ನೀಳ್ಗಥೆ – ಚಂದ್ರಿಕಾ ಸುಧೀಂದ್ರ
ಗಂಡನಿಂದ ಸಂಸಾರದಲ್ಲಿ ತಾನು ಬಯಸಿದಂಥ ಸುಖ ಕಾಣದ ಲಾವಣ್ಯಾ, ತನ್ನನ್ನು ಆರಾಧಿಸುತ್ತಿದ್ದ ವೈಭವ್ ಗೆ ತನ್ನನ್ನೇ ಸಮರ್ಪಿಸಿಕೊಂಡಳು. ಅವಳ ವ್ಯವಹಾರ ಅರಿತ ಗಂಡ, ಮಗಳು ದೂರಾದರು. ಏಕಾಂಗಿಯಾದ ಲಾವಣ್ಯಾ ಹಳೆಯ ಜೀವನ ಮರೆತು ಅನಾಥಾಶ್ರಮ ಸ್ಥಾಪಿಸಿದಳು. ಮುಂದೆ ನಡೆದುದೇನು….?
ಕಳೆದ ಸಂಚಿಕೆಯ ಕಥೆ : ತುಂಬು ಶ್ರೀಮಂತರ ಒಬ್ಬಳೇ ಮಗಳು ಲಾವಣ್ಯಾ ಅಪರೂಪದ ಸೌಂದರ್ಯವತಿ. ಮನೆಗೆ ಒಬ್ಬಳೇ ಮಗಳಾಗಿ ಅತಿ ಮುದ್ದಿನಿಂದ ಬೆಳೆದಳು, ಹಿರಿಯರ ಆಯ್ಕೆಯಂತೆ ಅನುಕೂಲಸ್ಥ ಧನುಷ್‌ನನ್ನು ಮದುವೆಯಾದಳು. ಮಿತಭಾಷಿ, ಹೆಚ್ಚು ರಸಿಕನಲ್ಲದ ಧನುಷ್ ಹೆಂಡತಿಗೆ ಹೊತ್ತು ಹೋಗಲೆಂದು ಲೇಡೀಸ್ ಕ್ಲಬ್‌ಗೆ ಸೇರಿಸಿದ. ಅಲ್ಲಿ ವೈಭವ್ ಅವಳ ಎಲ್ಲಾ ಚಟುವಟಿಕೆ, ಹಾಡುಗಾರಿಕೆಗೆ ಪಾರ್ಟ್‌ನರ್ ಆದ. ಮುಂದೆ ಮುದ್ದಾದ ಮಗುವಿನ ತಾಯಿಯಾದ ಲಾವಣ್ಯಾಳ ದಾಂಪತ್ಯದಲ್ಲಿ ನಡೆದದ್ದೇನು? ಇಂಥ ಲಾವಣ್ಯಾ ಪ್ರೌಢಾವಸ್ಥೆಗೆ ಬಂದು ಇಂದಿರಮ್ಮನಾಗಿ ಅನಾಥಾಶ್ರಮ ನಡೆಸುವಂಥದ್ದು ಏನಾಯಿತು….?
ಮುಂದೆ ಓದಿ……
ಆದರೆ ಹೆಚ್ಚು ಹೊತ್ತು ಸೌಜನ್ಯಾಳ ಜೊತೆ ಆಟವಾಡುತ್ತಾ ಕಾಲ ಕಳೆದನು ವೈಭವ್. ಅವನಿಗೆ ಧನುಷ್ ಮುಂದೆ ಸೌಜನ್ಯಾಳನ್ನು ಎಷ್ಟು ಹೊಗಳಿದರೂ ಸಾಲದು. ಹೊರಡುವ ಮುಂಚೆ, ಸೌಜನ್ಯಾಳಿಗೆ ಚಿನ್ನದ ಸರ ಕೊಡುವುದರ ಜೊತೆಗೆ ಲಾವಣ್ಯಾಳಿಗೆ ಚಿನ್ನದ ನೆಕ್ಲೇಸ್ ಉಡುಗೊರೆ ನೀಡಿದ. ನನ್ನ ಮಗಳಿಗೆ ಕೊಡಬೇಕಾದ್ದು ಸರಿ. ಆದರೆ ನನ್ನ ಹೆಂಡತಿಗೆ ಯಾಕೆ ಉಡುಗೊರೆ ಎಂದು ಧನುಷ್ ಕೇಳಿದಾಗ, ಏನಿಲ್ಲ ಒಬ್ಬರಿಗೆ ಕೊಟ್ಟು ಇನ್ನೊಬ್ಬರಿಗೆ ಕೊಡದಿರುವುದು ಸರಿಯಲ್ಲ ಎಂದು ಇಬ್ಬರಿಗೂ ತಂದೆ ಎಂದು ವೈಭವ್ ಮಾತನ್ನು ತೇಲಿಸಿಬಿಟ್ಟ. ಅದಾದ ನಂತರ ಆಗಾಗ್ಗೆ ವೈಭವ್ ಲಾವಣ್ಯಾಳ ಮನೆಗೆ ಬರುವುದು ಜಾಸ್ತಿಯಾಯಿತು. ನಿಮ್ಮ ಮಗಳು ನನ್ನನ್ನು ಎಷ್ಟು ಆಕರ್ಷಿಸಿಬಿಟ್ಟಿದ್ದಾಳೆ ಎಂದು ಸೌಜನ್ಯಾಳಿಗಾಗಿ ಗಿಫ್ಟ್ ತರುವುದರ ಜೊತೆಗೆ ಲಾವಣ್ಯಾಳಿಗೂ ಸೀರೆ, ಅಲಂಕಾರ ಸಾಮಗ್ರಿಗಳನ್ನು ತಂದುಕೊಡುತ್ತಿದ್ದ. ಹೊರಗೆ ಕರೆದುಕೊಂಡು ಹೋಗುವ, ತನ್ನೊಡನೆ ಆಟವಾಡುತ್ತಾ ಕಾಲ ಕಳೆಯುವ ವೈಭವ್ ಅಂಕಲ್ ಎಂದರೆ ಸೌಜನ್ಯಾಳಿಗೆ ಬಹಳ ಇಷ್ಟ. ಏಕೆಂದರೆ ತಂದೆಯಾಗಿ ಒಂದು ದಿನ ಧನುಷ್ ಮಗಳನ್ನು ಹತ್ತಿರ ಕರೆದು ಎತ್ತಿ ಮುದ್ದಿಸುತ್ತಿರಲಿಲ್ಲ. ಅವಳ ಜೊತೆ ಕಾಲ ಕಳೆಯುತ್ತಿರಲಿಲ್ಲ. ಹೊರಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಈ ಎಲ್ಲಾ ಕೊರತೆ ತುಂಬಿದವನು ವೈಭವ್. ಆದ್ದರಿಂದ ಅವನ ಬರುವಿಕೆ ಸೌಜನ್ಯಾಳಿಗೆ ಬಹಳ ಇಷ್ಟ.ಒಮ್ಮೆ ಲಾವಣ್ಯಾ ಯಾಕೆ ವೈಭವ್ ನೀವು ಇನ್ನೂ ಮದುವೆಯಾಗಿಲ್ಲ. ನೋಡಲು ಎಷ್ಟು ಸ್ಮಾರ್ಟ್ ಆಗಿದ್ದೀರಾ? ಎಂದು ಕೇಳಿದಳು. ಥ್ಯಾಂಕ್ಸ್ ಫಾರ್ ಯುವರ್ ಕಾಂಪ್ಲಿಮೆಂಟ್ಸ್ ನನಗೆ ಮದುವೆಯಾಗಿ ಆ ಬಂಧನಕ್ಕೆ ಸಿಲುಕವ ಆಸೆ ಇಲ್ಲ. ಇರುವಷ್ಟು ದಿನ ಜೀವನ ಎಂಜಾಯ್ ಮಾಡಿ ಕಾಲ ಕಳೆಯಬೇಕೆಂಬಾಸೆ ಅಷ್ಟೆ. ನಮ್ಮ ತಂದೆ ತಾಯಿ ತುಂಬಾ ಬಲವಂತ ಮಾಡಿ ಸಾಕಷ್ಟು ಹೆಣ್ಣುಗಳನ್ನು ತೋರಿಸಿದರು. ಆದರೆ ನಾನೇ ಯಾವುದನ್ನೂ ಒಪ್ಪಲಿಲ್ಲ. ಕಡೆಗೆ ನಿರ್ಧಾರವಾಗಿ ಹೇಳಿಬಿಟ್ಟೆ, ನಾನು ಮದುವೆಯಾಗುವುದಿಲ್ಲ. ಹೇಗಿದ್ದರೂ ನನ್ನ ತಮ್ಮ ಆಕಾಶ್ ಇದ್ದಾನೆ, ಅವನ ಮದುವೆ ಮಾಡಿ. ನೀವು ನನಗಾಗಿ ಕೊರಗುವುದು ಬೇಡವೆಂದೆ. ಸದ್ಯಕ್ಕೆ ನನ್ನನ್ನು ಹೆಣ್ಣು ನೋಡು ಎಂದು ಪೀಡಿಸುತ್ತಿಲ್ಲ. ನಾನು ಗೆದ್ದೆ. ಈಗ ನೋಡಿ ನಿಮ್ಮಂತಹ ಸುಂದರವಾದ ಹೆಣ್ಣು ನನ್ನ ಜೊತೆ ಕಾಲ ಕಳೆಯಲು ಇರುತ್ತೀರಾ ಹಾಗೆ ಕ್ಲಬ್‌ನಲ್ಲೂ ಎಲ್ಲರೂ ನನ್ನ ಸ್ವಭಾವ ಮೆಚ್ಚಿ ನನ್ನೊಂದಿಗೆ ಆಟವಾಡಲು ಬರುತ್ತಾರೆ. ಇದೇ ನಿಜವಾದ ಜೀವನ ಅಲ್ವಾ? ಎಂದಾಗ ಬಹಳ ವಿಚಿತ್ರ ನಡವಳಿಕೆಯ ವ್ಯಕ್ತಿ ಎನಿಸಿತು ಲಾವಣ್ಯಾಳಿಗೆ. ಆದ್ದರಿಂದ ಹೆಚ್ಚಿಗೆ ಕೆದಕುವ ಗೋಜಿಗೆ ಹೋಗಲಿಲ್ಲ.
ಧನುಷ್ ಇತ್ತೀಚೆಗೆ ಆಫೀಸ್‌ಗೆಂದು ಲಾವಣ್ಯಾಳಿಗೆ ಹೇಳಿ ಹೋದ ಸ್ವಲ್ಪ ಹೊತ್ತಿನಲ್ಲೇ ವೈಭವ್ ಇವರ ಮನೆಗೆ ಬರುತ್ತಿದ್ದ. ಸಾಲದ್ದಕ್ಕೆ ವೈಭವ್ ನ ಕಾರು ಸದಾ ನಿಮ್ಮ ಮನೆ ಮುಂದೆಯೇ ಇರುತ್ತದೆ. ಅವನು ನಿಮಗೆ ಹತ್ತಿರದ ಸಂಬಂಧಿನಾ? ಅದೂ ನೀವಿಲ್ಲದಿರುವಾಗ ಬರುತ್ತಾನೆ ಏನು ಕಾರಣ ಎಂದು ಧನುಷ್‌ನ ಮನೆಯ ಅಕ್ಕಪಕ್ಕದವರು ಪ್ರಶ್ನಿಸಿದಾಗ ಅವನಿಗೆ ಬಹಳ ಮುಜುಗರವೆನಿಸಿ ಲಾವಣ್ಯಾ ಈ ವಿಚಾರವಾಗಿ ಏನೂ ಹೇಳಲಿಲ್ಲವಲ್ಲ ಎನಿಸಿ ಮೊದಲ ಬಾರಿಗೆ ಅವಳ ಬಗ್ಗೆ ಅನುಮಾನ ಪ್ರಾರಂಭವಾಯಿತು. ಅಂದು ರಾತ್ರಿ ಧನುಷ್, ವೈಭವ್ ನಾನಿಲ್ಲದ ವೇಳೆಯಲ್ಲಿ ಸದಾ ನಮ್ಮ ಮನೆಗೆ ಬರುತ್ತಾನಂತೆ ಯಾಕೆ ಅವನಿಗೆ ಮನೆ, ಮಠ ಏನೂ ಇಲ್ವಾ? ಅವನಿಗೆ ಹೇಳೋರೂ ಕೇಳೋರೂ, ಅಪ್ಪ ಅಮ್ಮ ಯಾರೂ ಇಲ್ವಾ? ಎಂದು ಲಾವಣ್ಯಾಳನ್ನು ಖಾರವಾಗಿ ಕೇಳಿದ. ಆಶ್ಚರ್ಯದಿಂದ ಲಾವಣ್ಯಾ ಅವನೆಡೆಗೆ ನೋಡಿ, ಅವನಿಗೆ ಎಲ್ಲರೂ ಇದ್ದಾರೆ. ಅವನು ನಮ್ಮ ಮಗಳಿಗಾಗಿ ಬರುತ್ತಾನೆ. ಅವಳ ಮುದ್ದು ಮಾತುಗಳನ್ನು ಕೇಳುತ್ತಾ ಅವಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಾನೆ. ಅವನ ಮೇಲೆ ನಿಮಗೇಕೆ ಎಲ್ಲಿಲ್ಲದ ಸಂಶಯ? ನನ್ನ ಮೇಲೆ ನಿಮಗೆ ಸಂಶಯನಾ? ಯಾರೋ ಏನೋ ಹೇಳಿದರೆಂದು ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಾ? ಅಥವಾ ಮನೆಗೆ ಬರುವವರನ್ನು ಬರಬೇಡವೆಂದು ಹೇಳುವುದು ನ್ಯಾಯವೇ ಎಂದಳು. ವೈಭವ್ ಹೇಳಿ ಕೇಳಿ ಶ್ರೀಮಂತ. ಕರಗಲಾರದಷ್ಟು ಆಸ್ತಿ ಇತ್ತು. ಅವನು ಎಷ್ಟು ಖರ್ಚು ಮಾಡಿದರೂ ಲೆಕ್ಕ ಕೇಳುವವರಿಲ್ಲ. ಅವನ ಹೆಸರಿನಲ್ಲೇ ಕಂಪನಿ ಇದ್ದು ಅವನು ಕೆಲಸಕ್ಕೆ ಹೋಗುವ ಪ್ರಮೇಯವೇ ಇಲ್ಲ. ಅವನ ಅಸಿಸ್ಟೆಂಟ್ ಆರ್ಮುಗಂ ಎಲ್ಲ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದ. ದಿನ ದಿನಕ್ಕೆ ಲಾಭ ಬರುತ್ತಿತ್ತು. ಅವನಿಗೆ ಹೆಚ್ಚಿನ ಜವಾಬ್ದಾರಿಯೂ ಇಲ್ಲದೆ ಆರಾಮವಾಗಿ ದಿನ ಕಳೆಯುತ್ತಿದ್ದ.
ಸೌಜನ್ಯಾ ತಾಯಿಯಂತೆ ಕಲೆಯಲ್ಲಿ ಆಸಕ್ತಿ ಹೊಂದಿದ್ದಳು. ಅವಳ ಆಸಕ್ತಿಯನ್ನು ಗಮನಿಸಿದ ಲಾವಣ್ಯಾ ಅವಳನ್ನು ಸಂಗೀತ, ನೃತ್ಯ ಶಾಲೆಗೆ ಸೇರಿಸಿದಳು. ಬೆಳಗ್ಗೆ ಶಾಲೆಗೆ ಹೋಗಿ ಸಂಜೆ ವೇಳೆ ಸಂಗೀತ, ನೃತ್ಯ ತರಗತಿಗಳನ್ನು ಮುಗಿಸಿಕೊಂಡು ರಾತ್ರಿ ಮನೆಗೆ ಬರುತ್ತಿದ್ದಳು. ಧನುಷ್ ಆಗಾಗ್ಗೆ ಕೆಲಸದ ವಿಚಾರವಾಗಿ ಬೇರೆ ಬೇರೆ ಊರಿಗೆ ಹೋಗುವ ವಿಚಾರ ವೈಭವ್ ಗೆ ತಿಳಿದಿತ್ತು. ಅವನು ಹೆಚ್ಚಾಗಿ ಲಾವಣ್ಯಾಳ ಮನೆಯಲ್ಲೇ ಕಳೆಯತೊಡಗಿದ. ಅವಳು ಅಕಸ್ಮಾತ್ ಬೇಜಾರು ಮಾಡಿಕೊಂಡಿದ್ದರೆ, ಯಾಕೆ ಲಾವಣ್ಯಾ ಮುಖ ಕಳೆಗುಂದಿದೆ ನೀನು ಸಪ್ಪೆ ಮುಖದಿಂದ್ದರೆ ನನ್ನಿಂದ ನೋಡೋಕೆ ಆಗಲ್ಲ ಎಂದು ಅವಳನ್ನು ಹುರಿದುಂಬಿಸಿ, ಹಾಸ್ಯ ಚಟಾಕಿ ಹಾರಿಸಿ ಅವಳು ಲಲವಿಕೆಯಿಂದಿರುವಂತೆ ಮಾಡಿ, ಹೊರಗೆಲ್ಲಾದರೂ ಸುತ್ತಾಡಿಸಿಕೊಂಡು ಬರುತ್ತಿದ್ದ.
ಅವನ ಸಾನ್ನಿಧ್ಯ ಅವಳಿಗೂ ಖುಷಿ ತರುತ್ತಿತ್ತು. ಸದಾ ಅವನ ಜೊತೆಯೇ ಇರಬೇಕೆಂಬ ಅದಮ್ಯ ಆಸೆ ಅವಳಿಗಿತ್ತು. ಸಾಲದ್ದಕ್ಕೆ ಧನುಷ್‌ನ ನಿರಾಸಕ್ತಿ, ಅವನು ಹೊರಗೆಲ್ಲೂ ಕರೆದೊಯ್ಯುತ್ತಿರಲಿಲ್ಲ. ಅವಳಿಗೂ ಹೊರಗೆ ಸುತ್ತಾಡುವ ಆಸೆ ಮೊದಲಿನಿಂದಲೂ ಇದ್ದುದರಿಂದ ವೈಭವ್ ಅವಳ ಆಸೆಗೆ ಪುಷ್ಟಿ ಕೊಡುತ್ತಿದ್ದ.
ಧನುಷ್ ಲಾವಣ್ಯಾರ ನಡುವೆ ಮಧುರ ದಾಂಪತ್ಯವಿಲ್ಲ ಎನ್ನುವುದು ವೈಭವ್ ಗೆ ಬೇಗನೆ ತಿಳಿಯಿತು. ದಿನದಿನಕ್ಕೆ ಇಬ್ಬರೂ ಆಕರ್ಷಿತರಾಗತೊಡಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರೆ ಎನ್ನುವ ಸ್ಥಿತಿ ತಲುಪಿದರು. ಅಲ್ಲದೆ, ಮಗಳು ಬೆಳಗ್ಗೆ ಹೋದರೆ ರಾತ್ರಿ ಮನೆಗೆ ಬರುವ ವಿಚಾರ ಇಬ್ಬರಿಗೂ ತಿಳಿದಿದ್ದರಿಂದ ಇಬ್ಬರೂ ಪರಸ್ಪರ ತಪ್ಪು ಹೆಜ್ಜೆ ಇಟ್ಟು, ಇಬ್ಬರೂ ಜಾರಿದರು. ವೈಭವ್ ಅಂಕಲ್ ತನಗಾಗಿಯೇ ಬರುತ್ತಾರೆಂದು ಮೊದಲು ತಿಳಿದಿದ್ದ ಸೌಜನ್ಯಾಳಿಗೆ ಈಗ ಬುದ್ಧಿ ತಿಳಿದ ಮೇಲೆ ತನ್ನ ತಾಯಿ ತಪ್ಪು ಹೆಜ್ಜೆ ಇಟ್ಟಿದ್ದಾಳೆ, ತಂದೆಗೆ ಮೋಸ ಮಾಡುತ್ತಿದ್ದಾಳೆಂದು ತಿಳಿಯಿತು. ಒಮ್ಮೆ ಅವಳು, ಅಂಕಲ್ ಅಪ್ಪ ಇದ್ದಾಗ ನೀವು ಬರುವುದೇ ಇಲ್ಲ ಯಾಕೆ? ನೀವು ಅಪ್ಪನಿಗೆ ಕ್ಲೋಸ್ ಫ್ರೆಂಡಾ ಅಥವಾ ಅಮ್ಮನಿಗಾ? ಎಂದು ಕೇಳಿಯೇಬಿಟ್ಟಳು. ಅವರಿಬ್ಬರಿಗೂ ಮುಖಕ್ಕೆ ಹೊಡೆದಂತಾಯಿತು ಅವಳ ಮಾತು.ಅಪ್ಪನನ್ನು ಕೇಳಿದರೆ ಅವರು ನಮ್ಮನ್ನು ಬೇಕಾದ ಕಡೆಗೆಲ್ಲಾ ಕರೆದುಕೊಂಡು ಹೋಗುತ್ತಿರಲಿಲ್ವಾ? ಎಂದು ಲಾವಣ್ಯಾಳನ್ನು ಕೇಳಿದಳು ಸೌಜನ್ಯಾ. ಹಾಗಲ್ಲ ಸೌಜನ್ಯಾ, ಅಪ್ಪನಿಗೆ ಎಲ್ಲಿ ಬಿಡುವಿರುತ್ತೆ? ಅವರು ಕೆಲಸದಲ್ಲಿ ಸದಾ ಬಿಜಿಯಾಗಿರುತ್ತಾರೆ. ಟೂರು ಅಂತ ಯಾವಾಗಲೂ ಊರೂರು ಸುತ್ತುತ್ತಿರುತ್ತಾರೆ. ಅವರು ಹೋದ ಜಾಗಕ್ಕೆಲ್ಲಾ ಹೋಗಲು ಆಗುತ್ತಾ? ನಮಗೆ ಬೋರ್ ಆಗಬಾರದೆಂದು ಅಂಕಲ್ ನಮ್ಮನ್ನು ಕರೆದುಕೊಂಡು ಹೋಗುತ್ತಾರೆಂದು ಮಗಳಿಗೆ ಹೇಳಲು ಪ್ರಯತ್ನಿಸಿದರೂ, ಮಗಳಿಗೆ ಬುದ್ಧಿ ಇದೆ ಅವಳು ನಮ್ಮಿಬ್ಬರನ್ನೂ ಗಮನಿಸುತ್ತಿದ್ದಾಳೆಂಬ ಅರಿವು ಲಾವಣ್ಯಾಳಿಗಾಯಿತು. ಮಗಳ ಕಣ್ಣು ತಪ್ಪಿಸಿ ವೈಭವ್ ಜೊತೆ ಸುತ್ತಾಡುತ್ತಾ ಅವನ ಮೇಲೆ ಅನುರಕ್ತಳಾದ ಲಾವಣ್ಯಾ ತನ್ನ ಮನಸ್ಸಿನ ಜೊತೆ ಶೀಲವನ್ನೂ ಅವನಿಗರ್ಪಿಸಿ ತೃಪ್ತಿ ಹೊಂದಿದಳು.
ಊರಿನಿಂದ ಬಂದ ಧನುಷ್ ತನ್ನ ಹೆಂಡತಿಯ ನಡವಳಿಕೆಯಲ್ಲಿ ಬದಲಾವಣೆಯಾಗಿದೆ ಎಂದು ಗಮನಿಸಿದ. ತಾನು ಊರಿನಲ್ಲಿ ಇಲ್ಲದಿರುವಾಗ ಏನೋ ನಡೆಯುತ್ತಿದೆ ಎಂದು ತಿಳಿಯಲು ತಡವಾಗಲಿಲ್ಲ. ಲಾವಣ್ಯಾ ತಪ್ಪಿತಸ್ಥಳಂತೆ ಗಂಡನ ಕಣ್ಣು ತಪ್ಪಿಸಿ ಓಡಾಡಲಾರಂಭಿಸಿದಳು. ನಿಧಾನವಾಗಿ ಧನುಷ್ ಮಗಳ ಬಳಿ ಕೇಳಿದಾಗ, ಅವಳು ತನಗೆ ತಿಳಿದಿರುವುದನ್ನೆಲ್ಲಾ ಅವನಿಗೆ ಹೇಳಿ ಪಪ್ಪಾ, ನೀನು ಇನ್ನು ಮೇಲೆ ಹೆಚ್ಚಾಗಿ ಟೂರ್ ಪ್ರೋಗ್ರಾಮ್ ಹಾಕಿಕೊಳ್ಳಬೇಡ. ಅಮ್ಮ ಸದಾ ವೈಭವ್ ಅಂಕಲ್ ಜೊತೆ ಓಡಾಡುತ್ತಾರೆ. ನನ್ನ ಗೆಳತಿಯರೆಲ್ಲ, ಅವರ ಬಗ್ಗೆ ಏನೇನೋ ಮಾತಾಡಿಕೊಳ್ತಾರೆ ನನಗೆ ಸ್ಕೂಲ್‌ಗೆ ಹೋಗುವುದಕ್ಕೆ ಬೇಜಾರು ಎಂದೆಲ್ಲ ಹೇಳಿದಳು. ಅವನ ಸಂಶಯ ನಿಜವಾಯಿತು. ವೈಭವ್ ನ ಸಿರಿ ಸಂಪತ್ತು, ಆಕರ್ಷಕ ಮೈಕಟ್ಟಿಗೆ ಲಾವಣ್ಯಾ ಆಕರ್ಷಿತಳಾಗಿ ತಪ್ಪು ದಾರಿ ತುಳಿಯುತ್ತಿದ್ದಾಳೆ ಎಂದುಕೊಂಡ. ನಿಜಾಂಶ ತಿಳಿಯದೆ ತಾನು ಯಾವ ತೀರ್ಮಾನಕ್ಕೂ ಬರಬಾರದೆಂದು ನಿರ್ಧರಿಸಿದ. ತಾನು ಕೈ ಹಿಡಿದ ತನ್ನ ಪ್ರೀತಿಯ ಹೆಂಡತಿಯ ಶೀಲದ ಬಗ್ಗೆ ಶಂಕಿಸಬಾರದು, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂದು ತೀರ್ಮಾನಿಸಿದ. ಸುಮ್ಮನೆ ಫೋನ್‌ನಲ್ಲಿ ಸಂಭಾಷಿಸುತ್ತಿರುವನಂತೆ, ನಾನು ನಾಳೆಯೇ ಹೊರಡುತ್ತೇನೆ, ಏನು 1 ವಾರವಾದರೂ ಇರಬೇಕಾಗುತ್ತಾ? ಏನು ಮಾಡುವುದು? ದೊಡ್ಡ ಬಿಲ್ಡಿಂಗ್‌ನ ಇಂಟೀರಿಯರ್ ಡೆಕೋರೇಷನ್ ಎಂದರೆ ನಮಗೆ ಕಷ್ಟವಾದರೂ ಸರ್ವೀಸ್ ಕೊಡುವುದು ನಮ್ಮ ಕರ್ತವ್ಯ ಅಲ್ಲವಾ ಎಂದು ಹೇಳಿ ಫೋನ್ ಡಿಸ್‌ಕನೆಕ್ಟ್ ಮಾಡುವಂತೆ ನಟಿಸಿದ. ನಂತರ ಲಾವಣ್ಯಾಳಿಗೆ ನಾನು ನಾಳೆ ಬೆಳಗ್ಗೆ ಹೈದರಾಬಾದ್‌ಗೆ ಹೋಗಬೇಕು ಬರುವುದು 1 ವಾರವಾದರೂ ಆಗಬಹುದು. ನನ್ನ ಬಟ್ಟೆ ಜೋಡಿಸಿಡು ಎಂದು ಹೇಳಿ ಅವಳನ್ನು ಗಮನಿಸಿದ. ಲಾವಣ್ಯಾಳಿಗೆ ಗಂಡ ತನ್ನನ್ನು ಬಿಟ್ಟು ಒಂದು ವಾರ ಟೂರ್‌ಗೆ ಹೋಗುತ್ತಾನೆ ಎನ್ನುವ ಬೇಸರಕ್ಕೆ ಬದಲಾಗಿ ವೈಭವ್ ನನ್ನು ಕರೆಸಿಕೊಳ್ಳಬಹುದಲ್ಲ ಎನ್ನುವ ಸಂತೋಷ ಅವಳ ಮುಖದಲ್ಲಿ ಮೂಡಿತು. ಅವಳಲ್ಲಾದ ಬದಲಾವಣೆಯನ್ನು ಅವನು ಗಮನಿಸದೇ ಇರಲಿಲ್ಲ.
ಲಾವಣ್ಯಾಳಿಗೂ ದಿನೇ ದಿನೇ ವೈಭವ್ ನ ಸನಿಹ, ಸೆಳೆತ ಜಾಸ್ತಿಯಾಗಿ ಅವನನ್ನು ಬಿಟ್ಟಿರಲಾರದ ಸ್ಥಿತಿ. ಮಗಳು ಸ್ಕೂಲಿಗೆ ಹೋದ ತಕ್ಷಣ ವೈಭವ್ ಗೆ ತಿಳಿಸಿ ಕರೆಸಿಕೊಂಡಳು. ಅಕ್ಕಪಕ್ಕದವರೆಲ್ಲ ಕಿಟಕಿಯಲ್ಲಿ ನೋಡಿ ಇದೇನು ಗೃಹಿಣಿಯರು ಮಾಡುವ ಕೆಲಸವಾ? ಗಂಡ ಹೊರಗೆ ಹೋಗುತ್ತಿರುವುದೇ ಕಾಯುತ್ತಿದ್ದಳು ಎಂದೆಲ್ಲಾ ಮಾತಾಡಲಾರಂಭಿಸಿದರು. ಇದಾವುದರ ಪರಿವೇ ಇಲ್ಲದ ಲಾವಣ್ಯಾಳಿಗೆ ಆಗ ಬೇಕಾಗಿದ್ದುದು ವೈಭವ್ ನ ಸನಿಹ.
ಒಳ ಬಂದ ವೈಭವ್ ತನ್ನ ಕೂಲಿಂಗ್ ಗ್ಯಾಸ್, ಕಾರ್ ಕೀಯನ್ನು ವರಾಂಡ ಟೀಪಾಯಿ ಮೇಲಿಟ್ಟು ಲಾವಣ್ಯಾಳನ್ನು ಬಳಸಿ ಹಿಡಿದು ಅವಳನ್ನು ರೂಮಿಗೆ ಕರೆದೊಯ್ದ. ಇಬ್ಬರೂ ಒಬ್ಬರನ್ನೊಬ್ಬರು ಆಲಂಗಿಸುತ್ತಾ ಪ್ರಪಂಚವನ್ನೇ ಮರೆತಿದ್ದರು.
ಸದ್ದು ಮಾಡದೇ ಒಳ ಬಂದ ಧನುಷ್ ಹೆಂಡತಿಗೆ ತಿಳಿಯಬಾರದೆಂದು ತನ್ನ ಕಾರನ್ನು ರಸ್ತೆಯ ತುದಿಯಲ್ಲಿ ನಿಲ್ಲಿಸಿ ಒಳ ಬಂದು ಕಿಟಕಿಯ ಪರದೆ ಸರಿಸಿ ನೋಡಿದ ಧನುಷ್‌ಗೆ ಅಲ್ಲಿಯ ದೃಶ್ಯ ಅಸಹ್ಯವಾಗಿ ತಲೆ ಸುತ್ತಿದಂತಾಯಿತು. ಸ್ವಂತ ಹೆಂಡತಿ ಬೇರೊಬ್ಬನ ಅಪ್ಪುಗೆಯಲ್ಲಿದ್ದರೆ ಕಣ್ಣಾರೆ ಕಂಡ ಯಾವ ಗಂಡ ತಾನೇ ಸಹಿಸಿಕೊಳ್ಳುತ್ತಾನೆ? `ಕಾಮಾತುರಣಾಂ ನ ಭಯಂ, ನ ಲಜ್ಜಾ’ ಎಂಬಂತೆ ತನ್ನ ಅನುಮಾನ ನಿಜವಾಯಿತು.
ಭಾರವಾದ ಹೃದಯದಿಂದ ಧನುಷ್ ಹೊರ ಬಂದು ಹತ್ತಿರದಲ್ಲೇ ಇದ್ದ ಪಾರ್ಕ್‌ನ ಕಲ್ಲಿನ ಮೇಲೆ ಕುಳಿತು ಯೋಚಿಸಲಾರಂಭಿಸಿದ. ನಾನು ಯಾವುದರಲ್ಲಿ ಅವಳಿಗೆ ಕಡಿಮೆ ಮಾಡಿದ್ದೆ? ಊಟ, ತಿಂಡಿ, ಶ್ರೀಮಂತಿಕೆಯ ಜೀವನ, ಆಳುಕಾಳುಗಳು, ಭವ್ಯವಾದ ಮನೆ, ಸಂಪತ್ತು, ಮುದ್ದಾದ ಮಗಳು ಎಲ್ಲ ಇದ್ದು ಈ ರೀತಿ ಅನ್ಯ ಮಾರ್ಗ ಹಿಡಿದಿರುವ ಹೆಂಡತಿಯ ಬಗ್ಗೆ ಅಸಹ್ಯವಾಯಿತು. ಅವಳು ಬೇಸರ ಎಂದಾಗ ಕ್ಲಬ್‌ಗೆ ಹೋಗಲು ಅನುಮತಿ ನೀಡಿದೆ. ಅವಳು ಕೇಳಿದ್ದಕ್ಕೆ ಇಲ್ಲವೆನ್ನದೆ ತೆಗೆದುಕೊಟ್ಟೆ. ಬಹುಶಃ ನಾನು ಅವಳಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ತಪ್ಪು ಮಾಡಿದೆ ಅನಿಸಿತು. ಅವಳಲ್ಲಿ ನಂಬಿಕೆ ಇಟ್ಟು ಕ್ಲಬ್‌ಗೆ ಕಳುಹಿಸಿದ್ದು ಈ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ. ಒಂದು ಮಗುವಿನ ತಾಯಿಯಾಗಿ ಹೀಗೆ ನಡತೆಗೆಟ್ಟ ಕೆಲಸ ಮಾಡುತ್ತಿರುವ ಅವಳ ಬಗ್ಗೆ ಇದ್ದ ಗೌರವವೆಲ್ಲ ನಶಿಸಿಹೋಯಿತು. ನನ್ನ ಮಾನ, ಮರ್ಯಾದೆಯೆಲ್ಲ ಮಣ್ಣು ಪಾಲು ಮಾಡಿದಳು. ನಾಳೆ ಇಂತಹವಳ ಮಗಳು ಎಂದರೆ ನನ್ನ ಮಗಳಿಗೆ ಈ ಸಮಾಜದಲ್ಲಿ ಯಾವ ಸ್ಥಾನ ಸಿಗುತ್ತದೆ ಎಂದು ಕಿಂಚಿತ್ ಯೋಚನೆ ಮಾಡುವ ವ್ಯವಧಾನ ಇವಳಲ್ಲಿ ಇಲ್ಲವಾಯಿತಾ? ಯಾವಾಗ ವೈಭವ್ ಇವಳಿಗೂ ನೆಕ್ಲೇಸ್ ತಂದು ಕೊಟ್ಟನೋ ಆಗಲೇ ಅವನ ಮೇಲೆ ಅನುಮಾನವಿತ್ತು. ಆದರೆ ಶ್ರೀಮಂತಿಕೆಯ ಗತ್ತು ತೋರಿಸಲು ಹಾಗೆ ಮಾಡಿದ್ದ ಎಂದುಕೊಂಡಿದ್ದೆ. ಆದರೆ ಈಗೇನು? ಧನುಷ್ ನೋವಿನ ಹೃದಯದಿಂದ ಕಣ್ಣು ಮುಚ್ಚಿ ಕುಳಿತ. ಲಾವಣ್ಯಾಳ ಜೊತೆಗಿನ ಒಡನಾಟ, ಸಂಬಂಧ ಎಲ್ಲ ಕಣ್ಣಾಮುಚ್ಚಲೆಯಾ? ಅಥವಾ ಕನಸಾ? ಎನಿಸಿ, ಧನುಷ್ ಎಲ್ಲ ನೆನಪುಗಳನ್ನೂ ಕೊಡವಿಕೊಂಡು ಒಂದು ನಿರ್ಧಾರ ಮಾಡಿ ಇದೇ ಸರಿ ಎಂದು ಪಾರ್ಕ್‌ನಿಂದ ಹೊರಬಂದ.
ಕ್ಲಬ್‌ನಿಂದ ಎಲ್ಲರೂ ಊಟಿಗೆ ಟ್ರಿಪ್ ಹೋಗುತ್ತಿದ್ದೇವೆ. 1 ವಾರವಾಗಬಹುದು. ಸೌಜನ್ಯಾಳನ್ನು ನೋಡಿಕೊಳ್ಳಲು ರೇಖಾಳಿಗೆ ಹೇಳಿದ್ದೇನೆ, ಎಂದು ಲಾವಣ್ಯಾ ಹೇಳಿದಾಗ ಯಾವ ಭಾವವನ್ನು ವ್ಯಕ್ತಪಡಿಸದೆ ಧನುಷ್ ಹೊರನಡೆದ. ಇದ್ಯಾವುದೂ ತಿಳಿಯದ ಲಾವಣ್ಯಾ ಬಹುಶಃ ಗಂಡನಿಗೆ ಆಫೀಸ್ ಕೆಲಸದ ಒತ್ತಡವಿರಬೇಕೆಂದು ತನ್ನ ಊಟಿಯ ಪ್ರವಾಸಕ್ಕೆ ಸಿದ್ಧಳಾಗತೊಡಗಿದಳು.
ಇತ್ತ ಧನುಷ್ ಒಂದು ವಾರ ಕೆಲಸಕ್ಕೆ ರಜೆ ನೀಡಿ, ಮಗಳ ಜೊತೆಯಲ್ಲಿ ಕಾಲ ಕಳೆಯಲು ನಿರ್ಧರಿಸಿದ. ತಾಯಿಯ ಸ್ಥಾನ ಸರಿಯಾಗಿ ನಿಭಾಯಿಸದ ಲಾವಣ್ಯಾ, ತಾನು ತಂದೆಯಾಗಿ ಒಂದು ದಿನ ಮಗಳನ್ನು ಎತ್ತಿ ಆಡಿಸಲಿಲ್ಲ, ಮುದ್ದಾಡಲಿಲ್ಲ. ಈಗಲಾದರೂ ಮಗಳಿಗೆ ಬೇಸರವಾಗದಂತೆ ಅವಳ ಜೊತೆ ತಾನೂ ಮಗುವಾಗಿ ನಕ್ಕು ನಲಿದ.
ಸೌಜನ್ಯಾಳಿಗೆ ಆಶ್ಚರ್ಯವಾದರೂ ಅಪ್ಪನ ಈ ಬದಲಾವಣೆ ಅವಳಲ್ಲಿ ಖುಷಿ ತುಂಬಿ ಉತ್ಸಾಹ ಮೂಡಿಸಿತು. ಇಬ್ಬರೂ ಕೇರಂ, ಚದರಂಗ ಆಡಿದರು, ಮಗಳ ಜೊತೆ ಹೋಟೆಲ್‌ಗೆ ಹೋಗಿ ಅವಳು ಇಷ್ಟಪಡುವ ತಿಂಡಿ, ತಿನಿಸು ತಿನ್ನಿಸಿ ಅವಳನ್ನು ಖುಷಿಪಡಿಸಿದ.
ಅಂದು ರಾತ್ರಿ ಊಟಿಯಿಂದ ವಾಪಸ್ ಬಂದ ಲಾವಣ್ಯಾ ತುಂಬಾ ಉತ್ಸಾಹದಿಂದ ಪ್ರವಾಸದ ಅನುಭವಗಳನ್ನೆಲ್ಲಾ ರಸವತ್ತಾಗಿ ವರ್ಣಿಸುತ್ತಿದ್ದಳು. ಧನುಷ್ ಮುಖದಲ್ಲಿ ವ್ಯಂಗ್ಯ ಹಾಗೂ ಅವಳ ಬಗ್ಗೆ ತಾತ್ಸರವಿತ್ತು. ಯಾವ ಆಸಕ್ತಿಯನ್ನೂ ತೋರಿಸದೆ ನಿರ್ವಿಕಾರನಾಗಿದ್ದ.
ಮಾರನೇ ಬೆಳಗ್ಗೆ ಧನುಷ್ ಆಫೀಸ್‌ಗೆ ಹೊರಡಲು ತಯಾರಾಗುತ್ತಿದ್ದಾಗ, ಲಾವಣ್ಯಾ ಪೇಪರ್ ಓದುತ್ತಾ ಕುಳಿತಿದ್ದಳು ಥಟ್ಟನೆ ಓಡಿ ಹೋಗಿ ಹತ್ತಿರದ ವಾಷ್ ಬೇಷನ್‌ನಲ್ಲಿ ವಾಂತಿ ಮಾಡುತ್ತಿದ್ದುದನ್ನು ಕಂಡ ಧನುಷ್ ಶೂ ಬಿಚ್ಚಿ ಹತ್ತಿರ ಬಂದು ಏನಾಯಿತು ಎಂದ. ಲಾವಣ್ಯಾ ಸಹಜವೆಂಬಂತೆ ಏನಿಲ್ಲ ಬಹುಶಃ ಊಟಿಯ ನೀರು, ಗಾಳಿಯ ವ್ಯತ್ಯಾಸದಿಂದ ಹೀಗಾಗಿರಬೇಕು. ಇತ್ತೊಂದು ದಿನ ರೆಸ್ಟ್ ತೆಗೆದುಕೊಂಡರೆ ಸರಿಹೋಗುತ್ತದೆ ಎಂದರೂ ಬಿಡದೆ ಧನುಷ್ ಅವಳನ್ನು ಹತ್ತಿರದ, ಪರಿಚಯದ ವೈದ್ಯರ ಬಳಿ ಕರೆತಂದ. ಅವರು ಅವಳನ್ನು ಪರೀಕ್ಷಿಸಿ ಹೊರ ಬಂದು ಧನುಷ್‌ನನ್ನು ಅಭಿನಂದಿಸಿ ಲಾವಣ್ಯಾ ಗರ್ಭಿಣಿ ಎಂದು ತಿಳಿಸಿದಾಗ, ಒಂದು ಕ್ಷಣ ಅವನ ಹೃದಯ ಧಸಕ್ ಎಂದಿತು. ಸಂತೋಷಕ್ಕಿಂತ ಶಾಕ್ ಆಯಿತು. ಏಕೆಂದರೆ ಅವನ ಮತ್ತು ಅವಳ ನಡುವಿನ ಸಂಬಂಧ ಅವನಿಗೆ ಚೆನ್ನಾಗಿ ತಿಳಿದಿತ್ತು. ಖಂಡಿತಾ ಈ ಮಗು ತನ್ನದಲ್ಲ ಎಂದು ಖಚಿತಪಡಿಸಿಕೊಂಡ ಧನುಷ್, ನರ್ಸ್‌ಗೆ ತನಗೆ ಆಫೀಸ್‌ನಿಂದ ಕರೆ ಬಂದಿದೆ ಹೋಗಬೇಕೆಂದು ಹೇಳಿ ಕಾರಿನಲ್ಲಿ ಕುಳಿತು ಬಹುದೂರ ಗೊತ್ತು ಗುರಿ ಇಲ್ಲದೆ ದಾರಿ ಸವೆಸಿ ಒಂದು ಮರದಡಿ ಕಾರನ್ನು ನಿಲ್ಲಿಸಿ ಅಲ್ಲಿಯೇ ಕುಳಿತ. ಒಂದು ಕ್ಷಣ ಅವನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ.
ಧನುಷ್ ಬಹಳ ದುಃಖದಿಂದ ಚಿಂತಾಕ್ರಾಂತನಾಗಿ, ಸೌಂದರ್ಯವತಿಯಾದ ಹೆಂಡತಿ ತನಗೆ ಸಿಕ್ಕಿದ್ದಾಳೆ ಎನ್ನುವ ಹೆಮ್ಮೆಗಿಂತ ಹೆಂಡತಿ ದಾರಿ ತಪ್ಪಿದಾಗ ಗಂಡನ ಮರ್ಯಾದೆ ಏನಾಗಬಹುದೆಂದು ಅವರಿವರ ಬಳಿ ಕೇಳಿದ್ದ. ಆದರೀಗ ತನ್ನ ಪರಿಸ್ಥಿತಿ ಬಿಸಿ ತುಪ್ಪ ಉಗುಳುವ ಹಾಗಿಲ್ಲ, ನುಂಗುವ ಹಾಗೂ ಇಲ್ಲ. ಈಗಾಗಲೇ ಹಲವರಿಗೆ ತಿಳಿದುಹೋಗಿದೆ. ಈ ವಿಚಾರ ತನ್ನ ಆಫೀಸ್‌ನಲ್ಲಿ ತಿಳಿದು ಮಾನ ಮರ್ಯಾದೆ ಹೋಗುವುದಕ್ಕಿಂತ ಮುಂದೆ ತಾನು ಮಾಡಬೇಕಾದದ್ದು ಸಾಕಷ್ಟಿದೆ ಎನಿಸಿತವನಿಗೆ. ಇನ್ನು ತನ್ನ ಪಾಲಿಗೆ ಲಾವಣ್ಯಾ ಮುಗಿದ ಅಧ್ಯಾಯ. ಅವಳ ಮೇಲೆ ಕನಿಕರ, ಪ್ರೀತಿ ಯಾವುದೂ ಇಲ್ಲದೆ ಎಲ್ಲ ಸತ್ತು ಹೋಗಿದೆ.
ಅವಳು ನಾನಿಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿ ನನ್ನನ್ನು ಅವಮಾನಿಸಿದ್ದಕ್ಕೆ ಅವಳಿಗೆ ಆಸ್ತಿಯೂ ಸಿಗದಂತೆ ಮಾಡಿ ಅವಳಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾನಿಸಿದ. ಧನುಷ್ ತನ್ನ ಮನೆಯ ದಾಖಲೆ, ಪ್ರಸಕ್ತ ಅವಳ ಹೆಸರಿನಲ್ಲಿ ಇಟ್ಟಿದ್ದ ಎಲ್ಲಾ ಹಣಕಾಸಿನ ವ್ಯವಹಾರವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡ. ಅವಳು ಜೀವನದಲ್ಲಿ ತನಗೆ ಮಾಡಿದ ಮೋಸ ಇನ್ಯಾರಿಗೂ ಆಗದಿರಲೆಂದು ತೀರ್ಮಾನಿಸಿದ.
ಹಿಂದೆ ಅವನಿಗೆ 10 ವರ್ಷಗಳ ಕಾಲ ಹೊರ ದೇಶಕ್ಕೆ ಕಾಂಟ್ರ್ಯಾಕ್ಟ್ ಗೆ ಹೋಗಲು ವ್ಯವಹಾರ ನಡೆದಿತ್ತು. ಅದಕ್ಕೆ ತಕ್ಕಂತೆ ಅವನು ಅದಕ್ಕೆ ಒಪ್ಪಿ ಹೋಗುವುದೆಂದು ನಿರ್ಧರಿಸಿದ. ಇದು ಅವಳಿಂದ ದೂರಾಗಲು ದೇವರೇ ಒದಗಿಸಿಕೊಟ್ಟಿರುವ ಅವಕಾಶವೆಂದು ತಿಳಿದ ಧನುಷ್ ಅವಳಿಗೇನೂ ತಿಳಿಸದೆ ಅವಳಿಗೊಂದು ಸುದೀರ್ಘ ಪತ್ರ ಬರೆದ.
ಅದರಲ್ಲಿ, ನಾನು ನಿನ್ನ ರೂಪಿಗೆ ಮರುಳಾಗಿ ಮೋಸಹೋದೆ. ರೂಪಕ್ಕೆ ತಕ್ಕಂತೆ ನಡತೆಯಲ್ಲೂ ನೀನು ಗುಣವಂತಳೆಂದು ಭಾವಿಸಿ, ನಿನಗೆ ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟೆ. ಆದರೆ ನೀನು ಅದನ್ನು ದುರುಪಯೋಗಪಡಿಸಿಕೊಂಡು ನಿನ್ನನ್ನು ನೀನೇ ಮಾರಿಕೊಂಡು ಕಾಮದ ಬೆನ್ನತ್ತಿ ಹೋದೆ. ನಿನಗೆ ನನ್ನಿಂದ ಕ್ಷಮೆ ಇಲ್ಲ. ನಿನ್ನ ಹೀನ, ಹೇಯ ಕೃತ್ಯವನ್ನು ಕಣ್ಣಾರೆ ಕಂಡ ನನಗೆ ನಿನ್ನ ಮೇಲೆ ಯಾವ ವ್ಯಾಮೋಹ, ಪ್ರೀತಿ ಎಳ್ಳಷ್ಟೂ ಇಲ್ಲ. ನನ್ನ ಸ್ವಂತ ಮನೆಯನ್ನು ಈಗಾಗಲೇ ಮಾರಿದ್ದೇನೆ. ಆ ದುಡ್ಡನ್ನು ದಾನ, ಧರ್ಮ ಮಾಡಿದ್ದೇನೆ. ನೀನು ಮಾಡಿರುವ ಮೋಸಕ್ಕೆ ನಾನು ನಿನ್ನಿಂದ ಡೈವೋರ್ಸ್ ಪಡೆದರೆ ನಾಲ್ಕು ಜನರ ಬಾಯಲ್ಲಿ ನಮ್ಮ ಸಂಸಾರದ ವಿಚಾರ ಆಹಾರಾಗಲು ನಾನು ಇಚ್ಛಿಸುವುದಿಲ್ಲ. ನನ್ನ ನಿನ್ನ ಸಂಬಂಧ, ಋಣ ಇಂದಿಗೆ ಮುಗಿಯಿತು. ನಾನು ಮಾನ ಮರ್ಯಾದೆಗೆ ಅಂಜಿ, ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರದಂತೆ, ನಿನ್ನ ಪಾಡಿಗೆ ನಿನ್ನನ್ನು ಬಿಟ್ಟಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡ. ನೀನು ಗರ್ಭಿಣಿ ಎಂದು ತಿಳಿದಾಗ ನನಗೆ ಆಘಾತವೇ ಆಯಿತು. ನನ್ನ ನಿನ್ನ ಸಂಬಂಧ ಹೇಗಿರುವುದೆಂದು ನಿನಗೂ ತಿಳಿದಿದೆ. ಆದ್ದರಿಂದ ನಿನ್ನ ನಡತೆಯ ಬಗ್ಗೆ ಬೇರೊಬ್ಬರು ಹೇಳಿದರೂ ನಾನು ನಂಬಿರಲಿಲ್ಲ. ಕೈ ಹುಣ್ಣಿಗೆ ಕನ್ನಡಿ ಬೇಕೇ ಎಂಬಂತೆ ಕಣ್ಣಾರೆ ಕಂಡ ಆ ಹೊಲಸು ದೃಶ್ಯ ನನ್ನನ್ನು ಕಠಿಣನನ್ನಾಗಿ ಮಾಡಿ ಈ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಿದೆ. ಸಾಧ್ಯವಾದರೆ ನನ್ನ ಮಗಳನ್ನಾದರೂ ಈ ಹೊಲಸು ಕೆಲಸಕ್ಕೆ ಬೀಳಿಸದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಿ, ಅವಳನ್ನು ಒಳ್ಳೆಯ ಮನೆಗೆ ಸೇರಿಸುವ ಪ್ರಯತ್ನ ಮಾಡು. ಅವಳನ್ನು ನಿನ್ನ ದಾರಿಯಲ್ಲಿ ಸಿಲುಕಿಸಬೇಡ. ನೀನು ಮಗಳ ಬಾಳಿಗೆ ಆಸರೆಯಾಗಿ ಒಳ್ಳೆಯ ದಾರಿಯಲ್ಲಿ ನಡೆಸಿ, ಮಾರ್ಗದರ್ಶನ ನೀಡುವಿಯೆಂದು ಆಶಿಸಿದ್ದೇನೆ…. ಎಂದು ಪತ್ರ ಮುಗಿಸಿ ಮೊದಲೇ ನಿರ್ಧರಿಸಿದಂತೆ ವಿದೇಶಕ್ಕೆ ಹೋಗಿ ಅವಳನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿದ.
ಲಾವಣ್ಯಾ ಎಂದೂ ನಿರೀಕ್ಷಿಸದೆ ಇದ್ದ ಆಘಾತ ಎದುರಿಸಬೇಕಾಯಿತು. ಗಂಡ ಎಂದಿನಂತೆ ಊರಿಗೆ ಹೋಗಿದ್ದಾನೆ, ತನಗೆ ಹುಷಾರಿಲ್ಲದ್ದರಿಂದ ತನ್ನನ್ನು ಡಿಸ್ಟರ್ಬ್ ಮಾಡಬಾರದೆಂದು ಹೇಳದೆ ಹೋಗಿದ್ದಾನೆಂದು ತಿಳಿದ ಅವಳು ರೂಮಿಗೆ ಬಂದಾಗ ಅವಳಿಗೆ ಅಲ್ಲಿ ಕಂಡದ್ದು ಗಂಡನ ಸುದೀರ್ಘ ಪತ್ರ. ಓದುತ್ತಾ ಲಾವಣ್ಯಾ ತಲೆಸುತ್ತಿದಂತಾಗಿ ಜ್ಞಾನ ತಪ್ಪಿ ಬಿದ್ದಳು. ಬಿದ್ದ ಶಬ್ದಕ್ಕೆ ಮನೆಯಲ್ಲಿದ್ದ ಆಳುಗಳು ಬಂದು ತಲೆಗೆ ನೀರು ತಟ್ಟಿ ಡಾಕ್ಟರ್‌ಗೆ ಫೋನ್ ಮಾಡಿ ಆ್ಯಂಬ್ಯಲೆನ್ಸ್ ತರಿಸಿ ಆಸ್ಪತ್ರೆಗೆ ಸೇರಿಸಿದರು. ಅವಳು ಬಿದ್ದ ಶಾಕ್‌ಗೆ ಮಗು ಉಳಿಸಲು ಸಾಧ್ಯವಾಗದೆ ಅಬಾರ್ಷನ್ ಮಾಡುವುದರ ಜೊತೆಗೆ ಗರ್ಭಕೋಶಕ್ಕೆ ಹೆಚ್ಚು ತೊಂದರೆಯಾಗಿದೆ ಎಂದು ಅದನ್ನೂ ತೆಗೆಯಬೇಕಾಯಿತು. ಆಸ್ಪತ್ರೆಯಲ್ಲಿ ಮಲಗಿದ್ದ ಲಾವಣ್ಯಾಳಿಗೆ ಗಂಡನಿಗೆ ತಾನು ಮಾಡಿದ ಮೋಸಕ್ಕೆ ತನಗೆ ತಕ್ಕ ಶಿಕ್ಷೆಯಾಗಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಳು. ಸಾಂತ್ವನ ಮಾಡಲು ಅವಳ ಬಳಿ ಯಾರೂ ಇರದೆ ಏಕಾಂಗಿಯಾದಳು.
ಈ ಮಗು ವೈಭವ್ ನದು, ತನ್ನ ಧನುಷ್‌ನ ಕರುಳಿನ ಕುಡಿಯಲ್ಲವೆಂದು ಅವಳಿಗೂ ತಿಳಿದಿತ್ತು. ಹಿಂದೊಮ್ಮೆ ಸೌಜನ್ಯಾ ಸಿಡುಕಿನಿಂದ, ಯಾಕಮ್ಮಾ ಅಂಕಲ್ ಅಪ್ಪ ಇಲ್ಲದಾಗೆಲ್ಲ ಬಂದು ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲೇ ಇರುತ್ತಾರೆ. ಅವರು ಪದೇ ಪದೇ ನಮ್ಮ ಮನೆಗೆ ಬರುವುದು ಇಷ್ಟವಿಲ್ಲ ಎಂದು ಹೇಳಿದಾಗ ತನ್ನ ತಪ್ಪನ್ನು ಮರೆಮಾಚಲು ಅವರು ಅವರ ಆಫೀಸ್ ವಿಚಾರ, ಕಷ್ಟ ಸುಖ ಮಾತನಾಡಲು ಬರುತ್ತಾರೆ ಎಂದು ಹೇಳಿದ್ದಳು. ವೈಭವ್ ಬಂದಾಗ ಹೋ ಎಂದೂ ಸಹ ಹೇಳದೆ ಮುಖ ತಿರುಗಿಸಿಕೊಂಡು ಹೋದಾಗ ಆಗಲೇ ಲಾವಣ್ಯಾ ಎಚ್ಚೆತ್ತುಕೊಂಡಿದ್ದರೆ, ಈಗ ಗಂಡನಿಂದ ದೂರವಾಗಿ ಏಕಾಂತ ವಾಸ ತಪ್ಪುತ್ತಿತ್ತೇನೋ…. ತಾನೇ ತೋಡಿಕೊಂಡ ಹಳ್ಳ. ಮಗಳೂ ಸಹ ತಿರಸ್ಕಾರ ತೋರಿಸಿ ತಾಯಿಯನ್ನು ದೂರ ಮಾಡಿದಳು. ಅಲ್ಲದೆ, ತನ್ನ ಬಗ್ಗೆ ಆಸಕ್ತಿ ತೋರದ ತಾಯಿ ತನ್ನದೇ ಆದ ಲೋಕದಲ್ಲಿರುವುದನ್ನು ತಿಳಿದ ಸೌಜನ್ಯಾ ತನ್ನಿಷ್ಟದಂತೆ ಡ್ರೆಸ್ ಮಾಡಿಕೊಳ್ಳುವುದು, ಯಾವಾಗ ಬರಬೇಕೆನಿಸುತ್ತದೋ ಆಗ ಮನೆಗೆ ಬರುವುದು ಮಾಡಲಾರಂಭಿಸಿದಳು. ಹೇಗೂ ಕೈ ತುಂಬಾ ಹಣವಿರುತ್ತಿತ್ತು ಅವಳೂ ಸಹ ಪಾರ್ಟಿಗೆ ಹೋಗುವುದು, ಗೆಳತಿಯರ ಜೊತೆ ಸುತ್ತಾಡುವುದು ಜಾಸ್ತಿಯಾಯಿತು. ಅವಳ ಆತ್ಮೀಯ ಗೆಳತಿ ಮಧುರಾ ನೀನು ಯಾವ ನಟಿಯರಿಗೂ ಕಮ್ಮಿ ಇಲ್ಲ. ನಿನ್ನ ಸೌಂದರ್ಯ ನನಗೇನಾದರೂ ಇದ್ದಿದ್ದರೆ ಖಂಡಿತ ಸಿನಿಮಾಗೆ ಸೇರುತ್ತಿದ್ದೆ. ಆದರೇನು ಮಾಡಲಿ? ನಿನ್ನಷ್ಟು ಒಳ್ಳೆಯ ಕಲರ್, ರೂಪ ಯಾವುದೂ ಇಲ್ಲವಲ್ಲ. ಹೇಗೂ ಸಿನಿಮಾ ಡೈರೆಕ್ಟರ್ ನಮ್ಮ ಹತ್ತಿರದ ಸಂಬಂಧಿಕರು ನಿನ್ನನ್ನು ಪರಿಚಯಿಸುತ್ತೇನೆ. ಖಂಡಿತ ನಿನಗೆ ಒಳ್ಳೆಯ ಛಾನ್ಸ್ ಸಿಗುತ್ತದೆಂದು ಅವಳಲ್ಲಿ ಆಸೆ ಹುಟ್ಟಿಸಿದಳು.
ಮಾತ್ರವಲ್ಲ ಮಧುರಾ, ಸೌಜನ್ಯಾಳನ್ನು ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಚಯಿಸಿದಾಗ, ಸೌಜನ್ಯಾ ತಾನು ಆಗಲೇ ದೊಡ್ಡ ನಟಿಯಾದಂತೆ ಉಬ್ಬಿಹೋದಳು. ಅವಳನ್ನು ಹೆಚ್ಚು ಆಕರ್ಷಿಸಿ ಸೆಳೆದದ್ದು ಇನ್ನೂ ಚಿಕ್ಕ ವಯಸ್ಸಿನ ನಟ ನಿಶಾಂತ್. ಎತ್ತರವಾದ ದಷ್ಟಪುಷ್ಟ ದೇಹ. ನೋಡಲು ಸುಂದರನಾಗಿದ್ದ. ಅವನ ಜೊತೆ ನಟಿಸಲು ಕೇಳಿದಾಗ ಸ್ವರ್ಗಕ್ಕೆ ಮೂರೇಗೇಣು ಎಂದುಕೊಂಡ ಸೌಜನ್ಯಾ ಅವನ ಜೊತೆ ಹೆಚ್ಚು ಆಸಕ್ತಿಯಿಂದ ನಟಿಸಿ ಅವನಿಗೆ ಹತ್ತಿರವಾದಳು. ಅವನೂ ಸಹ ಸೌಜನ್ಯಾಳ ರೂಪಕ್ಕೆ ಮಾರುಹೋಗಿ ಅವನೂ ಅವಳನ್ನು ಗಾಢವಾಗಿ ಪ್ರೀತಿಸತೊಡಗಿದ. ಸೌಜನ್ಯಾ ತಡ ರಾತ್ರಿಯಲ್ಲಿ ಮನೆಗೆ ಬರುವುದನ್ನು ಗಮನಿಸಿದ ಲಾವಣ್ಯಾ ಮಗಳನ್ನು ಗದರಿಸಿ ಕೇಳಿದಾಗ, ಇದುವರೆಗೂ ನಿನಗೆ ನನ್ನ ನೆನಪಾಗಲೀ ನಾನು ಏನು ಮಾಡುತ್ತಿದ್ದೇನೆಂಬ ಆಸಕ್ತಿಯಾಗಲೀ ಯಾವುದೂ ಇರಲಿಲ್ಲ. ನಿನ್ನ ಲೋಕದಲ್ಲಿ ನೀನು ಮುಳುಗಿರುತ್ತಿದ್ದೆ. ಈಗ ಯಾಕೆ ನನ್ನ ಬಗ್ಗೆ ನಿನಗೆ ಕಾಳಜಿ? ಅಪ್ಪ ಸಹ ನಮ್ಮಿಬ್ಬರನ್ನು ತೊರೆದು ದೂರ ಹೋದರು. ಇಷ್ಟಕ್ಕೆಲ್ಲ ನೀನೇ ಕಾರಣ. ಆ ವೈಭವ್ ಅಂಕಲ್ ಸಹವಾಸದಲ್ಲಿ ನಿನಗೆ ಮನೆ ಸಂಸಾರವೆಲ್ಲ ಮರೆತುಹೋಗಿತ್ತು. ಇದೆಲ್ಲವನ್ನು ಕಂಡು ಯಾರು ತಾನೇ ಸುಮ್ಮನಿರುತ್ತಾರೆ ಎಂದು ತಾಯಿಗೆ ನೀತಿ ಹೇಳಿದಳು. ಮಗಳ ಮೂದಲಿಕೆ ಲಾವಣ್ಯಾಳಿಗೆ ತಡೆದುಕೊಳ್ಳಲಾಗದೆ ಅಂದರೆ ನನಗೇ ಬುದ್ಧಿ ಹೇಳುವಷ್ಟು ದೊಡ್ಡವಳಾದಳಾ? ಎಂದು ಯೋಚಿಸಿದವಳಿಗೆ ನಾನು ಮಾಡಿರುವುದೇನು ಸಣ್ಣ ತಪ್ಪಾ? ಎಂದು ಒಳ ಮನಸ್ಸು ಕೇಳಿದಾಗ? ಗೃಹಿಣಿಯಾಗಿ ಮನೆತನವನ್ನು ಕಾಪಾಡಬೇಕಾದ ತಾನು ಹೀಗೆ ದಾರಿ ತಪ್ಪಿದರೆ ಖಂಡಿತಾ ಯಾರೂ ಕ್ಷಮಿಸುವುದಿಲ್ಲ. ಅದಕ್ಕೆ ಧನುಷ್ ಸಹ ಹೊರತಾಗಿಲ್ಲ ಎಂದು ತನ್ನ ದುರ್ವಿಧಿಯನ್ನು ನೆನೆದು ಲಾವಣ್ಯಾ ಬಿಕ್ಕಿ ಬಿಕ್ಕಿ ಅತ್ತಳು. ಎಲ್ಲಕ್ಕಿಂತ ಹೆಚ್ಚಾದ ಆಘಾತವೆಂದರೆ ಪ್ರೀತಿಯ ಮಗಳು ಸೌಜನ್ಯಾ ತಾಯಿಗೆ ಒಂದು ಮಾತೂ ತಿಳಿಸದೆ ನಿಶಾಂತ್‌ನನ್ನು ರಿಜಿಸ್ಟರ್ ಮದುವೆ ಆಗಿದ್ದು ಬೇರೆಯವರಿಂದ ತಿಳಿದಾಗ ಅಂತೂ ಎಲ್ಲರೂ ಕೈ ಬಿಟ್ಟರು.
ವೈಭವ್ ಗೆ ಲಾವಣ್ಯಾ ಗರ್ಭಿಣಿ ಎಂದು ತಿಳಿದಾಗ ಮೊದಲಿದ್ದ ಅವಳ ಮೇಲಿನ ಆಸಕ್ತಿ, ಆಕರ್ಷಣೆ ಕಡಿಮೆಯಾಗಿ ದೂರ ಸರಿಯಲು ಪ್ರಯತ್ನಿಸಿದ. ಅವಳು ಫೋನ್ ಮಾಡಿದಾಗೆಲ್ಲ ಡಿಸ್‌ಕನೆಕ್ಟ್ ಮಾಡುತ್ತಿದ್ದ. ಇಲ್ಲವೇ ಬೇಸರದ ಧ್ವನಿಯಲ್ಲಿ ತಾನು ಬೇರೆ ಊರಿನಲ್ಲಿದ್ದೇನೆಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಹೂವಿಂದ ಹೂವಿಗೆ ಹಾರುವ ದುಂಬಿಯಂತೆ ಅವನ ಬಲೆಗೆ ಆಗಲೇ ಇನ್ನೊಂದು ಹೆಣ್ಣು ಸಿಲುಕಿದ್ದಳು. ಹೆಣ್ಣಿನ ಬಾಳು ಹಣ್ಣಿನ ಹೋಳು, ಒಮ್ಮೆ ಧೂಳಿನಲ್ಲಿ ಬಿದ್ದರೆ ಅದನ್ನು ಎಷ್ಟೇ ತೊಳೆದರೂ ಅದರ ಮಲಿನತೆ ಹಾಗೇ ಇರುವಂತೆ ಒಮ್ಮೆ ಹೆಣ್ಣು ಜಾರಿದರೆ, ಅದಕ್ಕೆ ಬೆಲೆ ಇಲ್ಲದ ಹಾಗೆ ಯಾವ ಸಮಾಜ ಕೂಡ ಸ್ವೀಕರಿಸಲು ನಿರಾಕರಿಸಿ ಅವಳು ಕಡೆಯವರೆಗೂ ಅಪನಿಂದೆ ಹೊತ್ತುಕೊಂಡೇ ಸಮಾಜದಲ್ಲಿ ತಿರಸ್ಕೃತಳಾಗಿ ಬಾಳಬೇಕೆಂಬ ಸತ್ಯ ಅರಿವಾದಾಗ ಲಾವಣ್ಯಾ ಜೀವನದಲ್ಲಿ ಸೋತುಹೋಗಿದ್ದಳು.
ಪ್ರೀತಿ, ಭರವಸೆ, ಆಶ್ವಾಸನೆ ನೀಡಿದ್ದ ವೈಭವ್ ಗೆ ಇಷ್ಟು ಬೇಗ ತನ್ನ ಸನಿಹ ಬೇಡವಾಯಿತಾ? ಹೇಳದೇ ಕೇಳದೇ ಹೊರಟು ಹೋದ. ನಾನು ಅರ್ಥ ಮಾಡಿಕೊಳ್ಳದೆ ಸಂಸಾರದಲ್ಲಿದ್ದ ಸುಖವನ್ನು ಅನುಭವಿಸದೆ ಆಸೆಯ ಮರೀಚಿಕೆ ಹುಡುಕಿ ಹೊರಟು, ನನ್ನ ಸಂಸಾರವನ್ನು ಹಾಳು ಮಾಡಿಕೊಂಡು, ಗಂಡನನ್ನು ಕಳೆದುಕೊಂಡೆ. ಗಂಡಸರೇ ಹೀಗೆ ಕದ್ದು ಆಸೆ ತೀರಿಸಿಕೊಂಡು ಬಟ್ಟೆ ಬದಲಾಯಿಸಿದಂತೆ ಇನ್ನೊಬ್ಬಳ ಸಹವಾಸಕ್ಕಾಗಿ ಹಾತೊರೆಯುತ್ತಾರೆ. ನನಗೆ ಇದು ಮೊದಲೇ ಅರ್ಥವಾಗಬೇಕಾಗಿತ್ತು. ಈಗ ಎಲ್ಲ ಕೈ ಮೀರಿ ಹೋಗಿದೆ. ಈಗ ಪಶ್ಚಾತ್ತಾಪಪಟ್ಟರೆ ಯಾವುದೂ ಸಿಗುವುದಿಲ್ಲ ಎಂದು ಮಾನಸಿಕವಾಗಿ ಸೊರಗಿದಳು. ತನಗೂ ತಿಳಿಸದೆ ಮಗಳು ಮದುವೆಯಾಗಿದ್ದು ತಾಯಿಯಂತೆ ಮಗಳು ನೂಲಿನಂತೆ ಸೀರೆ. ತಾಯಿ ಸರಿಯಾಗಿದ್ದರಲ್ಲವೇ ಮಗಳು ಸರಿಯಾಗಿ ಬಾಳುತ್ತಿದ್ದಳು ಎಂದೆಲ್ಲ ನೆರೆಹೊರೆಯವರು ಆಡುವ ಕುಹಕಗಳನ್ನು ಕೇಳುವಾಗ ಅವಳಿಗೆ ಹೃದಯವನ್ನು ಈಟಿಯಿಂದ ಚುಚ್ಚಿದಂತಾಗುತ್ತಿತ್ತು. ತಾನು ಊಟಿಗೆ ಹೋಗಿದ್ದಾಗಲೇ ಗಂಡ ಈ ತೀರ್ಮಾನಕ್ಕೆ ಬಂದಿದ್ದಾನೆ ಎನ್ನುವುದಕ್ಕೆ ಬೀರುವಿನಲ್ಲಿದ್ದ ಅವಳ ಬೆಲೆ ಬಾಳುವ ಒಡವೆಗಳು ಹಾಗೂ ಅಪಾರ ಮೊತ್ತದ ಹಣವೆಲ್ಲ ಹೋಗುವಾಗ ಧನುಷ್ ತೆಗೆದುಕೊಂಡು ಹೋಗಿದ್ದ. ಮನೆಯನ್ನೂ ಸಹ ಮಾರಿದ್ದರಿಂದ ಅವಳಿಗೆ ಆಸರೆಯೇ ಇಲ್ಲದಂತಾಗಿತ್ತು. ಅವಳ ಮೈಮೇಲಿದ್ದ ವಜ್ರದ ಓಲೆ, ವಜ್ರದ ಮೂಗುತಿ, ಚಿನ್ನದ ಮಾಂಗಲ್ಯ ಸರ, 4 ಚಿನ್ನದ ಬಳೆಗಳು ಮಾತ್ರ ಇತ್ತು. ಅದನ್ನೇ ಮಾರಿ ಜೀವನ ಸಾಗಿಸಬೇಕು. ಆದರೆ ಎಲ್ಲಿಯವರೆಗೆ? ಆಪ್ತ ಗೆಳತಿ ರಾಧಾಳ ಬಳಿ ಹೇಳಿಕೊಂಡು ಅತ್ತಾಗ ಅವಳು, ಸಮಾಧಾನವಾಗಿ ನೀನು ತಪ್ಪು ಮಾಡಿದ್ದು ನಿನಗೆ ಅರಿವಾಗಿದೆ. ನಿನ್ನ ಮುಂದಿನ ಜೀವನಕ್ಕೆ ಏನಾದರೂ ಕೆಲಸ ಹುಡುಕು. ಹೇಗೂ ಓದಿದ್ದೀಯ. ಖಂಡಿತಾ ಕೆಲಸ ಸಿಗುತ್ತದೆ ಎಂದು ತನ್ನ ಮನೆಯ ಹಿಂಭಾಗದ ಔಟ್‌ಹೌಸ್‌ನಲ್ಲಿ ಲಾವಣ್ಯಾಳಿಗೆ ಇರಲು ಸಹಾಯ ಮಾಡಿ, ತನಗೆ ತಿಳಿದ ಶಾಲೆಯ ಪ್ರಿನ್ಸಿಪಾಲ್‌ರ ಬಳಿ ಅವಳನ್ನು ಪರಿಚಯಿಸಿ ಕೆಲಸಕ್ಕಾಗಿ ಪ್ರಯತ್ನಿಸಿದಳು.
ಅವಳಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ ಪ್ರಿನ್ಸಿಪಾಲ್ ಅವಳಿಗೆ ಶಿಕ್ಷಕಿ ಹುದ್ದೆ ನೀಡಿದರು. ಅಲ್ಲದೆ, ಸಂಜೆಯ ವೇಳೆಗೆ ಕೆಲವು ಕ್ಲಾಸ್‌ಗಳನ್ನು ನಡೆಸುತ್ತೇನೆಂದು ಕೇಳಿಕೊಂಡು ಅದರಂತೆ ಹೊಲಿಗೆ ಯಂತ್ರ ತರಿಸಿ ಕಸೂತಿ, ಟೈಲರಿಂಗ್ ಹಾಗೂ ವಿಧವಿಧವಾದ ಜೂಸ್ ತರಗತಿ, ಹೊಸ ರುಚಿ, ಸಂಗೀತ ತರಗತಿಯನ್ನು ನಡೆಸಿ ಹಣಕ್ಕೆ ಆಧಾರ ಮಾಡಿಕೊಂಡಳು. ಚಿಕ್ಕಂದಿನಲ್ಲಿ ಕಲಿತಿದ್ದ ವಿದ್ಯೆಗಳೆಲ್ಲ ಈಗ ಉಪಯೋಗಕ್ಕೆ ಬಂದವು.
ಲಾವಣ್ಯಾ ಈ ವಿಚಾರವನ್ನು ತಂದೆ, ತಾಯಿಗೂ ಹೇಳದೆ, ಅವರ ಬಳಿಗೂ ಹೋಗದೆ ಅವರಿಗೆ ತಿಳಿಯಬಾರದೆಂದು ತನ್ನ ಜೀವನ ತಾನೇ ರೂಪಿಸಿಕೊಳ್ಳಲು ಇಚ್ಛಿಸಿದಳು. ಏಕೆಂದರೆ ಇದು ಸ್ವಯಂಕೃತ ಅಪರಾಧ. ವೈಭವದ ಜೀವನವನ್ನು ಮರೆತು ಬರುತ್ತಿದ್ದ ಅಲ್ಪಸ್ವಲ್ಪ ಹಣದಲ್ಲಿ ಸರಳ ಜೀವನಕ್ಕೆ ಹೊಂದಿಕೊಂಡಳು. ಆಗ ಅವಳಿಗೆ ಯಾವುದೂ ಶಾಶ್ವತವಲ್ಲವೆಂದು ಅರಿವಾಯಿತು. ಜೀವನವೆಂದರೆ ಏರಿಳಿತಗಳ ಸರಮಾಲೆ. ಹೇಗೆ ಬರುತ್ತದೋ ಹಾಗೆ ಸ್ವೀಕರಿಸಬೇಕೆನ್ನುವ ಮಾತು ನಿಜ ಎಂದರಿವಾಯಿತು.
ಹೇಗೋ ಏನೋ ಯಾರಿಂದಲೋ ಲಾವಣ್ಯಾಳ ಬದುಕು ದಿಕ್ಕು ತಪ್ಪಿದೆ ಎಂದು ತಿಳಿದ ಅವಳ ತಂದೆ ತಾಯಿಗೆ ಆಘಾತವಾಯಿತು. ಇಬ್ಬರೂ ತೀರ್ಮಾನಿಸಿ ಲಾವಣ್ಯಾ ಹೆಸರಿನಲ್ಲಿ ಕೂಡಿಟ್ಟಿದ್ದ ಹಣವನ್ನೆಲ್ಲ ಅವಳಿಗೆ ಸೇರುವಂತೆ ಮಾಡಿ, ಇದ್ದ ಮನೆಯನ್ನು ಅವಳ ಹೆಸರಿಗೆ ಮಾಡಿ ತೀರಿಕೊಂಡರು. ಹಲವು ವರ್ಷಗಳ ನಂತರ ಲಾವಣ್ಯಾಳಿಗೆ ಆಸ್ತಿ ಹಣ ಕೈ ಸೇರಿತು. ಲಾವಣ್ಯಾಳಿಗೆ ಈಗಾಗಲೇ ಜೀವನ ಸಾಕಷ್ಟು ಪಾಠ ಕಲಿಸಿ, ನೋವನ್ನು ಅನುಭವಿಸಿ, ಹತಾಶಳಾಗಿದ್ದಳು. ಬಂದ ಈ ಹಣದಿಂದ ಖಂಡಿತಾ ತೃಪ್ತಿ ಸಿಗುತ್ತದಾ ಎಂದು ಯೋಚಿಸಿ ಕಣ್ಣು ತುಂಬಿ ಬಂದಿತು. ತನ್ನ ಗಂಡ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡಿಸಿದ. ಬಯಸಿದ್ದನ್ನು ತಂದುಕೊಡುತ್ತಿದ್ದ. ಇದನ್ನು ಅರ್ಥ ಮಾಡಿಕೊಳ್ಳದ ತಾನು ಸಂಯಮ ಕಳೆದುಕೊಂಡು ಶೀಲಗೆಟ್ಟವಳಾಗಿ ತನ್ನವರನ್ನೆಲ್ಲ ಕಳೆದುಕೊಂಡು ಒಂಟಿಯಾಗಿ ಈ ಸಮಾಜದ ಅಪನಿಂದೆಗೆ ಒಳಗಾಗಿದ್ದೇನೆ. ಈಗ ಈ ಆಸ್ತಿಯಿಂದ ಏನು ಪ್ರಯೋಜನವೆಂದು ಗೆಳತಿಯಲ್ಲಿ ನೋವಿನಿಂದ ಹೇಳಿಕೊಂಡಳು. ಈ ಹಣದಿಂದ ಸಾರ್ಥಕವಾಗುವ ಕೆಲಸ ಮಾಡು. ಪುರುಷರಿಂದ ವಂಚಿತರಾಗಿರುವ ಎಷ್ಟೋ ಜನ ಹೆಣ್ಣುಮಕ್ಕಳಿದ್ದಾರೆ. ದಿಕ್ಕು ತಪ್ಪಿ ಬಂದಿರುವ ಅಬಲೆ ಹೆಣ್ಣುಮಕ್ಕಳಿಗಾಗಿ ಆಶ್ರಮವೊಂದು ಸ್ಥಾಪಿಸು ಎಂದು ಗೆಳತಿ ಸಲಹೆ ಇತ್ತಾಗ ಅವಳಿಗೂ ಅದೇ ಸರಿ ಎನಿಸಿತು.
ನಾಲ್ಕು ಜನ ಹೆಣ್ಣುಮಕ್ಕಳಿಗೆ ನಾನು ಆಸರೆಯಾಗಬೇಕಾದರೆ ನನ್ನ ಹಳೆಯ ಹೆಸರಿನಿಂದ ಯಾರೂ ನನ್ನನ್ನು ಗುರುತಿಸಬಾರದೆನಿಸಿ ಬೇರೆ ಊರಿಗೆ ಹೋಗಿ ಆಶ್ರಮ ಸ್ಥಾಪಿಸಲು ನಿರ್ಧರಿಸಿದಳು. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅಲ್ಲಿ ಜಾಗ ಪಡೆದು, ತನ್ನ ಹೆಸರನ್ನು ಇಂದಿರಮ್ಮನೆಂದು ಬದಲಾಯಿಸಿಕೊಂಡು ಆಶ್ರಮ ಪ್ರಾರಂಭಿಸಿದಳು. ಅಲ್ಲಿಗೆ ಬರುವ ಹೆಣ್ಣುಮಕ್ಕಳಿಗೆ ಆಯಾಯ ಕಾಲಕ್ಕೆ ತಕ್ಕಂತೆ ವಿದ್ಯೆ, ಲಲಿತಕಲೆಗಳನ್ನು ಕಲಿಸಿದಳು. ಕೆಲವು ಹೆಣ್ಣುಮಕ್ಕಳು ಉದ್ಯೋಗ ಅರಸಿ ಹೊರಟರೆ, ಇನ್ನೂ ಕೆಲವರು ಮದುವೆಯಾಗಿ ಹೋದರು. ಎಷ್ಟೋ ಜನ ಹೆಣ್ಣುಮಕ್ಕಳಿಗೆ ಈ ಆಶ್ರಮ ದಾರಿದೀಪಾಯಿತು. ಅವಳ ಸಾಧನೆಯನ್ನು ಗುರುತಿಸಿದ ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸಿತು. ಕೆಲವರು ದಾನಿಗಳು ಸ್ವಯಂ ಪ್ರೇರಿತರಾಗಿ, ಹಣ ಸಹಾಯ, ಮದುವೆ ಖರ್ಚನ್ನು ವಹಿಸಿಕೊಳ್ಳುತ್ತಿದ್ದರು. ನಾನು ಮಾಡಿದ ತಪ್ಪಿಗೆ ನನ್ನಿಂದ ಕಿಂಚಿತ್ ಆದರೂ ಇತರರಿಗೆ ಉಪಕಾರವಾಗುತ್ತಿದೆಯಲ್ಲ ಎನ್ನುವುದೇ ಅವಳಿಗೆ ದೊಡ್ಡ ಸಮಾಧಾನ.
ಇಂದಿರಮ್ಮ ಅನಾಥಾಶ್ರಮದಲ್ಲಿ ಎಲ್ಲರ ಪಾಲಿಗೂ ಪ್ರೀತಿಯ ಅಮ್ಮನಾಗಿ ಸಹೃದಯಿ ಮಾತೆಯಾಗಿ ಮೆರೆದಳು. ಅವಳ ಹಳೆಯ ಜೀವನದ ನೆನಪುಗಳನ್ನೆಲ್ಲಾ ಮೆಲುಕು ಹಾಕಿದಳು.
ಸಾಯಂಕಾಲದ ಸಮಾರಂಭದಲ್ಲಿ ಪ್ರಶಸ್ತಿ ಪಡೆಯುವಾಗ (ಇಂದಿರಮ್ಮ) ಅವಳಿಗೇ ತಿಳಿಯದಂತೆ ಕಣ್ಣಲ್ಲಿ ನೀರು ಜಿನುಗಿತು. ಅದು ಆನಂದಬಾಷ್ಪವೋ ಅಥವಾ ಪಶ್ಚಾತ್ತಾಪದ ಕಣ್ಣೀರೋ ಅವಳಿಗೆ ತಿಳಿಯದಂತಾಗಿ ಪ್ರಶಸ್ತಿಯನ್ನು ಸ್ವೀಕರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿರುವಾಗಲೇ ಹೃದಯಾಘಾತವಾಗಿ ಇಂದಿರಮ್ಮ ವೇದಿಕೆಯ ಮೇಲೆ ಕುಸಿದರು. ಎಲ್ಲರೂ ಅವರ ಬಳಿ ಓಡಿ ಬಂದು ಅವರನ್ನು ಎತ್ತಿ ಮಲಗಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ನನ್ನ ಪಾಲಿನ ಕರ್ತವ್ಯ ನಾನು ಮುಗಿಸಿದ್ದೇನೆ ಎನ್ನುವ ಸಂತೃಪ್ತಿ ಅವರ ಮುಖದಲ್ಲಿ ಮೂಡಿತ್ತು.
(ಮುಗಿಯಿತು)