ವಿನಯಾ ಪ್ರಸಾದ್ ಅಭಿನೇತ್ರಿ, ನಿರ್ದೇಶಕಿ, ನಿರ್ಮಾಪಕಿ
ಖಿನ್ನತೆ ಎಲ್ರಿಗೂ ಬಂದು ಹೋಗುತ್ತೆ. ಬಂದ ತಕ್ಷಣ ಕೊಡವಿಕೊಂಡು ಎದ್ದು ನಿಲ್ಲುವಂಥ ಮನೋಭಾವನೆ ಬೆಳೆಸಿಕೊಳ್ಳಬೇಕು. ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಹೇಳುವ ಖ್ಯಾತ ಪ್ರಬುದ್ಧ ಕಲಾವಿದೆ ವಿನಯಾ ಪ್ರಸಾದ್ ಅವರ ಬಗ್ಗೆ ಸಂಪೂರ್ಣ ವಿವರ ಪಡೆಯೋಣವೇ…..?
”ಕನ್ನಡ ಚಿತ್ರರಂಗದ ಖ್ಯಾತ ಕಲಾವಿದೆ ವಿನಯಾ ಪ್ರಸಾದ್ ಅವರ ಬಗ್ಗೆ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ ಅನಿಸುತ್ತೆ. ತನ್ನ ಸಹಜ ಸುಂದರ ಅಭಿನಯದಿಂದ ಕನ್ನಡದ ಪ್ರೇಕ್ಷಕರ ಮನಗೆದ್ದಂಥ ಈ ಕಲಾವಿದೆ `ಗಣೇಶನ ಮದುವೆ’ ಚಿತ್ರದ ಮೂಲಕ ಅನಂತ್‌ನಾಗ್ ಅವರ ಜೊತೆ ನಟಿಸಿ ಪರಿಚಯವಾದರು. ಅದಕ್ಕೂ ಮೊದಲು `ನಮ್ಮ ನಮ್ಮಲ್ಲಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಬಹುತೇಕ ಕನ್ನಡದ ಎಲ್ಲ ನಾಯಕ ನಟರುಗಳ ಜೊತೆ ನಟಿಸಿರುವ ವಿನಯಾ ಪ್ರಸಾದ್ ತಮಿಳು, ತೆಲುಗು ಹಾಗೂ ಹೆಚ್ಚಾಗಿ ಮಲಯಾಳಂ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಬಂದಂಥ `ಬೆಂಗಳೂರ್ ಡೇಸ್’ ಮಲಯಾಳಂ ಚಿತ್ರದಲ್ಲಿ ವಿನಯಾ ಪ್ರಸಾದ್ ಸಾಕಷ್ಟು ಗಮನ ಸೆಳೆದಿದ್ದಾರೆ. ಕ್ರಿಯೇಟಿವಿಟಿಯತ್ತ ಹೆಚ್ಚು ಆಸಕ್ತಿ ವಹಿಸುವಂಥ ವಿನಯಾ, ಕ್ಯಾಮೆರಾ ಹಿಂದೆ ಕೂಡಾ ಸಾಕಷ್ಟು ಸಾಧನೆ ಮಾಡಿದ್ದಿದೆ. ಇತ್ತೀಚೆಗಷ್ಟೆ ವಿನಯಾ, `ಲಕ್ಷ್ಮಿನಾರಾಯಣರ ಪ್ರಪಂಚವೇ ಬೇರೆ’ ಎನ್ನುವ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣದಲ್ಲಿ ಬಿಝಿಯಾಗಿರುವ ವಿನಯಾ ಬಿಡುವು ಮಾಡಿಕೊಂಡು ಮಾತನಾಡಿದ್ದಾರೆ. ನಟಿಯಾಗಿ, ಪತ್ನಿಯಾಗಿ, ಗೃಹಿಣಿಯಾಗಿ, ಅಮ್ಮನಾಗಿ ಹಾಗೂ ಒಬ್ಬ ಮಹಿಳಾ ನಿರ್ದೇಶಕಿಯಾಗಿ ತಮ್ಮೆಲ್ಲ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಪಕ್ಕದ್ಮನೆ ಹುಡುಗಿ ಇಮೇಜಿದ್ದ ನಿಮಗೆ ಗ್ಲಾಮರಸ್ ಲೋಕದಲ್ಲಿ ಬೇರೆ ನಟಿಯರ ಜೊತೆ ಸ್ಪರ್ಧೆಗಿಳಿದಾಗ ಹೇಗನಿಸಿತ್ತು?
ಕಥೆ, ಪಾತ್ರ, ನಿರ್ದೇಶಕ ಇವೆಲ್ಲ ಬಹಳ ಮುಖ್ಯ ಎಂಬುದು ನನಗೆ ಗೊತ್ತಿತ್ತು. ಫಣಿರಾಮಚಂದ್ರ ಅವರು `ಗಣೇಶನ ಮದುವೆ’ ಚಿತ್ರಕ್ಕೆ ಆಯ್ಕೆ ಮಾಡಿದ್ದಾಗ ಲಂಗದಾವಣಿ, ಕನ್ನಡಕ ಧರಿಸಿ ಸಂಗೀತದತ್ತ ಒಲವಿರುವ ಹುಡುಗಿಯಾಗಿ, ಅಷ್ಟೇ ಜಗಳಗಂಟಿಯಾಗಿರುವಂಥ ಪಾತ್ರವನ್ನು ಹೆಗಲಿಗೇರಿಸಿದ್ದರು. ಜನಕ್ಕೆ ಇಷ್ಟವಾಯ್ತು, ಬರೀ ಗ್ಲಾಮರ್ ಅಷ್ಟೆ ಸಾಲದು. ಪಾತ್ರಕ್ಕೆ ಲೈಫ್ ಇರಬೇಕು ಎಂಬುದು ಸಾಬೀತಾಗಿತ್ತು. ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವಂಥ ಪಾತ್ರಗಳೇ ನನಗೆ ಸಿಗುತ್ತ ಹೋಯ್ತು. ಪ್ರಭಾಕರ್ ಅವರ ಜೊತೆ ನಟಿಸಿದ್ದಂಥ `ಕರುಳಿನ ಕೂಗು’ ಚಿತ್ರ ಬಹಳ ಜನಪ್ರಿಯವಾಗಿತ್ತು. ವಿಷ್ಣುರ್ಧನ್ ಅವರ ಜೊತೆಯಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದೆ. `ಬಾರೆ ಸಂತೆಗೆ ಹೋಗೋಣ ಬಾ’ ಹಾಡು ಇಂದಿಗೂ ಜನಪ್ರಿಯ.
ಪರಭಾಷಾ ಚಿತ್ರಗಳಲ್ಲೂ ನಟಿಸಿದ್ದೀರಿ…. ಹೇಗಿತ್ತು ಅನುಭವ?
ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಸರಳತೆಗೆ ಹೆಚ್ಚು ಒತ್ತು ಕೊಡುತ್ತಾರೆ. ಸ್ಟಾರ್‌ಗಳಂತೆ ಯಾರೂ ವರ್ತಿಸೋದಿಲ್ಲ. ಕಥೆಗಾರನಿಗೆ ಹೆಚ್ಚು ಗೌರವ. ಕಥೆ ಕೇಳುವಾಗ ನಾಯಕರು ಅವರ ಕಾಲ ಬಳಿ ಕುಳಿತು ಕೇಳುವುದನ್ನು ನಾನೇ ನೋಡಿದ್ದೀನಿ. ಪ್ರತಿಯೊಂದು ಪ್ರಾತಕ್ಕೂ ಇಂಪಾರ್ಟೆನ್ಸ್ ಕೊಡಲಾಗುತ್ತೆ.
`ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’….. ಏನಿದು ನಿಮ್ಮ ಹೊಸ ಪ್ರಾಜೆಕ್ಟ್?
ನೂರಾರು ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವೆ. ನಾನು ಬಹಳ ವರ್ಷಗಳಿಂದ ಒಂದೊಳ್ಳೆ ಚಿತ್ರ ನಿರ್ದೇಶಿಸಬೇಕು ಅಂದುಕೊಳ್ತಿದ್ದೆ. `ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಎನ್ನುವ ಚಿತ್ರದ ಮೂಲಕ ಆ್ಯಕ್ಷನ್ ಕಟ್ ಹೇಳಿದ್ದೀನಿ. ನನ್ನ ಮಗಳಾದ ಪ್ರಥಮಾ ನಾಯಕಿಯಾಗಿ ನಟಿಸಿದ್ದಾಳೆ. ಕಥೆ, ಚಿತ್ರಕಥೆ ನನ್ನ ಪತಿ ಜ್ಯೋತಿ ಪ್ರಕಾಶ್ ಅತ್ರೆ ರಚಿಸಿದ್ದಾರೆ. ನಿರ್ಮಾಣ, ನಿರ್ದೇಶನ ನನ್ನದು. ಈ ಕಥೆ ಹೊಳೆದದ್ದು ಹದಿನೆಂಟು ವರ್ಷಗಳ ಹಿಂದೆ, ನಾನಾಗ `ಮಂಗಳಸೂತ್ರ’ ಚಿತ್ರದಲ್ಲಿ ವಿಷ್ಣು ಅವರ ಜೊತೆ ನಟಿಸುತ್ತಿದ್ದೆ. ನಾವಿಬ್ಬರೂ ಒಟ್ಟಿಗೆ ನಟಿಸಬೇಕು, ನಾನು ನಿರ್ದೇಶಿಸಬೇಕು ಅಂತ ಅಂದುಕೊಂಡಿದ್ದೆ. ಆದರೆ ಕೂಡಿಬರಲಿಲ್ಲ. ನಾನು ನಿರ್ದೇಶನ ಮಾಡುವುದಾದರೆ ಇದೇ ಕಥೆಯನ್ನೇ ಮಾಡಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಕಥೆ, ಚಿತ್ರಕಥೆ ನನ್ನನ್ನು ತುಂಬಾ ಆಕರ್ಷಿಸಿಬಿಟ್ಟಿತ್ತು. ನನ್ನ ಮಗಳನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡೆ. ಏಕೆಂದರೆ ಆ ಪಾತ್ರಕ್ಕೆ ಆಕೆ ಸೂಟ್ ಆಗ್ತಾಳೆ. ವಿಭಿನ್ನ ಶೀರ್ಷಿಕೆಯಾಗಿರೋದ್ರಿಂದ ಹೆಚ್ಚು ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.
ನೀವು ನಿರ್ದೇಶಕಿಯಾಗಿ ಸೆಟ್ಟಲ್ಲಿ ಹೇಗೆ?
ಡೈರೆಕ್ಟರ್ ಅಂದಾಕ್ಷಣ ದಬ್ಬಾಳಿಕೆ ಮಾಡೋದು ಅಂದುಕೊಳ್ತಾರೆ. ತುಂಬಾ ತಾಳ್ಮೆ ಇಟ್ಕೊಂಡು ಕೆಲಸ ಮಾಡ್ಕೋಬೇಕಾಗುತ್ತೆ. ಈ ದೃಶ್ಯವನ್ನು ನಾನು ಈ ರೀತಿ ಕಲ್ಪಿಸಿಕೊಂಡಿದ್ದೇನೆ. ನೀವು ಹೀಗೆ ಮಾಡಿದರೆ ಚೆನ್ನಾಗಿರುತ್ತೆ ಅಂತ ನಟಿಸಿ ತೋರಿಸಿ ನನ್ನ ಕಲಾವಿದರಿಂದ ಕೆಲಸ ತೆಗೆಯುತ್ತೇನೆ. ನಾವು ಹೇಳೋ ರೀತಿ ಅವರಿಗೆ ಕನ್‌ವಿನ್ಸ್ ಆಗಿರಬೇಕು. ಕಲಾವಿದರಿಗೆ ಗೌರವ ಕೊಟ್ಟು ಗೌರವ ಪಡೆಯೋದ್ರಲ್ಲಿ ಹೆಚ್ಚು ಸುಖ.
ನಿಮ್ಮ ಮಗಳು ಪ್ರಥಮಾ ಕೂಡಾ ನಿಮ್ಮ ಚಿತ್ರದಲ್ಲಿ ನಟಿಸ್ತಿದ್ದಾರೆ….
ಹೌದು ಎಲ್ಲ ಕಲಾವಿದರಂತೆ ಆಕೆ ಕೂಡಾ.
ಅತ್ಯಂತ ಬಿಝಿ ನಟಿಯಾಗಿದ್ದಾಗ ಮನೆ, ಮಕ್ಕಳು, ಸಂಸಾರ ಇದೆಲ್ಲವನ್ನು ಹೇಗೆ ತೂಗಿಸಿಕೊಂಡು ಹೋಗ್ತಿದ್ರಿ?
ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೆ ಸ್ಟ್ರಾಂಗ್ ವಿಲ್ ಪವರ್ ಇರಬೇಕು. ಅಷ್ಟೇ ಫ್ಯಾಮಿಲಿ ಸಪೋರ್ಟ್ ಕೂಡಾ ಮುಖ್ಯ. ಇಂದು ನಾನು ಒಬ್ಬ ವ್ಯಕ್ತಿಯಾಗಿ ಏನೇ ಸಾಧನೆ ಮಾಡಿದ್ರೂ ಅದರ ತಳಹದಿಯಾಗಿ ನಿಂತಂಥ ನನ್ನ ಕುಟುಂಬ ಕಾರಣ. ಅವರದ್ದೇ ಸಂಸ್ಕಾರ, ಅವರದ್ದೇ ಪ್ರೋತ್ಸಾಹ. ಉಡುಪಿಯಲ್ಲಿದ್ದಂಥ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ಅವಕಾಶಗಳು ಬಂದಾಗ ಇವಳು ಖಂಡಿತ ಮುಂದೆ ಬರ್ತಾಳೆ ಅಂತ ಪ್ರೋತ್ಸಾಹ ಕೊಟ್ಟರು ನನ್ನ ಕುಟುಂಬ, ನನ್ನ ಜೀವನದಲ್ಲಿ ಏರುಪೇರುಗಳು ಬಂದಾಗಲೂ ಸಹಾ ಅವರು ಜೊತೆಯಲ್ಲೇ ಇದ್ದು ಮನಸ್ಸನ್ನು ಕುಟುಂಬವನ್ನು ಗಟ್ಟಿ ಮಾಡುತ್ತಾ ಹೋದವರು ಅವರೇ. ಅವರಿಂದಲೇ ಇದೆಲ್ಲ ಸಾಧ್ಯವಾಯ್ತು.
ಮಗಳನ್ನು ಹೇಗೆ ನೋಡಿಕೊಳ್ತಿದ್ರಿ?
ಮನೆಯಲ್ಲಿ ನನ್ನ ಅಪ್ಪ ಅಮ್ಮ, ಅಕ್ಕ ತಂಗಿ ಎಲ್ಲರೂ ಇದ್ದರು. ನಮ್ಮದು ದೊಡ್ಡ ಕುಟುಂಬ. ಎಲ್ಲರೂ ಬಂದು ಹೋಗ್ತಿದ್ರು. ನಿಜ, ಮಕ್ಕಳನ್ನು ಮಿಸ್ ಮಾಡ್ಕೊತ್ತಿದ್ವಿ. ಹಾಗೇ ಅಂದುಕೊಂಡು ಕೂತರೇ ನಾನೇನು ಸಾಧನೆ ಮಾಡಲು ಸಾಧ್ಯವಿಲ್ಲ. ಇದೆರಡರ ನಡುವೆ ಈ ಒಂದು ಬ್ಯಾಲೆನ್ಸಿಂಗ್ ಇದೆಯಲ್ಲ ಪ್ರತಿಯೊಬ್ಬ ಮಹಿಳೆಗೂ ಅದು ದೊಡ್ಡ ಚಾಲೆಂಜಿಂಗ್. ಎಲ್ಲ ಉದ್ಯೋಗಸ್ಥ ಮಹಿಳೆಯರಂತೆ ನಾನು ಕೂಡಾ ಅಂಥ ಚಾಲೆಂಜ್‌ನ್ನು ಎದುರಿಸಿದ್ದೇನೆ. ಮಗಳು ಕೂಡಾ ಒಬ್ಬ ಒಳ್ಳೆಯ ಮನುಷ್ಯಳಾಗಿ, ಪ್ರಜೆಯಾಗಬೇಕೆಂದಷ್ಟೇ ನಾನು ಬಯಸಿದ್ದು. ಅವಳ ಭವಿಷ್ಯವನ್ನು ನಾನು ಕಟ್ಟಬೇಕು ಎನ್ನುವ ಕನಸು ನನ್ನದಾಗಿರಲಿಲ್ಲ. ಒಟ್ಟಿನಲ್ಲಿ ಅವಳು ಚೆನ್ನಾಗಿರಬೇಕು. ಒಂದೊಂದ್ಸಲ ಅನ್ಸುತ್ತೆ ಅವಳು ಚಿಕ್ಕವಳಾಗಿದ್ದಾಗ ನಾನು ಅವಳ ಜೊತೆ ಮನೆಯಲ್ಲಿರಲು ಆಗ್ಲಿಲ್ಲವಲ್ಲ, ಎಷ್ಟು ಮಿಸ್ ಮಾಡ್ಕೊಂಡ್ಲೋ ಅನ್ನೋ ಥಾಟ್ ಬರುತ್ತೆ. ಅಂಥ ಸಮಯದಲ್ಲಿ ಒಂದು ಖಿನ್ನತೆ ಬಂದುಬಿಡುತ್ತೆ. ಅದೇನೊ ಒಂದೊಳ್ಳೆ ಮಾತಿದೆಯಲ್ಲ ಭೂತ ಕಾಡುತ್ತೆ, ಭವಿಷ್ಯ ಕೊಲ್ಲುತ್ತೆ, ವರ್ತಮಾನದಲ್ಲಿ ಜೀವಿಸು ಅಂತ! ನಾನು ವರ್ತಮಾನದಲ್ಲಿ ಜೀವಿಸಿಕೊಂಡು ಬರ್ತಿದ್ದೀನಿ. ಈ ಖಿನ್ನತೆ ಎಲ್ರಿಗೂ ಬಂದು ಹೋಗುತ್ತೆ. ಬಂದ ತಕ್ಷಣ ಕೊಡವಿಕೊಂಡು ಎದ್ದು ನಿಲ್ಲುವಂಥ ಮನೋಭಾವನೆ ಬೆಳೆಸಿಕೊಳ್ಳಬೇಕು. ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು. ಇಲ್ಲಿಯವರೆಗೂ ನಾನು ಪಡೆದುಕೊಂಡಂಥ ಪ್ರೀತಿ, ಪ್ರೋತ್ಸಾಹ, ಹಾರೈಕೆ ಎಲ್ಲ ನಾನು ಗಳಿಸಿದಂಥ ಆಸ್ತಿ ಅಂತ ರೋಮಾಂಚನದಿಂದ ಹೇಳಿಕೊಳ್ತೀನಿ.
– ಸರಸ್ವತಿ