ದೇಶದ ಭವಿಷ್ಯವನ್ನು ರೂಪಿಸುವ ಹಾಗೂ ಆರೋಗ್ಯವಂತ ನಾಗರಿಕರನ್ನು ತಯಾರು ಮಾಡುವ ಮಹಿಳೆಯರೇ ಮತ್ತಿನಲ್ಲಿ ಮುಳುಗಿಹೋದರೆ ಸಮಾಜ ಹಾಗೂ ಕುಟುಂಬಕ್ಕೆ ಆರೋಗ್ಯಕರ ವಾತಾವರಣ ಕಲ್ಪಿಸಿಕೊಡಲು ಸಾಧ್ಯವೇ? ಅದನ್ನು ಅರಿತುಕೊಳ್ಳಲು ಪ್ರಯತ್ನಿಸಿ…..!
ಕಳೆದ ಕೆಲವು ವರ್ಷಗಳಿಂದ ಮಹಿಳೆಯರ ಕುಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಒಂದು ಮುಖ್ಯ ಕಾರಣವೇನೆಂದರೆ, ಮದ್ಯ ತಯಾರಿಕಾ ಕಂಪನಿಗಳು ಮದ್ಯಪಾನ ಮಾಡುವ ಮಹಿಳೆಯರನ್ನು ಆಧುನಿಕ, ಸ್ವತಂತ್ರ ಪ್ರವೃತ್ತಿಯ, ಪುರುಷರ ಸರಿಸಮಾನ ಎಂದು ಬಿಂಬಿಸುತ್ತಿರುವುದು. ಬಿಯರ್, ವೈನ್‌ಗಳು ಈಗ ಹಳೆಯದಾಗಿ ಹೋಗಿವೆ. ಈಗ ಮದ್ಯದ ಅನೇಕ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿವೆ.
ಮಹಿಳೆಯರ ಆಯ್ಕೆ ಹಾಗೂ ಆಸಕ್ತಿಯಲ್ಲೂ ಬದಲಾವಣೆ ಉಂಟಾಗಿದೆ. ಮೊದಲು ಮದ್ಯ ನಗರ ಪ್ರದೇಶದ ಕೆಲವೇ ಕೆಲವು ಬಾರ್‌ಗಳಲ್ಲಿ ಲಭಿಸುತ್ತಿತ್ತು. ಆದರೆ ಈಗ ಮಹಿಳೆಯರ ಆಸಕ್ತಿಯನ್ನು ಗಮನಿಸಿ ಹೋಟೆಲ್ ಗಳು, ಬಾರ್‌ಗಳು ಪಬ್‌ಗಳು ಹಾಗೂ ಡಿಸ್ಕೋ ಥೆಕ್‌ಗಳಲ್ಲಿ ಮದ್ಯದ ಅನೇಕ ಬ್ರ್ಯಾಂಡ್‌ಗಳು ಸುಲಭವಾಗಿ ಲಭಿಸುತ್ತವೆ. ವೋಡ್ಕಾ, ವೈನ್, ವಿಸ್ಕಿ ಮುಂತಾದವುಗಳ ಕಾಕ್‌ಟೇಲ್ ಗಳು ಆಧುನಿಕ ಯುವತಿಯರು ಹಾಗೂ ಗೃಹಿಣಿಯರಲ್ಲಿ ಪ್ರಚಲಿತವಾಗುತ್ತಿವೆ. ಅವರು ಕಿಟಿ ಪಾರ್ಟಿಗಳಲ್ಲಿ, ಮದುವೆ ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಕುಡಿಯಲು, ಕುಡಿಸಲು ಹಿಂದೇಟು ಹಾಕುವುದಿಲ್ಲ.
ಮದ್ಯ ಸೇವನೆಯ ಹಳೆಯ ಪರಂಪರೆಗಳಲ್ಲಿ ಮದ್ಯ ಸೇವಿಸುವ ಮಹಿಳೆಯರನ್ನು 2 ವರ್ಗಗಳಲ್ಲಿ ವಿಂಗಡಿಸಲಾಗುತ್ತಿತ್ತು. ಮೊದಲ ಗುಂಪಿನಲ್ಲಿ ಗುಡಿಸಲುಗಳಲ್ಲಿ ವಾಸಿಸುವ ದಲಿತರು, ವೇಶ್ಯೆಯರು ಬರುತ್ತಾರೆ. ಅವರಿಗೆ ನಶೆ ಒಂದು ರೀತಿಯ ಜೀವನೋಪಾಯದ ಮಾರ್ಗವಾಗಿತ್ತು. ಎರಡನೇ ಗುಂಪಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರೇರಿತರಾದವರು, ಭೌತಿಕ ಸುಖ ಸೌಲಭ್ಯ ಹೊಂದಿದ ಮಹಿಳೆಯರು ಈ ಗುಂಪಿಗೆ ಸೇರುತ್ತಾರೆ.
ಅವರು ಲೇಟ್‌ನೈಟ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದನ್ನು ಹಾಗೂ ಗಂಡನ ಜೊತೆಗೆ ಎಕ್ಸಿಕ್ಯೂಟಿವ್ ಪಾರ್ಟಿಗಳಲ್ಲಿ ಕುಡಿಯುವುದನ್ನು ಸ್ಟೇಟಸ್ ಎಂದು ಭಾವಿಸುತ್ತಾರೆ. ಈಗ ಹೊಸದೊಂದು ವರ್ಗ ಸೇರ್ಪಡೆಗೊಂಡಿದೆ. ಕಾಲೇಜಿಗೆ ಹೋಗುತ್ತಿರುವ ಪ್ರತಿಷ್ಠಿತ ವರ್ಗದ ಹುಡುಗಿಯರು ತಡರಾತ್ರಿಯ ತನಕ ಡ್ಯಾನ್ಸ್ ಫ್ಲೋರ್‌ಗಳ ಮೇಲೆ ಕುಡಿದು, ಕುಣಿದು ಕುಪ್ಪಳಿಸುತ್ತಿರುತ್ತಾರೆ.
ಈ ವಿಷಯದ ಕುರಿತಂತೆ ಮನೋಚಿಕಿತ್ಸಕಿ ಶಕುಂತಲಾ ಹೀಗೆ ಹೇಳುತ್ತಾರೆ, “ವೃತ್ತಿಪರ ಮಹಿಳೆಯರು, ಕುಡಿಯುವುದನ್ನು `ಸ್ಟೇಟಸ್ ಸಿಂಬಲ್’ ಎಂದು ಭಾವಿಸಿದ್ದಾರೆ. ಅವರು ಕುಡಿಯುವುದರ ಮೂಲಕ ತಮ್ಮನ್ನು ತಾವು ಪುರುಷರ ಸರಿಸಮಾನ ಎಂದು ಭಾವಿಸುತ್ತಾರೆ. ಭೌತಿಕ ಸುಖ ಸೌಲಭ್ಯ ಜಾಸ್ತಿ ಇರುವ ಪುರುಷರು ಕುಡಿಯುವುದಾದರೆ, ನಾವೇಕೆ ಕುಡಿಯಬಾರದು? ಎನ್ನುವುದು ಅವರಿಗೆ ಕುಡಿಯಲು ಪ್ರೇರೇಪಿಸುತ್ತದೆ.
ಜೈಪುರ್‌ನ ಬಿರ್ಲಾ ಸಭಾಂಗಣದಲ್ಲಿ ನಡೆದ `ಮಹಿಳೆ ಹಾಗೂ ನಶೆ’ ವಿಷಯದ ಚರ್ಚೆಯಲ್ಲಿ ಹೊರಬಿದ್ದ ಕೆಲವು ಸಂಗತಿಗಳು ಅಚ್ಚರಿ ಮೂಡಿಸುವಂತಿವೆ. ಅಲ್ಲಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅತಿ ಹೆಚ್ಚು ಮದ್ಯ ಸೇವನೆ ಮಾಡುವ ಮಹಿಳೆಯರ ವಯಸ್ಸು 21 ರಿಂದ 35ರ ನಡುವೆ ಇದೆ. ಶೇ.42 ರಷ್ಟು ಜನರು ಉದ್ಯೋಗಸ್ಥ ಮಹಿಳೆಯರು, ಶೇ.31ರಷ್ಟು ಜನರು ಏಕಾಂಗಿತನಕ್ಕೆ ತುತ್ತಾದವರು, ಶೇ.32ರಷ್ಟು ಜನರು ವಿಚ್ಛೇದಿತರು ಹಾಗೂ ಶೇ.80ರಷ್ಟು ದೇಹ ವಿಕ್ರಯ ಮಾಡುವ ಮಹಿಳೆಯರು ಮದ್ಯ ಹಾಗೂ ಇತರೆ ಮಾದಕ ವ್ಯಸನಗಳಿಗೆ ತುತ್ತಾಗಿದ್ದಾರೆ.
ಇಲ್ಲಿ ಉದ್ಭವಿಸುವ ಒಂದು ಬಹುಮುಖ್ಯ ಪ್ರಶ್ನೆಯೆಂದರೆ, ಬೇರೆ ಬೇರೆ ವರ್ಗಗಳ ಮಹಿಳೆಯರು ತಮಗೆ ಗೊತ್ತಿದ್ದೊ, ಗೊತ್ತಿಲ್ಲದೆಯೋ ಕುಡಿತದ ಈ ಗೀಳಿಗೆ ಏಕೆ ಅಂಟಿಕೊಳ್ಳುತ್ತಿದ್ದಾರೆ?
ಜೈಪುರ ವಿಚಾರ ಸಂಕಿರಣದ ಪ್ರಕಾರ, ದಲಿತ ಮಹಿಳೆಯರು, ವೇಶ್ಯೆಯರು, ಶ್ರಮಜೀವಿಗಳು, ಕೂಲಿಕಾರರು ಅಜ್ಞಾನದ ಕಾರಣದಿಂದ ಆಯಾ ಪ್ರದೇಶದಲ್ಲಿಯೇ ತಯಾರಾಗುವ ದೇಶಿ ಸಾರಾಯಿ, ಸೇಂದಿಯಂಥದನ್ನು ಕುಡಿಯುತ್ತಾರೆ. ಅಸುರಕ್ಷಿತ ಭವಿಷ್ಯದಿಂದ ಕಂಗಾಲಾಗಿ ಪಲಾಯನವಾದದ ಯೋಚನೆ ಅವರನ್ನು ಮದ್ಯದ ಕೆಸರಿನಲ್ಲಿ ಇನ್ನಷ್ಟು, ಮತ್ತಷ್ಟು ಸಿಲುಕಿಸುತ್ತ ಹೊರಟಿದೆ.
ಅದೇ ವೃತ್ತಿಪರ ಮಹಿಳೆಯರು 1-2 ಗುಟುಕು ಮದ್ಯ ಹೀರುತ್ತಿದ್ದಂತೆ ಅತ್ಯಂತ ಆತ್ಮವಿಶ್ವಾಸವುಳ್ಳವರಂತೆ, ಚುರುಕುತನ ಪಡೆದವರಂತೆ, ಸ್ಮಾರ್ಟ್ ಆಗಿರುವವರಂತೆ, ತಮ್ಮನ್ನು ತಾವು ಹೆಚ್ಚು ಶಿಷ್ಟರೆಂದು, ಸಂಯಮಿಗಳೆಂದು ಭಾವಿಸುತ್ತಾರೆ. ಇದರ ಜೊತೆಜೊತೆಗೆ ಅವರ ಮನಸ್ಸಿನಲ್ಲಿ ಅನೇಕ ಭ್ರಮೆಗಳು ಹುಟ್ಟಿಕೊಳ್ಳುವುದರಿಂದ ಅವರು ಮದ್ಯದ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮದ್ಯದಿಂದ ಸೆಕ್ಸ್ ಹಾಗೂ ಫೋರ್‌ಪ್ಲೇನಲ್ಲಿ ಹೆಚ್ಚು ಉತ್ತೇಜನ ಹಾಗೂ ಹೆಚ್ಚು ಹೊತ್ತಿನ ತನಕ ಸ್ಟ್ಯಾಮಿನಾ ಕಾಯ್ದುಕೊಳ್ಳಲು ಅವರು ಮದ್ಯದ ಮೊರೆ ಹೋಗುತ್ತಾರೆ. ತಮ್ಮನ್ನು ತಾವು ಹೆಚ್ಚು ಅಡ್ವಾನ್ಸ್, ವೆಸ್ಟರ್ನ್ ಹಾಗೂ ಸೆಕ್ಸ್ ಅಪೀಲಿಂಗ್ ಆಗಿಸಿಕೊಳ್ಳಲು ಕೂಡ ಕಾಕ್‌ಟೇಲ್ ಗ್ಲಾಸ್‌ನ್ನು ತುಟಿಗೆ ತಗುಲಿಸಲು ವೃತ್ತಿಪರ ಮಹಿಳೆಯರಿಗೆ ಹಿಂಜರಿಕೆ ಉಂಟಾಗುವುದಿಲ್ಲ.
ಮಕ್ಕಳ ಮೇಲೆ ಮಾರಕ ಪರಿಣಾಮ
ಮಗುವೊಂದು ತನ್ನ ತಂದೆ ಮದ್ಯ ವ್ಯಸನಿ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ ಅದು ತನ್ನ ತಾಯಿ ಮದ್ಯ ಸೇವಿಸುವುದನ್ನು ಕಲ್ಪಿಸಿಕೊಳ್ಳಲು ಕೂಡ ಇಷ್ಟಪಡುವುದಿಲ್ಲ. ಯಾವ ಕುಟುಂಬದಲ್ಲಿ ಮಗು ತನ್ನ ತಾಯಿ ಹೀಗೆ ಮಾಡುವುದನ್ನು ಕಾಣುತ್ತೋ ಬಾಲ್ಯದಿಂದ, ಹದಿಯಸ್ಸಿಗೆ ತಲುಪುವಷ್ಟೊತ್ತಿಗೆ ತನ್ನ 17ನೇ, 18ನೇ ಬರ್ಥ್‌ಡೇ ಪಾರ್ಟಿಯಲ್ಲಿ ಬಿಯರ್, ಶಾಂಪೇನ್‌ನ ಬಾಟಲ್ ಗಳನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುದಿಲ್ಲ.
ಅಂದಹಾಗೆ, ಮಗು ತನ್ನ ತಾಯಿಯಿಂದ ಬಹಳಷ್ಟು ಅಪೇಕ್ಷೆ ಇಟ್ಟುಕೊಳ್ಳುತ್ತದೆ. ಇದೇ ಕಾರಣದಿಂದ ಅದರ ಮನಸ್ಸಿನಲ್ಲಿ ತಾಯಿಯ ಬಗ್ಗೆ ಅಚ್ಚೊತ್ತಿದ ಒಂದು ಆದರ್ಶ ಚಿತ್ರದಲ್ಲಿ ತಾಯಿಯ ವರ್ತನೆಯಲ್ಲಿ ಅಷ್ಟಿಷ್ಟು ಬದಲಾವಣೆಯಾದರೂ ಅದಕ್ಕೆ ಸಹಿಸಿಕೊಳ್ಳಲು ಆಗುವುದಿಲ್ಲ. ಇಂತಹದರಲ್ಲಿ ಅದು ಅಮ್ಮನ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತದೆ.
ಈ ಕುರಿತಂತೆ ಮತ್ತೊಬ್ಬ ಮನೋಚಿಕಿತ್ಸಕ ಡಾ. ಸಂಜೀವ್ ಹೀಗೆ ಹೇಳುತ್ತಾರೆ, ವ್ಯಕ್ತಿಯೊಬ್ಬ ಮದ್ಯ ಸೇವಿಸುವುದು ಕ್ಷಣಿಕ ಸುಖಕ್ಕೆ, ಆದರೆ ಅದರ ಪರಿಣಾಮ ದೀರ್ಘಕಾಲಿಕವಾಗಿರುತ್ತದೆ. ನಾವು ಮದ್ಯವನ್ನು ಸಂಪೂರ್ಣವಾಗಿ ನಿರಾಕರಿಸಿದಾಗಲೇ ಯಾವುದಾದರೊಂದು ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆಗಲೇ ನಮಗೆ ಜೀವನವಿಡೀ ಸುಖಸಮೃದ್ಧಿ ದೊರೆಯಲು ಸಾಧ್ಯ.
ಆರೋಗ್ಯಕ್ಕೆ ಮಾರಕ ಮದ್ಯ
ಮದ್ಯ ಕುಡಿದ ಕ್ಷಣಿಕ ಸುಖದ ಬಳಿಕ ಹಲವಾರು ಮಾರಕ ಪರಿಣಾಮಗಳು ಗೋಚರಿಸುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮೇಲೆ ಅದು ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಇಂಗ್ಲೆಂಡ್‌ನ ರಾಯಲ್ ಮೆಡಿಕಲ್ ಕಾಲೇಜಿನ ಒಂದು ವರದಿಯ ಪ್ರಕಾರ, ಮದ್ಯ ಸೇವನೆಯಿಂದಾಗುವ ದುಷ್ಪರಿಣಾಮ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೆಚ್ಚು. ಸ್ತ್ರೀ-ಪುರುಷರು ಸಮಪ್ರಮಾಣದಲ್ಲಿ ಮದ್ಯ ಸೇವಿಸಿದರೂ, ಸ್ತ್ರೀಯರ ರಕ್ತದಲ್ಲಿ ಮದ್ಯದ ಗಾಢತೆ ಒಂದೆಡೆ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ರಕ್ತದಲ್ಲಿ ವಿಲೀನಗೊಳ್ಳುವ ಪ್ರಕ್ರಿಯೆ ಮಂದವಾಗುತ್ತದೆ. ಇದರ ಪರಿಣಾಮವೆಂಬಂತೆ ಅವರಿಗೆ ಕ್ಯಾನ್ಸರ್, ಹೃದ್ರೋಗದ ತೊಂದರೆಗಳು ಪ್ರತ್ಯಕ್ಷವಾಗುತ್ತವೆ.
`ಆಲ್ಕೋಹಾಲ್ ಅಂಡ್ ಫರ್ಟಿಲಿಟಿ ಅಮಂಗ್ ವುಮನ್’ ಪುಸ್ತಕದ ಪ್ರಕಾರ, 1996ರಲ್ಲಿ 85 ಸಾವಿರ ನರ್ಸ್‌ಗಳ ಸಹಾಯದಿಂದ ಒಂದು ವಿಶ್ವವ್ಯಾಪಿ ಅಧ್ಯಯನ ನಡೆಸಲಾಯಿತು. ಅಧ್ಯಯನದಿಂದ ತಿಳಿದುಬಂದ ಸಂಗತಿಯೆಂದರೆ, 50 ವರ್ಷ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ರಕ್ತದೊತ್ತಡ ತೊಂದರೆಯಿರುವುದು ತಿಳಿದುಬಂತು. ಅಷ್ಟೇ ಅಲ್ಲ, ಆನುವಂಶಿಕವಾಗಿ ಬಂದ ಹೃದಯ ರೋಗದ ಸಮಸ್ಯೆ ಇತ್ತು. ಈ ರೋಗದಿಂದ ಸಾಯುವ ಮಹಿಳೆಯರ ಬಗ್ಗೆ ತಿಳಿದು ಬಂದ ಮತ್ತೊಂದು ಸಂಗತಿಯೆಂದರೆ, ಅವರು ವಾರದಲ್ಲಿ 2-3 ಸಲ ಮದ್ಯ ಸೇವನೆ ಮಾಡುತ್ತಿದ್ದರು. 34 ರಿಂದ 39 ವಯಸ್ಸಿನ ಮಹಿಳೆಯರಲ್ಲಿ ರಕ್ತನಾಳಗಳ ಸಮಸ್ಯೆ ಏನೂ ಇಲ್ಲ ಎಂಬಷ್ಟಿತ್ತು. ಆದರೆ ಭವಿಷ್ಯದಲ್ಲಿ ಅದರ ದುಷ್ಪರಿಣಾಮದ ಸಾಧ್ಯತೆ ಇತ್ತು. ಇದರ ಹೊರತಾಗಿಯೂ ಕೂಡ ಮಹಿಳೆಯರು ಪ್ರತಿದಿನ ಮದ್ಯ ಸೇವನೆ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರಿಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ 100 ಕ್ಕೆ 100ರಷ್ಟಿತ್ತು.
ಮಹಿಳೆ ಹಾಗೂ ಪುರುಷರು ಸಮ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದಾಗ ಇಬ್ಬರಲ್ಲೂ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ಉಂಟಾಗುತ್ತವೆ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ದೇಹದಲ್ಲಿ ಕೊಬ್ಬಿನ ಪ್ರಮಾಣ ಅಧಿಕವಾಗಿರುತ್ತದೆ. ಈ ಕಾರಣದಿಂದ ಅನೇಕ ರೋಗಗಳು ಮನೆ ಮಾಡುತ್ತವೆ.
ಮದ್ಯಪಾನದಿಂದ ಅವರ ಸಂತಾನೋತ್ಪತ್ತಿ ಶಕ್ತಿಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕೋಲ್ಡ್ ಜೆನ್ಸನ್ ಅವರ ಪುಸ್ತಕ `ಡಸ್ ಮಾಡ್ರೇಟ್ ಆಲ್ಕೋಹಾಲ್ ಕನ್‌ಸಮ್ಶನ್ ಎಫೆಕ್ಟ್ ಫರ್ಟಿಲಿಟಿ’ಗಾಗಿ ನಡೆದ ಸಂಶೋಧನೆಯ ಪ್ರಕಾರ, ಸ್ವಲ್ಪ ಪ್ರಮಾಣದ ಮದ್ಯ ಸೇವನೆ ಕೂಡ ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆ ಮೇಲೆ ಘಾತಕ ಪರಿಣಾಮ ಬೀರಬಹುದು.
ಕುಡಿಸಿ ಗಳಿಸುವ ಸರ್ಕಾರ
ಭಾರತೀಯ ಸಂವಿಧಾನದ ಪರಿಚ್ಛೇದ 49ರ ಪ್ರಕಾರ, “ರಾಜ್ಯ ತನ್ನ ಜನತೆಯ ಪೋಷಕ ಆಹಾರ ಮತ್ತು ಜೀವನಮಟ್ಟವನ್ನು ಉನ್ನತಗೊಳಿಸಲು ಹಾಗೂ ಜನಾರೋಗ್ಯದ ಸುಧಾರಣೆಯನ್ನು ತಮ್ಮ ಆರಂಭಿಕ ಕರ್ತವ್ಯಗಳಲ್ಲಿ ಪ್ರಮುಖ ಎಂದು ಭಾವಿಸಬೇಕು. ಆರೋಗ್ಯಕ್ಕೆ ಹಾನಿಕಾರಕವಾಗಿರುವ ಮಾದಕ ದ್ರವ್ಯಗಳು, ನಶೆಯನ್ನುಂಟು ಮಾಡುವ ಔಷಧಿಗಳನ್ನು ನಿಷೇಧಿಸಬೇಕು.
”ಮದ್ಯ ನಿಷೇಧ ಕಾನೂನು ರೂಪುಗೊಂಡ ಬಳಿಕ ಹಲವು ರಾಜ್ಯಗಳಲ್ಲಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಕಾಲಕ್ರಮೇಣ ಮದ್ಯ ನಿಷೇಧದ ಕುರಿತಾದ ನೀತಿ ಮತ್ತು ಕಾರ್ಯಕ್ರಮದಲ್ಲಿ ಸಡಿಲಿಕೆ ಉಂಟಾಯಿತು. ಕೇವಲ ಕೆಲವೇ ರಾಜ್ಯಗಳಲ್ಲಿ ಈ ಕಾನೂನು ಸೀಮಿತಗೊಂಡಿತು. ಆಂಧ್ರಪ್ರದೇಶದಲ್ಲಿ ಮದ್ಯ ನಿಷೇಧ ಇತ್ತು. ಆದರೆ ಜನರು ಕಳ್ಳತನದಿಂದ ಬೇರೆ ರಾಜ್ಯಗಳಿಂದ ಮದ್ಯ ತರಿಸಿಕೊಳ್ಳುತ್ತಿದ್ದರು. ಇದರ ಪರಿಣಾಮ ಎಂಬಂತೆ ಪಕ್ಕದ ರಾಜ್ಯಗಳಲ್ಲಿ ತೆರಿಗೆ ವರಮಾನ ಹೆಚ್ಚಾಗತೊಡಗಿತು. ತಮ್ಮ ರಾಜ್ಯ ದಿವಾಳಿ ಅಂಚಿಗೆ ತಲುಪುವುದನ್ನು ತಪ್ಪಿಸಲು ಮದ್ಯದ ಮೇಲಿನ ನಿಷೇಧವನ್ನು ತೆರವುಗೊಳಿಸಲಾಯಿತು. ಗುಜರಾತ್‌ನಲ್ಲಿ ಪ್ರಸ್ತುತ ಮದ್ಯದ ಮೇಲೆ ನಿಷೇಧವಿದೆ. ಆದರೆ ಅಲ್ಲಿನ ಜನರೇ ಅತಿ ಹೆಚ್ಚಿನ ಮದ್ಯ ಸೇವನೆ ಮಾಡುತ್ತಾರೆ.
ಅಂದಹಾಗೆ ಸಂಪೂರ್ಣವಾಗಿ ಮದ್ಯದ ಮೇಲೆ ನಿಷೇಧ ಹೇರುವ ಮಾರ್ಗದಲ್ಲಿ 2 ಗಂಭೀರ ಅಡೆತಡೆಗಳಿವೆ. ಅದನ್ನು ಜಾರಿಗೊಳಿಸುವಲ್ಲಿ ತೊಂದರೆ ಮತ್ತು ಮದ್ಯದ ಚಟ. ಆದರೆ ಮದ್ಯದಿಂದ ಸರ್ಕಾರಕ್ಕೆ ಅತಿ ಹೆಚ್ಚಿನ ಆದಾಯ ಬರುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅಂದಹಾಗೆ ನೀರು, ವಿದ್ಯುತ್ ಮಾರಾಟದಿಂದಲೂ ತೆರಿಗೆ ವಸೂಲಿ ಮಾಡಲಾಗುತ್ತದೆ. ಆದರೆ ಮದ್ಯದಿಂದ ಎಷ್ಟು ಸುಲಭವಾಗಿ ತೆರಿಗೆ ವಸೂಲಾಗುತ್ತದೊ, ಅಷ್ಟು ಸುಲಭವಾಗಿ ಮತ್ತಾವುದರಿಂದಲೂ ಆಗುವುದಿಲ್ಲ.
– ಕೆ. ಮಧುರಾ