ಸತ್ಯವತಿ ವಸಂತಕುಮಾರ್

ನಾನು ಇವರನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿಗೆ ಬಂದ ಅಭಿಮಾನಿಯೊಬ್ಬರು, `ಆಂಟಿ ನೀವು ಆ ಸೀರಿಯ್‌ನಲ್ಲಿ ಎಷ್ಟು ಕ್ರೂಯೆಲ್ ಆಗಿ ಪಾತ್ರ ನಿರ್ವಹಿಸಿರುವಿರಿ. ಇಲ್ಲಿ ಇಷ್ಟು ಸೌಮ್ಯ…. ವಾವ್‌ ಗ್ರೇಟ್‌!’ ಎನ್ನುತ್ತಿದ್ದರು.

ನನಗೋ ಸೀರಿಯಲ್ ನೋಡೋ ಹವ್ಯಾಸವೇ ಇಲ್ಲ. ಅತ್ತೆ ನೋಡುತ್ತಿದ್ದಾಗ ವಿಧಿಯಿಲ್ಲದೆ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಹಿಂದೊಮ್ಮೆ ಬರುತ್ತಿದ್ದ ರಾಧಾಕಲ್ಯಾಣದಲ್ಲಿನ ಇವರ ಪಾತ್ರ, ಅಲ್ಲಿನ ನಟನೆ ಅಮೋಘ. ಪಾಪ ರಾಧೆಗೆ ಈ ಅಜ್ಜಿಯ ಕಾಟ, ಮಗದೊಬ್ಬ ಮೊಮ್ಮಗಳ ಮೇಲಿನ ಅತೀ ಪ್ರೀತಿ, ರಾಧೆಯನ್ನು ಗೋಳಾಡಿಸುತ್ತಿದ್ದ ಪರಿ….. ನೋಡಿದಾಗ ನಟನೆಯನ್ನು ಪರಿಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ ಎನಿಸುತ್ತಿತ್ತು. ಹೌದು. ಇವರೇ ಹಿರಿಯ ಕಲಾವಿದೆ ಸತ್ಯವತಿ ವಸಂತಕುಮಾರ್‌.

ನಾಟಕ ಮಂಡಳಿಗಳ ಕಾಲವದು. ಆಗ ಕರ್ನಾಟಕದ ಮನೆಮಾತಾಗಿದ್ದ ಬಹಳ ಜನಪ್ರಿಯವಾಗಿದ್ದ ಗುಬ್ಬಿ ನಾಟಕ ಮಂಡಳಿಯ ಮುಖೇನ ಕಲಾಕ್ಷೇತ್ರಕ್ಕೆ ಬಂದ ಪ್ರತಿಭೆಗಳು, ಆ ಗರಡಿಯಲ್ಲಿ ಪಳಗಿ ಜನಪ್ರಿಯಗೊಂಡ ನಟನಾ ಶಿರೋಮಣಿಗಳು ಅನೇಕರು. ತಮ್ಮ ಹವ್ಯಾಸಗಳಿಂದ ಇಂದಿಗೂ ಜನಮನದಲ್ಲಿ ನಿಂತು ತಮ್ಮ ಕಲೆಯನ್ನು ಮುಂದುವರಿಸುತ್ತಿರುವ ಪ್ರತಿಭೆಗಳಲ್ಲಿ ಸತ್ಯವತಿ ವಸಂತಕಮಾರ್‌ ಸಹ ಒಬ್ಬರು. ಹಲವಾರು ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತ ಜನರ ಅಭಿಮಾನಕ್ಕೆ ಪಾತ್ರರಾಗಿರುವರು.

ತಮ್ಮ 6ನೇ ವಯಸ್ಸಿನಲ್ಲಿ ತಾಯಿ ಸಾವಿತ್ರಮ್ಮನವರ ಪ್ರೋತ್ಸಾಹದಿಂದ ಸೋದರಿಯರಾದ ನಾಗರತ್ನಾ ಹಾಗೂ ಚಂದ್ರಾರ ಪ್ರೇರಣೆಯಿಂದ ನಟನಾ ಕ್ಷೇತ್ರಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದರು. ಅವರ ಹೆಸರಾಂತ ನಾಟಕಗಳಾದ ರಾಜಾ ಗೋಪಿಚಂದ್‌, ಕೃಷ್ಣಲೀಲೆ, ಸಾಹುಕಾರ, ಅಡ್ಡದಾರಿ ನಾಟಕಗಳಲ್ಲಿ ಬಾಲನಟಿಯಾಗಿ ಪಾತ್ರ ವಹಿಸುತ್ತಿದ್ದರು. ಈ ಕ್ಷೇತ್ರದಲ್ಲಿ ತಪ್ಪು ಹೆಜ್ಜೆ ಇಟ್ಟಾಗ, ತೊದಲು ನುಡಿಗಳನ್ನಾಡಿದಾಗ, ತಿದ್ದಿತೀಡಿ ನಟನೆಯನ್ನು ಕಲಿಸಿ, ಕಲಾವಿದೆಯನ್ನಾಗಿ ರೂಪಿಸಿದವರು ಗುಬ್ಬಿ ವೀರಣ್ಣನವರ ಪುತ್ರಿಯರಾದ ಸ್ವರ್ಣಮ್ಮ ಹಾಗೂ ಮಾಲತಮ್ಮನವರು (ಈಗಿನ ಹೆಸರಾಂತ ಕಲಾವಿದೆ ಬಿ. ಜಯಶ್ರೀಯವರ ತಾಯಿ). ಒಟ್ಟಿನಲ್ಲಿ ಇವರಿಂದ ಪ್ರಾರಂಭವಾದ ರಂಗ ಪಯಣ ಇಲ್ಲಿಯವರೆವಿಗೂ ಸಾಗುತ್ತಲೇ ಇದೆ. ಅವರಿಗೆ ನನ್ನ ಕೃತಜ್ಞತಾ ಪೂರ್ವಕ ನಮನಗಳು ಎನ್ನುತ್ತಾರೆ.

ನಂತರ ಅವಕಾಶಗಳು ಅರಸಿ ಬಂದವು. ಸುಬ್ಬಯ್ಯನಾಯ್ಡುರವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯಲ್ಲಿ ಅವರ ಪ್ರಸಿದ್ಧ ನಾಟಕಗಳಾದ ಹರಿಶ್ಚಂದ್ರ, ವಸಂತಸೇನೆ, ಕೃಷ್ಣಲೀಲೆ, ಬೇಡರ ಕಣ್ಣಪ್ಪ, ಭಕ್ತ ಅಂಬರೀಶ ಮತ್ತು ಭೂಕೈಲಾಸ ನಾಟಕಗಳಲ್ಲಿ ಬಾಲನಟಿಯಾಗಿ ನಟಿಸುತ್ತಿದ್ದರು. ಆಗೆಲ್ಲ ಜೊತೆಗಿದ್ದವರು ಹೆಸರಾಂತ ನಾಮಧೇಯರಾದ ಸುಬ್ಬಯ್ಯನಾಯ್ಡು ಮತ್ತು ಲಕ್ಷ್ಮೀಬಾಯಿ, ಲೀಲಾವತಿ, ರಾಮಚಂದ್ರಶಾಸ್ತ್ರಿ,  ಕೃಷ್ಣಶಾಸ್ತ್ರಿಗಳು ಮುಂತಾದವರು. ಇನ್ನು ಗುಬ್ಬಿ ಕಂಪನಿಯಲ್ಲಿದ್ದಾಗ ಡಾ. ರಾಜ್‌ ಹಾಗೂ ಅವರ ತಂದೆಯವರು, ಜಿ.ವಿ. ಅಯ್ಯರ್‌, ಬಾಲಕೃಷ್ಣ, ನರಸಿಂಹರಾಜು, ಬಿ. ಜಯಮ್ಮ ಹೀಗೆ ಇವರೆಲ್ಲ ಜೊತೆ ಇರುತ್ತಿದ್ದರು. ಇವರೊಟ್ಟಿಗೆ ಪಾತ್ರ ನಿರ್ವಹಿಸುತ್ತಿದ್ದ ನಾನೇ ಭಾಗ್ಯವಂತಳು. ನಿಜ ಅಲ್ವಮ್ಮಾ ಎಂದರು! ಇವರಿಗೆಲ್ಲ ನಾನೆಂದರೆ ಇಷ್ಟ! ಹೇಳಿಕೊಡುತ್ತಿದ್ದ ಸಂಭಾಷಣೆ, ನಟನೆ ಕ್ಷಣ ಮಾತ್ರದಲ್ಲಿ ಒಪ್ಪಿಸಿಬಿಡುತ್ತಿದ್ದೆ. ಶಹಭಾಷ್‌, ಸತ್ಯಾ ಚೂಟಿಯಿದ್ದಾಳೆ. ಮುಂದೆ ಒಳ್ಳೆ ಕಲಾವಿದೆಯಾಗುತ್ತಾಳೆ. ಹೆಸರುವಾಸಿಯಾಗು ಎಂದು ಹರಸುತ್ತಿದ್ದರು.

ಮುಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ನಾಟಕ ಕಂಪನಿಯಲ್ಲಿ ಆಗಿವಾನಿ ಲಕ್ಷ್ಮೀದೇವಿ ಹಾಗೂ ಲಿಂಗರಾಜ್‌ ಮನ್ಸೂರ್‌ರವರ ಜೊತೆ ಟಿಪ್ಪು ಸುಲ್ತಾನ್‌ ಹಾಗೂ ಸತ್ಯಹರಿಶ್ಚಂದ್ರ, ಉಷಾ ಪರಿಣಯ, ಸ್ಟೇಷನ್‌ ಮಾಸ್ಟರ್‌ನಲ್ಲಿ ಪಾತ್ರ ವಹಿಸಿದ್ದರು. ಪ್ರತಿಯೊಂದು ಕಂಪನಿಯಲ್ಲೂ ಒಂದೊಂದು ಹೊಸ ಅನುಭವ. ಅಲ್ಲಿದ್ದ ಶಿಸ್ತು, ಅವರ ನಿಷ್ಠೆಗಳನ್ನು ನೋಡಿ ಕಲಿಯುವ ಅವಕಾಶಗಳು ಬಹಳವೇ ಇರುತ್ತಿತ್ತು. ಆಟವಾಡುತ್ತಲೇ ಎಲ್ಲವನ್ನೂ ಕಲಿತ ನನಗೆ ಗುರುಗಳ ಅನುಗ್ರಹ, ಹಿರಿಯರ ಆಶೀರ್ವಾದಗಳಿಂದ ಇಂದಿಗೂ ಕಲಾಮಾತೆಯ ಸೇವೆ ಮಾಡುತ್ತಿರುವೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.

ಜೊತೆ ಜೊತೆಗೆ ವಿದ್ಯೆಯೂ ಸಹ ಬಹಳ ಮುಖ್ಯವೆಂದು ಎಣಿಸಿ, ಅಕ್ಕನ ಆಸೆಯಂತೆ ಎಸ್‌.ಎಸ್‌.ಎಲ್.ಸಿ ಓದುವವರೆಗೂ ಬೆಂಗಳೂರಿನಲ್ಲೇ ಇದ್ದು ಮುಗಿಸಿದರು. ನಟನೆಯನ್ನು ಇಷ್ಟು ಹೊತ್ತಿಗಾಗಲೇ ಚೆನ್ನಾಗಿ ಮೈಗೂಡಿಸಿಕೊಂಡಿದ್ದರು. ಹಾಗಾಗಿ ಈ ಸಮಯಕ್ಕೆ ಹವ್ಯಾಸೀ ನಾಟಕ ತಂಡಗಳಲ್ಲಿ ಪಾತ್ರ ವಹಿಸುವುದು ಹೆಗ್ಗಳಿಕೆ ಆಯಿತು. ಅಂದರೆ ಬಾಲನಟಿಯಿಂದ ದೊಡ್ಡ ಹಾಗೂ ಪ್ರಮುಖ ಪಾತ್ರಗಳಲ್ಲಿ ನಟಿಸುವುದು. ಇವೆಲ್ಲಾ ಈಗ ಬಗೆಬಗೆಯ ಪಾತ್ರಗಳು ವಿವಿಧ ರೀತಿಯ ನಾಟಕಗಳು ಇರುತ್ತಿದ್ದವು.

ಕುರುಕ್ಷೇತ್ರ, ದಾನಶೂರ ಕರ್ಣ, ರಾಮಾಯಣ, ಸುಭದ್ರಾ ಕಲ್ಯಾಣ, ದೇವದಾಸಿ, ಎಚ್ಚಮನಾಯಕ, ಮಕ್ಮಲ್ ಟೋಪಿ, ಸದಾರಮೆ, ಕವಿರತ್ನ ಕಾಳಿದಾಸ, ಶ್ರೀಕೃಷ್ಣ ಗಾರುಡಿ, ಸಂಸಾರನೌಕ ಇತ್ಯಾದಿ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಇದೊಂದು ಪಾತ್ರ ನನ್ನ ಜೀವಮಾನದ ಸೌಭಾಗ್ಯವೇ ಹೌದು. ಅದೇ ಸದಾರಮೆಯ ಪಾತ್ರವನ್ನು ಮಾಸ್ಟರ್‌ ಹಿರಣ್ಣಯ್ಯರವರೊಟ್ಟಿಗೆ ಜಯಚಾಮರಾಜೇಂದ್ರ ಒಡೆಯರ್‌ ಸಮ್ಮುಖದಲ್ಲಿ ಜಗನ್ಮೋಹಿನಿ ಪ್ಯಾಲೇಸ್‌ನಲ್ಲಿ ಅಭಿನಯಿಸಿದ್ದು, ಇದಕ್ಕಿಂತ ಸುಕೃತ ಬೇರೆ ಬೇಕಿತ್ತೇ ಎನಿಸಿತ್ತು.

ನಂತರದ ದಿನಗಳಲ್ಲಿ ಕುವೆಂಪುರವರ ರಕ್ತಾಕ್ಷಿ (ಬಹಳವೇ ಹೆಸರು ತಂದುಕೊಟ್ಟಿತು), ತರಾಸುರವರ ರಕ್ತರಾತ್ರಿ ಮತ್ತು ಪರ್ವತವಾಣಿಯವರ ಬಹದ್ದೂರ್‌ ಗಂಡ, ಕಾಡಮನ್ಸ, ರೋಗಾಲಾಪನೆ, ವಿಶ್ವರಂಗ, ತಿರುಮಂತ್ರ ಎಂಬ ನಾಟಕಗಳಲ್ಲಿಯೂ ಮತ್ತು ಟಿ.ಪಿ. ಕೈಲಾಸಂರವರ ಹೋಂ ರೂಲ್‌, ಬಹಿಷ್ಕಾರ, ಬಂಡವಾಳವಿಲ್ಲದ ಬಡಾಯಿ, ಹುತ್ತದಲ್ಲಿ ಹುತ್ತ ನಾಟಕಗಳಲ್ಲಿಯೂ ಎನ್‌.ಎಸ್‌. ರಾವ್ ವಿರಚಿತ ಕಲಿ ಕಂಠೀರವ, ರೊಟ್ಟಿ ಋಣ, ರಣದುಂದುಭಿ ಹೀಗೇ ಹಲವಾರು ನಾಟಕಕಾರರ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವವರು.

ಜೊತೆಗೆ ಆಕಾಶವಾಣಿಯ ನಾಟಕಗಳಲ್ಲಿಯೂ ಭಾಗವಹಿಸಿ, ಬಿ ಹೈ ಗ್ರೇಡ್‌ ಕಲಾವಿದೆಯಾಗಿರುವವರು. ಕಂಪನಿಗಳ ಪೆಂಪು ಇಂಪು ಎಂಬ ಹವ್ಯಾಸೀ ಪ್ರಧಾನ ನಾಟಕ 36 ಕಂತುಗಳಲ್ಲಿ ಮೂಡಿಬಂದದ್ದು ಖುಷಿಕೊಟ್ಟಿತ್ತಂತೆ, ಅಷ್ಟೇ ಖ್ಯಾತಿಯನ್ನೂ ಪಡೆದಿತ್ತು. ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಸ್ಮಾರಕ ಕಲಾಸಂಘ ನಡೆಸುತ್ತಿದ್ದ ಬಹುತೇಕ ಎಲ್ಲ ನಾಟಕಗಳಲ್ಲಿಯೂ ಇವರ ಅಭಿನಯವಿತ್ತು. ವಿರಾಟ ಪರ್ವ, ಶಾಕುಂತಲಾ, ಮನ್ಮಥ ವಿಜಯ, ನಿರುಪಮಾ, ತಾರಾಶಶಾಂಕ, ರಾಜ ಸುಯೋಗ…. ಮುಂತಾದವುಗಳು. ಇವರ ಈ ಕಲಾಕೌಶಲ್ಯ ಸೇವೆಯನ್ನು ಗಮನಿಸಿ `ಅಭಿನಯ ತಿಲೋತ್ತಮೆ’ ಎಂಬ ಬಿರುದು ನೀಡಿ ಗೌರವಿಸಿದರು.

ಕರ್ನಾಟಕ ಸರ್ಕಾರದ ಸಚಿವಾಲಯದ ನೌಕರರ ಸಂಘದವರು ಉತ್ತಮ ಕಲಾವಿದೆ ಬಿರುದು, ಸಾಂಸ್ಕೃತಿಕ  ಭಾರತೀಯ ಸಂಸ್ಥೆ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ರಂಗರತ್ನ ಪ್ರಶಸ್ತಿ, 2012ರಲ್ಲಿ ಬೃಹತ್‌ ಮಹಾನಗರ ಪಾಲಿಕೆಯವರು ಕೆಂಪೇಗೌಡರ 500ನೇ ವರ್ಷದ ಜಯಂತೋತ್ಸದ ಸಂದರ್ಭದಲ್ಲಿ, ಹಿರಿಯ ಕಲಾವಿದೆಯೆಂದು ಇವರು ಹಾಗೂ ಇವರ ಪತಿ ವಸಂತ್‌ ಕುಮಾರ್‌ರವರನ್ನು ಗೌರವಿಸಿ ಸನ್ಮಾನಿಸಿದರು. ಇವರ ಪತಿಯೂ ಸಹ ರಂಗಭೂಮಿಯ ಕಲಾವಿದರು. ರಾಜ್ಯ ಪ್ರಶಸ್ತಿ ಪುರಸ್ಕೃತರು. ಹಾಗಾಗಿ ಪತಿಯ ಸಹಕಾರ ಸಂಪೂರ್ಣವಾಗಿತ್ತು. ಕನ್ನಡ ಕಲಾಸಂಘ, ವಾಟಾಳ್‌ ನಾಗರಾಜರ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ, ಪದ್ಮಶ್ರೀ ಕಲಾಸಂಘ, ನೆಹರು ಕಲ್ಚರ್‌ ಅಕಾಡೆಮಿಯವರುಗಳೂ ಗೌರವಿಸಿ ಸನ್ಮಾನಿಸಿದ್ದಾರೆ.

ವೃತ್ತಿಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಕ್ಯಾಷಿಯರ್‌ ಆಗಿ ಕೆಲಸ ನಿವರ್ಹಿಸುತ್ತಿದ್ದರು. ಅಲ್ಲಿಯೂ ಸಹ ನೌಕರರ ಕಲಾಸಂಘದಿಂದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘಕ್ಕೆ ಸಹಕಾರ ನೀಡಿದ್ದು ಹೆಮ್ಮೆಯ ವಿಷಯವೇ ಹೌದು. ಹಲವಾರು ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ. ಮನೆ ಕಟ್ಟಿನೋಡು, ಕರುಳಿನ ಕರೆ, ಸುಭದ್ರಾ ಕಲ್ಯಾಣ, ಮುತ್ತಿನಹಾರ, ಊರ್ವಶಿ, ಖುಷಿ, ಮಂಥನ, ಡ್ರಾಮ ಮುಂತಾದ ಚಲನಚಿತ್ರಗಳಲ್ಲಿಯೂ ನಟಿಸಿರುವರು. 1986ರಲ್ಲಿ ಕಿರುತೆರೆಗೆ ಬಂದರು. ಆಗ ಬರುತ್ತಿದ್ದ 13 ಕಂತುಗಳ ಧಾರಾವಾಹಿಗಳಲ್ಲಿ ನಟಿಸಲು ಪ್ರಾರಂಭಿಸಿದರು. ಅಲ್ಲಿಂದ ತೆರೆಕಂಡ ಕಿರುತೆರೆಯ ಬಹುತೇಕ ಎಲ್ಲ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಚಿನ್ನಾರಿ, ಬೆಳದಿಂಗಳಾಗಿ ಬಾ, ಉಯ್ಯಾಲೆ, ಕುಟುಂಬ, ರಂಗೋಲಿ, ಕುಸುಮಾಂಜಲಿ, ಪುಣ್ಯಕೋಟಿ, ಮಾಂಗಲ್ಯ, ರಾಧಾಕಲ್ಯಾಣ ಮುಂತಾದವು ಯಶಸ್ಸನ್ನು ತಂದುಕೊಟ್ಟಿವೆ.

ಒಂದೆಡೆ ಜೀವನ ದುಡಿಮೆ, ಮಗದೊಂದೆಡೆ ಹವ್ಯಾಸ, ಮನೆ ಮಕ್ಕಳು ಸಂಸಾರ ಎಲ್ಲವನ್ನೂ ತೂಗಿಸಿಕೊಂಡು ಜೀವನದ ನಾನಾ ಹಂತಗಳಲ್ಲಿ ನಾನಾ ಕಷ್ಟಗಳಲ್ಲಿ ಎಲ್ಲವನ್ನೂ ಎಲ್ಲರನ್ನೂ ತೂಗಿಸಿಕೊಂಡು ನಡೆಯೋದು ಕಡಿಮೆ ಏನಲ್ಲ! ಜವಾಬ್ದಾರಿಗಳು, ಕರ್ತವ್ಯಗಳು ನಿಭಾಯಿಸೋದು ಸುಲಭದ ಮಾತೇನಲ್ಲ! ಸಂಭಾಳಿಸಿಕೊಂಡು ಇಲ್ಲಿಯವರೆವಿಗೂ ಬಂದಿರುವರು. ಈಗ ವಯಸ್ಸಾಗಿದೆ. ಕಲಾಕ್ಷೇತ್ರದಲ್ಲಿ 6 ದಶಕಗಳನ್ನು ಕಳೆದಿರುವರು. ಮಗ ರೂಪೇಶ್‌ ಬಿಸ್‌ನೆಸ್‌ ಮ್ಯಾನ್‌, ಸೊಸೆ ಶುಭಾ ವಿದ್ಯಾವಂತೆ. ಮನೆಯಲ್ಲೇ ಹತ್ತು ಹಲವಾರು ರೀತಿಯ ತರಗತಿಗಳನ್ನು ಮಕ್ಕಳಿಗೆ ತೆಗೆದುಕೊಳ್ಳುತ್ತಾರೆ. ಮೊಮ್ಮಕ್ಕಳಾದ ಅನನ್ಯಾ, ಅಮೂಲ್ಯಾ ವಿದ್ಯಾವಂತರು. ಮಕ್ಕಳಿಗೆ ವಿದ್ಯೆ ಕೊಡಿಸಬೇಕು. ಹಾಗಾಗಿ ಅವರ ಗುರಿಯೆಲ್ಲ ಓದಿನೆಡೆಗೆ. ನನ್ನ ಈ ಕ್ಷೇತ್ರ ಮುಂದಿನ ಪೀಳಿಗೆಗೆ ಮುಂದುವರಿಯೋದು ಕಷ್ಟ. ಅದರ ಮೇಲೆ……. ಬಲ್ಲವರಾರು? ಹ್ಞಾಂ ಇನ್ನೊಂದು ಹೇಳೋದು ಮರೆತೆ, ಮಿನುಗುತಾರೆ ಕಲ್ಪನಾ ನನ್ನ ಒಬ್ಬ ಆತ್ಮೀಯ ಗೆಳತಿ. ಅವರೊಟ್ಟಿಗೆ ಹಲವಾರು ನಾಟಕಗಳಲ್ಲಿ ನಟಿಸಿದ್ದೇನೆ ಎನ್ನುತ್ತಾರೆ ತಾರೆಯನ್ನು ನೆನೆದು. ಸದ್ಯ ಸರ್ಪಸಂಬಂಧ (ಸೂಪರ್‌ ಕಲರ್‌), ಜೀವನ ಚೈತ್ರ (ಸುವರ್ಣ) ಸರಯೂ (ಉದಯ) ಸೀರಿಯಲ್ ಗಳಲ್ಲಿ ನಟಿಸುತ್ತಿರುವವರು.

ಇವರೊಂದಿಗೆ ಕಳೆದ ಎರಡು ಗಂಟೆ ಸಮಯ ಹೋದದ್ದೇ ತಿಳಿಯಲಿಲ್ಲ. ಹೆಣ್ಣುಮಕ್ಕಳಿಗೆ ಆದ್ಯತೆ ನೀಡುತ್ತಾರೆ. ಅವರ ಕೆಲವು ವಿಚಾರಗಳಿಗೆ ಜಾಗೃತಿ ಮುಖ್ಯವೆನ್ನುತ್ತಾರೆ. ಫೋಟೋ ಎಂದಾಗ… ಮಾತ್ರ ವಸಂತ್‌ ಸರ್‌ ಹೇಳಿದ್ದು…. ಅದೇನೋ ಅದರ ಕಡೆ ನಮಗೆ ಗಮನ ಬರಲೇ ಇಲ್ಲ. ನಮ್ಮದೇನಿದ್ದರೂ ನಟಿಸೋದು, ಜನರನ್ನು ಮೆಚ್ಚಿಸೋದು. ನಮ್ಮ ಕಲೆಯ ಅನಾವರಣಗೊಳಿಸೋದು ಅಷ್ಟೇ! ಎಲ್ಲ ಅಭಿಮಾನಿ, ಕಲಾವಿದರ ಹೃದಯಗಳಲ್ಲಿ ಇಬ್ಬರೂ ನೆಲೆಸಿರುವೆ. ಪ್ರೂಫ್‌ ಕಮ್ಮಿಯಮ್ಮ ಎಂದಾಗ ಏಕೋ ಅವರಲ್ಲಿನ ಮುಗ್ಧತೆ…. ಅವರಲ್ಲಿನ ವಿನಯತೆ ನನ್ನ ಮನದಲ್ಲಿ ನೆಲೆಮಾಡಿತು.

– ಸವಿತಾ ನಾಗೇಶ್‌  

Tags:
COMMENT