ತಾಯಿಯಾದ ಬಳಿಕ ಹಲವು ಸೆಲೆಬ್ರಿಟಿಗಳು ನಟನೆಗೆ ಗುಡ್‌ಬೈ ಹೇಳಿದರು. ಆದರೆ ಜೂಹಿ ತಮ್ಮ ಪಡಿಯಚ್ಚನ್ನು ಮದುವೆಯ ಬಳಿಕ ಉಳಿಸಿಕೊಳ್ಳಲು ಬಯಸಿದ್ದರು. ತಾವು ಅಂದುಕೊಂಡಿದ್ದನ್ನು ಅವರು ಮಾಡಿ ತೋರಿಸಿದರು.....!
1984ರಲ್ಲಿ ಮಿಸ್ ಇಂಡಿಯಾ ಆದ ಜೂಹಿ ಚಾವ್ಲಾ `ಪ್ರೇಮಲೋಕ'ದ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ಕಿಂದರಜೋಗಿ, ಶಾಂತಿ ಕ್ರಾಂತಿ, ರಣಧೀರ ಚಿತ್ರಗಳಲ್ಲಿ ಅವರನ್ನು ಮರೆಯುವಂತಿಲ್ಲ. ಅವರಿಗೆ 6 ವರ್ಷದ ಮಗಳು ಜಾಹ್ನವಿ ಹಾಗೂ 14 ವರ್ಷದ ಮಗ ಅರ್ಜುನ್ ಇದ್ದಾರೆ. ತಾಯಿಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಅವರು ಈಗಲೂ ತಮ್ಮ ಸ್ನಿಗ್ಧ ಚೆಲುವನ್ನು ಉಳಿಸಿಕೊಂಡಿದ್ದಾರೆ. ಅದಕ್ಕೂ ಮಿಗಿಲಾಗಿ ಅವರ ಮುಖ್ಯ ಆಕರ್ಷಣೆಯೆಂದರೆ ಮುಗುಳ್ನಗೆ, ಅದು ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದೆ. ತಮ್ಮ ಈ ಮುಗುಳ್ನಗೆಯಿಂದಲೇ ಅವರು ಭಾರತೀಯ ಚಿತ್ರರಂಗದ `ಹಸನ್ಮುಖಿ' ತಾರೆ ಎನಿಸಿದ್ದಾರೆ.
ಮಾಡೆಲ್ನಿಂದ ಅಭಿನೇತ್ರಿ ಹಾಗೂ ನಿರ್ಮಾಪಕಿಯಾದ ಜೂಹಿ ವಯಸ್ಸಿನ ಈ ಹಂತದಲ್ಲೂ ತಮ್ಮ ಸ್ಟಾರ್‌ಗಿರಿಯನ್ನು ಸಂಭಾಳಿಸಿಕೊಳ್ಳುವುದರ ಜೊತೆಗೆ ಕೌಟುಂಬಿಕ ಜೀವನದಲ್ಲೂ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಜೂಹಿ ಕುರಿತಾಗಿ ಅವರಿಂದಲೇ ಕೇಳಿ ತಿಳಿಯೋಣ :
ಯಾವ ಪೇರೆಂಟಿಂಗ್ ಸತ್ಯವನ್ನು ಗಮನದಲ್ಲಿಟ್ಟುಕೊಂಡು ನೀವು ಮಕ್ಕಳ ಪಾಲನೆ ಪೋಷಣೆ ಮಾಡಿದಿರಿ?
ಮಕ್ಕಳ ಒಳ್ಳೆಯ ಪೋಷಣೆಗೆ ಹಲವು ಪೇರೆಂಟಿಂಗ್ ನಿಯಮಗಳು ಅಗತ್ಯ. ಆದರೆ ನನಗೆ ಯಾವಾಗ ಒಂದು ವಿಶೇಷ ನಿಯಮದ ಅವಶ್ಯಕತೆ ಬೀಳುತ್ತೋ ಆಗ ಅದು ನನ್ನ ತಲೆಯಿಂದ ಹೊರಟುಹೋಗುತ್ತದೆ. ಇಂತಹದರಲ್ಲಿ ನಾನು ಒಂದು ಸಂಗತಿಯ ಬಗ್ಗೆ ಗಮನಹರಿಸುತ್ತೇನೆ, ಅದೇನೆಂದರೆ ನಾನು ಮಕ್ಕಳ ಮೇಲೆ ಯಾವುದೇ ವಿಚಾರ ಹೇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಅವರ ಕೆರಿಯರ್ ಬಗ್ಗೆ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನೀನು ನಟಿಯೇ ಆಗಬೇಕು, ನೀನು ನಟ ಆಗಬೇಕು ಎಂದು ಅವರ ಮೇಲೆ ಒತ್ತಡ ಹೇರುವುದಿಲ್ಲ. ನಿಮಗೆ ಏನಾಗಬೇಕೋ ಅದೇ ಆಗಿ ಎಂದು ಅವರಿಗೆ ಪರಿಪೂರ್ಣ ಸ್ವಾತಂತ್ರ್ಯ ಕೊಟ್ಟಿರುವೆ. ಅದಕ್ಕಾಗಿ ನನ್ನ ಸಂಪೂರ್ಣ ಬೆಂಬಲ ಅವರಿಗೆ ಇರುತ್ತದೆ. ಅವರು ನನ್ನ ಕನಸು ನನಸು ಮಾಡಬೇಕೆಂದು ನಾನೇನು ಬಯಸುವುದಿಲ್ಲ.
ನಿಮ್ಮ ತಾಯಿಯವರ ಯಾವ ಗುಣ ವಿಶೇಷವನ್ನು ನಿಮ್ಮಲ್ಲಿ ಕಾಣಬಹುದು?
ನನ್ನ ಅಮ್ಮ ಉದ್ಯೋಗಸ್ಥ ಮಹಿಳೆಯಾಗಿದ್ದರು, ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿರುತ್ತಿತ್ತು. ಅವರು ಅಷ್ಟೇ ಸುಂದರವಾಗಿದ್ದರು. ಮನೆ ಹಾಗೂ ಹೊರಗಿನ ಕೆಲಸಗಳನ್ನು ಅವರು ಬಹಳ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದರು. ಅವರ ಕಾರ್ಯವೈಖರಿ ಕಂಡು ನಾನೂ ಹಾಗೆಯೇ ಆಗಬೇಕೆಂದು ಯೋಚಿಸುತ್ತಿದ್ದೆ. ಒಂದು ಖೇದದ ಸಂಗತಿಯೆಂದರೆ, ಅವರೀಗ ನಮ್ಮ ನಡುವೆ ಇಲ್ಲ. ಈಗ ನನಗೆ ನನ್ನ ಅತ್ತೆಯೇ ಪ್ರೇರಣೆಯಾಗಿದ್ದಾರೆ. ಅವರು ಸದಾ ನನ್ನ ಜೊತೆಗೇ ಇರುತ್ತಾರೆ ಹಾಗೂ ನನ್ನದೇ ಆದ ರೀತಿಯಲ್ಲಿ ನನಗೆ ಬದುಕಲು ಅವಕಾಶ ಕೊಡುತ್ತಾರೆ. ಮದುವೆಯಾದಾಗಿನಿಂದ ಹಿಡಿದು ಈವರೆಗೆ ಅವರು ನನಗೆ, `ಜೂಹಿ, ನಿನಗೆ ಏನು ಇಷ್ಟವಾಗುತ್ತೋ ಅದನ್ನೇ ಮಾಡು,' ಎಂದು ಹೇಳುತ್ತಿರುತ್ತಾರೆ. ನನಗೂ ಅವರ ಹಾಗೆ ಒಬ್ಬ ಆದರ್ಶ ಅತ್ತೆ ಆಗಬೇಕು ಅನಿಸ್ತಿದೆ.