ಸ್ಪರ್ಮ್ ಡೊನೇಶನ್‌ಗೆ ಸಂಬಂಧಪಟ್ಟ ಈ ಮಾಹಿತಿ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ವರದಾನದಂತಿದೆ. ನಕಲಿ ವೈದ್ಯರು ಹಾಗೂ ಢೋಂಗಿ ಬಾಬಾಗಳ ಹತ್ತಿರ ಹೋಗಿ ಹಣ, ನೆಮ್ಮದಿ ಕಳೆದುಕೊಳ್ಳುತ್ತಿರುವವರಿಗೆ ನಿಜಕ್ಕೂ ಇದು ಒಳ್ಳೆಯ ಸುದ್ದಿಯೇ ಹೌದು…..!

ಸ್ಪರ್ಮ್ ಡೋನರ್‌ಗಳ ಹೆಚ್ಚುತ್ತಿರುವ ಟ್ರೆಂಡ್‌ನಿಂದಾಗಿ ನಕಲಿ ವೈದ್ಯರು ಹಾಗೂ ಢೋಂಗಿ ಬಾಬಾಗಳ ದಂಧೆಗೆ ಬಹುದೊಡ್ಡ ಆಘಾತ ಉಂಟಾಗಿದೆ. ಮಕ್ಕಳು ಆಗದೇ ಇದ್ದದ್ದರಿಂದ ಪುರುಷ ಹೆಸರಿನ ಮೇಲೆ ಕಳಂಕ, ಪುರುಷ ಶಕ್ತಿಯ ಕೊರತೆ ಹೀಗೆ ಏನೇನೋ ಅಪಪ್ರಚಾರ ಮಾಡಿ ರಸ್ತೆ ಬದಿಯ ನಕಲಿ ವೈದ್ಯರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದರು. ಸ್ಪರ್ಮ್ ಡೋನರ್‌ಗಳಿಂದಾಗಿ ತಾಯಿ ಆಗಬೇಕೆನ್ನುವ ಕನಸನ್ನು ನನಸು ಮಾಡಿಕೊಂಡ ಬೆಂಗಳೂರಿನ ಮಹಿಳೆಯೊಬ್ಬಳು ಹೀಗೆ ಹೇಳುತ್ತಾಳೆ, “ನಾನು ಹಾಗೂ ನನ್ನ ಪತಿ ಮಗು ಆಗಬೇಕೆಂದು ಅದೆಷ್ಟೊ ವೈದ್ಯರನ್ನು ಕಂಡಿದ್ದೆವು. ಆದರೆ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡು ಬಂದಿರಲಿಲ್ಲ. 4 ವರ್ಷಗಳಲ್ಲಿ  4 ಲಕ್ಷ ರೂ. ಖರ್ಚು ಮಾಡಿಯೂ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬರಲಿಲ್ಲ. ಆದರೆ ಒಂದು ಫರ್ಟಿಲಿಟಿ ಸೆಂಟರ್‌ ಬಗ್ಗೆ ಒಬ್ಬರು ತಿಳಿಸಿದರು. ಅಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ನಮಗೆ ಮಗುವಾಯಿತು.”

ಹೆಚ್ಚಿದ ಬೇಡಿಕೆ

ಸ್ಪರ್ಮ್ ಡೋನರ್‌ಗಳ ಟ್ರೆಂಡ್‌ ಹೆಚ್ಚಿರುವುದರಿಂದ ಢೋಂಗಿ ಬಾಬಾಗಳ, ನಕಲಿ ವೈದ್ಯರ ತಂತ್ರಮಂತ್ರವಾದಿಗಳ ಅಂಗಡಿಗಳು ಮುಚ್ಚಲಾರಂಭಿಸಿವೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ವಲಯದಿಂದ ಸ್ಪರ್ಮ್ ಡೋನರ್‌ಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಿದೆ. ಈಗ ಜನರು ಅತ್ಯಾಧುನಿಕ ತಂತ್ರಜ್ಞಾನದ ಮುಖಾಂತರ ಸ್ಪರ್ಮ್ ಡೋನರ್‌ಗಳ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಇದು ಡೋನರ್‌ಗಳಿಗೆ ಸಾಕಷ್ಟು ಹಣ ತಂದುಕೊಡುತ್ತಿದೆ. ಇನ್ನೊಂದೆಡೆ, ಮಕ್ಕಳಿಲ್ಲದ ಕುಟುಂಬಕ್ಕೆ ಮಗುವಿನ ನಗುವನ್ನು ತಂದುಕೊಡುವ ಕೆಲಸ ಮಾಡುತ್ತಿದ್ದಾರೆ. ಕೆಲವರು `ಸ್ಪರ್ಮ್ ಡೋನೇಶನ್‌’ನ್ನು ಅಸಹ್ಯದ ವ್ಯವಹಾರ ಎಂದು ಹೇಳುತ್ತಾರೆ. ಇನ್ನು ಕೆಲವರು ಇದನ್ನು `ವರ್ತಮಾನದ ಬೇಡಿಕೆ’ ಎಂದು ಹೇಳುತ್ತಾರೆ.

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತಿರುವ ಪ್ರಕರಣಗಳ ನಡುವೆಯೇ ಸ್ಪರ್ಮ್ ಡೋನರ್‌, ಎಷ್ಟೋ ಮನೆಗಳಲ್ಲಿ ಪುರುಷರು ನಪುಂಸಕರಾಗಿರುವ ಕಹಿ ಸತ್ಯಕ್ಕೆ ಪರದೆ ಎಳೆಯುವ ಕೆಲಸದಲ್ಲೂ ಮಗ್ನರಾಗಿದ್ದಾರೆ. ಇದರಿಂದ ಎಷ್ಟೋ ಕುಟುಂಬಗಳಲ್ಲಿ ವಿವಾಹ ವಿಚ್ಛೇದನಗಳಾಗುವುದು ತಪ್ಪಿದೆ. ಅಷ್ಟೇ ಅಲ್ಲ, ಮುಗ್ಧ ದಂಪತಿಗಳನ್ನು ನಯವಂಚಕ ನಕಲಿ ವೈದ್ಯರುಗಳಿಂದ ಮೋಸ ಹೋಗುವುದನ್ನು ತಪ್ಪಿಸುತ್ತಿದ್ದಾರೆ.

ಇನ್‌ಫರ್ಟಿಲಿಟಿ ಕ್ಲಿನಿಕ್‌ಗಳು ಮತ್ತು ವೈದ್ಯರ ಮುಖಾಂತರ ನಡೆಯುವ ಸ್ಪರ್ಮ್ ಡೊನೇಶನ್‌ನ ಕೆಲಸದಲ್ಲಿ ಸಾವಿರಾರು ಯುವಕರು ಶಾಮೀಲಾಗಿದ್ದಾರೆ. ಅವರು ಅಧ್ಯಯನ ಅಥವಾ ಉದ್ಯೋಗ ಮಾಡುವುದರ ಜೊತೆ ಜೊತೆಗೆ ಸ್ಪರ್ಮ್ ಡೊನೇಟ್‌ ಮಾಡುವ ಕೆಲಸದಲ್ಲೂ ನಿರತರಾಗಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈನಂತಹ ನಗರಗಳಲ್ಲಷ್ಟೇ ಅಲ್ಲ, ಚಿಕ್ಕಪುಟ್ಟ ನಗರಗಳಲ್ಲೂ ಈ ಚಟುವಟಿಕೆ ನಡೆಯುತ್ತಿದೆ. ಬೆಂಗಳೂರಿನ ಇನ್‌ಫರ್ಟಿಲಿಟಿ ಕೇಂದ್ರವೊಂದರ ವೈದ್ಯರ ಪ್ರಕಾರ, ಬೆಂಗಳೂರಿನಲ್ಲಿ 200-300ರ ಆಸುಪಾಸಿನಲ್ಲಿ ಸ್ಪರ್ಮ್ ಡೋನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಬಂಜೆತನ ನಿವಾರಣಾ ಕೇಂದ್ರಗಳಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ಕೇಂದ್ರಗಳಲ್ಲಿ ಸಾಕಷ್ಟು ಮಟ್ಟಿಗೆ ರಹಸ್ಯವನ್ನು ಕಾಪಾಡುತ್ತಾರೆ. ವೀರ್ಯ ಕೊಡುವವರು ಹಾಗೂ ಅದನ್ನು ಸ್ವೀಕರಿಸುವವರು ಪರಸ್ಪರರ ಬಗ್ಗೆ ತಿಳಿದಿರುವುದಿಲ್ಲ. ದಾನಿ ಹಾಗೂ ಅದನ್ನು ಸ್ವೀಕರಿಸುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ನಿಸ್ಸಂತಾನ ದಂಪತಿಗಳಿಗೆ ವರದಾನ

ಮಹಿಳೆಯರಲ್ಲಿ ಬಂಜೆತನ ಹಾಗೂ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಇಲ್ಲದವರು ಕೂಡ ಈಗ ಸಂತಾನಭಾಗ್ಯ ಪಡೆದುಕೊಳ್ಳಬಹುದಾಗಿದೆ. ಇನ್‌ಫರ್ಟಿಲಿಟಿ ತಜ್ಞ ಡಾ. ನಾಗರಾಜ್‌ ಹೀಗೆ ಹೇಳುತ್ತಾರೆ, ಯಾವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಏನೇನೂ ಇಲ್ಲವೋ ಅಥವಾ ಅವರು ದುಬಾರಿ ಚಿಕಿತ್ಸೆ ಮಾಡಿಸಿಕೊಳ್ಳಲು ಅಸಮರ್ಥರಾಗಿದ್ದರೋ, ಅಂತಹ ಸ್ಥಿತಿಯಲ್ಲಿ ದಾನಿಯ ವೀರ್ಯಾಣುವಿನಿಂದ ಗರ್ಭಧಾರಣೆ ಪ್ರಕ್ರಿಯೆ ನೆರವೇರಿಸಬಹುದಾಗಿದೆ. ಈ ಕಾರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಡೋನರ್‌ ಸ್ಪರ್ಮ್ ಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದೇ ರೀತಿ ಬಾಡಿಗೆ ತಾಯಿ (ಸರೋಗೇಟ್‌ ಮದರ್‌)ಯ ನೆರವಿನಿಂದಲೂ ಮಗು ಪಡೆಯಬಹುದಾಗಿದೆ.

ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗಲು ಅನೇಕ ಕಾರಣಗಳಿವೆ. ಕೇವಲ ದೈಹಿಕ ದೌರ್ಬಲ್ಯದಿಂದಾಗಿ ಅವರಲ್ಲಿ ಸಂತಾನ ಸೃಷ್ಟಿಸುವ ಶಕ್ತಿ ಕ್ಷೀಣಿಸುತ್ತದೆ ಎಂದಲ್ಲ, ಡಾ. ಸಂಧ್ಯಾ ಹೀಗೆ ಹೇಳುತ್ತಾರೆ, ಇಂದಿನ ಧಾವಂತದ ಜೀವನದಲ್ಲಿ ಪುರುಷರಲ್ಲಿ ಸಂತಾನೋತ್ಪತ್ತಿ ಶಕ್ತಿ ಕಡಿಮೆಯಾಗುತ್ತಿದೆ. ಅನಾರೋಗ್ಯ ಸ್ಥಿತಿ, ಮಾದಕ ಪದಾರ್ಥಗಳ ಸೇವನೆ, ಆತುರಾತುರಾಗಿ ಆಹಾರ ಸೇವನೆ, ಅತಿಯಾದ ಬಿಗಿ ಒಳಉಡುಪುಗಳ ಧರಿಸುವಿಕೆ ಮುಂತಾದ ಕಾರಣಗಳಿಂದಾಗಿಯೂ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಿದೆ. ಲ್ಯಾಪ್‌ಟಾಪ್‌, ಮೊಬೈಲ್‌ ಪೋನ್‌ಗಳ ಅತಿಯಾದ ಉಪಯೋಗ ಕೂಡ ಅವರ ಮಗುವಿನ ಆಸೆಗೆ ತಣ್ಣೀರೆರಚುತ್ತಿದೆ. ಮೊಬೈಲ್‌ ಲ್ಯಾಪ್‌ಟಾಪ್‌ಗಳಿಂದಾಗಿ ಆಮ್ಲಜನಕದ ಪೂರೈಕೆ ಕಡಿಮೆಯಾಗುತ್ತದೆ ಹಾಗೂ ಡಿಎನ್‌ಎ ಹಾನಿಗೊಳಗಾಗುತ್ತದೆ. ವೀರ್ಯಾಣುಗಳಲ್ಲಿ ಏರುಪೇರಾಗುತ್ತದೆ. ಇವೆಲ್ಲವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಅವುಗಳ ಹಿತಮಿತ ಬಳಕೆ ಮಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ಮಾಡಬೇಕು.

ಸುರಕ್ಷಿತ ಮತ್ತು ಗೌಪ್ಯತೆ

ಇನ್‌ಫರ್ಟಿಲಿಟಿ ತಜ್ಞರು 20 ರಿಂದ 26 ವರ್ಷದ ಯುವಕರ ವೀರ್ಯಾಣುವನ್ನಷ್ಟೇ ಪಡೆಯುತ್ತಾರೆ. ಅದರಲ್ಲಿ ಹೆಚ್ಚಿನವರು ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳೇ ಆಗಿರುತ್ತಾರೆ. ಎಂಥವರ ವೀರ್ಯಾಣುವನ್ನಾದರೂ ಪಡೆಯಲಾಗುತ್ತದೆ ಎಂಬುದು ಸುಳ್ಳು ಎಂದು ಇನ್‌ಫರ್ಟಿಲಿಟಿ ತಜ್ಞರು ಹೇಳುತ್ತಾರೆ.  ಕೇವಲ ವಿದ್ಯಾರ್ಥಿಗಳ ವೀರ್ಯಾಣುವನ್ನಷ್ಟೇ ಪಡೆಯಲಾಗುತ್ತದೆ. ಅದರಲ್ಲೂ ಎಲ್ಲ ವಿದ್ಯಾರ್ಥಿಗಳದ್ದೂ ಅಲ್ಲ. 10-12 ವಿದ್ಯಾರ್ಥಿಗಳ ಸ್ಪರ್ಮ್ ಟೆಸ್ಟ್ ಮಾಡಿಸಿದ ಬಳಿಕ ಅದರಲ್ಲಿ ಒಂದಿಬ್ಬರ ವೀರ್ಯಾಣುವನ್ನಷ್ಟೇ ಪಡೆಯಲಾಗುತ್ತದೆ. ಸ್ಪರ್ಮ್ ಡೊನೇಶನ್‌ಗಾಗಿ ಈಗ ವಿದ್ಯಾರ್ಥಿಗಳನ್ನು ಕರೆಸಬೇಕಾದ ಅಗತ್ಯ ಇಲ್ಲ. ಸ್ಪರ್ಮ್ ಡೊನೇಟ್‌ ಮಾಡಿದ ವಿದ್ಯಾರ್ಥಿಗಳೇ ಬೇರೆ ವಿದ್ಯಾರ್ಥಿಗಳನ್ನು ಕಳಿಸುತ್ತಾರೆ.

ಒಂದು ನಗರದಲ್ಲಿ ಎಷ್ಟು ವೀರ್ಯಾಣು ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂಬ ಅಂಕಿಅಂಶಗಳು ಲಭ್ಯವಾಗುವುದಿಲ್ಲ. ಅದೇ ರೀತಿ ವೀರ್ಯ ದಾನಿಗೆ ಇನ್‌ಫರ್ಟಿಲಿಟಿ ಸೆಂಟರ್‌ಗಳು ಎಷ್ಟು ಮೊತ್ತ ಪಾವತಿ ಮಾಡುತ್ತವೆ ಎನ್ನುವುದೂ ನಿಖರವಾಗಿ ತಿಳಿದುಬರುವುದಿಲ್ಲ. ಕೆಲವು ಕೇಂದ್ರಗಳು ಒಂದು ಸಲಕ್ಕೆ ಒಂದೂವರೆ ಸಾವಿರದಿಂದ 3 ಸಾವಿರದವರೆಗೆ ಕೊಡುತ್ತವೆ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿ ತಿಂಗಳಿಗೆ 4 ರಿಂದ 5 ಸಲ ಮಾತ್ರ ಸ್ಪರ್ಮ್ ಡೊನೇಟ್‌ ಮಾಡಬಹುದು. ವೈದ್ಯರ ಪ್ರಕಾರ, ಯೌನಾವಸ್ಥೆ ದಾಟಿದ ಉದ್ಯೋಗಸ್ಥರು ಸಾಕಷ್ಟು ಒತ್ತಡದಲ್ಲಿರುತ್ತಾರೆ. ಜೊತೆಗೆ ಅವರು ಒಂದಿಲ್ಲೊಂದು ಚಟಕ್ಕೆ ದಾಸರಾಗಿರುತ್ತಾರೆ. ಹೀಗಾಗಿ ಅವರ ವೀರ್ಯಾಣು ಗುಣಮಟ್ಟದಿಂದ ಕೂಡಿರುವುದಿಲ್ಲ.

ಇನ್‌ಫರ್ಟಿಲಿಟಿ ಕೇಂದ್ರವೊಂದರ ಸಂಚಾಲಕರೊಬ್ಬರ ಪ್ರಕಾರ, ಸ್ಪರ್ಮ್ ಡೊನೇಷನ್‌ನ ಪ್ರಕ್ರಿಯೆ ಸಂಪೂರ್ಣ ಗೌಪ್ಯತೆಯಿಂದ ಕೂಡಿರುತ್ತದೆ. ಸ್ಪರ್ಮ್ ಡೋನರ್‌ಗೆ ಆತನ ವೀರ್ಯವನ್ನು ಯಾರಿಗೆ ಉಪಯೋಗಿಸಲಾಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಅದೇ ರೀತಿ ಸ್ಪರ್ಮ್ ಪಡೆಯುತ್ತಿರುವ ವ್ಯಕ್ತಿಗೆ ಅದನ್ನು ಯಾರಿಂದ ಪಡೆಯಲಾಯಿತು ಎಂಬುದನ್ನೂ ತಿಳಿಸಲಾಗುವುದಿಲ್ಲ. ಈಗಂತೂ ರಕ್ತದ ಗುಂಪು ಮ್ಯಾಚ್‌ ಆದರಷ್ಟೇ ಮಾತ್ರ ವೀರ್ಯ ಪಡೆಯಲಾಗುತ್ತದೆ. ಏಕೆಂದರೆ ಮುಂದೆ ಯಾವುದೇ ತೊಂದರೆ ಉದ್ಭವಿಸಬಾರದು.

ಸರಳ ವಿಧಾನ

ಡಾ. ಅನ್ನಪೂರ್ಣಾ ಹೀಗೆ ಹೇಳುತ್ತಾರೆ, ಮದುವೆಯ ಬಳಿಕ ಮಗು ಆಗದೇ ಇದ್ದಾಗ ಅದಕ್ಕೆ ಮಹಿಳೆಯೇ ಕಾರಣ ಎಂದು ಹೇಳಲಾಗುತ್ತದೆ. ಪುರುಷರು ತಮ್ಮನ್ನು ತಾವು ಪರೀಕ್ಷೆಗೊಳಪಡಿಸುವುದಿಲ್ಲ. ಬಳಿಕ ಮಗು ಆಗಬೇಕೆಂದು ಎರಡನೇ, ಮೂರನೇ ಮದುವೆ ಆಗುತ್ತಾರೆ. ಅಂಥವುಗಳ ಮೇಲೆ ನಿಷೇಧ ಹೇರಬೇಕು.

ಹಳ್ಳಿಗಾಡಿನ ಮಹಿಳೆಯೊಬ್ಬಳಿಗೆ ಮಗು ಆಗದೇ ಇದ್ದಾಗ ಆಕೆಯನ್ನು ನಕಲಿ ವೈದ್ಯರು, ಬಾಬಾಗಳು ಇಲ್ಲವೇ ಮಾಟ ಮಂತ್ರಗಾರರ ಕಡೆ ಕರೆದುಕೊಂಡು ಹೋಗುತ್ತಾರೆ. ಅವರ ಬಳಿ ಕರೆದುಕೊಂಡು ಹೋದ ಬಳಿಕ ಮಗು ಆಗದೇ ಇದ್ದಾಗ ವೈದ್ಯರ ಬಳಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಿಂದ ಕಂಡುಬಂದ ಸತ್ಯಾಂಶವೆಂದರೆ, ಹೆಂಡತಿಯಲ್ಲಿ ಯಾವುದೇ ದೋಷ ಇರುವುದಿಲ್ಲ. ಆಕೆಯ ಗಂಡನಲ್ಲಿಯೇ ಏನಾದರೊಂದು ದೋಷ ಇರುತ್ತದೆ.

ಇದರಲ್ಲಿ ವೈದ್ಯರು ಮಾಡಬೇಕಾದ ಕೆಲಸವೆಂದರೆ, ಮಹಿಳೆಯ ತಪಾಸಣೆಯ ಜೊತೆಗೆ ಆಕೆಯ ಗಂಡನನ್ನೂ ಪರೀಕ್ಷೆಗೆ ಒಳಪಡಿಸಬೇಕು. ತೊಂದರೆ ಯಾರಲ್ಲಿದೆ ಎಂಬುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು. ಪುರುಷರು ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳದೆ ಮತ್ತೊಂದು ಮದುವೆ ಮಾಡಿಕೊಳ್ಳುತ್ತಾರೆ. ಈಗ ವೈದ್ಯ ವಿಜ್ಞಾನ ಎಷ್ಟೊಂದು ಪ್ರಗತಿ ಸಾಧಿಸಿದೆ ಎಂದರೆ, ಯಾವುದೇ ದಂಪತಿಗಳು ಈಗ ಸಂತಾನ ಭಾಗ್ಯದಿಂದ ವಂಚಿತರಾಗಲು ಸಾಧ್ಯವಿಲ್ಲ.

ಡಾ. ದಿನಕರ್‌ ಅವರು ಹೇಳುವುದೇನೆಂದರೆ, ಸ್ಪರ್ಮ್ ಡೊನೇಷನ್‌ನ ಟ್ರೆಂಡ್‌ ಬಹಳ ಉಪಯೋಗಕಾರಿ. ಒಂದೆಡೆ ಇದು ಬಂಜೆತನದ ಸಮಸ್ಯೆಯಿಂದ ಬಳಲುವವರಿಗೆ ವರದಾನದಂತಿದ್ದರೆ, ಇನ್ನೊಂದೆಡೆ ಅಂಥವರು ನಕಲಿ ವೈದ್ಯರು, ಬಾಬಾಗಳು, ಮಾಟಮಂತ್ರದರಿಂದ ಮೋಸ ಹೋಗುವುದು ತಪ್ಪುತ್ತದೆ. ಈ ಬಗ್ಗೆ ಸೂಕ್ತ ಪ್ರಚಾರ ಕೈಗೊಂಡರೆ ಸಮಾಜದ ಹಿತ ಕಾಪಾಡುವಲ್ಲಿ ನೆರವಾಗುತ್ತದೆ.

– ಬಿ. ವೀರೇಂದ್ರ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ