿದೆ. ಅಂದಹಾಗೆ ಫ್ರಾನ್ಸ್ನಲ್ಲಿ ಸೈಜ್ ಝೀರೋ ಮಾಡೆಲಿಂಗ್ ಮೇಲೆ ನಿರ್ಬಂಧ ಹೇರಲಾಗಿದೆ. ಫ್ಯಾಷನ್ ಮತ್ತು ಸೌಂದರ್ಯವನ್ನು ಕೇಂದ್ರದಲ್ಲಿಟ್ಟು ವಿಶ್ವದಲ್ಲಿ ನಡೆಯುತ್ತಿರುವ ಉದ್ಯೋಗಕ್ಕಾಗಿ ಇದು ಒಳ್ಳೆಯ ನಿರ್ಧಾರವಾಗಿದೆ. ಆದಾಗ್ಯೂ ಇದಕ್ಕಿಂತ ಮೊದಲು 2006ರಲ್ಲಿ ಇಟಲಿ ಮತ್ತು ಸ್ಪೇನ್‌ನಲ್ಲಿ ಮತ್ತು 2013ರಲ್ಲಿ ಇಸ್ರೇಲ್ ನಲ್ಲೂ ಸೈಜ್ ಝೀರೋಗೆ ನಿರ್ಬಂಧ ಹೇರಲಾಗಿತ್ತು. ಲಂಡನ್ ಫ್ಯಾಷನ್ ವೀಕ್‌ನಲ್ಲಿ ಸೈಜ್ ಝೀರೋ ಬಗ್ಗೆ ಝೀರೋ ಟಾಲರೆನ್ಸ್ ನ ಚರ್ಚೆಯಾಗಿದೆ. ಆದರೆ ಇದರ ಮೇಲಿನ ಚರ್ಚೆ ಸಾರ್ವಜನಿಕವಾಗಲಿಲ್ಲ. ಈಗ ಫ್ರಾನ್ಸ್ ಈ ನಿರ್ಧಾರ ತೆಗೆದುಕೊಂಡ ಬಗ್ಗೆ ಎಲ್ಲ ಕಡೆ ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣ ಫ್ರಾನ್ಸ್, ಅಂದರೆ ಪ್ಯಾರಿಸ್ ಫ್ಯಾಷನ್‌ನ ಮಾಪನವನ್ನು ನಿರ್ಧರಿಸುತ್ತದೆ. ಅದರಿಂದಾಗಿ ವಿಶ್ವದ ಫ್ಯಾಷನ್ ಇಂಡಸ್ಟ್ರಿ ಒಂದು ಹಂತದವರೆಗೆ ಸ್ತಬ್ಧವಾಗಿದೆ.
ಅಂದಹಾಗೆ, ನಿರ್ಬಂಧ ಹೇರುವಾಗ ಫ್ರಾನ್ಸ್ ಸರ್ಕಾರ ಅದರ ಬಗ್ಗೆ ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಅಂಗೀಕರಿಸಿದೆ. ಅದರ ಪ್ರಕಾರ ಯಾರಾದರೂ ಮಾಡೆಲ್ಗಳ ಬಿಎಂಐ ಅಂದರೆ ಬಾಡಿ ಮಾಸ್ ಇಂಡೆಕ್ಸ್ ಒಂದು ನಿರ್ಧರಿಸಿದ ಅಳತೆಗಿಂತ ಕಡಿಮೆ ಇದ್ದರೆ ಅವರ ಮೂಲಕ ತಮ್ಮ ಉತ್ಪನ್ನವನ್ನು ಪ್ರಚಾರ ಮಾಡುವುದಿಲ್ಲ ಮತ್ತು ಅವರು ಫ್ಯಾಷನ್ ಶೋನಲ್ಲಿ ಭಾಗಹಿಸುವಂತಿಲ್ಲ.
ಈ ಸಂಬಂಧವಾಗಿ ಇತ್ತೀಚೆಗೆ ಫ್ರಾನ್ಸ್ ಸರ್ಕಾರ ಸಂಸತ್ತಿನಲ್ಲಿ ಒಂದು ಕಾನೂನನ್ನು ಪಾಸ್ ಮಾಡಿದೆ. ಈ ಕಾನೂನನ್ನು ಉಲ್ಲಂಘಿಸಿದರೆ 6 ತಿಂಗಳು ಸಜೆ ಕೊಡಬಹುದಾಗಿದೆ. ಇಷ್ಟೇ ಅಲ್ಲ, ಸಜೆಯೊಂದಿಗೆ 75 ಸಾವಿರ ಯೂರೋ ಅಂದರೆ ಸುಮಾರು 50 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ಮಾಡೆಲ್ ಗಳಿಗೆ ಸರ್ಕಾರಿ ನಿರ್ದೇಶನದಲ್ಲಿ ಮಾಡೆಲಿಂಗ್ ಕೆರಿಯರ್ ಆರಂಭಿಸುವ ಮೊದಲು ಆರೋಗ್ಯದ ಬಗ್ಗೆ ಸರ್ಕಾರಿ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಮಾಡೆಲ್ ನ ಉದ್ದ ಮತ್ತು ಉದ್ದದ ಅನುಪಾತದಲ್ಲಿ ಮುಖದ ರಚನೆ ಪರೀಕ್ಷಿಸಬೇಕು. ನಂತರ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗುವುದು ಇಲ್ಲದಿದ್ದರೆ, ಕೆರಿಯರ್ ಶುರುವಾಗುವುದಿಲ್ಲ. ಈ ಸರ್ಟಿಫಿಕೇಟ್ ಇಲ್ಲದಿದ್ದರೆ, ಯಾವ ಮಾಡೆಲ್‌ಗೂ ಅಸೈನ್ ಮಾಡುವುದಿಲ್ಲ. ಯಾರಾದರೂ ಮಾಡೆಲ್ ಈ ಸರ್ಟಿಫಿಕೇಟ್ ಇಲ್ಲದೆ, ಮಾಡೆಲಿಂಗ್ ಮಾಡುತ್ತಿದ್ದರೆ ಅವರ ಮೇಲೆ ಸುಮಾರು 2 ಲಕ್ಷದ 70 ಸಾವಿರ ರೂ. ಜುಲ್ಮಾನೆ ವಿಧಿಸುತ್ತಾರೆ. ಯಾವುದಾದರೂ ಜಾಹೀರಾತಿನಲ್ಲಿ ಮಾಡೆಲ್ ನ ಫಿಗರ್‌ನ್ನು ಸ್ಪೆಷಲ್ ಎಫೆಕ್ಟ್ ಮೂಲಕ ತೆಳುಕಾಯದವರಂತೆ ತೋರಿಸಿದರೆ ಅದರ ಬಗ್ಗೆ ಸ್ಪಷ್ಟವಾಗಿ ಬರೆದಿರಬೇಕು. ಅದನ್ನು ಉಲ್ಲಂಘಿಸಿದರೆ ಜಾಹೀರಾತು ಏಜೆನ್ಸಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲು ಅಥವಾ ದಂಡ ವಿಧಿಸುವಿಕೆ ಅಥವಾ ಎರಡೂ ಆಗಬಹುದು. ಎಲ್ಲಿಯವರೆಗೆಂದರೆ, ಇಂಟರ್‌ನೆಟ್‌ನಲ್ಲಿ ಯಾವುದಾದರೂ ವೆಬ್‌ಸೈಟ್‌ನಲ್ಲಿ ಸೈಜ್ ಝೀರೋ ಅಥವಾ ಅನೆರೆಕ್ಸಿಯಾದ ಸಮರ್ಥನೆ ಕಂಡುಬಂದರೆ ಅದನ್ನೂ ಕಾನೂನಿನ ಪ್ರಕಾರ ಅಪರಾಧವೆಂದು ತಿಳಿಯಲಾಗುವುದು.
ಸೈಜ್ ಝೀರೋ
ದಪ್ಪಗಿರುವವರ ಎದುರು ಸೈಜ್ ಝೀರೋದ ಆಶಯವನ್ನು ಎಲ್ಲರೂ ತಿಳಿದುಕೊಂಡಿದ್ದಾರೆ. ಇದು ಝೀರೋ ಫಿಗರ್‌ನ ಪರ್ಯಾಯವಾಗಿಬಿಟ್ಟಿದೆ. ಆದರೆ ಈ ಸೈಜ್ ಝೀರೋ ಎಂದರೆ ಏನು? ಅಂದಹಾಗೆ ಇದು ಝೀರೋ ಸೈಜ್‌ನ ಮಹಿಳೆಯರ ಡ್ರೆಸ್‌ನ ಸೈಜ್ ಆಗಿದೆ. ದಪ್ಪಗಿರುವವರಲ್ಲಿ ಮಹಿಳೆಯರ ಫಿಗರ್‌ನ ಅಳತೆ ಎದೆ, ಸೊಂಟ ಮತ್ತು ನಿತಂಬಗಳಿಂದ ತೆಗೆದುಕೊಳ್ಳಲಾಗುತ್ತದೆ. ಒಂದು ಆದರ್ಶ ಫಿಗರ್‌ನ ಮಾನದಂಡ ಕ್ರಮವಾಗಿ 30-22-32 ಇಂಚು (76-56-81 ಸೆಂ.ಮೀ.) ನಿಂದ ಹಿಡಿದು 33-25-35 ಇಂಚು (84-64-89 ಸೆಂ.ಮೀ.)ನ ನಡುವೆ ಇದೆ.
ಏನೇ ಇರಲಿ, ಈ ನಿರ್ಬಂಧದ ನಂತರ ಫ್ರಾನ್ಸ್ ನಲ್ಲಿ ಇದರ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ವಿರೋಧದಲ್ಲಿ ತರ್ಕ ವ್ಯಕ್ತಪಡಿಸುವುದೇನೆಂದರೆ ಅನೆರೆಕ್ಸಿಯಾ ಮತ್ತು ತೆಳುಕಾಯ ಎರಡೂ ಒಂದೇ ಅಲ್ಲ. ಅನೆರೆಕ್ಸಿಯಾ ಒಂದು ರೀತಿಯ ಕಾಯಿಲೆಯಾದರೆ ತೆಳುಕಾಯ ಶರೀರದ ರಚನೆಯಾಗಿದೆ. ಒಂದು ಸಮತೋಲಿತ ಪರಿಮಾಣದಂತೆ 5 ಅಡಿ 7 ಇಂಚು ಉದ್ದಕ್ಕೆ 55 ಕೆ.ಜಿ. ಆದರ್ಶ ತೂಕವೆಂದು ಪರಿಗಣಿಸಲಾಗಿದೆ.
ಅನೆರೆಕ್ಸಿಯಾ ಎಂದರೇನು?
ಗಮನಿಸಬೇಕಾದ ವಿಷಯವೆಂದರೆ ಇಂದು ಹುಡುಗಿಯರು ತಮ್ಮ ಫಿಗರ್ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಇವರಲ್ಲಿ ಹೆಚ್ಚಿನವರು ಅನೆರೆಕ್ಸಿಯಾ ಪೀಡಿತರಾಗಿರುತ್ತಾರೆ. ಅನೆರೆಕ್ಸಿಯಾ ಎಂತಹ ಮೆಡಿಕಲ್ ಸ್ಥಿತಿಯೆಂದರೆ ಅದರಲ್ಲಿ ಹಸಿವು ಸತ್ತೇಹೋಗುತ್ತದೆ. ಇದು ಸಂಪೂರ್ಣವಾಗಿ ಯಾವುದೇ ಕಾಯಿಲೆ ಅಲ್ಲ. ಇದನ್ನು ಒಂದು ರೀತಿಯ ಭಾವನಾತ್ಮಕ ವಿಕಾರವೆಂದು ತಿಳಿಯಲಾಗುವುದು. ದಪ್ಪಗಾಗುವ ಭಯದಿಂದ ಜನ ಊಟ ಮಾಡಲು ಹೆದರುತ್ತಾರೆ. ಆಗ ಅನೆರೆಕ್ಸಿಯಾ ಎಂದು ಕರೆಯಲಾಗುತ್ತದೆ. ಅದನ್ನು ಈಟಿಂಗ್ ಡಿಸಾರ್ಡರ್ ಎಂದೂ ಕರೆಯುತ್ತಾರೆ.
ಇಂತಹ ಡಿಸಾರ್ಡರ್ ಹುಡುಗರಿಗಿಂತ ಹುಡುಗಿಯರಲ್ಲಿ ಹೆಚ್ಚಾಗಿ ಉಂಟಾಗುತ್ತದೆ. ಅಂತಹ ಹುಡುಗಿಯರು ಊಟ ಮಾಡಿದ ನಂತರ ಶರೀರದಲ್ಲಿ ಕೊಬ್ಬು ಶೇಖರಣೆಯಾಗದಿರಲೆಂದು ಬಾಯಿಗೆ ಬೆರಳು ಹಾಕಿ ಬಲವಂತವಾಗಿ ವಾಂತಿ ಮಾಡಲು ತೊಡಗುತ್ತಾರೆ.
ಅನೆರೆಕ್ಸಿಯಾಗೆ ಬಲಿ
ಈ ಡಿಸಾರ್ಡರ್‌ನಿಂದ ಸಾಯುತ್ತಿರುವ ಮಾಡೆಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದುವರೆಗೆ ಈ ಕಾಯಿಲೆಯಿಂದ ಸುಮಾರು 600ಕ್ಕೂ ಹೆಚ್ಚಿನ ಜನರು ತೀರಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಸೈಜ್ ಝೀರೋ ಡಯೆಟ್ ಬ್ರೆಝಿಲಿಯನ್ ಮಾಡೆಲ್ ಅನಾ ಕೆರೋಇನಾ ರೆಸ್ಟೆನ್‌ಳ ಜೀವ ತೆಗೆದಿತ್ತು. ಅವರಿಗೆ ಯಾವುದೇ ಡಯೆಟ್ ಚಾರ್ಟ್ ಇರಲಿಲ್ಲ. ಅವರು ಕೇವಲ ಸೇಬು ಮತ್ತು ಟೊಮೇಟೊ ತಿನ್ನುತ್ತಿದ್ದರು. ಹೀಗೆಯೇ ಅನೆರೆಕ್ಸಿಯಾದ ತಾಜಾ ಬಲಿ ಕ್ಯಾಲಿಪೋರ್ನಿಯಾದ ಪ್ರಸಿದ್ಧ ಮಾಡೆಲ್ ರಶೈಲ್ ಫರಾಕ್ ಸತತವಾಗಿ ಸಾವಿನತ್ತ ಸಾಗುತ್ತಿದ್ದಾರೆ. ಅವರು ದೀರ್ಘಕಾಲದಿಂದ ಅನೆರೆಕ್ಸಿಯಾ ಪೀಡಿತರಾಗಿದ್ದಾರೆ. 37 ವರ್ಷಗಳ ಫರಾಕ್‌ರ ತೂಕ ಸುಮಾರು 18 ಕೆ.ಜಿ. ಮಾತ್ರ. ಈ ತೂಕದಿಂದಾಗಿ ಯಾವ ಆಸ್ಪತ್ರೆಯೂ ಅವರನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಆದರೂ ಚಿಕಿತ್ಸೆ ನಡೆಯುತ್ತಿದೆ. ಆದರೆ ಅದು ಬಹಳ ದುಬಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಶೈಲ್ ಫರಾಕ್‌ರ ಚಿಕಿತ್ಸೆಗೆ ಫಂಡ್ ಸೇರಿಸಲಾಗುತ್ತಿದೆ.
ರಶೈಲ್ ಗೆ ತಮ್ಮ ತಪ್ಪಿನ ಅರಿವಾಗಿದೆ. ಅವರು ಗುಣಮುಖರಾಗಲು ಇಚ್ಛಿಸುತ್ತಾರೆ. ಆದರೆ ಚಿಕಿತ್ಸೆಯ ವೆಚ್ಚ ಭರಿಸಲು ಅವರಿಗೆ ಸಾಧ್ಯವಿಲ್ಲ. ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ರಶೈಲ್ ಹೀಗೆ ಮನವಿ ಮಾಡಿದ್ದಾರೆ. ನನ್ನ ಹೆಸರು ರಶೈಲ್. ನನಗೆ ಸಹಾಯ ಮಾಡಿ. ನನಗೆ ನಿಮ್ಮ ಸಹಾಯದ ಅಗತ್ಯ ಇದೆ. ರಶೈಲ್ ಮತ್ತು ಅವಳ ಗಂಡ `ಗೋ ಫಂಡ್ ಮಿ’ ಎಂಬ ಪೇಜ್ ಆರಂಭಿಸಿದ್ದಾರೆ. ಈ ಪೇಜ್ ಮೂಲಕ ವಿಶ್ವದಾದ್ಯಂತ ಸಹಾಯಕ್ಕಾಗಿ ಮನವಿ ಮಾಡಲಾಗಿದೆ. ಆದರೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಈಟಿಂಗ್ ಡಿಸಾರ್ಡರ್ ಬಗ್ಗೆ ಸಂಶೋಧನೆ ಮಾಡುತ್ತಿರುವ ತಜ್ಞರ ಟೀಂ ಹೇಳುವುದೇನೆಂದರೆ ಚಿಕಿತ್ಸೆಗಾಗಿ ಫಂಡ್ ಸೇರಿಸಿದರೂ ಅವರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಅವರು ಸರಿಹೋಗುವುದು ಅನುಮಾನ.
ಡಯೆಟ್‌ನ ಭ್ರಮೆಯಲ್ಲಿ
ತೆಳುಕಾಯದವರಾಗುವ ಇಚ್ಛೆ ಬರೀ ಹುಡುಗಿಯರಷ್ಟೇ ಅಲ್ಲ, ಬ್ರಿಟಿಷ್ ರೊಮ್ಯಾಂಟಿಕ್ ಕವಿ ಲಾರ್ಡ್ ಬೈರನ್‌ಗೂ ಇತ್ತು! ತೆಳುಕಾಯದ ಬಯಕೆಯಲ್ಲಿ ಈ ಬ್ರಿಟಿಷ್ ಕವಿ ವರ್ಷದ ಎಲ್ಲ ಹವಾಮಾನದಲ್ಲೂ ಬೆವರು ಸುರಿಸಿ ತೆಳುವಾಗುವ ಇಚ್ಛೆಯಲ್ಲಿ ಉಣ್ಣೆಯ ಕೋಟ್ ಧರಿಸುತ್ತಿದ್ದರು. ಬೆಳಗ್ಗೆ ಟಿಫಿನ್‌ಗೆ 1 ಬ್ರೆಡ್ ಸ್ಲೈಸ್, 1 ಕಪ್ ಟೀ, ಸಂಜೆ 1 ಕಪ್ ಗ್ರೀನ್ ಟೀ ಮತ್ತು ಡಿನ್ನರ್‌ನಲ್ಲಿ ಕೊಂಚ ಪಲ್ಯ ತಿನ್ನುತ್ತಿದ್ದರು. 1806ರಲ್ಲಿ ಬೈರನ್‌ರ ತೂಕ 88 ಕೆಜಿ. ಇದ್ದುದು 1811ರಲ್ಲಿ 57 ಕೆ.ಜಿ. ಆಯಿತು.
ಆಸ್ಟ್ರಿಯಾದ ದೊರೆ ಫ್ರಾಂಕ್ಸ್ ಜೋಸೆಫ್‌ರ ಪ್ರೇಯಸಿ ಎಲಿಜಬೆತ್ ಬೆನ್ ವಿಟೆಲ್‌ಬಾಥ್ ಎಂದಿಗೂ ತಮ್ಮ ತೂಕ 48 ಕೆ.ಜಿ.ಗಿಂತಲೂ ಹೆಚ್ಚಾಗಲು ಬಿಡಲಿಲ್ಲ. ಅವರು ಊಟದಲ್ಲಿ ಬರೀ ಕಿತ್ತಳೆಹಣ್ಣು ಮತ್ತು ಹಾಲು ಸೇವಿಸುತ್ತಿದ್ದರು. ದಿನ ತಮ್ಮ ಸೊಂಟದ ಅಳತೆ ನೋಡುತ್ತಿದ್ದರು. ತೂಕ ಕೊಂಚ ಹೆಚ್ಚಾದರೂ ಊಟ ತಿಂಡಿ ಬಿಟ್ಟುಬಿಡುತ್ತಿದ್ದರು. ಹೀಗೆಯೇ ಲೇಡಿ ಡಯಾನಾ ಕೂಡ ತಮ್ಮ ಫಿಗರ್ ಬಗ್ಗೆ ಬಹಳ ಜಾಗರೂಕರಾಗಿದ್ದರು. ಬಹಳ ಅಳತೆ ಮಾಡಿ ಊಟ ಮಾಡುತ್ತಿದ್ದರು.
ಅಂದಹಾಗೆ ಸೈಜ್ ಝೀರೋದ ಕಾನ್ಸೆಪ್ಟ್ ಪಶ್ಚಿಮ ದೇಶಗಳಲ್ಲಿ ಶುರುವಾಯಿತು. ಹಾಲಿವುಡ್ ನಟಿಯರಾದ ಕ್ಯಾಟಿ ಮಾಸ್, ಜೇಡಿ ಕಿಡಿ, ಸಾರಾ ಜೆಸಿಕಾ, ಕೇಟ್ ಬೋಸ್‌ರ್ಥ್, ಎಲೆಕ್ಸಾ ಚುಂಗೀ, ನಿಕೋಲ್ ರಿತ್ಶೆ ತಮ್ಮ ಝೀರೋ ಸೈಜ್‌ಗಾಗಿ ಪ್ರಸಿದ್ಧರಾಗಿದ್ದಾರೆ. ಆದರೆ ಇದೇ ಸೈಜ್ ಝೀರೋ ಇಂದು ಪಶ್ಚಿಮದ ಫ್ಯಾಷನ್ ಪ್ರಪಂಚದ ಕುತ್ತಿಗೆಗೆ ನೇಣಿನ ಕುಣಿಕೆಯಾಗಿದೆ. ಆದರೆ ಈಗ ಅದರಿಂದ ಹಿಂದೆ ಸರಿಯುವ ಸಿದ್ಧತೆ ಶುರುವಾಗಿದೆ. ಒಂದು ಕಡೆ ಒಂದರ ನಂತರ ಇನ್ನೊಂದು ದೇಶ ಸೈಜ್ ಝೀರೋಗೆ ನಿರ್ಬಂಧ ವಿಧಿಸುತ್ತಿದ್ದರೆ, ಇನ್ನೊಂದು ಕಡೆ ಅರಮಾನಿ, ವಿಕ್ಟೋರಿಯಾ ಬೆಕ್‌ಹ್ಯಾಮ್ ರಂತಹ ಹೆಸರಾಂತ ಫ್ಯಾಷನ್ ಹೌಸ್‌ಗಳು ಸೈಜ್ ಝೀರೋ ಮಾಡೆಲ್ ಗಳಿಂದ ಕೆಲಸ ಮಾಡಿಸದಿರಲು ನಿರ್ಧರಿಸಿದ್ದಾರೆ.
ಪಾಶ್ಚಾತ್ಯ ಫ್ಯಾಷನ್ ಲೋಕದಿಂದ ಭಾರತದಲ್ಲೂ ಸೈಜ್ ಝೀರೋದ ಚಾಲನೆ ಶುರುವಾಯಿತು. ಕರೀನಾ ಕಪೂರ್ ಖಾನ್ ಸೈಜ್ ಝೀರೋದ ಪರ್ಯಾಯವಾದರು. ನಂತರ ಕತ್ರೀನಾ ಕೈಫ್, ಪ್ರಿಯಾಂಕಾ ಚೋಪ್ರಾರಿಂದ ಹಿಡಿದು ದೀಪಿಕಾ ಪಡುಕೋಣೆಯವರೆಗೆ ಬಹಳಷ್ಟು ನಟಿಯರು ಈ ದಾರಿಯಲ್ಲಿ ನಡೆದರು. ಆದರೆ ನಮ್ಮಲ್ಲಿಂದು ವಿದ್ಯಾಬಾಲನ್, ಸೋನಾಕ್ಷಿ ಸಿನ್ಹಾ, ಪರಿಣಿತಿ ಚೋಪ್ರಾ, ಹುಮಾ ಖುರೇಶಿ, ಸನ್ನಿ ಲಿಯೋನ್‌ರವರು ಸೈಜ್ ಝೀರೋ ಆಗಿಲ್ಲದಿದ್ದರೂ ಪ್ರೇಕ್ಷಕರ ಮನದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಜನಪ್ರಿಯತೆಗೆ ಝೀರೋ ಸೈಜ್ ಮುಖ್ಯವಲ್ಲ ಎಂದು ಸಾಬೀತಾಗಿದೆಯಲ್ಲ….?
– ಡಾ. ಪದ್ಮಜಾ