ಕಥೆ – ಟಿ. ಪದ್ಮಲತಾ
ಕೈ ಹಿಡಿದ ಹೆಂಡತಿಯನ್ನು ಪ್ರೇಮಿಸಿ, ಕೊನೆಯವರೆಗೂ ಅವಳನ್ನೇ ತನ್ನ ಸಂಗಾತಿಯೆಂದು ಭಾವಿಸಿದ್ದ ಆಕಾಶ್, ಅಂಥ ಹೆಂಡತಿ ತನಗೆ ಮಗು ಹೆತ್ತು ಕೊಡಲಾರಳು ಎಂದು ಖಾತ್ರಿಯಾದಾಗ ತಳೆದ ನಿರ್ಧಾರವೇನು? ಅಂಥ ಗಂಡನಿಗಾಗಿ ಮೇದಿನಿ ತಳೆದ ನಿಲುವೇನು……?
ಮೇದಿನಿ ಪೋರ್ಟಿಕೋದಲ್ಲಿ ಅತ್ತಿಂದಿತ್ತ ಹೋಗುತ್ತಿದ್ದಳು. ಅವಳು ಧರಿಸಿದ್ದ ತೆಳು ಓವರ್‌ಕೋಟ್ ಡಿಸೆಂಬರ್‌ನ ಆ ಚಳಿಯನ್ನು ತಡೆಯಲು ವಿಫಲವಾಗಿತ್ತು. ಮೊದಲಾಗಿದ್ದಿದ್ದರೆ ಅವಳು ಆ ಚಳಿಯಲ್ಲಿ ಅಲ್ಲಿ ನಿಂತಿದ್ದು ನೋಡಿ ಆಕಾಶ್‌ಗೆ ಹೃದಯ ಒಡೆದುಹೋಗುತ್ತಿತ್ತೇನೋ… ಆ ಪ್ರೀತಿ, ಕನ್ಸರ್ನ್ ಇಷ್ಟು ಬೇಗ ಮುಗಿದುಹೋಯಿತೇ? ಅನಿಸಿತು. ತಕ್ಷಣ ತನ್ನ ಯೋಚನೆಗೆ ತನಗೇ ನಗು ಬಂತು. ಇದಕ್ಕೆ ಕಾರಣಕರ್ತೆ ಯಾರು? ನಾನೇ ತಾನೇ? ಅವನ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿ ಈಗ ಅವನನ್ನು ದೂರುವುದು ಸರಿಯಲ್ಲ ಎಂದು ಅವಳ ಒಳ ಮನಸ್ಸು ಒತ್ತಿ ಹೇಳಿತು. ಆಕಾಶ್ ಇನ್ನೂ ಯಾಕೆ ಬರಲಿಲ್ಲ ಎಂಬ ಚಿಂತೆ, ಇತ್ತೀಚೆಗೆ ಯಾಕೋ ಬೇಕೆಂದೆ ತಡವಾಗಿ ಬರುತ್ತಿದ್ದಾನೆ ಎಂದೆನಿಸಿತು. ಆಕಾಶ್‌ನನ್ನು ಮದುವೆಯಾಗಿ ಹದಿನೈದು ವರುಷಗಳಾಗುತ್ತಾ ಬಂತು. ಅವರದ್ದು ಪ್ರೇಮ ವಿವಾಹವೇನಲ್ಲ. ಹಿರಿಯರು ನಿಶ್ಚಯಿಸಿದ ಮದುವೆ. ಆಕಾಶ್ ಶ್ರೀಮಂತ ಕುಟುಂಬದ ಹುಡುಗ. ಸುಳ್ಯದಲ್ಲಿ ಹೆಸರುವಾಸಿ ಕೃಷಿ ಕುಟುಂಬ ಅವನದು. ಬಹಳ ದೊಡ್ಡ ಅಡಕೆ ತೋಟ ಆಕಾಶ್ ಅಪ್ಪನಿಗಿತ್ತು. ಆಕಾಶ್ ಮೂರು ಗಂಡು ಮಕ್ಕಳ ಪೈಕಿ ಎರಡನೆಯವನು. ಮೊದಲನೆಯವನು ಡಿಪ್ಲೊಮ ಓದಿ ಬೇರೆ ಊರಿನಲ್ಲಿ ಸ್ವಂತ ಬಿಸ್‌ನೆಸ್ ಮಾಡುತ್ತಿದ್ದ. ಅವನು ಅವನ ಹೆಂಡತಿ ಮಕ್ಕಳ ಜೊತೆಗೆ ಹಬ್ಬಹರಿದಿನಗಳಿಗೆ ಮನೆಗೆ ಬಂದು ಹೋಗುತ್ತಿದ್ದರು. ಮೂರನೆಯವನು ಎಂಜಿನಿಯರಿಂಗ್ ಓದಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಕಾಶ್ ಡಿಗ್ರಿ ಓದಿದ್ದ, ಅವನ ಅಪ್ಪನ ಅಭಿಲಾಷೆಯಂತೆ ಮನೆಯಲ್ಲಿ ತೋಟ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದ.
ಮೇದಿನಿಯದ್ದು ಬಹಳ ಬಡ ಕುಟುಂಬ. ಸಣ್ಣವಳಿರುವಾಗಲೇ ಅಪ್ಪ ತೀರಿಕೊಂಡಿದ್ದರು. ಅಮ್ಮ ಅಡುಗೆ ಕೆಲಸ ಮಾಡಿ ಮಗಳನ್ನು ಸಾಕಿದ್ದರು. ಅವಳು ಯಾವುದೋ ಮದುವೆಯಲ್ಲಿ ಆಕಾಶ್ ಅಮ್ಮನ ಕಣ್ಣಿಗೆ ಬಿದ್ದಿದ್ದಳು. ಆಕಾಶ್ ಗೆ ಸರಿಯಾದ ಜೋಡಿ ಎಂದು ಅವರು ಮನೆಗೆ ಸಂಬಂಧ ಅರಸಿ ಹೋಗಿದ್ದರು. ಅವಳು ಬಡವಳಾದರೂ ಅವಳಲ್ಲಿ ಚೆಲುವಿಗೆ ಬಡತನವಿರಲಿಲ್ಲ. ಅನುಕೂಲಸ್ಥ ಸಂಬಂಧ ತಾನಾಗಿಯೇ ಹುಡುಕಿ ಬಂದಾಗ ಮೇದಿನಿಯ ಅಮ್ಮ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದರು. ಅವಳಿಗೂ ಅಷ್ಟು ಒಳ್ಳೆ ಸಂಬಂಧವನ್ನು ನಿರಾಕರಿಸಲು ಯಾವ ಕಾರಣ ಇರಲಿಲ್ಲ. ಆಕಾಶ್ ಕೂಡ ನೋಡಲು ಸ್ಛುರದ್ರೂಪಿ. ಹಾಗಾಗಿ ಅವರಿಬ್ಬರದು ಬಹಳ ಅನುರೂಪ ಜೋಡಿಯೆಂದು ಮದುವೆಗೆ ಬಂದವರೆಲ್ಲ ಮಾತಾಡಿಕೊಂಡಿದ್ದರು. ಎಲ್ಲಾ ಖರ್ಚುವೆಚ್ಚ ತಾವೇ ಹಾಕಿ ಆಕಾಶ್ ಮನೆಯವರು ಅವಳನ್ನು ಮನೆ ತುಂಬಿಸಿಕೊಂಡಿದ್ದರು.
ಮದುವೆಯಾಗಿ ಒಂದು ವರ್ಷ ಹನಿಮೂನ್, ಸಂಬಂಧಿಕರ ಮನೆ ಎಂದು ತಿರುಗಾಟದಲ್ಲಿ ಹೇಗೆ ಕಳೆದಿತ್ತೆಂದೇ ಗೊತ್ತಾಗಿರಲಿಲ್ಲ. ಅವಳು ಅತ್ತೆ ಮಾವನ ಪ್ರೀತಿಯನ್ನು ಬಹಳ ಬೇಗನೆ ಗಳಿಸಿದ್ದಳು. ಬಹಳ ಮೃದು ಸ್ವಭಾವದ ಆಕಾಶ್ ಅವಳನ್ನು ಎಂದೂ ನೋಯಿಸದವನೇ ಅಲ್ಲ. ಇವಳು ಅವನ ಸ್ವಭಾವಕ್ಕೆ ತಕ್ಕಂತೆ ಸರಳ ಹುಡುಗಿಯಾಗಿದ್ದು ಅವನ ಬೇಕುಬೇಡಗಳನ್ನು ಅರಿತು ನಡೆಯುತ್ತಾ ಒಳ್ಳೆಯ ಹೆಂಡತಿ ಅನ್ನಿಸಿಕೊಂಡಿದ್ದಳು.
ಹೀಗಿರಬೇಕಾದರೆ ಮೇದಿನಿಗೆ ಒಂದು ಸಣ್ಣ ಆರೋಗ್ಯ ಸಮಸ್ಯೆ ಕಾಣಿಸಿತ್ತು. ಅವಳಿಗೆ ಪದೇ ಪದೇ ಜ್ವರ ಬರತೊಡಗಿತ್ತು. ಮಾಮೂಲಿ ಚಿಕಿತ್ಸೆಯಲ್ಲಿ ವಾಸಿಯಾಗದಿದ್ದಾಗ ದೊಡ್ಡ ಆಸ್ಪತ್ರೆಗೆ ಕರೆದೊಯ್ದು ಎಲ್ಲಾ ತರಹದ ಟೆಸ್ಟ್ ಮಾಡಿಸಿದ್ದರು. ಡಾಕ್ಟರ್ ಅವಳ ಟೆಸ್ಟ್ ರಿಪೋರ್ಟ್ ನೋಡಿ ಅವಳ ಕಿಡ್ನಿ ವೈಫಲ್ಯವಾಗಿದೆ ಎಂದು ದೊಡ್ಡ ಶಾಕ್ ಕೊಟ್ಟಿದ್ದರು. ಆದರೆ ಭಯಪಡುವ ಅವಶ್ಯಕತೆ ಇಲ್ಲವೆಂದು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವ ಒಂದು ಪರಿಹಾರವನ್ನು ಸೂಚಿಸಿದ್ದರು.
ಅವಳ ಅಮ್ಮನೇ ಕಿಡ್ನಿಯನ್ನು ಕೊಡುವುದಾಗಿ ಹೇಳಿದ್ದರಿಂದ ತಡಮಾಡದೇ ಬೆಂಗಳೂರಿನ ಉತ್ತಮ ಆಸ್ಪತ್ರೆಯೊಂದರಲ್ಲಿ ಅವಳಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಿದ್ದರು. ಒಂದು ತಿಂಗಳು ಆಸ್ಪತ್ರೆ ವಾಸ. ಅಲ್ಲಿಯೇ ಇದ್ದು ಅವಳನ್ನು ನೋಡಿಕೊಂಡನು ಆಕಾಶ್. ಅವಳ ಚಿಕಿತ್ಸೆಗೆ ನೀರಿನಂತೆ ಹಣವನ್ನು ಖರ್ಚು ಮಾಡಿದ್ದ. ಅವಳನ್ನು ಡಿಸ್ಚಾರ್ಜ್ ಮಾಡುವಾಗ ಡಾಕ್ಟರ್ ಅವನ ಕೈಗೆ ಅವಳು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮಾತ್ರೆಗಳ ಪಟ್ಟಿ ನೀಡಿದ್ದರು. ಜೊತೆಗೆ ಅವಳ ದೇಹ ಪ್ರಕೃತಿ ಸೂಕ್ಷ್ಮವಾಗಿರುವುದರಿಂದ ಒಂದು ವರ್ಷ ಯಾವುದೇ ಕಾಯಿಲೆಯ ಸೋಂಕು ಅವಳಿಗಾಗದಂತೆ ತುಂಬ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗಿ ಹೇಳಿದ್ದರು. ಜೊತೆಗೆ ಅವಳು ಯಾವುದೇ ಒತ್ತಡ ಮತ್ತು ಶ್ರಮವಹಿಸುವ ಕೆಲಸಗಳನ್ನು ಮಾಡುವಂತಿಲ್ಲ ಎಂದಿದ್ದರು. ವೈವಾಹಿಕ ಜೀವನಕ್ಕೇನೂ ತೊಂದರೆ ಇಲ್ಲವೆಂದೂ, ಆದರೆ ಮಕ್ಕಳನ್ನು ಹೆರುವಂತಿಲ್ಲವೆಂದೂ ಸ್ಪಷ್ಟವಾಗಿ ಹೇಳಿದ್ದರು. ಆಕಾಶ್ ಅದಕ್ಕೇನೂ ತಲೆಕೆಡಿಸಿಕೊಂಡಿರಲಿಲ್ಲ. ಅವನಿಗೆ ಅವಳು ಮೊದಲಿನಂತೆ ಓಡಾಡಿಕೊಂಡಿದ್ದರೆ ಸಾಕು ಎಂದುಕೊಂಡಿದ್ದ. ಡಾಕ್ಟರ್ ಹೇಳಿದ ಔಷಧಿಗಳಿಗೆ ತಿಂಗಳಿಗೆ ಹತ್ತು ಸಾವಿರಕ್ಕೂ ಹೆಚ್ಚು ಖರ್ಚಾಗುತಿತ್ತು.
ಅವನೇ ಅವಳ ಆರೈಕೆ ಮಾಡುತ್ತಿದ್ದ. ಅವಳನ್ನು ಹಾಸಿಗೆ ಬಿಟ್ಟು ಇಳಿಯಲೂ ಬಿಡದೆ ಅವಳ ಪ್ರತಿ ಒಂದೂ ಕೆಲಸವನ್ನೂ ಅವನೇ ಮಾಡುತ್ತಿದ್ದ. ಅವನ ಅಪ್ಪ ಅಮ್ಮನಿಗೆ ಮಾತ್ರ ಮಗನ ಬಾಳು ಹೀಗೆ ಬರಡಾದದ್ದು ಸಹಿಸಲಾಗಲಿಲ್ಲ. ಮುಂದೆ ಅವಳಿಗೆ ಮಕ್ಕಳನ್ನು ಹೆರುವ ಸಾಧ್ಯತೆ ಇಲ್ಲವೆಂದು ತಿಳಿದಾಗಿನಿಂದ ಮಗನಿಗೆ ಇನ್ನೊಂದು ಮದುವೆ ಮಾಡಿಕೋ ಎಂದು ಒತ್ತಾಯಿಸತೊಡಗಿದರು. “ಅವಳು ಇರಲಿ, ಆದರೆ ನಿನ್ನನ್ನು ನೋಡಿಕೊಳ್ಳಲಿಕ್ಕೆ ನಿನ್ನ ಮಗುವನ್ನು ಹೆತ್ತು ಕೊಡುವ ಸಾಮರ್ಥ್ಯವಿರುವ ಆರೋಗ್ಯವಂತ ಹೆಣ್ಣು ಈ ಮನೆಗೆ ಬೇಕು,” ಎಂದ ಅವರ ಮಾತು ಕೋಣೆಯಲ್ಲಿ ಮಲಗಿದ್ದ ಮೇದಿನಿಯ ಕಿವಿಗೂ ಬಿದ್ದಿತ್ತು. ಕೋಣೆಯೊಳಗೆ ಬಂದ ಆಕಾಶನಿಗೆ ಅವಳ ಕಣ್ಣೀರು ಅಮ್ಮನ ಮಾತು ಅವಳ ಕಿವಿಗೆ ಬಿದ್ದಿದೆ ಎಂಬುದನ್ನು ಸ್ಪಷ್ಟಪಡಿಸಿತ್ತು. ಅವಳ ಕಣ್ಣೀರನ್ನು ಒರೆಸಿದವನೇ, “ಯಾರು ಏನೇ ಹೇಳಲಿ ನೀನೇ ನನ್ನ ಹೆಂಡತಿ, ಈ ಜನ್ಮದಲ್ಲಿ ನನಗೆ ಮತ್ತೆ ಬೇರೆ ಮದುವೆ ಇಲ್ಲ,” ಎಂದಿದ್ದ. ಆದರೆ ಯಾವಾಗಲೂ ಮಲಗಿರುತ್ತಿದ್ದ ಸೊಸೆಯ ಸೇವೆ ಮಾಡುವ ಮಗನನ್ನು ಕಂಡು ಅಪ್ಪ ಅಮ್ಮ ಇಬ್ಬರೂ ಪದೇ ಪದೇ ಮರು ಮದುವೆಗೆ ಒತ್ತಾಯ ಮುಂದುವರಿಸಿದ್ದರು. ಇವರ ಕಿರಿಕಿರಿಯಿಂದ ಹೆಂಡತಿ ಎಲ್ಲಿ ತಲೆ ಕೆಡಿಸಿಕೊಳ್ಳುವಳೋ ಎಂದು ಭಯಪಟ್ಟು ಆಕಾಶ್ ಅವಳನ್ನು ಕರೆದುಕೊಂಡು ತಾನು ಬೆಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿಬಿಟ್ಟ. ಮಗನ ನಿರೀಕ್ಷಿಸದ ಈ ನಿರ್ಧಾರದಿಂದ ಬಹಳ ಕೋಪಗೊಂಡರು ಅವನ ಅಪ್ಪ, “ನನ್ನ ನಿನ್ನ ಸಂಬಂಧ ಇಲ್ಲಿಗೇ ಮುಗಿಯಿತು,” ಎಂದು ಅವನ ಪಾಲಿನ ಹಣವನ್ನು ಕೊಟ್ಟು ಕೈ ತೊಳೆದುಕೊಂಡು ಬಿಟ್ಟಿದ್ದರು. ಅಪ್ಪ ಕೊಟ್ಟ ದುಡ್ಡನ್ನು ಬೆಂಗಳೂರಿನಲ್ಲಿ ಬಿಸ್‌ನೆಸ್‌ನಲ್ಲಿ ತೊಡಗಿಸಿದ್ದ. ಅದೃಷ್ಟವಶಾತ್ ಅವನು ಮುಟ್ಟಿದ್ದೆಲ್ಲ ಚಿನ್ನವಾಗತೊಡಗಿತ್ತು. ಬಹಳ ಬೇಗ ಅವನು ಯಶಸ್ಸನ್ನು ಕಂಡಿದ್ದ. ಬೆಂಗಳೂರಿನಲ್ಲೇ ಸ್ವಂತ ಮನೆಯನ್ನು ಕಟ್ಟಿದ್ದ. ಮೇದಿನಿಯ ಆರೋಗ್ಯ ಸುಧಾರಿಸಿತ್ತು. ಡಾಕ್ಟರ್ ಹೇಳಿದಂತೆ ಅವಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದ. ಅವಳಿಗೆ ಯಾವ ಪರಿಶ್ರಮದ ಕೆಲಸವನ್ನೂ ಮಾಡಲು ಬಿಡುತ್ತಿರಲಿಲ್ಲ. ಕೆಲವೊಮ್ಮೆ ಅವನದು ಅತಿಯಾಯಿತು ಅನ್ನಿಸುತ್ತಿತ್ತು. ಅವಳು ತಲೆನೋವೆಂದು ಮಲಗಿದರೂ ಅವನು ಪರಿತಾಪ ಪಡುತ್ತಿದ್ದ. ಮನೆಯಲ್ಲಿ ಅಡುಗೆ ಮಾಡುವ ಒಂದು ಕೆಲಸ ಬಿಟ್ಟರೆ ಬೇರೆ ಎಲ್ಲ ಕೆಲಸಗಳಿಗೆ ಕೆಲಸದವಳನ್ನು ನೇಮಿಸಿದ್ದ.
“ಅಡುಗೆಗೂ ಇದ್ದರೆ ನಾನು ಹೊತ್ತು ಕಳೆಯುವುದು ಹೇಗೆ?” ಎಂದು ವಾದಿಸಿದ್ದಳು. ಹಾಗಾಗಿ ಅಡುಗೆಯವಳ ಐಡಿಯ ಡ್ರಾಪ್ ಮಾಡಿದ್ದ.
ಆಕಾಶ್ ಬೆಳಗ್ಗೆ ಹೋದರೆ ಸಂಜೇನೇ ಮರಳಿಬರುತ್ತಿದ್ದುದು. ಅಪರೂಪಕ್ಕೆ ಒಂದೊಂದು ಸಲ ಮಧ್ಯಾಹ್ನ ಮನೆಗೆ ಬರುತಿದ್ದ. ಹಾಗಾಗಿ ಇವಳಿಗೆ ಒಬ್ಬಳಿಗೆ ಬೋರ್ ಆಗುತ್ತಿತ್ತು. ಮನೆಯಲ್ಲಿ ಮಕ್ಕಳಿದ್ದಿದ್ದರೆ ಈ ರೀತಿ ಬೇಜಾರಿನ ಪ್ರಶ್ನೆಯೇ ಇರುತ್ತಿರಲಿಲ್ಲ. ಆದರೆ ತನಗೆ ಮಕ್ಕಳಾಗುವ ಭಾಗ್ಯವಿಲ್ಲವೆಂದು ಬೇಸರವಾಗುತ್ತಿತ್ತು. ಮಗುವನ್ನು ದತ್ತು ತೆಗೆದುಕೊಳ್ಳುವ ವಿಚಾರ ಅವಳ ಮನಸಲ್ಲಿ ಹಲವು ಸಲ ಮೂಡಿತ್ತು. ಅದರ ಬಗ್ಗೆ ಅವಳು ಆಕಾಶ್‌ನಲ್ಲಿ ಹೇಳಿಯೂ ಇದ್ದಳು. ಆದರೆ ಅವಳ ಯಾವ ಮಾತಿಗೂ ಇಲ್ಲ ಅನ್ನದವನು ಆ ವಿಷಯದಲ್ಲಿ ಮಾತ್ರ ಖಡಾಖಂಡಿತ ನಿಲುವು ತಳೆದಿದ್ದ. `ಯಾರದೋ ಮಕ್ಕಳನ್ನು ನಮ್ಮ ಮಗು ಎಂದುಕೊಳ್ಳುವ ಔದಾರ್ಯ ನನ್ನಲ್ಲಿಲ್ಲ. ಈ ಪ್ರಪಂಚದಲ್ಲಿ ಎಷ್ಟೋ ಜನ ಮಕ್ಕಳಿಲ್ಲದವರಿಲ್ಲವೇ? ಅವರೇನು ಖುಷಿಯಾಗಿಲ್ಲವೇ?’ ಎಂದು ಅವಳ ಬಾಯಿ ಮುಚ್ಚಿಸುತ್ತಿದ್ದ. ಎಲ್ಲ ವಿಷಯಗಳಲ್ಲಿ ಅಷ್ಟು ಉದಾರತೆ ತೋರಿಸುತ್ತಿದ್ದ ಆಕಾಶ್ ಈ ವಿಷಯದಲ್ಲಿ ಮಾತ್ರ ಈ ರೀತಿ ಯೋಚಿಸುವುದು ಅವಳಿಗೆ ಆಶ್ಚರ್ಯದ ಸಂಗತಿಯಾಗಿತ್ತು. ಅವನಿಗೆ ಮಕ್ಕಳೆಂದರೆ ಎಷ್ಟು ಇಷ್ಟ ಎಂದು ಅವಳು ಮದುವೆಯಾದ ಮೊದಲ ದಿನಗಳಲ್ಲೇ ಅವನ ಮಾತುಗಳಿಂದಲೇ ಅರಿತುಕೊಂಡಿದ್ದಳು. ಅದರೆ ತನಗೆ ಮಗು ಆಗುವುದಿಲ್ಲ ಎಂದು ಗೊತ್ತಾದಾಗಿನಿಂದ ಆ ಬಗ್ಗೆ ತಪ್ಪಿಯೂ ಮಾತನಾಡುತ್ತಿರಲಿಲ್ಲ. ಇದನ್ನು ನೆನೆಸಿಕೊಂಡಾಗೆಲ್ಲ ನೋವಾಗುತ್ತಿತ್ತು. ತನಗೆ ಇಷ್ಟೆಲ್ಲ ತ್ಯಾಗ ಮಾಡಿದ ಮತ್ತು ಮಾಡುತ್ತಿರುವ ಆಕಾಶ್‌ಗೆ ಪ್ರತಿಯಾಗಿ ನಾನು ಏನು ಕೊಟ್ಟಿದ್ದೇನೆ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತಿತ್ತು. `ಅವನು ಇಷ್ಟೆಲ್ಲ ದುಡಿಯುತ್ತಿದ್ದಾನೆ. ಇದನ್ನು ಅನುಭವಿಸಲು ಅವನದೇ ಒಂದು ವಂಶ ಬೆಳಗುವ ಕುಡಿ ಬೇಡವೇ?’ ಎಂದನಿಸುತ್ತಿತ್ತು. ದತ್ತು ತೆಗೆದುಕೊಳ್ಳಲು ಒಪ್ಪದಿದ್ದಾಗ ಅವಳಿಗೆ ಇನ್ನೊಂದು ದಾರಿ ಹೊಳೆದಿತ್ತು. ಅದುವೆ ಅವನಿಗೆ ಇನ್ನೊಂದು ಮದುವೆ ಮಾಡುವುದು. ಅದು ಎಷ್ಟು ಅವಳ ಮನಸ್ಸು ಹೊಕ್ಕಿತ್ತೆಂದರೆ ಅವಳು ದಿನ ಅವನನ್ನು ಈ ವಿಷಯವಾಗಿ ಕಾಡತೊಡಗಿದಳು. “ನೋಡಿ ನಾನೇ ನಿಮ್ಮ ಮದುವೆಗೆ ಸಮ್ಮತಿಸಿರುವ ಕಾರಣ ಕಾನೂನಿನ ತೊಡಕಿರುವುದಿಲ್ಲ. ಯಾವುದಾದರೂ ಅನಾಥಾಶ್ರಮದಲ್ಲಿರುವ ಹುಡುಗಿಯನ್ನು ನೋಡೋಣ. ಅವಳಿಗೂ ಬಾಳು ಕೊಟ್ಟ ಕೃತಜ್ಞತೆಯೂ ಇರುತ್ತದೆ. ನಿಮ್ಮ ಮಗುವನ್ನು ಹೆತ್ತು ಕೊಡಲಿ. ಆ ಮಗು ನಮ್ಮೆಲ್ಲರ ಮಗುವಾಗಿರುತ್ತದೆ, ಜೊತೆಯಾಗಿ ಸಾಕೋಣ,” ಪದೇ ಪದೇ ಅವಳ ಅದೇ ಮಾತುಗಳನ್ನು ಕೇಳಿ ಅವನಿಗೆ ತಲೆ ಕೆಡುತ್ತಿತ್ತು. “ನಿನಗೆ ಏನು ಕಡಿಮೆ ಮಾಡಿದ್ದೇನೆ? ಬೇಡದ ತೊಂದರೆಯನ್ನು ತಲೆ ಮೇಲೆ ಹಾಕಿಕೊಳ್ಳಬೇಡ. ಬೇರೆಯವರ ಜೊತೆ ಗಂಡನ ಪ್ರೀತಿ ಹಂಚಿಕೊಳ್ಳುವುದು ಅಷ್ಟು ಸುಲಭವಲ್ಲ, ಯಾವುದೋ ಫಿಲ್ಮೀ ಐಡಿಯಾಗಳೆಲ್ಲ ನಿಜ ಜೀವನದಲ್ಲಿ ವರ್ಕ್‌ಔಟ್ ಆಗುವುದಿಲ್ಲ.
”ಸ್ಪಷ್ಟವಾಗಿ ನುಡಿದಿದ್ದ. ಆದರೆ ಈ ವಿಷಯದಲ್ಲಿ ಯಾಕೋ ಅವಳು ಸುಮ್ಮನೆ ಕೂರುವ ಹಾಗೆ ಕಾಣಿಸಲಿಲ್ಲ. ಅವಳ ಮನಸ್ಸಲ್ಲಿದ್ದುದು ಒಂದೇ ನನಗೋಸ್ಕರ ಅಪ್ಪ ಅಮ್ಮನನ್ನು ಬಿಟ್ಟು ಬಂದು ನನ್ನನ್ನು ಇಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರುವ ಇವನಿಗೆ ಒಂದು ಮಗುವಿನ ಭಾಗ್ಯ ದೊರಕಿಸಿ ಕೊಡಲೇಬೇಕೆನಿಸಿತ್ತು. ಎಷ್ಟೇ ಒತ್ತಾಯಿಸಿದರೂ ಒಪ್ಪದ ಅವನ ಮನಸ್ಸನ್ನು ಬದಲಾಯಿಸಲು ಎಮೋಷನಲ್ ಬ್ಲಾಕ್‌ಮೇಲ್ ಮಾಡತೊಡಗಿದ್ದಳು. ಉಪವಾಸ ಮಾಡುವುದು, ಅವನಲ್ಲಿ ಮಾತನಾಡದೇ ಇರುವುದರ ಮೂಲಕ ಅವಳು ಹಠ ಸಾಧಿಸತೊಡಗಿದ್ದಳು. ಅವಳ ಕಾಟ ತಡೆಯಲಾರದೆ ಅವನು ಬೇಕೆಂದೇ ಲೇಟಾಗಿ ಬರುತ್ತಿದ್ದ.
ಕಾಲಿಂಗ್ ಬೆಲ್ ಶಬ್ಧಕ್ಕೆ ದೀರ್ಘಾಲೋಚನೆಯಿಂದ ಎಚ್ಚೆತ್ತಳು. ಪೋರ್ಟಿಕೋದಿಂದ ಕೆಳಗಿಳಿದು ಬಂದವಳೇ ಹೋಗಿ ಬಾಗಿಲು ತೆರೆದಳು. ಒಳಗೆ ಬಂದ ಆಕಾಶ್‌ನಲ್ಲಿ `ಯಾಕೆ ಲೇಟ್?’ ಎಂದು ಕೇಳಬೇಕೆನಿಸಿತ್ತು. ಅವನ ಬಳಲಿದ ಮುಖ ನೋಡಿ ಅಯ್ಯೋ ಅನ್ನಿಸಿತು. ಇತ್ತೀಚೆಗೆ ಸರಿಯಾಗಿ ಅಡುಗೆಯೂ ಮಾಡದೆ, ಅವನ ಊಟ ತಿಂಡಿ ಬಗ್ಗೆಯೂ ಗಮನಕೊಟ್ಟಿರಲಿಲ್ಲ. ಆದರೆ `ನನ್ನ ಈ ಹಠ ನಿರ್ಧಾರ ಅವನ ಒಳಿತಿಗಾಗಿ ತಾನೇ?’ ಎಂದುಕೊಂಡಳು.
ಅಷ್ಟರಲ್ಲಿ ಆಕಾಶ್, “ಡಿಯರ್, ನಾಳೆ ಬೆಳಗ್ಗೆ ರೆಡಿಯಾಗು, ನಿನ್ನಿಷ್ಟದಂತೆ ಅನಾಥಾಶ್ರಕ್ಕೆ ಹೋಗುತ್ತಿದ್ದೇವೆ,” ಎಂದವನೇ ತನ್ನ ರೂಮಿನ ಕಡೆ ನಡೆದಿದ್ದ. ಕೊನೆಗೂ ತನ್ನ ಹಠ ಗೆದ್ದಿದೆ ಎಂದು ಅವಳಿಗರಿವಾಯಿತು. ಆಕಾಶ್ ನನ್ನ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾನೆ. ಅದರೆ ಅವಳಿಗೆ ಖುಷಿಯಾಗುವ ಬದಲು ಯಾಕೋ ಕಸಿವಿಸಿಯೆನಿಸಿತು. ತನ್ನ ಆಕಾಶ್ ತನಗೆ ಪರಕೀಯವಾದಂತೆನಿಸಿತು. ಇನ್ನು ಮುಂದೆ ಬರುವ ಹೊಸ ಹುಡುಗಿಯ ಪ್ರೀತಿಯ ಅಲೆಯಲ್ಲಿ ತನ್ನ ಕಡೆ ಅವನ ಗಮನ ಹರಿಸುವುದು ಕಡಿಮೆ ಆಗುತ್ತದೆಯೇನೋ ಅನಿಸಿತು. ತಕ್ಷಣ ತನ್ನ ಯೋಚನೆಗೆ ನಗುವೂ ಬಂತು. `ನಾನೇ ಹಠ ಮಾಡಿ ಒಪ್ಪಿಸಿ ಈಗ ಈ ರೀತಿ ಯೋಚಿಸುವುದು ಸರಿಯೇ?’ ಅನ್ನಿಸಿತು. ಆ ರಾತ್ರಿ ಏನೂ ಮಾತಾಡದೆ ಊಟ ಮುಗಿಸಿದ್ದ ಆಕಾಶ್ ಹೋಗಿ ನಿದ್ರೆ ಮಾಡಿದ್ದ. ಆದರೆ ಮೇದಿನಿಗೆ ನಿದ್ರೆ ಹಾರಿಹೋಗಿತ್ತು. ಯಾವಾಗ ಬೆಳಕಾಗುವುದೆಂದು ಕಾದಿದ್ದವಳೇ ಬೆಳಗ್ಗೆ ಬೇಗನೇ ಎದ್ದು ಹೊರಟು ನಿಂತಿದ್ದಳು. ಮನೆಗೆ ಬರಲಿರುವ ತನ್ನ ಸವತಿಯನ್ನು ಕಾಣುವ ಆತುರ ಅವಳಲ್ಲಿ ಎದ್ದು ಕಾಣುತ್ತಿತ್ತು. ಆಸಕ್ತಿಯಿಂದ ಅಲಂಕರಿಸಿಕೊಂಡಿದ್ದ ಆಕಾಶ್‌ನನ್ನು ನೋಡುವಾಗ ಇವನಿಗೆ ಮರುಮದುವೆ ಮಾಡುವ ನನ್ನ ನಿರ್ಧಾರ ತಪ್ಪಾಯ್ತೇನೋ ಅನ್ನಿಸಿತು. ಈಗ ಅವನ ಉತ್ಸಾಹ ನೋಡುವಾಗ ಇದು ಯಾವುದೂ ಬೇಡ ಅನ್ನಿಸತೊಡಗಿತ್ತು. ಆದರೆ ಅವನು ನಿರ್ಧಾರ ಮಾಡಿಯಾಗಿದೆ ಅಂದುಕೊಂಡಳು. ಮೌನವಾಗಿ ಕಾರು ಡ್ರೈವ್ ಮಾಡುತ್ತಿದ್ದ ಆಕಾಶ್ ಇದ್ಯಾವುದನ್ನೂ ಗಮನಿಸದವನಂತೆ ಇದ್ದುಬಿಟ್ಟ. ಅರ್ಧ ಘಂಟೆ ಡ್ರೈವ್ ನ ನಂತರ ಯಾವುದೋ ಒಂದು ಅನಾಥಶ್ರಮದ ಎದುರು ಕಾರು ನಿಲ್ಲಿಸಿದ್ದ. ಒಳಗೆ ಹೋಗುತ್ತಿರಬೇಕಾದರೇ, ಅವನಿಗಾಗಿ ಕಾಯುತ್ತಿದ್ದ ಮ್ಯಾನೇಜರ್ ಬಳಿಗೆ ಬಂದು, “ಸರ್, ನೀವು ಇಷ್ಟ ಪಟ್ಟವರು ಆ ಪಕ್ಕದ ರೂಮಿನಲ್ಲಿ ಇದ್ದಾರೆ. ನೀವು ನಿಮ್ಮ ಹೆಂಡತಿಯದೇ ಅಂತಿಮ ತೀರ್ಮಾನ ಎಂದಿದ್ದೀರಿ. ಈಗ ಅವರ ಜೊತೆ ಹೋಗಿ ನಮಗೆ ನಿಮ್ಮ ನಿರ್ಧಾರನ್ನು ತಿಳಿಸಿ,” ಅಂದರು. ಅವರು ತೋರಿಸಿದ ರೂಮಿನ ಕಡೆ ಹೆಂಡತಿಯ ಜೊತೆ ನಡೆಯುತ್ತಿದ್ದ ಆಕಾಶ್ ದಿಢೀರನೆ ನಿಂತ. ಇಡೀ ಕಾರಿಡಾರ್ ನಿರ್ಜನವಾಗಿತ್ತು. ಮೇದಿನಿಯ ಕೈ ಹಿಡಿದವನೇ ಮೆಲ್ಲನೆ, “ಮೇದಿನಿ, ನಿನ್ನ ಇಚ್ಛೆಯಂತೆ ನಾನು ಇಲ್ಲಿ ಬಂದಿದ್ದೇನೆ. ನಿನಗೆ ಮಗು ಬೇಕಿತ್ತು ಆದರೆ ನಾನು ನಿರಾಕರಿಸಿದೆ. ನಿನಗೆ ಆಶ್ಚರ್ಯವಾಗಿರಬಹುದು, ಒಂದು ಮಗುವನ್ನು ದತ್ತು ತೆಗೆದುಕೊಳ್ಳಲಾರದಷ್ಟು ಇವನು ಸೆಲ್ಛಿಶ್ ಅಂತ. ಆದ್ರೆ ಅದರ ಕಾರಣ ಡಾಕ್ಟರ್ ನನಗೆ ಕೊಟ್ಟ ಅಡ್ವೈಸ್. ಆ ಪ್ರಕಾರ ನೀನು ಪರಿಶ್ರಮದ ಕೆಲಸ ಮಾಡಬಾರದು ಅಂದಿದ್ದರು. ಅವಳು ಮನೆಯೊಳಗಿನ ದೈನಂದಿನ ಚಿಕ್ಕಪುಟ್ಟ ಕೆಲಸ ಮಾಡುತ್ತಿದ್ದರೆ ಅವಳಿಗೆ ಯಾವತ್ತೂ ಏನೂ ತೊಂದರೆ ಇರಲ್ಲ. ಆದ್ದರಿಂದ ಅವಳ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದಿದ್ದರು. ನಾವು ಮಗು ದತ್ತು ತೆಗೆದುಕೊಂಡರೆ ಆ ಮಗುವಿನ ಪಾಲನೆ ಪೋಷಣೆಯಲ್ಲಿ ನಿನ್ನ ಆರೋಗ್ಯ ಕೆಟ್ಟರೇ ಅನ್ನುವ ಭಯ ನನ್ನದಾಗಿತ್ತು. ಆದ್ದರಿಂದ ನಾನು ಮಗು ದತ್ತು ತೆಗೆದುಕೊಳ್ಳುವ ವಿಷಯದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಸುಳ್ಳು ಹೇಳಿದೆ. ಆದರೆ ಅದಕ್ಕೆ ನೀನು ಇನ್ನೊಂದು ಉಪಾಯ ಕಂಡುಕೊಂಡೆ.
“ಅದು ನನ್ನ ಮರು ಮದುವೆ, ಏನೋ ತಮಾಷೆ ಮಾಡುತ್ತಿದ್ದಿ ಅಂದುಕೊಂಡೆ. ಆದರೆ ನೀನು ಆ ವಿಷಯದಲ್ಲಿ ಸೀರಿಯಸ್ ಆಗಿದ್ದಿ ಎಂದು ತಿಳಿಯಿತು. ಅಷ್ಟು ಪ್ರೀತಿಸುತ್ತಿರುವ ನಿನ್ನ ಗಂಡನನ್ನು ಇನ್ನೊಬ್ಬಳಿಗೆ ಬಿಟ್ಟು ಕೊಟ್ಟಾದರೂ ಮಗು ಪಡೆಯುವ ನಿನ್ನ ಹಂಬಲ ನಿನಗೆ ಮಗು ಬೇಕೆನ್ನಿಸುವ ತೀವ್ರತೆಯನ್ನು ನನಗೆ ತೋರಿಸಿ ಕೊಟ್ಟಿತು. ಅಂದೇ ನಿರ್ಧರಿಸಿದೆ. ಮೇದಿನಿಯ ಆಸೆಯನ್ನು ಪೂರೈಸುವುದು ನನ್ನ ಆದ್ಯ ಕರ್ತವ್ಯ. ಅವಳಿಗಾಗಿ ನಾನು ಇಷ್ಟು ಮಾಡಲಾರೆನಾ?”
ಮಾತಾಡುತ್ತಿದ್ದವನು ಒಂದು ಕ್ಷಣ ಮಾತು ನಿಲ್ಲಿಸಿ ಅವಳ ಮುಖವನ್ನು ಅವಲೋಕಿಸಿದ. ಅವಳ ಮುಖದಲ್ಲಿ ಅರಿಯಲಾಗದ ಗೊಂದಲ ಕಾಣಿಸಿತು. ಮತ್ತೆ ಮಾತು ಮುಂದುವರಿಸಿದವನೇ, “ಇದು ಒಳ್ಳೆ ಹೆಸರುವಾಸಿ ಅನಾಥಾಶ್ರಮ. ಎಲ್ಲಾ ವಿಚಾರಿಸಿದ್ದೇನೆ, ಯಾವುದೇ ತೊಂದರೆ ಇಲ್ಲ. ನೀನು ಇಷ್ಟಪಡುವ ಮಗುವನ್ನೇ ದತ್ತು ಪಡೆಯೋಣ, ಇದೇ ವಿಚಾರವಾಗಿ ಬಿಝಿ ಇದ್ದೆ ಚಿನ್ನ.. ಬೇಜಾರು ಮಾಡಿಕೊಂಡೆಯಾ?” ಅವಳ ಕೆನ್ನೆ ತಟ್ಟಿದ…
ತನ್ನನ್ನು ಇಷ್ಟೊಂದು ಪ್ರೀತಿಸುವ ಆಕಾಶ್‌ನನ್ನು ಗಂಡನನ್ನಾಗಿ ಪಡೆದದ್ದು ಯಾವ ಜನ್ಮದ ಪುಣ್ಯವೋ ಅಂದುಕೊಂಡಳು. ತನ್ನ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದ ಅವನ ಕಣ್ಣಿನಲ್ಲಿ ಕಣ್ಣಿಟ್ಟು ನುಡಿದಳು. “ಆಕಾಶ್, ನಿಮ್ಮಂಥವರು ನನ್ನ ಸಂಗಾತಿಯಾಗಿದ್ದು ನನ್ನ ಪುಣ್ಯ! ನೀವು ನನ್ನಿಷ್ಟದಂತೆ ಅನಾಥಾಶ್ರಮಕ್ಕೆ ಹೋಗುತ್ತಿದ್ದೇವೆ ಅಂದಿದ್ದನ್ನು ಇನ್ನೊಂದು ಹುಡುಗಿಯನ್ನು ಮದುವೆಯಾಗಲು ಒಪ್ಪಿದ್ದೀರಾ ಎಂದೆಣಿಸಿಕೊಂಡು ಆ ಕ್ಷಣದಿಂದ ಏನೋ ಚಡಪಡಿಕೆ ಆರಂಭವಾಗಿತ್ತು. ಗಂಡನ ಪ್ರೀತಿಯನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳುವುದು ನನ್ನಿಂದ ಸಾಧ್ಯವಾಗದ ಮಾತು ಎಂದು ಈಗ ಅರ್ಥವಾಗಿದೆ. ನಿಮ್ಮ ಔದಾರ್ಯಕ್ಕೆ ನಾನು ಚಿರಋಣಿ. ನೀವು ನನಗೋಸ್ಕರ ಮಾಡುತ್ತಿರುವ ತ್ಯಾಗವೇ ನನ್ನ ಮೇಲೆ ನಿಮಗಿರುವ ಪ್ರೀತಿಯನ್ನು ತಿಳಿಸುತ್ತಿದೆ. ಈ ಪ್ರೀತಿ ಮಧುರ, ತ್ಯಾಗ ಅಮರ ಎಂಬುದನ್ನು ನನ್ನ ಪಾಲಿಗೆ ನೀವು ನಿಜವಾಗಿಸಿದ್ದೀರಿ. ಏಳೇಳು ಜನ್ಮಕ್ಕೂ ನಿಮ್ಮನ್ನೇ ಗಂಡನನ್ನಾಗಿ ಭಗವಂತ ಕರುಣಿಸಲಿ…..” ಅಂದವಳ ಕಣ್ಣು ತುಂಬಿತ್ತು. ತನ್ನ ಕೈಯಲ್ಲಿ ಇದ್ದ ಅವಳ ಹಸ್ತವನ್ನು ಮೃದುವಾಗಿ ಒತ್ತಿದ್ದ ಆಕಾಶ್ ಅವಳ ಜೊತೆ ತಮ್ಮ ಮಗುವಿನ ಆಯ್ಕೆಗಾಗಿ ಆ ರೂಮಿನ ಕಡೆ ಹೆಜ್ಜೆ ಹಾಕಿದ.